ವಜ್ರದುಂಗುರ
ಅದು ಒಂದು ದಟ್ಟವಾದ ಕಾಡು.ಅದರ ಹೆಸರು ಸುಂದರವನ. ಹೆಸರಿಗೆ ತಕ್ಕಂತೆ ಸಮೃದ್ಧವಾಗಿ,ಸುಂದರವಾಗಿಯೇ ಇತ್ತು.
ಸುಂದರವನದಲ್ಲಿ ಎಲ್ಲಾ ಪ್ರಾಣಿಗಳು ಬಹಳ ಅನ್ಯೋನ್ಯವಾಗಿ ಹಾಡುತ್ತಾ,ಕುಣಿದು ಕುಪ್ಪಳಿಸುತ್ತಾ,ಜಿಗಿದು ನಲಿದು ಬಹಳ Jolly ಆಗಿ ಜೀವಿಸುತ್ತಿದ್ದವು.
ಆ ಕಾಡಿನ ರಾಜ ಎಂದಿನಂತೆ ದೊಡ್ಡ ಗಡ್ಡದ ಒಂದು ಬಲಶಾಲಿ ಸಿಂಹ ಆಗಿತ್ತು ಮತ್ತು ಆ ಸಿಂಹರಾಜ ಬಹಳ ಕರುಣಾಶಾಲಿ ಹಾಗೂ ಮತ್ತು ಪ್ರಜಾಪಾಲಕ ರಾಜನಾಗಿದ್ದ.ತನ್ನ ಕಾಡಿನ ಪ್ರಾಣಿಗಳ ಎಲ್ಲಾ ಸಮಸ್ಯೆಗಳಿಗೆ ಶೀಘ್ರವೇ ಸ್ಪಂಧಿಸುತ್ತಿದ್ದ ಮತ್ತು ಪ್ರಾಣಿಗಳ ನಡುವೆಯೇ ಕುಳಿತುಕೊಂಡು ಭೋಜನ ಕೂಡ ಸೇವಿಸುತ್ತಿದ್ದ.ಒಟ್ಟಿನಲ್ಲಿ ಸಿಂಹರಾಜ ಎಲ್ಲಾ ಪ್ರಾಣಿಗಳ ಹೃದಯ ಗೆದ್ದ ರಾಜಾಧಿರಾಜ, ಶೂರಾಧಿ ಶೂರ ಹಾಗೂ ಧೀರಾಧಿ ವೀರನಾಗಿದ್ದ.ಕೊಟ್ಟ ಮಾತಿಗೆ ತಪ್ಪಿ ನಡೆಯದ ಸತ್ಯ ಪರಿಪಾಲನೆಯ ಸತ್ಯ ಹರಿಶ್ಚಂದ್ರ ಕೂಡ ಅವನೇ ಆಗಿದ್ದ,ಹಾಗೆಯೇ ಕೇಳಿದ್ದನ್ನು ಕಣ್ಣು ಮುಚ್ಚಿ ದಾನ ನೀಡುವ ದಾನ ವೀರ ಕರ್ಣ ಕೂಡ ಅವನೇ ಆಗಿದ್ದ.
ಆ ಕಾಡಿನ ರಾಣಿ,ಸಿಂಹ ರಾಜನ ಮುದ್ದಿನ ಮಡದಿ ಸಿಂಹಿಣಿಯಾಗಿದ್ದಳು.ಅವಳು ಕೂಡ ಎಲ್ಲಾ ಪ್ರಾಣಿಗಳ ನಡುವೆ ಸುಲಭವಾಗಿ ಬೆರೆಯುತ್ತಿದ್ದಳು.ಮಾತ್ರವಲ್ಲ ಅವಳು ಬಹಳ ಬುಧ್ಧಿವಂತಳಾಗಿದ್ದಳು.ದೊಡ್ಡ ದೊಡ್ದ ಸಮಸ್ಯೆಗಳು ಬಂದಾಗ ರಾಜನಿಗೆ ಸೂಕ್ತವಾದ ಸಲಹೆಗಳನ್ನು ಕೂಡ ಕ್ಲಪ್ತ ಸಮಯದಲ್ಲಿ ನೀಡುತ್ತಿದ್ದಳು.ಅವಳು ಕೂಡ ಕಾಡಿನ ಎಲ್ಲಾ ಪ್ರಾಣಿಗಳ ಮನಸ್ಸು, ಹೃದಯ ಎಲ್ಲಾ ಗೆದ್ದಿದ್ದಳು... ಮತ್ತು ಸಿಂಹರಾಜನ ಹಾರ್ಟ್ ಕದ್ದಿದ್ದಳು. ಅಂದರೆ ಕಾಡಿಗೆ ಅರಸಿ ಆಗಿದ್ದರೂ,ರಾಜನಿಗೆ ಮಾತ್ರ ಮನದರಸಿ ಆಗಿದ್ದಳು.
ರಾಜ ರಾಣಿಯರು ಇಬ್ಬರೂ ಕಾಡಿನಲ್ಲಿ ಎತ್ತರದ ಪ್ರದೇಶದಲ್ಲಿ ಇರುವ ಬಹಳ ದೊಡ್ಡದಾದ ಒಂದು ಗುಹೆಯಲ್ಲಿ ವಾಸವಾಗಿದ್ದರು. ಅದುವೇ ಅವರ ಅರಮನೆ ಯಾಗಿತ್ತು ಮತ್ತು ಕಾಡಿನ ಪ್ರಾಣಿಗಳ ಪಾಲಿಗೆ ಅದುವೇ ನ್ಯಾಯಾಲಯ, ಕರುಣಾಲಯ, ಪ್ರೇಮಾಲಯ, ಹಿಮಾಲಯ ಎಲ್ಲವೂ ಆಗಿತ್ತು.ರಾಜನ ಅಜ್ಜ ಮುತ್ತಜ್ಜ ಹಾಗೂ ಹಿಂದಿನ ಹಲವಾರು ಪೀಳಿಗೆಯವರು ಶತ ಶತಮಾನಗಳಿಂದ ಸುಂದರವನದಲ್ಲಿ ರಾಜ್ಯಭಾರ ಮಾಡಿದ ಗುಹೆ ಅದು.ಒಂದು ರೀತಿಯಲ್ಲಿ ಹೇಳಬೇಕೆಂದರೆ ವಂಶ ಪಾರಂಪರಿಕವಾಗಿ ಬಂದ ಅವರುಗಳ ಪುರಾತನ ಅರಮನೆ.
ಮಕ್ಕಳಿದ ಈ ರಾಜ ರಾಣಿಯರು ಕಾಡಿನ ಪ್ರಾಣಿಗಳೇ ತಮ್ಮ ಸ್ವಂತ ಮಕ್ಕಳೆಂದು ಭಾವಿಸಿದ್ದರು. ಪ್ರಾಣಿಗಳು ಕೂಡ ಹಾಗೆಯೇ ತಮಗೆ ಸ್ವಂತ ಅಪ್ಪ ಅಮ್ಮ ಇದ್ದರೂ.. ರಾಜ ರಾಣಿಯೇ ಕಾಡಿನ ನಿಜವಾದ ಅಪ್ಪ ಅಮ್ಮ ಎಂದು ಭಾವಿಸಿದ್ದವು.ಮಾತ್ರವಲ್ಲ ತಮ್ಮ ನಡುವೆಯೇ ಎಲ್ಲರಂತೆ ಬೆರೆತು,ಕೆಲವೊಮ್ಮೆ ಸಸ್ಯಹಾರವನ್ನು ಸಹ ಸೇವಿಸುವ,ಪಾನಕ ಕುಡಿಯುವ ರಾಜ ರಾಣಿಯರನ್ನು ಅವರು ಯಾರೂ ಎಂದಿಗೂ ನೋಡಿಯೇ ಇರಲಿಲ್ಲ.. ಮತ್ತೆ ಅವರ ಅಜ್ಜಿಯಂದಿರುವ ಹೇಳುವ,ಅಜ್ಜಿ ಕಥೆಯಲ್ಲಿ ಸಹ ಇಂತಹ ರಾಜ ರಾಣಿಯರ ಬಗ್ಗೆ ಅವರು ಎಂದೂ ಕೇಳಿರಲಿಲ್ಲ. ಮಾತ್ರವಲ್ಲ ಸುಂದರವನದ ಗ್ರಂಥಾಲಯದ ಯಾವುದೇ ಇತಿಹಾಸ ಪುಸ್ತಕದಲ್ಲಿಯೂ ನಮಗೆ ಈ ತರಹದ ರಾಜ ರಾಣಿಯರ ಮಾಹಿತಿ ದೊರೆಯುವುದಿಲ್ಲ.
ರಾಜ ಆಗಿಯೂ ಈ ರೀತಿ ತನ್ನ ಕಾಡಿನ ಪ್ರಾಣಿಗಳೊಂದಿಗೆ ಸ್ವಲ್ಪವೂ ಅಂತರ ಇಟ್ಟುಕೊಳ್ಳದೇ, ಪ್ರಾಣಿಗಳನ್ನು ಹೆದರಿಸದೆ, ಬೆದರಿಸಿದೆ.. ಅವುಗಳೊಂದಿಗೆ ಸರಳವಾಗಿ, ಮುಕ್ತವಾಗಿ ಬೇರೆಯುವುದು ಮಾತ್ರವಲ್ಲ ಸಸ್ಯಹಾರವನ್ನು ಸಹ ತಿನ್ನುವುದನ್ನು ನೋಡಿ ಪಕ್ಕದ ವೈರಿ ರಾಜ್ಯವಾದ ಚಂಪಕವನದ ಸಿಂಹರಾಜ, ಈ ಸುಂದರವನದ ಸಿಂಹರಾಜನನ್ನು ಆಗಾಗ ಗೇಲಿ ಮಾಡುತ್ತಿದ್ದ.
