ಮೋಸಗಾರ ಮೇಪ್ಲವರ್

 




ಆಗ ಜಸ್ಟ್ ಭೂಮಿ ಒಂದೇ ಸೃಷ್ಟಿ ಆಗಿತ್ತು. ಮಳೆ, ಮರ, ಕಾಡು ಎನ್ನುವುದು ಯಾವುದೂ ಇರಲಿಲ್ಲ.
ದೇವರು ಪ್ರೆಶ್ ಆಗಿ ಎಲ್ಲವನ್ನೂ ಸೃಷ್ಟಿಸಲು ಶುರು ಮಾಡಿದ.
ದೇವರು  ಮಳೆರಾಯ ನನ್ನು ಹೇಗೆ ಸೃಷ್ಟಿ ಮಾಡಿದರೋ ಹಾಗೆಯೇ ಮೇ ಫ್ಲವರ್(ಗುಲ್ ಮೊಹರ್) ಅನ್ನು ಕೂಡ ಸೃಷ್ಟಿ ಮಾಡಿ ಬಿಟ್ಟರು.
ಹಾಗೇ  ಇಬ್ಬರನ್ನು ಕರೆದು ಒಂದು ನಿಯಮವನ್ನು ವಿಧಿಸಿಬಿಟ್ಟರು,ಹಾಗೆಯೇ ಇಬ್ಬರಿಗೂ ಒಂದು ಖಡಕ್ ವಾರ್ನಿಂಗ್ ಕೂಡ ಕೊಟ್ಟು ಬಿಟ್ಟರು, ಅದು ಏನೆಂದರೆ..

" ಮೇ ಫ್ಲವರ್ ನೀನು ಮೇ ತಿಂಗಳು ಪೂರ್ತಿ ನಳನಳಿಸಬೇಕು, ಆದರೆ ಜೂನ್ ತಿಂಗಳು ಬಂದಕೂಡಲೇ ಸಂಪೂರ್ಣ ಉದುರಿಬಿಡಬೇಕು. ಅದೇ ರೀತಿ ನೀನು ಮಳೆರಾಯ, ಮೇ ತಿಂಗಳು ಮುಗಿಯುವವರೆಗೆ  ತೆಪ್ಪಗೆ ಇರಬೇಕು, ಜೂನ್ ಬಂದೊಡನೆ ಸುರಿದುಬಿಡಬೇಕು..ನೀವು ಇಬ್ಬರೂ ಒಂದೇ ತಿಂಗಳಲ್ಲಿ  ಎಂದಿಗೂ ಒಟ್ಟಿಗೆ ಕಾಣಿಸಿಕೊಳ್ಳುವಂತಿಲ್ಲ, ಆ ತರಹ ಏನಾದರೂ ಆದರೆ ಈ ಭೂಮಿಯಲ್ಲಿ ಮುಂದೆ ಭಯಂಕರ ಕ್ಷಾಮ ಒಂದು ಕಾಣಿಸಿಕೊಳ್ಳಲಿದೆ, ಅದಕ್ಕೆ ನೀವೆ ನೇರ ಕಾರಣವಾಗಲಿದ್ದಿರಿ! "

ಮೇ ಫ್ಲವರ್, ಮಳೆರಾಯ ಇಬ್ಬರೂ ದೇವರ ಈ ಕಂಡಿಷನ್ ಗೆ ಒಪ್ಪಿದರು. ಅಂದಿನಿಂದ ರೆಗ್ಯುಲರ್ ಆಗಿ ಮೇ ಫ್ಲವರ್ ಮೇ ತಿಂಗಳು ಪೂರ್ತಿ ಅರಳಿ ಜೂನ್ ತಿಂಗಳು ಬಂದ ಕೂಡಲೇ ಸಂಪೂರ್ಣ ಉದುರಿ ಮಳೆರಾಯ ನ ಆಗಮನಕ್ಕೆ ದಾರಿ ಮಾಡಿ ಕೊಡುತ್ತಿತ್ತು. ಅದೇ ರೀತಿ ಮಳೆರಾಯ ಕೂಡ ಮೇ ತಿಂಗಳು ಮುಗಿಯುವವರೆಗೆ ಕಾದು,ಜೂನ್ ತಿಂಗಳು ಬಂದಾಗ  ಸುರಿದು ಬಿಡುತ್ತಿದ್ದ. ಈ ರೀತಿ ಇಬ್ಬರೂ ದೇವರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.

ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರಾದರೂ ಕೂಡ ಬೆಳೆಯುತ್ತಾ ಬೆಳೆಯುತ್ತಾ ಇಬ್ಬರಲ್ಲೂ ದಾಯಾದಿ ಮಾತ್ಸರ್ಯ ಎಂಬುದು ಗಾಢವಾಗಿ ಬೆಳೆದುಬಿಟ್ಟಿತ್ತು.
ಅದರಲ್ಲೂ ಮೇ ಫ್ಲವರ್ ಗೆ ತುಂಬಾನೇ ಅಹಂಕಾರ ಬಂದು ಬಿಟ್ಟಿತು. ತಾನು ಎಲ್ಲರಿಗಿಂತಲೂ ತುಂಬಾ ಸುಂದರ ಅದರಲ್ಲೂ ಕೇವಲ ಮಳೆ ಸುರಿಸುವ ತನ್ನ ಸಹೋದರ ನಿಗಿಂತಲೂ ನಾನೇ ಚಂದ, ನನ್ನ ಬಣ್ಣಕ್ಕೆ ಅಂದಕ್ಕೆ ಜನರು ಮರುಳಾಗುತ್ತಾರೆ, ನನ್ನನ್ನು ಎಲ್ಲಾ ಬಗೆಯ ಅಲಂಕಾರಕ್ಕೂ ಬಳಸುತ್ತಾರೆ ಎನ್ನುವ ಅಹಂಕಾರ ಮೇ ಫ್ಲವರ್ ಗೆ ಇತ್ತು, ಹಾಗೆಯೇ ತಾನು ಮಳೆ ಸುರಿಸಿದರೆನೇ ಮೇ ಫ್ಲವರ್ ಬದುಕುವುದು, ಅಂದ ಚಂದವಾಗಿ ನಳನಳಿಸುವುದು ಎಂದು ಮಳೆರಾಯ ಕೂಡ ತಿಳಿದುಕೊಂಡಿತ್ತು.

ಹೀಗಿರಲು ಒಂದು ದಿನ ಆ ಒಂದು ಘಟನೆ ನಡೆಯಿತು. ಹುಟ್ಟು ಅಹಂಕಾರಿ ಯಾದ ಮೇ ಫ್ಲವರ್ ತನ್ನ ಬರ್ತಡೇ ಪಾರ್ಟಿ ಗೆ ಎಲ್ಲರನ್ನೂ ಕರೆದ, ಆದರೆ ಬೇಕಂತಲೇ ತನ್ನ ಸಹೋದರ ಮಳೆರಾಯ ನನ್ನು ಕರೆಯಲಿಲ್ಲ.
ಇದರಿಂದ ಮಳೆರಾಯ ನಿಗೆ ತುಂಬಾನೇ ಅಪಮಾನ ವಾಯಿತು. ಇದಕ್ಕೆ ತಕ್ಕ ಪ್ರತಿಕಾರ ತೀರಿಸಲೇಬೇಕೆಂದು ಮಳೆರಾಯ ನಿರ್ಧರಿಸಿದ.ಅದಕ್ಕಾಗಿ  ಮೇ ತಿಂಗಳು ಬರುವವರೆಗೆ ಕಾಯತೊಡಗಿದ..

