ತುಟಿ ಮೇಲೆ ಬಂದಂತಹ ಮಾತೊಂದೇ ಒಂದು..
ಒಬ್ಬೊಬ್ಬರಿಗೆ ಒಂದೊಂದು ಇಷ್ಟ...
ಕೆಲವರಿಗೆ ದೇವರು ಇಷ್ಟ.
ದೇವರಲ್ಲೂ ಅವರವರ ಇಷ್ಟದೇವರು ಅತೀ ಇಷ್ಟ.
ಇನ್ನು ಕೆಲವರಿಗೆ ದೇವರ ನೈವೇದ್ಯ ಅಂದರೆ ಇಷ್ಟ.
ತಿರುಪತಿ ತಿಮ್ಮಪ್ಪನ ಅಂಗೈ ಅಗಲದ ಪರಿಮಳದ ಲಡ್ಡು ಪ್ರಸಾದ..
ಶಬರಿಮಲೆಯ ಅಯ್ಯಪ್ಪಸ್ವಾಮಿಯ ರುಚಿಯಾದ ಅರವಣ ಪಾಯಸ...
ಮಹಾಗಣಪತಿ ದೇವರಿಗೆ ಪ್ರಿಯವಾದ ಸ್ವಾಧಿಷ್ಟವಾದ ಅಪ್ಪದ ಪ್ರಸಾದ..
ಸತ್ಯನಾರಾಯಣ ಪೂಜೆಯ ಸಿಹಿಯಾದ ಸಪಾತ(ಸಪಾತಭಕ್ಷ್ಯ/ಸಪಾದಭಕ್ಷ್ಯ/ಸಪಾತಪಕ್ಷ )...
ಹೀಗೆ ನೈವೇದ್ಯಲ್ಲೂ ಹಲವಾರು ಇಷ್ಟಗಳು.
ನನಗೂ ಮೇಲಿನ ಆ ಎಲ್ಲವೂ ಇಷ್ಟವೇ..
ಆದರೆ ಎಲ್ಲಕ್ಕಿಂತ ಹೆಚ್ಚು ಇಷ್ಟ ಕೊನೆಯದ್ದೇ..
ಅದೇ ಸತ್ಯನಾರಾಯಣ ಪೂಜೆಯ ಸಪಾತಭಕ್ಷ್ಯ..
ರವೆಯನ್ನು ಮಂದ ಉರಿಯಲ್ಲಿ ಹದವಾಗಿ ತುಪ್ಪದಲ್ಲಿ ಹುರಿದು ಇನ್ನಷ್ಟು ತುಪ್ಪ, ಹಾಲು, ಸಕ್ಕರೆ,ಗೋಡಂಬಿ,ಒಣ ದ್ರಾಕ್ಷಿ.. ಎಲ್ಲವನ್ನೂ ಬೇಕಾದ ಪ್ರಮಾಣದಲ್ಲಿ ಹಾಕಿ ಮಾಡುವ ಆ ನೈವೇದ್ಯ ಅದೆಷ್ಟು ರುಚಿ.
ಆದರೆ ನಾರಾಯಣ ದೇವರ ಭಕ್ತಿಗಾಗಿ ಇಲ್ಲವೇ ಆ ನೈವೇದ್ಯ ತುಂಬಾನೇ ರುಚಿ ಎಂಬ ಕಾರಣಕ್ಕಾಗಿ ನನಗದು ಇಷ್ಟವಲ್ಲ...
ಕೇವಲ ನಿನಗಾಗಿ....... ಅದು ನನಗೆ ಇಷ್ಟ!!
ಹೌದು ನಿನಗಾಗಿಯೇ ಅದು ನನಗೆ ಇಷ್ಟವಾಗಿದ್ದು.
ಸತ್ಯನಾರಾಯಣ ದೇವರ ರುಚಿಯಾದ ಸಪಾತಭಕ್ಷ್ಯ ಪ್ರಸಾದ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ...
ಆ ಪ್ರಸಾದದ ಸೇವನೆಗಾಗಿಯೇ ಪೂಜೆಗೆಂದು ಹೋಗುವವರು ಸಹ ಇದ್ದಾರೆ..
ಅಂತಹದ್ದರಲ್ಲಿ ನೀನು.....
ಎಂದಾದರೂ ದೇವಸ್ಥಾನದ ಸತ್ಯನಾರಾಯಣ ಪೂಜೆಯನ್ನು ತಪ್ಪಿಸಿದ ಉದಾಹರಣೆ ಇದೆಯೇ...?
ಖಂಡಿತವಾಗಿಯೂ ಇಲ್ಲ!
ಆ ಪೂಜೆಗೆ ಅದೆಷ್ಟು ಕರಾರುವಕ್ಕಾದ ಹಾಜರಿ ನಿನ್ನದು.
ಆದರೆ ನೀನು..
ದೇವರ ಮೇಲಿನ ಅಪಾರವಾದ ಭಕ್ತಿಯಿಂದಾಗಲಿ..ರುಚಿಯಾದ ಪ್ರಸಾದದ ಮೇಲಿನ ಅತಿಯಾದ ಆಸೆಯಿಂದಾಗಲಿ ಆ ಪೂಜೆಗೆ ಹೋದವನಲ್ಲ..!!
ಏಕೆಂದರೆ ಆ ಎರಡನ್ನೂ ನಾನು ನಿನ್ನಲ್ಲಿ ಎಂದಿಗೂ ಕಂಡವಳಲ್ಲ!!
ಕಂಡಿದ್ದೂ ಕೇವಲ ಹಸಿವು ಮಾತ್ರ!!
ಯಾಕೆ ನೀನು ಅಷ್ಟೊಂದು ಅನಾಥ?!!
ಸದಾ ದೇವಸ್ಥಾನದ ಜಗುಲಿಯಲ್ಲಿಯೇ ಮಲಗಿ ಎದ್ದು ಏಳುವ ನೀನು.. ಎಂದಿಗೂ ಭಕ್ತಿಯಿಂದ ಅದೇ ದೇವಸ್ಥಾನದ ದೇವರಿಗೆ ಪ್ರದಕ್ಷಿಣೆ ಬಂದದ್ದಾಗಲಿ,ಶ್ರದ್ಧೆಯಿಂದ ಕೈ ಮುಗಿದಿದ್ದನ್ನಾಗಲಿ ನಾನು ಎಂದಿಗೂ ನೋಡಿಯೇ ಇಲ್ಲ ..!
