ಯಾರು ಶ್ರೇಷ್ಟ..?

 

ಮೊನ್ನೆ ಒಬ್ಬರು ಪರಿಚಯದವರು ಸಿಕ್ಕಿದರು. ಹೀಗೆ ಮಾತಾಡುತ್ತಾ ಅವರು ಕೇಳಿದರು " ನೀವು ದಿನಾ ಮಹಾಭಾರತ ನೋಡುತ್ತೀರಿ ಅಲಾ,ನಿಮಗೆ ಮಹಾಭಾರತ ಅಂದರೆ ಅಷ್ಟೊಂದು ಇಷ್ಟವೇ?"


"ಹೌದು,ತುಂಬಾನೇ ಇಷ್ಟ ,ಜಗತ್ತಿನ ಶ್ರೇಷ್ಟ ಕೃತಿ ಅಂದರೆ ಅದೇ  ಅಲ್ಲವೇ. ಅವಕಾಶ ಇದ್ದಾಗ ಓದಬೇಕು, ಕೇಳಬೇಕು ಇಲ್ಲವೇ ಈ ರೀತಿ ದೃಶ್ಯಕಾವ್ಯ ವಾಗಿ ಬಂದಾಗ ನೋಡಬೇಕು.ಯಾಕೆ ನಿಮಗೆ ಮಹಾಭಾರತ ಇಷ್ಟ ಆಗುವುದಿಲ್ಲವಾ?.. " ಕೇಳಿದೆ. 


ಅದಕ್ಕವರು ಏನು ಹೇಳಿದರು ಎಂದರೆ - " ಈ ಮಹಾಭಾರತ ದಲ್ಲೆಲ್ಲ ಕೃಷ್ಣನನ್ನು ತುಂಬಾ ವೈಭವೀಕರಿಸಲಾಗುತ್ತದೆ,ನನಗೆ  ಕೃಷ್ಣ ಅಂದರೆ ಇಷ್ಟ ಆಗುವುದಿಲ್ಲ, ಅವ ಕಪಟ ನಾಟಕ ಸೂತ್ರಧಾರಿ ಕೂಡ ಹೌದು.ನನಗೆ ಮಹಾದೇವ ಅಂದರೆ ತುಂಬಾ ಇಷ್ಟ.ನಾನು ಶಿವನ ಪ್ಯಾನ್, ಹಾಗಾಗಿ  ಮಹಾಭಾರತ ನನ್ನನ್ನು ಅಷ್ಟೇನು ಆಕರ್ಷಿಸುವುದಿಲ್ಲ..." ಎಂದು ಹೇಳಿಬಿಟ್ಟರು. 


ನನಗೆ ನಾನೇ ಪ್ರಶ್ನೆ ಕೇಳಿಕೊಂಡೆ. ಅಲಾ,ಮಹಾಭಾರತದ ಕಥಾ ನಾಯಕ ಎಂದೇ ಹೇಳಬಹುದಾದ ಕೃಷ್ಣನನ್ನು ಮಹಾಭಾರತದಲ್ಲಿ ವೈಭವೀಕರಿಸದೇ ಮತ್ತೆ ಯಾರನ್ನು ವೈಭವೀಕರಿಸಬೇಕಾಗಿತ್ತು?


ನನಗೆ ಅವರಿಗೆ ಮಹಾದೇವ ಇಷ್ಟ ಎಂದು ಹೇಳಿದ್ದು ಒಂಚೂರು ಬೇಜಾರು ಅನ್ನಿಸಲಿಲ್ಲ.ಖುಷಿಯೇ ಆಯಿತು.ಆದರೆ ಅವರಿಗೆ ಮಹಾದೇವ ಇಷ್ಟ ಎಂಬ ಕಾರಣಕ್ಕೆ ವಾಸುದೇವ ಶ್ರೇಷ್ಟ ನಲ್ಲ ಎಂಬ ಅವರ ಮನಸ್ಥಿತಿ ನನಗೆ ಹಿಡಿಸಲಿಲ್ಲ.ನಾನು ಅವರಿಗೆ ವಿವರಿಸಲು ಹೋದೆ. ನೋಡಿ ನೀವು ಹಾಗೆ ಹೇಳಿದರೆ ತಪ್ಪಾಗುತ್ತದೆ ಅಲ್ಲವೇ.. ಎಂದು ತಿಳಿಸಲು ಹೋದರೆ ಅವರು ಕೇಳಲು ತಯಾರಿಲ್ಲ.


