ಸ್ಮಶಾನ ನನಗೆ ಹೊಸದಲ್ಲ!

 

ಕಳೆದುಕೊಳ್ಳುವುದೇ ಜೀವನ ಆಗಿರುವವರಿಗೆ ಏನನ್ನಾದರೂ ಪಡೆದುಕೊಳ್ಳುವುದು ಬೆರಗು ಹುಟ್ಟಿಸುವುದಿಲ್ಲ....! 


ಅನಾಥ ಆದವನಿಗೆ ಒಂದು ಬಿಗಿಯಾದ ಅಪ್ಪುಗೆ ಬಿಸಿಯಾದ ಸಾಂತ್ವನ ಅಷ್ಟೇ.. ಆತ್ಮೀಯತೆ ಅಲ್ಲ...! 


ನಿರ್ಲಿಪ್ತತೆಯೇ ಬದುಕಿನ ಬಹು ದೊಡ್ಡ ಭಾಗ ಆಗಿರುವವನಿಗೆ ಕ್ರೋಧದ ಕ್ಷಣಗಳು... ರಕ್ತದೊತ್ತಡವನ್ನು ಹೆಚ್ಚು ಮಾಡುವುದಿಲ್ಲ! 

ಎಲ್ಲರೂ ಬಿದ್ದು ಬಿದ್ದು ನಗುವಂತಹ ತಮಾಷೆ.... ನಗು ಹುಟ್ಟಿಸುವುದಿಲ್ಲ! 


ಹಾಗೆಂದು ಇದು ಸ್ಥಿತಪ್ರಜ್ಞ ಮನಸ್ಥಿತಿ ಕೂಡ ಅಲ್ಲವೇ ಅಲ್ಲ. ಹೃದಯ ಕಲ್ಲು ಆಗಿರುವವನಲ್ಲಿ ನಳನಳಿಸುವ ಹೂವು ಹುಟ್ಟುವುದೂ ಇಲ್ಲ.. ಅರಳುವುದೂ ಇಲ್ಲ...ಅಷ್ಟೇ!


ಒಂದೊಮ್ಮೆ ಹೃದಯದಲ್ಲಿ ಹೂವೊಂದು ಅದರಷ್ಟಕ್ಕೆ ಹುಟ್ಟಿದರೂ ಸಹ ಬಾಡುವುದೊಂದೇ ಅದರ ವಿಧಿ ಆಗಿತ್ತು.. ಮತ್ತು ಇಲ್ಲಿಯವರೆಗೆ ಆಗಿದ್ದೂ ಕೂಡ ಅದೇ!! 


ನನಗೂ ಎಲ್ಲರೂ ಇದ್ದರು... ಎನ್ನುವ ಕಥೆಯೇ ನನ್ನಲ್ಲಿ ಇಲ್ಲ!


ಹುಟ್ಟುವಾಗ ಇದ್ದರು.. 


ಆದರೆ ಬೆಳೆಯುವಾಗ... ಇರಲಿಲ್ಲ! 


ಅನಾಥ ನಿಜ.. 


ಆದರೆ ಈ ಸಮಾಜ ನನ್ನನ್ನು ಎಂದಿಗೂ ಅನಾಥ ಮಾಡಲಿಲ್ಲ..


ಅಲ್ಲಲ್ಲಿ ಹಲವರು ಸಿಕ್ಕಿದರು...


ಮೊಗೆದು ಮೊಗೆದು ಅನ್ನ ಬಡಿಸಿದವರು ಇದ್ದಾರೆ.. 


ಬಗೆದು ಬಗೆದು ಪ್ರೀತಿಯನ್ನು ತೋರಿಸಿದವರೂ ಇದ್ದಾರೆ.. 


ಆದರೆ ಈಗಿಲ್ಲ...!!


ಬದುಕಿನ ಹೆದ್ದಾರಿಯಲ್ಲಿ ಸಿಕ್ಕಿದವರು, ಪ್ರೀತಿ ತೋರಿದವರೆಲ್ಲ ಕೊನೆಗೊಮ್ಮೆ, ಮತ್ತೊಮ್ಮೆ ನನ್ನನ್ನು ಅನಾಥ ಮಾಡಿ ಈ ಲೋಕದ ಲೆಕ್ಕ ಚುಕ್ತಾ ಮಾಡಿ ಬೇರೆ ಲೋಕಕ್ಕೆ ಹೋಗಿ ಬಿಟ್ಟರು..! 


