ಅಜ್ಜಿ ಕಥೆಗಳು
ನಮ್ಮೆಲ್ಲರ ಬಾಲ್ಯವನ್ನು ಸುಂದರವನ್ನಾಗಿಸಿದ್ದು ಯಾವುದು ಎಂದು ಒಂದೊಂದೇ ಪಟ್ಟಿ ಮಾಡುತ್ತಾ ಕುಳಿತುಕೊಂಡು ಬಿಟ್ಟರೆ ನೆನಪುಗಳು ಒಂದೊಂದಾಗಿ ಹಾಗೆಯೇ ನಿಧಾನವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಮಗರಿವಿರದೇ ನಮ್ಮ ಮನಸ್ಸು ಅದಾಗಲೇ ಬಾಲ್ಯಕ್ಕೆ ಓಡಿರುತ್ತದೆ.
ಅದರಲ್ಲಿ ನಾವು ಕಲಿತಂತಹ ಪ್ರೈಮರಿ ಶಾಲೆ ಅದರಲ್ಲೂ ಹೆಚ್ಚಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಎಂದೂ ಮರೆಯಲಾಗದ ಆ ಚಡ್ಡಿ ಹಾಕಿ ಶಾಲೆಗೆ ಬರುತ್ತಿದ್ದ ಗೆಳೆಯರು,ಜುಟ್ಟು ಕಟ್ಟುತ್ತಿದ್ದ ಇಲ್ಲವೇ ಜಡೆ ಹಾಕಿಕೊಳ್ಳುತ್ತಿದ್ದ ಹುಡುಗಿಯರು, ಶಾಲೆಯ ತುಂಬಾ ಜೋರಿನ ಯಾವಾಗಲೂ ನಾಗರ ಬೆತ್ತದಲ್ಲೇ ಹೊಡೆಯುತ್ತಿದ್ದ ಟೀಚರ್, ಸಡಗರದ ಸ್ಕೂಲ್ ಡೇ, ಮೊದಲ ಶಾಲಾ ಪ್ರವಾಸ,ಮನೆಯಿಂದ ಶಾಲೆಗೆ.. ಶಾಲೆಯಿಂದ ಮನೆಗೆ ಹೋಗುವ ದಾರಿ.. ಬೇಕಿದ್ದರೆ ಸ್ವರ್ಗದ ದಾರಿ ಅನ್ನಿ ಅದನ್ನು , ತಿಂಡಿ ಮಾಡಿದಾಗಲೆಲ್ಲ ನಮ್ಮ ಮನೆಗೆನೇ ಕಳುಹಿಸಿ ಕೊಡುತ್ತಿದ್ದ ನೆರೆಮನೆಯ ಆಂಟಿ, ಗ್ರೌಂಡಿನಲ್ಲಿ ಕ್ರಿಕೆಟ್ ಆಡ್ಲಿಕ್ಕೆ ಕರೆದುಕೊಂಡು ಹೋಗೋ ಪಕ್ಕದ ಮನೆಯ ಅಣ್ಣಾ, ಯಾವಾಗ ಸಿಕ್ಕಿದರೂ ಸದಾ ನಗುವ ಅವಳು, ವರ್ಷಕ್ಕೊಮ್ಮೆ ಬರೋ ಊರಿನ ದೊಡ್ಡ ಜಾತ್ರೆ ,ಸಂತೆಯಲ್ಲಿ ಕೊಂಡ ಪ್ಲಾಸ್ಟಿಕ್ ಕಾರು, ಹೊಸ ಬಟ್ಟೆ ದಯಪಾಲಿಸೋ ಹಬ್ಬಗಳು, ದೀಪಾವಳಿಗೆ ಬಿಟ್ಟ ಸುರುಸುರು ಕಡ್ಡಿ, ಚಿಲ್ಲರೆ ಹಣಕ್ಕಾಗಿ ಒಟ್ಟು ಮಾಡಿದ ಗೇರುಬೀಜ, ಪಕ್ಕದ ತೋಪಿನಿಂದ ಕದ್ದ ಮಾವಿನಕಾಯಿ,ಜಮನೇರಳೆ ಹಣ್ಣು,ಇತ್ಯಾದಿ ಇತ್ಯಾದಿ..
ನೆನಪಿನ ಜೋಳಿಗೆಗೆ ಒಮ್ಮೆ ಕೈಹಾಕಿ ತೆಗೆದಾಗ ಇವಿಷ್ಟು ಸಿಕ್ಕಿತು ಎಂದಾದರೆ ನಿಮ್ಮ ಬಾಲ್ಯ ನಿಜವಾಗಿಯೂ ಹಸಿರಾಗಿತ್ತು ಎಂದೇ ಲೆಕ್ಕ. ಇವಿಷ್ಟಕ್ಕೆ ಇನ್ನೊಂದನ್ನು ಸೇರಿಸಿ ಬಿಟ್ಟರೆ ನಿಮ್ಮ ಬಾಲ್ಯ ಬರೀ ಹಸಿರಲ್ಲ,ನಿಜವಾದ ಅರ್ಥದಲ್ಲಿ ಹಚ್ಚ ಹಸಿರಾಗಿತ್ತು ಎಂದೇ ಹೇಳಬಹುದು. ಅದುವೇ ನಿಮ್ಮ ಅಜ್ಜಿ ಮತ್ತು ನಿಮ್ಮ ಅಜ್ಜಿ ಮನೆ 😊
ಅಜ್ಜಿಯರು ಎಲ್ಲರಿಗೂ ಇಷ್ಟ. ಅವಳು ಒಳ್ಳೊಳ್ಳೆಯ ಕಥೆ ಹೇಳುತ್ತಾಳೆ. ಕಥೆ ಖಾಲಿಯಾದಾಗ ಅವಳೇ ಕಥೆಗಳನ್ನು ಕಟ್ಟುತ್ತಾಳೆ, ಅದೆಲ್ಲವೂ ಅವಳ ಕಲ್ಪನೆಗೆ ನಿಲುಕುವಂತಹದ್ದು. ಕೇಳಿಲ್ಲವೇ ಅಜ್ಜಿ ಹೇಳುವ ಕಥೆಗಳು ಅಜ್ಜಿ ಕಥೆ ಎಂದೇ ಫೇಮಸ್. ಎಲ್ಲ ಮೊಮ್ಮಕ್ಕಳಿಗೂ ಅಜ್ಜಿ ಎಂದರೆ ಬಾರೀ ಇಷ್ಟ. ಯಾಕೆಂದರೆ ಅಪ್ಪ ಅಮ್ಮ ಬೈದರೂ ಅಜ್ಜಿ ಬೈಯಲ್ಲ. ಅವಳು ಬರೀ ಮುದ್ದು ಮಾಡುವವಳು.
ಬಾಲ್ಯದಲ್ಲಿ ಶಾಲೆಗೆ ರಜೆ ಬಂದರೆ ಸಾಕು ನಾವೆಲ್ಲ ಅಜ್ಜಿ ಮನೆಗೆ ಓಡಿದವರೇ. ನೋಡಿ ಇಲ್ಲೂ ಕೂಡ ನಾವು ಅಜ್ಜನ ಮನೆ ಎಂದು ಹೇಳುವುದೇ ಇಲ್ಲ. ಯಾರೂ ಬೇಕಾದರೂ ಕಟ್ಟಿರಲಿ ಅದು ನಮಗೆ ಮಾತ್ರ ಎಂದಿಗೂ ಅಜ್ಜಿಯ ಮನೆಯೇ. ಅಜ್ಜಿ ನಮ್ಮ ಬಾಲ್ಯದಲ್ಲಿ, ಬಾಳಿನಲ್ಲಿ ಹಾಸುಹೊಕ್ಕಿರುವ ಎಂದು ಮರೆಯಲಾಗದ, ತುಂಬಾ ಬೇಕೇನಿಸುವಂತಹ ಒಂದು ಮುದ್ದು ಮುದ್ದಾದ ಜೀವ. ನಾವೇ ಮಗುವಾಗಿದ್ದಾಗಲೂ ಅವಳು ನಮ್ಮ ಪಾಲಿಗೆ ಎಳೆಯ ಮಗುವಿನಂತೆ ಇದ್ದವಳು.ಅವಳಲ್ಲಿ ಕಪಟವಿಲ್ಲ. ಹೆಚ್ಚಿನ ಸಮಯವನ್ನು ಮೊಮ್ಮಕ್ಕಳೊಂದಿಗೆ ಕಳೆಯಲು ಇಷ್ಟ ಪಡುವ ಅಜ್ಜಿಯನ್ನು ಯಾವ ಮೊಮ್ಮಗು ತಾನೇ ಇಷ್ಟ ಪಡುವುದಿಲ್ಲ ಹೇಳಿ.
