ಎಲ್ಲದಕೂ ಕಾರಣ ವಡಾ ಪಾವ್

 



ಕೆಲವರು ಸರಿಯಾದ ಸಮಯಕ್ಕೆನೇ ಕೈ ಕೊಡುತ್ತಾರೆ.


ಇನ್ನು ಕೆಲವರು ಸರಿಯಾದ ಸಮಯಕ್ಕೆ ಕೈ ಹಿಡಿಯುತ್ತಾರೆ.. ಹಿಡಿದು ಮೇಲೆತ್ತುತ್ತಾರೆ.


ನಮ್ಮ ಬದುಕಿನ ಕೆಲವು  ನಡೆಗಳು,ಅಭಿಪ್ರಾಯಗಳು ತಪ್ಪೆನಿಸುವುದು.. ನಾವು ಕೂಡ ತಪ್ಪೇ ಮಾಡಿದ್ದೇವೆ ಎಂದು ನಮಗನಿಸುವುದು  ಆವಾಗಲೇ. 


ಸುಂದರಣ್ಣ ಮತ್ತು ಶಾರದಮ್ಮನ ಮೂವರು ಮಕ್ಕಳಲ್ಲಿ ಎಲ್ಲರಿಗಿಂತಲೂ ಚಿಕ್ಕವನು ಅಂದರೆ ಸತೀಶನೇ.


ಅಣ್ಣಂದಿರಾದ ರಮೇಶ ಮತ್ತು ಸುರೇಶ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಂಡರೆ ಸತೀಶನಿಗೆ ಮಾತ್ರ ಓದು ತಲೆಗೆ ಹತ್ತಲಿಲ್ಲ.


ಕಾಲೇಜ್ ಮೆಟ್ಟಿಲು ಕೂಡ ಹತ್ತಲಿಲ್ಲ ಅವನು. ಸುಂದರಣ್ಣ ಅವನಿಗೆ ಬುದ್ಧಿ ಮಾತು ಹೇಳಿ,ಸರಿ ದಾರಿ ತೋರುವ ಬದಲು ಅವನನ್ನು ಅವನ ಅಣ್ಣಂದಿರಿಗೆ ಹೋಲಿಸಿ ನಿರ್ಲಕ್ಷ್ಯ ಮಾಡಿದ್ದೇ ಹೆಚ್ಚು.


ಅಣ್ಣಂದಿರಾದ ರಮೇಶ,ಸುರೇಶ ಕೂಡ ಊರಿಗೆ ಬಂದಾಗಲೆಲ್ಲ ಸತೀಶನಿಗೆ ಗೇಲಿ ಮಾಡುತ್ತಿದ್ದರು.. ನಮ್ಮಂತೆಯೇ ಶಾಲೆಗೆ ಹೋಗಿ ಕಲಿತಿದ್ದರೆ.. ನಿನಗೆ ಈ ರೀತಿ ಆಗುತ್ತಿತ್ತಾ ಎಂದು ಹೇಳುತ್ತಿದ್ದರು.ಆದರೆ ಆವಾಗಲೆಲ್ಲ ಅವರಿಗೆ ಬೈದು ತನ್ನ ಮಗನ ಪರವಾಗಿ ನಿಂತುಕೊಳ್ಳುತ್ತಿದ್ದದ್ದು  ಶಾರದಮ್ಮ ಒಬ್ಬರು ಮಾತ್ರ.


ಜೀವನದಲ್ಲಿ ಏನೂ ಸಾಧಿಸದ ತನ್ನ ಕೊನೆಯ ಮಗನ ಬಗ್ಗೆ ಶಾರದಮ್ಮನಿಗೆ ಪ್ರೀತಿ ಮಾತ್ರವಲ್ಲ.. ಖಂಡಿತವಾಗಿಯೂ ಅವನೂ ಕೂಡ ಎಲ್ಲರಂತೆ ಒಂದು ದಿನ ಏನಾದರೂ ಆಗಬಲ್ಲ ಎಂಬ ಭರವಸೆ ಅವರಿಗೆ ಇತ್ತು.


ಶಾರದಮ್ಮ ಪದೇ ಪದೇ ಹೇಳುತ್ತಿದ್ದರು.. ಸತೀಶ ಏನು ಮಾಡದೇ ಇರುವುದಕ್ಕಿಂತ ಏನಾದರೂ ಮಾಡುತ್ತಲೇ ಇರು..ದೇವರು ಖಂಡಿತಾ ದಾರಿ ತೋರಿಸ್ತಾನೆ ನಿನಗೆ. 


