ನಾನು ಮತ್ತು ನನ್ನ ಕೈಚಳಕ
ಚಿಕ್ಕಂದಿನಿಂದಲೇ ನನ್ನದು ಕರ್ಲಿ ಹೇರ್. ಮ್ಯಾಗಿ ನೂಡಲ್ಸ್ ಅನ್ನು ಸಣ್ಣದಾಗಿ ಕಟ್ ಮಾಡಿಕೊಂಡು ತಲೆಯ ಮೇಲೆ ಎಲ್ಲಾ ಮೆತ್ತಿಕೊಂಡರೆ ಹೇಗೇ ಕಾಣಿಸುತ್ತದೆಯೋ ಹಾಗೆ ಇತ್ತು ನನ್ನ ತಲೆಕೂದಲು. ನನಗೆ ಆವಾಗ ಅದು ತುಂಬಾನೇ ಕಿರಿಕಿರಿ ಅಂತ ಅನ್ನಿಸುತ್ತಿತ್ತು.ದೇವರೇ ನನಗೆ ಯಾಕೇ ಬೇರೆಯವರ ಹಾಗೇ ನೈಸ್ ಹೇರ್ ಇಲ್ಲ ಅಂತ ತುಂಬಾನೇ ಬೇಜಾರು ಪಟ್ಟುಕೊಳ್ಳುತ್ತಿದ್ದೆ.
ಈಗ ನೋಡಿದ್ರೆ ಅದೇ ಸ್ಟೈಲ್ ಅಂತೆ.ಹೆಚ್ಚಿನವರಿಗೆ ಈಗ ಕರ್ಲಿ ಹೇರ್ ಇಷ್ಟ. ಕೆಲವರು ಗೆಳೆಯರು ನನ್ನಲ್ಲಿ ಹೇಳಿದ್ದು ಕೂಡ ಇದೆ. ನಿಂಗೆ ಚಂದ ಅಲಾ.. ಕರ್ಲಿ ಹೇರ್ ಉಂಟು,ನಮ್ಗೆಲ್ಲಾ ಇಲ್ಲ, ನಿಂದು ಚ್ಯಾನ್ಸ್ ಮರ್ರೆ ಅಂತ. ನಿಜವಾಗಿಯೂ ನನಗೆ ಕಿರಿಕಿರಿ ಅಂತ ಅನ್ನಿಸುತ್ತಿದ್ದ ಕರ್ಲಿ ಹೇರ್ ಮುಂದೊಂದು ದಿನ, ನನಗೆ ಇಷ್ಟೊಳ್ಳೆಯ compliment ಕೊಡಬಲ್ಲದು ಅಂತ ಆವತ್ತು ನನಗೆ ರಮೇಶಣ್ಣ ನ ಸೆಲೂನ್ ನಲ್ಲಿ ಕುಳಿತುಕೊಂಡು ನೀಟಾಗಿ ಕರ್ಲಿ ಹೇರ್ ಗಳನ್ನು ಕತ್ತರಿಸಿಕೊಳ್ಳುತ್ತಿದ್ದಾಗ ಒಮ್ಮೆಯೂ ಅನಿಸಿರಲಿಲ್ಲ.
ಊರಿನಲ್ಲಿ ಇದ್ದದ್ದು ರಮೇಶಣ್ಣನದ್ದೊಂದೇ ಸೆಲೂನ್. ಪೋಸ್ಟ್ ಆಫೀಸ್ ಪಕ್ಕವೇ ಅವರ ಸೆಲೂನ್. ಅವರು ಪರಿಚಯದವರೇ. ಅವರ ಮಗ ನನ್ನ ಕ್ಲಾಸ್ ಮೇಟ್. ಬಾಲ್ಯದ ಹತ್ತು ಹಲವು ನೆನಪುಗಳಲ್ಲಿ ರಮೇಶಣ್ಣ ಸೆಲೂನ್ ಕೂಡ ಒಂದು. ಒಂದನೇ ತರಗತಿಯಿಂದ ಏಳನೇ ತರಗತಿಗೆ ಹೋಗುವವರೆಗೂ ಆ ಊರಿನಲ್ಲಿ ನಮೆಗಲ್ಲಾ ಹೇರ್ ಕಟ್ಟಿಂಗ್ ಅಂದರೆ ರಮೇಶಣ್ಣ, ಮತ್ತು ರಮೇಶಣ್ಣ ಮಾತ್ರ ಆಗಿದ್ದರು.ತುಂಬಾ ಚಿಕ್ಕಂದಿನಲ್ಲಿ ಅಪ್ಪನ ಸೈಕಲ್ ಹತ್ತಿ ಅಪ್ಪನ ಜೊತೆ ಅವರ ಸೆಲೂನ್ ಗೆ ಹೋಗುತ್ತಿದ್ದರೆ ನಂತರದ ದಿನಗಳಲ್ಲಿ ಸ್ವಲ್ಪ ದೊಡ್ಡವನಾದ ಮೇಲೆ ಒಬ್ಬನೇ ಹೋಗಲು ಅಭ್ಯಾಸಿಸಿದೆ. ಹೆಚ್ಚಾಗಿ ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟ ಮೇಲೆ ಅಲ್ಲಿಗೆ ಹೋಗುತ್ತಿದ್ದದ್ದು ರೂಡಿ. ಶಾಲೆಯಿಂದ ಮನೆಗೆ ಹೋಗುವ ದಾರಿಯಲ್ಲಿಯೇ ಇತ್ತು ಅವರ ಸೆಲೂನ್.
ಅವರ ಸೆಲೂನ್ ನಲ್ಲಿ ಅವರೊಬ್ಬರೇ ಇದ್ದದ್ದು. ಬೇರೆ ಗಿರಾಕಿ ಮೊದಲೇ ಅಲ್ಲಿದ್ದರೆ ಸ್ವಲ್ಪ ಹೊತ್ತು ಕುಳಿತುಕೊಂಡು ಅಲ್ಲೇ ಇದ್ದ ಉದಯವಾಣಿ ಪೇಪರ್ ಒದ್ತಾ ಇದ್ದೆ. ರಮೇಶಣ್ಣ ಸೆಲೂನ್ ನಲ್ಲಿ ಇದ್ದ ಕನ್ನಡಿ ಅದೆಷ್ಟು ವಿಶಾಲ. ನನಗೆ ಅದೇ ಆಕರ್ಷಣೆಯ ಕೇಂದ್ರ ಬಿಂದು. ಮನೆಯಲ್ಲಿ ಎಲ್ಲಾ ಅಷ್ಟು ದೊಡ್ಡ ಕನ್ನಡಿ ಇಲ್ಲ ಅಲ್ಲ ಅದಕ್ಕೆ.ಅದರ ಕಾರ್ನರ್ ಗಳಲ್ಲಿ ಸಚಿನ್ ತೆಂಡೂಲ್ಕರ್ ಸೆಂಚೂರಿ ಬಾರಿಸಿ ಮೇಲೆ ಆಕಾಶ ನೋಡುವಂತಹ ,ಗಂಗೂಲಿ ಕ್ರೀಸ್ ಬಿಟ್ಟು ಮುಂದೆ ಬಂದು ಸಿಕ್ಸರ್ ಹೊಡೆಯುವಂತಹ, ಶೇನ್ ವಾರ್ನ್ ಕೈ ತಿರುಗಿಸಿ ಲೆಗ್ ಸ್ಪಿನ್ನಿಂಗ್ ಬೌಲಿಂಗ್ ಮಾಡುವಂತಹ.. ನ್ಯೂಸ್ ಪೇಪರ್ ಚಿತ್ರಗಳನ್ನು ಕಟ್ಟಿಂಗ್ ಮಾಡಿ ಅಲ್ಲಿ ಅಂಟಿಸಿದ್ದರು.ನಾನು ಅಲ್ಲಿಗೆ ಹೋದಾಗಲೆಲ್ಲ ಕಣ್ಣು ಬಿಟ್ಟುಕೊಂಡು ಅದನ್ನೇ ನೋಡುತ್ತಿದ್ದೆ. ನಿಜವಾಗಿಯೂ ನನಗೆ ಕ್ರಿಕೆಟ್ ಅಂದರೆ ಆಗಲೂ ಭಯಂಕರ ಆಸಕ್ತಿಯೇ.
ನಂತರ ನನ್ನ ಸರದಿ ಬಂದಾಗ ಹೋಗಿ ಸೀಟನಲ್ಲಿ ಕುಳಿತುಕೊಳ್ಳುತ್ತಿದ್ದೆ. ತುಂಬಾ ಚಿಕ್ಕ ಇದ್ದಾಗ ಅವರೇ ನನ್ನನ್ನು ಎತ್ತಿ ಸೀಟಿನ ಮೇಲೆ ಕುಳಿತುಕೊಳ್ಳಿಸುತ್ತಿದ್ದರು. ಆಹಾ ಎಷ್ಟು soft ಆದ ಸೀಟು, ಸೆಲೂನ್ ಗಳಲ್ಲಿ ಇರೋ ಸೀಟು ಸಹ ಯಾವ ಮನೆಯಲ್ಲೂ ಇರಲು ಸಾಧ್ಯವೇ ಇಲ್ಲ. ಅಂತಹ ಮೆತ್ತನೆಯ ಸೀಟನಲ್ಲಿ ಕುಳಿತುಕೊಳ್ಳಲು ನಾನು ಮತ್ತೆ ಒಂದು ತಿಂಗಳು ಕೂದಲು ಬರುವುದನ್ನೇ ಕಾಯಬೇಕಾಗಿತ್ತು. ನನಗಂತೂ ಆ ಸೀಟಿನ ಕುಳಿತುಕೊಳ್ಳುವ ಆಸೆಗಾಗಿ ವಾರ ವಾರವೂ ಬಂದು ಕಟ್ಟಿಂಗ್ ಮಾಡಿಸಿಕೊಂಡು ಹೋಗುವ ಅಂತ ಮನಸ್ಸೇನೋ ಇತ್ತು ಆದರೆ practically ಆದು ಸಾಧ್ಯವಿಲ್ಲದ ಮಾತು.