ಅಪ್ಪನ ಅಮ್ಮನ ಹೆಸರು ಚಿನ್ನಜ್ಜಿ ಎಂದು. ನಿಜವಾಗಿಯೂ ಚಿನ್ನದಂತಹ ಮೈ ಬಣ್ಣವನ್ನೇ ಹೊಂದಿದವಳು. ಅಜ್ಜಿಗೆ ನನ್ನನ್ನು ಕಂಡರೆ ಬಾರೀ ಇಷ್ಟ. ಅವಳಿಗೆ ಏನೇ ತಿನ್ನಲು ಕೊಟ್ಟರೂ ನನಗೊಂದು ಪಾಲು ತೆಗೆದಿರಿಸುತ್ತಿದ್ದಳು. ಯಾರೂ ಇಲ್ಲದಾಗ ನನಗೆ ಕೊಡುತ್ತಿದ್ದಳು ನನ್ನ ಚಿನ್ನಜ್ಜಿ. ಚಿಕ್ಕಂದಿನಲ್ಲಿ ಅಜ್ಜಿ ದೂರ ದೂರದ ಊರಿಗೆ ನಡೆದೇ ಹೋಗುತ್ತಿದ್ದಳಂತೆ.ಬಸ್ಸು ಎಲ್ಲಾ ಸರಿಯಾಗಿ ಇರದ ಕಾಲ ಅದು. ಮೂಡುಬಿದ್ರಿ ಯಿಂದ ಪಡುಬಿದ್ರಿ ತನಕವೂ ನಡೆದೇ ಹೋಗುತ್ತಿದ್ದಳಂತೆ. ಮಂಗಳೂರಿನಿಂದ ಉಡುಪಿ ಗೆ ನೇರವಾಗಿ ನಡೆದು ಕೊಂಡು ಹೋದರೆ ಎಷ್ಟು ದೂರ ಆಗಬಹುದೋ ಹೆಚ್ಚು ಕಡಿಮೆ ಅಷ್ಟೇ ದೂರ. ಈಗೀನ ಕಾಲದಲ್ಲಿ ನಾವೆಲ್ಲ ಅದೆಲ್ಲವನ್ನು ಕಲ್ಪಿಸಲು ಕೂಡ ಸಾಧ್ಯವಿಲ್ಲ ಬಿಡಿ.
ಅವಳು ಸ್ವಚ್ಛತೆ ಗೆ ಅತೀ ಹೆಚ್ಚಿನ ಆದ್ಯತೆ ಕೊಡುತ್ತಿದ್ದಳು.ಮನೆಗೆ ಯಾರಾದರೂ ಸಂಭಂದಿಕರು ಬಂದರೆ ಇಲ್ಲ ಅವಳ ಇತರ ಮಕ್ಕಳು,ಹೆಣ್ಣು ಮಕ್ಕಳು ಬಂದರೆ ಅವಳಿಗೆ ದುಡ್ಡು ಕೊಟ್ಟು ಹೋಗುತ್ತಿದ್ದರು. ಯಾರೂ ಇರದ ಟೈಂ ನಲ್ಲಿ ಅಜ್ಜಿ ನನ್ನನ್ನು ಕರೆದು ನನಗೆ ಅಂತ ಅದರಲ್ಲಿ ಸ್ವಲ್ಪ ಹಣವನ್ನು ಕೊಟ್ಟು ನಿನಗೆ ಏನು ಇಷ್ಟ ಆಗುತ್ತೋ ಅದನ್ನು ಹೋಗಿ ತಿನ್ನು, ಆದರೆ ನಾನು ದುಡ್ಡು ಕೊಟ್ಟೆ ಅಂತ ಅಪ್ಪನ ಹತ್ತಿರ ಆಗಲಿ ಅಮ್ಮನ ಹತ್ತಿರ ಆಗಲಿ ಮಾತ್ರ ಹೇಳಬೇಡ ಎಂದು ಹೇಳುತ್ತಿದ್ದಳು. ನನ್ನ ಲೈಫ್ ನಲ್ಲಿ ಸಿಕ್ಕಿದ ಮೊತ್ತ ಮೊದಲ ಪಾಕೆಟ್ ಮನಿ ಅಂದರೆ ಅದೇ.
ನಾನು ಅಜ್ಜಿ ಕೊಟ್ಟ ಹಣ ಕೈಯಲ್ಲಿ ಹಿಡಿದುಕೊಂಡು ಅಂಗಡಿಗೆ ಓಡುತ್ತಿದ್ದೆ. ಅಂಗಡಿಗೆ ಹೋದವನೇ ಮಿಠಾಯಿಯ ಭರಣಿಗಳನ್ನು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆ. ಅಂಗಡಿಯವನಿಗೆ ಕೈ ತೋರಿಸಿ ಅದೊಂದು ಕೊಡಿ ಇದೊಂದು ಕೊಡಿ ಎಂದು ಚಿಕ್ಕಿ, ಆಸೆ ಮಿಠಾಯಿ,ಶುಂಠಿ ಮಿಠಾಯಿ, ರವೆ ಲಾಡು , ಜೇನುಗೂಡು ಎಲ್ಲವನ್ನೂ ಕೊಂಡು ತಿಂದು ಮನೆಗೆ ಮರಳುತ್ತಿದ್ದೆ.ಅಜ್ಜಿಯ ಹೊರತು ನಾನು ಮನೆಯಲ್ಲಿ ತಿಂಡಿ ತಿನ್ನಲು ಹಣ ಯಾವತ್ತೂ ಯಾರ ಬಳಿಯೂ ಕೇಳಿಯೇ ಇಲ್ಲ. ATM ಇಲ್ಲದ ಆ ಕಾಲದ ನನ್ನ ಪಾಲಿನ ಸಣ್ಣ ATM ನನ್ನ ಚಿನ್ನಜ್ಜಿ ಆಗಿದ್ದಳು.
ಅಮ್ಮ ಆಗಲಿ ಅಪ್ಪ ಆಗಲಿ ನನಗೆ ಹೊಡೆಯಲು, ಬೈಯಲು ಬಂದರೆ ನಾನು ಸೀದಾ ಹೋಗಿ ಅಜ್ಜಿಯ ಸೆರಗಿನ ಹಿಂದೆ ಅಡಗಿಕೊಳ್ಳುತ್ತಿದ್ದೆ. ಎಲ್ಲರನ್ನೂ ಅಲ್ಲಿಂದ ಓಡಿಸಿ ನನ್ನನ್ನು protect ಮಾಡುತ್ತಿದ್ದವಳು ನನ್ನ ಅಜ್ಜಿಯೇ. ".. ಮುದ್ದು ಮಾಡಿ ಮಾಡಿ, ನೀವೇ ಅವನನ್ನು ಹಾಳು ಮಾಡುತ್ತಿರುವುದು .." ಎಂಬ ಮಾತುಗಳು ಚಿನ್ನಜ್ಜಿಗೆ ಬಹುಮಾನವಾಗಿ ಆ ಸಂದರ್ಭದಲ್ಲಿ ಸಿಗುತ್ತಿತ್ತು.ಆವಾಗಲೆಲ್ಲ ಅವಳು ಸುಮ್ಮನೆ ನಗುತ್ತಿದ್ದಳು.
