ಈ ಸಂಭಾಷಣೆ
" ಹಾಯ್...."
"ಹಾಯ್..."
" ರಾಯರು ಮೊದಲೇ ಬಂದು ತುಂಬಾ ಹೊತ್ತಿನಿಂದ ಕಾಯುತ್ತಿರುವ ಹಾಗಿದೆ ..."
" ಹೂಂ.. "
"sorry, ಸ್ವಲ್ಪ ಲೇಟ್ ಆಯಿತು..."
"ಹೂಂ..."
"ಬೇಜಾರಾ..?"
"ಇಲ್ಲ..."
" ಮತ್ತೆ ನನ್ನ ಮೇಲೆ ಕೋಪನಾ...?"
"ಇಲ್ಲ....?"
"ಮತ್ತೆ ಯಾಕೆ ಇಷ್ಟೊಂದು ಡಲ್.. ಏನು ವಿಷಯ...."
"ವಿಷಯ ಇದೆ..."
"ಏನು...? "
"ಮನೆಯಲ್ಲಿ ಅಪ್ಪ ಅಮ್ಮ ನಂಗೆ ಹುಡುಗಿ ನೋಡಿದ್ದಾರೆ ..."
"he he..🤣😅.. ಒಳ್ಳೆಯ ವಿಷಯ,ಹೇಯ್ ಹುಡುಗ ಇಷ್ಟೊಳ್ಳೆಯ ವಿಷಯ ಇಟ್ಟುಕೊಂಡು ಯಾರಾದರೂ ಡಲ್ ಆಗಿ ಇರುತ್ತಾರೆಯೇ, ಕಣ್ಣು ಮುಚ್ಚಿ ಮದುವೆ ಆಗಿ ಬಿಡು.. "
"ಕಿಂಡಲಾ...."
"ಅಲ್ಲ ಪೊಂಗಲ್...ಉಪ್ಪಿಟ್ಟು.. ಶೀರಾ..."
"ಹೂಂ..."
"ಮತ್ತೆ.. ನೀನು ಹುಡುಗಿಯನ್ನು ನೋಡಿದ್ದೀಯಾ..."
"ಹೂಂ..."
"ಹೇಗಿದ್ದಾಳೆ ಹುಡುಗಿ...."
"ಯಾರೇ ಎಷ್ಟೇ ಚಂದ ಇದ್ದರೂ, ನಿನ್ನಷ್ಟು ಅಲ್ಲ... "
" ನಿನಗೆ ಇಷ್ಟ ಆದ್ಲಾ.. "
" ಗೊತ್ತಿಲ್ಲ ... "
" ಯಾಕೆ... "
" ನನಗೆ ನೀನು ಮಾತ್ರ ಇಷ್ಟ.. "
" ನಾನು ನಿನಗೆ ಎಂದಿಗೂ ಸಿಗಲು ಸಾಧ್ಯವಿಲ್ಲ ..!! "
" ಗೊತ್ತು..!!"