ಇದೊಂದು ಮನಸ್ಥಿತಿಯೇ ನನಗೆ ನಮ್ಮ ಧರ್ಮದಲ್ಲಿ ಯಾವಾಗಲೂ ಸಹ್ಯ ಅಂತ ಅನ್ನಿಸುವುದೇ ಇಲ್ಲ.ನೋಡಿ ನಿಮಗೆ ಕೃಷ್ಣ ಇಷ್ಟ ಎಂದರೆ ಖಂಡಿತವಾಗಿಯೂ ಆತನನ್ನು ಎಷ್ಟು ಬೇಕಾದರೂ ಆರಾಧನೆ ಮಾಡಿ, ಆದರೆ ಆ ಕಾರಣಕ್ಕಾಗಿ ಶಿವ ಶ್ರೇಷ್ಟನಲ್ಲ ಎಂದು ಹೇಳುವುದು ಎಷ್ಟು ಸರಿ?


ಅದೇ ರೀತಿ ನಿಮಗೆ ಮಹಾದೇವನೇ ಪರಮ ದೈವ ಇರಬಹುದು, ಅವನನ್ನು ಅನುದಿನವೂ ಸ್ತುತಿಸಿ,ಆದರೆ ನಿಮಗೆ ಶಿವ ಇಷ್ಟ ಎಂಬ ಕಾರಣಕ್ಕಾಗಿ ವಾಸುದೇವ ಶ್ರೇಷ್ಟನಲ್ಲ ಎಂದು ಹೇಳುವುದು ಕೂಡ ಎಷ್ಟು ಸರಿ ?


ಇದು ನಮ್ಮ ಅಹಂಕಾರ, ಅಜ್ಞಾನ ವನ್ನು ತೋರಿಸುತ್ತದೆಯೇ ಹೊರತು ಬೇರೆ ಏನನ್ನೂ ಅಲ್ಲ. ಅದರಿಂದ ನಾವೇ ಚಿಕ್ಕವರಾಗುವುದು,ದೇವರುಗಳಲ್ಲ!



ಕೆಲವರಂತು ಮಹಾಭಾರತದಲ್ಲಿ ವೈಷ್ಣವ ಪಂಥವನ್ನು ಮಾತ್ರ ಎತ್ತಿ ಹಿಡಿಯಲಾಗಿದೆ ಎನ್ನುವಷ್ಟರ ಮಟ್ಟಿಗೆ ಕೂಡ ಹೋಗಿ ಬಿಡುತ್ತಾರೆ.ಮಹಾಭಾರತದಂತಹ ನಮ್ಮ ನೆಲದ ಶ್ರೇಷ್ಟ ಕೃತಿಯನ್ನೂ ಕೂಡ  ಶೈವ ವೈಷ್ಣವ ಎಂಬ ಭೂತಗನ್ನಡಿಯಲ್ಲಿ ನೋಡಲು ಕೆಲವರಿಗೆ ಅದು ಹೇಗೆ ಮನಸ್ಸು ಬರುತ್ತೋ!


ಹಾಗೇ ನೋಡಲು ಹೋದರೆ ಸ್ವತಃ ಹರಿ ಮತ್ತು ಹರರ ನಡುವೆ ಯಾವತ್ತೂ ಬೇಧ ಎಂಬುವುದೇ ಇರಲಿಲ್ಲ.ಮಹಾಭಾರತ ಕಥೆ,ರಾಮಾಯಣ ಕಥೆಗಳಲ್ಲೂ ಕೂಡ ಸ್ವತಃ ರಾಮ ಆಗಲಿ ಕೃಷ್ಣ ಆಗಲಿ ಶಿವನನ್ನೇ ಅತಿಯಾಗಿ ಆರಾಧಿಸುತ್ತಿದ್ದರು,ಅವನಿಗೆಯೇ ಅತಿಯಾದ ಪ್ರಾಮುಖ್ಯತೆ ಕೂಡ ಕೊಟ್ಟಿದ್ದರು. ರಾಮಾಯಣ ದಲ್ಲಿ ರಾಮ, ಸೀತೆ, ಅಷ್ಟೇಕೇ ಸ್ವತಃ ರಾವಣ ಕೂಡ ಶಿವನದ್ದೇ ಭಕ್ತರಾಗಿದ್ದರು.