ಆದರೆ ಸುಂದರವನದ ಸಿಂಹರಾಜ ಪ್ರಾಣಿಗಳಿಂದ.. ಪ್ರಾಣಿಗಳಿಗಾಗಿ..ಪ್ರಾಣಿಗಳಿಗೋಸ್ಕರ.. ಎಂಬ ಪ್ರಾಣಿಪ್ರಭುತ್ವದ ರಾಜ್ಯಭಾರ ಮಾಡುವುದಾಗಿ... ತನ್ನ ರಾಜ್ಯದ ಪ್ರಾಣಿಗಳನ್ನು ತನ್ನ ಜೀವ ಕೊಟ್ಟು ಆದರೂ ರಕ್ಷಣೆ ಮಾಡುವೆ ಎಂದು ತನ್ನ ಅಜ್ಜಿಯಾದ ರಾಜಮಾತೆ ಸಿಂಹಿಣಿಯ ಎದುರು.. ಖಡ್ಗದಿಂದ ತನ್ನ ಹೆಬ್ಬೆರಳನ್ನೇ ಗಾಯ ಮಾಡಿಕೊಂಡು.. ಬೆರಳಿನಿಂದ ಬಂದ ಆ ಕೆಂಪು ರಕ್ತವನ್ನು ತನ್ನ ಹಣೆಗೆ ತಿಲಕದಂತೆ ಇಟ್ಟುಕೊಂಡು.. ರಾಜ್ಯಭಾರದ ಶುರುವಿನಲ್ಲಿಯೇ ಭಯಂಕರವಾದ ಒಂದು ಉಗ್ರ ಶಪಥ ಗೈದಿದ್ದ ಮತ್ತು ಅದರಂತೆ ಈಗ ನಡೆದುಕೊಳ್ಳುತ್ತಿದ್ದ.
ಸಿಂಹರಾಜನ ಸುಂದರವನದ ರಾಜ್ಯದಲ್ಲಿ ಯಾವ ಪ್ರಾಣಿ ಕೂಡ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಬಹುದಿತ್ತು ಮತ್ತು ರಾಜನಿಗೆ ಸಲಹೆ ಸೂಚನೆಗಳನ್ನು ಸಹ ನೀಡಬಹುದಿತ್ತು.ಕಷ್ಟದಲ್ಲಿರುವವರು ರಾತ್ರಿ ಎಷ್ಟು ಗಂಟೆ ಆದರೂ ಪರಿಹಾರಕ್ಕಾಗಿ ರಾಜನ ಗುಹೆಯ ಬಾಗಿಲನ್ನು ತಟ್ಟಬಹುದಿತ್ತು.ರಾಜನಂತು ತನ್ನ ಗುಹೆಗೆ ಬಾಗಿಲನ್ನೇ ಇಟ್ಟಿರಲಿಲ್ಲ. ಇದ್ದ ಬಾಗಿಲನ್ನೇ ತಾನು ರಾಜನಾದ ಕೂಡಲೇ ತೆಗೆದು ಬಹು ದೂರಕ್ಕೆ ಬಿಸಾಡಿ ಬಿಟ್ಟಿದ್ದ. ಅದನ್ನು ಯಾರು ಹೆಕ್ಕಿ ಕೊಂಡು ಹೋದರು ಎಂದು ಹೆಚ್ಚಿನ ಮಾಹಿತಿ ಸುಂದರವನದಲ್ಲಿ ಯಾರಲ್ಲೂ ಇರಲಿಲ್ಲ.ಆದರೆ ಯಾವುದಾದರೊಂದು ಪ್ರಾಣಿ ಅದನ್ನು ತಗೊಂಡು ಹೋಗಿ, ಅದರ ಕಟ್ಟಿಗೆಯನ್ನು ಒಡೆದು ಬಚ್ಚಲು ಮನೆಯ ಒಲೆಗೆ,ಕಟ್ಟಿಗೆಯಾಗಿ ಉಪಯೋಗಿಸಿ ಹಂಡೆಯಲ್ಲಿ ಬಿಸಿನೀರು ಕಾಯಿಸಿ ಸ್ನಾನ ಮಾಡಿರ್ತದೆ ಬಿಡಿ.
ಕೆಲವೊಮ್ಮೆ ಈ ನಮ್ಮ ಸುಂದರವನದ ರಾಜನೇ ಸ್ವತಃ ಪ್ರಾಣಿಗಳ ಬಳಿಗೆ ನಡೆದು ಹೋಗಿ ಅವರ ಸಮಸ್ಯೆಗಳನ್ನು ಅರಿಯುತ್ತಿದ್ದ. ವಾರಕ್ಕೊಮ್ಮೆ ಆದರೂ ತನ್ನ ಗುಹೆಯ ಎದುರು ಸಭೆ ಸೇರಿಸಿ ಪ್ರಾಣಿಗಳ ಕಷ್ಟಗಳನ್ನು ಆಲಿಸುತ್ತಿದ್ದ, ಯೋಗ ಕ್ಷೇಮ ವಿಚಾರಿಸುತ್ತಿದ್ದ. ಮಂತ್ರಿ ಮಂಡಲವೊಂದನ್ನು ಮಾಡಿಕೊಂಡು ಕಾಡಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಿದ್ದ. ಸಭೆಯ ನಂತರ ಸಭೆಗೆ ಬಂದ ಎಲ್ಲಾ ಪ್ರಾಣಿಗಳಿಗೆ ಚಹಾ, ಕಾಫಿ, ಉಪ್ಪಿಟ್ಟು ಕೊಟ್ಟು ಸತ್ಕರಿಸುತ್ತಿದ್ದ.
ಸುಂದರವನದಲ್ಲಿ ಬರೀ Jolly ಯೇ ಅಲ್ಲ,ಕಾಡಿನಲ್ಲಿ ಸಮಸ್ಯೆ ಗಳು ಕೂಡ ಒಟ್ರಾಸಿ ಇದ್ದವು. ಮಳೆ ಹೆಚ್ಚಾದರೆ ಕಾಡಿನಂಚಿನ ಹೊಳೆಯೇ ಕಾಡಿನೊಳಗೆಯೇ ಹರಿದು ನೆರೆ ಪ್ರವಾಹದ ಸ್ಥಿತಿ ಉಂಟಾಗುತ್ತಿತ್ತು. ಕೆಲವೊಮ್ಮೆ ಮಳೆಯೇ ಬರದೆ ಬರ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.ಇನ್ನು ಕೆಲವೊಮ್ಮೆ ಕಾಡ್ಗಿಚ್ಚಿನಿಂದಾಗಿ ಇಡೀ ಕಾಡಿಗೆ ಬೆಂಕಿ ಬೀಳುತ್ತಿತ್ತು.
ಅದಕ್ಕಾಗಿ ರಾಜ ಮುಂಜಾಗ್ರತೆಯ ದೃಷ್ಟಿಯಿಂದ ಕಾಡಿನ ಪ್ರಾಣಿಗಳು ಬೆಳೆದ ಬೇಳೆ ಕಾಳುಗಳನ್ನು, ಧಾನ್ಯಗಳನ್ನು ಮೊದಲೇ ತನ್ನ ಗುಹೆಯ ಉಗ್ರಾಣದಲ್ಲಿ ಸುರಕ್ಷಿತವಾಗಿ ವಿಪತ್ತಿನ ನಿಧಿಯಾಗಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದ ,ನಂತರ ಪ್ರಕೃತಿ ವಿಕೋಪ ಸಂಭವಿಸಿದಾಗ ತನ್ನಲ್ಲಿ ಸಂಗ್ರಹವಾಗಿರುವ ವಿಪತ್ತಿನ ನಿಧಿಯಿಂದ ಎಲ್ಲರಿಗೂ ಸಮರ್ಪಕವಾಗಿ ಹಂಚಿ ಅವರಿಗೊಂದು ಬೆಚ್ಚನೆಯ ಬದುಕು ಕಲ್ಪಿಸುತ್ತಿದ್ದ. ಆದ್ದರಿಂದ ಸುತ್ತ ಮುತ್ತಲಿನ ಕಾಡಿನಲ್ಲಿ ಏನೇ ಪ್ರಕೃತಿ ವಿಕೋಪ ಸಂಭವಿಸಿದರೂ ಸುಂದರವನ ಮಾತ್ರ ಸುಭೀಕ್ಷವಾಗಿತ್ತು.ಬಾಕಿಯವರೆಲ್ಲರೂ ಪ್ರವಾಹದಲ್ಲಿ ಮುಳುಗಿ ನೀರು ಕುಡಿಯುತ್ತಿದ್ದರೂ ಸುಂದರವನದವರು ಸಿಂಹರಾಜನ ಗುಹೆಯ ಬಳಿ ಬೆಚ್ಚಗೆ ಚಹಾ ಮತ್ತು ಉಪ್ಪಿಟ್ಟು ಸೇವಿಸುತ್ತಿದ್ದರು.