ಸತೀಶನಿಗೆ ಯಾವುದೇ ಕೆಲಸ ಬರುತ್ತಿರಲಿಲ್ಲ... ಅವನು ಚಿಕ್ಕಂದಿನಿಂದಲೂ ಅಲ್ಲಿಯವರೆಗೆ ಮಾಡುತ್ತಿದ್ದ ಕೆಲಸಗಳು ಅಂದರೆ.. ಜಾತ್ರೆಯಲ್ಲಿ ಐಸ್ ಕ್ರೀಮ್ ಗಾಡಿಯಲ್ಲಿ ಐಸ್‌ಕ್ರೀಂ ಮಾರುವುದು,ಕಲ್ಲಂಗಡಿ ಹಣ್ಣು ಮಾರುವುದು,ಯಕ್ಷಗಾನ ನಡೆಯುವಲ್ಲಿ ಭೋಜಣ್ಣನ ಹಾಕುತ್ತಿದ್ದ ಹೋಟೇಲ್ ನಲ್ಲಿ ಕೆಲಸ ಮಾಡುವುದು ಇತ್ಯಾದಿ... ಇತ್ಯಾದಿ... ನಂತರ ಊರಲ್ಲಿ ಯಾವ ಸಣ್ಣಪುಟ್ಟ ಕೆಲಸ ಸಿಕ್ಕಿದರೂ  ಮಾಡುತ್ತಿದ್ದ. 


ಸುಂದರಣ್ಣ ಊರಿನಲ್ಲಿ ಗಣ್ಯ ವ್ಯಕ್ತಿ,ಅದೂ ಅಲ್ಲದೇ ತಮ್ಮ ದೊಡ್ಡ ಮಕ್ಕಳಿಬ್ಬರು ಕಲಿತು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವಾಗ ಈ ಕೊನೆಯ ಮಗ ಇಂತಹ ಸಣ್ಣ ಪುಟ್ಟ ಕೆಲಸ ಮಾಡುವುದು ಅವರಿಗೆ ಇಷ್ಟ ಆಗುತ್ತಿರಲಿಲ್ಲ.ಹಾಗಾಗಿ ಅವರು ಊರಿನ ಯಾವುದೇ ಜಾತ್ರೆ, ಯಕ್ಷಗಾನಕ್ಕೂ ಹೋಗುತ್ತಿರಲಿಲ್ಲ. ಅಲ್ಲಿ ಸತೀಶ ಮಾಡುವ ಕೆಲಸ ನೋಡಿ ಯಾರಾದರೂ ತನಗೆ ಏನಾದರೂ ಹೇಳಿದರೆ ತನ್ನ ಮರ್ಯಾದೆ ಹೋಗಬಹುದು ಎಂದು ಅವರು ತಿಳಿದುಕೊಂಡಿದ್ದರು. 


ರಮೇಶ,ಸುರೇಶ ಕೂಡ ಚಿಕ್ಕಂದಿನಿಂದಲೂ  ಸತೀಶ ಜಾತ್ರೆ,ಯಕ್ಷಗಾನ ನಡೆಯುವಲ್ಲಿ ಈ ಕಲ್ಲಂಗಡಿ ಮಾರುವುದು, ಐಸ್‌ಕ್ರೀಂ ಮಾರುವುದು, ಚರ್ಮುರಿ ಮಾಡುವುದು, ಭೋಜಣ್ಣ ನ ಅಂಗಡಿಯಲ್ಲಿ ಕೆಲಸ ಮಾಡುವುದನ್ನು ನೋಡಿ ಮನೆಗೆ ಬಂದು ಗೇಲಿ ಮಾಡಿಕೊಳ್ಳುತ್ತಿದ್ದರು. 


ಆದರೆ ಶಾರದಮ್ಮ ಯಾವತ್ತೂ ಸತೀಶನಿಗೆ ಇಂತಹ ವಿಷಯದಲ್ಲಿ ಗೇಲಿ ಮಾಡಿದವರಲ್ಲ.ಬದಲಿಗೆ ಏನಾದರೂ ಒಂದೇ ಕೆಲಸ ಮಾಡು ಸತೀಶ,ಯಾರಿಗೆ ಗೊತ್ತು ಮುಂದೆ ನಿನಗೆ ಅದರಲ್ಲಿಯೇ ಯಶಸ್ಸು ಸಿಕ್ಕರೂ ಸಿಗಬಹುದು ಎಂದು ಹೇಳುತ್ತಿದ್ದರು.


