ನಮ್ಮೆಲ್ಲರ ತಾಯಿ

 

ಮೊದಲ ಮಳೆ ಧೋ ಎಂದು ಸುರಿದು ನೆಲವ ಸೋಕಿ ಧೂಳೆಬ್ಬಿಸಿ ಅದರೊಂದಿಗೆ ಹಾಗೇ ಒಂದು ಘಮವನ್ನು ಸುತ್ತೆಲ್ಲಾ ಪಸರಿಸಿ ಬಿಡುತ್ತೆ ಅಲ್ಲಾ, ಆ ಪರಿಮಳ ಬರೀ ಪರಿಮಳವಲ್ಲ.. ಅದೊಂದು ಭಾವನೆ, ಬಾಲ್ಯದ ನೆನಪು, ರೈತನ ಪರಮಾನಂದ, ಮಕ್ಕಳ ಹರುಷ,ಕವಿಯ ಪ್ರೇರಣೆ.. ,ಇನ್ನೂ ಸಿಂಪಲ್ಲಾಗಿ ಹೇಳಬಹುದೆಂದರೆ ಭೂಮಿತಾಯಿಯ ಮೈಯ ಸುವಾಸನೆ. ವಿದೇಶದಲ್ಲೇ ಇದ್ದರೂ ಎಲ್ಲೇ ಇದ್ದರೂ ತಾಯ್ನೆಲ ,ತವರು ಮನೆ ಒಂದು ಕ್ಷಣ ನೆನಪಾಗುವ ಅಧ್ಭುತ ಘಳಿಗೆ ಅದು ☺️🙏

ಬಾಕಿಯವರಿಗೆ ಈ ಭೂಮಿ ಬರೀ ಭೂಮಿ ಅಷ್ಟೇ. ಆದರೆ ಭಾರತೀಯರಿಗೆ ಆಕೆ ಎಲ್ಲವೂ,ನಮಗೆ ಆಕೆ ತಾಯಿ ಕೂಡ ಹೌದು, ದೇವರು ಕೂಡ ಹೌದು. ಈ ನೆಲದ ಭಾಷೆ.. ಮಣ್ಣಿನ ಮಗ.. ಈ ಮಣ್ಣಿನ ಸೊಗಡು.. ಈ ನೆಲದ ಶಕ್ತಿ..ತಾಯ್ನೆಲ್ಲ.. ಮುಂತಾದ ಉಪಮೇಯಗಳು ಕೂಡ ಮಣ್ಣಿನೊಂದಿಗೆ, ಭೂಮಿಯೊಂದಿಗೆನೇ ಬೆಸೆದುಕೊಂಡಿರುವುದು.

ರೈತ ತಾನು ಉಳುವ ಭೂಮಿಗೆ, ಗದ್ದೆಗೆ ಕೈ ಮುಗಿದೇ ಕಾಲಿಡುತ್ತಾನೆ. ಭೂಮಿ ಪೂಜೆ ಯಿಲ್ಲದೇ ನಮ್ಮಲ್ಲಿ ಕಟ್ಟಡಗಳೇ ಮೇಲೆ ಎಳುವುದಿಲ್ಲ. ಚಪ್ಪಲಿ ಹಾಕಿ ಗದ್ದೆ ಗೆ ಕಾಲಿಟ್ಟ ಯಾವ ರೈತನನ್ನೂ ನೋಡಿಯೇ ಇಲ್ಲ. ಅವನ ಪಾಲಿಗೆ ಅದೇ ದೇವಸ್ಥಾನ. "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ" . ತಾಯಿ ಮತ್ತು ತಾಯಿನೆಲ ಸ್ವರ್ಗ ಕ್ಕಿಂತಲೂ ಮಿಗಿಲು ಎಂಬುವುದು ಭಾರತೀಯರೆಲ್ಲರ ವೇದವಾಕ್ಯ.

