ಗೋಡಂಬಿ ಪುರಾಣ

 


"....ಮತ್ತೆ ಹುಡುಗಿ ಏನು ಓದಿದ್ದಾಳೆ ?" 
ಹುಡುಗನ ತಾಯಿ ಕೇಳಿದರು.

ಕೋಣೆಯ ಒಳಗಿನಿಂದಲೇ ನನಗೆ ಎಲ್ಲವೂ ಸ್ಪಷ್ಟವಾಗಿ ಕೇಳಿಸ್ತಾ ಇತ್ತು.
ನಾನೇ ಎದುರು ಇದ್ರೆ " ಮಂಗಳ, ಬಾಲಮಂಗಳ, ತರಂಗ.." ಅಂತ ರಪ್ಪ ಅಂತ ಉತ್ತರಿಸುತ್ತಿದ್ದೆ.

"MSc ಮಾಡಿದ್ದಾಳೆ,ಕಾಲೇಜಿನಲ್ಲಿಯೇ placement ಕೂಡ  ಆಗಿದೆ,ಬೆಂಗಳೂರು ನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸ. ಆದ್ರೆ ಅಮ್ಮ ಅಪ್ಪ ನನ್ನು ಬಿಟ್ಟು ಅಷ್ಟು ದೂರ  ಹೋಗಲ್ಲ ಅಂತ ಇಲ್ಲೆ ಮಂಗಳೂರಿನಲ್ಲಿ  ಕೆಲಸ ಹುಡುಕ್ತಾ ಇದ್ದಳೆ. ಹೆತ್ತವರು, ಹಿರಿಯರು ಅಂದ್ರೆ ನಮ್ಮ ಶೈಲು ಗೆ ತುಂಬಾನೇ ಗೌರವ" ಅಂತ  ಅದ್ದೂರಿಯಾದ Intro ಕೊಟ್ಟುಬಿಟ್ಟಳು  ನನ್ನಮ್ಮ.ಅವಳು ಲಾಸ್ಟ್ ಗೆ ಹೇಳಿದ ಆ ಸಾಲುಗಳು ಸ್ವಲ್ಪ ಓವರ್ ಆಯ್ತೆನೋ  ಅಂತ ನನಗೇ ಅನಿಸಿತು.
ಬಹುಶಃ ಅವಳು ಈ ರೀತಿಯಾಗಿ ಹೇಳುತ್ತಿರುವುದು ಈ ವರ್ಷದಲ್ಲೇ ಆರನೇ ಸಲ ಎಂದು ಕಾಣುತ್ತೆ.

ನನ್ನಮ್ಮ ಹಾಗೆಯೇ,ನನ್ನನ್ನು  ಯಾರಾದರೂ ಗಂಡಿನ ಕಡೆಯವರು ನೋಡ್ಲಿಕ್ಕೆ ಬರ್ತಾರೆ ಎಂದ್ರೆ ಅವಳಿಗೆ ಅದೇನೋ ಸಂಭ್ರಮ,ಸ್ವತಃ ಅವಳನ್ನು ನೋಡ್ಲಿಕ್ಕೆ ಬಂದ ಹಾಗೆಯೇ ಮಾಡ್ತಾಳೆ.

ಈ ಅಮ್ಮನಿಗೆ ನನ್ನನ್ನು ಆದಷ್ಟು ಬೇಗ ಮನೆಯಿಂದ ಕಳಿಸದಿದ್ರೆ ಮನಸ್ಸಿಗೆ ಸಮಾಧಾನವೇ  ಇಲ್ಲವೆನೋ. ನಾನೂ ಎಷ್ಟೋ ಬಾರಿ ಹೇಳಿದ್ದೆನೆ " ಅಮ್ಮಾ ನಂಗೆ ಯಾಕೆ ಇಷ್ಟು ಬೇಗ ಮದುವೆ ಮಾಡಿಸ್ತೀಯಾ, ನನಗೆ ಈಗಲೇ ಮದುವೆ ಬೇಡ, ನನ್ನ ಕ್ಲಾಸ್ ಮೇಟ್ ಎಲ್ಲಾ ಇನ್ನೂ ಮದುವೆ ಆಗದೆ ಎಷ್ಟು jolly ಮಾಡ್ತಾ  ಇದ್ದಾರೆ ಗೊತ್ತಾ.. " ಎಂದು.

"ನೀನು ಸುಮ್ಮನೆ ಕುತ್ಕೊಳ್ಳೆ, ನಿಂಗೆ ಗೊತ್ತಾಗಲ್ಲ ಹೆಣ್ಣು ಹೆತ್ತವರ ಸಂಕಟ, ನಾಳೆ ನಿಂಗೂ ಎರಡು ಹೆಣ್ಣು ಮಕ್ಕಳಾಗಲಿ ಆಗ ಗೊತ್ತಾಗುತ್ತೆ. " ಎಂದು ನನ್ನ ಬಾಯಿ ಮುಚ್ಚಿಸಿದ್ದಳು.

ಈ ರೀತಿಯಾಗಿ ಐದು ಗಂಡಿನ ಕಡೆಯವರು ನನ್ನನ್ನು ಬಂದು ನೋಡಿ ಹೋಗಿದ್ದರು. ಡಾಕ್ಟರ್, ಎಂಜಿನಿಯರ್,ಪೈಲೆಟ್, MBA,ಸರ್ಕಾರಿ ನೌಕರಿಯಲ್ಲಿ ಇರುವವರು, ಹೀಗೆ etc etc.
ಆದರೆ ನೋ ಯ್ಯೂಸ್, ನಾನು ಯಾರಿಗೂ ಓಕೆ ಹೇಳಿದವಳಲ್ಲ,ಹುಡುಗರ ಕಡೆಯಿಂದಲೂ ಓಕೆ ಎಂದು ಹೇಳಿಸಿಕೊಂಡವಳಲ್ಲ!

ನನಗೆ ಹುಚ್ಚು ಹಿಡಿಸುವಂತ ಹುಡುಗ ಬೇಕಿದ್ದ.ಲೈಪ್ ನಲ್ಲಿ ಏನೋ ಒಂಥರಾ ಕ್ರೆಝ್ ಇರಬೇಕು. ಕೇವಲ ಮೂರು ಹೊತ್ತು ದುಡಿದು ತರೋ  ಟೇಸ್ಟ್ ಲೆಸ್ ಗಂಡ ನನಗೆ ಬೇಕಿರಲಿಲ್ಲ. ಯಾರೂ ಇಷ್ಟ ಆಗಿರಲಿಲ್ಲ ಅದಕ್ಕಾಗಿ ಎಲ್ಲರಿಗೂ ನೋ ಎಂದಿದ್ದೆ.

ಹಾಗಾಗಿ ಪ್ರತೀ ಸಲ 
ಬಂದವರು ಶೀರಾ, ಕಾಫಿ ಕುಡ್ಕೊಂಡು ಹೋಗ್ತಿದ್ದರೆ ವಿನಹ ಯಾವುದೂ ಸೆಟ್ ಆಗ್ತಾ ಇರ್ಲಿಲ್ಲ. ಅಪ್ಪ ಎಷ್ಟೇ ಒಳ್ಳೆಯ ಹುಡುಗರನ್ನು ಕರೆದುಕೊಂಡು ಬಂದರು, ಏನೇ ಮಾಡಿದರೂ ಕೂಡ  ನಾನು ಒಪ್ಪಿಕೊಳ್ಳಲ್ಲ ಅಲ್ಲ, ಅಂತ ನನ್ನ ಅಪ್ಪನಿಗೂ ಬೇಜಾರು.

