ಪ್ರೇಮ ಪಲ್ಲವಿ
ಫೇಸ್ಬುಕ್ ಮೆಸೆಂಜರ್ ನ ಆ "ಟಿಂಗ್" ಎನ್ನುವ ಸ್ವೀಟ್ ಸೌಂಡಿಗೆ ಹೃದಯದ ಬಡಿತಗಳನ್ನು ಏರುಪೇರು ಮಾಡುವ ಶಕ್ತಿ ಇದೆ. ಅದರಲ್ಲೂ ಬರುವ ಆ ಮೆಸೇಜ್ ನಿಮ್ಮ crush ನದ್ದೇ ಆಗಿದ್ದರೆ ಹೃದಯ ಎಲ್ಲೋ ಕೈಯಲ್ಲಿಯೇ ಇದ್ದಂತೆ ಭಾಸವಾಗುತ್ತದೆ.
ನಾನು ಬರೆಯುವ ಹುಚ್ಚು ಕಥೆಗಳಿಗೆ, ಪೋಸ್ಟ್ ಗಳಿಗೆ ಕೆಲವೊಮ್ಮೆ ಹುಡುಗರು ಮಾತ್ರ ಅಲ್ಲ, ಪರಿಚಿತ ಅಪರಿಚಿತ ಹುಡುಗಿಯರು ಕೂಡ ಮೆಸೆಂಜರ್ ನಲ್ಲಿ ಮೆಸೇಜ್ ಕಳಿಸುತ್ತಾರೆ.ಹೆಚ್ಚಾಗಿ ಒಂದೊಳ್ಳೆಯ ಮೆಚ್ಚುಗೆ,ಖುಷಿ ಕೊಡುವ compliment ಗಳು.. ನೈಸ್ ಪೊಸ್ಟ್, ಚೆನ್ನಾಗಿ ಬರೀತೀರಾ.. ಹೀಗೆ ಬರೆಯಿರಿ.. ನಿಮ್ಮ ಕಾಮಿಡಿ ಪೋಸ್ಟ್ ಗಳು ಚೆನ್ನಾಗಿರುತ್ತದೆ..ಕಾಮಿಡಿ ಯೇ ಜಾಸ್ತಿ ಬರೆಯಿರಿ..ಟ್ರಾಜಿಡಿ ಲವ್ ಸ್ಟೋರಿ ಎಲ್ಲಾ ಬೇಡ.. ಪೊಲಿಟಿಕ್ಸ್ ಬೇಡವೇ ಬೇಡ
ಹೀಗೆ etc etc..
ಕೆಲವೊಮ್ಮೆ ಹೀಗೆ ಮೆಸೇಜ್ ಗಳ ಮೂಲಕ ಉಂಟಾದ ಪರಿಚಯ,ಒಳ್ಳೆಯ ಸ್ನೇಹವಾಗಿ ಮಾರ್ಪಾಡಗುವ ಸಂಭವ ಕೂಡ ಇರುತ್ತದೆ.ಹಾಗೆಯೇ ಒಂದು ದಿನ ನಂಬರ್ ಕೂಡ ಕೇಳುತ್ತಾರೆ. ತಪ್ಪೇನಿಲ್ಲ ಬಿಡಿ. ನಾನು ಕೂಡ ಯಾರೊಂದಿಗಾದರು ಮಾತಾಡಲು ಇಷ್ಟ ಅನಿಸಿದರೆ ಅವರ ನಂಬರ್ ನಾನೇ ಕೇಳಿಯೇ ಪಡೆಯುತ್ತೆನೆ. ಅದು ಯಾರೇ ಆಗಿರಲಿ, ಬೇಕಿದ್ದರೆ ಮದುವೆ ಮನೆಯಲ್ಲಿ ನಕ್ಕ ಹುಡುಗಿ ಇರಬಹುದು.. ಬಸ್ ಸ್ಟ್ಯಾಂಡ್ ಹುಡುಗಿ,ಡೈಲಿ ಬಸ್ ನಲ್ಲಿ ಎದುರು ಸೀಟಿನಲ್ಲಿ ಕುಳಿತುಕೊಳ್ಳುವ ಹುಡುಗಿ, ಕಾಲೇಜಿನ ಜ್ಯೂನಿಯರ್, ಸೀನಿಯರ್ ಹೀಗೆ ಯಾರದ್ದಾದರೂ ನಂಬರ್ ಬೇಕಿದ್ದರೆ ಕೇಳಿ ಪಡೆಯುತ್ತೆನೆ.
ಯಾವುದು ಕೂಡ ತಪ್ಪಲ್ಲ, ನಮಗೆ ನಂಬರ್ ಕೊಡಲು ಮನಸ್ಸಿದ್ದರೆ ಕೊಡುತ್ತಾರೆ, ಅದೇ ರೀತಿ ನಮಗೆ ನಂಬರ್ ನೀಡಲು ಇಷ್ಟ ಇದ್ದರೆ ನಾವು ಕೂಡ ನೀಡಬಹುದು. ಯಾರಿಗೂ ಮೆಸೇಜ್ ಗಳ ಮೇಲೆ ಮೆಸೇಜ್ ಹಾಕಿ ಕಿರಿ ಕಿರಿ ಉಂಟಾಗುವ ಹಾಗೆ ಮಾಡಬಾರದು ಅಷ್ಟೇ.
ಹೀಗಿರಲು ಒಂದು ದಿನ ಎಂದಿನಂತೆ ಟಿಂಗ್ ಎಂದು ಪೇಸ್ಬುಕ್ ಮೆಸೆಂಜರ್ ಗೆ ಒಂದು ಮೆಸೇಜ್ ಬಂತು.
ಹೆಸರು ನೋಡಿದೆ, ಹೆಸರು "ಪಲ್ಲವಿ"(ಹೆಸರು ಬದಲಾಯಿಸಲಾಗಿದೆ). ಯಾರಿದು ಹೊಸ ಪಲ್ಲವಿ ಎಂದು ಗೊತ್ತಾಗಲಿಲ್ಲ. ಇರಲಿ ಮೆಸೇಜ್ ಓದುವ ಎಂದು ಮೆಸೇಜ್ ಓಪನ್ ಮಾಡಿದೆ.
ಆ ಮೆಸೇಜ್ ಈ ರೀತಿ ಇತ್ತು.
" ಹಾಯ್ ಪಚ್ಚು, ನಾನು ಪಲ್ಲವಿ, ನಿಮ್ಮ ಎಲ್ಲಾ ಪೋಸ್ಟ್ ಗಳನ್ನು ನಿರಂತರವಾಗಿ ಓದುತ್ತಿರುತ್ತೆನೆ,ನೀವು ತುಂಬಾ ಚೆನ್ನಾಗಿ ಬರೆಯುತ್ತಿರಾ, ನಿಜ ಹೇಳಬೇಕೆಂದರೆ ನಾನು ನಿಮ್ಮ ಬರವಣಿಗೆಯ ಅಭಿಮಾನಿ. ನಿಮ್ಮ ಆ ಕಾಮೆಡಿ ಪೋಸ್ಟ್ ಗಳು, ಕಾಲ್ಪನಿಕ ವೋ ಸತ್ಯವೋ ಎಂದು ಗೊತ್ತಾಗದ ಕಥೆಗಳು ಎಲ್ಲವೂ ನನಗಿಷ್ಟ.ನಿಮ್ಮ ಮಳೆರಾಯ ಮತ್ತು ಮೇ ಫ್ಲವರ್ ನ ಕಥೆ ಹಾಗೂ ಮೊನ್ನೆಯ ರೌಡಿ ಪೆಟ್ಟಿಸ್ಟ್ ಸಂತುವಿನ ಕಥೆ ಯು ಕೂಡ ಇಷ್ಟ ಆಯಿತು. ನಿಮ್ಮ ಪೋಟೊಗ್ರಪಿ ಕೂಡ ನನಗೆ ಇಷ್ಟ, ಆದರೆ ಇತ್ತೀಚೆಗೆ ಯಾಕೋ ನಿಮ್ಮ ಪಿರ್ಕಿ ಫೋಟೋಗ್ರಪಿ ಯ ಪೋಟೊ ಗಳನ್ನು ಪೋಸ್ಟ್ ಮಾಡುತ್ತಿಲ್ಲ. ನಿಜವಾಗಿಯೂ ಬೇಜಾರು ಆಗಿದೆ. ಪ್ಲೀಸ್ ಹಾಗೆ ಮಾಡ್ಬೇಡಿ, ಅದನ್ನು ಕೂಡ continue ಮಾಡಿ.
ಅಂದ ಹಾಗೆ ಪಚ್ಚು ನಿಮ್ಮ ಕಾಮೆಡಿ ಕಥೆಗಳು ನನಗೆ ನಗು ಮಾತ್ರ ತರಿಸಲ್ಲ, ಏನೋ ಒಂಥರಾ relax ಕೂಡ ಮಾಡಿಬಿಡುತ್ತದೆ. ನಾನು ಅಂತಹ ಕಥೆಗಳನ್ನು ಪದೇ ಪದೇ ಓದುತ್ತೆನೆ. ನೀವು ಪ್ರೀತಿ ಪ್ರೇಮದ ಬಗ್ಗೆ ಬರೆದರೆ ನೇರವಾಗಿ ಹಾರ್ಟ್ ಗೆ ಟಚ್ ಆಗುವಂತೆ ಇರುತ್ತದೆ.
ಅದಷ್ಟೂ ಭಾವನೆಗಳನ್ನು ನೀವು ಈ ಬರವಣಿಗೆಗಳಿಗೆ ಹೇಗೆ ಸುರಿಯಬಲ್ಲಿರಿ ಪಚ್ಚು..
ಹಾನ್, ಅಂದ ಹಾಗೆ ನಾನು ಕೂಡ ನಿಮ್ಮಂತೆಯೇ ದೇಶದ ಬಗ್ಗೆ, ಸೈನಿಕರ ಬಗ್ಗೆ ಅಪಾರವಾದ ಅಭಿಮಾನ ಹೊಂದಿದವಳು . ಲೈಫ್ ನಲ್ಲಿ ಜಾಸ್ತಿ ಆಸೆ ಏನಿಲ್ಲ, ಒಮ್ಮೆ ನಿಮ್ಮನ್ನು ಕಂಡು ಮಾತಾಡಿಸಬೇಕು. ಬೇಕಿದ್ದರೆ ನಿಮಗೆ ಹೇಳಲು ನನ್ನಲ್ಲಿ ಕಥೆ ಒಂದು ಇದೆ. ಬಹುಶಃ ನಿಮಗೆ ಇಷ್ಟ ವಾಗ ಬಹುದು. ನಿಮಗೆ ಬೇಟಿ ಆಗಲು ಮನಸ್ಸಿದ್ದರೆ ನಾಳೆ ಸಂಡೆ ಹತ್ತು ಘಂಟೆ ಗೆ ನೇರವಾಗಿ ಕದ್ರಿ ಪಾರ್ಕ್ ಗೆ ಬನ್ನಿ, ನಾನು ಅಲ್ಲಿರುತ್ತೆನೆ.
Good night ಪಚ್ಚು , have a sweet dreams.. "
ಶನಿವಾರ ರಾತ್ರಿ ಹತ್ತು ಗಂಟೆಗೆ ಬಂದ ಈ ಮೆಸೇಜ್ ನನಗೆ ಬಹಳನೇ ಸೋಜಿಗದಂತೆ ಕಂಡಿತು. ಈ ರೀತಿಯಾಗಿ ಇದಕ್ಕೂ ಮೊದಲು ಬೇರೆ ಯಾರೂ ನನಗೆ ಬರೆದಿಲ್ಲ ಅದರಲ್ಲೂ ಅವರು ನನ್ನನ್ನು ಭೇಟಿಯಾಗ ಬಯಸುತ್ತಿದ್ದಾರೆ.!
ಯಾರು ಮರ್ರೆ ಇದು ಪಲ್ಲವಿ.ಒಮ್ಮೆಯೂ ಚಾಟ್ ಮಾಡಿದ ನೆನಪಿಲ್ಲ, ಕನಿಷ್ಠ ಪಕ್ಷ ನನ್ನ ಪೋಸ್ಟ್ ಗಳಿಗೆ ಲೈಕು, ಕಾಮೆಂಟ್, ಹಹ ಹಹ ಎಂದು ರಿಯ್ಯಾಕ್ಟ್ ಮಾಡಿದ್ದೂ ಕೂಡ ನೆನಪಾಗುತ್ತಿಲ್ಲ.
ಯಾರು ಇರಬಹುದು ಈ ಪಲ್ಲವಿ ಎಂದು ಕುತೂಹಲ ಜಾಸ್ತಿ ಆಗಿ. ನೇರವಾಗಿ ಅವರ ಪೇಸ್ಬುಕ್ ಪ್ರೊಫೈಲ್ ಓಪನ್ ಮಾಡಿದೆ. ಪೋಟೊ ದಲ್ಲಿ ಚಂದ ಗೆ ಲಕ್ಷಣ ವಾಗಿ ಇದ್ದರು. ಕೆಳಗೆ ಕಾಲೇಜು ವಿವರ ನೋಡಿದರೆ ನಮ್ಮದೇ ಕೆನರಾ ಕಾಲೇಜು ವಿದ್ಯಾರ್ಥಿ.
Electrical & Electronics Engineering (EEE) ಡಿಪಾರ್ಟ್‌ಮೆಂಟ್ ಇರಬಹುದೋ ಏನೋ ಎಂದು ನೋಡಿದೆ. ಇಲ್ಲ ನನ್ನ stream ಅಲ್ಲ ಬದಲಾಗಿ Electronics & Communication Engineering (EC) ಆಗಿತ್ತು.
ಆದರೂ ಈ ಫೋಟೊದಲ್ಲಿ ಇರುವವರನ್ನು ಕಾಲೇಜಿನಲ್ಲಿ ಎಲ್ಲೂ ನೋಡಿದ ನೆನಪು ನನಗೆ ಬರುತ್ತಿಲ್ಲವಲ್ಲಾ ಎಂದುಕೊಂಡೆ.
ಬಹುಶಃ ಜ್ಯೂನಿಯರ್ ಅಥವಾ ಸೀನಿಯರ್ ಆಗಿರಬಹುದು ಎಂದು ಇನ್ನೂ ಕೆಳಗೆ ಬಂದು ನೋಡಿದರೆ ಅಲ್ಲಿ Married ಅಂತ ಸ್ಪಷ್ಟವಾಗಿ ನಮೂದಿಸಲಾಗಿತ್ತು!!
ಅಂದರೆ ನಮ್ಮ ಬ್ಯಾಚ್ ಗಿಂತಲೂ ಎಷ್ಟೋ ಹಿಂದಿನ ಬ್ಯಾಚ್ ನವರು. ಹಳೆ ವಿದ್ಯಾರ್ಥಿ ಆಗಿರುತ್ತಾರೆ ಎಂದುಕೊಂಡೆ.
ಹೂಂ.. ಆದರೆ ಯಾರು ಮರ್ರೆ ಇವರು,ಅದು Married ಬೇರೆ, ಈಗ ಎಂತ ಮಾಡುವುದು ಅಂತ ತೋಚಲಿಲ್ಲ. ಆದರೆ ಅವರು ತಮ್ಮ ಮೆಸೇಜ್ ನಲ್ಲಿ ಬರೆದ ಆ ಒಂದು ಸಾಲು ನನಗೆ ತುಂಬಾನೇ ಇಷ್ಟ ಆಗಿತ್ತು. "ನಾನು ನಿಮ್ಮಂತೆಯೇ ದೇಶದ ಬಗ್ಗೆ ಹಾಗೂ ದೇಶದ ಸೈನಿಕರ ಬಗ್ಗೆ ಅಪಾರವಾದ ಅಭಿಮಾನ ಹೊಂದಿದವಳು". ನಮ್ಮಂತವರಿಗೆ ಈ ಒಂದು ಸಾಲಿಗಿಂತ ಬೇರೆ ಸೆಪರೇಟ್ ಬಯೋಡಾಟ, ಇನ್ವಿಟೇಷನ್ ಬೇರೆ ಬೇಕಾ.
ದೇಶಾಭಿಮಾನಿ ಅಂದರೆ ಸಾಕು, ಏನೋ ನಮ್ಮವರೇ ಅನ್ನುವ ಅಭಿಮಾನ ಆಟೋಮ್ಯಾಟಿಕ್ ಆಗಿ ಬಂದು ಬಿಡುತ್ತದೆ. ಅದರಲ್ಲೂ ಅವರು ಹೇಳಿದ ಆ ಕೊನೆಯ ಸಾಲು ನನಗೆ ಇನ್ನಿಲ್ಲದ ಕುತೂಹಲ ಹುಟ್ಟಿಸಿತು. " ಲೈಫ್ ನಲ್ಲಿ ಜಾಸ್ತಿ ಆಸೆ ಏನಿಲ್ಲ, ಒಮ್ಮೆ ನಿಮ್ಮನ್ನು ಕಂಡು ಮಾತಾಡಿಸಬೇಕು. ಬೇಕಿದ್ದರೆ ನಿಮಗೆ ಹೇಳಲು ನನ್ನಲ್ಲಿ ಕಥೆ ಒಂದು ಇದೆ. ಬಹುಶಃ ನಿಮಗೆ ಇಷ್ಟ ವಾಗ ಬಹುದು.."
ಏನು ಬೇಕಾದರೂ ಆಗಲಿ. ನಾಳೆ ಸಂಡೆ ಬೇರೆ, ಬೇಟಿ ಆಗಿಯೇ ಬಿಡುವ ಎಂದು ನಿರ್ಧರಿಸಿದೆ. ಆದರೆ ಅವರು ಮದುವೆ ಆದವರು. ನಾನು ಒಬ್ಬನೇ ಹೇಗೆ ಹೋಗಲಿ. ಜೊತೆಗೆ ಯಾರಾದರೂ ಇದ್ದಿದ್ದರೆ ಅದರಲ್ಲೂ ಹುಡುಗಿಯೇ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಹುಡುಗರು ನಾವು, ಮರ್ಲ್ ಕಟ್ಟುತ್ತೆವೆ,ಫನ್ ಮಾಡುತ್ತೆವೆ ಎಲ್ಲವೂ ನಿಜ, ಆದರೂ ಹುಡುಗಿ ಅಂದರೆ ನಮಗೂ ನಾಚಿಕೆ,ಮಾನ, ಮರ್ಯಾದೆ, ಅಂಜಿಕೆ ಎಲ್ಲವೂ ಇರುತ್ತಲ್ಲ.. ಎಂದು ಅಂದುಕೊಳ್ಳುವಾಗ ನನಗೆ ನನ್ನ ಫ್ರೆಂಡ್ ಒಬ್ಬಳು ನೆನಪಾದಳು.ಇಂತಹದಕ್ಕೆಲ್ಲಾ ನನಗೇ ನೆನಪಾಗುವವಳು ಅವಳೊಬ್ಬಳೇ. ಕೂಡಲೇ ಅವಳಿಗೆ ಕಾಲ್ ಮಾಡಿದೆ.
ಕಾಲ್ ರಿಸೀವ್ ಮಾಡಿದವಳೇ "ಏನು ಮ್ಯಾಟರು, ಏನು ಹೆಲ್ಪ್ ಬೇಕು ಬೇಗ ಬೊಗಳು" ಅಂದಳು. ಅವಳಿಗೂ ಗೊತ್ತು ನಾನು ಎಲ್ಲಾ ಕಾಲ್ ಮಾಡುವುದು ಇಂತಹದಕ್ಕೇ ಎಂದು. ನಾನು ಎಲ್ಲವನ್ನೂ ಬಿಡಿಸಿ ಸವಿವರವಾಗಿ ಹೇಳಿದೆ. ಮತ್ತು ನೀನೂ ಕೂಡ ಬರಬೇಕು ಅಂದೆ..
"ಅಮಾವಾಸ್ಯೆ ಗೆ ಒಮ್ಮೆ ಹುಣ್ಣಿಮೆ ಗೆ ಒಮ್ಮೆ ಕಾಲ್ ಮಾಡ್ತಿಯಾ, ಅದು ಏನಾದರೂ ಹೆಲ್ಪ್ ಬೇಕಾದರೆ ಮಾತ್ರ.ಫ್ರೆಂಡ್ ಅಂತಿಯಾ ಕನಿಷ್ಠ ಪಕ್ಷ ಬರ್ತಡೇ ದಿನ ವಿಶ್ ಮಾಡಲು ಕೂಡ ನಿನಗೆ ನೆನಪು ಆಗಲ್ಲ. ನಾನೇ ಮೆಸೇಜ್ ಮಾಡಿ ನಿನಗೆ ನನ್ನ ಬರ್ತಡೇ ಇದೆ ಬೇಗ ವಿಶ್ ಮಾಡು ಎಂದು request ಮಾಡ್ಬೇಕು. ನಾನು ಬರಲ್ಲ, ನನಗೆ ಬೇರೆ ಕೆಲಸ ಇದೆ, ನೀನೇ ಹೋಗಿ ಸಾಯಿ " ಎಂದು ಪೋನು ಕಟ್ ಮಾಡಿದಳು.
