ತಿಂದೂ ಹೋದ ಕೊಂಡೂ ಹೋದ


 ಹದವಾದ ಮಳೆ...


ಕೈಯಲ್ಲೊಂದು ಕೊಡೆ ಹಿಡಿದುಕೊಂಡು,ಅದನ್ನು ಗಿರ ಗಿರ ತಿರುಗಿಸುತ್ತಾ ಆ ಮನೆ ಎದುರು ನಿಂತಿದ್ದೆ. 


ಯಾರಿದ್ದೀರಿ ಮನೆಯಲ್ಲಿ ... ಜೋರಾಗಿ ಕೂಗಿದೆ.


ಆ ಮನೆಗೆ ಮಾತ್ರವಲ್ಲ ಪಕ್ಕದಲ್ಲಿ ಇನ್ನೊಂದು ಹತ್ತು ಮನೆ ಇದ್ದಿದ್ದರೆ ಅವರಿಗೂ ಕೇಳುತ್ತಿತ್ತೋ ಏನು. ಅಂತಹ ಕೂಗು,sorry.. ಕಂಚಿನ ಕಂಠ ನನ್ನದು. 


ಆದರೆ ಇಲ್ಲಿ ಬೇರೆಯವರಿಗೆ ಕೇಳಲು ಸಾಧ್ಯವೇ ಇಲ್ಲ.ಹತ್ತು ಎಕರೆ ತೋಟದ,ಗುಡ್ಡದ ನಡುವಿನ ಮನೆ ಅದು... ನಮ್ಮ ಪುರುಷೋತ್ತಮ ಅಂಕಲ್ ನದ್ದು. 


ಮನೆಯೊಳಗಿನಿಂದಲೇ ಪುರುಷೋತ್ತಮ ಅಂಕಲ್ ಕೂಗಿದರು... ಯಾರು....? 


ನಾನು ಅಂಕಲ್ ನೀಲಮೇಘ.. ಅಂದೆ


ಒಹ್ ನೀಲು ನಾ.. ಬಂದೆ ತಡಿ.. ಅಂದರು


ಉಟ್ಟುಕೊಂಡಿದ್ದ ಪಂಚೆ ಎಲ್ಲ ಸರಿಮಾಡಿಕೊಂಡು,ಒಂದೊಳ್ಳೆಯ ಶರ್ಟ್ ಕೂಡ ಹಾಕಿಕೊಂಡು, ಅದರ ಮೇಲೆ ಒಂದು ಶಲ್ಯ ಹಾಕಿ.. ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಮನೆಯೊಳಗಿನಿಂದ ಹೊರಗೆ ಬಂದರು ಪುರುಷೋತ್ತಮ ಅಂಕಲ್.


ಪುರುಷೋತ್ತಮ ಹೆಸರು ತುಂಬ ಉದ್ದ  ಅಲಾ, ಹಾಗಾಗಿ ನಾನು ಅವರಿಗೆ ಪುರ್ಸ ಅಂಕಲ್ ಅಂತಾನೇ ಕರೀತೇನೆ.

ಊರಲ್ಲಿ ಹೆಚ್ಚಿನವರು ಅವರಿಗೆ ಹಾಗೆನೇ ಕರಿಯೋದು.


ಬಾ ಮರಾಯ.. ಮತ್ತೆ ಏನು ಸಮಾಚಾರ.. ಅಪ್ಪ ನೀಲಣ್ಣ ಹೇಗಿದ್ದಾರೆ..


ಅವರಿಗೇನು ಬಿಡಿ ಅಂಕಲ್, ಹುಶಾರ್ ಆಗಿಯೇ ಇದ್ದಾರೆ..


ಮತ್ತೆ ವಿಶೇಷ ಎಂತ..


ನಮ್ಮದೆಂತ, ಎಲ್ಲಾ ನಿಮ್ಮದೇ ಪುರ್ಸ ಅಂಕಲ್..


ಕಲ್ತು ಆಯ್ತು ಅಲಾ.. ಕೆಲಸ ಏನಾದರೂ ಸಿಗುವ ಚ್ಯಾನ್ಸ್ ಉಂಟಾ..


ಇನ್ನೂ ಇಲ್ಲ, ಟ್ರೈ ಮಾಡ್ತಾ ಇದ್ದೀನಿ  ಅಂಕಲ್. 


ಪ್ರಯತ್ನ ಬಿಡ್ಬೇಡ.. ಯಾವಾಗಾದರೂ ಸಿಕ್ಕೇ ಸಿಗುತ್ತದೆ.


ನೀವು ಹೇಳಿದ ಮೇಲೆ ಆಯ್ತು ಅಂಕಲ್, ಇನ್ನೂ ಜಾಸ್ತಿಯೇ ಡೀಪಾಗಿ ಪ್ರಯತ್ನ ಮಾಡ್ತೇನೆ. ಅಂದೆ. 


ಮತ್ತೆ ಬೇರೆ ಸಮಾಚಾರ.


ಸಮಾಚಾರ ಅದೇ ಅಂಕಲ್ ಮೊನ್ನೆ ನೀವು ಅಪ್ಪನ ಹತ್ತಿರ ಹೇಳಿದ್ರಿ ಅಂತೆ ಅಲಾ.. ಮನೆಯಲ್ಲಿ ತುಂಬಾ ಪೆಲಕಾಯಿ(ಹಲಸಿನ ಹಣ್ಣು) ಆಗಿದೆ,ಬೇಕಿದ್ದರೆ ಒಮ್ಮೆ ನೀಲುವನ್ನು ಕಳುಹಿಸು, ಅವ ಬಂದು ಪೆಲಕಾಯಿ ತಗೊಂಡು ಹೋಗ್ಲಿ.. ನಮ್ಮ ಪೆಲಕಾಯಿ ಗಟ್ಟಿ(ಕಡುಬು) ಮಾಡ್ಲಿಕ್ಕೆ ಸ ಒಳ್ಳೆ ಆಗ್ತದೆ, ಹಾಗೇ ತಿನ್ಲಿಕ್ಕೆ ಸೆ ಒಳ್ಳೆ ಆಗ್ತದೆ.. ಅಂತ ಹೇಳಿದ್ರಿ ಅಂತೆ ಅಲಾ ನೀವು.. ಅದಕ್ಕಾಗಿ ನಾನು  ಬಂದದ್ದು ಅಂಕಲ್.


ಓಹ್ ಹೌದಲ್ಲ.. ಮರೆತೇ ಹೋಗಿತ್ತು,ನೀಲು ಒಂದು ಕೆಲಸ ಮಾಡು, ತೋಟದ ಕೊನೆಯಲ್ಲಿ ಇರೋ ಮರದಲ್ಲಿ ಹೆಚ್ಚಿನ ಹಲಸು ಹಣ್ಣಾಗಿದೆ. ನಿನಗೆ ಎಷ್ಟು ದೊಡ್ಡದು ಬೇಕೋ ನೋಡಿ ತಗೊಂಡು ಹೋಗು, ಆದ್ರೆ ನನಗೆ ಈಗ ಅರ್ಜೆಂಟ್ ಆಗಿ ಪೇಟೆಗೆ ಹೋಗ್ಲಿಕ್ಕೆ ಉಂಟು ಮಾರಾಯ, ಬೇಜಾರ್ ಮಾಡ್ಬೇಡ, ನಾನಿದ್ದರೆ ನಾನೇ ಮರ ಹತ್ತಿ ತೆಗೆದು ಕೊಡ್ತಿದ್ದೆ ಅಂದರು.


ಪರವಾಗಿಲ್ಲ ಅಂಕಲ್ ನೀವು ಹೋಗಿ ಬನ್ನಿ, ನನಗೆ ಹಲಸಿನ ಮರ, ಮಾವಿನ ಮರ, ಚಿಕ್ಕು ಮರ ಎಲ್ಲಾ ಹತ್ಲಿಕ್ಕೆ ಬರುತ್ತೆ.. ಅಡಿಕೆ ತೆಂಗು ಆಗಲ್ಲ ಅಷ್ಟೇ ಅಂದೆ.


ಪುರ್ಸ ಅಂಕಲ್ ಒಳಗಿದ್ದ ತನ್ನ ಹೆಂಡತಿಯನ್ನು ಅಂಗಳದಿಂದಲೇ ಕೂಗಿ - ವನಜ... ನೋಡು ಯಾರು ಬಂದಿದ್ದಾರೆ, ನಮ್ಮ ನೀಲಣ್ಣನವರ ಮಗ ನೀಲು ಬಂದಿದ್ದಾನೆ. ಮೊದಲು ಅವನಿಗೊಂದು ಬಿಸಿ ಬಿಸಿ ಕಾಫಿ ಮತ್ತು ಏನಾದರೂ ತಿಂಡಿ ಕೊಡು.ನಂತರ ಅವನಿಗೆ ಹಲಸಿನ ಹಣ್ಣೋ,ಅದೋ ಇದೋ ಅಂತ ಅವನಿಗೆ ಏನೇನು ಬೆಕೋ ಅದೆಲ್ಲವನ್ನೂ ನಮ್ಮ  ತೋಟದಿಂದ ತೆಗೆಸಿ ಕೊಟ್ಟು ಕಳುಹಿಸು.. ನಾನು ಈಗ ಪೇಟೆಗೆ ಹೋಗಿ ಬರ್ತೆನೆ... ಎಂದು ಹೇಳಿದರು.


