ಮಲ್ಲಿಗೆ ಮತ್ತು ಸಂಪಿಗೆ
ಬಸ್ಸಿನಲ್ಲಿ ವಿಂಡೋ ಸೀಟ್ ಪಕ್ಕ ಕುಳಿತುಕೊಂಡಿದ್ದೆ,ಆದರೆ ಮನಸ್ಸು ಮಾತ್ರ ಬಸ್ ಬಿಟ್ಟು ಹೊರಗಡೆ ಎಲ್ಲೆಲ್ಲೋ ಸುತ್ತುತ್ತಿತ್ತು.ಡ್ಯೂಟಿ ಮುಗಿಸಿ ಮನೆಗೆ ಮರಳುವ ಸಮಯ ಅದು.
ನನ್ನದೇ ಅಂತ ಒಂದು ವೆಹಿಕಲ್ ಇದ್ದಿದ್ದರೆ ಈ ಬಸ್ಸಿಗಾಗಿ ಅದರಲ್ಲೂ ಈ ಕೊರೋನ ಟೈಂ ಅಲ್ಲಿ ಪರದಾಡೋ ಕಷ್ಟ ಆದರೂ ತಪ್ಪುತ್ತಿತ್ತು ಎಂದು ಮನಸ್ಸಲ್ಲೇ ಅಂದುಕೊಂಡೆ.
ಅದು ಸಂಜೆಯ ಸಮಯ, ಹಕ್ಕಿ ಪಕ್ಕಿಗಳು ಗೂಡು ಸೇರೋ ಸಂಧಿಕಾಲ.ಮೋಡಗಳೆಲ್ಲಾ ಕಪ್ಪಾಗಿ ಇನ್ನೇನು ಮಳೆ ಧೋ ಎಂದು ಸುರಿಯಲು ಕಾದು ನಿಂತಿತ್ತು. ನಮ್ಮೂರಲ್ಲಿ ಅಂತು ಈಗ ಸಂಜೆ ಆದರೆ ಸಾಕು ದಿನಾಲೂ ಮಳೆಯೇ.
ನನಗೆ ಗೊತ್ತಿತ್ತು ಈಗ ಮಳೆ ಖಂಡಿತವಾಗಿಯೂ ಸುರಿಯಲ್ಲ,ಆದರೆ ನಾನು ಯಾವಾಗ ಬಸ್ಸಿನಿಂದ ಹೊರಗೆ ಕಾಲಿಡುತ್ತೇನೋ ಆವಾಗ ಮಳೆ ಖಂಡಿತವಾಗಿ ಸುರಿದೇ ಸುರಿಯುತ್ತದೆ ಎಂದು. ಹಾಗಾಗಿ ಇಂತಹ ಸಂದರ್ಭದಲ್ಲಿ ಕೊಡೆ ಯಾವುತ್ತೂ ನನ್ನ ಸಂಗಾತಿಯಾಗಿ ಜೊತೆಗೇ ಇರುತ್ತದೆ.
ಬಸ್ ನಮ್ಮ ಊರಿನ ಬಸ್ ಸ್ಟ್ಯಾಂಡ್ ಪಕ್ಕವೇ ನಿಂತಿತು. ನಾನು ಇಳಿದು ಕೊಂಡೆ. ಕಾಲು ನೆಲದ ಮೇಲೆ ಇಟ್ಟ ಕೂಡಲೇ ಮಳೆ ಹನಿಗಳ ಪನ್ನೀರಿನಂತ ಸಿಂಚನ. ಅಷ್ಟಾಗಿ ಜೋರು ಮಳೆ ಅಲ್ಲದಿದ್ದರೂ ಒಂದೊಂದೇ ಹನಿ ಬೀಳತೊಡಗಿತು.
ಆದರೂ ಕೊಡೆ ಅರಳಿಸಲಿಲ್ಲ. ಹೊಸ ಕೊಡೆ ಅದು.ಹೊಸತರಲ್ಲಿ ಮೊದ ಮೊದಲು ಕೊಡೆಯನ್ನು ಒದ್ದೆ ಮಾಡಲು ಮನಸ್ಸೇ ಬರುವುದಿಲ್ಲ.ಹಾಗೇ ನಿಧಾನವಾಗಿ ನಮ್ಮ ಮನೆ ಕಡೆ ಹೋಗುವ ರೋಡಿನತ್ತ ಹೆಜ್ಜೆ ಹಾಕಿದೆ. ಅದೇ ರೋಡಿನಲ್ಲಿ ನಡೆದು ಕೊಂಡು ಹೋದರೆ ಮನೆ ತಲುಪಲು ಹೆಚ್ಚು ಕಡಿಮೆ ಎರಡು ಕಿಲೋಮೀಟರ್ ಉಂಟು. ಆದರೆ ಒಳ ದಾರಿಯಲ್ಲಿ ಗುಡ್ಡ,ಹೊಲ ಗದ್ದೆ, ಹೊಳೆ ಎಲ್ಲಾ ಬಳಸಿಕೊಂಡು ಕಾಲುದಾರಿಯಲ್ಲಿ ಹೋದರೆ ಸುಮಾರು ಒಂದು ಕಿಲೋಮೀಟರ್ ಅಷ್ಟೇ.
ಆಗ ಯಾರೋ ಬಸ್ ಸ್ಟ್ಯಾಂಡ್ ನಿಂದ.. " ಹಲೋ.. Excuse me.." ಎಂದು ತುಂಬಾನೇ ಮಧುರವಾಗಿ ಕರೆದಂತಾಯಿತು.
ತಿರುಗಿ ನೋಡಿದೆ. ಅಲ್ಲೊಬ್ಬಳು ಹುಡುಗಿ.. of course ಸುಂದರವಾದ ಹುಡುಗಿ.
"ಸಿಂಪಲ್ ಆಗಿ ಒಂದು ಲವ್ ಸ್ಟೋರಿ.." ಮೂವಿಯಲ್ಲಿ ರಕ್ಷಿತ್ ಶೆಟ್ಟಿ ಹೇಳುವಂತೆ..
"ತಿರುಗಿ ತಿರುಗಿ ನೋಡುವಂತ ಹುಡುಗಿಯೇನಲ್ಲ..
ಮತ್ತೆ ಮತ್ತೆ ಕನಸಿಗೆ ಬಂದು ಕಾಡುವುದಿಲ್ಲ..
ಕರ್ಲಿ ಹೇರ್ ಇವಳಿಗಿಲ್ಲ..
ಬ್ಲೂ ಐಸ್ ಇವಳದಲ್ಲ..
ಆದರೂ ಗೊತ್ತಿಲ್ಲ.. ಇವಳಿಗೇ ಬಿದ್ದೆನಲ್ಲ.."
ಎಂಬ ಡೈಲಾಗ್ ಅನ್ನು ಯಾವುದೇ ಹುಡಗನ ಹೃದಯ ಆದರೂ, ಅವಳನ್ನು ನೋಡಿದ ಮೊದಲ ಕ್ಷಣವೇ ಹೇಳಿಬಿಡಬಲ್ಲದು.ಆದರೆ ನನ್ನ ಹೃದಯ ಹಾಗೆ ಹೇಳಲಿಲ್ಲ. ಕಾರಣ ಅವಳನ್ನು ಕಂಡ ಕೂಡಲೇ ಅದು ಜಸ್ಟ್ ಸ್ತಬ್ಧವಾಗಿತ್ತು ಒಂದು ಕ್ಷಣ.
ಆ ಡೈಲಾಗುಗಳ ಎಲ್ಲಾ ಸಾಲುಗಳು ಸರಿಯೇ, ಆದರೆ ಮೊದಲ ಸಾಲೊಂದನ್ನು ಬಿಟ್ಟು..ಯಾಕೆಂದರೆ ಇವಳು ತಿರುಗಿ ತಿರುಗಿ ನೋಡಬೇಕಾದಷ್ಟು ಸುಂದರವಾಗಿರೋ ಹುಡುಗಿಯೇ ಆಗಿದ್ದಳು.
ಬ್ಲೂ ಜೀನ್ಸ್ ಮೇಲೆ ಒಂದು ಮಾವಿನ ಬಣ್ಣದ ಹಳದಿ ಚೂಡಿದಾರ್, ಕುತ್ತಿಗೆ ಸುತ್ತ ಸುತ್ತಿರೋ ವೈಟ್ ಬಣ್ಣದ ವೇಲು..
ನಿಜವಾಗಿಯೂ ನನಗೆ ಮಾವಿನ ಹಣ್ಣಿನ ಕೊರಳಿಗೆ ಮಲ್ಲಿಗೆ ದಂಡೆ ಸುತ್ತಿದಂತೆ ಸುಂದರವಾಗಿ ಕಂಡಿತು.
ಆಹಾ ಎಂತಹ ಚೆಲುವೆ ಇವಳು, ಅದರಲ್ಲೂ ಸಿಂಪಲ್ ಆಗಿರೋ ಈ ಡ್ರೆಸ್ ನಲ್ಲಿ ಅದೆಷ್ಟು ಸ್ನಿಗ್ಧ ಸುಂದರಿಯಾಗಿ ಕಾಣುತ್ತಿದ್ದಾಳೆ ಈಕೆ.
" ಹಲೋ.. Excuse me.. " ಅವಳೇ ಮತ್ತೊಮ್ಮೆ ಕರೆದಳು.
ಒಮ್ಮೆಲೇ ಸಾವರಿಸಿಕೊಂಡು " ನಾನ..? " ಎಂದು ಕೇಳಿದೆ.
" ಹೌದು ನೀವೆ.. "
ಏನಪ್ಪಾ.. ನನ್ನನ್ನೇ ಕರೆಯುತ್ತಿದ್ದಾಳೆ ಅಂದು ಕೊಂಡೆ.
ಕೆಲವೊಮ್ಮೆ ಜೀವನದಲ್ಲಿ ಆಕ್ಸಿಡೆಂಟ್ ಆಗಿ ಏನೋ ಒಂದು ನಡೆದು ಹೋಗುತ್ತೆ. ಅದರಿಂದ ಕೆಲವೊಮ್ಮೆ ಸಿಹಿ ನೆನಪುಗಳು ಉಳಿದು ಕೊಳ್ಳುತ್ತದೆ, ಇನ್ನು ಕೆಲವೊಮ್ಮೆ ಕಹಿ ನೆನಪುಗಳು ಉಳಿದು ಕೊಳ್ಳುತ್ತದೆ.
ಇಲ್ಲಿ ದುಂಬಿಯನ್ನು ಹೂವೇ ಕರೆಯುತ್ತಿದೆಯೋ,ಸೆಳೆಯುತ್ತಿದೆಯೋ ಗೊತ್ತಾಗಲಿಲ್ಲ.. ಮಾಂತ್ರಿಕವಾಗಿ ಕಾಲುಗಳು ಅವಳತ್ತಲೇ ಹೆಜ್ಜೆ ಹಾಕಿದವು.ನಾನು ನಡೆಯಲಿಲ್ಲ.
" ಏನು ಹೇಳಿ... "
" ಈ ರೋಡ್ ಅಲ್ಲಿ ಯಾವುದೇ ಆಟೋ ಹೋಗಲ್ವಾ..."
"ಆಟೋ ಹಿಂದೆ ಎಲ್ಲಾ ಇತ್ತು. ಈಗ ಕೊರೋನ ಬಂದು ಜಾಸ್ತಿ ಜನ ತಿರುಗಾಡಲ್ಲ ನೋಡಿ, ಹಾಗಾಗಿ ಸದ್ಯಕ್ಕೆ ಇಲ್ಲ.."
"ಓಹ್.. ಶಿಟ್.."
ಚೆಲುವೆ frustrate ಆದಳು. ಅದು ಮುಖದಲ್ಲಿ ಕಾಣುತ್ತಿತ್ತು.
"ಯಾಕೆ.. ಏನಾಯಿತು.. ನಿಮಗೆ ಈಗ ಎಲ್ಲಿಗೆ ಹೋಗಬೇಕು ಹೇಳಿ"
"ನನಗೆ ಶಂಕರಪ್ಪ ನವರ ಮನೆಗೆ ಹೋಗಬೇಕಿತ್ತು.."
"ಯಾವ ಶಂಕರಪ್ಪ..? "
" ಅದು.. ಸಾಮೀಪ್ಯ ಳ ತಂದೆ, ಗೊತ್ತುಂಟಾ? "
ಶಂಕರಪ್ಪ? ಅರೆ ಅವರು ಪಕ್ಕದ ಮನೆಯ ನಮ್ಮ ಅಂಕಲ್. ಹೌದು ನಮ್ಮ ಸಂಪಿಗೆ ಹುಡುಗಿ ಸಾಮೀಪ್ಯ ಳ ತಂದೆ.
ಸಾಮೀಪ್ಯ ಅಂದರೆ ಅದೇ ಪಾಯಸ, ತಿಂಡಿ, ತೀರ್ಥ ಎಲ್ಲಾ ಆಂಟಿ ಕೊಟ್ಟು ಕಳುಹಿಸಿದಾಗ, ಎಲ್ಲವನ್ನು ಹಿಡಿದುಕೊಂಡು ನಮ್ಮ ಮನೆಯ ನನ್ನ ರೂಮ್ ಕಡೆಗೆ ಓಡೋಡಿ ಬರುವ ಆಂಟಿ ಮಗಳು.