" ಮತ್ತೆ ಯಾಕೆ ಈ ಹಠ,ಹುಚ್ಚು, ವಿರಹ,ವೇದನೆ, ನೋವು... "
" ಗೊತ್ತಿಲ್ಲ.... "
" ಇದು ತಪ್ಪು, ಬದುಕು ಹಾಳು ಮಾಡಿಕೊಳ್ಳುತ್ತಿದ್ದೀಯಾ... "
" ನೀನಿರದ ಬಾಳಿನಲ್ಲಿ ಯಾವುದೇ ಸಂತೋಷ.. ನನಗೆ ಸಂತೋಷ ಅಂತ ಅನಿಸುವುದೇ ಇಲ್ಲ ..ಯುಗಾದಿ ಸಂಭ್ರಮ ತರುವುದಿಲ್ಲ, ದೀಪಾವಳಿ ಸಡಗರ ಮೂಡಿಸುವುದಿಲ್ಲ, ಹೋಳಿ ಕಲರ್ ಫುಲ್ ಆಗಿರುವುದಿಲ್ಲ.. "
" ನೀನೇ ಹೀಗೆ ಹೇಳಿಬಿಟ್ಟರೆ, ನನಗೆ ಕಷ್ಟ ಆಗಿಬಿಡುತ್ತದೆ.. "
" ಮತ್ತೇನು ಹೇಳಲಿ...ಮತ್ತೆ ಹೇಗೆ ಹೇಳಲಿ.. "
" ಪ್ರತಿಯೊಂದಕ್ಕೂ ನನಗೆ ಧೈರ್ಯ ತುಂಬುತ್ತಿದ್ದವನು ನೀನೇ... ಈಗ ನೀನೇ ಈ ರೀತಿ ಧೈರ್ಯ ಕಳೆದುಕೊಂಡು.. ಈ ರೀತಿಯಾಗಿ ಆಡಿ ಬಿಟ್ಟರೆ ನಾ ಹೇಗೆ ಸಮಾಧಾನ ಪಡಿಸಲಿ... "
" ಹೇಳು... ನಾನು ಯಾಕೆ, ನಿನ್ನನ್ನು ಹುಚ್ಚನಾಗುವಂತೆ, ಎಂದಿಗೂ ಮರೆಯಲಾಗದಂತೆ,ಒಂದು ಕ್ಷಣವೂ ಬಿಟ್ಟಿರಲಾಗದಂತೆ ಪ್ರೀತಿಸಿಬಿಟ್ಟೆ.. "
" ಇದಕ್ಕೆ ನನ್ನಲ್ಲಿ ಉತ್ತರವಿಲ್ಲ.. "
" ಹಾಗಾದರೆ ನೀನು ಯಾಕೆ, ನಾನು ಈ ರೀತಿ ಆಗುವಂತೆ ನನ್ನನ್ನು ಪ್ರೀತಿಸಿಬಿಟ್ಟೆ... "
" ಯಾಕೆ ಪ್ರೀತಿಸಲಾರೆ ಎಂದು ಕೇಳಿದರೆ ಬೇಕಾದರೆ ಇಷ್ಟುದ್ದದ ಪಟ್ಟಿ ಕೊಡಬಹುದು, ಆದರೆ ಯಾಕೆ ಪ್ರೀತಿಸಿದೆ ಎಂದು ಕೇಳಿದರೆ.. ನಾನೇಗೆ ಹೇಳಲಿ ಗೆಳೆಯ.. ಪ್ರೀತಿಸಲು ಕಾರಣಗಳು ಬೇಕಿಲ್ಲ... "
" ಹೂಂ..."
" ನಿನ್ನನ್ನು ಈ ಸ್ಥಿತಿಯಲ್ಲಿ ನೋಡಿ ಅನಿಸುತ್ತಿದೆ, ನಾನು ನಿನ್ನ ಬಾಳಿನಲ್ಲಿ ಬರದಿದ್ದರೆನೇ ತುಂಬಾ ಚೆನ್ನಾಗಿರುತ್ತಿತ್ತು ಎಂದು .. "
" ಹಾಗೆ ಹೇಳಬೇಡ... "
" ಯಾಕೆ... "
" ನೀನು ಬಂದ ಮೇಲೆಯೇ ಈ ಬಾಳಿನಲ್ಲಿ ಖುಷಿ ಜಾಸ್ತಿ ಆಗಿದ್ದು ... "
" ಆದರೆ ಈಗ ನೀನು ಖುಷಿ ಆಗಿ ಇಲ್ಲ ..."