ಮಹಾಭಾರತದಲ್ಲಿ ಸ್ವತಃ ಕೃಷ್ಣ ನೇ ಪಾಂಡವರಿಗೆ ಕಷ್ಟ ಬಂದಾಗಲೆಲ್ಲ ಮಹಾದೇವನ  ಮೊರೆ ಹೋಗಲು ಹೇಳುತ್ತಿದ್ದ.ಇನ್ನು ಶಿವನ ಕಥೆಗಳಿಗೆ ಬಂದರೂ ಕೂಡ ಶಿವ ಆಗಲಿ ಪಾರ್ವತಿ ಆಗಲಿ ಅತಿಯಾಗಿ ಆದರಿಸುತಿದ್ದದ್ದು ಹರಿಯನ್ನೇ. ಹರ ಹರಿಯಿಂದಲೇ ಅಯ್ಯಪ್ಪ ಎನ್ನುವ ಕಥೆಯು ಕೂಡ ನಮ್ಮಲ್ಲಿ ಇದೆ. 


ಶಿವ ಆಗಲಿ ವಿಷ್ಣು ಆಗಲಿ ಇಬ್ಬರ ಕಥೆಗಳಲ್ಲೂ ಒಬ್ಬೊರಿಗೊಬ್ಬರು  ಆದರ್ಶಪ್ರಾಯರೇ ಆಗಿದ್ದರು.ಎಂದಿಗೂ ಅವರಿಬ್ಬರು ಪರಸ್ಪರ ಜಗಳಮಾಡಿಕೊಂಡ ಉದಾಹರಣೆಗಳೇ ಇಲ್ಲ. ಆದರೆ ಅವರಿಬ್ಬರಿಗಿಂತಲೂ ನಾವು ನಂಬಿದ ದೇವರುಗಳು ಶ್ರೇಷ್ಠ ಅಂತ ಜಗಳ ಮಾಡಿಕೊಂಡವರು ಯಾವತ್ತೂ ಅವರ ಅನುಯಾಯಿಗಳೇ.ಇದೇ ಬೇಜಾರ್ ಆಗುವುದು.


ಅದರಲ್ಲೂ ಅತೀಯಾಗಿ ಬೇಜಾರು ಆಗುವುದು ಯಾವುದು ಎಂದರೆ ಈ ಮಠಾಧೀಶರುಗಳು ಸ್ವಾಮೀಜಿ ಗಳು ಎಂದು ಅನ್ನಿಸಿಕೊಂಡವರು ಕೆಲವರು ಕೆಲವೊಮ್ಮೆ ತುಂಬಾ ಚಿಕ್ಕವರಾಗುವುದು ಕೂಡ ಇದೆ. ತಮ್ಮ ಭಕ್ತಗಣದೆದುರು ಅವರು ತಮ್ಮ ಇಷ್ಟ ದೇವರನ್ನು ಅತಿಯಾಗಿ ವೈಭವೀಕರಿಸಲು ಹೋಗಿ ಶಿವನನ್ನೋ, ಕೃಷ್ಣ ನನ್ನು ಕಮ್ಮಿ ಎಂದು ನೇರವಾಗಿ ಹೇಳುವುದಿದೆ. ನಮ್ಮ ಶಿವ ಶ್ರೇಷ್ಟ, ಕೃಷ್ಣ  ಶ್ರೇಷ್ಟ ಅಂತ ಹೇಳಿದರೂ ತಪ್ಪಾಗಲಾರದು, ಆದರೆ ಮಾತಿನ  ಓಘದಲ್ಲಿ,ಆ ಪ್ರೀತಿಯ ರಭಸದಲ್ಲಿ.. ಜಗತ್ತಿನಲ್ಲಿ ಶಿವನೇ ಎಲ್ಲರಿಗಿಂತ ಶ್ರೇಷ್ಟ ಬಾಕಿ ಎಲ್ಲವೂ ನಿಕೃಷ್ಟ.. ಇಲ್ಲವೇ ವಾಸುದೇವ ನೇ ಜಗತ್ತಿನಲ್ಲಿ ಎಲ್ಲರಿಗಿಂತ ಅಗ್ರಗಣ್ಯ ಬಾಕಿ ಎಲ್ಲವೂ ನಗಣ್ಯ.. ಎಂದು ಹೇಳಿದರೆ ಅದು ಎಷ್ಟು ಸರಿ..! 