ಮೇ ತಿಂಗಳು ಬಂದೇ ಬಿಟ್ಟಿತು. ಮೇ ಫ್ಲವರ್ ಹೂವು ಬಿಟ್ಟು ನಳನಳಿಸತೊಡಗಿತು.ಈ ಬಾರಿ ಎಂದಿಗಿಂತಲೂ ಜಾಸ್ತಿ ವೈಯಾರ ದಿಂದ ಬಳುಕಾಡ ತೊಡಗಿತು.
ಪ್ರತೀಕಾರ ತೀರಿಸಲು ಕಾದಿದ್ದ ಮಳೆರಾಯ ಇದೇ ತಕ್ಕ ಸಮಯ ಎಂದು ಭಾವಿಸಿದ.
ಮೇ ತಿಂಗಳಲ್ಲಿನಲ್ಲಿಯೇ ಮಳೆ ಸುರಿಸಿ, ಮೇ ಫ್ಲವರ್ ನ ಅಂದ ಚಂದ ವನ್ನು ಚಿಂದಿ ಚಿತ್ರಾನ್ನ- ಬೂಂದಿ ಮೊಸರನ್ನ ಮಾಡುವ ಎಂದು ಅಲೋಚಿಸಿದ. ಆದರೆ ಪರಮ ದೈವ ಭಕ್ತನಾದ ಮಳೆರಾಯ ನಿಗೆ ದೇವರು ವಿಧಿಸಿದ ನಿಯಮ ನೆನಪಾಯಿತು. ಆತನಿಗೆ ದೇವರ ನಿಯಮವನ್ನು ಉಲ್ಲಂಘಿಸಲು ಇಷ್ಟವಿರಲಿಲ್ಲ. ಹಾಗಾಗಿ ಈಗ ಏನು ಮಾಡುವುದೆಂದು ಆತನಿಗೆ ದಿಕ್ಕೆ ತೋಚಲಿಲ್ಲ.

ಮಳೆರಾಯನಿಗೆ ಆದ ಅವಮಾನ ಆತನ ಕ್ಲೋಸ್ ಫ್ರೆಂಡ್ ಗಾಳಿರಾಯನಿಗೆ ಗೊತ್ತಿತ್ತು. ಗಾಳಿರಾಯನಿಗೂ ಅಹಂಕಾರಿ ಮೇ ಫ್ಲವರ್ ಅಂದರೆ ಇಷ್ಟವಿರಲಿಲ್ಲ. ಆತ ಮಳೆರಾಯನಿಗೆ ಸಹಾಯ ಮಾಡಲು ನಿರ್ಧರಿಸಿದ.

ಗಾಳಿರಾಯ ಬಂದು ಮಳೆರಾಯನಿಗೆ ತನ್ನ ಐಡಿಯಾ ವನ್ನು ವಿವರಿಸಿದ. ಆ ಐಡಿಯಾ ಮಳೆರಾಯ ನಿಗೂ ಇಷ್ಟ ಆಯಿತು. ಏಕೆಂದರೆ ಗಾಳಿರಾಯನಿಗೆ ಅಲ್ಲಿಯತನಕ ದೇವರ ಯಾವ ನಿಯಮಗಳು ಅನ್ವಯ ಆಗುತ್ತಿರಲಿಲ್ಲ.
ಅವರ Plan ನಂತೆಯೇ ಗಾಳಿರಾಯ ಜೋರಾಗಿ ಬೀಸ ತೊಡಗಿದ.. ಎಲ್ಲಾ ಮೇ ಫ್ಲವರ್ ಹೂವುಗಳು ಗಾಳಿಯ ರಭಸಕ್ಕೆ ಕಿತ್ತುಕೊಂಡು ಹೋದವು. ಇಡೀ ಮೇ ಫ್ಲವರ್ ಮರ ಹೂವುಗಳಿಲ್ಲದೇ ಬೋಳಾಗಿ ಬೆತ್ತಲಾಯಿತು!

ತನಗಾದ ಅವಮಾನದಿಂದ ಬೆಂದು ಮೇ ಫ್ಲವರ್ ನೊಂದು ಹೋಯಿತು. ಮೇ ಫ್ಲವರ್ ಕೂಡ ಮಳೆರಾಯ ನ ಮೇಲೆ ಪ್ರತೀಕಾರ ತೀರಿಸಿಯೇ ಸಿದ್ಧ ಎಂದು ಶಪಥ ಮಾಡಿತು. ಅದಕ್ಕಾಗಿ ಅದು ಮುಂದಿನ ವರ್ಷದ ಜೂನ್ ತಿಂಗಳ ತನಕ ಕಾಯಲು ನಿರ್ಧರಿಸಿತು!