" ಶಂಕರಪ್ಪ, ಆಂಟಿ ಎಲ್ಲಾ ನನಗೆ ಚೆನ್ನಾಗಿಯೇ ಗೊತ್ತು. ನಮ್ಮ ಪಕ್ಕದ ಮನೆಯೇ ಅವರ ಮನೆ.."
"ಹೌದಾ.. ಆದರೆ ಈಗ ಹೋಗುವುದು ಹೇಗೆ"
" ಮೊಬೈಲ್ ನಲ್ಲಿ ಕಾಲ್ ಮಾಡಿ ಆಂಟಿ ಮನೆಗೆ.. ಯಾರಾದರೂ ವೆಹಿಕಲ್ ನಲ್ಲಿ ಬಂದು ಪಿಕ್ ಮಾಡಿ ಕೊಂಡು ಹೋಗಬಹುದು.."
"ಮೊಬೈಲ್ switch off..ನನ್ನ ನಂಬರ್ ಬಿಟ್ಟು ಬೇರೆ ಯಾವುದೇ ನಂಬರ್ ನನಗೆ ನೆನಪಿಲ್ಲ"
ನನ್ನ ಬಳಿ ಪನ್ನಗ ನ ನಂಬರ್ ಇತ್ತು. ಅದೇ ಶಂಕರಪ್ಪ ನವರ ಸುಪುತ್ರ,ನನ್ನಿಂದಾಗಿ ಊರಿನವರಿಂದ ಪೆರ್ಮರಿ(ಹೆಬ್ಬಾವು) ಎಂದು ಕರೆಸಿಕೊಳ್ಳುವವ. ಅವನ ಬಳಿಯೂ ನನ್ನ ನಂಬರ್ ಇತ್ತು. ಅವನೇ ಹೇಗೋ ನನ್ನ ನಂಬರ್ ಪಡೆದುಕೊಂಡು,ಹಿಂದಿನ ದಿನವೇ ನನಗೆ ಮೆಸೇಜ್ ಮಾಡಿದ್ದ. ಮತ್ತು ವಾಟ್ಸಪ್ ನಲ್ಲಿ ನಾನು ಅವನು ಅವತ್ತು ಸೇರಿ ಮಾಡಿದ ಸೇಮೆದಡ್ಡೆ (ಒತ್ತು ಶ್ಯಾವಿಗೆ) ಯ ಸೆಲ್ಫೀ ಪೋಟೋ ಗಳನ್ನು ಕೂಡ ಕಳುಹಿಸಿದ್ದ. ಆದರೆ ಎಲ್ಲಾ ಪೋಟೋಗಳಲ್ಲೂ ಅವನ ಪೋಟೋ ಪೂರ್ತಿ ಇದ್ದರೆ, ನನ್ನ ಅರ್ಧ ಕೈ ಮಾತ್ರ ಬಂದಿತ್ತು. ಅಂತಹ ಪೋಟೋಗಳನ್ನೇ ಬೇಕು ಬೇಕು ಅಂತಲೇ ಸೆಲೆಕ್ಟ್ ಮಾಡಿ ನನಗೆ ಕಳುಹಿಸಿದ್ದ ಬಡ್ಡಿ ಮಗ ಪನ್ನಗ.
ನಾನು ಈಗ ಅವನಿಗೆ ಕಾಲ್ ಮಾಡಿ, ನಂತರ ಅವನು ಬಂದು ಇವಳನ್ನು ಪಿಕ್ ಮಾಡಿಕೊಂಡು ಹೋಗುವುದು ನನಗೆ ಸುತರಾಂ ಇಷ್ಟ ಇರಲಿಲ್ಲ.
" ನೋಡಿ ಸುಮಾರು ಎರಡು ಕಿಲೋಮೀಟರ್ ನಷ್ಟು ದೂರ ಇದೆ ಅಂಕಲ್ ನವರ ಮನೆ. ನಾನು ಕೂಡ ಆ ಸೈಡೇ ಹೋಗುವುದರಿಂದ ನಿಮಗೇನು ಅಭ್ಯಂತರವಿಲ್ಲದಿದ್ದರೆ ನೀವು ನನ್ನೊಟ್ಟಿಗೆ ಅಲ್ಲಿಯ ತನಕ ಬರಬಹುದು.ನನಗೆ short cut ದಾರಿ ಕೂಡ ಗೊತ್ತಿದೆ. ಆ ದಾರಿಯಲ್ಲಿ ಹೋದರೆ ನಾವು ಎರಡು ಕಿಲೋಮೀಟರ್ ಗಳಷ್ಟು ದೂರ ಕೂಡ ನಡೆಯಬೇಕಿಲ್ಲ. ಅಷ್ಟು ಹತ್ತಿರವಿದೆ. ಅದು ಬೇರೆ ಸಂಜೆಯ ಸಮಯ, ಇಲ್ಲಿ ಏನೂ ಸಿಗುವುದಿಲ್ಲ, ಸ್ವಲ್ಪ ಹೊತ್ತಾದರೆ ಕತ್ತಲು ಬೇರೆ ಆಗುತ್ತದೆ. ಮಳೆ ಬರುವ ಮುನ್ಸೂಚನೆ ಕೂಡ ಉಂಟು, ನೋಡಿ ಮೇಲೆ ಎಷ್ಟು ಕಪ್ಪಗೆ ಇದೆ ಕಾರ್ಮೋಡ, ನಿಮ್ಮಲ್ಲಿ ಕೊಡೆ ಬೇರೆ ಇಲ್ಲ ಅಂತ ಕಾಣ್ತದೆ. ಅದು ಬೇರೆ ಒಂಟಿ ಹೆಣ್ಣು. ಸುಂದರವಾಗಿರೋ ಹೆಣ್ಣು ಈ ರೀತಿ ತುಂಬಾ ಹೊತ್ತು ರೋಡ್ ಬದಿ ನಿಂತುಕೊಳ್ಳುವುದು ನನಗೆ ಅಷ್ಟಾಗಿ ಸರಿ ಕಾಣುವುದಿಲ್ಲ, ನನ್ನ ಕರುಳು ಚುರುಕು ಅನ್ನುತ್ತದೆ.. ಹಾಗಾಗಿ ನಾನೇ ಹೇಳುತ್ತಿದ್ದೆನೆ, ನೀವು ನನ್ನೊಡನೆ ಬರಬಹುದು,ಒಂದು ವೇಳೆ ಮಳೆ ಬಂದರೂ ನನ್ನ ಬಳಿ ದೊಡ್ಡ ಕೊಡೆ ಇದೆ..ಕತ್ತಲು ಆಗುವುದರೊಳಗೆ ನೀವು ಸೇಪಾಗಿ ಮನೆ ಸೇರಬಹುದು.. ನಾನು ಒಳ್ಳೆಯ ಹುಡುಗನೇ.. ರೇಪು ಗೀಪು ಎಲ್ಲಾ ಏನೂ ಮಾಡಲ್ಲ.. ನನ್ನನ್ನು ನಂಬಬಹುದು " ಎಂದು ಹೇಳಿದೆ.
ಅವಳಿಗೆ ಏನನಿಸಿತೋ ಏನೋ..ಅದರಲ್ಲೂ ನಾನು ಅವಳಿಗೆ " ಸುಂದರವಾಗಿರೋ ಹೆಣ್ಣು.. " ಅಂತ ಹೇಳಿದ್ದು ಇಷ್ಟವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ರೇಪು ಗೀಪು ಮಾಡಲ್ಲ ಎಂದು ಹೇಳಿದ್ದು ಮಾತ್ರ ಸ್ವಲ್ಪ ನಗು ಬರುವಂತೆ ಮಾಡಿತ್ತು.ಆದರೂ ಅವಳು ನಗಲಿಲ್ಲ..
" ಆಯಿತು ಹಾಗಾದರೆ.. ಓಕೆ ನಡೆಯಿರಿ.. ನಾನು ಕೂಡ ನಿಮ್ಮೊಡನೆಯೇ ಬರುವೆ.. "
ಅವಳು ಬೆನ್ನಿಗೆ ಬ್ಯಾಗ್ ಹಾಕಿಕೊಂಡು, ಕೈಯಲ್ಲಿ ಒಂದು ದೊಡ್ಡ ಪ್ಲಾಸ್ಟಿಕ್ ಬ್ಯಾಗ್ ಹಿಡಿದುಕೊಂಡು ನನ್ನ ಜತೆ ಹೆಜ್ಜೆ ಹಾಕಲು ಶುರು ಮಾಡಿದಳು.
ದುಂಬಿ ಹಾಗೂ ಹೂವು.. ಕರಡಿ ಮತ್ತು ಹಲಸು.. ಮಾವು ಮತ್ತು ಅಳಿಲು.. ಒಟ್ಟೊಟ್ಟಿಗೆ ನಡೆದುಕೊಂಡು ಹೋಗುವ ಕಲ್ಪನೆ ನಿಜವಾಗಿಯೂ ಅದ್ಭುತವಾದದ್ದು. ಆದರೆ ಆ ಕಲ್ಪನೆ ನನ್ನ ಪಾಲಿಗೆ ಇಲ್ಲಿ ಸಕಾರವಾಗುತ್ತಿತ್ತು.
ನಿಧಾನವಾಗಿ ನಮ್ಮ ಜರ್ನಿ ಶುರುವಾಗಿಯೇ ಬಿಟ್ಟಿತು.
ಖಾಲಿ ನಡೆಯುವುದು ತುಂಬಾ ಬೋರು,ಅದರಲ್ಲೂ ಜೊತೆಗೊಬ್ಬರು ಇದ್ದಾಗ ಮಾತು ಕಥೆ, ಸಂಭಾಷಣೆ ಇರದಿದ್ದರೆ ಹೇಗೆ. ನಾನೇ ಮೊದಲು ಮಾತಿಗಿಳಿದೆ.
"ಹೌದು.. ಅಂಕಲ್ ಶಂಕರಪ್ಪ ನಿಮಗೇನು ಆಗಬೇಕು.."
"ಅವರು ನನ್ನ ಮಾವ.."
ಅಂದರೆ ಆ ಹೆಬ್ಬಾವಿನಂತಹ ಪನ್ನಗ ಇವಳ ಮಾವನ ಮಗನ. ನನಗ್ಯಾಕೋ ಇದು ನಿಜವಾಗಿಯೂ ಅಷ್ಟೊಂದು ಸರಿ ಕಂಡು ಬರಲಿಲ್ಲ. ಚಿಕ್ಕಪ್ಪನ ಮಗ ಇಲ್ಲವೇ ದೊಡ್ಡಪ್ಪ ನವರ ಮಗ ಆಗಿದ್ದರೆ ಚೆನ್ನಾಗಿತ್ತು ಎಂದು ಅನಿಸಿತು. ಸುಮ್ಮನೆ ಈ ನವಿಲು ಹಾಗೂ ಹೆಬ್ಬಾವಿನ ಜೋಡಿಯನ್ನು ಹಾಗೇ ಕಲ್ಪಿಸಿಕೊಂಡೆ. ಅಲಾ ಮಾವನ ಮಗ ಆದ ಕೂಡಲೇ, ಅವರಿಬ್ಬರನ್ನು ಜೋಡಿಯಾಗಿ ನಾನು ಯಾಕೆ ಕಲ್ಪಿಸಿಕೊಳ್ಳುತ್ತಿದ್ದೆನೆ, ಮಾವನ ಮಗ ಆದ ಕೂಡಲೇ ಮದುವೆಯೇ ಆಗಬೇಕೇ.ನನ್ನೊಂದು ಹುಚ್ಚು ಕಲ್ಪನೆ.
" ಹೌದು.. ನಿನ್ನೆ ಅಲ್ಲಿ ಫಂಕ್ಷನ್ ಇತ್ತು.. ನೀವು ಯಾಕೆ ನಿನ್ನೆ ಬರಲಿಲ್ಲ.."
" ನಾನು ಬರ್ಬೇಕಿತ್ತು, ಆದರೆ ಬರಲಿಕ್ಕೆ ಆಗಲಿಲ್ಲ.. ಕಾಲೇಜಿನಲ್ಲಿ ನನ್ನ ಫೈನಲ್ ಇಯರ್ ಪ್ರಾಜೆಕ್ಟ್ ವರ್ಕ್ ತುಂಬಾ ಪೆಂಡಿಂಗ್ ಇತ್ತು,ಹಾಗಾಗಿ ಬರಲಿಲ್ಲ. ಅಣ್ಣಾ ಹಾಗೂ ಅಮ್ಮ ನಿನ್ನೆ ಬಂದಿದ್ದರು, ಅವರು ಇವತ್ತು ಕೂಡ ಇಲ್ಲೇ ಅಂಕಲ್ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.."
"ನಿನ್ನೆ ಬಂದಿದ್ದರೆ ಸೇಮೆದಡ್ಡೆ(ಒತ್ತು ಶ್ಯಾವಿಗೆ) ಹಾಗೂ ಸಿಹಿ ಕಾಯಿಹಾಲು ಸವಿಯಬಹುದಿತ್ತು ಗೊತ್ತಾ .. " ಅಂದೆ.