"ಇಲ್ಲ.. "
" ಏಕೆ.. "
" ಯಾಕೆಂದರೆ ನನ್ನೊಂದಿಗೆ ನೀನು ಇಲ್ಲ.. "
" ಇದುವೇ ಸತ್ಯ..ಕಹಿಯಾದರೂ ಸತ್ಯವನ್ನು ನೀನು ಒಪ್ಪಿಕೊಳ್ಳಲೇ ಬೇಕು.. "
" ಬೇರೆ ಏನನ್ನೂ ಬೇಕಾದರೂ ಒಪ್ಪಿಕೊಂಡು ಬಿಡಬಲ್ಲೆ, ಆದರೆ ನೀನು ನನ್ನೊಂದಿಗೆ ಇರಲಾರೆ ಎನ್ನುವ ಸತ್ಯವನ್ನು ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ, ಎದೆ ಉರಿಯುತ್ತಿದೆ.. ಶಾಖದ ಪ್ರಖರತೆಗೆ ಬೇಯುತ್ತಿದ್ದೆನೆ "
" ಹೂಂ... "
"ನಾನು ಕೂಡ ನೀನು ಇರುವಲ್ಲಿಗೆ ಬಂದು ಬಿಡಲೇ ಗೆಳತಿ...? "
" ನಾನಿರುವಲ್ಲಿಗೆ ಜೀವಂತವಾಗಿ ಯಾರು ಬರಲಾರರು ಗೆಳೆಯ..!! "
"ಜೀವ ಬಿಟ್ಟೆ ಬರುತ್ತೇನೆ..!! "
" ಬಿಡ್ತು ಅನ್ನು ...ಎಂದಿಗೂ ಹಾಗೇ ಮಾತ್ರ ಹೇಳಬೇಡ.. "
" ಯಾಕೆ.... "
" ನನಲ್ಲಿಗೆ ಬರುವ ಸಮಯ, ಸಂಧರ್ಭ ನಿನಗೆ ಇನ್ನೂ ಬಂದಿಲ್ಲ...!! "
" ಕಾಲನ ಕರೆಯನ್ನು ಕಾಯುತ್ತಾ ಕೂರುವಷ್ಟು ಸಂಯಮ ನನಗಿಲ್ಲ .. "
" ನನ್ನದು ಮುಗಿದ ಅಧ್ಯಾಯ, ನಿನ್ನ ಬದುಕು ತುಂಬಾ ದೊಡ್ಡದಿದೆ.. ಬದುಕು ಕಟ್ಟಿಕೋ .. "
" ಹೂಂ... "
" ನಾನು ಇಲ್ಲ ಎಂಬ ಚಿಂತೆ ಬೇಡ, ನಿನ್ನ ನೆನಪಲ್ಲಿ, ನಿನ್ನ ಮನದಲ್ಲಿ ನಾನು ಯಾವತ್ತೂ ಜೀವಂತ... ನೆನಪಿನಲ್ಲಿ ಜೀವಂತವಾಗಿರುವವರಿಗೆ ಯಾವತ್ತೂ ಸಾವಿಲ್ಲ....!! "
" ಆದರೆ ನೀನು ಇಷ್ಟು ಬೇಗ, ನನ್ನನ್ನೊಬ್ಬನೇ ಈ ರೀತಿ ಒಂಟಿ ಮಾಡಿ ನಡುದಾರಿಯಲ್ಲಿ ಬಿಟ್ಟು ಹೋಗಬಹುದೇ ? ... ನಿನ್ನನ್ನು ನಾನು ಕ್ಷಮಿಸಲಾರೆ.. "
" ಭಗವಂತನ ಇಚ್ಛೆ ಯ ಮುಂದೆ ನಮ್ಮದೇನಿದೆ... ಅವನು ಕರೆದಾಗ ಹೋಗಲೇಬೇಕಲ್ಲವೇ, ಇಲ್ಲಿಗೆ ಕಳುಹಿಸುವವನು ಅವನೇ, ಅವನಿಗೆ ಬೇಕಾದಾಗ ವಾಪಸ್ ಕರೆಸಿಕೊಳ್ಳುವವನು ಅವನೇ.. "
