ಅವಳಾ ಅಥವಾ ಇವಳಾ..?

 

ನನಗೆ ಕಾಲೇಜಿನಲ್ಲಿ ನೋಟ್ಸ್ ಬರೆಯುವುದೆಂದರೆ ಬಾರೀ ಉದಾಸೀನ.ಕಾಲೇಜು ನಲ್ಲಿ ಲೆಕ್ಚರರ್ ನೋಟ್ಸ್ ಕೊಡುವಾಗ ನೋಟ್ ಬುಕ್ ನ ಲಾಸ್ಟ್ ಪೇಜ್ ನಲ್ಲಿ ನನ್ನಷ್ಟಕ್ಕೆ ನಾನು ಚಿತ್ರ ಬಿಡಿಸ್ತಿದ್ದೆ.


ಹೆಚ್ಚಾಗಿ ಅದರಲ್ಲಿ ಬಾಂಡ್ಲಿ ತಲೆಯ ಲೆಕ್ಚರರ್,ಎರಡು ಕೊಂಬಿನ ಮೈಸಾಸುರ,ಪಿಲಿಕುಳ ದ ಟೈಗರ್,ರೆಡ್ ಕಲರ್ ದಾಸವಾಳ,ದಢೂತಿ ಆನೆ, ಮತ್ತೆ ಹಾರ್ಟ್ ಮತ್ತು ಅದಕ್ಕೊಂದು ಚುಚ್ಚಿದ ಬಾಣ ಎಲ್ಲಾ ಇರ್ತಿತು.ಮತ್ತೆ ಪುನಃ ಆ ಆ ಹಾರ್ಟ್ ನ ಒಂದು ಸೈಡ್ ಅಲ್ಲಿ ಬಾಣ ತಾಗಿ ಬ್ಲಡ್ ಎಲ್ಲ ಕೆಳಗೆ ಬೀಳುವುದು.. ಇಂತಹದ್ದೇ ಜಾಸ್ತಿ ಗೀಚುತ್ತಿದ್ದೆ. 


ನಾನೇನು ಭಯಂಕರ ಆರ್ಟಿಸ್ಟ್ ಅಂತ ತಿಳ್ಕೋ ಬೇಡಿ. ನನಗೆ  ರವಿವರ್ಮ ಬಗ್ಗೆ ಕೂಡ ಜಾಸ್ತಿ ಗೊತ್ತಿಲ್ಲ. ಎಲ್ಲರೂ ನೋಟ್ಸ್ ಬರೆಯುವಾಗ ನಾನು ಕೂಡ  ಏನಾದರೂ ಒಂದು ಮಾಡ್ಬೇಕಲ್ಲ. ಅದಕ್ಕೆ ನಾನು ಇಂತಹ ಚಿತ್ರ ಬಿಡಿಸುತ್ತಿದ್ದೆ. ಈ Maths ಗೆ ಬಳಸುವ compass(ಕೈವಾರ) ಉಂಟಲ್ಲ ಅದರಿಂದ ಕೂಡ  ನಾನು ಡೆಸ್ಕ್ ಗಳಲ್ಲಿ ಶ್ರದ್ದೆಯಿಂದ ಕೆತ್ತನೆ ಮಾಡುತ್ತಿದ್ದೆ.


ಜಾಸ್ತಿಯಾಗಿ ನನ್ನ ಹೆಸರುಗಳನ್ನೇ ಡೈಲಿ ಕೆತ್ತಿ ಕೆತ್ತಿ ಜಾಸ್ತಿ ಗುಂಡಿ ಮಾಡಿ ಹೆಸರು ಶಾಶ್ವತವಾಗಿ ಆ ಡೆಸ್ಕ್ ನಲ್ಲಿ ಇರುವಂತೆ ಮಾಡುತ್ತಿದ್ದೆ. ಕಾಲೇಜು ಬಿಟ್ಟು ಹೋದರೂ ನನ್ನ ಹೆಸರು ಅಮರವಾಗಿರಬೇಕು,ಕಾಲೇಜಿನ  ಮುಂದಿನ ಪೀಳಿಗೆ ಈ ಹೆಸರು ನೋಡಿ, ಅದರಲ್ಲೂ ಅಷ್ಟು ಗುಂಡಿಯಲ್ಲಿ ಕೆತ್ತಿರುವ ನನ್ನ ಹೆಸರನ್ನು forever ನೆನಪು ಇಟ್ಟುಕೊಳ್ಳಬೇಕೆಂಬುದೇ ನನ್ನ ಮೂಲ ಉದ್ದೇಶ ಆಗಿತ್ತು. ಹೀಗೆ compss ಅನ್ನು Maths ಗೆ ಬಳಸಿದ್ದೇ ಕಡಿಮೆ ನಾನು.


ಏನಾದರೂ imposition, home work ಇದ್ದರೆ ಹುಡುಗಿಯರಿಗೆ ಡೈರಿ ಮಿಲ್ಕ್ ಕೊಟ್ಟರೆ ತುಂಬಾ ಸುಂದರವಾಗಿ ಬರೆದುಕೊಡುತ್ತಿದ್ದರು. Exam ಟೈಂ ಅಲ್ಲಿ ಒಳ್ಳೆಯ handwriting ಇರುವ ಹುಡುಗಿಯ ನೋಟ್ಸ್ ಬುಕ್ ಅನ್ನು xerox ಹೊಡೆದು ಓದುತ್ತಿದೆ. ಆದರೂ ನೋಟ್ಸ್ ಬರೆಯುತ್ತಿರಲಿಲ್ಲ.ಕೇವಲ xerox ಮಾತ್ರ. 


ಹೀಗಾಗಿ ನನಗೂ xerox ಗೂ, xerox ಅಂಗಡಿಗಳಿಗೂ ಬಹಳನೇ ಒಳ್ಳೆಯ ಒಂದು ನಂಟು, ಸಂಬಂಧ ಎಲ್ಲಾ  ಏರ್ಪಟ್ಟಿತ್ತು. ಕಾಲೇಜಿನ ಸುತ್ತ ಮುತ್ತಲಿನ ಎಲ್ಲಾ xerox ಅಂಗಡಿಗಳಿಗೂ ನಾನೇ ಖಾಯಂ ಕಸ್ಟಮರ್.


ಸ್ಟೋರಿ ಈ ರೀತಿ ಸಾಗುತ್ತಿರಲು ನಮ್ಮ ಪರಿಚಯದ ಮಾಮ್ ಒಬ್ಬರು ನನ್ನ ಒಟ್ರಾಸಿ ಪ್ರೋತ್ಸಾಹದಿಂದ ಕಾಲೇಜ್ ಪಕ್ಕವೇ ಹೊಸ xerox ಅಂಗಡಿ ಹಾಕಿದರು. ತುಂಬಾನೇ ಗುರುತು ಪರಿಚಯದವರು ಹಾಗಾಗಿ ಚಿಕ್ಕಂದಿನಿಂದಲೂ ಮಾಮ್ ಅಂತ ಪ್ರೀತಿಯಿಂದ ಕರೆದೇ ಅಭ್ಯಾಸ. ಅವರು ಯಾವುದಾದರೂ ಒಂದು ಬ್ಯುಸಿನೆಸ್ ಮಾಡುವ ಅಂತ ಗೊಂದಲದಲ್ಲಿ ಇದ್ದಾಗ ಅವರಿಗೆ ಈ ಐಡಿಯಾ ಕೊಟ್ಟದ್ದೇ  ನಾನು. "ಮಾಮ್ ಈ xerox business ಉಂಟಲ್ಲಾ, ಒಳ್ಳೆಯ business, ಇಂದಿನ ಹುಡುಗರು ನೋಟ್ಸೇ ಬರೆಯಲ್ಲ, ಬೇಕಿದ್ದರೆ ನನ್ನನ್ನು ನೋಡಿ, ನಾನು ಯಾವತ್ತಾದರೂ ನೋಟ್ಸ್ ಬರೆದಿದ್ದೇನಾ, ನೀವೇನಾದರೂ ಅಂಗಡಿ ಹಾಕಿದರೆ ನಾನು ನಿಮ್ಮ ಅಂಗಡಿಗೆನೇ xerox ತೆಗೆಲಿಕ್ಕೆ ಬರ್ತೇನೆ,ನನ್ನನ್ನು ನಂಬಿ ನೀವು ಅಂಗಡಿ ಹಾಕಿ.." ಅಂತ ಶುರುವಿನಲ್ಲಿ ಅವರ ಶ್ವಾಸಕೋಶಗಳಿಗೆ ಆತ್ಮವಿಶ್ವಾಸ ತುಂಬಿದ್ದು ನಾನೇ. ನಂತರವೇ ಅವರಿಗೆ ಈ ಬ್ಯುಸಿನೆಸ್ ಮಾಡುವ ಉಮೇದು ಬಂದದ್ದು. 


