ಜೈ ಹಿಂದ್!
.
#ಜೈ_ಹಿಂದ್..!
ಅವನೊಬ್ಬ ವೃದ್ಧ ಭಿಕ್ಷುಕ.ಬಸ್ ಸ್ಟ್ಯಾಂಡ್ ನಲ್ಲಿ ಭಿಕ್ಷೆ ಬೇಡುತ್ತಿದ್ದ.
ಆದರೆ ಎಲ್ಲರಂತೆ ಸುಮ್ಮನೆ ಕೈ ಚಾಚಿ ಆತ ಭಿಕ್ಷೆ ಬೇಡುತ್ತಿರಲಿಲ್ಲ..!
ತನಗೆ ಗೊತ್ತಿದ್ದ ಹಳೆಯ ಹಿಂದಿ ಸಿನಿಮಾ ಹಾಡುಗಳನ್ನು,ಕನ್ನಡ ಭಕ್ತಿ ಗೀತೆಗಳನ್ನು ಹೀಗೆ ಮನಸ್ಸಿಗೆ ಬಂದಿದ್ದನ್ನು ಹಾಡುತ್ತಿದ್ದ.ಆದರೆ ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದ.ಜನರು ಅವನೆದುರು ಅಷ್ಟೋ ಇಷ್ಟೋ ಹಣ ಹಾಕಿ ಮುಂದೆ ಹೋಗುತ್ತಿದ್ದರು.
ಅದೇ ಊರಿನಲ್ಲಿ ಒಬ್ಬ ಯುವ ಸೈನಿಕ ಇದ್ದ.ಆತನಿಗೆ ಮದುವೆ ಮಕ್ಕಳು ಇನ್ನು ಯಾವುದೂ ಆಗಿರಲಿಲ್ಲ.ಹೊಸದಾಗಿ ಸೈನ್ಯಕ್ಕೆ ಸೇರಿದ್ದ ಅಷ್ಟೇ.
ವರ್ಷಕ್ಕೆರಡು ಬಾರಿ ಆತ ತನ್ನ ಊರಿಗೆ ಬಂದು ಹೋಗುತ್ತಿದ್ದ. ಬಂದಾಗಲೆಲ್ಲ ತನ್ನ ಊರು ತಿರುಗಲು ಹೊರಟು ಬಿಡುತ್ತಿದ್ದ.
ಹಾಗೆ ಒಮ್ಮೆ ತಿರುಗುತ್ತಾ ಹೋಗುವಾಗ ಮನೆಯ ಸಮೀಪದ ಬಸ್ ಸ್ಟ್ಯಾಂಡ್ ನಲ್ಲಿ ಇದ್ದ ಆ ವೃದ್ಧ ಭಿಕ್ಷುಕ ಅವನ ಕಣ್ಣಿಗೆ ಬಿದ್ದ.
ಭಿಕ್ಷುಕ ಎಂದಿನಂತೆ ಕಣ್ಣು ಮುಚ್ಚಿ, ಮನಸ್ಸು ಬಿಚ್ಚಿ ಆಕಾಶ ನೋಡುತ್ತಾ, ತನ್ನ ತಂಬೂರಿ ಮೀಟುತ್ತಾ ಮನಸ್ಸು ಮುಟ್ಟುವಂತೆ ಹಾಡು ಹಾಡುತ್ತಿದ್ದ.
ಸೈನಿಕನಿಗೆ ಆ ವೃದ್ಧ ಭಿಕ್ಷುಕನಲ್ಲಿ ಆಸಕ್ತಿ ಹೆಚ್ಚಾಯಿತು.
ನೇರಾ ಆ ಭಿಕ್ಷುಕನ ಬಳಿ ಬಂದ ಸೈನಿಕ ಹೇಳಿದ.. ತಾತ.. ನನಗಾಗಿ ನೀವು ಒಂದು ಹಾಡು ಹಾಡುವಿರಾ? ಹಾಡಿದರೆ ನಿಮಗೆ ನಾನು ನೂರು ರೂಪಾಯಿ ಕೊಡುತ್ತೇನೆ...ಎಂದ.
ಅದನ್ನು ಕೇಳಿ ಭಿಕ್ಷುಕ ತನ್ನ ತಂಬೂರಿ ಹಿಡಿದು ಹಾಡಲು ಸಿದ್ಧನಾದ.
ಅದಕ್ಕೆ ಸೈನಿಕ ಹೇಳಿದ - ತಾತ ನಾನೊಬ್ಬ ಸೈನಿಕ.. ನಿಮಗೆ ಯಾವುದಾದರೂ ಸೈನಿಕರ ಹಾಡು ಬರುತ್ತದೆಯೇ?