ರಾಜನ ಮಂತ್ರಿ ಮಂಡಲದಲ್ಲಿ ಚಾಣಕ್ಯ ನರಿಯೇ ಮಹಾ ಮಂತ್ರಿಯಾಗಿತ್ತು.ತೋಳಕ್ಕೆ ವಿತ್ತ ಮಂತ್ರಿಯ ಪದವಿ ಪ್ರಧಾನ ಮಾಡಲಾಗಿತ್ತು. ದಢೂತಿ ಕರಡಿ ರಾಜನ ಆಪ್ತ ಸಲಹೆಗಾರನಾಗಿದ್ದ ಮತ್ತು Angry Young Tiger ಹುಲಿರಾಯ ಖಡಕ್ ಸೇನಾಧಿಪತಿ ಆಗಿದ್ದ.ಸುಂದರವನದ ಸೇನೆ ನಿಜಕ್ಕೂ ಬಲಿಷ್ಠವಾಗಿತ್ತು ಅದರಲ್ಲಿ ಒಟ್ರಾಸಿ ಓಡುವ ಮತ್ತು ತಿವಿಯುವ ಕಾಡೆಮ್ಮೆ ಮ್ತತು ಕಾಡು ಕೋಣಗಳು,ಕಾಲಿನಿಂದ ಒದೆಯುವ ಕಾಡು ಕುದುರೆಗಳು,ಬಲಶಾಲಿ ಒಂಟಿ ಸಲಗ,ಒಂಟಿ ಕೊಂಬಿನ ಖಡ್ಗ ಮೃಗದಂತಹ.. ಹಲವಾರು ಬಲಿಷ್ಠ ಯೋಧರು ಇದ್ದರು. ಪಕ್ಕದ ಚಂಪಕವನದ ರಾಜ, ಸುಂದರವನದ ಪ್ರಾಣಿಗಳನ್ನು ತಿನ್ನಲು ತನ್ನ ಕಾಲಕೇಯ ದಂತಹ ಸೈನ್ಯದೊಂದಿಗೆ ಸುಂದರವನದ ಮೇಲೆ ಅಟ್ಯಾಕ್ ಮಾಡಿದಾಗ, ಹುಲಿರಾಯನ ನೇತೃತ್ವದಲ್ಲಿ ಸುಂದರವನದ ಸೇನೆ ಕ್ಷಣ ಮಾತ್ರದಲ್ಲಿ ಅವರನ್ನು ಹೀನಾಯವಾಗಿ ಸೋಲಿಸಿ,ಹಿಗ್ಗಾಮುಗ್ಗ ಬಿಡಿದು ಹಿಮ್ಮೆಟ್ಟಿಸಿ ಹಿಂದಕ್ಕೆ ಓಡಿಸುತ್ತಿತ್ತು.
ಒಂದು ಸಲ ಹುಲಿರಾಯ ಚಂಪಕವನದ ಸೇನಾಧಿಪತಿಯನ್ನೇ ಒಂದು ಭೀಕರ ಕಾಳಗದಲ್ಲಿ ಏನೂ ಮಾರಕಾಯುಧ ಉಪಯೋಗಿಸದೇ ಬರೀ ತನ್ನ ಕೈಯಿಂದಲೇ ಬರ್ಬರವಾಗಿ ಕೊಂದೇ ಹಾಕಿ ಬಿಟ್ಟಿದ್ದ.ಈ ಅಮೋಘ ಸಾಹಸಕ್ಕಾಗಿ ನಮ್ಮ ಸುಂದರವನದ ಸಿಂಹರಾಜ ಹುಲಿರಾಯನನ್ನು ಒಂದು ಕಡೆ ಕುಳ್ಳಿರಿಸಿ ಅವನಿಗೆ ಶಾಲು ಹಾಕಿ, ಕೈಗೆ ಕುಕ್ಕು(ಮಾವು),ಚಿಕ್ಕು ಹಾಗೂ ಇತರ ಪ್ರೂಟ್ಸ್ ಇರುವ ಹಣ್ಣುಹಂಪಲುಗಳನ್ನು ಒಂದು ತಟ್ಟೆಯಲ್ಲಿ ನೀಡಿ ಸನ್ಮಾನ ಮಾಡಿದ್ದ ಮತ್ತು ಒಂದು ಕಂಚಿನ ಪದಕವನ್ನು ಸಹ ಅವನ ಕೊರಳಿಗೆ ಹಾಕಿದ್ದ.
ಶತ್ರು ಸೈನ್ಯದ ಸೇನಾಧಿಪತಿಯನ್ನು ಕೊಂದರೆ ಕಂಚಿನ ಪದಕ.. ಅವರ ಮಂತ್ರಿಯನ್ನು ಕೊಂದರೆ ಬೆಳ್ಳಿ ಪದಕ.. ಅವರ ರಾಜನನ್ನೇ ಕೊಂದರೆ ಚಿನ್ನದ ಪದಕ.. ಈ ತರಹ ಎಲ್ಲಾ ಕ್ರಮ ಇತ್ತು.ರಾಣಿಯನ್ನು ಕೊಂದರೆ ಯಾವ ಪದಕ ಅಂತ ಎಲ್ಲಾ ಕೇಳ್ಲಿಕ್ಕೆ ಇಲ್ಲ. ರಾಣಿಯನ್ನು ಯಾರೂ ಕೊಲ್ಲುವುದಿಲ್ಲ, ಅವಳ ಮೇಲೆ ಅಟ್ಯಾಕ್ ಮಾಡಿ ಜಸ್ಟ್ ಅಪಹರಿಸಲಾಗುತ್ತದೆ ನಂತರ ತಮ್ಮ ಕಾಡಿನ ರಾಜನೊಂದಿಗೆ ಮದುವೆ ಮಾಡಿಸಲಾಗುತ್ತದೆ. ಅಂತಹ ಸಾಹಸ ಮಾಡಿದವರಿಗೆ ರಾಜ ಏನು ಬಹುಮಾನ ಕೊಡ್ತಿದ್ದ ಎಂದು ಸುಂದರವನದ ಯಾವುದೇ ವೀರಗಾಥೆಯ ಪುಸ್ತಕದಲ್ಲೂ ಇನ್ನೂ ಸ್ಪಷ್ಟವಾಗಿ ಉಲ್ಲೇಖವಾಗಿಲ್ಲ,ಬಹುಶಃ ಸುಂದರವನದ ಇತಿಹಾಸಕಾರರು ಅದನ್ನು ದಾಖಲಿಸಲು ಮರೆತಿರಬೇಕು. ಹಾಗಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲೂ ಸಿಗ್ತಾ ಇಲ್ಲ.ಆದರೆ ಆ ರೀತಿ ಬೇರೆ ರಾಜ್ಯದ ರಾಣಿಯರನ್ನು ಸೆರೆ ಹಿಡಿದು ತಂದರೂ ನಮ್ಮ ಈಗಿನ ಸುಂದರವನದ ಸಿಂಹರಾಜ,ಆ ರಾಣಿಯರನ್ನು ಮದುವೆ ಆಗುವ ಯೋಚನೆಯನ್ನು ತನ್ನ ಕಲ್ಪನೆಯಲ್ಲಿ ಸಹ ಮಾಡಲಾರ.ಏಕೆಂದರೆ ಅವನು ಏಕ ಪತ್ನಿ ವ್ರತಸ್ಥನಾಗಿದ್ದ. ಅವನು ತನ್ನ ಮಡದಿಯನ್ನಲ್ಲದೇ ಬೇರೆ ಯಾವ ಸಿಂಹಿಣಿಯರನ್ನು ಕಣ್ಣೆತ್ತಿ ಕೂಡ ಎಂದೂ ನೋಡಿದವನಲ್ಲ.ಪ್ರಭು ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮ ನಾಗಿದ್ದರೆ ನಮ್ಮ ಸಿಂಹರಾಜ ಮರ್ಯಾದ ಮೃಗೋತ್ತಮ ನಾಗಿದ್ದ.
ರಾಜ ತನ್ನ ಮಂತ್ರಿ ಮಂಡಲ ಹಾಗೂ ಸೈನ್ಯ ಮಾತ್ರವಲ್ಲದೆ ತನ್ನ ರಾಜ್ಯದಲ್ಲಿ ಹಲವಾರು ಸುಸಜ್ಜಿತ ಸಂಸ್ಥೆಗಳನ್ನು ಸಹ ರಚಿಸಿ, ಅದಕ್ಕೆ ಸಮರ್ಥ ಮುಖ್ಯಸ್ಥರನ್ನು ಕೂಡ ನೇಮಿಸಿದ್ದ.ನೆರೆ ಪರಿಹಾರದ ತಂಡಕ್ಕೆ ಸದಾ ಬಾಯಿ ತೆರೆದು ನಗುವ ಮೊಸಳೆಯೇ ನಾಯಕ.ಅಗ್ನಿ ಶಾಮಕ ತಂಡಕ್ಕೆ ವಾಟರ್ ಪೈಪಿನಂತಹ ಸೊಂಡಿಲು ಹೊಂದಿರುವ ಗಜರಾಜನೇ ಸಾರಥಿ.ಕೃಷಿ ಸಮಿತಿಗೆ ಬಳುಕುವ ಸುಂದರಿ ಜಿಂಕೆಯೇ ಅಧಿನಾಯಕಿ.ಅವಳ ನೇತೃತ್ವದಲ್ಲಿ, ಅವಳ ಸೂಕ್ತ ಮಾರ್ಗದರ್ಶನದಲ್ಲಿ ಸುಂದರವನದ ಎಲ್ಲಾ ಪ್ರಾಣಿಗಳು ಸೊಂಪಾಗಿ,ಹುಲುಸಾಗಿ ಬೆಳೆಗಳನ್ನು ಬೆಳೆಯುತ್ತಿದ್ದವು.
