ಗೆಳೆಯ ಎನಲೇ ಇನಿಯ ಎನಲೇ

 


ಗೆಳೆಯ ಮತ್ತು ಇನಿಯ ಇಬ್ಬರೂ ಬೇರೆ ಬೇರೆಯೇ.


ಆದರೆ ಒಬ್ಬನಲ್ಲೇ ನಾವು ಈ ಇಬ್ಬರನ್ನೂ ಒಟ್ಟಿಗೆ ಕಂಡು ಕೊಂಡರೆ...ಒಬ್ಬನನ್ನು  ಉಳಿಸಿಕೊಳ್ಳಲು ಮತ್ತೊಬ್ಬನನ್ನು ನಾವು ಅನಿವಾರ್ಯವಾಗಿ ಕಳೆದುಕೊಳ್ಳಲೇ ಬೇಕಾಗುತ್ತದೆ!


ವಿಜೇತ್ ಅಂತಹ ಸುಂದರ ಹುಡುಗ ಏನಲ್ಲ.ಅವನಿಗಿಂತ ಸುಂದರವಾದ  ಹಲವಾರು ಹುಡುಗರು ನಮ್ಮ ಕಾಲೇಜಿನಲ್ಲಿಯೇ ಇದ್ದರು.ಆದರೂ ನನಗೆ ಇಡೀ ಕಾಲೇಜಿನಲ್ಲಿ ಇಷ್ಟ ಆಗಿದ್ದು  ವಿಜೇತ್ ಮಾತ್ರ. 


ಆದರೆ ವಿಜೇತ್ ಗೆ ಇಷ್ಟ ಆಗಿದ್ದು ನನ್ನ ಗೆಳತಿ ಶರಣ್ಯ ಒಬ್ಬಳೇ..!! 


ನಾನು ವಿಜೇತ್ ಜೊತೆಗೆ ಮಾತಾಡಲು ಸದಾ ಹಾತೊರೆಯುತ್ತಿದ್ದೆ.


ಆದರೆ ಒಂದು ದಿನ ಅವನೇ ನೇರವಾಗಿ ನನ್ನ ಬಳಿ ಬಂದು ನನ್ನಲ್ಲಿ ಮಾತಾಡಿ ಬಿಟ್ಟಿದ್ದ,ಮತ್ತು ಆವತ್ತು ವಿಜೇತ್ ನನ್ನಲ್ಲಿ ಹೇಳಿದ್ದ...ನನಗೆ ಶರಣ್ಯ ಅಂದರೆ ತುಂಬಾ ಇಷ್ಟ,ನೀನು ಶರಣ್ಯನ ಬೆಸ್ಟ್ ಫ್ರೆಂಡ್ ಅಂತ ಗೊತ್ತುಂಟು..ಪ್ಲೀಸ್..ನನಗೂ ಒಬ್ಬಳು ಪ್ರೆಂಡ್ ಆಗಿ ಸಹಾಯ ಮಾಡ್ತೀಯಾ?.. ಎಂದು ಕಣ್ಣು ಪಿಳಿ ಪಿಳಿ ಮಾಡುತ್ತಲೇ ವಿಜೇತ್ ಕೇಳಿದ್ದ.


ಹೃದಯವೇ ಒಡೆದು ಹೋಗಿತ್ತು..!!


ಆದರೂ...ನನ್ನ ವಿಜೇತ್ ಗಾಗಿ ಆಯಿತು ಅಂದು ಬಿಟ್ಟೆ.


ಇನಿಯ ಆಗಬೇಕಾದವನು.. ಗೆಳೆಯ ಆಗಿಬಿಟ್ಟ! 


ಶರಣ್ಯನಿಗೆ ವಿಜೇತ್ ಅಂದರೆ ಅಂತಹ ಇಷ್ಟ ಏನೂ ಇರಲಿಲ್ಲ. ಏಕೆಂದರೆ ಅವಳು ಕಾಲೇಜಿನ ಚೆಂದುಳ್ಳಿ ಚೆಲುವೆ.. ಅವಳಿಗಾಗಿ ಹುಡುಗರು ಸಾಯುತ್ತಿದ್ದರು.ಅದರಲ್ಲಿ ವಿಜೇತ್ ಮೊದಲಿನ ಸಾಲಿನಲ್ಲಿ ಎಲ್ಲರಿಗಿಂತ ಮೊದಲೇ ಇದ್ದ. 


ವಿಜೇತ್ ಪದೇ ಪದೇ..ಕಾಲೇಜಿನ ಲೈಬ್ರರಿ ಬಳಿ,ಗ್ರೌಂಡ್ ಬಳಿ ನನ್ನನ್ನು ಭೇಟಿ ಆಗಿ.. ಇಲ್ಲವೇ ಕಾಲ್ ಮಾಡಿ ಹೇಳುತ್ತಲೇ ಇದ್ದ...ಪ್ಲೀಸ್.. ಏನಾದರು ಮಾಡು ಪ್ಲೀಸ್.. ಎಂದು. 


ನನಗೆ ಅವನು ಶರಣ್ಯನ ವಿಷಯವಾಗಿ ನನ್ನನ್ನು ಪದೇ ಪದೇ ಭೇಟಿ ಮಾಡಲು ಬರುವುದು.. ನನಗೆ ಪದೇ ಪದೇ ಕಾಲ್ ಮಾಡುವುದು ಎಲ್ಲವೂ ಇಷ್ಟವೇ ಆಗುತ್ತಿತ್ತು.ಆದರೂ ಮತ್ತೊಂದು ಬದಿಯಲ್ಲಿ ಮನಸ್ಸಿಗೆ ತುಂಬಾನೇ ನೋವಾಗುತ್ತಿತ್ತು! 