ಒಂದು ಶುಭ ಘಳಿಗೆಯಲ್ಲಿ ಕಾಯಿ ಹೊಡೆದು ಪೂಜೆ ಮಾಡಿ ಅಂಗಡಿ ಓಪನ್ ಮಾಡಿಯೇ ಬಿಟ್ಟರು. ಬಂದವರಿಗೆ ಫಲಹಾರ ಕಾಫಿ ಟೀ ವಿತರಣೆಯ ವ್ಯವಸ್ಥೆ ನನ್ನದೇ,ಅಂದರೆ ಖರ್ಚು ಎಲ್ಲಾ ಅವರದ್ದೇ. ಅದರ ಉಸ್ತುವಾರಿ ನಾನು ನೋಡುತ್ತಿದ್ದೆ ಅಷ್ಟೇ. ಚೀಫ್ ಗೆಸ್ಟ್ ಆಗಿ ನಾನೇ ಮನವೊಲಿಸಿ ನಮ್ಮ department HOD ಯನ್ನು ಕರೆತಂದಿದ್ದೆ. ಅವರು ರಿಬ್ಬನ್ ಕಟ್ ಮಾಡಿ ಮಾಮು ನ ಅಂಗಡಿ ಓಪನ್ ಮಾಡಿದ್ದರು.


ಹೋಗುವಾಗ HOD, ಮಾಮ್ ಗೆ ಹೇಳಿದರು " ನೋಡಿ ನೀವು ಏನು ಬೇಕಾದರೂ students ಗಳಿಗೆ xerox ಮಾಡಿ ಕೊಡಿ, ಆದರೆ ನೋಟ್ಸ್ ಮಾತ್ರ xerox ಹೊಡೆದು ಕೊಡಬೇಡಿ, ಕೆಲವೊಂದು ಉದಾಸೀನ ದ ಮಾರಿಗಳು ಇರ್ತವೆ,ಅವುಗಳಿಗೆ ಬಾರೀ ಹೆಲ್ಪ್ ಆಗ್ತದೆ ಇದರಿಂದ.." ಅಂತ ನನ್ನನ್ನೇ ನೋಡಿ ಹೇಳಿದರು. ನಾನು ಮಾತ್ರ ಅದು ನನಗಲ್ಲ ಹೇಳಿದ್ದು ಅಂತ ಆ ಮಾತಿಗೆ ಜಾಸ್ತಿ ಗಮನಕೊಡದೇ "ತಗೊಳ್ಳಿ ಮ್ಯಾಮ್.. ಬಿಸಿ ಬಿಸಿ ಅಂಬಂಡೆ ಚಟ್ನಿ ಮತ್ತು ಗೋಡಂಬಿ ಹಾಕಿದ ಶೀರ.. " ಅಂತ HOD ಗೆ  ತಿಂಡಿ ಮತ್ತು ಕಾಫಿ ಕೊಟ್ಟು ಅಂಗಡಿ ಗೆ ಬಂದಿದ್ದ ನನ್ನ ಕ್ಲಾಸಿನ ಉಳಿದ ಗೆಳೆಯ ಗೆಳತಿಯರ ಚಾ ಕಾಫಿ ತಿಂಡಿ 'ತೀರ್ಥ' ಗಳ ಬಗ್ಗೆ ವಿಚಾರಿಸಲು ಹೋದೆ.


ಹೀಗೆ ಅಂಗಡಿ Opening ಏನೋ ಸಕ್ಕತ್ತಾಗಿಯೇ ಇತ್ತು. HOD ಬಂದು  ಉದ್ಘಾಟಿಸಿ ಹೋದ ಮೇಲೆ ನಾನೇ ಅಂಗಡಿಯಲ್ಲಿ ಜೋರಾದ ಡಿಕ್ ಚಿಕ್,ಡಿಕ್ ಚಿಕ್ ಅಬ್ಬರದ  DJ song ಗಳನ್ನು ಪ್ಲೇ ಮಾಡಿಸಿ ಅಂಗಡಿಯನ್ನು ಕಳೆಗಟ್ಟಿಸಿದ್ದೆ. ಮೊದಲು ಮಾತ್ರ HOD ಬರುವವರೆಗೆ ವಿಧ್ಯಾಭೂಷಣರ ಭಜನೆ ಗಳನ್ನು ಹಾಕಿದ್ದೆ. ನಮ್ಮ HOD ಉಂಟಲ್ಲಾ ಭಯಂಕರ ಶಿಸ್ತಿನ ಜನ.ಈ DJ ಸಂಸ್ಕೃತಿ ಎಲ್ಲ ಅವರಿಗೆ ಆಗಿ ಬರಲ್ಲ. ಅದಕ್ಕಾಗಿ ಈ ತರಹದ ವ್ಯವಸ್ಥೆ ಎಲ್ಲಾ ನಾನೇ ಖುದ್ದಾಗಿ ಬಹಳ ಮುತುವರ್ಜಿಯಿಂದ ಮಾಡಿದ್ದೆ. 


ಏನೇ grand opening ಆಗಿದ್ದರೂ, ನಿಧಾನವಾಗಿ ನಮ್ಮ ಮಾಮ್ ನ ಅಂಗಡಿಗೆ ಯಾವನೇ  ಒಬ್ಬ ಸ್ಟೂಡೆಂಟ್ xerox ತೆಗಿಲಿಕ್ಕೆ ಬರ್ಲೇ ಇಲ್ಲ,ಶುರುವಲ್ಲಿ ಮಾತ್ರ ಅಂಬಂಡೆ, ಶೀರ ತಿನ್ಲಿಕ್ಕೆ ಮತ್ತು ಕಾಫಿ ಕುಡಿಲೀಕ್ಕೆ ಎಲ್ಲಾ  ಬಂದದ್ದು.


ಮಾಮ್ ತಲೆಯ ಮೇಲೆ ಕೈಹೊತ್ತುಕೊಂಡು ಕೂತರು. ನೀನು ನನಗೆ ಡಬ್ಬಾ ಐಡಿಯಾ ಕೊಟ್ಟು ಲಗಾಡಿ ತೆಗೆದೆ ಮಾರಾಯ  ಎಂದು ಹೇಳಿದರು. ಮಾಮ್ ಗೆ ನಾನು ಧೈರ್ಯ ತುಂಬಿದೆ. ಟೆನ್ಶನ್ ಮಾಡ್ಬೇಡಿ, ಏನಾದರೊಂದು ಇದಕ್ಕೆ super  ಐಡಿಯಾ ನಾನು ಹುಡುಕಿಯೇ ಹುಡುಕುತ್ತೇನೆ ಎಂದು ಹೇಳಿದೆ. 


ರಾತ್ರಿ ಎಲ್ಲಾ ಯೋಚಿಸಿದೆ. ಒಂದು ಐಡಿಯಾ ಹೊಳೆಯಿತು ಇದೇ ಸರಿಯಾದದ್ದು ಅಂತ ನಿರ್ಧರಿಸಿದೆ.


ಮರುದಿನ ಅಂಗಡಿಗೆ ಹೋಗಿ ಮಾಮ್ ಗೆ ಹೇಳಿದೆ "ಮಾಮ್.. ನೀವು ಈ ಬಾಂಡ್ಲಿ ತಲೆ ಹಿಡ್ಕೊಂಡು ಅಂಗಡಿಯಲ್ಲಿ ಕೂತ್ರೆ ಒಬ್ಬರಾದರೂ ಸ್ಟೂಡೆಂಟ್ xerox ತೆಗಿಲಿಕ್ಕೆ ಬರ್ಲಿಕ್ಕೆ ಉಂಟಾ .. ಎಲ್ಲರೂ ಪಕ್ಕದ ಆಂಟಿಯ xerox ಅಂಗಡಿಗೆಯೇ ಹೋಗ್ತಾರೆ.. ನೀವು ಒಂದು ಕೆಲಸ ಮಾಡಿ, ಯಾರಾದರೂ ಒಬ್ಬಳು ಚಂದದ ಹುಡುಗಿಯನ್ನು ಅಂಗಡಿಯಲ್ಲಿ ಕೆಲಸಕ್ಕೆ ಇಡಿ, ನಿಮಗೆ ಸ್ವಲ್ಪ ಹೆಲ್ಪ್ ಸ ಆದ ಹಾಗೆಯೂ ಆಗ್ತದೆ ಮತ್ತು ನಮ್ಮ ಕ್ಲಾಸಿನ, ಕಾಲೇಜಿನ ಹುಡುಗರು ಕೂಡ ಓಡೋಡಿ ನಿಮ್ಮ ಅಂಗಡಿಗೆನೇ ಬರಬಹುದು.. " ಅಂತ ಹೇಳಿದೆ.


" ಹೇಗೆ ವರ್ಕ್ ಔಟ್ ಆಗ್ಬಹುದಾ... " ಅಂತ ಮಾಮ್ ಕೇಳಿದರು.


" ಯಾಕೆ ಆಗಲ್ಲ.. ನೀವು ಒಮ್ಮೆ ಮಾಡಿ ನೋಡಿ, ಆಮೇಲೆ ನಿಮ್ಮ business ಎಲ್ಲಿಗೋ ಹೋಗಿಬಿಡುತ್ತೆ.." ಅಂದೆ.