ಸತೀಶ ಈ ವಿಷಯವಾಗಿ ಹೊಟೇಲ್ ಭೋಜಣ್ಣನೊಂದಿಗೆ  ಚರ್ಚಿಸಿದ.


ಅದಕ್ಕವರು ನಿನಗೆ ಬೇಕಾದರೆ ಸ್ವಲ್ಪ ಅಡುಗೆ ಪಾತ್ರೆ ಕೊಡುತ್ತೇನೆ.. ಏನಾದರೂ ಫಾಸ್ಟ್-ಫುಡ್ ಐಟಂ ಮಾಡುವುದರೆ ನಮ್ಮ ಹೋಟೆಲ್ ಮುಂದಿನ ಜಾಗದಲ್ಲಿ ಮಾಡಬಹುದು... ಅಂದರು.


ಆದರೆ ಹೆಚ್ಚಿನ ಅಡುಗೆ ಗೊತ್ತಿಲ್ಲದ ಕಾರಣ ಭೋಜಣ್ಣನವರ ಹೋಟೆಲ್ ನ ಒಬ್ಬ ಅಡುಗೆಯವನಿಂದಲೇ ಈ ಎಗ್  ರೈಸ್, ನೂಡಲ್ಸ್, ಕಬಾಬ್  ಎಲ್ಲಾ ಮಾಡುವುದನ್ನು ಕಲಿತುಕೊಂಡ ಸತೀಶ.ಅಲ್ಲಿಯೇ ಇದ್ದ ಮತ್ತೊಬ್ಬ ಬಾಂಬೆಯವನಿಂದ ವಡಾ ಪಾವ್ ಮಾಡುವುದನ್ನು ಕೂಡ ಕಲಿತು ಕೊಂಡು ಬಿಟ್ಟ. 


ನೋಡು ನೋಡುತ್ತಿದ್ದಂತೆಯೇ ಸತೀಶ ಭೋಜಣ್ಣನ ಅಂಗಡಿ ಎದುರೇ ಒಂದು ದೊಡ್ಡ ಗ್ಯಾಸ್ ಸ್ಟೌವ್ ಇಟ್ಟುಕೊಂಡು , ಒಂದು ದೊಡ್ದ ಬಾಣಲೆ,ಹಾಗೂ ಭೋಜಣ್ಣ ಕೊಟ್ಟ ಇನ್ನಿತರ ಅಡುಗೆ ಪರಿಕರಗಳೊಂದಿಗೆ ಫಾಸ್ಟ್-ಫುಡ್ ಮಾಡುವುದನ್ನು ಶುರು ಮಾಡಿಯೇ ಬಿಟ್ಟ. 


ಮೊದಲ ದಿನ ಶಾರದಮ್ಮ ಬಂದು ಮಗನಿಗೆ ಒಳ್ಳೆಯದಾಗಲಿ ಎಂದು ಮನಸಾರೆ ಹರಸಿ ಹೋಗಿದ್ದರು. ಅಷ್ಟು ಮಾತ್ರವಲ್ಲ ಈರುಳ್ಳಿ ಕಟ್ ಮಾಡಿಕೊಡುವುದು ಮತ್ತು ಇನ್ನಿತರ ತರಕಾರಿ ಹಚ್ಚುವುದು,ಕಬಾಬ್ ಮಾಡಲು ಮಸಾಲೆ ಸಿದ್ದಪಡಿಸುವುದು, ವಡಾ ಪಾವ್ ಗೆ ವಡೆ ಮಾಡುವುದು,ಹಸಿ ಮೆಣಸು ಕರಿಯುವುದು,ಅದಕ್ಕೆ ಚಟ್ನಿ ಪುಡಿ ಮಾಡುವುದು.... ಮುಂತಾದವುಗಳಿಗೆ ಮಗನಿಗೆ ಮನೆಯಲ್ಲಿಯೇ ಸಹಾಯ ಮಾಡುತ್ತಿದ್ದರು ಅವರು. 