ಅವರನ್ನು ದೂರಲಾರೆ.. 


ಬಹುಶಃ ಪಾಪಿ ನಾನೇ ಇರಬೇಕು! 


ಅದೆಷ್ಟು ಸಾವು.... 


ಸಾಯುವವರೇ ನನಗೆ ಸಿಗುತ್ತಾರೆಯೇ..? 


ಅಥವಾ ನನಗೆ ಸಿಕ್ಕಿದವರೆಲ್ಲಾ ಸತ್ತು ಹೋಗುತ್ತಾರೆಯೇ..? 


ನನಗದು ಗೊತ್ತಿಲ್ಲ.. 


ಆದರೆ ಸದ್ಯಕ್ಕೆ ನನಗೆಂದು ಯಾರೂ ಇಲ್ಲ...! 


ಎಲ್ಲರಂತೆ ಬೆಳಿಗ್ಗೆ, ಮಧ್ಯಾಹ್ನ, ಕತ್ತಲು.. 


ಮಳೆಗಾಲ, ಚಳಿಗಾಲ, ಬೇಸಿಗೆಕಾಲ... ನನಗೂ ಆಗುತ್ತದೆ. 


ಆದರೆ ಯಾವುದರಲ್ಲಿಯೂ ಹಿತವಿಲ್ಲ!


ದೇವಸ್ಥಾನದ ಪುಷ್ಕರಣಿಯ ನೀರು ತಂಪೆನಿಸುತ್ತದೆ.. ಆದರೆ ಅದು ನನ್ನೊಳಗಿನ ದಾಹ ತೀರಿಸುವುದಿಲ್ಲ!


ದೇವಸ್ಥಾನದ ಜಗುಲಿಯಲ್ಲಿ ಒಂದೊಳ್ಳೆಯ ನಿದ್ದೆ ಬರುತ್ತದೆ.. 


ಆದರೆ ಕನಸು....? 


ಒಳ್ಳೆಯ ಕನಸು ನನಗೆ ಬೀಳುವುದೇ ಇಲ್ಲ. 


ಬಿದ್ದರೂ ಆ ಕನಸ್ಸಿನಲ್ಲಿ ನನಗೆ ಯಾರೂ ಇಲ್ಲ.. ಅಲ್ಲಿಯೂ ಅದೆಷ್ಟು ಒಬ್ಬಂಟಿ ನಾನು. 


ಯಾವುದೋ ಅಸ್ಪಷ್ಟ ಚಿತ್ರವೂ ಕೂಡ ಅಲ್ಲಿ ಮೂಡುವುದಿಲ್ಲ.. 


ಮೂಡಿದರೂ ಅದು ಅಷ್ಟೂ ಶಾಶ್ವತವಾಗಿ ಕಳೆದುಕೊಂಡಿರುವವರ ಚಿತ್ರ ಅಷ್ಟೇ..! 


ಬದುಕಿರುವವರು ನನ್ನ ಕನಸಲ್ಲಿ ಬರುವುದೇ ಇಲ್ಲ! 


ವಯಸ್ಸು ಇಪ್ಪತ್ತೈದು ಕಳೆದಿದೆ.... 


ಏತಕ್ಕಾಗಿ ಬದುಕುತ್ತಿದ್ದೆನೋ ಗೊತ್ತಿಲ್ಲ.....


ಆತ್ಮಹತ್ಯೆ ಮಹಾ ಪಾಪವಂತೆ.. 


ಆದರೆ ಬದುಕು ಸಾಕು ಎನಿಸುವಾಗ ಅದರಷ್ಟು ಒಳ್ಳೆಯ ಮಿತ್ರ ಬಹುಶಃ ನನ್ನಂತವನಿಗೆ ಬೇರೆ ಯಾರೂ ಇರಲೇ ಸಾಧ್ಯವೇ ಇಲ್ಲ..! 


ಅದೊಂದು ದಿನ ಅದನ್ನು ಕೂಡ ಪ್ರಯತ್ನಿಸಿದೆ....! 