" ಆಯಿತು.. ಅದನ್ನು ಒಂದು ಮಾಡಿ ನೋಡುವ.. " ಅಂದರು.


" ಮಾಮ್.. ಆದ್ರೆ ಒಂದು ವಿಷಯ, ಹುಡುಗಿ ಮಾತ್ರ ಜಾಸ್ತಿ ಚಂದ ಇರ್ಲಿ ಆಯ್ತಾ.. " ಅಂದೆ.


ಆಯ್ತು ಮರ್ರೆ ಅಂತ ಹೂಂಗುಟ್ಟಿದರು.


ಮರುದಿವಸ ಕಾಲೇಜ್ ಮುಗಿದ ಕೂಡಲೇ ಮಾಮ್ ನ ಅಂಗಡಿಗೆ ಹೋದೆ.


ಅಲ್ಲೊಬ್ಬಳು ನಿಜವಾಗಿಯೂ ಚಂದದ ಹುಡುಗಿಯೇ ಇದ್ದಳು. ಪರವಾಗಿಲ್ಲ ಮಾಮ್.. ನಾನು ಹೇಳಿದ್ದನ್ನು ಭಯಂಕರ ಸೀರಿಯಸ್ ಆಗಿ ತಗೋತಾರೆ.ಇರಲಿ ಇರಲಿ ಒಳ್ಳೆಯ ವಿಷಯ ಅಂತ ಮನಸ್ಸಿನಲ್ಲಿ ಅಂದುಕೊಂಡೆ.


ಹುಡುಗಿ ಬಳಿ ತೆರಳಿ ಕೈ ಚಾಚಿ.. "ಹಾಯ್.. ನಾನು ಪಚ್ಚು, ಈ ಅಂಗಡಿಯ permanent customer.." ಅಂದೆ


ಅವಳು ಸ್ವಲ್ಪ ನಾಚಿಕೆ ಸ್ವಭಾವದವಳು,ಆದರೂ ಕೈ ಚಾಚಿ "ಹಾಯ್ ನಾನು ಸಾನಿಧ್ಯ, ಇಲ್ಲಿಗೆ ಹೊಸತಾಗಿ ಸೇರಿಕೊಂಡಿದದ್ದು, ನನ್ನದು  Bsc ಆಗಿದೆ, ಸರ್ಕಾರಿ ಕೆಲಸಕ್ಕೆ apply ಕೂಡ ಮಾಡಿದ್ದೇನೆ,ಮನೆಯಲ್ಲಿ free ಇದ್ದೆ, ಹಾಗಾಗಿ ಕೆಲಸಕ್ಕೆ ಸೇರಿದೆ, .." ಅಂದಳು.


ಅವಳಿಗೆ ಫುಲ್ ಬಯೋಡಟ ವೇ ಹೇಳಬಹುದಿತ್ತು ಅಂತ ಅನ್ನಿಸಿತು ಒಮ್ಮೆ. 


ಸಾನಿಧ್ಯ ನಿಜವಾಗಿಯೂ ಚೆಲುವೆಯೇ, ಅವಳ ಸಂಕೋಚ, ಆ ತುಸು ನಾಚಿಕೆ ಅವಳ ಚೆಲುವನ್ನು ಮತ್ತಷ್ಟು ಹೆಚ್ಚಿಸಿತ್ತು.


ಹೀಗೆ ನಮ್ಮ ಪರಿಚಯ ಆಯಿತು, ಪರಿಚಯ ಸ್ನೇಹಕ್ಕೆ ತಿರುಗಿತು. ನನಗೆ ಅದಕ್ಕಿಂತ ಜಾಸ್ತಿ ಮುಂದುವರಿಯಲು ಭಯ ಇತ್ತು.ಆದರೂ ನಮ್ಮ ಮಧ್ಯೆ ಏನೋ ಒಂದು ಇತ್ತು ಮಾತ್ರ. ಆದರೆ ಅದನ್ನು ಅವಳು ಸ ಬಾಯಿ ಬಿಟ್ಟು ಹೇಳ್ಲಿಲ್ಲ, ನಾನು ಸ ಬಾಯಿ ಬಿಟ್ಟು ಹೇಳ್ಲಿಲ್ಲ.. ನಿಜವಾಗಿಯು ಪ್ರೀತಿ ಇತ್ತೋ ಏನೋ ಯಾರಿಗೆ ಗೊತ್ತು.ನನಗಂತು ಪ್ರೀತಿ ಮಾಡಿ ಅನುಭವ ಇಲ್ಲ. ಅವಳಿಗಂತು  ಬಾಯಿ ಬಿಟ್ಟು ಹೇಳುವಷ್ಟು ಧೈರ್ಯ ಕೂಡ ಇಲ್ಲ. ಒಟ್ರಾಸಿ ಏನೋ ಒಂದು ಇತ್ತು ಮಾತ್ರ. ಆದರೂ ಇಬ್ಬರೂ ಆತುರಕ್ಕೆ ಬಿದ್ದು ಸಂಬಂಧ ಕ್ಕೆ ನಾಮಕರಣ ಮಾಡಲು ಮಾತ್ರ ಹೋಗಲೇ ಇಲ್ಲ.


ಸಾನಿಧ್ಯ ಬಂದ ನಂತರ ಮೊದಲಿಗೆ xerox ಬ್ಯುಸಿನೆಸ್ ಒಳ್ಳೆಯ ರೀತಿಯಲ್ಲಿ ನಡೆದಿತ್ತಾದರೂ, ನಂತರ  ಡಲ್ ಹೊಡೆಯಿತು.


ಒಂದು ದಿನ ಸಾನಿಧ್ಯ ಬೇಜಾರು ನಲ್ಲಿ ಕುಳಿತಿದ್ದಳು. ಏನಾಯಿತು ಕೇಳಿದೆ. ಏನಿಲ್ಲ ಬ್ಯುಸಿನೆಸ್ ಹೀಗೆ  ಡಲ್ ಆದ್ರೆ owner ಕೆಲಸದಿಂದ  ನನ್ನನ್ನು ತೆಗೆಯುವ ಚಾನ್ಸ್ ಇದೆ.. ನೀವೇ ಏನಾದರೂ ಮಾಡಿ business improve ಆಗುವ ಹಾಗೆ ಮಾಡಿ.."  ಎಂದು ಅತ್ತಳು.


Don't worry ನಾನಿದ್ದೇನೆ ಅಲ್ಲಾ.. ನಾನು ಇದಕ್ಕೆ ಏನಾದರೂ ಒಂದು ಐಡಿಯಾ  ಕಂಡುಹಿಡಿದೇ ಹಿಡಿಯುತ್ತೇನೆ ಎಂದು ಹೇಳಿ ಕಾಲೇಜಿಗೆ ಹೋದೆ. ಕಾಲೇಜಿನ ಕ್ಲಾಸ್ ಆಗುತ್ತಿದ್ದರೂ ನನ್ನ ತಲೆ ಮಾತ್ರ ಮಾಮ್ ನ xerox ಅಂಗಡಿಯನ್ನು ಉದ್ಧಾರ ಮಾಡುವುದು ಹೇಗೆ ಅಂತಲೇ  ಆಲೋಚಿಸುತ್ತಿತ್ತು. 


ಕಾಲೇಜಿನ ಪ್ರೆಂಡ್ಸ್ ಗಳಿಗೆ ಹೇಳಿದೆ ನಾನು ಕಮ್ಮಿ ರೇಟಿನಲ್ಲಿ  ನಿಮಗೆಲ್ಲಾ xerox ತೆಗೆಸಿಕೊಡುತ್ತೇನೆ ಎಂದು. ಅವರು ಒಪ್ಪಿದರು.ಒಟ್ಟಿನಲ್ಲಿ  ಅಂಗಡಿ ಲಾಸ್ ಆದರೂ ಸದ್ಯಕ್ಕೆ ಅಂಗಡಿ ಮುಚ್ಚಬಾರದು,ಮತ್ತು ಅದರಿಂದಾಗಿ ಸಾನಿಧ್ಯ ಕೆಲಸ ಕಳೆದು ಕೊಳ್ಳ ಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಹೀಗೆ ನಾನು ಕಾಲೇಜಿನ ಪೈನಲ್ ಇಯರ್ ನಲ್ಲಿ ಪ್ರಾಜೆಕ್ಟ್ ಮಾಡುವುದಕ್ಕಿಂತಲೂ ಜಾಸ್ತಿ ಈ xerox  bussiness improve ಮಾಡುವುದರಲ್ಲಿಯೇ ತುಂಬಾ ಸಕ್ರೀಯನಾಗಿದ್ದೆ. ನಾನೇ ಕಟ್ಟಿ ನಿಲ್ಲಿಸಿದ ನಮ್ಮ ಮಾಮ್ ನ xerox ಅಂಗಡಿ ಎಂಬ ಮಹಾನು ಕೋಟೆ ನನ್ನೆದುರೇ ಹಾಗೇ ಬಿದ್ದು ಹೋಗುವುದು ನನಗೆ ಸುತಾರಂ ಇಷ್ಟವಿರಲಿಲ್ಲ.