" ಪ್ರತಿ ಸಲ ನೀನು  ಶೀರಾ ಗೆ ಅಷ್ಟೊಂದು ಗೋಡಂಬಿ ಹಾಕಿ ಹಾಕಿ, ಡಬ್ಬದಲ್ಲಿಟ್ಟಿದ್ದ ಅಷ್ಟೂ ಗೋಡಂಬಿ ನಿಧಾನವಾಗಿ ಖಾಲಿಯಾಗುತ್ತಾ   ಬರುತ್ತಿದೆಯೇ   ವಿನಹ, ನಿನ್ನ ಮನಸ್ಸು ಯಾರೊಬ್ಬರಿಗಾಗಿಯೂ  ಖಾಲಿಯಾಗುತ್ತಿಲ್ಲ ಅಲ್ವೇ ಶೈಲು.ನೋಡ್ತಾ ಇರು  ಇನ್ನು ಮನೆಯಲ್ಲಿ ರುವ ಗೋಡಂಬಿ ಸಂಪೂರ್ಣ ಮುಗಿದ ಮೇಲೆ ನಿನಗೆ ಹುಡುಗ ನನ್ನು ನೋಡುವುದನ್ನೇ ನಿಲ್ಲಿಸಿಬಿಡ್ತೆನೆ..ನೀನು ಗೋಡಂಬಿ ಹಾಕಿ ಶೀರಾ ಮಾಡುವುದೂ ಬೇಡ, ನಾನು ನೀನು ಮಾಡುವ ಶೀರಾಕ್ಕೆ ಅಂಗಡಿಯಿಂದ ರಾಶಿ ರಾಶಿ ಗೋಡಂಬಿ ತಂದು ಸುರಿಯುವುದೂ ಬೇಡ,ಗೋಡಂಬಿ ಇದ್ದರೆ ಅಲ್ವಾ ನೀನು ಶೀರಾ ಮಾಡುವುದು, ಗಂಡಿನ ಕಡೆಯವರು ಬರುವುದು  ಎಲ್ಲಾ.. "

ಅಂತ ಅಪ್ಪ, ಪ್ರತೀ ಸಲ ನಾನು ಶೀರಾ ಕ್ಕೆ  ರಾಶಿ ರಾಶಿ ಯಾಗಿ ಗೋಡಂಬಿ  ಸುರಿಯುವಾಗಲೆಲ್ಲ  ಪ್ರೀತಿ ತುಂಬಿದ ಕೋಪದಲ್ಲಿ ಹೇಳ್ತಾ ಇದ್ದ. 
ಕೇಸರಿ ಬಾತ್ ಗೆ ನಮ್ಮ ದಕ್ಷಿಣ ಕನ್ನಡ, ಉಡುಪಿ ಕಡೆ ಹೆಚ್ಚಾಗಿ ಶೀರಾ ಅಂತ ಹೇಳ್ತಿವಿ.

"ನಮ್ಮ ಮಹೇಶನಿಗೆ ಏನು ಕಡಿಮೆ ಇಲ್ಲ.. Own ಗೇರುಬೀಜ ಫ್ಯಾಕ್ಟರಿ ಇದೆ, ಮನೆಯಲ್ಲಿಯೇ ಕೋಳಿ ಫಾರಂ ಇದೆ. ಹತ್ತು ಎಕರೆ ಜಾಗ ಇದೆ.ತೋಟ ಇದೆ, ಟಿಲ್ಲರ್ ಇದೆ, ಟಿಪ್ಪರ್ ಇದೆ.ಕಲ್ಲಿನ ಕೋರೆ ಇದೆ, ಹೈನುಗಾರಿಕೆ ನೂ ಇದೆ. ಕೈ ಕೆಳಗೆ 50,60 ಜನ ಕೆಲಸಕ್ಕೆ ಇದ್ದಾರೆ..

ನಮ್ಮ ಮಹೇಶ ಭಯಂಕರ ಪ್ರಾಣಿ ಪ್ರೇಮಿ ಕೂಡ ಹೌದು ,ನಗರದಲ್ಲಿ ನಡೆಯುವ ಎಲ್ಲಾ ರೀತಿಯ ಪ್ರಾಣಿಗಳ ಶೋ ಗೆ,ಸ್ಪರ್ಧೆ ಗೆ ತಪ್ಪದೇ ಹೋಗ್ತಾನೆ.  ಶೋಕಿ ಗೆ ಅಂತ ಪರ್ಷಿಯನ್ ಬೆಕ್ಕು, ನಾಯಿ ಎಲ್ಲಾ ಸಾಕಿದ್ದಾನೆ.ಅಷ್ಟು ಮಾತ್ರ ಅಲ್ಲ ಎರಡು ದೊಡ್ಡ ಕೋಣ ಕೂಡ  ಸಾಕಿದ್ದಾನೆ. ಈ ಸಲನೂ ನಮ್ಮ ಕೋಣ ಆಂಧ್ರಪ್ರದೇಶ ದಲ್ಲಿ ನಡೆದ 'ಮಿಸ್ಟರ್ ಕೋಣ -2019' ಸ್ಪರ್ಧೆ ಯಲ್ಲಿ ಮೆಡಲ್ ವಿನ್ ಆಗಿದೆ. ". ಅಂದರು ಹೆಮ್ಮೆಯಿಂದ ಹುಡುಗನ ತಂದೆ.

ಕಿಟಕಿ ಬಾಗಿಲು ಸ್ವಲ್ಪ ತೆರೆದು ಕೋಣೆಯಿಂದಲೇ ಹಾಲ್ ನಲ್ಲಿದ್ದ ಮಹೇಶನನ್ನು ನೋಡಿದೆ.ಅಲ್ಲಿ ಯಾರು ಏನು ಜೋಕ್ಸ್ ಮಾಡಿದ್ರೋ ಗೊತ್ತಿಲ್ಲ, ಮಹೇಶ ಜೋರಾಗಿ ನಗುತ್ತಿದ್ದ. ನಂಗೆ ಯಾವುದೋ ಸಿನಿಮಾ ಹೀರೋನನ್ನು ನೋಡಿದ ಫೀಲ್ ಆಗ್ಲಿಲ್ಲ.ಹೆಚ್ಚು ಕಡಿಮೆ ಕೋಣ ತರನೇ ಇದ್ದ ನಮ್ಮ ಮಹೇಶ , ಸ್ವಾರಿ ಅವರ ಮಹಿಷ..

"ಕಾಫಿ ಕುಡ್ಕೊಂಡು ಮಾತಾಡ್ವೋಣ.. " ಅಂದರು ಅಮ್ಮ.

ಅವರು ಕೂಡ ಆಗಲಿ ಅಂದರು.

" ಶೈಲು, ಕಾಫಿ ತಾರೇ... " ಅಂದಳು ಅಮ್ಮ ರಾಗವಾಗಿ.