ಅವರಿಗೆ ಹಾಗೆ ಕೂದಲು ಕಟ್ ಮಾಡಿ ಹೀಗೆ ಕೂದಲು ಕಟ್ ಮಾಡಿ ಎಂದು ಹೇಳಬೇಕಾಗಿಲ್ಲ.ಚಿಕ್ಕಂದಿನಲ್ಲಿ ಆಗ ಎಲ್ಲರದ್ದೂ ಒಂದೇ ಸ್ಟೈಲ್, ನೀಟಾಗಿ ಕೂದಲು short ಮಾಡಿ ಬಿಡುವುದು. ಕೂದಲು ಕಡಿಮೆ ಇದ್ದಷ್ಟು ಒಳ್ಳೆಯದು, ಒಟ್ರಾಸಿ ಕೂದಲು ಬೇಗ ಬರಬಾರದು ಅದೊಂದೇ ಕೂದಲು ಕಟ್ಟಿಂಗ್ ಮಾಡಿಸುವ ಉದ್ದೇಶ. ನನಗೆ ಮಾತ್ರ ನನ್ನ ಕರ್ಲಿ ಕೂದಲು ಮೊದಲು ಹೋಗಿಬಿಡಬೇಕು ಎಂಬುವುದೊಂದೇ ಉದ್ದೇಶ ಮತ್ತು ಚಿಂತೆ.
ನಾನು ಅವರ ಬಳಿ ಕೇಳುತ್ತಿದ್ದೆ "ಕಟ್ಟಿಂಗ್ ಮಾಡಿ ಮಾಡಿ ದೊಡ್ಡವನಾದ ಮೇಲೆ ಈ ಗುಂಗುರು ಕೂದಲು ಎಲ್ಲಾ ಹೋಗುತ್ತೆ ಅಲಾ.. "ಎಂದು. ಅವರು ನಗುತ್ತಾ "ನೀನು ಏನೇ ಮಾಡು ನಿನಗೆ ಮಾತ್ರ ಇದೇ ಪಿಕ್ಸು.." ಅಂತ ಹೇಳುತ್ತಿದ್ದರು. ಆಗ ಎಲ್ಲಾ ಶೇ.. ಯಾಕಾಗಿ ಆದರೂ ನಂಗೆ ಈ ಕರ್ಲಿ ಹೇರ್ ಬಂತಪ್ಪ ಎಂದು ಬೇಜಾರು ಆಗುತ್ತಿತ್ತು.
ಕಟಿಂಗ್ ಮಾಡಿಸಿದ ಒಂದೆರಡು ದಿನಗಳಲ್ಲಿಯೇ ಕೂದಲು ಪುನಃ ಕರ್ಲಿ ಆಗಿ ಬಿಡುತ್ತಿತ್ತು. ಬಾಚಣಿಗೆ ಹಾಕಿ ಬಾಚಲು ಕೂಡ ಆಗುತ್ತಿರಲಿಲ್ಲ.ರಮೇಶಣ್ಣ ಸೆಲೂನ್ ಗೆ ಕಟ್ಟಿಂಗ್ ಮಾಡಲು ಹೋದಾಗಲೆಲ್ಲ ಅವರಿಗೆ ಕೂಡ ನನ್ನ ಕೂದಲನ್ನು ಹಾಗೇ ಕಟ್ ಮಾಡ್ಲಿಕ್ಕೆ ಕಷ್ಟ ಆಗುತ್ತಿತ್ತು. ಅದಕ್ಕಾಗಿ ಚೆನ್ನಾಗಿ ನೀರು spray ಮಾಡುತ್ತಿದ್ದರು. ನನ್ನ ಕರ್ಲಿ ಕೂದಲಿಗೆ ಅಂತು ಎಲ್ಲರಿಗಿಂತ ಜಾಸ್ತಿಯೇ ನೀರು spray ಆಗುತ್ತಿತ್ತು.ಎಲ್ಲಾ ಮುಖದ ಮೇಲೆ ಕೊನೆಯಲ್ಲಿ ಮುಖ ಒರೆಸಲು ಮುಖಕ್ಕೆ ಕೂಡ ನೀರು spray ಮಾಡುತ್ತಿದ್ದರು. ನನಗೆ ಹೇರ್ ಕಟ್ಟಿಂಗ್ ನಲ್ಲಿ ಬೆಸ್ಟ್ ಪಾರ್ಟ್ ಅಂದರೆ ಅದೇ. ತೋಟದಲ್ಲಿ sprinkler ನೀರನ್ನು ಮುಖಕ್ಕೆ ಒಡ್ಡಿದಾಗ ಹೇಗೆ ಖುಷಿಯಾಗುತ್ತೋ ಅಷ್ಟೇ ಖುಷಿ ಸೆಲೂನ್ ನಲ್ಲಿ ಮುಖಕ್ಕೆ ನೀರು spray ಮಾಡಿಸಿಕೊಂಡಾಗ ಆಗುತ್ತಿತ್ತು. ನಂಗೇನೋ ತುಂಬಾ ಹೊತ್ತು ನೀರು spray ಮಾಡುತ್ತಲೇ ಇರಲಿ ಅನ್ನೋ ಆಸೆ. ಅಮ್ಮನ ಬಳಿ ಕೂಡ ಒಮ್ಮೆ ಹೇಳಿದ್ದೆ, ಅಮ್ಮ ಆ ರಮೇಶಣ್ಣ ಸ್ವಲವೇ ಮುಖಕ್ಕೆ ನೀರು ಹಾಕುವುದು ಎಂದು. ಅದಕ್ಕೆ ಅವಳು " ಇದ್ದ ಅಷ್ಟೂ ನೀರನ್ನು ನಿನಗೊಬ್ಬನಿಗೆ spray ಮಾಡಿದರೆ ರಮೇಶಣ್ಣ ಮತ್ತೆ ಬೇರೆ ಗಿರಾಕಿಗಳಿಗೆ ನೀರು spray ಮಾಡುವುದು ಬೇಡವೇ .. ಮತ್ತು ನೀನು ಅಲ್ಲಿ ಸ್ನಾನ ಮಾಡಲು ಹೋಗುವುದು ಅಲ್ಲಾ, ಕಟ್ಟಿಂಗ್ ಮಾಡಲು ಹೋಗುವುದು , ಸ್ನಾನ ಏನಿದ್ದರೂ ಮನೆಗೇ ಬಂದೇ ಮಾಡಿಕೊಳ್ಳಬೇಕು.." ಎಂದು ಹೇಳುತ್ತಿದ್ದಳು. ಅವಳು ಹೇಳಿದ್ದು ಕೂಡ ಕರೆಕ್ಟೇ.
ಶೇವಿಂಗ್ ಮಾಡಿಸಿಕೊಳ್ಳುವುದಾದರೆ ಮಾತ್ರ ಮುಖದ ತುಂಬೆಲ್ಲಾ ಬೇಕಾದಷ್ಟು ನೀರು spray ಮಾಡುತ್ತಾರೆ ಎನ್ನುವುದು ನನಗೆ ನಾನು ಸೆಲೂನಿನಲ್ಲಿ ಶೇವಿಂಗ್ ಮಾಡಿಸಿಕೊಂಡಾಗ ಅರ್ಥ ಆಯಿತು.
ಸೆಲೂನ್ ಗೆ ಹೋದರೆ ಅಲ್ಲಿಗೆ ಇತರರು ಕೂಡ ಬರ್ತಾರೆ ಅಲ್ಲಾ ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳಲು ಅವರೆಲ್ಲಾ ನಂಗೆ ಸಸ್ಯ ಶಾಸ್ತ್ರ ಪರಿಣಿತರು, ರಾಜಕೀಯ ವಿಶ್ಲೇಷಕರು, ಭೌತ ವಿಜ್ಞಾನಿಗಳು,ಕ್ರಿಕೆಟ್ expert ಗಳು, ಕಾಯಿಲೆ ಗುಣ ಪಡಿಸೋ ವೈದ್ಯರು, ತಂತ್ರಜ್ಞಾನ ದ ಬಗ್ಗೆ ತಿಳಿದಿರೋ ಇಂಜಿನಿಯರ್ ಗಳು,law ಪಾಯಿಂಟ್ ಮಾತಾಡೋ ಲಾಯರುಗಳು ಅಂತ ಅನ್ನಿಸುತ್ತಿತ್ತು. ಸುಮ್ಮನೆ ಕಟ್ಟಿಂಗ್ ಮಾಡಿಸಿಕೊಳ್ಳುತ್ತಾ ಅವರು ಆಡೋ ಮಾತುಗಳಿಗೆ ಕಿವಿ ಕೊಡ್ತಾ ಇದ್ದೆ. ಅದರೆ ಅವರೆಲ್ಲಾ ಹೆಚ್ಚಾಗಿ ಬರೀ ಅಧಿಕಪ್ರಸಂಗವೇ ಮಾತಾಡುತ್ತಿದ್ದದ್ದು ಅಂತ next ಗೊತ್ತಾಯಿತು. ಅವರಿಗೆಲ್ಲಾ ಅಲ್ಲಿಗೆ ಬಂದಾಗ ಮಾತನಾಡಲು, ಟೈಂ ಪಾಸ್ ಗೆ ಒಂದು ವಿಷಯ ಬೇಕು ಅಷ್ಟೇ. ಯಾರೋ ಹೇಳಿದ್ದನ್ನು ಕೇಳಿ ಅದಕ್ಕೆ ಮತ್ತಷ್ಟು ಮಸಾಲೆ ಸೇರಿಸಿ ಏನೋ ಒಂದು ಕಥೆ ಹೇಳುತ್ತಿದ್ದರು. ಆದರೆ ನಿಜವಾಗಿಯೂ ಕೇಳಲಿಕ್ಕೆ ಮಾತ್ರ ಒಂಥರಾ ಮಜಾ ಆಗ್ತಾ ಇತ್ತು.
