ಆವಾಗ ಅದು ಬರೀ ಮೂರ್ಖರ ಪೆಟ್ಟಿಗೆ ಆಗಿರಲಿಲ್ಲ..
ನಾನು ಮೊದಲು ಈ ಡೈನಾಸೋರ್ ಗಳನ್ನು ನೋಡಿದ್ದೇ ಈ ಟಿವಿ ಪರದೆಯಲ್ಲಿ.ಹಾಗಾದರೆ ಆಮೇಲೆ ನೀನು ನಿಜ ಡೈನಾಸೋರ್ ಗಳನ್ನು ಕೂಡ ಬಹಳ ಹತ್ತಿರ ಹೋಗಿ ಮುಟ್ಟಿ,ಮುದ್ದಾಡಿ ಎಲ್ಲಾ ನೋಡಿದ್ದಿಯಾ.. ಎಂದೆಲ್ಲ ಕೇಳ್ಬೇಡಿ ಆಯ್ತ, ಡೈನಾಸೋರ್ ಗಳು ಹೇಗಿರುತ್ತವೆ ಎಂಬ ಒಂದು ಕಲ್ಪನೆಯನ್ನು ನನ್ನಂತೆ ಹೆಚ್ಚಿನವರಿಗೆ ಮೊದಲ ಬಾರಿಗೆ ತೋರಿಸಿ ಕೊಟ್ಟಿದ್ದೇ ಈ ಟಿವಿ ಅಲ್ಲವೇ ಅದಕ್ಕಾಗಿ ಹಾಗೆ ಹೇಳಿದೆ ಅಷ್ಟೇ.
ಟಿವಿ ಎಂದರೆ ಬರೀ ಒಂದಲ್ಲ ಅದು ಹತ್ತು ಹಲವು ಬಾಲ್ಯದ ನೆನಪುಗಳ ಬಣ್ಣ ಬಣ್ಣದ ಗೊಂಚಲು.ಅದರಲ್ಲಿ ಮೊತ್ತ ಮೊದಲನೆಯ ನೆನಪೇ ನಮ್ಮ ಪಕ್ಕದ ಮನೆಯ ಅಂಬಕ್ಕನ ಮನೆಯ ಟಿವಿ.ಆಗ ನಾನು ಬಹಳ ಚಿಕ್ಕವನಿದ್ದೆ.ಸಮಯವಿದ್ದಾಗಲೆಲ್ಲ ಅಂಬಕ್ಕನ ಮನೆಗೆ ಹೋಗಿ ಟಿವಿ ನೋಡುತ್ತಿದ್ದೆ.ನಾನು ಶಕ್ತಿಮಾನ್ ಮೊದಲಿಗೆ ನೋಡಿದ್ದೆ ಅವರ ಮನೆಯ ಟಿವಿಯಲ್ಲಿ. ಆಗ ಮನೆಯಲ್ಲಿ ಟಿವಿ ಇರಲಿಲ್ಲ.
ನನಗೆ ಬಾಲಮಂಗಳ ಓದುವಾಗ ಲಂಬೋದರನಿಗೆ ಶಕ್ತಿಮದ್ದಿನ ಲೇಹ್ಯ ತಯಾರಿಸಿ ಕೊಡುವ ವೈದ್ಯರು ನಮ್ಮ ಮನೆಯ ಪಕ್ಕದ ಮನೆಯಲ್ಲಿಯೇ ಇದ್ದಿದ್ದರೆ,ನಾನೂ ಕೂಡ ಶಕ್ತಿಮದ್ದು ಸೇವಿಸಿ ತುಂಬಾನೇ ಶಕ್ತಿಶಾಲಿ ಆಗಿ,ದೊಡ್ಡ ತರಗತಿಯ ಹುಡುಗರನ್ನು ಎಷ್ಟೊಂದು ಸುಲಭವಾಗಿ ಹಣ್ಣುಗಾಯಿ ನೀರುಗಾಯಿ ಮಾಡುಬಹುದಿತ್ತು ಎಂದು ಅನ್ನಿಸುತ್ತಿದ್ದರೆ... ಅಂಬಕ್ಕನ ಮನೆಯ ಟಿವಿಯಲ್ಲಿ ಶಕ್ತಿಮಾನ್ ನೋಡುವಾಗ ಯಾವುದಾದರೂ ಕಟ್ಟಡದ ಮೇಲೆ ಹೋಗಿ ಹಾಗೇ ಸುಮ್ಮನೆ ಕೆಳಗೆ ಹಾರಿ ಬಿಡುವ ಅಂತ ಅನ್ನಿಸುತ್ತಿತ್ತು.ಏಕೆಂದರೆ ಕಾಪಾಡಲು ಶಕ್ತಿಮಾನ್ ಎಲ್ಲಿಂದಲೋ ಹಾರಿ ಬರ್ತಾನೆ ಅಲ್ವ ಹಾಗಾಗಿ.
ಶಕ್ತಿಮಾನ್ ನ ಪುಣ್ಯಕ್ಕೆ ನಮ್ಮ ಹಳ್ಳಿಯಲ್ಲಿ ಆ ಕಾಲಕ್ಕೆ ಬಹು ಮಹಡಿ ಕಟ್ಟಡಗಳು ಇರಲಿಲ್ಲ.ಹಾಗಾಗಿ ನಾನೂ ಕೂಡ ಹಾರಲಿಲ್ಲ, ಶಕ್ತಿಮಾನ್ ಗೆ ಹಾರಿಕೊಂಡು ನಮ್ಮೂರಿಗೆ ಬರುವ ತಾಪತ್ರಯ ಕೂಡ ತಪ್ಪಿ ಹೋಯಿತು.ಟಿವಿಯಲ್ಲಿ ಬರುತ್ತಿದ್ದ ಶಕ್ತಿಮಾನ್ ಆ ಕಾಲಕ್ಕೆ ನನ್ನ ಪಾಲಿನ ಸೋಜಿಗ,ವಿಸ್ಮಯ, ಅಧ್ಭುತ, ಅತ್ಯಧ್ಭುತ ಎಲ್ಲವೂ ಆಗಿದ್ದ.
ಆ ನಂತರ ಅಂಬಕ್ಕನವರು ನಮ್ಮ ಮನೆಯ ಪಕ್ಕದಿಂದ ಸ್ವಲ್ಪ ದೂರದಲ್ಲಿ ಹೊಸ ಮನೆ ಮಾಡಿದರು.ಆ ನಂತರವೂ ನಾನು ಅಲ್ಲಿಯವರೆಗೆ ನಡೆದುಕೊಂಡು ಹೋಗಿ ಅವರ ಮನೆಯಲ್ಲಿ ಶಕ್ತಿಮಾನ್ ನೋಡುತ್ತಿದ್ದೆ. ಆದಿತ್ಯವಾರದ ಸಂಜೆಯ ಚಲನಚಿತ್ರ ಕೂಡ ನೋಡಲು ನಿರಂತರವಾಗಿ ಹೋಗುತ್ತಿದ್ದೆ.ಅದಕ್ಕಾಗಿ ಚಂದವಾಗಿ ಸ್ನಾನ ಮಾಡಿ ಶಿಸ್ತಿನಿಂದ ಸಿದ್ಧವಾಗಿ ನಾಲ್ಕು ಗಂಟೆಯವರೆಗೆ ಬಕ ಪಕ್ಷಿಯಂತೆ ಕಾದು ಆಮೇಲೆ ಅಂಬಕ್ಕನ ಮನೆಗೆ ಹೋಗುತ್ತಿದ್ದೆ.
ಬಬ್ರುವಾಹನ, ಶ್ರೀರಾಮಚಂದ್ರ,ರಣಧೀರ, ಕಳ್ಳ ಕುಳ್ಳ ಎಲ್ಲ ಎಷ್ಟು ಸಲ ನೋಡಿದ್ದೆನೋ ಲೆಕ್ಕವೇ ಇಲ್ಲ.ಈಗಲೂ ಆ ಎಲ್ಲಾ ದೃಶ್ಯಗಳು ಕಣ್ಣ ಮುಂದೆ ಕಟ್ಟಿದಂತೆಯೇ ಇದೆ.ಅಂಬಕ್ಕ ನನಗೆ ಒಂದು ರೀತಿಯಲ್ಲಿ ತಾಯಿ ಇದ್ದಂತೆಯೇ.ಅವರನ್ನು ಮಮ್ಮಿ ಎಂದೇ ನಾನು ಕರೆಯುತ್ತಿದ್ದೆ. ಹಾಗಾಗಿ ಟಿವಿ ನೋಡುವುದರ ಜೊತೆ ಜೊತೆಗೆ ಅಂಬಕ್ಕ ಕೊಡುತ್ತಿದ್ದ ತಿಂಡಿ ತಿನಿಸುಗಳಿಂದ ಕೂಡ ನನ್ನ ಹೊಟ್ಟೆ ಹಾಗೇ ತುಂಬಿ ಹೋಗುತ್ತಿತ್ತು.ಅವರಿಗೆ ನಾನೆಂದರೆ ಅದೇನೋ ಪ್ರಿತಿ.ನನಗೂ ಅವರು ಅಂದರೆ ತುಂಬಾನೇ ಇಷ್ಟ.