ನಮ್ಮ ಕ್ಲಾಸ್ ನ ಹುಡುಗರಿಗೆ , ಹುಡುಗಿಯರಿಗೆ ಮಾತ್ರವಲ್ಲ ಕಾಲೇಜಿನ ಬೇರೆ department ಗಳ students, ಪ್ರೆಂಡ್ಸ್ ಗೆ ಕೂಡ ನಾನೇ xerox ಮಾಡಿಸಿ ಕೊಡುವ ಕೆಲಸ,ಬಾರೀ ಶ್ರದ್ಧೆಯಿಂದ ಮಾಡತೊಡಗಿದೆ.


ಕೆಲವೊಮ್ಮೆ ಸುಮ್ಮನೆ ಮನೆಯವರೆಲ್ಲರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಕಾರ್ಡ್ ಗಳನ್ನು ವಾರಕ್ಕೊಮ್ಮೆ xerox ಅಂಗಡಿ ಗೆ ತಗೊಂಡು ಹೋಗಿ ಹತ್ತಿಪ್ಪತ್ತು xerox ಮಾಡಿಕೊಂಡು ಹೋಗುತ್ತಿದ್ದೆ. ಅಪ್ಪ ಕೇಳುತ್ತಿದ್ದರು " ಯಾಕೆ ಮಾರಾಯ.. ಅಷ್ಟೊಂದು xerox,ವಾರ ವಾರ ವೂ ಮಾಡಿಸ್ತೀಯಾ, ನಿನಗೆ ಬೇರೆ ಕೆಲಸ ಇಲ್ಲವ.." ಎಂದು. ಅದಕ್ಕೆ ನಾನು ಹೇಳ್ತಿದ್ದೆ "ಅದು ನಿಮಗೆ ಗೊತ್ತಾಗಲ್ಲ.. ನೆಕ್ಸ್ಟ್ ಅರ್ಜೆಂಟ್ ಗೆ ಏನಾದರೂ ಬೇಕಾದರೆ ಈಗಲೇ ಮಾಡಿಟ್ಟರೆ ಇದು ತುಂಬಾ ಹೆಲ್ಪ್ ಆಗ್ತದೆ.." ಅಂತ ಹೇಳ್ತಾ ಇದ್ದೆ. ಅದಕ್ಕೆ ಅವರು "ಅದಕ್ಕೆ ಇಷ್ಟು ನೂರಾರು xerox ಬೇಕಾ.. ಯಾರಾದರೂ ಹೀಗೆ ಮಾಡುತ್ತಾರಾ.. " ಎಂದು ಕೇಳುತ್ತಿದ್ದರು.


ನಾನು ನಮ್ಮ ಮನೆಯವರಿಗೆ ಮಾತ್ರವಲ್ಲ ಪಕ್ಕದ ಮನೆಯವರಿಗೆ ಕೂಡ xerox ತೆಗೆಯಿರಿ, xerox ತೆಗೆಯಿರಿ ಎಂದು ಉತ್ತೇಜಿಸುತ್ತಿದ್ದೆ. ಗ್ರೌಂಡ್ ಗೆ ಕ್ರಿಕೆಟ್‌ ಆಡ್ಲಿಕ್ಕೆ ಹೋದಾಗ ಕೂಡ ಅಲ್ಲಿನವರಿಗೆ ನಾನೇ ನಿಮಗೆಲ್ಲಾ ಕಮ್ಮಿ ರೇಟ್ ಗೆ xerox ಮಾಡಿಸಿ ಕೊಡ್ತೇನೆ, ನೀವು ಬೇರೆಲ್ಲೂ ಹೋಗಬಾರದು ಅಂತ ಹೇಳ್ತಿದ್ದೆ.


ಹೀಗೆ ಹಾಗೋ ಹೀಗೋ ಒಂದಷ್ಟು xerox business ಮಾಮ್ ನ ಅಂಗಡಿಗೆ ನನ್ನಿಂದಾಗಿ ಆಗಿದ್ದಂತು  ನಿಜ. ಮಾಮ್ ನ xerox ಅಂಗಡಿ ಎಂಬ ಕೋಟೆಗೆ ನಾನು ಕರೆಕ್ಟ್ ಆದಂತಹ ಸೇನಾಧಿಪತಿ ಆಗಿದ್ದೆ. ಕೊನೆಗೂ ನಮ್ಮ ಮಾಮ್ ನ ಕೋಟೆ ಬೀಳಲು ಬಿಡಲೇ ಇಲ್ಲ ನಾನು. 


ಸಾನಿಧ್ಯ ವಯಸ್ಸಿನಲ್ಲಿ ನನಗಿಂತ ಸ್ವಲ್ಪ ದೊಡ್ಡವಳೇ.ಆದರೆ ಮನಸ್ಸು ಹೇಳುತ್ತಿತ್ತು, ಯಾಕೆ ಈಗ ಸಚಿನ್ ತೆಂಡೂಲ್ಕರ್ ಹೆಂಡತಿ ಅವನಿಗಿಂತ ದೊಡ್ಡದು ಅಲ್ವಾ.. ಅದೆಲ್ಲ ಏನು ಆಗಲ್ಲ ಅಂತ ನನಗೆ ನಾನೇ ಹೇಳುತ್ತಿದ್ದೆ. ಆದರೆ ಇದೆಲ್ಲಾ ಅವಳ ಬಳಿ ಹೇಳಲು ಧೈರ್ಯ ಸಾಕಾಗ್ತ ಇರಲಿಲ್ಲ.


ಒಂದು ದಿನ ಅವಳಿಗೆ ಕೇಳಿದೆ "ನೀನು ಯಾಕೆ ಇಷ್ಟೊಂದು ಭಯ ಪಡ್ತೀಯಾ ಲೈಫ್ ನಲ್ಲಿ..." 


"ಹಾಗೇನಿಲ್ಲ .." ಅಂತ ಹೇಳಿದಳು.


" ನಿನಗೆ ಹುಲಿ ಅಂದರೆ ಭಯ ಉಂಟಾ .." ಕೇಳಿದೆ.


"ಇಲ್ಲ..." ಹೇಳಿದಳು.


"ಹಲೋ ಪಿಲಿ ಡ್ಯಾನ್ಸ್ (ಹುಲಿ ಕುಣಿತ) ಮಾಡೋ ಟೈಗರ್ ಬಗ್ಗೆ ಕೇಳಿದ್ದಲ್ಲಾ.. ನಾನು ನಿಜ ಹುಲಿ ಬಗ್ಗೆ ಕೇಳಿದ್ದು .."ಅಂದೆ.


"ನಿಜ ಹುಲಿ ನೋಡಿಲ್ಲ ಅಲ್ಲವಾ ... ಹಾಗಾಗಿ ಹೆದರಿಕೆ ಇಲ್ಲ ಅಂತ ಹೇಳಿದ್ದು .." ಅಂದಳು ಮುಗ್ಧವಾಗಿ. 


"ಓಕೆ.. ಹಾಗಾದರೆ ನಾಳೆ ಹೋಗಿ ಹುಲಿ ನೋಡುವ.." ಅಂದೆ


" ಎಲ್ಲಿಗೆ.. "


" ಪಿಲಿಕುಳ Zoo ಗೆ .." ಅಂದೆ.


ಅವಳು ಒಪ್ಪಿದಳು. ಹೀಗೆ ನಾವು ಮೊದಲ ಬಾರಿ ಒಟ್ಟಿಗೆ ಹೊರಗೆ ಹೋದೆವು.ಪಿಲಿಕುಳ Zoo ಅಲ್ಲಿ ನಾವು ಹುಲಿ, ಸಿಂಹ, ಕರಡಿ, ಕಾಳಿಂಗ ಸರ್ಪ ಎಲ್ಲಾ ನೋಡಿದೆವು. ಅವಳಿಗೂ ಖುಷಿ ಆಯಿತು. ಅವಳು ಕೂಡ ಮಂಗಳೂರಿನವಳೇ ಆದರೂ ಹೊರಗೆ ಎಲ್ಲಿಗೂ ಯಾರ ಜೊತೆಗೂ ಜಾಸ್ತಿ ತಿರುಗಾಡ್ಲಿಕ್ಕೆ ಹೋಗ್ಲಿಲ್ಲ ಅಂತ ನನಗೂ ಅವತ್ತೇ  ಗೊತ್ತಾದದ್ದು. 


ನಂತರ ನಾವು ವಾರ ವಾರವೂ ಕದ್ರಿ ಪಾರ್ಕ್,ಐಡಿಯಲ್ ಐಸ್‌ಕ್ರೀಂ ಪಾರ್ಲರ್, ಪಬ್ಬಸ್ ಐಸ್‌ಕ್ರೀಂ , ಸಿಟಿ ಸೆಂಟರ್ ಮಾಲ್ ಹೀಗೆ ಎಲ್ಲಾ ಕಡೆಯೂ ಸುತ್ತಾಡಿದೆವು.


