ಸಿಹಿ ಮಾವಿಗೆ ಜಯವಾಗಲಿ,ಕಾಟು ಕುಕ್ಕು ಅಮರವಾಗಲಿ..

 


#ಸಿಹಿ_ಮಾವಿಗೆ_ಜಯವಾಗಲಿ_ಕಾಟು_ಕುಕ್ಕು_ಅಮರವಾಗಲಿ..

ಮಾವು ಎಷ್ಟೇ ದೊಡ್ಡ ಮರವಾಗಿ ಬೆಳೆದು ನಿಂತರೇನು..ಮರದ ತುಂಬೆಲ್ಲಾ ಹಾಗೇ ಹೂಗಳು ಅರಳಿ ಸಿಂಗಾರಗೊಳ್ಳದಿದ್ದರೆ,ಹೇಳಿ.. ಅದೊಂದು ಮಾವಿನ ಮರವೇನು?

ಹೂವುಗಳಿಂದ ಪೀಚು ಆ ನಂತರ ಮಿಡಿ ಕಾಯಿಗಳಾಗಿ ಮರದ ತುಂಬಾ ಮಿನಿಯೇಚರ್ ಬಲ್ಬುಗಳಂತೆ,ಮರವೇ ಪೂರ್ತಿ ಮುಚ್ಚಿ ಹೋಗುವಂತೆ.. ಅವುಗಳು ನೇತಾಡುತ್ತಾ ಅಲಂಕಾರಗೊಳದಿದ್ದರೆ,ಅದೊಂದು ಮಾವಿನ ಮರ ಎಂದು ನನಗೆ ಅನ್ನಿಸುವುದೇ ಇಲ್ಲ.ಮಾವು ಆಗಿ ಹುಟ್ಟಲು ಭಾಗ್ಯ ಬೇಕು. ಕಾಯಿ,ಹಣ್ಣುಗಳನ್ನು ಹೊತ್ತುಕೊಂಡು ಮೆರೆಯಲು ಮರಕ್ಕೂ ಕೂಡ ಸೌಭಾಗ್ಯ ಬೇಕು.

ನನಗೆ ಹಣ್ಣುಗಳಲ್ಲಿ ಮಾವು ಅಂದರೆ ತುಂಬಾನೇ ಇಷ್ಟ.. ಮಾವಿನಲ್ಲಿ ಕಾಟು ಮಾವು ಮೊದಲು ಇಷ್ಟ.ಅದರದ್ದೊಂದು ಗೊರಟೆಯನ್ನು ಚೀಪಿ ಚೀಪಿ ರಸವನ್ನು ಹಾಗೇ ಸವಿಯದಿದ್ದರೆ.. ಆ ವರ್ಷ ನನ್ನ ಪಾಲಿಗೆ ಅಪೂರ್ಣ ಎಂದೇ ತಿಳಿದವನು ನಾನು. ಅದೊಂದು ತರಹದ  ಬಿಡದ ಮಾವಿನ ಮಾಯೆ..