ಅವ ಫಾಸ್ಟ್-ಫುಡ್ ಮಾಡುತ್ತಿದ್ದ ಜಾಗ ಜನ ಸಂದಣಿಯ  ಜಾಗವಾದುದರಿಂದ ಸಂಜೆಯ ನಂತರ ಒಳ್ಳೆಯ ವ್ಯಾಪಾರ ಆಗುತ್ತಿತ್ತು. 


ಆದರೆ ಯಾವಾಗ ತನ್ನ ಮಗ ರೋಡ್ ಬದಿಯಲ್ಲಿ ಎಗ್ ರೈಸ್, ಕಬಾಬ್, ಆಮ್ಲೆಟ್, ವಡಾ ಪಾವ್.. ಅಂತ ಎಲ್ಲಾ ಮಾಡಲು ತೊಡಗಿದನೋ ಆ ದಿನದಿಂದ ಸುಂದರಣ್ಣ ಸತೀಶನಲ್ಲಿ ಮಾತಾಡುವುದನ್ನೇ ಬಿಟ್ಟು ಬಿಟ್ಟರು. ಹಿಂದೆ ಅವರಿಗೆ ಜಾತ್ರೆಗೆ ಹೋಗಲು ಕಷ್ಟವಾಗುತ್ತಿದ್ದರೆ ಈಗ ಅವರಿಗೆ ರೋಡ್ ನಲ್ಲಿ ನಡೆದು ಹೋಗಲು ಕಷ್ಟವಾಗುತ್ತಿತ್ತು..!


ಅಷ್ಟು ಮಾತ್ರವಲ್ಲ ತನ್ನ ಮಡದಿ ಶಾರದಮ್ಮನಿಗೂ ಕೂಡ ಖಡಕ್ ಆಗಿ ಹೇಳಿಬಿಟ್ಟರು.. ಆ ಪರದೇಸಿಯ ಕಬಾಬು ಮಾಡಲು,ವಡಾ ಮಾಡಲು ಈ ಮನೆಯಲ್ಲಿ ನೀನು ಸಹಾಯ ಮಾಡುವುದು,ಅವನು ಇಲ್ಲಿಗೆ ಚಿಕನ್, ಇನ್ನಿತರ ಅಡುಗೆ ಸಾಮಗ್ರಿ ತರುವುದೆಲ್ಲಾ ಮಾಡಿದರೆ... ನೀನೂ ಕೂಡ ಇನ್ನು ಮುಂದೆ ನನ್ನೊಡನೆ ಮಾತಾಡುವುದನ್ನು ಬಿಟ್ಟು ಬಿಡಬಹುದು.. ಎಂದು ಹೇಳಿದ್ದರು! 


ತನ್ನ ತಾಯಿಗೆ ಇದರಿಂದ ತೊಂದರೆಯಾಗಬಾರದೆಂದು ನಿರ್ಧರಿಸಿದ ಸತೀಶ.. ಆಮೇಲೆ ಎಂದಿಗೂ ಫಾಸ್ಟ್-ಫುಡ್ ಗೆ ಬೇಕಾದ ತಯಾರಿಯನ್ನು ಮಾಡಲು ಮನೆಗೆ ಬರಲಿಲ್ಲ. ಬದಲಿಗೆ ಭೋಜಣ್ಣನ ಹೊಟೇಲ್ ಪಕ್ಕವೇ ರೂಮ್ ಒಂದನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿಯೇ ತನ್ನ ತಯಾರಿಯನ್ನು ಮಾಡಿಕೊಂಡು ಸಂಜೆ ನಂತರ ಫಾಸ್ಟ್-ಫುಡ್ ಮಾಡಲು ಶುರು ಮಾಡುತ್ತಿದ್ದ. ಪ್ರತೀ ದಿನ  ಸತೀಶ ಮನೆಗೆ ಸೇರುವಾಗ ಹನ್ನೊಂದು ಗಂಟೆಯ ಮೇಲೆ ಆಗುತ್ತಿತ್ತು. ಮಗ ಬರುವುದನ್ನೇ ಕಾದು ಅವನಿಗೆ ಊಟ ಬಡಿಸಿ, ಬಿಸಿ ಹಾಲೋ ಕಷಾಯವೋ ಕೊಟ್ಟೆ ಶಾರದಮ್ಮ ಕೂಡ ನಿದ್ದೆಗೆ  ಜಾರುತ್ತಿದ್ದರು.