ಸೀದಾ ಹೋಗಿ ರೈಲು ಪಟ್ಟಿಯಲ್ಲಿ ನಿಂತುಕೊಂಡು ನನ್ನೆರಡು ಬಾಹುಗಳನ್ನು ಅಗಲಕ್ಕೆ ಚಾಚಿ.... ರೈಲು ತಡವರಿಸದೆ ಅತೀ ವೇಗವಾಗಿ ನನ್ನೆದೆಯ ಮೇಲೆ ಹಾದು ಹೋಗಲಿ ಎಂದು ಶ್ರದ್ಧೆಯಿಂದ ಕಾದೆ.


ಆದರೆ ಪಾಪಿ ಹೋದಲ್ಲಿ ಸಾವು ಕೂಡ ಹೆದರಿ ಓಡಿ ಹೋಗುತ್ತೆ ಎಂದು ಗೊತ್ತಾಗಿದ್ದೇ ಆವತ್ತು..! 


ರೈಲು ಪಟ್ಟಿಯಲ್ಲಿ ನಿಂತವನಿಗೆ ಅಳುವ ಶಬ್ಧವೊಂದು ಅತೀ ಸನಿಹದಲ್ಲಿಯೇ ಕೇಳಿಸಿತ್ತು..! 


ಹಿಂತಿರುಗಿ ನೋಡಿದರೆ ಒಂದು ಹೆಣ್ಣು ಮಗಳು ನನ್ನಂತೆಯೇ ಸಾವನ್ನು ಅಪ್ಪಿಕೊಳ್ಳಲು,ಮುದ್ದಾಡಳು ಬಂದಿದ್ದಳು...!


ಅಮ್ಮನ ನೆನಪಾಯಿತು... 


ಮನಸ್ಸು ತಡೆಯಲಿಲ್ಲ.. 


ಅದಕ್ಕಾಗಿಯೇ ಅವಳನ್ನು ತಡೆದೆ....!!


ಆ ಕ್ಷಣ ಪಟ್ಟಿಯ ಮೇಲೆ ಹಾದು ಹೋದ ರೈಲು ಕೂಡ ,ಟ್ರ್ಯಾಕ್ ಪಕ್ಕದಲ್ಲಿ ಇನ್ನೂ ಸಾಯದೇ ನಿಂತಿದ್ದ ನನ್ನನ್ನು ನೋಡಿ ಅಣಕವಾಡಿ ಬಿಟ್ಟಿತು!!! 


ನಂತರ ಅವಳಲ್ಲಿಯೇ ಅವಳ ಕಥೆ ಕೇಳಿದೆ...


ಏತಕ್ಕಾಗಿ ಇಂತಹ ನಿರ್ಧಾರ ಎಂದು! 


ಅವಳು ಅವಳ ಕಥೆಯನ್ನು ಹೇಳಿದಳು.


ಸುಂದರವಾದ ಸಂಸಾರ,ಮೂರು ಹೊತ್ತು ನಗು, ಹೊಟ್ಟೆ ತುಂಬಾ ಊಟ.... ಇದು ಯಾವುದೂ ಅವಳ ಕಥೆಯಲ್ಲಿ ಇರಲಿಲ್ಲ!


ಅಂಕೆಗೆ ಸಿಗದ ಬಿಂಕವಿಲ್ಲದ ಕಥೆ ಅವಳದ್ದು! 


ಅನಾಥೆಯೇ ಎಂದು ಕೇಳಿದರೆ ಅದೂ ಅಲ್ಲ.. 


ಎಲ್ಲರೂ ಇದ್ದರು ಅವಳಿಗೆ... ಆದರೆ ಬಡತನ ಮಾತ್ರ ಅಧಿಕವಾಗಿತ್ತು.. ಬಹುಶಃ ಕಿತ್ತು ತಿನ್ನುವ  ಬಡತನ ಎಂದರೆ ಸರಿಯಾಗುತ್ತದೆ. 


ಆದರೆ ಬಡತನದಲ್ಲಿ ಪ್ರೀತಿ ಅರಳುವುದಿಲ್ಲ ಎಂದು ಯಾರು ಹೇಳಿದ್ದು.. 