ಕೊನೆಗೂ ಅವನು ಖುಷಿ ಆಗಿರಲಿ.. ನನಗೆ ಭಾಗ್ಯ ಇಲ್ಲ ಎಂದುಕೊಂಡು.. ಶರಣ್ಯನ ಬಳಿ ವಿಜೇತ್ ಅವಳನ್ನು ಇಷ್ಟ ಪಡುತ್ತಿರುವ ವಿಷಯ ಹೇಳಿದೆ. 


ಅವಳು ಅದನ್ನು ಬಹಳ Casual ಆಗಿ ತೆಗೆದುಕೊಂಡಳು. 


ಆದರೆ ನಾನೇ ಅವಳಿಗೆ.. ವಿಜೇತ್ ಅವಳನ್ನು ಎಷ್ಟು ಇಷ್ಟ ಪಡುತ್ತಾನೆ ಎಂದು ಬಿಡಿಸಿ ಬಿಡಿಸಿ ಹೇಳಿದೆ. 


ವಿಜೇತ್ ಗೆ ಶರಣ್ಯನ ನಂಬರ್ ಕೂಡ ಕೊಟ್ಟೆ. 


ಅಷ್ಟೇ...! 


ಆಮೇಲೆ ಎಂದೂ ವಿಜೇತ್ ನನಗೆ ಕಾಲ್ ಮಾಡಲೇ ಇಲ್ಲ... ನನ್ನ ಭೇಟಿಯಾಗಲು ಕೂಡ ಬರಲೇ ಇಲ್ಲ! 


ಶರಣ್ಯ ಕೂಡ ಅಷ್ಟೇ ನನಗಿಂತ ಸದಾ ವಿಜೇತ್ ಜೊತೆಯೇ ಇದ್ದು ಬಿಟ್ಟಳು ಏಕೆಂದರೆ ಅವರೀಗ ಒಬ್ಬರನ್ನೊಬ್ಬರು ಪ್ರೇಮಿಸುತ್ತಿದ್ದರು. 


ಕಾಲೇಜಿನಲ್ಲಿ ನಾನು ಬಹಳ ಏಕಾಂಗಿ ಆದೆ ಹೋದೆ..ನನಗೆ ಕಾಲೇಜ್ ನಲ್ಲಿ ಗೆಳತಿ ಎಂದು ಶರಣ್ಯ ಒಬ್ಬಳೇ..


ನಾನು ಇಷ್ಟ ಪಟ್ಟ ಹುಡುಗ ನನ್ನನ್ನು ಇಷ್ಟ ಪಡಲಿಲ್ಲ. 


ಬೆಸ್ಟ್ ಫ್ರೆಂಡ್ ಅವಳ ಪ್ರೀತಿಗಾಗಿ ಮತ್ತೆ ನನಗೆ ಹತ್ತಿರವಾಗಲಿಲ್ಲ..! 


ಯಾವಾಗಲೂ ಕಾಲೇಜ್ ಬಿಟ್ಟ ನಂತರ ಸಂಜೆ ನಾನು ಶರಣ್ಯ ಮನೆಗೆ ಒಟ್ಟಿಗೆ ಒಂದೇ  ಬಸ್ಸ್ ನಲ್ಲಿ ಹೋಗುತ್ತಿದ್ದೆವು.ಆದರೀಗ ಅವಳು ವಿಜೇತ್ ನ ಬೈಕ್ ನಲ್ಲಿ ಹೋಗಲು ಶುರು ಮಾಡಿಕೊಂಡಳು. 


ಬಸ್ ಕೂಡ ಒಮ್ಮೊಮ್ಮೆ ನನ್ನ ಭುಜ ಹಿಡಿದು ಕೇಳಿದಂತೆ ಭಾಸವಾಗುತ್ತದೆ... ಸದಾ ನಿನ್ನ ಜೊತೆ ಬರುತ್ತಿದ್ದ ನಿನ್ನ ಆ ಗೆಳತಿ ಎಲ್ಲಿ? ಎಂದು. ನನ್ನಲ್ಲಿ ಉತ್ತರವಿಲ್ಲ... ಬಸ್ ವಿಂಡೋದಿಂದ  ಹೊರಗೆ ನೋಡುತ್ತಾ ನಿರ್ಲಿಪ್ತಳಾಗಿ ಮೌನಕ್ಕೆ ಜಾರಿ ಬಿಡುತ್ತೇನೆ. 


ಕೊನೆಗೂ ಕಾಲೇಜು ಮುಗಿಯಿತು. 


ಮೂವರಿಗೂ ಒಂದೇ ಕಂಪನಿಯಲ್ಲಿ ಮಂಗಳೂರಿನಲ್ಲಿಯೇ ಕೆಲಸ ಆಯಿತು.. 


ಅಲ್ಲೂ ಶರಣ್ಯ ಮತ್ತು ವಿಜೇತ್ ನ ಪ್ರೀತಿ ಸೊಂಪಾಗಿಯೇ ಮುಂದುವರಿದಿತ್ತು. 


ನಾನು ಈಗೀಗ ಅವರಿಗೆ ಬಹಳ ಅಪರಿಚಿತೆ ಆಗಿ ಹೋಗಿದ್ದೆ.