ತಮ್ಮ ಸತೀಶ ಕಬಾಬ್ ಮಾಡ್ತಾನೆ... ಬಜ್ಜಿ, ಬೋಂಡ,ವಡಾ ಪಾವ್.. ಎಲ್ಲಾ ಮಾಡಿ ಮಾರ್ತಾನೆ ಎಂದು ತಿಳಿದ ಅಣ್ಣಂದಿರು ಎಂದಿನಂತೆ ಅಪಹಾಸ್ಯಗೈದಿದ್ದರು. 


ಫಾಸ್ಟ್-ಫುಡ್ ನಲ್ಲಿ ತಕ್ಕ ಮಟ್ಟಿನ ಲಾಭ ಮಾಡಿಕೊಂಡ ನಂತರ ಭೋಜಣ್ಣನವರ ಸಲಹೆಯ ಮೇರೆಗೆ ಒಂದು ಫುಡ್ ಟ್ರಕ್ ಬ್ಯುಸಿನೆಸ್ ಮಾಡುವ ಸಾಹಸಕ್ಕೆ ಕೂಡ ಕೈ ಹಾಕಿದ ಸತೀಶ.


ಸತೀಶನಲ್ಲಿ ಸ್ವಲ್ಪ ಹಣವಿತ್ತು, ಭೋಜಣ್ಣ ಕೂಡ ಅವನಿಗೆ ಸ್ವಲ್ಪ ಸಾಲ ಕೊಟ್ಟರು, ಶಾರದಮ್ಮ ತನ್ನ ಆಭರಣ ಅಡವಿಟ್ಟು ಹಣ ಹೊಂದಿಸಿಕೊಟ್ಟರು.


ಸತೀಶ ಯೋಚಿಸಿಯೇ ಇರದಷ್ಟು ಸಕ್ಸೆಸ್ ಆಯಿತು ಅವನ ಫುಡ್ ಟ್ರಕ್ಕ್.ಇತರ ಫುಡ್ ಗಳೊಂದಿಗೆ ಅಲ್ಲಿ ಸಿಗುತ್ತಿದ್ದ ವಡ ಪಾವ್  ಬಹಳನೇ ಫೇಮಸ್ ಆಗಿ ಬಿಟ್ಟಿತು.ಅದನ್ನು ತಿನ್ನಲು ಬರುವವರು ಸತೀಶನ ಉಳಿದ ಫುಡ್ ಗಳನ್ನು ಕೂಡ ಇಷ್ಟ ಪಟ್ಟು ಸವಿಯುತ್ತಿದ್ದರು. ಹೀಗಾಗಿ ವಡ ಪಾವ್ ಕಾರಣದಿಂದಾಗಿ ಸಾಕಷ್ಟು ಹಣ ಅವನ ಕೈ ಸೇರಿತು.ಆ ನಂತರ ಭೋಜಣ್ಣನ ಹಾಗೂ ಇನ್ನಿತರರ ಎಲ್ಲಾ ಸಾಲದ ಹಣವನ್ನು ಚುಕ್ತಾ ಮಾಡಿದ ಸತೀಶ ಹಾಗೂ ಅಡವಿಟ್ಟಿದ್ದ ತನ್ನ ತಾಯಿಯ ಆಭರಣಗಳನ್ನು ಕೂಡ  ಬಿಡಿಸಿ ಹಿಂದಿರುಗಿಸಿದ್ದ.


ಅಷ್ಟು ಮಾತ್ರವಲ್ಲ ಭೋಜಣ್ಣನನ್ನು ಸೇರಿಸಿಕೊಂಡು ತನ್ನದೇ ಒಂದು ಕ್ಯಾಟರಿಂಗ್ ಬ್ಯುಸಿನೆಸ್ ಕೂಡ ಆರಂಭಿಸಿ ಬಿಟ್ಟ.ಅದಕ್ಕೆ ಶಾರದಾ ಕ್ಯಾಟರಿಂಗ್ ಎಂದು ತನ್ನ ತಾಯಿಯ ಹೆಸರೇ ಇಟ್ಟ. ಅದೂ ಕೂಡ ದೇವರ ದಯೆಯಿಂದ ಯಶಸ್ವಿಯಾಯಿತು.