ಕಾಟು ಮಾವಿನ ಗೆಲ್ಲುಗಳ ಇಕ್ಕೆಲಗಳಲ್ಲಿ ಒಂದೆರಡು ಹೂವಿನ ಗೊಂಚಲು ಹಾಗೇ ಇಣುಕಿ ದರ್ಶನ ಕೊಟ್ಟ ದಿನದಂದೇ ನನ್ನಲ್ಲಿ ಮೊದ ಮೊದಲು ಹುಳಿ ಹುಳಿಯಾದ ಆ ನಂತರ ಅತೀ  ಸಿಹಿಯಾದ ಕನಸೊಂದು ಹೇಳದೇ ಕೇಳದೆ ಜನ್ಮ ತಾಳುವುದು.ನನ್ನಲ್ಲಿ ಅದು ಕಾಡುವುದಿಲ್ಲ,ಹಾಗೇ ಕಾದಾಡಿ ಬಿಡುತ್ತದೆ.ಬಹುಶಃ ಅದಕ್ಕೂ ಗೊತ್ತಿರಬೇಕು ಯಾರ ಕನಸಲ್ಲಿ ಕಾದಾಡಬೇಕು ಎಂದು. ಹೌದು ಯಾವತ್ತೂ ಕಾಡುವುದು  ಎಂಬುವುದು  ಅವಳೆಂಬ  "ಅವಳು" ಆಗಿದ್ದರೆ, ಕಾದಾಡುವುದು  ಅವನೆಂಬ "ಅವನು" ಆಗಿರುತ್ತಾನೆ.ಮಾವು ಪುಲ್ಲಿಂಗ ಎಂದು ಅನಿಸುತ್ತದೆ.. ಕೇಳಿಲ್ಲವೇ ಮಾವು  ಹಣ್ಣುಗಳ ರಾಜ.ಹಾಗಾಗಿ ಮಾವು ಎಂದರೆ ಅವನು.. ಕನಸಿನಲ್ಲೂ ಕಾದಾಡುವ ಅವನು.

ಮಾವಿನ ಸ್ವಪ್ನ ಗರಿಗೆದರಿದೊಡನೆ....ಮೊದಲು ಕಾಯಿ ದೊಡ್ಡದಾಗುವುದನ್ನು ಕಾಯಬೇಕು, ಆ ನಂತರ ಒಂದು ದಿನ ಮರಕ್ಕೆ ಕಲ್ಲು ಹೊಡೆದು ನಾಲ್ಕು ಕಾಯಿ ಬೀಳಿಸಬೇಕು.ಮರದಡಿಯಲ್ಲಿ ಹಾಗೇ ಕಲ್ಲಿನಿಂದ ಜಜ್ಜಿ ಮನೆಯಿಂದ ತಂದಂಹ ಉಪ್ಪಿನ ಹುಡಿ,ಮೆಣಸಿಹುಡಿ, ಪುಡಿ ಪುಡಿಯಾಗಿ ಹಾಗೇ ಮೇಲಿಂದ ಉದುರಿಸಿ ಒಂದೆರಡು ಹುಳಿ ಮಾವು ಕಣ್ಣು ಮುಚ್ಚಿಕೊಂಡು.. ಆಹಾ..ಎಂದು ಹಲ್ಲು ಜುಮ್ಮೆನ್ನುವಂತೆ ಬಾಯಿ ಚಪ್ಪರಿಸಬೇಕು. ಇಷ್ಟು ಮಾಡದಿದ್ದರೆ ನೀವು, ಅದೊಂದು ಮಾವಿನ ಕಾಯಿಗೆ ಮಾಡುವ ಅವಮಾನವೇ ಸರಿ. ನೀವೇ ಹೇಳಿ ಮಾವಿನಕಾಯಿಯಲ್ಲಿ ಅದೆಷ್ಟು ಬಾಲ್ಯ ಇದೆಯಲ್ಲ... ಈಗಲೂ ಇದೆ,ಮರಕ್ಕೆ ಕಲ್ಲು ಹೊಡೆದು ಕಾಯಿ ಉದುರಿಸುವ ಮನಸ್ಸು ಮಾಡಬೇಕು.. ಜೊತೆಗೆ ಜೇಬಿನಲ್ಲಿ ಕಾಗದಲ್ಲಿ ಮಡಚಿ ತಂದ ಉಪ್ಪಿನ ಹುಡಿ, ಮೆಣಸಿನ ಹುಡಿಯೂ ಸ್ವಲ್ಪ ಇರಲಿ..