ನನಗೂ ನಾವು ಮೂವರು ಒಂದೇ ಕಾಲೇಜಿನಲ್ಲಿ ಒಟ್ಟಿಗೆ ಕಲಿತಿದ್ದೆವು ಎಂಬುವುದೇ ಮರೆತು ಹೋಗಿತ್ತು. 


ಹೀಗೆ ವರ್ಷಗಳು ನಿಧಾನವಾಗಿ ಉರುಳುತ್ತಾ ಹೋದವು. 


ಆದರೆ ಒಂದು ದಿನ ಊರಿಗೆಂದು ವಿರಾಜಪೇಟೆಗೆ ಹೋಗಿದ್ದ ವಿಜೇತ್ ಮತ್ತೆ ಹಿಂದಿರುಗಿ ಕಂಪನಿಗೆ ಬರಲೇ ಇಲ್ಲ..! 


ದಿನಗಳು ಕಳೆಯಿತು.. ತಿಂಗಳುಗಳು ಉರುಳಿದವು.. 


ಇಲ್ಲ... ವಿಜೇತ್ ಮತ್ತೆ ಬರಲೇ ಇಲ್ಲ!


ಒಂದೆರಡು ವಾರ ಚಡಪಡಿಸಿದ ಶರಣ್ಯ ಆಮೇಲೆ ವಿಜೇತ್ ಎಂಬುವವನೊಬ್ಬ ಅವಳ ಬಾಳಲ್ಲಿ ಇದ ಎಂಬುದನ್ನೇ ಮರೆತು ಬಿಟ್ಟಳು. 


ನಾನೇ ಶರಣ್ಯಳಲ್ಲಿ ಕೇಳಿದೆ.. ವಿಜೇತ್ ಗೆ ಏನಾಯಿತು.. ಅವನು ಯಾಕೆ ಕಂಪನಿಗೆ ಬರ್ತಾ ಇಲ್ಲ.. ಕಂಪನಿ ಏನಾದರೂ ಬಿಟ್ಟು ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಬಿಟ್ಟನಾ ಹೇಗೆ.. ಎಂದು. 


ಗೊತ್ತಿಲ್ಲ... ಅವನ ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ.. ಎಂದಷ್ಟೇ ಹೇಳಿ ಮುಗಿಸಿದ್ದಳು ಶರಣ್ಯ. 


ಕಂಪೆನಿಯಲ್ಲಿ ಕೂಡ ವಿಚಾರಿಸಿ ನೋಡಿದೆ.ಆದರೆ ಇಲ್ಲ.. ವಿಜೇತ್ ಕಂಪನಿ ಇನ್ನೂ ಬಿಟ್ಟಿರಲಿಲ್ಲ!


ಮೊಬೈಲ್ ನಲ್ಲಿ ಅವನ ನಂಬರ್ ಇನ್ನೂ ಇತ್ತು.ಆದರೆ ಶರಣ್ಯ ಮತ್ತು ಅವನ ಲವ್ ಓಕೆ ಆದ ನಂತರ ನಾನು ಯಾವತ್ತು ಅವನಿಗೆ ಕಾಲ್ ಮಾಡಿರಲಿಲ್ಲ.. ಅವನೂ ಕೂಡ ನನಗೆ ಕಾಲ್  ಮಾಡಿರಲಿಲ್ಲ. ಆದರೆ ನಾನು ಯಾವತ್ತೂ ಅವನ ನಂಬರ್  ಡಿಲೀಟ್ ಮಾಡಿರಲಿಲ್ಲ!


ಅದೇ ನಂಬರ್ ಗೆ ಕಾಲ್ ಮಾಡಿದೆ.. 


ಸ್ವಿಚ್ ಆಫ್ ಬರ್ತಾ ಇತ್ತು. 


ಶರಣ್ಯಳಲ್ಲಿ ಕೇಳಲು ಸರಿಯಾಗದೇ.. ವಿಜೇತ್ ನ ಫ್ರೆಂಡ್ ಒಬ್ಬನ ಬಳಿಯಿಂದ ವಿಜೇತ್ ನ ಮತ್ತೊಂದು ನಂಬರ್ ತೆಗೆದುಕೊಂಡು ಅದಕ್ಕೂ ಕಾಲ್ ಮಾಡಿದೆ.. 


ಅದೂ ಕೂಡ ಸ್ವಿಚ್ ಆಫ್ ಬರ್ತಾ ಇತ್ತು! 


ಆದರೆ ಶರಣ್ಯ ಏನೂ ಆಗಿಯೇ ಇಲ್ಲ ಎಂಬಂತೆ ಬಹಳ ನಾರ್ಮಲ್ ಆಗಿ ಇದ್ದಳು. 


ಆದರೆ ನಾನು ಮಾತ್ರ ಡಿಸ್ಟರ್ಬ್ ಆಗಿದ್ದೆ..ಏಕೆಂದರೆ ನನ್ನ ಮನಸ್ಸಿನಲ್ಲಿ ಸದಾ ಇದ್ದವನು ವಿಜೇತ್ ಒಬ್ಬನೇ.! ಅವನಿಗೇನಾಗಿರಬಹುದು ಎಂದು ಭಯ ಹೆಚ್ಚಾಯಿತು.


ಗೆಳೆಯನನ್ನು ಮತ್ತೆ ಇನಿಯನನ್ನಾಗಿಸುವ ಆತುರ  ಹೆಚ್ಚಾಯಿತು!! 


ಹಾಗೋ ಹೀಗೋ ಆರು ತಿಂಗಳೇ  ಕಳೆದೇ ಹೋಯಿತು.


