ಅಮ್ಮನಿಗದು ಬರೀ ಹಳೇ ಸೀರೆ ಮಕ್ಕಳಿಗದೇ ಒಲವ ಮಾಯೆ...
ಹೆಣ್ಣು ಮಕ್ಕಳಿಗೆ ತೊಡಲು ಒಡವೆ,ಹಣೆಗೆ ಸಿಂಧೂರ,ಎರಡೂ ಕೈಗೆ ಗಾಜಿನ ಬಳೆ,ಮುಡಿಗೆ ಹೂವು ಹಾಗೇ ಉಡಲು ಮೈ ತುಂಬಾ ಸೀರೆ.. ಇದಿಷ್ಟು ತುಂಬಾನೇ ಇಷ್ಟವಂತೆ.
ಇವಿಷ್ಟು ಇದ್ದರೆ ಅವಳೇ ಮನೆಯ ಅನ್ನಪೂರ್ಣೆ.. ಮನೆಯ ಸಾಕ್ಷಾತ್ ಲಕ್ಷೀ.
ನಮ್ಮ ಮನೆಗೆ ನಮ್ಮ ಅಮ್ಮನೇ ಅನ್ನಪೂರ್ಣೆ ಮತ್ತು ಅವಳೇ ಮಹಾಲಕ್ಷೀ.
ಅವಳಲ್ಲಿ ನಗುವಿಗಿಂತ ದೊಡ್ಡ ಆಭರಣ ಬೇರೆ ಯಾವುದೂ ಇರಲಿಲ್ಲ.ಹಾಗಾಗಿ ಆಭರಣ ಕಡಿಮೆ ಹಾಕಿ ಸದಾ ನಗುತ್ತಿದ್ದಳು.
ಎರಡೂ ಕೈಗೆ ಒಂದಷ್ಟು ಬಳೆ,ಹಣೆಗೊಂದು ದೊಡ್ಡ ಕುಂಕುಮ ಅವಳು ಯಾವತ್ತೂ ತಪ್ಪಿಸಿದವಳಲ್ಲ.ಜೀವನ ಪೂರ್ತಿ ಅವಳು ಉಡುತ್ತಿದ್ದುದೇ ಅವಳಿಗಿಷ್ಟದ ಸೀರೆಯನ್ನೇ ಹೊರತು ಬೇರೆ ಯಾವುದನ್ನೂ ಅಲ್ಲ.
ಅಮ್ಮನ ಸೀರೆ ಅವಳಿಗೆ ಬರೀ ಸೀರೆ ಮಾತ್ರ ಆಗಿತ್ತು.. ಆದರೆ ಚಿಕ್ಕಂದಿನಲ್ಲಿ ಎಲ್ಲಿ ಹೋದರೂ ಅವಳ ಸೀರೆಯ ತುದಿಯನ್ನೇ ಹಿಡಿದುಕೊಂಡು ಅವಳ ಹಿಂದೆ ಹಿಂದೆಯೇ ಹೆಜ್ಜೆ ಹಾಕುತ್ತಿದ್ದ ನನಗದು ನನ್ನ ಜೀವನದ ಎಲ್ಲವೂ ಆಗಿತ್ತು.
ಅಮ್ಮನ ಸೀರೆಯಡಿಯಲ್ಲಿ ನನಗೊಂದು ಬೇಕಾದಾಗ ನೆರಳಿತ್ತು,ತಂಪಿತ್ತು,ಅಕ್ಕರೆಯ ಬಿಸುಪು ಬಾಲ್ಯವನ್ನು ಸದಾ ಬೆಚ್ಚಗೆ ಇರಿಸಿತ್ತು.
