ಏನಿದ್ದರೇನು ಜೀವನ ಪ್ರೀತಿಯೇ ಇರದಿದ್ದರೆ
ಬಸ್ ಸ್ಟ್ಯಾಂಡ್ ಅಲ್ಲಿ ಅವರೊಬ್ಬರು ವಯಸ್ಸಾದ ತಾಯಿ ಇದ್ದಾರೆ,ಸ್ಟೌವ್ ಮೇಲೆ ಚಿಕ್ಕ ಬಾಣಲೆ ಇಟ್ಟುಕೊಂಡು ಬಿಸಿ ಬಿಸಿಯಾದ ನೆಲಗಡಲೆ ಹುರಿದು ಪೇಪರ್ ನಲ್ಲಿ ಕಟ್ಟಿ ಕೊಡುತ್ತಾರೆ....ಬಾಯಿ ಬಿಟ್ಟು ಕೇಳದಿದ್ದರೂ, ಕೈಗೆ ಮತ್ತಷ್ಟು ಕಡಲೆ ಸುರಿದು ಕಳುಹಿಸಿಕೊಡುತ್ತಾರೆ.ಅವರಿಗೆ ಒಂದು ಕಣ್ಣು ಸರಿಯಾಗಿ ಕಾಣುವುದೇ ಇಲ್ಲ.
ಹೆದ್ದಾರಿಯ ಬದಿಯಲ್ಲಿ ತಲೆಯ ಮೇಲೊಂದಿಷ್ಟು ತೆಂಗಿನ ಗರಿಗಳ ನೆರಳನ್ನು ಕಟ್ಟಿಕೊಂಡು ಅವರೊಬ್ಬ ಮಾಮ ಶಂಕರಾಪುರ ಮಲ್ಲಿಗೆ ಮಾರುತ್ತಾರೆ, ಕಾರು ನಿಲ್ಲಿಸಿದರೆ. ಸಾಕು ಓಡೋಡಿ ಮಲ್ಲಿಗೆ ತಗೊಂಡು ನಮ್ಮ ಬಳಿಗೆನೇ ಬರುತ್ತಾರೆ, ಮಲ್ಲಿಗೆ ಜೊತೆಗೆ ಒಂದು ಚಿಕ್ಕ ತುಂಡು ಮುತ್ತು ಮಲ್ಲಿಗೆಯನ್ನೋ , ಅಬ್ಬಲಿಗೆಯನ್ನು ಸೇರಿಸಿಯೇ ಕೊಡುತ್ತಾರೆ. ಆದರೆ ಅವರಿಗೆ ಒಂದು ಕಾಲು ಸರಿಯೇ ಇಲ್ಲ. ಆದರೂ ಅವರು ನಡೆಯುವುದಿಲ್ಲ...ಹಾಗೇ ಓಡಿ ಬಿಡುತ್ತಾರೆ.
ಕಂಪೆನಿಯಲ್ಲಿ ಅವರೊಬ್ಬರು ಸೆಕ್ಯುರಿಟಿ ಗಾರ್ಡ್ ಇದ್ದಾರೆ, ತಾತ ಅನ್ನಲು ಅಡ್ಡಿ ಇಲ್ಲ. ಅವರೇ ಹೇಳುವಂತೆ ಅವರಿಗೆ ಕಿತ್ತು ತಿನ್ನುವ ಬಡತನ. ಆದರೂ ಮಧ್ಯಾಹ್ನ ದ ಊಟದ ಟೈಂ ನಲ್ಲಿ ಅವರಿಗಾಗಿ ಕಂಪೆನಿ ಯ ಕಾಂಪೌಂಡ್ ನ ಹೊರಗೆ ನಾಲ್ಕು ಗೆಳೆಯರು ಕಾದಿರುತ್ತಾರೆ. ಅವರೆನೋ ಬಿರಿಯಾನಿ ಹಾಕಲ್ಲ. ತಮ್ಮ ಬುತ್ತಿಯಲ್ಲಿರುವ ರೊಟ್ಟಿಗಳಲ್ಲಿ ಜಸ್ಟ್ ತುಂಡು ರೊಟ್ಟಿಯನ್ನಷ್ಟೇ ಅವುಗಳಿಗೆ ಹಾಕುತ್ತಾರೆ. ನಾಯಿಗಿಂತಲೂ ಒಳ್ಳೆಯ ಗೆಳೆಯರು ಬೇಕೇ. ಅವುಗಳು ಹಿತವಾಗಿ ಬೌ ಬೌ ಎಂದು ಕೃತಜ್ಞತೆ ಸೂಚಿಸಿದರೂ ಅದು ಅವರಿಗೆ ಕೇಳುವುದಿಲ್ಲ. ಯಾಕೆಂದರೆ ಅವರಿಗೆ ಕಿವಿ ಯೇ ಕೇಳುವುದಿಲ್ಲ.