ಆದರೆ ಇಂದು ಈ ಮಣ್ಣು, ಈ ಭೂಮಿ ಕಲುಷಿತವಾಗಿ ಬಿಟ್ಟಿದೆ. ನಿಸ್ಸಾರವಾಗಿದೆ. ಮರಗಳು ಉಳಿದಿಲ್ಲ. ಮರಗಳಡಿಯ ಮಣ್ಣಿನಲ್ಲಿ ಶಕ್ತಿ ಇಲ್ಲ. ಎಲೆಗಳು ಉದುರಿ ಗೊಬ್ಬರವಾಗುತ್ತಿಲ್ಲ. ತರಹೇವಾರಿ ಅಣಬೆ, ಹೆಸರಿಲ್ಲದ ಕಾಡು ಹೂವು,ರುಚಿ ರುಚಿಯಾದ ಕಾಡು ಹಣ್ಣು, ಭೂಮಿ ತಾಯಿಯ ಮೈತುಂಬಾ ಇರಬೇಕಾಗಿದ್ದ ಪಚ್ಚೆ ಚಾದರ ಇಂದು ನೆಲದ ಮೇಲೆ ಇಲ್ಲ.ಅವಳ ಮಡಿಲಿಗೆ ಕೈ ಹಾಕಿ ನಾವೇ ಎಳೆದು ಬಿಟ್ಟಿದ್ದೆವೆ.

ಕುವೆಂಪು ರವರ ಮಲೆಗಳಲ್ಲಿ ಮದುಮಗಳು ದೃಶ್ಯ ಕಾವ್ಯ , ತೇಜಸ್ವಿಯರ ಕಾಡು ಗುಡ್ಡಗಳು, ಹೊಲ ಬದಿಗಳು..ಇನ್ನೂ ಸಂಪೂರ್ಣವಾಗಿ ಮರೆಯಾಗದೇ ಹೋಗದಿದ್ದರೂ ಅಲ್ಲಿ ಇಲ್ಲಿ ಅಲ್ಪ ಸ್ವಲ್ಪ ಅಷ್ಟೇ ಇದೆ, ಯಥೇಚ್ಛವಾಗಿಲ್ಲ. ಇವುಗಳು ಯಾವುದು ಇಲ್ಲದೇ ಹೋದರೆ ಮುಂದಿನ ಮಕ್ಕಳಿಗೆ.. ಕವಿತೆ ಕಾದಂಬರಿಗಳಲ್ಲಿ ಇರುವ... ಸಿರಿಗೆರೆಯ ನೀರು... ಬಿರಿದ ತಾವರೆ... ಮಕರಂದದ ಅರಶಿನವ ಹಚ್ಚಿ...ಗಂಧವತಿ.. ಇವೆಲ್ಲವೂ ಜಸ್ಟ್ ಕಾಲ್ಪನಿಕ ಅಂತಾನೇ ಅನ್ನಿಸಿಬಿಡುತ್ತದೆಯೇ ಹೊರತು ನಮಗೂ ಅವರಿಗೆ ಅದೆಲ್ಲವೂ ನಿಜ ಎಂಬುದನ್ನು ಸಮೃದ್ಧ ಪ್ರಕೃತಿಯ ಮುಖಾಂತರ ಸಾಬೀತುಪಡಿಸಲಾಗದೇ  ಹೋಗುವ ಸ್ಥಿತಿ ಎದುರಾಗಿ ಬಿಡುತ್ತದೆ, ಕಾರಣ ಹಿಂದೆ ಇದ್ದುದನ್ನು ಮರು ಸೃಷ್ಟಿಸೋದು ಬಿಡಿ, ನಾವು ಮುಂದಿನ ದಿನಗಳಲ್ಲಿ ಈಗ ಇದ್ದುದನ್ನು ಉಳಿಸುತ್ತೆವೆಯೋ ಎಂಬುದೇ ಡೌಟು.

