ಬಾಬು ಮತ್ತು ಕಬಾಬು

 


ಚುಮು ಚುಮು ಮಳೆ ಬಿಡದೇ ಬರ್ತಾ ಇತ್ತು.


ಜಾಸ್ತಿ ಅಬ್ಬರವೆನೋ ಇರಲಿಲ್ಲ,ಆದರೂ ಒಮ್ಮೆಲೇ ನಿಲ್ಲುವ ಸೂಚನೆಯಂತು ಒಂಚೂರು ಗೋಚರಿಸುತ್ತಿರಲಿಲ್ಲ. 


ಅದರಷ್ಟಕ್ಕೆ ಅದು ಶ್ರುತಿ ಹಿಡಿದು ರಾಗವಾಗಿ ಹಾಡುತ್ತಿತ್ತು, ಸುರಿಯುತ್ತಿತ್ತು.ತಣ್ಣನೆಯ ಗಾಳಿ ಮಾತ್ರ ಎಂದಿಗಿಂತ ಜೋರಾಗಿಯೇ ಬೀಸುತ್ತಿತ್ತು. 


ನಾನು ಎಂದಿನಂತೆ ಅಂಗಿಯ ಮೇಲೊಂದು ಖಾಕಿ ಕೋಟು ಹಾಕಿಕೊಂಡು ಆ ಮಳೆಯಲ್ಲೂ ಬೆಚ್ಚಗೆ ರಿಕ್ಷಾ ಓಡಿಸ್ತಾ ಇದ್ದೆ.

ಅದು ರಾತ್ರಿ ಸುಮಾರು ಹನ್ನೊಂದು ಗಂಟೆಯ ಸಮಯ! 


ನಮಗೆ ರಿಕ್ಷಾದವರಿಗೆ ಸ್ವಲ್ಪ ಹಣ ಅಂತ ಆಗುವುದು ತಡ ರಾತ್ರಿಯ ಬಾಡಿಗೆಗಳಲ್ಲಿಯೇ.ರಾತ್ರಿಯಲ್ಲಿ ದಿನದ ಲೆಕ್ಕಕ್ಕಿಂತ ಹೆಚ್ಚಿನ ಬಾಡಿಗೆ ಸಿಗುವುದರಿಂದ ಸಿಕ್ಕ ಬಾಡಿಗೆಯನ್ನು ಬಿಟ್ಟು ಬರಲು ಮನಸ್ಸು ಆಗದೆ,ದಿನಾಲೂ ಮನೆ ಸೇರುವುದು ಹೆಚ್ಚು ಕಡಿಮೆ ಹನ್ನೆರಡು ಗಂಟೆ ಆದ ನಂತರವೇ.ನಮ್ಮಂತಹ ಹೆಚ್ಚಿನ ರಿಕ್ಷಾ ಡ್ರೈವರ್ ಗಳ ಡೈಲಿ ಪಾಡು ಇದೇ.


ಹೀಗೆ ಒಂದು ಕಡೆ ಒಬ್ಬರನ್ನು ಡ್ರಾಪ್ ಮಾಡಿ,ಮನೆಯ ಕಡೆಗೆ ಹೋಗುವುದಕ್ಕಾಗಿ ರಿಕ್ಷಾ ತಿರುಗಿಸುವಾಗಲೇ ಒಬ್ಬರು ವೇಗವಾಗಿ  ಬಂದು ನನ್ನ ರಿಕ್ಷಾ ಏರಿ ಕುಳಿತುಕೊಂಡರು..!


ಹಿಂದೆ ತಿರುಗಿ.. ಎಲ್ಲಿಗೆ? ಎಂದು ಕೇಳಿದೆ.


ಅವರು ಹೋಗಬೇಕಾದ ವಿಳಾಸ ಹೇಳಿದರು.


ಮೊದಲೇ ಹೇಳಿದೆ... ನೋಡಿ ತಡರಾತ್ರಿ ಆದ ಕಾರಣ ಬಾಡಿಗೆ ಸ್ವಲ್ಪ ಜಾಸ್ತಿ,ನೀವು ಹೇಳುವ ಜಾಗಕ್ಕೆ ಇಷ್ಟು ಆಗ್ತದೆ.. ಅಂತ ನೇರವಾಗಿ ಹೇಳಿಯೇ ಬಿಟ್ಟೆ.


ಅದೆಲ್ಲ ನಮ್ಮ ಸೇಫ್ಟಿಗಾಗಿ.ಇಲ್ಲದಿದ್ದರೆ ಕೊನೆಯಲ್ಲಿ ತಲುಪಬೇಕಾದ ಜಾಗ ಬಂದಾಗ ಕೆಲವು ಗಿರಾಕಿಗಳು ಅಷ್ಟು ಹೇಗೆ,ಇಷ್ಟು ಯಾಕೆ ಅಂತ ನಮ್ಮ ಜೊತೆ ಚೊರೆ(ಚರ್ಚೆ) ಮಾಡುವುದೇ ಜಾಸ್ತಿ. ಕೆಲವರು ಕುಡಿದು ಜಗಳ ಮಾಡಿದರೆ,ಇನ್ನು ಕೆಲವರು ಕುಡಿಯದೆಯೂ ವಾದಕ್ಕೆ ಇಳಿದು ಬಿಡುತ್ತಾರೆ.