ರಾತ್ರಿ ಪೂರ್ತಿ ನಿದ್ದೆ ಮಾಡದ ಬಾವಲಿಗಳ ತಂಡ ಗುಪ್ತಚರರಾಗಿ ಕೆಲಸ ಮಾಡುತ್ತಿದ್ದವು,ಚಂಪಕ ವನದಿಂದ ಏನಾದರೂ ಆಕ್ರಮಣದ ಸೂಚನೆ ಇದ್ದರೆ ಕೂಡಲೇ ರಾಜನಿಗೆ ವಿಷಯ ತಲುಪಿಸುತ್ತಿದ್ದವು ಮತ್ತು ಅದಕ್ಕಾಗಿ ಯಾವಾಗ ಬೇಕಾದರೂ ಯುದ್ಧ ಮಾಡಲು ಸುಂದರವನದ ಸೇನೆ ಸರ್ವ ರೀತಿಯಿಂದಲೂ ಸುಸಜ್ಜಿತವಾಗಿ ಸದಾ ಸಿದ್ಧವಾಗಿಯೇ ನಿಂತಿರುತ್ತಿತ್ತು.ನಿಂತು ನಿಂತು ಬಳಲಿದರೆ ಸ್ವಲ್ಪ ಹೊತ್ತು ಕುಳಿತುಕೊಳ್ಳುತ್ತಿತ್ತು.ಆ ನಂತರ ಎಂದಿನಂತೆ ಅವರ ಚಹಾ ಕಾಫಿ,ಉಪ್ಪಿಟ್ಟು ಸೇವನೆ ಮುಂದುವರಿಯುತ್ತಿತ್ತು
ರಾಜ ರಾಣಿಯರು ಆಹಾರಕ್ಕಾಗಿ ಎಂದಿಗೂ ತಮ್ಮ ಕಾಡಿನ ಪ್ರಜೆಗಳನ್ನು ಬೇಟೆಯಾಡಿದವರಲ್ಲ,ಮಾಂಸಹಾರ ಸೇವಿಸುವುದಕ್ಕಾಗಿ ಅವರು ಪಕ್ಕದ ಚಂಪಕ ವನಕ್ಕೆ ಹೋಗಿ ಬೇಟೆಯಾಡಿ ಬರುತ್ತಿದ್ದರು ಮತ್ತು ಉಳಿದ ಮಾಂಸಹಾರಿ ಪ್ರಾಣಿಗಳಿಗೂ ಕೂಡ ಇದನ್ನೇ ತಾಕೀತು ಮಾಡಿದ್ದರು.ಆದ್ದರಿಂದ ಮಾಂಸಹಾರಿ ಪ್ರಾಣಿಗಳೆಲ್ಲಾ ರಾಜನೊಂದಿಗೆ ಪಕ್ಕದ ಕಾಡಿಗೆ ಹೋಗಿ ಬೇಟೆಯಾಡಿ ಹಸಿವು ನೀಗಿಸಿಕೊಳ್ಳುತ್ತಿದ್ದವೇ ವಿನಹ ಸುಂದರವನದ ಯಾವುದೇ ಪ್ರಾಣಿಗಳ ಮೇಲೆ ಎಂದೂ ಕಣ್ಣು ಹಾಕುವ ಕೆಲಸ ಮಾಡಿರಲಿಲ್ಲ.
ಸುಂದರವನದಲ್ಲಿ ಪ್ರಾಣಿಗಳೊಂದಿಗೆ ಕೂಡಿಕೊಂಡಾಗ ರಾಜ ರಾಣಿ ಸಸ್ಯಾಹಾರವನ್ನು ಸೇವಿಸುತ್ತಿದ್ದ ಕಾರಣದಿಂದಾಗಿ ಕಾಡಿನ ಪ್ರಾಣಿಗಳು,ಕಾಡಿನ ಆಪತ್ತಿನ ನಿಧಿಗೆ ನಿಯಮದಂತೆ ತಾವು ಬೆಳೆದ ದವಸ ಧಾನ್ಯಗಳನ್ನು ಬೇಕಾದಷ್ಟು ನೀಡಿದ್ದರೂ ಸಹ,ತಾವು ಬೆಳೆದ ತರಕಾರಿ ಹಾಗೂ ಹಣ್ಣು ಹಂಪಲುಗಳನ್ನು ಕೂಡ ಕೇವಲ ರಾಜ ರಾಣಿಯರಿಗಾಗಿ ತಂದು ಒಪ್ಪಿಸುತ್ತಿದ್ದವು.
ಕರಡಿ ಆವಾಗವಾಗ ದೊಡ್ಡ ದೊಡ್ದ ಹಲಸಿಹಣ್ಣು ಮತ್ತು ಮರದಿಂದ ಸಿಹಿಯಾದ ಜೇನು ಕಿತ್ತು ತಂದು ಕೊಡುತ್ತಿತ್ತು.ಕೋತಿ ತನ್ನ ಬಾಳೆ ತೋಟದಲ್ಲಿ ಬೆಳೆದ ರುಚಿಯಾದ ಬಾಳೆಹಣ್ಣು ತಂದು ಕೊಡುತ್ತಿತ್ತು.ಮೊಲ ಬುಟ್ಟಿಗಟ್ಟಲೆ ಕ್ಯಾರೆಟ್,ಅಳಿಲು ರಾಶಿ ರಾಶಿ ಮಾವಿನ ಹಣ್ಣು,ಗಿಳಿ ತಾನು ಕಚ್ಚಿ ತಿನ್ನದೇ ಇರುವ ಪೇರಳೆ ಹಣ್ಣು, ಹೆಗ್ಗಣ ಸಿಹಿಗೆಣಸು.. ಹೀಗೆ ಎಲ್ಲಾ ಪ್ರಾಣಿಗಳು ಏನಾದರೊಂದು ತಂದು ಬಹು ಪ್ರೀತಿಯಿಂದ ಅದನ್ನು ತಮ್ಮ ರಾಜನಿಗೆ ಒಪ್ಪಿಸುತ್ತಿದ್ದವು.
ಅವರ ಪ್ರೀತಿಯನ್ನು ನಿರಾಕರಿಸಲು ಆಗದೆ ರಾಜ ಎಲ್ಲವನ್ನೂ ಸ್ವೀಕರಿಸುತ್ತಿದ್ದ. ರಾಣಿ ಅವುಗಳಿಂದ ಸೊಗಸಾದ ಸಿಹಿಯನ್ನು, ಭೋಜನವನ್ನು ತಯಾರಿಸುತ್ತಿದ್ದಳು ಮತ್ತು ರಾಜ ರಾಣಿಯರು ಅವುಗಳನ್ನು ಪ್ರಾಣಿಗಳೊಂದಿಗೆ ಕೂತೇ ಸವಿಯುತ್ತಿದ್ದರು.ನಂತರ ಎಂದಿನಂತೆ ಚಹಾ, ಕಾಫಿ, ಉಪ್ಪಿಟ್ಟು ಸೇವನೆ ಇರುತ್ತಿತ್ತು.
ಸಸ್ಯಾಹಾರದ ಅಡುಗೆಯನ್ನು ಸಹ ಕಾಡಿನ ಪ್ರಾಣಿಗಳೇ ರಾಣಿಗೆ ಕಲಿಸಿಕೊಟ್ಟಿದ್ದವು.ಮೊಲ ಸಿಹಿಯಾದ ಕ್ಯಾರೆಟ್ ಹಲ್ವ ಮಾಡುವುದನ್ನು ಕಲಿಸಿ ಕೊಟ್ಟಿತು,ಕರಡಿ ಹಲಸಿನ ಹಣ್ಣಿನ ರುಚಿ ರುಚಿಯಾದ ಕಡುಬು ಮಾಡಲು ಹೇಳಿ ಕೊಟ್ಟಿತ್ತು,ಆನೆ ಕಬ್ಬಿನಿಂದ ರಸ ತೆಗೆದು ಹೇಗೆ ಬೆಲ್ಲ ಹಾಗೂ ಪಾನಕ ಮಾಡಬಹುದು ಎಂಬುದನ್ನು ತಿಳಿಸಿತ್ತು.ಅಳಿಲು ಅರಮನೆಗೆ ಬರುವಾಗ ತನ್ನೊಡನೆ ರಸಭರಿತ ಮಾವಿನಹಣ್ಣಿಗಳನ್ನು ತರುವುದು ಮಾತ್ರವಲ್ಲದೇ.. ತಾನೇ ಅದರಿಂದ ಸೊಗಸಾದ ರಸಾಯನವನ್ನು ಸಹ ರಾಣಿಗೆ ಮಾಡಿ ಕೊಡುತ್ತಿತ್ತು.
