ಎಲ್ಲಾ ಇದ್ದೂ ನಿನಗೆ ಮಾತ್ರ ಯಾವುದೂ ಬೇಡ
ನನ್ನೊಳಗಿರುವ ಕಡಲು ಕೆಲವೊಮ್ಮೆ ಕದಡಿದಾಗ ಅದು ಪಕ್ಕನೇ ಶಾಂತವಾಗುವುದಿಲ್ಲ,ಅದಕ್ಕೆ ಉಬ್ಬರವಿಳಿತ ಗಳು ಜಾಸ್ತಿ,ಜಟಿಲ ಪ್ರಶ್ನೆಗಳನ್ನು ಕಠಿಣ ಸವಾಲುಗಳನ್ನು ಒಡ್ಡುತ್ತದೆ. ಏನೇ ಮಾಡಿದರೂ ತಹಬದಿಗೆ ತರಲು ಸಾಧ್ಯವಾಗದೇ ಸೋತು ಹೋದಾಗ ಪ್ರತೀ ಬಾರಿಯೂ ನನಗೆ ಕಂಡು ಬರುವುದು ನಿನ್ನ ರೂಪವೇ, ನಿನ್ನನ್ನು ಕಂಡಾಗಲೆಲ್ಲ ನನಗೆ ಕಾಡುವ ಪ್ರಶ್ನೆ.... ಹೇಯ್ ಶಂಕರ,ಹೇಗೆ ನೀನು ಮಾತ್ರ ಇಷ್ಟೊಂದು ಪರಮ ಶಾಂತ? 😊🙏
ನಿನಗೆ ಆಭರಣ ಬೇಡ, ಆಡಂಬರ ಬೇಡ. ವಜ್ರ ವೈಢೂರ್ಯ ರೇಷ್ಮೆ ಪೀತಾಂಬರ ಬಟ್ಟೆ ಬರೆಗಳ ಬೇಡಿಕೆ ನಿನಗಿಲ್ಲ . ನೀನು ಬಲು ಸರಳ, ಆದರೆ ರೌದ್ರನಾದರೇ ಮಾತ್ರ ಪ್ರಳಯಕಾಲದ ಮಹಾರುಧ್ರ. ನೀನೇ ಅಲ್ಲವೇ ದೇವರ ದೇವ.. ಮಹಾದೇವ 😊🙏🏻 ಹೇಳು ದೇವ, ನೀನು ಹೇಗೆ ಇಷ್ಟೊಂದು ಸೀದಾ ಸಾದ ಸರಳ ...?
ತಂದೆ ನೀನು ಯಾರಿಗೆ ಇಷ್ಟವಾಗುವುದಿಲ್ಲ ಹೇಳು. ಸರಳ ಭಕ್ತಿಗೆ ಸುಲಭವಾಗಿ ಒಲಿಯುವವ . ಎಲ್ಲರಿಂದಲೂ, ಎಲ್ಲದರಿಂದಲೂ ಬಹು ದೂರವೇ ಉಳಿದರೂ , ಭಕ್ತ ಕರೆದ ಮಾತ್ರ ಕ್ಕೆ ಓಡೋಡಿ ಬರುವೆಯಲ್ಲೋ. ಉಳಿದ ಸಮಯದಲ್ಲಿ ನಿನ್ನದು ಅದೆಂತಹ ಸುಧೀರ್ಘವಾದ ಯೋಗ..ಹೇಳು ನಿನ್ನಲ್ಲಿ ಏಕೆ ಇಷ್ಟೊಂದು ಅಗಾಧವಾದ, ಗಾಢವಾದ ಮೌನ..? 😊🙏🏻
ನೀನು ಬರೀಯ ಭೈರಾಗಿ ಅಲ್ಲ , ಸ್ಮಶಾನ ವಾಸಕ್ಕೆ ಮಾತ್ರ ಸೀಮಿತನಲ್ಲ.ಅತೀ ಸುಂದರನೂ ಕೂಡ ಹೌದು, ಹೌದಲ್ಲವೇ ಚಂದ್ರಶೇಖರ.ಕಣ್ಣು ಮುಚ್ಚಿಕೊಂಡೇ ಇದ್ದರೂ ಅನುಗಾಲವೂ ಜಗತ್ತನ್ನು ನೋಡುವವನೇ, ಮುಕ್ಕಣ್ಣನೇ ಹೇಳು...ಯಾಕೇ ನೀನಿಷ್ಟು ನಿರ್ಲಿಪ್ತ ? 😊🙏🏻
ದೇವಳದಲ್ಲಿ ಅಲೆ ಅಲೆಯಾಗಿ ಕೇಳಿ ಬರುವ ಗಂಟೆ ಸದ್ದಿನಲ್ಲೂ, ಊದುವ ಶಂಖದ ಝೇಂಕಾರ ದಲ್ಲೂ,ಅದರೊಳಗಿರುವ ಓಂಕಾರದಲ್ಲೂ, ಅದು ಮುಗಿದ ನಂತರದ ದೀರ್ಘವಾದ ಮೌನದಲ್ಲೂ ಇರುವವನು ನೀನೇ. ಯಾವ ದೇವನೂ ಇಷ್ಟಪಡದ ಸ್ಮಶಾನ ಅಂದರೆ ಅದೇನು ಪ್ರೀತಿಯೋ ನಿನಗೆ... ಹೇಯ್ ಭೈರಾಗಿ ಹೇಳು ನೀನು ಯಾಕಿಷ್ಟು ವೈರಾಗಿ?
