ಮೌನವೇ ಮಾತಾಗುವ ಲೋಕದಲ್ಲಿ..
ಅವರಿಬ್ಬರು ಹುಡುಗರು. ನನ್ನ ಬಸ್ ನಲ್ಲಿಯೇ ಬರುವುದು. ಒಟ್ಟಿಗೆ ಬಸ್ ಹತ್ತುತ್ತಾರೆ. ಒಟ್ಟಿಗೆ ಬಸ್ ನಿಂದ ಇಳಿಯುತ್ತಾರೆ. ಬಸ್ ಹತ್ತಿ, ಬಸ್ ನಿಂದ ಇಳಿಯುವ ತನಕ ಕೂಡ ಇಬ್ಬರೂ ಮಾತಾಡುತ್ತಲೇ ಇರುತ್ತಾರೆ. ನಮ್ಮ ಇಡೀ ಬಸ್ ನಲ್ಲಿ ಅವರಷ್ಟು ಮಾತಾಡುವವರು ಯಾರೂ ಇಲ್ಲ.
ಆದರೆ ಅವರ ಮಾತು ನಮ್ಮ ಬಸ್ ನಲ್ಲಿ ಯಾರಿಗೂ ಕೇಳಿಸುವುದೇ ಇಲ್ಲ,ಅಷ್ಟೇ ಏಕೇ ಪಕ್ಕದಲ್ಲೇ ಕಿವಿಯರಳಿಸಿ ಕೊಂಡು ನಿಂತಿರುವ ನನಗೂ ಕೇಳಿಸುವುದಿಲ್ಲ!
ಅವರ ಮಾತುಗಳು ಯಾರನ್ನೂ disturb ಮಾಡುವುದು ಕೂಡ ಇಲ್ಲ.ನಿಜ ಹೇಳಬೇಕೆಂದರೆ ಈ ಜಗತ್ತಿನಲ್ಲಿಯೇ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವೇ ಇಲ್ಲ. ಕಾರಣ ಅವರ ಮಾತುಗಳಲ್ಲಿ ಶಬ್ಧಗಳಿಲ್ಲ,ಕಂಪನವಿಲ್ಲ, ಧ್ವನಿ ಇಲ್ಲ, ಧ್ವನಿ ತರಂಗಗಳಿಲ್ಲ.. ಹೌದು ಅವರಿಗೆ ಮಾತು ಬರುವುದಿಲ್ಲ!!
ಆದರೂ ಅವರಿಬ್ಬರೂ ಖುಷಿ ಖುಷಿಯಾಗಿ ಮಾತಾಡುವುದನ್ನು ಎಂದೂ ನಿಲ್ಲಿಸಿಲ್ಲ!
ನಾನು ಅವರನ್ನು ಡೈಲಿ ನೋಡುತ್ತೆನೆ. ಆದರೆ ಒಮ್ಮೆಯೂ ಮಾತಾಡಿಸಿಲ್ಲ. ಅವರಿಬ್ಬರು ಸನ್ನೆಯ ಮೂಲಕ ಪರಸ್ಪರ ಮಾತಾಡುವುದು ನನಗೆ ಅರ್ಥ ಆಗುವುದಿಲ್ಲ.ತುಂಬಾನೇ ವೇಗವಾಗಿ, ಸನ್ನೆ ಯ ಮೂಲಕ ಸಂಭಾಷಿಸುತ್ತಿರುತ್ತಾರೆ. ಸುಮ್ಮನೆ ಅವರನ್ನೇ ನೋಡುತ್ತಾ ಹಾಗೇ ಇದ್ದು ಬಿಡುತ್ತೆನೆ. ಅವರು ಜಗತ್ತಿನ ಪರಿವೆಯೇ ಇಲ್ಲದೇ ನಗುತ್ತಾ ಅವರಿಗೆ ಅರ್ಥ ಆಗುವ ಸಂಕೇತ ಗಳ ಬಾಷೆಯಲ್ಲಿ ಮಾತಾಡುತ್ತಲೇ ಇರುತ್ತಾರೆ.ಮತ್ತು ಸದಾ ಖುಷಿ ಖುಷಿಯಾಗಿರುತ್ತಾರೆ.
ಅವರಿಬ್ಬರು ಪರಸ್ಪರ ಮಾತಾಡದೇ ಇದ್ದದ್ದು ನಾನು ಯಾವತ್ತೂ ನೋಡಿಯೇ ಇಲ್ಲ.
ನನಗೆ ಅವರಿಬ್ಬರ ಮೇಲೆ ಕುತೂಹಲ ಇದೆ,ಆಸಕ್ತಿ ಇದೆ. ಸದ್ದೇ ಮಾಡದ ಅವರಿಬ್ಬರ ಮಾತುಕತೆ ಗೆ, ಮೌನ ಮಾತಾಗುವ ಆ ಲೋಕ ಕ್ಕೆ ಅಪಾರವಾದ ಗೌರವೂ ಇದೆ.