ಅವರೊಬ್ಬರು ಅಂಕಲ್ ಟೊಪ್ಪಿ ಹಾಕಿಕೊಂಡು ಶಾಲೆಯ ಬಳಿ ಐಸ್ ಕ್ಯಾಂಡಿ ಮಾರುತ್ತಾರೆ. ಚಿಕ್ಕ ಮಕ್ಕಳು, ಕಣ್ಣು ಕಾಣದವರು, ವೃದ್ಧರು ಹಿರಿಯರು ಯಾರಾದರೂ ರೋಡ್ ಕ್ರಾಸ್ ಮಾಡಲು ಕಷ್ಟ ಪಟ್ಟರೆ ಓಡೋಡಿ ಬಂದು ಕೈ ಹಿಡಿದು ರೋಡ್ ಕ್ರಾಸ್ ಮಾಡಿಸಿ ಹೋಗುತ್ತಾರೆ. ಅವರ ಬಳಿ ಸ್ನೇಹ, ಸಹಾಯ ಎಲ್ಲಾ ಇದೆ. ಆದರೆ ಅವರ ಬಳಿ ಮಾತಿಲ್ಲ. ಮಾತು ಅವರಿಗೆ ಬರುವುದಿಲ್ಲ.
ಹೀಗೆ ಈ ಪಟ್ಟಿ ಇನ್ನೂ ಇದೆ. ಅಂಗ ವೈಕಲ್ಯ, ಕಿತ್ತು ತಿನ್ನುವ ಬಡತನ ಎನ್ನುವುದು ಅವರೆಲ್ಲರ ಜೀವನ ಪ್ರೀತಿ ಯನ್ನು ಯಾವತ್ತೂ ಕಿತ್ತು ಕೊಳ್ಳಲೇ ಇಲ್ಲ. ಯಾರ ಹಂಗಿಲ್ಲದೆ ತಮ್ಮ ಕಾಲ ಮೇಲೆ ನಿಂತುಕೊಂಡು ಅವರಷ್ಟಕ್ಕೇ ಅವರು ಕೆಲಸ ಮಾಡಿಕೊಳ್ಳಬಲ್ಲರು. ಒಂದೆರಡು ದಿನ ಅಲ್ಲ ಎಷ್ಟೋ ವರ್ಷಗಳಿಂದ ಅವರಷ್ಟಕ್ಕೆ ಅವರು ದುಡಿದು ಹಾಗೇ ಬದುಕಿ ಬಿಟ್ಟಿದ್ದಾರೆ.
ಅವರ ಬಳಿ ಕೋಟಿ ಇಲ್ಲ. ಆದರೂ ಯಾರು ಏನನ್ನೂ ಕೇಳದಿದ್ದರೂ ತಮ್ಮಲ್ಲಿರುವ ಎಲ್ಲವನ್ನೂ ಮೊಗೆ ಮೊಗೆದು ಕೊಡಬಲ್ಲರು. ಪ್ರೀತಿ, ವಿಶ್ವಾಸ, ಸ್ನೇಹ, ಸಹಾಯ ಅವರೆಲ್ಲರ ದೊಡ್ಡ ಆಸ್ತಿ.