ಯಾಕೆ ಮಂಜುನಾಥ ನಿನಗೆ ಇಷ್ಟ ಇಲ್ಲವೇ..?
ಕೊನೆಯ ಪಕ್ಷ ನೀನು ಪ್ರಸಾದ ಸ್ವೀಕರಿಸಲು ಹೋಗುತ್ತಿದ್ದ ದೇವಸ್ಥಾನದ ಅಂಗಣದಲ್ಲಿದ್ದ ಆ ಸತ್ಯನಾರಾಯಣ ಸ್ವಾಮಿಯೂ ಕೂಡ ನಿನಗೆ ಇಷ್ಟ ಆಗಲಿಲ್ಲವೇ?!!
ಯಾಕೆ ಹೀಗೆ ನೀನು?
ನಾನು ನಿನ್ನನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೆನೆ...!!
ನಿರಂತರವಾಗಿ ಗಮನಿಸಿದ್ದೇನೆ..!
ಅದೇ ಶೆಟ್ಟರ ಅಂಗಡಿಯಲ್ಲಿ ಎರಡು ಹೊತ್ತು ಮೂಟೆ ಹೊರುತ್ತೀಯಾ..
ರಾತ್ರೆಗೆ ಕದ್ರಿ ದೇವಳದ ಹೊರ ಜಗುಲಿಯಲ್ಲಿ ಮಲಗಿ ನಿದ್ರೆಗೆ ಜಾರುತ್ತಿಯಾ..!
ಬೆಳಿಗ್ಗೆ ಎದ್ದು ದೇವಸ್ಥಾನದ ಅಷ್ಟೂ ಪುಷ್ಕರಣಿಯಲ್ಲಿ ಮುಳುಗಿ ಏಳುತ್ತೀಯಾ..
ಹಸಿದವಾಗಲೆಲ್ಲ ಮಂಜುನಾಥ ಸ್ವಾಮಿಯ ಪುಷ್ಕಳವಾದ ಅನ್ನ ಪ್ರಸಾದಕ್ಕಾಗಿ ತಟ್ಟೆಯ ಮುಂದೆ ತಲೆ ತಗ್ಗಿಸಿ ಕೂರುತ್ತಿಯಾ..!
ಶಿವನ ಆಲಯವೇ ಆದರೂ ದೇವಸ್ಥಾನದ ಹೊರ ಆವರಣದಲ್ಲಿ ಪ್ರತೀ ದಿನ ನಡೆಯುವ ಮಹಾಗಣಪತಿ ಹೋಮ..ನಿರಂತರವಾಗಿ ಜರುಗುವ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಶನಿವಾರದ ಶನಿಪೂಜೆಗೆ ಸರತಿ ಸಾಲಿನಲ್ಲಿ ಬಂದು ಪ್ರಸಾದಕ್ಕಾಗಿ ಕೈ ಒಡ್ಡುತ್ತಿಯಾ..
ಆದರೂ ಯಾರನ್ನೂ ಯಾವತ್ತೂ ಕಣ್ಣೆತ್ತಿಯೂ ನೋಡಿದವನಲ್ಲ.. ಮಾತಾಡಿಸಿದ್ದು ಅಂತು ಇಲ್ಲವೇ ಇಲ್ಲ..!
ನೀನು ಬಾಯಿಬಿಟ್ಟು ಮಾತನಾಡಿದ್ದನ್ನು ಕೂಡ ನಾನು ನೋಡಿಲ್ಲ!
ಏಕೆ ?
ಅಷ್ಟೊಂದು ನೋವೇ..?
ಇಷ್ಟೊಂದು ಮುಗಿಯದ ನಿರ್ಲಿಪ್ತತೆ ಏತಕ್ಕಾಗಿ..?
ಆದರೆ ನಿನಗೆ ಗೊತ್ತೇ......
ನೀನೆಂದರೆ ನನಗೆ ಮುಗಿಯದ ಆಕರ್ಷಣೆ..
ಇವತ್ತಿನಿಂದಲ್ಲ...
ಚಿಕ್ಕಂದಿನಿಂದಲ್ಲೂ..!
ಆದರೆ ಅದು ನಿನಗೆ ಗೊತ್ತಿಲ್ಲ..!
ದೇವಸ್ಥಾನಕ್ಕೆ ಬಂದಾಗಲೆಲ್ಲ ನನ್ನ ಕಣ್ಣುಗಳು ಕೇವಲ ನಿನಗಾಗಿಯೇ ಹುಡುಕಾಡುತ್ತದೆ...ತಡಕಾಡುತ್ತದೆ...
ಮತ್ತು ನಾನು ಎಷ್ಟು ಶಿವನಿಗಾಗಿ ದೇವಸ್ಥಾನಕ್ಕೆ ಬರುವೆನೋ ಅಷ್ಟೇ ನಿನಗಾಗಿಯೂ ದೇವಸ್ಥಾನಕ್ಕೆ ಬರುವೆ ಪುಷ್ಯರಾಗ...!!
ಎಷ್ಟು ಶ್ರೀಮಂತ ಹೆಸರು ನಿನ್ನದು...
ಹೊಳೆಯುವ ಮಣಿ..
ಅವಶ್ಯವಾಗಿ ಬಡವ ಇರಬಹುದು..
ಆದರೆ ನಿನ್ನಲ್ಲಿಯೇ ಯಾರಲ್ಲೂ ಇಲ್ಲದ ಹೃದಯ ಶ್ರೀಮಂತಿಕೆ ಕಂಡಿದ್ದೇನೆ.. ಅಗತ್ಯಕ್ಕಿಂತ ಹೆಚ್ಚಾಗಿಯೇ ಕಂಡಿದ್ದೇನೆ.
ನಿನ್ನಂತೆಯೇ ಇರುವ ಅನಾಥರಿಗೆ ಸಹಾಯ ಮಾಡುವುದನ್ನು ಗಮನಿಸಿದ್ದೇನೆ.