ಹೇರ್ ಕಟ್ಟಿಂಗ್ ಮಾಡಿ ಮನೆಯ ಒಳಗೆ ಬರುವಂತಿಲ್ಲ. ಅಮ್ಮ ಬಿಡುತ್ತಿರಲಿಲ್ಲ. ಅವಳು ಬಾಗಿಲಿನ ಬಳಿಯಲ್ಲಿಯೇ ಅಡ್ಡ ನಿಂತು ಬಿಡುತ್ತಿದ್ದಳು . ಅಲ್ಲೇ ಹೊರಗಿನಿಂದಲೇ ಬಚ್ಚಲು ಮನೆಗೆ ಹೋಗಿ ಸ್ನಾನ ಮಾಡಿ,ಬಟ್ಟೆಯನ್ನು ಒದ್ದೆ ಮಾಡಿ ಬಕೆಟ್ ನಲ್ಲಿ ಒಗೆಯಲು ಹಾಕಿ ಬಂದ ಮೇಲೆಯೇ ಒಳಗೆ ಪ್ರವೇಶ. ಮನೆಯ ಒಳಗೆ ನಮ್ಮ ಕತ್ತರಿಸಿದ ಕೂದಲು ಬೀಳಬಾರದು ಎಂಬ ಕಾರಣಕ್ಕಾಗಿ. ಎಲ್ಲರ ಮನೆಯಲ್ಲೂ ಹಾಗೆಯೇ ಮಾಡುತ್ತಿದ್ದದ್ದು.
ಆವಾಗಲೆಲ್ಲ ಕೂದಲು ತೆಗೆಯುವುದಕ್ಕೆ ಎಲ್ಲರೂ ಕಟ್ಟಿಂಗ್ ಮಾಡಿಸಿಕೊಳ್ಳುವುದು ಎಂದೇ ಹೇಳುತ್ತಿದ್ದರು. ಕಟ್ಟಿಂಗ್ ಅಂದರೆ ಅದು ಅದೇ. ಯಾವುದು ಕಟ್ಟಿಂಗ್, ಏನು ಕಟ್ಟಿಂಗ್ ಎಂಬುದು ಯಾರಿಗೂ ಬಿಡಿಸಿ ಹೇಳಬೇಕಾಗಿರಲಿಲ್ಲ. Particular ಆಗಿ specific ಆಗಿ ಹೇರ್ ಕಟ್ಟಿಂಗ್ ಎಂದು ಹೇಳಬೇಕಾದ ಅಗತ್ಯವೇ ಇರಲಿಲ್ಲ. ಕಟ್ಟಿಂಗ್ ಅಂದ್ರೆ ಎಲ್ಲರಿಗೂ ಅರ್ಥ ಆಗುತ್ತಿತ್ತು.
ಕೂದಲಿಗೆ ಸಂಬಂಧಿಸಿದಂತೆ ವಿಚಿತ್ರವಾದ ನಂಬಿಕೆಗಳಿದ್ದವು. ಕಿವಿಯ ಮೇಲೆ ಕೂದಲು ಬಂದರೆ ಅದು ರಾಜ ಕಳೆ ಅಂತೆ.ಕೆಲವರು ಅದನ್ನು ತೆಗೆಯುವುದೇ ಇಲ್ಲ.ಆದರೆ ನಾನು ಎಷ್ಟೋ ಭಿಕ್ಷುಕರನ್ನು ನೋಡಿದ್ದೆ,ಅವರ ಕಿವಿ ರೋಮದಿಂದಲೇ ಮುಚ್ಚಿ ಹೋಗಿರುವುದನ್ನು ಕೂಡ ಗಮನಿಸಿದ್ದೆ. ಆದರೆ ಅವರು ಯಾಕೆ ರಾಜ ಆಗಲಿಲ್ಲ ಅಂತ ಅಪ್ಪನಿಗೆ ಕೇಳಿದರೆ ಅವನ ಬಳಿ ಉತ್ತರವಿಲ್ಲ.ಹಣೆಯ ಹುಬ್ಬುಗಳು ಒಂದುಗೂಡಿದ್ದರೆ ಸಕ್ಕತ್ ಕಾಸು ಆಗ್ತದೆ ಅಂತೆ. ಹುಬ್ಬು ಗಳು ಒಂದುಗೂಡಿದ್ದ ಎಷ್ಟೋ ಜನ ಲೈಫ್ ನಲ್ಲಿ ಪಾಪರ್ ಆಗಿರುವುದನ್ನು ಸ ನೋಡಿದ್ದೆ.
ಅದೆಲ್ಲಾ ಏನೇ ಇರಲಿ ಹುಡುಗರಿಗೆ ತಲೆ ತುಂಬಾ, ಹುಡುಗಿಯರಿಗೆ ಮುಡಿ ತುಂಬಾ ಕೂದಲು ಸಮೃದ್ಧಿಯ ಪ್ರತೀಕವೇ. ಅದಕ್ಕೆ ಅಲ್ಲವೇ ತಂದೆ ತಾಯಿ ಎಲ್ಲಾ ಸತ್ತಾಗ ಶೋಕ ಸೂಚಕವಾಗಿ ಸಮೃದ್ಧಿಯ ಪ್ರತೀಕವಾದ ಕೂದಲನ್ನು ಕೇಶ ಮುಂಡನ ಮಾಡಿಸಿಕೊಳ್ಳುವುದು.
ಹುಡುಗಿಯರಿಗೆ ಅಂತು ದಟ್ಟವಾದ ಉದ್ದನೆಯ ಕೂದಲು ಇದ್ದರೆ ಅವರಿಗೆ ಅದೊಂದು ಹೆಮ್ಮೆ. ಅದರಲ್ಲೂ ಅವರೊಂದು ಆ ತಲೆಗೂದಲಿಗೆ ಅದೆಷ್ಟು ತೆಂಗಿನ ಎಣ್ಣೆ ಹಾಕುತ್ತಾರೋ ಆ ದೇವರಿಗೇ ಗೊತ್ತು.
ಪ್ರೈಮರಿಯಿಂದ ಹೈಸ್ಕೂಲ್ ವರೆಗೂ ನನ್ನದು ಒಂದೇ ಸ್ಟೈಲ್ short and very short ಅಷ್ಟೇ. ಹೈಸ್ಕೂಲ್ ನಲ್ಲಿ NCC ಗೆ ಸೇರಿದೆ. NCC ಯಲ್ಲಿ ನನ್ನದು Air wing(air force).JD(junior devision) ಕೆಟಗರಿ. NCC ಸೇರಿದ ಮೇಲೆ ವಾರಕ್ಕೆರಡು ಸಂಜೆ ಕ್ಲಾಸ್ ಕಡ್ಡಾಯ. ಹಾಗಾಗಿ ಅಲ್ಲೂ ಕೂಡ ಕೂದಲು ಜಾಸ್ತಿ ಬಿಡುವ ಹಾಗೆಯೇ ಇರಲಿಲ್ಲ. ಹೈಸ್ಕೂಲ್ ಗೆ ಬಂದ ಮೇಲೆ ನಾವು ಹಿಂದೆ ಇದ್ದ ಊರಿನಿಂದ ಮತ್ತೊಂದು ಊರಿಗೆ ಹೋಗಿಬಿಟ್ಟೆವು. ಅಲ್ಲಿಗೆ ಬಂದ ಮೇಲೆ ಮೂಡುಬಿದಿರೆಯ ಜೈನ್ ಪೇಟೆಯಲ್ಲಿ ರೆಗ್ಯುಲರ್ ಆಗಿ ಒಂದೇ ಸೆಲೂನ್ ನಲ್ಲಿ ಹೇರ್ ಕಟ್ಟಿಂಗ್ ಮಾಡಿಸಲು ಆರಂಭಿಸಿದೆ. ಅವರ ಹೆಸರು ಅಚ್ಯುತ ಅಂತ. ಅವರು ಕೂಡ ಒಳ್ಳೆಯವರು. ಅವರು ತಲೆಗೆ ಹಾಕುವ ಎಣ್ಣೆ ಎಲ್ಲಾ ಮಾಡ್ತಾ ಇದ್ದರು. ನಾನು ನಮ್ಮೂರಿನ ತೋಟಗಳಿಂದ ಒಂದೆಲಗದ ಎಲೆ(ತಿಮರೆ/ಬ್ರಾಹ್ಮಿ) ಎಲ್ಲಾ ಒಟ್ಟುಮಾಡಿ ತಗೊಂಡು ಅವರಿಗೆ ಎಣ್ಣೆ ಮಾಡ್ಲಿಕ್ಕೆ ಕೊಡ್ತಾ ಇದ್ದೆ. ಅವರು ಅದಕ್ಕೆ ಪ್ರತಿಯಾಗಿ ಹಣ ಕೊಡ್ತಾ ಇದ್ರು. ಆದ್ರೆ ನಾನು ತಗೊಳ್ತಾ ಇರ್ಲಿಲ್ಲ.ಅಮ್ಮ ಅದಕ್ಕೆಲ್ಲ ಹಣ ತಗೋಬೇಡ ಅಂತ ಹೇಳಿದ್ದಳು.