ಅವಳು ನನಗೆ ಮಾವು ಇಷ್ಟ ಎಂದು ಅವಳ ಮನೆಯ ಮಾವು ತಂದು ನನಗೆ ಕೊಡುತ್ತಿದ್ದಳು. ನಾನು ಅವಳಿಗೆ ನಮ್ಮ ಮನೆಯ ಪೆಲಕಾಯಿ(ಹಲಸಿನ ಹಣ್ಣು) ತಗೊಂಡು ಹೋಗಿ ಕೊಡುತ್ತಿದ್ದೆ. ಅವಳಿಗೆ ಪೆಲಕಾಯಿ ಅಂದರೆ ನಿಜವಾಗಿಯೂ ತುಂಬಾನೇ ಇಷ್ಟ. ಅವಳಿಗೆ ಇಷ್ಟ ಎಂದು ಗೊತ್ತಾದ  ನಂತರ ನನಗೂ ಪೆಲಕಾಯಿ ತುಂಬಾನೇ ಇಷ್ಟ ಆಗಿದ್ದು.


ಒಂದು ದಿನ ಸಾನಿಧ್ಯ ಅವಳ ಮನೆಯಿಂದ ತಂದಿದ್ದ ಬಜಿಲ್(ಅವಲಕ್ಕಿ) ನನಗೆ ತಿನ್ನಲು ಕೊಟ್ಟಲು. ತುಂಬಾ ಚೆನ್ನಾಗಿತ್ತು. ನೀನೇ ಮಾಡಿದ್ದ ಕೇಳಿದೆ. ಹೌದು ನಾನೇ ಮಾಡಿದ್ದು ಅಂದಳು.ಹೀಗೆ ಮಾತುಕತೆ ಮುಂದುವರಿಯುತ್ತಾ ಅವಳೇ ಕೇಳಿದಳು, ನಾಳೆ ಎಲ್ಲಿಗಾದರೂ ತಿರುಗಾಡಲು ಹೋಗೋಣವೇ ಎಂದು.


"ತಣ್ಣೇರುಬಾವಿ ಬೀಚ್ ಗೆ ಹೋಗುವ.." ಅಂದೆ.


"ಅಲ್ಲಿಗೆ ಮಾತ್ರ ಬೇಡ..." ಅಂದಳು.


"ಯಾಕೆ ಕೇಳಿದೆ.."


"ಏನೋ ಸರಿ ಅನ್ನಿಸಲ್ಲ.." ಅಂದಳು.


"ಏನಾಗಲ್ಲ ನಾನಿದ್ದೇನೆ ನಾಳೆಯೇ ಹೋಗುವ ಅಂದೆ..."


ಹಾಗೆ ನಾವು ಡೈಲಿ ಸಂಡೆ ತಣ್ಣೀರುಬಾವಿ ಬೀಚ್ ಗೆ ಹೋಗಲು ಶುರು ಮಾಡಿದೆವು. ನಿಜವಾಗಿಯೂ ತಣ್ಣೀರುಬಾವಿ ಬೀಚ್ ಮಂಗಳೂರಿನ ಸುಂದರವಾದ ಬೀಚ್. ಮೊದಲು ಒಂದು ದೋಣಿ ಬಳಸಿ ಬೀಚ್ ಭಾಗಕ್ಕೆ ಹೋಗಬೇಕು.ಮತ್ತೊಂದು ಸೈಡ್ ನಲ್ಲಿ ಟಾರು ರೋಡ್ ಕೂಡ ಇದೆ. ಆದರೆ ದೋಣಿ ಜರ್ನಿಯೇ  ಚೆನ್ನಾಗಿರುತ್ತೆ.


ಬೀಚ್ ನಲ್ಲಿ ಕೂಡ ಹೇರಳವಾಗಿ ಗಾಳಿ ಮರಗಳು ಇದ್ದು ಒಂಥರಾ ಹಿತವಾದ ವಾತಾವರಣ ಅಲ್ಲಿಯದು. ಅಲ್ಲಿಗೆ ಬರುವವರಲ್ಲಿ ಪ್ರೇಮಿಗಳು ಕೂಡ ಜಾಸ್ತಿಯೇ ಇರುತ್ತಾರೆ. ಬಹುಶಃ ಅದಕ್ಕಾಗಿಯೇ  ಸಾನಿಧ್ಯ ಅಲ್ಲಿಗೆ ಹೋಗುವುದು ಬೇಡ ಎಂದು ಈ ಮೊದಲೇ ಹೇಳಿದ್ದು ಅಂತ ಕಾಣ್ತದೆ.


ಕ್ಲಾಸ್ ನಲ್ಲಿ ಕೂಡ ನಾವಿಬ್ಬರು ಪದೇ ಪದೇ ತಣ್ಣೇರುಬಾವಿ ಬೀಚ್ ಗೆ ಹೋಗಿ ಬಂದದ್ದು ಒಂದು ದೊಡ್ಡ ಸುದ್ದಿಯಾಗಿತ್ತು. Flash news, braking news, ಇದೀಗ ಬಂದ ಸುದ್ದಿ, ಇದು ನಮ್ಮಲ್ಲಿ ಮಾತ್ರ, ನಾವು ಈಗ ಇದನ್ನು break ಮಾಡುತ್ತಿದ್ದೇವೆ.. ಅಂತ ಮಾಧ್ಯಮ ಗಳು ಹೇಳುವಂತೆ ನಾನು ಮತ್ತು ಸಾನಿಧ್ಯ ತಣ್ಣೇರುಬಾವಿ ಬೀಚ್ ಗೆ ಹೋದದ್ದನ್ನೇ ದೊಡ್ಡ ನ್ಯೂಸ್ ತರಹ ಮಾಡಿಬಿಟ್ಟಿದ್ದರು ಕಾಲೇಜಿನಲ್ಲಿ ಎಲ್ಲರು. 


ಕ್ಲಾಸಿನಲ್ಲಿ ನಂತರ ನನ್ನನ್ನು ಎಲ್ಲರೂ ಒಂಥರಾ ದೃಷ್ಟಿಯಲ್ಲಿ ನೋಡುತ್ತಿದ್ದರು. ಆದರೆ ಸತ್ಯ ಹೇಳ್ತೇನೆ ನಾವಿಬ್ಬರು ನಿಜವಾಗಿಯೂ ಅವರು ತಿಳಿದುಕೊಂಡಂತಹ ಪ್ರೇಮಿಗಳು ಆಗಿರಲಿಲ್ಲ. ಜಸ್ಟ್ ಗಾಳಿ ಸೇವನೆಗೆ,ಒಂದು ಉದ್ದ ವಾಕ್ ಗೆ,ಆ ತಂಪು ಗಾಳಿಗೆ.. ಅಷ್ಟಕ್ಕೇ ಮಾತ್ರ ನಾವು ಅಲ್ಲಿಗೆ ಹೋಗುತ್ತಿದದ್ದು. ಆದರೆ ಈ ಸಮಾಜಕ್ಕೆ ಅದೆಲ್ಲ ಎಲ್ಲಿ ಅರ್ಥ ಆಗ್ತದೆ ಹೇಳಿ.ಬೀಚ್ ಅದರಲ್ಲು ತಣ್ಣೀರುಬಾವಿ ಬೀಚ್ ಅಂದರೆ ಏನೇನೋ ಕಲ್ಪಿಸಿಕೊಂಡು ಸಾಯ್ತಾರೆ ಬಡ್ಡಿಮಕ್ಕಳು. 


ಹೀಗೆ ಇರುವಾಗ ಒಂದು ದಿನ ಸಾನ್ನಿಧ್ಯ ನಾನು ಶ್ರೀಲಂಕಾ ಕ್ಕೆ ಹೋಗ್ತೇನೆ ಅಂತ ಅಚಾನಕ್ಕಾಗಿ ಹೇಳಿದಳು. ನನಗೆ ಅದು ನಿಜವಾಗಿಯೂ ಶಾಕ್ ಆಗಿತ್ತು.


"ಯಾಕೆ.." ಎಂದು ಕೇಳಿದೆ.


"ಪಕ್ಕದ ಮನೆಯ ಅಂಕಲ್ ಗೆ ಅಲ್ಲಿ ಒಂದು ಬ್ಯುಸಿನೆಸ್ ಇದೆ,ಬೀಚ್ ಪಕ್ಕವೇ ಅವರ ಆಫೀಸ್ ಕೂಡ ಇರುವುದಂತೆ.ಅಲ್ಲೇ ನನಗೂ ಒಂದು  ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದಾರೆ, ಎರಡು ವರ್ಷ ಅಷ್ಟೇ,ಆಮೇಲೆ ಮಂಗಳೂರಿಗೆನೇ ಬರುತ್ತೇನೆ.ಮೊದಲೇ ಮನೆಯ ಪರಿಸ್ಥಿತಿ ಸರಿ ಇಲ್ಲ. ಮುಂದೆ ಮದುವೆ ಅಂತ ಬಂದಾಗ ಕೈಯಲ್ಲಿ ಸ್ವಲ್ಪ ಹಣ ಇದ್ದರೆ ಅಪ್ಪನಿಗೆ ಸ ಹೆಲ್ಪ್ ಆಗ್ತದೆ ಅಲ್ಲಾ.. " ಅಂತ ಒಂದೇ ಗುಕ್ಕಿನಲ್ಲಿ  ಹೇಳಿ ಮುಗಿಸಿದ್ದಳು ಸಾನಿಧ್ಯ.