ಅಮ್ಮನ ಅಮ್ಮನ ಹೆಸರು ಸಾವಿತ್ರಿ ಅಂತ. ನನ್ನ ಮತ್ತೊಬ್ಬಳು ಅಜ್ಜಿ. ನಾನು ಅಜ್ಜಿ ಮನೆಗೆ ಅಂತ ಓಡುತ್ತಿದ್ದದ್ದು ಅವಳ ಬಳಿಗೆಯೇ. ಸುತ್ತಲೂ ದಟ್ಟ ಕಾಡು ಗುಡ್ಡ, ನಡುವಿನಲ್ಲಿ ಒಂದಿಷ್ಟು ಬೈಲು ಗದ್ದೆಗಳು,ತೊಟಗಳು. ಸದಾ ಹರಿಯೋ ಹೆಸರಿಲ್ಲದ ತೊರೆಗಳು,ಗದ್ದೆ ಬದುಗಳಿಗೆ ತಾಗಿಯೇ ಇದ್ದ ಪುಟ್ಟ ಪುಟ್ಟ ಹಂಚಿನ ಮನೆಗಳು.. ಒಟ್ಟಿನಲ್ಲಿ ಮಲೆಗಳಲ್ಲಿ ಮದುಮಗಳು ಇದ್ದಂತೆ ಇತ್ತು ನನ್ನಜ್ಜಿಯ ಮನೆ. ನಿಜವಾದ ಅರ್ಥದಲ್ಲಿ ಸದಾ ಹಚ್ಚ ಹಸಿರೇ ಆಗಿತ್ತು ಅದು.
ಅಜ್ಜಿ ಮನೆಗೆ ಹೋದರೆ ಬೇಗ ವಾಪಸ್ ಬರಲು ಮನಸ್ಸಾಗುತ್ತಿರಲಿಲ್ಲ. ಅಲ್ಲೇ ಇನ್ನಷ್ಟು ದಿನ ಇರುವ ಅಂತ ಅನ್ನಿಸುತ್ತಿತ್ತು. ಅಲ್ಲಿನ ಆಸುಪಾಸಿನವರೆಲ್ಲಾ ಆವಾಗಲೇ ನನ್ನ ಗೆಳೆಯರಾಗಿ ಹೋಗಿಬಿಟ್ಟಿದ್ದರು. ಅಜ್ಜಿ ಮನೆಯಲ್ಲಿ ಚಿಕ್ಕಮ್ಮ ದೇಸಿ ದನದ ಹಾಲಿಗೆ ಬೆಲ್ಲ ಹಾಕಿ ಕೊಡುತ್ತಿದ್ದ ದಪ್ಪನೆಯ ಕಾಫಿಯ ರುಚಿ ಎಂದೂ ಮರೆಯಲು ಸಾಧ್ಯವಿಲ್ಲ. ಕಡೀರ ಬೇರು, ನಾಮದ ಬೇರು, ಹಾಗೂ ಇನ್ನಷ್ಟು ಹೆಸರು ನೆನಪಿರದ ಸ್ವಾಧಿಷ್ಟವಾದ ಬೇರುಗಳಿಗೆ.. ಜೀರಿಗೆ ಹಾಕಿ ಮಾಡುತ್ತಿದ್ದ ಸಂಜೆಯ ಕಷಾಯ.. ಆಹಾ ಅದೆಷ್ಟು ಪರಿಮಳ.ಮನೆಯ ಎದುರಲ್ಲಿ ಸೀತಾಫಲ ದ ಗಿಡವೊಂದು ಇತ್ತು .ಅದರಲ್ಲಿ ಹೇರಳವಾಗಿ ಸೀತಾಫಲ ಆಗುತ್ತಿತ್ತು. ಮನೆಯವರು ಯಾರೂ ಅದನ್ನು ತಿನ್ನುತ್ತಿರಲಿಲ್ಲ.ಅದೆಲ್ಲವೂ ನನಗೆಯೇ.ಹಣ್ಣಾದ ಸೀತಾಫಲವನ್ನು ಬಿಡಿಸಿ ಒಂದೊಂದೇ ಬೀಜವನ್ನು ಚೀಪುತ್ತಾ ತಿನ್ನುವ ಮಜಾ ಅದು ತಿಂದವನಿಗೆ ಗೊತ್ತು.
ಪ್ರತೀ ಅಜ್ಜಿ ಮನೆಯಲ್ಲೂ ಒಬ್ಬ ಮಾವ ಇರ್ತಾನೆ. ಅಜ್ಜಿ ಮನೆಗೆ ಎಂದು ಹೋಗುವ ಪ್ರತೀ ಮಗುವಿಗೂ ಆತನೇ ವಿಜ್ಞಾನಿ, ಸಂಶೋಧಕ ಎಲ್ಲಾ. ಅಜ್ಜ ಅಜ್ಜಿ ಬಿಟ್ಟರೆ ಬಲು ಬೇಗ ಮಕ್ಕಳಿಗೆ connect ಆಗೋನು ಅವನೇ. ನನ್ನ ಕಿರಿಯ ಮಾವನೂ ಕೂಡ ಹಾಗೆಯೇ, ಏನೇನೋ ಮಾಡ್ತಾ ಇದ್ದ. ನಿಜವಾಗಿಯೂ intresting ಅಂತ ಅನ್ನಿಸ್ತಾ ಇದ್ದ. ಪೇಪರ್ ನಲ್ಲಿ ಯಕ್ಷಗಾನ ವೇಷಗಳ ಚಿತ್ರ ಬಿಡಿಸುತ್ತಿದ್ದ. ನನಗೆ ಆತ ಬಿಡಿಸುವ ರಕ್ಕಸನ ಚಿತ್ರಗಳು ಇಷ್ಟವಾಗುತ್ತಿದ್ದವು, ಹೆಚ್ಚಾಗಿ ಮಾವ ಬಿಡಿಸುತ್ತಿದ್ದುದೇ ರಕ್ಕಸನ ಚಿತ್ರಗಳು. ಮಾವ ತಾನು ಬಿಡಿಸುತ್ತಿದ್ದ ಯಾವುದೇ ರಕ್ಕಸನ ತಲೆಗೂ ಎರಡು ದೊಡ್ಡ ಕೊಂಬು, ಉದ್ದನೆಯ ನಾಲಗೆ ಹಾಗೂ ಎರಡು ಕೋರೆ ಹಲ್ಲುಗಳನ್ನು ಕಡ್ಡಾಯವಾಗಿ ಬಿಡಿಸುತ್ತಿದ್ದ. ಬಹುಶಃ ಆತನಿಗೆ ರಕ್ಕಸ ಎಂದರೆ ಮಹಿಷಾಸುರ ನ ರೂಪವೊಂದೇ ಗೊತ್ತಿತ್ತೋ ಏನೋ ಎಂದು ನನಗೀಗ ಅನಿಸುತ್ತಿದೆ.
ಮಾವನ ಜೊತೆಯೇ ಅಜ್ಜಿ ಮನೆಯ ದನ ಕರುಗಳನ್ನು ಮೇಯಿಸಲು ಗದ್ದೆಗೆ ನಾನು ಹೋಗುತ್ತಿದ್ದೆ.ಅಲ್ಲಿ ಎಲ್ಲಾ ಮನೆಯ ಮಕ್ಕಳು ಸೇರುತ್ತಿದ್ದರು. ನಂತರ ಅಲ್ಲಿ ನಡೆಯುವುದು ಚಿಣ್ಣರ ಯಕ್ಷಗಾನ ಬಯಲಾಟ. ಮಾವ ಯಾವುದೋ ಮರದ ಕೊಂಬೆಯನ್ನು ಕಿತ್ತು ತಂದು ಕತ್ತಿಯಿಂದ ಅದನ್ನು ಖಡ್ಗ ತರಹ ಮಾಡಿ ಕೊಡುತ್ತಿದ್ದ.ತಲೆಗೆ ಯಾವುದೋ ದೊಡ್ಡದಾದ ಎಲೆಯೊಂದನ್ನು ಸಿಕ್ಕಿಸಿ ಕಿರೀಟ ತರಹ ಮಾಡಿಕೊಳ್ಳುತ್ತಿದ್ದೆವು. ಮಾವ ಆತನದ್ದೇ ಶೈಲಿಯಲ್ಲಿ ಭಾಗವತಿಗೆ ಹಾಡುತ್ತಿದ್ದರೆ ನಾವೆಲ್ಲಾ ನಮ್ಮಿಷ್ಟದಂತೆ ಕುಣಿಯುತ್ತಿದ್ದೆವು. ಆ ಯಕ್ಷಗಾನ ಕ್ಕೆ ಶಿಸ್ತು ಇರದೇ ಇರಬಹುದು. ಆದರೆ ನಮ್ಮಲ್ಲೊಂದು ಅದರ ಬಗ್ಗೆ ಅಪಾರವಾದ ಶ್ರದ್ಧೆ ಇತ್ತು.