ಆದರೂ  ವಿಜೇತ್ ನ ಎರಡೂ ನಂಬರ್ ಗೆ ನಿರಂತರವಾಗಿ ಕಾಲ್ ಮಾಡುತ್ತಲೇ ಇದ್ದೆ ನಾನು. 


ಸ್ವಿಚ್ ಆಫ್ ಬಿಟ್ಟು ಬೇರೆ ಯಾವ ಉತ್ತರವೂ ಮೊಬೈಲ್ ನಿಂದ ಬರುತ್ತಿರಲಿಲ್ಲ. 


ಒಮ್ಮೊಮ್ಮೆ ಅಂದುಕೊಳ್ಳುತ್ತಿದ್ದೆ.. ನಾನೇ ಒಮ್ಮೆ ವಿರಾಜಪೇಟೆಗೆ ಹೋಗಿ ವಿಜೇತ್ ಗೆ ಏನಾಗಿದೆ.. ಎಲ್ಲಿದ್ದಾನೆ ಎಂದು ವಿಚಾರಿಸಿ ಬರುವ ಎಂದು.ಆದರೆ ಅವನಿಗೆ ನಾನೆಂದರೆ ಅಷ್ಟೇನು ಇಷ್ಟವೇ ಇಲ್ಲ.. ಅವನಿಗೆ ಇಷ್ಟ ಇದ್ದದ್ದು ಶರಣ್ಯ ಮಾತ್ರ.. ಹಾಗಾಗಿ ಹೋಗುವ ಮನಸ್ಸು ಮಾಡಲಿಲ್ಲ ನಾನು.ಆದರೆ ಮನಸ್ಸಿನಲ್ಲಿ ಅವನಿಗೇನೂ ಆಗದಿರಲಿ ದೇವರೇ ಎಂದೇ ಸದಾ ಪ್ರಾರ್ಥಿಸುತ್ತಿದ್ದೆ.


ಇದರ ಮಧ್ಯೆ ನನಗೆ ಮದುವೆ ಪ್ರಸ್ತಾಪ ಕೂಡ ಬಂತು.. ಎಂಗೇಜ್ಮೆಂಟ್ ಮಾಡಲು ಅಪ್ಪ ನಿರ್ಧರಿಸಿದ್ದರು.ಆದರೆ ನನಗೆ ಇಷ್ಟವೇ ಇರಲಿಲ್ಲ.ಏಕೆಂದರೆ ಮನಸ್ಸಿನಲ್ಲಿ ಇನ್ನೂ ವಿಜೇತ್ ನನ್ನೇ ನಾನು ತುಂಬಿಕೊಂಡಿದ್ದೆ.ನಾನು ಮದುವೆ ಬೇಡ ಎಂದು ಹೇಳುವುದರೊಳಗೆ ಹುಡುಗನ ಮನೆಯವರೇ ಸದ್ಯಕ್ಕೆ ಎಂಗೇಜ್ಮೆಂಟ್ ಬೇಡ ಎಂದು ಮುಂದೂಡಿ ಬಿಟ್ಟಿದ್ದರು.ಹೇಗೋ ಸದ್ಯಕ್ಕೆ ಬಚಾವ್ ಆಗಿ ಬಿಟ್ಟಿದ್ದೆ.. ಮನಸ್ಸು ನಿರಾಳ.. 


ಆದರೆ ಸುಖವಾಗಿರಲಿಲ್ಲ.


ಪ್ರೀತಿಸಿದವರಿಗೆ ಎಂದೂ ಸುಖವೇ ಇರುವುದಿಲ್ಲ..


ಊಟ ಅಂತು ಮೊದಲೇ ಸೇರುವುದಿಲ್ಲ.. 


ಹೃದಯ, ಮನಸ್ಸು ಎರಡೂ ಸದಾ ಭಾರ ಭಾರ..!


ನಿರೀಕ್ಷೆ ಇದ್ದು ಬಿಟ್ಟರೆ.. ಜೀವನ ಪೂರ್ತಿ ಪ್ರತೀಕ್ಷೆ ಇದ್ದು ಬಿಟ್ಟರೆ.. ಕಾದಿರುವೆ ನಿನಗಾಗಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಬಿಟ್ಟರೆ.. ಆ ಬದುಕು ಅದೆಷ್ಟು ದುಸ್ತರ!


ಪ್ರೀತಿಸಬಾರದು ಎಂದು ಹೆಚ್ಚಿನವರು ಅಂದುಕೊಳ್ಳುವುದು... ಪ್ರೀತಿಯಲ್ಲಿ ಇಳಿದಾದ ಮೇಲೆಯೇ.. ಹೃದಯಕ್ಕೆ ಘಾಸಿಯಾದ ಮೇಲೆಯೇ !!


ನನ್ನ ಪ್ರೀತಿ ಅಂತು ಎಂದಿಗೂ ಯಾವ ತೀರವನ್ನೂ ಸೇರಲೇ ಇಲ್ಲ.


ನಾನೂ ಕೂಡ ಬಾಯಿ ಬಿಟ್ಟು ಎಂದಿಗೂ ಯಾರಲ್ಲೂ ಹೇಳಲಿಲ್ಲ.


ಹೇಳಬೇಕಾದವನಿಗೆ ಅವನಿಗೆ ಯಾರು ಇಷ್ಟ ಎಂದು ಅವನೇ ಮೊದಲು ಬಾಯಿ ಬಿಟ್ಟು ನನ್ನಲ್ಲಿ ಹೇಳಿದ್ದ..ಅದಕ್ಕಾಗಿಯೇ  ನನ್ನಲ್ಲಿ ಸಹಾಯ ಕೇಳಿದ್ದ.. ಇನಿಯನಾಗುವ ಬದಲು ಅವನ ಪ್ರೀತಿಗಾಗಿ ಜಸ್ಟ್ ಗೆಳೆಯನಾಗಿದ್ದ !