ನನಗೆ ಕ್ರಿಕೆಟ್ ಅಂದರೆ ಭಯಂಕರ ಹುಚ್ಚು.ಆದರೆ ರಾತ್ರಿಯ ಪಂದ್ಯ ಇದ್ದರೆ,ಅಂಬಕ್ಕನ ದೂರದ ಮನೆಗೆ ನಡೆದು ಹೋಗಲು ಭಯ ಆಗುತ್ತಿತ್ತು.ಹಾಗಾಗಿ ಮನೆಯ ಪಕ್ಕವೇ ಇದ್ದ ಮತ್ತೊಂದು ಮನೆ ಆದಂತಹ ಬಂಟಿಯವರ ಮನೆಗೆ ನಾನು ಕ್ರಿಕೆಟ್ ಮ್ಯಾಚ್ ನೋಡುವುದಕ್ಕೆ ಹೋಗಲು ಶುರು ಮಾಡಿದೆ.
ಶಕ್ತಿಮಾನ್ ಮತ್ತು ಆದಿತ್ಯವಾರದ ಚಲನಚಿತ್ರ ನೋಡ್ಲಿಕ್ಕೆ ನಾನು ಅಲ್ಲಿಗೆ ಹೋಗ್ತಾ ಇರಲಿಲ್ಲ,ಅದಕ್ಕೆ ಅಂಬಕ್ಕನವರ ಮನೆ ಇತ್ತು. ಕ್ರಿಕೆಟ್ ಮ್ಯಾಚ್ ನೋಡಲು ಮಾತ್ರ ಬಂಟಿಯವರ ಮನೆಗೆ ಹೋಗುತ್ತಿದ್ದೆ. ಅಂಬಕ್ಕನ ಮನೆಯಂತೆ ಅಲ್ಲ ಈ ಬಂಟಿಯವರ ಮನೆ. ಅಲ್ಲಿನ ಮನೆಯವರಿಗೆ ಶಿಸ್ತು ಸ್ವಲ್ಪ ಜಾಸ್ತಿ, ನನಗೆ ಅದರದ್ದೇ ಕೊರತೆ ಯಾವಾಗಲೂ ಜಾಸ್ತಿ ಇದ್ದದ್ದು.ಶಾಲೆಯಲ್ಲೂ ಅಷ್ಟೇ, ಮನೆಯಲ್ಲೂ ಅಷ್ಟೇ.. ಹೋದ ಕಡೆಗಳಲ್ಲೂ ಅಷ್ಟೇ.ಅದರಲ್ಲೂ ಚಿಕ್ಕಂದಿನಲ್ಲಿ ಪೋಷಕಾಂಶಗಳ ಕೊರತೆಗಿಂತಲೂ ಈ ಶಿಸ್ತಿನ ಕೊರತೆಯೇ ನನ್ನಲ್ಲಿ ಅಧಿಕವಾಗಿತ್ತು ಎಂದು ತಿಳಿದವರು,ಪರಿಚಯದವರು ಆವಾಗವಾಗ ಹೇಳುತ್ತಿದ್ದರು.
ಅಮ್ಮ ಹೇಳುವುದು ನನಗೆ.. ಬಂಟಿಯವರ ಮನೆಗೆ ಟಿವಿ ನೋಡಲು ಹೋಗುವುದಾದರೆ ಶಿಸ್ತಿನಿಂದ ಹೋಗಿ ಶಿಸ್ತಿನಿಂದ ಬರಬೇಕು, ಅಲ್ಲಿ ಹೋಗಿ ಹಾರಾಟ ಚೀರಾಟ ಎಲ್ಲಾ ಮಾಡ್ಬಾರ್ದು ಅಂತ.. ನಾನು ನಿಜವಾಗಿಯೂ ಅಲ್ಲಿಗೆ ಟಿವಿಗೆ ನೋಡ್ಲಿಕ್ಕೆ ಹೋಗುವಾಗ ಭಯಂಕರ ಶಿಸ್ತಿನ ಹುಡುಗನೇ ಆಗಿರುತ್ತಿದ್ದೆ. ಆದರೆ ಅಂಬಕ್ಕನ ಮನೆ ಹಾಗೆ ಅಲ್ಲ,ಅಲ್ಲಿಗೆ ಹೋದರೆ ಅದು ನಮ್ಮದೇ ಮನೆ, ಅವರು ನಮ್ಮವರೇ ಎಂಬ ಭಾವ ಬರುತ್ತಿತ್ತು. ಏಕೆಂದರೆ ಅಂಬಕ್ಕ,ಅವರ ಮಕ್ಕಳಾದ ಪಿಂಕಿ ಅಕ್ಕ, ಆದು ಅಣ್ಣ, ಬಬುಲಿ ಅಣ್ಣ ಅವರ ಬಳಿ ನನಗೆ ಅಂತಹ ಸಲಿಗೆ ಇತ್ತು.
ನನಗೂ ಈ ಬಂಟಿಗೂ ಕ್ರಿಕೆಟ್ ಅಂದರೆ ಪಂಚ ಪ್ರಾಣ.ಒಟ್ಟಿಗೆ ಆಡುವುದು ಅಂದರೂ ಇಷ್ಟ.. ಟಿವಿಯಲ್ಲಿ ಕ್ರಿಕೆಟ್ ನೋಡುವುದು ಅಂದರೂ ಬಹಳನೇ ಇಷ್ಟ. ಚಿಕ್ಕಂದಿನಲ್ಲಿ ಜಲ್ಲಿ ಕಲ್ಲಿನಲ್ಲಿ ಬೌಲಿಂಗ್ ಮಾಡಿ ಬಂಟಿಯ ತಲೆಯನ್ನು ಕೂಡ ನಾನು ಒಮ್ಮೆ ಒಡೆದು ಹಾಕಿದ್ದೆ. ರಕ್ತ ನದಿಯಂತೆ ಹರಿದಿದ್ದನ್ನು ನೋಡಿ ಆಮೇಲೆ ನಾನು ಮನೆಗೆ ಓಡಿ ಬಂದಿದ್ದೆ.ಬಂಟಿ..ಅಯ್ಯೋ..ಅಮ್ಮಾ..ರಕ್ತ.. ರಕ್ತ.. ಸತ್ತೆ ನಾನು.. ಎಂದು ಮುಗಿಲು ಮುಟ್ಟುವ ಆಕ್ರಂದನ ಮಾಡಿ ಅವನ ಮನೆಗೆ ನರಳಾಡುತ್ತಾ ಹೊರಳಾಡುತ್ತಾ ಹೋಗಿದ್ದ.ಆಗ ಅವನ ಅಮ್ಮ ಬಂದು ನನ್ನ ಅಮ್ಮನನ್ನು ತರಾಟೆಗೆ ತೆಗೆದುಕೊಂಡಿದ್ದರು.. ನಿಮ್ಮ ಮಗನಿಗೆ ಜೀವನದಲ್ಲಿ ಸ್ವಲ್ಪ ಶಿಸ್ತು ಕಲಿಸಿ.. ಎಂದು. ಈ ಬಂಟಿಯ ಅಪ್ಪನಿಗೂ ಕೂಡ ಕ್ರಿಕೆಟ್ ಅಂದರೆ ಅಷ್ಟೇ ಆಸಕ್ತಿ. ನಾವು ಮೂವರು ಒಟ್ಟಿಗೆ ಅವರ ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದೆವು. ಆ ದಿನಗಳು ಒಂಥರಾ ಚೆನ್ನಾಗಿರುತ್ತಿತ್ತು. ಆದರೆ ಸಚಿನ್ ತೆಂಡೂಲ್ಕರ್ ಔಟ್ ಆದ ನಂತರ ಅವರು ಟಿವಿ ಆಫ್ ಮಾಡುವುದಕ್ಕಿಂತ ಮೊದಲೇ ನಾನೇ ಅಲ್ಲಿಂದ ಎದ್ದು ಬರುತ್ತಿದ್ದೆ.