ನಂತರ ಕಾಲೇಜಿನಲ್ಲಿ ಇರುವಾಗ ಮತ್ತೆ NCC ಗೆ ಸೇರಿದ್ದೆ. ಅಲ್ಲಿ Army wing. SD(Senior Devision) ಕೆಟಗರಿ. ಆವಾಗ ಅಂತು ನೀಟಾದ ಶಾರ್ಟ್ ಆದ ಹೇರ್ ಕಟ್ಟಿಂಗ್ ಗೆ ಹೆಚ್ಚಿನ ಮಹತ್ವ. ಅದರಲ್ಲೂ Army wing. ಶೇವಿಂಗ್ ಸರಿಯಾಗಿ ಮಾಡದಿದ್ದರೆ ಕಲ್ಲು ತಗೊಂಡು ಕೆನ್ನೆ ಉಜ್ಜಲ್ಲು ಬರುತ್ತಿದ್ದರು.ನಾನು ಕಾಲೇಜಿನಲ್ಲಿ NCC ಗೆ ಸೇರಿದ ಮೇಲೆಯೇ ಮೊಟ್ಟ ಮೊದಲ ಶೇವಿಂಗ್ ಮಾಡಿದ್ದು. ಹೇರ್ ಕಟ್ಟಿಂಗ್ ಒಂದು ಬಿಟ್ಟು, ನನ್ನ ಶೇವಿಂಗ್ ನಾನೇ ಮಾಡಿಕೊಳ್ಳುತ್ತಿದ್ದೆ. ಅಪ್ಪನ ಬಳಿ ಒಂದು ಒಳ್ಳೆಯ ರೇಝರ್ ಇತ್ತು. ಹಾಗೂ ಅವನಿಗೆ ಅವನ ಮಾವ ಅಂದರೆ ನನ್ನ ಅಜ್ಜ (ಅಮ್ಮನ ಅಪ್ಪ) ಕೊಟ್ಟಿದ್ದ ಒಂದು ಒಳ್ಳೆಯ ಶಾರ್ಪ್ ಆದ steel ಕತ್ತರಿ ಇತ್ತು. ಅದೆರಡನ್ನೂ ನನಗೆ ಕೊಟ್ಟ. ಅದನ್ನು ಬಳಸಿಕೊಂಡು ನಾನು ಮಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿ ಇರುವಾಗ ಶೇವಿಂಗ್ ಮಾಡ್ತಾ ಇದ್ದೆ.ನಾನು ಕಾಲೇಜಿನಲ್ಲಿ ಇರುವಾಗ ಗಡ್ಡ ಹಾಗೂ ಮೀಸೆ ಬಿಟ್ಟದ್ದೇ ಇಲ್ಲ. ನುಣ್ಣಗೆ ಕೆನ್ನೆಯನ್ನು ಬೋಳಿಸಿಕೊಂಡು ಹೋಗುತ್ತಿದ್ದೆ. ಕೆಲವರು ' ಎಂತ ನಿನ್ನೆ ಮೈಷಾಸುರ ವೇಷ ಹಾಕ್ಲಿಕ್ಕೆ ಇತ್ತಾ ನಿಂಗೆ, ಇಲ್ಲಾ ನಾಟಕದಲ್ಲಿ ಪಾರ್ಟ್ ಮಾಡ್ಲಿಕ್ಕೆ ಇತ್ತಾ ನಿಂಗೆ..' ಎಂದು ಕೇಳುತ್ತಿದ್ದರು.
ನನಗೆ ಮೀಸೆ ಹಾಗೂ ಸೈಡ್ ಲಾಕ್ ಬಲು ಬೇಗನೇ ಬಂದು ಬಿಡುತ್ತಿತ್ತು. ಅದನ್ನು ನಿಯಮಿತವಾಗಿ ಟ್ರಿಮ್ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಟ್ರೀಮ್ ಮಾಡಲು ಒಂದು ಟ್ರಿಮ್ಮರ್ ತೆಗೆದುಕೊಂಡೆ. ಟ್ರಿಮ್ಮರ್ ತಗೊಂಡ ಮೇಲೆ ನನ್ನ ಬದುಕೇ ಬದಲಾಯಿತು. ನಿಜವಾಗಿಯೂ ಬದಲಾಯಿತು!
ಟ್ರಿಮ್ಮರ್ ತಗೊಂಡ ಮೇಲೆ ನಾನು ಹಾಸ್ಟೆಲ್ ನಲ್ಲಿ ಬರೀ ನನ್ನದಲ್ಲ ಬೇರೆಯವರ ಸೈಡ್ ಲಾಕ್ ಗಳನ್ನು, ಮೀಸೆಗಳನ್ನು ಕೂಡ ಅವರವರ ಟ್ರಿಮ್ಮರ್ ಅಲ್ಲಿ ಚೆನ್ನಾಗಿ, ಸರಿಯಾಗಿ ಟ್ರೀಮ್ ಮಾಡಿ ಕೊಡುತ್ತಿದ್ದೆ. ಅವರ ಬಳಿ ಹೊಸ ಟ್ರಿಮ್ಮರ್ ಇತ್ತು ಆದರೆ ಅದರಲ್ಲಿ ಕೆಲವರಿಗೆ ಬಳಸಲು ಹೆದರಿಕೆ ಏನಾದರೂ ಹೆಚ್ಚು ಕಡಿಮೆ ಆದರೆ ಅಂತ. ಆಗ ನಾನು ಅವರಿಗೆ ಹೆಲ್ಪ್ ಮಾಡುತ್ತಿದ್ದೆ. ನನಗೆ ಅವರ ಮೀಸೆ ಗಡ್ಡ ಗಳನ್ನು ಬೋಳಿಸಲು ಹೆದರಿಕೆಯೇ ಆಗುತ್ತಿರಲಿಲ್ಲ.ನಾನೇ ಅವರಿಗೆ ಧೈರ್ಯ ತುಂಬುತ್ತಿದ್ದೆ,ಆಶ್ವಾಸನೆ ನೀಡುತ್ತಿದ್ದೆ, ಏನು ಆಗಲ್ಲ.. ಪಚ್ಚು ಇರುವಾಗ ಭಯ ಏಕೆ ಎಂದು. ಹಾಸ್ಟೆಲ್ ನಲ್ಲಿ ಹೆಚ್ಚಿನವರು ಹೇಳುತ್ತಿದ್ದರು ಪಚ್ಚು ನಾಳೆ ಸಂಜೆ ನಂಗೆ ಮೊದಲು ಟ್ರಿಮ್ ಮಾಡಿ ಕೊಡು ಬೇರೆಯವರದ್ದು ಆಮೇಲೆ ಮಾಡು ಅಂತ. ನಾನು ಅಷ್ಟು ಫೇಮಸ್ ಆಗಿ ಹೋಗಿ ಬಿಟ್ಟಿದ್ದೆ.