" ಹೌದೌದು.. ನಮ್ಮ ಪನ್ನಗನೇ ಅಲ್ಲವೇ ಅಷ್ಟೊಂದು ಸೇಮೆದಡ್ಡೆ ಮಾಡಿದ್ದು, ಪೋಟೋ ಬೇರೆ ಹಾಕಿದ್ದ ಪೇಸ್ಬುಕ್ ನಲ್ಲಿ. ಶೇ, ನಾನು ಮಿಸ್ ಮಾಡಿದೆ ನಮ್ಮ ಪನ್ನಗನ ಮೊದಲ ಪ್ರಯತ್ನ ದ ಸೇಮೆದಡ್ಡೆ ಯನ್ನು.. "
ನಮ್ಮ ಪನ್ನಗ ಮಾಡಿದ್ದು?!! ಆಂಟಿ ಹೇಳಿದ್ದಕ್ಕಾಗಿ ಅಷ್ಟೂ ಸೇಮೆದಡ್ಡೆ ಕಷ್ಟಪಟ್ಟು ಒತ್ತಿ ಕೊಟ್ಟದ್ದು ನಾನು,ಅದರೆ ಆ ಪನ್ನಗ ಎಲ್ಲವನ್ನೂ ನಾನೇ ಮಾಡಿದ್ದು, #My_First_Attempt ಅಂತ ಪೋಟೋ ಬೇರೆ ಪೇಸ್ಬುಕ್ ನಲ್ಲಿ ಹಾಕಿ, ಬಿಟ್ಟಿ ಬಿಲ್ಡ್ ಅಪ್ ತಗೊಂಡು ಬಿಟ್ಟಿದ್ದ..
ಆದರೆ ನನಗೆ ಅದು ಟೆನ್ಶನ್ ಆದದ್ದು ಅಲ್ಲಾ, ಇವಳು" ನಮ್ಮ ಪನ್ನಗ...ನಮ್ಮ ಪನ್ನಗ.. " ಎಂದು ಹೇಳಿದ್ದು ಸ್ವಲ್ಪ ಟೆನ್ಶನ್ ಜಾಸ್ತಿ ಮಾಡಿ ಬಿಟ್ಟಿತು.ಅಲ್ಲಾ..ಇವರ ಮಧ್ಯೆ ಏನೋ ಒಂದು ನಡೆಯುತ್ತಿರಬಹುದಾ..!
ಇಲ್ಲ ಹಾಗಾಗಲು ನಾನು ಬಿಡುವುದಿಲ್ಲ. ಇದಕ್ಕೆ ಕಲ್ಲು ಹಾಕಿಯೇ ಹಾಕುತ್ತೇನೆ. ಅವ ಕಲ್ವಾ ಮೊನ್ನೆ ನನಗೂ ಅವನ ಅಕ್ಕ ಸಾಮೀಪ್ಯ ಳಿಗೂ ಒಟ್ಟಿಗೆ ಸೇಮೆದಡ್ಡೆ ಒತ್ತಲು ಕೂಡ ಬಿಟ್ಟಿಲ್ಲ. ಅಲ್ಲದೇ ನಮ್ಮ ನಡುವೆ ಏನೋ ಒಂದು ನಡೆಯಲು ಕೂಡ ಅವ ಬಿಡುವುದಿಲ್ಲ. ನನ್ನ ಪಾಲಿನ ದುಷ್ಮನ್ ಅವ. ಹಾಗಾಗಿ ಒಂದು ವೇಳೆ ಅವನ ಮತ್ತು ಈ ಮುದ್ದಾದ ಹುಡುಗಿಯ ಮಧ್ಯೆ ಏನೋ ಒಂದು ನಿಜವಾಗಿಯೂ ನಡೆಯುತ್ತಿದ್ದರೆ ಅದಕ್ಕೆ ನಾನೇ ಮೊದಲ ಕಲ್ಲು ಎತ್ತಿ ಹಾಕುತ್ತೇನೆ ಎಂದು ಧೃಢವಾಗಿ ನಿರ್ಧರಿಸಿದೆ.
ರೋಡ್ ಬಿಟ್ಟು ನಾವು ಗುಡ್ಡದ ಹಾದಿ ಹಿಡಿದೆವು. ಗುಡ್ಡದ ಹಾದಿ ಯಾವಾಗಲೂ ಚಂದ. ಅದರಲ್ಲೂ ಮುಸ್ಸಂಜೆ ಸೂರ್ಯ ನ ತಂಪು ಮತ್ತು ಆ ಕೆಂಪು ಕಿರಣಗಳಿಗೆ ಮೈ ಮನ ಸಡಿಲವಾಗುವ ತಾಣ ಅದು. ಸ್ವಲ್ಪ ಮಳೆ ಬಿದ್ದು ಹಸಿರು ಹುಲ್ಲು ಚಿಗುರಿ.. ಅಲ್ಲಲ್ಲಿ ಕಾಡು ಮಲ್ಲಿಗೆ ಅರಳಿ.. ಹೆಸರಿಲ್ಲದ ಅಣಬೆಗಳು ತಲೆ ಎತ್ತಿ..ಆಹಾ ಒಂಥರಾ ಆಹ್ಲಾದಕರ ವಾತಾವರಣ ನಿರ್ಮಾಣ ಗೊಂಡಿತ್ತು. ಕಣ್ಣಿಗೂ ತಂಪು.. ಮನಸ್ಸಿಗೂ ತಂಪು.
" ಅಂದ ಹಾಗೆ ನಿಮ್ಮ ಹೆಸರೇನು..."
" ಸಾಂಗತ್ಯ.."
"ಆಹಾ.. ಎಷ್ಟು ಮುದ್ದಾದ ಹೆಸರು.. ನಿಮ್ಮ ಹಾಗೆಯೇ.."
ಅವಳು ಹಾಗೇ ನಕ್ಕಳು..ಅವಳು ನಕ್ಕಾಗ ಗುಡ್ಡೆಯ ಪೊದೆಯಲ್ಲಿ ಅರಳಿದ ನನ್ನಿಷ್ಟದ ಕಾಡುಮಲ್ಲಿಗೆ ಕೂಡ ನನ್ನ ಕಣ್ಣಿಗೆ ಒಂದು ಕ್ಷಣ ಮಂಕಾಗಿ ಹೋಯಿತು.
ಹಾಗೆಯೇ ಮುಗುಳು ನುಗುತ್ತಾ, ಮುಖದ ಮೇಲೆ ಬಿದ್ದಿದ್ದ ಕೂದಲು ಹಿಂದೆ ಸವರಿ "ಥ್ಯಾಂಕ್ಸ್..." ಎಂದು ಹೇಳಿದಳು
ಅವಳು ನಕ್ಕದ್ದು ನೋಡಿ ತುಂಬಾ ಖುಷಿ ಆಯಿತು..
"ನನ್ನ ಹೆಸರು ಕೇಳುವುದಿಲ್ಲವೇ..."
"ಹೇಳಿ ನಿಮ್ಮ ಹೆಸರೇನು.."
"ಪಚ್ಚು ಅಂತ..."
"ಓಹ್ ಆ ಪಚ್ಚು ನೀವಾ... ಊರಲ್ಲಿ ಸೇಮೆದಡ್ಡೆ ಎತ್ತುವುದರಲ್ಲಿ ನೀವು ಎತ್ತಿದ ಕೈ ಅಂತೆ..ಪನ್ನಗ ಹೇಳುತ್ತಿದ್ದ..."
ಮಾರಿ ಪನ್ನಗ..ಹೇಗೋ ನನ್ನ ಬಗ್ಗೆ ಹೇಳಿದ್ದಿಯಾ.. ಎಲ್ಲಾ ಬಿಟ್ಟು ಇದೊಂದೇ ಹೇಳಿ ಯಾಕೆ ಸತ್ತೆ.. ಊರಲ್ಲಿ ಸೇಮೆದಡ್ಡೆ ಒತ್ತುವುದು ಒಂದೆಯಾ ನನ್ನ ಸಾಧನೆ.. ಬರೀ ಸೇಮೆದಡ್ಡೆ ಒತ್ತುವುದರಲ್ಲಿಯೇ ಎತ್ತಿದ ಕೈ ಎನ್ನುವುದು ಯಾವ ಮಹಾನು ಸಾಧನೆ😡😡
ಪನ್ನಗನ ಮೇಲೆ ಸಿಟ್ಟು ಜಾಸ್ತಿ ಆಯಿತು.
" ಹಾಗೇನಿಲ್ಲ... ಚಿಕ್ಕಂದಿನಿಂದಲೂ ಸೇಮೆದಡ್ಡೆ ಒತ್ತಿ ಒತ್ತಿ ಅಭ್ಯಾಸ ನೋಡಿ, ಹಾಗಾಗಿ ನನಗೆ ಕೂಡ ಆ ಕೆಲಸ ತುಂಬಾ ಇಷ್ಟ, ಯಾರಾದರೂ ಪ್ರೀತಿಯಿಂದ ಕರೆದು ಸ್ವಲ್ಪ ಹೆಲ್ಪ್ ಮಾಡುತ್ತಿಯಾ ಎಂದು ಕೇಳಿದರೆ ಇಲ್ಲ ಎಂದು ಹೇಳಲು ಮನಸ್ಸೇ ಬರುವುದಿಲ್ಲ.. ಬೇಕಿದ್ದರೆ ನೀವು ಹೇಳಿ, ನಿಮ್ಮ ಮದುವೆಗೆ ನಾನೇ ಬಂದು ಸೇಮೆದಡ್ಡೆ ಒತ್ತಿ ಕೊಡುತ್ತೇನೆ.."
ಸಾಂಗತ್ಯ ಬಾಯಿಗೆ ಕೈ ಹಿಡಿದುಕೊಂಡು ಜೋರಾಗಿ ನಕ್ಕಳು. ಅರಳು ಮಲ್ಲಿಗೆ, ಬಿರಿದ ಮಲ್ಲಿಗೆ, ಜಾಜಿ ಮಲ್ಲಿಗೆ,ದುಂಡು ಮಲ್ಲಿಗೆ ಎಲ್ಲವೂ ಅವಳೇ ಆಗಿದ್ದಳು. ನಿಜವಾಗಿಯೂ ಅವಳು ಸಹಜ ಸುಂದರಿ. ನಕ್ಕಾಗ ಇನ್ನಷ್ಟು ಸುಂದರಿ, ಅವಳ ನಕ್ಕಾಗ ಮಾತ್ರ ಎದುರಿಗಿರುವ ಯಾರೇ ಆಗಲಿ ಒಮ್ಮೆ ಅವರ ಹೃದಯ ಬಡಿತ ದಿಕ್ಕು ತಪ್ಪಲೇಬೇಕು..ನನ್ನದೂ ತಪ್ಪಿತು.
" ಇಲ್ಲ.. ಇಲ್ಲ.. ಸದ್ಯಕ್ಕೆ ಮದುವೆ ಇಲ್ಲ.. 🤣🤣"
ಉಫ್.. ಸಧ್ಯಕ್ಕೆ ಬಚಾವ್, ಟ್ರೈ ಮಾಡಲು ನನ್ನಲ್ಲಿ ಇನ್ನಷ್ಟು ಸಮಯವಿದೆ ಅಂತ ಅಂದುಕೊಂಡೆ.
"ಬೇಕಿದ್ದರೆ ಹೇಳಿ.. ನಿಮಗೆ.. ನಿಮಗೆ ಸೇಮೆದಡ್ಡೆ ಸ್ಟೇರಿಂಗ್ ತಿರುಗಿಸಲು ನಾನು ಹೇಳಿಕೊಡುತ್ತೇನೆ.."
ಅವಳು ಮತ್ತೊಮ್ಮೆ ನಕ್ಕಳು.. "ನೀವು ಚೆನ್ನಾಗಿ ಮಾತಾಡುತ್ತೀರಿ ಬಿಡಿ.. "
" ನೀವು ಚೆನ್ನಾಗಿ ನಗುತ್ತೀರಿ ಬಿಡಿ..." ಅಂದೆ.
ಜಾಸ್ತಿ ಹಾಗೆ ನಗಬೇಡ ಹುಡುಗಿ, ಮನೆಯ ಪಕ್ಕದ ಸಂಪಿಗೆ ಹುಡುಗಿಯ ಮೌನ... ಗ್ರಿನ್ ಸಿಗ್ನಲ್ಲೋ, ರೆಡ್ ಸಿಗ್ನಲ್ಲೋ ಎಂದು ಗೊತ್ತಾಗದೇ ಇನ್ನೂ ಚಡಪಡಿಸುತ್ತಿದ್ದೆನೆ.. ಇನ್ನು ನೀನು ಈ ರೀತಿಯಾಗಿ ನಗುತ್ತಿದ್ದರೆ ನನಗೆ ಮೀನಿನಂತೆ ವಿಲವಿಲ ಒದ್ದಾಡುವುದು ಒಂದನ್ನು ಬಿಟ್ಟು ಮತ್ತೇನು ತಿಳಿಯದು.
ಆ ಗುಡ್ಡದ ಮಧ್ಯೆ ದಲ್ಲಿ ಮಳೆ ಜೋರಾಗಿ ಸುರಿಯಲಾರಂಬಿಸಿತು.