ಇಂತಹ ಮಾತುಗಳನ್ನು ಕೇಳಿಸಿಕೊಂಡ ನಮ್ಮ ಭಕ್ತರು ಅದನ್ನೇ ನಂಬುತ್ತಾರೆ, ಶಿವ ಇಷ್ಟ ಆಗದವರ ಬಳಿ ಮಾತಿಗೆ ಇಳಿಯುತ್ತಾರೆ. " ಓಂ ನಮಃ ಶಿವಾಯ ಸರ್ವಾಯ ದೇವ ದೇವಾಯ ವಹಿ ನಮಃ..". ನಮ್ಮ ಮಹಾದೇವ ದೇವರ ದೇವ,ಪರಶಿವನಿಗಿಂತ ದೊಡ್ಡವ ಯಾರು ಇಲ್ಲ, ಅವನಿಗೆ ಆದಿ ಇಲ್ಲ, ಅಂತ್ಯ ಇಲ್ಲ. ಅವನ ಮೂರನೇ ಕಣ್ಣಿನ ಎದುರು ನಿಲ್ಲುವಷ್ಟು ಸಾಮರ್ಥ್ಯ ವೂ ಯಾರಲ್ಲೂ ಇಲ್ಲ. ಅವನು ಪ್ರಳಯಕಾಲದ ರುದ್ರ, ಭಕ್ತರು ಬೇಡಿದ್ದು ಕೊಡುವ ಭಕ್ತ ಪ್ರೀಯ, ಸುಲಭವಾಗಿ ಒಲಿಯುವವ, ಅವನು ಜಗತ್ ರಕ್ಷಕ, ಅದಕ್ಕಾಗಿ ಹಾಲಹಲ ಕುಡಿದ ನೀಲಕಂಠ, ಹೀಗೆ ಹೇಳುತ್ತಾ ಹೋಗುತ್ತಾರೆ... ಖಂಡಿತವಾಗಿಯೂ ಎಲ್ಲವೂ ಸತ್ಯ. ಆದರೆ ಅಷ್ಟು ಹೇಳಿದ ಮೇಲೆ ಅವರ ಮನಸ್ಸು ತಣಿಯುವುದಿಲ್ಲ. ನಮ್ಮ ಶಿವ ತುಂಬಾ ಸರಳ, ಭಸ್ಮ ಪ್ರೀಯ,ಅವನನ್ನು ಒಲಿಸಲು ಕೇವಲ ಬಿಲ್ವಾ ಪತ್ರೆಯೊಂದೇ ಸಾಕು,ಆದರೆ ನಿಮ್ಮ ಕೃಷ್ಣ ಅದೆಂತಹ ಕಪಟಿ, ಅವನಿಗೆ ಅದೆಷ್ಟು ಅಲಂಕಾರ ಬೇಕು.. ಅದಕ್ಕಾಗಿಯೇ  ನನಗೆ ಶಿವನೇ ಇಷ್ಟ, ಕೃಷ್ಣ ಅಂದರೆ ಅಷ್ಟಕಷ್ಟೇ ಎಂದು ಹೇಳಿಬಿಡುತ್ತಾರೆ!