ಆಮೇಲೆ ಅವರಿಬ್ಬರ ಪ್ರೀತಿಯಲ್ಲಿ ಅವನ ಆ ಗೆಳೆತನ  ಕೂಡ ಸತ್ತು ಹೋಗಿತ್ತು..! 


ನನ್ನ ಪ್ರೀತಿ ಕಥೆ ಆರಂಭ ಆಗುವ ಮೊದಲೇ.. ಸುತ್ತ ಮುತ್ತ ಸ್ವಲ್ಪವೂ ಸದ್ದು ಗದ್ದಲ ಮಾಡದೇ ಅದರಷ್ಟಕ್ಕೆ ಅದು ಮುಗಿದು ಹೋಗಿತ್ತು.


ಆದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರೀತಿಸಿದ್ದೆ ನೋಡಿ.. ಅದಕ್ಕಾಗಿ ದಿನಲೂ ನನ್ನಷ್ಟಕ್ಕೆ ದಹಿಸಿ ಹೋಗುತ್ತಿದ್ದೆ.. ಕೆಲವೊಮ್ಮೆ ಹೃದಯಕ್ಕೆ ಬೆಂಕಿ ಬೀಳುವ ಜ್ವಾಲೆ ಅದೆಷ್ಟು ಪ್ರಖರ.. ನನಗೆ ತಾಳಲು ಆಗುತ್ತಿರಲಿಲ್ಲ! 


ಅದರಲ್ಲೂ ಶರಣ್ಯ ಮತ್ತು ವಿಜೇತ್ ನನ್ನು ಒಟ್ಟೊಟಿಗೆ ನೋಡಿದಾಗ ನಾನು ಎಷ್ಟು ಅಸಹಾಯಕಳು ಎಂದು ನನಗಷ್ಟೇ ಗೊತ್ತು!


ಆದರೂ ನಾನು ಅವರಿಬ್ಬರಿಗೆ ಎಂದೂ ಕೇಡು ಬಯಸಿದವಳಲ್ಲ.


ಹಾಗಂತ ವಿಜೇತ್ ನನ್ನು ನನ್ನ ಮನಸ್ಸಿನಿಂದ ಸಂಪೂರ್ಣವಾಗಿ ಕಿತ್ತೆಸೆಯಲು ಕೂಡ ನಾನು ಅಸಮರ್ಥಳಾಗಿದ್ದೆ.


ಅದೊಂದು ಸಂಜೆ ನಾನು ಬಸ್ ಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದೆ. 


ನನ್ನ ಮೊಬೈಲ್ ಗೆ ಬೇರೆ ಯಾವುದೋ ಒಂದು Unknown ನಂಬರ್ ನಿಂದ ಕಾಲ್ ಬಂತು. 


ಕಾಲ್ ರಿಸೀವ್ ಮಾಡಿದೆ.. 


ಹಲೋ.. ಎಂದೆ. 


ಆ ಬದಿಯಿಂದಲೂ ಕೂಡ ಹಲೋ.. ಎಂಬ ಧ್ವನಿ ಬಂತು


ಆದರೆ ಆ ಧ್ವನಿ ಬೇರೆ ಯಾರದ್ದೂ ಆಗಿರದೇ... ವಿಜೇತ್ ನದ್ದೇ  ಆಗಿತ್ತು!! 


ಏನಾಯಿತು ವಿಜೇತ್ ನಿನಗೆ.. ಏಕೆ ಇಷ್ಟು ಸಮಯ ನೀನು ಕಂಪನಿಗೆ ಬರಲಿಲ್ಲ..  ಮೊಬೈಲ್ ಏಕೆ ಸ್ವಿಚ್ ಆಫ್ ಮಾಡಿಟ್ಟುಕೊಂಡಿದ್ದೆ?.. ಎಂದು ಒಂದೇ ಸಮನೆ ಆತಂಕದಿಂದ ಬಡ ಬಡಿಸಿದೆ. 


ವಿಜೇತ್ ನಿಧಾನಕ್ಕೆ ಹೇಳಲು ಶುರು ಮಾಡಿದ.. 


- ನನ್ನನ್ನು ಮನೆಯಲ್ಲಿ ಅರ್ಜೇಂಟಾಗಿ ಬಾ ಎಂದು ಕರೆದಾಗ... ಏನೋ ಹೆಚ್ಚು ಕಡಿಮೆ ಆಗಿರಬೇಕು ಎಂದು ಮನೆಗೆ ಓಡಿದ್ದೆ. 