ಕಾಲೇಜ್ ನ ಫೈನಲ್ ಇಯರ್ ನಲ್ಲಿ ರಾಧ ಕೃಷ್ಣ ಅಂತ ನನ್ನ ಒಬ್ಬ ರೂಮ್ ಮೇಟ್ ಇದ್ದರು. ಅವರಿಗೆ ನಾನು ಬಹುವಚನದಲ್ಲಿಯೇ ಕರೆಯುತ್ತಿದ್ದೆ. ನನಗೆ ರೂಮ್ ಮೇಟ್ ಆಗಿ ಬಂದದ್ದು ಅವರು ಫೈನಲ್ ಇಯರ್ ನಲ್ಲಿಯೇ. ತುಂಬಾ ದೈವ ಭಕ್ತರು. Subject ಬಗ್ಗೆ ಒಳ್ಳೆಯ knowledge ಇತ್ತು ಅವರಿಗೆ. ನನ್ನ ಬಳಿ ಆವಾಗ ಲ್ಯಾಪ್ ಟಾಪ್ ಇರಲಿಲ್ಲ. ನನಗೆ ಲ್ಯಾಪ್‌ಟಾಪ್ ಕೊಟ್ಟು ಸಹಕರಿಸಿದ ದೊಡ್ಡ ಪುಣ್ಯಾತ್ಮ ಅವರು. ಅವರಿಗಿಂತ ಹೆಚ್ಚಾಗಿ ಆ ಲ್ಯಾಪ್‌ಟಾಪ್ ಬಳಸಿದ್ದೇ ನಾನು. ಆದರೆ ಕೊನೆಯಲ್ಲಿ ಆ ಲ್ಯಾಪ್‌ಟಾಪ್ ಹಾಳಾಗಿ ಹೋಯಿತು,ಹೇಗೆ ಹಾಳಾಯಿತು ಅಂತ ನನಗೆ ಸ ಗೊತ್ತಾಗ್ಲಿಲ್ಲ 🙄🤔
ಅವರಿಗೆ ಒಳ್ಳೆಯ ಮೀಸೆ ಇತ್ತು. ಆದರೆ ಆ ಜನ ಹೆಚ್ಚಾಗಿ ಕತ್ತರಿಯಲ್ಲಿ ಟ್ರಿಮ್ ಮಾಡುತ್ತಿದ್ದರು. ಒಂದು ದಿನ ನಾನು ಹೇಳಿದೆ. ಯಾಕೆ ಅಷ್ಟು ಕಷ್ಟ ಪಡ್ತೀರಾ ನನ್ನ ಬಳಿ ಟ್ರಿಮ್ಮರ್ ಇದೆ ನಾನು ನಿಮ್ಮ ಮೀಸೆಗೆ ಕತ್ತರಿ ಪ್ರಯೋಗ ಮಾಡ್ತೀನಿ ಅಂತ ಹೇಳಿದೆ. ಅದಕ್ಕೆ ಅವರು ಬೇಡ ಅಂತ ಹೇಳಿದ್ರು, ಏನಾದರೂ ಮೀಸೆಗೆ ಹೆಚ್ಚು ಕಡಿಮೆ ಆದರೆ, ನಾನು ಯಾವತ್ತೂ ಮೀಸೆಯನ್ನು ಹಾಳು ಮಾಡಿಕೊಂಡವನ್ನಲ್ಲ, ಮನೆಯಲ್ಲಿ ಬೈತಾರೆ ಅಂತ ಅವರ ಹೆದರಿಕೆ. ಅವರಿಗೆ ಏನೂ ಆಗಲ್ಲ ನಾನಿದ್ದಿನಿ, ನಾನು ಇದರಲ್ಲಿ ಎಲ್ಲಾ ಭಯಂಕರ ಎಕ್ಸ್‌ಪರ್ಟ್ ಅಂತ ಧೈರ್ಯ ತುಂಬಿದೆ. ಹಾಗೂ ಹೀಗೂ ಕೊನೆಗೊಂದು ಸಂಜೆ ದಿನ ಫಿಕ್ಸ್ ಆಯಿತು..ಅವರ ಮೀಸೆ ಟ್ರಿಮ್ ಮಾಡಲು.
ಆ ಸಂಜೆ ರಾಧಾಕೃಷ್ಣ ಅವರ ಮೀಸೆಗೆ ಕತ್ತರಿ ಪ್ರಯೋಗ sorry ಟ್ರಿಮ್ಮರ್ ಪ್ರಯೋಗ ಮಾಡಿಯೇ ಬಿಟ್ಟೆ. ಆದರೆ ಹೆಚ್ಚು ಕಡಿಮೆ ಆಗಿ ಮೀಸೆ ಶೇಪ್ ಹಾಳಾಗಿಯೇ ಹೋಯಿತು. ನಾನು ಹೆದರಲಿಲ್ಲ. ಆದರೆ ಅವರಿಗೆ ಭಯಂಕರ ಹೆದರಿಕೆ ಆಯಿತು. ಯಾಕೆಂದರೆ ಯಾವ angle ಅಲ್ಲಿ ನೋಡಿದರೂ ಅವರ ಮೀಸೆಯನ್ನು ಮತ್ತೆ ಸರಿ ಮಾಡುವಂತೆ ಇರಲಿಲ್ಲ. ನಂತರ ಅವರು ಭಯದಿಂದ ಸೆಲೂನ್ ಗೆ ಹೋಗಿ ಮೀಸೆಯನ್ನು ಸಂಪೂರ್ಣವಾಗಿ ಬೋಳಿಸಿಯೇ ಬಿಟ್ಟರು. ಹಾಗೇ ಮೀಸೆ ಬೋಳಿಸಿದವರು ಆ ದಿನ ಕದ್ರಿಯ ಜಾತ್ರೆ ಗೆ ಹೋಗಿಬಿಟ್ಟಿದ್ದರು. ಅಲ್ಲಿ ಅವರೇ ಹೋಗಿ ಮಾತಾಡಿಸಿದರೂ ಕೂಡ ಹಾಸ್ಟೆಲ್ ನ ಉಳಿದ ಫ್ರೆಂಡ್ಸ್ ಗೆ ಮೀಸೆ ಇಲ್ಲದೆ ನಮ್ಮ ರಾಧಾಕೃಷ್ಣನವರ ಪರಿಚಯವೇ ಸಿಕ್ಕಿರಲಿಲ್ಲವಂತೆ. ಒಮ್ಮೆಲೇ ನೋಡಿದಾಗ ಯಾವುದು ಇದು ಹೊಸ ಜನ ಅಂತ ಅವರಿಗೆ ಅನ್ನಿಸಿತ್ತಂತೆ. ಆ ದಿನದಿಂದ ರಾಧಾಕೃಷ್ಣ ಅವರು ಮೀಸೆ ತೆಗೆದೇ ಹಲವು ಸಲ ಕಾಲೇಜಿಗೆ ಹೋಗಿದ್ದರು. ಅವರ ಮೀಸೆ ಹಾಳು ಮಾಡಿದ್ದಕ್ಕೆ ಉಳಿದವರು ನನಗೆ ಸರಿಯಾಗಿ ಬೈದಿದ್ದರು,ಧರ್ಮಕ್ಕೆ ಅಷ್ಟು ಒಳ್ಳೆಯ ಮೀಸೆ ಲಗಾಡಿ ತೆಗ್ದೆ ಅಂತ. ಆದರೆ ನನಗೆ ಮಾತ್ರ ರಾಧಾಕೃಷ್ಣ ಮೀಸೆ ಇಲ್ಲದೇ ತುಂಬಾ sexy ಆಗಿಯೇ ಕಾಣುತ್ತಿದ್ದರು.
ಆ ದಿನಗಳಲ್ಲಿಯೇ ನಮ್ಮ ಊರಿನ ಸೆಲೂನ್ ಗಳಲ್ಲಿ ಕೂಡ north India ದ ನಮ್ಮ ಭೈಯಾ ಲೋಗ್ ಗಳು ಕಾಣಿಸಿಕೊಳ್ಳತೊಡಗಿದರು. ಅವರಿಗೆ ತುಳು ಕನ್ನಡ ಯಾವೂದೂ ಬರಲ್ಲ. ನಾನು ಹಿಂದಿ ಮೂವಿ ನೋಡ್ತೇನೆ ಆದರೂ ನನಗೆ ಹಿಂದಿ ಅಷ್ಟಾಗಿ ಮಾತಾಡಲೂ ಬರುತ್ತಿರಲಿಲ್ಲ. ಈ ಸೆಲೂನ್ ಗಳಲ್ಲಿರುವ ಭೈಯನವರೊಟ್ಟಿಗೆ ಮಾತಾಡಿ ಮಾತಾಡಿಯೇ ನನ್ನ ಅಲ್ಪ ಸ್ವಲ್ಪ ಹಿಂದಿ ಸುದಾರಿಸಿದ್ದು ಎಂದು ನನ್ನ ಗಾಢವಾದ ನಂಬಿಕೆ. ಪ್ರೈಮರಿ, ಹೈಸ್ಕೂಲ್ ನ ಹಿಂದಿ ಟೀಚರ್ ಗಳಿಗೂ ಆಗದ ಕೆಲಸವನ್ನು ಅವರುಗಳು ಮಾಡಿದ್ದರು. ಥ್ಯಾಂಕ್ಸ್ ಭೈಯಾ ಲೋಗ್... 🙏
Next ನಾನು ಡಿಗ್ರಿ ಮಾಡ್ಲಿಕ್ಕೆ ಹೋದೆ.ಅಲ್ಲಿ ನಾನು PG ಯಲ್ಲಿ ಇದ್ದೆ, ಬೆಂಜನಪದವಿನಲ್ಲಿ . ಗಣೇಶ್ ಅಂತ ಒಬ್ಬ ಕ್ಲಾಸ್ ಮೇಟ್ ಇದ್ದ. ಗೋಕರ್ಣ ದವ. Jolly ಜನ. ಅವನ ಬಳಿ old model ನೀಲಿ ಬಣ್ಣದ ಬುಲೆಟ್ ಇತ್ತು. ಅದರಲ್ಲಿ ಕಾಲೇಜಿಗೆ ಹೋಗುವ ಮಜಾನೇ ಬೇರೆ. ಅವನ ಬೈಕ್ ನಲ್ಲಿ ಕಾಲೇಜ್ ಗೆ ಹೋದರೆ ಬೈಕ್ ನಲ್ಲಿ ಇದ್ದ ನಮ್ಮನ್ನೇ ಎಲ್ಲರೂ ನೋಡುತ್ತಿದ್ದರು. ಅದರ ಸೌಂಡ್ ಕೂಡ ಆ ತರಹ ಇತ್ತು.