ಮಿಡಿ ಹೋಗಿ ಬಲಿತು ಕಾಯಿ ಆಗುವ  ಮೊದಲು ಅಮ್ಮನ ಉಪ್ಪಿನಕಾಯಿಯ ಭರಣಿಗೆ ಅವು ಉಲ್ಲಾಸದ ದಿನಗಳು.ಹೊಸ ಮಿಡಿ ಅತಿಥಿಗಳ ಆಗಮನಕ್ಕಾಗಿ ಭರಣಿ ತುದಿಗಾಲಲ್ಲಿ ಕಾಯುತ್ತ ನಿಲ್ಲುತ್ತದೆ.ಸೊನೆ ಸುರಿಯುವ ಕಾಟು ಕುಕ್ಕು(ಮಾವು) ಗಳನ್ನು ದೋಟಿ ಕಟ್ಟಿ ಕೊಯ್ದು,ಮರದಡಿಯಲ್ಲಿ ಬೀಳುವ ಅವುಗಳನ್ನು ಬುಟ್ಟಿಯಲ್ಲಿ ಹೆಕ್ಕಿ ಮನೆಗೆ ತಂದರೆ.. ಅಮ್ಮ ಅದಕ್ಕೆ ಖಾರದ ಮೆಣಸು ಹಾಗೂ ಸಾಸಿವೆ ಮಸಾಲೆಯನ್ನು ಅರೆದು ಸೊಸೆಯನ್ನು ಮನೆಗೆ ತುಂಬಿಸಿಕೊಂಡಂತೆ ಮಿಡಿಗಳನ್ನು ಭರಣಿಗೆ ಶ್ರದ್ಧೆಯಿಂದ ತುಂಬಿಸಿಕೊಳ್ಳುತ್ತಾಳೆ.ಮಳೆಗಾಳದ ಪುನರ್ವಸು ಮಳೆ ಜೋರು ಬಿಡದೇ ಸುರಿಯುತ್ತಿರುಲು..ಬಿಸಿ ಬಿಸಿ ಕುಚಲಕ್ಕಿ ಗಂಜಿಗೆ ಅಮ್ಮನ ಭರಣಿಯೊಳಗಿನ ಉಪ್ಪಿನಕಾಯಿಗಿಂತ ಒಳ್ಳೆಯ ಜೋಡಿ ಇನ್ನೆಲ್ಲಿದೆ.. ಆಹಾ.. ಕಾಟು ಮಾವಿಗೆ ಸ್ವರ್ಗ ದಾರಿ ಎಷ್ಟು ಸರಿಯಾಗಿ ತಿಳಿದಿದೆ.

ಆ ನಂತರ ಕಾಯಿ ಹೋಗಿ ಹಣ್ಣಾಗುತ್ತದೆ.ಹಣ್ಣಾಗುವ ಮೊದಲು  ಕಾಟು ಮಾವಿನಕಾಯಿಯಲ್ಲಿ ಮಾಡಿದ  ಖಾರದ  ಚಟ್ನಿಯಲ್ಲಿ ಎರಡು ಬಟ್ಟಲು ಹೆಚ್ಚಿಗೆ ಗಂಜಿ ಊಟ ಮಾಡದೇ ಎದ್ದರೆ ಅದು ನೀವು ಗಂಜಿ ಊಟಕ್ಕೆ ಮಾಡುವ ಅವಮಾನ.ಮಾವು ಹಣ್ಣಾದ ನಂತರ ಮಾತ್ರ ಅದು ನಿಜವಾಗಿಯೂ ರಾಜನೇ..ಮುಂದೆ ಬರೀ ಮಾವಿನ ಹಣ್ಣಿನ ಬಹು ಪರಾಕುಗಳೇ.. ಅದಕ್ಕೆ ಸಾಕಷ್ಟು ಅರ್ಹತೆ ಮಾವಿಗೂ ಕೂಡ ಪಡೆದುಕೊಂಡಿದೆ.