ನಿನ್ನ ಕುಟುಂಬವಾದರೂ ಎಂತಹದ್ದು. ಜಗನ್ಮಾತೆ ಆ ಪಾರ್ವತಿ ದೇವಿಯೇ ನಿನ್ನ ಅರ್ಧಾಂಗಿ, ಆಹಾ ಅದೆಂತಹ ದಿವ್ಯ ಮಕ್ಕಳು ಗಣಪ ಸುಬ್ಬಪ್ಪ. ಜಗತ್ತಿನ ಜನರಿಗೆ ಅನ್ನ ಉಣಬಡಿಸುವ ಸ್ವತಃ ಅನ್ನಪೂರ್ಣೆ ಯೇ ಮನೆಯಲ್ಲಿದ್ದರೂ ಭಿಕ್ಷೆ ಗಾಗಿ ನೀನು ಹೊರಗೆ ಕಪಾಲ ವನ್ನು ಹಿಡಿದುಕೊಂಡು ಹೋಗುತ್ತಿ ಅಂತೆ , ಹೌದಾ ತಂದೆ...?
ಕೃಷ್ಣನ ವಿನೋಧ, ಹರಿಯ ಲೀಲೆ ಸದಾ ಇಷ್ಟ ಪಡುವ ನನ್ನಂತವನಿಗೆ ನೀನು ಮಾತ್ರ ಯಾವತ್ತಿಗೂ ಸೋಜಿಗ, ಕುತೂಹಲ, ಆಶ್ಚರ್ಯ. ಹಾಗಂತ ನನಗೆ ನಿಮ್ಮಿಬ್ಬರಲ್ಲಿ ಬೇಧವಿಲ್ಲ, ಕೃಷ್ಣ ನಿಗೆ ಒಂದು ದಳ ತುಳಸಿ ಅರ್ಪಣೆ ಮಾಡುವಾಗ, ನಿನಗಾಗಿ ಸ್ವಲ್ಪ ಬಿಲ್ವವೋ ಎಕ್ಕ ಮಾಲೆಯನ್ನೋ ಕೊಯ್ದು, ನಿನ್ನ ಮುಡೆಗೇರಿಸಲು ನಾನು ಮರೆಯುವವನಲ್ಲ.
ನೀನೆಂದರೆ ನನಗೆ ಕದ್ರಿಯ ಮಂಜುನಾಥ.
ಸ್ವತಃ ಹರಿಯೇ ಅತಿಯಾಗಿ ಇಷ್ಟಪಡುವ ದೇವ ನೀನು, ಹೇಗೆ ನಾನು ಕೂಡ ನಿನ್ನಿಂದ ಬಹು ದೂರ ಇದ್ದು ಬಿಡಲಿ. ಹರಿ ಮೇಲು, ಹರ ಮೇಲು ಎಂಬುವುದಾಗಿ ಜಗಳ ಮಾಡುವವರ ಮಧ್ಯೆ,ಹರಿ ಹರರು ತಮ್ಮಲ್ಲಿ ಯಾರೂ ಮೇಲು ಕೀಳೆಂಬುದಾಗಿ ಪರಸ್ಪರ ಜಗಳವಾಡಿಕೊಂಡದನ್ನ ನಾನು ಯಾವತ್ತೂ ಕೇಳಿಯೂ ಇಲ್ಲ,ಎಲ್ಲಿಯೂ ಓದಿಯೂ ಇಲ್ಲ. ನನಗೆ ಗೊತ್ತಿರುವುದು ಇಷ್ಟೇ ಹರಿ ಯಾವತ್ತೂ ನಿನ್ನ ಪಕ್ಷ, ಮತ್ತು ನೀನು ಸದಾ ಹರಿಯ ಪಕ್ಷ. ಅಷ್ಟೇ ಅಲ್ಲ ಹರಿಹರ ಸಂಗಮದಿಂದಲೇ ಅಯ್ಯಪ್ಪ..😊🙏🏻 ಅದಕ್ಕಾಗಿ ನನಗೆ ನೀವಿಬ್ಬರೂ ಇಷ್ಟ. ಹೇಳು ದಕ್ಷಿಣಾಧಿಪತಿ ಹೇಗೆ ನೀನು ಎಲ್ಲರಿಗಿಂತಲೂ ಇಷ್ಟೊಂದು ವಿಭಿನ್ನ.