ನಂತರ ಪುರ್ಸ ಅಂಕಲ್ ನನ್ನ ಬಳಿ.. ನೀಲು ನಾನು ಬರ್ತೆನೆ ಆಯ್ತಾ.. ಕಾಫಿ ಕುಡ್ದು ನಂತರ ತೋಟ ತಿರುಗಿ ಹಲಸಿಹಣ್ಣೋ ಮತ್ತೊಂದೋ ಮಗದೊಂದೋ ತಗೊಂಡು ಹೋಗು.. ಅಪ್ಪನನ್ನು ಕೇಳಿದೆ ಅಂತೆ ಹೇಳು ಆಯ್ತಾ ಎಂದು ಹೇಳಿ ಅಲ್ಲಿಂದ ಪೇಟೆ ಕಡೆಗೆ ಸವಾರಿ ಹೋಗಿಯೇ ಬಿಟ್ಟರು ಪುರ್ಸ ಅಂಕಲ್.


ಹಳೆಯ ಕಾಲದ ಮನೆ. ನಿಜವಾಗಿಯೂ ದೊಡ್ಡದಾದ ಮನೆ.ಚಚ್ಚೌಕಾರದ ಹಂಚಿನ ಮನೆ.ಮನೆಯ ಒಳಗೊಂದು ಪುನಃ ಚಿಕ್ಕ ಅಂಗಣ. ಮನೆಯ ಎದುರಿನ ಹಾಲ್ ಗೆ  ಹಾಗೂ ಮನೆಯ ಅಟ್ಟದ ಮುಚ್ಚಣಿಗೆಯಲ್ಲಿ ಕಾಷ್ಟ ಶಿಲ್ಪವನ್ನೇ ಯಥೇಚ್ಛವಾಗಿ ಬಳಸಿದ್ದರು. ಪುರ್ಸ ಅಂಕಲ್ ನ ಪೂರ್ವಜರ ಮನೆ ಇದು. ಊರಿನಲ್ಲಿ ಅತ್ಯಂತ ಪುರಾತನ ಮನೆ ಅಂತನೂ ಹೇಳಬಹುದು. ಪುರ್ಸ ಅಂಕಲ್ ಗೆ ಊರಿನಲ್ಲಿ ಒಳ್ಳೆಯ ಹೆಸರೇ ಇದೆ. 


ಮನೆಯ ಒಳಗಿಂದ ಬಂದ ವನಜ ಆಂಟಿ - ಬಾ ನೀಲು ಬಾ.. ಒಳಗಡೆ ಬಾ.. ಅಂದರು.


ಒಳಗಡೆ ಹೋಗಿ ಒಂದು ಕಡೆ ಕುಳಿತುಕೊಂಡೆ.


ಎಷ್ಟು ಸಮಯ ಆಯ್ತು ಮಾರಾಯ ನಿನ್ನನ್ನು ನೋಡದೆ, ಅಪ್ಪ ಹೇಗಿದ್ದಾರೆ.


ಪರವಾಗಿಲ್ಲ ಆಂಟಿ, ಚೆನ್ನಾಗಿಯೇ ಇದ್ದಾರೆ.


ಈಗ ಅಪ್ಪ ಮಗ ಇಬ್ಬರೇ ಅಲಾ ಮನೆಯಲ್ಲಿ .. ಅಡುಗೆ ಅದು ಇದು ಎಲ್ಲಾ ನೀವೇ ನೋಡ್ಕೋಬೇಕು,ಕಷ್ಟ ಆಗಲ್ವೆನೋ.. 


ಕಷ್ಟ ಆಗುತ್ತೆ ಆದ್ರೂ ಈಗ ಎಲ್ಲ adjust ಆಗಿದೆ ಆಂಟಿ. 


ಒಹ್ ಮರತೇ ಹೋಗಿತ್ತು ನೋಡು..ಅಂದವರೇ - ಇಂಚು ಒಂದು ಒಳ್ಳೆ ಕಾಫಿ ಮಾಡ್ಕೊಂಡು ಬಾರೇ... ನಮ್ಮ ನೀಲಣ್ಣನ ಮಗ ನೀಲಮೇಘ ಬಂದಿದ್ದಾನೆ ಅಂದರು.


ಇಂಚು.. ಅಂದರೆ ಅಳತೆ ಮಾಡುವ ಆ Inch, centimeters,meter ಎಲ್ಲಾ ಅಲ್ಲ. ಅವಳ ಹೆಸರು ಇಂಚರ ಅಂತ. ಪುರ್ಸ ಅಂಕಲ್ ಮತ್ತು ವನಜ ಆಂಟಿಯ ಏಕೈಕ ಸುಪುತ್ರಿ. 


ನಮ್ಮ ಊರಿನ ಹೆಚ್ಚಿನ ಹುಡುಗರ ಹಾರ್ಟು ಕದ್ದ ಹುಡುಗಿ. ಒಂದು ರೇಂಜಿಗೆ ಸುಂದರಿ ಸುರಸುಂದರಿಯೇ  ಅವಳು. 


ಅವಳಿಗಾಗಿ ಅದೆಷ್ಟೋ ಹುಡುಗರು ಅವಳ ಹಿಂದೆ ಬಿದ್ದಿದ್ದಾರೆ ಎಂದು ಕೇಳಿದ್ದೆ.ಆದರೆ ನಾನು ಬೀಳ್ಲಿಲ್ಲ..ಯಾಕೆ ಅಂತ ನನಗೇ ಗೊತ್ತಿಲ್ಲ. Mostly ನಂಗೆ ಮಾಡ್ಲಿಕ್ಕೆ ಅಂತ ಬೇರೆ ಎಲ್ಲಾ ಅಧಿಕಪ್ರಸಂಗವೇ ಜಾಸ್ತಿ ಇತ್ತು ಅಲಾ.. ಅದಕ್ಕಾಗಿ ಇವಳನ್ನು ಅಷ್ಟಾಗಿ ಗಮನಿಸಿಲ್ಲ ಅಂತ ಕಾಣುತ್ತೆ. 


ಅವಳಿಗೆ ಹುಡುಗರು ಅಂದರೆ ಅಲರ್ಜಿ,

ಹುಡುಗರ ಜೊತೆ ಜಾಸ್ತಿ ಮಾತಾಡೋದು ಕೂಡ ಇಲ್ಲ.


Actually ಅವಳು ಕೂಡ ಪ್ರೆಮರಿಯಲ್ಲಿ ನನ್ನ ಕ್ಲಾಸ್ ಮೇಟ್ ಆಗಿದ್ದಳು. ಆ ನಂತರ ಅವಳು ಬೇರೆ ಕಾಲೇಜು ನಾನು ಬೇರೆ ಕಾಲೇಜು.


ಗುರುತು ಪರಿಚಯ ಎಲ್ಲಾ ಭಯಂಕರವೇ ಉಂಟು, ಆದರೆ ಪರಸ್ಪರ ಮಾತಾಡೋದು ಕಡಿಮೆಯೇ..


ಇಂಚು ಕಾಫಿ ತಂದು ಇಟ್ಟಳು.. ಅಲ್ಲೇ ಪಕ್ಕದಲ್ಲಿ ನಿಂತುಕೊಂಡು  ನನ್ನನ್ನೇ  ನೋಡತೊಡಗಿದಳು.


ಹಿಂದೆ ಎಷ್ಟು ಚಿಕ್ಕ ಇದ್ದಳು ಇವಳು. ಸ್ಕೂಲ್ ಗೆ ಎಲ್ಲಾ ನನ್ನ ಜೊತನೇ ಬರ್ತಾ ಇದ್ದಳು. ಈಗ ಬೆಳೆದು ಎಷ್ಟು ದೊಡ್ಡವಳಾಗಿದ್ದಳೆ. ನನ್ನ ಗುರ್ತವೇ ಇಲ್ಲದ ಹಾಗೆ ಮಾಡ್ತಾಳೆ.

ರೋಡ್ ಅಲ್ಲಿ ನೋಡ್ಲಿಕ್ಕೆ  ಸಿಕ್ರೆ ಕೂಡ ಒಂಚೂರು ನಗುವುದಿಲ್ಲ.ಎಲ್ಲಾ ಹುಡುಗರು ಇವಳ ಹಿಂದೆ ಬಿದ್ದು ಇವಳಿಗೆ  ಭಯಂಕರ ಕೊಬ್ಬು ಬಂದಿದೆ. ಈ ಹುಡುಗರಿಗೆ ನಿಜವಾಗಿಯೂ ಬಾಷೆ ಇಲ್ಲ ಮರ್ರೆ ..ಹುಡುಗಿಯರಿಗೆ ಭಯಂಕರ ಡಿಮ್ಯಾಂಡ್ ಬರುವಂತೆ ಮಾಡುವುದೇ ಇವರು.. ಮನಸ್ಸಲ್ಲೇ ಅಂದುಕೊಂಡೆ. 