ಸತೀಶನ ಕೈಯಲ್ಲಿ ಹಣ ಈಗ ಓಡಾಡತೊಡಗಿತು. ನಗರದ ಮಧ್ಯ ಭಾಗದಲ್ಲಿ ಒಂದು ದೊಡ್ಡ ಹೋಟೆಲ್ ಕೂಡ ಆರಂಭಿಸಿದ. ಅದೂ ಕೂಡ ಯಶಸ್ವಿ ಆದ ನಂತರ ನಗರದ ಅಲ್ಲಲ್ಲಿ ಅದೇ ರೀತಿಯ ಮೂರು ಹೋಟೆಲ್ ಕೂಡ ತೆರೆದ. ಎಲ್ಲಾ ಹೋಟೆಲ್ ಗೆ ಕೂಡ ತಾಯಿಯ ಹೆಸರೇ ಇಟ್ಟ.


ಎಷ್ಟೇ ದೊಡ್ಡ ಹೋಟೆಲ್ ಗಳು ಇದ್ದರೂ ತನ್ನ ಕೈ ಹಿಡಿದು ಮೇಲೆತ್ತಿ ತನ್ನ ಎಲ್ಲಾ ಬೆಳವಣಿಗೆಗೂ ಕಾರಣವಾಗಿದ್ದ ವಡ ಪಾವ್ ಮಾರುತ್ತಿದ್ದ ಫುಡ್ ಟ್ರಕ್ ಅನ್ನು ಅವ ಯಾವತ್ತೂ ಬಂದ್ ಮಾಡಲಿಲ್ಲ.ಫುಡ್ ಟ್ರಕ್ ಮತ್ತು ಹೋಟೆಲ್ ಗಳೆಲ್ಲ ಸೇರಿ ಈಗ ಒಟ್ಟಾರೆ ಮೂವತ್ತು ಜನರು ಸತೀಶನ ಕೈ ಕೆಳಗೆ ಕೆಲಸ ಮಾಡುತ್ತಿದ್ದರು. ಸತೀಶ ತನಗೆ ಸದಾ ಸಹಾಯ ಮಾಡಿದ್ದ ಭೋಜಣ್ಣನನ್ನೇ ಎಲ್ಲದಕ್ಕೂ ತನ್ನ ಮುಖ್ಯ ಮ್ಯಾನೇಜರ್ ಆಗಿ ಮಾಡಿಕೊಂಡು ಅವರಿಗೊಂದು ಅವರ ಕೊನೆಗಾಲದಲ್ಲಿ ಬೆಚ್ಚನೆಯ ಬದುಕು ಕಲ್ಪಿಸಿದ.


ಮಕ್ಕಳಿಬ್ಬರನ್ನು ಓದಿಸಲು ಮನೆ ಮೇಲೆ ಸಾಲ ಮಾಡಿದ್ದರು ಸುಂದರಣ್ಣ. ಸಾಲ ಕೊಟ್ಟವರು ಪರಿಚಯದವರೇ. ಬಹಳ ಸಮಯದವರೆಗೆ ಸುಂದರಣ್ಣನ ಗೌರವ ಹಾಗೂ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಅವರೂ ಕೂಡ ಎಂದೂ ಹಣ ಕೇಳಿದವರಲ್ಲ. ಆದರೆ ಈಗ ಮಕ್ಕಳಿಬ್ಬರು ಬೆಂಗಳೂರಿನಲ್ಲಿ ಒಳ್ಳೆಯ ಕೆಲಸ ಹಿಡಿದಿರುವುದನ್ನು ನೋಡಿ  ಅವರು ಹಣಕ್ಕಾಗಿ ಸುಂದರಣ್ಣನನ್ನು ದಿನ ನಿತ್ಯವೂ ಪೀಡಿಸಲು ತೊಡಗಿದರು. 


ಒಂದು ದಿನ ಬೆಂಗಳೂರಿನಿಂದ ರಜೆಯ ಮೇಲೆ ಮನೆಗೆ ಬಂದಿದ್ದ ರಮೇಶ ಸುರೇಶನಲ್ಲಿ ಈ ವಿಷಯ  ಪ್ರಸ್ತಾಪಿಸಿಯೇ ಬಿಟ್ಟರು ಸುಂದರಣ್ಣ... ಮಾತ್ರವಲ್ಲ ಹಣ ಕೊಡದಿದ್ದರೆ ಮನೆ ಕೂಡ ಉಳಿಯುವುದಿಲ್ಲ ಎಂದು ಬಹಳ ನೊಂದುಕೊಂಡೇ ಹೇಳಿದ್ದರು. 