ಸಚಿನ್ ತೆಂಡುಲ್ಕರ್ ಔಟ್ ಆದರೆ ಅಲ್ಲಿಗೆ ಕ್ರಿಕೆಟ್ ನಲ್ಲಿ ಭಾರತದ ಕಥೆ ಅಷ್ಟೇ ಎನ್ನುವಂತಹ ದಿನಗಳು ಅವು. ಅದರಲ್ಲೂ ಆಟ ನಡೆಯುವ ಭಾರತದ ಕೆಲವು ಮೈದಾನದಲ್ಲಿ ಭಾರತ ತಂಡ ಸೋಲುತ್ತಾ ಬರುವಾಗ ಭಾರತದ ಅಭಿಮಾನಿಗಳೇ ಮೈದಾನದಲ್ಲಿ ಪೇಪರ್ ಗೆ ಬೆಂಕಿ ಕೊಟ್ಟು,ಮೈದಾನದ ತುಂಬಾ ಹೊಗೆ ಹಾಕಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದನ್ನು ನಾನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದೆ. ಅದು ಹೆಚ್ಚು ಕಡಿಮೆ ಮನೆಯಲ್ಲಿ ಸಂಜೆ ಆದಾಗ ಅಮ್ಮ ಬೀಡಿ ಎಲೆಗಳಿಗೆ ಬೆಂಕಿ ಕೊಟ್ಟು ಹೊಗೆ ಬರಿಸಿ ಸೊಳ್ಳೆಗಳನ್ನು ಓಡಿಸುವ ಅನುಭವವನ್ನು ಕೊಡುತ್ತಿತ್ತು ನನಗೆ.. ಆದರೆ ಈ ರೀತಿ ಮೈದಾನದಲ್ಲಿಯೇ ಬೆಂಕಿ ಹಾಕುವುದು ಅದು ಶಿಸ್ತು ಇಲ್ಲದವರು ಮಾಡುವುದು ಎಂದು ನನಗೆ ಆ ನಂತರ ಗೊತ್ತಾಯಿತು.ಅದನ್ನು ಕೂಡ ನನಗೆ ಬಂಟಿಯ ಅಮ್ಮನೇ ಹೇಳಿದ್ದು.
ಈ ಬಂಟಿ ಮತ್ತು ಅಂಬಕ್ಕನ ಮನೆಯ ಟಿವಿಯಲ್ಲಿ ಡಬ್ಲ್ಯು.ಡಬ್ಲ್ಯು.ಎಫ್ ಎಂಬ ಸಿಕ್ಕಾಪಟ್ಟೆ ಹೊಡೆದುಕೊಳ್ಳುವ ರೆಸ್ಲಿಂಗ್ (ಕುಸ್ತಿ) ಯನ್ನು ಹಾಕುತ್ತಿರಲಿಲ್ಲ. ಅದಕ್ಕಾಗಿ ನಾನು ನನ್ನ ಗೆಳೆಯ ನಾಗು ನ (ನಾಗಭೂಷಣ) ಮನೆಗೆ ಹೋಗಿ ಬರುತ್ತಿದ್ದೆ. ಅವನ ಮನೆಯಲ್ಲಿ ಯಾವುದು ನೋಡದಿದ್ದರೂ ಈ ಡಬ್ಲ್ಯು.ಡಬ್ಲ್ಯು.ಎಫ್ ಒಂದು ಮಾತ್ರ ನೋಡುತ್ತಿದ್ದರು. ಮಾತ್ರವಲ್ಲ ಅವನು ಮತ್ತು ಅವನ ತಮ್ಮ ಅದನ್ನು ನೋಡಿ ಹಾಗೆಯೇ ಸಕ್ಕತ್ ಆಗಿ ಹೊಡೆದಾಡಿಕೊಳ್ಳುತ್ತಿದ್ದರು ಕೂಡ. ಆವಾಗಲೆಲ್ಲ ನಾನೇ ತೀರ್ಪುಗಾರ... ಅವರಿಬ್ಬರ ಡಬ್ಲ್ಯು.ಡಬ್ಲ್ಯು.ಎಫ್ ನಲ್ಲಿ ನಾನು ನೆಲಕ್ಕೆ ಮೂರು ಸರಿ ಬಡಿದರೆ ಇಬ್ಬರಲ್ಲಿ ಒಬ್ಬರು ಸೋಲಲೇ ಬೇಕಿತ್ತು.
ಆವಾಗ ಎಲ್ಲ ಕ್ರಿಕೆಟ್ ಮ್ಯಾಚ್ ನೋಡುವಾಗ ನಡುವಿನಲ್ಲಿ ವಿದ್ಯುತ್ ಹೋದರೆ ಈಗ ಹೆಚ್ಚಿನವರ ಮನೆಯಲ್ಲಿ ಇರುವಂತೆ ಇನ್ವರ್ಟರ್ ಸೌಲಭ್ಯ ಇರಲಿಲ್ಲ.ಆದರೆ ನಮ್ಮ ಇಡೀ ಊರಿನಲ್ಲಿ ಒಂದು ಕಡೆ ಮಾತ್ರ ಆ ಸೌಲಭ್ಯ ಇತ್ತು.ಅದು ಚಕ್ಕುಲಿ ತಯಾರಿಸುವವರ ಒಂದು ಮನೆ. ಅವರು ಚಕ್ಕುಲಿಯನ್ನು ಮನೆಯಲ್ಲಿಯೇ ಮಾಡಿ ಮಾರುತ್ತಿದ್ದುದರಿಂದ ಅವರ ಆ ಉದ್ಯೋಗಕ್ಕೆ ಅದರಲ್ಲೂ ಗ್ರೈಂಡರ್ ನಲ್ಲಿ ಹಿಟ್ಟು ರುಬ್ಬಲು ಮತ್ತು ಪ್ಯಾಕೇಟುಗಳಲ್ಲಿ ತಯಾರಿಸಿದ ಚಕ್ಕುಲಿಯನ್ನು ತುಂಬಿ ಆ ನಂತರ ಆ ಪ್ಯಾಕೇಟುಗಳನ್ನು ಮುಚ್ಚಲು ಒಂದು ಸಣ್ಣ ಬಿಸಿ ಮಾಡುವ ಯಂತ್ರಕ್ಕೆ ವಿದ್ಯುತ್ ಸದಾ ಕಾಲ ಅವಶ್ಯಕವಾಗಿ ಬೇಕಾಗುತ್ತಿತ್ತು. ಹಾಗಾಗಿ ಅವರು ಮನೆಗೆ ಇನ್ವರ್ಟರ್ ಅಳವಡಿಸಿಕೊಂಡಿದ್ದರು. ಆ ಮನೆಯವರಿಗೂ ಕ್ರಿಕೆಟ್ ಅಂದರೆ ಬಹಳ ಹುಚ್ಚು.
ಈ ವಿಶ್ವಕಪ್ ಪಂದ್ಯ ನಡೆಯುವಾಗ ವಿದ್ಯುತ್ ಕಡಿತ ಆದರೆ ಊರಿನ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಅವರ ಮನೆಗೆ ಕ್ರಿಕೆಟ್ ನೋಡಲು ಓಡುವುದು. ನಾನೂ ಅಲ್ಲಿಗೇ ಹೋಗುತ್ತಿದ್ದೆ. ನಾನು ಮಾತ್ರವಲ್ಲ ಊರಿನ ಹೆಚ್ಚಿನ ಎಲ್ಲರೂ ಅಲ್ಲಿಗೆಯೇ ಬರುತ್ತಿದ್ದರು.ನನ್ನಂತಹ ಚಿಕ್ಕವರಿಂದ ಹಿಡಿದು ದೊಡ್ಡವರು ಕೂಡ ಅಲ್ಲಿ ಇರುತ್ತಿದ್ದರು. ಊರಿನ ಎಲ್ಲರೊಂದಿಗೆ ಕುಳಿತುಕೊಂಡು ಅಲ್ಲಿನ ಟಿವಿಯಲ್ಲಿ ಪಂದ್ಯ ನೋಡುವಾಗ ನನಗೆ ಕ್ರಿಕೆಟ್ ಮೈದಾನದಲ್ಲಿಯೇ ಕುಳಿತುಕೊಂಡು ಪಂದ್ಯ ನೋಡಿದಂತಹ ಅದೆನೋ ಬೇರೆಯೇ ರೀತಿಯ ಅನುಭವವೇ ಆಗುತ್ತಿತ್ತು. ಅದರಲ್ಲೂ ಒಬ್ಬೊಬ್ಬರದ್ದು ಒಂದೊಂದು ರೀತಿಯ ಟೀಕೆ,ಟಿಪ್ಪಣಿ ಮತ್ತು ವಿಮರ್ಶೆ.