" ಈ ಕಾರಣಗಳಿಗಾಗಿಯೇ ಭಗವಂತ ನನಗೆ ಕೆಲವೊಮ್ಮೆ ತುಂಬಾನೇ ಕ್ರೂರಿ ಅನ್ನಿಸಿಬಿಡುತ್ತಾನೆ.. ನಮಗೆ ತುಂಬಾ ಬೇಕಾದವರನ್ನೇ ಹುಡುಕಿ ಹುಡುಕಿ ತನ್ನ ಬಳಿಗೆ ಬಲು ಬೇಗ ಕರೆಸಿಕೊಂಡುಬಿಡುತ್ತಾನೆ.. "
" ಹೂಂ.... "
" ನೀನು ಕೊಟ್ಟ ನವಿಲುಗರಿ ಇನ್ನೂ ಮರಿ ಹಾಕಿಲ್ಲ, ಆದರೂ ನನ್ನಲ್ಲೇ ಇದೆ. ನಿನ್ನದೊಂದು ಕಾಲ್ಗೆಜ್ಜೆ ಈಗ ಸದ್ದು ಮಾಡುತ್ತಿಲ್ಲ, ಆದರೂ ನನ್ನಲ್ಲೇ ಇದೆ.ಗೆಳತಿ ನಿನ್ನದು ಬರಿದಾಗದ ನೆನಪು, ಅನುದಿನವೂ ಕಾಡುವಂತದ್ದು, ಇಷ್ಟಿಷ್ಟೇ ಸುಡುವಂತಹದ್ದು.ದಿನವೂ ಸುಡುತ್ತಿದೆ ಆದರೂ ಒಮ್ಮೆಗೇ ನಾನು ಬೂದಿಯಾಗಲಾರೆ. ನನ್ನ ನೋವು ಅಗಣಿತ, ಲೆಕ್ಕ ಹಾಕಿ ಹೇಳಬಲ್ಲ ಕ್ಯಾಲ್ಕುಲೇಟರ್ ನನ್ನ ಬಳಿ ಇಲ್ಲ, ನನಗೆ ಬೇಕಾಗಿಯೂ ಇಲ್ಲ .. ಇದು ಮುಗಿಯದ ನೋವು, ನೋವಾದರೂ ಹಿತವಾಗಿದೆ , ಕಾರಣ ಅದರಲ್ಲಿ ಬರೀ ನೀನೇ ಇರುವೆ.. "
" ಹೂಂ... "
" ನಿನಗೆ ಗೊತ್ತಿಲ್ಲ ಪರಸ್ಪರ ಪ್ರೀತಿಸುವವರಲ್ಲಿ ಒಬ್ಬರು ಎಂದಿಗೂ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟರೆ..ಇಲ್ಲೇ ಉಳಿದುಬಿಡುತ್ತಾರೆ ಅಲ್ಲ.. ಅವರ ನೋವು ಎಂತಹದ್ದು ಎಂದು... ನನಗೆ ಪದಗಳಲ್ಲಿ ಅದನ್ನು ವಿವರಿಸಲು ಗೊತ್ತಿಲ್ಲ, ನಾನು ಕವಿ ಅಲ್ಲ .. ಆದರೆ ಒಂದು ಮಾತ್ರ ಗೊತ್ತು, ಭಗವಂತ ಯಾರಿಗೂ ಈ ರೀತಿಯ ಶಿಕ್ಷೆ ಮಾತ್ರ ನೀಡಬಾರದು..ಅದನ್ನು ಭರಿಸುವ ಶಕ್ತಿ ಯಾರಿಗೂ ಇರುವುದಿಲ್ಲ.. "
" ಹೂಂ.... "
" ಯಾರಿಗೂ ಕೂಡ ನಮ್ಮನ್ನು ಬೇರ್ಪಡಿಸುವ ಶಕ್ತಿ ಇಲ್ಲ ಎಂದು ತಿಳಿದುಕೊಂಡಿದ್ದೆ ನಾನು . ಆದರೆ ನನಗೆ ಸಾವು ಎಂಬುದು ಒಂದು ಇದೆ ಎನ್ನುವುದರ ಬಗ್ಗೆ ಒಂಚೂರು ಮಾಹಿತಿಯೇ ಇರಲಿಲ್ಲ ಗೆಳತಿ...ನಾನೆಷ್ಟು ಪೆದ್ದ "