ಅವಳು ಸಮಾರಾಧನೆಗೆ ಹೋದಾಗ ಸೀರೆಯ ಸೆರಗಲ್ಲಿ ಮರೆಯದೇ ಕಟ್ಟಿಕೊಂಡು ಬರುತ್ತಿದ್ದ ಹೋಳಿಗೆ,ಲಾಡುಗಳ ರುಚಿ ಅಮ್ಮ ಎಂಬುವವಳ ಮಾತೃ ಪ್ರೇಮದಿಂದಲೇ ದ್ವಿಗುಣವಾಗಿ ಬಿಡುತ್ತಿತ್ತು.ಆಹಾ... ಅವಳು ಅದೆಷ್ಟು ದೇವತೆಯಾಗಿದ್ದಳು.
ಅವಳಿಗೆ ಲಾಡು ಇಷ್ಟವೋ ಇಲ್ಲವೋ ಎಂದು ಆವಾಗ ನನಗೆ ಗೊತ್ತಿರಲಿಲ್ಲ.. ಆದರೆ ಎಲ್ಲಿ ಹೋದರೂ ಸಿಹಿಯೊಂದು ಅವಳ ಕೈಗೆ ಬಂದಾಗ,ಅವಳಿಗೆ ನನ್ನನ್ನು ಹೊರತು ಬೇರೆ ಯಾವುದು ಮೊದಲು ನೆನಪಾಗುತ್ತಿರಲಿಲ್ಲ. ಅಮ್ಮ ಎಂದರೆ ಅದೆಷ್ಟು ಬರಿದಾಗದ ಮಮತೆ..ಅಮ್ಮನ ಸೀರೆಯ ಸೆರಗು ಎಂದರೆ ಅದು ಸಿಹಿತಿಂಡಿಗಳ ಗಂಟು.
ಅವಳ ಸೀರೆಯ ಸೆರಗಲ್ಲಿ ಅವಳು ಕಟ್ಟಿಕೊಂಡು ಬಂದ ಲಾಡುಗಳ ಲೆಕ್ಕ ನನಗೆ ಯಾವತ್ತೂ ಸಿಕ್ಕಿಯೇ ಇಲ್ಲ..
ಹೌದು ಅಮ್ಮನಿಗೆ ಅವಳ ಸೀರೆ ಬರೀ ಸೀರೆ ಅಷ್ಟೇ ಆಗಿತ್ತು.ಆದರೆ ಬಟ್ಟೆ ಒಗೆಯಲು ಅಮ್ಮನ ಜೊತೆ ಹೊಳೆ ಬದಿ ಹೋದಾಗ, ಆ ಹೊಳೆಯ ತಣ್ಣನೆಯ ನೀರಲ್ಲಿ ಇಳಿದಾಗ ಅಮ್ಮನ ಸೀರೆ ನನ್ನ ಪಾಲಿಗೆ ಹೊನ್ನ ಬಣ್ಣದ ಬಳಕುವ ಮೀನುಗಳನ್ನು ಹಿಡಿಯುವ ಮಾಂತ್ರಿಕ ಬಲೆಯಾಗಿ ಬದಲಾಗಿ ಬಿಡುತ್ತಿತ್ತು.ಬಟ್ಟೆ ಒಗೆಯುವಾಗ ಅಮ್ಮನ ಸೀರೆಯಲ್ಲಿ ಅಲ್ಲೇ ಹೊಳೆಯಲ್ಲೊಂದು ಮೀನು ಹಿಡಿಯದಿದ್ದರೆ ಅದೊಂದು ಎಂತಹ ಬಾಲ್ಯ.
ಕಡಿಮೆ ಎತ್ತರದ ಮರದ ಗೆಲ್ಲಿಗೆ ಅಮ್ಮನದ್ದೊಂದು ಹಳೆಯ ಸೀರೆಯನ್ನು ಜೋಕಾಲಿಯಂತೆ ಕಟ್ಟಿ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಗಾಳಿಯಲ್ಲಿ ತಿರುಗುತ್ತಿದ್ದರೆನೇ ಅದೊಂದು ಮುದ್ದಾದ ಬಾಲ್ಯ ಎನಿಸುವುದು. ಅಮ್ಮನ ಸೀರೆಯಲ್ಲಿ ಆಟವೂ ಇತ್ತು.
