ನಾ ಹಾಡಲು ನೀವು ಕೇಳಬೇಕು

 

" ನನಗೊಂದು ಒಳ್ಳೆಯ ತಬಲ ಸಿಕ್ಕಿದಿದ್ದರೆ ನಾನು ಕೂಡ  ಬಾರಿಸಿ ಬಿಡುತ್ತಿದ್ದೆ..
ಒಂದೊಳ್ಳೆಯ ಪಿಟೀಲು ಸಿಕ್ಕಿದಿದ್ದರೆ ನಾನು ಕೂಡ ಚೆನ್ನಾಗಿ ಕುಯ್ಯಿತಿದ್ದೆ..
ದೊಡ್ಡ ವೇದಿಕೆ ಸಿಕ್ಕಿದಿದ್ದರೆ, ಡ್ಯಾನ್ಸ್ ಮಾಡಿ ದೂಳೆಬ್ಬಿಸುತ್ತಿದ್ದೆ..
ಹಾಗೇ ಹೋದಲೆಲ್ಲ ಮೈಕ್ ಸಿಕ್ಕಿದಿದ್ದರೆ ಹಾಡಿನ ಮೂಲಕ ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಮಾಡುತ್ತಿದ್ದೆ.... "

.. ಎಂದೆಲ್ಲಾ ನಾನು casual ಆಗಿ ಹೇಳುತ್ತಿದ್ದುದ್ದನ್ನು, ನನ್ನ ದರ್ಬೆಸಿ ಫ್ರೆಂಡ್ ಒಬ್ಬ ತುಂಬಾ ನೇ ಸೈಲೆಂಟ್ ಆಗಿ ಗಮನಿಸುತ್ತಿದ್ದ. "ಏನೇ ಆಗ್ಲಿ ಇವನಿಗೊಮ್ಮೆ ಸರಿಯಾಗಿ ಬುದ್ಧಿ ಕಲಿಸ್ಲೇ ಬೇಕು.. " ಅಂತ ಅಂದು ಕೊಂಡಿದ್ದನೆನೋ ಮಾರಿ..
ಮೊನ್ನೆ ಅದನ್ನು execute ಮಾಡಿಯೇ ಬಿಟ್ಟ !!

ಇತ್ತೀಚೆಗೆ ಸ್ನೇಹಿತನೊಬ್ಬನ ಸಂಭಂದಿಕರ ಮದುವೆಗೆ ನಾವೆಲ್ಲ ಗೆಳೆಯರು ಹೋಗಿದ್ದೆವು. ಅಲ್ಲೇ ಮದುವೆ ಮಂಟಪ ದ ಕೆಳಭಾಗದಲ್ಲಿ ಆರ್ಕೆಸ್ಟ್ರಾದ ಹುಡುಗರು, ಹುಡುಗಿಯರು ಹಾಡು ಹಾಡುತ್ತಿದ್ದರು. ಚೆನ್ನಾಗಿಯೇ ಹಾಡುತ್ತಿದ್ದರು.
ಅದರ MC ಒಬ್ಬರು ಯಾರಾದರೂ ಹಾಡುವವರಿದ್ದರೆ ಬಂದು ಹಾಡಬಹುದು ಎಂದು announce ಮಾಡಿದರು.

ಮೇಲೆ ಹೇಳಿದ್ದೆ ಅಲ್ಲ, ಆ ನನ್ನ ಫ್ರೆಂಡ್ ನಾವು ಕುಳಿತಲ್ಲಿಂದ ಸೀದಾ ಅವರ ಬಳಿಗೆ ನಡೆದ. ಓಹ್.. ಇವ ಈಗ ಸಕ್ಕತ್ತಾಗಿ ಹಾಡು ಹಾಡ್ತಾನೆ ಎಂದು ತಿಳಿದುಕೊಂಡು ನಾವೆಲ್ಲ ಅವನ ಹೆಸರು ಹಿಡಿದು ಹೋ ಹೋ ಎಂದು ಜೋರಾಗಿ ಬೊಬ್ಬೆ ಹಾಕಿದೆವು.

ಅವರ ಬಳಿ ಹೋದವನೇ ಮೈಕ್ ಕೆಗೆತ್ತಿಕೊಂಡು ಈ ರೀತಿಯಾಗಿ ಹೇಳಲು ಶುರು ಮಾಡಿದ..