ಈಗ ನಿಧಾನವಾಗಿ ನಾನು ಒಳಗಿನ ರೂಮಿನಿಂದ ಸ್ಲೋ ಮೊಷನ್ ನಲ್ಲಿ ಕಾಫಿ ಕಪ್ ಗಳಿರುವ ಟ್ರೇ ಅನ್ನು ಹಿಡಿದುಕೊಂಡು ಹೋಗಬೇಕು,ಆಮೇಲೆ ನಿಧಾನವಾಗಿ ಒಬ್ಬೊಬ್ಬರಿಗೂ ಕಾಫಿ ಸರ್ವ್ ಮಾಡಬೇಕು. ಹುಡುಗನ ಬಳಿ ಬಂದಾಗ ಸ್ವಲ್ಪ ನಾಚಿಕೆ ಯನ್ನು accelerate  ಮಾಡಿಕೊಳ್ಳಬೇಕು. ಆಮೇಲೆ ಹಾಗೆಯೇ ಮೆಲ್ಲನೆ ಕತ್ತೆತ್ತಿ ಹುಡುಗನನ್ನು ಒಂಚೂರೇ ನೋಡಬೇಕು, ನೋಡಿ ಹಾಗೇ ಸ್ವಲ್ಪವೇ ಸ್ವಲ್ಪ ನಗಬೇಕು.ಮತ್ತೆ ಪುನಃ ತಲೆತಗ್ಗಿಸಬೇಕು. ಇದಿಷ್ಟೂ ನನಗೆ ಅಮ್ಮ ಹೇಳಿಕೊಟ್ಟ ಟ್ರೈನಿಂಗ್.

ಮಾಡಿ ಮಾಡಿ ಅಭ್ಯಾಸ ಆಗಿತ್ತು. ಕಾಫಿ ಕೊಡುವಾಗ ಹುಡುಗ ಮಹೇಶ ತನ್ನ ಅಷ್ಟೂ ಹಲ್ಲುಗಳನ್ನು ಬಿಟ್ಟು ಭಯಂಕರ ಸ್ಮೈಲ್ ನೀಡಿದ .ಇವನು ಯಾಕೆ    ಕೋಲ್ ಗೇಟ್,ಪೆಪ್ಸೊಡೆಂಟ್  ಕಂಪೆನಿ ಗಳ ಜಾಹೀರಾತು ನಲ್ಲಿ ಇರುವವರ ಹಾಗೆ ಮಾಡ್ತಿದ್ದಾನಲ್ಲ  ಅಂತ ಒಮ್ಮೆ ಅನಿಸಿತು.

ಅಲ್ಲೇ ಅಪ್ಪ ಅಮ್ಮ ಪಕ್ಕದಲ್ಲಿ ಸೋಪಾದಲ್ಲಿ ಕುಳಿತುಕೊಂಡೆ.

ನನ್ನ ಚಿಕ್ಕಮ್ಮ ಶೀರಾ, ಬಾಳೆಕಾಯಿ ಚಿಪ್ಸ್ ಎಲ್ಲಾ ಎದುರಿನ ಟೇಬಲ್ ನಲ್ಲಿ ತಂದಿಟ್ಟರು

"ಇವಳೇ ನಮ್ಮ ಮಗಳು, ಶೈಲಜಾ.. ಶೈಲು ಅಂತಿವಿ " ಅಂದಳು ಅಮ್ಮ.

" ನೋಡಮ್ಮ ಶೈಲಜಾ, ಇವನೇ ನಮ್ಮ ಮಗ ಮಹೇಶ, ನಾವೆಲ್ಲ ಮಾಹಿ ಅಂತಿವಿ "ಅಂದರು ಹುಡುಗನ ಅಮ್ಮ .

" ಮಾಹಿ ಅಂದ್ರೆ ಮಹೇಂದ್ರ ಸಿಂಗ್ ದೋನಿ ನಾ ? " ಅಂತ ನಾನೇ ಕೇಳ್ಬೆಕು ಅಂತ ಇದ್ದೆ,ಆದ್ರೆ ಕಿಲಾಡಿ ನನ್ನ ಅಪ್ಪನೇ, ನನಗಿಂತ ಮುಂಚೆ ಆ ಪ್ರಶ್ನೆ ಕೇಳಿಬಿಟ್ಟರು.

ಅವರು ಎಲ್ಲಾ ಜೋರಾಗಿ ನಕ್ಕರು.

" ಇಲ್ಲಪ್ಪ ಮಾಹಿ ಗೆ, ಕ್ರಿಕೆಟ್ ಹುಚ್ಚು ಇಲ್ಲವೇ ಇಲ್ಲ,ಅವರು ಆಡಿದ್ರೆ ಅವರಿಗೆ ಕಾಸು ಸಿಗ್ತದೆ , ನಮಗೆ ಎಂತ ಸಿಗ್ತದೆ ಮಣ್ಣು. ಆಡುವುದು ಕೂಡ ಇಲ್ಲ, ನೋಡುವುದು ಕೂಡ ಇಲ್ಲ.ಆದ್ರೆ ಮೊಬೈಲ್ ನಲ್ಲಿ ಚೆನ್ನಾಗಿ ಪಬ್ಜಿ ಆಡ್ತಾನೆ. ಹಿಂದೆ ಕ್ಯಾಂಡಿ ಕ್ರಷ್ ಆಡ್ತಾ ಇದ್ದ " ಅಂದರು ಅವನ ಅಪ್ಪ.

ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ ಕಟ್ಟಾ ಪ್ಯಾನ್ ಆಗಿ   ಅವರ ಸಿಕ್ಸರ್ ಗಳಿಗೆ ವಿಶಲ್ ಹೊಡೆದು ಸಂಭ್ರಮಿಸುತ್ತಿದ್ದ ನಾನು, ಐಪಿಎಲ್ ಆಗಲಿ ಟೀಮ್ ಇಂಡಿಯಾದ ಒಂದು ಮ್ಯಾಚ್ ಆಗಲಿ ಮಿಸ್ ಮಾಡಿಕೊಂಡವಳಲ್ಲ. ಅಂತ ನಾನೆಲ್ಲಿ, ಇವನೆಲ್ಲಿ. ಉಹೂಂ ಈ ಅಸಾಮಿ ನನಗೆ ಯಾವುದೇ angle ನಿಂದ ಸೆಟ್ ಆಗಲ್ಲ ಅಂತ ಆವಾಗಲೇ ಅನಿಸಿತು. "ನೋ ವೇ, ಚಾನ್ಸೇ ಇಲ್ಲ.." ಮನಸ್ಸು ಅಂಬಿ ಡೈಲಾಗ್ ಹೇಳಿಬಿಡ್ತು. 
ಇರಲಿ ಇರಲಿ ಸ್ವಲ್ಪ ಎಂಜಾಯ್ ಆದರೂ ಮಾಡುವ ಅಂತ ಡಿಸೈಡ್ ಮಾಡಿದೆ.

" ಶೀರಾ ಬಹಳ ಚೆನ್ನಾಗಿದೆ, ನೀವೇ ಮಾಡಿದ್ದೊ ಅಥವಾ ಸ್ವಿಗ್ಗಿ ಯಿಂದ ಆರ್ಡರ್ ಮಾಡಿ ತರಿಸಿದ್ದೊ " ಅಂದರು ಮಾಹಿ ಯ ತಾಯಿ .