ಆ ಕ್ಷಣದಲ್ಲಿಯೇ ಅವರೊಳಗಿರುವ ಒಬ್ಬ ವಿತ್ತ ಮಂತ್ರಿ,ಆರ್ಥಿಕ ತಜ್ಞ ಎಲ್ಲ ಹೊರಗೆ ಬರುವುದು ಮತ್ತು ನಮ್ಮಂತಹ ಡ್ರೈವರ್ ಗಳಿಗೆ ಅವರು ಉದಾಹರಣೆ ಗಳ ಮೂಲಕ ವಿಶ್ಲೇಷಣೆ ನೀಡಲು ನಿಂತು ಬಿಡುತ್ತಾರೆ.ಅದಕ್ಕಾಗಿಯೇ ನಮ್ಮ ರೇಟ್ ಮೊದಲೇ ಹೇಳಿ ಬಿಡುವುದು ನಾವು.ಸಮ್ಮನೆ ಅವರಿಗೆ ಸ ತೊಂದರೆ ಬೇಡ ನಮಗೆ ಸ ಯಾವುದೇ ಪಿರಿಪಿರಿ(ಕಿರಿಕಿರಿ) ಬೇಡ ಅಂತ. 


ನನ್ನ ರಿಕ್ಷಾದಲ್ಲಿ ಬಂದು ಕುಳಿತುಕೊಂಡ ಗಿರಾಕಿ ನನ್ನ ರೇಟ್ ಗೆ ಒಪ್ಪಿಗೆ ಸೂಚಿಸಿ.. ಆಯಿತು ನಡಿಯಿರಿ.. ಅಂದರು. 


ಆ ವ್ಯಕ್ತಿ ಹೇಳಿದ ಕಡೆಗೆಯೇ ನನ್ನ ರಿಕ್ಷಾ ಹೊರಟಿತು.


ಅವರು ಹೋಗಬೇಕಾದ ಅಡ್ರೆಸ್ ತುಂಬಾ ದೂರವೇ ಇತ್ತು, ಕನಿಷ್ಟ ಪಕ್ಷ 40 ನಿಮಿಷ ಆದರೂ ಪ್ರಯಾಣಿಸ ಬೇಕಿತ್ತು.


ಈ ರಿಕ್ಷಾದಲ್ಲಿ ಉಂಟಲ್ಲಾ ಎರಡು ರೀತಿಯ ಜನರು ಬರ್ತಾರೆ. ಒಂದು ರಿಕ್ಷಾದಲ್ಲಿ ಕುಳಿತುಕೊಂಡು ನಮ್ಮ ರಿಕ್ಷಾವನ್ನು ಸೂಕ್ಷ್ಮವಾಗಿ ಅವಲೋಕಿಸಿ ಆ ನಂತರ  ನಮ್ಮೊಂದಿಗೆ ಮಾತುಕತೆಗೆ ಇಳಿದು ಬಿಡುವವರು.ಅಂದರೆ  ರಿಕ್ಷಾದ Interior, ರಿಕ್ಷಾದ ಹೆಸರು, ದೇವರುಗಳ ಪೋಟೋ ನೋಡಿಯೇ ಇವ ಯಾವ ತರಹದ ಜನ ಅಂತ  ಅವರಿಗೆ  ಗೊತ್ತಾಗಿ ಬಿಡುತ್ತದೆ. ಅವರ ಮತ್ತು ನಮ್ಮ ರಿಕ್ಷಾದ Frequency ಮ್ಯಾಚ್ ಆಗಿ ಬಿಟ್ಟರೆ, ಓಹ್ ಇದು ನಮ್ಮದೇ ತರಹದ  ಜನ ಅಂತ ಉತ್ಸುಕರಾಗಿ ಅವರೇ ನಮ್ಮೊಂದಿಗೆ ಮಾತುಕತೆಗೆ ಇಳಿದು ಬಿಡುತ್ತಾರೆ. 


ಅದರಲ್ಲಿ ಎಲ್ಲಾ ವಿಷಯವೂ ಬರ್ತದೆ,ರಾಜಕೀಯದಿಂದ ಹಿಡಿದು ಪ್ರಸಕ್ತ ವಿದ್ಯಮಾನ, ಲೋಕಲ್ ವಿಷಯ,ಪರಮಾಣು ಬಾಂಬು,ಅಮೇರಿಕಾದ ಅಧ್ಯಕ್ಷೀಯ ಚುನಾವಣೆ,ವಿಜ್ಞಾನ ತಂತ್ರಜ್ಞಾನ, ನೀರಿನಿಂದ ಓಡುವ ರಿಕ್ಷಾ.. ಹೀಗೆ ಎಲ್ಲವೂ. ನಮ್ಮ ಗಿರಾಕಿಯೇ  ಮಾತಾಡ್ಲಿಕ್ಕೆ ಶುರು ಮಾಡಿದ್ರೆ ಮತ್ತೆ ನಾವು ಏನು ಕಮ್ಮಿಯಾ ಅಂತ ನಾವು  ಸಹ ಅಷ್ಟೇ ಆಸಕ್ತಿಯಿಂದ ನಮ್ಮ ಜ್ಞಾನವನ್ನು ಕೂಡ  ಅವರಿಗೂ ಪರಿಚಯಿಸಲು ಶುರು ಮಾಡಿ ಬಿಡ್ತೇವೆ. 