ಅವರಿಬ್ಬರೊಂದಿಗೆ ಒಮ್ಮೆ ಸಂವಹನ ಕ್ಕೆ ಇಳಿಯಬೇಕೆಂದು ನನಗೆ ಬಹುದಿನಗಳಿಂದ ಆಸೆ ಇತ್ತು. ಇವತ್ತು ಅದು ನೆರವೇರಿತು!
ನಿಂತುಕೊಂಡಿದ್ದ ಅವರಿಬ್ಬರಲ್ಲಿ ಒಬ್ಬರಿಗೆ ಕೇಳಿದೆ. ನಿಮ್ಮ ಹೆಸರೇನು? ಅವರು ಸನ್ನೆಯ ಮೂಲಕ ಅವರ ಹೆಸರು ಹೇಳಿದರು. ಆದರೆ ಅದು ನನಗೆ ಅರ್ಥ ಆಗಲಿಲ್ಲ. ನನಗೆ ಅರ್ಥ ಆಗಲಿಲ್ಲ ಎಂದು ಅವರಿಗೂ ಅರ್ಥವಾಯಿತು . ನಿಧಾನವಾಗಿ ಪ್ರತಿಯೊಂದು ಪದವನ್ನು ತುಟಿ ಚಲನೆ ಮಾಡುತ್ತಾ ನನಗೆ ಅರ್ಥ ಆಗಲಿ ಎಂಬ ಉದ್ದೇಶದಿಂದ ಹೇಳುತ್ತಾ ಹೋದರು.ನನಗೆ ಆಗಲೂ ಅರ್ಥ ಆಗಲಿಲ್ಲ. ಆದರೂ ಅವರು ಪ್ರಯತ್ನ ಬಿಡಲಿಲ್ಲ. ತುಂಬಾ ಪ್ರಯತ್ನ ಗಳ ನಂತರ ನನಗೆ ಅವರ ಹೆಸರು ಗೊತ್ತಾಯಿತು. ನಂತರ ಅದೇ ರೀತಿಯ ಪ್ರಯತ್ನ ದ ಮೂಲಕ ಮತ್ತೊಬ್ಬರ ಹೆಸರು ಕೂಡ ಗೊತ್ತಾಯಿತು. ನಿಜ ಹೇಳಲಾ ಫ್ರೆಂಡ್ಸ್,ಆ ಕ್ಷಣಗಳಲ್ಲಿ ನಿಜವಾಗಿಯೂ ಮೂಗ ನಾಗಿದ್ದು ನಾನು!! ಅವರಲ್ಲ!
ನನಗೆ ಅವರಿಬ್ಬರ ಹೆಸರು ಗೊತ್ತಾಗಿದ್ದು ಮತ್ತು ನಾನು ಅವರಿಬ್ಬರನ್ನು ಮಾತಾಡಿಸಿದ್ದು ಅವರಿಗೆ ತುಂಬಾನೇ ಖುಷಿ ಆಗಿತ್ತು.ಬಸ್ ನಿಂದ ಇಳಿಯುವಾಗ ಅವರಿಬ್ಬರಿಗೂ ಬಾಯ್ ಹೇಳಿ ಬಸ್ ಇಳಿದೆ. ಅವರಿಬ್ಬರೂ ನಗುತ್ತಾ ನನ್ನೆಡೆಗೆ ಕೈ ಬೀಸಿದ್ದರು.
ಒಂದು ವಿಷಯ ಹೇಳಲಾ ಪ್ರೆಂಡ್ಸ್ , ಆ ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ದೈಹಿಕ ವಾಗಿ ಮಾನಸಿಕವಾಗಿ ಹೆಚ್ಚಿನ ನಾವೆಲ್ಲರೂ ಸದೃಢ ರೇ. ಆದರೂ ನಾವು ದೇವರಿಗೆ ಕಂಪ್ಲೈಂಟ್ ಕೊಡುವುದನ್ನು ಯಾವತ್ತೂ ನಿಲ್ಲಿಸಿಯೇ ಇಲ್ಲ.
ಮನಿ ಪ್ರಾಬ್ಲಂ, ಸಾಲದವರ ಪ್ರಾಬ್ಲಂ, ಜಾಬ್ ಪ್ರಾಬ್ಲಂ,ಹೆಂಡತಿ ಪ್ರಾಬ್ಲಂ, ಗಂಡನ ಪ್ರಾಬ್ಲಂ, ಸಂಸಾರ-ಕುಟುಂಬ ದ ಪ್ರಾಬ್ಲಂ,ಯಾರೊಂದಿಗೋ ಜಗಳ, ಕೋಪ ಮನಸ್ತಾಪ etc.. etc.. ನಮಗೆ ಯಾವುದರಲ್ಲೂ ಸಮಾಧಾನವಿಲ್ಲ. ಎಲ್ಲಾ ಪ್ರಾಬ್ಲಂ ಶುರುವಾಗುವುದೇ ನಮ್ಮ ಮಾತುಗಳಿಂದ.ಆದರೂ ಪ್ರತಿಯೊಂದಕ್ಕೂ ನಾವು ದೇವರನ್ನು ದೂರುತ್ತೆವೆ. "ಓ ದೇವರೇ ನನಗೆ ಯಾಕೆ ಹೀಗೆ ಮಾಡಿದೆ.." ಎಂದು ಹೇಳುತ್ತೆವೆ.