ಆದರೆ ಅಲ್ಲಿ ಆ ತರಹ ಏನೂ ಇರಲಿಲ್ಲ.ಬದಲಿಗೆ ಬಲವಂತವಾಗಿ ನನ್ನನ್ನು ಅಪ್ಟನ ಫ್ರೆಂಡ್ ನ ಮಗಳೊಂದಿಗೆ ಮದುವೆ ಮಾಡಿಸುವ ಪ್ರಯತ್ನ ಮಾಡಲಾಯಿತು.ನನಗದು ಇಷ್ಟವಿರಲಿಲ್ಲ.ಈ ವಿಷಯ ಅಪ್ಪ ತೆಗೆದಾಗಲೇ ಹುಡುಗಿಯ ಪೋಟೋ ಕೂಡ ನೋಡದೆಯೇ ನಾನು ಆಗುವುದಿಲ್ಲ ಎಂದು ಹೇಳಿ ಬಿಟ್ಟಿದ್ದೆ. ಏಕೆಂದರೆ ನನಗೆ ಶರಣ್ಯಳನ್ನು ಬಿಟ್ಟು ಈ ಜಗತ್ತಿನಲ್ಲಿ ಯಾರೂ ಕೂಡ ಇಷ್ಟ ಆಗಲು ಸಾಧ್ಯವೇ ಇರಲಿಲ್ಲ.ಅವಳನ್ನು ನಾನು ಅಷ್ಟು ಪ್ರೀತಿಸಿದ್ದೆ.ಅವಳೂ ಕೂಡ ನನ್ನನ್ನು ತುಂಬಾ ಪ್ರೀತಿಸಿದ್ದಳು.. ನಾವು ಇಬ್ಬರು ಮದುವೆ ಕೂಡ ಆಗಬೇಕೆಂದು ಇದ್ದವರು. 


ಈ ವಿಷಯವನ್ನು ನಾನು ಮನೆಯವರಿಗೆ ಕೂಡ ಹೇಳಿದೆ.ಅಪ್ಪನಿಗೆ ಮನವರಿಕೆ ಮಾಡಿದೆ.ಆದರೆ ನನ್ನ ಅಪ್ಪ ಯಾರ ಮಾತನ್ನೂ ಕೇಳುವವರಲ್ಲ.ಮನೆಯಲ್ಲಿ ಅವರು ಹೇಳಿದ್ದೇ ಆಗಬೇಕು. ಅವರ ಮಾತಿಗೆ ಎದುರು ಮಾತಾಡುವ ಧೈರ್ಯವಾಗಲಿ, ಅವರನ್ನು ವಿರೋಧಿಸುವ ಧೈರ್ಯವಾಗಲಿ ಮನೆಯಲ್ಲಿ ಮಾತ್ರವಲ್ಲ ನಮ್ಮ ಊರಲ್ಲೂ ಯಾರಿಗೂ ಇಲ್ಲ. 


ಅಪ್ಪ ಅದಾಗಲೇ ಅವರ ಫ್ರೆಂಡ್ ಗೆ ಮಾತು ಕೊಟ್ಟು ಬಿಟ್ಟಿದ್ದರಂತೆ. ಅಪ್ಟನ ಆ ಅರಣ್ಯಾಧಿಕಾರಿ ಫ್ರೆಂಡ್ ಬೆಂಕಿ ಅವಘಡದಿಂದ ಒಮ್ಮೆ ನನ್ನ ಅಪ್ಪ ಮತ್ತು ಅಮ್ಮನ  ಜೀವ ಉಳಿಸಿದ ಗೆಳೆಯನಂತೆ. ಈ ಸಂಬಂಧ ಉಳಿಸಿಕೊಳ್ಳಲು ಅಪ್ಪ ಏನು ಮಾಡಲು ಕೂಡ ರೆಡಿ ಇದ್ದರು.ನಾನು ಶರಣ್ಯಳ ವಿಷಯ ಹೇಳಿದ ನಂತರ ನನ್ನಿಂದ ಮೊಬೈಲ್ ಫೋನ್ ಅನ್ನು ಕೂಡ ಕಿತ್ತುಕೊಂಡು ನನ್ನನ್ನು ಮನೆಯೊಳಗೆಯೇ ಕೂಡಿ ಹಾಕಿ ಅಕ್ಷರಶಃ ಗೃಹ ಬಂಧಿಯನ್ನಾಗಿ ಮಾಡಿ ಬಿಟ್ಟಿದ್ದರು ನನ್ನಪ್ಪ!


ಕೊನೆಗೆ ನಾನು ಎಷ್ಟು ಬೇಡ ಬೇಡ ಎಂದರೂ ಕೂಡ.. ನನ್ನ ಅಪ್ಪ ಅವರ ಫ್ರೆಂಡ್ ನೊಂದಿಗೆ ಮಾತಾಡಿ ನನ್ನ ಎಂಗೇಜ್ಮೆಂಟ್ ಅನ್ನು ಫಿಕ್ಸ್ ಮಾಡಿಯೇ ಬಿಟ್ಟರು !! 


ಆದರೆ ನನಗಿದನ್ನು ಸಹಿಸಿಕೊಳ್ಳಲು ಆಗಲೇ ಇಲ್ಲ..


ಏಕೆಂದರೆ ನನಗೆ ಶರಣ್ಯ ಇಲ್ಲದೆ ಬದುಕಲ್ಲ ಸಾಧ್ಯವಿರಲಿಲ್ಲ.. ಹಾಗಾಗಿ ಎಂಗೇಜ್ ಮೆಂಟ್ ಗೆ ಒಂದು ವಾರ ಇರುವಾಗಲೇ ನಾನು ನೇಣು ಬಿಗಿದುಕೊಂಡು ಮನೆಯಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನಿಸಿ ಬಿಟ್ಟೆ !!!


ಎಂಗೇಜ್ ಮೆಂಟ್ ಏನೋ ನಿಂತು ಹೋಯಿತು...!


ಆದರೆ  ಅಪ್ಪನ ಹಠದ ಕಾರಣದಿಂದಾಗಿ ಅದು ಕೇವಲ  ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿತ್ತು ಅಷ್ಟೇ. 


ಹಾಗಾಗಿ ನಾನು ಮತ್ತೆ ಮನೆಯೊಳಗೆಯೇ ಗೃಹಬಂಧಿಯಾದೆ! 


