ಸುಟ್ಟ ಮೆಣಸಿಗೊಂದು ನೀರುಮಾವು

 






ಹಸಿವು ಅತಿಯಾದಾಗ, ಹೊಟ್ಟೆ ತಾಳ ಹಾಕಿದಾಗ.. ಒಂದೆರಡು ಒಣಮೆಣಸು,ಒಂದು ಬೆಳ್ಳುಳ್ಳಿಯನ್ನು ಹಾಗೇ ಬೆಂಕಿಯಲ್ಲಿ ಸುಟ್ಟುಕೊಂಡು,ಅದನ್ನು ನೀರಿನಲ್ಲಿ ಹಾಕಿಟ್ಟ ಮಾವಿನೊಂದಿಗೆ ಹಾಗೇ ಹದವಾಗಿ ಮೃದುವಾಗಿ ಕಿವುಚಿಕೊಂಡು ಹಿಂದಿನ ರಾತ್ರಿಯ ಕುಚಲಕ್ಕಿ ಗಂಜಿ ಅನ್ನದೊಂದಿಗೆ ತಿಂದು ಬಿಟ್ಟರೆ ನನಗೆ ಆ ಕ್ಷಣಕ್ಕೆ ಅದುವೇ ಸ್ವರ್ಗ.


ಅಮ್ಮ ಹಾಗೇ ಮಾಡುತ್ತಾಳೆ. ಅವಳು ಬೆಳಿಗ್ಗೆ ಏನೂ ತಿನ್ನುವುದೇ ಇಲ್ಲ.ಎದ್ದ ಕೂಡಲೇ ಒಂದು ಬಿಸಿ ಬಿಸಿಯಾದ ಚಾಹ ಅಷ್ಟೇ. ಹಟ್ಟಿಯಲ್ಲಿ ಹಾಲು ಕರೆಯುವ ಒಂದೇ ಒಂದು ಹಸು ಇದ್ದರೂ ಸಾಕು ಅದರ ಕೆಲಸವೇ ಸಾಕಷ್ಟು ಇರುತ್ತದೆ.ಅದರೊಟ್ಟಿಗೆ ಮನೆಯ ಕೆಲಸ. ಅದಕ್ಕಾಗಿ ಸಾಕಷ್ಟು ಬೇಗವೇ ಏಳಬೇಕು. ಏಳುತ್ತಾಳೆ ಕೂಡ. ಅದು ಅವಳ ಎಷ್ಟೋ ವರುಷಗಳ ದಿನಚರಿ. ಎದ್ದು ಮೊದಲು ಬೆಳಿಗ್ಗೆಯ ತಿಂಡಿ ಮಾಡಬೇಕು,ನಂತರ ಒಂದಾದ ನಂತರ ಒಂದು ಮನೆಯ  ಕೆಲಸಗಳ ಸರಣಿ. 


ಎಲ್ಲಾ ಕೆಲಸ ಆದ ನಂತರ ಅವಳು ಹೊಟ್ಟೆಗೆ ಒಂದು ತುತ್ತು ಎಂದು ಹಾಕಿಕೊಳ್ಳುವುದು ಹತ್ತು ಗಂಟೆಯ ನಂತರವೇ.ಅವಳಿಗದು ಅಭ್ಯಾಸ.ಅಮ್ಮಾ.. ಬೆಳಿಗ್ಗೆ ಏನಾದರೂ ತಿನ್ನು ಎಂದು ಹೇಳಿದರೂ ಅವಳಿಗಾಗ ಹೊಟ್ಟೆ ಹಸಿವು ಇಲ್ಲ.ಇಲ್ಲವೆಂದಲ್ಲ ಹೊಟ್ಟೆ ಹಸಿವಿಗೂ ಅವಳಲ್ಲಿ ಸಮಯವಿಲ್ಲ. ನಮ್ಮ ಎಲ್ಲಾ ತಾಯಂದಿರು ಹಾಗೆಯೇ. ಎಲ್ಲರಿಗೂ ರುಚಿಕಟ್ಟಾಗಿ ಹೊಟ್ಟೆ ತುಂಬಾ ಮಾಡಿ ಬಡಿಸುವ ಅವರಿಗೆ ಮಾತ್ರ ಸಾವಕಾಶವಾಗಿ ಒಂದು ಕಡೆ ಕೂತು ಉಣ್ಣಲು ಸಮಯವಿಲ್ಲ.