ಪುನರ್ವಸು ಜೋರಾದ ಮಳೆ. ನಿಂತು ನಿಂತು ಬಾ ಎಂದು ನಾವು ಹೇಳಿದರೆ ಅವಳು ಕೇಳುವವಳಲ್ಲ. ಬದಲಿಗೆ ಮತ್ತಷ್ಟು ಜೋರಾಗಿ ಸುರಿಯುವ ಮನಸ್ಸು ಮಾಡುವವಳು ಅವಳು.ಮಳೆ ಹೋಗಲಿ ಎಂದು ಆಟ ನಿಲ್ಲಿಸಿ ಸುಮ್ಮನೆ ಮರದಡಿ ಕಾಯುತ್ತಾ ನಿಲ್ಲುವ ಮಕ್ಕಳು ಕೂಡ ನಾವಂತು ಮೊದಲೇ ಅಲ್ಲ.ಒದ್ದೆಯಾಗಿ ಹಾಗೇ ಮನೆಗೆ ನೆನೆಯುತ್ತಾ ಬಂದಾಗ ಮೊದಲು ಹೊಟ್ಟೆ ತುಂಬುತ್ತಿದ್ದುದ್ದೇ ಅಮ್ಮನ ಬೈಗುಳಗಳು.ಆ ನಂತರ ಅಮ್ಮ ತನ್ನ ಸೀರೆಯಲ್ಲಿಯೇ ತಲೆಯನ್ನು ಒರೆಸಿ, ತಲೆಯನ್ನು ತಕ್ಕ ಮಟ್ಟಿಗೆ ಬೆಚ್ಚಗೆ ಮಾಡಿಬಿಡುತ್ತಿದ್ದಳು.ಅಮ್ಮನ ಸೀರೆಯಲ್ಲಿ ಶಾಖವಿತ್ತು.
ಕೆಲವೊಮ್ಮೆ ಶೀತ ಅತಿಯಾದಾಗ ಬಿಸಿ ನೀರಿನ ಹಬೆ ತೆಗೆದುಕೊಳ್ಳಲು ಮಂಡೆಯನ್ನು ಬಿಸಿ ನೀರಿನ ಪಾತ್ರೆಯ ಬಳಿ ತಂದು ಅವಳ ಸೀರೆಯಲ್ಲಿ ನನಗೂ ಆ ಪಾತ್ರೆಯ ಹಬೆಗೂ ಮುಸುಕು ಹಾಕಿ ಬಿಡುವ ಅವಳೇ ನನ್ನ ಪಾಲಿನ ಮೊದಲ ಗುರು, ಮೊದಲ ವೈದ್ಯೆ ಮತ್ತು ಎಲ್ಲವೂ..ಹೌದು ಅಮ್ಮನ ಸೀರೆಯಲ್ಲಿ ಧನ್ವಂತರಿ ಇದ್ದನು.
ಅಮ್ಮನ ಬೆರಳು ಹಿಡಿದು ಪೇಟೆಯಲ್ಲಿ ನಡೆವಾಗ.. ಎದುರಲ್ಲಿ ಭಯ ಹುಟ್ಟಿಸುವ ದೊಡ್ಡ ಮೀಸೆಯ ಮಾವ ಬಂದರೆ,ಅಮ್ಮನ ಸೀರೆಯ ಅಂಚು ಹಿಡಿದು ಅಮ್ಮನ ಹಿಂದೆ ಹೋಗಿ ನಿಂತುಕೊಂಡರೆನೇ ಅದೆಂತಹದ್ದೋ ಧೈರ್ಯ.ಅಮ್ಮ ಮತ್ತು ಅಮ್ಮನ ಸೀರೆಗಿಂತ ದೊಡ್ಡ ರಕ್ಷಣಾ ಕೋಟೆ ಚಿಕ್ಕ ಮಕ್ಕಳಿಗೆ ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ.