ಇಷ್ಟು ಕೇಳಿದ ಮೇಲೆ ಹರಿ ಪ್ರೀಯನೂ ಸುಮ್ಮನೆ ಕೂರುತ್ತಾನೆಯೇ,ಅವನು ಕೂಡ ಶುರು ಮಾಡುತ್ತಾನೆ." ತೇನ ವಿನಾ ತೃಣಮಪಿ ನ ಚಲತಿ.." ಹರಿಯ ಪ್ರೇರಣೆ ಇಲ್ಲದೇ ಈ ಜಗತ್ತಿನಲ್ಲಿ ಒಂದು ಹುಲ್ಲು ಕಡ್ಡಿಯೂ ಅಚೆ ಈಚೆ ಅಲುಗಾಡಲು ಸಾಧ್ಯವೇ ಇಲ್ಲ, ಏನೇ ಪೂಜೆ ಮಾಡಿದರೂ, ಯಾರಿಗೆ ಪೂಜೆ ಮಾಡಿದರೂ ಕೊನೆಯಲ್ಲಿ ಎಲ್ಲವೂ ಕೇಶವನನ್ನೇ ಸೇರುವುದು. ಹಿಂದೂ ಧರ್ಮದ ಶ್ರೇಷ್ಟ ಗ್ರಂಥ ಭಗವದ್ಗೀತೆಯನ್ನು ಜಗತ್ತಿಗೆ  ಕೊಟ್ಟದ್ದು ಯಾರು ಎಂದು ಗೊತ್ತಿಲ್ಲವೇ.... ಹೌದು ಇದು ಕೂಡ ಎಲ್ಲವೂ ಸತ್ಯವೇ. ಆದರೆ ಇವರಿಗೂ ಅಷ್ಟಕ್ಕೆ ಮುಗಿಸಲು ಮನಸ್ಸಿಲ್ಲ. ಮುಂದುವರಿದು ಹೇಳುತ್ತಾರೆ ತ್ರಿಮೂರ್ತಿ ಗಳಲ್ಲಿ ಹರಿಯೇ ಸರ್ವೋತ್ತಮನು. ನಿಮ್ಮ ಶಿವನಂತೆ ಅಲ್ಲ ನಮ್ಮ ವಿಷ್ಣು,ಕೇವಲ ಧ್ಯಾನ ತಪಸ್ಸು ಅಂತ ಕುಳಿತುಕೊಳ್ಳಲಿಲ್ಲ.ಧರ್ಮ ಸ್ಥಾಪನೆಗಾಗಿ ಲೋಕ ಕಲ್ಯಾಣಕ್ಕಾಗಿ ಯುಗ ಯುಗಗಳಲ್ಲೂ  ಅವತಾರ ಎತ್ತಿದ, ಕಷ್ಟ ಪಟ್ಟ... ನೀವು ಹೇಳುವ ಹಾಗೆ ಅಲಂಕಾರ ಪ್ರೀಯ ಆಗಿರಬಹುದು, ಆದರೆ ಬರೀ ಒಂದು ತುಳಸಿ ತುದಿ ಇದ್ದರೆ ಸಾಕು ನಮ್ಮ ಭಗವಂತ ನನ್ನು  ಪ್ರಸನ್ನಗೊಳಿಸಿ ಬಿಡಬಹುದು, ಕುಚೇಲ ಬರೀ ಅವಲಕ್ಕಿಯಿಂದಲೇ ಸಂತೋಷಗೊಳಿಸಿ ಬಿಟ್ಟ...ಅದಕ್ಕಾಗಿ ಹರಿಯೇ ಶ್ರೇಷ್ಟ, ಶಿವ ಅಂದರೆ ಅಷ್ಟಕಷ್ಟೇ ಎಂದು ಹೇಳಿಬಿಡುತ್ತಾರೆ!


ಇಬ್ಬರ ವಾದದಲ್ಲೂ ಅವರಿಬ್ಬರ ವಾದದ ನಮ್ಮ ದೇವನೇ ಶ್ರೇಷ್ಟ ಎಂಬ ಅಹಂನ  ಕೊನೆಯ ಕೆಲವು ಸಾಲುಗಳನ್ನು ತೆಗೆದು ಹಾಕಿದರೆ.. ಆ ದೇವರುಗಳ ಸ್ತುತಿಗಳು, ಅವರ ಮಹಿಮೆಗಳು ಕೇಳಲು ಎಷ್ಟೊಂದು ಹಿತ ಅಲ್ಲವೇ.. 😊🙏🏻