ಕೊಡೆ ಬಿಡಿಸಿದೆ. ನನ್ನದು ದೊಡ್ಡ ಕೊಡೆ, ಬಿಡಿಸಿದರೆ ಆರಾಮಾಗಿ ಮೂರು ಮಂದಿ ನಡೆದುಕೊಂಡು ಹೋಗಬಹುದು. ನಮ್ಮ ಮನೆಯ ಸುತ್ತ ಮುತ್ತ ಹೇಳುತ್ತಾರೆ ಪಚ್ಚುನ ಕೊಡೆಯಲ್ಲಿ ಪಾನ್ ಬೀಡ ದ ಒಂದು ಅಂಗಡಿ ಹಾಕಬಹುದು ಎಂದು. ಅಷ್ಟು ದೊಡ್ಡ ಕೊಡೆ. ಅದರಲ್ಲೂ ನನಗೆ ಕೊಡೆಗಳೆಂದರೆ ಬಾರೀ ಪ್ರೀತಿ. ತುಂಬಾ ಆಸ್ಥೆಯಿಂದ ಆಸಕ್ತಿಯಿಂದ ಸೆಲೆಕ್ಟ್ ಮಾಡಿಕೊಳ್ಳುತ್ತೇನೆ.ಇದು ಬೇರೆ ಹೊಸ ಕೊಡೆ.ಪರ್ಪಲ್ ಕಲರ್ ನದ್ದು. ತಗೊಂಡ ಮೇಲೆ ಇವತ್ತೇ ಮೊದಲು ಸಲ ಬಿಡಿಸಿದ್ದು. ಅದು ಕೂಡ ಅವಳಿದ್ದುದಕ್ಕಾಗಿ, ಇಲ್ಲದಿದ್ದರೆ ನಡೆದೋ, ಓಡಿಯೋ ಹೋಗಿ ಮನೆ ಮುಟ್ಟುತ್ತಿದ್ದೆ.
"ಬನ್ನಿ.. ಕೊಡೆಯ ಒಳಗೆ .. ಇಲ್ಲದಿದ್ದರೆ ಒದ್ದೆಯಾಗುತ್ತೀರಾ.. ಒದ್ದೆ ಆದರೆ ಶೀತ ಆಗುತ್ತೆ.. ಶೀತ ಆದರೆ ತಲೆನೋವು ಬರುತ್ತೆ.. ಆಮೇಲೆ ಜ್ವರ ಬರುತ್ತೆ... ಈ ಕೋರೋನ ಟೈಂ ಅಲ್ಲಿ ಜ್ವರ ಶೀತ ಎಲ್ಲಾ ಬಂದರೆ ಗೊತ್ತಲ್ಲ.. ಮೆಡಿಕಲ್ ನಲ್ಲಿ ಮೆಡಿಸಿನ್ ಕೂಡ ಕೊಡಲು ಹಿಂದೆ ಮುಂದೆ ನೋಡುವ ಕಾಲ.."
ಅವಳು ನಗುತ್ತಲೇ ಕೊಡೆಯಡಿಗೆ ಬಂದಳು..
ಕರಡಿ ಜೊತೆಗೆ ನವಿಲಿನ ಪಯಣ..
ಮಳೆ ಜೋರಾಗಿ ಬೀಸುತ್ತಿತ್ತು..
ನನ್ನ ಭುಜ ಅವಳ ಭುಜ ಸೋಕಿತು.. ಒಮ್ಮೆಲೇ ಕಣ್ಣು ಕಣ್ಣು ಸಂಧಿಸಿತು..ತುಂಬಾ ಹೊತ್ತು ಹಾಗೇ ಕಣ್ಣು ಕಣ್ಣು ನೋಡಿಕೊಂಡೇ ಇದ್ದೆವು.
ಅವಳದ್ದು ಅದೆಷ್ಟು ವಿಶಾಲವಾದ ಸುಂದರ ಕಣ್ಣು. ನಾನು ಆ ಕಣ್ಣಿನಲ್ಲಿ ಧುಮುಕಿ ಹಾಗೇ ಕಳೆದು ಹೋದೆ.
ಒಮ್ಮೆಲೇ ಅವಳು ಸಾವರಿಸಿಕೊಂಡು, ಕಂಠ ಸರಿಪಡಿಸಿಕೊಂಡು ಏನೂ ಸಂಭವಿಸಿಯೇ ಇಲ್ಲ ಎನ್ನುವಂತೆ ಪಕ್ಕದಲ್ಲಿಯೇ ಮಳೆಯ ನೀರಿಗೆ ತೊಯ್ದು ಬಳಕುತ್ತಿದ್ದ ಕಾಡು ಮಲ್ಲಿಗೆಯನ್ನು ನೋಡಿ.." ಈ ಗುಡ್ಡೆಯಲ್ಲಿ ಕಾಡುಮಲ್ಲಿಗೆ ತುಂಬಾ ಆಗುತ್ತದೆ ಅಲ್ಲವೇ.." ಅಂದಳು.
"ಹೌದು ಈ ಗುಡ್ಡಕ್ಕೆ ಅವಳೇ ರಾಣಿ..ನಾನೇ ರಾಜ.. ಅಷ್ಟೇನು ಪರಿಮಳವಿಲ್ಲದಿದ್ದರೂ.. ಪೊದೆಯಲ್ಲಿ ಕಾಡುಮಲ್ಲಿಗೆಯನ್ನು ಕಂಡಾಗಲೆಲ್ಲ ನನಗೆ ಹಸಿರು ಗಿಡದ ತುಂಬಾ ಮೊಸರು ಚೆಲ್ಲಿದಂತೆ ತೋರುತ್ತದೆ.." ಅಂದೆ.
"ವಾಹ್.. ನೀವು ತುಂಬಾ ಸುಂದರವಾಗಿ ಕೂಡ ಮಾತಾಡುತ್ತಿದ್ದಿರಿ.. ಕೇವಲ ಸೇಮೆದಡ್ಡೆಯ ಹೃದಯ ಮಾತ್ರವಲ್ಲ, ಅಲ್ಪ ಸ್ವಲ್ಪ ಕವಿ ಹೃದಯವೂ ಇದ್ದಂತಿದೆ.. " ಅಂದಳು.
" ಇದು ನಾನು ಹೇಳಿದ್ದಲ್ಲಾ.. ಇದು ಮಲ್ಲಿಗೆಯ ಕುರಿತಾದ ಒಂದು ಒಗಟು, ಅದು ಅಲ್ಲದೇ ಮಲ್ಲಿಗೆ ಕಂಡರೆ ಯಾರು ತಾನೇ ಕವಿಯಾಗುವುದಿಲ್ಲ ಹೇಳಿ.. "
" ವಾಹ್.. ಅಲ್ಲಿ ನೋಡಿ ಎಷ್ಟೊಂದು ಗೊಂಚಲು ಗೊಂಚಲು ಮಲ್ಲಿಗೆ.. ಪ್ಲೀಸ್ ತೆಗೆದು ಕೊಡುವಿರಾ.. "
" ಅಷ್ಟೇ ತಾನೇ.. ಅದನ್ನು ಯಾಕೇ ಬಿರಿಯಾನಿ ರೇಂಜಿಗೆ ಕೇಳ್ತೀರಾ... ಸ್ವಲ ಕೊಡೆಯನ್ನು, ನನ್ನ ಈ ಬ್ಯಾಗ್ ಅನ್ನು ಹಿಡಿದು ಕೊಳ್ಳಿ, ನಾನು ಒದ್ದೆಯಾದರೂ ಪರವಾಗಿಲ್ಲ, ಬ್ಯಾಗ್ ಮಾತ್ರ ಒದ್ದೆಯಾಗಬಾರದು ನೋಡಿ.. "
ಅವಳು ನನ್ನ ಕೊಡೆಯನ್ನೂ, ನನ್ನ ಬ್ಯಾಗ್ ಅನ್ನು ಹಿಡಿದು ಕೊಂಡಳು.
ನಾನು ಆ ಮಳೆಯಲ್ಲಿ ನೆನೆಯುತ್ತಾ ಗುಡ್ಡದ ಬರೆ ಹತ್ತಿ ಒಂದು ಗೊಂಚಲು ಕಾಡು ಮಲ್ಲಿಗೆಯನ್ನು ಕಿತ್ತು ತಂದು ಅವಳ ಬೊಗಸೆಗೆ ತಂದು ಸುರಿದೆ.
ಮತ್ತೊಂದು ಮಲ್ಲಿಗೆ ತುಂಬಿದ ಬಳ್ಳಿಯನ್ನು ಕಟ್ ಮಾಡಿ ಕೋಲು ಒಂದಕ್ಕೆ ಆ ಮಲ್ಲಿಗೆ ಬಳ್ಳಿಯನ್ನು ಸುತ್ತಿ ಕೋಲನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ಗಾಳಿಯಲ್ಲಿ ಬೀಸುತ್ತಾ ನಿಂತಿದ್ದೆ.
ಬೊಗಸೆ ತುಂಬಾ ಮಳೆಯಲ್ಲಿ ತೊಯ್ದ ಕಾಡು ಮಲ್ಲಿಗೆಯ ಕಂಡು ಅವಳ ಖುಷಿ ಗೆ ಪಾರವೇ ಇರಲಿಲ್ಲ..
ನಾನಂತೂ ಆ ಮಳೆಗೆ ಪೂರ್ತಿ ಚಂಡಿ ಮುದ್ದೆ ಆಗಿ ಅವಳೆದುರು ನಿಂತಿದ್ದೆ.
"ನಿಮ್ಮನ್ನು ನಾನು ಹೆಸರು ಹಿಡಿದು ಕರೆಯಬಹುದೇ.." ಕೇಳಿದೆ.
" ಓಹ್.. ಖಂಡಿತವಾಗಿಯೂ.." ಅಂದಳು.
" ಸಾಂಗತ್ಯ.. ನಿಮಗೆ ಮಲ್ಲಿಗೆ ಎಂದರೆ ಅಷ್ಟೊಂದು ಇಷ್ಟವೇ.."
"ಹೌದು ಮತ್ತೆ.. ಪರಿಮಳದ ಶಂಕರಾಪುರ ಮಲ್ಲಿಗೆ.. ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ, ಅದರಲ್ಲೂ ಹೆಣ್ಣು ಮಕ್ಕಳಿಗೆ ಬಳೆ, ಕುಂಕುಮ, ಸೀರೆ, ಒಡವೆ,ಮತ್ತು ಹೂವು.. ಅದರಲ್ಲೂ ಮಲ್ಲಿಗೆ ಹೂವು ಯಾವತ್ತೂ ತುಂಬಾನೇ ಇಷ್ಟ.. ಆದರೆ ಯಾವತ್ತೂ ಕಾಡುಮಲ್ಲಿಗೆ ಮುಡಿದಿಲ್ಲ,ಇದನ್ನು ನಾನು ಮುಡಿಯಬಹುದಾ.. "
" ಯಾಕಿಲ್ಲ.. ಖಂಡಿತವಾಗಿಯೂ.."
ಅವಳು ಮಲ್ಲಿಗೆ ಮುಡಿದು ಕೊಳ್ಳಲು ಪ್ರಯತ್ನ ಪಟ್ಟಳು. ಆದರೆ ಆ ಮಳೆಯಲ್ಲಿ ಒಂದು ಕೈಯಲ್ಲಿ ಕೊಡೆ, ಬೆನ್ನಿಗೆ ಒಂದು ಬ್ಯಾಗ್, ಕೈಯಲ್ಲಿ ನನ್ನ ಬ್ಯಾಗ್, ಹಾಗೂ ಅವಳ ಮತ್ತೊಂದು ದೊಡ್ಡ ಪ್ಲಾಸ್ಟಿಕ್ ಬ್ಯಾಗ್ ಇರುವಾಗ ಮಲ್ಲಿಗೆ ಮುಡಿದು ಕೊಳ್ಳುವುದಾದರೂ ಹೇಗೆ ಹೇಳಿ..
"ನಿಮ್ಮನ್ನು ನಾನು ಹೆಸರು ಹಿಡಿದು ಕರೆಯಬಹುದೇ.." ಕೇಳಿದಳು.
" ಕರೆಯಿರಿ.. No problem" ಅಂದೆ.
"ಅಲ್ಲಾ ಪಚ್ಚು ಅವರೇ.. ನಾನೊಬ್ಬನೇ ಈ ಮಲ್ಲಿಗೆ ಮುಡಿಯಲು ಇಷ್ಟು ಕಷ್ಟ ಪಡುತ್ತಿದ್ದೆನೆ, ನೀವು ಹೀಗೆ ಮುಂಗಾರು ಮಳೆ ಗಣೇಶ್ ತರಹ ಮಳೆಯಲ್ಲಿ ನೆನೆಯುತ್ತಾ ನನ್ನ ಅವಸ್ಥೆ ನೋಡುತ್ತಿದ್ದೀರಿ ಅಲಾ.. ಸ್ವಲ್ಪ ಮಲ್ಲಿಗೆ ಮುಡಿಯಲು ಹೆಲ್ಪ್ ಮಾಡಬಾರದೇ.."
ರೋಗಿ ಬಯಸಿದ್ದು ಪಾಯಸ .. ಡಾಕ್ಟರ್ ಹೇಳಿದ್ದು ಗಸಗಸೆ ಪಾಯಸ ಅನ್ನುವಂತಾಯಿತು ನನ್ನ ಸ್ಥಿತಿ.