" ಹೂಂ... "
" ಸಾವು ನಮ್ಮಿಬ್ಬರನ್ನು ಭೌತಿಕವಾಗಿ ಬೇರ್ಪಡಿಸಿರಬಹುದು..ಆದರೆ ಮಾನಸಿಕವಾಗಿ ನಮ್ಮಿಬ್ಬರನ್ನು ಬೇರ್ಪಡಿಸಲು ಅದಕ್ಕೂ ಕೂಡ ಎಂದಿಗೂ ಸಾಧ್ಯವಿಲ್ಲ... "
" ಹೂಂ... "
".. ಯಾಕೇ, ಇಂದು ನೀನು ಜಾಸ್ತಿ ಮಾತಾಡುತ್ತಿಲ್ಲ.... "
" ನನಗೆ ಮಾತು ಹೊರಡುತ್ತಿಲ್ಲ... "
" ಹೂಂ..."
"ಹೊರಡಬೇಕು ಇನ್ನು .. ಕತ್ತಲು ಕರಗುತ್ತಿದ್ದೆ,ಬೆಳಕು ಹರಿಯುತ್ತಿದೆ.. ಹೆಚ್ಚು ಹೊತ್ತು ಇಲ್ಲಿ ನಿಲ್ಲುವ ಹಾಗೆ ಇಲ್ಲ. ನಾನಿನ್ನು ನನ್ನ ಲೋಕಕ್ಕೆ ಹೊರಟುಬಿಡುತ್ತೇನೆ..ಹೋಗಿ ಬರಲೇ ಗೆಳೆಯ..."
" ಹೂಂ... "
"ಏನಾದರೂ ಹೇಳು.... "
" ಇವತ್ತು ರಾತ್ರಿ ಪುನಃ ಬರುತ್ತೇನೆ...ರಾತ್ರಿ ಹನ್ನೆರಡು ಕಳೆದ ಬಳಿಕ.. ಇದೇ ನಿನ್ನ ಗೋರಿಯ ಬಳಿ ನಿನಗಾಗಿಯೇ ಎಂದಿನಂತೆ ಕಾದಿರುತ್ತೇನೆ..ಈ ಸ್ಮಶಾನದ ಸ್ಮಶಾನಮೌನದಲ್ಲಿ ಅದೇನೋ ನೆಮ್ಮದಿ ಇದೆ..! "
" ಹೂಂ.. "
" ನೀನು ಯಾವತ್ತೂ ಲೇಟ್.. ಇವತ್ತು ಆದರೂ ಬೇಗ ಬಾ .. ತುಂಬಾ ಮಾತಾಡೋದಿದೆ.. ಬರ್ತೀ ಅಲ್ವಾ .. "
" ಹೂಂ.. "
" ಹೂಂ.. "
" ಹಾಗಾದರೆ ಬರುತ್ತೇನೆ ಇನ್ನು ...."
" ಹೂಂ... "
" ಹೋಗುತ್ತೇನೆ... "
" ಹೂಂ.. "
" ಬಾಯ್ .. "
" ಬಾಯ್.....!!!! "
....................................................................................
ಕೆಲವು ನೋವುಗಳಿಗೆ ಮದ್ದಿಲ್ಲ...ಕೆಲವರಿಗೆ ಅದು ಬೇಕಾಗಿಯೂ ಇಲ್ಲ!!
By_Ab Pacchu

Comments
Post a Comment