ಅಜ್ಜಿಮನೆಯ ಅಜ್ಜಿ ಭಯಂಕರ ಮಡಿಯವಳು. ಮನೆಯಿಂದ ಹೊರಗೆ ಹೋಗಿ ಪೇಟೆ ಸುತ್ತಿ ಬಂದರೆ ಒಂದು ಚೊಂಬು ನೀರಾದರೂ ಮೈ ಕೈ ತಲೆಗೆ ಸುರಿದುಕೊಂಡೇ ಒಳಗೆ ಬರಬೇಕಾಗಿತ್ತು. ಸಾವಿತ್ರಿ ಅಜ್ಜಿಗೂ ನಾನೆಂದರೆ ತುಂಬಾನೇ ಇಷ್ಟ.
ಅವಳು ನನ್ನನ್ನು ಕರೆದುಕೊಂಡು ಗದ್ದೆಯ ಬದುವಿಗೆ ಹೋಗುತ್ತಿದ್ದಳು. ನಾನು ಪ್ರತಿಯೊಂದನ್ನು ಕೇಳುತ್ತಿದ್ದೆ, ಅದು ಏನು, ಇದು ಏನು ಎಂದು. ಅವಳು ವಿವರಿಸುತ್ತಿದ್ದಳು. ರೆಂಜೆ ಮರದ ಹೂವು ಹೆಕ್ಕುವುದು, ಹೆಬ್ಬಲಸಿನ ಮರದ ಬುಡದಿಂದ ಅದರ ಹಣ್ಣಿನ ಬೀಜ ಹೆಕ್ಕುವುದು.. ಎಲ್ಲವನ್ನೂ ಅವಳೊಂದಿಗೆ ಹೋಗಿಯೇ ಮಾಡುತ್ತಿದ್ದೆ. ಅವಳೊಂದಿಗೆ ಪಕ್ಕದ ಮನೆಯ ತೋಟದಿಂದ ಬಾಳೆ ಎಲೆ ತರಲು ಹೋಗುತ್ತಿದ್ದೆ. ನಾನು ಬಾಳೆ ಎಲೆಯನ್ನು ಇಡಿಯಾಗಿ ಕಟ್ ಮಾಡಿದರೆ ಹೇಳುತ್ತಿದ್ದಳು ಬಾಳೆ ಎಲೆಯನ್ನು ಇಡಿಯಾಗಿ ಯಾವತ್ತೂ ಕಟ್ ಮಾಡ್ಬಾರ್ದು, ತುಂಡು ತುಂಡಾಗಿಯೇ ಕಟ್ ಮಾಡಬೇಕು. ಒಂದು ವೇಳೆ ಒಂದು ತುಂಡು ಎಲೆಯನ್ನು ತಗೊಂಡು ಹೋಗ್ಲಿಕ್ಕೆ ಇದ್ದರೂ ಸಹ ಅದರೊಟ್ಟಿಗೆ ಒಂದು ಚಿಕ್ಕ ಸೀಳು ಎಲೆಯನ್ನಾದರೂ ಕಟ್ ಮಾಡಿ ತಗೊಂಡು ಹೋಗ್ಬೇಕು ಅಂತ ಹೇಳುತ್ತಿದ್ದಳು. ಅಜ್ಜಿ ಇದೆಲ್ಲ ಯಾಕೆ ಎಂದು ನಾನು ಹೇಳಿದರೆ, ಅದು ನಿನಗೆ ಈಗೆಲ್ಲಾ ಹೇಳಿದರೂ ಅರ್ಥ ಆಗುವುದಿಲ್ಲ ಎಂದಷ್ಟೇ ಹೇಳುತ್ತಿದ್ದಳು.
ಅವಳೊಂದಿಗೆ ಗದ್ದೆಯ ಬದುವಿಗೆ ಹೋದರೆ ಆಹಾ ಅದೆಂತಹ ಸುಂದರವಾದ ದೃಶ್ಯ ಕಾವ್ಯ ಅಲ್ಲಿಯದು. ಒಂದು ಕಡೆ ಶ್ರೀಧರಣ್ಣ ಅವರದ್ದೇ ಶೈಲಿಯಲ್ಲಿ ಜೋರಾಗಿ ಆಲಾಪನೆ ಮಾಡುತ್ತಾ ಕೋಣಗಳ ಸಹಾಯದಿಂದ ಗದ್ದೆ ಉಳುತ್ತಿದ್ದರು. ಅವರಿಗೆ ಮಾತು ಸರಿಯಾಗಿ ಬರುವುದಿಲ್ಲ. ಆದರೂ ಅವರ ಆ ಧ್ವನಿ ಇನ್ನೂ ಮರೆತಿಲ್ಲ. ಕೋಣಕ್ಕೆ ಹಲಗೆ ಹಾಕಿ ಉಳುವ ದಿನ ನಾನು ಕೂಡ ಹೋಗಿ ಹಲಗೆಯ ಮೇಲೆ ನಿಂತುಕೊಳ್ಳುತ್ತಿದ್ದೆ. ಅದರ ಮಜಾವೇ ಬೇರೆ. ಬೀಳುವುದು ಏಳುವುದು ಮತ್ತೆ ಹೋಗಿ ಹಲಗೆಯ ಮೇಲೆ ನಿಂತುಕೊಳ್ಳುವುದು ಹೀಗೆ ನಡೆಯುತ್ತಿತ್ತು ನನ್ನ ಬ್ಯಾಲೆನ್ಸ್.
ನಂತರ ಪಕ್ಕದಲ್ಲಿ ಹರಿಯುವ ತೊರೆಯಲ್ಲಿ ಕೋಣಗಳನ್ನು ತೊಳೆಯಲು ನಾನು ಕೂಡ ಅವರೊಂದಿಗೆ ಓಡುತ್ತಿದ್ದೆ. ಕಂಬಳದಲ್ಲಿ ಜಿದ್ದಿಗೆ ಬಿದ್ದಂತೆ ಓಡುವ ಕೋಣಗಳನ್ನು ಸರಿಯಾಗಿ ಸಾಕಿ ಬಿಟ್ಟರೆ ಅವುಗಳು ಕೂಡ ಅದೆಷ್ಟು ಸೌಮ್ಯ ಅಂತ ತುಂಬಾ ಹತ್ತಿರದಿಂದ ಬಲ್ಲವನಿಗೆ ಮಾತ್ರ ಗೊತ್ತು .ನಾವು ಅವುಗಳನ್ನು ತೊಳೆಯುತ್ತಿದ್ದರೆ ನೀರಿನಲ್ಲಿ ನಿಂತುಕೊಂಡು ಅವುಗಳು ಮೂಗಿನಲ್ಲಿ ಗಾಳಿ ಬಿಡುತ್ತಿದ್ದವು.ಅಲ್ಲಿಯ ಪ್ರತಿಯೊಂದು ಮನೆಯವರಿಗೂ ಬೇಕಾದಷ್ಟು ಗದ್ದೆ ಇದ್ದುದರಿಂದ ಎಲ್ಲರ ಮನೆಯಲ್ಲೂ ಉಳಲು ಕೋಣಗಳಿದ್ದವು.
