ತಿನ್ನಲು ಸಂಕೋಚವೇಕೆ..
ಊರಿನಲ್ಲಿ ಯಾರದ್ದಾದರೂ ಮನೆಗೆ ಹೋದರೆ, ಊಟ ಮಾಡದೇ ಹೋಗ್ಲಿಕ್ಕೆ ಅವರು ಬಿಡುವುದೇ ಇಲ್ಲ,ಊಟ ಮಾಡ್ಲೇ ಬೇಕು. ಎರಡು ಬೈದು ಆದರೂ ಊಟ ಕ್ಕೆ ಕುತ್ಕೊಳಿಸಿಯೇ ಬಿಡ್ತಾರೆ ಮನೆಯವರು.ಅಂತಹ ಸಲಿಗೆ ಉಂಟು ಹಾಗಾಗಿ ಆ ರೀತಿ.ಊಟ ಮಾಡುತ್ತಾ ನಾನು.. "ಆಹಾ,ಊಟನಾ ಇದು .. ಮೃಷ್ಟಾನ್ನ ಭೋಜನ ತರಹ ಇದೆ .. " ಅಂತ ಹೇಳಿಯೇ ಹೇಳ್ತೇನೆ. ಅದನ್ನು ಕೇಳಿಸಿಕೊಂಡ ಅವರು ಒಂದೇ ಸಲ ಅಂತು ಅನ್ನ ಹಾಕಿಕೊಂಡು ಊಟ ಮಾಡಿ ಎದ್ದೇಳಲು ಬಿಡುವುದೇ ಇಲ್ಲ. ತಡಿ ಇನ್ನೊಂದು ಚೂರು ಬಡಿಸುವ ಅಂತ ಬಡಿಸಲು ಮುಂದಾಗ್ತಾರೆ. ಮೊದಲ ಸಲ ಬಡಿಸಿದ್ದನ್ನೇ ಉಂಡು ಹೊಟ್ಟೆ ಬಿರಿಯುವಂತೆ ಆಗಿದ್ದರೂ ಅವರ ಪ್ರೀತಿಗೆ ಬೇಡ ಎನ್ನದೇ ಆಯಿತು ಬಡಿಸಿ ಬಡಿಸಿ ಎಂದು ಮತ್ತೊಂದು ರೌಂಡು ಊಟ ಶುರು ಮಾಡಿಯೇ ಬಿಡುತ್ತೇನೆ ನಾನು. ಆಗಲೂ ಅಲ್ಲೊಂದು ಅಲಿಖಿತ ನಿಯಮ ಇದೆ, ಏನು ಗೊತ್ತಾ ಒಂದು ಸೌಟು, ಇಲ್ಲವೇ ಎರಡು ಸೌಟು ಅನ್ನ ಹಾಕಿಕೊಳ್ಳಬಾರದಂತೆ.. ಕಡ್ಡಾಯವಾಗಿ ಮೂರು ಸೌಟು ಅನ್ನ ಬಡಿಸಿಕೊಳ್ಳಲೇ ಬೇಕು.ಇಲ್ಲದಿದ್ದರೆ ಅ ಮನೆಗೆ ಅದೇನೋ ಆಗುತ್ತೆ ಅಂತೆ.. ಒಟ್ಟಾರೆ ಒಳ್ಳೆಯದಲ್ಲ ಅಂತ ಒಂದು ನಂಬಿಕೆ. ಹೊಟ್ಟೆಯಲ್ಲಿ ಮಿಸುಕಾಡಲು ಜಾಗವಿಲ್ಲದಿದ್ದರೂ ನಾನು ಆಗಲು ಕೂಡ ಬೇಡ ಅಂತ ಹೇಳುವುದೇ ಇಲ್ಲ... ಯಾಕೆ ಗೊತ್ತಾ ... ಸುಮ್ಮನೆ ಯಾಕೆ ಬೇಡ ಅಂತ ಹೇಳಿ ಅವರಿಗೆ ಬೇಜಾರ್ ಮಾಡುವುದು ಅಂತ 😌😌