" ಈಗ  ನಿಮ್ಮನೆಲ್ಲಾ.. ತಮ್ಮ ಕಂಚಿನ ಕಂಠದ ಗಾಯನದ ಮೂಲಕ ರಂಜಿಸಲು ಬರುತ್ತಿದ್ದಾರೆ.. ಸಂಗೀತ ಮಾಂತ್ರಿಕ, ಗಾನ ಚತುರ, ಕಾಡು ಕೋಗಿಲೆ,ಎಲೆ ಮರೆಯ ಕಾಯಿ.. ಪಚ್ಚು... ಪಚ್ಚು.. ಪಚ್ಚು... ಪಚ್ಚು.. "

ಮಾರಿ, ಕೊನೆಗೆ ಎಕೋ ಎಫೆಕ್ಟ್ಸ್ ಕೂಡ ಕೊಟ್ಟು ನನ್ನನ್ನು ಲಗಾಡಿ ತೆಗ್ದು ಬಿಟ್ಟಿದ್ದ.

ಪುನಃ ಮುಂದುವರಿದು " ದಯವಿಟ್ಟು ನಿಮ್ಮ ಜೋರಾದ ಚಪ್ಪಾಳೆ ಯ ಮೂಲಕ ಸಿಂಗರ್ ಪಚ್ಚು ಅವರನ್ನು ಸ್ವಾಗತಿಸ ಬೇಕಾಗಿ ವಿನಂತಿ.. " ಅಂದು ಬಿಟ್ಟು, ಮೈಕ್ ಅನ್ನು ವಾಪಸ್ ಆರ್ಕೆಸ್ಟ್ರಾದ MC ಗೆ ಹಸ್ತಾಂತರಿಸಿ, ಒಳಗೊಳಗೆ ಮುಸಿ ಮುಸಿ ನಗುತ್ತಾ ಮೆಲ್ಲ ಹೋಗಿ ಸೈಡ್ ಅಲ್ಲಿ ನಿಂತು ಬಿಟ್ಟ.

ನಾಚಿಕೆಟ್ಟುವುದು ನನ್ನ ಬ್ಲಡ್ ನಲ್ಲಿಯೇ ಇದೆ ಆದರೂ,ಅಷ್ಟು ಸುಲಭವಾಗಿ ಇಲ್ಲಿ ಕೆಟ್ಲಿಕ್ಕೆ ಮನಸ್ಸು ಒಪ್ಪಲಿಲ್ಲ. ಅದು ಅಲ್ಲದೇ ಇಲ್ಲಿ ಬಂದವರ ಪರಿಚಯ ಯಾವುದೂ ನನಗಿಲ್ಲ ಮತ್ತೆ ಏಕೆ ಹೆದರಿಕೆ ಅಂದುಕೊಂಡು ಸ್ಟೈಲ್ ಆಗಿ ಜನರ ಮಧ್ಯೆ ವಾಕ್ ಮಾಡಿಕೊಂಡು ಆರ್ಕೆಸ್ಟ್ರಾದವರ ಬಳಿ  ನಡೆದೆ. ಜನರೆಲ್ಲಾ ಭಯಂಕರ ಜೋರಾಗಿ ಚಪ್ಪಾಳೆ ಬಡಿಯುತ್ತಿದ್ದರು. ಸಾವ್ ಅದನ್ನು ಕೇಳಿ ನನ್ನ ಹಾರ್ಟ್ ಬೀಟ್ ಕೂಡ ಜೋರಾಗಿ ರೈಸ್ ಆಗಲು ಶುರು ಆಯಿತು. ಆದರೂ ಅದನ್ನು ಮುಖ ದ ಮೇಲೆ ತೋರಿಸಲಿಲ್ಲ.

ಯಾವುದು ಹಾಡು ಹಾಡುವುದೆಂದು ಗೊತ್ತಾಗ್ಲಿಲ್ಲ. ಗೊತ್ತಿದ್ದದ್ದೇ ಒಂದು ಹಾಡು, ಅದನ್ನೇ ಕಣ್ಣು ಮುಚ್ಚಿ ಹಾಡಿದೆ..

"ಮಾದೇಶ್ವರ ದಯ ಬಾರದೇ,ಬರಿದಾದ ಬಾಳಿನಲ್ಲಿ ಬರಬಾರದೇ....."

ಹಾಡಿನಲ್ಲಿ ಮಾತ್ರ ಅಲ್ಲ ಮನಸ್ಸಿನಲ್ಲಿ ಇದ್ದದ್ದು ಕೂಡ ಅದೇ. ಓ ದೇವರೇ ಜಾಸ್ತಿ ಕೆಟ್ಟಿಸ್ಬೇಡ.. ಮರ್ಯಾದೆ ಉಳಿಸು ಎಂದು.. ಪರಿ ಪರಿಯಾಗಿ ಬೇಡಿಕೊಂಡಿದ್ದೆ..