ಅಲ್ಲಿಯ ನಾರಾಯಣ ಅಜ್ಜ ಒಬ್ಬ ಮಾತ್ರ ತನ್ನ ಕೋಣಗಳನ್ನು ಕಂಬಳದಲ್ಲಿ ಓಡಿಸಲು ತಪ್ಪದೇ ತಗೊಂಡು ಹೋಗುತ್ತಿದ್ದ. ಎಣ್ಣೆಯನ್ನು ಚೆನ್ನಾಗಿ ತಿಕ್ಕಿ ತಿಕ್ಕಿ ಅವುಗಳ ಮೈ ಪಳ ಪಳ ಅಂತ ಯಾವಾಗಲೂ ಹೊಳೆಯುತ್ತಿತ್ತು. ಅಜ್ಜನ ಎತ್ತುಗಳ ಹೆಸರು ಕಾಲೆ ಮತ್ತು ಬೊಲ್ಲೆ. ಕಾಲೆ ಸ್ವಲ್ಪ ಕಪ್ಪು ಇದ್ದರೆ, ಬೊಲ್ಲೆ ಕಾಲೆಗಿಂತ ಸ್ವಲ್ಪ ಬಿಳಿ ಇದ್ದ ಅಷ್ಟೇ. ತುಳುವಲ್ಲಿ ಆ ಎರಡು ಹೆಸರುಗಳ ಅರ್ಥ ಕೂಡ ಅದೇ ಕಪ್ಪು ಮತ್ತು ಬಿಳಿ ಎಂದು. ಆ ಎತ್ತುಗಳು ಸಂಜೆ ವೇಳೆಗೆ ಗದ್ದೆ ಬದಿಯಲ್ಲಿ ಮೇಯಲು ಬಂದರೆ ಆಹಾ ಅದೆಂತಹ ರಾಜ ಗಾಂಭೀರ್ಯ. ಕೆಲವೊಮ್ಮೆ ಹತ್ತಿರ ಹೋಗಲು ಕೂಡ ಭಯ ಆಗುತ್ತಿತ್ತು.ಅವುಗಳನ್ನು ಕಂಬಳಕ್ಕೆ ತೆಗೆದು ಕೊಂಡು ಹೋಗುವ ದಿನ ಮದು ಮಗನ ದಿಬ್ಬಣ ಹೋದಂತೆ ಆ ಊರಿನಲ್ಲಿ ಸಂಭ್ರಮ ಸಡಗರ.
ಗದ್ದೆಯ ಪಕ್ಕವೇ ಲೀಲಕ್ಕನ ಮನೆ. ನಾನು ಯಾವಾಗ ಅಜ್ಜಿ ಮನೆಗೆ ಹೋದರೂ ಅವರ ಮನೆಗೆ ಹೋಗಿಯೇ ಹೋಗುತ್ತೆನೆ. ಅಜ್ಜಿ ಮನೆಗೆ ಹೋದ ಕೂಡಲೇ ರಪ್ಪ ಅಂತ ಒಮ್ಮೆ ಲೀಲಕ್ಕನ ಮನೆಗೆ ಒಬ್ಬನೇ ಓಡಿ ಬಿಡುತ್ತೇನೆ. ಹೋದ ಕೂಡಲೇ ಲೀಲಕ್ಕ ತಿನ್ನಲು ಏನಾದರೂ ಕೊಟ್ಟೇ ಕೊಡುತ್ತಾರೆ. ಅವರು ಕೊಡುತ್ತಿದ್ದ ಬೆಂಕಿಯಲ್ಲಿ ಸುಟ್ಟ ಸಿಹಿಗೆಣಸಿನ ರುಚಿ ಇನ್ನೂ ಮರೆಯಲು ಸಾಧ್ಯವಿಲ್ಲ. ಹಾಗೇ ಅವರದ್ದೇ ಮನೆಯ ದನದ ಹಾಲನ್ನು ಬಿಸಿ ಮಾಡಿ ಅದಕ್ಕಿಷ್ಟು ಸಕ್ಕರೆ ಬೆರೆಸಿ ಒಂದು ದೊಡ್ಡ ಗ್ಲಾಸ್ ನಲ್ಲಿ ಕೊಡುತ್ತಿದ್ದರು ಲೀಲಕ್ಕ. ಆ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಮಳೆಗಾಲದಲ್ಲಿ ಅಕ್ಕ ಪಕ್ಕದ ಗುಡ್ಡಗಳಿಂದ ನೀರು ತೊರೆಗೆ ಸೇರಿ ಅದರ ಗಾತ್ರ ದೊಡ್ಡದಾಗುತ್ತಿತ್ತು. ಮಳೆಯ ದಿನಗಳಲ್ಲಿ ಕೆಂಪಾಗುವ ತೊರೆಯ ನೀರು ನಂತರದ ದಿನಗಳಲ್ಲಿ ಸಿಹಿಯಾಳದ ನೀರಿನಂತೆ ಶುಭ್ರವಾಗಿರುತ್ತಿತ್ತು. ನಾನು ಅಜ್ಜಿಯ ಬಳಿ ಕೇಳುತ್ತಿದ್ದೆ ಅಜ್ಜಿ ಈ ತೊರೆಯ ಹೆಸರೇನು... ಅವಳು ಹೇಳುತ್ತಿದ್ದಳು. ಇದಕ್ಕೆಲ್ಲ ಯಾರು ಹೆಸರಿಡುತ್ತಾರೆ.. ನಾವು ತೋಡು ಅಂತ ಹೇಳುತ್ತೇವೆ ಅಷ್ಟೇ. ಈ ನೀರು ಎಲ್ಲಿಗೆ ಹೋಗುತ್ತೆ ಅಜ್ಜಿ ಎಂದು ಪುನಃ ಕೇಳಿದರೆ.. ಅವಳು ಮುಗ್ಧವಾಗಿ ಇದೆಲ್ಲವೂ ಕಡಲಿಗೆ ಸೇರುತ್ತದೆ ಎಂದಷ್ಟೇ ಹೇಳುತ್ತಿದ್ದಳು.
ಚಪ್ಪಲಿ ಬಿಟ್ಟು ಅವಳ ಕೈ ಹಿಡಿದೆ ನೀರಿಗೆ ಇಳಿಯುತ್ತಿದ್ದೆ. ನನಗೆ ಹೊಳೆ ದಂಡೆಯಲ್ಲಾಗಲಿ, ಕಡಲ ಮರಳಲ್ಲಾಗಲಿ ಬರೀಗಾಲಲ್ಲಿ ನಡೆಯುವುದು ಎಂದರೆ ಬಹಳನೇ ಇಷ್ಟ.ಅದು ಆ ದಿನಗಳ ಅಭ್ಯಾಸ. ಏನೋ ಒಂಥರಾ ಹಿತ ಎನಿಸುತ್ತದೆ.