ಅವಳಲ್ಲಿಯೂ ಪ್ರೀತಿ ಪ್ರೇಮಗಳು ಅರಳಿದವು, ತೊನೆದಾಡಿದವು.. ಅದೊಂದು ಅಮೃತಘಳಿಗೆಯಲ್ಲಿ. 


ಆದರೆ ಪ್ರೀತಿಸಿದವನ ಪ್ರೇಮದಲ್ಲಿ,ಪ್ರೇಮಕ್ಕಿಂತ ಕಾಮವೇ ಜಾಸ್ತಿ ಇತ್ತು!


ಅವಳು ಮುಗ್ಧೆ,ಬಡವರ ಹುಡುಗಿ ಬೇರೆ... 


ಪ್ರೀತಿಸಿದವನು ಅವಳಿಗೆ ಒಂದೊಳ್ಳೆಯ ಉಡುಗೊರೆಯನ್ನು ಸಹ ಕೊಟ್ಟು ಬಿಟ್ಟ..


ಅದುವೇ  ಫಲವತ್ತಾದ ಬಸಿರು!!


ದೇವರ ದಯೆಯಿಂದ ಗರ್ಭಿಣಿ ಆಗಿ ಬಿಟ್ಟಳು!! 


ದೇವರಿಗೇನೋ ಇಷ್ಟವಿತ್ತು ಕೊಟ್ಟು ಬಿಟ್ಟ... ಅವನು ಒಳ್ಳೆಯವನೇ! 


ಆದರೆ ಅವಳ ಪ್ರಿಯಕರ ಅಷ್ಟು ಒಳ್ಳೆಯವನಲ್ಲ ಅಲ್ಲವೇ.. ಹಾಗಾಗಿ ಅವನಿಗೆ ಇದು ಬೇಡವಾಗಿತ್ತು..!! 


ಅವನು ಅವಳನ್ನೇ ಬೇಡ ಎಂದ! 


ಅವಳ ಮನೆಯಲ್ಲಿಯೂ ವಿಷಯ ತಿಳಿಯಿತು.. 


ಮನೆಯಲ್ಲಿ ಇನ್ನೂ ಹೆಣ್ಣು ಮಕ್ಕಳು ಇದ್ದಾರೆ... ಆದ್ದರಿಂದ ಅವರೂ ಕೂಡ ನೀನು ನಮಗೆ  ಬೇಡ ಎಂದರು!


ಪ್ರೀತಿ ಸಿಕ್ಕಾಗ ಘಟಿಸಿದ್ದು ಅಮೃತಘಳಿಗೆ ಅಲ್ಲ...

ಅದೊಂದು ವಿಷಘಳಿಗೆ ಎಂಬ ಅರಿವು ಅವಳಿಗೆ ಬಹು ಸ್ಪಷ್ಟವಾಗಿಯೇ ಆಯಿತು! 


ಆಗ ಅವಳಿಗೆ ನೆನಪಾಗಿದ್ದೇ ಆ ರೈಲು ಪಟ್ಟಿಗಳು!! 


ಬಹುಶಃ ಅವಳಿಗೆ ಯಾರೋ ಹೇಳಿ ಕೊಟ್ಟಿರಬೇಕು.. ರೈಲು ಬರುವಾಗಲೇ ರೈಲು ಪಟ್ಟಿಗಳ ಮೇಲೆ ನಡೆದು ಹೋದರೆ ನಾವು  ಶಾಶ್ವತವಾದ ನಿಲ್ದಾಣ ತಲುಪಬಹುದು.. ಮುಂದೆ ನಮಗೆ ಯಾವ ದುಃಖವೂ ಇರುವುದಿಲ್ಲ ಎಂದು..!!


ಅವಳ ಕಥೆ ಕೇಳಿ ಅಯ್ಯೋ ಅನಿಸಿತು.... 


ನನಗಿಂತ ದೊಡ್ಡವಳೇ.. 


ತಾಯಿ ನಿನ್ನ ಹೆಸರು ಏನು.. ಕೇಳಿದೆ... 


" ಪರಿಮಳ.." ಅಂದಳು..