ಕಾಫಿ ಏನೂ ಚೆನ್ನಾಗಿರಿಲಿಲ್ಲ..ತುಂಬಾನೇ ಕೆಟ್ಟದಾಗಿತ್ತು. ಆದರೂ ಕೆಟ್ಟದಾಗಿದೆ ಎಂದು ಹೇಳುವ ಹಾಗಿಲ್ಲ ಅಲಾ, ಅದು ಬೇರೆ ಕಾಫಿ ಮಾಡಿದವಳು ಕಾಫಿ review ಗಾಗಿ, feed back ಗಾಗಿ ಅಲ್ಲೇ ಇನ್ನೂ ನಿಂತು ನಾನು ಕಾಫಿ ಹೀರುವುದನ್ನೇ ಎವೆಯಿಕ್ಕದೇ ನೋಡ್ತಾ ಇದ್ದಾಳೆ.. ಅದಕ್ಕಾಗಿ ಏನಾದರೊಂದು ಹೇಳಲೇಬೇಕಿತ್ತು


ಅದಕ್ಕಾಗಿಯೇ  ಹೇಳಿದೆ.. ಆಹಾ ಕಾಫಿ ನಾ ಇದು.. ಅಮೃತ ಅಮೃತ ತರಹ ಇದೆ. ಈ ತರಹ ಕಾಫಿ ಕುಡಿಯೋಕೆ ಒಂದಾ  ತುಂಬಾನೇ ಅದೃಷ್ಟ ಮಾಡಿರ್ಬೇಕು.. ಇಲ್ಲವೇ ಪೂರ್ವಜನ್ಮದ ಪುಣ್ಯ ಇರ್ಬೇಕು ಅಂದೆ.


ಹೌದಾ... ಇಂಚು ಇನ್ನೊಂದು ಲೋಟ ಕಾಫಿ ತಾರೆ, ನೀಲುಗೆ ಬಾರಿ ಇಷ್ಟ ಆಯ್ತು ಅಂತ ಕಾಣುತ್ತೆ ನೀನು ಮಾಡಿದ  ಕಾಫಿ..ಅಂದರು ವನಜ ಆಂಟಿ. 


ಲೋಟ ಯಾಕೆ ಚೊಂಬಲ್ಲೇ ತರ್ತಿನಿ ಅಮ್ಮಾ.. ಅಂತ ಸೀದಾ ಒಳಗೆ ಹೋದಳು ಇಂಚು. 


ಅವಳು ನಿಜವಾಗಿಯೂ ಮನೆಯಲ್ಲಿ ಇದ್ದುದರಲ್ಲೇ ದೊಡ್ಡದಾದ   ಚೊಂಬೊಂದರಲ್ಲಿ ಕಾಫಿ ಹಾಕಿ ಅದನ್ನು ತಂದು ನನ್ನೆದುರು ಇಟ್ಟಿದ್ದಳು.


ಆದರೂ ನಾನು ಏನನ್ನೂ ತೋರಿಸಿಕೊಳ್ಳದೇ.. ಈ ಮಳೆಗೆ ಕಾಫಿ ಜೊತೆಗೆ ಬಿಸಿ ಬಿಸಿಯಾಗಿ ಏನಾದರೂ ಸೈಡ್ ಅಲ್ಲಿ ತಿನ್ಲಿಕ್ಕೆ ಕೂಡ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ ಆಂಟಿ ಅಂದೆ. 


ಓಹ್ ಮರೆತೇ ಹೋಗಿತ್ತು.. ಇಂಚು ನೀನು ಈಗಷ್ಟೇ ಮಾಡಿಟ್ಟ ಹಲಸಿನ ಹಣ್ಣಿನ ಮುಳುಕ ಇತ್ತಲ್ಲ.... ಅದನ್ನೇ  ಒಂದು ಪ್ಲೇಟ್ ನಲ್ಲಿ ಹಾಕಿ ತಾರೇ ನಮ್ಮ ನೀಲು ಗೆ ಅಂದರು.


ಇಂಚು ಒಳಗೆ ಹೋಗಿ ಒಂದು ಪ್ಲೇಟ್ ನಲ್ಲಿ ನಾಲ್ಕು ಮುಳುಕ ತಂದಿಟ್ಟಳು.


ಒಮ್ಮೆಗೆ ಎಲ್ಲವನ್ನೂ ತಿಂದು ಸಪಾಯಿ ಮಾಡಿದೆ. ನಿಜವಾಗಿಯೂ ಬಹಳ ರುಚಿಯಾಗಿತ್ತು ಅದು.


ಇದನ್ನು ಕೂಡ ಇಂಚರವೇ ಮಾಡಿದ್ದ... ಆಹಾ ಎಂತಹ ರುಚಿ.. ಎಂತಹ ರುಚಿ ... ಇದನ್ನು ನಾಲ್ಕು ತಿಂದ್ರೆ.. ಇನ್ನೂ ನಾಲ್ಕು ತಿನ್ಬೇಕು ಅಂತ ಅನ್ನಿಸುತ್ತೆ.. ಅಂತಹ ಟೇಸ್ಟ್ ಇದೆ ಅಂದೆ.


ವನಜ ಆಂಟಿಗೆ ಅರ್ಥ ಆಯಿತು..ಖಂಡಿತಾ.. ನಾಲ್ಕು ಅಲ್ಲ ಹತ್ತು ತಿನ್ನುವೆ ಅಂತೆ, ಇಂಚು ಇನ್ನು ಸ್ವಲ್ಪ ಮುಳುಕ ತಾರೇ ಅಂದರು ಮಗಳಿಗೆ.


ಇವ ಯಾವ ಸೀಮೆ ಬಕಾಸುರ ಮರ್ರೆ ಅಂತ ಅವಳಿಗೆ ಅನ್ನಿಸಿತೋ ಎನೋ..ಒಮ್ಮೆ ನನ್ನನ್ನೇ ಮೇಲೆ ಕೆಳಗೆ ನೋಡಿದಳು.. ನಂತರ ಸೀದಾ ಒಳಗೆ ಹೋದವಳೇ,ಮಾಡಿ ಇಟ್ಟಿದ್ದ  ಎಲ್ಲಾ ಮುಳುಕವಿದ್ದ ಆ ಒಂದು ದೊಡ್ಡ ಬಾಣಲೆಯಂತಹ ಪಾತ್ರೆಯನ್ನೇ ತಂದು ನನ್ನ ಎದರು ಇಟ್ಟಳು, sorry.. ಕುಕ್ಕಿದಳು.


ಇಷ್ಟೆಲ್ಲಾ ಒಬ್ಬನೇ ನಾನು ಹೇಗೆ ತಿನ್ಲಿ..ಮನುಷ್ಯ ಆದವನು ಜಾಸ್ತಿ ಅಂದ್ರೆ ಇನ್ನೂ  ನಾಲ್ಕು ತಿನ್ಬಹುದಪ್ಪ  ಅಷ್ಟೇ.. ಒಳಿದಿದನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಇಲ್ಲ ಪೇಪರ್ ನಲ್ಲಿ  ಕಟ್ಟಿ ಕೊಟ್ಟರೆ ಮನೆಗೆ ಹೋಗಿ ಆರಾಮಾಗಿ ತಿನ್ಬಹುದಿತ್ತು ಆಂಟಿ ಅಂದೆ.


ಇಂಚು ಒಂದು ದೊಡ್ದ ಪ್ಲಾಸ್ಟಿಕ್ ಕವರ್ ನಲ್ಲಿ ಉಳಿದ ಎಲ್ಲಾ ಮುಳುಕ ಕಟ್ಟಿ ಕೊಡೆ..ನೀಲುಗೆ  ಮನೆಗೆ ಹೋದ ಮೇಲೆ ತಿನ್ಲಿಕ್ಕೆ ಆಗ್ತದೆ ಅಂದರು.


ಅವಳು ಹೂಂ.. ಅನ್ನುತ್ತಾ ನಾಲ್ಕು ಮುಳುಕ ವನ್ನು ನನ್ನ ಪ್ಲೇಟ್ ನಲ್ಲಿ ಬಿಟ್ಟು ಉಳಿದ ಎಲ್ಲವನ್ನೂ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ನಿಧಾನವಾಗಿ ಕಟ್ಟ ತೊಡಗಿದಳು.


ನಾನು ಕೂಡ ನಿಧಾನವಾಗಿ ಮತ್ತೊಮ್ಮೆ ಪ್ಲೇಟ್ ನಲ್ಲಿ ಇದ್ದ  ಮುಳುಕ ಸವಿಯಲು ತೊಡಗಿದೆ.