ನಮ್ಮಂತಹ ಹುಡುಗರ ಹಣೆಬರಹವೇ ಇಷ್ಟು.
ಅವಳು ಬರದಿದ್ದರೆ ಸಾಯಲಿ ನಾನೇ ಹೋಗುತ್ತೆನೆ ಎಂದು ಮೆಲ್ಲಗೆ ನಿದ್ದೆ ಗೆ ಜಾರಿದೆ.
ಮರುದಿನ ಎದ್ದವನೇ ಪ್ರೆಶ್ ಆಗಿ, ಎಲ್ಲಾ ರೆಡಿ ಆಗಿ ನೇರವಾಗಿ ಕದ್ರಿ ಪಾರ್ಕ್ ಗೆ ಬಂದೆ.ಕದ್ರಿ ಪಾರ್ಕ್ ನಲ್ಲಿ ಅವರನ್ನು ಎಲ್ಲಿ ಹುಡುಕುವುದು ಅಂತ ಗೊತ್ತಾಗದೇ ಪಾರ್ಕ್ ಒಳಗೆ ಸುತ್ತಾ ರೌಂಡ್ ಹೊಡೆಯಲು ಶುರುಮಾಡಿದೆ.
ಪಾರ್ಕ್ ನ ಲೆಪ್ಟ್ ಸೈಡ್ ನ ಕಾರ್ನರ್ ನಲ್ಲಿ (ರೋಡ್ ಪಕ್ಕ) ಬಿದಿರು ಮೆಳೆಗಳ ಬದಿಯಲ್ಲಿ ಅಲ್ಲೊಂದು ಸಿಮೆಂಟ್ ಬ್ರಿಡ್ಜ್ ಇದೆ ಅಲ್ಲ, ನಿಧಾನವಾಗಿ ಅಲ್ಲಿಗೆ ಬಂದೆ. ಹಿಂದೆ ಕಾಲೇಜು ಫ್ರೆಂಡ್ಸ್ ಆ ಬ್ರಿಡ್ಜ್ ಕೆಳಗಿನ ಕೊಳದಲ್ಲಿ ಮೊಸಳೆ ಇತ್ತು ಅದು ಇತ್ತು ಅಂತ ಎಲ್ಲಾ ಬಂಡಲ್ ಸ್ಟೋರಿ ಬಿಡುತ್ತಿದದ್ದು ನೆನಪಾಯಿತು. ಬಹುಶಃ ಇತ್ತೊ ಏನೋ ಯಾರಿಗೊತ್ತು. ಹೀಗೆ ಏನೇನೋ ಮರ್ಲ್ ಯೋಚನೆ ಮಾಡುತ್ತಿರುವಾಗಲೇ ಹಿಂದಿನಿಂದ ಯಾರೋ ಸ್ವೀಟ್ ವಾಯ್ಸ್ ನಲ್ಲಿ "ಹಾಯ್..." ಎಂದು ಕರೆದಂತಾಯಿತು.
ತಿರುಗಿ ನೋಡಿದೆ, ಅಲ್ಲಿ ಅವರು ನಿಂತಿದ್ದರು. ಬ್ಲೂ ಕಲರ್ ಜೀನ್ಸ್ ಗೆ ಯೆಲ್ಲೋ ಕಲರ್ ಚೂಡಿದಾರ್ ಹಾಕಿದ್ದ ಅವರನ್ನು ನೋಡಿದಾಗ ತಮಿಳಿನ 96 ಮೂವಿ ತ್ರಿಶಾ ಒಮ್ಮೆ ಕಣ್ಣ ಮುಂದೆ ಪಾಸಾದಳು. ಅವರು ನೋಡಲು ಅದೆಷ್ಟು ಚಂದ ಇದ್ದರು ಎಂದರೆ ಸಮಂತಾ ಮತ್ತು ಅಮಲಾ ಪೌಲ್ ಇಬ್ಬರನ್ನೂ ಮಿಕ್ಸ್ ಮಾಡಿ ಇನ್ನೊಬ್ಬಳು ಬ್ಯೂಟಿಯನ್ನು ಸೃಷ್ಟಿಸಿದ್ದರೆ ಹೇಗಿರುತ್ತಿತ್ತೊ ಹಾಗೆ ಇದ್ದರು . ನಾನೂ ಊಹಿಸಿದಕ್ಕಿಂತಲೂ ಎರಡು ಪಟ್ಟರಷ್ಟು ಅವರು ಸುಂದರವಾಗಿ, ನೀಳ ಕಾಯವಾಗಿ ಇದ್ದರು. ಹೆಚ್ಚು ಕಡಿಮೆ 25 ರಿಂದ 30 ರ ಒಳಗಿನ ವಯಸ್ಸು ಅಷ್ಟೇ. ಮೇಲಿನಿಂದ ಕೆಳಗೆ ಅವರನ್ನೇ ನೋಡಿದೆ.
ಯಾವ angle ನಿಂದ ನೋಡಿದರೂ ಅವರಿಗೆ ಮದುವೆ ಆಗಿದೆ ಎಂದು ನನಗೆ ಅನಿಸಲೇ ಇಲ್ಲ. ಕರಿಮಣಿ ಸರ ಇದೆಯೋ ಇಲ್ಲವೋ ಎಂದು ಗಮನಿಸಿದೆ. ಕಂಡುಬರಲಿಲ್ಲ, ಕೇವಲ ಚಿನ್ನದ ಚೈನು ಇತ್ತು . ಈಗ ಹುಡುಗಿಯರು ಕರಿಮಣಿ ಧರಿಸುವುದಿಲ್ಲ ಒಂದು ವೇಳೆ ತಾಳಿ ಹಾಕುವುದಿದ್ದರೆ ಕೇವಲ ಚೈನ್ ಗೆ ಹಾಕಿ ಕೊಳ್ಳುತ್ತಾರೆ ಎಂದು ಫ್ರೆಂಡ್ ಒಬ್ಬ ಭೋದನೆ ಮಾಡಿದ್ದು ನೆನಪಾಯಿತು. ಬಹುಶಃ ಇವರು ಕೂಡ ಹೀಗೆಯೇ ಮಾಡಿರಬಹುದು ಎಂದು ಅಂದುಕೊಂಡೆ.
"ಹಾಯ್ ಪಚ್ಚು... ನಾನು ಪಲ್ಲವಿ" ಎಂದು ಕೈ ಚಾಚಿದರು.
ನಿಜವಾಗಿಯೂ ಅವರ ವಾಯ್ಸ್ ತುಂಬಾನೇ ಸ್ವೀಟ್ ಆಗಿತ್ತು. ಮೆಲ್ಲಗೆ ವೀಣೆ ಮೀಟಿದಂತೆ. ಬಹುಶಃ ಸಿಂಗರ್ ಇರಬಹುದೋ ಏನೋ ಅಂದು ಕೊಂಡೆ.
ನಾನು ಕೂಡ ಕೈ ಚಾಚಿ "ಪಲ್ಲವಿ, ರೈಟ್?" ಅಂದೆ.
ಅವರು ನಗುತ್ತಾ "ಯೆಸ್ ನಾನೇ ಪಲ್ಲವಿ.. ನೀವು ಬರ್ತಿರಿ ಅಂತ ಅಂದು ಕೊಂಡಿರಲೇ ಇಲ್ಲ. ನೀವು ಬಂದಿದಕ್ಕಾಗಿ ತುಂಬಾನೇ ಥ್ಯಾಂಕ್ಸ್" ಅಂದರು.
ಮತ್ತೆ ಮುಂದುವರಿದು ಅವರೇ ಮಾತಾಡಿದರು "ನೀವು ವಯಸ್ಸಿನಲ್ಲಿ ನನಗಿಂತ ಚಿಕ್ಕವರು ಆದರೂ ಅವರು ಇವರು ಅಂತ ತುಂಬಾ ಗೌರವ ಕೊಟ್ಟು ಮಾತಾಡಿಸುತ್ತಿದ್ದೆನೆ ಎಂದು ಬೇಜಾರು ಮಾಡ್ಕೊಬೇಡಿ"
"ಇಲ್ಲ ಇಲ್ಲ, No problem ,ಆ ತರಹ ಏನೂ ಇಲ್ಲ ಮೇಡಂ . " ನಾನು ಹೇಳಿದೆ. ಅವರಿಗೆ ಮದುವೆ ಆಗಿದೆ ಎಂಬ ಒಂದೇ ಕಾರಣಕ್ಕಾಗಿ ಮೇಡಂ ಎಂದೆನೇ ಹೊರತು ಮನಸಾರೆ ಯಾಗಿ ಮೇಡಂ ಎಂದು ಹೇಳಿರಲಿಲ್ಲ! ಅದು ಬೇರೆ ಅವರು ಅಷ್ಟೊಂದು ಗೌರವಯುತವಾಗಿ ಮಾತಾಡಿಸುವಾಗ, ನನಗೆ ಗೌರವ ಕೊಟ್ಟು ಮಾತನಾಡಿಸುವುದರ ಹೊರತು ಬೇರೆ ಮಾರ್ಗ ಇರಲಿಲ್ಲ.
ಪಾರ್ಕ್ ನ ಪಾತ್ ವೇ ಯಲ್ಲಿ ಇಬ್ಬರೂ ನಿಧಾನವಾಗಿ ನಡೆಯುತ್ತಾ, ಮಾತು ಮುಂದುವರಿಸಿದೆವು.
ಅವರೇ ಕೇಳಿದರು " ಮತ್ತೆ ಪಚ್ಚು ಹೇಗಿದ್ದಿರಾ.. "
ನಾನು ಹೇಳಿದೆ " ನಾವು ಬಿಡಿ ಮೇಡಂ, jolly ಇದ್ದೆವೆ. ಟೈಂ ಟೈಂ ಗೆ ಹೊಟ್ಟೆಗೆ ಊಟ ಮಾಡ್ತೆವೆ, ಅದೇ ರೀತಿ ಟೈಂ ಟೈಂಗೆ ಪೇಸ್ಬುಕ್ ಗೆ ಬಂದು ಪೋಸ್ಟ್ ಮಾಡ್ತೆವೆ. ಮೊನ್ನೆ ತನಕ ಮಕ್ಕರ್ ಮಾಡ್ಲಿಕ್ಕೆ ಆ ರಾಜಕಾರಣಿಯನ್ನು ಹಿಡ್ಕೊಂಡಿದ್ವಿ.. ಈಗ ಈ ರಾಜಕಾರಣಿಯನ್ನು ಹಿಡ್ಕೊಂಡಿದ್ವಿ.. " ಅಂದೆ.
ಅವರು ಜೋರಾಗಿ ನಕ್ಕರು. ಅವರು ನಕ್ಕಾಗ ಅದೆಷ್ಟು ಸುಂದರವಾಗಿ ಕಂಡರು ಎಂದರೆ, ಅವರಿಗೆ ಚಂದ ಕಾಣಲು ನಗುವಿಗಿಂತ ಬೇರೆ ಆಭರಣವೇ ಬೇಡವೇನೋ ಎಂದು ಅನಿಸಿತು. ಈ ಹುಡುಗಿಯರು ಯಾಕಾದರೂ ನಗುತ್ತಾರೋ..
" ನೀವು ತುಂಬಾ ಚೆನ್ನಾಗಿ ಬರೀತೀರಾ ಪಚ್ಚು, ನಾನು ನಿಮ್ಮ ಅಭಿಮಾನಿ, please take it as a compliment "ಅಂದರು
" its my pleasure madam.. ನಿಜ ಹೇಳಬೇಕೆಂದರೆ ನಾನೇ ನಿಮಗೆ, ನಿಮ್ಮಂತಹ ನನ್ನೆಲ್ಲಾ ಫೇಸ್ಬುಕ್ ಗೆಳೆಯರಿಗೆ ಥ್ಯಾಂಕ್ಸ್ ಹೇಳ್ಬೆಕು. ಯಾಕೆಂದರೆ ಈ ಫಾಸ್ಟ್ ಮೂವಿಂಗ್ ದುನಿಯಾ ದಲ್ಲಿ ಯಾರ ಹತ್ತಿರವೂ ಸದ್ಯಕ್ಕೆ ಟೈಂ ಎನ್ನುವುದು ಇಲ್ಲ.ಆದರೂ ಕೂಡ ನಾನು ಎಷ್ಟೇ ದೊಡ್ಡ lengthy ಕಥೆಗಳನ್ನು ಬರೆದರೂ,ನಿಮ್ಮೆಲ್ಲ ಬಿಡು ಶೆಡ್ಯೂಲ್ ಗಳ ನಡುವೆಯೂ ಸಮಯ ಹೊಂದಿಸಿಕೊಂಡು ಅದೆಷ್ಟು ಶ್ರದ್ಧೆಯಿಂದ,ಕೊನೆಯವರೆಗೂ ಆಸಕ್ತಿಯಿಂದ ಓದುತ್ತಿರಿ ಅಲ್ವಾ, ಅದರಲ್ಲೂ ಕೆಲವರು ಓದಿದ ಮೇಲೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡ್ತಾರೆ,ಒಂದು ಒಳ್ಳೆಯ compliment ಕೊಡ್ತಾರೆ, ನಮ್ಮಂತಹ ಚಿಕ್ಕ ಬರಹಗಾರರಿಗೆ ಇದಕ್ಕಿಂತ ಜಾಸ್ತಿ ಇನ್ನೇನು ಬೇಕು. ಅದಕ್ಕೆಲ್ಲ ಬೆಲೆ ಕಟ್ಟಲು ಆಗುವುದಿಲ್ಲ ಮೇಡಂ, ಇದಕ್ಕಾಗಿ ನಾನೇ ನಿಮಗೆಲ್ಲರಿಗೂ ಚಿರಋರುಣಿ ಯಾಗಿ ಇದ್ದೆನೆ " ಅಂದೆ.
ಮಂದಹಾಸ ಬೀರುತ್ತಾ " ನೀವು ತುಂಬಾ ಚೆನ್ನಾಗಿ ಮಾತು ಕೂಡ ಆಡ್ತಿರಾ.. " ಅಂದರು.
ನಾನು ಕೇಳಿದೆ" ಮೇಡಂ ನೀವು ನಿಜವಾಗಿಯೂ ನನ್ನೆಲ್ಲಾ ಪೋಸ್ಟ್ ಗಳನ್ನು ಓದುತ್ತಿರಾ..? "
ಅವರು ಮುಗುಳ್ನಗುತ್ತಾ " ಹೌದು " ಎಂದರು.
ನಾನು ಕೇಳಿದೆ" ಹಾಗಾದರೆ ನೀವು ಯಾಕೆ ಒಮ್ಮೆಯೂ ನನ್ನ ಯಾವುದೇ ಪೋಸ್ಟ್ ಗೆ ಲೈಕ್, ಕಾಮೆಂಟ್ ಇಲ್ಲವೇ ಹಹ ಹಹ ಎಂದು ರಿಯ್ಯಾಕ್ಟ್ ಮಾಡಿಲ್ಲ "
ಅವರು ಜೋರಾಗಿ ನಗುತ್ತಾ ಹೇಳಿದರು " ನೋಡಿ ಪಚ್ಚು ನಾವು ಲೈಕ್ ಆಗಲಿ, ಕಾಮೆಂಟ್ ಆಗಲಿ ಮಾಡದಿದ್ದರೆ ನೀವು ನಮ್ಮಂತವರು ನಿಮ್ಮ ಪೋಸ್ಟ್ ಓದಿಯೇ ಇಲ್ಲ ಎಂದು ಹೇಗೆ ಹೇಳುತ್ತೀರಿ, ನಮ್ಮಂತವರು ಕೂಡ ಇರ್ತಾರೆ ಪಚ್ಚು, ಎಲ್ಲವನ್ನೂ ಓದುತ್ತೆವೆ. ಮನದಲ್ಲೇ ನಗುತ್ತೆವೆ, ಆದರೆ ಯಾವುದೇ ರಿಯ್ಯಾಕ್ಟ್ ಮಾಡಲು ಹೋಗುವುದಿಲ್ಲ ಅಷ್ಟೇ, yes we are exist ಪಚ್ಚು " ಅಂದರು.
ನನಗೆ ಅವರು ಹೇಳಿದ್ದು ಸರಿ ಅಂತ ಅನಿಸಿತು. ಹೌದು ನನಗೂ ತುಂಬಾ ಗೆಳೆಯರಿದ್ದಾರೆ, ಗುರುತು ಪರಿಚಯ ಇಲ್ಲದ ಫೇಸ್ಬುಕ್ ಗೆಳೆಯರೇ ಬೇಕಾದರೆ ಲೈಕ್ಸ್, ಕಾಮೆಂಟ್ ನಿರಂತರವಾಗಿ ಕೊಡ್ತಾ ಇರ್ತಾರೆ, ಆದರೆ ನನ್ನ ಕೆಲವು ಕ್ಲಾಸ್ ಮೇಟ್ ಗಳಾಗಲಿ ಕೆಲವು ನನ್ನ ಕ್ಲೋಸ್ ಪ್ರೆಂಡ್ಸ್ ಆಗಲಿ ನಾನು ಬರೀತೆನೆ ಅಂತ ಗೊತ್ತಿದ್ದರೂ, ಎಲ್ಲವನ್ನೂ ಓದಿದರೂ ಕೂಡ ಏನು ರಿಯ್ಯಾಕ್ಟ್ ಮಾಡದೇ ಹಾಗೇ ಇರ್ತಾರೆ, ಹೌದು ಹೌದು they are exist, ಹೀಗೆ ನನ್ನ ಎಷ್ಟೋ ಪ್ರೆಂಡ್ಸ್, ರಿಲೆಟಿವ್ಸೆ ನನ್ನ ಫ್ರೆಂಡ್ ಲೀಸ್ಟ್ ಅಲ್ಲಿ ಇದ್ದಾರೆ ಅಲ್ವಾ ಅಂತ ಅನಿಸಿತು.
ಅದಾಗಲೇ ಪಾರ್ಕ್ ಒಳಗೆ ಮೂರು ಸುತ್ತು ತಿರುಗಿ ಆಗಿತ್ತು.
ಅವರೇ ಕೇಳಿದರು "ಪಚ್ಚು ನಿಮಗೆ ಲವ್ ಇದೆಯಾ"
ಎದೆ ಧಕ್ ಎಂದಂತಾಯಿತು. ಇದು track ಬೇರೆ ಎಲ್ಲೊ ಹೋಗುತ್ತಿದೆಯಲ್ಲಾ ಅಂತ ಅನಿಸಿತು.
ಸಾವರಿಸಿಕೊಂಡು ಹೇಳಿದೆ.
"ನಮ್ಗೆಲ್ಲಾ ಯಾರು ಬೀಳ್ತಾರೆ ಮೇಡಂ.. "
ಅವರು ಇನ್ನೂ ಜೋರಾಗಿ ನಕ್ಕರು" ಇದು ನಿಮ್ಮ universal dailo ಅಲ್ವಾ.. ಯಾವಾಗಲೂ ಫೇಸ್ಬುಕ್ ಅಲ್ಲಿ ಹೀಗೆ ಹೇಳ್ತಾ ಇರ್ತಿರಾ.ನಾನು ಕೂಡ ನೋಡಿದ್ದೇನೆ. ಯಾಕೆ ಲವ್ ಇಲ್ಲ ಪಚ್ಚು. ನೋಡಲು rough ತರಹ ಕಂಡರೂ smart ಇದ್ದೀರಾ, ನಿಮ್ಮಂತಹ ಹುಡುಗರಿಗೇನೇ ಜಾಸ್ತಿ ಯಾಗಿ ಹುಡುಗಿಯರು ಬೀಳ್ತಾರೆ.. ಆದರೂ ಮತ್ತೆ ಯಾಕೆ ಲವ್ ಮಾಡಿಲ್ಲ. ಅದು ಅಲ್ಲದೇ ಅಷ್ಟು ಚೆನ್ನಾಗಿ ಪ್ರೀತಿ ಪ್ರೇಮದ ಬಗ್ಗೆ, ವಿರಹದ ಬಗ್ಗೆ ಹೃದಯ ಕಲುಕುವಂತೆ ಬರೀತೀರಾ.. ಲವ್ ಇಲ್ಲದೇ ಇದೆಲ್ಲಾ ಹೇಗೆ ಸಾಧ್ಯ " ಅಂದರು
" ಮೇಡಂ ನಮಗೆ ಲವ್ ಇಲ್ಲ ಅದಕ್ಕೆ ಇಷ್ಟುದ್ದ ಡೈಲಿ ಬರಿತೀವಿ, ಲವ್ ಇದ್ರೆ ನಮಗೆ ಬರಿಯಕ್ಕೆ ಎಲ್ಲಾ ಎಲ್ಲಿ ಟೈಂ ಇರುತ್ತಾ ಮೇಡಂ, ನೀವೆ ಹೇಳಿ "ಅಂದೆ
ಅವರು ಜೋರಾಗಿ ನಗುತ್ತಾ" ಹೌದು ಹೌದು ಕರೆಕ್ಟಾಗಿ ಹೇಳಿದಿರಿ.. ಆದರೂ ನೀವು ಗ್ರೇಟ್ ಪಚ್ಚು, ಲವ್ ಇಲ್ಲದಿದ್ದರೂ ಲವ್ ಬಗ್ಗೆ ಫೀಲ್ ಮಾಡ್ಕೊಂಡು ಬರೀತೀರಾ ಅಲ್ಲ, you are really great " ಅಂದರು.