ಬಿಸಿಲಿಗೆ ಅಮ್ಮ ಎಂದೂ ಕೊಡೆ ಹಿಡಿದವಳಲ್ಲ,ತಲೆಯ ಮೇಲೆ ಅದೇ ಸೀರೆಯನ್ನು ಸುತ್ತಿಕೊಂಡು ಎಷ್ಟು ದೂರ ಕೂಡ ಹಾಗೇ ನಡೆದು ಹೋಗಿ ಬರುತ್ತಿದ್ದಳು.. ಅವಳ ಸೀರೆ ಅವಳು ಬಿಸಿಲಿಗೆ ಹೋದಾಗ ಅವಳಿಗದು ತಂಪು.. ಅದೇ ನಾನು ಒದ್ದೆಯಾಗಿ ಬಂದಾಗ ನನ್ನ ತಲೆಗೆ ಬರೀ ಬಿಸಿಯನ್ನಷ್ಟೇ ದಯಪಾಲಿಸುವ ವಿಚಿತ್ರ ಬಟ್ಟೆಯದು..
ಒಲೆಯಲ್ಲಿ ಬಿಸಿ ಅನ್ನ ಕೊತ ಕೊತ ಕುದಿಯುವಾಗ ಅಮ್ಮನಿಗೆ ಅದನ್ನು ಹಿಡಿಯಲು ಈಗಿನಂತೆ ಬೇರೆ ಬಟ್ಟೆಗಳು ಎಂದಿಗೂ ಬೇಕಾಗಿರಲಿಲ್ಲ.. ಬರೀ ಸೀರೆಯ ಅಂಚುಗಳನ್ನೇ ಕೈಯಲ್ಲಿ ಹಿಡಿದುಕೊಂಡು ಅವುಗಳಲ್ಲಿಯೇ ದೊಡ್ಡ ಪಾತ್ರೆಗಳ ಮೈದವಡಿ ಹಾಗೇ ಬಿಸಿ ಪಾತ್ರೆಯನ್ನು ಕೆಳಗಿಳಿಸಿಬಿಡುತ್ತದ್ದಳು.ಅಮ್ಮನ ಕೈಗೆ ಪಾತ್ರೆಯ ಬಿಸಿಯಿಂದ ರಕ್ಷಣೆ ಸಿಗುತ್ತಿದ್ದದ್ದು ಕೂಡ ಅವಳ ಆ ಸೀರೆಯಿಂದಲೇ.
ಕಾಡು ಗುಡ್ಡೆಗೆ ಹೋದಾಗ ಸೀರೆಯ ಸೆರಗಿನಲ್ಲಿಯೇ ಅಮ್ಮ ರೆಂಜಿರ್ ಹೂವು( ಬಕುಳದ ಹೂ) ಹೆಕ್ಕಿ ತರುತ್ತಿದ್ದಳು.. ಮನೆಯ ಅಂಗಳದಲ್ಲಿ ಅರಳುತ್ತಿದ್ದ ಮುತ್ತು ಮಲ್ಲಿಗೆ ಹಾಗೂ ಅಬ್ಬಲಿಗೆ ಕೊಯ್ದು ಹಾಕಲು ಕೂಡ ಅವಳಿಗೆ ಸೀರೆಯ ಸೆರಗೇ ಸಾಕಾಗುತ್ತಿತ್ತು.
ಸಹೋದರಿಯ ಮಗು ಹುಟ್ಟಿದಾಗ ಮನೆಯಲ್ಲಿ ತೊಟ್ಟಿಲು ಇದ್ದರೂ ಸಹ ಅಮ್ಮನ ಸೀರೆಯನ್ನು ಮನೆಯ ಮೇಲಿನ ಪಕ್ಕಾಸಿಗೆ ಕಟ್ಟಿ ತೊಟ್ಟಿಲಿನಂತೆ ತೂಗಿಸಿದ ಮೇಲೆಯೇ ಮಗುವಿಗೊಂದು ಅಜ್ಜಿಯ ತೊಟ್ಟಿಲ ಸುಖವಾದ ನಿದ್ದೆ ಪ್ರಾಪ್ತಿಯಾದದ್ದು. ನಿಜವಾಗಿಯೂ ಅವಳ ಸೀರೆಯಲ್ಲಿ ಕಣ್ಣಿಗೆ ಕಾಣದ ಜಾದೂ ಇತ್ತು.
