ಅಪ್ಪ ಅಮ್ಮ ಮತ್ತು ಬೈಗುಳ
ಮನೆಯ ಯಾವುದಾದರೂ ಜಗ್ಗು ಮಗ್ಗು ಇಲ್ಲವೇ ಕಾಫಿ ಕಪ್ಪು ಕಟ್ ಆಗಿ ಹಾಳಾಗಿ ಹೋದರೆ ಸಂಜೆ ಅಪ್ಪ ಮನೆಗೆ ಬಂದಾಗ, ಯಾರೂ ಹೋಗಿ ಸಪರೇಟ್ ಆಗಿ ಆತನಿಗೆ ಅದು ನಾನೇ ಮಾಡಿದ್ದು ಎಂದು ದೂರು ನೀಡಬೇಕಾಗಿರಲಿಲ್ಲ, ಅದು ಅವನಿಗೆ ಗೊತ್ತು ಮನೆಯಲ್ಲಿ ಏನಾದರೂ ಒಡೆದು ಹಾಕುವಂತ ಕೆಲಸ ಮಾಡಿದಿದ್ದರೆ ಇಲ್ಲ ಮುಂದೆ ಕೂಡ ಅಂತಹದ್ದೇ ಕೆಲಸಗಳನ್ನು ಮಾಡುವುದಿದ್ದರೆ ಅದು ಈ ಮನೆಯಲ್ಲಿ ನಾನೇ ಎಂದು. ಹಾಗಾಗಿ ಇಂತಹ ಕೆಲಸಗಳು ನಡೆದಾಗ ನನಗೆ ಮಂಗಳಾರತಿ ಎತ್ತಲು ಅವನಿಗೆ ಆರತಿ ತಟ್ಟೆಯೇ ಬೇಕಾಗಿಲ್ಲ. ಅಪ್ಪ ಮಂತ್ರಮುಗ್ಧನಾಗಿ ಅದೆಷ್ಟು ಚೆನ್ನಾಗಿ ಬೈಯ್ತಾನೆ ಅಂದರೆ, ಆತನ ಎಲ್ಲಾ ಮಾಮೂಲಿ ಮಂತ್ರಗಳು ನನಗೆ ಕಂಠಪಾಠ.
"ಅಮ್ಮ.. ಆ ಟೀಚರ್ ನನಗೆ ಸರಿಯಾಗಿ ಉತ್ತರ ಹೇಳದಿದ್ದಾಗ ಚೆನ್ನಾಗಿ ಹೊಡಿತಾರೆ, ಹೆಚ್ಚಾಗಿ ನಾನು ಸರಿ ಉತ್ತರ ಹೇಳುವುದೇ ಇಲ್ಲ, ಹಾಗಾಗಿ ದಿನಾಲೂ ಹೊಡಿತಾರೆ, ನಾಳೆ ಸ್ಕೂಲ್ ಗೆ ಬರುವಾಗ ನಿಮ್ಮನ್ನು ಕೂಡ ಸ್ಕೂಲ್ ಗೆ ಕರ್ಕೊಂಡು ಬರ್ಲಿಕ್ಕೆ ಹೇಳಿದ್ದಾರೆ ಅಮ್ಮ, ಪ್ಲೀಸ್.. ಅವರಿಗೆ ಹೇಳಮ್ಮಾ ನನಗೆ ಹೊಡಿಬೇಡಿ ..." ಅಂತ ಅಮ್ಮನಿಗೆ ಪರಿಪರಿಯಾಗಿ ಹೇಳಿದಾಗ, ಆಕೆ ಬಂದು ಟೀಚರ್ ಗೆ ಚೆನ್ನಾಗಿ ಕ್ಲಾಸ್ ತಗೋತಾಳೆ ಎಂಬ ಉತ್ಸಾಹದಿಂದ ಮರುದಿವಸ ಅಮ್ಮನೊಂದಿಗೆ ಸ್ಕೂಲ್ ಗೆ ಹೋದರೆ, ಆಕೆ ತುಳುವಿನಲ್ಲಿ ಹೇಳುತ್ತಿದ್ದದ್ದು ಒಂದೇ ಮಾತು " ಆಯಗ್ ನನ ರಡ್ಡ್ ಕೊರ್ಲೆ... ", ಅಂದರೆ "ಹೇಳದಿದ್ದು ಕೇಳದಿದ್ದರೆ ಅವನಿಗೆ ಇನ್ನೂ ಎರಡು ಚೆನ್ನಾಗಿಯೇ ಬಾರಿಸಿ.." ಎಂದು.