ನಾನು ಏನು ಹೇಳಲಿಲ್ಲ,ನನ್ನೊಳಗಿನ flirt ಪಚ್ಚು ನಿಧಾನವಾಗಿ ಜಾಗ್ರತನಾದ.ಸ್ವಲ್ಪ ತಮಾಷೆಗಾಗಿ flirt ಮಾಡುವ ಅಂತ ಅನಿಸಿತು.
" ಮೇಡಂ, ನೀವು ಏನು ತಿಳ್ಕೊಳ್ಳಲ್ಲ ಅಂದರೆ ಒಂದು ಮಾತು ಹೇಳ್ಲಾ "ಅಂದೆ.
" ಒಂದಲ್ಲ, ನಾಲ್ಕು ಮಾತು ಹೇಳಿ ಪಚ್ಚು " ಅಂದರು.
" ಮೇಡಂ ನನಗೆ ಈ ಚಂದ್ರ ಬಿಟ್ಟರೆ ಮತ್ತೆ ಈ ಭೂಮಿಯಲ್ಲಿ ಸದ್ಯಕ್ಕೆ ಅತ್ಯಂತ ಸುಂದರವಾಗಿ ಕಾಣುವುದು ಅಂದರೆ ಅದು ನೀವೇ ಮೇಡಂ.
ನಿಮಗೆ ಇನ್ನೂ ಮದುವೆ ಆಗಿರದೇ ಇದ್ದಿದ್ದರೆ, ನಾನು ನಿಮಗೆ ಇಲ್ಲಿಯೇ ಈ ಕ್ಷಣವೇ ಈ ಕದ್ರಿ ಪಾರ್ಕ್ ನಲ್ಲಿಯೇ ಮಂಡಿಯೂರಿ ಖಂಡಿತವಾಗಿಯೂ ಪ್ರೇಮ ನಿವೇದನೆ ಅಂದರೆ ಲವ್ ಪ್ರಪೋಸ್ ಮಾಡ್ತಾ ಇದ್ದೆ ಮೇಡಂ. ಹೇಳಿ ಮೇಡಂ ನೀವು ಯಾಕೆ ಇಷ್ಟು ಚಂದ ,ನಿಮ್ಮಂತವರನ್ನು ಸಂಗಾತಿಯಾಗಿ ಪಡೆಯಲು ಪುಣ್ಯ ಮಾಡಿರಬೇಕು . But ನನ್ನ bad luck ನೋಡಿ ನಿಮಗೇ ಆಗಲೇ ಮದುವೆ ಆಗಿ ಹೋಗಿದೆ , my fate " ಅಂದೆ ನಾಟಕೀಯವಾಗಿ.
ಅವರಿಗೆ ನಗು ತಡೆದುಕೊಳ್ಳಲು ಆಗಲೇ ಇಲ್ಲ, ಅಲ್ಲೇ ಪಾರ್ಕ್ ನಲ್ಲಿದ್ದ ಮರವನ್ನು ಹಿಡಿದುಕೊಂಡೇ ಬಿದ್ದು ಬಿದ್ದು ನಕ್ಕರು. ಕೊನೆಗೆ ಸಾವರಿಸಿಕೊಂಡು ಒಂದು ಮಾತು ಹೇಳಿದರು.
" ಪಚ್ಚು ನಾನೂ ಒಂದು ಮಾತು ಹೇಳ್ಲಾ.. "
" ಹೇಳಿ.. " ಅಂದೆ.
" ಪಚ್ಚು. ನನಗೇ ಇನ್ನೂ ಮದುವೆ ನೇ ಆಗ್ಲಿಲ್ಲ..! "
ನನಗೆ ಒಮ್ಮೆಲೇ ಸಿಡಿಲು ಬಡಿದಂತಾಯಿತು. ಕೆಲವು ಸೆಕೆಂಡ್ ಗಳ ಹಿಂದೆ ನಾನು ಬಿಟ್ಟ ಡೈಲಾಗ್ ಗಳು, ಮಾಡಿದ ಫ್ಲರ್ಟ್ ಮುಂದೆ ನನಗೆ ತುಂಬಾನೇ ಹೆವಿ ಆಗಬಹುದೇನೋ ಅಂತ ಅನಿಸಿತು.
" ಮತ್ತೆ ನೀವು ಫೇಸ್ಬುಕ್ ನಲ್ಲಿ married ಅಂತ ಹಾಕಿದ್ದೀರಿ ಅಲ್ವಾ ಮೇಡಂ" ಅಂದೆ.
"ಯಾವುದೇ ಹುಡುಗರ ಕಿರಿ ಕಿರಿ ಬೇಡ ಅಂತ ಹಾಕಿದ್ದೆ ಅಷ್ಟೇ.. " ಅಂದರು.
ನನಗೆ ಏನು ಹೇಳ್ಬೇಕು ಅಂತ ತೋಚಲಿಲ್ಲ.
ಪಾರ್ಕ್ ನಲ್ಲಿ ನಮ್ಮದು ಐದನೇ ಸುತ್ತಿನ ವಾಕಿಂಗ್ ಮುಗಿದಿತ್ತು.
ಅವರೇ ಮುಂದುವರಿಸಿದರು" actually ,ನಾನು ನಿಮ್ಮನ್ನು ಮೀಟ್ ಆಗಲು ಒಂದು ಕಾರಣ ಇದೆ "ಅಂದರು.
" ಏನು ಹೇಳಿ" ಅಂದೆ
"ನಿಮ್ಮಿಂದ ಒಂದು ಸಹಾಯ ಆಗ್ಬೇಕು .. " ಅಂದರು.
ನನ್ನಿಂದ ಯಾವ ರೀತಿಯ ಸಹಾಯ ಇವರಿಗೆ. ಆದರೂ ಏನನ್ನೂ ತೋರ್ಪಡಿಸದೇ" ಏನು ಸಾಹಯ, ಹೇಳಿ ? " ಅಂದೆ.
" ನನಗೊಂದು ನೀವು ತುಂಬಾನೇ ಸುಂದರವಾಗಿ ಒಂದು ಲೆಟರ್, ಬೇಕಿದ್ದರೆ ಲವ್ ಲೆಟರ್ ಅಂತ ಅಂದುಕೊಳ್ಳಿ, ಅದು ನೀವು ಬರೆದು ಕೊಡ ಬೇಕು, ನನಗೆ ನನ್ನ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ನನಗೆ ಸಹಾಯ ಮಾಡಬೇಕು,ಅದು ನಿಮ್ಮಿಂದ ಸಾಧ್ಯ ಇದೆ. ನೀವು ಬರೆದರೆ ಖಂಡಿತವಾಗಿಯೂ ಅದು ಹೃದಯ ವನ್ನು ಮುಟ್ಟುತ್ತದೆ ಪಚ್ಚು , ಪ್ಲೀಸ್ ಇಲ್ಲವೆಂದು ಹೇಳಬೇಡಿ" ಅಂದರು.!
ಒಂದು ಕ್ಷಣ ಮಾತು ಹೊರಡಲಿಲ್ಲ. ಅಲ್ಲ ಈ ಕಾಲದಲ್ಲಿ, ಈ ಡಿಜಿಟಲ್ ಇಂಡಿಯಾ ದ ಯುಗದಲ್ಲಿ , ಯಾರಾದರೂ ಲೆಟರ್ ಅದರಲ್ಲೂ ಲವ್ ಲೆಟರ್ ಬರೀತಾರಾ..
ಕೂಡಲೇ ಕಾಲೇಜು ದಿನಗಳು ನೆನಪಾದವು. ನನಗೆ ಯಾರೂ ಲವರ್ ಇಲ್ಲದೇ ಇದ್ದುದರಿಂದ ನನಗೆ ಲವ್ ಲೆಟರ್ ಬರೆಯುವ ಪ್ರಮೇಯವೇ ಬಂದಿರಲಿಲ್ಲ. ಆದರೆ ನಾನು ಚೆನ್ನಾಗಿ ಬರಿತೀನಿ ಎಂದು ಹಾಸ್ಟೆಲ್ ನ ಸಿನಿಯರ್ ಪ್ರೆಂಡ್ಸ್ ಒಬ್ಬ ನನ್ನ ಕೈಯಾರೆ ಅವನ ಫಿಲೀಂಗ್ಸ್ ಗಳ ಲವ್ ಲೆಟರ್ ನನ್ನಲ್ಲಿ ಬರೆಸಿ ನನ್ನದೇ ಕ್ಲಾಸ್ ಹುಡುಗಿಗೆ ನೀಡಿದ್ದು, ನನ್ನ ಕ್ಲಾಸ್ ಮೇಟ್ ಒಬ್ಬ ಜ್ಯೂನಿಯರ್ ಹುಡುಗಿಗೆ ಕೊಡಲು ನನ್ನ ಬಳಿ ಬರೆಸಿದ್ದು, ಪ್ರೈಮರಿ ಯಲ್ಲಿ
ಸ್ವತಃ ನಾನೇ ಫ್ರೆಂಡ್ ಒಬ್ಬ ಬರೆದುಕೊಟ್ಟ ಅವನ ಲವ್ ಲೆಟರ್ ತಗೊಂಡು ಹೋಗಿ ಅವ ಪ್ರೀತಿಸುವ ಹುಡುಗಿಗೆ ನೀಡಿದ್ದು. ಹೀಗೆ ಎಲ್ಲವೂ ನೆನಪಾಯಿತು.
ಆಗಲೂ ನಾನು ಪ್ರೀತಿಸುವ ಜೀವಿಗಳಿಗೆ ಒಟ್ರಾಸಿ ಹೆಲ್ಪ್ ಆಗ್ತಾ ಇದ್ದೆ. ಈಗಲೂ ಕೂಡ ಒಂತರ ಹಾಗೆಯೇ. ನನಗೇ ಪ್ರೀತಿ ಇರದಿದ್ದರೂ ಪ್ರೀತಿಸುವ ಜೀವಗಳು ಯಾವತ್ತೂ ಒಂದಾಗಿರಬೇಕು ಎನ್ನುವುದು ನನ್ನ ಆಸೆ. ಬಹುಶಃ ಈ ನನ್ನ ಮನಸ್ಥಿತಿಯಿಂದಾಗಿಯೋ ಏನೋ ನನ್ನ ಬಳಿ ಎಲ್ಲಾ ಸ್ನೇಹಿತರ ಪ್ರೆಮ ಕಥೆಗಳು ಬಂದು ಬೀಳುತ್ತಿದ್ದವು. ಕೆಲವರು ಹೃದಯ ಬಿಚ್ಚಿ ಮಾತಾಡ್ತಾ ಇದ್ದರು. ನಾನು ಕವಿಗೊಟ್ಟು ಕೇಳ್ತಾ ಇದ್ದೆ.
ಹೀಗೆ ಗೆಳೆಯರ ಪ್ರೇಮ ಕಥೆಗಳನ್ನು ಕೇಳಿ ಕೇಳಿ ,ಅವರಿಗೆ ಬೇಕಾದ ಹಾಗೆ ಪ್ರೇಮ ಪತ್ರ ಬರೆದು ಕೊಟ್ಟು ಕೊಟ್ಟು, ನನಗೆ ಗೊತ್ತಿಲ್ಲದ ಹಾಗೆಯೇ ನನಗೆ ಪ್ರೀತಿ ಪ್ರೇಮ ದ ಬಗ್ಗೆಯೂ ಬರೆಯಲು ಸಾಧ್ಯವಾಯಿತು.
ಮಾತು ಮುಂದುವರಿಸಿದೆ " ಯಾರಿಗೆ ಮೇಡಂ ಲವ್ ಲೆಟರ್ "
" ನನ್ನ ಒಬ್ಬರು ಪ್ರೀತಿ ಪಾತ್ರರಿಗೆ... "
" ಈ ಲೆಟರ್, ಲವ್ ಲೆಟರ್ ಯಾಕೆ ಮೇಡಂ,ಡೈರೆಕ್ಟಾಗಿ ಒಂದು ಮೆಸೇಜ್ ಇಲ್ಲವೇ ಈಮೇಲ್ ಕಳುಹಿಸಬಹುದಲ್ಲಾ " ಅಂದೆ
"ಹೇಳ್ತಿನಿ, ಆದರೆ ಹಾಗೆ ಮಾಡಲು ಅದರ ಹಿಂದೆ ಒಂದು ದೊಡ್ಡ ಕಥೆ ಇದೆ.. " ಅಂದರು.
" ಹೇಳಿ ನಿಮ್ಮ ಕಥೆ " ಅಂದೆ.
" ಇಲ್ಲಿ ಬೇಡ, ಎಲ್ಲಾದರೂ ಹೋಟೆಲ್ ನಲ್ಲಿ ಕಾಫಿ ಕುಡಿಯುತ್ತಾ ತಿಂಡಿ ತಿನ್ನುತ್ತಾ ಮಾತಾಡೋಣ "ಅಂದರು.
ನನಗೂ ಅದೇ ಸರಿ ಅನಿಸಿತು. ಕೊನೆಗೂ ಕದ್ರಿ ಪಾರ್ಕ್ ನಲ್ಲಿ 8 ರೌಂಡ್ ವಾಕ್ ಮುಗಿದಿತ್ತು. ಹೆಚ್ಚು ಕಡಿಮೆ ಒಂದು ಘಂಟೆ ಗಳ ವಾಕ್ & ಟಾಕ್.
ಅವರು ಕಾರ್ ತಂದಿದ್ದರು. ಅವರ ಕಾರ್ ನಲ್ಲಿಯೇ ಹೋಟೆಲ್ ಗೆ ಹೋದೆವು.
ಹೋಟೆಲ್ ಮಂದಾರ.
ಕೆ. ಪಿ. ಟಿ ಕಾಲೇಜ್ ನ ಎದುರೇ ಇದೆ. ಗ್ರೀನ್ ಪಾರ್ಕ್ ಬಾರ್ ನ ಪಕ್ಕದಲ್ಲಿ.
ಹೋಟೆಲ್ ಗೆ ಹೋದ ಕೂಡಲೇ ಪಲ್ಲವಿ ಮೇಡಂ "ನೀವೇ ಆರ್ಡರ್ ಮಾಡಿ ಪಚ್ಚು" ಅಂದರು.
"ನೋಡಿ ಮೇಡಂ ಮಂಗಳೂರಿನಲ್ಲಿ ಮೊನ್ನೆ ತನಕ ನೀರು ಇರಲಿಲ್ಲ, ಆದರೆ ಈಗ ಒಳ್ಳೆ ಮಳೆ ನೂ ಬಂದಿದೆ, ನೀರೂ ನೂ ಇದೆ. ಹಾಗಾಗಿ ನೀರುದೋಸೆಯೇ ತಿನ್ಬೇಕು ನಾವು. ಅಂದ ಹಾಗೆ ನೀರುದೋಸೆ ನನ್ನ ಪೇವರೆಟ್ ಕೂಡ ಹೌದು " ಅಂದೆ.
ಅವರು ಜೋರಾಗಿ ನಕ್ಕರು, ನಕ್ಕು ಹೇಳಿದರು" ನೀವು ಈ ಬಗ್ಗೆ ಒಂದು ಪೋಸ್ಟ್ ಕೂಡ ಹಾಕಿದ್ದೀರಿ ಅಲ್ವಾ ಫೇಸ್ಬುಕ್ ಅಲ್ಲಿ " ಅಂದರು.
" ಹೌದು ಆದರೆ ನೀವು ಲೈಕೆ ಮಾಡ್ಲಿಲ್ಲ ಅಲ್ವಾ ಮೇಡಂ " ಅಂದೆ.
ಅವರು ನಗುತ್ತಾ" sorry sorry ಇನ್ನು ಮುಂದೆ ಲೈಕ್, ಕಾಮೆಂಟ್, ಹಹ ಹಹ ರಿಯ್ಯಾಕ್ಟ್ ಎಲ್ಲಾ ಮಾಡ್ತೀನಿ ಖುಷಿಯಾ" ಅಂದರು.
ನಾನೊಮ್ಮೆ ಯೋಚಿಸಿದೆ. ಇವರ ಈ ಸುಂದರ ನಗುವಿಗೆ ನಾನೇ ನಿಧಾನವಾಗಿ ಮರುಳುನಂತಾಗುತ್ತಿದ್ದೆನೆ. ಹಾಗಾದರೆ ಆಗ ಇವರ ಕಾಲೇಜ್ ಹುಡುಗರ ಅವಸ್ಥೆ ಹೇಗೆ.. ಇವರು ಕೇವಲ ತನ್ನ ಸ್ಮೈಲ್ ನಿಂದಲೇ ಅದೆಷ್ಟು ಹುಡುಗರನ್ನು ಕೊಲ್ಲಬಲ್ಲರು. ಆಹಾ ಅದೆಂತ ಮೋಹಕ ಸೌಂದರ್ಯ, ಅದೆಂತಹ ಅಧ್ಭುತ ನಗು ಇವರದ್ದು. ಇವರ ಆ ಪ್ರೇಮಿ ನಿಜವಾಗಿಯೂ ಅದೃಷ್ಟವಂತ ಅಂತ ಅಂದುಕೊಂಡೆ.
ನೀರುದೊಸೆ ಜೊತೆಗೆ ಕಾಪಿ ಯೂ ಬಂತು.
ಹಾಗೇ ಕಾಫಿ ಹೀರುತ್ತಾ ಹೇಳಿದೆ "ಶುರು ಮಾಡಿ ಮೇಡಂ ನಿಮ್ಮ ಕಥೆ" ಅಂದೆ.
ಅವರು ಕಥೆ ಹೇಳಿದರು, ಸುಮಾರು ಒಂದು ಘಂಟೆ!!
ಕಥೆ ಹೇಳಿ ಮುಗಿಸಿದ್ದ ಅವರ ಕಣ್ಣುಗಳಲ್ಲಿ ನೀರು ಇತ್ತು. ನನಗೂ ಫೀಲ್ ಆಯಿತಾದರೂ ನಾನೇನು ಅವರ ಎದುರಿಗೆ ಕಣ್ತುಂಬಿಸಿಕೊಳ್ಳಲಿಲ್ಲ. ಬಹುಶಃ ಕಥೆ ಮುಂದೆ ಲವ್ ಲೆಟರ್ ಗಳಲ್ಲಿ ಅಕ್ಷರ ರೂಪವಾಗಿ ಮಾರ್ಪಾಡು ಆಗುವಾಗ ನಾನು ಕಣ್ಣೇರು ಆಗಲು ಬಹುದೆನೋ.. ಏನೋ.ಗೊತ್ತಿಲ್ಲ!
ಬಿಲ್ ಪೇ ಅವರೇ ಮಾಡಿದರು. ನನಗೆ ಬಂಟ್ಸ್ ಹಾಸ್ಟೆಲ್ ಸರ್ಕಲ್ ಬಳಿ ಡ್ರಾಪ್ ಕೊಟ್ಟು, ಹಾಗೆ ನಗುತ್ತಾ ಒಂದು ಕೊನೆಯ byee ಹೇಳಿ ಅವರು ಅವರ ಮನೆಯ ಕಡೆಗೆ ಕಾರು ಡ್ರೈವ್ ಮಾಡುತ್ತಾ ಹೋದರು..
ಅಲ್ಲೇ ಇಳಿದವನು ಅವರ ಕಾರು ಕಣ್ಣಿನಿಂದ ಮಾರೆಯಾಗುವ ವರೆಗೆ ನೋಡುತ್ತಾ ನಿಂತೆ. ಇನ್ನೊಮ್ಮೆ ಅವರನ್ನು ಬೇಟಿ ಆಗುತ್ತೇನಾ.. ನೋಡುತ್ತೆನಾ.. ಮತ್ತೆ ಹೀಗೆಯೇ ಗಂಟೆ ಗಟ್ಟಲೆ ಮಾತಾಡುತ್ತೆವೆಯಾ..ನಗುತ್ತೆವೆಯಾ.. ಖಂಡಿತವಾಗಿಯೂ ನನಗೆ ಗೊತ್ತಿರಲಿಲ್ಲ!