ಅವರನ್ನು ಒಮ್ಮೆ ಹಣ್ಣುಗಾಯಿ ನೀರುಗಾಯಿ ಮಾಡಿಬಿಡಲೇ ಅಂತ ಮನಸ್ಸಿಗೆ ಅನಿಸಿತು. 
ಯಾಕೆಂದರೆ ನನಗೆ ಮಾಡಲು ಗೊತ್ತಿರುವುದು ಅಂದ್ರೆ ಅದೊಂದೇ. ತುಂಬಾನೇ ತುಪ್ಪ ಸುರಿದು,ಮನೆಯಲ್ಲಿ ಇದ್ದ ಬದ್ದ ಗೋಡಂಬಿ, ದ್ರಾಕ್ಷಿ ಎಲ್ಲಾ ರಾಶಿ ರಾಶಿ ಹಾಕಿ, ರಿಚ್ ಆಗಿ ಶೀರಾ ಮಾಡಲು ಕಲಿತಿದ್ದೆ. ಅದಕ್ಕೂ ಮಕ್ಕರ್ ಮಾಡಿದ್ರೆ, ಹೇಗೆ ತಾನೆ ತಡೆದುಕೊಳ್ಳುತ್ತೆ ಜೀವ ಅಲ್ವಾ

"ಇಲ್ಲ ಇಲ್ಲ, ನಮ್ಮ ಶೈಲು ನೇ ಮಾಡಿದ್ದು ಶೀರಾ . ನಮ್ಮ ಏರಿಯಾದಲ್ಲಿ ಶೈಲುವಿನಷ್ಟು ಚೆನ್ನಾಗಿ ಯಾರೂ ಶೀರಾ ಮಾಡಲ್ಲ, ನಮ್ಮ ಮನೆಯಲ್ಲಿ ಶೀರಾ ಮಾಡಿದ್ದು ಗೊತ್ತಾದ್ರೆ, ಏರಿಯಾದವರೆಲ್ಲರು ಮನೆಗೇ ಬಂದು ತಿಂದು ಹೋಗ್ತಾರೆ. ಶೈಲು ಅಂದ್ರೆ ಶೀರಾ, ಶೀರಾ ಅಂದ್ರೆ ಶೈಲು.. ಅಷ್ಟೊಂದು ಫೇಮಸ್ ನಮ್ಮ ಶೈಲು " ಅಂದು ಬಿಟ್ಟಳು ಅಮ್ಮ.

ನಾನು ಮಾಡುವ ಶೀರಾ ನಮ್ಮ ಮನೆಯ ನಾಯಿ ಬೆಕ್ಕು ಗಳೇ ತಿನ್ನಲ್ಲ, ಆದರೂ ಈ ಅಮ್ಮ ಯಾಕೆ ಇಷ್ಟೊಂದು ಬಿಲ್ಡ್ ಅಪ್ ಕೊಡ್ತಿದ್ದಾಳೆ ಅಂತ ಗೊತ್ತಾಗಲಿಲ್ಲ. 

"ಹುಡುಗಿಗೆ ಹಾಡ್ಲಿಕ್ಕೆ ಏನಾದರೂ ಬರುತ್ತಾ.. "
ಹುಡುಗನ ಕಡೆಯ ಹಿರಿಯ ಜೀವ ಒಂದು ಕೇಳಿತು.

" ಟಿಕ್ ಟಾಕ್ ನಲ್ಲಿ ನಮ್ಮ ಶೈಲು ತುಂಬಾನೇ ಚೆನ್ನಾಗಿ ಹಾಡಿದ್ದಾಳೆ" ಅಂದಳು ಅಮ್ಮ.

ಅಲ್ಲಿಂದಲೇ ಹಾರಿ ಅಮ್ಮ ನಿಗೆ ಒಮ್ಮೆ ಗುದ್ದಿಬಿಡಲೇ ಅನಿಸಿತು. 
ಯಾವಾಗಲೂ ನನ್ನ ಮರ್ಯಾದೆ ತೆಗಿಲಿಕ್ಕೆನೇ ಕಾಯ್ತ ಇರ್ತಾಳೆ ಈ ಅಮ್ಮ.

ಅವರ ಅಮ್ಮ ಹೇಳಿದರು " ಹೌದಾ, ನಮ್ಮ ಮಾಹಿ ಕೂಡ  ಟಿಕ್ ಟಾಕ್ ನಲ್ಲಿ ತುಂಬಾ ಹಾಡಿದ್ದಾನೆ. ಆದರೆ ಅವನು ಮನೆಯಲ್ಲಿ ಎಲ್ಲಾ ಹಾಡಲ್ಲ, ಕಾಡು ಇಲ್ಲವೇ  ಗುಡ್ಡಕ್ಕೆ ಎಲ್ಲಾ ಹೋಗಿ ಹಾಡಿ, ಟಿಕ್ ಟಾಕ್ ನಲ್ಲಿ ಬಿಡ್ತಾನೆ. ನಮ್ಮ ಮಾಹಿ ಪರಿಸರ ಪ್ರೇಮಿ" ಅಂದರು.

ಓಹೋ ಟಿಕ್ ಟಾಕ್ ನಲ್ಲಿ ಆ ಗುಡ್ಡಗಳಲ್ಲಿ ಮಂಗನಂತೆ ನೇತಾಡಿಕೊಂಡು ಹಾಡುತ್ತಿದ್ದುದ್ದು ಇವನೇ ಅಲ್ವಾ, ಅಂತ ಬೇರೆ ಬೇರೆ angle ನಿಂದ ಮಹೇಶ ನನ್ನೆ zoom ಹಾಕಿ ನೋಡಿದೆ, ಹೌದು ಎಲ್ಲಾ angle  ನಿಂದ ಪರ್ಪೆಕ್ಟ್ ಆಗಿ ಮ್ಯಾಚ್ ಆಗ್ತಾ ಇದ್ದಾನೆ, ಅವನು ಇವನೇ.ಇವನೇ ಅವನು.

"ಶೈಲು ನೀನು ಹಾಡು.. ಅದು ಹಾಡು, ಗೊತ್ತಲ್ಲಾ.." ಅಂದ್ಲು ಅಮ್ಮ.

ನನಗೇ ಬಾಲಿವುಡ್, ಇಂಗ್ಲಿಷ್ ಸಾಂಗ್ ಗಳು ಇಷ್ಟ, ಆದರೆ ಅಮ್ಮ ಇಂತಹದಕ್ಕೆಂದೇ  ಅಂತ ಒಂದು ಸಾಂಗು ಕಂಠಪಾಠ ಮಾಡಿಸಿದ್ದಳು.ಯಾವ ಗಂಡು ಬಂದರೂ ಅದನ್ನೇ ಹಾಡೋದು ನಾನು. ಅದನ್ನೆ ಹಾಡಿದೆ.

"ತೆರಿದಿದೆ ಮನೆ ಓ ಬಾ ಅತಿಥಿ...
ಹೊಸ ಬೆಳಕಿನ, ಹೊಸ ಗಾಳಿಯ ಹೊಸ ಬಾಳನ್ನು ತಾ ಅತಿಥಿ.. "

ಅತಿಥಿ, ಗಾಳಿ ತರ್ತಾನೋ ಬಾಳು ತರ್ತಾನೋ ಗೊತ್ತಿಲ್ಲ, ಪ್ರತೀ ಸಲ ಬಂದ ಅತಿಥಿ ಮಾತ್ರ ಗೋಡಂಬಿ ಹಾಕಿದ ಶೀರಾ,ಕಾಫಿ, ಜೊತೆಗೆ ಬಾಳೆಕಾಯಿ ಚಿಪ್ಸ್ ಅನ್ನು ಮಾತ್ರ ಸಪಾಯಿ ಮಾಡಿಯೇ ಹೋಗ್ತ ಇದ್ದ.