ಆದರೆ ಒಮ್ಮೆಯೂ ಕೂಡ ನಮ್ಮನ್ನು ದೈಹಿಕವಾಗಿ ಆರೋಗ್ಯ ದಿಂದ ಇರಿಸಿದ ಆ ಭಗವಾನ್ ಗೆ ನಾವು ಯಾವತ್ತೂ ಚಿರಋಣಿ ಆಗಿರುವುದೇ ಇಲ್ಲ.
ಬೇಕಿದ್ದರೆ ಒಮ್ಮೆ ನೋಡಿ. ನಿಮ್ಮ ಸುತ್ತ ಮುತ್ತ ಎಲ್ಲರೂ ಮಾತಾಡುತ್ತಾ ಇರಲಿ.ಆದರೆ ನಿಮ್ಮೊಬ್ಬರನ್ನು ಮಾತ್ರ ಬಾಯಿಗೆ ಬಟ್ಟೆ ತುರುಕಿಯೋ,ಇಲ್ಲ ಬಟ್ಟೆ ಕಟ್ಟಿಯೋ ಒಂದು ದಿನ ಪೂರ್ತಿ ಒಂದು ಗುಂಪಿನಲ್ಲಿ ಬಿಟ್ಟು ಬಿಡುವ. ಹೇಗೆ ಆಗುತ್ತೆ ಅಲ್ಲಾ..
ಆಗ ಒಮ್ಮೆ ಮಾತು ಬರದವರ ಬಗ್ಗೆ ಯೋಚಿಸಿ..
ಅದು ಬಿಡಿ ಒಂದೈದು ನಿಮಿಷ ನಿಮ್ಮ ಕೈಯಾರೆ ಕಣ್ಣು ಮುಚ್ಚಿ ಈ ಜಗತ್ತಿನ ಮುಂದೆ ಹಾಗೇ ನಿಂತುಬಿಡಿ. ಎಷ್ಟೊಂದು ಗಾಢವಾದ ಕತ್ತಲು ಇದೆ ಅಲ್ಲವೇ. ಆಗ ಒಂದು ಕ್ಷಣ ಕಣ್ಣು ಕಾಣದವರ ಬಗ್ಗೆ ಯೋಚಿಸಿ. ನಮಗಾದರೂ ತಿಂಗಳಿಗೊಂದು ಅಮಾವಾಸ್ಯೆ ಬರುತ್ತೆ. ಆದರೆ ಕಣ್ಣು ಕಾಣದವರಿಗೆ ಅಮಾವಾಸ್ಯೆ ಹುಣ್ಣಿಮೆ ಗಳೆಲ್ಲಿ.. ಅವರೆಲ್ಲರ ಬಾಳಿನಲ್ಲಿ ದಿನ ನಿತ್ಯವೂ ಇರುವುದು ಬರೀ ಅಮಾವಾಸ್ಯೆ ಒಂದೇ ತಾನೇ!
ಎಷ್ಟೋ ಸಲ ಅನಿಸಿದೆ, ನಾವು ಯಾವುದ್ಯಾವುದಕ್ಕೋ ಕೊರಗುತ್ತಾ ಈ ಜೀವನ ಜೀವಿಸುತ್ತಿದ್ದೆವೆ ಎಂದು. ಎಲ್ಲಾ ಸರಿ ಇದ್ದ ನಾವು ತೃಪ್ತಿ ಹೊಂದಿಲ್ಲ. ಆದರೆ ಮುಖ್ಯವಾಗಿ ಯಾವುದು ಸರಿ ಇರಬೇಕಿತ್ತು ಅದುವೇ ಸರಿ ಇಲ್ಲದವರು ನಾವು ಯಾರಿಗೂ ಕಮ್ಮಿ ಇಲ್ಲ, ನಮಗೆ ಯಾವ ಕೊರತೆ ಇಲ್ಲ, ದೇವರಿಗೊಂದು ಕೊಡಲು ನಮ್ಮ ಬಳಿ ಕಂಪ್ಲೈಟೇ ಇಲ್ಲ..ನಾವು ಇದ್ದುದರಲ್ಲೇ ಸುಖಿಗಳು ಎಂದು ನಮಗಿಂತಲೂ ಹೆಚ್ಚು ಖುಷಿ ಯಲ್ಲಿ ಇದ್ದಾರೆ.
ಇವರ ಮುಂದೆ ನಾವೆಲ್ಲ ಎಷ್ಟು ಚಿಕ್ಕವರು ಅಲ್ಲವೇ...!!
" #ಮೌನವೇ_ಮಾತಾಗುವ_ಲೋಕದಲ್ಲಿ "
...............................................
#ಏನೋ_ಒಂದು
Ab Pacchu
Moodubidire

Comments
Post a Comment