ಅವರಿಗೆ ಯಾರಿಗೂ ರಾಹುಲ್ ದ್ರಾವಿಡ್ ನಿಧಾನವಾಗಿ ಆಡುವುದು ಇಷ್ಟ ಆಗುತ್ತಿರಲಿಲ್ಲ. ನನಗೆ ಏನಾದರೂ ಆಟ ಆಡ್ಲಿಕ್ಕೆ ಒಂದು ಅವಕಾಶ ಸಿಕ್ಕಿದಿದ್ದರೆ ಉಂಟಲ್ಲಾ..ನಾನು ಎಲ್ಲಾ ಚೆಂಡಿಗೂ ಬರೀ ಸಿಕ್ಸರ್ ಅನ್ನೇ ಬಾರಿಸುತ್ತಿದ್ದೆ ಎಂದು ಹೇಳುವ ಎಪ್ಪತ್ತರ ಹರೆಯದ ಯುವ ವೃದ್ಧರು ಕೂಡ ಅಲ್ಲಿ ಟಿವಿ ನೋಡಲು ಬರುತ್ತಿದ್ದರು.
ಆ ಚಕ್ಕುಲಿ ತಯಾರಿಸುವವರ ಮನೆಯಲ್ಲಿ ಚಕ್ಕುಲಿ ಮಾಡುವಾಗ,ಚಕ್ಕುಲಿ ತುಂಡು ಆದರೆ ಆ ತುಂಡಾದ ಎಲ್ಲಾ ಚಕ್ಕುಲಿಯನ್ನು ಒಟ್ಟು ಮಾಡಿ ಪುಡಿ ಚಕ್ಕುಲಿ ಎಂದು ಐದು ರೂಪಾಯಿಗೆ ಇಲ್ಲವೇ ಹತ್ತು ರೂಪಾಯಿಗೆ ಎಲ್ಲಾ ಮಾರುತ್ತಿದ್ದರು.ಅದು ಕೂಡ ಆ ಪುಡಿ ಚಕ್ಕುಲಿಯನ್ನು ಅವರು ಎಷ್ಟೊಂದು ಕೊಡುತ್ತಿದ್ದರು ಎಂದರೆ ಊರಿನಲ್ಲಿ ಎಲ್ಲರೂ ಚಕ್ಕುಲಿಯನ್ನು ಅಂಗಡಿಯಿಂದ ಖರೀದಿಸುವುದಕ್ಕಿಂತಲೂ ಅವರ ಮನಗೆ ಹೋಗಿ ಕೇವಲ ಈ ಪುಡಿ ಚಕ್ಕುಲಿಯನ್ನು ಐದು ರೂಪಾಯಿ ಇಲ್ಲವೇ ಹತ್ತು ರೂಪಾಯಿ ಕೊಟ್ಟು ತೆಗೆದುಕೊಂಡು ಬರುತ್ತಿದ್ದರು.
ನನಗೂ ಅದು ಬಹಳನೇ ಇಷ್ಟ. ಅಕ್ಕಿಯಿಂದ ಮಾಡಿದ ಶುದ್ಧ ಎಣ್ಣೆಯಲ್ಲಿ ಕರಿದ ಆ ಚಕ್ಕುಲಿಯ ತುಂಡುಗಳು ಬಹಳ ರುಚಿ. ಒಮ್ಮೆ ಮನೆಗೆ ತಂದರೆ ನಾಲ್ಕೈದು ದಿನ ಆದರೂ ಅದು ಇರುತ್ತಿತ್ತು.ಕೇವಲ ಐದು ರೂಪಾಯಿಗೆ ಅಷ್ಟೊಂದು ಚಕ್ಕುಲಿ ಪುಡಿಗಳನ್ನು ಅವರು ಕೊಡುತ್ತಿದ್ದರು.ಅಲ್ಲಿಯೇ ಟಿವಿಯಲ್ಲಿ ಕ್ರಿಕೆಟ್ ನೋಡುವಾಗ ಯಾರಾದರೂ ಒಬ್ಬ ಅಣ್ಣ ಪುಡಿ ಚಕ್ಕುಲಿ ತೆಗೆದುಕೊಂಡರೆ ಎಲ್ಲರಿಗೂ ಸ್ವಲ್ಪ ಸ್ವಲ್ಪವೇ ಪುಡಿ ಚಕ್ಕುಲಿ ಸೇವೆ ಆಗುತ್ತಿತ್ತು. ಎಲ್ಲರಿಗೂ ನಾನು ಪರಿಚಯದವನೇ ಹಾಗಾಗಿ ಕ್ರಿಕೆಟ್ ನೋಡುವಾಗ ಮಕ್ಕಳಲ್ಲಿ ಎಲ್ಲರಿಗಿಂತ ಜಾಸ್ತಿ ಚಕ್ಕುಲಿ ನನಗೆಯೇ ಸಿಗುತ್ತಿತ್ತು. ಹೌದು ಬೇರೆಯವರ ಪಾಲಿಗೆ ಅದು ಪಾಲಿಗೆ ಬಂದ ಪಂಚಾಮೃತ .. ಆದರೆ ನನ್ನ ಪಾಲಿಗೆ ಲೆಕ್ಕಕ್ಕಿಂತ ಜಾಸ್ತಿಯೇ ಬಂದ ಪುಡಿ ಚಕ್ಕುಲಿ ಅದು.
ಇವಿಷ್ಟು ವರ್ಷ ಪೂರ್ತಿ ಆವಾಗವಾಗ ಟಿವಿ ನೋಡುತ್ತಿದ್ದ ದಿನಗಳು ಆಗಿದ್ದರೆ.. ವರ್ಷದಲ್ಲಿ ಕೇವಲ ಒಂದು ಬಾರಿ ಮಾತ್ರ ಸಾರ್ವಜನಿಕವಾಗಿಯೇ ಊರಿನ ಎಲ್ಲರಿಗೂ ಟಿವಿಯನ್ನು ನೋಡುವ ವ್ಯವಸ್ಥೆಯನ್ನು ಊರಿನ ನಡುವಿನ ಅಶ್ವತ್ಥ ಕಟ್ಟೆಯ ಬಳಿ ಊರಿನ ಗಣ್ಯ ವ್ಯಕ್ತಿಗಳು ಹಾಗೂ ಉತ್ಸಾಹಿ ನವ ಯುವಕರು ಸೇರಿ ಮಾಡುತ್ತಿದ್ದರು.ಅದುವೇ ಹೊಸ ವರ್ಷದ ಬರುವ ರಾತ್ರಿಯ ದಿನ.
ಆವಾಗ ಎಲ್ಲ ಅಜ್ಜ ಎಂಬ ಪ್ರತಿಕೃತಿಯನ್ನು ಮಾಡಿ ಊರಿನ ಮಧ್ಯದಲ್ಲಿ ಕುಳಿತುಕೊಳ್ಳಿಸಿ ರಾತ್ರಿ ಹನ್ನೆರಡು ಗಂಟೆಗೆ ಅಜ್ಜನನ್ನು ಸುಡುವ ಕಾರ್ಯಕ್ರಮ ಇತ್ತು.ಇವಾಗ ಅದೆಲ್ಲ ಇಲ್ಲ, ಆದರೆ ಹಿಂದೆ ಇತ್ತು.ಹೊಸ ವರ್ಷ ಬಂದಾಗ ಹಳೆಯದನ್ನು ಸುಡುವುದು ಅಂತ ಏನೋ ಒಂದು ದೊಡ್ದ ಮಂಡೆಯವರ ಭಯಂಕರವಾದ ನಂಬಿಕೆ.
ಆ ರಾತ್ರಿ ಹನ್ನೆರಡು ಗಂಟೆ ಆಗುವವರಿಗೆ ಅಶ್ವತ್ಥ ಕಟ್ಟೆಯಲ್ಲಿ ಸಂಜೆಯ ನಂತರ ಒಂದೋ ಸಾಮೂಹಿಕ ಸತ್ಯನಾರಾಯಣ ಪೂಜೆಯೋ ಇಲ್ಲ .. ಸಾಮೂಹಿಕ ಶನಿ ಪೂಜೆಯೋ ಇರುತ್ತಿತ್ತು. ನಂತರ ಬಂದ ಜನರಿಗೆ ಫಳಾರದ ವ್ಯವಸ್ಥೆ ಇರುತ್ತಿತ್ತು. ಹೆಚ್ಚಾಗಿ ಉಪ್ಪಿಟ್ಟು ಶೀರಾ ವೇ ಇರುತ್ತಿದ್ದದ್ದು. ಮತ್ತೆ ಒಂದು ಕುಡಿಯಲು ಬಿಸಿ ಬಿಸಿ ಮಾಲ್ಟ್. ಇದಕ್ಕೆಲ್ಲ ಮೊದಲೇ ಊರಿನಲ್ಲಿ ಎಲ್ಲರ ಮನೆಗೆ ಹೋಗಿ.. ಸಾಧ್ಯ ಆದಷ್ಟು ಕೊಡಿ.. ಒತ್ತಾಯ ಇಲ್ಲ..ಆದರೂ ಇದು ನಮ್ಮ ಊರಿನ ಕಾರ್ಯಕ್ರಮ ಅಲ್ಲವೇ..ಮನಸ್ಸು ಮಾಡಿ.. ಎಂಬ ತಕ್ಕ ಮಟ್ಟಿನ ಹಣ ಸಂಗ್ರಹವನ್ನು ಊರಿನ ಉತ್ಸಾಹಿ ಯುವಕರೇ ಮಾಡುತ್ತಿದ್ದರು.