ನಾನು ಹಾಡಿದ್ದು ಅವರಿಗೆ ಇಷ್ಟ ಆಯಿತು.

" ನಮ್ಮ ಮಹೇಸ (ಮಹೇಶ ಹೋಗಿ ನಿಧಾನವಾಗಿ ಮಹೇಸ  ಆಗಿತ್ತು) ಬೇಕಾದರೆ ಅವನ ಹಾಡಿನ ಜಲಕ್ ಅನ್ನು ಕೂಡ ತೋರಿಸ್ತಾನೆ, ಹೇಳಮ್ಮ ಶೈಲು.. ಮಹೇಸ ನ ಹಾಡಿನ ಜಲ್ವಾ ನೋಡ್ತಿಯಾ .? " ಅಂತ ಹುಡುಗನ ಅಮ್ಮ ಹೇಳಿದರು.

ನನಗೇ ಈ ಜನ ದ ಅಬತರ,ಒಟ್ರಾಸಿ ಹಾಡು ಎಲ್ಲ ಟಿಕ್ ಟಾಕ್ ನೋಡಿಯೇ  ಗೊತ್ತಿತ್ತು ಈತ ಯಾವ ರೇಂಜ್ ನ ಕಲಾವಿದ ಎಂದು.ಈತನ ಹಾಡಿನ ಜಲ್ವಾ ವೂ ಬೇಡ ಹಲ್ವವೂ ಬೇಡ  ಎಂದು ನಿರ್ಧರಿಸಿದೆ. ಹಾಗಾಗಿಯೆ ತಲೆ ತಗ್ಗಿಸಿಯೇ" ಬೇಡ ಪರವಾಗಿಲ್ಲ ಬಿಡಿ.. " ಅಂದೆ.

ಅಷ್ಟರಲ್ಲಿ ಯಾರಿಗೋ ನಾನು ಮಾಡಿದ್ದ ಶೀರಾ ದಲ್ಲಿದ್ದ ಗೋಡಂಬಿ ಸಿಕ್ಕಿತ್ತು.

ಅದನ್ನು ಹಿಡಿದುಕೊಂಡೆ ಅವರು ಉಪನ್ಯಾಸ ಒಂದು ಕೊಡಲು ಶುರು ಮಾಡಿದರು.

ನಮ್ಮ ಮೈಸ (ಮಹೇಶ ಹೋಗಿ ಸ್ವಲ್ಪ ಹೊತ್ತಿನ ಹಿಂದೆ ಮಹೇಸ ಆಗಿತ್ತು, ಈಗ ಇವರ ಬಾಯಿಯಲ್ಲಿ ಮೈಸ ಆಗಿ ಒರಿಜನಲ್ ಆಗಿ ಮನೆಯಲ್ಲಿ ಏನಂತ ಕರಿತಾರೋ ಅದೇ ಹೆಸರು ಬಂತು) ನಡೆಸುತ್ತಿರುವ ಬೀಜದ ಫ್ಯಾಕ್ಟರಿ ಯಲ್ಲಿ ಸಂಸ್ಕರಿಸಲ್ಪಡುವ ಗೇರು ಬೀಜ ಉತ್ಕೃಷ್ಟ ದರ್ಜೆಯದ್ದು.  ಫಾರಿನ್ ಗೆ  ಕೂಡ ಎಕ್ಸಪೊರ್ಟ್ ಮಾಡ್ತಾನೆ ನಮ್ಮ ಮೈಸ.ಬಾರಿ ಬೇಡಿಕೆ ಉಂಟು. ಮತ್ತೆ ಈ ಗೋಡಂಬಿ ಯಿಂದ ಖೀರು ಮಾಡಬಹುದು, ಬರ್ಫಿ ಮಾಡ್ಬಹುದು. ಈ ಗೋಡಂಬಿ ಯ ಮೂಲ ದೇಶ ಯಾವುದು ಎಂದರೆ.......... "

ಬ್ಲಾ ಬ್ಲಾ... ಅಂತ ಏನೇನೋ ಹೇಳುತ್ತಿದ್ದರು. ನನಗೆ ಅದರಲ್ಲಿ ಯಾವುದರಲ್ಲೂ ಇಂಟ್ರೆಸ್ಟ್ ಇರಲಿಲ್ಲ. ಅಲ್ಲಾ ಗೋಡಂಬಿ ಯಿಂದ ಖೀರು ಮಾಡ್ಬಹುದು, ಬರ್ಫಿ ಮಾಡ್ಬಹುದು ಅಂತ ಯಾವ ಮಂಗನಿಗೆ ಗೊತ್ತಿಲ್ಲ ನೀವೆ ಹೇಳಿ.

" ನಿಮಗೆ ಬೇಕಿದ್ದರೆ ಹೇಳಿ,   ಒಳ್ಳೆಯ ಕ್ವಾಲಿಟಿ ಯ ಗೋಡಂಬಿ ಪ್ಯಾಕೇಟ್  ಒಂದನ್ನು ಖಂಡಿತವಾಗಿಯೂ ನಮ್ಮ ಮೈಸನಿಗೆ ಹೇಳಿ ನಿಮಗೆ ಕೊಡಿಸುತ್ತೇನೆ " ಎಂದು ಮಹೇಶನ  ಅಮ್ಮ ಹೇಳಿದರು.

" ಬರೀ ಒಂದು ಪ್ಯಾಕೆಟ್ ಯಾಕೆ, ಒಂದು ಗೋಣಿಯನ್ನೇ ಕೊಡಿಸುವ...... ಸಂಬಂಧ ಕುದುರಿದರೆ " ಅಂತ ಕೊನೆಗೊಂದು ಕೊಂಕು ಮಾತು ಸೆರಿಸಿಯೇ ಹೇಳಿದರು ಮಹೇಶ ನ ಅಪ್ಪ .

ಎಲ್ಲರೂ ನಕ್ಕರು. ಆದರಲ್ಲಿ ನಗುವಂತಹದ್ದು ಏನು ಇದೆ ಎಂದು ನನಗಂತೂ ಗೊತ್ತಾಗಲಿಲ್ಲ.

ಅಮ್ಮ ನನಗೆ ಹೇಗೆ ಟ್ರೈನಿಂಗ್ ಕೊಟ್ಟಿದ್ದರೋ ಹಾಗೆಯೇ ಅಮ್ಮನಿಗೂ ಕೂಡ ನಾನು  ನನ್ನನ್ನು ನೋಡಲು ಬರುವ ಹುಡುಗರೊಂದಿಗೆ ಪರ್ಸನಲ್ ಆಗಿ ಮಾತಾಡಲು ಅವಕಾಶ ನೀಡಲೇಬೇಕೆಂದು ಮೊದಲೇ ಕಂಡಿಷನ್ ಹಾಕಿದ್ದೆ.