ನಾನು ಜಸ್ಟ್ ಎರಡು ಸಾಲು ಪೂರ್ತಿ ಗೊಳಿಸಿದ್ದು ಅಷ್ಟೇ..ನಿಧಾನವಾಗಿ ಕಣ್ಣು ಬಿಟ್ಟು ನೋಡಿದಾಗ ನನ್ನ ಹಾಡು, ನನ್ನ ಕಂಚಿನ ಕಂಠ ದ ಖತರ್ನಾಕ್ ವಾಯ್ಸ್ ಕೇಳಿ ನನ್ನ ಫ್ರೆಂಡ್ಸ್ ಎಲ್ಲಾ ಹೊಟ್ಟೆಗೆ ಬಾಯಿಗೆ ಕೈ ಹಿಡಿದು ಕೊಂಡು ಬಿದ್ದು ಬಿದ್ದು ನಗಲು ಶುರುಮಾಡಿದರು. ನಾನು ಕಾಡು ಕೋಗಿಲೆ ಎಂದು  announcement ಮಾಡಿದ್ದ ಆ ದರ್ಬೆಸಿ ಫ್ರೆಂಡ್ ಕೂಡ ಅವರನ್ನು join ಆಗಿ ಹೇ ಹೇ ಎಂದು ನಗಲು ಶುರು ಮಾಡಿದ.

ಆದರೂ ಬಿಡಲಿಲ್ಲ ಹಾಡು ಮುಂದುವರಿಸಿದೆ. ಹಾಡುತ್ತಾ ಹಾಡುತ್ತಾ ಹಾಗೇ ಸಭಿಕರ reaction ಹೇಗಿರಬಹುದು ಎಂದು  ಒಮ್ಮೆ ಅವರ ಕಡೆಗೆ ದೃಷ್ಟಿ ಹೊರಳಿಸಿದೆ. ತುಂಬಾ ಹೊತ್ತಿನಿಂದ ಹಠ ಮಾಡುತ್ತಾ ಜೋರಾಗಿ ಅಳುತ್ತಿದ್ದ ಮಗುವೊಂದು ನನ್ನ ಹಾಡು ಕೇಳಿ ಜೋರಾಗಿ ನಗಲು ಶುರು ಮಾಡಿತು. ಅದರ ಅಮ್ಮನಿಗೋ ಏನೋ ಸಮಾಧಾನ, ನೆಮ್ಮದಿ .

ಮತ್ತೆ ಹಾಡು ಮುಂದುವರಿಸಿ ಮತ್ತೊಂದು ಕಡೆಗೆ ನೋಡಿದೆ. ಅಲ್ಲೊಬ್ಬರು ವಯಸ್ಸಾದ ಅಜ್ಜಿ ಒಂದು ಕೈ ಮೇಲೆ ಎತ್ತಿ " ಎಂತ ಸಾವ್ ಹಾಡ್ತಾನೆ ಮರ್ರೆ ಇವ..ಈ ಕರ್ಮ ನೋಡ್ಲಿಕ್ಕಾ ನಾವು ಅಷ್ಟು ದೂರದಿಂದ ಮದುವೆಗೆ ಬಂದದ್ದು " ಅಂತ ಹೇಳ್ತಾ ಇದ್ದರು.

ನಾನು ಹಾಡು ಮುಂದುವರಿಸಿದಂತೆ ಮದುವೆ ಹಾಲ್ ನಲ್ಲಿ ಸೇರಿದ್ದ ಎಲ್ಲರೂ ಬಾಯಿಗೆ ಕೈ ಹಿಡಿದು ಮನಸ್ಸಿನಲ್ಲಿಯೇ "ಇವ ಒಬ್ಬ ಎಲ್ಲಿಂದ ಬಂದ ಮರ್ರೆ.." ಅಂದುಕೊಳ್ಳುತ್ತಾ ಬಿಕ್ಕಿ ಬಿಕ್ಕಿ ನಗತೊಡಗಿದರು.

ಚಿಕ್ಕ ಚಿಕ್ಕ ಮಕ್ಕಳು ಆರ್ಕೆಸ್ಟ್ರಾದ ವೇದಿಕೆ ಯ ಬಳಿ ಬಂದು ಆ ಸಾಂಗ್ ಗೆ ಕೂಡ ಡ್ಯಾನ್ಸ್ ಮಾಡಲು ಶುರು ಮಾಡಿದರು.ಮದುವೆ ಹಾಲ್ ಗೆ ಕರೆಸಿದ್ದ ಗೊಂಬೆ ಬಳಗ ದ  ಗೊಂಬೆಗಳು ಹಾಡಿನ ಮೀನಿಂಗ್ ಗೆ ತಕ್ಕ ಹಾಗೆ ಮೂಗಿನ ಮೇಲೆ ಬೆರಳಿಟ್ಟು ಕೊಂಡು ವಿಚಿತ್ರ ಸ್ಟೆಪ್ಸ್ ಹಾಕತೊಡಗಿದವು.