ರಿಕ್ಷಾದಲ್ಲಿ ಕುಳಿತುಕೊಂಡವ ಎಷ್ಟೇ ದೊಡ್ಡ ಜನ ಆಗ್ಲಿ, ಡಾಕ್ಟರ್, ವಿಜ್ಞಾನಿ, ಸಂಶೋಧಕ,ಪ್ರೊಫೆಸರ್,ಇಂಜಿನಿಯರ್,ವಕೀಲ ಯಾರೇ ಆಗಿರಲಿ..ಅವ ಹೇಳುವುದನ್ನು ನಿಲ್ಲಿಸಿ,ನನ್ನಂತಹ ಡ್ರೈವರ್  ಹೇಳುವ ಮಾತಿಗೆ ಆತ  ತನ್ಮಯತೆಯಿಂದ ಕಿವಿ ಕೊಡಲೇ ಬೇಕು.ಅವ ಆ ರೀತಿ ಕಿವಿಗೊಟ್ಟು ಕೇಳುವಂತೆ ನಾವು ಮಾತಾಡ್ತೇವೆ. ಅಂತಹ ಕಲೆ ನಮ್ಮ ಹೆಚ್ಚಿನ ರಿಕ್ಷಾ ಡ್ರೈವರ್ ಗೆ ಸಿದ್ಧಿಸಿದೆ. ಮಾತ್ರವಲ್ಲ ಹತ್ತಾರು ಜನರ ಹತ್ತಿರ ದಿನಾಲೂ ಮಾತಾಡಿ ಮಾತಾಡಿ ನಮ್ಮಲ್ಲೂ ಸಾಕಷ್ಟು ಲೋಕ ಜ್ಞಾನ ಇದೆ.ಅದರಲ್ಲೂ ಊರಿನ ಲೋಕಲ್ ಜ್ಞಾನ ಮತ್ತು ಸುದ್ದಿ ನಮ್ಮ ಬಳಿ ಇರುವಷ್ಟು ಬೇರೆ ಯಾರ ಬಳಿಯೂ ಇರ್ಲಿಕ್ಕಿಲ್ಲ ಬಿಡಿ. 


ಗಿರಾಕಿಯೊಂದಿಗೆ ಮಾತಾಡುವಾಗ ಹೆಚ್ಚಾಗಿ ಇದೇ ಟಾಪಿಕಗಳು ಬರುವುದು. ಆ ರಾಜಕಾರಣಿ ಸರಿ ಇಲ್ಲ,ಈ ರಾಜಕಾರಣಿ ಸರಿ ಇಲ್ಲ.. ಇವರು ಹಾಗೆ ಮಾಡಬೇಕಿತ್ತು.. ಅವರು ಹೀಗೆ ಮಾಡಬೇಕಿತ್ತು..ನಾನಾದರೆ ಹೀಗೆ ಮಾಡ್ತಿದ್ದೆ... ಮೊದಲು ಇದು ಸರಿ ಆಗ್ಬೇಕು.. ಅವ ಮೊದಲು ಮರಕಟ್ಟಿ(ಸತ್ತು ಹೋಗು) ಹೋಗ್ಬೇಕು, ಆಮೇಲೆ ಎಲ್ಲ ಸಮ(ಸರಿ) ಆಗ್ತದೆ.. ಇಂತಹದ್ದೇ ಸಮಾಜದ ಚಿಂತೆ & ಚಿಂತನೆ.. ಸಾಗುವ ದಾರಿ ದೂರ ಇದ್ದರೆ ಇನ್ನಷ್ಟು ಸುದೀರ್ಘ ಚಿಂತನ ಮಂಥನದಂತಹ ಸಮುದ್ರ ಮಂಥನ ರಿಕ್ಷಾದೊಳಗೆಯೇ ನನ್ನಂತಹ ಡ್ರೈವರ್ ಹಾಗೂ ಗಿರಾಕಿ ಇಬ್ಬರೇ ಸೇರಿ ಮಾಡಿ ಬಿಡ್ತೇವೆ.


ಇದು ಒಂದು ರೀತಿಯ ಜನ ಆದರೆ ಇನ್ನೊಂದು ರೀತಿಯ ಜನ ಬರ್ತಾರೆ ರಿಕ್ಷಾಕ್ಕೆ.ಅವರು ಹೇಗೆಂದರೆ ಅವರಾಗಿ ಏನೂ ಮಾತಾಡುವುದೇ ಇಲ್ಲ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬಂತೆ.. ಅವರಷ್ಟಕ್ಕೆ ಅವರು ಸುಮ್ಮನೆ ಕುತ್ಕೊಂಡಿರ್ತಾರೆ. ನಾವು ಮಾತಾಡಿಸಿದರೆ ಮಾತ್ರ ಅವರು ಅಷ್ಟೋ ಇಷ್ಟೋ ಬಾಯಿ ಬಿಡುವುದು.


ಕೆಲವರು ರಿಕ್ಷಾ ಡ್ರೈವರ್ ಅಂತವರ ಸುದ್ದಿಗೆ ಹೋಗುವುದೇ ಇಲ್ಲ. ಆದರೆ ನಾನು ಆ ತರಹದ ಡ್ರೈವರ್ ಅಲ್ಲವೇ ಅಲ್ಲ,ಎಂತಹ ಟೈಪಿನ ಜನ ಆದರೂ ರಿಕ್ಷಾ ಓಡಿಸುವಾಗ  ಮಾತುಕತೆ ನಡೆಸದಿದ್ದರೆ ನನಗೆ ತಿಂದ ಅನ್ನ ಕರಗುವುದಿಲ್ಲ ಮತ್ತು ನನಗೆ  ರಿಕ್ಷಾ ಓಡಿಸುವುದು  ತೀರಾ ನೀರಸ ಅನ್ನಿಸಿಬಿಡುತ್ತದೆ. ಅದಕ್ಕಾಗಿ ಗಿರಾಕಿ ಮಾತಾಡದಿದ್ದರೂ ನಾನೇ ಅವರನ್ನು ಮಾತಿಗೆಳೆದು ಞಕ್ಕ್ ಞೈ (ನಿರಂತರವಾಗಿ ಮಾತಾಡುವುದು) ಮಾಡುತ್ತಾ,ಜಗತ್ತಿನ ಸಮಸ್ಯೆಗಳ ಬಗ್ಗೆ ಡೀಪಾಗಿ ಚರ್ಚಿಸಲು  ಮತ್ತು ಯಾವ ಸಮಸ್ಯೆಗೆ ಯಾವ ಪರಿಹಾರ ಬೆಸ್ಟ್ ..ಅಂತ ನಾನೇ ಹೇಳಲು ಶುರು ಮಾಡಿಯೇ ಬಿಡುತ್ತೇನೆ.