ಅದರ ನೆನಪಾಗಿ ಅಮ್ಮನಿಗೆ ಕಣ್ಣು ಸನ್ನೆ ಮಾಡಿ ಹೇಳು ಹೇಳು ಅಂದೆ..

ಅಮ್ಮ ಗಂಟಲು ಸರಿ ಮಾಡಿಕೊಂಡು " ಈಗಿನ ಕಾಲದಲ್ಲಿ ಮುಚ್ಚು ಮರೆ ಅನ್ನುವುದು ಏನೂ ಇರಬಾರದು.ಮದುವೆ ಅಂತಹ ವಿಷಯ ಬಂದಾಗ ಒಬ್ಬರು ಇನ್ನೊಬ್ಬರ ಬಗ್ಗೆ ಎಲ್ಲವನ್ನೂ ಮದುವೆಗೆ ಮುಂಚೆಯೇ ತಿಳಿದುಕೊಳ್ಳುವುದು ಎಲ್ಲಾ ರೀತಿಯಿಂದಲೂ ತುಂಬಾ ಉತ್ತಮ. ಆದ್ದರಿಂದ ನೀವು ಏನು ತಿಳಿದುಕೊಳ್ಳಲ್ಲ ಅಂದ್ರೆ ನಿಮ್ಮ ಹುಡುಗ, ನಮ್ಮ ಹುಡುಗಿ ಸಪೆರೇಟ್ ಆಗಿ ಸ್ವಲ್ಪ ಹೊತ್ತು ಮಾತಾಡಲಿ, ಅವರಿಗೆ ಏನೇನೋ ಕೇಳಲಿಕ್ಕೆ ಇದೆಯೋ ಅದೆಲ್ಲವನ್ನು ಅವರವರೇ ಪರಸ್ಪರ ಕೇಳಿ ತಮ್ಮ ಡೌಟು ಗಳನ್ನು ಬಗೆಹರಿಸಿ ಕೊಳ್ಳಲಿ" ಎಂದರು.

ಅವರೆಲ್ಲಾ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು.

" ನಮ್ಮ ಮೈಸ ನಿಗೆ ಯಾವುದೇ ಹೆಣ್ಣು ಅಷ್ಟು ಬೇಗ ಹಿಡಿಸಲ್ಲ, ಆದರೆ ನಿಮ್ಮ ಹುಡುಗಿ ಪೋಟೊ ನೋಡಿಯೇ ಮದುವೆಗೆ ಒಪ್ಪಿದ್ದ.. ಆದರೆ ನೀವು ಅವರಿಬ್ಬರು ಪರಸ್ಪರ ಮಾತಾಡಿಕೊಳ್ಳಲಿ ಎಂದು ಬಯಸಿದರೆ ನಮ್ಮದೇನು ಅಭ್ಯಂತರವಿಲ್ಲ" ಎಂದು ಹುಡುಗಿಯ ತಾಯಿ ಹೇಳಿದರು.

ಓಕೆ, ಈಗ ನಾನು ಮತ್ತು ಮಹೇಶ ಇಬ್ಬರೇ ನಿಧಾನವಾಗಿ ಮನೆಯ ಟೆರೇಸ್ ಭಾಗಕ್ಕೆ ನಡೆದೆವು. ಟೆರೇಸ್, ಅದು ನನ್ನ ಏರಿಯಾ, ಎಷ್ಟೋ ಗಂಡುಗಳನ್ನು interview ಮಾಡಿ, ರಿಜೆಕ್ಟ್ ಎಂದು ನಾನು  ಬಿಸಾಕಿದ ಜಾಗ ಅದು.

" ಹೂವು ಚೆನ್ನಾಗಿದೆ... " 
ಟೆರೆಸ್ ಪಾಟ್ ನಲ್ಲಿದ್ದ ಗುಲಾಬಿ ಹೂವು ಅನ್ನು ಸವರುತ್ತಾ ಮಹೇಶ ಹೇಳಿದ.

"ಹೂವು ಚೆನ್ನಾಗಿದೆ ಗೊತ್ತು. ಆದರೆ ಅದನ್ನು ಕಿವುಚಿ ಹಾಕಿ ಲಗಾಡಿ ತೆಗಿಬೇಡಿ. ತುಂಬಾ costly ಹೂವು, ಪ್ರೀತಿಯಿಂದ ಬೆಳೆಸಿದ್ದೆವೆ" ಎಂದೆ.

ಅನಿರೀಕ್ಷಿತ ಬೌನ್ಸರ್ ನಿಂದ ಕಕ್ಕಾಬಿಕ್ಕಿ ಆದ ಬಾಲಕ.

ಸಾವರಿಸಿಕೊಂಡು ಕೇಳಿದ "ನೀವು ತುಂಬಾ ಹುಡುಗರನ್ನು ರಿಜೆಕ್ಟ್ ಮಾಡ್ಡಿದ್ದೀರಿ ಅಂತೆ, ಯಾಕೆ? "

"ನಾನು ರಿಜೆಕ್ಟ್ ಮಾಡ್ಲಿಲ್ಲ, ಅವರೇ ರಿಜೆಕ್ಟ್ ಮಾಡಿದ್ರು " ಅಂದೆ.

" ಅದು ಯಾಕೆ.. "ಅಂತ ಕೇಳಿದ.

ಮುಂದೆ ಹೋಗ್ತಾ ಹೋಗ್ತಾ ನಿನಗೇ ಗೊತ್ತಾಗುತ್ತೆ ಕಣೋ wait ಮಾಡು.. ಎಂದು ಮನಸಲ್ಲೇ ಹೇಳಿದೆ.

" ನನಗೆ ಹೇಗೆ ಗೊತ್ತು, ಅದು ಅವರೇ ಹೇಳ್ಬೆಕು ಅಲ್ಲಾ.. " ಅಂದೆ. 

" ಅದು ಸರಿಯೇ ಮತ್ತೆ ನಿಮಗೆ ರಂಗೋಲಿ ಹಾಕೋಕೆ ಬರುತ್ತಾ.." ಅಂದ

"ಇಲ್ಲ ಇಲ್ಲ ಅದೆಲ್ಲಾ ಬರಲ್ಲ, ಕಲಿಯುವ ಸಾಹಸಕ್ಕೂ ಕೂಡ ಕೈ ಹಾಕಿಲ್ಲ " ಅಂದೆ.

ಹುಡುಗ ಥಿಂಕ್ ಮಾಡ್ಲಿಕ್ಕೆ ಶುರು ಮಾಡಿದ.

" ಮತ್ತೆ ನಿಮಗೆ ಲವ್ ಏನಾದರೂ ಇದೆಯಾ... " ಏನೋ ಧೈರ್ಯ ಒಟ್ಟು ಮಾಡಿ ಕೇಳಿದ.

" ಇಷ್ಟು ಚೆನ್ನಾಗಿ ಇದ್ದೆನೆ ಅಂದ ಮೇಲೆ, ಲವ್ ಇರದೇ ಇರ್ತದ ನೀವೇ ಹೇಳಿ "ಅಂದೆ.

" ಹಾಗಾದರೆ ನಿಮಗೆ ನಿಜವಾಗಿಯೂ ಲವ್ ಇದೆಯಾ ... " ಅಂದ

" ಹೌದು " ಅಂದೆ.

" ಯಾರು " ಅಂತ ಕೇಳಿದ.