ಆರ್ಕೆಸ್ಟ್ರಾದ MC ಗೆ confirm ಆಯಿತು, ಈ ಜನ ಹಾಡ್ಲಿಕ್ಕೆ ಬಂದದ್ದು ಅಲ್ಲ, ಕೆಟ್ಲಿಕ್ಕೆಯೇ ಬಂದದ್ದು ಅಂತ. ಆದರೂ ಅದನ್ನು ತೋರಿಸದೇ ಎರಡೂ ಕೈ ಮೇಲೆತ್ತಿ ಚಪ್ಪಾಳೆ ಬಾರಿಸುತ್ತಾ ಸಭಿಕರು ಕೂಡ ಚಪ್ಪಾಳೆ ಬಾರಿಸುತ್ತಾ ನನ್ನನ್ನು ಹುರಿದುಂಬಿಸುವಂತೆ ಮಾಡಲು ಪ್ರಯತ್ನ ಪಡುತ್ತಿದ್ದ. ಆದರೆ ಜನರು ಕೈಯಲ್ಲಿ ಚಪ್ಪಾಳೆ ಬಾರಿಸುವುದು ಹೇಗೆ.. ಅವರು ಅದಾಗಲೇ ಚಪ್ಪಾಳೆ ಯನ್ನು ಮರೆತು ಕೈಯನ್ನು ಬಾಯಿಗೆ ಅಡ್ಡ ಹಿಡಿದುಕೊಂಡು ಜೋರಾಗಿ ಎದ್ದು ಬಿದ್ದು ನಗುತ್ತಿದ್ದರು.

ಕೊನೆಗೂ ನಾನು ಹಾಡು ಮುಗಿಸಿದೆ. ಕೊನೆಯ ಸಾಲು ಹಾಡುವಾಗ ಇನ್ನೂ ರಾಗವನ್ನು ಜೋರಾಗಿ ಎಳೆದು ಎಳೆದು ಶಾಸ್ತ್ರೀಯ ಸಂಗೀತ ದ  ಎಫೆಕ್ಟ್ ಎಲ್ಲಾ ಕೊಡಲು ಪ್ರಯತ್ನ ಪಟ್ಟಿದ್ದೆ.
ಹಾಡು ಮುಗಿಸಿದಾಗ ಸಭೆಯಲ್ಲೊಂದು ನಗುವಿತ್ತು, jolly ಇತ್ತು, ಉಲ್ಲಾಸ ಉತ್ಸಾಹ ದ ಹೊಳೆಯೇ ಹರಿದಿತ್ತು. ಎಷ್ಟೋ ಜನರಿಗೆ " ಅಬ್ಬಾ ಕೊನೆಗೂ ಮುಗಿದು ಹೋಯ್ತಲ್ಲಾ.." ಎಂಬ ನೆಮ್ಮದಿ, ನಿಟ್ಟುಸಿರು ಇತ್ತು,ಅದು ಅವರ ಮುಖದಲ್ಲಿಯೇ ಸ್ಪಷ್ಟವಾಗಿ ಕಾಣುತ್ತಿತ್ತು.

ಅವತ್ತೇ ಡಿಸೈಡ್ ಮಾಡಿದೆ ಕಣ್ರೀ.. ಇನ್ನು ಮುಂದೆ ಮದುವೆಗೆ ಹೋಗುವಾಗ ಒಂದಲ್ಲ ಎರಡು ಹಾಡಾದ್ರೂ  ಹಾಡಲೇಬೇಕು.. ಜನರನ್ನು ಸಂಗೀತದ ಅಲೆಯಲ್ಲಿ ಹಾಗೇ ತೇಲಿಸಿಬಿಡಬೇಕು, ಹುಚ್ಚೆಬ್ಬಿಸಬೇಕು ಎಂದು.
ಹೌದು, ನಾನು ಹಾಡ್ತೆನೆ.. ನೀವು ಕೇಳ್ಬೇಕು, ನಗ್ಬೇಕು.. ಆನಂದಿಸಬೇಕು☺🙏🏻🤟

       #ನಾ_ಹಾಡಲು_ನೀವು_ಕೇಳಬೇಕು

.................................................................

written by- Ab Pacchu



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