ಅದಕ್ಕೆ ಭಿಕ್ಷುಕ ಬರುತ್ತದೆ ಎಂದು ಖುಷಿಯಿಂದಲೇ ತಲೆಯಾಡಿಸಿ ಎಂದಿನಂತೆ ತನ್ನ ತಂಬೂರಿಯನ್ನು ಮೀಟಿ ಕಣ್ಣು ಮುಚ್ಚಿ ಬಹಳ ಪ್ರಸಿದ್ಧವಾದ ಲತಾ ಮಂಗೇಶ್ಕರ್ ಹಾಡಿದ್ದ ಸೈನಿಕರ ಈ ಹಾಡನ್ನೇ ಹಾಡಿದ..
" Ye mere vatan ke logo
Zara aankh mein bhar lo paani
Jo Shahid Hue Hein Unki
Zaraa Yaad Karo qurbaani..
Ye mere vatan ke logo.. "
ಸೈನಿಕನಿಗೆ ಅದು ಬಹಳ ಹಿಡಿಸಿತು.
ತನ್ನ ಜೇಬಿನಿಂದ ನೂರು ರೂಪಾಯಿ ನೋಟು ತೆಗೆದು ಅದನ್ನು ಆ ವೃದ್ಧ ಭಿಕ್ಷುಕನ ಕೈಯಲ್ಲಿ ಇಟ್ಟ.
ಆ ನೂರು ರೂಪಾಯಿ ನೋಟನ್ನೇ ನೋಡುತ್ತಾ ವೃದ್ಧ ಭಿಕ್ಷುಕ ನಗುತ್ತಾ ಹೇಳಿದ.... ನೀನೇ ಹೇಳುತ್ತೀಯಾ ನೀನೊಬ್ಬ ದೇಶ ಕಾಯುವ ಸೈನಿಕ ಎಂದು,ಆದ್ದರಿಂದ ಏನಾದರೂ ಕೊಡುವುದಿದ್ದರೆ ನನಗೂ ದೇಶದ ಚಿತ್ರ ಇರುವ ಹಣವನ್ನೇ ಕೊಟ್ಟು ಬಿಡಪ್ಪ.. ನಿನ್ನಿಂದಲೇ ಅದನ್ನು ಸ್ವೀಕರಿಸಲು ನನಗೂ ಕೂಡ ಸಂತೋಷ.. ಅಂದ!
ಸೈನಿಕ ಕೇಳಿದ... ದೇಶದ ಚಿತ್ರ ಇರೋ ಹಣವೇ? ಯಾವುದದು ತಾತ..!
ಭಿಕ್ಷುಕ ಹೇಳಿದ.. ಅದೇ ಎರಡು ರೂಪಾಯಿ ನಾಣ್ಯ ಕಣಪ್ಪಾ..ಅದರಲ್ಲೇ ಅಲ್ವಾ ಭಾರತದ ಚಿತ್ರವಿರುವುದು.
ಸೈನಿಕನಿಗೆ ಎರಡು ರೂಪಾಯಿ ನಾಣ್ಯದಲ್ಲಿ ಭಾರತದ ಭೂಪಟ ಇರುವುದು ನೆನಪಾಯಿತು ಅದೇ ರೀತಿ ಭಿಕ್ಷೆಯಾಗಿ ಬೀಳುವ ಹಣದಲ್ಲೂ ಕೂಡ ತನ್ನ ದೇಶವನ್ನು ಕಂಡುಕೊಳ್ಳುವ ಆ ವೃದ್ಧ ಭಿಕ್ಷುಕನ ದೇಶಪ್ರೇಮವೂ ಇಷ್ಟವಾಯಿತು.
ಕೂಡಲೇ ಪರಿಚಯದ ಅಂಗಡಿಗೆ ಓಡಿದ. ನೂರು ರೂಪಾಯಿಯನ್ನು ಎರಡು ರೂಪಾಯಿಯ ಚಿಲ್ಲರೆಯನ್ನಾಗಿ ಬದಲಾಯಿಸಿಕೊಂಡ ಮತ್ತು ಆ ಎಲ್ಲಾ ಎರಡು ರೂಪಾಯಿ ನಾಣ್ಯದಲ್ಲೂ ಭಾರತದ ಭೂಪಟ ಇರುವ ಎರಡು ರೂಪಾಯಿ ನಾಣ್ಯವನ್ನಷ್ಟೇ ಆಯ್ದು ಕೊಂಡ.