ಮನೆಯ ಬಳಿ ಯಾರೇ ಸೀರೆ ಮಾರಿಕೊಂಡು ಬಂದರೂ ಅವರನ್ನು ಕರೆದು ಮಾತಾಡಸಿ.. ಚೆನ್ನಾಗಿ ಚೌಕಾಸಿ ಮಾಡಿಯೇ ಕೊನೆಗೊಂದು ಸೀರೆ ತೆಗೆದುಕೊಂಡು ಬಿಡುತ್ತಿದ್ದಳು ಅಮ್ಮ.
ಆದರೆ ಅವಳ ಬಳಿ ಎಷ್ಟೇ ಒಳ್ಳೆಯ ಹೊಸ ಸೀರೆಗಳಿದ್ದರೂ ಅವಳಿಗದು ಬೇಡ.ಬರೀಹಳೆಯ ಸೀರೆಗಳನ್ನೇ ಉಡುತ್ತಿದ್ದಳು. ಹೊಸ ಎಲ್ಲಾ ಸೀರೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಕಪಾಟಿನಲ್ಲಿ ಪೇರಿಸಿ ಇಡುತ್ತಿದ್ದಳು.ಮುಂದೆ ಸಹೋದರಿಗೆ ಮಗು ಹುಟ್ಟಿದಾಗ ಅಮ್ಮನ ಸೀರೆಗಳೇ ಮಗುವಿನ ಶುಚಿಯ ಕೆಲಸದ ಬಟ್ಟೆಗಳಾಗಿ ಬಿಟ್ಟವು.
ಮೊದಲ ಸಂಬಳದಲ್ಲಿ ಅಮ್ಮನಿಗೆ ಏನಾದರೂ ಕೊಡಿಸಬೇಕಲ್ಲ.. ಎಂದಾಗ ಮೊದಲು ನನಗೆ ನೆನಪಾಗಿದೇ ಸೀರೆ. ಒಬ್ಬನೇ ಒಂದು ಬಟ್ಟೆ ಅಂಗಡಿಗೆ ಹೋಗಿ ಒಂದು ಒಳ್ಳೆಯ ಸೀರೆಯನ್ನೇ ಕೊಂಡು ಕೊಂಡೆ. ತಂದು ಅಮ್ಮನಿಗೆ ಕೊಟ್ಟೆ..ತಗೋ ಅಮ್ಮ ನನ್ನ ಮೊದಲ ಸಂಬಳದಲ್ಲಿ ನಿನಗೊಂದು ಸೀರೆ.. ಅಂದೆ.
ಚೆನ್ನಾಗಿ ಬೈದಳು, ಇದಕ್ಕೆಲ್ಲ ಯಾಕೆ ಖರ್ಚು ಮಾಡುತ್ತೀಯಾ.. ಬೇಕಾದಷ್ಟು ಸೀರೆಗಳಿವೆ. ಹಣ ಉಳಿಸುವುದನ್ನು ಮೊದಲು ಕಲಿ.. ಅಂದಳು. ಅವಳು ಹಾಗೆಯೇ.. ನನಗೆ ಬೈಯದಿದ್ದರೆ ಅವಳಿಗೆ ನೆಮ್ಮದಿಯಿಲ್ಲ.. ಅವಳ ಕೈಯಿಂದ ಬೈಗುಳ ತಿನ್ನದಿದ್ದರೆ ನನಗಂತು ಜೀವನದಲ್ಲಿ ಸುಖವಿಲ್ಲ. ಅವಳ ಬೈಗುಳವೇ ಅವಳ ಮುಗ್ದ, ಅಮಾಯಕ ಪ್ರೀತಿ. ಏಕೆಂದರೆ ಅವಳಿಗೆ ಮುದ್ದು ಮಾಡಿ ಗೊತ್ತಿಲ್ಲ.