ಮತ್ತೆ ನೀಲು ಕೆಲಸ ಏನಾದರೂ ಸಿಕ್ಕಿತೆನೋ.. ಈ ವರ್ಷ ಆದರೂ ಏನಾದರೂ ಕೆಲಸ  ಸಿಗುವ ಲಕ್ಷಣಗಳು ಇವೆಯಾ..ಅಥವಾ ಇಲ್ಲವಾ.. ವನಜ ಆಂಟಿ ಕೇಳಿದರು.


ಕೆಲಸ ಏನೋ ತುಂಬಾ ಇದೆ ಆಂಟಿ, ಆದ್ರೆ ನಾನೇ ಹೋಗಲ್ಲ ಅಷ್ಟೇ .. ಅಂದೆ ಮುಳುಕ ತಿನ್ನುತ್ತಾ.. 


ಯಾಕೆ.. ಡಿಗ್ರಿ ಮುಗಿದು ಒಂದು ವರ್ಷ ಮೇಲೆ ಆಯಿತು ಅಲ್ವೆನೋ.. 


ಯಾರೂ ನನ್ನನ್ನು ಸೆಲೆಕ್ಟ್ ಮಾಡಲ್ಲ..ಅದಕ್ಕೆ ನಾನು ಹೋಗಲ್ಲ.. ಅಂದೆ ಇನ್ನೊಂದು ಮುಳುಕ ಬಾಯಿಗೆ  ಇಡುತ್ತಾ. 


ವನಜ ಆಂಟಿ ನನ್ನನ್ನೇ ಒಮ್ಮೆ ಮೇಲೆ ಕೆಳಗೆ ನೋಡಿದರು.


ಅಲ್ಲೇ ಮುಳುಕವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟುತ್ತಿದ್ದ ಇಂಚರ ಒಮ್ಮೆಲೇ ಉಕ್ಕಿ ಬಂದ ನಗುವನ್ನು ಬಾಯಿಗೆ ಕೈ ಅಡ್ಡ ಹಿಡಿದು ಕಷ್ಟಪಟ್ಟು ಹಾಗೇ  ತಡೆದುಕೊಂಡು ಬಿಟ್ಟಳು.


ಈ ಮರ್ಲನಿಗೆ ಯಾರು ಕೆಲಸ ಕೊಡುತ್ತಾರೆ ಅನ್ನುವಂತಿತ್ತು ಅವಳ expression.


ವನಜ ಆಂಟಿ Actually ನಾನು ಪೆಲಕಾಯಿ ತಗೊಂಡು ಹೋಗ್ಲಿಕ್ಕೆ ಅಂತ ಬಂದಿದ್ದು .. ಅಂತ  ಪ್ಲೇಟ್ ನಲ್ಲಿ ಇದ್ದ ಎಲ್ಲಾ ಮುಳುಕ ಖಾಲಿ ಆದ ಮೇಲೆ ಅವರಿಗೆ ಮತ್ತೆ ನೆನಪು ಹುಟ್ಟಿಸಿದೆ.


ನೀಲು ನಂಗೆ  ಕಾಲಿಗೆ ಸ್ವಲ್ಪ ನಂಜು ಆಗಿದೆ, ಹಾಗಾಗಿ ಹೊರಗೆ ಹೋಗ್ಲಿಕ್ಕೆ ಸ್ವಲ್ಪ ಕಷ್ಟ. ನೀನೇ ಹೋಗಿ ನಿನಗೆ ಬೇಕಾದಷ್ಟು ಪೆಲಕಾಯಿ ತೆಗೆದುಕೊಂಡು ಬರ್ತಿಯಾ..


No problem ಆಂಟಿ, ನಾನೇ ಹೋಗಿ ತರ್ತೇನೆ.. ಅದೂ ಕೂಡ ಬೇಕಾದಷ್ಟು ಏನೂ ಬೇಡ, ಒಂದು ಸಾಕು.


ಆಯ್ತಪ್ಪ.. ಬೇಕಾದರೆ ಇಂಚುನನ್ನು ಕಳುಹಿಸಿಕೊಡ್ತೇನೆ. ನಮ್ಮ ತೋಟದಲ್ಲಿ ಬೇರೆ ಏನೇ ಬೇಕಿದ್ದರೆ ಧಾರಾಳವಾಗಿ ತಗೊಂಡು ಹೋಗು..ಅಂದವರು ಇಂಚರನ ಕಡೆಗೆ ತಿರುಗಿ


ಇಂಚು ಅವನ ಜೊತೆ ಹೋಗಿ, ಅವನಿಗೆ ಪೆಲಕಾಯಿ ಅಥವಾ ಇನ್ನೇನಾದರೂ ಬೇಕಾದರೆ  ಅವೆಲ್ಲವನ್ನೂ ತೆಗೆದುಕೊಡು.. ನನಗೆ ಅಡುಗೆ ಮಾಡ್ಲಿಕ್ಕೆ ಉಂಟು ಎಂದು ಹೇಳಿ ಅಡುಗೆ ಕೋಣಿಯತ್ತ ನಡೆದರು.


ಈಗ ನಾನು ಮತ್ತು ಇಂಚರ ಅವರ ದೊಡ್ಡದಾದ ತೋಟದಲ್ಲಿ ನಡೆಯುತ್ತಿದ್ದೆವು. ನಮ್ಮ ನಡಿಗೆ ತೋಟದ ಅಂಚಿನಲ್ಲಿರುವ ಪೆಲಕಾಯಿಯ ಮರದ  ಕಡೆಗೆ ಸಾಗಿತ್ತು.


ಅಲ್ಲಿಯೇ ಒಂದು ದೊಡ್ಡ ಪೇರಳೆ ಮರ ಇತ್ತು. ಅದರಲ್ಲಿ ರಾಶಿ ರಾಶಿ ಪೇರಳೆಗಳಿದ್ದವು. ಹಾಗೇ ಹಾರಿ ಒಂದು ಪೇರಳೆ ತೆಗೆದೆ.. ತೆಗೆದು ಕಚ್ಚಿ ತಿಂದೆ..


ಹಾಗೆ ಹಾರಿ ಪೇರಳೆ ತೆಗೆಯುವಾಗ ಆ ಮರದಲ್ಲಿ ಇದ್ದ  ಮಳೆಯ ನೀರೆಲ್ಲವೂ  ಇಂಚರಳ ಮೈ ಮೇಲೆ ಬಿತ್ತು.ಅವಳು ಒದ್ದೆಯಾಗಿ  ನನ್ನನ್ನೇ ದುರುಗುಟ್ಟಿ ನೋಡಿದಳು. 


ಒಳ್ಳೆ ರುಚಿ ಉಂಟು ಪೇರಳೆ ಇದು, ನಮ್ಮ ಮನೆಯಲ್ಲಿ ರೆಡ್ ಕಲರಿದ್ದು ಉಂಟು ಗೊತ್ತುಂಟಾ... ಆದ್ರೆ ಸ ಇದು ಒಂದು ಹತ್ತು ಇರ್ಲಿ.. ವಾಪಸ್ ಹಿಂದೆ ಬರುವಾಗ  ತಗೊಂಡು ಹೋಗ್ತೇನೆ.. ಪುರ್ಸ ಅಂಕಲ್ ವನಜ ಆಂಟಿ ಇಬ್ಬರೂ ಹೇಳಿದ್ದಾರೆ ಅಲಾ.. ನೀಲುಗೆ ಏನು ಬೇಕು ಅದೆಲ್ಲವನ್ನೂ ಕೊಟ್ಟು ಕಳುಹಿಸು ಅಂತ... ಹೇಗೆ ನೆನಪು ಉಂಟು ಅಲ್ವಾ ನಿಂಗೆ.. ಅಂದೆ.


ಹೂಂ..ಉಂಟು ಅಂದಳು.


ಸ್ವಲ್ಪ ಮುಂದೆ ಹೋದಾಗ.. ಒಂದು ತೆಂಗಿನ ಮರದಲ್ಲಿ ಗೆಂದಾಳೆ ಬೊಂಡಗಳು(ಎಳನೀರು) ತುಂಬಿಕೊಂಡು ಕೈಗೆ ಸಿಗುವ ಎತ್ತರದಲ್ಲಿ ಇತ್ತು.


ನಂಗೆ ಒಂದು ಬೊಂಡ ಬೇಕು ಅಂದೆ.


ತೆಗೆದು ಕುಡಿ.. ಯಾರು ಬೇಡ ಅಂದ್ರು ಅಂದಳು.


ಅಲ್ಲೇ ಅವರ ತೋಟದಲ್ಲಿ ಒಬ್ಬರು ಕೆಲಸ ಮಾಡುತ್ತಿದ್ದರು ಅವರ ಬಳಿ ಕತ್ತಿ ತೆಗೆದುಕೊಂಡು ಒಂದು ಬೊಂಡ ಕೆತ್ತಿ  ಕುಡಿದೆ.