ಈ ಲಘು ಫಳಾರದ ಆದ ನಂತರ ಎಂಟು ಗಂಟೆಯ ಮೇಲೆ,ಹನ್ನೆರಡು ಗಂಟೆಯವರೆಗೆ ಅಶ್ವತ್ಥ ಕಟ್ಟೆಯ ಮುಂದೆ ಟಿವಿ ಹಾಕುತ್ತಿದ್ದರು. ಆವಾಗ ಚಲನಚಿತ್ರದ ಕ್ಯಾಸೆಟ್ ಗಳನ್ನು ತಂದು ಅದರ ಮೂಲಕ ಜನರಿಗೆ ಪಿಚ್ಚರ್ ಗಳನ್ನು ತೋರಿಸುತ್ತಿದದ್ದು.ಆ ಚಲನಚಿತ್ರಗಳು ಜನರ ಆಸಕ್ತಿಯ ಯಾವುದೇ ಫಿಲಂಗಳು ಆಗಿರದೇ.. ಯಾರು ಈ ಹೊಸ ವರ್ಷದ ವ್ಯವಸ್ಥೆಯ ಎಲ್ಲಾ ಉಸ್ತುವಾರಿ ನೋಡಿರುತ್ತಾನೋ ಅವನ ಇಷ್ಟದ ಫಿಲಂಗಳೇ ಆಗಿರುತ್ತಿತ್ತು
ಅವನಂತು ಬರೀ ಅವನಿಗೆ ಇಷ್ಟದ ಪೆಟ್ಟು ಲಡಾಯಿಯ ಫಿಲಂಗಳನ್ನು ಅಂದರೆ ಆಕ್ಷ್ಯನ್ ಫಿಲಂಗಳ ಕ್ಯಾಸೆಟ್ ಗಳನ್ನೇ ಬಾಡಿಗೆ ಅಂಗಡಿಯಿಂದ ಹುಡುಕಿ ಹುಡುಕಿ ತಂದು ಆ ರಾತ್ರಿ ಅಲ್ಲಿ ಹಾಕುತ್ತಿದ್ದ. ನಾನೂ ಸೇರಿ ಹೆಚ್ಚಿನ ಮುಗ್ಧ ಜನರೆಲ್ಲರೂ ಅದನ್ನೇ ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆವು.ನನ್ನ ಅಪ್ಪ ಈ ಟೈಗರ್ ಪ್ರಭಾಕರ್ ಅವರ ಬಾರೀ ದೊಡ್ಡ ಅಭಿಮಾನಿ ಆಯ್ತ. ಪ್ರಭಾಕರ್ ಫಿಲಂ ಏನಾದರೂ ಟಿವಿಯಲ್ಲಿ ಹಾಕಿ ಬಿಟ್ಟರೆ ಅವರು ಆ ಕ್ಷಣಕ್ಕೆ ಅಲ್ಲಿಯೇ ಟೈಗರ್ ಪ್ರಭಾಕರ್ ಆಗಿ ಬಿಡುತ್ತಿದ್ದರು. ಟೈಗರ್ ಪ್ರಭಾಕರ್ ದುಷ್ಟ ಕೇಡಿಗಳನ್ನು ಚಚ್ಚಿ ಬಿಸಾಕಿ, ಚಿಂದಿ ಚಿತ್ರಾನ್ನ ಮಾಡುವಾಗ ನನ್ನ ಪಕ್ಕದಲ್ಲಿಯೇ ಕೂತಿರುತ್ತಿದ್ದ ಅಪ್ಪ.. ಕೊಡು.. ಕೊಡು.. ಬಿಡ್ಬೇಡ...ಅಂತ ಭಯಂಕರ ಹುಮ್ಮಸಿನಿಂದ ಕಿರುಚುತ್ತಿದ್ದರು.ಈಗಲೂ ಮನೆಯಲ್ಲಿ ಅವರು ಹಾಗೆಯೇ ಮರ್ರೆ...
ಆವಾಗ ಪಕ್ಕದ ಊರಿನಲ್ಲಿ ಎಲ್ಲ ಹೊಸ ಹೊಸ ಫಿಲಂಗಳನ್ನು ಹೊಸ ವರ್ಷದ ರಾತ್ರಿ ಊರವರಿಗೆ ತೋರಿಸುತ್ತಿದ್ದರೆ ನಮ್ಮ ಊರಿನಲ್ಲಿ ಬರೀ ಹಳೆಯ ಕಾಲದ ಪೆಟ್ಟ್ ಲಡಾಯಿಯ ಫಿಲಂಗಳನ್ನೇ ತೋರಿಸುತಿದ್ದರು.ನನಗೆ ನಿದ್ರೆ ಬರುತ್ತಿದ್ದರೂ ನಾನು ನಿದ್ದೆ ಮಾಡುತ್ತಿರಲಿಲ್ಲ.. ಏಕೆಂದರೆ ಕೊನೆಗೆ ಹನ್ನೆರಡು ಗಂಟೆಗೆ ಅಜ್ಜನನ್ನು ಉರಿಸಲು ಉಂಟಲ್ಲ.ನಾನು ಅದಕ್ಕಾಗಿ ಬಕ ಪಕ್ಷಿಯಂತೆ ಕಾದು ಕುಳಿತಿದ್ದೆ.
ಅಜ್ಜನಿಗೊಂದು ಚಂದದ ಕೂಲಿಂಗ್ ಗ್ಲಾಸ್ ಇಟ್ಟರೂ ಹೊಟ್ಟೆಯೊಳಗೆ ಮಾತ್ರ ಪಟಾಕಿಗಳನ್ನೇ ತುಂಬಿಸಿ ಇಟ್ಟಿರುತ್ತಿದ್ದರು.ಆ ನಂತರ ದಿನಗಳಲ್ಲಿ ಈ ಅಜ್ಜನನ್ನು ಸುಡುವ ಕ್ರಮಕ್ಕೆ ಭಯಂಕರ ವಿರೋಧ ವ್ಯಕ್ತವಾಗಿ ಆ ಕಾರ್ಯಕ್ರಮ ರದ್ದಾಯಿತು. ಅದೇ ರೀತಿ ಕ್ಯಾಸೆಟ್ ಹಾಕಿ ಫಿಲಂ ತೋರಿಸುವ ಕಾರ್ಯಕ್ರಮ ಕೂಡ ರದ್ದಾಯಿತು. ಆ ನಂತರ ನಾನು ಆ ನನ್ನ ಸ್ವರ್ಗದಂತಹ ಆ ಊರು,ನನ್ನ ನೆಚ್ಚಿನ ಪ್ರಾಥಮಿಕ ಶಾಲೆ, ಆಡಿದ ಮೈದಾನ,ಚಡ್ಡಿ ದೋಸ್ತಿಗಳು,ಅಂಬಕ್ಕನ ಮನೆ,ಅವರು ಕೊಡುತ್ತಿದ್ದ ತಿಂಡಿ,ಬಂಟಿಯ ಟಿವಿ,ಅಲ್ಲಿಯ ಶಿಸ್ತಿನ ಪಾಠ,ನಾಗುವಿನ ಟಿವಿಯ ಡಬ್ಲ್ಯು.ಡಬ್ಲ್ಯು.ಎಫ್,ಊರಿನ ಅಶ್ವತ್ಥ ಕಟ್ಟೆಯ ಪೆಟ್ಟ್ ಲಡಾಯಿ ಮೂವಿಯ ಅಮರ ನೆನಪುಗಳನ್ನು ಹೊತ್ತುಕೊಂಡು ಅಲ್ಲಿಂದ ಹದಿನೈದು ಕಿಲೋಮೀಟರ್ ಗಳಷ್ಟು ದೂರಿವಿರುವ ಸದ್ಯಕ್ಕೆ ಈಗ ನಾನಿರುವ ಊರಿಗೆ ಬಂದು ಬಿಟ್ಟೆ.