ಮಳೆಯಲ್ಲಿ ನೆನೆಯುವಾಗ, ಒಂದು ಹುಡುಗಿ..ಗುಡ್ಡದ ತುದಿಯಲ್ಲಿ ನಿಂತುಕೊಂಡು.. ಅದರಲ್ಲೂ ಹೇಯ್ ಹುಡುಗ ಮಲ್ಲಿಗೆ ಮುಡಿಸಬಾರದೇ ಎಂದು ಬಾಯಿ ಬಿಟ್ಟು ಹೇಳಿದರೆ... ನಾನು ಇಲ್ಲ ಎಂದು ಯಾವ ಬಾಯಲ್ಲಿ ಹೇಳಲಿ. ನಮಗೆ ಗೊತ್ತಿಲ್ಲದೇ ಜೀವ ವೀಣೆ ಹಿತವಾಗಿ ಯಾರೋ ಮೀಟಿದಂತೆ ಆಗುವುದು ಆವಾಗಲೇ.
ಮಲ್ಲಿಗೆ ದಂಡೆ ದೇವರ ಪೋಟೋದಲ್ಲಿ ದೇವರ ತಲೆ ಮೇಲೆ ಇರಿಸಿ ಗೊತ್ತು, ಆದರೆ ಹುಡುಗಿ ತಲೆಗೆ ಮುಡಿಸಿ ಗೊತ್ತಿಲ್ಲ. ಆ ವಿಷಯದಲ್ಲಿ ಹೆಚ್ಚಿನವರಂತೆ ನಾನು ಕೂಡ ಅನನುಭವಿ. ಆದರೂ ಮುಡಿಸಿದೆ. ಅವಳು ಕೇಶ ಅದೆಷ್ಟು ಚಂದ.ಆ ಕಾಡು ಮಲ್ಲಿಗೆ ಯ ಭಾಗ್ಯ ಕಂಡು ನಾನು ಸಿಕ್ಕಾಪಟ್ಟೆ ಹೊಟ್ಟೆ ಕಿಚ್ಚು ಪಟ್ಟೆ.
"Thanx Pacchu.."
" pleasure is all mine Saangathya .."
ಅವಳು ತುಸು ನಕ್ಕಳು.. ಮಲ್ಲಿಗೆಯಂತಹ ಅವಳು ಮತ್ತು ಅವಳ ಮುಡಿಯ ಮಲ್ಲಿಗೆ ಒಟ್ಟಿಗೆ ನಕ್ಕಂತಾಯಿತು.
"ಯಾಕೆ ನೆನೆಯುತ್ತಿದ್ದೀರಾ.. ಕೊಡೆಯೊಳಗೆ ಬನ್ನಿ.. ನಿಮಗೆ ಶೀತ ಆಗುವುದಿಲ್ಲವೇ.. ಜ್ವರ ಬರುವುದಿಲ್ಲವೇ.. ಮತ್ತೆ ಗೊತ್ತುಂಟಲ್ಲಾ.. ಈಗ ಕೊರೋನ ಟೈಂ ಬೇರೆ.. ಜ್ವರ ಬಂದರೆ ಮೆಡಿಕಲ್ ಅಲ್ಲಿ ಮದ್ದು ಸ ಕೊಡುವುದಿಲ್ಲಾ.. "
ನಾನು ಜೋರಾಗಿ ನಕ್ಕೆ..
"ಪಚ್ಚು ನೀವು ನಕ್ಕರೆ ಚಂದ ಕಾಣುತ್ತೀರಾ.."
ಎಂತ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತಾ ಹೇಗೆ... 🙄🤔
" ತುಂಬಾ ಥ್ಯಾಂಕ್ಸ್.. ಹೌದು 'ನಾನು ನಕ್ಕರೆ.. ಹಾಲು ಸಕ್ಕರೆ...' ನಮ್ಮ ಮನೆಯಲ್ಲಿ ಚಾಹ, ಕಾಫಿ ಗೆ ಸಕ್ಕರೆ ಯನ್ನೇ ಹಾಕುವುದಿಲ್ಲ, ಜಸ್ಟ್ ನನ್ನ ಕೈಗೆ ಹಾಲು ಕೊಟ್ಟು ನಗಲು ಹೇಳುತ್ತಾರೆ.. ಆಗ ಹಾಲು ಸಿಹಿಯಾಗುವುದು.. "
ಸಾಂಗತ್ಯ ಆ ಮಳೆಯಲ್ಲೂ ಬಿದ್ದು ಬಿದ್ದು ನಕ್ಕಳು..
ನಾನು ಆ ಮಳೆಯಲ್ಲಿ ನಿಧಾನವಾಗಿ ಕರಗಿ ಹೋಗುತ್ತಿದ್ದೆ.
" ಹಾನ್.. ಬನ್ನಿ ಮಳೆ ಜೋರು ಆಗ್ತಿದೆ, ಕೊಡೆಯೊಳಗೆ ಬನ್ನಿ.. "
" ಮಳೆಯಲ್ಲಿ ನಡೆಯೋದು ನನ್ನ hobby, ನನಗೆ ಅಭ್ಯಾಸ ಇದೆ,ನನಗೇನು ಆಗಲ್ಲ, ಅದೂ ಅಲ್ಲದೇ ಮೊದಲೇ ಪೂರ್ತಿ ಒದ್ದೆಯಾಗಿದ್ದೇನೆ.So,No problem. ಆದರೆ ನನ್ನ ಬ್ಯಾಗ್ ಒಂದು ಒದ್ದೆಯಾಗದ ಹಾಗೆ ಮಾತ್ರ ನೋಡಿ ಕೊಳ್ಳಿ.."
" ಮಳೆಯಲ್ಲಿ ನೆನೆಯುವುದು ಕೂಡ ಒಂದು hobby ಯ.? ನೀವು ಮುಂಗಾರು ಮಳೆ ಗಣೇಶ್ ಅಭಿಮಾನಿ ಯ?.. "
" ನಾನು ರೆಟ್ರೋ ಟೈಂ ನ ಚಾಕೊಲೇಟು ಹೀರೋ ಅನಂತ್ ನಾಗ್ ಅಭಿಮಾನಿ.. ಅವರ ಹಿಂದಿನ ಹಳೆಯ ಸಿನಿಮಾಗಳು ನನಗೆ ಈಗಲೂ ಇಷ್ಟ. ಮಾತ್ರವಲ್ಲ ಈಗಲೂ ಕೂಡ ನನಗೆ ಅವರೇ ಇಷ್ಟ.."
" ನನಗೂ ಅನಂತ್ ನಾಗ್ ಒಂಥರಾ ಇಷ್ಟ ಆಗ್ತಾರೆ, ಅವರ ಹಳೆಯ ಚಿತ್ರಗಳ ಕಾಮೆಡಿ ನನಗೆ ಇಷ್ಟ.. "
" ನಿಮಗೆ ಕಾಮಿಡಿ ಅಂದರೆ ಇಷ್ಟವಾ... "
" ಹೌದು ಮತ್ತೆ.. ನಗು ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ... "
" ಓಕೆ ಮುಂದೆ ಸಾಗುವ.. ನನ್ನ ಬ್ಯಾಗ್ ಜೋಪಾನ.. "
" ಆಯಿತು ನಿಮ್ಮ ಇಷ್ಟದಂತೆ ನೀವು ಮಳೆಯಲ್ಲಿಯೇ ನಡೆದುಕೊಂಡು ಬನ್ನಿ, ಮತ್ತೆ ಶೀತ ಗೀತ ಆಗಿ ಹೆಚ್ಚು ಕಡಿಮೆ ಆದರೆ ನನ್ನನ್ನು ಬೈಯ್ಯ ಬಾರದು ಮಾತ್ರ... ಹಾನ್.. ನಿಮ್ಮ ಬ್ಯಾಗ್ ಬಗ್ಗೆ ಚಿಂತೆ ಬಿಡಿ, ನಾನು ಒದ್ದೆ ಆದರೂ, ನನ್ನ ಬ್ಯಾಗ್ ಒದ್ದೆ ಆದರೂ ನಿಮ್ಮ ಬ್ಯಾಗ್ ಒದ್ದೆಯಾಗಲು ಬಿಡವುದಿಲ್ಲ ಆಯ್ತಾ..😌 "
ನನ್ನ ಬ್ಯಾಗ್ ಅನ್ನು ಅವಳು ಭದ್ರವಾಗಿ ಹಿಡಿದುಕೊಂಡಳು. ನಾನು ಹಾಗೇ ಒದ್ದೆಯಾಗುತ್ತಾ, ಕೈಯಲ್ಲಿ ಮಲ್ಲಿಗೆ ಬಳ್ಳಿ ಸುತ್ತಿರುವ ಕೋಲು ಗಾಳಿಯಲ್ಲಿ ತಿರುಗಿಸುತ್ತಾ ಅವಳ ಪಕ್ಕವೇ ನಡೆಯ ತೊಡಗಿದೆ.
ಗುಡ್ಡ ಇಳಿದು ಗದ್ದೆ ತಲುಪಿದೆವು.ಇನ್ನೂ ಸ್ವಲ್ಪ ದೂರ ಗದ್ದೆಯ ಬದುವಲ್ಲಿ, ಹೊಳೆಯ ದಂಡೆಯಲ್ಲಿ ನಡೆಯುತ್ತಾ ಹೋಗಬೇಕು ನಾವು.
ಹಸಿರಾದ ಗದ್ದೆ, ಪಚ್ಚೆ ಯನ್ನೇ ಚಾದರದಂತೆ ಹೊದ್ದು ಕೊಂಡು ಆಕಾಶ ನೋಡುತ್ತಾ ಅಂಗಾತ ಮಲಗಿತ್ತು. ಆ ಮಳೆಗೆ ಭತ್ತದ ಸಸಿ ಆಚೆ ಈಚೆ ಒಲಾಡುತ್ತಾ ನೃತ್ಯಗೈಯುತ್ತಿತ್ತು.ಎರಡು ಗದ್ದೆಯ ನಡುವಲ್ಲಿ ಒಬ್ಬರು ಮಾತ್ರ ಹೋಗಬಹುದಾದ ಪುಣಿ(ಬದು) ಒಂದು ಇದೆ.
ಮೊದಲು ಸಾಂಗತ್ಯ ಳೇ ಬ್ಯಾಗ್ ಹಿಡಿದುಕೊಂಡು, ಕೊಡೆ ಹಿಡಿದುಕೊಂಡು ಬದುವಲ್ಲಿ ಮುಂದೆ ಹೋದಳು.ನಾನು ಅವಳ ಹಿಂದೆಯೇ ಹೋದೆ.
ಗದ್ದೆ ದಾಟಿದ ನಂತರ ಒಂದು ಚಿಕ್ಕ ಹೊಳೆ. ಅದರ ಬದಿಯಲ್ಲಿಯೇ ಹೊಳೆ ದಂಡೆಯಲ್ಲಿ ನಡೆದು ಕೊಂಡು ಹೋಗಬೇಕು.
ಹೊಳೆಯ ಬದಿಯಲ್ಲೇ ನಡೆಯಲು ಶುರು ಮಾಡಿದೆವು..
ಸಾಂಗತ್ಯ ಳೇ ಮಾತು ಶುರು ಮಾಡಿದಳು.
"ಪಚ್ಚು ಮಲ್ಲಿಗೆ ಎಂದರೆ ನಿಮಗೂ ಇಷ್ಟ ಎಂದು ಕಾಣುತ್ತದೆ ಅಲ್ಲಾ....ಕೈಯಲ್ಲಿರೋ ಕೋಲಿಗೆ ಮಲ್ಲಿಗೆ ಬಳ್ಳಿಯನ್ನು ಸುತ್ತಿಕೊಂಡು ಇಟ್ಟಿರುವುದನ್ನು ನೋಡುವಾಗಲೇ ಗೊತ್ತಾಗುತ್ತದೆ.."
"ಹೌದು ಮಲ್ಲಿಗೆ ಎಂದರೆ ತುಂಬಾ ತುಂಬಾ ಇಷ್ಟ, ಈ ಗುಡ್ಡೆಯಲ್ಲಿ ಹಾದು ಹೋಗುವಾಗಲೆಲ್ಲ ಸ್ವಲ್ಪ ಮಲ್ಲಿಗೆಯನ್ನು ಕೈಗೆ ತಗೊಂಡು ಅದನ್ನು ಹಿತವಾಗಿ ಸವರಿ ಹೋಗುವುದು ನನಗೆ ಇಷ್ಟವಾದ ಕೆಲಸ. ಅಷ್ಟು ಮಾತ್ರವಲ್ಲ, " ಮ.. ಅಂದರೆ ಮಲ್ಲಿಗೆ"," ಮಾ.. ಅಂದರೆ ಮಾವು.. " ಎಂಬ ಎರಡು ಪೋಟೋ ಅಲ್ಬಂಗಳನ್ನೇ ಫೇಸ್ಬುಕ್ ನಲ್ಲಿ ಮಾಡಿಕೊಂಡಿರುವೆ ಗೊತ್ತಾ. ನನಗೆ ಎರಡೂ ತುಂಬಾನೇ ಇಷ್ಟ"
"ಮಾವು ಸ ಅಷ್ಟು ಇಷ್ಟವೇ..?"
"ಹೌದು.. ಮಾವು ಒಂದರ್ಥದಲ್ಲಿ ನನ್ನ ಪ್ರೇಯಿಸಿ ಇದ್ದ ಹಾಗೇ, ಒಂದಿಡೀ ಹಣ್ಣು ಮಾವನ್ನು ಕೈಯಲ್ಲಿ ಹಿಡಿದು, ನಿಧಾನವಾಗಿ ಅದರ ಮೈ ಸವರಿ,ಅದರ ಪರಿಮಳನ್ನು ಹಾಗೇ ಮೂಗಿನಲ್ಲಿ ಅಘ್ರಾಣಿಸಿ, ನಂತರ ಹಿತವಾಗಿ ಸುಖವಾಗಿ ಹಣ್ಣನ್ನು ತಿಂದು, ನಂತರ ಅದರ ಗೊರಟೆಯನ್ನು ಕೂಡ ಬಿಡದೇ ಚಿಕ್ಕ ಮಗುವಂತೆ ಹಾಗೇ ಚೀಪಿ ಚೀಪಿ ತಿಂದರೇನೇ ನನಗೆ ಸಮಾಧಾನ..