ನನ್ನ ಬಸ್ ಬಂತು, ಬಸ್ ಹಿಡಿದು ಮನೆ ತಲುಪಿದೆ. ಆ ದಿನದ ಕೆಲಸ ಎಲ್ಲಾ ಮುಗಿದ ಮೇಲೆ ಒಬ್ಬನೇ ರೂಮಿನಲ್ಲಿ ಕುಳಿತುಕೊಂಡು ಪಲ್ಲವಿ ಮೇಡಂ ಹೇಳಿದ ಕಥೆ ಗೆ ಅನುಗುಣವಾಗಿ ಲೆಟರ್ ಬರೆಯಲು ಆರಂಭಿಸಿದೆ.ಈಗ ನಾನು ಹುಡುಗಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು, ಹುಡುಗಿಯೊಬ್ಬಳು ಹುಡುಗನಿಗೆ ಬರೆದರೆ ಆ ಲೆಟರ್ ಹೇಗಿರುತ್ತೊ ಆ ರೀತಿ ಬರೆಯಬೇಕಾಗಿತ್ತು.
ಕೊನೆಗೂ ಲೆಟರ್ ಬರೆದು ಮುಗಿಸಿದೆ !
ಆ ಲೆಟರ್ ಹೀಗಿತ್ತು, ನೀವೇ ಓದಿ ಬಿಡಿ...
" ಹಾಯ್ ಪ್ರೇಮ್(ಹೆಸರು ಬದಲಾಯಿಸಲಾಗಿದೆ)...
ಹೇಗಿದ್ದಿ?
ನಾನು ಪರವಾಗಿಲ್ಲ as usual ಚೆನ್ನಾಗಿಯೇ ಇದ್ದೆನೆ.
ಮಣಿಪಾಲ ದಲ್ಲಿ ಮಳೆ ಹೇಗಿದೆ ಅಂತ ಖಂಡಿತವಾಗಿಯೂ ಕೇಳಲ್ಲ. ಮಂಗಳೂರಿನಲ್ಲಿ ಎಷ್ಟು ಮಳೆ ಬಂದಿದೆಯೋ ಅಷ್ಟೇ ಮಳೆ ಬಂದಿರುತ್ತೆ ಅಂತ ಅಂದ್ಕೊಡಿದ್ದಿನಿ. ನಮ್ಮ ಉಡುಪಿ ಯ ಪೊಡವಿಗೊಡೆಯ ನಿಗೆ ಬಂಗಾರ ದ ಗೋಪುರ ಮಾಡಿಸಿದರಂತೆ, ಹೋಗಿದ್ದೆಯಾ ನೀನು ನೋಡಲು ? ಯಾವಾಗಲಾದರೂ ಕೃಷ್ಣ ಮಠಕ್ಕೆ ಹೋದರೆ ನಾನು ಕೂಡ ಕೃಷ್ಣ ನನ್ನು ಕೇಳಿದ್ದೆ ಎಂದು ಒಮ್ಮೆ ನಮ್ಮ ಕೃಷ್ಣ ನಿಗೆ ಹೇಳು ಪ್ರೇಮ್. ನೀನು ಹೇಳಿದ್ರೆ ಖಂಡಿತವಾಗಿಯೂ ಕೇಳಿಸ್ಕೋತಾನೆ ಅವನು.
ಅಂಕಲ್ , ಆಂಟಿ ಎಲ್ಲಾ ಹುಷಾರ್ ಅಲ್ಲಾ? ಅಂಕಲ್ ನಿಗೆ ಯೋಗ ಮಾಡುವುದು ಸ್ವಲ್ಪ ಹೇಳಿಕೊಡು.ಮಂಡಿ ನೋವು ಎಲ್ಲಾ ಗುಣ ಆಗ್ಬಹುದು ಇಲ್ಲದಿದ್ದರೆ ಯಾವುದಾದರೂ ಒಳ್ಳೆಯ ನೋವಿನ ಎಣ್ಣೆ ತಿಕ್ಕಲು ತಂದು ಕೊಡು. ಆಂಟಿ ಈಗಲೂ ಸೀರಿಯಲ್ ನೋಡ್ತಾರ? ನಿನಗೆ ಗೊತ್ತಲ್ಲ ಆಂಟಿ ಮಾಡುವ ಚಕ್ಕುಲಿ ನನಗೆ ತುಂಬಾನೇ ಇಷ್ಟ. ಒಂದು ಡಬ್ಬ ನನಗೆಂದೇ ಮಾಡಿ ಇಡಲು ಹೇಳು ಪ್ರೆಮ್.
ನನ್ನ ಅಪ್ಪ ಅಮ್ಮ ಕೂಡ ಚೆನ್ನಾಗಿ ಇದ್ದಾರೆ, IPL ಮುಗೀತು ಅಲ್ವಾ, ಈಗ world cup ಶುರು ಆಗಿದೆ. ಅಪ್ಪ ಯಾವಾಗಲೂ ಟಿ. ವಿ ಮುಂದೆನೇ ಇರ್ತಾರೆ, ನಮ್ಮವರು ಚೆನ್ನಾಗಿ ಆಡದೇ ಇದ್ದಾಗ ಹೇಳ್ತಾರೆ, ಈಗಿನವರಿಗೆ ಬ್ಯಾಟಿಂಗ್ ಮಾಡಕ್ಕೆನೇ ಬರಲ್ಲ ಗಾವಸ್ಕರ್ ಇರಬೇಕಿತ್ತು, ಗುಂಡಪ್ಪ ವಿಶ್ವನಾಥ್ ಇರ್ಬೆಕಿತ್ತು ಅಂತ ಎಲ್ಲಾ ಏನೇನೋ ಹೇಳ್ತಾ ಇರ್ತಾರೆ . ನಿನಗೇ ಗೊತ್ತಲ್ಲ ನನ್ನ ಅಮ್ಮ, ನಿನ್ನ ಅಮ್ಮನದ್ದು ಇಬ್ಬರದ್ದೂ ಒಂದೇ ಹುಚ್ಚು, ಅದೇ ಸಿರಿಯಲ್.. ಆಗ ಇಬ್ಬರೂ ಒಟ್ಟಿಗೆ ಮಾಯಮೃಗ ಧಾರವಾಹಿ ನೋಡ್ತಾ ಇದ್ದರು. ಈಗ ಇಲ್ಲಿ ಅಮ್ಮ ಒಬ್ಬರೇ ಅಗ್ನಿಸಾಕ್ಷಿ ನೋಡ್ತಾ ಇದ್ದಾರೆ. ನನ್ನ ಹಾಗೆಯೇ ನನ್ನ ಅಪ್ಪ ಅಮ್ಮ ಕೂಡ ನಿನ್ನನ್ನು ನಿನ್ನ ಫ್ಯಾಮಿಲಿ ಯನ್ನು ತುಂಬಾನೇ ಮಿಸ್ ಮಾಡ್ಕೊತ್ತಾರೆ ಪ್ರೇಮ್.
ಮೊನ್ನೆ ನಾವು ಪೊಳಲಿ ಜಾತ್ರೆಗೆ ಹೋದಾಗ ಕೂಡ ನಿನ್ನ ನೆನಪಾಯಿತು. ಕದ್ರಿ ಯ ಕೆರೆಯಲ್ಲಿ ಮುಳುಗು ಹಾಕುವಾಗ ನೀನು ಅದೆಷ್ಟು ನೆನಪಾದೆ ಗೊತ್ತಾ ಪ್ರೇಮ್ ...
ಆ ದಿನಗಳು ಎಷ್ಟೊಂದು ಚಂದ ಇತ್ತಲ್ಲ . ನೀವು ಕೂಡ ಆಗ ಇಲ್ಲೇ ಮಂಗಳೂರಿನಲ್ಲೇ ಇದ್ದಿರಿ. ನಮ್ಮ ಇಬ್ಬರದ್ದೂ ಅಕ್ಕ ಪಕ್ಕದ ಮನೆ. ಕೇವಲ ಕಂಪೌಡ್ ಒಂದೇ ನಮ್ಮ ಮನೆಗಳನ್ನು ಬೇರೆ ಬೇರೆ ಮಾಡಿತ್ತು. ಆದರೆ ಮನಸ್ಸುಗಳನ್ನು ಅಲ್ಲಾ. ಎರಡೂ ಮನೆಯವರು ಒಂದೇ ಫ್ಯಾಮಿಲಿ ಯವರ ಹಾಗೆ ಇದ್ದೆವು. ನಮ್ಮ ಮನೆಯಲ್ಲಿ ಚಿಕನ್ ಸುಕ್ಕ ಮಾಡಿದರೆ ಅದು ನಿಮ್ಮ ಮನೆಗೂ ತಲುಪುತ್ತಿತ್ತು.ಅಮ್ಮ ಕೊಟ್ಟದ್ದನ್ನು ನಾನೇ ತಂದು ಆಂಟಿಗೆ ಕೊಡುತ್ತಿದ್ದೆ. ಆದರೆ ರೀತಿ ನಿಮ್ಮ ಮನೆಯಲ್ಲಿ ಆಂಟಿ ಫಿಶ್ ಪ್ರೈ ಮಾಡಿದರೆ ನಮ್ಮ ಮನೆಗೂ ಬಂದು ತಲುಪುತ್ತಿತ್ತು.ನೀನೇ ಹಿಡಿದು ಕೊಂಡು ಬರುತ್ತಿದ್ದೆ ಅಲ್ವಾ ಪ್ರೇಮ್.
ಇಬ್ಬರ ಮನೆಯಲ್ಲಿ ಟಿ. ವಿ ಇವತ್ತಾದರೂ ಸಂಡೆ ದಿವಸ ಚಂದನದಲ್ಲಿ ಬರೋ ಮೂವಿಗಾಗಿ 4 ಗಂಟೆಗೆ ನೀನು ನಮ್ಮ ಮನೆಗೆನೇ ಓಡಿ ಬರುತ್ತಿದ್ದೆ. ಆಗ ನನಗೆಷ್ಟು ಖುಷಿ ಆಗುತ್ತಿತ್ತು ಗೊತ್ತಾ. ನಿನಗೆ ನನ್ನ ಅಮ್ಮ ತೆಳ್ಳಗೆ ಮಾಡುವ ನೀರು ದೋಸೆ ಅಂದರೆ ಪಂಚಪ್ರಾಣ, ನೀನು ಬಂದಾಗಲೆಲ್ಲ ಅಮ್ಮ ಅದನ್ನೇ ಮಾಡುತ್ತಿದ್ದರು.
ಪ್ರೇಮ್ ನೀನು ನಾನು ಚಡ್ಡಿ ಹಾಕದ ಟೈಂ ನಿಂದ ಕೂಡ ಗೆಳೆಯರೇ. ನಿನ್ನ ಫಸ್ಟ್ ಫ್ರೆಂಡ್ ಕೂಡ ನಾನೇ, ಹಾಗೆಯೇ ನನ್ನ ಫಸ್ಟ್ ಫ್ರೆಂಡ್ ಕೂಡ ನೀನೇ. ನನಗೆ ಈಗಲೂ ಕೂಡ ನಿನ್ನನ್ನು ಬಿಟ್ಟು ಬೇರೆ ಯಾವುದೇ ಗೆಳೆಯರಿಲ್ಲ. ಹುಡುಗರನ್ನು ಬಿಡು, ಹುಡುಗಿಯರಲ್ಲೂ ಕೂಡ ಇಲ್ಲಿಯ ವರೆಗೆ ನನಗೆ ನಿನ್ನಷ್ಟು ಒಳ್ಳೆಯ ಸ್ನೇಹಿತೆಯರು ಇಲ್ಲ. ಯಾವ ಹುಡುಗರು ಕೂಡ ನನ್ನ ಸಹವಾಸ ಕ್ಕೆ ಬರಬಾರದು ಎಂದು ಫೇಸ್ಬುಕ್ ನಲ್ಲಿ Married ಅಂತ ಹಾಕಿದ್ದಿನಿ!
ಚಿಕ್ಕಂದಿನಲ್ಲಿ ನೀನು ನನ್ನನ್ನು ಅದೆಷ್ಟು ಕೇರ್ ಮಾಡುತ್ತಿದ್ದೆ ಅಲ್ಲಾ ಪ್ರೇಮ್.
ನಾವಿಬ್ಬರು ಕಲಿತ ಶಾಲೆಗಳೆಲ್ಲವೂ ಒಂದೇ ಆಗಿತ್ತು. ಶಾಲೆಗೂ
ಒಟ್ಟಿಗೆ ಹೋಗುತ್ತಿದ್ದೆವು. ನೀನು ನನ್ನ ಕೈ ಹಿಡಿದು ಕೊಂಡೇ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದೆ. ನನಗೆ ಯಾವುದಾದರೂ ತರಲೆ ಹುಡುಗರು ಕಿರಿಕಿರಿ ಮಾಡಿದರೆ ಜಗಳಕ್ಕೆನೇ ನಿಂತುಬಿಡುತ್ತಿದ್ದೆ.
ಕದ್ರಿಯ ಗುಡ್ಡ ಹತ್ತಿ ಕೇಪುಳ, ಕುಂಟಾಲ ಹಣ್ಣುಗಳನ್ನು ತಿನ್ನುತ್ತಿದ್ದೆವು.ಕಾಡಿನಲ್ಲಿ ಹೆಸರಿಡದ ಯಾವುದಾವುದೋ ಚಂದಗೆ ಕಾಣುವ ಹೂವುಗಳನ್ನು ಕಿತ್ತು ತಂದು ನನಗೆ ಕೊಡುತ್ತಿದೆ. ರೆಂಜಾಳ ದ ಹೂವುಗಳನ್ನು ಶ್ರದ್ಧೆಯಿಂದ ಪೋಣಿಸಿ ನನ್ನ ತಲೆಗೆ ಮುಡಿಸುತ್ತಿದ್ದೆ. ನಮ್ಮ ಕಾಂಪೌಂಡ್ ನಲ್ಲಿ ಬೀಳುತ್ತಿದ್ದ ಆ ಪಾರಿಜಾತ ಹೂವುಗಳನ್ನು ಹೆಕ್ಕಲು ಅದೆಷ್ಟು ಖುಷಿ ಆಗುತ್ತಿತ್ತಲ್ಲ. ಮನೆಯಲ್ಲಿ ಪತ್ರೊಡೆ ಮಾಡಲು ಕೆಸುವಿನ ಎಲೆಗಳನ್ನು ತರಲು ಬೇರೆಯವರ ತೋಟಗಳಿಗೆ ಹೋಗುತ್ತಿದ್ದೆವು. ತುಳುವೆ ಹಲಸನ್ನು ನೀನು ಮರದಿಂದ ಕಿತ್ತು ತಂದು, ಒಂದೊಂದೆ ತೊಳೆಗಳನ್ನು ನೀಟಾಗಿ ನನ್ನ ಬಾಯಿಗೆ ಇಡುತ್ತಿದ್ದೆ.
ಚೌತಿ, ಅಷ್ಟಮಿ ಗೆ ಕೆದಗೆಯ ಎಲೆಗಳಿಂದ ಮೂಡೆ (ಕೊಟ್ಟಿಗೆ) ಕಟ್ಟಲು ನಿನಗೆ ಕಲಿಸಿಕೊಟ್ಟಿದ್ದೇ ನಾನೇ. ಮುಳ್ಳು ಗಳಿರುವ ಕೇದಗೆಯ ಎಲೆಗಳನ್ನು ಗದ್ದೆ, ನದಿ ಬಳಿಗೆ ಹೋಗಿ ಕಡಿದು ನೀನೇ ಎಳೆದು ಕೊಂಡು ಬರುತ್ತಿದ್ದೆ.ಅದಕ್ಕೆ ಬೇಕಾಗುವ ಮುಳ್ಳುಗಳಿಗಾಗಿ ಪುನಃ ಗುಡ್ಡ ದ ತುದಿಗೆ ಓಡುತ್ತಿದ್ದೆವು. ವರ್ಷಕ್ಕೆ ಎರಡು ಬಾರಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಮೂಡೆ ಕಟ್ಟಲು ಮಾಡಿಕೊಳ್ಳುತ್ತಿದ್ದ ತಯಾರಿಯಲ್ಲು ಕೂಡ ಅದೇನೋ ಸಂಭ್ರಮವಿತ್ತು.
ನೆನಪಿದೆಯಾ ಪ್ರೇಮ್ ಕೆಲವೊಮ್ಮೆ ನಾವು ಹೆಚ್ಚಿಗೆ ಮೂಡೆ ಕಟ್ಟಿದಾಗ ಒಂದು ರೂಪಾಯಿಗೋ ಎರಡು ರೂಪಾಯಿಗೋ ಅಂಗಡಿಯವನಿಗೆ ಮಾರುತ್ತಿದ್ದೆವು. ಆಗ ಕೈಗೆ ಬರುತ್ತಿದ್ದ ಆ ಒಂದು ರೂಪಾಯಿ, ಎರಡು ರೂಪಾಯಿ ಈ ಕಾಲದ ಸಾವಿರ ರೂಪಾಯಿ ಗಿಂತಲೂ ಜಾಸ್ತಿ ಆಗಿತ್ತು ನಮಗೆ. ಆ ಹಣವನ್ನು ಜಾಗ್ರತೆ ಯಿಂದ ಕೂಡಿ ಇಟ್ಟು ಕೊಳ್ಳುತ್ತಿದ್ದೆವು. ಮುಂದೆ ಪೊಳಲಿ ಜಾತ್ರೆ ಇಲ್ಲವೇ ಉಡುಪಿ ಯ ಪರ್ಯಾಯ ದ ಸಂತೆಯಲ್ಲಿ ಏನಾದರೂ ಕೊಂಡು ಕೊಳ್ಳಲು ಆ ಹಣ ಉಪಯೋಗಕ್ಕೆ ಬರುತ್ತಿತ್ತು.
ಆರತಿ ತಟ್ಟೆಯ ನಡುವಿನಲ್ಲಿ ಕುಂಕುಮ ದಲ್ಲಿ ಚಂದಗೆ ಓಂ ಇಲ್ಲವೇ ಗಣೇಶ ನನ್ನು ಬರೆಯಲು ನಿನಗೆ ಕಲಿಸಿದ್ದು ನಾನು.
ಅಪ್ಪನ ಹಳೆಯ ಲುಂಗಿಯಿಂದ ಹೊಳೆಯಲ್ಲಿ ಮೀನು ಹಿಡಿಯಬಹುದೆಂದು ತೋರಿಸಿಕೊಟ್ಟವನು ನೀನು.ಅದೇ ಹೊಳೆಯಲ್ಲಿ ಅಲ್ಲವೇ ಗಣಿತ ನೋಟ್ ಬುಕ್ ನ ಹಾಳೆಗಳನ್ನು ಹರಿದು ನಾವಿಬ್ಬರು ದೋಣಿ ಮಾಡಿ ಬಿಡುತ್ತಿದ್ದುದು.
ಗುಡ್ಡೆಯಲ್ಲಿ ಬೀಳುತ್ತಿದ್ದ ಕಾಟು ಮಾವಿನ ಹಣ್ಣುಗಳನ್ನು ತಿಂದುದುದಕ್ಕೆ ಲೆಕ್ಕವೇ ಇಲ್ಲ.
ನನ್ನ ಅಮ್ಮನ ಪಾಲಿಗೂ ಕೂಡ ಅತೀ ಶಕ್ತಿವಂತ ಅಂದರೆ ಅದು ನೀನೇ,ನಮ್ಮ ಮನೆಯಲ್ಲಿ ಸೇಮೆದಡ್ಡೆ(ಒತ್ತು ಶ್ಯಾವಿಗೆ) ಮಾಡುವಾಗ, ಒತ್ತು ಶ್ಯಾವಿಗೆ ಯ ಮಣೆ ಒತ್ತಲು ನೀನೇ ಬರಬೇಕಾಗಿತ್ತು. ಬಾಲ ಮಂಗಳ ದ ಡಿಂಗ ನಂತೆ, ಶಕ್ತಿ ಮದ್ದು ವಿನ ಲಂಬೋದರ, ವೀರ ಬಾಲಕನ ರೇಂಜ್ ಗೆ ಬಂದು ನೀನು ಶ್ಯಾವಿಗೆ ಒತ್ತಿ ಕೊಟ್ಟು ಹೋಗುತ್ತಿದ್ದೆ. ಆಗೆಲ್ಲಾ ನಾವು ಬಾಲ ಮಂಗಳ, ಚಿತ್ರ ಕಥಾ, ಗಿಳಿವಿಂಡು, ಚಂಪಕ ಅಂತ ಎಷ್ಟೆಲ್ಲಾ ಕಥೆ ಪುಸ್ತಕ ಓದುತ್ತಿದ್ದೆವು ಅಲ್ವಾ .
ಪ್ರೇಮ್ ಅಪರೂಪಕ್ಕೆ ಒಮ್ಮೆ ನೀನು ನಗುತ್ತಿದ್ದೆ. ಆದರೆ
ನೀನು ಹೆಚ್ಚಾಗಿ ನಗುತ್ತಿದದ್ದು ನಾನು ನಕ್ಕ ಮೇಲೆಯೇ.