ಅವ ಮೊದಲಿಗೆ ಬೇರೆ PG ಯಲ್ಲಿ ಇದ್ದ.ಅವ ದಿನಾಲೂ ನಮ್ಮ PG ಗೆ ಬರುತ್ತಿದ್ದ. ಅವನಿಗೂ ನನ್ನ ಹಾಗೆಯೇ ಕರ್ಲಿ ಹೇರ್. ಒಂದು ದಿನ ನಾನು ಅವನಿಗೆ ಹೇಳಿದೆ ನಿನ್ನ ಕೂದಲಿಗೆ ಟ್ರಿಮ್ಮರ್ ಪ್ರಯೋಗ ಮಾಡ್ಲಾ ಅಂತ. ಅವ ಧೈರ್ಯ ಶಾಲಿ, ಯಾವುದಕ್ಕೆ ಸ ಹೆದರಲ್ಲ. I am ready ಅಂತ ಹೇಳಿದ.
ನಾನು ಅವನ ತಲೆಗೂ ಟ್ರಿಮ್ಮರ್ ಪ್ರಯೋಗ ಮಾಡಿಯೇ ಬಿಟ್ಟೆ.ಈ ಸಲ ಮೀಸೆ, ಗಡ್ಡ ಎಲ್ಲಾ ಬಿಟ್ಟು ನೇರವಾಗಿ ತಲೆ ಕೂದಲಿಗೆನೇ ಟ್ರಿಮ್ಮರ್ ಪ್ರಯೋಗ ಮಾಡಿದ್ದೆ ನಾನು. ಅದು ಏನೋ ಒಂದು ವಿಚಿತ್ರ ವಾದ ಹೇರ್‌ಸ್ಟೈಲ್ ಆಯಿತು. ನಾನು ಕೂಡ ಅದು ಆ ರೀತಿ ಬರಬಹುದು ಅಂತ ನಿಜವಾಗಿಯೂ ಅಂದುಕೊಂಡಿರಲಿಲ್ಲ.
ಅವ ಹಾಗೇ ಮರುದಿನ ಕಾಲೇಜ್ ಗೆ ಹೋದ, ಕ್ಲಾಸ್ ಮೇಟ್ ಗೆ ಎಲ್ಲಾ ಅವನ ವಿಚಿತ್ರ ಹೇರ್‌ಸ್ಟೈಲ್ ತುಂಬಾ ಡಿಫರೆಂಟ್ ಆಗಿದೆ ಎಂದು ಅನಿಸಿತು. ಇದು ಹೇಗೆ ಮಾಡಿದ್ದು ಯಾರು ಮಾಡಿದ್ದು ಎಲ್ಲಿ ಮಾಡಿದ್ದು ಅಂತ ಎಲ್ಲಾ question ಕೇಳಿದರು. ನನಗೆ ಅವ ನನ್ನ ಹೆಸರೇ ಹೇಳಲಿ ಆ ಮೂಲಕ ನನ್ನನ್ನು ಸ್ವಲ್ಪ ರೈಸಿಸಲಿ(famous ಮಾಡಲಿ) ಅಂತ ಆಸೆ ಇತ್ತು. ಆದರೆ ಅವ ಕಳ್ಳ. ಅದು.. ಅದು ನಾನು B.C road ಗೆ ಹೋಗಿ ಮಾಡಿಸಿಕೊಂಡು ಬಂದೆ ಅಂತ ಬುರುಡೆ ಬಿಟ್ಟ. ಈ ರೀತಿಯಾಗಿ ಮೊದಲ ಬಾರಿಗೆ unique ಆಗಿ ಮಾಡಿದ್ದ, ಗೆಳೆಯರಿಂದ ಒಟ್ರಾಸಿ ಪ್ರಶಂಸನೆಗೆ ಒಳಗಾದ ನನ್ನ ಕೈಚಳಕಕ್ಕೆ ಮಾನ್ಯತೆ ಸಿಗದೇ ಹೋಯಿತು. ಆದರೂ ನಾನು ಹಲವರ ಬಳಿ ಹೇಳಿದೆ ಅದು ಹೇರ್‌ಸ್ಟೈಲ್ ನಾನೇ ಮಾಡಿದ್ದು ಅಂತ. ಆದರೆ ಅವರು ನಂಬಲು ತಯಾರೇ ಇರಲಿಲ್ಲ 'ಹೇಯ್ ಹೋಗು ಮರ್ರೆ..ನೀನು ಆ ರೀತಿ ಎಲ್ಲಾ ಯಾವಾಗ ಮಾಡ್ಲಿಕ್ಕೆ, ಸುಮ್ನೆ ನಮ್ಗೆ ಎಲ್ಲಾ ಮಂಗ ಮಾಡ್ಲಿಕ್ಕೆ ಬರ್ಬೇಡ.. " ಅಂತ ಹೇಳಿದ್ರು.
ಈ ರೀತಿಯಾಗಿ ನಾನು ಗಣೇಶ್ ಗೆ ಹೇರ್‌ಸ್ಟೈಲ್ ಮಾಡಿದ್ದು ಅವನಿಗೆ ಇನ್ನೂ confident ಜಾಸ್ತಿ ಆಯಿತು ಈ ಪಚ್ಚು ಹೇರ್‌ಸ್ಟೈಲ್ ಅಲ್ಲೂ ತನ್ನ ಚಾಕಚಕ್ಯತೆ ತೋರಿಸಬಲ್ಲ ಅಂತ. ಮತ್ತೊಮ್ಮೆ ಬಂದ" ಹೇಯ್ ಪಚ್ಚು, ಡಿಫರೆಂಟ್ ಆಗಿ ಏನಾದರೂ ಹೇರ್‌ಸ್ಟೈಲ್ ಮಾಡು ಮಚ್ಚಾ.. ಈ ಸಲ ಬೇರೆಯದ್ದೇ ಸ್ಟೇಲ್ ಮಾಡುವ.. ಮಸ್ತ್ ಆಗಿರ್ಬೇಕು ಮಾತ್ರ ... " ಅಂದ.ನಂಗೆ ಅಂತವರೇ ಇಷ್ಟ ಆಗುವುದು,ಧೈರ್ಯ ವಾಗಿ ನನ್ನನ್ನು ನಂಬಿ ನನ್ನ ಕೈಯಲ್ಲಿ ಅವರ ತಲೆ ಕೊಡ್ತಾರೆ ಅಲ್ಲ ಅಂತಹವರು. ನನ್ನ ನಿಜವಾದ creativity ಅರಳೋದು ಅಂತಹವರು ನೀಡುವ ಅವಕಾಶದಿಂದಾಗಿಯೇ.
ನಾನು ಸ ಅವತ್ತು serious ಆಗಿ ಏನೋ ಒಂದು ಮಾಡಿದೆ. ಅದು ಏನೋ ಒಂದು ಆಗಿ ಫುಲ್ ಕೆಟ್ಟಿ ಹೋಯಿತು i mean ಹಾಳಾಯಿತು. ಮೊದಲ ಸಲ ಅವನಿಗೆ ಕಟ್ಟಿಂಗ್ ಮಾಡುವಾಗ ಒಟ್ರಾಸಿ ಏನೆನೋ ಮಾಡಿ ನನಗೆ ಗೊತ್ತಿಲ್ಲದೇ ಢಿಪರೆಂಟ್ ಆದ ಹೇರ್‌ಸ್ಟೈಲ್ ಒಂದು ಮೂಡಿ ಬಂದಿತ್ತು . ಆದರೆ ಈ ಸಲ ಹೆಚ್ಚಿನ ಮುತುವರ್ಜಿಯಿಂದ ಜಾಸ್ತಿ creativity ಮಾಡ್ಲಿಕ್ಕೆ ಹೋಗಿ ಅವನ ಮಂಡೆಯ ಶೇಪೇ ಹಾಳಾಗಿ ಹೋಯಿತು. ನನಗೆ ಗೊತ್ತಾಯಿತು ಇದು ಇನ್ನು ನನ್ನ ಕೈಯಿಂದ ಆಗ್ಲಿಕ್ಕಿಲ್ಲ, ಇದನ್ನು ಇನ್ನು ಸರಿ ಮಾಡ್ಲಿಕ್ಕೆ ಆವತ್ತು ರಾಧಾಕೃಷ್ಣ ಸೆಲೂನ್ ಗೆ ಹೋದಂತೆ ಇವ ಸಹ ಸೆಲೂನ್ ಗೆ ಓಡ್ಲೇ ಬೇಕು ಎಂದು. ಆದರೂ ಏನನ್ನೂ ತೋರಿಸದೇ "ಗಣೇಶ ಸ್ವಲ್ಪ ಇಲ್ಲಿ ಒಂದು ಕಟ್ ಕೊಟ್ರೆ ಇನ್ನೂ ಸೂಪರ್ ಆಗ್ತದೆ ಮಚ್ಚಾ ,ಆದ್ರೆ ಅದು ನನಗೆ ಟ್ರಿಮ್ಮರ್ ಅಲ್ಲಿ ಎಲ್ಲಾ ಮಾಡ್ಲಿಕ್ಕೆ ಆಗಲ್ಲ.. ಅದಕ್ಕೆ ನಾವು ಸೆಲೂನ್ ಗೆ ಹೋಗ್ಲೇ ಬೇಕು, ಬೇಕಾದರೆ ನಾನು ಸ ಬಂದು ಸೆಲೂನ್ ನವರಿಗೆ ಐಡಿಯಾ ಎಲ್ಲಾ ಕೊಡ್ತೇನೆ ಎಂದು ಹೇಳಿದೆ. ಅವನಿಗೆ ಗೊತ್ತಾಯಿತು ಈ ಬಡ್ಡಿಮಗ ಗ್ಯಾರಂಟಿ ನನ್ನ ಕೂದಲು ಹಾಳು ಮಾಡಿ ಹಾಕಿದ್ದಾನೆ ಎಂದು.