ಮರಳಿ ಭಿಕ್ಷುಕನ ಬಳಿ ಬಂದ ಸೈನಿಕ - ತಗೊಳ್ಳಿ ತಾತ.. ಭಾರತ ಚಿತ್ರವಿರುವ ಎರಡು ರೂಪಾಯಿ ನಾಣ್ಯ..
ಭಿಕ್ಷುಕ ಮೆಲ್ಲಗೆ ಕೇಳಿದ... ಎಷ್ಟಿದೆ?
ಸೈನಿಕ ಹೇಳಿದ - ಐವತ್ತು ನಾಣ್ಯಗಳಿವೆ ತಾತ.
ಭಿಕ್ಷುಕ ನಗುತ್ತಲೇ ಹೇಳಿದ.. ಬೇಡ ಕಣಪ್ಪಾ... ಕೇವಲ ನನಗೆ ಹತ್ತು ನಾಣ್ಯಗಳು ಸಾಕು.. ನೀನು ಇನ್ನು ಮುಂದೆಯೂ ನನ್ನನ್ನು ಕಾಣಲು ಇಲ್ಲಿಗೆ ಆವಾಗವಾಗ ಬರುತ್ತಿರಬೇಕು.. ಮತ್ತು ನಾನು ನಿನಗಾಗಿ ದೇಶದ ಹಾಡು,ಸೈನಿಕರ ಹಾಡು ಹಾಡುತ್ತಲೇ ಇರಬೇಕು..ನನಗದೇ ಖುಷಿ.. ದೇಶ ಕಾಯೋ ಸೈನಿಕನನ್ನು ಖುಷಿ ಪಡಿಸಿದರೆ,ದೇವರು ಕೂಡ ನನ್ನನ್ನು ಮೆಚ್ಚುತ್ತಾನೆ...
ದೇಶದ ಸೈನಿಕರ ಬಗ್ಗೆ ಭಿಕ್ಷುಕನಿಗಿರುವ ಪ್ರೀತಿ ಕಂಡು ಸೈನಿಕನಿಗೆ ಮತ್ತಷ್ಟು ಖುಷಿ ಆಯಿತು.
ಆಯಿತು ತಾತ.. ನಾನಿನ್ನು ಬರ್ತೇನೆ.. ಎಂದು ಹತ್ತು ಎರಡು ರೂಪಾಯಿಗಳ ನಾಣ್ಯವನ್ನು ಭಿಕ್ಷುಕನಿಗೆ ನೀಡಿದ ಸೈನಿಕ.
ಹೋಗಿ ಬಾಪ್ಪ... ನೀನು ನನಗೆ ಮೊಮ್ಮಗನ ಹಾಗೆ, ದೇವರು ನಿನ್ನನ್ನು ಸುಖವಾಗಿಟ್ಟಿರಲಿ..ನೀನು ಸುಖವಾಗಿದ್ದರೆ ಈ ದೇಶ ಕೂಡ ಸುಖವಾಗಿರ್ತದೆ..ನಾನು ಕೂಡ ಸುಖವಾಗಿರ್ತೇನೆ.. ಅಂದ ಭಿಕ್ಷುಕ.
ಆ ನಂತರ ಸೈನಿಕ ತನ್ನ ರಜೆ ಮುಗಿಸಿ ಮತ್ತೆ ಸೈನ್ಯಕ್ಕೆ ಮರಳಿದ.
ಆದರೆ ಆ ನಂತರ ಊರಿಗೆ ಬಂದಾಗಲೆಲ್ಲ..ಆ ವೃದ್ಧ ಬಿಕ್ಷುಕನನ್ನು ಭೇಟಿ ಮಾಡಿಲು ಆ ಸೈನಿಕ ಯಾವತ್ತೂ ಮರೆಯುತ್ತಿರಲಿಲ್ಲ.ಅವನನ್ನೇ ಹುಡುಕಿಕೊಂಡು ಮನೆಯ ಹಿಂದಿನ ಬಸ್ ಸ್ಟ್ಯಾಂಡ್ ಕಡೆಗೆ ಹೋಗುತ್ತಿದ್ದ.
ಭಿಕ್ಷುಕನ ಬಳಿ ಪ್ರತೀ ಬಾರಿ ಹೋದಾಗಲೂ ಎರಡು ರೂಪಾಯಿ ನಾಣ್ಯಗಳನ್ನು ಹಾಗೂ ಅದರಲ್ಲೂ ಭಾರತದ ಚಿತ್ರವಿರುವ ನಾಣ್ಯಗಳನ್ನೇ ಆಯ್ದುಕೊಂಡು ಆ ವೃದ್ಧ ಭಿಕ್ಷುಕನ ಬಳಿ ಹೋಗುತ್ತಿದ್ದ ಸೈನಿಕ.