ಒಟ್ಟಾರೆ ನಾನು ಅವತ್ತಿನಿಂದ ಅಕ್ಷರಶಃ ಹುಚ್ಚನೇ ಆಗಿ ಬಿಟ್ಟೆ..! 


ಹಾಗೋ ಹೀಗೋ ಈ ದಿನ ನಾನು ಮನೆಯಿಂದ ತಪ್ಪಿಸಿಕೊಂಡು ಬಿಟ್ಟೆ.. 


ಶರಣ್ಯನ ನಂಬರ್ ಗೆ ಕಾಲ್ ಮಾಡಿದೆ..ಸ್ವಿಚ್ ಆಫ್ ಬರ್ತಾ ಇತ್ತು. 


ನಿನ್ನ ನಂಬರ್ ಇರಲಿಲ್ಲ.. ನಂತರ ಪೋನ್ ನಂಬರ್ ನೆನಪಿದ್ದ  ಫ್ರೆಂಡ್ ಒಬ್ಬನಿಗೆ ಕಾಲ್ ಮಾಡಿ ನಿನ್ನ ನಂಬರ್ ಪಡೆದುಕೊಂಡೆ.. 


ನನ್ನ ಶರಣ್ಯ ಹೇಗಿದ್ದಾಳೆ ಎಂದು ನನಗೆ ಗೊತ್ತಿಲ್ಲ .. ಪ್ಲೀಸ್ ಅವಳಿಗೆ ಹೇಳು.. ಅವಳಿಲ್ಲದೆ ನಾನು ಬದುಕಲಾರೆ ಎಂದು.


ಈಗ ನಾನು ಮಂಗಳೂರು K.S.R.T.C ಬಸ್ ನಿಲ್ದಾಣದಲ್ಲಿಯೇ ಇದ್ದೇನೆ..ಶರಣ್ಯನ ವಿಷಯವೇ ಮಾತಾಡ್ಲಿಕ್ಕೆ ಉಂಟು  ಫ್ಲೀಸ್.. ಅರ್ಜೆಂಟಾಗಿ ಬರ್ತಿಯಾ.. ಆಗಲ್ಲ ಎಂದು ಹೇಳ್ಬೇಡ,ನನಗೆ ಈ ವಿಷಯದಲ್ಲಿ ನಿನಗಿಂತ ಒಳ್ಳೆಯ ಬೇರೆ ಫ್ರೆಂಡ್ ಬೇರೆ ಯಾರೂ ಇಲ್ಲ...ಪ್ಲೀಸ್ ಬೇಗ ಬಾ..ಕಾಯ್ತಾ ಇರ್ತೀನಿ.. ಎಂದು ಹೇಳಿ ಕಾಲ್ ಕಟ್ ಮಾಡಿದ್ದ ವಿಜೇತ್.


ನಾನು ಮೌನಿಯಾಗಿ ಬಿಟ್ಟೆ! 


KSRTC ಬಸ್ ಸ್ಟ್ಯಾಂಡ್ ಗೆ ಹೋಗುವ ಬಸ್ ಬಂತು.. 


ಬಸ್ ಹತ್ತಿದೆ.. 


ಬಸ್ ನೊಳಗೆ ಕುಳಿತುಕೊಂಡೆ.. 


ಬಸ್ ನನ್ನ ಭುಜ ಹಿಡಿದು ಮತ್ತೆ ಕೇಳಿದಂತೆ ಭಾಸವಾಯಿತು... ಈಗ ನೀನು ಏನು ಮಾಡ್ತೀಯಾ...ಅವರಿಬ್ಬರನ್ನು ಒಂದು ಮಾಡ್ತಿಯಾ ಅಥವಾ..ನಿನ್ನ ಪ್ರೀತಿಯನ್ನು ಕೊನೆಯ ಬಾರಿ ಆದರೂ ನಿನ್ನ ವಿಜೇತ್ ಗೆ ಹೇಳ್ತಿಯಾ.. ಎಂದು! 


ಏನೂ ತೋಚದೆ.. ಮೌನವಾಗಿ ಬಸ್ ವಿಂಡೋದಿಂದ ಹೊರಗೆ ನೋಡುತ್ತಾ ಉಳಿದು ಬಿಟ್ಟೆ. 


ಬಸ್ ನ ಕಂಡಕ್ಟರ್ ನನ್ನ ಸಮೀಪ ಬಂದು ಕೇಳಿದ.. 


- ಮೇಡಂ.. ಸನ್ನಿಧಿ ಅಂದರೆ ನೀವೇಯಾ? 


ಹೌದು... ಯಾಕೆ? ಕೇಳಿದೆ.


ನಿಮ್ಮ ಕಂಪನಿಯ  ಐಡಿ ಕಾರ್ಡ್ ಕೆಳಗೆ ಬಿದ್ದಿತ್ತು... ತಗೊಳ್ಳಿ ಮೇಡಂ.. ಅಂದು ಕೈಗಿಟ್ಟು ಮುಂದೆ ಹೋದ. 


ಹೌದು...ನಾನು ಸನ್ನಿಧಿ. 


ಆದರೆ ಕೇವಲ ಶರಣ್ಯ ಮತ್ತು ವಿಜೇತ್ ನ ಗೆಳತಿ ಸನ್ನಿಧಿ ಮಾತ್ರ ನಾನು ಆಗಿರಲಿಲ್ಲ.!! 