ನಿನಗೆ ಗೊತ್ತೇ..ಪ್ರತೀ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ನಾನು ಕೂಡ ಎಂದಿಗೂ ತಪ್ಪಿಸಿದವಳೇ ಅಲ್ಲ ಪುಷ್ಯರಾಗ..!!
ಏಕೆ ಗೊತ್ತೇ..
ನಾರಾಯಣನಿಗಾಗಿಯೂ ಅಲ್ಲ,ಅವನ ಸಪಾದಭಕ್ಷ್ಯಕ್ಕಾಗಿಯೂ ಅಲ್ಲ...
ನಿನಗಾಗಿ!
ಕೇವಲ ನಿನಗಾಗಿ...
ನನ್ನ ಹಾಜರಿ ಕೇವಲ ನಿನಗಾಗಿ ಪುಷ್ಯರಾಗ..
ಈ ಸೆಳೆತಕ್ಕೆ ಏನು ಹೆಸರೋ ನನಗೆ ಗೊತ್ತಿಲ್ಲ..
ಆದರೆ ಎಲ್ಲಿದ್ದರೂ ನನಗೆ ನಿನದ್ದೊಂದು ಆ ಅಮಯಾಕ ಮುಖ.. ಕನಸುಗಳಿಲ್ಲದ ಕಣ್ಣು... ನೆನಪಾಗಿ ಬಿಡುತ್ತದೆ!
ಎಷ್ಟೋ ಬಾರಿ ನಿನ್ನೆದುರೇ ಬಂದು ನಿಂತಿದ್ದೆ ಕೂಡ !
ಆದರೆ ನಿನಗದು ಗೊತ್ತಿಲ್ಲ!
ಎಷ್ಟೋ ಬಾರಿ ದೇವರ ಪ್ರಸಾದ ಸಪಾದಭಕ್ಷ್ಯಕ್ಕಾಗಿ ನೀನು ತಲೆ ತಗ್ಗಿಸಿ ಕೈಯೊಡ್ಡಿದ್ದೆ ಅಲ್ಲವೇ ಆಗ ನಿನ್ನ ಬೊಗಸೆಗೆ ಒಂದು ತುತ್ತು ಜಾಸ್ತಿಯೇ ಪ್ರಸಾದ ಹಾಕಿದವಳು ನಾನು...!
ನಿನಗದು ಗೊತ್ತಿಲ್ಲ..!
ಅಪ್ಪನಲ್ಲಿ ಪದೇ ಪದೇ ಸಾರ್ವಜನಿಕ ಸತ್ಯನಾರಾಯಣ ಪೂಜೆಗೆ ನಮ್ಮ ಮನೆಯ ಕಡೆಯಿಂದ ಕೂಡ ಒಂದು ಪೂಜೆ ಮಾಡಿಸೋಣವೇ ಅಪ್ಪ ಎಂದು ಬೇಡಿಕೆ ಇಟ್ಟಾಗಲೆಲ್ಲ ಅಮ್ಮ ಕೇಳುತ್ತಿದ್ದಳು... " ವಸು...ಇಲ್ಲಿಯವರೆಗೆ ಶಿವ ಇಷ್ಟ ಆಗುತ್ತಿದ್ದ ನಿನಗೆ ನಾರಾಯಣ ಯಾವಾಗದಿಂದ ಇಷ್ಟ ಆಗಲು ಶುರುವಾಗಿದ್ದೇ.. " ಎಂದು..
ಆದರೆ ಅಮ್ಮನಿಗೆ ಗೊತ್ತಿಲ್ಲ..
ನನಗೆ ಶಿವನ ನಂತರ... ನೀನೇ ಅತೀ ಇಷ್ಟ ಎಂದು.
ಪಾಪ ಅವಳು..
ನಿನ್ನನ್ನು ಹೇಗೆ ಎಲ್ಲರೂ ಪುರು ಎಂದು ಕರೆಯುತ್ತಾರೆಯೋ..ಹಾಗೇ ಅಮ್ಮ ನನ್ನನ್ನು ಪ್ರೀತಿಯಿಂದ ವಸು ಎಂದು ಕರೆಯುತ್ತಾಳೆ.
ಆದರೆ ವಸು ನನ್ನ ಪೂರ್ತಿ ಹೆಸರಲ್ಲ..
ನನ್ನ ಹೆಸರು " ಪುನರ್ವಸು ".
ಹೌದು ಅದೇ ಮಳೆಯ ನಕ್ಷತ್ರ..
ಜುಲೈ ತಿಂಗಳ ಮಳೆಗಾಲದಲ್ಲಿ ಅತಿಯಾಗಿ ಮಳೆ ಬಿಡದೇ ಸುರಿಯವಾಗ ಆ ನಕ್ಷತ್ರದಲ್ಲಿಯೇ ನಾನು ಹುಟ್ಟಿದ್ದೆ ಎಂದು ನನಗೂ ಅದೇ ಹೆಸರಿಟ್ಟರು..
ನಿನಗೆ ಗೊತ್ತಾ ಮೃಗಶಿರದಿಂದ ನಿಧಾನವಾಗಿ ಆರಂಭವಾಗುವ ಮಳೆ ಮಧ್ಯದಲ್ಲಿ ಆರ್ಭಟಸಿ ಕೊನೆಗೆ ಹಸ್ತ ನಕ್ಷತ್ರಕ್ಕೆ ಬರುವಾಗ ಸಂಪೂರ್ಣ ಶಾಂತವಾಗಿ ಬಿಡುತ್ತದೆಯಂತೆ.
ಅದರ ನಡುವಿನಲ್ಲಿರುವುದು ಒಂದೊಳ್ಳೆಯ ಮಳೆ ತರುವ ನಕ್ಷತ್ರಗಳೇ..
ಈ ಆರಿದ್ರಾ(ಆದ್ರಾ) ಹಾಗೂ ಹುಬ್ಬಾ ನಡುವಿನ ಆರು ಮಳೆ ನಕ್ಷತ್ರಗಳ ಮಧ್ಯೆ ಆರಿದ್ರಾದ ನಂತರ ಹಾಗೂ ಪುಷ್ಯದ ಮೊದಲು ಬರುತ್ತಾಳೆ ನೋಡು... ಅವಳೇ ಪುನರ್ವಸು. ಹೌದು ನನ್ನ ನಕ್ಷತ್ರವದು.