ಸೈನಿಕ ಪ್ರತೀ ಬಾರಿ ಹೋದಾಗಲೂ ಭಿಕ್ಷುಕ ನಗು ನಗುತ್ತಲೇ ಸೈನಿಕನನ್ನು ಮಾತಾಡಿಸಿ ಅವನ ಯೋಗ ಕ್ಷೇಮ ವಿಚಾರಿಸಿ ಅವನಿಗಾಗಿ .. ವಂದೇ ಮಾತರಂ..ಹಾಗೂ ಇನ್ನಿತರ ದೇಶ ಭಕ್ತಿ ಗೀತೆಗಳನ್ನು,ಯೋಧರ ಹಾಡುಗಳನ್ನು ಇಂಪಾಗಿ ತನ್ನ ತಂಬೂರಿ ಮೀಟಿ ಹಾಡುತ್ತಿದ್ದ.
ಹಾಡು ಕೇಳಿ ಹಿಂದಿರುಗಿ ಬರುವಾಗ ಎರಡು ರೂಪಾಯಿ ನಾಣ್ಯಗಳನ್ನು ತಪ್ಪದೇ ಕೊಟ್ಟು ಬರುತ್ತಿದ ಸೈನಿಕ. ಅದಕ್ಕಿಂತ ಹೆಚ್ಚಿಗೆ ಸೈನಿಕ ಏನೇ ಕೊಟ್ಟರು ಅದನ್ನು ತೆಗೆದುಕೊಳ್ಳಲು ಭಿಕ್ಷುಕ ನಿರಾಕರಿಸಿ ಬಿಡುತ್ತಿದ್ದ ಮತ್ತು ಭಿಕ್ಷುಕ ಹೇಳುತ್ತಿದ್ದ... ನಿನ್ನಂತಹ ಸೈನಿಕರ ಸೇವೆಗೆ,ಈ ದೇಶದ ನಾವುಗಳೇ ಏನೇ ಕೊಟ್ಟರೂ ಅದು ಕಡಿಮೆಯೇ.. ಇನ್ನು ನಿನ್ನಿಂದ ಏನಾದರೂ ನಾವು ತೆಗೆದುಕೊಂಡರೆ ಆ ಶಿವ ನಮ್ಮನ್ನು ಮೆಚ್ಚುತ್ತಾನಾ ಹೇಳು.. ಪ್ರತೀ ಬಾರಿಯೂ ಊರಿಗೆ ಬಂದಾಗ ನನ್ನನ್ನು ನೋಡಲು ನೀನು ಇಲ್ಲಿಗೆ ಓಡೋಡಿ ಬರುತ್ತಿ ಅಲ್ಲವೇ.. ಅದಕ್ಕಿಂತ ದೊಡ್ಡ ಸುಖ ನನಗೇನು ಬೇಡ ಕಣಪ್ಪಾ... ಎಂದು ವೃದ್ಧ ಭಿಕ್ಷುಕ ಮುಗ್ಧವಾಗಿ ಹೇಳುತ್ತಿದ್ದ.
ಎಲ್ಲವೂ ಸರಿ ಇತ್ತು. ಆದರೆ ಒಂದು ದಿನ ಆ ಯುವ ಸೈನಿಕ ಯುದ್ಧ ಭೂಮಿಯಲ್ಲಿ ಯುದ್ಧ ಮಾಡುತ್ತಲೇ ಹುತಾತ್ಮನಾಗಿ ಬಿಟ್ಟ.!!
ಸೈನಿಕನ ಪಾರ್ಥೀವ ಶರೀರ ಊರಿಗೆ ಬಂತು.ಊರಿನ ತುಂಬಾ ಮೆರವಣಿಗೆಯ ಮೂಲಕ ಸೈನಿಕನ ಶರೀರ ಅವನ ಮನೆಯ ಕಡೆಗೆ ಹೊರಟಿತು.
ಬಸ್ ಸ್ಟ್ಯಾಂಡ್ ನಲ್ಲಿ ಕೂತಿದ್ದ ಭಿಕ್ಷುಕ ನಡೆದು ಹೋಗುತ್ತಿದ್ದ ಜನರಲ್ಲಿ ಕೇಳಿದ.. ಯಾರದು.. ಏನಾಯಿತು..? ಎಂದು.