ಸ್ವಲ್ಪ ಹೊತ್ತು ನೀರಿನಲ್ಲಿ ಕಾಲೂರಿ ಅಲ್ಲೇ ಬಂಡೆಯೊಂದರ ಮೇಲೆ ಕುಳಿತು ಬಿಡುತ್ತಿದ್ದೆ. ಹೆಸರಿಲ್ಲದ ಹೊಳೆಗೂ ತೊರೆಗೂ ಕೂಡ ಒಂದೊತ್ತು ನೆಮ್ಮದಿ ಕೊಡುವ ಶಕ್ತಿ ಇದೆ. ತೊರೆಯ ಎರಡೂ ಬದಿ ಇರುವ ಮರಗಳು ಮೇಲಕ್ಕೆ ಒಂದಕ್ಕೊಂದು ತಾಗಿಕೊಂಡು ಒಂದೊಳ್ಳೆಯ ಚಪ್ಪರ ಹಾಕಿದಂತೆ ತೊರೆಯ ಇಕ್ಕೆಲಗಳಲ್ಲಿ ಉದ್ದಕ್ಕೆ ಸಾಲಾಗಿ ಇದ್ದವು. ಆಹಾ ಅಲ್ಲಿ ಕುಳಿತುಕೊಂಡರೆ ಅದೆಷ್ಟು ತಂಪು. ನೆತ್ತಿಯ ಮೇಲೂ ತಂಪು, ಕಾಲ ಕೆಳಗೂ ತಂಪು. ನೀರಿಗೆ ತಾಗಿಕೊಂಡೇ ಬೆಳೆಯುವ ವಿಧ ವಿಧವಾದ ಸಣ್ಣ ಸಣ್ಣ ಹೂವುಗಳ ಹೆಸರು ಬಲ್ಲವರಾರೋ, ಆದರೂ ಅದೆಷ್ಟು ಚಂದ.ತೊರೆಯ ಬದಿಯಲ್ಲಿ ನೀರಿಗೆ ತಾಗಿಕೊಂಡೇ ಬೆಳೆದು ನೀರಲ್ಲಿ ಸದಾ ಈಜಾಡುತ್ತಿರುವ ಜೊಂಡು ಹುಲ್ಲನ್ನು ತೊರೆಯ ನೀರು ಪ್ರತೀ ಕ್ಷಣ ಎಳೆದುಕೊಂಡು ಹೋಗಲು ಬಯಸುತ್ತಾದರೂ ಆ ಹುಲ್ಲುಗಳಿಗೆ ಇದ್ದ ಜಾಗದಿಂದ ಕಿತ್ತುಕೊಂಡು ಹೋಗಿಬಿಡಲು ಮನಸ್ಸೇ ಆಗುವುದಿಲ್ಲ . ನೀರು ಬಿಡುವುದಿಲ್ಲ, ಅವುಗಳನ್ನು ಕ್ಷಣ ಬಿಡದೇ ಎಳೆಯುತ್ತಲೇ ಇರುತ್ತದೆ ,ಆದರೆ ಹುಲ್ಲು ಹಟಮಾರಿ.. ಅದು ತನ್ನ ಪಟ್ಟು ಸಡಿಲಿಸುವುದಿಲ್ಲ. ಮಣ್ಣು ಸಹಿತ ಕಿತ್ತು ಹೋಗುವವರೆಗೂ ಅದು ಅಲ್ಲೇ ಸ್ಥಿತವಾಗಿರುತ್ತದೆ.
ಕಾಲನ್ನು ನೀರಲ್ಲಿ ಇಟ್ಟು ಕುಳಿತುಕೊಂಡಾಗ ಪುಟ್ಟ ಪುಟ್ಟ ಹೊನ್ನ ಬಣ್ಣದ ಮೀನುಗಳು ಕಾಲನ್ನು ಮುತ್ತಲು ಕಾಲಬುಡಕ್ಕೆ ಓಡೋಡಿ ಬರುತ್ತವೆ. ಸ್ವಲ್ಪ ಕಾಲು ಸರಿಸಿದರೂ ಸಾಕು ಪಟ್ ಅಂತ ಒಮ್ಮೆಲೇ ತಿರುಗಿ ವಾಪಸ್ ಓಡುತ್ತವೆ. ಆ ರೀತಿ ಮೈ ತಿರುಗಿಸಿ ಓಡುವಾಗ ಆ ನೀರಿನಲ್ಲಿ ಅವುಗಳು ಶುಭ್ರ ಬೆಳ್ಳಿಯಂತೆ ಹೊಳೆದುಬಿಡುತ್ತವೆ.ಅವುಗಳದ್ದು ಎಷ್ಟು ದಿನದ ಬದುಕೋ ಅವುಗಳಿಗೇ ಗೊತ್ತಿಲ್ಲ. ಆದರೂ ಇದ್ದಷ್ಟು ದಿನ ಹೊನ್ನಿನಂತೆ, ಬೆಳ್ಳಿಯಂತೆ.. ನುಲಿಯುತ್ತಾ ನಲಿಯುತ್ತಾ ಬದುಕಿ ಬಿಡುತ್ತವೆ.
"ಅಜ್ಜಿ ಇಲ್ಲಿ ನಾವು ಕಾಗದ ದೋಣಿ ಮಾಡಿ ಬಿಟ್ಟರೆ ಅದು ಕೂಡ ದೊಡ್ಡ ಕಡಲನ್ನೇ ಸೇರುತ್ತದೆ ಅಲ್ಲವೇ.. ಅಲ್ಲಿಗೆ ಹೋಗಿ ಅಲ್ಲಿಯ ದೊಡ್ಡ ದೊಡ್ಡ ಹಡಗುಗಳಿಗೆ ನಮ್ಮ ಪುಟ್ಟ ದೋಣಿ ಡಿಕ್ಕಿ ಹೊಡೆದರೆ ನಮ್ಮ ದೋಣಿ ಕಥೆ ಏನು ಮತ್ತೆ.." ಎಂದು ನಾನು ಕೇಳುತ್ತೇನೆ. ಅವಳು ನಗುತ್ತಾಳೆ. ಅವಳಿಗೆ ಒಂದು ಕಣ್ಣು ಸ್ವಲ್ಪ ಕಾಣುವುದಿಲ್ಲ,ಆದರೂ ನಕ್ಕಾಗ ಅವಳು ಸುಂದರಿಯೇ.
ಹೊಳೆಯಿಂದ ಮೇಲೆ ಬಂದ ಮೇಲೆ ಗದ್ದೆಯ ಬದುವಲ್ಲಿ ನಿಧಾನವಾಗಿ ಒಂದೊಂದೇ ತಿಮರೆ(ಒಂದೆಲಗ, ಬ್ರಾಹ್ಮಿ ) ಎಲೆಯನ್ನು, ಬಿಡಿಸಿ ತೆಗೆಯುವುದು ಹೇಗೆ ಎಂದು ಅವಳು ಹೇಳಿಕೊಡುತ್ತಿದ್ದಳು. ತಿಮರೆ ಎಲೆಯ ಚಟ್ನಿ ಬಿಸಿ ಬಿಸಿಯಾದ ಕುಚಲಕ್ಕಿ ಅನ್ನದ ಊಟಕ್ಕೆ ಬಹಳನೇ ರುಚಿ. "ಇದನ್ನು ಹಾಗೇ ಅದರ ಗೆಡ್ಡೆ ಸಹಿತ ತೆಗೆದು ತಿಂದರೆ ನಿಮ್ಮಂತಹ ಶಾಲೆಗೆ ಹೋಗುವ ಮಕ್ಕಳಿಗೆ ಅದರಲ್ಲೂ ಬುದ್ಧಿಶಕ್ತಿಗೆ, ನೆನಪು ಶಕ್ತಿ ಗೆ ತುಂಬಾನೇ ಒಳ್ಳೆಯದು.." ಎಂದು ಹೇಳುತ್ತಿದ್ದಳು ಅಜ್ಜಿ. ಅದೇ ರೀತಿ ಎಚ್ಚರಿಕೆ ಕೂಡ ಕೊಡುತ್ತಿದ್ದಳು ತಿಮರೆ ತೆಗೆಯುತ್ತಾ ತೆಗೆಯುತ್ತಾ ಜಾಸ್ತಿ ಮುಂದೆ ಹೋಗಬೇಡ, ಗದ್ದೆಯ ಬದುವಿನ ಇಳಿಜಾರಿನಲ್ಲಿ ಬಿದ್ದುಬಿಟ್ಟಿ ಜೋಕೆ ಎಂದು. ಆದರೆ ಕೆಲವೊಮ್ಮೆ ನಾನು ತಿಮರೆ ತೆಗೆಯುತ್ತಾ ತೆಗೆಯುತ್ತಾ ಗದ್ದೆಯ ಬದುವಿನ ಆಳವಾದ ಜಾಗಕ್ಕೆನೇ ಹೋಗುತ್ತಿದ್ದೆ ಯಾಕೆಂದರೆ ಆ ಭಾಗಗಳಲ್ಲಿ ತಿಮರೆ ತುಂಬಾನೇ ಸೊಂಪಾಗಿ ಬೆಳೆದಿರುತ್ತದೆ. ನಾನು ಆ ಭಾಗದಲ್ಲಿ ಮುಂದೆ ಹೋದಷ್ಟು ಅವಳಿಗೆ ಆತಂಕ. ಜೋರಾಗಿ ಕರೆಯುತ್ತಿದ್ದಳು. "ನಿನಗೆ ಎಷ್ಟು ಹೇಳಿದರೂ ಅರ್ಥ ಆಗುವುದಿಲ್ಲ ಮಾರಾಯ, ಒಮ್ಮೆ ಬೇಗ ಮೇಲೆ ಬಾ..ಏನಾದರೂ ಆದರೆ ನಿನ್ನ ಅಮ್ಮ ಬೈಯುವುದು ನನಗೆಯೇ.. ನೋಡು ಕತ್ತಲೆಯಾಗುತ್ತಾ ಬಂತು..ಈ ರೀತಿ ಮಾಡುವುದಾದರೆ ನೆಕ್ಸ್ಟ್ ಇಲ್ಲಿಗೆ ಕರೆದುಕೊಂಡೇ ಬರುವುದಿಲ್ಲ.." ಅಂತ ಹೇಳುತ್ತಿದ್ದಳು. ನನ್ನ ಸಾವಿತ್ರಿ ಅಜ್ಜಿ ಅಂದರೆ ಹಾಗೇನೇ ಅವಳಿಗೆ ಬೊಬ್ಬೆ ಹಾಕಿ ಅತ್ತು ಕೂಗಿ ಕರೆದೇ ಅಭ್ಯಾಸ. ಹೌದು ಅದರಲ್ಲಿ ಅವಳ ಕಾಳಜಿಯ ಹೊರತು ಮತ್ತೇನು ಇರಲಿಲ್ಲ.