ಕಡವೆ ಮಾತ್ರ ದ್ರಾಕ್ಷಿ ಗೋಡಂಬಿ ಎಲ್ಲಾ ಚೆನ್ನಾಗಿ ಹಾಕಿ ಗಂಟೆ ಗಟ್ಟಲೆ ಟೈಮ್ ವೇಸ್ಟ್ ಮಾಡಿ, ಅದೆನೋ ಬಹಳ ದೊಡ್ಡ ರಾಕೇಟ್ ಸೈನ್ಸ್ ನಂತೆ ಕಷ್ಟ ಪಟ್ಟು ವೆಜ್ ಬಿರಿಯಾಣಿ ಮಾಡಿ ರಾಣಿಗೆ ಕೊಡುತ್ತಿತ್ತು. ಏನೇ ಹಾಕಿ, ಹೇಗೆ ಮಾಡಿದರೂ ಅದು ವೆಜ್ ಬಿರಿಯಾಣಿ ಆಗುವುದಿಲ್ಲ ಆಯ್ತಾ.. ಅದು ಎಂದಿಗೂ ಪುಲಾವೇ. ಆದರೂ ಕಡವೆ ಅದು ವೆಜ್ ಬಿರಿಯಾಣಿ ಎಂದೇ ನಂಬಿ ರಾಣಿಗೆ ಶ್ರದ್ಧೆಯಿಂದ ಮಾಡಿ ಕೊಡುತ್ತಿತ್ತು. ಪಾಪ ಕಡವೆಗೆ ಸಹ ಇದರ ಬಗ್ಗೆ ಜಾಸ್ತಿ ಗೊತ್ತಿಲ್ಲ, ನಮ್ಮ ರಾಣಿಗೆ ಸಹ ಇದರ ಬಗ್ಗೆ ಜಾಸ್ತಿ ಅರಿವಿಲ್ಲ. ಸುಂದರವನದ ಯಾವ ಅಡುಗೆ ಪುಸ್ತಕದಲ್ಲೂ ಸಹ ಈ ವೆಜ್ ಬಿರಿಯಾಣಿ ಹಾಗೂ ಪುಲಾವ್ ನ ನಡುವೆ ಅಂತಹ ವ್ಯತ್ಯಾಸ ಏನೂ ಇಲ್ಲ ಎಂದು ಯಾವ ಪಾಕತಜ್ಞರು ಬರೆಯದೇ ಇದ್ದುದರಿಂದ ಸುಂದರವನದಲ್ಲಿ ಅದು ಎರಡೂ ಕೂಡ ಬೇರೆ ಬೇರೆ ಖಾದ್ಯಗಳು ಎಂದೇ ಅವರು ತಿಳಿದುಕೊಂಡಿದ್ದರು. .
ಹೀಗೆ ಸುಂದರ ವನದಲ್ಲಿ ಎಲ್ಲರೂ ಕಾಲ ಕಾಲಕ್ಕೆ ಸುಖವಾಗಿ ಚಹಾ, ಕಾಫಿ ಕುಡಿದು ಉಪ್ಪಿಟ್ಟು ತಿಂದು ಕ್ಷೇಮವಾಗಿ ಇದ್ದರು.
ಒಂದು ದಿನ ಸಿಂಹರಾಜ ಕಾಡಿನಲ್ಲಿ ಹೀಗೆಯೇ ಸುತ್ತಾಡಿ ಕೊಂಡು ಕಾಡಿನ ಪ್ರಾಣಿಗಳ ಕ್ಷೇಮ ಸಮಚಾರ ವಿಚಾರಿಸುತ್ತಾ ನಡೆದು ಹೋಗುತ್ತಿದ್ದ.
ನಡೆದು ನಡೆದು ಕೊನೆಗೆ ಒಂದು ಬಾವಿ ಕಟ್ಟೆಯ ಬಳಿಗೆ ಬಂದ ಸಿಂಹರಾಜ.
ಬಾವಿಯಲ್ಲಿ ಎಷ್ಟು ನೀರು ಇದೆ ಎಂದು ಸುಮ್ಮನೆ ಒಮ್ಮೆ ಹೀಗೆ ಬಗ್ಗಿ ನೋಡಿದ.
ಆಗ ಸಿಂಹರಾಜನ ಕೈಯಲ್ಲಿ ಇದ್ದ ವಜ್ರದುಂಗರ ಬೆರಳಿನಿಂದ ಜಾರಿ ಆ ಬಾವಿಯೊಳಕ್ಕೆ ಬಿದ್ದು ಬಿಟ್ಟಿತು..!
ಆ ಉಂಗುರ ಕಾಡಿಗೆ ರಾಜನಾಗಿ ಇರುವುದರ ಸಂಕೇತವಾಗಿತ್ತು ಮತ್ತು ಸಿಂಹರಾಜನ ಹಿಂದಿನ ಹಲವಾರು ತಲೆಮಾರುಗಳನ್ನು ದಾಟಿ ಕೊನೆಗೆ ಈ ಸಿಂಹರಾಜನ ಕೈ ಸೇರಿತ್ತು ಅದು. ಎಲ್ಲ ಕಾಡಿನ ರಾಜರಿಗೆ ಇರುವಂತೆ ಸುಂದರವನದ ರಾಜರಿಗೆ ತಲೆಯಲ್ಲಿ ರತ್ನಖಚಿತ ಕಿರೀಟ ಇರುತ್ತಿರಲಿಲ್ಲ. ಬದಲಾಗಿ ಈ ವಜ್ರದುಂಗುರ ಇರುತ್ತಿತ್ತು.
ಅದು ಕೈಯಲ್ಲಿ ಇದ್ದರೆನೆ ರಾಜನಾಗಿ ಒಂದು ಬೆಲೆ, ಕಾಡಿನಲ್ಲಿ ಒಂದು ಹವಾ ಎಲ್ಲಾ ಇರುತ್ತಿತ್ತು.ಈಗ ಹೇಗಾದರೂ ಮಾಡಿ ಆ ಉಂಗುರವನ್ನು ತೆಗೆಯಲೇ ಬೇಕಿತ್ತು.
ಕೂಡಲೇ ತನ್ನ ಗುಹೆಗೆ ಮರಳಿದ ರಾಜ ಕಾಡಿನ ಎಲ್ಲಾ ಪ್ರಾಣಿಗಳನ್ನು ತನ್ನ ಗುಹೆಯ ಬಳಿ ಈಗಲೇ ಸಭೆ ಸೇರಿಸಲು ತನ್ನ ಮಹಾ ಮಂತ್ರಿಯಾದ ನರಿಗೆ ಆದೇಶಿಸಿದ.
ನರಿ ಕಾಡಿನ ಸಂದೇಶ ವಾಹಕನಾದ ಗಿಣಿರಾಮನಿಗೆ ವಿಷಯ ತಿಳಿಸಿದ.
ಗಿಣಿರಾಮ ಎಲ್ಲಾ ಪ್ರಾಣಿ ಪಕ್ಷಿಗಳ ಬಳಿಗೆ ಹೋಗಿ, ರಾಜ ತುರ್ತಾಗಿ ಸಭೆ ಕರೆದಿರುವ ಸಂಗತಿ ತಿಳಿಸಿ.. ವಿಷಯ ಗಂಭೀರ ಇದೆ, ರಪ್ಪ ಬನ್ನಿ.. ಎಂದು ಹೇಳಿದ.
ಏನೋ ತೊಂದರೆಯಾಗಿರಬೇಕು ಅದಕ್ಕೆ ರಾಜ ಸಭೆ ಕರೆದಿದ್ದಾನೆ ಎಂದು ತಿಳಿದ ಎಲ್ಲಾ ಪ್ರಾಣಿಗಳು ಎದ್ದು ಬಿದ್ದು ಓಡೋಡಿ ಸಿಂಹರಾಜನ ಗುಹೆಯ ಬಳಿ ಬಂದವು.
ಆನೆ, ಕರಡಿ,ಜಿರಾಫೆ,ಕೋತಿ,ಜಿಂಕೆ, ಮುಳ್ಳು ಹಂದಿ,ಕಾಗೆ, ಚಿಟ್ಟೆ,ಜೇನು ಹುಳ, ಮಿಂಚು ಹುಳ,ಆಮೆ,ಮೊಲ, ಕಡವೆ, ಸಾರಂಗ ಎಲ್ಲವೂ ಓಡೋಡಿ ಗುಹೆಯ ಬಳಿ ಬಂದವು.
ಎಲ್ಲಾ ಪ್ರಾಣಿಗಳು ಬಂದು ಸೇರಿದ ನಂತರ ಸಿಂಹರಾಜ ಎತ್ತರದ ಬಂಡೆಯಲ್ಲಿ ನಿಂತುಕೊಂಡು ಹೇಳಿದ... ನನ್ನ ಪ್ರೀತಿಯ ಸುಂದರವನದ ಪ್ರಜೆಗಳೇ.. ನಾನಿಂದು ನಮ್ಮ ಕಾಡಿನ ನಡುವೆ ಇರುವ ಬಾವಿಯಲ್ಲಿ ನನ್ನ ವಜ್ರದುಂಗರವನ್ನು ಕಳೆದುಕೊಂಡಿರುವೆನು.