ನಿನಗೆ ವರಾಹಮಿಹಿರ ಗೊತ್ತಾ.ಅವನು ಪುನರ್ವಸು ಬಗ್ಗೆ ಹೇಳುತ್ತಾನೆ " ಪುನರ್ವಸೂನಾಂ ರಜಸ್ವಲಾ ಧರಿತ್ರಿಃ " ಎಂದು. ಅಂದರೆ ವಸುಂದರೆಯೇ ರಜಸ್ವಲೆ ರೀತಿ ಬಹಿಷ್ಠೆಯಾಗಿ ವಿಪರೀತ ದ್ರವಿಸುವ ಮಳೆ ಅವಳೆಂದು.ಆದರೆ ಈ ರೀತಿ ವಿಪರೀತ ದ್ರವಿಸುವ ಮಳೆಯಿಂದಾಗಿ ಕೊನೆಗೊಮ್ಮೆಒಳ್ಳೆಯದೇ ಆಗುತ್ತದೆಯೇ ವಿನಹ ಪ್ರಕೃತಿಗೆ ಕೆಟ್ಟದ್ದಲ್ಲ. ಬರಡಾಗಿರುವ ಇಳೆಯನ್ನು ಮತ್ತೆ ಸಿಂಹಾಸನದಲ್ಲಿ ಕೂರಿಸಿ ರಾಜನಂತೆ ಸಡಗರದಂತೆ ಮೆರೆಸುವವಳು ಪುನರ್ವಸು ಅಂತೆ.
ಪುಷ್ಯರಾಗ..ನಾನು ಕೂಡ ಅವಳಂತೆ ಅಬ್ಬರದ ಮಳೆ ಏನೋ ನಿಜ,ಆದರೆ ನಿನಗಾಗಿ ನಾನು ಎಂದೆಂದಿಗೂ ಸೀದಾ ಸದಾ ಹಿತವಾಗಿ ಸುರಿಯುವೆ.
ನನ್ನಲ್ಲೂ ಖಂಡಿತವಾಗಿಯೂ ಕೊಚ್ಚಿಕೊಂಡು ಹೋಗುವ ಪ್ರವಾಹ ಇದೆ...
ಆದರೆ ನಿನ್ನನಲ್ಲ..
ನಿನ್ನೊಳಗಿರುವ ನಾನರಿಯದ ನೋವನ್ನು!!
ನಾನೆಂದರೆ ಅಮ್ಮ ಅಪ್ಪನಿಗೆ ಅದೆಷ್ಟು ಇಷ್ಟ.
ನನಗೂ ಅವರೆಂದರೆ ಅಷ್ಟೇ ಇಷ್ಟ.
ಆದರೆ ನೀನೊಬ್ಬ ಇವರೆಲ್ಲರ ನಡುವೆ ನನಗೆ ಯಾಕಾಗಿ ಅಷ್ಟು ಇಷ್ಟ ಆದೆಯೋ ನನಗೆ ಅದು ಗೊತ್ತಿಲ್ಲ..!
ಅಮ್ಮ ಹೇಳಿದಂತೆ ನನಗೆ ಮಂಜುನಾಥನೇ ಎಲ್ಲಾ..
ನಾನು ಅದೆಷ್ಟು ಶಿವಭಕ್ತೆ ಗೊತ್ತಾ...
ಅವನಿಗಾಗಿ ನಾನು ಬೆಟ್ಟ ಏರುತ್ತೇನೆ..
ಅವನ ಲಿಂಗಕ್ಕೆ ಕೈಯಾರ ಅಭಿಷೇಕ ಮಾಡುತ್ತೇನೆ..
ಅನುದಿನವೂ ಶಿವಪಂಚಾಕ್ಷರಿ ತಪ್ಪಿಸಿಲ್ಲ..
ಅವನೆದರು ಶ್ರದ್ಧೆಯಿಂದ ಪ್ರಾರ್ಥನೆ ಕೂಡ ಮಾಡುತ್ತೇನೆ.
ಪುಷ್ಯರಾಗ..ನಿನಗೆ ಗೊತ್ತೇ
ನನ್ನ ಶಿವನ ಪ್ರಾರ್ಥನೆಯಲ್ಲಿ ನನಗಾಗಿ ನಾನು ಇಂದಿಗೂ ಏನನ್ನೂ ಕೇಳಿಯೇ ಇಲ್ಲ..
ಕೇಳಿದ್ದಿದ್ದರೆ ಅದು ಕೇವಲ ನಿನಗಾಗಿ ಮಾತ್ರ..
ಶಿವನಲ್ಲಿ ನಾನು ಏನು ಕೇಳುತ್ತೇನೆ ನಿನಗೆ ಗೊತ್ತೇ....
ಹೇಯ್ ಮಹಾದೇವ.. ಹೇಯ್ ಮಂಜುನಾಥ.. ನನ್ನ ಸ್ವಾಮಿ.. ನಿನ್ನ ಆಲಯದಲ್ಲಿಯೇ ಒಬ್ಬ ದಿನಂಪ್ರತಿ ಮಲಗಿ ಹಾಗೇ ಎದ್ದು ಹೋಗುತ್ತಾನೆ ಅಲ್ಲವೇ..ಅವನಿಗೊಂದು ತಣ್ಣನೆಯ ನಿದ್ದೆ,ಬೆಚ್ಚನೆಯ ಬದುಕು,ಸುಖವಾದ ಜೀವನ.. ಮುಖದಲ್ಲೊಂದು ಎಂದಿಗೂ ಬಾಡದ ನಗು.. ಇದಿಷ್ಟು ತುರ್ತಾಗಿ ದಯಪಾಲಿಸು ಭಗವಂತ... ಎಂದು ನಾನು ಅನುದಿನವೂ ಅವನಲ್ಲಿ ಪ್ರಾರ್ಥಿಸುತ್ತೇನೆ ಪುಷ್ಯರಾಗ.
ನಾನು ನಿನಗಾಗಿ ಕೇವಲ ಭಗವಂತನಲ್ಲಿ ಪ್ರಾರ್ಥಿಸಬಲ್ಲೆ ಅಷ್ಟೇ..
ಇನ್ನೂ ನೆನಪಿದೆ..