ಮಾವು ಅಂದರೆ ಅದು ಬರೀಯ ಮಾವು ಅಲ್ಲ..
ನನಗೆ ಅದು ಜೀವದ ಭಾಗ,ನನ್ನೊಲವಿನ ರಾಗ,ಹಳದಿ ಬಣ್ಣದ ಪುಷ್ಯರಾಗ.. 😊🧡💛... "
" ವಾಹ್..ಮಾವು ತಿಂದಂತೆಯೇ ಆಯಿತು.. ನನಗೂ ಮಾವು ಅಂದರೆ ತುಂಬಾ ಇಷ್ಟ ಗೊತ್ತಾ .. " ಅಂದಳು.
" ರಸವತ್ತಾದ ರಸಪುರಿ, ಗಿಳಿ ಮೂತಿಯ ತೋತಪುರಿ, ಶಿಲ್ಪಿ ಕೆತ್ತಿದ ಬದಾಮ್, ಸುಂದರಿ ಮಲ್ಲಿಕಾ, ರತ್ನದಂತಹ ರತ್ನಗಿರಿ, ಅಮೂಲ್ಯ ಆಪೂಸ್(ಅಲ್ಫಾನ್ಪೋ),ಅಷ್ಟು ಮಾತ್ರವಲ್ಲ ಹೆಸರಿಲ್ಲದ ಚಿಕ್ಕ ಕಾಟು ಮಾವು ಎಲ್ಲವೂ ಇಷ್ಟ ನನಗೆ.. " ಅಂದೆ.
"ಅಬ್ಬಾ.. ಏನು ಮಾವು ಪ್ರೀತಿ ಮರ್ರೆ ನಿಮ್ಮದ್ದು.."
"ಗೊತ್ತಿಲ್ಲ.. ಏನೋ ಒಂದು ಸೆಳೆತ.."
"ಪಚ್ಚು ಈ ಮಳೆಗೆ ಮಾವು ತಿನ್ನಲು ಸಿಕ್ಕಿದರೆ ಎಷ್ಟು ಚಂದ ಅಲಾ.."
"ಸಿಕ್ಕಿದರೆ ಚಂದಾ.. ಸಿಗಬೇಕಲ್ಲವೇ.."
" ಯಾರಾದರೂ ಕೊಟ್ಟರೆ..."
"ಇಲ್ಲಿ ಯಾರು.. ಬಹುಶಃ ಯಾವುದಾದರು ದೇವತೆ ನಮ್ಮ ಮಾತುಗಳನ್ನು ಕೇಳಿಸಿಕೊಂಡು.. ಮೇಲಿನಿಂದ ಹಾಗೇ ಪುಷ್ಪಕ ವಿಮಾನದಿಂದ ಕೆಳಗೆ ಇಳಿದು ಬಂದು, ಒಂದು ಬುಟ್ಟಿ ತುಂಬಾ ರಸವತ್ತಾದ ಮಾವಿನ ಹಣ್ಣು ಗಳನ್ನು ಕೊಟ್ಟು ಹೋಗಬೇಕಷ್ಟೇ.. "
" ದೇವತೆ ಬರಲ್ಲ.. ಆದರೂ ಒಬ್ಬರು ಕೊಡಬಲ್ಲರು.. "
" ಯಾರು... "
" ನಾನೇ .. "
" ಹೇಗೆ..? "
"ಮತ್ತೆ ಈ ನನ್ನ ದೊಡ್ಡ ಪ್ಲಾಸ್ಟಿಕ್ ಬ್ಯಾಗ್ ನೊಳಗೆ ಏನಿದೆ ಅಂತ ತಿಳಿದುಕೊಂಡಿದ್ದಿರಿ..."
"ಏನು?... ಮಾವು..! "
"ಓಪನ್ ಮಾಡಿ ನೀವೇ ನೋಡಿ ಅಲಾ.."
ಅವಳ ಕೈಯಿಂದ ಆ ದೊಡ್ಡ ಪ್ಲಾಸ್ಟಿಕ್ ಬ್ಯಾಗ್ ತೆಗೆದುಕೊಂಡು, ಅದರೊಳಗೆ ಪೇಪರ್ ಕವರ್ ನಲ್ಲಿ ಸುತ್ತಿಟ್ಟಿದ್ದ, ಚಿಕ್ಕ ಗಾತ್ರದ ಬಿದಿರಿನ ಬುಟ್ಟಿ ಯನ್ನು ಹೊರತೆಗೆದೆ.. ಆ ಬಿದಿರಿನ ಬುಟ್ಟಿ ಒಳಗೆ ಒಣ ಹುಲ್ಲಿನಲ್ಲಿ ಹಕ್ಕಿ ಮೊಟ್ಟೆಯನ್ನು ಇಟ್ಟಂತೆ,ಅಂದವಾಗಿ ಒಣ ಹುಲ್ಲಿನ ಮಧ್ಯೆ ಜೋಡಿಸಿದ ಹತ್ತು ಸುಂದರವಾದ ದೊಡ್ಡ ಗಾತ್ರದ ಮಾವಿನ ಹಣ್ಣುಗಳು ಇದ್ದವು.. "
ಆಹಾ.. ಎಂತಹ ಪರಿಮಳ.. ಅದರ ಪರಿಮಳಕ್ಕೆನೇ.. ಅರ್ಧ ಹೊಟ್ಟೆ ಭರ್ತಿಯಾಯಿತು.
"ಇದು ಅಲ್ಪೋನ್ಪೋ..?"
" ಹೌದು.. ಅದೇ, ಆಪೂಸ್ ಮಾವು.." ಅಂದಳು.
" ಈ ಮಾವನ್ನು ತಿಂದು ವರ್ಷಗಳ ಮೇಲೆ ಆಗಿತ್ತು. ನಾನು ಮೊದಲೇ ಹೇಳಿಲ್ಲವೇ.. ಈಗ ಬಂದು ಯಾರಾದರೂ ಮಾವು ಕೊಡುವುದಾದರೆ ಅದು ದೇವತೆ ಮಾತ್ರ ಎಂದು.. ಈಗ ನಾನು ಸಪರೇಟ್ ಆಗಿ ದೇವತೆ ಯಾರು ಎಂದು ಹೇಳಬೇಕಾಗಿಲ್ಲ ಅಲ್ಲವೇ .. "ಎಂದೆ
ಅವಳು ಮತ್ತಷ್ಟು ನಕ್ಕಳು.
" ಇಷ್ಟು ಉತ್ತಮ ಹಾಗೂ ದುಬಾರಿ ಮಾವು, ಆಂಟಿ ಮನೆಗೆ ತಗೊಂಡು ಹೋಗುತ್ತಿದ್ದೀರಾ... " ಎಂದು ಕೇಳಿದೆ.
" ಹೌದು.. ಯಾಕೆ,ತಗೊಂಡು ಹೋಗಬಾರದೇ.. "
" ಅಲ್ಲಿಗೆ ತಗೊಂಡು ಹೋಗುವುದು ವೇಸ್ಟ್.. ಅಲ್ಲಿ ಯಾರಿಗೂ ಮಾವಿನ ಹಣ್ಣಿನ ಟೇಸ್ಟೇ ಇಲ್ಲ, ಅದರಲ್ಲೂ ಆ ಪನ್ನಗ ಇದ್ದಾನೆ ಅಲ್ಲಾ ಅವನಿಗೆ ಮಾವು ಕಂಡರೆನೇ ಆಗಲ್ಲ,ಅವರ ಮನೆಯ ಮಾವುಗಳನ್ನೇ ಕೊಯ್ದು ತಿನ್ನುವ ವ್ಯವಧಾನ ಕೂಡ ಅವರಿಗಿಲ್ಲ,ಕೊಯ್ಯುವವರಿಲ್ಲದೇ ಹಣ್ಣಾಗಿ ಕೆಳಗೆ ಬಿದ್ದು ಕೊಳೆತು ಹೋಗುತ್ತಿರುತ್ತದೆ.. ನಾನೇ ಅಲ್ಲಿಯ ಎಲ್ಲಾ ಮಾವುಗಳನ್ನು ತಿಂದು ಸಪಾಯಿ ಮಾಡುವುದು. ನೀವು ಬೇಕಾದರೆ ಫಿಜ್ಜಾ ಬರ್ಗರ್ ತಗೊಂಡು ಹೋಗಿ, ಚೆನ್ನಾಗಿ ತಿಂದು ತೇಗುತ್ತಾನೆ ನಮ್ಮ ಪನ್ನಗ.. " ಅಂದೆ.
" ನಾನು ಖಂಡಿತವಾಗಿಯೂ ಅಲ್ಲಿಗೆನೇ ತಗೊಂಡು ಹೋಗಲು ಮಾವು ಖರಿದಿಸಿದ್ದಾದರೂ.. ಈಗ ಅಲ್ಲಿಗೆ ಈ ಮಾವು ತಗೊಂಡು ಹೋಗಲಾರೆ.. "
" ಅಂದರೆ... "
" ಅಪಾರವಾದ ಮಾವು ಪ್ರೀತಿ ಹೊಂದಿರುವುದು ಮಾತ್ರವಲ್ಲ .. ಮಲ್ಲಿಗೆ ಕೊಯ್ದು, ಕೊಡೆ ಕೊಟ್ಟು, ದಾರಿ ತೋರಿಸಿ,ನನಗಾಗಿ ಮಳೆಯಲ್ಲಿ ಈಗಲೂ ನೆನೆದೇ ಬರುತ್ತಿರುವ ನಿಮಗೆ ಅಲ್ಲದೇ ಬೇರೆ ಯಾರಿಗೆ ಈ ಮಾವು ಕೊಡಲಿ.. "
ಆಹಾ..ಎಷ್ಟು ಚೆನ್ನಾಗಿ ಹೇಳಿಬಿಟ್ಟಲು.. ಹೃದಯವನ್ನೇ ಸೂರೆ ಮಾಡುವಂತೆ.
" ಇಷ್ಟೂ ಮಾವು ನನಗೆಯೇ..."
"ಹೌದು..ನಿಮ್ಮ ಸಹಾಯಕ್ಕೆ ನನ್ನ ಮಾವು ಉಡುಗೊರೆ.. "
" ಸಾಂಗತ್ಯ... "
" ಏನು... "
" ನೀವು ಉಂಟಲ್ಲಾ... ನಿರಂತರವಾಗಿ ಹೀಗೆ ನನ್ನ ಟಚ್ ಅಲ್ಲೇ ಇರಬೇಕು ಕಣ್ರೀ... "
" ಹೌದಾ.. ಯಾಕೆ... "
" ಹೀಗೆ...ಮಳೆಯಲ್ಲಿ ನೆನೆಯುತ್ತಾ.. ಮಾವು ತಿನ್ನುತ್ತಾ ಹೋಗಲು.."
ಸಾಂಗತ್ಯ ನಕ್ಕಳು..
" ನೀವು ಕೂಡ ನಿರಂತರವಾಗಿ ನನ್ನ ಟಚ್ ಅಲ್ಲಿ ಇರಬೇಕು ಪಚ್ಚು.. "
" ಹೌದಾ.. ಯಾಕೆ.. "
" ಹೀಗೆ ಮಳೆಯಲ್ಲಿ ನಡೆಯಲು.. ಕಾಡು ಮಲ್ಲಿಗೆ ಕಿತ್ತು ತೆಗೆಯಲು.. ಗುಡ್ಡೆ, ಗದ್ದೆ, ಹೊಳೆ ಬದಿ ನಡೆಯಲು... "
ನಾನು ನಿಧಾನವಾಗಿ ಸೋಲುತ್ತಿದ್ದೆನೆ ಅನಿಸಿತು.ಒಂದೊಂದೇ ಮಾವು ಶ್ರದ್ಧೆಯಿಂದ ತಿನ್ನುತ್ತಾ ನಡೆಯ ತೊಡಗಿದೆ. ಮತ್ತೊಂದು ಕೈಯಲ್ಲಿ ಮಾವು ತುಂಬಿದ ಬುಟ್ಟಿ ಇತ್ತು. ಮಳೆ ಹಾಗೇ ಸುರಿಯುತ್ತಿತ್ತು.
ನನ್ನ ಕೈಯಲ್ಲಿ ಇದ್ದ ಮಲ್ಲಿಗೆಯ ಕೋಲನ್ನು ಹಿಡಿದು ಕೊಳ್ಳಲು ಸಾಂಗತ್ಯ ಳ ಕೈಗೆ ಕೊಟ್ಟೆ. ಅವಳು ನನ್ನ ಬ್ಯಾಗ್ ಮತ್ತು ಕೋಲನ್ನು ಹಿಡಿದು ಕೊಂಡು ಮುಂದಕ್ಕೆ ಹೆಜ್ಜೆ ಹಾಕತೊಡಗಿದಳು.