ನಗರ ಎಷ್ಟೇ ಬೆಳೆದು ದೊಡ್ಡದಾಗಲಿ, ಅದರ ಮಾಲ್ ಗಳು, ಮೆಟ್ರೋ ರೈಲುಗಳು, ಕಾಂಕ್ರೀಟ್ ಕಟ್ಟಡಗಳು, ಅವಿಷ್ಕಾರಗಳು ಪಚ್ಚೆ ಪ್ರಕೃತಿಯಷ್ಟು ಹಿತ ಅನಿಸುವುದಿಲ್ಲ.  ಮಣ್ಣಿನಲ್ಲಿ ಬೀಜ ಒಡೆದು ಗಿಡವಾಗುವ ಬಗೆ, ಅದು ಮರವಾಗಿ ಪುನಃ ಬೀಜ ಉದುರಿಸುವ ಬಗೆ ಬಲು ಸುಂದರ. ಬೇಕಿದ್ದರೆ ನೀವೇ ನೋಡಿ,ನಿಮ್ಮ ಹಿತ್ತಲಲ್ಲಿ ಒಂದು ಬೆಂಡೆಕಾಯಿ ಯ ಬೀಜ ಬಿತ್ತಿ, ದಿನಾಲೂ ಶ್ರದ್ಧೆಯಿಂದ ಅದಕ್ಕೆ ನೀರು ಹರಿಸಿ, ಅದರಲ್ಲೊಂದು ಬೆಂಡೆಕಾಯಿ ಆಗುವವರೆಗೂ ನಿಮಗೆ ಏನೋ ಒಂದು ಕಾತುರ. ಬೆಂಡೆಕಾಯಿಯೇ ಆಗಿ ಬಿಟ್ಟಾಗ ಏನೋ ಒಂದು ವಿವರಿಸಲಾಗದ ಪುಳಕ.ನಿಮ್ಮ ಮಣ್ಣಿನಲ್ಲೇ ಆದ ಆ ಒಂದು ಬೆಂಡೆಕಾಯಿಯಲ್ಲಿರೋ ಖುಷಿ ಅಂಗಡಿಯಲ್ಲಿ ಖರೀದಿಸುವ ಒಂದು ಕೆ.ಜಿ ಬೆಂಡೆಕಾಯಿಗಿಂತಲೂ ಹೆಚ್ಚು. ಅದೆಲ್ಲ ಅನುಭವಿಸಿದವರಿಗೆ ಗೊತ್ತು.

ಈ ಭೂಮಿ ಪ್ರಕೃತಿ ಎಷ್ಟೋ ಕಾಲದಿಂದ ನಮ್ಮನ್ನು ಹಾಗೇ ಪೊರೆದು ಬಿಟ್ಟಿದೆ, ಕೈ ಹಿಡಿದೇ ನಡೆಸಿಕೊಂಡು ಬಂದು ಬಿಟ್ಟಿದೆ. ಈಗ ಅವಳನ್ನು ಉಳಿಸಿ ಅವಳ ಶೀಲ ಕಾಪಾಡುವುದು ನಮ್ಮ ಕರ್ತವ್ಯ.ನಾವು ನಮ್ಮ ತಾಯಿಯಷ್ಟೇ ಈ ನೆಲವನ್ನು ಗೌರವಿಸಿ ಬಿಟ್ಟಿದ್ದೇವಿ. ಅವಳಿಗೆ ಹೆಣ್ಣಿನ ಸ್ಥಾನವನ್ನು ಕೊಟ್ಟಿದ್ದೆವೆ. ಹೆಣ್ಣು ಮಣ್ಣು ಎರಡೂ ಸಮೃದ್ಧಿಯ ಪ್ರತೀಕ ಗಳು. ಪ್ರಕೃತಿಯನ್ನು ಆರಾಧಿಸುವ ನಮಗೆ ಭೂಮಿ ಕೂಡ ಪೂಜ್ಯನೀಯವೇ. ಭೂಮಿ, ಆಕಾಶ, ಅಗ್ನಿ, ಗಾಳಿ, ನೀರು ಎಂಬ ಪಂಚಭೂತಗಳಲ್ಲೂ ಕೂಡ ನಮ್ಮ ಭೂಮಿ ಇದೆ.