ಅದೊಂದು ದಿನ ಮಳೆಗಾಲ..
ದೇವಳದ ಅಂಗಣದಲ್ಲೂ ಬಿರುಸಾದ ಮಳೆ..
ಆ ಕ್ಷಣ ನಾನು ಮನೆಗೆ ಹಿಂದಿರುಗುತ್ತಿದ್ದೆ..
ನನ್ನ ಕೈಯಲ್ಲಿದ್ದ ಕೊಡೆ ಆ ಬಿರುಗಾಳಿಗೆ ಉಲ್ಟಾ ಪಲ್ಟ ಆಗಿ ಮುರಿದು ಎಲ್ಲೋ ಹಾರಿ ಹೋಗಿ ಬಿದ್ದಿತ್ತು..!
ಇನ್ನೇನು ಪೂರ್ತಿ ಒದ್ದೆ ಆಗುವವಳಿದ್ದೆ ನಾನು.
ಆದರೆ ಆ ಕ್ಷಣ ಮಾತ್ರದಲ್ಲಿಯೇ ನನ್ನ ತಲೆಯ ಮೇಲೊಂದು ಹಳದಿ ಬಣ್ಣದ ಕೊಡೆಯಿತ್ತು....
ಅದನ್ನು ನೀನೇ ಹಿಡಿದಿದ್ದೆ!
ನಾನು ನಿನ್ನತ್ತ ತಿರುಗಿ ಮೆಲುವಾಗಿ ಥ್ಯಾಂಕ್ಸ್ ಹೇಳಿದ್ದೆ..
ಆದರೆ ಆ ನಿನ್ನ ಕೊಡೆ ನನ್ನ ಕೈಗಿತ್ತು.. ಅದೆಲ್ಲಿಗೆ ಒದ್ದೆಯಾಗುತ್ತಾ ಹೊದೆಯೋ...
ನಾ ಹೇಳಿದ ಥ್ಯಾಂಕ್ಸ್ ಅನ್ನು ಕೂಡ ಸ್ವೀಕರಿಸುವ ವ್ಯವಧಾನವಾಗಲಿ ಆಸಕ್ತಿಯಾಗಲಿ ನಿನಗಿರಲಿಲ್ಲ..!!
ಅದು ನಿನಗೆ ಬೇಕಾಗಿಯೂ ಇಲ್ಲ.
ಆ ದಿನದ ನಾನು ಬೆಚ್ಚಗೆ ಮನೆ ಸೇರಿದ್ದೆ..
ಆದರೆ ಮನೆ ಸೇರುವವರೆಗೂ ನಾನು ರಸ್ತೆ ಬದಿಯಲ್ಲಿ ನಿಂತು ಪದೇ ಪದೇ ಹಿಂದೆ ತಿರುಗಿ ನೋಡುತ್ತಿದ್ದೆ... ನೀನೊಮ್ಮೆ ಹಾಗೇ ಹಿಂಬಾಲಿಸಿ ಬರಬಾರದೇ ಎಂದು!
ಗೊತ್ತು.. ನೀನು ಕೇವಲ ನಾನು ಎಂಬ ಕಾರಣಕ್ಕಾಗಿ ಕೊಡೆ ಹಿಡಿಯಲಿಲ್ಲ... ಕೊಡೆ ನೀಡಲಿಲ್ಲ... ಅದೂ ಅಲ್ಲದೇ ನಿನಗೆ ನಾನು ಎಂದರೆ ಯಾರು ಎಂದೇ ಗೊತ್ತಿಲ್ಲ.. ಕೇವಲ ಎಲ್ಲರಂತೆ ಒಬ್ಬಳು ಅಪರಿಚಿತೆ ನಾನಗಿದ್ದೆ ನಿನಗೆ.. ಆದರೆ ನನಗೆ ಎಲ್ಲವೂ ನೀನೇ ಆಗಿದ್ದೆ.... ಅದು ನಿನಗೆ ಗೊತ್ತಿಲ್ಲ!!
ಬಹುಶಃ ಯಾರೇ ಇದ್ದರೂ ನೀನು ನಿನ್ನ ಕೊಡೆ ನೀಡುತ್ತಿದ್ದೆಯೋ ಏನೋ..
ನನಗೆ ಗೊತ್ತು ಅಷ್ಟು ಒಳ್ಳೆಯವನೇ ನೀನು..
ಆದರೂ ಯಾಕೋ ಗೊತ್ತಿಲ್ಲ..
ನಿನ್ನೆದುರು ಬಂದು ನಿನ್ನನ್ನು ನಾನು ಮಾತನಾಡಿಸಲಾರೆ..
ಏಕೆಂದರೆ ಆ ಧೈರ್ಯವೇ ನನ್ನಲ್ಲಿ ಇಲ್ಲ..
ನಿನ್ನ ಆ ಎತ್ತರದ ನಿಲುವು..
ಅಗಲವಾದ ಎದೆ..
ನಿರ್ಲಿಪ್ತ ಮುಖಭಾವ...
ಕನಸುಗಳಿಲ್ಲದ ಕಣ್ಣುಗಳು
ಆಸೆಗಳಿಲ್ಲದ್ದ ಮನಸ್ಸು....
ಕೇವಲ ದೃಡಕಾಯ ನೀನು..
ಅಂತಹ ನಿನ್ನೆದುರು ಬಂದಾಗಲೆಲ್ಲ, ಕೇವಲ ದೂರದಿಂದಲೇ ನಿನ್ನನ್ನು ಕಂಡಾಗಲೆಲ್ಲ... ಆ ಕ್ಷಣವೇ ನನ್ನ ಹೃದಯದ ಬಡಿತದಲ್ಲಿ ಅದೆಷ್ಟು ಏರುಪೇರು..!!
ಅದಕ್ಕಾಗಿ ನಿನ್ನ ಮುಂದೆ ಬಂದು ನಾನು ಮಾತನಾಡಿಸಲಾರೆನು..
ಹಾಗಂತ ನಿನ್ನಿಂದ ಬಹುದೂರ ಕೂಡ ನಾನು ಉಳಿಯಲಾರೆನು.....!!
