ಚಂದದ ಹಲ್ಲಿನ ಹುಡುಗಿ ಮತ್ತು ಹದಿನೆಂಟು ಅವಳುಗಳ ಕಥೆ
ಎಲ್ಲಾ ಕಥೆಗಳು ಕಾಮತರದ್ದೇ.ಓದುವಾಗ ಕೆಲವೊಂದು ಕಥೆ ನಿಮ್ಮದೂ ಕೂಡ ಎಂದೆನಿಸಿದರೆ,ಖಂಡಿತವಾಗಿಯೂ ಅವು ನಿಮ್ಮದೇ.ನಿಮ್ಮ ಅವಳದ್ದು ಅಥವಾ ನಿಮ್ಮ ಅವನದ್ದು ಎಂದು ಕೂಡ ಅನಿಸಿದರೆ ತಪ್ಪೇನಿಲ್ಲ ಬಿಡಿ,ಖಂಡಿತವಾಗಿಯೂ ಅದು ನಿಮ್ಮ ನಿಮ್ಮ ಅವರದ್ದೇ.
ಪ್ರೀತಿ ಯಾರು ಮಾಡುವುದಿಲ್ಲ, ಕೆಲವರು ಹೇಳುವುದಿಲ್ಲ ಅಷ್ಟೇ.
ಆದರೆ ಕಾಮತರು ಇಲ್ಲಿ ಎಲ್ಲವನ್ನೂ ಹೇಳುತ್ತಾರೆ,ದಾಳಿಂಬೆಯಿಂದ ಒಂದೊಂದೇ ರಸಭರಿತ ಕಾಳುಗಳನ್ನು ಯಾರಾದರೂ ಶ್ರದ್ಧೆಯಿಂದ ತೆಗೆದು ತಿನ್ನಲು ಕೊಟ್ಟರೆ ದಾಳಿಂಬೆ ಯಾರು ತಿನ್ನುವುದಿಲ್ಲ ಹೇಳಿ,ಹಾಗೇ ಈ ಪುಸ್ತಕ.
ಹಾಗಂತ ಬರೀ ಪ್ರೀತಿ ಮಾಡುತ್ತಿರುವವರೇ ಓದಬೇಕಾಗಿಲ್ಲ.ಪ್ರೀತಿಯಲ್ಲಿ ಜಾರಿ ಬಿದ್ದವರು,ಬಿದ್ದು ಮತ್ತೆ ಎದ್ದವರು,ಇನ್ನು ಮುಂದೆ ಪ್ರೀತಿಯೇ ಬೇಡ ಎಂದು ಬದುಕಿನತ್ತ ಮುಖ ಮಾಡಿ ಪ್ರೀತಿಗೆ ಮುಖ ತಿರುಗಿಸಿದವರು,ಇಲ್ಲವೇ ಮತ್ತೆ ಇನ್ನು ಯಾವುದೋ ತಿರುವಿನಲ್ಲಿ ಅಚಾನಕ್ ಆಗಿ ಇನ್ನೊಂದು ಚಂದದ ಇಲ್ಲವೇ ಸಾದಾರಣ ಹುಡುಗಿ ಹಾಗೇ ನಕ್ಕಾಗ ಮತ್ತೊಮ್ಮೆ ತಮ್ಮನ್ನು ಪ್ರೀತಿಗಾಗಿ ತೆರೆದುಕೊಂಡವರು,ಪ್ರೀತಿಯಲ್ಲಿ ಕೊನೆಗೊಮ್ಮೆ ಗೆದ್ದವರು, ಪ್ರೀತಿಯಲ್ಲಿ ಪದೇ ಪದೇ ಸೋತವರು..... ಪ್ರೀತಿಯೇ ಮಾಡದವರು,ಒಟ್ಟಿನಲ್ಲಿ ಓದುವ ಎಲ್ಲರೂ ಪ್ರೀತಿಯ ಕುರಿತಾಗಿ ಓದಬಹುದಾದ ಚಂದದ ಪುಸ್ತಕವಿದು.
ಈ ಪುಸ್ತಕ ಓದಿಗಾಗಿ ಹೆಚ್ಚಿನ ಸಮಯವನ್ನೂ ಕೂಡ ಬೇಡುವುದಿಲ್ಲ,ಸರಾಗವಾಗಿ ಓದಿಸಿ ಬಲು ಬೇಗ ಮುಗಿಸಿ ಬಿಡುತ್ತದೆ.ಒಂದು ದೊಡ್ಡ ಪ್ಯಾಕೇಟ್ ಬನಾನ ಚಿಪ್ಸ್ ಮತ್ತು ಒಂದೆರಡು ಗ್ಲಾಸ್ ಕಾಫಿಯೋ,ಚಹಾ ವೋ ಎದುರಿನಲ್ಲಿ ಇದ್ದು ಬಿಟ್ಟು,ಓದುತ್ತಾ ಚಹಾ ಕುಡಿಯುತ್ತಾ ನಡು ನಡುವೆ ಒಂದೊಂದೇ ಚಿಪ್ಸ್ ಹೆಕ್ಕಿ ತಿಂದು ಕೊನೆಗೂ ಪುಸ್ತಕ ಓದಿ ಮುಗಿದಾಗ ಅದರೊಟ್ಟಿಗೆ ಚಿಪ್ಸ್ ಪ್ಯಾಕೇಟ್ ಖಾಲಿಯಾದಾಗ.. ಶೇ ಇನ್ನೂ ಇರಬೇಕಿತ್ತು ಎಂದು ಅನಿಸುವುದು ಚಿಪ್ಸ್ ಅಲ್ಲ.. ಚಂದದ ಹಲ್ಲಿನ ಹುಡುಗಿ ಮತ್ತು ಹದಿನೆಂಟು ಅವಳುಗಳ ಕಥೆಯೇ.
ಮುನ್ನುಡಿಯೇ ಇಲ್ಲವೇ ಎಂದು ಓದುತ್ತಾ ಹೋದವರಿಗೆ ಕೊನೆಯಲ್ಲೊಂದು ಮುನ್ನುಡಿಯೂ ಅಲ್ಲದ ಬೆನ್ನುಡಿಯೂ ಅಲ್ಲದ ಚಂದದ ಹಲ್ಲಿನ ಹುಡುಗಿಯೇ ಬರೆದಂತಹ ಒಂದು ಸಾಲಿನ...
" ಹತ್ತನೇ ತರಗತಿಯಲ್ಲಿ ನೀನು ಹಲ್ಲುದುರಿಸಿದ ಹುಡುಗಿ ನಾನೇ.."
ಎಂಬ 'ಹಲ್ನುಡಿ' ಒಟ್ಟಾರೆ ಓದಿಗೊಂದು ಹಿತವಾದ ಸುಖವಾದ ಅಂತ್ಯ.
ಶರತ್ ಋತುವಿನ(Atumn) ಚಂದದ ಹಲ್ಲಿನ ಹುಡುಗಿಯ ಉಲ್ಟಾಪಲ್ಟ ಮುಖದ ಮುಖಪುಟವೇ ಬಹಳ ಸೊಗಸಾಗಿದೆ,ಅದರೊಟ್ಟಿಗೆ ಕಾಮತರ ಎಲ್ಲಾ ಹದಿನೆಂಟು ಕಥೆಗಳು..
#ಚಂದದ_ಹಲ್ಲಿನ_ಹುಡುಗಿ_ಮತ್ತು_18_ಅವಳುಗಳ_ಕಥೆ
ಲೇಖಕರು - Manjunath Kamath
Book Reveiw
(Ab Pacchu
Moodubidire)

Comments
Post a Comment