ತುಂಬಾ ಸಿಹಿ ಇತ್ತು,ಇನ್ನೊಂದು ಬೊಂಡ ಕುಡಿದೆ ನಾನು .


ಈ ಬೊಂಡ ಬಾರೀ ಸಿಹಿ ಇದೆ. ನನಗೆ ಹೋಗುವಾಗ ಒಂದು ಕೈಲು(ಗೊನೆ) ಬೊಂಡ ಬೇಕು ಆಯ್ತಾ ಅಂದೆ.


ನಾಗರ ಪಂಚಮಿ ಇನ್ನೂ ಲೇಟ್ ಉಂಟಲ್ಲಾ.. ಅಂದಳು. 


ಅಭಿಷೇಕಕ್ಕೆ ಅಲ್ಲ ಮರ್ರೆ... ಲಾಕ್ ಡೌನ್ ಅಲ್ವಾ.. ಮನೆಯಲ್ಲಿ ಕುಳಿತುಕೊಂಡು ದಿನಕ್ಕೊಂದು ಬೊಂಡ ಕುಡಿಯಿಲಿಕ್ಕೆ ಒಳ್ಳೆ ಆಗ್ತದೆ.. ಮತ್ತೆ ಬೊಂಡ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಅಲ್ವಾ.. ತಂಪು ಸ.. ಇವಳಿಗೆ ಅದು ಸ ಗೊತ್ತಿಲ್ಲಾ ಯೆಬಾ.. ಅಂದೆ.


ಹೂಂ.. ಬಿಟ್ಟಿ ಸಿಕ್ರೆ ಎಲ್ಲವೂ ಒಳ್ಳೆಯದೇ.. ಅವಳಷ್ಟಕ್ಕೆ ಗೊಣಕಿದಳು.


ನನಗೆ ಅದು ಸ್ಪಷ್ಟವಾಗಿ ಕೇಳಿತು, ಆದ್ರೆ ನಾನು react ಮಾಡ್ಲಿಲ್ಲ ಅಷ್ಟೇ.


ಸ್ವಲ ಮುಂದೆ ಹೋದಾಗ ಜೀ ಗುಜ್ಜೆಯ (ದೀವಿಹಲಸು) ಮರ ನೋಡಿದೆ.ಅದರಲ್ಲಿ ಕೂಡ ಯಥೇಚ್ಛವಾಗಿ ಜೀಗುಜ್ಜೆ ಇತ್ತು.


ಇದರ ಪೋಡಿ ಮಾಡಿದ್ರೆ ಸೂಪರ್ ಆಗ್ತದೆ ಗೊತ್ತುಂಟಾ , ನಮ್ಮ ಮನೆಯಲ್ಲಿ ಅಪ್ಪ ಮಾಡ್ತಾರೆ ಅಂದೆ.


ನಾವು ಕೂಡ ಮಾಡ್ತೇವೆ.. ನಮ್ಮ ಮನೆಯಲ್ಲಿ  ರವಾ ಹಾಕಿ ತವಾ ಫ್ರೈ ಅನ್ನೇ ಮಾಡ್ತೀವಿ ಅಂದಳು.


ಹೌದಾ... ಹಾಗಾದರೆ ನೆಕ್ಸ್ಟ್ ಟೈಂ ತವಾ ಫ್ರೈ ಮಾಡಿದಾಗ ಮರೆಯದೇ ನನ್ನನ್ನು ಕರಿ.. ಇಲ್ಲಾಂದ್ರೆ ಡಬ್ಬದಲ್ಲಿ ಹಾಕ್ಬಿಟ್ಟು ಕಳುಹಿಸಿದ್ರೂ ಓಕೆ..ಮಳೆಗಾಲದಲ್ಲಿ ತಿನ್ಲಿಕ್ಕೆ ಒಳ್ಳೆ ಆಗ್ತದೆ ಅಂದೆ.


ಏನೂ ಹೇಳ್ಲಿಲ್ಲ ಅವಳು, ನನ್ನನ್ನೇ ಮೇಲೆ ಕೆಳಗೆ ನೋಡಿದಳು.


ಹಾನ್ ಇದು ಒಂದು ನಾಲ್ಕು...ಇಲ್ಲ ನಾಲ್ಕು ಬೇಡ ಐದು ಇರ್ಲಿ... ಕಜಿಪಿಗೆ(curry ಗೆ) ಸ ಬೇಕು..ಪೋಡಿಗೆ ಸ ಬೇಕು...ಮತ್ತೆ ತವಾ ಫ್ರೈ ಗೆ ಕೂಡ ಬೇಕು ಅಂದೆ.


ಹೂಂ... ಅಂದಳು.


ತೋಟವನ್ನೇ ಸೂಕ್ಷ್ಮವಾಗಿ ನೋಡಿದೆ ಎಲ್ಲಾ ಕಡೆಗೆ sprinkler ಹಾಕಿದ್ದರು, ಮಳೆಗಾಲದಲ್ಲಿ ಕೂಡ sprinkler ಆನ್ ಮಾಡಿ ಗಿಡಗಳಿಗೆ ನೀರುಣಿಸುತ್ತಾರೆ ಅವರು ಎಂದು ಗೊತ್ತಾಯಿತು.


ನೋಡು ಇಂಚು ನೀವು ಸರಿಯಾಗಿ ಕೃಷಿ ಮಾಡ್ತಾ ಇಲ್ಲ. ಅನಗತ್ಯವಾಗಿ ಅಂತರ್ಜಲ ವನ್ನು ಹಾಳು ಮಾಡ್ತಾ ಇದ್ದೀರಾ..ಈ sprinkler ಎಲ್ಲಾ ತೆಗದು ಹಾಕಿ drip irrigation ಮಾಡಿ, ಅದು ಎಲ್ಲಕ್ಕಿಂತ best, ನೀರು ಸ ತುಂಬಾ ಉಳಿಸಬಹುದು. ಅದೂ ಅಲ್ಲದೇ ನಿಮ್ಮ ಗುಡ್ಡದ ಮೇಲೆ ಸಾಕಷ್ಟು ಇಂಗು ಗುಂಡಿ ಮಾಡಿದ್ರೆ ಅಂತರ್ಜಲ ಮಟ್ಟ ಏರುತ್ತದೆ. ಬೇಸಿಗೆಯಲ್ಲಿ ಸ ಕೆರೆ ಬಾವಿಗಳಲ್ಲಿಯೇ ಬೇಕಾದಷ್ಟು ನೀರು ಸಿಗ್ತದೆ.. ಈ ಕೆರೆ ಬಾವಿಗಳು ಇರುವಾಗ ಸುಮ್ಮನೆ ಬೋರು ಕೊರೆಸುವುದು ಯಾಕೆ..ಅದೂ ನಮ್ಮ ಈ ಹಳ್ಳಿಯಲ್ಲಿ.ನೀವು ಅಮೂಲ್ಯ ಜಲವನ್ನು ಒಟ್ರಾಸಿ ಹಾಳು ಮಾಡುತ್ತಿದ್ದಿರಾ.. ನಿಮಗೆ ನೆಲ ಜಲ ಸಂರಕ್ಷಣೆ ಯ ಬಗ್ಗೆ ಒಂದು ಚೂರು awareness ಇಲ್ಲ ಅಂದೆ


ನೀನು Environment ಇಲ್ಲ Agricultural ಅಲ್ಲಿ ಡಿಗ್ರಿ ಮಾಡಿದ್ದಾ.. ಅಥವಾ ಇಂಜಿನಿಯರಿಂಗ್ ನಲ್ಲಿ  ಮಾಡಿದ್ದಾ...ಕೇಳಿದಳು. 


ಇಂಜಿನಿಯರಿಂಗ್.. 


ಮತ್ತೆ ಇದೆಲ್ಲಾ ಹೇಗೆ..


ನಾವು ಹಾಗೇ.. ನಮಗೆ ನಮ್ಮದು ಬಿಟ್ಟು ಬೇರೆ ಎಲ್ಲಾ  ಗೊತ್ತಿರುತ್ತದೆ.. ಸ್ವಲ್ಪ ಜಾಸ್ತಿಯೇ ಗೊತ್ತಿರುತ್ತದೆ, ಅಂದೆ. 


ಅದ್ಕೆ ನಿಂಗೆ ಇನ್ನೂ ಕೆಲಸನೇ ಸಿಕ್ಕಿಲ್ಲ... ಅಮ್ಮ ಕೂಡ ಇದನ್ನೇ ಹೇಳ್ತಾ ಇದ್ಲು.. ಅಂದಳು ಇಂಚು.


ನಿಂಗೆ ಕೆಲಸ ಸಿಕ್ಕಿದೆಯಾ...


ಇಲ್ಲ.. ನಾನು honest ಆಗಿ ಪ್ರಯತ್ನ ಪಡ್ತಾ  ಇದ್ದಿನಿ.. ನಿನ್ನ ಹಾಗೆ ಏನೆನೋ ಮರ್ಲ್ ಕಟ್ಟಲ್ಲ.. ಅದೂ ಅಲ್ಲದೇ ಏನೂ ಸಿಗದಿದ್ದರೆ ಮುಂದೆ PG ಆದರೂ ಮಾಡ್ತೀನಿ ಅಂದ್ಳು.