ಮೊನ್ನೆ ನೀನು ದೇವಸ್ಥಾನದ ಬಳಿ ಯಾವ ಖುಷಿಗೆ ಲಾಡು ಹಂಚುತ್ತಿದ್ದೆಯೋ ನನಗದು ಗೊತ್ತಿಲ್ಲ..
ನೀನು ಅನಾಥರಿಗೆ ಎಂದು ಹಂಚುತ್ತಿದ್ದ ಲಾಡುವಿಗೆ ಕೈ ಒಡ್ಡಿದವಳಲ್ಲಿ ನಾನು ಕೂಡ ಒಬ್ಬಳು...!
ನನ್ನ ಪಕ್ಕದಲ್ಲಿಯೇ ಇದ್ದ ಬೊಚ್ಚು ಬಾಯಿಯ ಒಬ್ಬಳು ವೃದ್ಧೆ ನಿನ್ನಲ್ಲಿ ಕೇಳಿದ್ದಳು "ಪುರು.. ಯಾವ ಖುಷಿಗೆ ಲಾಡು ಹಂಚುತ್ತಿದ್ದೀಯಪ್ಪಾ.." ಎಂದು.
ನನಗೂ ಹಾಗೇ ಕೇಳಬೇಕೆಂದು ಅನ್ನಿಸಿತು... ಆದರೆ ಕೇಳುವಷ್ಟು ಧೈರ್ಯ ನನಗೆಲ್ಲಿದೆ ಹೇಳು.!!
ನಿನಗೆಲ್ಲಿಯಾ ಖುಷಿ... ಬಹುಶಃ ಬೇರೆ ಯಾರದ್ದೋ ಖುಷಿಯನ್ನು ನೀನು ಹಂಚುತ್ತಿದ್ದೆಯೋ ಏನೋ... ಗೊತ್ತಿಲ್ಲ!.
ಆದರೆ ನೀನು ಆ ವೃದ್ಧೆಗೂ ಉತ್ತರವನ್ನೂ ನೀಡಲಿಲ್ಲ..
ನನ್ನ ಮುಖವನ್ನೂ ಸಹ ನೋಡಲಿಲ್ಲ...
ಆ ವೃದ್ಧೆಯ ಕೈಯಲ್ಲೊಂದು, ನನ್ನ ಕೈಯಲ್ಲೊಂದು ಲಾಡು ಇಟ್ಟು ಅಲ್ಲಿಂದ ನಡೆದು ಹೋಗಿದ್ದೆ ನೀನು..!!
ನಿನಗೆ ನಾನು ಯಾರೆಂದೇ ಗೊತ್ತಿಲ್ಲದೆಯೇ ಇರಬಹುದು ಪುಷ್ಯರಾಗ..
ಆದರೆ ನನಗೆ ನಿನ್ನನ್ನು ಭೇಟಿ ಆದ ಪ್ರತೀ ಜಾಗವೂ ಜೀವದ ಭಾಗವೇ ಆಗಿ ಹೋಗಿದೆ..
ನೀನಿಲ್ಲದೆ ಇದ್ದಾಗಲೂ ದೇವಸ್ಥಾನದಲ್ಲಿ ನಿನ್ನನ್ನು ಭೇಟಿ ಆದ ಪ್ರತೀ ಜಾಗಗಳಲ್ಲಿ ಹೋಗಿ ಸುಮ್ಮನೆ ನಿಲ್ಲುತ್ತೇನೆ ನಾನು...
ಕದ್ರಿ ಬೆಟ್ಟದಲ್ಲಿ ಮೇಲೆ ಕೆಳಗೆ ಇಳಿಯುವಾಗ..
ಬೆಟ್ಟದಲ್ಲಿರುವ ಆಂಜನೇಯನಿಗೆ ನಮಿಸುವಾಗ...
ಪಾಂಡವರ ಗುಹೆ ನೋಡುವಾಗ..
ದೇವಸ್ಥಾನದ ಗಂಟೆಯ ನಿನಾದ ಕೇಳುವಾಗ..
ಯಾರಾದರೂ ಪುಷ್ಕರಣಿಯಲ್ಲಿ ಈಜುವಾಗ..
ನನಗೆ ಕೇವಲ ನಿನ್ನ ನೆನಪೇ ಬರುತ್ತದೆ..
ಜೀವ ವೀಣೆ ಹಿತವಾಗಿ ಮೀಟಿದಂತೆ ಆಗುವುದು ಆವಾಗಲೇ..
ನೀನು ಆ ಪುಷ್ಕರಣಿಗಳಲ್ಲಿ ಅದೆಷ್ಟು ಚೆನ್ನಾಗಿ ಈಜುತ್ತೀಯಾ.. ಮೀನಿಗಿಂತಲೂ ಸೊಗಸಾಗಿ..
ಅವಶ್ಯವಾಗಿ ಜೀವದಲ್ಲಿಯೇ ಇದ್ದೀಯಾ ನೀನು.. ಆದರೆ ನಿನ್ನಲ್ಲಿ ಜೀವಂತಿಕೆಯೇ ಇಲ್ಲ!
ಕಾರ್ತಿಕ ದೀಪೊತ್ಸವದಂದು ಆ ಬೆಳಕಿನಲ್ಲಿ ಅದೆಷ್ಟು ಗಾಢವಾಗಿ ದಿಟ್ಟಿಸಿ ನೋಡಿದ್ದೆ ನಿನ್ನನ್ನು ನಾನು..
ನನ್ನ ದೀಪದ ಪಕ್ಕವೇ ನೀನೊಂದು ದೀಪ ಹೊತ್ತಿಸಿದ್ದೆ !
ಆದರೆ ನೀನು ಆ ಜಾತ್ರೆಯ ಗುಂಪಲ್ಲಿ ಫಕೀರನಂತೆ ಎಲ್ಲಿಂದಲೋ ಬಂದೆ.. ಸ್ವಲ್ಪ ಹೊತ್ತು ಕಾಣಿಸಿಕೊಂಡೆ..ದೀಪ ಹೊತ್ತಿಸಿದೆ.. ಆ ನಂತರ ಹಾಗೇ ಎಲ್ಲಿಗೋ ಮರೆಯಾಗಿ ಹೋದೆ..!
ನಿನಗೆ ಗಮನವಾಗಲಿ, ಗಮ್ಯವಾಗಿ ಎರಡೂ ಇಲ್ಲ!