ಕೆಲವೊಮ್ಮೆ ನಾವು ದೇವರಿಗೆ ಶಾಪ ಹಾಕುತ್ತೇವೆ. ಅಯ್ಯೋ ದೇವರೇ ಅದೆಂತಹ ಬಾಳು ಕೊಟ್ಟೆ. ಇರುವ ಕಷ್ಟವನ್ನೆಲ್ಲಾ ಹುಡುಕಿ ಹುಡುಕಿ ನನಗೇ ಕೊಟ್ಟೆ ಅಲ್ಲಾ ನೀನು ಎಂದು. ಕೆಲವೊಮ್ಮೆ ಆತ್ಮಹತ್ಯೆ ಯಂತಹ ಪ್ರಯತ್ನ ಕ್ಕೂ ಕೈ ಹಾಕುತ್ತೇವೆ. ಆವಾಗಲೆಲ್ಲ ಜಸ್ಟ್ ಒಮ್ಮೆ ಇಂತವರನ್ನು ನೆನಪಿಸಿಕೊಳ್ಳಿ. ಜೀವನ ದೊಡ್ಡದು, ಜೀವನ ಪ್ರೀತಿ ಅದಕ್ಕಿಂತಲೂ ಇನ್ನೂ ದೊಡ್ಡದು. ಸಮಸ್ಯೆ ಗಳು ಎಷ್ಟೇ ದೊಡ್ಡದು ಇರಲಿ ಹಾಗೇ ಬದುಕಿ ಬಿಡಿ..
ಬಸ್ ಸ್ಟ್ಯಾಂಡ್ ನ ತಾಯಿ ಯ ಬಿಸಿಯಾದ ನೆಲಗಡಲೆ ಯಲ್ಲಿ ದುಡಿಮೆ ಎನ್ನುವ ಅದ್ಭುತವಾದ ಪಾಠ ಇದೆ, ಹೆದ್ದಾರಿಯ ಮಾಮನ ಶಂಕರಾಪುರ ಮಲ್ಲಿಗೆಯ ಘಮದಲ್ಲಿ,ಅಬ್ಬಲಿಗೆ, ಮುತ್ತುಮಲ್ಲಿಗೆ ಗಳ ತುಂಡುಗಳಲ್ಲಿ ಜೀವನದಲ್ಲಿ ಸೋಲಲಾರೆ ಎನ್ನುವ ಅಪ್ರತಿಮ ಛಲ ಇದೆ, ಶಾಲಾ ಬಳಿಯ ಅಂಕಲ್ ನ ಐಸ್ ಕ್ಯಾಂಡಿಯ ತಂಪಿನಲ್ಲಿ ಲಾಭ ತಂದುಕೊಡದ ಪ್ರತಿಫಲ ಬಯಸದ ಸಹಾಯ ಎನ್ನುವುದು ಇದೆ , ಸೆಕ್ಯುರಿಟಿ ತಾತನ ತುಂಡು ರೊಟ್ಟಿಗಳಲ್ಲಿ .. ಪ್ರೀತಿ, ಪ್ರೇಮ, ವಿಶ್ವಾಸ, ಸ್ನೇಹ, ನಿಯತ್ತು ಎಲ್ಲವೂ ಇದೆ. ಇದಕ್ಕಿಂತ ಹೆಚ್ಚಾಗಿ ಎಲ್ಲರ ಲ್ಲೂ ಒಂದು ಅದಮ್ಯವಾದ ಜೀವನ ಪ್ರೀತಿ ಇದೆ..
ನೀವು ಹೀಗೆ ಬದುಕಿ ಬಿಡಿ, ಸಮಸ್ಯೆ ಸಾವಿರ ಇರಲಿ ನಿಮ್ಮನ್ನು, ನಿಮ್ಮ ಬದುಕನ್ನು ಹಾಗೇ ಪ್ರೀತಿಸಿ ಬಿಡಿ..❤️
.....................................................................................
#ಏನೋ_ಒಂದು
Ab Pacchu
Moodubidire

Comments
Post a Comment