ಯಾರದ್ದಾದರೂ ತೋಟಕ್ಕೆ ತಿರುಗಾಡಿಕೊಂಡು ಬರುವ ಅಂತ ಹೋದರೆ, ಮೊದಲು ಅವರು ಹೇಳುವುದು "ಮೊದಲು ಒಂದು ಏಳನೀರು ಕುಡಿಯುವನಾ..." ಅಂತ, ಆಗ ನಾನು "ಖಂಡಿತವಾಗಿಯೂ ಕುಡಿಯವಾ.. ಅದರಲ್ಲೂ ಗೆಂದಾಳೆ ಬೊಂಡ ವನ್ನೇ ಕುಡಿಯುವ.." ಅಂತ ಹೇಳ್ತೇನೆ. ಕೆತ್ತಿ ಕೊಟ್ಟ ಫ್ರೆಶ್ ಬೊಂಡ ಕುಡಿದ ನಂತರ ನನಗೆ ಇನ್ನೆರಡು ಬೊಂಡ ಬೇಕು ಎಂದು ಅನಿಸುತ್ತೆ, ಆದರೆ ನಾನು ಬೊಂಡ ಬೇಕು ಎಂದು ಹೇಳುವುದಿಲ್ಲ, ಬದಲಾಗಿ "ಆಹಾ ಬೊಂಡಾ ನ ಇದು.. ಅಮೃತ.. ಅಮೃತ ಇದ್ದ ಹಾಗೇ ಇದೆ. "ಅಂತ ಹೇಳ್ತೇನೆ. ಆಗ ಎದುರಿಗಿರುವವರು ಬೇಕಿದ್ದರೆ ಇನ್ನೊಂದು ಕುಡಿಯಿರಿ ಅಲಾ ಅಂತ ಕೇಳಿಯೇ ಬಿಡ್ತಾರೆ. ಆಗ ನಾನು ನಗುತ್ತಾ "ಒಂದು ಯಾಕೆ.. ಎರಡು ಕುಡಿಯುವ ಬಿಡಿ... " ಅಂತ ಹೇಳ್ತೇನೆ. ಆಗ ಅವರು ನಗುತ್ತಾ ಮತ್ತೆರಡು ಗೆಂದಾಳೆ ಬೊಂಡ ನನಗಾಗಿ ಕೆತ್ತಲು ಶುರು ಮಾಡುತ್ತಾರೆ. ನಾನು ಯಾಕೆ ಹಾಗೇ ಹೇಳುವುದು ಗೊತ್ತಾ.... ಸುಮ್ಮನೆ ಯಾಕೆ ಬೇಡ ಅಂತ ಹೇಳಿ ಅವರಿಗೆ ಬೇಜಾರ್ ಮಾಡುವುದು ಅಂತ..😌😌
ದೇವಸ್ಥಾನದಲ್ಲಿ ಫಂಕ್ಷನ್ ಇದ್ದಾಗ ಅನ್ನ ಸಂತರ್ಪಣೆ ಅಂತು ಇದ್ದೆ ಇರುತ್ತದೆ. ಅಲ್ಲಿ ನೋಡಿದರೆ ಪಾಯಸ ಬಡಿಸುವವ ನಮ್ಮ ಗುರ್ತದವ.. ಎರಡು ಸೌಟು ಪಾಯಸ ಬಡಿಸಿ ಆದ ಮೇಲೆ.. "ಶ್ಯಾವಿಗೆ ಪಾಯಸ ಪಚ್ಚು.. ಇನ್ನೊಂದು ಸೌಟು ಬಡಿಸುವುದಾ..." ಅಂತ ಆತ ಕೇಳುತ್ತಾನೆ. ಆಗ ನಾನು ನಗುತ್ತಾ "he he.. ಬರೀ ಒಂದು ಸೌಟು ಯಾಕೆಯಾ . ಇನ್ನೆರಡು ಸೌಟು ಬಡಿಸು ಅಲಾ.. ದೇವಸ್ಥಾನದ ಪಾಯಸ ದ ರುಚಿ ಮನೆಯ ಪಾಯಸಕ್ಕೆ ಬರುವುದೇ ಇಲ್ಲ ನೋಡು ಹಾಗೇ ಇನ್ನೊಂದು ಕಾಯಿ ಹೋಳಿಗೆ ಸ ಹಾಕು " ಅಂತ ರಾಗವಾಗಿಯೇ ಹೇಳುತ್ತೆನೆ. ಅವನು ಕೂಡ ನಗುತ್ತಾ ಇನ್ನೆರಡು ಸೌಟು ಪಾಯಸ ಬಡಿಸಿಯೇ ಬಿಡುತ್ತಾನೆ, ಅದೇ ರೀತಿ ಮತ್ತೊಂದು ಕಾಯಿ ಹೋಳಿಗೆ ಹಾಕಲು ಕೂಡ ಆತ ಮರೆಯುವುದಿಲ್ಲ. ನಾನು ಯಾಕೆ ಹಾಗೇ ಹೇಳುವುದು ಗೊತ್ತಾ..ಸುಮ್ಮನೆ ಯಾಕೆ ಬೇಡ ಅಂತ ಹೇಳಿ ಅವನಿಗೆ ಬೇಜಾರ್ ಮಾಡುವುದು ಅಂತ..😌😌