ನಿನ್ನ ಇಷ್ಟ ದೇವರು, ನನ್ನ ಇಷ್ಟ ದೇವರು ಇಬ್ಬರೂ ಒಂದೇ ಆಗಿದ್ದರು. ಅವನೇ ಬೆಣ್ಣೆ ಕಳ್ಳ ಕೃಷ್ಣ.ಆಗ ನಾವಿಬ್ಬರು ಒಟ್ಟಿಗೆ ಕಂಠ ಪಾಟ ಮಾಡಿದ್ದ ಕೃಷ್ಣ ಅಷ್ಟೊತ್ತರ, ವಿಷ್ಣು ಸಹಸ್ರ ನಾಮಗಳು ಇಂದಿಗೂ ನೆನಪಿದೆ ಪ್ರೇಮ್. ಪ್ರತಿ ಪರ್ಯಾಯ ಕ್ಕೆ ನಮ್ಮನ್ನು ನಮ್ಮ ತಂದೆ ತಾಯಿಯಂದಿರು ಉಡುಪಿ ಗೆ ಕರೆದುಕೊಂಡು ಹೋಗುತ್ತಿದ್ದರು.ಕೃಷ್ಣನಿಗೆ ಶ್ರದ್ಧೆ ಯಿಂದ ಕೈಮುಗಿದು ಕೃಷ್ಣ ನನ್ನು ಕಣ್ತುಂಬ ನೋಡಿಕೊಂಡು ಬರುತ್ತಿದ್ದೆವು. ದೇವರ ಗಂಧ ವನ್ನು ನೀನೇ ನಿನ್ನ ಕೈಯಾರೆ ನನ್ನ ಹಣೆಗೆ ಇಡುತ್ತಿದ್ದೆ.
ಇಬ್ಬರ ಮನಸ್ಸಿನಲ್ಲೂ ಇದ್ದ ಪ್ರಾರ್ಥನೆ ಒಂದೇ " ಕೃಷ್ಣಂ ವಂದೇ ಜಗದ್ಗುರುಂ.. " 😌🙏
ಕಳ್ಳ ಪೋಲಿಸ್, ರಾಜ ರಾಣಿ, ಲೂಡ, ಕೆರಾಂ, ಚೆಸ್ ಎಲ್ಲವನ್ನೂ ಆಡುತ್ತಿದ್ದೆವು. ಎಲ್ಲದರಲ್ಲೂ ನೀನು ಬೇಕಂತಲೇ ಸೋಲುತ್ತಿದ್ದೆ,ನನ್ನ ಗೆಲುವನ್ನು ನೋಡಿ ಖುಷಿ ಪಡುತ್ತಿದ್ದೆ. ನಿಜ ಹೇಳಬೇಕೆಂದರೆ ಪ್ರೇಮ್, ನೀನು ಸೋತು ಗೆಲುತ್ತಿದ್ದೆ. ಕೇವಲ ಬೇರೆ ಯವರ ಖುಷಿಗಾಗಿ ಸೋಲುವವನು, ಒಂದು ಅರ್ಥ ದಲ್ಲಿ ಗೆದ್ದ ಹಾಗೆಯೇ ಅಲ್ಲವೇ..
ರಜಾ ದಿನಗಳಲ್ಲಿ ಪಣಂಬೂರು, ತಣ್ಣೀರುಬಾವಿ ಬೀಚ್ ಗೆ ಓಡುತ್ತಿದ್ದೆವು. ನೀನು ಮರಳಿನಲ್ಲಿ ಅರಮನೆ ಕಟ್ಟುತ್ತಿದ್ದೆ. ನನಗೆ ಹೇಳುತ್ತಿದ್ದೆ "ನೋಡು ಪಲ್ಲು, ಈ ಅರಮನೆಗೆ ನೀನೆ ರಾಣಿ". ನಾನು ಮುಗ್ಧೆ ಯಾಗಿ ಕೇಳುತ್ತಿದ್ದೆ " ಮತ್ತೆ ನೀನು ಪ್ರೇಮ್..? "
"ನಾನು ನಿನ್ನ ಸೇವಕ.. "ಅಂತ ಹೇಳಿ ಮುಗಿಸಿದ್ದೆ. ಬಹುಶಃ ಕಡಲಿನ ಅಲೆಗೂ ನೀನು ಹೇಳಿದ್ದು ಇಷ್ಟ ಆಗಿರಲಿಲ್ಲ. ಅಲೆ ಬಂದು ನೀನು ಕಟ್ಟಿದ್ದ ಅರಮನೆಯನ್ನು ಕೊಚ್ಚಿಕೊಂಡು ಹೋಗುತ್ತಿತ್ತು.
ನೀನು ಮತ್ತೆ ಅರಮನೆ ಕಟ್ಟುತ್ತಿದ್ದೆ,ಅಲೆ ಬಂದು ಕೊಚ್ಚಿಕೊಂಡು ಹೋಗದಂತೆ ಸುತ್ತಲೂ ದಪ್ಪನೆಯ ಕೋಟೆ ಕಟ್ಟುತ್ತಿದ್ದೆ! ಆಗಲೂ ಅಲೆ ಬಂದು ಬೀಳಿಸುತ್ತಿತ್ತು.
ಆದರೆ ಪ್ರೆಮ್ ಒಮ್ಮೆಯಾದರೂ ಬಾಯಿ ಬಿಟ್ಟು ಹೇಳಬಾರದಿತ್ತೆ "ಪಲ್ಲು ಈ ಅರಮನೆ ಗೆ ನೀನೇ ರಾಣಿ, ನಾನೇ ಮಹರಾಜ" ಎಂದು. ಬಹುಶಃ ನೀನು ಹಾಗೆ ಹೇಳಿದ್ದಿದ್ದರೆ ಅಲೆ ಕೂಡ ನಮ್ಮ ಅರಮನೆ ಯ ಸಹವಾಸ ಕ್ಕೆ ಬರುತ್ತಿರಲಿಲ್ಲವೇನೋ..
ನಿನಗೆ ಡ್ಯಾನ್ಸ್ ಅಂದರೆ ಇಷ್ಟ. ನನಗೆ ಹಾಡು ಅಂದರೆ ಇಷ್ಟ. ಅಪ್ಪ ನನ್ನನ್ನು
ಶಾಸ್ತ್ರೀಯ ಸಂಗೀತ ಕಲಿಸಲು ಹಾಕಿದಾಗ,ನಿನಗೆ ಸಂಗೀತ ಅಷ್ಟೇನು ಇಷ್ಟವಿಲ್ಲದಿದ್ದರೂ ನನಗಾಗಿ ಸಂಗೀತ ಕಲಿಯಲು ಶುರುಮಾಡಿದೆ, ನನ್ನೊಡನೆ ಸಂಗೀತ ತರಗತಿಗೆ ಬರಲು ಶುರು ಮಾಡಿದೆ. ಸಂಗೀತ ಕ್ಕಿಂತಲೂ ನಿನಗೆ ಕೊಳಲು ಇಷ್ಟ ಆಗಿತ್ತು,ಏಕೆಂದರೆ ನಿನಗೆ ಕೃಷ್ಣ ಕೂಡ ಇಷ್ಟ ಅಲ್ಲವೇ. ನೀನು ಕೊಳಲು ಕಲಿತೆ. ನೀನು ಅದೆಷ್ಟು ಚೆನ್ನಾಗಿ ಕೊಳಲು ಬಾರಿಸುತ್ತಿದ್ದೆ ಎಂದರೆ, ಕೇಳುತ್ತಿದ್ದರೆ ನನಗೆ ಹಾಗೆಯೇ ನಿದ್ದೆ ಬರುತಿತ್ತು. ಸಿರಿಯಸ್ ಆಗಿ ಸಂಗೀತ ಕಲೀತಾ ಇದ್ದಿಯೋ ಇಲ್ಲ ಅಂತ ನನಗೆ ಗೊತ್ತಿರಲಿಲ್ಲ ಆದರೆ ನನಗೆ ಸಂಗೀತ ಚೆನ್ನಾಗಿ ಕಲಿ ಎಂದು ಅದೆಷ್ಟು ಪ್ರೋತ್ಸಾಹ ನೀಡಿದೆ ನೀನು ಪ್ರೆಮ್.
ಎಸ್ ಜಾನಕಿ ತರಹ ಹಾಡ್ಬೇಕು ಅಂತ ಹೇಳುತ್ತಿದ್ದ ನೀನು ಮಾತ್ರ ನನ್ನಲ್ಲಿ ಯಾವಗಲೂ ರಾಜು ಅನಂತ ಸ್ವಾಮಿ ಅವರ " ಯಾವ ಮೋಹನ ಮುರಳಿ ಕರೆಯಿತೋ, ದೂರ ತೀರಕ್ಕೆ ನಿನ್ನನ್ನು.." ಹಾಡನ್ನು, ಒಮ್ಮೆ ಹಾಡು ಒಮ್ಮೆ ಹಾಡು ಅಂತ ಅದೆಷ್ಟು ಬಾರಿ ಒತ್ತಾಯಿಸುತ್ತಿದ್ದೆ ಅಲ್ವಾ , ಅದು ವಿರಹದ ಗೀತೆ, ನೋವಿನ ಗೀತೆ, ಬೇಜಾರು ಆದಾಗ ಹಾಡೋದು ಅಂತ ನನಗೂ ಗೊತ್ತಿಲ್ಲ, ನಿನಗೂ ಗೊತ್ತಿಲ್ಲ. ಸಾಲು ಚೆನ್ನಾಗಿದೆ, ರಾಗ ಚೆನ್ನಾಗಿದೆ, ಹಾಡೂ ಚೆನ್ನಾಗಿದೆ,ಒಮ್ಮೆ ಹಾಡು ಅಂತ ಹೇಳ್ತಾ ಇದ್ದೆ. ನೀನು ಆ ಹಾಡಿಗೆ ಮಧುರವಾಗಿ ಕೊಳಲು ನುಡಿಸುತ್ತಿದ್ದರೆ, ನಾನು ರಾಗವಾಗಿ ಕಣ್ಮುಚ್ಚಿ ಹಾಡ್ತಿದ್ದೆ. ಆ ಹಾಡನ್ನು ನಿನಗಾಗಿ ಅದೆಷ್ಟು ಬಾರಿ ಹಾಡಿದೆನೋ ನನಗೇ ಗೊತ್ತಿಲ್ಲ ಪ್ರೇಮ್. ಈಗಲೂ ಆ ಹಾಡು ಕೇಳುವಾಗ ನೀನು ನೆನಪಾಗುತ್ತಿಯಾ ಮತ್ತು ನಿನ್ನ ಕೊಳಲು ನೆನಪಾಗುತ್ತದೆ.
ನಿನಗೆ ನೆನಪಿದೆಯೇ ಆ ಕೊಳಲಿನ ಮೇಲೆ ನೀನು ನನ್ನದೊಂದು ಆಟೋಗ್ರಾಪ್ ಕೇಳಿದ್ದೆ. ನಾನು ಕೂಡ "ಮೋಹನ ಮುರಳಿ.." ಎಂದೇ ಬರೆದು ನನ್ನದೊಂದು ಪುಟ್ಟ ಸಹಿ ಹಾಕಿದ್ದೆ.
ಆ ಆಟೋಗ್ರಾಪ್, ಆ ಕೊಳಲು ಈಗಲೂ ಇಟ್ಟುಕೊಂಡಿರುವೆ ಅಲ್ಲಾ ಪ್ರೇಮ್..
ನೀನು ಹೇಗೆ ನನಗಾಗಿ ಸಂಗೀತ ಕಲಿಯಲು ಶುರುಮಾಡಿದೆಯೋ ಅದೇ ರೀತಿ ನಾನು, ನೀನು ಹೋಗುತ್ತಿದ್ದ ಡ್ಯಾನ್ಸ್ ಕ್ಲಾಸ್ ಗೆ ಬರಲು ಶುರು ಮಾಡಿದೆ, ಭರತ ನಾಟ್ಯ ಕಲಿತೆ. ಖಂಡಿತವಾಗಿಯೂ ನಿನಗಾಗಿಯೇ. ಆದರೆ ಅದೆಷ್ಟು ಸುಂದರವಾಗಿ ನೃತ್ಯ ಮಾಡುತ್ತಿದ್ದೆ ನೀನು ಪ್ರೆಮ್.ನಾನು ಕಳೆದು ಹೋಗಿ ಬಿಡುತ್ತಿದ್ದೆ. ಈಗಲೂ ಎಲ್ಲಾದರೂ ಡ್ಯಾನ್ಸ್ ನೋಡುವಾಗ ಕಣ್ಣ ಮುಂದೆ ಆ ನಿನ್ನ ನೃತ್ಯವೇ ಬಂದು ನಿಂತು ಬಿಡುತ್ತದೆ.
ಚಿಕ್ಕಂದಿನಲ್ಲಿ ಪೊಳಲಿ ಜಾತ್ರೆ, ಕಟೀಲು ಜಾತ್ರೆ ಯಾವುದನ್ನೂ ನಾವು ಮಿಸ್ ಮಾಡುತ್ತಿರಲಿಲ್ಲ. ಉಡುಪಿ ಪರ್ಯಾಯದಲ್ಲಿ ನೀನು ಕೂಡಿಟ್ಟ ಹಣದಲ್ಲಿ ನನಗೊಂದು ಪುಟ್ಟ ರಾಧಾಕೃಷ್ಣ ರ ಮೂರ್ತಿ ಕೊಡಿಸಿದ್ದೆ. ಅದರ ಮುಂದಿನ ಪರ್ಯಾಯದಲ್ಲಿ ಅಂತಹದ್ದೇ ರಾಧಾಕೃಷ್ಣ ರ ಮೂರ್ತಿ ನಿನಗೆ, ನಾನು ಕೂಡಿಟ್ಟ ಹಣದಿಂದ ಕೊಡಿಸಿದ್ದೆ. ರಾಧಾಕೃಷ್ಣ ರ ಮೂರ್ತಿ ಯಾರು ಯಾಕೆ ಕೊಡುತ್ತಾರೆ ಅನ್ನುವುದು ಕೂಡ ನಮಗೆ ಗೊತ್ತಿರಲಿಲ್ಲ. ಒಟ್ಟಿನಲ್ಲಿ ನಮಗೆ ಕೃಷ್ಣ ಇಷ್ಟ ಅದಕ್ಕಾಗಿ ನನಗೆ ನೀನು, ನಿನಗೆ ನಾನು ರಾಧಾಕೃಷ್ಣ ರ ಮೂರ್ತಿ ಕೊಟ್ಟಿದ್ದೆವು.
ಕದ್ರಿ ಯ ಕೆರೆಯಲ್ಲಿ ನನಗೆ ಈಜಲು ಕಲಿಸಿದ್ದು ನೀನೇ ಅಲ್ಲವೇ. ಅದೆಷ್ಟು ಜಾಗರೂಕತೆಯಿಂದ ಈಜು ಕಲಿಸಿದ್ದೆ . ಪೊಳಲಿ ಜಾತ್ರೆಯಲ್ಲಿ ಒಂದು ಬಾರಿ ನಾನು ಗುಂಪಿನಲ್ಲಿ ಕಳೆದು ಹೋದಾಗ ಅಪ್ಪ ಅಮ್ಮನಿಗೂ ನನ್ನನ್ನು ಹುಡುಕಲು ಸಾಧ್ಯ ಆಗಿರಲಿಲ್ಲ. ಆದರೆ ಅದೆಲ್ಲಿಂದ ಬಂದೆಯೋ ಆಪತ್ಬಾಂಧವನಂತೆ, ಆ ಸಾವಿರಾರು ಮಂದಿ ಯ ನಡುವೆಯೂ ನನ್ನನ್ನು ಹುಡುಕಿ ಸೇಪ್ ಆಗಿ ಮನೆಗೆ ಮುಟ್ಟುವಂತೆ ಮಾಡಿದ್ದೆ.
ನನಗೆ ಅಮ್ಮ ಯಾವಾಗಲೂ ಕಥೆ ಹೇಳುತ್ತಿದ್ದಳು . ಅವಳ ಆ ಕಥೆಗಳಲ್ಲಿ ಯಾವಾಗಲೂ "ಒಂದೂರಲ್ಲಿ ಒಬ್ಬ ರಾಜ" ಇರ್ತಿದ್ದ. ನನ್ನ ಪಾಲಿಗೆ ಆ ರಾಜ ಯಾವಾಗಲೂ ನೀನೇ ಆಗಿರ್ತಿದ್ದೆ ಪ್ರೆಮ್.!
ಕಾಲೇಜು ಸೇರುವಾಗ ನಾನು ಸೈನ್ಸ್ ತೆಗೆದುಕೊಂಡೆ. PCME, ನಾನು ಸೈನ್ಸ್ ತೆಗೆದುಕೊಂಡೆ ಅಂತ ನೀನು ಕೂಡ ಸೈನ್ಸ್ ತಗೊಂಡೆ.
ಎಂಜಿನಿಯರಿಂಗ್ ಮಾಡಬೇಕೆಂದು ನಾನು ಆಸೆಪಟ್ಟೆ. ನಿನಗೆ ಇಷ್ಟ ಇತ್ತೊ ಗೊತ್ತಿಲ್ಲ, ನೀನು ಕೂಡ ಇಂಜಿನಿಯರಿಂಗ್ ಮಾಡಿದೆ.ನನಗೆ ಮಂಗಳೂರಿನಲ್ಲೇ ಸೀಟು ಆಯಿತು.
ಆದರೆ ನಿನಗೆ ಬೆಂಗಳೂರಿನಲ್ಲಿ ದೊಡ್ಡ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಆದರೆ ನೀನು ಹೋಗಲಿಲ್ಲ. ನನ್ನನ್ನು ಬಿಟ್ಟು ನೀನು ಒಬ್ಬನೇ ಹೇಗೆ ತಾನೆ ಹೋಗಬಲ್ಲೆ ಗೆಳೆಯ.
ನಾನು ಸೇರಿದ್ದ ಕೆನರಾ ಕಾಲೇಜಿಗೆನೇ ಅಡ್ಮಿಷನ್ ಮಾಡಿಕೊಂಡೆ.
ಆದರೆ ನಾನು ಇಲ್ಲಿ EC(Electronics & Communication) ತಗೊಂಡರೆ, ನಿನ್ನದು EEE(Electrical & Electronics) .
Branch ಬೇರೆ ಬೇರೆ ಆದರೂ,ಎರಡೂ ಬ್ರಾಂಚ್ ಗಳಲ್ಲಿದ್ದ Electronics ನಮ್ಮನ್ನು ಮತ್ತೆ ಒಂದು ಮಾಡಿತ್ತು. ಇಬ್ಬರಿಗೂ Electronics ನ ಕೆಲವು ಸಬ್ಜೆಕ್ಟ್ ಗಳು same ಆಗಿದ್ದುದರಿಂದ ,ಮನೆಯಲ್ಲಿ ಇಬ್ಬರೂ Electronics ಸಬ್ಜೆಕ್ಟ್ ಗಳನ್ನು combined study ಮಾಡುತ್ತಿದ್ದೆವು.
ನಿಜ ಹೇಳ್ಲಾ.. ನೀನಿಲ್ಲದಿರುತ್ತಿದ್ದರೆ ನನಗೆ ಇಂಜಿನಿಯರಿಂಗ್ ಅಷ್ಟೊಂದು easy ಯೇ ಆಗಿರುತ್ತಿರಲಿಲ್ಲ. ಕೊನೆಗೂ ನನಗೆ VTU ನಿಂದ ಚಿನ್ನದ ಪದಕ ಬಂತು.ಅದಕ್ಕಾಗಿ Convocation ದಿನ ನನಗಿಂತಲೂ ಖುಷಿ ಪಟ್ಟಿದ್ದು ನೀನೇ. ನಿನ್ನ ಪಾಲಿಗೆ ಗೆಲುವು ಅಂದರೆ ಅದು ಬರೀ ನನ್ನ ಗೆಲುವೇ ಆಗಿತ್ತು ಅಲ್ವಾ ಪ್ರೇಮ್. ಹೇಳು ಪ್ರೇಮ್ ನೀನು ಯಾಕೆ ಅಷ್ಟೊಂದು ಒಳ್ಳೆಯವನಾಗಿದ್ದೆ.