ನನಗೆ ವೈಯಕ್ತಿಕವಾಗಿ ವಾಸುದೇವ ಎಂದರೆ ತುಂಬಾನೇ ಇಷ್ಟ.ಉಡುಪಿಯ ಕಡೆಗೋಲು ಕೃಷ್ಣ ಅಂದರೆ ಅಚ್ಚುಮೆಚ್ಚು, ನಮ್ಮೂರಿನ ಗ್ರಾಮ ದೇವರು ಕೂಡ ಗೋಪಾಲಕೃಷ್ಣನೇ.ನಿನ್ನ ಇಷ್ಟ ದೇವರು ಯಾರು ಎಂದು ಯಾರಾದರೂ ಕೇಳಿದರೆ ವಾಸುದೇವ ಅಂತ ಹೇಳಲು ನಾನು ಹಿಂದೆ ಮುಂದೆ ಯೋಚಿಸುವುದೇ ಇಲ್ಲ. ಹಾಗಂತ ಮಹಾದೇವ ಹರಿಗಿಂತ ಶ್ರೇಷ್ಟರಲ್ಲ ಎಂಬ ಭಾವ ನನ್ನಲ್ಲಿ ಇಲ್ಲ. ಟಿವಿಯಲ್ಲಿ ಹರಹರ ಮಹಾದೇವ ಸೀರಿಯಲ್ ಬಂದಾಗ ಈಗ ಮಹಾಭಾರತವನ್ನು ಎಷ್ಟು ಶ್ರದ್ಧೆಯಿಂದ ನೋಡಿದ್ದೆನೋ ಅಷ್ಟೇ ಆಸ್ಥೆಯಿಂದ, ಭಕ್ತಿಯಿಂದ ಅದನ್ನು ಕೂಡ ನೋಡಿದ್ದೆ. 


ಮಂಗಳೂರಿನ ಕದ್ರಿಯ ಮಂಜುನಾಥ ನಲ್ಲಿಗೆ ಹೋಗುವುದೆಂದರೆ ಮಂಗಳೂರಿನ ಯಾವುದೇ ಭಾಗಗಳಿಗೆ ಹೋಗುವುದಕ್ಕಿಂತಲೂ ಅತಿಯಾದ ಖುಷಿ ಕೊಡುತ್ತದೆ. ಅಲ್ಲಿಯ ಆ ಪುಷ್ಕರಣಿಗಳು,ಆ ಪಚ್ಚೆ ಗುಡ್ಡ,ಗುಡ್ಡದ ಮೇಲಿನ ಪಾಂಡವರ ಗುಹೆ,ಗುಡ್ಡದ ಕೆಳಗೆ ಮಂಜಿನಂತೆಯೇ ಹಿತವಾದ ಅನುಭವ ಕೊಡುವ ಆ ಮಂಜುನಾಥ... ಅವನ ಸನ್ನಿಧಿ ಎಂದರೆ ಅದೆಷ್ಟು ಪರಮ ಶಾಂತ. ಆಗಲೂ ಉಡುಪಿಯ ಕೃಷ್ಣನಿಗೆ ನನ್ನೊಳಗೆ ಒಂದು ಜಾಗವಿದೆ. ಉಡುಪಿಯ ಪೊಡವಿಗೊಡೆಯನನ್ನು ನೋಡಲು ಹೋದಾಗಲೆಲ್ಲ  ಚಂದ್ರಮೌಳೀಶ್ವರ ನನ್ನು ನೋಡದೇ ಬರಲು ಮನಸ್ಸು ಬರುವುದೇ ಇಲ್ಲ. 


ಹೇಗೆ ಇಷ್ಟದ "ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ, ರಾಮ ನಾರಾಯಣಂ ಜಾನಕಿ ವಲ್ಲಭಂ.." ಪದೇ ಪದೇ ಕೇಳುತ್ತೇನೋ ಹಾಗೆಯೇ  "ಕರ್ಪೂರ ಗೌರಂ ಕರುಣಾವತಾರಂ

ಸಂಸಾರ ಸಾರಂ ಭುಜಗೆಂದ್ರ ಹಾರಂ" ಕೂಡ ಮರೆಯದೇ ಕೇಳುತ್ತಲೇ ಇರುತ್ತೇನೆ. 