ಮಾವಿನಿಂದ ಏನು ಮಾಡಲಾಗುವುದಿಲ್ಲ ಹೇಳಿ. ಎಲ್ಲವೂ ಮಾಡಬಹುದು. ನಮ್ಮ ಮನೆಯ ಬಳಿ ಇದ್ದದ್ದೇ ಬರೀ ಕಾಟು ಮಾವುಗಳು.ಹಾಗಾಗಿ ಎಂತಹ ಸೊಗಸಾದ ದೊಡ್ಡ ದೊಡ್ಡ ಮಾವುಗಳು ಮಾರುಕಟ್ಟೆಯ ಪ್ರೂಟ್ಸ್ ಅಂಗಡಿಯಲ್ಲಿ ಲುಕ್ಕು ಕೊಟ್ಟು ನನ್ನನ್ನೇ ಇಣುಕಿ ಇಣುಕಿ ನೋಡಿದರೂ ಕೂಡ,ಮನೆಯ ಬೇಲಿಯಲ್ಲಿದ್ದ ಮರದಲ್ಲಿ ಆಗುತ್ತಿದ್ದ ಪುಟ್ಟದಾದ ಕಾಟು ಮಾವುಗಳ ಕಡೆಗೆಯೇ ನನ್ನಲ್ಲಿ ತೀವ್ರವಾದ ಆಕರ್ಷಣೆ ಹಾಗೂ  ಮುಗಿಯದ ಮೋಹ ಇದ್ದದ್ದು.. ಏಕೆಂದರೆ ಕಾಟು ಮಾವಿನಕಾಯಿಯಿಂದ ಎಲ್ಲವೂ ಮಾಡಬಹುದು. ಕಷಿ ಮಾವು ಹಣ್ಣಿನ ನಂತರ ಮಾತ್ರ ರಾಜ ಆದರೆ.. ಕಾಟು ಮಾವು ಬೆಳೆಯುತ್ತಲೂ ರಾಜನೇ.. ಹಣ್ಣಾದ ನಂತರವೂ ಮಹರಾಜನೇ..

ಅಮ್ಮ ಮಾವನ್ನು ಹಲಸಿನ ಸೋಳೆಯಂತೆಯೇ ಉಪ್ಪು ನೀರಿನಲ್ಲಿ ಹಾಕಿಡುತ್ತಿದ್ದಳು. ಅದನ್ನು ಆ ನಂತರ ಚಟ್ಟಿ ಮಾಡಿಯೋ,ಇಲ್ಲವೇ ಗಂಜಿಗೆ ಕಿವುಚಿ ತಿನ್ನಲು ಬಹಳ ರುಚಿ. ಕಾಟು ಮಾವು ಹಣ್ಣಾಗಿ ಬಿದ್ದಾಗ ಅದನ್ನು ಕೆಂಡದಲ್ಲಿ ಸುಟ್ಟ ಮೆಣಸಿನೊಂದಿಗೆ ನುರಿದು ಮಾಡುವ ಉಪ್ಪು- ಮುಂಚಿ(ಒಣ ಮೆಣಸು)ಬಡವರ ಬಂದು,ಹಣ್ಣಾದ ಮಾವಿಗೆ ಮಾಡುವ ಕುಕ್ಕು ಸಾಸಿಮಿ(ಸಾಸಿವೆ)ಯ ಸತ್ಕಾರ.. ಆಹಾ.. ಕೈ ಕೂಡ ನೆಕ್ಕಿ ನೆಕ್ಕಿ ಊಟ ಮಾಡುವಷ್ಟು ಪರಿಮಳ. ಕಾಟು ಹಣ್ಣಿನ ಮೆಣಸ್ಕಾಯಿ(ಮಾವಿನ ಸಾಂಬಾರ್) ಯಲ್ಲಿ ಒಂದಾದರೂ ಗೊರಟೆಯನ್ನು ಚೀಪಿ ಚೀಪಿ ತಿಂದರೆನೇ  ಮಾವಿಗೂ ಸಮಧಾನ, ಅಡುಗೆ ಮಾಡಿದ ಅಮ್ಮನಿಗೂ ಸಮಾಧಾನ. ಮಾವಿನ ಹಣ್ಣಿನ ಪಲ್ಪು ತೆಗೆದು ಬಿಸಿಲಲ್ಲಿ ಒಣಗಿಸಿ ಮಾಡುವ  ಮಾಂಬಳ ಬೇಕೆನಿಸುವಾಗ ತಿನ್ನಬಹುದಾದ ಒಂಥರಾ ಕಟ್ಟಾ ಮಿಠಾ.. ಇದಕ್ಕಾಗಿಯೇ ನನಗೆ ಬಹುಪಯೋಗಿ ಕಾಟು ಮಾವು ಇಷ್ಟ. ಗತ್ತಿನ ಕಷಿ ಮಾವಿಗೆ ಎಲ್ಲಿದೆ ಇಂತಹ ಸೌಭಾಗ್ಯಗಳು..