ಪ್ರೇಮ್ ನಾನೊಂದು ವಿಷಯ ಹೇಳ್ಲಾ.. ನನಗೆ ನೆನಪಿದ್ದ ಹಾಗೆ ನಾವು ಇಬ್ಬರೂ ಯಾವತ್ತೂ ಪ್ರೀತಿಯ ವಿಷಯದ ಬಗ್ಗೆ ಚರ್ಚಿಸಿಯೇ ಇಲ್ಲ. ಆದರೆ ಅದೊಂದು ದಿನ ನಾನು ನಿನ್ನ ಮನೆಯ, ನಿನ್ನ ರೂಮಿನಲ್ಲಿ ಒಂದು ಪುಟ್ಟ ಬಾಕ್ಸ್ ನಲ್ಲಿ ನನ್ನಯ ಹಳೆಯ ಹೇರ್ ಬ್ಯಾಂಡ್,ತುಂಡಾಗಿದ್ದ ಗೆಜ್ಜೆ, ಕಾರಿಂಜ ಬೆಟ್ಟದಲ್ಲಿ ಸಿಕ್ಕಿದ್ದ ಮತ್ತು ನಾನು ನಿನಗೆ ಕೊಟ್ಟಿದ್ದ ಪುಟ್ಟ ನವಿಲು ಗರಿ, ನಾನು ಕೊಟ್ಟಿದ್ದ ರಾಧ ಕೃಷ್ಣ ಮೂರ್ತಿ, ನನ್ನ ಆಟೋಗ್ರಾಪ್ ಇರುವ "ಮೋಹನ ಮುರಳಿ" ಕೊಳಲು, ಹಾಗೂ ನನ್ನದೊಂದು ಚಿಕ್ಕ ಪೋಟೊ ನೋಡಿದೆ. ಆ ಫೋಟೋ ದ ಹಿಂದು ಗಡೆ ಹಾರ್ಟ್ ಶೇಪ್ ಬಿಡಿಸಿ ಅದರೊಳಗೆ ನೀನು " ಪ್ರೇಮ್ + ಪಲ್ಲವಿ = ಪ್ರೇಮ ಪಲ್ಲವಿ" ಎಂದು ಬರೆದಿದ್ದೆ.
ಪ್ರೇಮ್ ಆವತ್ತು ನನಗೆಷ್ಟು ಖುಷಿ ಆಗಿತ್ತು ಗೊತ್ತಾ.ಮನಸ್ಸು ಗರಿ ಬಿಚ್ಚಿ ಕುಣಿದಿತ್ತು. ಯಾಕೆಂದರೆ ನೀನು ಎಷ್ಟು ನನ್ನನ್ನು ಪ್ರೀತಿ ಮಾಡುತ್ತಿದ್ದೆಯೋ ಅದರ ಎರಡರಷ್ಟು ನಾನು ಅದಾಗಲೇ ಮಾಡಿದ್ದೆ.ಆದರೆ ಹೇಳುವ ಧೈರ್ಯ ನನಗೂ ಇರಲಿಲ್ಲ. ಎಷ್ಟಾದರೂ ನಾನು ಹುಡುಗಿ, ನೀನೇ ಹೇಳುವೆ ಒಂದು ದಿನ ಎಂದು ಕಾದಿದ್ದೆ.
ನಿನಗೆ ಗೊತ್ತಾ ನೀನು ಪೊಳಲಿ ಜಾತ್ರೆಯಲ್ಲಿ ತೆಗೆಸಿಕೊಟ್ಟಿದ್ದ ಆ ಪುಟ್ಟ ಕಾರು, ಉಡುಪಿ ಪರ್ಯಾಯ ದ ಆ ರಾಧಾಕೃಷ್ಣ ಮೂರ್ತಿ, ನಿನ್ನ ಶರ್ಟ್ ನ ಕೆಲವು ಬಟನ್ ಗಳು, ನೀನು ಕೊಟ್ಟಿದ್ದ 50 ಪೈಸೆ ಯ coin, ನೀನು ಶಾಲೆಯಲ್ಲಿ ಯ್ಯೂಸ್ ಮಾಡುತ್ತಿದ್ದ eraser ನನ್ನ ಬಳಿ ಇತ್ತು .ಅದು ಈಗಲೂ ನನ್ನ ಬಳಿ ಜೋಪಾನವಾಗಿಯೇ ಇದೆ! ಕೃಷ್ಣ ನ ಮೂರ್ತಿ ನ ದೇವರ ಕೋಣೆ ಸೇರಿದೆ.ಅವನಿಗೆ ನಿತ್ಯ ಪೂಜೆಯೂ ನಡೆಯುತ್ತಿದೆ.
ನೀನು ಮಾತ್ರ ಶಾಶ್ವತವಾಗಿ ನನ್ನ ಹೃದಯದ ಕೋಣೆ ಸೇರಿದ್ದಿಯ. ಅಲ್ಲಿ ನೀನೇ ದೇವರು... ನಿನಗೆ ಮಾತ್ರ ಪೂಜೆ..
ಇಲ್ಲೆ ಮಂಗಳೂರಿನಲ್ಲಿಯೇ M.Tech ಮಾಡಿ PhD ಮಾಡು ಎಂದು ತಂದೆ ಹೇಳುತ್ತಿದ್ದರು. ಆದರೆ ನನಗೆ ಚಿಕ್ಕಂದಿನಿಂದಲೂ ಇದ್ದದ್ದು ಆಸೆ ಒಂದೇ. IIT ಅಥವಾ IISC ಯಲ್ಲಿ ಇಂಜಿನಿಯರಿಂಗ್ ಮಾಡ್ಬೇಕು. PG ಯನ್ನು US ಗೆ ಹೋಗಿ MIT(Massachusetts Institute of Technology)
ಯಲ್ಲಿಯೇ ಮಾಡಬೇಕು. MIT ಯಲ್ಲಿ MS ನನ್ನ ultimate dream ಆಗಿತ್ತು.ನಿನಗೂ ಗೊತ್ತು ನನ್ನ ತಂದೆ N.I.T.K ಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದವರು. ಹಾಗಾಗಿಯೇ ಏನೋ ನಾನು ಕೂಡ ತುಂಬಾ ಡೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದೆ.
ಆದರೆ ನಿನಗೇ ಗೊತ್ತು ಕಾರಣಾಂತರಗಳಿಂದ ನನಗೆ ಪಿ.ಯು.ಸಿ ಆದ ನಂತರ IIT ಗೆ JEE ಬರೆಯಲು ಆಗಲೇ ಇಲ್ಲ. ಅದು ಅಲ್ಲದೇ ಆವಾಗ ನಾನು ಕಲಿಯುವುದರಲ್ಲಿಯೂ ಕೂಡ ಅಷ್ಟೇನೂ ಹುಷಾರ್ ಇರಲಿಲ್ಲ. ಅದಕ್ಕೆ IIT ಯ ಆಸೆಯನ್ನೇ ಬಿಟ್ಟಿದ್ದೆ. ಆದರೆ ಯಾವಾಗ ಇಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲ್ ಬಂತೋ ನನ್ನ ಆಸೆಗಳಿಗೆ ಮರು ಜೀವ ಬಂತು. MIT ಗೆ ಸೇರಲು GRE ,TOEFL ಹೀಗೆ ಎಲ್ಲಾ
Entrance Exam ಕೂಡ ಬರ್ದೆ. ಅದೇ ಕಾಲೇಜಿನಲ್ಲಿ ಸೀಟು ಕೂಡ ಸಿಕ್ಕಿತು.
US ಗೆ ಹೋಗುವ ದಿನದವರೆಗೂ ಕಾದಿದ್ದೆ, ನೀನು ಬರ್ತಿಯಾ ನಿನ್ನ ಪ್ರೀತಿ ಬಗ್ಗೆ ಹೇಳ್ತಿಯಾ ಅಂತ. ಆದರೆ ನೀನು ಬಂದಿದ್ದೆ, ಏರ್ಪೊಟ್ ವರೆಗೆ, ನನ್ನನ್ನು ಬೀಳ್ಕೊಡಲು. ನಿನ್ನ ಪ್ರೀತಿಯ ಬಗ್ಗೆ ಒಂದೂ ಮಾತೂ ಹೇಳಲೆ ಇಲ್ಲ ನೀನು . ಹೇಗೆ ಹೇಳಬಲ್ಲೆ ನೀನು ಪ್ರೇಮ್, ನನ್ನ ಇಷ್ಟವೇ ನಿನ್ನ ಇಷ್ಟ ಆಗಿರುವಾಗ ನೀನು ಹೇಗೆ ತಾನೆ ನಾನು MS ಮಾಡಲು ಹೋಗುವುದನ್ನು ತಡೆದು ನಿಲ್ಲಿಸಬಲ್ಲೆ ಅಲ್ಲಾ ಪ್ರೇಮ್. ದೇವರಂತಹ ಮನುಷ್ಯ ಅಂತ ಕೇಳಿದ್ದೆ, ಆದರೆ ಅದನ್ನು ನಾನು ನಿನ್ನಲ್ಲಿ ನೋಡಿದ್ದೆ.
ಕೆಲವೊಮ್ಮೆ ನನಗೂ,ಆವತ್ತು ನಾನು ತುಂಬಾನೇ ಸ್ವಾರ್ಥಿ ಆಗಿದ್ದೆ ಅಂತ ಅನಿಸುತ್ತಿತ್ತು. ನಾನು ನಿನ್ನನ್ನು ಬಿಟ್ಟು ಒಬ್ಬಳೇ US ಗೆ ಬರಬಾರದಿತ್ತು ಅಂತ ತುಂಬಾ ಸಲ ಅನಿಸಿದೆ. chase the dream ಅಂತಾರಲ್ಲ, ಅದನ್ನು ಹುಡುಕಿಕೊಂಡು ನಾನು US ಗೆ ಹೋಗಿದ್ದೆ. ಆದರೆ ನೀನೆ ನನ್ನ ಡ್ರೀಮ್, ಲೈಫ್, ಸರ್ವಸ್ವ ಎಂದು ನನಗೆ ಆವತ್ತೆ ಗೊತ್ತಾಗಿದ್ದರೆ, ನಾನು ಯಾವತ್ತೂ ಮಂಗಳೂರು ಬಿಟ್ಟು US ಗೆ ಬರುತ್ತಿರಲಿಲ್ಲ. ಆದರೆ ಆ ಸತ್ಯ ನನಗೆ ಅರಿವಾಗಲು ತುಂಬಾ ಸಮಯ ಬೇಕಾಯಿತು.
US ಗೆ ಬಂದಾದ ಮೇಲೆ, ಅಂತು ಇಂತು ಕೊನೆಗೂ ಯಶಸ್ವಿಯಾಗಿ MS ಮುಗಿಸಿದೆ. ಅಲ್ಲೇ ಕೆಲಸವೂ ಸಿಕ್ಕಿತು, ದೊಡ್ಡ ಅಂಕೆಯ ಸಂಬಳ.ಸ್ಟಡಿ ಮಾಡ್ತಾ ಇರುವಾಗ ನೀನು ಒಮ್ಮೊಮ್ಮೆ ಕಾಲ್ ಮಾಡ್ತ ಇದ್ದೆ.ನಾನು ಕೂಡ ಮಾಡುತ್ತಿದ್ದೆ.
ಆಮೇಲೆ ನನಗೆ ಕೆಲಸ ಸಿಕ್ಕಿದ ಮೇಲೆ, ಅದು ಯಾಕೋ ನೀನು ಕಾಲ್ ಮಾಡುವುದೇ ನಿಲ್ಲಿಸಿಬಿಟ್ಟೆ.ನಾನು ಕೂಡ ಬ್ಯುಸಿ ಆಗಿದ್ದೆ, ಆದರೂ ಇದರ ಮಧ್ಯೆ ನೀನು ನೆನಪಾಗುತ್ತಿದ್ದೆ ಪ್ರೇಮ್.ಆಮೇಲೆಯೂ ಒಂದೆರಡು ಬಾರಿ ನಾನು ಕಾಲ್ ಮಾಡಿದ್ದೆ ಕೂಡ, ಆದರೂ ನೀನು ರಿಸಿವ್ ಮಾಡಿರಲಿಲ್ಲ. ಅದರ ನಂತರ ನಾನು ಕೂಡ ನಿನ್ನನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ. ನಿನಗೆ ಅನಿಸಬಹುದು ನಾನು ನಿನ್ನನ್ನು ಸಂಪೂರ್ಣ ಮರೆತಿದ್ದೆನೆ ಎಂದು. ಆದರೆ ಕಾರಣ ಬೇರೆಯೇ ಇತ್ತು ಪ್ರೆಮ್ !
ಒಂದು ದಿನ ನೀನು ಎದುರು ಸಿಕ್ಕಿದಾಗ ನಿನಗೆ ಎಲ್ಲವನ್ನೂ ಹೇಳುತ್ತೆನೆ!
ಯಾವಾಗಲೂ ನಾನು ಕಾಲ್ ಮಾಡದಿದ್ದರೂ ನೀನೇ ಕಾಲ್ ಮಾಡಿ ಮಾತಾಡಿಸುವವನು, ಅಂತಹ ನೀನು ಒಮ್ಮೆಲೇ ಯಾಕೆ ಕಾಲ್ ಮಾಡುವುದನ್ನು ನಿಲ್ಲಿಸಿಬಿಟ್ಟೆ ಎಂಬುವುದು ನನಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿತ್ತು! ಪ್ರೇಮ್ ನಾನು ಮರೆತು ಹೋದೆನಾ?
US ಗೆ ಹೋದ ಏಳು ವರ್ಷಗಳ ನಂತರ ಮೊನ್ನೆ ಊರಿಗೆ ಬಂದೆ. ಮನೆಗೆ ಬಂದಾಗ ನೀನು ಇರುತ್ತಿ ಅಂದುಕೊಂಡೆ, ಆದರೆ ಅಲ್ಲಿ ನೀನಿರಲಿಲ್ಲ. ಅಮ್ಮನಿಗೆ ಕೇಳಿದೆ, ಪ್ರೆಮ್, ಆಂಟಿ, ಅಂಕಲ್ ಎಲ್ಲಾ ಎಲ್ಲಿ? ಮನೆ ಖಾಲಿಯಾಗಿದೆಯಲ್ಲಾ ಎಂದು.
ಅಮ್ಮ ಹೇಳಿದರು 5 ವರ್ಷಗಳ ಹಿಂದೆಯೇ ನೀವು ಮನೆಬಿಟ್ಟು ಹೋಗಿದ್ದಿರಿ. ಈಗ ಮಣಿಪಾಲ ದಲ್ಲಿ ಇದ್ದಿರಿ ಎಂದು. ಯಾಕೆ? ಎಂದು ಕೇಳಿದೆ. ಅಂಕಲ್ ಗೆ ಮಾಡುತ್ತಿದ್ದ ಕೆಲಸದಲ್ಲಿ ಮಣಿಪಾಲ ಕ್ಕೆ transfer ಆಗಿದೆ. ಅದಕ್ಕಾಗಿ ಎಲ್ಲರೂ ಮಣಿಪಾಲ ಕ್ಕೆ ಶಿಪ್ಟ್ ಆಗಿದ್ದಾರೆ ಎಂದು ಅಮ್ಮ ಹೇಳಿದಳು.
ನೀನಿಲ್ಲದ ನಮ್ಮ ಮನೆಯ ವಠಾರ, ಈ ಮಂಗಳೂರು ಎಲ್ಲವೂ ಬೋರ್ ಅನಿಸತೊಡಗಿತು.ನಿನ್ನನ್ನು ಹೇಗಾದರೂ ಮಾಡಿ ಮೀಟ್ ಮಾಡಲೇಬೇಕು,ನಿನ್ನ ಜೊತೆ ಮಾತಾಡಲೇಬೇಕು ಎಂದು ಅನಿಸಿತು. ಈ ಏಳು ವರ್ಷಗಳಲ್ಲಿ ಅದರಲ್ಲೂ ಕಳೆದ ಈ 4 ವರ್ಷ ಗಳಲ್ಲಿ ನೀನು ಹೇಗಿದ್ದಿ, ಏನು ಮಾಡುತ್ತಿದ್ದೆ ಎಂದು ನನಗೆ ಒಂದೂ ಗೊತ್ತಿರಲಿಲ್ಲ. ಕೊನೆಗೂ ಹೇಗೊ ನಿನ್ನ ಅಡ್ರೆಸ್ ಸಂಪಾದಿಸಿದೆ.
ಮಣಿಪಾಲ ದ ನಿಮ್ಮ ಮನೆಗೆ ಬಂದಾಗ ನಿಮ್ಮ ಮನೆಗೆ ಬೀಗ ಹಾಕಿತ್ತು. ಪಕ್ಕದ ಮನೆಯವರಲ್ಲಿ ವಿಚಾರಿಸಿದಾಗ ನಿನ್ನನ್ನು ಕೆ.ಎಂ.ಸಿ ಆಸ್ಪತ್ರೆಯಲ್ಲಿ admit ಮಾಡಿದ್ದಾರೆ ಎಂದು ತಿಳಿಯಿತು. ಗಾಬರಿಗೊಂಡೆ. ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಓಡಿ ಓಡಿ ಬಂದೆ. ಬರುವಾಗಲೂ ಆ ಕೃಷ್ಣ ನನ್ನು ಎಷ್ಟು ಪ್ರಾರ್ಥಿಸಿಕೊಂಡೆ ಗೊತ್ತಾ, ಹೇಯ್ ಕೃಷ್ಣಾ, ನನ್ನ ಪ್ರೇಮ್ ಗೆ ಏನು ಮಾಡಬೇಡ ಕಣೋ ಪ್ಲಿಸ್.. ಎಂದು.
ಆಸ್ಪತ್ರೆಯಲ್ಲಿ ಆಂಟಿ, ಅಂಕಲ್ ಇಬ್ಬರೂ ಇದ್ದರು. ಆದರೆ ಇಬ್ಬರ ಮುಖದಲ್ಲಿ ಯಾವುದೇ ಕಳೆ ಇರಲಿಲ್ಲ. ನನ್ನ ಹೃದಯದ ಬಡಿತ ಇನ್ನೂ ಜೋರಾಗಿತ್ತು.
ಆಂಟಿ " ಪ್ರೇಮ್ ಗೆ ಏನಾಯಿತು" ಎಂದು ಕೇಳಿದೆ.
"ಏಳು ವರ್ಷಗಳ ನಂತರ ಬಂದಿದ್ದಿಯಮ್ಮ ಪಲ್ಲವಿ, ಎಷ್ಟು ಬದಲಾಗಿ ಹೋಗಿದ್ದಿ ಕಣೆ, ಒಮ್ಮೆಲೇ ಗುರುತು ಕೂಡ ಸಿಗಲ್ಲ. ಹೇಳು, ಹೇಗಿದ್ದಿಯಾ, ಹೇಗಿದೆ ಅಮೆರಿಕಾ, ಲೈಫ್, ಕೆಲಸ ಎಲ್ಲಾ.. "
ನನಗೆ ಸಿಟ್ಟು ಬಂತು" ಆಂಟಿ... ಮೊದಲು ಪ್ರೇಮ್ ಗೆ ಏನಾಗಿದೆ ಎಂದು ಹೇಳಿ"ಅಂದೆ.
"ಬಾ ಹೊರಗೆ ಗಾರ್ಡನ್ ನಲ್ಲಿ ಕುಳಿತುಕೊಂಡು ಮಾತಾಡುವ "ಅಂದರು ಆಂಟಿ.
ಗಾರ್ಡನ್ ನಲ್ಲಿ ಕುಳಿತುಕೊಂಡೆವು." ಆಂಟಿ ಹೇಳಿ.. " ಅಂದೆ.
" ಪ್ರೇಮ್ ಈಗ ಯಾರ ಜೊತೆನೂ ಮಾತಾಡಲ್ಲ ಪಲ್ಲವಿ..!! " ಅಂದರು.
" ಯಾಕೆ ಆಂಟಿ ಏನಾಯಿತು.. " ಅಂದೆ.
" ಇಲ್ಲಮ್ಮ, ಅವನು ಈಗ ಯಾರ ಜೊತೆನೂ ಮಾತಾಡುವ ಸ್ಥಿತಿಯಲ್ಲಿ ಇಲ್ಲ. ಅವನೀಗ ಕೋಮಾ ದಲ್ಲಿ ಇದ್ದಾನೆ!!
ಯಾರೊಂದಿಗೂ ಮಾತಾಡಲ್ಲ, ಯಾರನ್ನೂ ಗುರುತು ಹಿಡಿಯಲ್ಲ.. ಕೇವಲ ಉಸಿರಾಡ್ತಾನೆ ಅಷ್ಟೇ... " ಅಂದರು.
ಕಣ್ಣಂಚಲ್ಲಿ ನೀರು ಉಕ್ಕಿ ಬಂತು.
" ಇದೆಲ್ಲ ಹೇಗೆ ಆಯಿತು ಆಂಟಿ " ಅಂದೆ.