ಇದು ನನಗೆ ಅತೀವ ದುಃಖವನ್ನು ಉಂಟು ಮಾಡಿದೆ. ಹಲವಾರು ಶತಮಾನಗಳ ನಮ್ಮ ಈ ಸುಂದರವನದ ರಾಜ ಪರಂಪರೆಯಲ್ಲಿ ಯಾರೂ ಈ ರೀತಿಯಾಗಿ ರಾಜನ ವಜ್ರದುಂಗುರವನ್ನು ಕಳೆದುಕೊಂಡಿರಲಿಲ್ಲ. ಆದರೆ ಇಂದು ಈ ಘಟನೆ ನನ್ನಿಂದಾಗಿ ಘಟಿಸಿತು. ಒಂದು ವೇಳೆ ವಜ್ರದುಂಗುರ ಸಿಗದಿದ್ದರೆ ಅದು ನನ್ನ ಶ್ವೇತ ವರ್ಣದಂತಹ ಕಳಂಕವಿಲ್ಲದ ಬಾಳಿನಲ್ಲಿ ಒಂದು ಕಪ್ಪು ಚುಕ್ಕೆ ಇದ್ದಂತೆ.
ಆದ್ದರಿಂದ ನಿಮ್ಮಲ್ಲಿ ಯಾರಾದರೂ ಬಾವಿಯಲ್ಲಿ ಬಿದ್ದಿರುವ ನನ್ನ ವಜ್ರದುಂಗುರವನ್ನು ತೆಗೆದುಕೊಟ್ಟರೆ ಅವರಿಗೆ ನಾನು ವಿಶೇಷವಾದ ಒಂದು ಬಹುಮಾನವನ್ನು ಕೊಡುತ್ತೇನೆ ಎಂದು.. ಸಿಂಹರಾಜ ಘೋಷಿಸಿದ.
ಅದನ್ನು ಕೇಳಿ ಎಲ್ಲಾ ಪ್ರಾಣಿಗಳಿಗೆ ಬಹಳ ಸಂತೋಷವಾಯಿತು.
ಎಲ್ಲಾ ಪ್ರಾಣಿ ಪಕ್ಷಿಗಳು ಬಾವಿಯ ಬಳಿಗೆ ಓಡಿದವು.
ರಾಜ ಹುಲಿರಾಯನ ಸೈನ್ಯಕ್ಕೆ ತನ್ನ ಗುಹೆಯನ್ನು ಕಾವಲು ಕಾಯಲು ಹೇಳಿ ತನ್ನ ಮಂತ್ರಿ ಮಂಡಲದ ಸದಸ್ಯರು ಹಾಗೂ ರಾಣಿಯೊಂದಿಗೆ ತಾನೂ ಕೂಡ ವಜ್ರದುಂಗುರ ಕಳೆದುಕೊಂಡ ಬಾವಿಯ ಬಳಿಗೆ ನಡೆದ.
ಎಲ್ಲಾ ಪ್ರಾಣಿಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಹಳ ಪ್ರಯತ್ನಿಸಿದವು. ಆದರೆ ಯಾರಿಗೂ ಬಾವಿಗಿಳಿದು ಉಂಗುರ ತೆಗೆಯುವ ಉಪಾಯ ಹೊಳೆಯಲಿಲ್ಲ.
ಕೊನೆಗೆ ಪುಟ್ಟ ಆಮೆ ಮರಿ ಹೇಳಿತು... ನನ್ನ ಕಾಲುಗಳು ಬಾವಿಗಿಳಿಯುವಷ್ಟು ಸಮರ್ಥವಾಗಿಲ್ಲ. ಆದರೆ ನನ್ನನ್ನು ಯಾರಾದರೂ ನೀರಿನೊಳಗೆ ಬಿಟ್ಟು ಬಿಟ್ಟರೆ ನಾನು ಬಾವಿಯ ತಳಕ್ಕೆ ಹೋಗಿ ಉಂಗುರ ಹುಡುಕಿ ತರುವೆ.. ಎಂದು ಹೇಳಿತು.
ಅದಕ್ಕೆ ಜಿರಾಫೆ ಹೇಳಿತು... ನನ್ನ ಕುತ್ತಿಗೆ ಬಹಳ ಉದ್ದವಿದೆ, ಬಾವಿಯೊಳಗೆ ಬಾಗಿದರೆ ಮುಕ್ಕಾಲು ಭಾಗ ತಲುಪಬಹುದು ಆದರೆ,ನೀರಿನವರೆಗೆ ತಲುಪಲಾರೆ.. ಎಂದು ಹೇಳಿತು.
ಅದಕ್ಕೆ ಕೋತಿ ಹೇಳಿತು,ನೀನು ನಿನ್ನ ಕುತ್ತಿಗೆಯನ್ನು ಬಾವಿಗೆ ಇಳಿಸಿದಾಗ ನಿನ್ನ ಕುತ್ತಿಗೆಯ ತುದಿಯನ್ನು ಹಿಡಿದು ನಾನು ನೇತಾಡಿದರೆ ನನ್ನ ಬಾಲ ಖಂಡಿತವಾಗಿಯೂ ನೀರನ್ನು ಮುಟ್ಟಬಲ್ಲದು.. ಆವಾಗ ಆಮೆ ಮರಿ ನಿನ್ನನ್ನು ಹಾಗೂ ನನ್ನನ್ನು ಬಳಸಿಕೊಂಡು ಸುಲಭವಾಗಿ ನೀರಿನೊಳಕ್ಕೆ ಇಳಿಯಬಹುದು.. ಎಂದು ಹೇಳಿತು.
ಅದನ್ನು ಕೇಳಿ ಎಲ್ಲರಿಗೂ ಸಂತೋಷ ವಾಯಿತು.
ಆನೆ ಕೂಡ ಹೇಳಿತು.. ನಾನು ಬೇಕಾದರೆ ಜಿರಾಫೆಯನ್ನು ಮೇಲಿನಿಂದ ಗಟ್ಟಿಯಾಗಿ ಹಿಡಿದುಕೊಳ್ಳ ಬಲ್ಲೆ ಎಂದು.
ಎಲ್ಲರಿಗೂ ಈ ಉಪಾಯ ಹಿಡಿಸಿತು.
ಜಿರಾಫೆ ತನ್ನ ಉದ್ದವಾದ ಕುತ್ತಿಗೆಯನ್ನು ಬಾವಿಯೊಳಗೆ ಹಾಕಿ ನಿಂತು ಕೊಂಡು ಬಿಟ್ಟಿತ್ತು. ಆನೆ ಜಿರಾಫೆಯನ್ನು ಮೇಲಿನಿಂದ ಬಲವಾಗಿ ತನ್ನ ಸೊಂಡಿಲಿನಿಂದ ಹಿಡಿದುಕೊಂಡಿತು.
ನಂತರ ಕೋತಿ ನಿಧಾನವಾಗಿ ಜಿರಾಫೆಯ ಕುತ್ತಿಗೆಯನ್ನು ಬಳಸುತ್ತಾ ಅದರ ತಲೆ ಭಾಗದವರೆಗೆ ಹೋಗಿ ಬಾವಿಯೊಳಗೆ ನೇತಾಡುತ್ತಾ ನಿಂತು ಬಿಟ್ಟಿತ್ತು.
ಆ ನಂತರ ಆಮೆ ಮರಿ ಜಿರಾಫೆಯ ಮೇಲೆ ನಿಧಾನವಾಗಿ ಚಲಿಸುತ್ತಾ ಬಾವಿಯೊಳಗಿದ್ದ ಅದರ ಕುತ್ತಿಗೆಯ ತಲೆ ಭಾಗದವರೆಗೆ ಬಂತು.ನಂತರ ಜಿರಾಫೆಯ ಕುತ್ತಿಗೆಯನ್ನು ಹಿಡಿದು ಕೊಂಡು ನೇತಾಡುತ್ತಾದ್ದ ಕೋತಿಯ ದೇಹವನ್ನು ಬಳಸಿ,ಅದರ ಬಾಲದ ಮೂಲಕ ನಿಧಾನವಾಗಿ ನೀರಿನೊಳಗೆ ಧುಮುಕಿಯೇ ಬಿಟ್ಟಿತು.
ಮೇಲೆ ಇದ್ದ ಎಲ್ಲಾ ಪ್ರಾಣಿ ಪಕ್ಷಿಗಳು ಇದನ್ನು ಉಸಿರು ಬಿಗಿ ಹಿಡಿದು ನೋಡುತ್ತಿದ್ದವು.
ಆಮೆ ಮರಿ ನೀರಿನಡಿಗೆ ಹೋಗಿ ತುಂಬಾ ಹೊತ್ತಾಯಿತು.
ಎಲ್ಲರೂ ನೋಡು ನೋಡುತ್ತಿದ್ದಂತೆಯೇ ಕೊನೆಗೂ ಆಮೆ ಮರಿ ಬಾವಿಯ ತಳದಲ್ಲಿದ್ದ ವಜ್ರದುಂಗರವನ್ನು ಹುಡುಕಿ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಹಾಗೇ ಈಜುತ್ತಾ ನೀರ ಮೇಲೆ ಬಂದೇ ಬಿಟ್ಟಿತು.
ಅದನ್ನು ಕಂಡು ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಬಹಳ ಖುಷಿ ಆಯಿತು.. ಎಲ್ಲರೂ.. ಹುರ್ರೆ.. ಹುರ್ರೆ.. ಎಂದು ಸಂತೋಷ ವ್ಯಕ್ತಪಡಿಸಿದವು.
ನಂತರ ಕೋತಿಯನ್ನು ಬಳಸಿ,ಜಿರಾಫೆಯ ಕುತ್ತಿಗೆಯನ್ನು ಬಳಸಿ ಮೇಲೆ ಬಂದ ಆಮೆ ಮರಿ ವಜ್ರದುಂಗರವನ್ನು ಸಿಂಹರಾಜನ ಕೈಗೆ ಕೊಟ್ಟಿತು.