ಅಜ್ಜಿ ಮನೆಯಿಂದ ವಾಪಸ್ ನಮ್ಮ ಮನೆಗೆ ಹೊರಟು ನಿಂತಾಗ ಅವಳ ಕಂಗಳಲ್ಲಿ ಜಲಪಾತವೇ ಹರಿಯುತ್ತಿತ್ತು. ಅವಳಿಗೆ ಎಲ್ಲರೂ ಹೊರಟು ಹೋದರೆ ತುಂಬಾನೇ ಬೋರ್ ಆಗುತ್ತಿತ್ತು. ನನಗೂ ಮನೆಗೆ ಹೋಗಲು ಮನಸ್ಸಿಲ್ಲ. ಕೆಲವೊಮ್ಮೆ ಎಷ್ಟೋ ಸಲ ಅಜ್ಜಿ ಮನೆಯಿಂದ ನಮ್ಮ ಮನೆಗೆಂದು ಹೊರಟವನು ಮಧ್ಯ ದಾರಿಯಲ್ಲಿ ಪುನಃ ಅಜ್ಜಿ ಮನೆಗೆ ಓಡಿ ಎರಡು ಮೂರು ದಿನ ಕೂತು ಬಂದದ್ದು ಇದೆ. ಅಜ್ಜಿ ಕೂಡ ನಮ್ಮ ಮನೆಗೆ ಬಂದರೆ ಅವಳು ವಾಪಸ್ ಅವಳ ಮನೆಗೆ ಹೋಗುವುದು ನನಗೆ ಕೂಡ ಇಷ್ಟವಿರಲಿಲ್ಲ. ಅವಳು ಹೋಗದಂತೆ ಮಾಡಲು ಮಾಸ್ಟರ್ ಪ್ಲಾನ್ ಗಳನ್ನು ಮಾಡುತ್ತಿದ್ದೆ. ಅದರಲ್ಲಿ ಒಂದು ಅವಳ ಚಪ್ಪಲಿಯನ್ನು ಅಡಗಿಸಿಟ್ಟು ಸ್ಕೂಲ್ ಗೆ ಹೋಗುವುದು. ಚಪ್ಪಲಿ ಇಲ್ಲದೇ ಅವಳು ಅಜ್ಜಿ ಮನೆಗೆ ಹೋಗಲಿಕ್ಕೆ ಆಗುವುದಿಲ್ಲ ಎನ್ನುವುದು ನನ್ನ ಲಾಜಿಕ್ಕು. ಆ ರೀತಿ ಮಾಡಿದ ದಿನಗಳಲ್ಲಿ ಅವಳು ನಮ್ಮ ಮನೆಯಲ್ಲಿ ಇನ್ನೊಂದೆರಡು ದಿನ ಕುಳಿತು ಆಮೇಲೆ ಮನೆಗೆ ಹೋಗುತ್ತಿದ್ದಳು.
ನನಗೆ ನೆನಪಿರುವ ಹಾಗೆ ಆವಾಗ ನಾನು ಹೈಸ್ಕೂಲ್ ನಲ್ಲಿ ಇದ್ದೆ. ಸಂಜೆ ಶಾಲೆಯಿಂದ ಬರುವಾಗ. ಮನೆಯ ಮುಂದೆ ತುಂಬಾ ಜನ ಸೇರಿದ್ದರು. ಯಾರೂ ಏನೂ ಮಾತನಾಡಲಿಲ್ಲ. ದೂರದಿಂದಲೇ ನೋಡಿದೆ.. ಚಿನ್ನಜ್ಜಿಯನ್ನು ಬಿಳಿ ವಸ್ತ್ರದಿಂದ ಮುಚ್ಚಿ ಅಂಗಳದಲ್ಲಿ ಮಲಗಿಸಿದ್ದರು. ಯಾರೋ ಬಂದು ಕೈ ಹಿಡಿದು ಅವಳ ಬಳಿಗೆ ನನ್ನನ್ನು ಕರೆದುಕೊಂಡು ಹೋದರು. ತುಳಸಿ ನೀರು ನನ್ನ ಕೈಗೆ ಕೊಟ್ಟರು. ಅಜ್ಜಿಯ ಬಾಯಿಗೆ ಬಿಡು ಎಂದು ಹೇಳಿದರು. ನಾನು ಬಿಟ್ಟೆ. ಬಹುಶಃ ನನಗಾಗಿಯೇ ಅವರೆಲ್ಲ ಕಾದಿದ್ದರೋ ಏನೋ, ಎಷ್ಟಾದರೂ ನಾನು ಅವಳ ಇಷ್ಟದ ಮೊಮ್ಮಗನಲ್ಲವೇ. ನಾನು ಜೀವನದಲ್ಲಿ ನೋಡಿದ ಮೊದಲ ಸಾವು ಅಂದರೆ ಅದೇ.ಅವತ್ತು ನಾನು ಸ್ವಲ್ಪವೂ ಅಳಲಿಲ್ಲ, ಆದರೆ ಅವಳು ಇನ್ನು ಮುಂದೆ ನನ್ನ ಜತೆ ಇರುವುದಿಲ್ಲ ಅಂತ ಅರ್ಥ ಆದ ದಿನ ಮಾತ್ರ ನಾನು ನಿಜವಾಗಿಯೂ ತುಂಬಾನೇ ಅತ್ತಿದ್ದೆ.