ಆವಾಗ ನಾನು ಹೈಸ್ಕೂಲ್ ಗೆ ಮೂಡುಬಿದಿರೆಗೆ ಹೋಗುತ್ತಿದ್ದಾಗ, ಅಲ್ಲಿ ಪರಿವಾರ್ ಅಂತ ಒಂದು ಹೋಟೆಲ್ ಇತ್ತು. ಅಲ್ಲಿ ಒಂದು ದೊಡ್ದ ಟಿವಿ ಕೂಡ ಇತ್ತು.ಕ್ರಿಕೆಟ್ ಮ್ಯಾಚ್ ಇದ್ದ ದಿನ ಅವರ ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ಹಾಕಿ ಬಿಡುತ್ತಿದ್ದರು.ಸಂಜೆ ಶಾಲೆಯಿಂದ ಬರುವಾಗ ಮ್ಯಾಚ್ ಏನಾದರೂ ಇದ್ದರೆ ನಾವು ಗೆಳೆಯರೆಲ್ಲರೂ ಆ ಹೋಟೆಲ್ ನ ಎದುರು ನಿಂತುಕೊಂಡು ಮ್ಯಾಚ್ ನೋಡುತ್ತಿದ್ದೆವು. ಆವಾಗ ಸಚಿನ್ ಜೊತೆ ಜೊತೆಗೆ ಸೆಹ್ವಾಗ್ ಇಷ್ಟ ಆಗುತ್ತಿದ್ದ. ಹೋಟೆಲ್ ನಲ್ಲಿ ಕುಳಿತುಕೊಂಡು ಮಸಾಲೆ ದೋಸೆ ಮುರಿಯುವವರ ನಡುವೆ ನಮ್ಮದೊಂದು ಪುಟ್ಟ ಕಣ್ಣುಗಳು ಟಿವಿ ಪರದೆಯ ಮೈದಾನದಲ್ಲಿ ಸೆಹ್ವಾಗ್ ಬಾರಿಸುವ ಬೌಂಡರಿಗಳಿಗೆ ಮುಗ್ಧವಾಗಿ ತಡಕಾಡುತ್ತಿತ್ತು.ಹೆಚ್ಚಿನ ಸಲ ಕೈ ಕಟ್ಟಿಕೊಂಡು ನಿಂತೇ ನೋಡುತ್ತಿದ್ದೆವು.ಆ ದಿನಗಳಲ್ಲಿ ಹೊತ್ತು ಮೀರಿದ ನಂತರವೇ ಮನೆಗೆ ಹೋಗಿ ಅಮ್ಮನಿಂದ ಬೈಯಿಸಿಕೊಂಡಿದ್ದು ಈಗಲೂ ನೆನಪಿದೆ.
ಆವಾಗ ನಮ್ಮ ಕುಟುಂಬದ ಮನೆಯಲ್ಲಿ ಟಿವಿ ಇತ್ತು.ನಾವು ನವರಾತ್ರಿ, ಚೌತಿ, ದೈವಗಳ ಅಗೇಲು ಸೇವೆಗಳಿಗೆ ಅಲ್ಲಿಗೆ ಹೋದಾಗ ಕುಟಂಬದವರೆಲ್ಲಿ ಒಟ್ಟಿಗೆ ಕುಳಿತುಕೊಂಡು, ಮರುದಿನದ ತಿಂಡಿಗಾಗಿ ಗುಂಡ,ಮೂಡೆ(ತುಳುನಾಡಿನ ತಿಂಡಿಗಳು)ಎಲ್ಲಾ ಕಟ್ಟುತ್ತಾ.. ಕೆಲವೊಮ್ಮೆ ನಾವೆಲ್ಲ ಹುಡುಗರು ಒಟ್ಟಿಗೆ ಮಲಗಿಕೊಂಡೇ ಅಲ್ಲಿನ ಟಿವಿಯಲ್ಲಿ ಫಿಲಂಗಳನ್ನು ನೋಡುತ್ತಿದ್ದೆವು.ಆವಾಗ ಕೂಡ ಅಲ್ಲಿ ಹಳೆಯ ಕ್ಯಾಸೇಟ್ ಗಳನ್ನು ತಂದು ಅಣ್ಣನವರು ಫಿಲಂ ಹಾಕುತ್ತಿದ್ದರು.ಅವರೂ ಕೂಡ ಪೆಟ್ಟ್ ಲಡಾಯಿ ಫಿಲಂಗಳ ಉತ್ಕಟ ಅಭಿಮಾನಿಗಳೇ ಆಗಿದ್ದರು.
ಆ ಕಾಲದಲ್ಲಿ ಫಿಲಂ ಅಂದರೆ ಎಲ್ಲರೂ ಮೊದಲಿಗೆ ಕೇಳುವುದು ಒಂದೇ.. ಎಂತ ಫಿಲಂ ಅಲ್ಲಿ ಪೆಟ್ಟು ಉಂಟಾ.. ಅಂತ. ಈಗಲೂ ನೆನಪಿದೆ ಹೆಚ್ಚಾಗಿ ನಮ್ಮ ಆ ಕುಟುಂಬದ ಮನೆಯಲ್ಲಿ ನೋಡಿದ್ದು.. ಎಸ್.ಪಿ.ಸಾಂಗ್ಲಿಯಾನ, ಸಿಬಿಐ. ಶಂಕರ್,ಅಗ್ನಿ ಐಪಿಎಸ್,ಸೆಂಟ್ರಲ್ ಜೈಲ್ ಮೊದಲಾದ ಸಿನಿಮಾಗಳನ್ನೇ.ಅಕ್ಕನವರು ಒತ್ತಾಯ ಮಾಡಿದಾಗ ಕೆಲವೊಮ್ಮೆ ಪ್ರೇಮಲೋಕ ದಂತಹ ಫಿಲಂಗಳ ಕ್ಯಾಸೆಟ್ ಗಳನ್ನು ಅಣ್ಣನವರು ತಂದು ಹಾಕಿದ್ದು ಇದೆ.ಅಪ್ಪ ಅಲ್ಲಿಯೂ ಕೂಡ ಟೈಗರ್ ಪ್ರಭಾಕರ್ ಫಿಲಂ ಗಳ ಕ್ಯಾಸೇಟ್ ಇಲ್ಲವಾ.. ಇದ್ರೆ ಅದೇ ಹಾಕಿ ಅಲಾ....ಎಂದು ತಮ್ಮ ಅಪ್ಪಟ ಪೆಟ್ಟಿನ ಮೂವಿಯ ಅಭಿಮಾನವನ್ನು ಪ್ರದರ್ಶಿಸುತ್ತಿದ್ದರು.
ನಾನು ಹೈಸ್ಕೂಲ್ ಗೆ ಬಂದಾಗಲೂ ಮೊದಲೆರಡು ವರ್ಷದಲ್ಲಿ ನಮ್ಮ ಮನೆಗೆ ಟಿವಿ ಬಂದಿರಲಿಲ್ಲ. ಹಾಗಾಗಿ ನಾನು ನಮ್ಮ ಹೊಸ ಊರಿನಲ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಒಬ್ಬ ವಯಸ್ಸಾದ ಅಜ್ಜನ ಮನೆಗೆ ಹೋಗುತ್ತಿದ್ದೆ.ಆವಾಗ ಸ್ವಲ್ಪ ದೊಡ್ಡವನಾಗಿದ್ದೆ ಅಲ್ಲವೇ.. ಹಾಗಾಗಿ ರಾತ್ರಿ ಕೂಡ ಅವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದೆ.ಅದು ಬೇರೆ ಒಂದು ಗುಡ್ಡೆಯನ್ನು ಬಳಸಿಯೇ ಅವರ ಮನೆಗೆ ಹೋಗಬೇಕಾಗಿತ್ತು. ರಾತ್ರಿ ಕತ್ತಲಿಗೆ ಭಯ ಆಗುತ್ತಿತ್ತಾದರೂ ಟಿವಿಯಲ್ಲಿ ಕ್ರಿಕೆಟ್ ನೋಡುವ ಹುಚ್ಚಿನಿಂದ ಕೆಲವೊಮ್ಮೆ ರಾತ್ರಿ ಸಮಯ ಆ ಗುಡ್ಡದೊಳಗೆ,ಇಲ್ಲವೇ ಇನ್ನು ಕೆಲವೊಮ್ಮೆ ಆ ಗುಡ್ಡದ ಬದಿಯಲ್ಲಿ ಹೋಗುವಾಗ ನಾನು ನಡೆದುಕೊಂಡು ಹೋಗಿದ್ದಕ್ಕಿಂತಲೂ ಓಡಿಕೊಂಡೇ ಹೋಗಿ ಅಜ್ಜನ ಮನೆ ತಲುಪುತ್ತಿದ್ದೆ.