ಎಲ್ಲಾ ಪ್ರಾಣಿಗಳು ಖುಷಿಯಿಂದ ಚಪ್ಟಾಳೆ ತಟ್ಟಿದವು.
ಆ ನಂತರ ಆಮೆ ಮರಿ ಬಹಳ ಕೂಲಾಗಿ ಹೇಳಿತು...ರಾಜ ನೀರನಡಿಗೆ ಹೋಗಿ ಉಂಗುರ ಹುಡುಕಿದ್ದು ನಾನು.. ಆದ್ದರಿಂದ ನೀವು ಕೊಡಬೇಕಿದ್ದ ಬಹುಮಾನವನ್ನು ನನಗೆಯೇ ಕೊಟ್ಟು ಬಿಡಿ..!
ಅದನ್ನು ಕೇಳಿ ಕೋತಿಗೆ ಸಿಟ್ಟು ಬಂತು.. ಕೋತಿ ಹೇಳಿತು... ನಾನು ಬಾವಿಯ ನಡುವಲ್ಲಿ ನೇತಾಡದಿದ್ದರೆ ಈ ಕೆಲಸ ಸುಲಭ ಸಾಧ್ಯ ಆಗುತ್ತಿರಲಿಲ್ಲ.. ಆದ್ದರಿಂದ ನನಗೇ ಬಹುಮಾನ ಸಿಗಬೇಕು..!
ಅದನ್ನು ಕೇಳಿ ಜಿರಾಫೆ ಹೇಳಿತು... ನನ್ನಷ್ಟು ಉದ್ದ ಈ ಕಾಡಿನಲ್ಲಿ ಯಾರೂ ಇಲ್ಲ.. ನಾನಿರದಿದ್ದರೆ ನಿಮ್ಮಲ್ಲಿ ಯಾರಿಗೂ ಉಂಗುರ ಮೇಲೆತ್ತಲು ಸಾಧ್ಯವೇ ಇಲ್ಲ... ನ್ಯಾಯವಾಗಿ ನೋಡಿದರೆ.. ನನ್ನ ಕೊಡುಗೆಯೇ ಜಾಸ್ತಿ.. ಆದ್ದರಿಂದ ಬಹುಮಾನ ನನಗೊಬ್ಬನಿಗೆಯೇ ಸಿಗಬೇಕು..!
ಆನೆ ಕೂಡ ಹೇಳಿತು...ಜಿರಾಫೆ ನೆಲದ ಮೇಲೆ ಬಲವಾಗಿ ನಿಲ್ಲಲ್ಲು ನನ್ನ ಕೊಡುಗೆ ಕೂಡ ಸಾಕಷ್ಟು ಇದೆ. ಆದ್ದರಿಂದ ನನಗೆಯೇ ಬಹುಮಾನ ಕೊಡಿ..!
ಸಿಂಹರಾಜನಿಗೆ ಪ್ರಾಣಿಗಳ ಕಚ್ಚಾಟ ಕಂಡು ಏನು ಮಾಡಬೇಕೆಂದು ಗೊತ್ತಾಗಲಿಲ್ಲ.
ಸಿಂಹರಾಜ ಪಕ್ಕದಲ್ಲಿದ್ದ ತನ್ನ ಮಂತ್ರಿ ಮಂಡಲದ ಸದಸ್ಯರತ್ತ ಒಮ್ಮೆ ರಪ್ಪ ನೋಡಿದ. ಚಾಣಕ್ಯ ನರಿಗೂ ಕೂಡ ಇದಕ್ಕೇನು ಪರಿಹಾರ ನೀಡುವುದು ಎಂದು ತೋಚಲಿಲ್ಲ. ರಾಜನ ಆಪ್ತ ಸಲಹೆಗಾರ ಕರಡಿ ಮಹಾಶಯ ಏನು ಮಾಡುವುದು ಎಂದು ಗೊತ್ತಾಗದೇ ತಲೆ ಕೆರೆದುಕೊಳ್ಳಲು ಶುರು ಮಾಡಿದ.
ಕೊನೆಗೆ ಅಲ್ಲೇ ಇದ್ದ ಕಾಡಿನ ರಾಣಿ ಸಿಂಹಿಣಿ.. ರಾಜನಲ್ಲಿಗೆ ಬಂದು ಹೇಳಿದಳು... ಮಹಾರಾಜ .. ಇದಕ್ಕೆ ನೀವು ಚಿಂತೆ ಮಾಡಬೇಡಿ, ಈ ಸಮಸ್ಯೆಗೆ ಪರಿಹಾರ ನನಗೆ ಗೊತ್ತಿದೆ.. ಎಂದು ಹೇಳಿದ ರಾಣಿ, ರಾಜನ ಕೈಯಲ್ಲಿದ್ದ ವಜ್ರದುಂಗರವನ್ನು ತನ್ನ ಕೈಗೆ ತೆಗೆದುಕೊಂಡು,ಬಾವಿಯ ಬಳಿ ಹೋಗಿ ಅದನ್ನು ಮತ್ತೆ ಬಾವಿಗೆ ಎಸೆದು ಬಿಟ್ಟಳು..!
ಅದನ್ನು ಕಂಡು ಎಲ್ಲಾ ಪ್ರಾಣಿಗಳಿಗೆ ಆಶ್ಚರ್ಯವಾಯಿತು.!
ನಂತರ ರಾಣಿ... ಆನೆ, ಜಿರಾಫೆ,ಕೋತಿ ಮತ್ತು ಆಮೆ ಮರಿಗೆ ಹೇಳಿತು... ಈಗ ಈ ಉಂಗುರವನ್ನು ನೀವು ಯಾರಾದರೂ ಮರಳಿ ಮೇಲೆ ತಂದು ಕೊಡದಿದ್ದರೆ ನಿಮಗೆಲ್ಲರಿಗೂ ಕಠಿಣ ಶಿಕ್ಷೆ ಕೊಡಲಾಗುವುದು ಮತ್ತು ಸಂದರವನದಿಂದ ಪಕ್ಕದ ವೈರಿ ರಾಜ್ಯ ಚಂಪಕವನಕ್ಕೆ ನಿಮ್ಮನ್ನು ಗಡಿಪಾರು ಮಾಡಲಾಗುವುದು!!
ಅದನ್ನು ಕೇಳಿ ಆ ನಾಲ್ಕು ಪ್ರಾಣಿಗಳಿಗೂ ಭಯವಾಯಿತು ಮತ್ತು ಆ ಕೂಡಲೇ ತಮ್ಮ ತಮ್ಮಲ್ಲಿ ಜಗಳಕ್ಕೆ ಇಳಿದು ಬಿಟ್ಟವು... ನೀನೇ ಅಲ್ಲವೇ ಹೇಳಿದ್ದು ..ಉಂಗುರ ತೆಗೆಯಲು ಎಲ್ಲರಿಗಿಂತ ಹೆಚ್ಚಿನ ಕೊಡುಗೆ ನೀಡಿದ್ದು ಎಂದು.. ಈಗ ನೀನೇ ಒಬ್ಬನೇ ಹೋಗಿ ಉಂಗುರ ತೆಗೆದು ತೋರಿಸು... ಎಂದು ತಮ್ಮ ತಮ್ಮಲ್ಲಿ ವಾಗ್ವಾದ ಮಾಡಿಕೊಂಡವು.
ಆದರೆ ಆ ನಾಲ್ವರಿಗೂ ಗೊತ್ತಿತ್ತು... ತಮ್ಮಲಿ ಯಾರಿಗೇ ಆಗಲಿ ಒಬ್ಬರಿಗೆಯೇ ಹೋಗಿ ಉಂಗುರ ತೆಗೆಯಲು ಸಾಧ್ಯವಿಲ್ಲ ಎಂದು.
ಕೊನೆಗೆ ನಾಲ್ವರೂ ತಮ್ಮ ಜಗಳವನ್ನು ನಿಲ್ಲಿಸಿ ತುಂಬಾ ಹೊತ್ತು ಸುಮ್ಮನಾಗಿ ಬಿಟ್ಟವು.
ಕೊನೆಗೆ ಆಮೆ ಮರಿಯೇ ಹೇಳಿತು.. ನಾವು ನಮ್ಮ ಅಹಂಕಾರವನ್ನು ಬಿಟ್ಟು ಮತ್ತೆ ಎಲ್ಲರೂ ಸೇರಿ ಹಿಂದಿನಂತೆಯೇ ಪ್ರಯತ್ನಿಸಿದರೆ ಖಂಡಿತವಾಗಿಯೂ ಉಂಗುರವನ್ನು ಮೇಲೆ ತೆಗೆಯಬಹುದು, ಶಿಕ್ಷೆಯಿಂದ ಪಾರಾಗಬಹುದು..
ಅದನ್ನು ಕೇಳಿ ಉಳಿದ ಮೂರು ಪ್ರಾಣಿಗಳಿಗೂ ಅದೇ ಸರಿ ಅನಿಸಿತು.
ಕೂಡಲೇ ಜಿರಾಫೆ ಬಾವಿಯೊಳಗೆ ತನ್ನ ಕುತ್ತಿಗೆ ಹಾಕಿ ನಿಂತಿತ್ತು. ಆನೆ ಜಿರಾಫೆಯನ್ನು ಹಿಡಿಯಿತು ಮತ್ತು ಕೋತಿ ಜಿರಾಫೆ ಕುತ್ತಿಗೆಯಲ್ಲಿ ಬಾವಿಯೊಳಗೆ ನೇತಾಡಿತು.