ನನ್ನ ಬಳಿ ಸೀರೆ ಯಾಕೆ ತಂದೆ ನನಗೆ ಬೈದರೂ.. ಆ ನಂತರ ಮನೆಗೆ ಬಂದವರಿಗೆಲ್ಲ ಸೀರೆಯನ್ನು ಖುಷಿ ಖುಷಿಯಿಂದ ತೋರಿಸಿ ಹೇಳುತ್ತಿದ್ದಳು.. ಇದು ನನ್ನ ಮಗ ಕೊಡಿದ ಸೀರೆ ನೋಡಿ.. ಎಂದು.
ಹಲವು ಸಲ ಅದನ್ನೇ ಉಟ್ಟುಕೊಂಡು ಸಮಾರಂಭಗಳಿಗೆ ಹೋದಳು,ಸ್ವಲ್ಪ ಮಟ್ಟಿಗೆ ಅದರಲ್ಲಿಯೇ ಮೆರೆದಳು.ಅಲ್ಲೂ ಕೂಡ ಅದನ್ನು ಎಲ್ಲರಿಗೂ ತೋರಿಸಿ ಹೇಳಿದಳು.. ಇದು ನನ್ನ ಮಗ ಕೊಡಿಸಿದ ಸೀರೆ ಎಂದು.ಅವಳಲ್ಲಿ ಖುಷಿ ಇತ್ತು. ಅವಳ ಖುಷಿಯಲ್ಲಿ ನನ್ನ ಪಾಲಿನ ಖುಷಿ ದ್ವಿಗುಣವಾಗಿತ್ತು.
ಆದರೆ ಆ ನಂತರ ಅವಳು ಆ ಸೀರೆ ಉಡಲೇ ಇಲ್ಲ.. ಒಂದು ದಿನ ಕೇಳಿದೆ, ಅಮ್ಮ ನೀನು ಏಕೆ ಆ ಸೀರೆ ಹೊರಗೆ ಹೋಗುವಾಗ ಉಡುವುದಿಲ್ಲ ಎಂದು.. ಅದಕ್ಕವಳು ಹೇಳಿದಳು ನೀನು ಕೊಡಿಸಿದ ಸೀರೆ ಅಲ್ವಾ, ಹಾಗಾಗಿ ಉಟ್ಟು ಉಟ್ಟು ಹಾಳಾಗಿ ಹೋಗುವುದು ಬೇಡ ಎಂದು ಹಾಗೇ ಜೋಪಾನವಾಗಿ ಎತ್ತಿಟ್ಟಿದ್ದೇನೆ..ಎಂದು ಹೇಳಿದಳು.ಆ ಸೀರೆ ಇನ್ನೂ ಜೋಪಾನವಾಗಿಯೇ ಹಾಗೇ ಇದೆ.
ಅಮ್ಮ ಬದಲಾಗುವುದಿಲ್ಲ.. ಹಳೆಯ ಸೀರೆಯಲ್ಲಿ ಹೊಸ ಕನಸು ಕಾಣುವುದನ್ನು ಅವಳು ನಿಲ್ಲಿಸುವುದು ಕೂಡ ಇಲ್ಲ.
ಅವಳ ಹಳೆಯ ಸೀರೆ,ಅವಳಿಗದು ಬರೀಯ ಸೀರೆ..ಅದರೆ ನನಗದು ಚಿಕ್ಕಂದಿನಿಂದಲೂ ಪ್ರೀತಿ ತೋರುವ,ದಾರಿ ತೋರುವ ಸದಾ ಒಲವ ಮಾಯೆ..ಏಕೆಂದರೆ ಅವಳ ಸೀರೆಯ ತುದಿ ಹಿಡಿದೇ ಇಲ್ಲಿಯವರೆಗೆ ನಡೆದು ಬಿಟ್ಟಿದ್ದೇನೆ ನಾನು..