ಆ ಗುಡ್ಡೆಯಲ್ಲಿ ದೆವ್ವ ಭೂತಗಳು ಆ ತರಹ ಏನೂ ಇರದಿದ್ದರು.. ಅಲ್ಲಿ ಒಂದು ಏನೋ ಇದೆ.. ಎಂದು ಕಥೆ ಕಟ್ಟುವವರಿಗೆ ನಮ್ಮ ಊರಿನಲ್ಲಿ ಬರ ಇರಲಿಲ್ಲ ಬಿಡಿ. ಹಾಗಾಗಿ ಆ ಗುಡ್ಡೆಯ ಬಳಿ ಹೋಗುವಾಗ ನನಗೂ ತಕ್ಕ ಮಟ್ಟಿಗೆ ಭಯವೇ ಆಗುತ್ತಿತ್ತು. ಆದರೂ ಯಾವತ್ತೂ ನಾನು ದೆವ್ವವನ್ನು ಅಲ್ಲಿ ನೋಡಿರಲಿಲ್ಲ.. ನಾನು ದೆವ್ವವನ್ನು ಸಹ ಮೊದಲು ನೋಡಿದ್ದು ಟಿವಿಯಲ್ಲಿಯೇ. ಕಾಶಿನಾಥ್, ಕುಮಾರ್ ಗೋವಿಂದ್ ಅವರ "ಶ್" ಫಿಲಂ ಅಲ್ಲಿ.
ಅಂದ ಹಾಗೆ ಆ ಗುಡ್ಡದ ಮನೆಯಲ್ಲಿ ಅಜ್ಜ ಮತ್ತು ಅಜ್ಜಿ ಇಬ್ಬರೇ ಇರುತ್ತಿದ್ದರು,ಹೌದು ಗುಡ್ಡದ ನಡುವಿನ ಮನೆ ಅವರದ್ದು. ಸುತ್ತ ಮುತ್ತ ಬರೀ ಗುಡ್ಡವೇ. ಆ ವಯಸ್ಸಾದ ಅಜ್ಜ ನಿವೃತ್ತ ಬ್ಯಾಂಕ್ ಮ್ಯಾನೇಜರ್. ಅವರಿಗೂ ಕ್ರಿಕೆಟ್ ಅಂದರೆ ಭಯಂಕರ ಹುಚ್ಚು. ನಾನು ಮತ್ತು ನನ್ನ ಗೆಳೆಯ ಅಲ್ಲಿ ಹೋಗಿ ಅವರ ದೊಡ್ಡ ಗಾತ್ರದ ಟಿವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದೆವು. ಅಜ್ಜನ ಹೆಂಡತಿ ಈ ಅಜ್ಜಿ ಇದ್ದಾರೆ ಅಲ್ವಾ.. ಅವರು ಕೆಲವೊಮ್ಮೆ ಸ್ವಲ್ಪ ವಿಚಿತ್ರವಾಗಿ ವರ್ತಿಸುತ್ತಿದ್ದರು.
ನಾನು ಮತ್ತು ನನ್ನ ಗೆಳೆಯ ಕ್ರಿಕೆಟ್ ಮ್ಯಾಚ್ ನೋಡುವಾಗ ಆ ಅಜ್ಜಿ ಏನು ಮಾಡುತ್ತಿದ್ದರು ಎಂದರೆ ಮನೆಯ ಒಳಗಿಂದ ಮೊದಲಿಗೆ ಒಂದು ಪ್ಯಾಕೇಟು ಚಕ್ಕುಲಿ ತಂದು ಕೊಡುತ್ತಿದ್ದರು. ಅದನ್ನು ನಾನು ನನ್ನ ಗೆಳೆಯ ಇಬ್ಬರೂ ತಿಂದು ಖಾಲಿ ಮಾಡಿದ ನಂತರ ಇನ್ನೊಂದು ಪ್ಯಾಕೇಟು ಸೇಮೆ(ಮಿಕ್ಸರ್) ಯನ್ನು ತಂದು ಕೊಡುತ್ತಿದ್ದರು.ನಾವಿಬ್ಬರು ಅದನ್ನು ಕೂಡ ತಿಂದು ಸಪಾಯಿ ಮಾಡುತ್ತಿದ್ದೆವು, ಸೇಮೆ ಖಾಲಿ ಆದ ನಂತರ ಆ ಅಜ್ಜಿ ನಮಗೆ ಇನ್ನೆರಡು ಪ್ಯಾಕೇಟ್ ಪಾರ್ಲೆಜಿ ಬಿಸ್ಕೆಟ್ ತಂದು ಕೊಡುತ್ತಿದ್ದರು.. ನಾವು ಅದನ್ನು ಸಹ ತನು ಮನದಿಂದ ಸ್ವೀಕರಿಸಿ ಸ್ವಾಹ ಮಾಡುತ್ತಿದ್ದೆವು.
ಆದರೆ ಅಲ್ಲಿಯವರೆಗೆ ಸುಮ್ಮನೆ ಕುಳಿತಿರುತ್ತಿದ್ದ ಅಜ್ಜನಿಗೆ, ಅಜ್ಜಿಯ ಮನೆಯನ್ನು ಗುಡಿಸಿ ಗುಂಡಾಂತ ಮಾಡುವ ಈ ವರ್ತನೆಯ ಮೇಲೆ ಸಿಟ್ಟು ಬಂದು ಮನೆಯೊಳಗೆ ಹೋಗಿ ಅಜ್ಜಿಗೆ ಸರಿಯಾಗಿ ಖಾರವಾಗಿ ಬೈದು ನಂತರ ಟಿವಿ ಇರುವ ಹಾಲ್ ನೊಳಗೆ ಅಜ್ಜಿ ಬರದಂತೆಯೇ ಮಾಡುತ್ತಿದ್ದರು. ಅಜ್ಜ ಹಾಗೆ ಮಾಡದೇ ಇರುತ್ತಿದ್ದರೆ ಅಜ್ಜಿ ಮತ್ತೆ ಖಾರಕಡ್ಡಿಯೋ.. ಸೋಂಟೆಯೋ..ಬೋಟಿಯೋ..ಎಲ್ಲಾ ನಮಗಾಗಿ ಖಂಡಿತಾ ತಂದುಕೊಡುತ್ತಿದ್ದರು.
ಆ ನಂತರ ನಮ್ಮ ಮನೆಗೂ ಟಿವಿ ಬಂತು. ಇತ್ತೀಚೆಗೆ ಆ ಅಜ್ಜ ಅಜ್ಜಿ ತೀರಿಕೊಂಡರು.. ಸುದ್ದಿ ಕೇಳಿ ಬಹಳ ಬೇಜಾರು ಆಗಿತ್ತು. ಏಕೆಂದರೆ ಆ ಇಬ್ಬರು ವೃದ್ಧರ ಚಿತ್ರ ನನ್ನ ಬಾಲ್ಯದ ನೆನಪು ಎಂಬ ಟಿವಿ ಪರದೆಯೊಳಗೆ ಯಾವತ್ತೂ ದೊಡ್ಡದಾಗಿಯೇ ಪ್ರದರ್ಶನಗೊಂಡಿತ್ತು.
ನಂತರ ಮನೆಯಲ್ಲಿ ಟಿವಿ ಬಂದಾಗ ಅಮ್ಮ ಧಾರವಾಹಿಗೆ, ಅಪ್ಪ ಪೆಟ್ಟ್ ಲಡಾಯಿ ಫಿಲಂ ಗೆ ಅಂಟಿಕೊಂಡು ಬಿಟ್ಟರು. ಕ್ರಿಕೆಟ್ ಇದ್ದಾಗ,ಐಪಿಎಲ್ ಬಂದಾಗ ನನ್ನದೊಂದು ಕಿರಿಕರಿ ಇದ್ದದ್ದೇ..