ಒಬ್ಬರು ಹೇಳಿದರು.. ಅವರೊಬ್ಬ ಸೈನಿಕ ಯುದ್ಧ ಭೂಮಿಯಲ್ಲಿ ಹುತಾತ್ಮರಾಗಿದ್ದಾರೆ.. ಅವರ ಶರೀರವನ್ನು ಅವರ ಮನೆಗೆ ಕೊಂಡೊಯ್ಯಲಾಗುತ್ತಿದೆ.. ಎಂದು ಹೇಳಿದರು.
ಭಿಕ್ಷುಕನಿಗೆ ನನಗೆ ಎರಡು ರೂಪಾಯಿ ನಾಣ್ಯಗಳನ್ನು ನೀಡುತ್ತಿದ್ದ ಆ ಯುವ ಸೈನಿಕನೇ ಇದಾಗಿರಬಹುದೇ ಎಂದು ಭಯವಾಯಿತು...!!
ಆದರೆ ಟ್ರಕ್ಕಿನ ಮೇಲೆ ಸೈನಿಕನ ಶರೀರವನ್ನು ಇಟ್ಟ ಕಾರಣ ಸೈನಿಕನ ಮುಖ ಭಿಕ್ಷುಕನಿಗೆ ಕಾಣಿಸಲಿಲ್ಲ..
ಮೆರವಣಿಗೆ ಮುಂದೆ ಹೋಯಿತು..!
ಭಿಕ್ಷುಕನಿಗಿರುವ ತಡೆಯಲು ಆಗಲಿಲ್ಲ.
ಬಸ್ ಸ್ಟ್ಯಾಂಡ್ ನಲ್ಲಿ ಇದ್ದ ತನ್ನ ಜೋಳಿಗೆ ಹಾಗೂ ತನ್ನ ತಂಬೂರಿಯನ್ನು ಹಿಡಿದುಕೊಂಡು ಕುಂಟುತ್ತಾ ಕುಂಟುತ್ತಾ ಆ ಮೆರವಣಿಗೆಯೇ ಹಿಂದೆಯೇ ಓಡಿದ..!
ಆದರೆ ಮೆರವಣಿಗೆ ಅವನಿಂದ ಬಹಳ ಮುಂದೆ ಹೋಗಿತ್ತು.. ಮತ್ತು ಅದು ಅದಾಗಲೇ ಸೈನಿಕನ ಮನೆ ತಲುಪಿತ್ತು.
ಆದರೆ ರೋಡ್ ನಲ್ಲಿ ಬಿದ್ದಿರುವ ಹೂವುಗಳನ್ನು ನೋಡಿಕೊಂಡು ಅದರ ಹಿಂದೆಯೇ ಭಿಕ್ಷುಕ ಕುಂಟುತ್ತಾ ಕುಂಟುತ್ತಾ ಸಾಗಿ ಕೊನೆಗೂ ಸೈನಿಕನ ಮನೆ ತಲುಪಿದ..
ಮನೆಯ ಅಂಗಳದಲ್ಲಿ ಸೈನಿಕನ ಪಾರ್ಥಿವ ಶರೀರವನ್ನು ಗಾಜಿನ ಪೆಟ್ಟಿಗೆಯಲ್ಲಿ ಮಲಗಿಸಲಾಗಿತ್ತು.
ಅದರ ಮೇಲೆ ಭಾರತದ ತ್ರಿವರ್ಣಧ್ವಜವನ್ನು ಹೊದಿಸಲಾಗಿತ್ತು.
ಒಬ್ಬೊಬ್ಬರೇ ಬಂದು ಸೈನಿಕನ ಮುಖ ದರ್ಶನ ಮಾಡಿಕೊಂಡು ಹೋಗುತ್ತಿದ್ದರು.
ಭಿಕ್ಷುಕ ಅಂಗಳದೊಳಕ್ಕೆ ಕುಂಟುತ್ತಲೇ ಹೋದ..
ಅವನನ್ನು ಯಾರೂ ತಡೆಯಲಿಲ್ಲ..
ಶರೀರದ ಹತ್ತಿರ ಹೋದ ಭಿಕ್ಷುಕ ಸೈನಿಕನ ಮುಖ ನೋಡಿದ.
ಭಿಕ್ಷುಕನಿಗೆ ತಡೆದುಕೊಳ್ಳಲು ಆಗಲೇ ಇಲ್ಲ. ಕಣ್ಣುಗಳಲ್ಲಿ ತನ್ನೀಂತಾನೇ ನೀರು ತುಂಬಿಕೊಂಡು ಬಿಟ್ಟವು..
ಆದರೆ ಅಲ್ಲಿದ್ದ ಯಾರೂ ಕೂಡ ಅಳುತ್ತಿರಲಿಲ್ಲ.