ದೀಪಾವಳಿ ಹಾಗೂ ತುಳುನಾಡು ಸೈಡಿನ ಕೆಡ್ಡೆಸ ಎಂಬ ಹಬ್ಬಗಳ ಆಚರಣೆಯಲ್ಲೂ, ಭೂಮಿ ತಾಯಿಗೆ ಬಾಳೆ ಎಲೆಯಲ್ಲಿ ಬಡಿಸಿಟ್ಟು ಕೈ ಮುಗಿವ ಕ್ರಮ ಈಗಲೂ ಇದೆ. ಅವಳು ಹಬ್ಬ ಹರಿದಿನ ಗಳಲ್ಲೂ ಇದ್ದಾಳೆ. ಕೆಸರಿನ ಗದ್ದೆಯಲ್ಲಿ ಹಾಗೇ ಒಮ್ಮೆ ನಡೆದು ಬನ್ನಿ, ಕಾಲು ಅದೆಷ್ಟು ಶುಭ್ರ ಆಗುತ್ತೆ ಗೊತ್ತಾ. ಆಕೆ ಅದೆಷ್ಟು ಜೈವಿಕ ಕ್ರಿಯೆಗಳ ಮೂಲಸ್ಥಾನ. ಆಯುರ್ವೇದ ದಲ್ಲೂ ಮಣ್ಣಿನ ಬಳಕೆ ಇದೆ. ಸೇವಿಸುವುದರಿಂದ ಹಿಡಿದು, ಮುಖಕ್ಕೆ ಹಾಕುವ ಫೇಸ್ ಫ್ಯಾಕ್ ವರೆಗೂ ಮಣ್ಣಿನ ಉಪಯೋಗ ಇದೆ. ಏನು ಬೇಡ ಬರಿಗಾಲಿನಲ್ಲಿ ಮುಂಜಾನೆ ಇಲ್ಲವೇ ಮುಸ್ಸಂಜೆ ಗದ್ದೆಯ ಬದುವಲ್ಲಿ ಹಾಗೇ ಒಂದೆರಡು ಸುತ್ತು ತಿರುಗಾಡಿ ಬಿಡಿ. ನಿಮ್ಮ ಪಾದಕ್ಕೂ ಹಿತ, ಮನಸ್ಸಿಗೂ ಅದೆಷ್ಟೋ ಹಿತ. ನಿಮ್ಮ ಸಮಸ್ಯೆ ಗಳನ್ನು, ಲೈಫ್ ನ ಜಂಜಂಡಗಳನ್ನು ಕ್ಷಣ ಕಾಲ ಹೀಲ್ ಮಾಡುವ ಶಕ್ತಿ ಮಣ್ಣಿಗೂ ಇದೆ. ಅದನ್ನು ನಾವು ಅನುಭವಿಸಬೇಕಾದರೆ ನಾವೇ ಅವಳ ಬಳಿ ಹೋಗಬೇಕು, ನಮ್ಮನ್ನು ನಾವು ಅವಳ ಮುಂದೆ ತೆರೆದು ಕೊಳ್ಳಬೇಕು.

ಭೂಮಿ ತಾಯಿ ಪಚ್ಚೆ ಸೀರೆ ಇಟ್ಟರೆ ಮಾತ್ರ ಮದುಮಗಳು ತರ ಕಾಣುತ್ತಾಳೆ. ಅವಳು ಯಾವಾಗಲೂ ಮದುಮಗಳಾಗಿ ಇದ್ದರೆನೇ ಚಂದ. ಅವಳು ಆ ರೀತಿ ಕಾಣುವಂತೆ, ಕಾಣಿಸುವಂತೆ ಮಾಡಲು ನಮಗೆ ಮಾತ್ರ ಸಾಧ್ಯ. ನಾವು ಮನಸ್ಸು ಮಾಡಬೇಕು ಅಷ್ಟೇ.
ನಗರೀಕರಣ ಎಷ್ಟೇ ಬೆಳೆದರೂ ಮಣ್ಣು ಮಾಲಿನ್ಯ ವಾಗದಂತೆ ನೋಡಿ ಕೊಳ್ಳಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ. ನಾವು ತಂತ್ರಜ್ಞಾನದಿಂದ ಏನನ್ನೇ ಕ್ರೀಯೆಟ್ ಮಾಡಿಕೊಳ್ಳಬಹುದು, ಆದರೆ ಉಣ್ಣುವ ಅಕ್ಕಿ ಬೆಳೆಯಲು ಸಮೃದ್ಧಿಯ ಭೂಮಿಯೊಂದು ಬೇಕು ಎಂಬುವುದು ನಮಗೆ ಸದಾ ಅರಿವಿರಬೇಕು. ಆದಷ್ಟು ನಾವು ಪ್ರಕೃತಿಯೊಂದಿಗೆ ಆಟ ಆಡಬೇಕು,ನಲಿದಾಡಬೇಕು,ಕುಣೆದು ಕುಪ್ಪಳಿಸಿಬಿಡಬೇಕು. ಇದೆಲ್ಲಾ experience ಗಳು ಯಾವುದೇ counter strike, pubg ಗೇಮ್ ಗಿಂತಲೂ ಜಾಸ್ತಿ ಮುದ ನೀಡುವಂತಹದ್ದು. ನಾವು ಮಾತ್ರವಲ್ಲ ನಮ್ಮ ಮಕ್ಕಳನ್ನೂ ಪ್ರಕೃತಿಯೊಂದಿಗೆ ಒಂದಾಗಲು ಬಿಡಬೇಕು. ಇದು ಹೆತ್ತವರು ಮಾಡಬಹುದಾದ, ಮಾಡಬೇಕಾದ ಕೆಲಸ. ಯಾಕೆಂದರೆ ಪ್ರಕೃತಿ ಕೂಡ ಒಳ್ಳೆಯ ಟೀಚರೇ, ಅವಳು ಕಲಿಸುವ ಪಾಠ, ತೋರುವ ಬೆರಗು ಕೂತುಹಲ ಮಾತ್ರ ಹುಟ್ಟಿಸುವುದಿಲ್ಲ, ಮಕ್ಕಳನ್ನು ಹಾಗೇ ಅರಳಿಸಿಬಿಡುತ್ತದೆ.