ನೀನು ಹೋದ ನಂತರ ನಾನು ಅದೆಷ್ಟು ವಿಲಿವಿಲಿ..!
ಅದನ್ನು ನಾನು ಹೇಗೆ ಹೇಳಲಿ...
ಯಾಕೆ ಹೀಗೆ ನೀನು?!
ನಿನಗೆ ಗೊತ್ತಾ.. ನಾನು ಚೆನ್ನಾಗಿಯೇ ಹಾಡುತ್ತೇನೆ..
ತಕ್ಕ ಮಟ್ಟಿಗೆ ಅಮ್ಮನ ವೀಣೆಯನ್ನು ಕೂಡ ಮೀಟುತ್ತೇನೆ...
ನನ್ನ ಹಾಡಿನಲ್ಲೂ.. ವೀಣೆಯಲ್ಲೂ ಇರುವುದು ಬರೀ ನೀನೇ.
ನಿನಗೆ ಇಷ್ಟವೆಂದು ಅಮ್ಮನ ಬಳಿ ಪದೇ ಪದೇ ಮನೆಯಲ್ಲಿ ಕೂಡ ಸಪಾತಭಕ್ಷ್ಯ ಮಾಡಲು ಹೇಳುತ್ತೇನೆ.
ಅಮ್ಮ ಬೈಯ್ತಾಳೆ... ನಿನಗೇನೇ ಹುಚ್ಚು.. ಪೂಜೆಯೇ ಇರದೇ ನೈವೇದ್ಯ ಮಾಡು ಅಂತೀಯಾ...
ನೈವೇದ್ಯಕ್ಕಾಗಿ ಅಲ್ಲಮ್ಮ ಕೊನೆಯಪಕ್ಷ ತಿನ್ನುವುದಕ್ಕಾಗಿ ಶೀರ(ಕೇಸರಿ ಬಾತ್)ವನ್ನು ಆದರೂ ಮಾಡು ಎಂದು ಗೋಗೆರೆಯುತ್ತೇನೆ..
ಅವಳು ಪಾಪ..
ನಾನು ಹೇಳಿದರೆ ಮಾಡಿಕೊಡುತ್ತಾಳೆ.
ಎಷ್ಟಾದರೂ ಅಮ್ಮ ಅಲ್ಲವೇ..
ಅಷ್ಟನ್ನೂ ಬುತ್ತಿಯಲ್ಲಿ ತುಂಬಿಸಿಕೊಂಡು ದೇವಸ್ಥಾನದ ಸಮೀಪ ಯಾರಾದರೂ ಹಸಿದವರಿದ್ದರೆ ಹಂಚೋಣ ಎಂದು ನಾನು ಬಂದರೆ
ಅಲ್ಲಿ ನೀನಿರುವುದೇ ಇಲ್ಲ ಪುಷ್ಯರಾಗ..!
ಬಹುಶಃ ನೀನು ಸತ್ಯನಾರಾಯಣ ಸ್ವಾಮಿಯ ನೈವೇದ್ಯವಾದ ಸಪಾತಭಕ್ಷ್ಯ, ಮಧ್ಯಾಹ್ನದ ಮಂಜುನಾಥ ಸ್ವಾಮಿಯ ಅನ್ನಪ್ರಸಾದ ಬಿಟ್ಟರೆ.. ಬೇರೆ ಏನನ್ನೂ ಬಿಟ್ಟಿ ತಿನ್ನುವುದೇ ಇಲ್ಲವೇನೋ ಅಲ್ಲ!
ಅದು ಯಾಕೆ ಅಷ್ಟು ಒಳ್ಳೆಯವನು ನೀನು..
ಆದರೂ ದೇವರ ಮೇಲೆ ನಿನಗೆ ಭಕ್ತಿ ಇಲ್ಲ..
ಏಕೆ..?
ದೇವರು ನಿನ್ನ ಬದುಕಿನ ತುಂಬಾ ಬರೀ ಮೋಸವನ್ನೇ ಮಾಡಿದ್ದಾನೆಯೇ..?
ಶಿವನೋ.. ಹರಿಯೋ...ಯಾರಾದರೊಬ್ಬರ ಕೈ ಹಿಡಿ ಪುಷ್ಯರಾಗ ..ಅವನು ನಿನ್ನ ಕೈ ಬಿಡುವುದಿಲ್ಲ.
ನನಗೆ ಗೊತ್ತು ನಾನು ಉತ್ತರ ಧ್ರುವವಾದರೆ..
ನೀನು ದಕ್ಷಿಣ ದ್ರುವ..
ಭಾವನೆಯೇ ಇಲ್ಲದವ ನೀನಾದರೆ..
ಅತೀ ಭಾವುಕಳು ನಾನು..
ಮಾತೇ ಆಡದವ ನೀನು..
ಹಾಡುವವಳು ನಾನು..
ಪರಶಿವನೇ ಆರಾಧ್ಯ ನನಗಾದರೆ.
ದೇವರ ಮೇಲೆ ಭಕ್ತಿಯೇ ಇಲ್ಲದವನು ನೀನು.
ಆದರೂ opposite poles attracts each other ಎನ್ನುವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವಳು ನೋಡು ನಾನು...
ಬಹುಶಃ ಅದಕ್ಕಾಗಿಯೇ ಇರಬೇಕು ನನಗೆ ನಿನ್ನಲ್ಲಿ ಇಷ್ಟೊಂದು ಆಕರ್ಷಣೆ..
ಕಡಲಿನಲ್ಲಿ ನಾವೆಯೇರಿ ಹೋಗುವವರಿಗೆ ದಿಕ್ಕು ತಪ್ಪಿದಾಗಲೆಲ್ಲ ಧ್ರುವತಾರೆಯೇ ದಿಕ್ಕು ತೋರಿಸುವುದಂತೆ ಪುಷ್ಯರಾಗ..
ನಾನು ಧ್ರುವತಾರೆಯಲ್ಲ... ಆದರೆ ಅವಶ್ಯವಾಗಿ ನಿನ್ನ ಪಾಲಿನ ಪುನರ್ವಸು ಆಗಿರುವೆ.
ಮಳೆಯ ನಕ್ಷತ್ರ..