ಸೈನಿಕನ ತಂದೆ, ಅಜ್ಜ, ಮುತ್ತಜ್ಜ ಎಲ್ಲರೂ ಸೈನ್ಯದಲ್ಲಿ ಇದ್ದು ನಿವೃತ್ತರಾದವರು.
ಯುದ್ಧ ಭೂಮಿಯಲ್ಲಿ ಹುತಾತ್ಮನಾಗುವುದು ಎಂದರೆ,ಸೈನಿಕ ಆದವನಿಗೆ ಅದೊಂದು ಹೆಮ್ಮೆಯ ವಿಷಯ ಎಂದು ಅವರೆಲ್ಲ ತಿಳಿದಿದ್ದವರು.
ಯಾರೂ ಒಂದು ಚೂರು ಕಣ್ಣೀರು ಹಾಕದೇ ಎದೆಯುಬ್ಬಿಸಿ ಗರ್ವದಿಂದ ತಮ್ಮ ಮನೆಯ ಮಗನ ಬಳಿ ನಿಂತಿದ್ದರು ಅವರೆಲ್ಲ.
ಅಲ್ಲಿ ಸೇರಿದ್ದ ಜನರೂ ಕೂಡ ಮೌನವಾಗಿ ತಲೆ ತಗ್ಗಿಸಿ ನಿಂತಿದ್ದರು..
ಅಲ್ಲೊಂದು ಧೀರ್ಘವಾದ ಮೌನವಿತ್ತು!
ಸೈನಿಕನ ಕೊನೆಯ ದರ್ಶನ ಪಡೆಯಲು ಬಂದವರೆಲ್ಲ.. ಶರೀರದ ಬಳಿ ಹೂ ಗುಚ್ಛ,ಗಂಧದ ಮಾಲೆ ಇಟ್ಟು ನಮಸ್ಕಾರ ಸಲ್ಲಿಸಿ ಹೋಗುತ್ತಿದ್ದರು.
ಅದನ್ನು ಕಂಡ ಭಿಕ್ಷುಕನಿಗೆ ಏನೋ ನೆನಪಾಯಿತು.. ತನ್ನ ಕಣ್ಣೀರು ಒರೆಸಿ ಮತ್ತೆ ಮನೆಯಂಗಳದಿಂದ ಕುಂಟುತ್ತಾ ಹೊರಗೊಡಿದ.
ಸೀದಾ ಒಂದು ಹೂವಿನ ಅಂಗಡಿಗೆ ಹೋದ... ತನ್ನ ಜೋಳಿಗೆಯಲ್ಲಿ ಇದ್ದ ಹಣವನ್ನೆಲ್ಲ ಒಟ್ಟು ಮಾಡಿ ಒಂದು ತುಳಸಿ ಮಾಲೆ ತೆಗೆದುಕೊಂಡ..
ಮತ್ತೆ ಸೈನಿಕನ ಮನೆಯತ್ತ ಓಡಿದ..!
ಈಗಲೂ ಅವನನ್ನು ಯಾರೂ ತಡೆಯಲಿಲ್ಲ.
ಭಿಕ್ಷುಕ ಸೈನಿಕನ ಶರೀರದ ಬಳಿ ಬಂದ.ಮತ್ತೆ ಭಿಕ್ಷುಕ ಸೈನಿಕನ ಮನೆಯವರನ್ನೊಮ್ಮೆ ನೋಡಿದ.
ಇಲ್ಲ... ಯಾರ ಕಣ್ಣಂಚಲ್ಲೂ ನೀರಿಲ್ಲ.. ಎಲ್ಲರೂ ಸ್ಥಿತಪ್ರಜ್ಞರ ಹಾಗೆ ಸಮಚಿತ್ತದಿಂದ ಸ್ಥಿರವಾಗಿ ತಲೆಯೆತ್ತಿ ನಿಂತಿದ್ದರು.
ಆದರೆ ಮಡಿದ ಸೈನಿಕನ ಅಕ್ಕನ ಪುಟ್ಟ ಮಗಳಿಗೆ ಇದನ್ನು ಸಹಿಸಿಕೊಳ್ಳಲು ಆಗಲಿಲ್ಲ..
ಮಗು.. ಅಳುತ್ತಲೇ ಸೈನಿಕನ ಅಪ್ಪನ ಬಳಿ ಕೇಳುತ್ತಿದ್ದಳು.. ಅಜ್ಜಾ... ಮಾಮ ಯಾಕೆ ಮಾತಾಡುತ್ತಿಲ್ಲ ಅಜ್ಜ..ಹೇಳಜ್ಜ..