ಬೇಲಿಯಲ್ಲಿ ಅರಳಿದ ಹೂವಿಗೆ  ಹೇಗೆ ಜೇನು ಹುಳುಗಳು ಮಕರಂದಕ್ಕಾಗಿ ಪ್ರತೀ ಕ್ಷಣವೂ ಜೋತು ಬೀಳುತ್ತವೆಯೋ...ಅದೇ ರೀತಿ ಬೇಲಿಯ ಎತ್ತರದ ಕಾಟು ಮಾವಿನ ಮರದಲ್ಲಿ ಮಾವು ಹಣ್ಣಾದಾಗ, ಅದರದ್ದೊಂದು ಉದುರುವಿಕೆಗಾಗಿ,ಜೋರಾದ ಗಾಳಿ ಅಲ್ಲಿಯೇ ಬೀಸಲಿ ಎಂದು.. ಕ್ಷಣ ಕ್ಷಣದ ಪ್ರತೀಕ್ಷೆ ಮಾಡುತ್ತಿದ್ದ ಒಂದು ಕಾಲದ ಪುಟ್ಟ ಹುಡುಗ ನಾನು.

ಈಗ ಕೂಡ ಎಂತಹ ಮಾವು ಮಾರುಕಟ್ಟೆಯಲ್ಲಿ ಇದ್ದರೂ ನನಗೆ ಈಗಲೂ ಕಾಟು ಮಾವು ಅಂದರೆ ಇಷ್ಟವೇ. ಆದರೆ ಜೊತೆ ಜೊತೆಗೆ ಊರಿನ ನೆಕ್ಕರೆ,ಗಿಳಿ ಕುಕ್ಕುಗಳು ಕೂಡ.ಊರಲ್ಲಿ ಎಲ್ಲಾ ಕಡಿದು ಕಡಿದು ಈಗ ಕೆಲವೇ ಕೆಲವು ಕಾಟು ಕುಕ್ಕಿನ ಮರ ಉಳಿದಿದೆ.ಹಿಂದಿನಂತೆ ಅವುಗಳು ಕೂಡ ಸೊಂಪಾಗಿ ಹಣ್ಣು ಉದುರಿಸುವುದಿಲ್ಲ... ಹಣ್ಣು ಉದುರಿಸಿದರೂ ಅದನ್ನು ಹೆಕ್ಕಲು ಓಡುವ ಮಕ್ಕಳು ಅದರ ಸುತ್ತಲು ಇಲ್ಲ... ಗಾಳಿಯೇನೋ ಈಗಲೂ ಜೋರಾಗಿ ಬೀಸುತಿದ್ದೆ. ಮರಕ್ಕೆ ಹಣ್ಣು ಜಾಸ್ತಿ ಕೊಡಲೂ ಮನಸ್ಸಿಲ್ಲ... ಅದೇ ರೀತಿ ಉದುರಿಸಲೂ ಕೂಡ.. ಉಲ್ಲಾಸದಿಂದ ಹೆಕ್ಕುವ ಕೈಗಳು ಇದ್ದರೆ ಮಾವು ಕೂಡ ಬೇಕಾದಷ್ಟು ಕಾಯಿ ಬಿಟ್ಟು, ಹಣ್ಣು ಉದುರಿಸುತ್ತಿತ್ತೋ ಏನೋ.. ಯಾರೂ ಅದರ ಬಳಿ ಸಾಗದೇ ಅದು ಈಗ ಏಕಾಂಗಿ.ಎತ್ತರದಲ್ಲಿ ನಿಂತುಕೊಂಡು ಹತ್ತಿರ ಬರುವ ಮಕ್ಕಳಿಗಾಗಿ ಮಾವಿನ ಮರವೂ ಕೂಡ ಹುಡುಕಾಡುತ್ತಿದೆ... ತಡಕಾಡುತ್ತಿದೆ.. ಅದರದ್ದೊಂದು ಮುಗಿಯದ ಪ್ರತೀಕ್ಷೆ.ಕೊನೆಗೆ ದನಗಳು ತಿಂದೇ ಮರದಡಿಯಲ್ಲಿ ಬಿದ್ದ ಈ ಕಾಟು ಮಾವಿನಹಣ್ಣುಗಳು ಖಾಲಿ ಆಗುವುದು.