ತಂದೆ ತಾಯಂದಿರು ಹೀಗೆ ಅಲಾ... ಅವರಿಗೆ ಬೈಯುವುದರಲ್ಲಿ ಏನು ಖುಷಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ನಮಗಂತೂ ಅವರ ಒಂದು background ಮ್ಯೂಸಿಕ್ ನಂತಹ ಬೈಗುಳ ದಿನ ನಿತ್ಯವೂ ಕೇಳಿ ಕೇಳಿ, ಒಂದು ದಿನ ಕೆಲಸದ ನಿಮಿತ್ತ ಅವರಿಂದ ನಾವು ದೂರ ಹೋದಾಗ ಇಲ್ಲ ಅವರೇ ನಮ್ಮಿಂದ ದೂರ ಹೋದಾಗ ಅಂದರೆ ಮೇಲಿನ ಪರಲೋಕಕ್ಕೆ ಹೋದಾಗ ನಾವು ಮೊದಲು ಜಾಸ್ತಿ ಆಗಿ ಮಿಸ್ ಮಾಡಿ ಕೊಳ್ಳುವುದೇ ನಮ್ಮ ಹೆತ್ತವರ ಆ ಬೈಗುಳ ವನ್ನೇ.
ಹೆತ್ತ ತಾಯಿಆಗಲಿ, ತಂದೆ ಆಗಲಿ ಬೈಯೋ ಮಾತುಗಳು ನಮ್ಮನ್ನು ಸರಿದಾರಿಗೆ ತರುವ ದಾರಿದೀಪಗಳಿರುತ್ತವೆಯೇ ವಿನಹ ಅದರಿಂದ ಅವರಿಗೆ ಖುಷಿ ಆಗಲಿ ವಿನೋಧವಾಗಲಿ ಖಂಡಿತವಾಗಿಯೂ ಆಗುವುದಿಲ್ಲ.
ದಿನ ನಿತ್ಯವೂ ನಿಮ್ಮನ್ನು ಬೈಯುವ ಅಮ್ಮ..ಒಂದು ದಿನ ಬ್ಯಾಗ್ ಹಿಡಿದುಕೊಂಡು ನೀವು ಬೇರೆ ಊರಿಗೆ ಹೊರಟು ನಿಂತಾಗ ಆಕೆಯ ಕಣ್ಣು ಗಳಲ್ಲಿ ನೇತ್ರಾವತಿ, ಪಲ್ಗುಣಿ ಯರು ಧಾರಕಾರವಾಗಿ ಹರಿದು ಬಿಡುತ್ತಾರೆ. ಕರುಳಬಳ್ಳಿಗೆ ಬೈಯಲು ಗೊತ್ತು, ಅತ್ತು ಕಣ್ಣೀರಾಗಲೂ ಗೊತ್ತು.
ಹೇಗೆ ಹೆಣ್ಣು ಮಕ್ಕಳಿಗೆ ಅಪ್ಪ ಇಷ್ಟ ಆಗುತ್ತಾರೋ, ಹಾಗೇ ಗಂಡು ಮಕ್ಕಳಿಗೆ ಅಮ್ಮ ತುಂಬಾ ಇಷ್ಟ ಆಗ್ತಾಳೆ.ಆದರೂ ಪರ ಊರಲ್ಲಿ ಇರುವಾಗ ಅಪರೂಪಕ್ಕೆ ಒಮ್ಮೆ ಕಾಲ್ ಮಾಡುವ ಅಪ್ಪನಿಗೂ ಕೂಡ ನಿಮ್ಮ ನೆನಪು ಆಗಾಧವಾಗಿ ಕಾಡುತ್ತೆ, ಆತ ಫೋನಿನಲ್ಲಿ ಕಷ್ಟ ಪಟ್ಟು ತಡವರಿಸಿಕೊಂಡು "ನೀನು.. ನೀನು ತುಂಬಾ ನೆನಪಾಗ್ತೀಯಾ ಕಣೋ.." ಎಂದು ತಡಬಡಿಸಿ ಹೇಳುವಾಗ, ಆ ಅಪ್ಪನಂತಹ ಅಪ್ಪನ ಮಾತುಗಳು, ಯಾವುದೇ ನಿಮ್ಮ ಪ್ರೇಯಸಿ ಹೇಳುವ i miss you ಎಂಬ ಮಾತಿಗಿಂತಲೂ ಯಾವತ್ತೂ ನೂರು ಪಟ್ಟು ಜಾಸ್ತಿ ತೂಕದ್ದೇ ಆಗಿರುತ್ತದೆ. ಯಾಕೆಂದರೆ ಆತ ನಿಮ್ಮ ಅಪ್ಪ.ಅಪ್ಪನಿಗೆ ನಿಮ್ಮನ್ನು ಬೈದು ಗೊತ್ತೆ ವಿನಹ ಹೊಗಳಿ ಗೊತ್ತಿಲ್ಲ. ಆದರೂ ಆತ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ಮನಬಿಚ್ಚಿ ಹೇಳಿದಾಗ ಹೃದಯ ಒಮ್ಮೆ ಹಾಗೇ ಅಲುಗಾಡಿ ಹೋಗುತ್ತೆ. ಅಪ್ಪ ಅಂದರೆ ಹಾಗೇ ಅಲ್ಲಾ ಆಕಾಶ, ಸಮುದ್ರ ಎಲ್ಲಾ. ಅರ್ಥ ಮಾಡಿಕೊಳ್ಳುವುದು ಕಷ್ಟವೇ.