ಅದಕ್ಕಾಗಿಯೇ ಅವರೆಲ್ಲರೂ ಅನ್ನಪೂರ್ಣೆಯರು ಅನ್ನಿಸಿಕೊಳ್ಳುತ್ತಾರೆ. ತಮ್ಮ ಮಕ್ಕಳು ಹೊಟ್ಟೆ ತುಂಬಾ ಉಂಡರೆ ಅವರ ಅರ್ಧ ಹೊಟ್ಟೆ ತುಂಬಿದಂತೆಯೇ. 


ಹತ್ತು ಗಂಟೆಯ ಸುಮಾರಿಗೆ ಅವಳಲ್ಲಿ  ಹಸಿವು ಅನ್ನುವುದು ಜನ್ಮ ತಾಳುತ್ತದೆ. ಆಗ ಅವಳು ನೇರವಾಗಿ ಅಡುಗೆ ಕೋಣೆಗೆ ಹೋಗಿ, ಭರಣಿಗೆ ಕೈ ಹಾಕಿ, ಉಪ್ಪು ನೀರಿನಲ್ಲಿ ಹಾಕಿಟ್ಟ ಒಂದು ಮಾವಿನಕಾಯಿಯನ್ನು ತೆಗೆದುಕೊಂಡು ಅದನ್ನು ಈ ರೀತಿಯಾಗಿ ಬೆಂಕಿಯಲ್ಲಿ ಸುಟ್ಟ ಒಣಮೆಣಸು ಹಾಗೂ ಬೆಳ್ಳುಳ್ಳಿಯೊಂದಿಗೆ ಶ್ರದ್ಧೆಯಿಂದ ಕಿವುಚಿಕೊಂಡು, ಒಂದು ಬಟ್ಟಲು ಗಂಜಿ ಅನ್ನದೊಂದಿಗೆ ತಿಂದು ಬಿಟ್ಟರೆ ಅವಳಿಗದು ಮೃಷ್ಟಾನ್ನ.ಬೇರೆ ಏನೇ ರುಚಿಯಾದ ಪದಾರ್ಥ ಪಲ್ಯಗಳಿರಲಿ ಅವಳಿಗದು ರುಚಿಸುವುದೇ ಇಲ್ಲ,ಅವಳಿಗದು ಬೇಕಾಗಿಯೂ ಇಲ್ಲ. 


ಮಳೆಗಾಲಕ್ಕೂ ಮೊದಲೇ  ಮನೆಯ ಭರಣಿಗಳಲ್ಲಿ  ಸದಾ ಉಪ್ಪು ನೀರಲ್ಲಿ ಹಾಕಿಟ್ಟ ಮಾವಿನಕಾಯಿ, ಉಪ್ಪಡ್ ಪಚ್ಚಿರ್, ಗೂಂಜಿ, ಅವಳೇ ಇಷ್ಟ ಪಟ್ಟು ಮಾಡುವ ಖಾರ ಖಾರವಾದ ಸಾಸಿವೆ ಪರಿಮಳದ ಮಿಡಿ ಮಾವಿನ ಉಪ್ಪಿನಕಾಯಿ.. ಇವುಗಳೆಲ್ಲವೂ ಇದ್ದರೆನೇ ಅವಳಿಗೊಂದು ದಿವ್ಯವಾದ ಸಮಾಧಾನ.


ಅವಳು ಈ ರೀತಿ ತಡವಾಗಿ ಮೆಣಸು  ಸುಟ್ಟುಕೊಂಡು ಮಾವು ಕಿವುಚಿಕೊಂಡು ತಿನ್ನುವಾಗ ನನಗೆ ಬೆಳಿಗ್ಗೆ  ತಿಂಡಿ ತಿಂದಿದ್ದರೂ ಮತ್ತೆ ಹಸಿವಾಗುತ್ತದೆ.ಅದರ ಪರಿಮಳವೇ ಅಮ್ಮನೆಡೆಗೆ ನನ್ನನ್ನು ಹಾಗೇ  ಸೆಳೆದುಬಿಡುತ್ತದೆ. ಅವಳೊಂದಿಗೆ ಮತ್ತೊಂದು ರೌಂಡಿನ  ಊಟ ಹಾಗೇ ಮುಗಿದು ಬಿಡುವುದು ನನ್ನದು.ಈ ರೀತಿಯಾಗಿ ಅಮ್ಮ ಇಷ್ಟ ಪಟ್ಟು ತಿನ್ನುತ್ತಿದ್ದುದನ್ನು ಅವಳ ಪಕ್ಕವೇ ಕೂತು ತಿಂದ ಕಾರಣದಿಂದಾಗಿಯೇ ಏನೂ.. ಈಗಲೂ ನನಗೆ  ಇವುಗಳೆಂದರೆನೇ ನಿಜವಾದ ಸ್ವರ್ಗ.. 😍❤️

ab pacchu 

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