" ಐ ಲವ್ ಮೈ ಇಂಡಿಯಾ.. " ಅಂದೆ.

" ಉಫ್.. ನಾನೇನೋ ತಿಳಿದುಕೊಂಡೆ. ಈಗ ಸ್ವಲ್ಪ ಸಮಾಧಾನ ಆಯ್ತು. ಏನೇ ಹೇಳಿ ನೀವು ಒಳ್ಳೆಯ ಕಾಮೆಡಿ ಮಾಡ್ತಿರ " ಅಂದ.

" ನೀವು ಬಿಯರ್ ಕುಡಿತೀರಾ? "ಕೇಳಿದೆ.

" ಇಲ್ಲಪ್ಪ, ಅಂತ ಎಲ್ಲಾ ಬ್ಯಾಡ್ ಹ್ಯಾಬಿಟ್ ನನಗಿಲ್ಲ, ಎಣ್ಣೆ ಯನ್ನು ರೈಟ್ ಹ್ಯಾಂಡ್ ನಿಂದ ಬಿಡಿ ಲೆಪ್ಟ್ ಹ್ಯಾಂಡಿನಿಂದ ಕೂಡ ಟಚ್ ಮಾಡಲ್ಲ, ಎಣ್ಣೆ ಹೊಡಿಯುವವರನ್ನು ಕಂಡರೆ ಕೂಡ ನನಗಾಲ್ಲ. ಅವರಿಂದ ದೂರನೇ ಉಳಿದುಬಿಡ್ತೆನೆ " ಅಂದ.

" ಮತ್ತೆ ಸಿಗರೇಟು? " ಎಂದೆ.

" ಇಲ್ಲ ಎರಡೂ ಇಲ್ಲ.. 
ಅಲ್ಲಾ ಯಾಕೆ ಹಾಗೆ ಕೇಳ್ತಾ ಇದ್ದಿರಾ ನೀವು " ಅಂದ.

" ಯಾಕೆಂದರೆ ನಾನು ಬಿಯರ್ ಕೂಡ  ಕುಡಿತೀನಿ, ಸಿಗರೇಟು ಕೂಡ  ಸೇದ್ತಿನೀ.. ಅಂದೆ!

ಯಾರ್ಕರ್ ಎಸೆತವನ್ನು ಅಂದಾಜಿಸದೇ ಕ್ಲೀನ್ ಬೌಲ್ಡ್ ಆದ ಮೈಸ.

ಅವನಿಗೆ ತಲೆತಿರುಗಿದಂತೆ ಆಯ್ತು.

ಸಾವರಿಸಿಕೊಂಡು ಹೇಳಿದ "ನೋಡಿ ನಾವು ತುಂಬಾನೇ  orthodox ಫ್ಯಾಮಿಲಿ ಯವರು. ಸಂಪ್ರದಾಯ ದೇವರು ಪೂಜೆ ಪುನಸ್ಕಾರ , ಸಂಸ್ಕಾರ ಇದಕ್ಕೆಲ್ಲ ತುಂಬಾನೇ ಮಹತ್ವ ಕೊಡುವ ಮನೆತನದವರು. ಈ ತರಹ ಎಲ್ಲ ಇದ್ರೆ ತುಂಬಾನೇ ಕಷ್ಟ ಆಗುತ್ತೆ ನಮಗೆ ಸಂಬಂಧ ಬೆಳೆಸೊಕೆ " ಅಂದ

" ನೋಡಿ ನಾನು ತುಂಬಾನೇ unorthodox ,ನನಗೆ   ಸಿಗರೇಟು ಎಳೆದು ಉಳಿದ  ಅರ್ಧ ಸಿಗರೇಟು ಕೊಡುವ ಹುಡುಗ ಇಷ್ಟ ಆಗ್ತಾನೆ. ವಿಸ್ಕಿ ಗ್ಲಾಸ್ ಗೆ ಒಂದೊಂದಾಗಿ ಐಸ್ ಕ್ಯೂಬ್ ಗಳನ್ನು ಶ್ರದ್ಧೆಯಿಂದ ಬೆರೆಸೋ ಹುಡುಗ ಇಷ್ಟ ಆಗ್ತಾನೆ..

ನಿಜವಾಗಿ ಹೇಳಬೇಕೆಂದರೆ ನೀವೇ ನನಗೆ ಥ್ಯಾಂಕ್ಸ್ ಹೇಳಬೇಕು. ನಾನೇ ಎಲ್ಲವನ್ನೂ ಓಪನ್ ಆಗಿ ನಿಮಗೆ ಹೇಳಿದ್ದಿನಿ. ಒಂದು ವೇಳೆ ಮದುವೆ ಆದ ನಂತರ ನಿಮಗೆ ಗೊತ್ತಾಗಿದ್ದರೆ ನಿಮ್ಮ, ನಿಮ್ಮ ಮನೆತನದ ಗತಿ ಏನು, ಒಮ್ಮೆ ಯೋಚಿಸಿ ?... " ಅಂದೆ.

"ಹೌದಲ್ಲ, ನೀವು ಹೇಳುವುದು ಕರೆಕ್ಟ್ " ಅಂದ.

"ನೋಡಿ ನೀವು ಬೇಜಾರು ಮಾಡ್ಕೊಬೇಡಿ, ನಿಮಗೆ ನನಗಿಂತ ಒಳ್ಳೆಯ ಹುಡುಗಿ ಸಿಗ್ತಾಳೆ " ಎಂದು ಮಾಮೂಲಿ ಆಗಿ ಹುಡುಗಿಯರು ಬ್ರೇಕ್ ಅಪ್ ಟೈಂ ಅಲ್ಲಿ ಹೇಳೋ ಡೈಲಾಗ್ ಹೇಳಿದೆ.

" ನಿಮ್ಗೂ ಕೂಡ, ಬಿಯರ್ ಕುಡಿಯುವ ಸಿಗರೇಟು ಸೇದುವ ಗಂಡನೇ ಸಿಗ್ಲಿ " ಅಂದ.

ಮಾತಿನಲ್ಲಿ ಯಾವುದೇ ಕೊಂಕು ಕಂಡುಬರದೇ ಇದ್ದರೂ ಅವನ ಅಮಾಯಕತೆ ಕಂಡು ಜೋರು  ನಗು ಬಂತು.

" ಪ್ರೆಂಡ್ಸ್...? " ಅಂತ ಕೈಚಾಚಿದೆ.

" oh sure,ಖಂಡಿತವಾಗಿಯೂ friends.. " ಅಂತ ಕೈ ಕುಲುಕಿದ.

" ಮತ್ತೆ ಮಹೇಶ್ ನೀವು ಟಿಕ್ ಟಾಕ್ ನಲ್ಲಿ ಇಷ್ಟು ದೊಡ್ಡ ಸ್ಟಾರ್ ಆಗಲು  ಹೇಗೆ ಸಾಧ್ಯ ಆಯಿತು, ಇದಕ್ಕೆ ಪ್ರೇರಣೆ ಏನು, ಯಾರು ರೋಲ್ ಮಾಡೆಲ್" ಅಂತ  ಎಲ್ಲಾ ನಿಧಾನವಾಗಿ ಮಾತು ತಿರುಗಿಸಿದೆ.

ಅವನು ಸಿರಿಯಸ್ ಆಗಿ ಏನೇನೋ ಹೇಳ್ತಾ ಇದ್ದ.