ನನಗೆ ಮೊದಲ ಬಾರಿಗೆ ಹೃದಯವೊಂದು ತುಂಬಾನೇ ಭಾರ ಆಗುವುದು ಎಂದರೆ ಏನು ಎಂದು ಆವತ್ತು ಗೊತ್ತಾಯಿತು.


ಅವಳ ಆ ಸಂಕೋಚ, ನಾಚಿಕೆ, ತುಸುವೇ ಹೆದರಿಕೆ, ಹಿತವಾಗಿ ಮದುರವಾಗಿ ಮಾತಾಡುವ ಬಗೆ.. ನನ್ನಂತವನಿಗೆ ನಿಜವಾಗಿಯೂ ಸಾನಿಧ್ಯ ಇಷ್ಟ ಆಗಿದ್ದಳು. ಮನಸ್ಸು ತುಂಬಾ ಸಲ ಅದನ್ನು ಹೇಳಿತ್ತು. ಆದರೆ ಬಾಯಿ ಕೈ ಕೊಟ್ಟಿತ್ತು. ಹಾಗಾಗಿ ಅವಳಿಗೂ ಅದನ್ನು ಹೇಳಲು ಆಗಲೇ ಇಲ್ಲ. 


ಕೊನೆಗೂ ಒಂದು ದಿನ ಸಾನ್ನಿಧ್ಯ ಶ್ರೀಲಂಕಾ ಕ್ಕೆ ಹಾರಿಯೇ  ಬಿಟ್ಟಳು. Airport ವರೆಗೆ ನಾನು, xerox ಅಂಗಡಿ ಮಾಮ್ ಕೂಡ ಹೋಗಿದ್ದೆವು.


ಅವಳು ನನ್ನಿಂದ ದೂರ ಹೋದ ಮೇಲೆ  ನಿಜವಾಗಿಯೂ ನನಗೆ  ಅವಳ ಸಾನಿಧ್ಯದ ಅರಿವಾಯಿತು. ಬಹುಶಃ ನನಗೇ ಗೊತ್ತಿಲ್ಲದೆನೇ ಅವಳನ್ನು ಪ್ರೀತಿಸಿದ್ದೆನೋ ಏನೋ..ಸ್ಪಷ್ಟವಾಗಿ ಅದು ಕೂಡ ನನಗೆ ಸರಿಯಾಗಿ ಗೊತ್ತಿಲ್ಲ, ಆದರೆ ಅವಳು ಹೋದ ಮೇಲೆ ಎಲ್ಲಾ ಕಡೆ ಖಾಲಿ ಖಾಲಿ ಅನ್ನಿಸತೊಡಗಿತು. ಅದೇ ರೀತಿ ಮಾಮ್ ನ ಅಂಗಡಿ ಕೂಡ ಬ್ಯುಸಿನೆಸ್ ಇಲ್ಲದೇ ಅಂಗಡಿಯ ಗಲ್ಲಾ ಫುಲ್ ಖಾಲಿ ಆಯಿತು.


ಮಾಮ್ ಒಂದು ದಿನ ಅನಿವಾರ್ಯ ವಾಗಿ ಅಂಗಡಿಗೆ ಬೀಗ ಹಾಕಿಯೇ ಹೋಗಬೇಕಾಯಿತು. ಹೋಗುವಾಗ ಸ ಅವರು ಅದೊಂದು ಡೈಲಾಗ್ ಹೇಳ್ಲಿಕ್ಕೆ ಮಾತ್ರ ಮರೆಯಲಿಲ್ಲ "ಪಚ್ಚು ನೀನು ಶುರುವಲ್ಲಿ, ಮಾಮ್ ನಿಮ್ಮ ಬ್ಯುಸಿನೆಸ್ ಎಲ್ಲಿಗೋ ಹೋಗುತ್ತೆ ಅಂತ ಹೇಳಿದ್ದೆ, ಆದರೆ ಕೊನೆಗೂ ನೀನು ನನ್ನನ್ನು ಅಲಕ್ಕ ಲಗಾಡಿ ತೆಗೆದೇ ಬಿಟ್ಟೆ.." ಎಂದು ಹೇಳಿದ್ದರು. 


ನಂತರ ನನ್ನ ಕಾಲೇಜು ಮುಗಿತು. ಅದು ಆಗಿ ಒಂದು ವರ್ಷ ಆಗಿತ್ತು ಅಷ್ಟೇ. ಶ್ರಿಲಂಕಾ ಎಂಬ ಚಿಕ್ಕ ದ್ವೀಪ ರಾಷ್ಟ್ರ ಕ್ಕೆ ಅದೊಂದು ದಿನ ದೊಡ್ಡ ಸುನಾಮಿ ಬಂದು ಅಪ್ಪಳಿಸಿತು. ದೇವರೇ ಸಾನಿಧ್ಯ ನಿಗೆ ಏನು ಆಗದಿರಲಿ ಎಂದು ಮನಸ್ಸು ಹೇಳಿತು. ಆದರೆ ವಿಧಿಯ ಆಟ ಬೇರೆಯೇ ಇತ್ತು. ಬೀಚ್ ಪಕ್ಕವೇ ಇದ್ದ, ಸಾನ್ನಿಧ್ಯ ನ ಆಫೀಸ್ ಎಲ್ಲವೂ ಸಮುದ್ರದ  ಅಲೆಗಳು  ಕೊಚ್ಚಿಕೊಂಡು ಹೋಗಿದ್ದವು. ಅಲ್ಲಿದ್ದ ಯಾರೂ ಕೂಡ ಬದುಕಿ ಉಳಿಯಲೇ ಇಲ್ಲ! 


ಸಾನಿಧ್ಯ ನ ಪಕ್ಕದ ಮನೆಯ ಅಂಕಲ್ ನ ಡೆಡ್ ಬಾಡಿ ಕೂಡ ಮಂಗಳೂರಿಗೇ ಬಂತು. ಆದರೆ ಸಾನಿಧ್ಯ ನ ಡೆಡ್ ಬಾಡಿ ಮಂಗಳೂರಿಗೆ ಬರಲೇ ಇಲ್ಲ!!


ಅವಳು ಎಲ್ಲಿ ಹೋದಳೋ ಏನಾದಳೋ ಯಾರಿಗೂ ಗೊತ್ತೇ ಇಲ್ಲ.ಆದರೂ ಈಗಲೂ ನನ್ನ ಮನಸ್ಸು ಪ್ರತೀಕ್ಷಣವೂ ಹೇಳುತ್ತಿದೆ, ಅವಳೆಲ್ಲೋ ಇದ್ದಾಳೆ ಎಂದು.ನಾನು ಈಗಲೂ ಅವಳನ್ನು ನಿರೀಕ್ಷೆ ಮಾಡುತ್ತಲೇ ಇದ್ದೇನೆ.


ಹೀಗೆ ಇವತ್ತು ಐದಾರು ವರ್ಷಗಳ ಹಿಂದಿನ ಆ ಕಾಲೇಜ್  ಘಟನೆಗಳನ್ನು ,ಮತ್ತೊಮ್ಮೆ ಮೆಲುಕು ಹಾಕುವ ಹಾಗೇ ಮಾಡಿದ್ದು, ಪಕ್ಕದ ಮನೆಯ ಆಂಟಿ ಮಗಳಾದ ಸಾಮಿಪ್ಯ ತಂದು ಕೊಟ್ಟ ಬುತ್ತಿಯೊಳಗಿದ್ದ ಒಗ್ಗರಣೆ ಹಾಕಿದ್ದ  ಬಜಿಲ್(ಅವಲಕ್ಕಿ). 


ಆವತ್ತು  ಕಾಲೇಜಿನಲ್ಲಿ ಇರುವಾಗ ಸಾಮಿಪ್ಯ ಕೂಡ ಇದೇ ತರಹದ ಬಜಿಲ್ ಕೊಟ್ಟಿದ್ದಳು,ಅದರ ಮರು ದಿನವೇ ನಾವು ತಣ್ಣೀರುಬಾವಿ ಬೀಚ್ ಗೆ ಎಲ್ಲಾ ಹೋಗಿದ್ದು.. ಹೀಗೆ ಎಲ್ಲವೂ ಮತ್ತೊಮ್ಮೆ ನೆನಪಾಯಿತು. 


"ತಿನ್ನಿ..." ಅಂದಳು ಸಾಮಿಪ್ಯ.