ವಿಜೇತ್ ಹೇಳಿದ್ದ ಅವನ ಅಪ್ಪನ ಕಥೆಯ ಆ ಅರಣ್ಯಾಧಿಕಾರಿಯ ಮಗಳೂ ನಾನೇ ಆಗಿದ್ದೆ!!!


ಹೌದು... ನನ್ನ ತಂದೆ ಒಬ್ಬರು ಅರಣ್ಯಾಧಿಕಾರಿಯೇ ಆಗಿದ್ದರು. 


ನನ್ನ ತಂದೆ ಅವರ ಸಾಹಸ ಕಥೆಗಳನ್ನು ಹೇಳುವಾಗ ವಿರಾಜಪೇಟೆಯ ಗೆಳೆಯನನ್ನು ಮತ್ತು ಅವರ ಹೆಂಡತಿಯನ್ನು ಒಮ್ಮೆ ಭೀಕರ ಬೆಂಕಿ ಆಕಸ್ಮಿಕದಿಂದ ರಕ್ಷಿಸಿದ್ದ ವಿಷಯವನ್ನು ಸಹ    ಮನೆಯಲ್ಲಿ ಆವಾಗವಾಗ ಹೇಳುತ್ತಲೇ ಇದ್ದರು.ಆದರೆ ಅದು  ನೆನಪಾಗಿದ್ದು ಸ್ವಲ್ಪ ಹೊತ್ತಿನ ಹಿಂದೆ ವಿಜೇತ್ ಜೊತೆ  ಫೋನ್ ನಲ್ಲಿ ಮಾತಾಡುವಾಗಲೇ..!


ಅಷ್ಟು ಮಾತ್ರವಲ್ಲ ನನಗೆ ಅಪ್ಪ ಯಾವ ಗಂಡಿನೊಂದಿಗೆ ಎಂಗೇಜ್ಮೆಂಟ್ ಪಿಕ್ಸ್ ಮಾಡಿದ್ದರು ಮತ್ತು ಆ ಎಂಗೇಜ್ಮೆಂಟ್ ಅನ್ನು ಗಂಡಿನ ಕಡೆಯವರು ಯಾಕಾಗಿ ಸದ್ಯಕ್ಕೆ ಬೇಡ ಎಂದು ಮುಂದೂಡಿದ್ದರು ಎಂದು ಕೂಡ ನನಗೀಗ ಸ್ಪಷ್ಟವಾಗಿ ಅರಿವಾಯಿತು!! 


ನನಗೆ ಯಾರು ಬೇಕಿತ್ತೋ ಅವನಿಗೆ ನಾನು ಇಷ್ಟವಿಲ್ಲದ ಬಿಸಿ ತುಪ್ಪವಾಗಿದ್ದೆ! ಏಕೆಂದರೆ ಅವನ ಇಷ್ಟ,ಅವನ ಖುಷಿಯೇ ಬೇರೆ ಆಗಿತ್ತು..! 


ವಿಜೇತ್ ನ ಖುಷಿಗಾಗಿ... ಅಪ್ಪನ ವಿರಾಜಪೇಟೆಯ ಗೆಳೆಯನ ಪುತ್ರನೊಂದಿಗಿನ ನನ್ನ ಎಂಗೇಜ್ ಮೆಂಟ್ ವಿಷಯವನ್ನು,ಕೈ ಬಿಡುವಂತೆ ಅಪ್ಪನಲ್ಲಿ ಇಂದೇ ಹೇಳಬೇಕೆಂದು ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡು ಬಿಟ್ಟೆ!! 


K.S.R.T.C ಸ್ಟಾಫ್ ಬಂದಾಗ ನನಗರಿವಿಲ್ಲದೆ ಕಣ್ಣು ತುಂಬಿ ಕೊಂಡಿದ್ದ ಕಣ್ಣೀರನ್ನು ಹಾಗೇ  ಕೈಯಲ್ಲಿಯೇ ಒರೆಸಿಕೊಂಡು ಬಸ್ ಇಳಿದೆ..! 


ಏನೇ ಇರಲಿ ವಿಜೇತ್  ಮತ್ತು ಶರಣ್ಯ ನನ್ನ ಕಾಲೇಜ್ ಗೆಳೆಯರು,ಅವರಿಗೆ ಕೆಟ್ಟದಾಗಲಿ ಎಂದು ನಾನು ಯಾವತ್ತೂ ಬಯಸಿದವಳಲ್ಲ. ನನ್ನ ಭಾಗ್ಯದಲ್ಲಿ ಇರುವುದೇ ಇಷ್ಟು.

ಅವರನ್ನು ಮತ್ತೆ ನಾನೇ ಒಂದು ಮಾಡಬೇಕು ಹಾಗೂ ಅದಕ್ಕೂ ಮೊದಲು ತುಂಬಾನೇ ನೊಂದಿರುವ ವಿಜೇತ್ ಗೆ ನಾನೀಗ ತುರ್ತಾಗಿ ಸಮಾಧಾನ ಮಾಡಬೇಕೆಂದು ತೀರ್ಮಾನಿಸಿ... 


ತಲೆ ತಗ್ಗಿಸಿಕೊಂಡು ಭಾರವಾದ ಹೆಜ್ಜೆಗಳೊಂದಿಗೆ ಗೆಳೆಯ ವಿಜೇತ್ ನನ್ನೇ ಹುಡುಕುತ್ತಾ ಆ ಬಸ್ ನಿಲ್ದಾಣದೊಳಗೆ ಮೌನವಾಗಿ ನಡೆದು ಬಿಟ್ಟೆ !! 


.....................................................................................


#ಇಷ್ಟೇ..! 


ab pacchu 

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