ನಂತರ ನಾನು ಮತ್ತು ಗಣೇಶ PG ಪಕ್ಕವೇ ಇದ್ದ ಸೆಲೂನ್ ಗೆ ಓಡಿದೆವು. ಆ ಸೆಲೂನ್ ಓನರ್ ನ ಹೆಸರು ಕೂಡ ರಮೇಶ್ ಅಣ್ಣಾ ಅಂತಲೇ. ಹೋದ ಕೂಡಲೇ ನಾನು ಅವರಿಗೆ explain ಮಾಡಿದೆ.. ಇದು ಸ್ವಲ್ಪ ಹಾಗೇ ಮಾಡಿ.. ಇದು ಸ್ವಲ್ಪ ಹೀಗೆ ಮಾಡಿ ಎಂದು.ಅವರು ಜೋರಾಗಿ ನಗುತ್ತಾ.. "he he he... ಇದು ಯಾರೂ ಮರ್ರೆ.. ಈ ರೀತಿ ಕಟ್ ಮಾಡಿದ್ದು, ಒಳ್ಳೆ ಇಲಿ ಕಟ್ ಮಾಡಿದ ಹಾಗೇ ಇದೆ. ನಾಳೆ ಏನಾದರೂ ಇದೇ ರೀತಿ ಕಾಲೇಜಿಗೆ ಹೋದ್ರೆ ಹುಡುಗಿಯರೆಲ್ಲಾ ಎದ್ದು ಬಿದ್ದು ನಗುವುದು ಗ್ಯಾರಂಟಿ ಮರ್ರೆ .." ಅಂತ ಹೇಳಿ ಬಿಟ್ಟರು . ಗಣೇಶ ಕೂತಿದ್ದಲ್ಲಿಂದಲೇ ಓರೆ ಕಣ್ಣಿನಲ್ಲಿಯೇ ನನ್ನನ್ನು ನೋಡಿದ, "ಬಡ್ಡಿ ಮಗ ಸಾಯಿಸಿ ಬಿಟ್ಟೆಯಲ್ಲೋ .. "ಅಂತ ಕಣ್ಣಿನಲ್ಲಿಯೇ ಹೇಳಿದಂತಿತ್ತು. ನಾನು ಅದನ್ನು ಅರ್ಥ ಮಾಡಿಕೊಂಡೆ ಕೂಡ,ನಂತರ ಬೇರೆ ಕಡೆ ನೋಡಿದೆ.
ಆಮೇಲಿಂದ ಯಾಕೋ ಗಣೇಶ ನನಗೆ ಕೈಚಳಕ ತೋರಿಸ್ಲಿಕ್ಕೆ ಅವನ ತಲೆ ಕೊಡ್ಲೇ ಇಲ್ಲ. ಅವನಿಗೆ ನನ್ನ ಮೇಲಿದ್ದ confidence ಪೂರ ಹೋಯಿತು. ಆದರೆ ಅವತ್ತು ನಾನು ಹಾಳು ಮಾಡಿದ್ದ ಗಣೇಶನ ಹೇರ್‌ಸ್ಟೈಲ್ ಅನ್ನು ರಮೇಶ್ ಅಣ್ಣ ಪೂರ್ಣಗೊಳಿಸಿದ ಮೇಲೆ ಅದು ಕೂಡ sexy ಯಾಗೇ ಇತ್ತು ಅಂತ ನನಗೆ ತುಂಬಾ ಸಲ ಅನಿಸಿದೆ ಮಾತ್ರ. ನಿಜ ನೋಡ್ಲಿಕ್ಕೆ ಹೋದ್ರೆ ಆ ಕ್ರೆಡಿಟ್ ಕೂಡ ನಂಗೇ ಸಿಗಬೇಕಾಗಿತ್ತು.. 🙄🤔🤔.
ಹೀಗೆ ಬಾಲ್ಯ ಕಳೆದು ದೊಡ್ಡವನಾಗುತ್ತಾ ಹೋಗುವವರೆಗೆ ನಾನು ಕೂಡ ನನ್ನ ತಲೆಗೂದಲಿಗೆ ತುಂಬಾನೇ ಕತ್ತರಿ ಪ್ರಯೋಗ ಮಾಡುತ್ತಾ ಹೋದೆ. ಹೊಸ ಹೊಸ ಸ್ಟೈಲ್ ಬಂದರೂ ಕೊನೆಗೆ ನನ್ನಲ್ಲಿ ಉಳಿದದ್ದು ಮಾತ್ರ ಜನ್ಮಜಾತವಾಗಿ ಬಂದಂತಹ ಕರ್ಲಿ ಹೇರ್ ಮಾತ್ರ. ಕೊನೆ ಕೊನೆಗೆ ನನಗೆ ಅದೇ ಇಷ್ಟ ಆಯಿತು. ಈಗಲೂ ಅದೇ ಇದೆ. ಗಡ್ಡವೇ ಬಿಡದಿದ್ದ ನಾನು ಸೊಂಪಾಗಿ ಗಡ್ಡ ಕೂಡ ಬಿಟ್ಟಿದ್ದೆನೆ. ಮೀಸೆಯನ್ನು ರೇಝರ್ ನಲ್ಲಿ ಕ್ಲೀನ್ ಶೇವ್ ಇಲ್ಲವೇ ಟ್ರಿಮ್ಮರ್ ಅಲ್ಲಿ zero ದಲ್ಲಿ ಇಟ್ಟು ಸಂಪೂರ್ಣ ಟ್ರಿಮ್ ಮಾಡಿದಾಗಲೆಲ್ಲ ಅಮ್ಮ ಸಿಕ್ಕಾಪಟ್ಟೆ ಬೈಯುತ್ತಿದ್ದಳು.ಅವಳಿಗೆ ನಾನು ಮೀಸೆ ತೆಗೆಯುವುದು ಸ್ವಲ್ಪವೂ ಇಷ್ಟ ಆಗುತ್ತಿರಲಿಲ್ಲ. ಗಂಡು ಮಕ್ಕಳು ಮೀಸೆ ಬಿಟ್ಟರೆನೇ ಚಂದ ಅಂತ ಹೇಳುತ್ತಿದ್ದಳು. ಈಗ ಮೀಸೆ ಕೂಡ ಉಳಿಸಿಕೊಂಡಿದ್ದೆನೆ. ಇದರ ಮಧ್ಯೆ ತುಂಬಾ ಜನ ಗೆಳೆಯರು ಹೇಳಿದ್ದರು, ನಿನಗೆ ಕರ್ಲಿ ಹೇರ್ ಬೇಡ ಅಂತಿದ್ದರೆ hair straightening ಎಲ್ಲಾ ಮಾಡಿಸಿಕೊಳ್ಳಬಹುದು ಅಲ್ವಾ ಅಂತ . ಆದರೆ ನಾನು ಯಾವತ್ತೂ hair straightening ಮಾಡಿಸಿಯೇ ಇಲ್ಲ. ಈಗ ಹಿಂದೆಂದಿಗಿಂತಲೂ ನನಗೆ ನನ್ನ ಕರ್ಲಿ ಹೇರ್‌ಸ್ಟೈಲೇ ಇಷ್ಟ ಆಗತೊಡಗಿದೆ. ನಾನು ಇತರರಿಗಿಂತ ವಿಶಿಷ್ಟ ಅನ್ನುವಂತೆ ಮಾಡಿದ್ದೇ ನನ್ನ ಕರ್ಲಿ ಹೇರ್.ನಾನೇ ನೋಡಿದಂತೆ ನಮ್ಮ ಊರಲ್ಲಿ ತುಂಬಾ ಜನರಿಗೆ ಕರ್ಲಿ ಹೇರ್ ಇಲ್ಲ.ನನ್ನ ಕ್ಲಾಸ್ ನಲ್ಲೂ ಕೂಡ ನನಗೆ ಗಣೇಶನಿಗೆ ಬಿಟ್ಟರೆ ಬೇರೆ ಯಾರಿಗೂ ಕರ್ಲಿ ಹೇರ್ ಇರಲಿಲ್ಲ.