ಹೊಳೆಯ ದಾರಿ ಮುಗಿಯಿತು. ಹೊಳೆಗೆ ಅಡ್ಡಲಾಗಿ ಒಂದು ದೊಡ್ಡ ಮರವನ್ನು ಅಡ್ಡ ಹಾಕಿ ಸೇತುವೆ ತರಹ ಮಾಡಿದ್ದರು. ಅದನ್ನು ದಾಟಿ ಹೋಗಬೇಕು.ಅಭ್ಯಾಸ ಇಲ್ಲದಿದ್ದರೆ ಕಷ್ಟ.
ಸಾಂಗತ್ಯಳಿಗೆ ಆ ಮರದ ಸೇತುವೆ ದಾಟಲು ಭಯ ಆಯಿತು.
" ಪಚ್ಚು ಕೈ ಹಿಡಿಯಿರಿ.." ಅಂದಳು.
ಲೈಫ್ ಪೂರ್ತಿ ಕೈ ಹಿಡಿ ಎಂದು ಹೇಳಿದ ಹಾಗೆ ಇತ್ತು ಅದು..ಗಟ್ಟಿಯಾಗಿ ಅವಳ ಕೈ ಹಿಡಿದು ನಿಧಾನವಾಗಿ ಹಾಗೇ ಅವಳನ್ನು ಹೊಳೆ ದಾಟಿಸಿದೆ, ನಾನೂ ದಾಟಿದೆ.
ಹೊಳೆ ದಾಟಿದ ಕೂಡಲೇ, ಮೊದಲು ಎದುರಾಗುವುದು ದೊಡ್ಡದಾದ ಕಂಗು(ಅಡಿಕೆ) ಮತ್ತು ಅದರ ನಂತರ ಬಾಳೆ ತೋಟ. ಅದು ಆಂಟಿಯವರ ತೋಟ. ಆ ಎರಡೂ ತೋಟ ದಾಟಿ ಬಿಟ್ಟರೆ, ಆಂಟಿ ಮನೆಯ ಅಂಗಳದಲ್ಲಿಯೇ ನಾವು ಇರುತ್ತೇವೆ.
ನಿಧಾನವಾಗಿ ಅಡಿಕೆ ತೋಟದಲ್ಲಿ ನಡೆಯಲು ಶುರು ಮಾಡಿದೆವು. ಅಡಿಕೆ ತೋಟದ ಪಕ್ಕದಲ್ಲಿ ಸಣ್ಣ ತೋಡಿನಲ್ಲಿ ಹರಿದು ಹೋಗುತ್ತಿದ್ದ ಮಳೆ ನೀರಲ್ಲಿ ಕಾಲು ಒದ್ದೆ ಮಾಡಿಕೊಂಡೆವು. ತೋಟದಲ್ಲಿದ್ದ ಕೆಸುವಿನ ಎಲೆಗಳಲ್ಲಿ ಮಳೆಯ ನೀರು ಮುತ್ತಿನ ಮಣಿಗಳಂತೆ ಹೊಳೆಯುತ್ತಿತ್ತು.
ಅಲ್ಲಿಗೆ ಬಂದಾಗ ಮಳೆ ನಿಂತು ಹೋಯಿತು.
ಸಾಂಗತ್ಯ ಕೊಡೆ ಮಡಚಿದಳು.
"ಈ ಕೊಡೆ ನಾನೇ ಇಟ್ಟು ಕೊಳ್ಳಲೇ.." ಕೇಳಿದಳು..
"ನೀವು ಕೇಳುವುದು ಹೆಚ್ಚಾ.. ನಾನು ನೀಡುವುದು ಹೆಚ್ಚಾ.. ನಿಮಗೆ ಇಷ್ಟ ಆಗಿದೆ ಎಂದಾದರೆ ಅದು ನಿಮ್ಮದೇ, ಅದರಲ್ಲೂ ಇಷ್ಟೊಂದು ಮಾವು ಪ್ರೀತಿಯಿಂದ ಕೊಟ್ಟಿದ್ದೀರಿ ಎಂದ ಮೇಲೆ.. ನಿಮಗೆ ಇಲ್ಲ ಎಂದು ಹೇಗೆ ಹೇಳಲಿ.."
"ಹೀಗೆ ಸುಮ್ಮನೆ ಕೇಳಿದ್ದು.. ಆದರೂ ಇದು ಹೊಸ ಕೊಡೆ ತರಹ ಕಾಣ್ತಾ ಇದೆ.. ನಿಮಗೆ ಮತ್ತೆ.."
"ಪರವಾಗಿಲ್ಲ.. ನನ್ನಲ್ಲಿ ಇನ್ನೊಂದು ಕೊಡೆ ಇದೆ. ನನ್ನ ನೆನಪಿಗಾಗಿ ಇದನ್ನು ನೀವು ಇಟ್ಟು ಕೊಳ್ಳಿ.. "
" ಹಾಗಾದರೆ ನನ್ನ ನೆನಪಿಗಾಗಿ ಏನನ್ನು ಇಟ್ಟು ಕೊಳ್ಳುತ್ತೀರಿ.. "
" ಇದೆ ಅಲ್ಲಾ ಮಾವು.. ಇದನ್ನು ತಿಂದಾದ ಮೇಲೆ.. ಇದರ ಬೀಜದಿಂದ ಗಿಡ ಮಾಡ್ತೇನೆ.. ಆ ಗಿಡ ಮರವಾಗಿ.. ಮುಂದೊಂದು ದಿನ ಮರ ತುಂಬಾ ಹಣ್ಣು ಬಿಟ್ಟಾಗ.. ನನಗೆ ಬರೀ ನಿಮ್ಮದೇ ನೆನಪು.. "
" ಹಾಗಾದರೆ ಆ ಗಿಡ ಹಣ್ಣು ಬಿಡುವವರೆಗೆ ನಾನು ನೆನಪಾಗುವುದಿಲ್ಲವೇ.. "
ಒಮ್ಮೆಗೆ ಗಂಟಲು ಕಟ್ಟಿದಂತಾಯಿತು.. ಮಾತು ನಿಂತಂತಾಯಿತು...ಮೌನ ರಾಜ್ಯವಾಳಿತು.
ಅವಳಿಗೆ ಏನು ಅನಿಸಿತೋ ಏನೋ..ಮಾತು ಬದಲಾಯಿಸಲು, ಅವಳೇ ಮಾತು ಮುಂದುವರಿಸಿದಳು..
" ಅಲ್ಲಾ ಪಚ್ಚು.. ಇದು ಕಶಿ ಮಾವು, ಇದರಿಂದ ಗಿಡವಾಗಿ,ಅದು ಮರವಾಗಿ.. ಆ ಮರ ಮುಂದೊಂದು ದಿನ ನಿಜವಾಗಿಯೂ ಹಣ್ಣು ಕೊಡಬಲ್ಲುದೇ.. "
ಅವಳಿಗೆ ಬೇಜಾರು ಆಯಿತು ಅಂತ ಕಾಣುತ್ತೆ..
"ಸಾಂಗತ್ಯ.. ನಿನ್ನ ನೆನಪು ಕಾಡುಮಲ್ಲಿಗೆಯ ಸೊಬಗಿನಂತೆ..ಮಾವಿನ ಸಿಹಿಯಂತೆ..ಅವೆರಡರ ಸಾಂಗತ್ಯದಂತೆ ನನ್ನಲ್ಲಿ ಅನುದಿನವೂ ನಿನ್ನ ನೆನಪು ಇರುವುದು.. ನೀನು ಅಷ್ಟು ಸುಲಭವಾಗಿ ಮರೆತು ಹೋಗುವವಳಲ್ಲ ಸಾಂಗತ್ಯ .. "
ಬಹುವಚನ ಹೋಗಿ ಏಕವಚನ ಆಗಿದ್ದು ನನಗೇ ಗೊತ್ತೇ ಆಗಲಿಲ್ಲ.
ಅವಳು ಮೌನಿ ಆದಳು.
ನಾನೇ ಮಾತು ಮುಂದುವರಿಸಿದೆ.
" ಈ ತೋಟ ದಾಟಿ ಬಿಟ್ಟರೆ ಸಾಕು.. ನಿಮ್ಮ ಮಾವನ ಮನೆ ಬರುವುದು.. ಬರೀ ಹತ್ತೇ ನಿಮಿಷ ಇನ್ನು.."
"ಹೂಂ.. "
" ಯಾಕೆ.. ಮನೆಗೆ ಹತ್ತಿರವಾದದ್ದು ಇಷ್ಟ ಆಗಲಿಲ್ಲವೇ.. "
" ಹಾಗಲ್ಲ, ನಿನ್ನೊಡನೆ ಈ ಪಯಣ ಇನ್ನಷ್ಟು ಹೊತ್ತು ಇರಬಾರದೇ ಎಂದು ಮನಸ್ಸು ಹೇಳುತ್ತಿದೆ.."
ನನಗೆ ಇನ್ನಷ್ಟು ಕಷ್ಟವಾಯಿತು.
ಅವಳಿಗರಿವಿಲ್ಲದೇ ಅವಳು ಕೂಡ ಏಕವಚನ ಕ್ಕೆ ಇಳಿದು ಬಿಟ್ಟಳು.
ನಮಗೆ ಹತ್ತಿರ ಆದಷ್ಟು.. ಆಪ್ತತೆ ಹೆಚ್ಚಾದಷ್ಟು.. ಏಕವಚನವೇ ಹೆಚ್ಚಾಗಿ ಹಿತವೆನಿಸುವುದು.
ನನ್ನ ಮೌನ ಕಂಡು, ಅವಳೇ..
" ನೋಡು ಮಳೆಗೆ ನೆನೆದು ನಿನ್ನ ತಲೆ ಎಷ್ಟೊಂದು ಒದ್ದೆ ಆಗಿದೆ.. ಮೊದಲು ತಲೆ ಒರೆಸಿಕೊಳ್ಳು.. " ಎಂದು ತನ್ನ ಚೂಡಿದಾರ ದ ವೇಲ್ ತೆಗೆದು ನನಗೆ ಒರೆಸಲು ಕೊಟ್ಟಳು.
" ಒಂದು ಕೈಯಲ್ಲಿ ಮಾವಿನ ಬುಟ್ಟಿ ಇದೆ..ಇನ್ನೊಂದು ಕೈಯಲ್ಲಿ ಅರ್ಧ ತಿಂದ ಮಾವು ಇದೆ.. ಸ್ವಲ್ಪ ಸಹಾಯ ಮಾಡಬಾರದೇ.." ಎಂದೆ.
ತೋಟದ ಒಂದು ಸೈಡಿನಲ್ಲಿ ಇದ್ದ ಬಂಡೆಯ ಮೇಲೆ, ಮಳೆ ಗೆ ಒದ್ದೆಯಾಗದ ಜಾಗದಲ್ಲಿ ಅವಳ ಕೈಯಲ್ಲಿದ್ದ ನನ್ನ ಬ್ಯಾಗ್ ಅನ್ನು ಇಟ್ಟು, ನನ್ನ ಕೈಯಲ್ಲಿ ಇದ್ದ ಅವಳ ವೇಲ್ ಅನ್ನು ತೆಗೆದು ಕೊಂಡು, ಬಂಡೆಯ ಮೇಲೆ ನನ್ನನ್ನು ಕೂತ್ಕೊಳಿಸಿ,ಅವಳೇ ಬಂಡೆಯ ಮೇಲೆ ಹತ್ತಿ ನಿಧಾನವಾಗಿ ನನ್ನ ತಲೆಯನ್ನು ಅವಳ ವೇಲ್ ನಿಂದ ಒರೆಸಲು ಶುರು ಮಾಡಿದಳು.ಅದೆಷ್ಟು ಶ್ರದ್ಧೆ. ತಾಯಿ ಸ್ನಾನ ಮಾಡಿಸಿ ತನ್ನ ಪುಟ್ಟ ಮಗುವಿನ ತಲೆ ಒರೆಸಿದಂತಿತ್ತು ಅದು. ಆವಾಗಲೇ ಅನಿಸಿದ್ದು ಯಾಕೆ ಇವಳು ಮುಂದೊಂದು ದಿನ ನನ್ನ ಚೋರ ಮಕ್ಕಳ ತಾಯಿಯಾಗಬಾರದು ಎಂದು.
ಸಂಪೂರ್ಣ ತಲೆ ಒರೆಸಿ ಆದ ಮೇಲೆ..
"ಈ ವೇಲ್ ನಾನೇ ಇಟ್ಟುಕೊಳ್ಳಲೇ.." ಕೇಳಿದೆ.
ಅವಳ ಕೈಯಲ್ಲಿ ಇದ್ದ ವೇಲ್ ಅನ್ನು ನನ್ನ ಕೊರಳಿಗೆ ಹಾಗೇ ಸುತ್ತಿ ಬಿಟ್ಟಳು.
ಮತ್ತು ಬಂಡೆಯಿಂದ ಕೆಳಗಿಳಿದು ಕಣ್ಣಲ್ಲೇ ಹೇಳಿದಳು. ಇದು ನಿನ್ನದೇ ಪಚ್ಚು..
ಹೃದಯ ಭಾರವಾಯಿತು.
ಪುನಃ ಮನೆಯ ಕಡೆ ಹೆಜ್ಜೆ ಹಾಕಿದೆವು.