ವರ್ಷ ಕಳೆಯಿತು. ಮೊದಲು ಮೇ ತಿಂಗಳು ಬಂತು, ಮೇ ಫ್ಲವರ್ ಅರಳಿತು. ಮಳೆರಾಯ ಈ ಬಾರಿ ತನ್ನ ಗೆಳೆಯ ಗಾಳಿರಾಯನ ಮೂಲಕ ಮೇ ಫ್ಲವರ್ ಗೆ ಯಾವುದೇ ಉಪದ್ರ ಮಾಡಲಿಲ್ಲ. ಮೇ ತಿಂಗಳು   ಕಳೆಯಿತು. ಜೂನ್ ತಿಂಗಳು ಬಂತು.

ಇದೇ ಸರಿಯಾದ ಸಂದರ್ಭ ಎಂದು ನಿರ್ಧರಿಸಿದ ಮೇ ಫ್ಲವರ್ ದೇವರ ನಿಯಮವನ್ನು ಗಾಳಿಗೆ ತೂರಿ ಬಿಟ್ಟಿತ್ತು, ಮೇ ತಿಂಗಳಲ್ಲಿನಲ್ಲಿಯೇ ಸಂಪೂರ್ಣ ಉದುರಿ ಹೋಗಬೇಕಿದ್ದ ಹೂವು ಬೇಕಂತಲೇ ಜೂನ್ ನಲ್ಲೂ ಅರಳತೊಡಗಿತು.ಮೇ ಫ್ಲವರ್ ಗೂ ಕೂಡ ಗೊತ್ತಿತ್ತು ದೇವರ ಪರಮ ಭಕ್ತನಾಗಿದ್ದ ಮಳೆರಾಯ ಖಂಡಿತವಾಗಿಯೂ ದೇವರ ನಿಯಮವನ್ನು ಮುರಿಯಲಾರ, ಹಾಗಾಗಿ ನಾನು ಸಂಪೂರ್ಣ ಉದುರದೇ ಮಳೆ ಸುರಿಸಲಾರ ಎಂದು..
ಮಳೆರಾಯನಿಗೂ ಏನೂ ತೋಚದಂತಾಯಿತು..ಆತ ಏನೂ ಮಾಡಲಾಗದೇ ಮೇ ಫ್ಲವರ್ ಸಂಪೂರ್ಣ ಉದುರುವುದನ್ನೇ ಕಾಯತೊಡಗಿದ.

ದಿನಗಳು ಉರುಳತೊಡಗಿತು.. " ದಿನ ಒಂದು, ಎರಡು, ಮೂರ್ನಾಲ್ಕು ಕಳೆಯಿತಾಗ ವಾರ..."

ಮೇ ಫ್ಲವರ್ ಗೆ ತಾನು ಏನು ಮಾಡಿದ್ದೆನೆ ಎಂಬ ಅರಿವೇ ಇರಲಿಲ್ಲ.. ದೇವರಿಗೆ ಸಿಟ್ಟು ಬಂತು, ದೇವರು ಉಗ್ರನಾದ, ಕೂಡಲೇ ಪ್ರತ್ಯಕ್ಷನಾದ, ಮೇ ಫ್ಲವರ್ ಗೆ ಶಾಪ ನೀಡಿದ, "ನೀನು ನನ್ನ ನಿಯಮ ಮುರಿದ ಕಾರಣಕ್ಕಾಗಿ ಇನ್ನು ಮುಂದೆ ನಿನ್ನ ಅಂದ ಚಂದ ಎಲ್ಲವೂ ಅಲಂಕಾರ ಕ್ಕೆ ಬಳಸುವುದಕ್ಕಿಂತ ಹೆಚ್ಚಾಗಿ.. ಜನರ ಕಾಲಿನಡಿಯಲ್ಲಿ  ಬಿದ್ದು ಮಣ್ಣಾಗಿ ಹೋಗಲಿ.."