ಆ ಪುನರ್ವಸು ತುಂಬಾ ಹುಲುಸಾಗಿ ಮಳೆ ಸುರಿಸುವವಳಾದರೂ..
ನಿನಗೆಂದು ಹಿತವಾಗಿ ಹದವಾಗಿ ಸುರಿಯುವವಳು ಈ ಪುನರ್ವಸು..
ಮಳೆಯಾಗಿ ಬಂದು ನಿನ್ನ ಬರಡು ಬಾಳಿನಲ್ಲೊಂದು ನಳನಳಿಸುವ ಹೂವು ಅರಳಿಸಬೇಕೆನ್ನುವುದು ನನ್ನೊಂದು ಆಸೆ...
ಅಶ್ವಿನಿಯಿಂದ ಮೊದಲುಗೊಂಡು ರೇವತಿ ವರೆಗಿನ 27 ನಕ್ಷತ್ರಗಳು ಸಹ ಚಂದ್ರನಿಗೆ ಸ್ವಂತವಂತೆ.
ಗಗನದ ಆ ಪುನರ್ವಸುವಿನಂತೆ ನಾನು ಪೌರ್ಣಮಿಯ ಚಂದ್ರನನ್ನು ಸೇರಲಾರೆ..
ನನಗೆ ಆ ಚಂದಿರನೇ ಬೇಡ....
ಈ ನಕ್ಷತ್ರ ಎಂದೆಂದಿಗೂ ಕೇವಲ ನಿನಗಾಗಿ..
ನಿನ್ನ ಹಳದಿ ಕೊಡೆ ಈಗಲೂ ಇನ್ನೂ ನನ್ನ ಬಳಿಯೇ ಇದೆ...
ಕೇವಲ ಕೊಡೆ ಕೈಯಲ್ಲಿಟ್ಟು ಹಾಗೇ ಮೌನವಾಗಿ ಒದ್ದೆಯಾಗುತ್ತಾ ನಡೆದು ಹೋದವನೇ..
ಇನ್ನೊಮ್ಮೆ ಎಂದಾದರೂ ಜಡಿ ಮಳೆ ಸುರಿವಾಗ ಹಾಗೆಯೇ ಕೊಡೆಯಡಿಯಲ್ಲಿ ಒಂದೆರಡು ಹೆಜ್ಜೆ ಜೊತೆಯಾಗಿಯೇ ಹಾಕಲು ಸಹಕರಿಸುವೆಯಾ...?!
ಬಹುಶಃ ಸಾಧ್ಯವಿಲ್ಲ ಎಂದು ನನಗೂ ಅನ್ನಿಸುತ್ತದೆ.
ನೀನು ಬರಲಾರೆ... ನಾನೂ ಕೇಳಲಾರೆ..!
ಆದರೆ ಎಂದಿನಂತೆ ಸಪಾದಭಕ್ಷ್ಯದ ಸಲುವಾಗಿ ಆದರೂ ಬಿಡದೇ ಸತ್ಯನಾರಾಯಣ ಪೂಜೆಗೆ ಬರುತ್ತಿರು ಪುಷ್ಯರಾಗ...
ಕಾಯುತ್ತಿರುತ್ತೇನೆ ನಿನಗಾಗಿ....
ಕಡಲಿನ ಮರಳಿನಲ್ಲಿ ಎಷ್ಟೋ ಸಲ ಗೆಳತಿಯರೆಲ್ಲಾ ಅವರಿಗಿಷ್ಟದವರ ಹೆಸರು ಬರೆಯುವಂತೆ.. ನನಗೂ ಕೂಡ ಪುಷ್ಯರಾಗ - ಪುನರ್ವಸು ಎಂದು ಬರೆಯುವ ಅಂತ ಅನ್ನಿಸುತ್ತದೆ.
ಆದರೆ ನಾನು ಬರೆಯುವುದಿಲ್ಲ...!
ಏಕೆ ಗೊತ್ತೇ...?
ಕಡಲಿನ ಅಸೂಯೆ ನನಗೆ ಗೊತ್ತು ...ಅದು ಹಾಗೇ ಅಲೆಯಲೆಯಾಗಿ ಬಂದು ಅಳಿಸಿ ಹಾಕಿ ಹೋಗುತ್ತದೆ ಪುಷ್ಯರಾಗ!
ಅದಕ್ಕಾಗಿ ಬರೆಯುವುದಿಲ್ಲ...!
ನಾನೆಷ್ಟು ಹುಡುಗಿಯೋ..
ಅಷ್ಟೇ ನಿನ್ನ ಪಾಲಿನ ಹದವಾದ ಮಳೆ.
ಅಷ್ಟೇ ನಿನ್ನ ಬಾಳಿನ ಹೊಳೆಯುವ ನಕ್ಷತ್ರ.
ನಿನಗೆ ಇದೆಲ್ಲವನ್ನೂ ಹೇಳುವ ಧೈರ್ಯ ನನ್ನಲಿಲ್ಲ ನೋಡು..
ಅದಕ್ಕಾಗಿ ಹೀಗೆಲ್ಲಾ ಬರೆದು.. ನಾನೇ ಓದುತ್ತಾ ನಿರಾಳನಾಗುತ್ತಿದ್ದೇನೆ.. ಬರೀ ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುತ್ತಿದ್ದೇನೆ..
ಹೇಳಲು ಇನ್ನೂ ತುಂಬಾ ಇದೆ...
ನಿನಗೆ ನಾನು ಇಲ್ಲಿಯವರೆಗೆ ನೇರವಾಗಿ ಹೇಳಿದ್ದಾದರೂ ಏನು..
ಅದೇ..ಕೊಡೆಗಾಗಿ ಒಂದು ಥ್ಯಾಂಕ್ಸ್.
ಹೌದು ಬರೀ ಅಷ್ಟೇ...
ಖಂಡಿತವಾಗಿಯೂ ....
ತುಟಿ ಮೇಲೆ ಬಂದಂತ ಮಾತೊಂದೆ ಒಂದು..
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು!!
ಬರೀ ನಿನ್ನದೇ ನಕ್ಷತ್ರ
- ಪುನರ್ವಸು
.....................................................................................
#ಪುಷ್ಯರಾಗ
ab pacchu
moodubidire
(photo - internet)

Comments
Post a Comment