ಕೊನೆಯಲ್ಲಿ ಹೇಳಿದ " ಏನೇ ಹೇಳಿ ನೀವು  ಗೋಡಂಬಿ ಹಾಕಿ ತುಂಬಾ ಚೆನ್ನಾಗಿ ಶೀರಾ ಮಾಡ್ತೀರಾ" ಅಂದ

"ಹೌದಾ ನಿಮಗೆ ಇಷ್ಟ ಆಯಿತಾ, ಬೇಕಿದ್ದರೆ ಹೇಳಿ ಹೋಗುವಾಗ ಒಂದು ದೊಡ್ಡ ಬುತ್ತಿ ಯಲ್ಲಿ ಹಾಕಿಕೊಡ್ತಿನಿ.ಮನೆಗೆ  ತಗೊಂಡು ಹೋಗಿ " ಅಂದೆ.

" ಥ್ಯಾಂಕ್ಸ್... "ಅಂದ

" ಮತ್ತೆ ನಿಮ್ಮ ಅಪ್ಪ ಹೇಳ್ತಾ ಇದ್ರು , ಸಂಬಂಧ ಕುದುರಿದರೆ  ಒಂದು ಗೋಣಿ ಒಳ್ಳೆ ಕ್ವಾಲಿಟಿಯ ಗೋಡಂಬಿ ಮೈಸ ನಿಗೆ ಹೇಳಿ ಕೊಡಿಸ್ತೆನೆ ಅಂತ. ಹಾಗಾದರೆ ಬಹುಶಃ ಇನ್ನು ನಮಗೆ ಆ ಒಂದು ಗೋಣಿ ಒಳ್ಳೆಯ ಕ್ವಾಲಿಟಿಯ ಗೋಡಂಬಿ ಸಿಗುವುದು ಡೌಟು ಅಂತ ಕಾಣ್ತದೆ ಅಲ್ಲಾ ಮಹೇಶ್ . " ಅಂದೆ.

" ಒಂದು ಯಾಕೆ.. ಎರಡು ಗೋಣಿ ಕೊಡಿಸ್ತೆನೆ.. ನೀವು ಟೆನ್ಶನ್ ಮಾಡ್ಬೇಡಿ, ನಾಳೆಯೇ ಬಂದು ಮನೆಗೆ ಬೀಳುತ್ತೆ ಗೋಡಂಬಿ " ಅಂದ ಮಹೇಶ.

" ಥ್ಯಾಂಕ್ಸ್... " ಅಂದೆ.

ಇಬ್ಬರು ಟೆರೇಸ್ ನಿಂದ ಇಳಿದು ಮನೆಯ ಹಾಲ್ ಗೆ ಬಂದೆವು. ಅವರ ಕಡೆಯವರು ಎಲ್ಲಾ ಹೋದ ಮೇಲೆ, ನನ್ನ ರೂಮ್ ಸೇರಿದೆ, ಎರಡು ಗೋಣಿ ಗೋಡಂಬಿ ಅನಾಯಾಸವಾಗಿ ಸಂಪಾದಿಸಿದ ಖುಷಿ ನನ್ನಲ್ಲಿತ್ತು.

ಪ್ರತೀ ಸಲ ಅಪ್ಪ ಹೇಳುತ್ತಿದ್ದ ಆ ಮಾತುಗಳು  ನೆನಪಾಗಿ ಒಮ್ಮೆ ನಗು ಬಂತು. 
".. ಇನ್ನು ಮನೆಯಲ್ಲಿ ರುವ ಗೋಡಂಬಿ ಸಂಪೂರ್ಣ ಮುಗಿದ ಮೇಲೆ ನಿನಗೆ ಹುಡುಗ ನನ್ನು ನೋಡುವುದನ್ನೇ ನಿಲ್ಲಿಸಿಬಿಡ್ತೆನೆ..ನೀನು ಗೋಡಂಬಿ ಹಾಕಿ ಶೀರಾ ಮಾಡುವುದೂ ಬೇಡ, ನಾನು ನೀನು ಮಾಡುವ  ಶೀರಾಕ್ಕೆ ಅಂಗಡಿಯಿಂದ ರಾಶಿ ರಾಶಿ   ಗೋಡಂಬಿ ತಂದು ಸುರಿಯುವುದೂ ಬೇಡ,ಗೋಡಂಬಿ ಇದ್ದರೆ ಅಲ್ವಾ ನೀನು ಶೀರಾ ಮಾಡುವುದು, ಗಂಡಿನ ಕಡೆಯವರು ಬರುವುದು ಎಲ್ಲಾ.. "

ಮನಸ್ಸು ಯೋಚಿಸತೊಡಗಿತು, 
"ಅಲ್ಲಾ.. ಅಪ್ಪ ಹೇಳಿದ್ದು, ಈ ಮನೆಯಲ್ಲಿರುವ ಗೋಡಂಬಿ ಸಂಪೂರ್ಣ ಮುಗಿದರೆ, next ಶೀರಾ ಕೂಡ ಇಲ್ಲ, ಗಂಡಿನ ಕಡೆಯವರು ಕೂಡ ಇಲ್ಲ ಅಂತ.  ಆದರೆ ಈಗ ಮನೆಯ  ಡಬ್ಬದಲ್ಲಿರುವ ಎಲ್ಲಾ  ಗೋಡಂಬಿ ಮುಗಿಯುವ ಮೊದಲೇ ,ನನ್ನ ಫ್ರೆಂಡ್ ಮೈಸ ನಾಳೆಯೇ ಎರಡು ಗೋಣಿ ಗೋಡಂಬಿ ತಂದು ಕೊಡ್ತಾ  ಇದ್ದಾನೆ. ಅಂದರೆ  ಮನೆಯಲ್ಲಿ ಗೊಡಂಬಿ ಗೆ ಗೋಡಂಬಿ ಯೇ ತುಳುಕಾಡ್ತ ಇರ್ತದೆ ನಾಳೆಯಿಂದ. 
ಹೂಂ.. ಹಾಗಾದರೆ ಪುನಃ ಆ ಎರಡು ಗೋಣಿ ಯ ಅಷ್ಟೂ ಗೋಡಂಬಿ ಮುಗಿಯುವವರೆಗೂ... 
ಈ ಅಪ್ಪ ಹುಡುಗ ನ ಕಡೆಯವರನ್ನು ನಿರಂತರವಾಗಿ ಕರೆ ತರುವುದನ್ನು ಖಂಡಿತವಾಗಿಯೂ ನಿಲ್ಲಿಸಲ್ಲ ಅಂತ ಆಯಿತು !"
🙄🙄🤔🤔

ಹೂಂ, ತರ್ಲಿ ತರ್ಲಿ, ಮಾಡ್ತೆನೆ ಅವರಿಗೆಲ್ಲ...

ಹೇ ಭಗವಂತ,
ಗೋಡಂಬಿ ಯೂ ನಿನ್ನದೇ.. ದ್ರಾಕ್ಷಿ ಯೂ ನಿನ್ನದೇ.. ಹಾಳಾಗದಿರಲಿ ಶೀರಾ.. 
😅🤣😂

     
        "  ಗೋಡಂಬಿ_ಪುರಾಣ "
...............................................

story by - AB Pacchu,
                 Moodbidri
                 Mangalore(D.K)



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