ಅಂದಿನಿಂದ ಮೇ ಫ್ಲವರ್ ಗೆ ಶಾಪ ತಟ್ಟಿತ್ತು. ಬೀದಿ ಬದಿಯಲ್ಲಿ ರೋಡ್ ಬದಿಯಲ್ಲಿಯೇ ಹೆಚ್ಚಿನ ಹೂವು ಗಳು ಬಿದ್ದು ಹೊರಳಾಡತೊಡಗಿತು.ಹಾಗೆಯೇ ದೇವರ ನಿಯಮ ಮುರಿದ ಕಾರಣಕ್ಕಾಗಿ, ದೇವರೇ ಮೊದಲೇ ಹೇಳಿದಂತೆ  ಕ್ಷಾಮ ನಿಧಾನವಾಗಿ ಭೂಮಿಯನ್ನು ಆವರಿಸತೊಡಗಿತು. ವರ್ಷದಿಂದ ವರ್ಷಕ್ಕೆ ಮಳೆ ಬೆಳೆ ಕಡಿಮೆ ಆಯಿತು.. ಬರಗಾಲ, ದಾರಿದ್ರ್ಯ ಹೆಚ್ಚಾಗತೊಡಗಿತು.

ಕೇವಲ ಬರ್ತಡೇ ಗೆ ಕರೆಯಲಿಲ್ಲ ಎಂಬ ಕಾರಣಕ್ಕೆ ಶುರುವಾದ ಶೀತಲ ಸಮರದಿಂದಾಗಿ, ಭೂಮಿ ಗೆ ಈ ಪರಿಯ ಕ್ಷಾಮ ವೊಂದು ಅಂದು ಅಪ್ಪಳಿಸಿತ್ತು.. ಅದು ಇಂದಿಗೂ ಮುಂದುವರಿದಿದೆ.

ಹೇಗೊ ಶಾಪಗ್ರಸ್ತ ನಾಗಿದ್ದೆನೆ ಅಲ್ಲಾ ಎಂದು, ಅಂದಿನಿಂದ ಇಲ್ಲಿಯ ತನಕ ಕೂಡ ಮೇ ಫ್ಲವರ್ ದೇವರ ನಿಯಮವನ್ನು ಅನುಸರಿಸಲೇ ಇಲ್ಲ..!!

ಈ ಜೂನ್ ತಿಂಗಳಲ್ಲಿ ಬಸ್ಸಿನಲ್ಲಿ ಎಲ್ಲಾದರೂ ಹೋಗುವಾಗ ಇನ್ನೂ ಕೂಡ ಉದುರದೇ ಅರಳಿ ನಿಂತಿರುವ ಮೇ ಫ್ಲವರ್ ಅನ್ನು ನೋಡುವಾಗ.. ನನಗೆ ಈ ಮೇ ಫ್ಲವರ್ - ಮಳೆರಾಯ ನ ಕಥೆ ಯೇ ನೆನಪಾಗುತ್ತದೆ,ಒಂದು ಕಡೆ ವೇದನೆ ಯಾದರೆ  ಸರಿಯಾದ ಸಮಯಕ್ಕೆ ಮಳೆ ಬರದೇ ಇರಲು ಇವರಿಬ್ಬರೇ ಕಾರಣ  ಅದರಲ್ಲೂ ಅಹಂಕಾರಿ ಮೇ ಫ್ಲವರ್ ನೇರ ಕಾರಣ ಎಂದು ಗೊತ್ತಾಗುವಾಗಲೆಲ್ಲ ಅತೀವ ಸಿಟ್ಟು ಕೂಡ ಬರುತ್ತದೆ!
ಆವಾಗಲೆಲ್ಲ ಅಲ್ಲೇ ಬಸ್ ನಿಂದ ಇಳಿದು ಮೇ ಫ್ಲವರ್ ಗೆ ಕಪಾಳಮೋಕ್ಷ ಮಾಡಿಬಿಡಕೆಂದು ಅನಿಸುತ್ತದೆ. ಆದರೆ ಹಾಗೆ ನಾನು ಮಾಡುವುದಿಲ್ಲ. ಏಕೆಂದರೆ ನಾನು ಶಾಂತಿ ಪ್ರೀಯ, ಕಾನೂನನ್ನು ಕೈಗೆತ್ತಿಕೊಳ್ಳುವ  ಜನ ನಾನಲ್ಲ ..😌

     " #ಮೋಸಗಾರ_ಮೇಪ್ಲವರ್ "

...................................................................

story by - AB Pacchu,
                 Moodbidri
                 Mangalore(D.K)



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