ಭೂದೇವಿ ಎಂದರೆ ನಮಗೆ ಆಕೆ  ಸಾಕ್ಷಾತ್ ವಿಷ್ಣು ಪತ್ನಿಯೇ. ದಿನದ ಎಲ್ಲಾ ಪೂಜೆಗಿಂತಲೂ ಮೊದಲು ಭೂಮಿ ಗೆ ಕಾಲಿಡುವ ಮುನ್ನ "ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷ್ಮಸ್ವಮೆ" ಎಂದು ಅವಳ ಕ್ಷಮೆ ಕೋರಿ ಕೈಮುಗಿವ ಸಂಸ್ಕೃತಿ ನಮ್ಮದು. ಭೂಮಿತಾಯಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಅವಳು ಸಮೃದ್ಧವಾಗಿದಷ್ಟು ರೈತ ಉತ್ತ ಬಲ್ಲ, ಬಿತ್ತ ಬಲ್ಲ, ಸಮೃದ್ಧಿಯ ಬೆಳೆ ತೆಗೆಯಬಲ್ಲ, ಮತ್ತು ಆತನೂ ಖಷಿಯಾಗಿರಬಲ್ಲ. ಈ ಭೂಮಿಯಲ್ಲಿ ರೈತ ಸುಖಿಯಾಗಿದ್ದರೆ ನಾವೆಲ್ಲರೂ ಕೂಡ ಒಂದರ್ಥದಲ್ಲಿ ಸುಖಿಗಳೇ .. 😊🙏🏻
ನಮ್ಮೆಲ್ಲರ ದೊಡ್ಡ ತಾಯಿ ಭೂಮಿ ತಾಯಿ. ಈ  ವಸುಂಧರೆ, ಸಸ್ಯ ಶ್ಯಾಮಲೆ ಸದಾ ನಗುತ್ತಿರಬೇಕು,ಅವಳು ಕಣ್ಣೀರು ಹಾಕುವಂತಹ ಕೆಲಸ ನಾವು ಯಾವತ್ತಿಗೂ ಮಾಡಬಾರದು ☺️🙏

ಬೇರೆ ಎಲ್ಲಾ ಅರ್ಥವಿರದ ಡೇ ಸಂಸ್ಕೃತಿಗಿಂತ, ಕನಿಷ್ಠ ಪಕ್ಷ ಅರಿವು ಮೂಡಿಸುವ, ನಮ್ಮೆಲ್ಲರ ಉಳಿವಿಗೆ ಭೂಮಿ ಎಷ್ಟು ಅವಶ್ಯಳು ಎಂದು ನೆನಪು ಹುಟ್ಟಿಸುವ,ವಿಶ್ವ ಭೂ ದಿನದ (ಏಪ್ರಿಲ್ 22)ದಂತಹ  ಡೇ ಆಚರಣೆಗಳು ನಮ್ಮಲ್ಲಿ ಇನ್ನೂ ಹೆಚ್ಚಾಗಿ  ಅರ್ಥಪೂರ್ಣವಾಗಿ ಆಚರಣೆಗೆ ಬಂದರೆ,ಅದರಲ್ಲೂ ಪ್ರತೀ ದಿನವೂ ಅದು ಕಾರ್ಯರೂಪಕ್ಕೂ ಬಂದರೆ ನಿಜವಾಗಿಯೂ ನಮ್ಮೆಲ್ಲರ ತಾಯಿ ಭೂಮಿಯೂ ಸುಖಿ,ಅದರೊಟ್ಟಿಗೆ ನಾವು ಕೂಡ ಅಷ್ಟೇ ಸುಖಿ.

.....................................................................................

#ಏನೋ_ಒಂದು

Ab Pacchu
Moodubidire



Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!