ಈ ಸಾಮಿಪ್ಯ ಇದ್ದಾಳೆ  ಅಲ್ಲಾ ಅವಳಿಗೆ ಈ ಭಾವನೆಗಳೇ ಇಲ್ಲ ಅನ್ನಿಸುತ್ತೆ ನನಗೆ ಎಷ್ಟೋ ಸಲ. ಎಷ್ಟು ಬೇಕೋ ಅಷ್ಟೇ ಪ್ರಶ್ನೆ, ಎಷ್ಟು ಬೇಕೋ ಅಷ್ಟೇ ಉತ್ತರ.ಕೆಲವೊಮ್ಮೆ ಉಡಾಫೆ, ಕೆಲವೊಮ್ಮೆ ಟಾಂಟ್ ಇಷ್ಟೇ ಅವಳು. ಯಾವಾಗಲೂ ಆ ಶಾರ್ಟ್ಸ್, ಅದಕ್ಕೊಂದು ಟೀ ಶರ್ಟ್ ಹಾಕಿ ಕೊಂಡು ತಿರುಗಾಡುತ್ತಾ ಇರುತ್ತಾಳೆ.


ಆಂಟಿ ಏನಾದರೂ ಮಾಡಿ ಕೊಟ್ಟು ನನಗೆ ಕಳುಹಿಸಿದರೆ ಡಬ್ಬ ಹಿಡಿದುಕೊಂಡು ನನ್ನ ರೂಮಿಗೆ ಓಡೋಡಿ ಬರುತ್ತಾಳೆ. ಆದರೂ ನನ್ನ ರೂಮಿಗೆ ಬರುವಾಗ ತಪ್ಪದ್ದೇ ತಲೆಗೊಂದು ಸಂಪಿಗೆ ಸಿಕ್ಕಿಸಿಯೇ ಬರುತ್ತಾಳೆ ಮಾತ್ರ. ಅದು ಮಾತ್ರ ಅವಳಲ್ಲಿ ನನಗೆ ತುಂಬಾ ಇಷ್ಟ ಆಗುವುದು. ಅಂದ ಹಾಗೆ ಅವಳಿಂದಾಗಿಯೇ ಸಂಪಿಗೆ ಕೂಡ  ನನಗೆ ಇಷ್ಟ ಆಗಿದ್ದು. ಸಾಮಿಪ್ಯ ಕೂಡ ಚಂದದ ಹುಡುಗಿಯೇ,ಆದರೆ ಅವಳಲ್ಲಿ ಮಾತಾಡುವಾಗ ನನಗೆ ಭಾವನೆಗಳೇ ಅರಳುವುದಿಲ್ಲ. ಟಾಮ್ ಭಾಯ್ ತರಹದ ಹುಡುಗಿ ಅವಳು. 


"ತಿನ್ನಿ.." ಅಂದಳು ಸಾಮಿಪ್ಯ.


"ಬಜಿಲ್ ಓಕೆ.. ಬಜಿಲ್ ಒಟ್ಟಿಗೆ ಈ ಬಾಳೆಹಣ್ಣು ಯಾಕೆ.." ಕೇಳಿದೆ. ಬಜಿಲ್ ಒಟ್ಟಿಗೆ ಎರಡು ಪಚ್ಚೆ ಬಾಳೆ ಕೂಡ ಕೊಟ್ಟು ಕಳುಹಿಸಿದ್ದರು ಆಂಟಿ. 


"ಮಂಗಗಳು ಹೆಚ್ಚಾಗಿ ಬಾಳೆಹಣ್ಣು ತ್ತಿನ್ನುತ್ತವೆ.." ಅಂದಳು. 


ಇರಲಿ, ಇರಲಿ..ಮನೆಯಲ್ಲಿ ಅಡುಗೆಗೆ ಒಗ್ಗರಣೆ ಹಾಕಲು ಕಲಿತಿದ್ದಾಳೋ ಇಲ್ಲವೋ ಆದರೆ ಎಷ್ಟು ಕಡಿಮೆ ಮಾತಾಡಿದರೂ ನಡು ನಡುವೆ ಇಂತಹ ಮಾತುಗಳನ್ನು ಸಿಡಿಸಲು ಮಾತ್ರ ಚೆನ್ನಾಗಿಯೇ ಕಲಿತಿದ್ದಾಳೆ ಆಂಟಿ ಮಗಳು ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. 


ಬಜಿಲ್ ತಿನ್ನುತ್ತಲೇ ಕೇಳಿದೆ..


" ಮತ್ತೆ ನಿನ್ನ ತಮ್ಮ ಪೆರ್ಮರಿ(ಹೆಬ್ಬಾವು) ಏನು ಮಾಡ್ತಾ ಇದ್ದಾನೆ..ಸೇಮೆದಡ್ಡೆ(ಒತ್ತು ಶ್ಯಾವಿಗೆ) ಒತ್ತಲು ಕೊನೆಗೂ ಕಲಿತು ಬಿಟ್ಟನೋ ಇಲ್ಲವೋ.. "


" ಅವನು ಪೆರ್ಮರಿ ಅಲ್ಲ.."


"ಮತ್ತೆ ಪೆರ್ಮರಿ ಗೆ ಪೆರ್ಮರಿ ಅನ್ನದೇ ಮತ್ತೆ ಏನು ಹೇಳಬೇಕು.."


"ಅವನ ಹೆಸರು ಪನ್ನಗ.."


"ಆಯಿತು ಮರ್ರೆ.. ಅವನೊಂದು ದೊಡ್ಡ ಪನ್ನೀರಿನ ಹಾವು.. ಹೂಂ, ಅವ ಸಾಯ್ಲಿ, ಮತ್ತೇ ನಿನ್ನ ಅತ್ತೆ ಮಗಳು ಇನ್ನು  ಬರುವುದು ಯಾವಾಗ.. "


" ಯಾರು ಸಾಂಗತ್ಯ ವ..? "


" ಹಾನ್.. ಅವಳೇ. ಅವಳೇ.." 


" ನಿಮಗೆ ಯಾಕೆ.. "


" ಅಲ್ಲ ಹೀಗೆ  ಕೇಳಿದ್ದು... "


" ಅದೇ ಯಾಕೆ .. "


" ಸಂಬಂಧಿಕರು ಅಂದರೆ ಆವಾಗವಾಗ  ಬಂದು ಹೋಗ್ತಾ ಇರ್ಬೇಕಪ್ಪಾ.. ಆಗಲೇ ಚಂದ.."


" ಹೂಂ.. " ಅಂದಳು.


ಸಾಂಗತ್ಯ ಸಾಮಿಪ್ಯ ಳ ಅತ್ತೆ ಮಗಳು. ಸಾಮಿಪ್ಯನ ಮನೆಯಲ್ಲಿ ಫಂಕ್ಷನ್ ಇದ್ದಾಗ ಅವಳ ಮನೆಗೆ ಬಂದಿದ್ದಳು. ಹಾಗೇ ಒಮ್ಮೆ ಬಂದಿದ್ದಾಗ ಅವಳಿಗೆ ಒಂದು ಸರ್ತಿ ಆಟೋ ಸಿಕ್ಕದೇ ಇದ್ದಾಗ  ನನ್ನೊಂದಿಗೆ ಗುಡ್ಡೆ, ಗದ್ದೆ, ತೋಟ ದ ತುಂಬಾ ನಡೆದಾಡುತ್ತಾ ಮಲ್ಲಿಗೆ ಕೊಯ್ಯುತ್ತಾ, ಮಾವು ತಿನ್ನುತ್ತಾ ಕೊನೆಗೂ ಸಾಮಿಪ್ಯ ಳ ಮನೆಗೆ ಸುರಕ್ಷಿತವಾಗಿ ಸಾಂಗತ್ಯಳನ್ನು ಸೇರಿಸಿದ್ದೆ ನಾನು. ಅದು ನಡೆದು ಒಂದು ತಿಂಗಳುಗಳು ಕೂಡ ನಡೆದಿಲ್ಲ,ಆದರೂ ನೆನ್ನೆ ಮೊನ್ನೆ ನಡೆದಂತಿದೆ.ಸಾಂಗತ್ಯ ಎಷ್ಟು ಸುಂದರವೋ ಅಷ್ಟೇ ಸುಂದರವಾಗಿ ಮಾತು ಕೂಡ ಆಡುತ್ತಾಳೆ. ಅವಳೊಂದಿಗೆ ಮಾತಾಡುತ್ತಾ ಇದ್ದರೆ ದಿನ ಹೋದದ್ದೆ ಗೊತ್ತಾಗಲ್ಲ. ಆದರೆ ಈ ಸಾಮಿಪ್ಯ ಳಿಗೆ ಅವಳ ಬಗ್ಗೆ ಕೇಳಿದಾಗಲೆಲ್ಲ ಯಾವಾಗಲೂ ಅದೆಂತದೋ ವಿಚಿತ್ರ ಕೋಪ ಬಂದು ಬಿಡುವುದು ನನ್ನ ಮೇಲೆ.


"ಇಲ್ಲಿ ಎಲ್ಲಾದರೂ ಹತ್ತಿರದಲ್ಲಿ xerox ಅಂಗಡಿ ಇದೆಯಾ.." ಅವಳೇ ಕೇಳಿದಳು.


"ಇದೆ.."


"ಎಲ್ಲಿ..."


"ಇಲ್ಲೇ ಸ್ವಲ್ಪ ದೂರದಲ್ಲಿ ಇದೆ.."


" ನಂಗೆ ಅರ್ಜೆಂಟ್ xerox ಬೇಕು..ನನ್ನ ಜೊತೆ ಬರ್ತೀರಾ.."