ಒಟ್ಟಿನಲ್ಲಿ ಬಾಲ್ಯದ ಎಲ್ಲಾ ನೆನಪು ನನ್ನಲ್ಲಿ ಹೇಗೆ ಸದಾ ಹಚ್ಚ ಹಸಿರಾಗಿ ಇರುವುದೋ.. ಅದೇ ರೀತಿ ಟಿವಿಗೆ ಸಂಬಂಧಿಸಿದಂತೆ ಚಿಕ್ಕಂದಿನಲ್ಲಿ ಹೊಸ ವರ್ಷದ ರಾತ್ರಿ ಅಶ್ವತ್ಥ ಕಟ್ಟೆಯ ಎದುರಿನ ಟಿವಿಯಲ್ಲಿ ಕಣ್ಣು ಪಿಳಿ ಪಿಳಿ ಮಾಡುತ್ತಾ ನೋಡುತ್ತಿದ್ದ ಹಳೆಯ ಮೂವಿಗಳಿಂದ ಹಿಡಿದು,ಅಂಬಕ್ಕನ ಮನೆಯ ಟಿವಿಯ ಶಕ್ತಿಮಾನ್, ಬಂಟಿಯ ಮನೆಯ ಟಿವಿಯ ಸಚಿನ್ ತೆಂಡೂಲ್ಕರ್ ಮತ್ತು ಪ್ರೇಕ್ಷಕರು ಗ್ರೌಂಡಿನಲ್ಲಿ ಹಾಕಿದ ಆ ಪೇಪರ್ ಬೆಂಕಿ ಮತ್ತು ಹೊಗೆ,ಗೆಳೆಯ ನಾಗಭೂಷಣನ ಟಿವಿಯ ಡಬ್ಲ್ಯು.ಡಬ್ಲ್ಯು.ಎಫ್ ಮತ್ತು ಆ ಸಹೋದರರ ಭಯಂಕರ ಕುಸ್ತಿ,ಅದಕ್ಕೆ ನನ್ನ ತೀರ್ಪುಗಾರಿಕೆ,ವಿದ್ಯುತ್ ಹೋದಾಗ ಪುಡಿ ಚಕ್ಕುಲಿ ತಿನ್ನುತ್ತಾ ಊರಿನ ಹಿರಿಯ ಕ್ರಿಕೆಟ್ ಅಭಿಮಾನಿಗಳ ವಿಮರ್ಶೆಯ ಮಾತುಗಳನ್ನು ಕೇಳುತ್ತಾ ನೋಡಿದ ಚಕ್ಕುಲಿಯ ಮನೆಯ ಟಿವಿಯ ತಡೆರಹಿತ ಕ್ರಿಕೆಟ್, ಪರಿವಾರ್ ಹೋಟೆಲ್ ನ ಮಸಾಲೆದೋಸೆಯ ಘಮದ ನಡುವೆ ಹೊರಗಡೆ ಕೈ ಕಟ್ಟಿಕೊಂಡು ಗೆಳೆಯರೊಡನೆ ನೋಡಿದ ಅಲ್ಲಿಯ ಟಿವಿಯೊಳಗಿನ ಬೌಂಡರಿ ಮೇಲೆ ಬೌಂಡರಿ ಬಾರಿಸುವ ಸೆಹ್ವಾಗ್, ಕುಟುಂಬದ ಮನೆಯಲ್ಲಿ ನೋಡಿದ ಬರೀ ಪೆಟ್ಟ್ ಲಡಾಯಿಯ ಫಿಲ್ಮ್ ಗಳು ಮತ್ತು ನೆನಪಿನಲ್ಲಿ ಉಳಿಯುವ ಆ ಒಂದು ಪ್ರೇಮಲೋಕ ಫಿಲಂ... ಹಾಗೂ ಕೊನೆಯಲ್ಲಿ ಗುಡ್ಡದ ಅಜ್ಜನ ಮನೆಯ ಆ ದೊಡ್ಡ ಟಿವಿ,ಆ ರಾತ್ರಿಗಳು,ಆ ಗುಡ್ಡದಲ್ಲಿ ನನ್ನದೊಂದು ಓಟ,ಅದರೊಡನೆ ಟಿವಿ ನೋಡುವಾಗ ನನಗೂ ನನ್ನ ಗೆಳೆಯನಿಗೂ ಅಜ್ಜಿ ನಿರಂತರವಾಗಿ ಒಂದರ ನಂತರ ಒಂದರಂತೆ ತಂದು ಕೊಡುತ್ತಿದ್ದ ಸೇಮೆ, ಬಿಸ್ಕೇಟ್, ಖಾರಕಡ್ಡಿ, ಬೋಟಿ, ಸೋಂಟೆಯೆಂಬ ನೆನಪುಗಳು... ಎಂದಾದರೂ ನನ್ನಲ್ಲಿ ಮರೆತು ಹೋಗಲು ಸಾಧ್ಯವೇ..
ಖಂಡಿತವಾಗಿಯೂ ಸಾಧ್ಯವಿಲ್ಲ. ಗೊತ್ತು ಟಿವಿಯೇ ಎಲ್ಲವೂ ಅಲ್ಲ.ಆದರೂ ಬಾಲ್ಯದ ನೆನಪುಗಳಲ್ಲಿ ಅಲ್ಲಲ್ಲಿ ಟಿವಿ ಇದ್ದವು.ಆಗ ಟಿವಿ ಎಂದರೆ ಅಚ್ಚರಿ ಇತ್ತು,ಕೌತುಕ ಇತ್ತು,ಸೋಜಿಗವೂ ಇತ್ತು. ಹೆಸರಿಗೆ ತಕ್ಕಂತೆಯೇ ಅದು ದೂರದ ಸ್ಥಳಗಳನ್ನು ದರ್ಶನ ಮಾಡಿಸುವ ದೂರದರ್ಶನವಾಗಿತ್ತು. ಹೌದು ನಾವೆಲ್ಲ ಅದರಲ್ಲಿಯೇ ಎಂದು ನೋಡಲಾಗದ ಡೈನಾಸೋರ್ ಗಳನ್ನು ಮೊದಲ ಬಾರಿಗೆ ನೋಡಿದ್ದೆವು,ಎಂದು ಹೋಗಲು ಆಗದ ಸಮುದ್ರದ ತಳ ನೋಡಿದ್ದೆವು,ಮುಟ್ಟಲು ಆಗದ ಚಂದ್ರನ ಮೇಲ್ಮೈ ಅನ್ನು ನೋಡಿದ್ದೆವು,ವಿಶ್ವದ ಅಪರೂಪದ ಪ್ರಾಣಿ ಪಕ್ಷಿಗಳನ್ನು ನೋಡಿ ಬೆರಗಾಗಿದ್ದೆವು,ನಮ್ಮ ತಂಡದವರು ಎಲ್ಲೋ ಆಡುವಾಗ ನಾವು ಯಾರು ಯಾರದ್ದೋ ಮನೆಯಲ್ಲಿ ಕುಳಿತುಕೊಂಡು ಖುಷಿಯಿಂದ ಚಪ್ಪಾಳೆ ಹೊಡೆದಿದ್ದೆವು.
ಈಗ ಮೊಬೈಲ್ ನಲ್ಲಿಯೇ ಎಲ್ಲವೂ ಇದೆ.ಕ್ರಿಕೆಟ್, ಸಿನೆಮಾ, ವಾರ್ತೆ ಎಲ್ಲವೂ ಇದೆ.ಮನೆಯ ಟಿವಿ ಬೋರ್ ಹೊಡೆಸುತ್ತದೆ. ಹೆಚ್ಚಾಗಿ ನೋಡುವುದೇ ಇಲ್ಲ.ಅದು ಅದರಷ್ಟಕ್ಕೆ ಇದೆ. ಅದರೆಡೆಗಿನ ನನ್ನದೊಂದು ತೀವ್ರವಾದ ನಿರಾಸಕ್ತಿ ಕಂಡಾಗ ನನಗೆ ಚಿಕ್ಕಂದಿನಲ್ಲಿ ಊರಿನ ಎಲ್ಲರೂ ಅಶ್ವತ್ಥ ಕಟ್ಟೆಯ ಎದುರು ಆಯೋಜಕರು ಯಾವುದೇ ಫಿಲಂ ಹಾಕಿದರೂ ಶ್ರದ್ಧೆಯಿಂದ ನೋಡುತ್ತಿದ್ದುದೇ ಆ ದಿನಗಳೇ ಮತ್ತೆ ನೆನಪಿಗೆ ಬಂದು ಬಿಡುತ್ತದೆ. ಏಕೆಂದರೆ ಆವಾಗ ಅಪರೂಪದ ಟಿವಿ,ಮೂರ್ಖರ ಪೆಟ್ಟಿಗೆಗಿಂತಲೂ ಹೆಚ್ಚಾಗಿ ಅದೊಂದು ವಿಸ್ಮಯದ ಪೆಟ್ಟಿಗೆಯೇ ಆಗಿತ್ತು..
.....................................................................................
Ab Pacchu
Moodubidire
Comments
Post a Comment