ಆದರೆ ಹಣದ ವಿಷಯ ಬಂದಾಗ ನೀನು ಕೊಡು.. ನನಗೆ ಕಾರ್ ಲೋನ್ ಇದೆ.. ಅದು ಲೋನ್ ಇದೆ ಎಂದು  ಇಬ್ಬರೂ ಪರಸ್ಪರ ಕಚ್ಚಾಡುತ್ತಾ ತಮ್ಮ ತಮ್ಮ ರೂಮ್ ಸೇರಿಕೊಂಡು ಬಿಟ್ಟಿದ್ದರು ರಮೇಶ ಮತ್ತು ಸುರೇಶ..! 


ಸುಂದರಣ್ಣ ಯಾರಿಗಾಗಿ ಅಷ್ಟೊಂದು ಖರ್ಚು ಮಾಡಿದ್ದರೋ ಅವರಿಬ್ಬರಿಗೂ ತಮ್ಮ ಕುಟುಂಬದ ಹಲವು ತಲೆಮಾರುಗಳ ಆ ಮನೆಯ ಮೇಲೆ ಒಂಚೂರು ಚಿಂತೆಯೇ ಇರಲಿಲ್ಲ. ಮಾತ್ರವಲ್ಲ ತನ್ನ ತಂದೆಯ ಗೌರವದ ಬಗ್ಗೆಯೂ ಅವರಿಗೆ ಯಾವುದೇ ಆಸ್ಥೆ ಇಲ್ಲದಿರುವುದು ಮತ್ತು  ಅವರ ಮೇಲೆ ತಾನು ಇಟ್ಟಿದ್ದ ಭರವಸೆ ಹುಸಿಯಾದದ್ದನ್ನು ಕಂಡು ತೀವ್ರ ಅಪಮಾನ ಅನುಭವಿಸಿ ತಲೆ ತಗ್ಗಿಸಿ ಕಣ್ಣೀರಾಗಿಬಿಟ್ಟರು  ಸುಂದರಣ್ಣ. 


ಅಲ್ಲಿಯವರೆಗೆ ಅವರ ಜಗಳವನ್ನೇ ನೋಡುತ್ತಿದ್ದ ಸತೀಶ,ತನ್ನ ಅಣ್ಣಂದಿರು ಅಲ್ಲಿಂದ ಹೋದ ಮೇಲೆ... ಅಪ್ಪನನ್ನು ಆ  ಪರಿಸ್ಥಿತಿಯನ್ನು ನೋಡಲು ಆಗದೇ ಹಾಗೂ ತಮ್ಮ ಮನೆ ಉಳಿಸಿಕೊಳ್ಳುವುದಕ್ಕಾಗಿ... ತನ್ನ ರೂಮಿನಲ್ಲಿದ್ದ ಐದು ಲಕ್ಷ ರೂಪಾಯಿಗಳಷ್ಟು ಹಣವನ್ನು ತಂದು ಸುಂದರಣ್ಣನ ಕೈಯಲ್ಲಿ ಇಟ್ಟು ಅಪ್ಪನ ಭುಜ ಮುಟ್ಟಿ.. ನಿಮಗೆ ನಾನಿದ್ದೇನೆ ಅಪ್ಪ.. ಎಂದು ಕಣ್ಣಲ್ಲೇ ಭರವಸೆ ಕೊಟ್ಟು ನಿಧಾನವಾಗಿ ಅಲ್ಲಿಂದ  ಹೊರ ನಡೆದಿದ್ದ.


ಅಲ್ಲೇ ಇದ್ದ ಶಾರದಮ್ಮನ ಕಣ್ಣುಗಳನ್ನು ಎದುರಿಸಲಾರದೇ...ತಲೆ ತಗ್ಗಿಸಿ ಮತ್ತೆ ಕಣ್ಣೀರಾಗಿ ಬಿಟ್ಟರು ಸುಂದರಣ್ಣ!! 


.....................................................................................


#ಇಷ್ಟೇ..


ab pacchu

moodubidire

(photo-internet)

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!