" ಅದೊಂದು ದಿನ ಪ್ರೇಮ್ ಹೋಗುತ್ತಿದ್ದ ಕಾರ್ ಗೆ ಆಕ್ಸಿಡೆಂಟ್ ಆಯಿತು ಕಣಾಮ್ಮ,ಪ್ರೆಮ್ ತಲೆಗೆ ಬಲವಾದ ಏಟು ಬಿತ್ತು. ಪ್ರೆಮ್ ಬದುಕಿದ್ದೆ ಜಾಸ್ತಿ. ಆದರೆ ದೇವರು ಅದೆಂತಾ ಕ್ರೂರಿ, ಪ್ರೇಮ್ ನನ್ನು ಶಾಶ್ವತವಾದ ಕೋಮಕ್ಕೆ ತಳ್ಳಿಬಿಟ್ಟ. ಈ ರೀತಿಯಾಗಿ ಅವನನ್ನು ನರಳಿಸುವುದಕ್ಕಿಂತ ಅವತ್ತೆ ಆ ಭಗವಂತ ಅವನ ಪ್ರಾಣವನ್ನೂ ಕೂಡ ಕಿತ್ತುಕೊಳ್ಳಬಾರದಿತ್ತೆ.. " ಎಂದು ಜೋರಾಗಿ ಗಂಟಲು ಹರಿಯುವಂತೆ ಅತ್ತು ಬಿಟ್ಟರು ಆಂಟಿ.
ನನಗೆ ಮಾತು ಹೊರಡಲಿಲ್ಲ ಪ್ರೇಮ್. ಕಣ್ಣಲ್ಲಿ ನೀರು ದಾರಕಾರ, ನದಿಯಂತೆ ಹರಿಯಿತು.
ಎಷ್ಟೊ ಹೊತ್ತಿನವರೆಗೆ ಹಾಗೇ ಇದ್ದೆ. ಬಿಕ್ಕಿ ಬಿಕ್ಕಿ ಅತ್ತೆ.
" ಆಂಟಿ, ಡಾಕ್ಟರ್ ಏನು ಹೇಳಿದರು, ಮೊದಲಿನ ಹಾಗೆ ಆಗುವ ಚ್ಯಾನ್ಸ್ ಚೂರು ಇಲ್ಲವಾ " ಎಂದು ಕೇಳಿದೆ.
" ಚಾನ್ಸ್ ತುಂಬಾನೇ ಕಡಿಮೆ ಇದೆ, 99% ಹಿಂದಿನ ಹಾಗೆ ಆಗಲೂ ಸಾದ್ಯವೇ ಇಲ್ಲ, ಬದುಕಿರುವ ವರೆಗೂ ಹೀಗೆಯೇ ಇರಬೇಕಾಗುತ್ತದೆ ಎಂದು ಡಾಕ್ಟರ್ ಹೇಳಿದ್ದಾರಮ್ಮ "ಅಂದರು.
" ಈ ತರಹ ಕೋಮ ಕ್ಕೆ ಜಾರಿ ಎಷ್ಟು ವರ್ಷ ಆಯಿತು" ಆಂಟಿ ಅಂದೆ.
"ನಾಲ್ಕು ವರ್ಷ.. !! " ಅಂದರು.
ಹೃದಯ ಕ್ಕೆ ಮುಳ್ಳು ಚುಚ್ಚಿದಂತಾಯಿತು.
ಅದ್ಯಾಕೆ ಪ್ರೇಮ್ ನನಗೆ ಕಳೆದ ನಾಲ್ಕು ವರ್ಷಗಳಿಂದಲೂ ಮಾತಾಡಿಸಿಲ್ಲ ಎಂದು ಈಗ ಗೊತ್ತಾಯಿತು, ಗೊತ್ತಾಗಿ ಮತ್ತೊಮ್ಮೆ ಕಣ್ಣೇರು ದಾರಾಕಾರ ವಾಗಿ ಹರಿಯಿತು.
" ಮತ್ತೆ ಯಾಕೆ ಆಂಟಿ.. ಒಮ್ಮೆಯೂ ನನಗೆ ಈ ವಿಷಯ ತಿಳಿಸಲೇ ಇಲ್ಲ ನೀವು " ಅಂದೇ ಜೋರಾಗಿ ಅಳುತ್ತಾ.
" ಈ ವಿಷಯ ನಿನಗೆ ಗೊತ್ತಾದರೆ ಎಷ್ಟು ಬೇಜಾರು ಆಗಬಹುದು ಎಂದು ನನಗೂ ಗೊತ್ತು ಪಲ್ಲವಿ, ಅಮೇರಿಕಾದಲ್ಲಿರುವ ನಿನಗೆ ನೋವು ಕೊಡಲು ಯಾಕೋ ಮನಸ್ಸೇ ಬರಲಿಲ್ಲ ಅಮ್ಮಾ , ನಿಮ್ಮ ಅಪ್ಪ ಅಮ್ಮನಿಗೂ ನಿನಗೆ ಈ ವಿಷಯ ಹೇಳಬೇಡಿ ಎಂದು ನಾನೇ ಹೇಳಿದೆ" ಎಂದರು.
ಅಯ್ಯೋ ನಾನೆಷ್ಟು ಪರಮ ಪಾಪಿ ಎಂದು ಅವತ್ತು ಅನಿಸಿತು ಪ್ರೇಮ್. ನನಗೆ ಮುಳ್ಳು ಚುಚ್ಚಿದಾಗಲೂ ನೋವು ಅನುಭವಿಸುತ್ತಿದ್ದವ ನೀನು ..ಆದರೆ ನಿನಗೆ ಈ ರೀತಿಯಾಗಿ ಕಳೆದ ನಾಲ್ಕು ವರ್ಷಗಳಿಂದ ಮಲಗಿಯೇ ಇರುವಾಗ, ಕನಿಷ್ಠ ಪಕ್ಷ ನಿನ್ನ ಸೇವೆ ಮಾಡುವ ಭಾಗ್ಯ ವು ಕೂಡ ನನಗೆ ಇಲ್ಲವಾಗದೇ ಹೋಯಿತ್ತಲ್ಲ ಪ್ರೇಮ್.
I am sorry prem,ಯಾಕೋ ಆ ಸ್ಥಿತಿಯಲ್ಲಿ ನಿನ್ನನ್ನು ನೋಡಲು ನನಗೆ ಮನಸ್ಸೇ ಬರಲಿಲ್ಲ . ನನ್ನ ಕಣ್ಣ ಮುಂದೆ ಇದ್ದ ಪ್ರೇಮ್ ನ ಚಿತ್ರವೇ ಬೇರೆ, ಅವನು ಚಡ್ಡಿ ಹಾಕಿಕೊಂಡು ಶಾಲೆಗೆ ನನ್ನ ಜೊತೆ ಬರುತ್ತಿದ್ದ, ಕೊಳಲು ಬಾರಿಸುತ್ತಿದ್ದ, ಸಹಾಯ ಕೇಳುವ ಮೊದಲೇ ಸಹಾಯ ಮಾಡುತ್ತಿದ್ದ, ಒಮ್ಮೆಯೂ ಬಾಯಿ ಬಿಡದೇ ಹೇಳಿದ್ದರೂ ನನ್ನನ್ನು ಈ ಜಗತ್ತಿನಲ್ಲಿ ಯಾರೂ ಪ್ರೀತಿಸದಷ್ಟು ಅಪಾರವಾಗಿ ಪ್ರೀತಿಸುತ್ತಿದ್ದ, ನಿಜ ಹೇಳಬೇಕೆಂದರೆ ಆ
ರಾಧೆಯ ಕೃಷ್ಣ ನಂತಿದ್ದ ನನ್ನ ಪ್ರೇಮ್..
ಆ ಚಿತ್ರ ನನ್ನಿಂದ ಅಳಿಸಿ ಹೋಗಬಾರದು. ಶಾಶ್ವತವಾಗಿ ಅದೇ ಇರಬೇಕೆಂದು ಅಂದು ಕೊಂಡು, ಈಗ ಇರುವ ಸ್ಥಿತಿಯಲ್ಲಿ ನಿನ್ನನ್ನು ನೋಡದಿರಲು ನಿರ್ಧರಿಸಿದೆ. ಮೆಲ್ಲಗೆ ಕಣ್ಣು ಒರೆಸಿಕೊಂಡು..
"ಆಂಟಿ ನಾನಿನ್ನು ಬರುತ್ತೆನೆ.. "ಎಂದು ಸೀದಾ ಪಾರ್ಕ್ ಮಾಡಿದ್ದ ನನ್ನ ಕಾರು ಕಡೆಗೆ ನಡೆದೆ. ಆಂಟಿ ಯೂ ನನ್ನ ಹಿಂದೆಯೇ ಬಂದಿದ್ದರು.
ಕಾರಿನಲ್ಲಿ ಕುಳಿತುಕೊಂಡಾಗ, ನನ್ನ ಬಳಿ ಬಂದ ಆಂಟಿ ಒಂದು ಮಾತು ಹೇಳಿದರು.
" ಪಲ್ಲು ನೀನಂದರೆ ಪ್ರೇಮ್ ಗೆ ತುಂಬಾ ಇಷ್ಟ ಕಣಾಮ್ಮ,ಆಕ್ಸಿಡೆಂಟ್ ಆಗಿ ಆಸ್ಪತ್ರೆ ಗೆ ತರುವಾಗ ಕೂಡ ಅವನ ಬಾಯಿಯಲ್ಲಿ ಬಂದ ಶಬ್ದ ಒಂದೇ.ಅದು ನಿನ್ನ ಹೆಸರು .ಜೋರಾಗಿ ಒಂದು ಬಾರಿ ಕನವರಿಸಿದ್ದ 'ಪಲ್ಲು..ಪಲ್ಲು..' ಎಂದು " ಅಂದರು.
ಕಣ್ಣೇರಿಗೆ ತಡೆಯೊಡ್ಡುವ ಯಾವ ಅಣೆಕಟ್ಟು ನನ್ನ ಬಳಿ ಇರಲಿಲ್ಲ, ಅಲ್ಲೇ ಕಾರಿನಲ್ಲಿಯೇ ಕಣ್ಣು ಮುಚ್ಚಿ ಮತ್ತೆ ಧೋ ಎಂದು ಅತ್ತೆ..
ಅತ್ತು ಅತ್ತು ಸ್ವರ ಬಿದ್ದು ಹೋಗಿತ್ತು. ಆಂಟಿ ಗೆ ಬಾಯ್ ಹೇಳಿದವಳು ಮಣಿಪಾಲ ದಿಂದ ನೇರವಾಗಿ ಮಂಗಳೂರಿನ ನಮ್ಮ ಮನೆಗೆ ಬಂದೆ.
ಮನೆಯಲ್ಲಿ, ಮನಸಲ್ಲಿ ಬರೀ ಸ್ಮಶಾನ ಮೌನ ತುಂಬಿತ್ತು.
ನಾನು ನಿನ್ನಲ್ಲಿ ತುಂಬಾ ಮಾತಾಡಬೇಕಿತ್ತು ಪ್ರೇಮ್. ಅದಕ್ಕಾಗಿಯೇ US ನಿಂದ ಮಂಗಳೂರಿಗೆ ಬಂದಿದ್ದೆ. ನಿನ್ನಲ್ಲಿ ಹಲವಾರು ವಿಷಯ ಹೇಳಬೇಕಿತ್ತು.ಮನ ಬಿಚ್ಚಿ ಮಾತಾಡಬೇಕಿತ್ತು. ಆದರೆ ನೋಡು ವಿಧಿಯ ಲೀಲೆ ಯೇ ಬೇರೆ.
ನಿನಗೆ ಬಾಯಿ ಬಿಟ್ಟು ಹೇಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಈ ಪತ್ರ ಬರೆಯುತ್ತಿದ್ದೆನೆ.
ಪ್ರೇಮ್ ನಿನಗೆ ಒಂದು ವಿಷಯ ಹೇಳ್ಲಾ..ನಾನು ನಿನ್ನನ್ನು ತುಂಬಾನೇ ಪ್ರಿತಿಸಿದ್ದೆ, ನಿನಗೆ ಅದರ ಕಲ್ಪನೆಯೂ ಇಲ್ಲ. ನಿನ್ನಂತಹ ಹುಡುಗ ಸಿಕ್ಕಿದ್ದು ನನ್ನ ಅದೃಷ್ಟ.ಎಲ್ಲಾ ಹುಡುಗಿಯರು ನಿನ್ನಂತಹ ಹುಡುಗನನ್ನೆ ಬಯಸುತ್ತಾರೆ. ನೀನು ನಿನ್ನ ಪ್ರೀತಿಯನ್ನ ಹೇಳುವುದಿಲ್ಲ ಎಂದು ನನಗೆ ಗೊತ್ತಿತ್ತು, ಅದಕ್ಕೆ ನಾನೇ ಹೇಳಬೇಕೆಂದು ಇದ್ದೆ. ಆದರೆ ಆ ಭಾಗ್ಯ ಕೂಡ ನನ್ನ ಹಣೆಬರಹದಲ್ಲಿ ಇರಲಿಲ್ಲ ಪ್ರೇಮ್!
ಅಮೆರಿಕಾಗೆ ಬಂದ ಮೇಲೆ MS ಮುಗಿಸಿದ್ದೆ. ಅಲ್ಲಿಯ ತನಕ ನಿನ್ನ ಸಂಪರ್ಕವೂ ಇತ್ತು ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಕೆಲಸ ಕೂಡ ಸಿಕ್ಕಿತು. ಬಹುಶಃ ಅದೇ ಟೈಂ ಅಲ್ಲಿ ನಿನಗೆ ಆಕ್ಸಿಡೆಂಟ್ ಆಗಿದ್ದು ಅಂತ ಅಂದುಕೊಳ್ಳುತ್ತೆನೆ.
ಒಂದು ದಿನ ಆಫೀಸ್ ನಲ್ಲಿ ಕೆಲಸ ಮಾಡುತ್ತಿರುವಾಗ ಬಾಯಿ ಯಲ್ಲಿ ರಕ್ತ ಬಂತು.
ಭಯ ಆಗಿ ಅಮ್ಮನಿಗೆ ಕಾಲ್ ಮಾಡಿದೆ. ಏನೋ ಉಷ್ಣ ಆಗಿರಬೇಕು ಎಂದು ಮನೆ ಮದ್ದು ಹೇಳಿದಳು ಅದನ್ನೇ ಮಾಡಿದೆ.
ಆದಾದ ಒಂದು ತಿಂಗಳ ನಂತರ ಮತ್ತೊಮ್ಮೆ ಬ್ಲಡ್ ಬಂತು.
ಭಯ ಜಾಸ್ತಿ ಆಗಿ ಆಸ್ಪತ್ರೆಗೆ ಹೋದೆ.
ಸ್ಕಾನಿಂಗ್, ಎಂಡೋಸ್ಕೊಪಿ, ಬಯಾಪ್ಸಿ ಎಲ್ಲಾ ಮಾಡಿದರು,ರಿಪೊರ್ಟ್ ಬಂದಾಗ ಪುನಃ ಆಸ್ಪತ್ರೆಗೆ ಓಡಿದೆ.
ಒಬ್ಬಳೇ ಬಂದಿದ್ದ ನನ್ನನ್ನು ನೋಡಿ ಡಾಕ್ಟರ್, ಮನೆಯವರು ಬೇರೆ ಯಾರು ಬರಲಿಲ್ಲವಾ ಎಂದು ಕೇಳಿದರು.
"No problem ಡಾಕ್ಟರ್ ಏನು ವಿಷಯ ಹೇಳಿ " ಅಂದೆ
ಪ್ರೇಮ್, ನನ್ನ ರೋಗಕ್ಕೆ ಡಾಕ್ಟರ್ ಚಂದದೊಂದು ಹೆಸರು ಕೊಟ್ಟಿದ್ದರು, ಏನು ಗೊತ್ತಾ carcinoma. ಅಂದರೆ ಅನ್ನನಾಳದ ಭಾಗದಲ್ಲಿ ಆಗಿದ್ದ ಕ್ಯಾನ್ಸರ್!!
ನನಗೆ ಹೆದರಿಕೆ ಆಗಲಿಲ್ಲ ಪ್ರೇಮ್, ಡಾಕ್ಟರ್ ಗೆ ಕೇಳಿದೆ "ಎಷ್ಟನೇ ಸ್ಟೇಜ್ ಡಾಕ್ಟರ್.. "
" ಮೂರನೇ ಸ್ಟೇಜ್ " ಅಂದರು.
" ಇನ್ನು ನಾನು ಎಷ್ಟು ವರ್ಷ ಬದುಕಬಹುದು ಡಾಕ್ಟರ್ " ಕೇಳಿದೆ.
" ಹೆಚ್ಚೆಂದರೆ ಮೂರು ವರ್ಷ.. ಅಮೇರಿಕಾದಲ್ಲಿರುವಂತಹ ಬೆಸ್ಟ್ ಮೆಡಿಕಲ್ treatment ತಂಗೊಂಡರೆ ಹೆಚ್ಚು ಕಡಿಮೆ ಮೂರು ನಾಲ್ಕು ವರ್ಷದವರೆಗೂ ಬದುಕಬಹುದು " ಅಂದರು.
ರಿಪೊರ್ಟ್ ತಗೊಂಡು ಮನೆಗೆ ಬಂದವನೇ ಅಮ್ಮನಿಗೆ ಕಾಲ್ ಮಾಡಿದೆ. ವಿಷಯ ತಿಳಿಸಿದೆ. ಅಮ್ಮ ಗೋಳೋ ಎಂದು ಅತ್ತಳು.ಮಗುವಿನಂತೆ ಅಳುತ್ತಿದ್ದ ಅಮ್ಮನಿಗೆ ನಾನೇ ಸಮಾಧಾನ ಮಾಡಿದೆ.
"ನೋಡು ಅಮ್ಮ, ಈಗ ಯುವರಾಜ್ ಸಿಂಗ್ ಗೂ ಕ್ಯಾನ್ಸರ್ ಇತ್ತು ಬದುಕ್ಲಿಲ್ಲವಾ, ಟೆನ್ಶನ್ ಮಾಡಬೇಡ ನನಗೆ ಏನೂ ಆಗಲ್ಲ"
"ಕ್ಯಾನ್ಸರ್ ಸ್ವತಃ ಸಿ.ಎಂ ಆದ ನವೀನ್ ಪಾರಿಕ್ಕರ್ ಗೂ ಇತ್ತು ಅಲ್ಲಾ ಪಲ್ಲು, "ಅಂತ ಪುನಃ ಜೋರಾಗಿ ಅತ್ತಳು.
ಅವಳ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ.
ಆದರೂ ಅವಳನ್ನು ನಾನೇ ಸಮಾಧಾನ ಪಡಿಸಿದೆ.
"ಅಮ್ಮಾ ಏನು ಟೆನ್ಶನ್ ಮಾಡ್ಬೇಡ, ನಾನು ಗುಣಮುಖವಾಗಿಯೇ ಮನೆಗೆ ಬರುತ್ತೆನೆ. ನೀನು ಅಪ್ಪ ಕೃಷ್ಣ ನನ್ನು ಪ್ರಾರ್ಥಿಸಿ. ಅವನ ಧಯೆ ಇದ್ದರೆ ಏನೂ ಆಗುವುದಿಲ್ಲ " ಅಂದೆ.
ಎಷ್ಟಾದರೂ ತಾಯಿ ಕರುಳು, ಏನು ಮಾಡುತ್ತಾಳೆ ಹೇಳು ಪಾಪ, ನನಗಾಗಿ ಅಳುವವಳು ಅವಳೊಬ್ಬಳೇ ಅಲ್ಲವೇ.ನೀನು ಹೇಗೋ ಒಬ್ಬನೇ ಮಗನೋ ಹಾಗೆ ನಾನು ಕೂಡ ಒಬ್ಬಳೇ ಮಗಳು,ಎಷ್ಟು ನೊಂದಿರಬೇಡ ಜೀವ. ಕೊನೆಗೂ " ಹೂಂ...ಏನಾದರೂ ಮಾಡು ಆದರೆ ಗುಣ ಆಗಿ ಬೇಗ ಬಾ ಪಲ್ಲು"ಅಂದಳು.
" ಅಮ್ಮಾ... " ಅಂದೆ,
" ಏನು.. " ಅಂತ ಕೇಳಿದಳು.
" ಯಾವ ಕಾರಣಕ್ಕೂ ಈ ವಿಷಯವನ್ನು ಪ್ರೇಮ್ ಗೆ ಮಾತ್ರ ಹೇಳಬೇಡ ಅಮ್ಮ, ಗೊತ್ತಾದ್ರೆ ಪಾಪ ತುಂಬಾನೇ ನೊಂದ್ಕೊತ್ತಾನೆ, ಹೇಳ್ಬೇಡ ಅಮ್ಮಾ.. " ಅಂದೆ.
ಅಮ್ಮ ಅಳುತ್ತಲೇ " ಆಯ್ತು " ಅಂದಳು.
ಪ್ರೇಮ್ ಆ ನಾಲ್ಕು ವರ್ಷ ನಿನ್ನನ್ನು ನಾನು ಸಂಪರ್ಕಿಸದೇ ಇದ್ದದ್ದು ಯಾಕೆ ಅಂತ ಈಗ ಗೊತ್ತಾಯಿತಾ!