.....................................................................................
#ಏನೋ_ಒಂದು..
Ab Pacchu
Moodubidire
ಪಚ್ಚು ನಮಸ್ತೆ...ಅರೆ ಈ ನಿಮ್ಮ ಅಮ್ಮ ನನ್ನ ಅಮ್ಮನೂ ಹೌದು...ಆದರೆ ಆಕೆ ನಿಮ್ಮಲ್ಲಿ ತೆರೆದುಕೊಳ್ಳುವ ಹಾಗೇನನ್ನಲ್ಲಿ ತೆರೆದುಕೊಳ್ಳಲೇ ಇಲ್ಲ.ನಿಮಗೊಂದು ವಿಷಯ ಹೇಳುತ್ತೇನೆ...ಈನನ್ನ ಅಮ್ಮ ನನ್ನ ಅಪ್ಪ ಮರಣಿಸಿದಾಗ ನನ್ನನು ತನ್ನ ಗರ್ಭದಲ್ಲಿ ಹೊಟ್ಟುಕೊಂಡಿದ್ದಾಕೆ..ಅಪ್ಪ ಸತ್ತ ಐದು ತಿಂಗಳ ನಂತರ ಹುಟ್ಟಿದ ನನ್ನ ಮೇಲೆ ಅಮ್ಮನಿಗೆ ಪ್ರೀತಿಯೂ ಇತ್ತು ರೋಷವೂ ಇತ್ತು ದ್ವೇಷವೂ ಇತ್ತು ...ಆಕೆ ಇಂದಿನವರೆಗೂ ಈಗಲೂ ಎಲ್ಲರ ಅಮ್ಮನಂತೆ ನನಗೆ ಅಮ್ಮ ಆಗಿರಲಿಲ್ಲ...ಆಗಿಲ್ಲ.ಆಕೆ ನನ್ನಿಂದಾಗಿ ಏನೋ ಕಳಕೊಂಡವಳಂತೆಭಾಸವಾಗುತ್ತಿದ್ದಾಳೆ ನನ್ನಗೆ...ಆದರೆ ನಮ್ಮ ನೆರೆಹೊರೆಯ ಹೆಂಗಸರಿಗೆಲ್ಲ ನಾನು ಅವರು ಹೆತ್ತಿಲ್ಲದ ಮಗನೂ ಆಗಿದ್ದೆ..ಪಕ್ಕಡ್ ಮನೆ ಸಂಜೀವಮ್ಮ ಅವರು ಮಾಡಿದ ಹೊಸರುಚಿಗೆ ನನ್ನ ನಾಲಿಗೆ ಸಾಕ್ಷಿ ಹೇಳಲೇ ಬೇಕು.ಸುಂದರಿ ಆಚಾರ್ದಿ ಅಮ್ಮಂದಿರು ಇಬ್ಬರಿದ್ದರು..ಅವರುಗಳಿಗೆ ಬೆಳಿಗ್ಗೆ ಸಂಜೆ ತಾವು ಮಾಡಿರುವ ವಿಶೇಷ ತಿನಿಸುಗಳನ್ನು ನನಗೆ ತಿನಿಸುವುದರಲ್ಲಿ ಅದೇನು ಆನಂದವೋ? ಅಮ್ಮನ ಗೆಳತಿ ಪಾರ್ವತಿಯಕ್ಕ ತಾಯಿ ಮಕ್ಕಲಿಲ್ಲದಾಕೆಗೆ ನಾನೇ ಮಗನಾಗಿದ್ದೆ. ಹೀಗೆ ನನ್ನ ಬಾಲ್ಯ ಹಲವಾರು ಅಮ್ಮಂದಿರುಗಳೊಂದಿಗೆ...
ReplyDelete