ಅವಳು Bsc ಮುಗಿಸಿದ್ದಾಳೆ.


ನಾನೂ ಏನಾದರೂ ಒಂದು ಮಾಡ್ತೀನಿ..

ಆದ್ರೆ ಏನು ಮಾಡ್ಬೇಕು ಅಂತ ಗೊತ್ತಿಲ್ಲ ಅಷ್ಟೇ.. ನಾನು ಮಾಡಿದ್ರೆ ಏನಾದರೂ ಒಂದು own ಬ್ಯುಸಿನೆಸ್ ಮಾಡಿಯೇ ಸಕ್ಕತ್ ದುಡ್ಡು ಮಾಡ್ಬೇಕು ಅಂತ ಇದ್ದೆನೆ  ಅಂದೆ.


ಆಯ್ತಪ್ಪ.. ಮಾಡು ಮಾಡು... ಈಗ ಮುಂದೆ ನಡಿ ಅಂದಳು.


ನಮ್ಮ ನಡೆ.. ಪೆಲಕಾಯಿ ಮರದ ಕಡೆಗೆ ಸಾಗಿತ್ತು.


ತೋಟದ ಅಂಚಿನಲ್ಲಿ ಇತ್ತು ಪುರ್ಸ ಅಂಕಲ್ ಹೇಳಿದ ಹಲಸಿನ ಮರ.


ಸ್ವಲ್ಪ ಮುಂದೆ ಹೋದಾಗ ಕೋಕೋ ಗಿಡ ಇತ್ತು.


ಪಕ್ಕಕ್ಕೆ ಗೊತ್ತಾಗಲಿಲ್ಲ ಇದೇನು ಕೇಳಿದೆ


ನಿಂಗೆ ಇದು ಗೊತ್ತಿಲ್ವಾ.. ಇದು ಕೋಕೋ..


ಅಂದ್ರೆ ಚಾಕ್ಲೇಟು ಮಾಡ್ತಾರೆ ಅಲಾ.. ಅದಾ..?


Yessss ಅದೇ..


ನೆಕ್ಸ್ಟ್ ಮನೆಯಲ್ಲಿ ಚಾಕ್ಲೇಟು ಮಾಡಿದ್ರೆ ನಂಗೆ ಸ ಸ್ವಲ್ಪ ಕೊಟ್ಟು ಕಳುಹಿಸಿ ಆಯ್ತಾ..


ಎಷ್ಟು ನಾಲ್ಕು ಡಬ್ಬ ಸಾಕಾ..


ಹಾನ್ ಸದ್ಯಕ್ಕೆ ನಾಲ್ಕು ಸಾಕು... ಖಾಲಿ ಆದ ಮೇಲೆ ಹೇಗೋ ನಾನು ಈ ಕಡೆ ಬರ್ಲಿಕ್ಕೆ ಇದ್ದದ್ದೇ  ಅಲ್ವಾ.. 


ಅವಳು ಕೈ ಕಟ್ಟಿಕೊಂಡು ನನ್ನನ್ನೇ ನೋಡಿದಳು... ಅವಳು ನೋಡಿದ ರೀತಿಗೆ ಬಹುಶಃ ಕೋಕೋ ದಿಂದ ಚಾಕ್ಲೇಟು ಮನೆಯಲ್ಲಿಯೇ ಮಾಡ್ಲಿಕ್ಕೆ ಅಷ್ಟು ಸುಲಭ ಇಲ್ಲ ಅಂತ ಕಾಣುತ್ತೆ.. ಅಂತ ಅನ್ನಿಸಿತು.


ಸದ್ಯಕ್ಕೆ ಇದೊಂದು ಹತ್ತು ಮಾತ್ರ ಇರ್ಲಿ ಆಯ್ತಾ.. ಮತ್ತೆ ವಾಪಸ್ ಹೋಗುವಾಗ ತಗೊಂಡು ಹೋಗ್ತೇನೆ.


ಹೂಂ... ಅಂದಳು ಇಂಚು.


ಕೋಕೋ ಇದ್ದ ಮೇಲೆ ವೆನಿಲ್ಲಾ ಬಳ್ಳಿ ಕೂಡ ಇರ್ಬೇಕು ಅಲಾ.. ನಂಗೆ ಇಪ್ಪತ್ತು ಒಣ ಕೋಡು ಬೇಕು. ಮನೆಯಲ್ಲಿ ಹೋಗಿ ವೆನಿಲ್ಲಾ ಪ್ಲೇವರ್ ಐಸ್‌ಕ್ರೀಂ ಮಾಡ್ತೇನೆ.


ಐಸ್‌ಕ್ರೀಂ ಮಾಡ್ಲಿಕ್ಕೆ ಬರುತ್ತಾ ನಿಂಗೆ..


YouTube ಇದ್ರೆ ಎಲ್ಲಾ ಬರುತ್ತೆ.


ಅಪ್ಪನಿಗೆ ಹೇಳಿ ನಿಂಗೆ ಸ್ವಲ್ಪ ವೆನಿಲ್ಲಾ ಬಳ್ಳಿ ಕೊಡಿಸ್ತೇನೆ, ಯಾಕೆ ನೀನು ಅದರ ಕೃಷಿ ಮಾಡಿ ಸಕ್ಕತ್ ದುಡ್ಡು ಮಾಡ್ಬಾರ್ದು .. ಹೇಗೋ ನಿನಗೆ ಕಂಪನಿ ಕೆಲಸ ಬೇಡ.. ವೆನಿಲ್ಲಾಕ್ಕೆ ಜಾಸ್ತಿ ಜಾಗ ಕೂಡ ಬೇಡ. ನಿಮ್ಮಲ್ಲಿ ಇದ್ದ ಜಾಗ ಸಾಕು.ಸರಿಯಾಗಿ ಕೃಷಿ ಮಾಡಿದರೆ ಇದ್ದ ಜಾಗದಲ್ಲಿ ಬಂಗಾರ ತೆಗೆಯಬೇಕು ಅಂದಳು.


ವಜ್ರ, ವೈಢೂರ್ಯ ತೆಗಿಲಿಕ್ಕೆ ಆಗಲ್ವಾ..


ಅದನ್ನೂ ತೆಗೆಯಬಹುದು, ಹಾರೆ ಪಿಕ್ಕಾಸು ಸಬ್ಬಲ್ ತೆಗೆದುಕೊಂಡು ಯಾವುದಾದರೂ ಗುಡ್ಡ ಅಗೆ....


ಗುಡ್ಡ ಅಗೆದರೆ ವಜ್ರ ಸಿಗ್ತದಾ..


ನಮ್ಮ ಗುಡ್ಡದಲ್ಲಿಯೇ  ಅಗೆ.. ಕೊನೆಯ ಪಕ್ಷ ನಮಗೆ ಇಂಗು ಗುಂಡಿ ಮಾಡಿ ಕೊಟ್ಟ ಹಾಗೇ ಕೂಡ ಆಗ್ತದೆ. ಹೇಗೋ ನಿನಗೆ ಇಂಗು ಗುಂಡಿಗಳ ಬಗ್ಗೆ ಅಪಾರವಾದ concern ಉಂಟಲ್ಲಾ ..


ಪರವಾಗಿಲ್ಲ ಚೆನ್ನಾಗಿಯೇ ಮಾತಾಡ್ತಿ ನೀನು..


ನಿನ್ನಷ್ಟು ಅಲ್ಲ ಅಂದಳು..


ಹೌದು ಕೇಳಿದ್ದೆ.. ನಿನ್ನ ಹಿಂದೆ ಊರಿನ  ಎಲ್ಲಾ ಹುಡುಗರು ಬಿದ್ದಿದ್ದಾರಂತೆ..ಆದರೂ ಯಾರನ್ನು ನೀನು ಓಕೆ ಮಾಡಿಲ್ಲ ಅಂತೆ. ಯಾಕೆ ಹಾಗೆ ನೀನು. 


ನಂಗೆ ಅವರೆಲ್ಲ ಇಷ್ಟ ಆಗಲ್ಲ ..


ಏನು ಮಾಡೋದು ಸಮಾಜದಲ್ಲಿ ಎಲ್ಲಾ ಕಡೆ ನನಂತಹ ಒಳ್ಳೆಯ ಹುಡುಗ ಇರಲ್ಲ ಬಿಡು. 


ನೀನಂತು ನನಗೆ ಬೇಡವೇ ಬೇಡ..


ನನಗೆ ಕೂಡ ನಿನ್ನಂತಹ ಪಿರ್ಕಿ ಬೇಡ.


ನೀನು ಅಂಡೆ ಪಿರ್ಕಿ.. ಅಂದಳು.