ಅಡಿಕೆ ತೋಟ ಆದ ನಂತರ ಬಾಳೆ ತೋಟ ಬಂತು. ಬಾಳೆ ಗಿಡಗಳ ಎಲೆಗಳು ತಲೆಯನ್ನು ತಾಗುತ್ತಿದ್ದವು. ಹಸಿರ ಚಪ್ಪರ ಅದು. ಹಾಗೇ ನಡೆದುಕೊಂಡು ಮುಂದೆ ಹೋದೆವು.
ಇಬ್ಬರಲ್ಲೂ ಮಾತಿಲ್ಲ. ಬರೀಯ ಮೌನ.
ಇಬ್ಬರಿಗೂ ಈ ಪಯಣ ಮತ್ತಷ್ಟು ಬೇಕಿತ್ತು.
ಬಾಳೆ ತೋಟದ ನಡುವೆಯೇ ಮೌನ ಮುರಿದು ಕೇಳಿ ಬಿಟ್ಟೆ..
"ಸಾಂಗತ್ಯ.. ನೀನು ಪೇಸ್ಬುಕ್ ನಲ್ಲಿ ಇಲ್ಲವೇ.."
"ಪೆದ್ದ ನೀನು.."
"ಯಾಕೆ..?"
" ವಾಟ್ಸಪ್ ನಲ್ಲಿ ಇಲ್ಲವೇ.. ಎಂದು ಕೇಳುವುದಲ್ಲವೇ."
"ಅಂದರೆ..."
"ಏನಿಲ್ಲ...ನನ್ನ ನಂಬರ್ ತೆಗೆದುಕೋ.. "
ಅವಳ ಫೋನ್ switch off ಆಗಿತ್ತು.
ಅವಳ ನಂಬರ್ ನನ್ನ ಫೋನಿನಲ್ಲಿ ಸೇವ್ ಮಾಡಿಕೊಂಡೆ.
ಕೊನೆಗೂ ಆಂಟಿ ಮನೆಯ ಅಂಗಳ ಬಂತು. ಆ ಪಯಣ ಅಲ್ಲಿಗೆ ಮುಗಿದಿತ್ತು. ಅವಳ ಕೈಯಲ್ಲಿ ಇದ್ದ ನನ್ನ ಬ್ಯಾಗ್ ಮತ್ತು ಮಲ್ಲಿಗೆ ಕೋಲು ಎರಡನ್ನೂ ನನಗೆ ಕೊಟ್ಟಳು.
ನನ್ನ ಕೊಡೆ ಅವಳಲ್ಲಿ ಉಳಿದಿತ್ತು, ಅವಳ ವೇಲ್ ನನ್ನಲ್ಲಿ ಉಳಿದಿತ್ತು.. ಹೃದಯ ಮಾತ್ರ ತುಂಬಾನೇ ಭಾರ ಆಗಿತ್ತು.
ಅವಳು ಅಲ್ಲಿಂದಲೇ ಆಂಟಿ ಮನೆಗೆ ಹೋದಳು. ನಾನು ನನ್ನ ಮನೆಗೆ ಬಂದೆ. ಮಲ್ಲಿಗೆ ಬಳ್ಳಿ ಸುತ್ತಿರೋ ಆ ಕೋಲನ್ನು ಹೊರಗಡೆ ಬಿಸಾಡಿ ಬಿಟ್ಟೆ. ಮಲ್ಲಿಗೆ ಬಳ್ಳಿ ಯನ್ನು ಒಳಗಡೆ ತಂದೆ.
ಮಲ್ಲಿಗೆ ಮಳೆಯಲ್ಲಿ ತೊಯ್ದು ನೆನೆದಿತ್ತು.
ಅವಳು ಕೊಟ್ಟ ಮಾವಿನ ಹಣ್ಣಿನ ಬುಟ್ಟಿಯನ್ನು ಟೇಬಲ್ ಮೇಲಿಟ್ಟೆ,ಬುಟ್ಟಿಯ ಮೇಲೆಯೇ ಮಲ್ಲಿಗೆಯನ್ನೂ ಇಟ್ಟು ಬಿಟ್ಟೆ. ಅವಳ ವೇಲ್ ಅನ್ನು ಪ್ಯಾನ್ ಅಡಿಯಲ್ಲಿ ಒಣಗಲು ಹಾಕಿದೆ.
ಬಿಸಿ ನೀರಲ್ಲಿ ತುಂಬಾ ಹೊತ್ತು ಸ್ನಾನ ಮಾಡಿದೆ. ನಂತರ ಮಲಗಲು ಹಾಸಿಗೆ ಮೇಲೆ ಬಿದ್ದು ಕೊಂಡೆ. ಹಸಿವು ಮಾಯ ಆಗಿತ್ತು.ಮೈ ಮನಸ್ಸು ಎರಡೂ ದಣಿದಿತ್ತು. ಆವಾಗಲೇ ಬಂದದ್ದು ರೂಮ್ ಬಾಗಿಲ ಬಳಿ ಕೆಂಡಸಂಪಿಗೆಯ ಪರಿಮಳ.
ನೋಡಿದರೆ ಆಂಟಿ ಮಗಳು ಸಾಮೀಪ್ಯ.
ಕೈಯಲ್ಲಿ ಏನೋ ಹಿಡಿದುಕೊಂಡು ನಿಂತಿದ್ದಳು.
ಮಾಮೂಲಿಯಂತೆ ಶಾರ್ಟ್ ಹಾಗೂ ಅದರ ಮೇಲೊಂದು ಟೀ ಶರ್ಟ್ ಹಾಕಿ ಬಂದಿದ್ದಳು.
ಅವಳು ರೂಮಿಗೆ ಬರುವಾಗ ದೂರದಿಂದಲೇ ಗೊತ್ತಾಗುತ್ತದೆ,ಅದು ಅವಳೇ ಎಂದು.ಯಾಕೆಂದರೆ ಅವಳು ದಿನಾಲೂ ತಲೆಗೂದಲಿಗೆ ಸಿಕ್ಕಿಸೋ ಆ ಸಂಪಿಗೆಯ ಗಾಢವಾದ ಪರಿಮಳವೇ ಅಂತಹದ್ದು. ಒಂಥರಾ ಹಿತವಾಗಿರುತ್ತದೆ.
ಇನ್ನೂ ಬಾಗಿಲ ಬಳಿಯೇ ನಿಂತಿದ್ದಳು..
"ಹೂಂ... ಏನು..." ಕೇಳಿದೆ.
"ಇದನ್ನು ಮಮ್ಮಿ ಕೊಟ್ಟು ಕಳುಹಿಸಿದರು..."
"ಅದಕ್ಕೆ ಎಂತ ಹೆಸರಿಲ್ವಾ.." ಎಂದಿನಂತೆಯೇ ಕೇಳಿದೆ.
"ಪೋಡಿ.."
"ನಿನ್ನೆ ಫಂಕ್ಷನ್ ಗೆ ಮಾಡಿದ್ದು ಉಳಿದದ್ದಾ..."
"ಅಲ್ಲ ಈಗ ಮಾಡಿದ್ದು.. ಜೀಗುಜ್ಜೆ(ದೀವಿ ಹಲಸು) ಪೋಡಿ.."
ಅವಳು ಮಾತಾಡುವುದೇ ಹಾಗೇ.ಅವಳ ಮನಸ್ಸಿನಲ್ಲಿ ಏನು ಇರುವುದೋ ದೇವರೇ ಬಲ್ಲ.ಅವಳು ಸುಲಭವಾಗಿ ನನಗಂತು ಅರ್ಥ ಆಗುವುದೇ ಇಲ್ಲ.
" ಇವತ್ತು ಏನು ಸ್ಪೆಷಲ್ ಇತ್ತು.."
"ಏನಿಲ್ಲ.. ಅತ್ತೆ ಮಗಳು ಬಂದಿದ್ದಳು,ಹಾಗಾಗಿ ಮಮ್ಮಿ ಸಂಜೆಯ ಕಾಫಿ ಗೆ ಇದನ್ನು ಮಾಡಿದ್ದರು "
" ಅತ್ತೆ ಮಗಳಾ.. ಹೆಸರೆಂತಾ..? "
" ನಿಮಗೆ ಯಾಕೆ.. ನೀವು ಹುಡುಗಿಯರನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಅಲಾ.. "
" ಹೆಸರು ಮಾತ್ರ ಕೇಳಿದ್ದು.. ಕಟ್ಟಿ ಕೊಳ್ಳುತ್ತೇನೆ ಎಂದು ಎಲ್ಲಿ ಹೇಳಿದೆ.. "
" ನಿಮಗೆ ಅವಳನ್ನು ಕಟ್ಟಿಕೊಳ್ಳುವುದು ಕೂಡ ಸಾಧ್ಯವಿಲ್ಲ ಬಿಡಿ. "
" ಯಾಕೆ..? "
" ಅವಳಿಗೆ ಯಾರೂ ಅಷ್ಟಾಗಿ ಇಷ್ಟ ಆಗುವುದಿಲ್ಲ... "
" ನನಗೆ ಪರಿಚಯ ಮಾಡಿಸ್ತೀಯಾ.."
"ಯಾಕೆ..?"
"ಅವಳಿಗೆ ನಾನಾದರೂ ಇಷ್ಟ ಆಗ್ತೇನಾ ಎಂದು ನೋಡ್ಲಿಕ್ಕೆ.."
" ಬೇಡ.. ಬೇಡ.. ಅದೆಲ್ಲಾ ಬೇಡ.. "
" ನಿನಗೆ ಯಾಕೆ ಅಷ್ಟು ಕಷ್ಟ ... "
" ಅದೆಲ್ಲಾ ನನಗೆ ಗೊತ್ತಿಲ್ಲ.. "
" ಮತ್ತೆ ನಿನಗೆ ಏನು ಗೊತ್ತಾಗುತ್ತೆ..."
" ತಗೊಳ್ಳಿ ಪೋಡಿ... "
ಪೋಡಿ ತಗೊಂಡು ಹಾಗೇ ಒಂದೊಂದೇ ಪೋಡಿ ತಿನ್ನ ತೊಡಗಿದೆ.
ಅಲ್ಲೇ ಇದ್ದಳು ಸಾಮಿಪ್ಯ..
" ಏನು.... " ಕೇಳಿದೆ.
" ಇದನ್ನು ತಗೊಳ್ಳಿ.."
ಅಷ್ಟರವರೆಗೆ ಹಿಂದುಗಡೆ ಹಿಡಿದು ಕೊಂಡಿದ್ದ ಕೈಯನ್ನು ಮುಂದೆ ತಂದು, ಕೈ ಬಿಡಿಸಿದಳು. ಅದರಲ್ಲಿ ಇತ್ತು ಎರಡು ತಾಜಾ ಕೆಂಡ ಸಂಪಿಗೆ.
" ನಿಮಗೆ ಕೂಡ ನನ್ನ ಹಾಗೆಯೇ ಸಂಪಿಗೆ ಇಷ್ಟ ಎಂದು ಹೇಳಿದ್ದೀರಿ ಅಲ್ಲಾ ಮೊನ್ನೆ.. ಹಾಗಾಗಿ ನಿಮಗಾಗಿ ತಂದೆ, ರೂಮಿನಲ್ಲಿ ಇಟ್ಟುಕೊಳ್ಳಿ ಒಳ್ಳೆಯ ಪರಿಮಳ ಬರುತ್ತದೆ.."
ಸಂಪಿಗೆ ಕೊಟ್ಟು byee ಹೇಳಿ ಸಾಮೀಪ್ಯ ಹೊರಟೇ ಹೋದಳು.
ಕೈಯಲ್ಲಿ ಇದ್ದ ಸಂಪಿಗೆಯನ್ನು ಟೇಬಲ್ ಮೇಲೆ ಇದ್ದ ಮಾವಿನ ಹಣ್ಣಿನ ಬುಟ್ಟಿ ಮತ್ತು ಮಲ್ಲಿಗೆಯ ಪಕ್ಕವೇ ಇಟ್ಟೆ.
ಹಾಗೇ ಎರಡನ್ನೂ ದಿಟ್ಟಿಸಿ ನೋಡಿದೆ.
ಒಂದು ಸಾಂಗತ್ಯ ಕೊಟ್ಟದ್ದು, ಇನ್ನೊಂದು ಸಾಮೀಪ್ಯ ಕೊಟ್ಟದ್ದು.
ಯಾರ ಸಾಂಗತ್ಯ ದಿಂದ ಖುಷಿಯೋ ಯಾರ ಸಾಮೀಪ್ಯ ದಿಂದ ಉಲ್ಲಾಸವೋ ನಾನರಿಯೇ..
ಮನಸ್ಸು ಲೈಟಾಗಿ ಹಾಳಾಗಿದೆ..ಹೃದಯ ಕಳೆದು ಹೋಗಿದೆ.. ನನಗೆನೇ ಗೊತ್ತಿಲ್ಲದ್ದಂತೆ ನನಗೆ ಏನೋ ಒಂದು ಆಗಿದೆ.
ಸಂಪಿಗೆಯ ಘಮಕ್ಕೆ ನಿದ್ರೆ ಆವರಿಸಿತು.ಕನಸು ಎಚ್ಚರವಾಯಿತು. ಅಲ್ಲೂ ಇದ್ದದ್ದು ಬರೀ ಮಲ್ಲಿಗೆ ಮತ್ತು ಸಂಪಿಗೆ ಯೇ.
.....................................................................................
AB Pacchu
Moodubidire

Comments
Post a Comment