ಅಮ್ಮನ ಬೈಗುಳದಲ್ಲಿ ಪ್ರೀತಿ ಇರ್ತದೆ,
ಅಪ್ಪನ ಬೈಗುಳದಲ್ಲಿ ಕಾಳಜಿ ಇರ್ತದೆ.
ಅಪ್ಪ ಆಗಲಿ, ಅಮ್ಮ ಆಗಲಿ ಚೆನ್ನಾಗಿ ಬೈಯದಿದ್ದರೆ ಉಂಡ ಊಟವೂ ಕೆಲವೊಮ್ಮೆ ಜೀರ್ಣವಾಗುವುದಿಲ್ಲ, ದಿನಾಲೂ ಬೈಗುಳವನ್ನೇ BP ಮಾತ್ರೆಯಂತೆ ತಗೊಂಡವನಿಗೆ, ಯಾಕೇ
ಏನೋ ಮಿಸ್ ಹೊಡಿತಾ ಇದೆಯಲ್ಲಾ.. ಯಾಕೆ ಅಮ್ಮ ಇವತ್ತು ಏನೂ ಗೊಣಗಲಿಲ್ಲ, ಯಾಕೆ ಅಪ್ಪ ಉಡಾಫೆ ಯ ಮಾತುಗಳನ್ನು ಆಡಲಿಲ್ಲ.. Everything is ok? ಅಂತ ಅನ್ನಿಸಿಬಿಡುತ್ತದೆ.
ಚಿಕ್ಕಂದಿನಲ್ಲಿ ಮಗುವಾಗಿದ್ದಾಗ ಎಣ್ಣೆ ಹಾಕಿ ತಿಕ್ಕಿ ತಿಕ್ಕಿ ಸ್ನಾನ ಮಾಡಿಸಿದ್ದ ಅಮ್ಮನಿಗೆ ನರಕ ಚತುರ್ದಶಿ ಬಂದರೆ ಇನ್ನೊಮ್ಮೆ ಎಣ್ಣೆ ತಿಕ್ಕಿ ಸ್ನಾನ ಮಾಡಿಸದ್ದಿದ್ದರೆ ಸಾಮಾಧಾನವೇ ಇಲ್ಲ ಆವಾಗಲೂ ಆಕೆ ಗೊಣಗುತ್ತಾಳೆ, ನಿನಗೆ ಸರಿಯಾಗಿ ಮೈ ಕೈ ತಿಕ್ಕಲು ಇನ್ನೂ ಬರುವುದೇ ಇಲ್ಲ ನೋಡು, ಕೇವಲ ದೊಡ್ಡ ಕೋಣನಂತೆ ಮಾತ್ರ ಬೆಳೆದು ಬಿಟ್ಟಿ ಎಂದು. ನೀವು ಎಷ್ಟೇ ದೊಡ್ಡವರಾಗಿ ಆಕೆಗೆ ಇನ್ನೂ ನೀವು ಮಗುವೇ.
ಹೋಟೆಲ್ ನಲ್ಲಿ ಅಪ್ಪನೊಂದಿಗೆ ತಿಂಡಿ ತಿನ್ನಲು ಹೋದಾಗ, ಬಿಲ್ ಕೊಡಲು ನೀವು ನಿಮ್ಮ ಪರ್ಸು ತೆಗೆಯಲು ಮುಂದಾದರೆ ಅಪ್ಪ ಆತನ ಸ್ಟೈಲ್ ನಲ್ಲಿ ತನ್ನ ಪರ್ಸು ತೆಗೆದು ಒಂದೆರಡು ಉಡಾಫೆ ಮಾತು ಹೇಳಿಯೇ ಹೇಳುತ್ತಾನೆ. ಯಾಕೆಂದರೆ ನಿಮ್ಮ ಅಪ್ಪನಿಗೆ ನೀವು ಮಗನೇ ಆಗಿರಲಿ ಆದರೆ ಅವನಿಗೆ ಯಾವತ್ತೂ ಬೇರೆಯವರ ಹಣದಿಂದ ತಿಂದು ಅಭ್ಯಾಸವೇ ಇಲ್ಲ.ಸ್ವಾಭಿಮಾನದ ಮೇರು ಪರ್ವತ ಆತ. ಈಗ ನಿನ್ನ ಬಳಿ ಲೆದರ್ ಪರ್ಸೆ ಇರಬಹುದು ಆದರೆ ನಿನಗೆ ಮೊದಲು ಚಿಕ್ಕ ಪರ್ಸು ತೆಗೆದು ಕೊಟ್ಟದ್ದು ನಾನೇ ಮಗನೇ.. ಅದು ನೆನಪಿರಲಿ.. ಎಂದು ಆತ ಬಾಯಿ ಬಿಟ್ಟು ಹೇಳದಿದ್ದರೂ ನಮಗೆ ಅದು ಆ ಕ್ಷಣ ಅರ್ಥ ಆಗಿಬಿಡುತ್ತದೆ.