ನಿನ್ನಂತಹ ಗಂಡ ಸಿಗಬೇಕಾದರೆ ಪುಣ್ಯ ಮಾಡಬೇಕು ಪ್ರೇಮ್, ಆದರೆ ನಾನು ನತದೃಷ್ಟವಂತೆ. ದೇವರು ನನಗೆ ಆ ಭಾಗ್ಯ ಕರುಣಿಸಿಲ್ಲ! ಅದಕ್ಕಾಗಿಯೇ ಸಾಯುವ ಹೊಸ್ತಿಲಲ್ಲಿ ಇದ್ದ ನಾನು, ನಿನ್ನ ಬಾಳಿಗೆ ಬಂದು ನಿನ್ನ ಬಾಳನ್ನು ನರಕ ಮಾಡಲು ಬಯಸಲಿಲ್ಲ. ಹಾಗಾಗಿ ಸಾಧವಾದಷ್ಟು ನಿನ್ನಿಂದ ದೂರ ಹೋಗಲು ಪ್ರಯತ್ನಿಸಿದೆ.
ಕ್ಯಾನ್ಸರ್ ಗೆ treatment ನಡೀತಾ ಇದೆ, ಹಾಗೂ ಹೀಗೂ ನಾಲ್ಕು ವರ್ಷ ಕಳೆದಿದೆ.ನಡು ನಡು ವೆ ನೀನು ತುಂಬಾನೇ ಕಾಡುತ್ತಿಯಾ ಪ್ರೇಮ್. ಆಗ ನನ್ನ ಪುಟ್ಟ ಡಬ್ಬ ಓಪನ್ ಮಾಡುತ್ತೆನೆ. ನಿನಗೆ ಸಂಭಂದಿಸಿದ ವಸ್ತುಗಳನ್ನು ನೋಡುವಾಗ ನೀನು ಇಲ್ಲೆ ನನ್ನ ಪಕ್ಕದಲ್ಲಿ ಇದ್ದಂತೆ ಭಾಸವಾಗುತ್ತದೆ.
ಈ ನಡುವೆ ತುಂಬಾನೇ ಸುಸ್ತು. ಅಮೇರಿಕಾದಲ್ಲಿರುವ ಅತ್ಯುತ್ತಮ ಚಿಕಿತ್ಸೆ ಯ ಕಾರಣ ಸಾವನ್ನು ಮುಂದೆ ದೂಡುತ್ತ ದೂಡುತ್ತ ಇಲ್ಲಿಯವರೆಗೆ ಬದುಕಿದ್ದೆನೆ, ಅದು ಕೂಡ ಒಮ್ಮೆ ನಿನ್ನನ್ನು ನೋಡಬೇಕು ಎಂಬ ಕಾರಣಕ್ಕೆ .ಆದರೆ ನಿನ್ನ ಸ್ಥಿತಿ ನೋಡಿದ ಮೇಲೆ ನನಗಿನ್ನು ಜಾಸ್ತಿ ದಿನ ಬದುಕ ಬೇಕು ಎಂದು ಅನಿಸುತ್ತಿಲ್ಲ.
ಹೆಚ್ಚೆಂದರೆ ಇನ್ನು ಒಂದೋ, ಎರಡೋ ವರ್ಷ ನಾನು ಬದುಕಬಹುದು ಅಷ್ಟೇ ಪ್ರೇಮ್.
ಒಳ್ಳೆಯ ಚಿಕಿತ್ಸೆ ಯ ಕಾರಣ ದೈಹಿಕವಾಗಿ ಅಷ್ಟೇನು ಬದಲಾವಣೆ ಕಾಣದಿದ್ದರೂ ಮಾನಸಿಕವಾಗಿ ತುಂಬಾನೇ ಕೊರಗಿದ್ದೆನೆ. ಕ್ಯಾನ್ಸರ್ ಗೆಡ್ಡೆ ವೇಗವಾಗಿ ಬೆಳೆಯುತ್ತಿದೆ. ಕೊನೆಯ treatment ಕೂಡ ಅಮೇರಿಕಾದಲ್ಲೇ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೆನೆ. ಅದಕ್ಕೂ ಮೊದಲು
ಕೊನೆಯ ಬಾರಿ ಮಂಗಳೂರಿಗೆ ಬಂದು ನೀನು ಈಗ ಏನು ಮಾಡುತ್ತಿದ್ದಿ, ಹೇಗಿದ್ದಿ ಎಂದು ನೋಡುವ ಆಸೆ. ಅದಕ್ಕಾಗಿ ಮಂಗಳೂರಿಗೆ ಬಂದೆ.ಆದರೆ ಬದುಕು ನಮ್ಮಿಬರಿಗೂ ಹೆಚ್ಚು ಕಡಿಮೆ ಒಂದೇ ಸ್ಟೋರಿ ಬರೆದಿದೆ!
ನಿನಗೆ ಆ ಕಥೆ ಗೊತ್ತಾ ಪ್ರೇಮ್, ಒಮ್ಮೆ ಹೆಸರಾಂತ ಸಿಂಗರ್ ಪಿ. ಬಿ ಶ್ರೀನಿವಾಸ್ ಜ್ಯೋತಿಷಿಗಳ ಬಳಿ ಭವಿಷ್ಯ ಕೇಳಲು ಹೋದಾಗ ನೀನು ಸಿಂಗರ್ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರಂತೆ. ಅದಕ್ಕೆ ಪಿ.ಬಿ ಶ್ರೀನಿವಾಸ್ "ಎಷ್ಟು ಪರ್ಸೆಂಟ್ ಸಾಧ್ಯವಿಲ್ಲ" ಎಂದು ಕೇಳಿದಾಗ "99% ಸಾಧ್ಯವಿಲ್ಲ" ಎಂದು ಜ್ಯೋತಿಷಿಗಳು ಹೇಳಿದ್ದರು.
ಆದಕ್ಕೆ ಪಿ. ಬಿ ಶ್ರೀನಿವಾಸ್ "ಪರವಾಗಿಲ್ಲ ಕನಿಷ್ಠ ಪಕ್ಷ 1% ಸಾಧ್ಯತೆ ಇದೆ ಅಲ್ವಾ, ನನಗೆ ಅಷ್ಟೇ ಸಾಕು, ಸಾಧಿಸುತ್ತೆನೆ" ಎಂದು ಹೇಳಿ ಅಲ್ಲಿಂದ ಎದ್ದು ಬಂದ್ದಿದ್ದರಂತೆ.
ಆಮೇಲೆ ಏನಾಯಿತು, ಅವರು ಎಷ್ಟು ದೊಡ್ಡ ಸಿಂಗರ್ ಆದರು ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಈ ಕಥೆ ಯಾಕೆ ಹೇಳಿದೆ ಎಂದರೆ ನಿನಗೂ ಆ ಡಾಕ್ಟರ್ ಹೇಳಿದ (99% ಮೊದಲಿನಂತೆ ಆಗಲು ಸಾಧ್ಯವಿಲ್ಲ) ಆ 1% ನಿಂದಲೇ ಯಾವತ್ತಾದರೂ ಒಂದು ದಿನ ಪ್ರಜ್ಞೆ ಬರಬಹುದು ಎಂಬ ನಂಬಿಕೆ ಹಾಗೂ ಆಸೆಯಿಂದ ನಾನು ಈ ಪತ್ರ ಬರೆಯುತ್ತಿದ್ದೆನೆ.
ಇಲ್ಲದಿದ್ದರೆ ಕನಿಷ್ಠ ಪಕ್ಷ ಯಾರಾದರೂ ಈ ನನ್ನ ಪತ್ರ ಓದಿ ಹೇಳಿದಾಗ, ನಿನಗೆ ಹಳೆಯದೆಲ್ಲಾ ನೆನಪಾಗಿ ಆಗಲಾದರೂ ಪ್ರಜ್ಞೆ ಬರಲಿ ಏನ್ನುವುದು ನನ್ನ ಆಸೆ.
ಈ ಪತ್ರವನ್ನು ಓದುವ ಕಾಲ ನಿನಗೆ ಯಾವಾಗ ಬರುತ್ತೊ ನನಗೆ ಗೊತ್ತಿಲ್ಲ. ಬಹುಶಃ ಈ ಪತ್ರವನ್ನು ನೀ ಓದುವಾಗ, ನಾನು ಈ ಪ್ರಪಂಚದಲ್ಲಿಯೇ ಇಲ್ಲದಿರಬಹುದು!
ಆದಷ್ಟು ಬೇಗ ಶೀಘ್ರ ಗುಣಮುಖವಾಗು ಗೆಳೆಯ.
ನಿನ್ನೆಲ್ಲಾ ಆಸೆ ನೆರವೇರಲಿ.
ನಿನಗೆ ಇನ್ನೊಬ್ಬಳು ಪಲ್ಲವಿ ಸಿಗುತ್ತಾಳೋ ಇಲ್ಲವೋ ಗೊತ್ತಿಲ್ಲ, ನನಗಂತೂ ಇನ್ನೊಬ್ಬ ಪ್ರೇಮ್ ಬೇಡವೆ ಬೇಡ. ನೀನೆ ಬೇಕು. ಆದರೆ ಈ ಜನ್ಮದಲ್ಲೂ ಅದು ಸಾಧ್ಯವಿಲ್ಲ 😓😥
ಸಾವು ಅದೆಷ್ಟು ಕ್ರೂರಿ ಅಲ್ಲಾ ..
ಸಾವಿನಲ್ಲೂ ನೀನೆ ನನ್ನ ಜೊತೆಗಿರಬೇಕೆಂದು ಬಯಸಿದ್ದವಳು ನಾನು .
ಆದರೆ I'm sorry ನಿನ್ನೊಬ್ಬನನ್ನೇ ಬಿಟ್ಟು ಹೋಗುತ್ತಿದ್ದೆನೆ ಪ್ರೇಮ್. ನೀನು ಕೂಡ ಈಗಲೇ ನನ್ನೊಡನೆ ಮೇಲೆ ಬಾ ಎಂದು ಹೇಳುವಷ್ಟು ಕ್ರೂರಿ ನಾನಲ್ಲ . ಆದರೆ ನೀನು ಬರುವವರೆಗೆ ಅಲ್ಲೂ ಕೂಡ ನಿನಗಾಗಿ ಕಾಯಬಲ್ಲೆ ಎಂದು ಅಷ್ಟೇ ಹೇಳಬಲ್ಲೆ!
ಜನ್ಮ ಜನ್ಮ ದ ಸಂಬಂಧ, ಏಳೇಳು ಜನ್ಮಗಳ ಸಂಬಂಧ.. ಇದೆಲ್ಲದರ ಬಗ್ಗೆಯೂ ಕೇಳಿದ್ದೇನೆ. ಆದರೆ ಗೆಳೆಯ ಎಲ್ಲಾ ಜನ್ಮಗಳಲ್ಲೂ ನೀನೇ ನನ್ನ ಗೆಳೆಯನಾಗಿ, ಸಖನಾಗಿ, ಗಂಡನಾಗಿ ಸಿಗಬೇಕು ಎನ್ನುವುದೊಂದೆ ನನ್ನ ಕೊನೆಯ ಆಸೆ. ಅದು ಬಿಟ್ಟು ಬೇರೆ ನನಗೆ ಏನು ಬೇಕಿಲ್ಲ. ಶಾಲೆಗೆ ಕೈ ಕೈ ಹಿಡಿದು ಕೊಂಡು ಹೋಗುತ್ತಿದ್ದ ಪ್ರೇಮ್ ಬೇಕು.. ಹೂವು ಮುಡಿಸುತ್ತಿದ್ದ ಪ್ರೇಮ್ ಬೇಕು.. ಕೊಳಲು ಬಾರಿಸುತ್ತಿದ್ದ ಆ ಪ್ರೆಮ್ ಬೇಕು..ನಾನು ಹೋದಲ್ಲಿ ನನಗೆ ನೆರಳಾಗಿ, ಮಳೆಗೆ ನನಗೆ ಕೊಡೆಯಾಗಿ, ಎಂದೂ ಮರೆಯದ ನೆನಪಾಗಿ.. ಪ್ರೆಮ್ ನನಗೆ ನೀನು ಬೇಕು!
ಪ್ರೇಮ್ ನನ್ನೆಲ್ಲಾ ಪ್ರಾರ್ಥನೆ ಗಳಲ್ಲಿ ನೀನೇ ಇರುತ್ತಿಯಾ..
ಈ ಹುಡುಗಿಗೆ ದೇವರಲ್ಲಿ ಹೇಗೆ ಪ್ರಾರ್ಥಿಸಬೇಕೆಂಬುದನ್ನು ಕೂಡ ಹೇಳಿ ಕೊಟ್ಟವ ನೀನೆ ಅಲ್ಲವೇ..
" ಕೃಷ್ಣಂ ವಂದೇ ಜಗದ್ಗುರುಂ... "
ನನ್ನ ಪಾಲಿಗೆ ಆ ಕೃಷ್ಣ ಬೇರೆ ಅಲ್ಲ ನೀನು ಬೇರೆ ಅಲ್ಲ!
ನಿನ್ನ ಬಗ್ಗೆ ಹೇಳಲು ನನ್ನಲ್ಲಿ ಯಾವುದೇ ಕಂಪ್ಲೈಂಟ್ ಗಳಿಲ್ಲ ಪ್ರೇಮ್. ಆದರೆ ಆ ದೇವರಿಗೆ ಕೊಡೊಕೆ ಅಂತ ಒಂದು ದೂರಿದೆ.ಮೇಲೆ ಹೋದ ಮೇಲೆ ಖಂಡಿತ ಆತನಲ್ಲಿ ಕೇಳುತ್ತೆನೆ "ಹೇಳು ದೇವರೆ ಯಾಕಾಗಿ ನನ್ನನ್ನು ನನ್ನ ಪ್ರೇಮ್ ನಿಂದ ದೂರ ಮಾಡಿದೆ. " ಎಂದು 😥😓
ನಿನಗಾಗಿ ಒಂದು ಹಾಡು ಹಾಡದೇ ಈ ಪತ್ರ ಕೊನೆಗೊಳಿಸಿದರೆ, ಈ ಪತ್ರ ಕ್ಕೆ ಬೆಲೆಯೇ ಬಾರದು.
ಯಾರಾದರೂ ಈ ಪತ್ರ ನಿನಗೆ ಓದಿ ಹೇಳುವಾಗ ಈ ಹಾಡು ಹಾಡಿದರೆ, ಅದು ಅಂದು ನೀನು ಚಿಕ್ಕವನಿದ್ದಾಗ ನಿನಗಾಗಿ ಹಾಡಿದ್ದ ಆ ಚಿಕ್ಕ ಪಲ್ಲವಿಯೇ, ಈಗಲೂ ನಿನಗಾಗಿಯೇ ಹಾಡುತ್ತಿರುವುದು ಎಂದು ತಿಳಿದುಕೊ ಪ್ರೇಮ್.
ಕೊನೆಯ ಪಕ್ಷ ಈ ಹಾಡು ಕೇಳುವಾಗ ಆದರೂ ನಿನಗೆ ಪ್ರಜ್ಞೆ ಬರಬಹುದು ಎಂಬ ಆಸೆ ನನ್ನದು.
ಹಿನ್ನೆಲೆ ಯಲ್ಲಿ ನೀನೆ ಕೊಳಲು ಬಾರಿಸುತ್ತಿದ್ದಿ ಎಂದು ತಿಳಿದುಕೊಂಡು, ನಿನ್ನ ಇಷ್ಟದ, ಬಾಲ್ಯದಲ್ಲಿ ನನ್ನಿಂದ ಸದಾ ಕೇಳಲು ಬಯಸುತ್ತಿದ್ದ ಆದೇ ಹಾಡನ್ನು ನಿನಗಾಗಿ ಹಾಡುತ್ತಿದ್ದೆನೆ ಪ್ರೆಮ್.. ನನ್ನ ಈ ಕೊನೆಯ ಹಾಡು ನಿನಗಾಗಿ..
" ಯಾವ ಮೋಹನ ಮುರಳಿ ಕರೆಯಿತು ದೂರ ತೀರಕ್ಕೆ ನಿನ್ನನ್ನು...
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನ್ನು... "
😭😭
ತುಂಬಾ ನಿನ್ನವಳು...
ನೀನೆ ಬರೆದು ಕೊಂಡಂತೆ - ಪ್ರೆಮ್+ಪಲ್ಲವಿ = ಪ್ರೇಮ ಪಲ್ಲವಿ ❤
................................. "
ಲೆಟರ್ ಬರೆದು ಮುಗಿಸಿದ ನನ್ನ
ಕಣ್ಣಂಚಲ್ಲೂ ಬೇಡವೆಂದರೂ ನೀರು ಜಿನುಗಿತ್ತು.ನನಗೆ ಯಾಕೋ ಅವತ್ತು ತಡೆದು ಕೊಳ್ಳಲು ಆಗಲೇ ಇಲ್ಲ. ಲೆಟರ್ ಅನ್ನು ಅಲ್ಲೆ ಟೇಬಲ್ ಮೇಲೆ ಇಟ್ಟು ಹಾಗೆಯೇ ಮಂಚದ ಮೇಲೆ ಬಿದ್ದು ಕೊಂಡೆ.
ಮಲಗಿ ಮೇಲೆ ನೋಡುತ್ತಿದ್ದಂತೆ, ಮನೆಯ ಸೀಲಿಂಗ್ ನಲ್ಲಿ ಒಮ್ಮೆ ಪ್ರೆಮ್ ಮತ್ತು ಪಲ್ಲವಿ ಸ್ಟೋರಿ ಯ ಸ್ಲೈಡ್ ಶೋ ಒಂದು ಹಾಗೇ ಕಣ್ಣ ಮುಂದೆ ಪಾಸಾದಂತೆ ಆಯಿತು.
ಮೊದಲನೇ ಯ ಸ್ಲೈಡ್ ನಲ್ಲಿ ಪ್ರೇಮ್, ಪಲ್ಲವಿ ಯ ಕೈ ಹಿಡಿದು ಚಿಕ್ಕಂದಿನಲ್ಲಿ ಶಾಲೆಗೆ ಹೋಗುವ ಪೋಟೊ ಇದ್ದರೆ. ಕೊನೆಯ ಸ್ಲೈಡ್ ನಲ್ಲಿ ಎರಡು ಪೋಟೊ ಗಳು ಇದ್ದವು. ಒಂದು ಫೋಟೋ ಆಸ್ಪತ್ರೆ ಯಲ್ಲಿ ಕೋಮಾ ದಲ್ಲಿ ಮಲಗಿದ್ದ ಪ್ರೇಮ್, ಇನ್ನೊಂದು ಫೋಟೊದಲ್ಲಿ ಕೊನೆಯ ಬಾರಿ ಅಮೇರಿಕಾಕ್ಕೆ ಹೋಗಲು ಏರ್ಪೊಟ್ ನಲ್ಲಿ ಬ್ಯಾಗ್ ನೊಂದಿಗೆ ನಿಂತಿದ್ದ ಪಲ್ಲವಿ ಮೇಡಂ!
Back ground ನಲ್ಲಿ ನಿಧಾನವಾಗಿ ಹಾಡು ಬರುತ್ತಿದ್ದಂತೆ ಭಾಸವಾಯಿತು. ಆದರೆ ಈ ಬಾರಿ ಯಾಕೋ ಪಲ್ಲವಿ ಗಾಗಿ ಪ್ರೇಮ್ ಮೊದಲ ಬಾರಿ ಹಾಗೂ ಅದೇ ಕೊನೆಯ ಬಾರಿ ಹಾಡಿದಂತಿತ್ತು..
" ಯಾವ ಮೋಹನ ಮುರಳಿ ಕರೆಯಿತು ದೂರ ತೀರಕ್ಕೆ ನಿನ್ನನ್ನು...
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನ್ನು...
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ..
ಬಯಕೆ ತೋಟದ ಬೇಲಿಯೊಳಗೆ ಕರಣಗಳದ್ದೇ ರಿಂಗಣ...
ವಿಧಿವಶವಾಯಿತು ಪ್ರಾಣಹ.. ಪರವಶವು ನಿನ್ನಿ ಚೇತನ.... "
" #ಪ್ರೇಮ_ಪಲ್ಲವಿ "
............................................................
story by - AB Pacchu,
Moodbidri
Mangalore(D.K)
Uffff.... Real story ನಾ ಇದು..?? 😢😢
ReplyDeleteಕಣ್ಣಿಗೆ ಕಟ್ಟೋ ತರ ಬರೆತೀರಾ ನೀವು... ಓದುತ್ತಾ ಓದುತ್ತಾ ನಾವೇ ಕತೆಯ ಒಂದು ಭಾಗ ಆಗಿ ಹೋದಂತೆ... ಕಥೆಯ ಪ್ರತಿಯೊಂದು emotions ನ್ನು.. Feel ಮಾಡಿಕೊಂಡಂತಹ ಭಾವನೆ...