ನಮಗೆ ಒಬ್ಬೊಬ್ಬರಿಗೆ ಒಂದೊಂದು ದೇವರು ಇಷ್ಟ. ಕೆಲವರಿಗೆ ಮಹಾದೇವ,ಇನ್ನು ಕೆಲವರಿಗೆ ರಾಮ, ಕೃಷ್ಣ, ಗಣಪ, ಸುಬ್ರಹ್ಮಣ್ಯ, ಆಂಜನೇಯ, ಮಾತೆ ಆದಿಶಕ್ತಿ, ಪಾರ್ವತಿ.... ನಮ್ಮ ಸೌಭಾಗ್ಯ ನೋಡಿ. ನಮಗೆ ದೇವರಲ್ಲೂ ಕೂಡ ನಮಗೆ ಬೇಕಾದ ದೇವರನ್ನು  ಆಯ್ಕೆ ಮಾಡಲು ಅದೆಷ್ಟು ಅವಕಾಶ ಇದೆ. ಮುಕ್ಕೊಟ್ಟಿ ದೇವರುಗಳು ಇದ್ದಾರೆ ಎನ್ನುವ ಪ್ರತೀತಿ ಬೇರೆ ಇದೆ. ಏನೇ ಇರಲಿ ನಿಮ್ಮ ಇಷ್ಟದ ದೇವರನ್ನು ಮನಸಾರೆ ಭಜಿಸಿ ಪೂಜಿಸಿ ಆದರೆ ಅದರ ರಭಸದಲ್ಲಿ ಮತ್ತೊಂದು ದೇವರನ್ನು ಚಿಕ್ಕದು ಮಾಡಿ ತೋರಿಸಲು ಮುಂದಾಗ ಬೇಡಿ.ಆವಾಗ ನೀವೇ ಚಿಕ್ಕವರಾಗುವುದು. 


ಅದರಲ್ಲೂ  ನಾಯಕ ನಟಿಯರಿಗೆ ಕ್ರೀಡಾ ಪಟುಗಳಿಗೆ, ಸೆಲೆಬ್ರೆಟಿಗಳಿಗೆ ಮಾತ್ರ ನಮ್ಮಲ್ಲಿ ಪ್ಯಾನ್ ಅಂತ ಇರುವುದು. ನಾನು ಈ ದೇವರ ಪ್ಯಾನ್ ಅಂತ ಹೇಳುವುದಕ್ಕಿಂತಲೂ ನಾನು ಆ ದೇವರ ಭಕ್ತ ಅಂತ  ಹೇಳುವುದನ್ನು ಕೇಳಲಿಕ್ಕೆ ಹೆಚ್ಚು ಹಿತವಾಗಿರುವುದು.


ಹೇಗೆ ಕೃಷ್ಣ ಜನ್ಮಾಷ್ಟಮಿ ಯ ಕೊಟ್ಟಿಗೆ, ಮೂಡೆ ಗಳನ್ನು ನಾವು ತಿನ್ನಲು ಇಷ್ಟಪಡುತ್ತೆವೆಯೋ ಹಾಗೆಯೇ ಶಿವನ ನೈವೇದ್ಯವಾಗಲಿ, ಹಾಲಿನ ಪಾಯಸವಾಗಲಿ ಸಿಕ್ಕಿದಾಗ ತಪ್ಪದೇ  ಸೇವಿಸಲು ನಾವೆಲ್ಲರೂ ಇಷ್ಟಪಡುತ್ತೆವೆ. ಕೆಲವರಿಗೆ ಧರ್ಮಸ್ಥಳದ ಮಂಜುನಾಥ ನ ಬೆಲ್ಲಕಾಯಿ ಪ್ರಸಾದ ಇಷ್ಟ ಆದರೆ ಇನ್ನು ಕೆಲವರಿಗೆ ತಿರುಪತಿ ತಿಮ್ಮಪ್ಪನ ಆ ಸ್ವಾದದ ಆ ದೊಡ್ಡ ಲಡ್ಡು  ಇಷ್ಟವಾಗುತ್ತದೆ.ನೋಡಿ ದೇವರು ಮಾತ್ರವಲ್ಲ ಅವರ ಪ್ರಸಾದ ಗಳು ಕೂಡ ವೈವಿಧ್ಯತೆಯಿಂದ ಕೂಡಿದ್ದು ಕೂಡ ನಮ್ಮ ಭಾಗ್ಯ. ಇಂತಹ ಹಿತವಾದ ಅನುಭವ ಬೇರೆ ಯಾವುದೇ ದೇಶದಲ್ಲಿ ಸಿಗಲು ಸಾಧ್ಯವೇ ಇಲ್ಲ. ಮತ್ತೆ ಯಾಕೆ ಅಲ್ವಾ ಹರ ಹರಿ ಅಂತ ಭೇದ ಭಾವ ಮಾಡಿಕೊಂಡು ಅಹಂ ಬೆಳೆಸುವುದು.