ನನ್ನ ಹಿಂದೆ ಇದ್ದ ಅಸಾಮಿ ಮಾತಾಡುವ ಯಾವುದೇ ಲಕ್ಷಣಗಳು ಕಾಣದೇ ಇದ್ದಾಗ,ನಾನೇ ಮಾತುಕತೆಗೆ ಇಳಿದು ಬಿಟ್ಟೆ.


ಅಲ್ಲೊಂದು ರೋಡ್ ಪಕ್ಕಾ ಕೆಲವು ಹುಡುಗರು KGF ಮೂವಿಯ ದೊಡ್ಡ ಫ್ಲೆಕ್ಸ್ ಹಾಕುತ್ತಿದ್ದರು.ಅದನ್ನು ನೋಡಿ ರಿಕ್ಷಾ ಬಿಡುತ್ತಲೇ ಹೇಳಿದೆ.. ನೋಡಿ ಸಾರ್.. KGF ಭಾಗ ಎರಡು  ಕೂಡ ಬರ್ತಾ ಉಂಟು ಅಂತೆ.. ಎಂತಹ ಗ್ರೇಟ್ ಫಿಲ್ಮ್ ಅಲ್ವಾ ಸಾರ್ ಅದು.. ಅಂದೆ. 


ಅದಕ್ಕೆ ಹಿಂದಿನ ಜನ ಏನೂ ಹೇಳಲಿಲ್ಲ.. 


ಬಹುಶಃ ಅವರಿಗೆ  ಫಿಲ್ಮ್ ಎಲ್ಲ ಇಷ್ಟ ಇಲ್ಲ ಅಂತ ಅಂದುಕೊಂಡೆ. 


ಸಾರ್.. ನೀವು ಫಿಲ್ಮ್ ಎಲ್ಲಾ ನೋಡಲ್ವಾ..ರಿಕ್ಷಾ ಓಡಿಸುತ್ತಲೇ ಸುಮ್ಮನೆ ಹೀಗೆ ಕೇಳಿದೆ. 


ನೋಡ್ತೇನೆ ಅಲಾ.... ಹಿಂದಿನಿಂದ ಧ್ವನಿ ಬಂತು. 


ಮತ್ತೆ ನಿಮ್ಮ ಫೇವರೆಟ್ ಫಿಲ್ಮ್ ಯಾವುದು ಸಾರ್... ಕೇಳಿದೆ ನಾನು. 


ಪ್ರೇಮಲೋಕ... ಆ ಮನುಷ್ಯ ಹೇಳಿದ. 


ಓಹೋ..ಈ ಜನಕ್ಕೆ ಪ್ರೀತಿ ಪ್ರೇಮ ದ ಬಗ್ಗೆ ಒಲವು ಜಾಸ್ತಿ ಇರ್ಬೇಕು.. ಹಾಗಾಗಿ Action ಮೂವಿಗಳಿಗಿಂತ ರೊಮ್ಯಾಂಟಿಕ್-  ಲವ್ ಸಿನಿಮಾಗಳನ್ನೇ ಜಾಸ್ತಿ ನೋಡುವುದು ಅಂತ ಕಾಣುತ್ತೆ.. ಮನಸ್ಸಿನಲ್ಲಿಯೇ  ಅಂದುಕೊಂಡೆ. 


ನಾನೇ ಮುಂದುವರಿಸಿದೆ...ಆದ್ರೂ ನೀವು ಏನೇ ಹೇಳಿ ಸಾರ್... ನಮ್ಮಲ್ಲಿ ಇಂಗ್ಲಿಷ್ ನವರಂತೆ ಮೂವಿ ಯಾರೂ ತೆಗೆಯಲ್ಲ. ಅವರದ್ದು ಆಕ್ಷ್ಯನ್,ಥ್ರಿಲ್ಲರ್ ಮೂವಿ ಎಲ್ಲ ಏನು ಸಾರ್.. ನಿಜವಾಗಿಯೂ ಉಸಿರು ಬಿಗಿ ಹಿಡಿದು ನೋಡ್ಬೇಕು.. 


ನಿನ್ನೆ ನಾನು ಮನೆಗೆ ಹೋದ ಮೇಲೆ ರಾತ್ರಿಯೆಲ್ಲಾ "#ಅನ್ನಬೇಳೆ " ಅಂತ ಒಂದು ಇಂಗ್ಲಿಷ್ ಥ್ರಿಲ್ಲರ್ ಮೂವಿ ನೋಡಿದ್ದು ಸಾರ್... ಏನು  ಮೂವಿ ಸಾರ್ ಅದು..ಥ್ರಿಲ್ಲರ್ ಮೂವಿ ಅಂದ್ರೆ ಹಾಗೆ ಮಾಡ್ಬೇಕು..ಮನುಷ್ಯ ಆದವನಿಗೆ ಅದನ್ನು ನೋಡ್ಲಿಕ್ಕೆ ಎಂಟೆದೆ ಬೇಕು ಸಾರ್.. ಅಂದೆ. 


ಅದು "ಅನ್ನ ಬೇಳೆ " ಅಲ್ಲ, ಅದು " #Annabelle.."  ಮತ್ತು ಅದು ಥ್ರಿಲ್ಲರ್ ಮೂವಿ ಅಲ್ಲ.. ಅದೊಂದು  ಹಾರರ್ ಮೂವಿ.... ಹಿಂದಿನ ಜನ ಗಡುಸಾಗಿ ಹೇಳಿತು..!


ಅದೇ ಸಾರ್.. ಏನೋ ಒಂದು.. ಒಟ್ರಾಸಿ ಥ್ರಿಲ್ ಇರ್ತದೆ ಅಲ್ವಾ.. ಹಾಗಾಗಿ ಅಂತಹದ್ದೆಲ್ಲ ನನಗೆ ಥ್ರಿಲ್ಲರ್ ಮೂವಿಯೇ.. 