ಆಮೆ ಮರಿ ಕಳೆದ ಬಾರಿಯಂತೆಯೇ ಎಲ್ಲರನ್ನು ಬಳಸಿಕೊಂಡು ನೀರಿಗಿಳಿದು ಮತ್ತೆ ಉಂಗುರವನ್ನು ಮೇಲೆ ತಂದು ರಾಜನಿಗೆ ಒಪ್ಪಿಸಿತು.
ಆಗ ರಾಣಿ ಕೇಳಿದಳು... ಈಗ ಹೇಳಿ,ನಿಮ್ಮಲ್ಲಿ ಯಾರೂ ಶ್ರೇಷ್ಠ... ಯಾರಿಗೆ ಆ ಒಂದು ಬಹುಮಾನ ಕೊಡಲಿ?
ಅದಕ್ಕೆ ಆಮೆ ಮರಿಯೇ ಹೇಳಿತು... ಎಲ್ಲರೂ ಶ್ರೇಷ್ಠರೇ.. ಎಲ್ಲರ ಸಾಂಘಿಕ ಪ್ರಯತ್ನದಿಂದಾಗಿ ಉಂಗುರ ತೆಗೆಯಲು ಸಾಧ್ಯವಾಯಿತು. ಆದ್ದರಿಂದ ಬಹುಮಾನ ಕೊಡುವುದೇ ಆದರೆ ನಾಲ್ಕು ಮಂದಿಗೂ ನೀಡಿ.. ಇಲ್ಲದಿದ್ದರೆ ನಮಗೆ ಯಾರಿಗೂ ಬಹುಮಾನ ಬೇಡ.
ತಮ್ಮದು ಕೂಡ ಅದೇ ಅಭಿಪ್ರಾಯ ಎಂಬಂತೆ.. ಆನೆ, ಜಿರಾಫೆ, ಮತ್ತು ಕೋತಿ ಕೂಡ.. ಹೌದು.. ಹೌದು ನಮ್ಮಲ್ಲಿ ಎಲ್ಲರೂ ಶ್ರೇಷ್ಠರೇ.. ಯಾರೂ ಮೇಲೂ ಅಲ್ಲ... ಯಾರೂ ಕೀಳೂ ಅಲ್ಲ ಎಂದು ಒಕ್ಕೊರಲಿನಿಂದ ಹೇಳಿ ಬಿಟ್ಟವು.
ಅದನ್ನು ಕೇಳಿ ರಾಜ,ರಾಣಿಗೆ ಬಹಳ ಖುಷಿ ಆಯಿತು.
ರಾಣಿ ಎಲ್ಲಾ ಪ್ರಾಣಿಗಳಿಗೂ ಕೇಳುವಂತೆ ಹೇಳಿದಳು... ನೋಡಿ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳುವುದು ಇದಕ್ಕೆಯೇ.. ಇದೇ ಈ ಘಟನೆಯ ನಾವು ಕಲಿಯಬಹುದಾದ ನೀತಿ ಪಾಠ.ಇದನ್ನೇ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು.
ರಾಣಿಯ ಮಾತಿಗೆ ಎಲ್ಲಾ ಪ್ರಾಣಿಗಳು ತಲೆದೂಗಿದವು.
ನಂತರ ರಾಜ ಎಲ್ಲರೆದುರೇ ಘೋಷಿಸಿ ಬಿಟ್ಟ... ತಮ್ಮ ಅಪ್ರತಿಮ ಬುದ್ಧಿವಂತಿಕೆಯನ್ನು ಮೆರೆದು ಎರಡೆರಡು ಬಾರಿ ಉಂಗುರ ತೆಗೆಯುವ ಅಮೋಘ, ಅತ್ಯಧ್ಭುತ ಸಾಹಸ ಮಾಡಿದ ಈ ನಾಲ್ವರಿಗೂ ದುಪ್ಪಟ್ಟು ಬೆಲೆಯ ಬಹುಮಾನವನ್ನು ಕೊಟ್ಟು ಗೌರವಿಸಲಾಗುವುದು..
ಅದನ್ನು ಕೇಳಿ ಅಲ್ಲಿದ್ದ ಎಲ್ಲರಿಗೂ ಬಹಳ ಸಂತೋಷವಾಯಿತು..
ಎಲ್ಲಾ ಪ್ರಾಣಿ ಪಕ್ಷಿಗಳು ಆನೆ, ಜಿರಾಫೆ, ಕೋತಿ, ಆಮೆ ಮರಿಯನ್ನು ಹಾಡಿ ಹೊಗಳುತ್ತಾ ಕುಣಿದು ಕುಪ್ಪಳಿಸಿದವು.
ಕೋಗಿಲೆ ಸುಶ್ರಾವ್ಯವಾಗಿ ಹಾಡಿತು.. ನವಿಲು ಗರಿ ಬಿಚ್ಚಿ ನರ್ತಿಸಿತು, ಕೋತಿ ಮರಿಗಳು ಮರ ಏರಿ ಲಗಾಟೆ ಹೊಡೆದವು,ಕಡವೆ ಮತ್ತು ಜಿಂಕೆಗಳು ಕೈ ಕೈ ಹಿಡಿದು ಕುಣಿದವು, ಅಳಿಲು ಅಂಟಿನ ಗಿಡದ ಸೊನೆಯನ್ನು ಹೂವಿನ ದಂಟೊದರಲ್ಲಿ ಅದ್ದಿ ಅದರಿಂದ ಗಾಳಿ ಗುಳ್ಳೆಗಳನ್ನು ಸುತ್ತಲೂ ಬಿಟ್ಟಿತು. ಜಿರಾಫೆ ತನ್ನ ಉದ್ದವಾದ ಕತ್ತಿನಿಂದ ಮರದ ಮೇಲಿನ ಕೊಂಬೆಯನ್ನು ಅಲುಗಾಡಿಸಿ ಮರದಲ್ಲಿದ್ದ ಎಲ್ಲಾ ಹೂವುಗಳು ಕೆಳಗೆ ಬೀಳುವಂತೆ ಪುಷ್ಪವೃಷ್ಟಿ ಮಾಡಿತು... ಒಟ್ಟಿನಲ್ಲಿ ಆನಂದವನದ ತುಂಬೆಲ್ಲಾ ಸಂತೋಷದ,ಆಹ್ಲಾದಕರವಾದ ವಾತಾವರಣ ಪಸರಿಸಿತು.
ಅದನ್ನು ಕಂಡ ರಾಜ ರಾಣಿಯ ಕಣ್ಣಲ್ಲೂ ಕೂಡ ಖುಷಿಯ ಹೊಳಪು ಹೆಚ್ಚಾಯಿತು.
ರಾಜ ತನ್ನ ರಾಣಿಗೆ ಹೇಳಿದ...ನೋಡು.. ಎಲ್ಲರೂ ಎಷ್ಟೊಂದು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ,ಈ ಖುಷಿಗೆ ನನ್ನ ಈ ಪ್ರಜೆಗಳ ಬಾಯಿ ಸಿಹಿ ಮಾಡುವುದಿಲ್ಲವೇ ಪ್ರಿಯೆ...
ಅದನ್ನು ಕೇಳಿ ಗುಂಪಿನಲ್ಲಿದ್ದ ಮೊಲ ಎಲ್ಲರಿಗಿಂತ ಮುಂದೆ ಬಂದು ಹೇಳಿತು...ಮಹಾರಾಣಿ.. ನಾವು ಇವತ್ತು ಎಲ್ಲರಿಗೂ ಕ್ಯಾರೆಟ್ ಹಲ್ವ ಮಾಡೋಣವೇ.. ಮತ್ತು ಅದಕ್ಕಾಗಿ ನಿಮಗೆ ನಾನು ಸಹಾಯ ಮಾಡುವೆನು..
ಅದನ್ನು ಕೇಳಿ ಎಲ್ಲರಿಗೂ ಮತ್ತಷ್ಟು ಖುಷಿಯಾಯಿತು.
ಮೊಲ ಮತ್ತು ರಾಣಿ ನಗು ನಗುತ್ತಾ ಕ್ಯಾರೆಟ್ ಹಲ್ವ ಮಾಡಲು ಗುಹೆಯತ್ತ ಸರ ಸರನೆ ನಡೆದು ಹೋದರೆ,ಸಿಂಹರಾಜ ಕುಣಿದು ಕುಪ್ಪಳಿಸುತ್ತಿದ್ದ ಪ್ರಾಣಿಗಳೊಂದಿಗೆ ತಾನು ಕೂಡ ಸೇರಿಕೊಂಡು ಎಲ್ಲರಿಗಿಂತ ವಿಭಿನ್ನವಾದ ಸ್ಟೆಪ್ಸ್ ಹಾಕಿ ತನ್ನ ಬಾಡಿಯನ್ನು ಬಳುಕಿಸುತ್ತಾ, ಕುಲುಕಿಸುತ್ತಾ.. ತಾನೂ ಸಹ ಖುಷಿಯಿಂದ ಎರಡು ಕಾಲಿನಲ್ಲಿ ಕುಣಿಯಲು ಶುರು ಮಾಡಿದ 😌
.....................................................................................
#ಸುಂದರವನ..
ab pacchu
moodubidire

Comments
Post a Comment