ಸೈನಿಕನ ತಂದೆ ಮೌನವಾಗಿದ್ದರು.
ಆ ಪುಟ್ಟ ಹುಡುಗಿ... ಮಾತಾಡು ಮಾಮ.. ಮಾತಾಡು ಮಾಮ ಎಂದು ಅಳುತ್ತಲೇ ಇತ್ತು.
ಅದನ್ನು ಕಂಡು ಭಿಕ್ಷುಕನ ಕರುಳು ಚುರುಕ್ ಅಂತು.
ಭಿಕ್ಷುಕ ನಿಧಾನವಾಗಿ ಆ ಮಗುವಿನ ಬಳಿ ಹೋದ..
ಎಲ್ಲರೂ ಈ ಭಿಕ್ಷುಕನನ್ನೇ ನೋಡುತ್ತಿದ್ದರು.
ಆ ಮಗು ಬಿಕ್ಷುಕನಲ್ಲಿಯೇ ಕೇಳಿತು..ನೀನಾದರೂ ಹೇಳು ತಾತ... ನನ್ನ ಮಾವನಿಗೆ ಏನಾಗಿದೆ.. ಅವರು ಸತ್ತಿಲ್ಲ ತಾನೇ?
ಭಿಕ್ಷುಕ ಆ ಮಗುವಿನ ಬಳಿ ಬಾಗಿ ಮೆಲ್ಲಗೆ ಹೇಳಿದ.. ಅಳಬೇಡ ತಾಯಿ... ನಿನ್ನ ಮಾವ ಸತ್ತಿಲ್ಲ... ಅವರು ಅಮರರಾಗಿದ್ದಾರೆ!!
ಹಾಗಾದರೆ ಅವರು ಯಾಕೆ ಮಾತಾಡುತ್ತಿಲ್ಲ...? ಮಗು ಮತ್ತೆ ಕೇಳಿತು.
ಭಿಕ್ಷುಕನಿಗೆ ಹೇಳಲು ಏನೂ ತೋಚಲಿಲ್ಲ..!!
ಆ ನಂತರ ಭಿಕ್ಷುಕ ತನ್ನ ಕೈಯಲ್ಲಿ ಇದ್ದ ತುಳಸಿ ಮಾಲೆಯನ್ನು ಸೈನಿಕನ ತಲೆಯ ಬಳಿ ಇರಿಸಿದ.
ಅವನಿಗೆ ಆ ಕ್ಷಣ ಏನೋ ಒಂದು ನೆನಪಾಯಿತು..
ತನ್ನ ಜೋಳಿಗೆ ತಡಕಾಡಿದ.
ಅವನಿಗೊಂದು ಗಂಟು ಸಿಕ್ಕಿತು.
ಎಷ್ಟೋ ವರ್ಷಗಳಿಂದ ಅದನ್ನು ಅವನು ಭದ್ರವಾಗಿ ತನ್ನ ಬಳಿಯೇ ಇರಿಸಿಕೊಂಡಿದ್ದ..
ಅದರಲ್ಲಿ ಸೈನಿಕ ಭಿಕ್ಷುಕನಿಗೆ ಕೊಟ್ಟ ಭಾರತದ ಚಿತ್ರವಿರುವ ಎರಡು ರೂಪಾಯಿಗಳ ನಾಣ್ಯಗಳಿದ್ದವು.ಸೈನಿಕನ ಮೇಲಿನ ಪ್ರೀತಿಗಾಗಿ ಆ ನಾಣ್ಯಗಳನ್ನು ಭಿಕ್ಷುಕ ಎಂದಿಗೂ ಖರ್ಚು ಮಾಡಿರಲೇ ಇಲ್ಲ!
ಎಲ್ಲರೂ ಭಿಕ್ಷುಕನನ್ನೇ ನೋಡುತ್ತಿದ್ದರು.
ಭಿಕ್ಷುಕ ಆ ಎಲ್ಲಾ ನಾಣ್ಯಗಳನ್ನು ಆ ಗಾಜಿನ ಪೆಟ್ಟಿಗೆಯ ಮೇಲಿರುವ ತ್ರಿವರ್ಣಧ್ವಜದ ಮೇಲಿರಿಸಿದ..!
ನಂತರ ಆ ನಾಣ್ಯಗಳನ್ನು ಒಂದರ ಹಿಂದೆ ಒಂದರಂತೆ ಜೋಡಿಸಿ ಭಾರತದ ಭೂಪಟವೊಂದನ್ನು ರಚಿಸಿದ.!