ನಿನ್ನಲ್ಲಿ ವಿನೋಧಗಳಿಲ್ಲ ಎಂದು ಹೇಳುತ್ತಾರೆ. ಹೇಯ್ ಕೈಲಾಸಾಧಿಪತಿ ನಾಟ್ಯವೆಂದರೆ ಅದು ನೀನೇ ಅಲ್ಲವೇ, ನಟರಾಜ ನಿಗಿಂತಲೂ ಸುಂದರವಾಗಿ ಬೇರೆ ಯಾರಾದರೂ ನಾಟ್ಯಗೈಯಲು ಸಾಧ್ಯವೇ? ಯಾರಿಗೂ ಬೇಡವಾದ ವಿಷ ಕುಡಿದ ವಿಷಕಂಠ ನೀನು. ವಿಭೂತಿಯಲ್ಲೂ ನೀನೇ, ಬಡವನ ಪಂಚಾಕ್ಷರಿಯಲ್ಲೂ ನೀನೇ, ಅಘೋರಿಯ ತಪಸ್ಸಿನಲ್ಲೂ ನೀನೇ..
ನಮಗೆ ಯಾವುದು ಬೇಕೋ.. ಅದೆಲ್ಲವೂ ನಿನಗೆ ಬೇಡವೇ ಬೇಡ. ತುಂಬಾ ದೂರನೇ ಉಳಿದು ಬಿಡುತ್ತೀಯಾ, ಅದರೆ ನಾವು ಬೇಡಿದರೆ ಮಾತ್ರ ಒಮ್ಮೆಲೇ ಎಲ್ಲವನ್ನೂ ಕರುಣಿಸಿ ಬಿಡುತ್ತೀಯಾ. ನಮಗೆ ಎಲ್ಲವೂ ಬೇಕೆನ್ನುವ ಆಸೆ ದುರಾಸೆ, ಎಲ್ಲವನ್ನೂ ನೀಡುವ ನಿನಗೇ ಮಾತ್ರ ಎಂದಿಗೂ ಯಾವೂದು ಬೇಡ..
ನಮಗೆ ನಿನ್ನಂತೆ ಆಗಲು ಸಾಧ್ಯವಿಲ್ಲ, ಆದರೆ ಈ ಮನಸ್ಸು ಅಲ್ಲೋಲಕಲ್ಲೋಲ ಆದಾಗಲೆಲ್ಲ,ಯಾವುದರಿಂದಲೂ ಸಮಾಧಾನ ಸಿಗದಿದ್ದಾಗ, ಒಮ್ಮೆಗೆ ನಿನ್ನ ನೆನಪಾಗಿ ಬಿಡುತ್ತದೆ. ನಿನ್ನ ನೆನಪಾದರೆ ಸಾಕು, ನಮ್ಮ ಕಣ್ಣ ಮುಂದೆ ಧ್ಯಾನಾಸಕ್ತ ಪರಶಿವ ನೇ ಬಂದು ಬಿಡುತ್ತಾನೆ. ಆಹಾ ಅದೆಂತಹ ಶಾಂತತೆ, ಅದೆಂತಹ ನೆಮ್ಮದಿ. ನಮ್ಮೊಳಗೆ ಕದಡುವ ಕಡಲನ್ನು ಶಾಂತಗೊಳಿಸಲು ನಿನಗೆ ಮಾತ್ರ ಸಾಧ್ಯ ಅಂತ ಎಷ್ಟೋ ಬಾರಿ ಅನಿಸಿದೆ. ಯಾಕೆಂದರೆ ನೀನು ಇದಿದ್ದೇ ಹಾಗೇ, ಇರುವುದೇ ಹೀಗೇ ...ಮತ್ತು ನೀನು ಹೀಗೆ ಇರುವುದೇ ಚಂದ ☺️🙏
ಜೈ ಭೋಲೇನಾಥ್ 😊🙏🏻
ಓಂ ನಮೋ ಭಗವತೇ ರುದ್ರಾಯ 😊
#ಪರಶಿವ
AB Pacchu

Comments
Post a Comment