ನಟರಾಜನ ನಾಟ್ಯ ಎಷ್ಟು ಚಂದವೋ,ವಾಸುದೇವನ ಕೊಳಲ ಮಧುರ ಗಾನವೂ ಕೇಳಲು ಅಷ್ಟೇ ಇಂಪು. ನಂದಿ ಕೂಡ  ಸುಂದರವೇ. ಗರುಡ ಕೂಡ ಶಕ್ತಿಶಾಲಿಯೇ.ಕೈಲಾಸವೂ  ಅಗಾಧವಾದದ್ದೇ,ವೈಕುಂಠ ವೂ ರಮಣೀಯವಾದದ್ದೇ. 

ಇಬ್ಬರಲ್ಲೂ ವೈವಿಧ್ಯತೆ ಉಂಟು.ಅದನ್ನು ನಾವು ನೋಡಿ ಆಸ್ವಾದಿಸಬೇಕೆ ಹೊರತು ಶ್ರೇಷ್ಟತೆಯ ಹೆಸರಿನಲ್ಲಿ ಇನ್ನೊಂದು ದೇವರನ್ನು  ದ್ವೇಷಿಸುವುದು ತರವಲ್ಲ. 


ಅದು ಅಲ್ಲದೇ ನಾವು ಜಿದ್ದಿಗೆ ಬಿದ್ದು ಶಿವನನ್ನಾಗಲಿ, ಹರಿಯನ್ನಾಗಲಿ ದ್ವೇಷಿಸಲು ಅವರೇನು ಬೇರೆ ದೇಶಗಳ  ದೇವರುಗಳೇ.. ನಮ್ಮದೇ ದೇವರುಗಳಲ್ಲವೇ.ಶುದ್ಧ ಭಕ್ತಿಯಲ್ಲಿ ಯಾವತ್ತೂ ದ್ವೇಷ, ತಿರಸ್ಕಾರವಿರುವುದಿಲ್ಲ. ಹಾಗೇ ಮಾಡಿದರೆ ಸ್ವತಃ ನಿಮ್ಮ ಹರ ಹರಿಯರೇ ನಿಮ್ಮಲ್ಲಿ ಪ್ರಸನ್ನನಾಗುವುದಿಲ್ಲ.ಹೌದು ಹರಿ ಹರ ರಲ್ಲಿ ಎಂದಿಗೂ ಭೇದವಿಲ್ಲ☺️🙏



"ನಮಃ ಶಿವಾಯ.." ಹೇಳಿದ ನಂತರ  ಒಮ್ಮೆ "ಕೃಷ್ಣಂ ವಂದೇ ಜಗದ್ಗುರುಂ.." ಅಂತ ಕೂಡ ಹೇಳಿ ನೋಡಿ. ಆ ಅನುಭವವೂ ದಿವ್ಯವಾದದ್ದೇ. "ನಮೋ ಭಗವತೇ ವಾಸುದೇವಾಯ.." ಎಂದು ಹೇಳುವವರು ಒಮ್ಮೆ "ಹರ ಹರ ಮಹಾದೇವ..." ಎಂಬುದನ್ನು ಕೂಡ ಜೋರಾಗಿ ಒಮ್ಮೆ ಹೇಳಿ ನೋಡಿ,ಅದೂ ಕೂಡ  ನಮ್ಮ ನಿಮ್ಮ ನರ ನಾಡಿಗಳಲ್ಲಿ ನವ ಚೈತನ್ಯ ವನ್ನೇ  ತುಂಬಿ ಬಿಡಬಲ್ಲದು.. 😊🙏🏻


Ab Pacchu

Moodubidire


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