"ಆಯಿತು ಬರ್ತೆನೆ, ನಂಗೆ ಏನು ತೆಗಿಸಿಕೊಡ್ತೀಯಿ." ಅವಳು ತಂದುಕೊಟ್ಟಿದ್ದ  ಬಜಿಲ್ ತಿನ್ನುತ್ತಲೇ ಕೇಳಿದೆ. 


"ಒಂದು Cornetto ಐಸ್‌ಕ್ರೀಂ .. "


" ಒಂದೇ ಯಾ? "


" ಹೂಂ.. ಒಂದೇ.." 


" ಓಕೆ ಡನ್.."


 ಶಾರ್ಟ್ಸ್, ಟೀ ಶರ್ಟ್ ಹಾಕಿಕೊಂಡು ಸಾಮಿಪ್ಯ ಅವಳ ಹೊಸ ಸ್ಕೂಟಿ ಬಿಡುತ್ತಿದ್ದರೆ ನಾನು ಜೀನ್ಸ್ ಟೀ ಶರ್ಟ್ ಹಾಕಿ ಅವಳ ಹಿಂದೆಯೇ ಕುಳಿತಿದ್ದೆ. ಅಲ್ಲೇ ಮನೆ ಪಕ್ಕವೇ ಇದ್ದ ಅಂಗಡಿಯಿಂದ ಒಂದು Cornetto ತೆಗೆಸಿಕೊಟ್ಟಳು. ಅದನ್ನು ಹಾಗೇ ಬಿಡಿಸಿ ನಾನು ತಿನ್ನುತ್ತಿದ್ದೆ, ಸಾನಿಧ್ಯ ಳ ಸ್ಕೂಟರ್ ಮುಂದೆ ಮುಂದೆ ಹೋಗುತ್ತಿತ್ತು.


ಆದರೆ ನಾನು ಮಾತ್ರ ಏನೇನೋ ಆಲೋಚಿಸುತ್ತಿದ್ದೆ, ಅಲಾ ಈಗ ನಾಚಿಕೆ ಸ್ವಭಾವದ ಆ ನನ್ನ ಹಳೆಯ ಸಾನ್ನಿಧ್ಯ ಬದುಕಿ ವಾಪಾಸ್ ಬಂದರೆ ನಾನು ಏನು ಮಾಡುವುದು? ಅವಳಿಗೆ ನನ್ನ ಮೇಲೆ ನಿಜವಾಗಿಯೂ ಪ್ರೀತಿ ಇರಬಹುದಾ.. ಇಲ್ಲ ನಾನು ಸಾಮಿಪ್ಯ ಳ ಅತ್ತೆ ಮಗಳು ಸಾಂಗತ್ಯ ನಿಗೆ ಒಮ್ಮೆ ಸೀರಿಯಸ್ ಆಗಿ ಟ್ರೈ ಮಾಡಿದರೆ ಹೇಗೆ,ಎಷ್ಟು ಚಂದ ಮಾತಾಡ್ತಾಳೆ ಅವಳು. ಹುಡುಗಿ ಕೂಡ ಚಂದ. ಆದರೆ ಅವಳಿಗೆ ನಾನಂದರೆ ಇಷ್ಟ ಇರಬಹುದಾ?


"ಎಲ್ಲಿ ಮರ್ರೆ ನಿಮ್ಮ xerox ಅಂಗಡಿ" ಅಂತ  ಸಾಮಿಪ್ಯ ಹೇಳಿದಾಗ ಪುನಃ ನನ್ನ ಕಲ್ಪನಾ ಲೋಕದಿಂದ ಹೊರಗೆ ಬಂದೆ.. "


" ಇನ್ನೂ ತುಂಬಾ ದೂರ ಇದೆ.. ನೀನು ಸುಮ್ಮನೆ ಸ್ಕೂಟಿ ಬಿಡು.. " ಅಂದೆ.


" ಹೂಂ.. "


ಅಲ್ಲ  ಈ ಸಾಮಿಪ್ಯ ಇಷ್ಟು ನಿರ್ಲಿಪ್ತ ಯಾಕೆ ಮರ್ರೆ. ಇವಳಿಗೆ ಈ ಲವ್ ಅಲ್ಲಿ ಎಲ್ಲಾ ಯಾಕೆ  ಇಂಟ್ರೆಸ್ಟ್ ಇಲ್ಲ, ಲವ್ ಬಿಡಿ ಅವಳಿಗೆ ಲೈಫ್ ಅಲ್ಲಿಯೇ ಇಂಟ್ರೆಸ್ಟ್ ಇಲ್ಲ ಅಂತ ನನಗೆ ಯಾವಾಗಲೂ ಅನ್ನಿಸುತ್ತದೆ. ಆದರೂ ನೋಡುವ ಇವಳಲ್ಲಿ ಲವ್ ಬಗ್ಗೆ ಒಮ್ಮೆ ಕೇಳಿ ನೋಡುವ. ಈ ಟಾಮ್ ಬಾಯ್ ಹುಡುಗಿ ಏನು ಹೇಳುತ್ತಾಳೆ ನೋಡುವ ಅಂತ ಅನ್ನಿಸಿತು. 


" ಈ xerox ಅಂಗಡಿ ಹಾಳಾಗಿ ಹೋಗಲಿ... ನಾನು ಒಂದು ಸೀರಿಯಸ್ ಆಗಿ ಕೇಳ್ತೀನಿ, ಉತ್ತರ ಹೇಳ್ತಿಯಾ.. "


" ಹೂಂ.." ಅಂದಳು ಸ್ಕೂಟಿ ಬಿಡುತ್ತಲೇ


" ನೀನು ಯಾರಾನ್ನಾದರೂ ಯಾವತ್ತಾದರೂ ಪ್ರೀತಿಸಿದ್ದೀಯಾ .."


"ತಿನ್ಲಿಕ್ಕೆ ಏನಾದರೂ ಬೇಕಾ.." ಕೇಳಿದಳು.


" cornetto ತಿನ್ತಾ ಇದ್ದೇನೆ ಅಲ್ಲಾ.." ಅಂದೆ.


"ಅದು ಅಲ್ಲಾ.. ."


" ಮತ್ತೆ..? "


" ಒದೆ.. "


"ಅದು ಬೇಡ.. "


"ಹಾಗಾದರೆ ಸದ್ಯಕ್ಕೆ cornetto ತಿನ್ನಿ,ಅದಕ್ಕೂ ಮೊದಲು xerox ಅಂಗಡಿ ತೋರಿಸಿ.. "


ಭಯಂಕರ ಜನ ಮರ್ರೆ ಇವಳೊಂದು. ಇವಳನ್ನು ಕಟ್ಟಿಕೊಳ್ಳುವವನದೊಂದು ಅವಸ್ಥೆಯೇ ಮಾತ್ರ.


" ಇನ್ನೊಂದು ಕೇಳ್ಲಾ.. "


" ಏನು.." 


"ಅಲ್ಲಾ.. ನೀನು ಯಾಕೆ ಹೀಗೆ.. "


" ನೀವು ಯಾಕೆ ಹೀಗೆ.."


ಅಂಗಡಿ ಬಂತು, ಅಲ್ಲಿ ಸಾಮಿಪ್ಯ ಳಿಗೆ ಬೇಕಾದ  xerox ತೆಗೆದದ್ದು ಆಯಿತು, ವಾಪಾಸ್ ಬರುವಾಗ ಪುನಃ ಸಾಮಿಪ್ಯ ತೆಗೆದು ಕೊಟ್ಟ ಮತ್ತೊಂದು Cornetto ತಿಂದಿದ್ದು ಆಯಿತು, ಅಂತು ಇಂತು ಕೊನೆಗೂ ಮನೆ ಸೇರಿದ್ದೂ ಆಯಿತು,ಅಲ್ಲಿಂದ  ನನ್ನ ರೂಮ್ ಕೂಡ ಸೇರಿದ್ದೂ ಆಯಿತು.


ಹಾಗೇ ಮಂಚದ ಮೇಲೆ ಬಿದ್ದುಕೊಂಡವನಿಗೆ ಸಾಮಿಪ್ಯ, ಸಾಂಗತ್ಯ ಳ ಮುಖಗಳೆರಡೇ ಕಣ್ಣ ಮುಂದೆ ಬಂದು ನಿಂತಿತ್ತು.ಇವರಿಬ್ಬರಲ್ಲಿ ನನಗೆ ಯಾರು ಜಾಸ್ತಿ ಇಷ್ಟ..?

ಅವರಿಬ್ಬರಿಗೆ ನಾನು ಅಂದರೆ ಯಾರಿಗೆ ಜಾಸ್ತಿ ಇಷ್ಟ? ಅಂತ ಮನಸ್ಸಲ್ಲೇ ಲೆಕ್ಕ ಹಾಕುತ್ತಾ ಹಾಕುತ್ತಾ ಹಾಗೇ ನಿದ್ದೆಗೆ ಜಾರಿ ಬಿಟ್ಟೆ 😴😴


.....................................................................................



Ab Pacchu

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