ನಂತರ ಮಂಗಳೂರಿನಲ್ಲಿ ಕಾಲೇಜಿನಲ್ಲಿ ಓದ್ತಾ ಇದ್ದೆ ನಾನು. ಒಂದು ದಿನ ಅಮ್ಮನ ಕಾಲ್ ಬಂತು. "ಬೇಗ ಅಜ್ಜಿ ಮನೆಗೆ ಬಾ. ನಿನ್ನಜ್ಜಿ ಇನ್ನಿಲ್ಲ.. ಹೋಗಿಬಿಟ್ಟಳು.." ಎಂದು ಅಮ್ಮ ಹೇಳಿದಳು. ಕಾಲೇಜಿಗೆ ರಜೆ ಹಾಕಿ, ಅಜ್ಜಿ ಮನೆಗೆ ಓಡಿದೆ. ಅಲ್ಲಿಯೂ ಕೂಡ ಎಲ್ಲರೂ ನನಗಾಗಿಯೇ ಕಾದಿದ್ದರೋ ಏನೋ. ಅಂಗಳದಲ್ಲಿ ನನ್ನ ಸಾವಿತ್ರಿ ಅಜ್ಜಿ ಮಲಗಿದ್ದಳು.ಅವಳನ್ನು ಒಂದು ದೊಡ್ಡ ಇಡೀ ಬಾಳೆ ಎಳೆಯಲ್ಲಿ ಮಲಗಿಸಿಟ್ಟಿದ್ದರು. ಇಡೀ ಬಾಳೆಎಲೆಯನ್ನು ಯಾಕೆ ಕಟ್ ಮಾಡಿ ತೆಗೆಯಬಾರದು ಅಜ್ಜಿ ಎಂದು ನಾನು ಕೇಳಿದಾಗಲೆಲ್ಲ ಅಜ್ಜಿ ನನಗೆ ಯಾವತ್ತೂ ಯಾಕೆ ಎಂದು ಹೇಳಿರಲೇ ಇಲ್ಲ !! ನನ್ನ ಆ ಪ್ರಶ್ನೆಗೆ ಉತ್ತರ ಹಾಗೂ... ಅವಳ ಅಳು ಕೂಗು ಬೊಬ್ಬೆ ಕಾಳಜಿ ಎಲ್ಲವೂ ಕೂಡ ಅಲ್ಲೇ ಆ ಇಡೀ ಬಾಳೆ ಎಲೆಯ ಮೇಲೆಯೇ ಅಂಗಾತವಾಗಿ ಮಲಗಿತ್ತು ಎಂದು ಅವತ್ತು ನನಗನಿಸಿತು. ತುಳಸಿ ನೀರು ಬಿಡು ಎಂದು ಯಾರೋ ಹೇಳಿದರು. ನಾನು ಬಿಟ್ಟೆ. ಅವತ್ತು ಕೂಡ ನಾನು ಅಳಲೇ ಇಲ್ಲ. ಅಮ್ಮ ಮಾತ್ರ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಎಷ್ಟಾದರೂ ಅವಳನ್ನು ಹೆತ್ತ ಅಮ್ಮ ಅಲ್ಲವೇ. ನನ್ನ ಪಾಲಿಗಿದ್ದ ಕೊನೆಯ ಅಜ್ಜಿ ನನ್ನ ಪಾಲಿಗೆ ಮರೆಯಾಗಿ ಹೋಗಿದ್ದು ಹಾಗೆ. ಹೇಗೆ ಹೆಣ್ಣು ಮಕ್ಕಳಿಗೆ ತಾಯಿ ಇಲ್ಲದ ತವರು ಅಷ್ಟಾಗಿ ಇಷ್ಟ ಆಗುವುದಿಲ್ಲೋ.. ಹಾಗೆಯೇ ಅಜ್ಜಿ ಇಲ್ಲದ ಅಜ್ಜಿಮನೆ ಮೊಮ್ಮಕ್ಕಳಿಗೂ ಕೂಡ ಇಷ್ಟ ಆಗುವುದೇ ಇಲ್ಲ. ಅದೇ ಕಾರಣವೋ ಏನೋ ,ಅಮೇಲೆ ನಾನು ಅಜ್ಜಿ ಮನೆಗೆ ಹೋದದ್ದೇ ಕಡಿಮೆ.
ನಂತರ ದಿನಗಳಲ್ಲಿ ಯಾರಾದರೂ ಸಂಬಂಧಿಕರು ಖರ್ಚಿಗೆ ಅಂತ ದುಡ್ಡು ಕೊಟ್ಟರೆ ನನಗೆ ನನ್ನ ಚಿನ್ನಜ್ಜಿಯೇ ತುಂಬಾ ನೆನಪಾಗಿ ಬಿಡುತ್ತಿದ್ದಳು. ಆ ಬೊಚ್ಚು ಬಾಯಿಯ ಚೆಲುವೆಯೇ ನನ್ನ ಪಾಲಿನ ಹಣದ ಥೈಲಿ, ನೆಲದಡಿಯ ಕೊಪ್ಪರಿಗೆ, ಮರೆತು ಹೋದ ಜೇಬಿನ ಹಣ.. ಎಲ್ಲವೂ ಆಗಿದ್ದಳು. ಅವಳು ನೆನಪು ಬಂದಾಗಲೆಲ್ಲ ನನ್ನ ಹೃದಯ ಯಾವತ್ತೂ ಭಾರ.
ಚಟ್ನಿ ಮಾಡಲು ಬೇಕೆಂದು ಮೊನ್ನೆ ಒಂದು ದಿನ ಸಂಜೆ ಗದ್ದೆಯ ಬದುವಿಗೆ ತಿಮರೆ ತರಲು ಹೋಗಿದ್ದೆ. ತಿಮರೆ ತೆಗೆದು ಅದರ ಗಡ್ಡೆಯನ್ನು ಕೂಡ ಹೊರ ತೆಗೆದು, ಸ್ವಲ್ಪ ಮುರಿದು ಹಾಗೇ ಮುಗಿನ ಬಳಿ ತಂದು ಅದರ ತಾಜಾ ಪರಿಮಳನ್ನು ಆಘ್ರಾಣಿಸಿದೆ. ಹಾಗೇ ತಿಮರೆ ತೆಗೆಯುತ್ತಾ ತೆಗೆಯುತ್ತಾ ಗದ್ದೆಯ ಇಳಿಜಾರಲ್ಲಿ ಸೊಂಪಾಗಿ ಬೆಳೆದಿದ್ದ ಮತ್ತಷ್ಟು ತಿಮರೆ ತೆಗೆಯಲು ಇನ್ನಷ್ಟು ಕೆಳ ಬಾಗಿದೆ..
"ಹೊತ್ತಾಯಿತು ಮಾರಾಯ, ಬೇಗ ಬಾ...ಲೇಟ್ ಆದ್ರೆ ನಿನ್ನಮ್ಮ ನಂಗೆ ಬೈತಾಳೆ, ಈ ರೀತಿ ಮಾಡಿದ್ರೆ ನಿನ್ನನ್ನು ನೆಕ್ಸ್ಟ್ ಟೈಮ್ ಇಲ್ಲಿಗೆ ಕರೆದುಕೊಂಡೇ ಬರುವುದಿಲ್ಲ...." ಅಂತ ಸಾವಿತ್ರಿ ಅಜ್ಜಿ ಕೂಗಿದಂತೆ ಆಯಿತು.
ಅಲ್ಲಿಂದಲೇ ತಲೆ ಮೇಲೆತ್ತಿ ನೋಡಿದೆ, ಅಲ್ಲಿ ಯಾರೂ ಕೂಡ ಇರಲಿಲ್ಲ.. ಅಲ್ಲಿ ನನ್ನ ಅಜ್ಜಿಯೇ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ಒಮ್ಮೆ ಅನ್ನಿಸಿತು. ಆದರೆ ಅಲ್ಲಿ ಅವಳಿರಲು ಹೇಗೆ ಸಾಧ್ಯ!ಅಲ್ಲಿಂದ ಮೇಲೆ ಬಂದು ಚಪ್ಪಲಿ ಹಾಕಿಕೊಂಡು ತಿಮರೆಯೊಂದಿಗೆ ನಿಧಾನವಾಗಿ ಮನೆಯ ಕಡೆಗೆ ಹೆಜ್ಜೆ ಹಾಕಿದೆ.
ದಾರಿ ಮಧ್ಯೆ ಯಾಕೋ ಅಜ್ಜಿ ಮತ್ತಷ್ಟು ನೆನಪಾಗಿ ಮನಸ್ಸು ಮತ್ತಷ್ಟು ಭಾರ ಆಯಿತು. ಮನಸ್ಸು ಹೊಳೆಯಾಗಿ ನದಿಯಾಗಿ ಹರಿದದ್ದು ಆವಾಗಲೇ.... ನಾನು ಅಣೆಕಟ್ಟು ಹಾಕಿ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಲೇ ಇಲ್ಲ!
.....................................................................................
ಅಜ್ಜಿಯರು ಯಾವತ್ತೂ ಸುಖವಾಗಿಯೇ ಇರಲಿ 🙏🏻😌
AB Pacchu
Moodubidire

Comments
Post a Comment