ಏನು ಸೌಂಡ್ ಎಫೆಕ್ಟ್ ಸಾರ್.. ಅದರಲ್ಲಿ ಗೊಂಬೆಯಲ್ಲಿ ದೆವ್ವ ಬರುವುದು  ಸಾರ್... ನೋಡಿದ್ರೆನೇ heart attack ಆಗ್ಬೇಕು. ಆದ್ರೆ ನಂಗೆ ಮಾತ್ರ ಅಂತಹ  ಭಯ ಏನು ಇಲ್ಲ... ನಾನಂತು ಡೈಲಿ ರಾತ್ರಿ ಮನೆಯಲ್ಲಿ  ಜೋರು ಸೌಂಡ್ ಇಟ್ಟು,ಲೈಟ್ ಎಲ್ಲಾ ಆಫ್ ಮಾಡಿ ಒಬ್ಬನೇ ಕುಳಿತುಕೊಂಡು ಬರೀ ದೆವ್ವದ ಮೂವಿಯನ್ನೇ ನೋಡುವುದು ಸಾರ್. ಹೌದು ಡೈಲಿ ಬರೀ ದೆವ್ವದ ಮೂವಿ ಅಷ್ಟೇ. ನಿಜ ದೆವ್ವವೇ  ಮನೆ ಹತ್ರ ಬಂದರೂ ಕೂಡ ನಮ್ಮ ಮನೆಯ ದೆವ್ವದ ಫಿಲಂ ನ ಜೋರು ಸೌಂಡ್ ಕೇಳಿಯೇ ಅದು ಓಡಿ ಹೋಗ್ಬೇಕು ಸಾರ್.. ಹಾಗೆ ಇರ್ತದೆ ನಮ್ಮ ಮನೆಯ  ಸುತ್ತ ಮುತ್ತ  ಫಿಲ್ಮ್ ಎಫೆಕ್ಟ್.. ಹಹ್ಹಾ... ಹಹ್ಹಾ.. ಎಂದು ಜೋರಾಗಿ ನಕ್ಕೆ. 


ನಾನು ಮಾತ್ರ ನಕ್ಕಿದ್ದು... ಆ ಜನ ನಗಲಿಲ್ಲ.!! 


ರಿಕ್ಷಾ ಓಡಿಸುತ್ತಾ ಪುನಃ ನಾನೇ ಮಾತು ಮುಂದುವರಿಸಿದೆ... ಸಾರ್.. ಈ ದೆವ್ವದ ಫಿಲ್ಮ್  ಎಲ್ಲಾ ಇರ್ತದೆಯಲ್ಲ, ಇದರಲ್ಲಿ ದೆವ್ವವನ್ನು  ಡೈರೆಕ್ಟ್ ಆಗಿ ತೋರಿಸ್ಬಾರ್ದು ಸಾರ್.. ಜಸ್ಟ್ ಸೌಂಡ್ ಎಫೆಕ್ಟ್ಸ್ ಅಷ್ಟೇ ಕೊಟ್ಟು ನೋಡುವವರನ್ನು ಹೆದರಿಸ್ಬೇಕು.. ಆಗಲೇ ಆ ಥ್ರಿಲ್ ಬರುವುದು. ದೆವ್ವವನ್ನೇ ಡೈರೆಕ್ಟ್ ಆಗಿ ಆವಾಗವಾಗ ತೋರಿಸ್ತಾ ಇದ್ರೆ ಆಗ  ಫಿಲ್ಮ್ ಅಲ್ಲಿ ದೆವ್ವವೇ ಒಂದು ಕಾಮಿಡಿ ಪೀಸ್ ಆಗಿ ಬಿಡ್ತದೆ ಅಷ್ಟೇ.. ಅಂದೆ. 


ಹಿಂದಿನಿಂದ ಯಾವ ರಿಯ್ಯಾಕ್ಷನ್ ಕೂಡ ಇಲ್ಲ...! 


ಮತ್ತೆ ಸಾರ್... ನೀವು ಈ ದೆವ್ವ ಗಿವ್ವ ಎಲ್ಲಾ ನಂಬ್ತೀರಾ..? ನಾನಂತು ನಂಬಲ್ಲ ಸಾರ್. ಇಲ್ಲಿಯವರೆಗೆ ನಾನು ಒಂದೇ ಒಂದು ದೆವ್ವ ನನ್ನ ಈ  ಕಣ್ಣಾರೆ ನೋಡಿಲ್ಲ,ಆದ್ದರಿಂದ  ನಂಬಲ್ಲ. ಹಾಗಾಗಿಯೇ  ಧೈರ್ಯವಾಗಿ ಅಷ್ಟೊಂದು ದೆವ್ವದ ಫಿಲ್ಮ್ ಎಲ್ಲ  ನಡು ರಾತ್ರಿಯಲ್ಲಿ ನೋಡುವುದು ನಾನು..ಇವತ್ತು ಕೂಡ ಹೋಗಿ "ಅನ್ನಬೇಳೆ" ಎರಡನೇ ಪಾರ್ಟ್ ನೋಡ್ಬೇಕು ಅಂತ ಇದ್ದೀನಿ. ನೀವು ಏನೇ ಹೇಳಿ ಸಾರ್.. ದೆವ್ವ ಅನ್ನುವುದು ಎಲ್ಲ ಏನೂ ಇಲ್ಲವೇ ಇಲ್ಲ .. ಅದು ಕೇವಲ ನಮ್ಮ ಭಯ ಹಾಗೂ ಹೆದರಿಕೆಯ ಮನಸ್ಥಿತಿ ಅಷ್ಟೇ... ಅಂದೆ.


ಹಿಂದಿನಿಂದ ಮತ್ತೆ ಯಾವುದೇ ಸೌಂಡ್ ಇಲ್ಲ!