ಆ ಮಗು ಮತ್ತು ಅಲ್ಲಿ ನೆರದಿದ್ದವರೆಲ್ಲ...ಭಿಕ್ಷುಕನನ್ನೇ ನೋಡುತ್ತಿದ್ದರು..!
ಭಿಕ್ಷುಕ ಕಣ್ಣಲ್ಲಿ ನೀರು ತುಂಬಿಕೊಂಡೇ ಕೈಗೆ ತನ್ನ ತಂಬೂರಿ ತೆಗೆದುಕೊಂಡ..
ನಂತರ ನಿಧಾನವಾಗಿ ಮತ್ತು ಬಹಳ ಆರ್ದ್ರವಾಗಿ ಮಡಿದ ಸೈನಿಕನಿಗಾಗಿ,ಅವನ ಇಷ್ಟದ ಈ ಹಾಡೇ ಹಾಡತೊಡಗಿದ...
" Desh mein thi diwali
vo khel rahe the holi
jab ham baithe the gharon mein
vo jhel rahe the goli
the dhanya javaan vo aapane
thi dhanya vo unaki javaani
Ye mere vatan ke logo
Zara aankh mein bhar lo paani
Jo Shahid Hue Hein Unki
Zaraa Yaad Karo qurbaani
Zaraa Yaad Karo qurbani.. "
ನೆರದಿದ್ದ ಎಲ್ಲರ ಕಣ್ಣು ಮಂಜಾಗಿತ್ತು..!
ಭಿಕ್ಷುಕ ಹಾಡು ಮುಗಿಸಿ ತನ್ನ ತಂಬೂರಿ ಕೆಳಗಿರಿಸಿ ಕೈ ಮೇಲೆತ್ತಿ.. ಜೈ ಹಿಂದ್.. ಎಂದು ಸೈನಿಕನಿಗೆ ಸೆಲ್ಯೂಟ್ ಹೊಡೆದ..
ಆದರೆ ಅಲ್ಲಿದ್ದ ಯಾರೂ ಭಿಕ್ಷುಕನೊಂದಿಗೆ ಸೆಲ್ಯೂಟ್ ಹೊಡೆಯಲಿಲ್ಲ..!
ಆದರೆ ಆ ಪುಟ್ಟ ಮಗು ಆ ಕೂಡಲೇ ವೃದ್ಧ ಭಿಕ್ಷುಕನೊಂದಿಗೆ ತನ್ನ ಮಾವನಿಗೆ ಜೋರಾಗಿ ಜೈ ಹಿಂದ್ ಹೇಳಿ ತಾನು ಕೂಡ ತನ್ನ ಕೊನೆಯ ಸೆಲ್ಯೂಟ್ ಹೊಡೆದೇ ಬಿಟ್ಟಳು..!
ಅದನ್ನು ಕಂಡು ಎಂದಿಗೂ ಕಣ್ಣೀರಾಗದೇ ಇದ್ದ ಸೈನಿಕನ ಅಪ್ಪನ ಕಣ್ಣಲ್ಲೂ ನೀರು ಧಾರಕಾರವಾಗಿ ಹರಿದಿತ್ತು!!
ಮಗೂ ಇನ್ನೂ ಅಳುತ್ತಲೇ ಇತ್ತು..
ವೃದ್ಧ ಭಿಕ್ಷುಕ ತನ್ನ ಮೊಮ್ಮಗನಂತಹ ಸೈನಿಕನಿಗೆ ಕೊನೆಯ ನಮಸ್ಕಾರ ಸಲ್ಲಿಸಿ ತನ್ನ ತಂಬೂರಿ ಹಾಗೂ ಜೋಳಿಗೆಯೊಂದಿಗೆ ಕುಂಟುತ್ತಾ ಅಲ್ಲಿಂದ ಹೊರ ನಡೆದಿದ್ದ..!
ಅಲ್ಲಿ ಸೇರಿದ್ದ ಅಷ್ಟೂ ಜನರಿಗೆ ಏನೊಂದೂ ಮಾತಾಡಲು ಆಗದೆ ಗಂಟಲು ಕಟ್ಟಿ ಹೋಗಿತ್ತು..ಆದರೆ ಅವರ ಕಣ್ಣೀರ ಕಟ್ಟೆ ಮಾತ್ರ ಒಡೆದು ಹೋಗಿ.. ಅವರಿಗರಿವಿಲ್ಲದೆ ಕಣ್ಣೀರು ರಭಸವಾಗಿ ಹರಿದಿತ್ತು...!!!
#ಜೈ_ಹಿಂದ್ 🇮🇳
.....................................................................................
#ಜೈ_ಹಿಂದ್
ab pacchu
moodubidire

Comments
Post a Comment