ಪ್ರಾಣಿಗಳನ್ನು ನಂಬಬಹುದು
ಆ ತಾಯಿಗೆ ಒಬ್ಬನೇ ಮಗ. ಗಂಡ ಎನ್ನುವ ಆಧಾರದ ಒಂದು ಜೀವವೇ ಅವಳ ಬಾಳಿನಲ್ಲಿ ಬಹುಕಾಲ ಇರಲಿಲ್ಲ.ಅವಳೂ ಬಳ್ಳಿಯಾಗಿ ಇತರರ ಬಾಳಿನಲ್ಲಿ ಹಬ್ಬುವ ಮನಸ್ಸು ಮಾಡಲಿಲ್ಲ.ಬದಲಾಗಿ ತಾನೇ ಹೆಮ್ಮರವಾಗಿ ಬೆಳೆದು ತನ್ನ ಮಗನಿಗೆ ಆಧಾರವಾದಳು.
ಜೀವನದಲ್ಲಿ ಬಹಳ ಕಷ್ಟ ಪಟ್ಟಳು ಆ ತಾಯಿ. ತನ್ನ ಮಗನಿಗಾಗಿ ಇನ್ನಿಲ್ಲದ ತ್ಯಾಗ ಮಾಡಿದಳು,ಕೆಲಸ ಮಾಡಿದಳು,ಹೊಟ್ಟೆ ಹಸಿದಳು,ಮಗನನ್ನು ಬೆಳೆಸಿದಳು,ಓದಿಸಿದಳು ಕೊನೆಗೂ ಅವನು ಅವನ ಕಾಲ ಮೇಲೆ ನಿಲ್ಲುವಂತೆ ಮಾಡಿ ಬಿಟ್ಟಳು.
ಮಗನ ಮೇಲೆ ಆ ತಾಯಿಗೆ ಬಹಳ ಪ್ರೀತಿ, ಅವನ ಮೇಲೆ ಜೀವವೇ ಇಟ್ಟಿದ್ದಳು.ಮುಂದೊಂದು ದಿನ ಈ ನನ್ನ ಮಗನೇ ನನ್ನ ಜೀವನಕ್ಕೆ ಆಧಾರ ಆಗುವನು ಎಂದು ಬಲವಾಗಿ ನಂಬಿದ್ದಳು.ಆದರೆ ಮಗನಿಗೆ ತನ್ನ ತಾಯಿಯ ಮೇಲೆ ಅಂತಹ ಮಮಕಾರವೇನೂ ಇರಲಿಲ್ಲ!
ಮಗ ದೊಡ್ಡವನಾದ ಮೇಲೆ ತಾಯಿ ಒಬ್ಬಂಟಿ ಆದಳು. ಆ ತಾಯಿ ಮನೆಯ ಬೀದಿಯಲ್ಲಿ ಬಿದ್ದಿರೋ ನಾಯಿ ಮರಿಗಳನ್ನು ಮನೆಗೆ ತಂದು ಹಾಲು ಬ್ರೆಡ್ಡು ನೀಡಿ ಬಹಳ ಅಕ್ಕರೆಯಿಂದ ಸಾಕುತ್ತಿದ್ದಳು. ಮಗ ಹೇಳಿದ "ಅಮ್ಮಾ ಸಿಕ್ಕಿದವುಗಳಿಗೆ ಆಶ್ರಯ ಕೊಡಲು ನಮ್ಮ ಮನೆಯೇನು ಅನಾಥಾಶ್ರಮವೇ?". ತಾಯಿ ಏನೂ ಹೇಳಲಿಲ್ಲ. ಮಗ ಮನೆಯಲ್ಲಿ ಇರದೇ ಇದ್ದಾಗ ಬೀದಿಗೆ ಹೋಗಿ ಅಲ್ಲೇ ನಾಯಿಗಳನ್ನು ಪಾಲಿಸಿದಳು, ಪೊರೆದಳು, ಮುದ್ದಿಸಿದಳು,ಖುಷಿ ಪಟ್ಟಳು ಮತ್ತು ಅವುಗಳು ಗುರುತು ಹಿಡಿದು ಬಾಲ ಆಡಿಸಿಕೊಂಡು ತನ್ನನ್ನೇ ಹುಡುಕಿಕೊಂಡು ಬಂದಾಗ.. ಆ ತಾಯಿ ಕಷ್ಟ ಪಟ್ಟು ನಕ್ಕಳು!