ಆದರೂ ಬಿಡದೇ ಪುನಃ ನಾನೇ ಕೇಳಿದೆ.. ಸಾರ್... ನೀವು ಈ ಥ್ರಿಲ್ಲರ್, ದೆವ್ವದ ಮೂವಿ ಎಲ್ಲಾ ನೋಡಲ್ವಾ.... ನನಗಂತು ಈ  ಇಂಗ್ಲಿಷ್ ಭಾಷೆ ಎಲ್ಲಾ ಸರಿಯಾಗಿ ಅರ್ಥ ಆಗದಿದ್ದರೂ ಸಹ.. ಥ್ರಿಲ್ ಗಾಗಿ, ದೆವ್ವಕ್ಕಾಗಿ ಬರೀ ಇಂಗ್ಲಿಷ್ ಫಿಲ್ಮನ್ನು  ಅಷ್ಟೇ ನಾನು ನೋಡುವುದು ಸಾರ್.ನೀವು ನೋಡಿದ್ರೆ ಇಂಗ್ಲಿಷ್ ಫಿಲಂ ಎಲ್ಲಾ  ಜಾಸ್ತಿ ನೋಡುವವರಂತೆ ಕಾಣ್ತೀರಾ.."ಅನ್ನಬೇಳೆ" ಫಿಲಂ ನ ಹೆಸರು ಕೂಡ ನಿಮಗೆ ಸರಿಯಾಗಿಯೇ ಗೊತ್ತಿದೆ. ಹೇಳಿ ಸಾರ್.. ನೀವು ಇತ್ತೀಚೆಗೆ ಯಾವುದಾದರೂ  ನೋಡಿದ ಭಯಾನಕ ದೆವ್ವದ ಫಿಲಂ ನ ಕಥೆ ಇದ್ರೆ ಹೇಳಿ ಸಾರ್... ಈ ರಾತ್ರಿ ಟೈಂ ಅಲ್ಲಿ ರಿಕ್ಷಾ ಓಡಿಸ್ತಾ ಕೇಳ್ಲಿಕ್ಕೆ ಬಾರೀ ಮಜಾ ಆಗ್ತದೆ.. ಅಂದೆ. 


ಅದಕ್ಕೆ ಹಿಂದಿನಿಂದ ಆ ಜನ  ಹೇಳಿತು... ನೋಡಿ ನನಗೆ ಜೋರು ಹಸಿವು ಆಗ್ತ ಇದೆ.. ಇಲ್ಲೇ ಸ್ವಲ್ಪ ಮುಂದೆ ರೋಡ್ ಪಕ್ಕ ಒಂದು ಕಡೆ ಫಾಸ್ಟ್ ಫುಡ್ ಅಂಗಡಿ ಇದೆ.ರಿಕ್ಷಾ ಅಲ್ಲೇ ನಿಲ್ಲಿಸಿ... ಏನಾದರೂ ತಿಂದ್ಕೊಂಡು ಆಮೇಲೆ ಮುಂದೆ  ಹೋಗುವ.. ಅಲ್ಲಿಯ ಬಿಸಿ ಬಿಸಿ ಕಬಾಬ್  ಚೆನ್ನಾಗಿರ್ತದೆ, ನೀವೂ ಸಹ ಒಮ್ಮೆ ತಿಂದು ನೋಡಿ.. ಹೊಟ್ಟೆಗೆ ಏನಾದರೂ ಬಿದ್ದರೆ ಮಾತಾಡ್ಲಿಕ್ಕೂ..ನಿಮ್ಮಂತೆ ಕಥೆ ಹೇಳಲು ಕೂಡ  ಹುಮ್ಮಸ್ಸು ಬರ್ತದೆ... ಅಂದರು. 


ಸಾರ್... ಇಷ್ಟು ಹೊತ್ತಲ್ಲಿ... ಈ ರೋಡ್ ಅಲ್ಲಿ ಎಲ್ಲಿ ಆದರೂ  ಫಾಸ್ಟ್ ಫುಡ್ ಅಂಗಡಿ ಇರ್ತದ, ಈಗ ಎಲ್ಲಾ ಬಂದ್ ಆಗಿರುತ್ತದೆ.. ಅಂದೆ. 


ಇಲ್ಲ.. ಒಂದು ಇದೆ, ಇನ್ನೂ ಸ್ವಲ್ಪ ಮುಂದೆ ಹೋಗಿ ನಾನು ಹೇಳ್ತೇನೆ ಅಂದರು..!


ನನಗೂ ಹೊರಗಿನ ತಂಪಾದ ವಾತಾವರಣಕ್ಕೆ ಒಂದೆರಡು ಬಿಸಿ ಬಿಸಿ ಕಬಾಬು ನಿಜವಾಗಿಯೂ ಚೆನ್ನಾಗಿರುತ್ತೆ ಅಂತ ಅನಿಸಿತು. 


ನಿಜವಾಗಿಯೂ ಆ ಜನ ಹೇಳಿದಂತೆ ಒಂದು ಅಂಗಡಿ ಇನ್ನೂ ಓಪನ್ ಆಗಿಯೇ ಇತ್ತು ರೋಡ್ ಪಕ್ಕ. 


ಅಂಗಡಿಯವನನ್ನು ಬಿಟ್ಟರೆ ಅಲ್ಲಿ ಯಾರೂ ಇರಲಿಲ್ಲ..! 


ರಿಕ್ಷಾ ನಿಲ್ಲಿಸಿದೆ.ಇಬ್ಬರೂ ಇಳಿದೆವು.ಅದಾಗಲೇ  ಮಳೆ ಕೂಡ  ಬಿಟ್ಟಿತ್ತು..


ನನ್ನ ರಿಕ್ಷಾದ ಆ ಗಿರಾಕಿ ನನ್ನ ಬಳಿ ಕೇಳಿದರು...ಅಂದ ಹಾಗೆ ನಿಮ್ಮ ಹೆಸರೇನು?


ಬಾಬು... ರಿಕ್ಷಾ ಬಾಬು.. ಅಂದೆ


ಓಕೆ ಓಕೆ.. ಹೇಳಿ.. ಏನು ತಿನ್ತೀರಾ ನೀವು.. ನನ್ನಲ್ಲಿ ಕೇಳಿದರು ಆ ನನ್ನ ರಿಕ್ಷಾ ಗಿರಾಕಿ. 


ನನಗೇನು ಬೇಡ ಎರಡು ಕಬಾಬು ಸಾಕು... ಈಗಾಗಲೇ ಮಾಡಿ ಇಟ್ಟದ್ದು ಬೇಡ... ಬಿಸಿ ಇರಲಿ ಅಂದೆ. 


ಅಯ್ಯೋ ಅಷ್ಟೇನಾ.. ಇನ್ನೇನಾದರೂ ಎಗ್ ರೈಸ್.. ಗೋಬಿ-ಮಂಚೂರಿ,ಕೋರಿರೊಟ್ಟಿ.. ಅಂತಹದ್ದು ಏನಾದರೂ ತೆಗೆದುಕೊಳ್ಳಿ ಅಂದರು. 


ಬೇಡ.. ಬೇಡ.. ಮನೆಗೆ ಹೋಗಿ ಮತ್ತೆ ಊಟ ಮಾಡ್ಲಿಕ್ಕೆ ಆಗಲ್ಲ.ಊಟ ಮಾಡದಿದ್ದರೆ ಮನೆಯಲ್ಲಿ ಹೆಂಡ್ತಿ ಬೈತಾಳೆ.. ಆದ್ರಿದಿಂದ ನನಗೆರಡು ಕಬಾಬು ಅಷ್ಟೇ ಸಾಕು ಅಂದೆ. 


ಆಯಿತು ಹಾಗಾದರೆ... ಎಂದು ಹೇಳಿದ ನನ್ನ ಆ ರಿಕ್ಷಾ ಗಿರಾಕಿ ಅಂಗಡಿಯವನತ್ತ ತಿರುಗಿ... ನೋಡಿ ಒಂದು ಎಗ್ ರೈಸ್... ಹಾಗೇ ಇವರಿಗೆರಡು ಮತ್ತು ನನಗೆರಡು ಕಬಾಬ್ ಕೊಡಿ... ಕಬಾಬ್ ಬಿಸಿ ಬಿಸಿ ಮಾಡಿಯೇ  ಕೊಡಿ ಮತ್ತು ಮೊದಲು ಕಬಾಬ್ ಅನ್ನೇ ಮಾಡಿ ಅಮೇಲೆ ಎಗ್ ರೈಸ್ ಮಾಡಿ.. ಅಂದರು. 


ಅಂಗಡಿಯವನು ಅವನ ದೊಡ್ಡ ಸ್ಟೌವ್ ಆನ್ ಮಾಡಿ ಅದಕ್ಕೆ ಅದಾಗಲೇ ತಣ್ಣಗಾಗಿದ್ದ ಎಣ್ಣೆ ತುಂಬಿರುವ ಬಾಣಲೆ ಇಟ್ಟು,ಎಣ್ಣೆ ಚೆನ್ನಾಗಿ ಬಿಸಿ ಆದ ನಂತರ ,ಮಸಾಲೆಯಲ್ಲಿ ಅದ್ದಿರುವ ನಾಲ್ಕು ದೊಡ್ಡ ದೊಡ್ಡ ಪೀಸ್ ಚಿಕನ್ ಗಳನ್ನು ಎಣ್ಣೆಯಲ್ಲಿ ಬಿಟ್ಟು ಪ್ರೈ ಮಾಡಿದ. ನಾನು ಎರಡು ಪೀಸ್  ಕಬಾಬು ಗಳನ್ನು ಪೇಪರ್ ನಲ್ಲಿ ಕಟ್ಟಿಕೊಂಡು ನನ್ನ ಆ ಗಿರಾಕಿಗೆ ಹೇಳಿದೆ.. ಸಾರ್... ನಾನು ರಿಕ್ಷಾದಲ್ಲಿಯೇ ಕಬಾಬು ತಿನ್ತಾ ಇರ್ತೇನೆ.. ನಿಮ್ಮದು ಎಗ್ ರೈಸ್, ಕಬಾಬು ಎಲ್ಲಾ ತಿಂದಾದ ಮೇಲೆಯೇ ಆರಾಮ್ ಸೇ ಬನ್ನಿ.. ರಿಕ್ಷಾದಲ್ಲಿ ಕಾಯ್ತಾ ಇರ್ತಿನಿ.. ಅಂದೆ. 


ಆಯಿತು ಹಾಗೇ ಮಾಡಿ... ಅಂದರು  ಗಿರಾಕಿ. 


ನಾನು ಹಾಗೇ ಬಂದು ರಿಕ್ಷಾದ ನನ್ನ ಡ್ರೈವರ್ ಸೀಟಿನಲ್ಲಿ ಕುಳಿತುಕೊಂಡು ನಿಧಾನವಾಗಿ ಕಬಾಬು ತಿನ್ನಲು ತೊಡಗಿದೆ.ಗಿರಾಕಿ ಹೇಳಿದಂತೆ ನಿಜವಾಗಿಯೂ ಬಿಸಿಯಾಗಿ ರುಚಿಯಾಗಿಯೂ ಇತ್ತು. ಖಂಡಿತವಾಗಿಯೂ ಇನ್ನೆರಡು ಪೀಸ್ ಬೇಕು ಅಂತ ಆಸೆ ಹುಟ್ಟಿಸಿದ ಕಬಾಬು ಅದು. 