ಮೊನ್ನೆ ಪುನಃ ಬಾಲ್ಯ ಕಳೆದ ಕೆಸರುಗದ್ದೆ ಊರಿಗೆ ಹೋಗಿದ್ದೆ. ಬಾಲ್ಯದಲ್ಲಿ ನನಗೆ ಹೇರ್ ಕಟ್ಟಿಂಗ್ ಮಾಡುತ್ತಿದ್ದ ರಮೇಶ್ ಅಣ್ಣಾ ನವರ ಮನೆಗೆ ಕೂಡ ಹೋಗಿದ್ದೆ. ಅವತ್ತು ರಮೇಶ್ ಅಣ್ಣಾ ಮನೆಯಲ್ಲಿಯೇ ಇದ್ದರು. ಈಗ ಅವರು ಹೆಚ್ಚಾಗಿ ಮನೆಯಲ್ಲಿಯೇ ಇರ್ತಾರೆ .ಮಕ್ಕಳು ಎಲ್ಲಾ ಒಳ್ಳೆಯ ಉದ್ಯೋಗ ಕಂಡುಕೊಂಡಿದ್ದಾರೆ. ಅವರಿಗೂ ದೊಡ್ಡ ತೋಟ ಎಲ್ಲಾ ಇದೆ. ನನ್ನ ಗುರುತು ಸಿಕ್ಕಿತೇ ಎಂದು ಅವರಲ್ಲಿ ಕೇಳಿದೆ. ಅವರಿಗೆ ನನ್ನ ಗುರುತು ಸಿಗಲಿಲ್ಲ. ನನ್ನ ತಂದೆಯ ಹೆಸರು, ನಾವಿದ್ದ ಜಾಗದ ಹೆಸರು ಎಲ್ಲಾ ಹೇಳಿದೆ. ಆವಾಗ ಅವರಿಗೆ ಗುರುತು ಸಿಕ್ಕಿತು, ಏನು ಗುರ್ತ ಇಲ್ಲದೆ, ಆಗ ಚಿಕ್ಕ ಇದ್ದೆ.. ಈಗ ದೊಡ್ಡವನಾಗಿ ಗಡ್ಡ ಕೂದಲು ಎಲ್ಲಾ ಬಿಟ್ಟು ಗುರುತು ಸಿಗ್ತಾ ಇಲ್ಲ ಎಂದು ಹೇಳಿದರು. ನಾನು ಚಿಕ್ಕಂದಿನಲ್ಲಿ ನಿಮ್ಮ ಬಳಿಯೇ ಹೇರ್ ಕಟ್ಟಿಂಗ್ ಮಾಡುತ್ತಿದ್ದದ್ದು ಅದು ನೆನಪಿದೆಯಾ ಎಂದು ಹೇಳಿದೆ. ಅವರು ನನ್ನ ತಲೆ ನೋಡಿ ಒಮ್ಮೆ ನಕ್ಕರು.ಒಂದು ಟೈಂ ಅಲ್ಲಿ ನಾನು ಅವರ ಬಳಿ "ಕಟ್ಟಿಂಗ್ ಮಾಡಿ ಮಾಡಿ ದೊಡ್ಡವನಾದ ಮೇಲೆ ನನ್ನ ಈ ಗುಂಗುರು ಕೂದಲು ಎಲ್ಲಾ ಹೋಗುತ್ತೆ ಅಲಾ.. "ಎಂದು ಕೇಳಿದ್ದಕ್ಕೆ ನಗುತ್ತಾ "ನೀನು ಏನೇ ಮಾಡು ನಿನಗೆ ಮಾತ್ರ ಇದೇ ಪಿಕ್ಸು.." ಅಂತ ಹೇಳಿದ್ದು ನೆನಪಾಯಿತು. ಪಾಪ ಅವರಿಗೆ ಅದು ಖಂಡಿತವಾಗಿಯೂ ನೆನಪಿರಲಿಕ್ಕೆ ಇಲ್ಲ. ನನಗೆ ಮಾತ್ರ ಅವರು, ಅವರ ಅಂಗಡಿ ಯಾವತ್ತೂ ಮರೆತು ಹೋಗುವಂತಹದ್ದಲ್ಲ☺️
ಕೇವಲ ಅವರು ಮಾತ್ರ ಅಲ್ಲ ನನ್ನ ಬಾಳಿನಲ್ಲಿ ಬಂದಂತಹ ಹೆಚ್ಚಿನ ಸೆಲೂನ್ ಅಂಗಡಿಯ ಓನರ್ ಗಳನ್ನು ನಾನು ಮರೆತೇ ಇಲ್ಲ. ಅವರ ಹೆಸರುಗಳು ಕೂಡ ನನಗೆ ಈಗಲೂ ನೆನಪಿದೆ. ಬಹುಶಃ ರೆಗ್ಯುಲರ್ ಆಗಿ ಒಂದೇ ಕಡೆ ಹೋಗುತ್ತಿದ್ದುದು ಒಂದು ಕಾರಣವಿರಬಹುದು. ಹೇಗೋ ಗೊತ್ತಿಲ್ಲ ಅವರೊಂದಿಗೆ ಮಾತಾಡುತ್ತಾ ಮಾತಾಡುತ್ತಾ ನನಗೆ ಅವರೊಂದಿಗೆ ಒಂದು connection ಏರ್ಪಡುತ್ತಿತ್ತು. ನಿಮಗೆ ಕೇಳಲು ಮನಸ್ಸಿದ್ದರೆ ಅವರ ಬಳಿ ಹೇಳಲು ಒಳ್ಳೆಯ ಕಥೆಗಳಿರುತ್ತದೆ, ಏನೋ ಒಂದು ಕಥೆ ಇದ್ದೆ ಇರುತ್ತದೆ. ನನಗೆ ಹಿಂದಿನಿಂದಲೂ ಕಥೆ ಕೇಳುವುದು ಅಂದರೆ ಬಹಳ ಇಷ್ಟ. ಹಾಗಾಗಿ ಸೆಲೂನ್ ಗಳು ಅಲ್ಲಿಯ ಓನರ್ ಗಳು ನನಗೆ ತುಂಬಾನೇ ಆಪ್ತರಾಗಿ ಬಿಟ್ಟರು ಎಂದು ಅನಿಸುತ್ತದೆ. ಮಾತ್ರವಲ್ಲ ಚಿಕ್ಕಂದಿನಲ್ಲಿ ರೆಗ್ಯುಲರ್ ಆಗಿ ಹೋಗುತ್ತಿದ್ದ ಸೆಲೂನ್ ಶಾಪ್ ಗಳು ಒಂದು ರೀತಿಯ ನೆನಪಿನ ಅಂಗಡಿಗಳು ಇದ್ದಂತೆ. ಅವುಗಳಿಗೂ ಕೂಡ ನಮ್ಮ ಬಾಲ್ಮದ ನೆನಪುಗಳಲ್ಲಿ ಒಂದು ಪ್ರತ್ಯೇಕ ಸ್ಥಾನ ಇದ್ದೇ ಇದೆ.
ಈಗಲೂ ನನ್ನ ಹೆಚ್ಚಿನ ಸಣ್ಣ ಪುಟ್ಟ ಹೇರ್‌ಸ್ಟೈಲ್ ಗಳನ್ನು ನಾನೇ ಮಾಡುತ್ತೇನೆ,ಕೇವಲ ಹೆಚ್ಚಿನ ಹೇರ್ ಕಟ್ಟಿಂಗ್ ಮಾಡ್ಲಿಕ್ಕೆ ಇದ್ದರೆ ಮಾತ್ರ ನಾನು ಸೆಲೂನ್ ಗಳಿಗೆ ಹೋಗುತ್ತೇನೆ. ಅದು ಕೂಡ ಅಪರೂಪಕ್ಕೆ. ಟ್ರಿಮ್ಮರ್ ಮತ್ತು ನನ್ನ ಬಾಂಧವ್ಯ ಇನ್ನೂ ಹೆಚ್ಚಾಗಿದೆ.
ಅಷ್ಟು ಮಾತ್ರವಲ್ಲ ಪ್ರೀಯಾಗಿ ಇರುವಾಗ ಮನೆಯ ಸುತ್ತ ಮುತ್ತ ಇರುವ ಗೆಳೆಯರಿಗೆ, ಸ್ಕೂಲ್ ಹುಡುಗರಿಗೆ, ಚಿಕ್ಕ ಮಕ್ಕಳಿಗೆ ಟ್ರಿಮ್ಮರ್ ಹಿಡಿದು ಅವರ ಹೇರ್‌ಸ್ಟೈಲ್ ನಲ್ಲಿ ನನ್ನ ಮಾಮೂಲಿ ಕೈಚಳಕ, ಚಾಕಚಕ್ಯತೆಯನ್ನು ಪ್ರದರ್ಶಿಸಲು ಈಗಲೂ ಹೋಗುತ್ತೇನೆ. ಆವಾಗಲೆಲ್ಲ ನನಗೆ ರಾಧಾಕೃಷ್ಣ ರ ಮೀಸೆ ಹಾಗೂ ಗಣೇಶನ ಹೇರ್‌ಸ್ಟೈಲ್ ತುಂಬಾನೇ ನೆನಪಾಗಿ, ನನಗೆ ಗೊತ್ತಿಲ್ಲದೇ ಮುಖದಲ್ಲಿ ನಗು ಅರಳಿ ಬಿಡುತ್ತದೆ . ನನಗೆ ಅವಕಾಶ ಕೊಟ್ಟು ಉತ್ತಮವಾಗಿ ಪ್ರೋತ್ಸಾಹಿಸಿ, ನನ್ನ ಕಲೆಯನ್ನು ಗುರುತಿಸಿ ಬೆಳೆಸಿದ..ಹಾಗೂ ಈಗಲೂ ಟ್ರಿಮ್ಮರ್ ಹಿಡಿದು ಬೇರೆಯವರ ಗಡ್ಡ ಮೀಸೆ, ಕೂದಲುಗಳಲ್ಲಿ ಚಮತ್ಕಾರ ತೋರಲು inspiration ಆಗಿರುವ ಅವರಿಬ್ಬರನ್ನು ನಾನು ಈ ಜನ್ಮದಲ್ಲಿ ಹೇಗೆ ತಾನೇ ಮರೆಯಲಿ ಅಲ್ಲವೇ..
................................…...................................................
AB Pacchu
Moodubidire

Comments
Post a Comment