ಮಗ ಒಂದು ದಿನ ಮದುವೆ ಆದ, ಜೀವನದಲ್ಲಿ ಇನ್ನಷ್ಟು ದೊಡ್ಡವನಾಗಿ ಬೆಳೆದ,ಉನ್ನತ ಸ್ಥಾನ ತಲುಪಿದ.ಒಂದು ದಿನ ಆ ಮಗ ತನ್ನ ಅಮ್ಮನನ್ನೇ ಉಪಾಯವಾಗಿ ಅನಾಥಾಶ್ರಮ ಕ್ಕೆ ಸೇರಿಸಿ ಬಿಟ್ಟು ಬಂದ!!
ಒಂದು ದಿನ ಸಂಜೆ ಅನಾಥಾಶ್ರಮದ ನಾಯಿಗಳೊಂದಿಗೆ ಕಾಲ ಕಳೆಯುತ್ತಾ ಆ ವೃಧ್ಧೆ ತಾಯಿ ಕುಳಿತಿದ್ದಳು. ಆಗ ಅವಳಂತೆಯೇ ಅನಾಥಾಶ್ರಮ ಸೇರಿದ್ದ ಅಲ್ಲಿಯ ಒಬ್ಬರು ಕೇಳಿದರು " ನಿಮ್ಮನ್ನು ನೋಡಲು ಯಾರು ಕೂಡ ಇಲ್ಲಿಗೆ ಬರುವುದಿಲ್ಲ,ನೀವು ನೋಡಿದರೆ ಯಾವಾಗಲೂ ಬರೀ ಈ ಅನಾಥ ನಾಯಿಗಳೊಂದಿಗೆಯೇ ಕಾಲ ಕಳೆಯಲು ಇಷ್ಟ ಪಡುತ್ತೀರಾ.. ನಿಮ್ಮವರ ಬಗ್ಗೆ ನೀವು ಮಾತಾಡುವುದುನ್ನು ಸಹ ನಾವು ಯಾರೂ ಎಂದಿಗೂ ನೋಡಿದವರಲ್ಲ,ಯಾಕೆ ನಿಮಗೆ ಮಗ, ಮಗಳು ಅಂತ ಯಾರೂ ಇಲ್ಲವೇ.. ? ".
ಅದಕ್ಕೆ ಆ ತಾಯಿ ಅಂದಳು " ಕೆಲವೊಮ್ಮೆ ಅನಿಸುತ್ತೆ,ನನಗೆ ಅವರಾರು ಇರಬಾರದಿತ್ತು ಎಂದು..! ಇದ್ದಿದಕ್ಕೆ ನಾನಿಂದು ಅನಾಥೆ ಆದೆ..!! ನಂಬಿಕೆಗೆ ದ್ರೋಹ ಮಾಡಲು ಮೂಕ ಪ್ರಾಣಿಗಳು ಎಂದೂ ಕಲಿತೇ ಇಲ್ಲ ನೋಡಿ,ಹಾಗಾಗಿ ಇವುಗಳೊಂದಿಗೆ ಕಾಲ ಕಳೆಯುತ್ತೇನೆ..!! "
ಅನಾಥಾಶ್ರಮಕ್ಕೆ ತಿಂಗಳ ಹಣ ನೀಡಲು ಬಂದಿದ್ದ ಆ ತಾಯಿಯ ಬಹಳ ನಂಬಿಕೆಯ ಆ ಶ್ರೀಮಂತ ಮಗ.. ಗೇಟ್ ಪಕ್ಕವೇ ನಿಂತುಕೊಂಡು ತನ್ನ ತಾಯಿಯ ಅಷ್ಟೂ ಮಾತುಗಳನ್ನು ಕೇಳಿಸಿಕೊಂಡು ಬಿಟ್ಟಿದ್ದ ಮತ್ತು ಜೀವನದಲ್ಲಿ ಮೊದಲ ಬಾರಿಗೆ ಕಣ್ಣೀರಾಗಿ ಬಿಟ್ಟ !!
.....................................................................................
#ಇಷ್ಟೇ..
AB Pacchu
Moodubidire

Comments
Post a Comment