ಆಯ್ತು ಮರ್ರೆ  ಸಾಯ್ಲಿ... ನಂಗೆ ನಿಂಗೆ ಎಂದಿಗೂ ಆಗಿಬರಲ್ಲ...ಅದೆಲ್ಲ ಇರ್ಲಿ ಮೊದಲು ವೆನಿಲ್ಲಾ ಉಂಟಾ ಹೇಳು.


ವೆನಿಲ್ಲಾ ಗಿಡ ಇದೆ.. ಇನ್ನೂ ಕೋಡು ಆಗಿಲ್ಲ.


ಹಾಗಾದರೆ ಈಗ ಬೇಡ.. Next ಕೊಯ್ದು ಒಣಗಿಸಿ ಆದ ಮೇಲೆ ನಂಗೆ ಕೊಡು..ಬಿಸಿ ಹಾಲಿಗೆ ಕೋಡಿನಿಂದ ತೆಗೆದ ಸ್ವಲ್ಪವೇ ವೆನಿಲ್ಲಾವನ್ನು ಹಾಕಿ ಬಿಟ್ಟರೆ ಆಹಾ ಅದೆಂತಹ ಪರಿಮಳ... Next ಮರೆಯದೇ ಕೊಡ್ಬೇಕು ಆಯ್ತಾ..


ಹೂಂ ಅಂದಳು.


ಅಲ್ಲೇ ಒಂದು ಕಡೆ ಗಟ್ಟಿಯಾದ  ಜಾಗದಲ್ಲಿ ಮಲ್ಲಿಗೆ ಕೃಷಿ ಮಾಡಿದ್ದರು.


ಆಹಾ ನಮ್ಮ ಮಂಗಳೂರು ಮಲ್ಲಿಗೆ.. ಭಯಂಕರ ರೇಟ್ ಅಲ್ಲ ಇದಕ್ಕೆ ಫ್ಲವರ್ ಮಾರ್ಕೆಟ್ ನಲ್ಲಿ... ದೇವರಿಗೆಂದು ಮಲ್ಲಿಗೆ ಕೊಳ್ಳುವಾಗಲೆಲ್ಲ ಅನ್ನಿಸ್ತದೆ.. ಮಲ್ಲಿಗೆ ಕೃಷಿ ಮಾಡಿದ್ರೆ ಸಕತ್ ದುಡ್ಡು ಮಾಡ್ಬಹುದು ಅಂತ ..ಅಂದೆ. 


ಸಕತ್ ದುಡ್ಡು ಏನೋ  ಮಾಡ್ಬಹುದು.. ಆದ್ರೆ ಅಷ್ಟು ಸುಲಭವಿಲ್ಲ YouTube ನೋಡಿ ಮಾಡಿದಂತೆ ಅಂದಳು.


ಕೊನೆಗೂ ನಮ್ಮ ನಡಿಗೆ ಪೆಲಕಾಯಿ ಮರದ ಬುಡಕ್ಕೆ ತಲುಪಿತ್ತು.


ಮರ ನೋಡಿ ಕೇಳಿದೆ.. ಇದು ತುಳುವೆಯಾ ಅಥವಾ  ಬರ್ಕೆ(ಬಕ್ಕೆ) ಹಲಸಾ..


ಬರ್ಕೆ..


ಎಲ್ಲಾ ಹಣ್ಣಾ...


ನೀನೇ ನೋಡು.. ನಿಂಗೆ ಅದು ಸ ಗೊತ್ತಾಗಲ್ವ..


ಬಹಳ ಹಳೆ ಮರ ತರಹ ಕಾಣ್ತಾ ಉಂಟು ಅಲಾ..ಬಹುಶಃ ನಿನ್ನ  ಅಜ್ಜ ಪಿಜ್ಜನ ಕಾಲ ಆಗಿರಬಹುದು.


ಹೂಂ.. ಈಗ ಬೇಗ ಬೇಕಾದ ಪೆಲಕಾಯಿಯ ತೆಗೆ.. ಅಂದಳು.


ಈ ಹಲಸು ಕಾಯಿ ಇರುವಾಗಲೇ  ಇದರ ಸೋಂಟೆ (ಚಿಪ್ಸ್) ಮಾಡಿ ಮಾರಿದ್ರೆ ಅದರಿಂದ ಕೂಡ  ಒಳ್ಳೆ ದುಡ್ಡು ಮಾಡ್ಬಹುದು ಗೊತ್ತುಂಟಾ ನಿಂಗೆ


ಕನಿಷ್ಟ ಪಕ್ಷ ಅದನ್ನಾದರೂ ಮಾಡು ಅಲಾ..


ಈಗ ಹಲಸು ಹಣ್ಣಾಗಿ ಆಯಿತಲ್ಲಾ...  ನೆಕ್ಸ್ಟ್ ಸೀಸನ್ ಗೆ ಮಾಡುವ ಬಿಡು.. ಅಂದೆ 


ಕೊನೆಗೂ ಹೇಗೋ ಕಷ್ಟಪಟ್ಟು ಮರ ಹತ್ತಿ ಒಂದು ದೊಡ್ಡ ಪೆಲಕಾಯಿಯನ್ನೇ  ತೆಗೆದೆ.


ಬೇಕಿದ್ದರೆ ಇನ್ನು ನಾಲ್ಕು ತೆಗಿ ಅಂದಳು.


ತೆಗಿಲಿಕ್ಕೆ ಬೇಕಾದರೆ ಇನ್ನೂ ಸ  ಹತ್ತು ಪೆಲಕಾಯಿ ತೆಗಿಲಿಕ್ಕೆ ಮನಸ್ಸೇನೋ ಉಂಟೆ,ಆದರೆ ತೆಗೆದುಕೊಂಡು ಹೋಗುವುದೇ ದೊಡ್ಡ ಪ್ರಾಬ್ಲಂ.. ಅದು ಅಲ್ಲದೇ ನನ್ನ ಲಿಸ್ಟ್ ನಲ್ಲಿ already ತೆಗೆದುಕೊಂಡು ಹೋಗ್ಲಿಕ್ಕೆ ಅಂತ ಹಲವು ಐಟಂ ಗಳೇ ಅದಾಗಲೇ ಇದೆ. ನಿನಗೆ ಸ ಗೊತ್ತುಂಟು ಅಲ್ವಾ.. ಪೇರಳೆ, ಬೊಂಡ, ಕೋಕೋ, ಜೀ ಗುಜ್ಜೆ... Etc.. Etc.. ನೆಕ್ಸ್ಟ್ ಕೇವಲ ಪೆಲಕಾಯಿ ಗೆ ಎಂದೇ ಬರ್ತೇನೆ ನೋಡು .. ಆವಾಗ ಜಾಸ್ತಿಯೇ ಪೆಲಕಾಯಿ ತಗೊಂಡು ಹೋಗ್ತೇನೆ ಅಂದೆ.


ಹೂಂ ಆಯಿತು ಮಾರಾಯ..ಮೊದಲು ಇಲ್ಲಿಂದ ಹೊರಡುವ ಅಂದಳು.


ಮತ್ತೆ ಈ ಪೆಲಕಾಯಿ ಉಂಟಲ್ಲಾ.. ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ರಾಷ್ಟ್ರೀಯ ಹಣ್ಣು ಕೂಡ ಹೌದಂತೆ.. ಇಂತಹದ್ದೆಲ್ಲ  ಗೂಗಲ್ ಮಾಡಿ ನೋಡ್ಬೇಕು ನೀನು..ಬೇರೆ ಎಲ್ಲಾ ಬೇಡದ್ದು ನೋಡುವುದಲ್ಲಾ  ಅಂದೆ.


ಆಯಿತು ಆಯಿತು.. ಇನ್ನು ನಿನ್ನನ್ನು ಕೇಳಿಯೇ ಗೂಗಲ್ ಮಾಡ್ತೇನೆ 


ಅದರಲ್ಲೂ ಈ ಹಲಸು.. ಬಂಡವರ ಬಂಧು ತರಹ.. ಕೇವಲ ಇದು ತಿಂದೇ ಹಸಿವು ನೀಗಿಸಬಹುದು.. ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು ಅನ್ನುವುದು ಕೇಳಿಲ್ವಾ ನೀನು. 


ಇಲ್ಲಪ್ಪಾ...ಕೇಳಿಯೇ ಇಲ್ಲ.. ನೀನು ಹೇಳಿದ ಮೇಲೆಯೇ ನನಗೆ ಗೊತ್ತಾಗಿದ್ದು.. ನಾನು ಹೀಗೆ ಸುಮ್ಮನೆ ನನ್ನಷ್ಟಕ್ಕೆ ಬೆಳೆದು ದೊಡ್ಡವಳಾಗಿದ್ದು..ನಿನ್ನಷ್ಟು ಲೋಕ ಜ್ಞಾನ ಇಲ್ಲ.. ಅಂದಳು ಉಡಾಫೆಯಾಗಿ.


ಅದು ಹೌದು ಅದೊಂದು ಕೇಳ್ಲಿಕ್ಕೆ ಮರೆತೇ ಹೋಯಿತು.. ಮತ್ತೆ ಮಾವು ಇಲ್ವಾ..? ನನಗೆ ಮಾವು ಅಂದ್ರೆ ಜೀವ..