ಫ್ರೆಂಡ್ ಮನೆಗೆ ಹೋದಾಗ ಆಂಟಿ ಒಂದು ದೊಡ್ಡ ಗ್ಲಾಸ್ ಚಿಕ್ಕು ಮಿಲ್ಕ್ ಶೇಕ್ ತಂದು ಕೊಡುತ್ತಾರೆ. ಆಗ ನಾನು" ವಾಹ್ ಅಧ್ಬುತ..ಎಂತಹ ಚಿಕ್ಕು ಮಿಲ್ಕ್ ಶೇಕ್ ಇದು,ಬಹುಶಃ ಒಳ್ಳೆಯ ಕ್ವಾಲಿಟಿ ಚಿಕ್ಕು ಬಳಸಿದ್ದೀರಿ ಅಂತ ಕಾಣುತ್ತೆವೆ, ಇಂತಹ ಚಿಕ್ಕು ಮಿಲ್ಕ್ ಶೇಕ್ ನಾನು ಎಲ್ಲೂ ಕುಡಿಲೇ ಇಲ್ಲ ಆಂಟಿ .." ಅಂತ ಹೇಳಿಯೇ ಹೇಳ್ತೇನೆ. ಆಗ ಆಂಟಿ "ಹಾಗಾದರೆ ಇನ್ನೊಂದು ಗ್ಲಾಸ್ ಮಿಲ್ಕ್ ಶೇಕ್ ತರಲೇ ಪಚ್ಚು .." ಎಂದು ಕೇಳುತ್ತಾರೆ. ಆಗ ನಾನು "ಒಂದು ಗ್ಲಾಸ್ ಯಾಕೆ ಆಂಟಿ, ದೊಡ್ಡ ಮಗ್ ನಲ್ಲಿಯೇ ತನ್ನಿ ಅಲಾ, ಅಷ್ಟೊಂದು ಚೆನ್ನಾಗಿದೆ ಮಿಲ್ಕ್ ಶೇಕ್.. " ಅಂತ ಹೇಳ್ತೇನೆ. ಆಗ ಅವರು ನಗುತ್ತಾ ದೊಡ್ಡ ಮಗ್ ನಲ್ಲಿ ಮಿಲ್ಕ್ ಶೇಕ್ ತರಲು ಒಳಗೆ ಹೋಗುತ್ತಾರೆ. ಫ್ರೆಂಡ್ ಮಾತ್ರ ಇವ ಯಾವ ಸೀಮೆ ಬಕಾಸುರ ಮರ್ರೆ ಅಂತ ನನ್ನನ್ನು ಮೇಲೆ ಕೆಳಗೆ ನೋಡಿದರೂ ನಾನು ಯಾಕೆ ಹಾಗೇ ಹೇಳ್ತೇನೆ ಗೊತ್ತಾ.. ಸುಮ್ಮನೆ ಯಾಕೆ ಬೇಡ ಅಂತ ಹೇಳಿ ಆಂಟಿಗೆ ಬೇಜಾರ್ ಮಾಡುವುದು ಅಂತ..😌😌
ಕುಟುಂಬದ ಮನೆಯಲ್ಲಿ ಫಂಕ್ಷನ್ ಇದ್ದರೆ ಫಂಕ್ಷನ್ ಎಲ್ಲಾ ಮುಗಿದು ಹೊರಡುವ ವೇಳೆಗೆ "ಪಚ್ಚು, ಮನೆಗೆ ಹೋಗುವಾಗ ಬೇಕಿದ್ದರೆ ಸ್ವಲ್ಪ ಅನ್ನ, ಪಲ್ಯ ಎಲ್ಲಾ ತಗೊಂಡು ಹೋಗು, ಈಗಲೇ ಸಂಜೆ ಆಯಿತು .. ಪುನಃ ಮನೆಗೆ ಹೋಗಿ ಅಮ್ಮನಿಗೆ ಸ ಅಲ್ಲಿ ಅಡುಗೆ ಮಾಡ್ಲಿಕ್ಕೆ ಕಷ್ಟ ಅಲ್ಲಾ.." ಅಂತ ಯಾರಾದರೂ ಅಲ್ಲಿ ಹೇಳಿದರೆ " ಖಂಡಿತವಾಗಿಯೂ, ನಾನೇ ಕೇಳ್ಬೇಕು ಅಂತ ಇದ್ದೆ,ಆದ್ರೆ ನೀವೇ ಕೇಳಿ ಬಿಟ್ರಿ ನೋಡಿ, ಹಾನ್.. ಅನ್ನ ಪಲ್ಯ ಮಾತ್ರ ಅಲ್ಲ, ಕಡ್ಲೆ ಗಸಿ, ಗುಜ್ಜೆ ಪಲ್ಯ, ಕೊದ್ದೆಲ್.. ಅದರಲ್ಲೂ ಗೋಬಿ ಮಂಚೂರಿಯನ್ ಅನ್ನು ಮಾತ್ರ ನಾನು ಮರೆಯದೇ ತೆಗೆದುಕೊಂಡು ಹೋಗ್ಲೇ ಬೇಕು ಅಂತ ನಾನು ಮೊದಲೇ ಫ್ಲ್ಯಾನ್ ಮಾಡಿದ್ದೆ . " ಅಂತ ಹೇಳ್ತೇನೆ. ಅವರು ನಗುತ್ತಾ ನನಗಾಗಿ ಎಲ್ಲವನ್ನೂ ಒಟ್ಟು ಮಾಡಲು ತೊಡಗುತ್ತಾರೆ. ನಾನು ಯಾಕೆ ಹಾಗೇ ಹೇಳುವುದು ಗೊತ್ತಾ ... ಸುಮ್ಮನೆ ಯಾಕೆ ಬೇಡ ಅಂತ ಹೇಳಿ ಅವರಿಗೆ ಬೇಜಾರ್ ಮಾಡುವುದು ಅಂತ...😌😌
ನಿಮಗೆ ಬೇಕೋ ಬೇಡವೋ.. ಆದರೆ ಹೆಚ್ಚಿನ ಸಲ ನಾನು ಗಮನಿಸಿದಂತೆ ನಾವು ಬೇಕು ಅಂತ ಬಾಯ್ಬಿಟ್ಟು ಕೇಳಿದರೆ, ಇಲ್ಲವೇ ಅವರೇ ಬೇಕಾ ಎಂದು ಕೇಳಿದಾಗ ನಾವು ತಿರಸ್ಕರಿಸದೇ ಇದ್ದರೆ .. ಆ ಮನೆಯವರಿಗೆ ಅದೆಷ್ಟು ಖುಷಿ ಆಗುತ್ತೆ ಗೊತ್ತಾ.. ಊರಿನಲ್ಲಿ ಯಾರೇ ಇರಲಿ, ಅವರ ಮನೆಗೆ ಹೋದಾಗ ನಾವು ಹೊಟ್ಟೆ ತುಂಬಾ ತೃಪ್ತಿ ಆಗುವಷ್ಟು ಉಂಡರೆ, ಆವಾಗಲೇ ಆ ಮನೆಯವರಿಗೆ ಖುಷಿ ಆಗುವುದಂತೆ. ಅದು ನಿಜ ಕೂಡ ಹೌದು☺️
ಈಗ ಗೊತ್ತಾಯ್ತಲ್ಲ ನಾನು ಯಾಕೆ... ಯಾವುದನ್ನೂ ಬೇಡ ಅಂತ ಹೇಳುವುದೇ ಇಲ್ಲ ಅಂತ.. ಅದೇ...
ಸುಮ್ಮನೆ ಯಾಕೆ ಅವರಿಗೆಲ್ಲಾ ಬೇಜಾರ್ ಮಾಡುವುದು ಅಂತ..ಅಷ್ಟೇ 😌😌🙏
.....................................................................................
AB Pacchu
Moodubidire

Comments
Post a Comment