ಹೆತ್ತವರು ಏನೇ ಹೇಳಲಿ, ಏನೇ ಬೈಯಲಿ.. ಅದು ನಮ್ಮ ಒಳ್ಳೆಯದಕ್ಕೆನೇ...
ಅದರಲ್ಲೊಂದು ನಮಗರಿವಿರದ ಪ್ರೀತಿ ಇದೆ.. ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ನಮಗಾಗಿ ಶುರುವಲ್ಲೇ ರಕ್ತ ಸುರಿಸುವ ಅಮ್ಮ,ಜೀವನ ಪೂರ್ತಿ ಬೆವರು ಸುರಿಸುವ ಅಪ್ಪ.. ಬದುಕೆಂಬ ಸರ್ಕಸ್ ನಲ್ಲಿ ಏನೇನೋ ಕಸರತ್ತು ಮಾಡಿ ನಮ್ಮದು ಬದುಕು ಹೇಗೆಯೇ ಇರಲಿ ನಮ್ಮ ಮಕ್ಕಳು ಮಾತ್ರ ಸುಖವಾಗಿರಲಿ ಎಂಬ ಏಕೈಕ ಗುರಿಯೊಂದಿಗೆ ಹಾಗೇ ಬದುಕಿ ಬಿಡುತ್ತಾರೆ.
ಅವರ ಬಾಳು ಕೊನೆಗಾಲದಲ್ಲಿ ಬೆಚ್ಚಗಿರಲಿ. ಅದನ್ನು ಒದಗಿಸಿ ಕೊಡಬೇಕಾದದ್ದು ಅವರ ಮಕ್ಕಳ ಕರ್ತವ್ಯ.
ವಯಸಸ್ಸಾದ ಮೇಲೂ ತಂದೆ ತಾಯಿ ಯರ ರೇಗಾಟ ಮುಗಿಯುವುದಿಲ್ಲ. ಆಗಲೂ ಅವರನ್ನು ಪ್ರೀತಿಯಿಂದಲೇ ಮಾತಾಡಿಸಿ. ಯಾಕೆಂದರೆ ಆ ಜೀವಗಳಿಗೆ ಬೇಕಿರುವುದು ನಿಮ್ಮ ಹಣ, ಸುಖದ ಸುಪತ್ತಿಗೆ ಅಲ್ಲಾ.. ಒಂದೆರಡು ಪ್ರೀತಿಯ ಮಾತುಗಳು, ಕಾಳಜಿ ಅಷ್ಟೇ. ಅವರ ಕೊನೆಗಾಲದಲ್ಲಿ ಸಾಧ್ಯ ಆದಷ್ಟು ಅವರ ಜೊತೆಗೆ ಇರಿ. ದೂರ ಹೋದರೂ ದಿನಕ್ಕೆ ಒಂದು ಬಾರಿ ಆದರೂ ಕಾಲ್ ಮಾಡಿ ಅವರೊಂದಿಗೆ ಹಿತವಾಗಿ ಮಾತಾಡಿ, ಫೋನ್ ಕಟ್ ಆಗುವುದಕ್ಕಿಂತ ಮೊದಲು ಎಂದಿನಂತೆ ಚೆನ್ನಾಗಿ ಒಂದೆರಡು ಬೈಗುಳಗಳನ್ನು ತಿನ್ನಲು ಮರೆಯಬೇಡಿ.
ಏಕೆಂದರೆ ಅವರು ಯಾವತ್ತೂ ಬೈಯುತ್ತಲೇ ಇರಬೇಕು..ಅದು ಅವರ ಹಕ್ಕು. ಅವರು ಬೈದು ತಿದ್ದಿ ತೀಡಿದಾಗಲೇ ಈ ಬಾಳು ಬೆಳಗುವುದು ❤️
.....................................................................................
#ಏನೋ_ಒಂದು
Ab Pacchu
Moodubidire

Comments
Post a Comment