ಎಲ್ಲಿಂದಲೋ ಹೆಕ್ಕಿ ತಂದ ಒಂದಷ್ಟು ಕಾಟು ಮಾವು,ಪೇಟೆಯ  ಬುಟ್ಟಿಗಳಲ್ಲಿ ಬಂದು ಈಗ,ನೀಲಂ,ಮಲ್ಲಿಕ, ರಸಪುರಿ, ತೋತಪುರಿಗಳ ಪಕ್ಕವೇ ಗತ್ತಿನಿಂದ ಕೂತಿರುವುದನ್ನು ಮೊನ್ನೆ ನೋಡಿದೆ.ಹಿಂದೆ ಅಂತಹ ರಾಜ ಮರ್ಯಾದೆ ಈ ನಮ್ಮ ಕಾಟು ಮಾವಿಗೆ ಎಲ್ಲಿ ಇರುತ್ತಿತ್ತು.ಅದನ್ನು ಕಂಡು  ಹತ್ತಿರ ಹೋಗಿ ಸುಮ್ಮನೆ ರೇಟು ಕೇಳಿದೆ. ಕೆಜಿಗೆ 140 Rs ಅಂದರು. ಮನಸ್ಸಿನಲ್ಲಿಯೇ ಅಂದುಕೊಂಡೆ, ಆಹಾ.. ಕಾಟು ಕುಕ್ಕಿನ  ಭಾಗ್ಯವೇ.. ಎಂದು. ಅದೇ ರೀತಿ ಆ ಕೂಡಲೇ.. ಜೋರಾಗಿ ಗಾಳಿ ಬಂದಾಗ ಚಿಕ್ಕಂದಿನಲ್ಲಿ ಮರದ ಬುಡಕ್ಕೆ ಹಣ್ಣು ಹೆಕ್ಕಲು ಓಡುತ್ತಿದ್ದ ನಾನು ಹಾಗೂ ಮರದಡಿಯಲ್ಲಿ ನಿಂತುಕೊಂಡು ಕಾಟು ಕುಕ್ಕನ್ನು ಬಾಯಿಗೆ ಹಾಕಿ ಹಾಗೇ ಲೋಕದ ಪರಿವೆಯೇ ಮರೆತು  ಜಗಿಯುತ್ತಿದ್ದ ಹಳ್ಳಿಯ ಹಸುಗಳ ದೃಶ್ಯವೇ ಕಣ್ಣ ಮುಂದೆ ಒಮ್ಮೆ ಪಾಸಾಗಿ ಬಿಟ್ಟಿತು...

ಸಿಹಿಯಾದ ಮಾವಿಗೆ ಜಯವಾಗಿಲಿ.. ಪ್ರಿತಿಯ ಕಾಟು ಕುಕ್ಕು ಅಮರವಾಗಲಿ.. 😌

.....................................................................................

#ಮಾ_ಎಂದರೆ_ಮಾವು 🧡💛

ab pacchu
moodubidire


Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..