ಎಷ್ಟು ಐದು ಬುಟ್ಟಿ ಬೇಕಿತ್ತಾ..


ಅಷ್ಟು ಉಂಟಾ...


ಉಂಟು, ಆದ್ರೆ ಇಲ್ಲಿ ಅಲ್ಲಾ.. ಮಾರ್ಕೆಟ್ ಗೆ ಹೋಗಿ ತಗೋ ಬೇಕು ನೀನು ಅಂದಳು.


ಇಲ್ಲದಿದ್ದರೆ ಬೇಡ ಬಿಡು ಎಂದು.. ಹಲಸಿನ ಹಣ್ಣು ಹಿಡಿದುಕೊಂಡು ಮನೆಯ ಕಡೆಗೆ ಒಟ್ಟಿಗೆ ಹೆಜ್ಜೆ ಹಾಕಿದೆವು.


ನಡು ನಡುವೆ ಈ ಮೊದಲೇ ನೋಡಿದ್ದ .. ಪೇರಳೆ, ಎಳನೀರು, ಜೀಗುಜ್ಜೆ, ಕೋಕೋ..ಎಲ್ಲವನ್ನೂ ಲೆಕ್ಕಕ್ಕಿಂತ ಜಾಸ್ತಿಯೇ ಕೊಯ್ಯುತ್ತಾ,collect ಮಾಡುತ್ತಾ ಮನೆ ತಲುಪಿದ್ದೆವು.


ನೋಡು ಈಗ ಇಷ್ಟು ಎಲ್ಲವನ್ನೂ ನಾನು ಒಬ್ಬನೇ ಕೈಯಲ್ಲಿ ಹೊತ್ತುಕೊಂಡು ಮನೆಗೆ ತಗೊಂಡು ಹೋಗಲಾರೆ.

ಮನೆಗೆ ತನಕ ನೀನೇ ಈಗ ನನಗೆ ನಿನ್ನ ಸ್ಕೂಟಿಯಲ್ಲಿ  ಡ್ರಾಪ್ ಕೊಡ್ಬೇಕು ಅಂದೆ.


ವನಜ ಆಂಟಿ ಕೂಡ ಮನೆಯಿಂದ ಹೊರಗೆ ಬಂದು.. ನೀಲು ಬೇಕಾದದ್ದು ಎಲ್ಲವನ್ನೂ ತೆಗೆದುಕೊಂಡೆ ಅಲ್ವಾ... ಅಂದರು.


ಹೌದು ಆಂಟಿ ತುಂಬಾ ಥ್ಯಾಂಕ್ಸ್...ಇನ್ನೂ ಬೇರೆ ಏನಾದರೂ ಬೇಕಿದ್ದರೆ ಮರೆಯದೇ ಇಲ್ಲಿಗೆನೇ ಓಡಿ ಬರ್ತೇನೆ ಆಂಟಿ .. ಪೇರಳೆ ತುಂಬಾ ರುಚಿ ಇದೆ ಆಂಟಿ, ತಗೊಳ್ಳಿ ನೀವೊಂದು  ತಿನ್ನಿ ಅಂದೆ..


ಬೇಡಪ್ಪಾ.. ಇಲ್ಲಿ ಬಾವಲಿಗಳೇ ಅದನ್ನು ತಿಂದು ಸಪಾಯಿ ಮಾಡ್ತಾವೆ. ನಾವು ಅದನ್ನು ಮೂಸಿಯೂ ಕೂಡ ನೋಡುವುದಿಲ್ಲ  ಅಂದರು.


ಇಂಚರ ಎಲ್ಲೋ ನೋಡಿಕೊಂಡು ನಗುತ್ತಿದ್ದಳು.


ಆಂಟಿ ಎಲ್ಲಾ ಬೇಕು ಬೇಕು ಅಂತ ಗಿಡದಿಂದ ಕಿತ್ತು ತುಂಬಾ ಐಟಂ ಆಗಿದೆ. ಈಗ ಹೇಗೆ ತಗೊಂಡು ಹೋಗುವುದು ಅಂತ ಗೊತ್ತಾಗ್ತ ಇಲ್ಲ ಅಂದೆ.


ಅದಕ್ಕೆ ಯಾಕೆ ಟೆನ್ಶನ್ ಮಾಡ್ತೀಯಾ.. ನಮ್ಮ ಇಂಚು ಹತ್ತಿರ ಸ್ಕೂಟಿ ಇದೆ.ನಾನು ಅವಳಿಗೆ ಬಿಡ್ಲಿಕ್ಕೆ ಹೇಳ್ತೀನಿ ಅಂದವರೇ.. ಇಂಚರಳ ಕಡೆಗೆ ತಿರುಗಿ..


ಇಂಚು.. ನೀಲುವನ್ನು  ಸ್ವಲ್ಪ ಅವರ ಮನೆಗೆ ಬಿಡೇ.. ಪಾಪ ಹುಡುಗ ಒಬ್ಬನೇ ಹೇಗೆ ಒತ್ತುಕೊಂಡು ಹೋಗ್ತಾನೆ ಇಷ್ಟನ್ನು ಅಂದರು.


ಅವಳಿಗೆ ಇಷ್ಟವಿರದಿದ್ದರೂ ಕೊನೆಗೂ  ಒಪ್ಪಿದಳು.


ಎಲ್ಲಾ ಒಟ್ಟು ಮಾಡಿ ಎರಡು ಗೋಣಿಯಲ್ಲಿ ಕಟ್ಟಿ, ಎರಡೂ ಕೈಯಲ್ಲಿಯೂ ಗೋಣಿ ಹಿಡಿದು ಸ್ಕೂಟಿ ಹಿಂದೆ ಕುಳಿತುಕೊಂಡೆ. ಇಂಚರ ಸ್ಕೂಟಿ ಆನ್ ಮಾಡಿದಳು.


ಏನೋ ನೆನಪಾಯಿತು. Stop.. Stop ಇನ್ನೊಂದು ಐಟಂ ಬಾಕಿ ಆಗಿದೆ. ಅಂದೆ


ಏನು..?


ಅದೇ.. ನೀನು ಈ ಮೊದಲು ನನಗೆಂದು ಕಟ್ಟಿ ಎತ್ತಿ ಇಟ್ಟಿದ್ದ ಹಲಸಿನ ಹಣ್ಣಿನ ಮುಳುಕ.


ಸಿಟ್ಟಿನಿಂದ ಸ್ಕೂಟಿ ಆಫ್ ಮಾಡಿ.. ಅಮ್ಮಾ.. ಅಂದಳು.


ಏನೇ... ವನಜ ಆಂಟಿ ಮನೆಯೊಳಗಿನಿಂದಲೇ ಕೇಳಿದರು.


ಒಮ್ಮೆ ಆ ಪ್ಯಾಕ್ ಮಾಡಿ ಇಟ್ಟಿರುವ ಮುಳುಕ ತಾ ಅಮ್ಮಾ.... ಅಂದಳು ಮುಖ ಸಿಂಡರಿಸಿ..


ವನಜ ಆಂಟಿ  ಮನೆಯೊಳಗಿನಿಂದ ಕಟ್ಟಿಟ್ಟಿದ್ದ ಮುಳುಕವನ್ನು ತಂದು ಕೊಟ್ಟರು. 


ಇಂಚು ಸ್ಕೂಟಿ ಆನ್ ಮಾಡಿದಳು.. ಸ್ಕೂಟಿ ಪಯಣ ನಮ್ಮ ಮನೆಯ ಕಡೆಗೆ ನಡೆದಿತ್ತು.


ನಡುವಲ್ಲಿ ಸ್ಕೂಟಿ ಬಿಡುತ್ತಾಳೆ ಇಂಚರ ಕೇಳಿದಳು..


ನೀಲಮೇಘ...


ಏನು..


ನೆಕ್ಸ್ಟ್ ನೀನು  ಮನೆಗೆ ಪೆಲಕಾಯಿ ತಗೊಂಡು ಹೋಗ್ಲಿಕ್ಕೆ ಅಂತ ಬರುವುದಿದ್ದರೆ... ಮರೆಯದೇ ಒಂದು ದೊಡ್ಡ ಲಾರಿಯೋ, ಇಲ್ಲ ಟಿಪ್ಪರ್ ಅನ್ನೇ ತಗೊಂಡು ಬಾ ಆಯ್ತಾ...


ಥ್ಯಾಂಕ್ಸ್ ಪಾರ್ ದ ಸಜೇಷನ್ ಇಂಚು.. ಅಂದೆ.


ಸ್ಕೂಟಿ ಗಾಳಿಯನ್ನು ಸೀಳಿಕೊಂಡು  ವೇಗವಾಗಿ ಮನೆಯತ್ತ ಸಾಗಿತ್ತು.. 


.....................................................................................


#ನೀಲಮೇಘ 💙


Ab Pacchu

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