ಕಬಾಬು ತಿಂದು ಮುಗಿಸಿ ಆದ ಮೇಲೆ ತುಂಬಾ ಹೊತ್ತು ಆಗಿತ್ತು. ನನ್ನ ಗಿರಾಕಿಯದ್ದು ತಿಂದು ಆಯಿತೇ ಎಂದು ಫಾಸ್ಟ್ ಫುಡ್ ಅಂಗಡಿ ಕಡೆಗೆ ನೋಡಿದೆ.


ಗಿರಾಕಿ ಎಗ್ ರೈಸ್ ತಿನ್ನುತ್ತಿದ್ದರು.


ಕಬಾಬ್ ಮಾಡಿ ಮುಗಿಸಿದ್ದರೂ ಗ್ಯಾಸ್ ಸ್ಟೌವ್ ಮಾತ್ರ ಧಗಧಗ ಎಂದು ಉರಿದು ಬಾಣಲೆಯಲ್ಲಿರುವ ಎಣ್ಣೆಯನ್ನು ಸುಮ್ಮನೆ ಬಿಸಿ ಮಾಡುತ್ತಿತ್ತು.ಏನು ಜನರಪ್ಪ.. ಸುಮ್ಮನೆ ಎಷ್ಟೊಂದು ಅಂತ ಗ್ಯಾಸ್ ವೇಸ್ಟ್ ಮಾಡ್ತಾರೆ.ಈ ಸಮಾಜಕ್ಕೆ, ಜನಕ್ಕೆ ಯಾವಾಗ ಬುದ್ಧಿ ಬರುವುದೋ ಅಂತ ಮನಸ್ಸಿನಲ್ಲಿಯೇ ಬೈದುಕೊಂಡೆ ನಾನು. 


ರಿಕ್ಷಾದಲ್ಲಿ ಕುಳಿತು ಸುಮ್ಮನೆ ಫಾಸ್ಟ್-ಫುಡ್ ಅಂಗಡಿಯನ್ನೇ ನೋಡುತ್ತಿದ್ದೆ.


ನನ್ನ ಗಿರಾಕಿ ನೀಟಾಗಿ ತಮ್ಮ ಪ್ಲೇಟ್ ನಲ್ಲಿದ್ದ ಎಲ್ಲವನ್ನೂ ತಿಂದರು. 


ನಂತರ ಅಲ್ಲೇ ಇದ್ದ ಸ್ಟೀಲ್ ಚೊಂಬನ್ನು ಗ್ಯಾಸ್ ಸ್ಟೌವ್ ನಲ್ಲಿದ್ದ ಬಾಣಲೆಯೊಳಗೆ ಮುಳುಗಿಸಿ,ಆ ಕೊತ ಕೊತ ಕುದಿಯುತ್ತಿದ್ದ  ಬಿಸಿ ಎಣ್ಣೆಯಲ್ಲಿ ಚೆನ್ನಾಗಿ ತಮ್ಮ ಕೈ ಮತ್ತು ಮುಖವನ್ನು ತೊಳೆದುಕೊಂಡರು..!! 


ಅಂಗಡಿಯವನು ಕೂಡ ಇನ್ನು ನಾನೂ ಸಹ  ಮನೆಗೆ ಹೊರಡುವ ಹೊತ್ತಾಯಿತು ಎಂಬ ಧಾವಂತದಲ್ಲಿ,ಅದೇ ಚೊಂಬನ್ನು ಬಿಸಿ ಬಾಣಲೆಗೆ ಮುಳುಗಿಸಿ... ತನ್ನ ಕೈ ಕಾಲು ಮುಖ ಎಲ್ಲವನ್ನೂ ಆ ಬಿಸಿ ಬಿಸಿ ಎಣ್ಣೆಯಲ್ಲಿ ಚೆನ್ನಾಗಿ ಉಜ್ಜಿ ಉಜ್ಜಿ ತೊಳೆದ!!! 


ನಂತರ ನನ್ನ ಗಿರಾಕಿ ಸೀದಾ ಬಂದು ರಿಕ್ಷಾದಲ್ಲಿ  ಕುಳಿತ!! 


ಸಾರ್.. ಹೋಗುವ  ಅಂದ..! 


ನಾನು ನೋಡಿದ್ದಾದರೂ ಏನು, ಈಗ ಆಗುತ್ತಿರುವುದಾದರೂ ಏನು..ಎಂಬ ಅರಿವಿಯೇ ಇರದೆ ಯಾಂತ್ರಿಕವಾಗಿ ರಿಕ್ಷಾ ಸ್ಟಾರ್ಟ್ ಮಾಡಿದೆ ನಾನು.! 


ರಿಕ್ಷಾ ಹೊರಟಿತು..!! 


ಹಿಂದಿನಿಂದ ಕುಳಿತವ ಈ ಬಾರಿ ಸ್ಪಷ್ಟವಾಗಿ ಕೇಳುವಂತೆ ಹೇಳಿದ್ದ ... 


ನಿಮಗೆ ನಾನು ಯಾವ ಕಥೆ ಹೇಳಲಿ... ಥ್ರಿಲ್ಲರ್ ಕಥೆ ಹೇಳಲಾ..? ಅಥವಾ ಯಾವುದಾದರೂ ಭಯಾನಕ ಹಾರರ್ ಕಥೆ ಹೇಳಲಾ...? 


ನಿಧಾನಕ್ಕೆ ನನ್ನ ಹಣೆಯಲ್ಲಿ ಬೆವರು ಹನಿಗಳು ಮೂಡಿದವು...! 


ಹಿಂದೆ ತಿರುಗಿ ನೋಡುವ ಯಾವುದೇ ಸಾಹಸ ಮಾಡದೆ,ಮೌನವಾಗಿ ಭಯದಿಂದಲೇ ರಿಕ್ಷಾ ಓಡಿಸಿದೆ!!! 


.....................................................................................


#ಇಷ್ಟೇ.. 


ab pacchu 

moodubidire

(photo-internet)

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