ನಾನು ಅವಳಿಗೆ ಹೇಳಿದೆ... ನೀನು ನನ್ನ ಅಕ್ಕನ ತರಹ.. ನಿನ್ನೊಳಗೊಂದು ಪರಿಮಳದ ಅರಳು ಮಲ್ಲಿಗೆ ಇಟ್ಟುಕೊಂಡು ಈ ರೀತಿ ರೈಲು ಪಟ್ಟಿಗಳೆಡೆಯಲ್ಲಿ ಅದನ್ನು ಹೊಸಕಿ ಹಾಕಿ ಕೊಳ್ಳುವುದು ಎಷ್ಟು ಸರಿ.. ನೀನು ಚಿಂತೆ ಮಾಡಬೇಡ ಅಕ್ಕಾ..ನಿನಗೂ ಮುಂದೆ ನಿನಗೆ ಹುಟ್ಟುವ ಮಗುವಿಗೂ.. ಈ ನಿನ್ನ ತಮ್ಮ ಖಂಡಿತವಾಗಿಯೂ ಆಸರೆ ಆಗುತ್ತಾನೆ.. ನನಗೂ ಯಾರೂ ಇಲ್ಲ.. ಅನಾಥರಿಗೆ ಅನಾಥರೇ ಆಗಿಬರೋದು ಅಲ್ಲವೇ  ಅಕ್ಕಾ.. ಅಂದೆ.


ಯಾರು ಹೆತ್ತ ಮಗಳೋ ಏನೋ.... 


ಹಾಗೇ ಕಣ್ಣೀರು ಸುರಿಸುತ್ತಲೇ ಬಂದು ನನ್ನ ಕೆನ್ನೆ ಸವರಿ.. ತಲೆ ನೇವರಸಿ ಬಿಟ್ಟಳು... ಬಹುಶಃ ಅಕ್ಕನವರ  ಪ್ರೀತಿ ಅಂದರೆ ಅದೇ ಇರಬೇಕು. ನಾನು ಅನಾಥ ನೋಡಿ.. ಇದೆಲ್ಲ ನನಗೆ ಅನುಭವಿಸಿ ಗೊತ್ತಿಲ್ಲ!


ದೇವಸ್ಥಾನ ಹೊರ ಜಗುಲಿಯಲ್ಲಿ ಮಲಗಿ ಎದ್ದೇಳುವ ನನಗೆ ಅವಳನ್ನು ಅಲ್ಲಿ ಮಲಗಿಸಲು ಮನಸ್ಸಿರಲಿಲ್ಲ... 


ಹೆಣ್ಣು ಅವಳು.. ಅದರಲ್ಲೂ ಬಸುರಿ ಹೆಣ್ಣು ಬೇರೆ. 


ಶೆಟ್ಟರ ಅಂಗಡಿಯಲ್ಲಿ ದಿನಾಲೂ ಮೂಟೆ ಹೊರುವ ಕೆಲಸ ಮಾಡುತ್ತಿದ್ದುದರಿಂದ ಸ್ವಲ್ಪ ಹಣ ಜೇಬಿನಲ್ಲಿ ಇತ್ತು. 


ಶೆಟ್ಟರ ಬಳಿ ಒಂದಷ್ಟು ಸಾಲ ಕೇಳಿದೆ...


ಬಾಡಿಗೆಗೆ ಒಂದು ರೂಮ್ ಕೂಡ ಪಡೆದುಕೊಂಡೆ... 


ಈ ರೀತಿಯಾಗಿ ಅದರಲ್ಲಿ ಪರಿಮಳ ಅಕ್ಕನ ವಾಸ್ತವ್ಯ ಶುರುವಾಯಿತು..


ಅವಳಿಗೆ ಅಡುಗೆಗೆ ಬೇಕಾದುದನ್ನು ಎಲ್ಲವನ್ನೂ ತಂದು ಕೊಡುತ್ತಿದ್ದೆ...


ಹಾಲು,ಹಣ್ಣು ಎಲ್ಲವನ್ನೂ .. 


ನಾನು ಮಾತ್ರ ರಾತ್ರಿ ಎಂದಿನಂತೆ ದೇವಸ್ಥಾನದ ಜಗಲಿಯಲ್ಲಿ ಮಲಗಿ ನಿದ್ರಿಸುತ್ತಿದ್ದೆ... 


ಈಗ ನಿಜವಾಗಿಯೂ ಒಂದೊಳ್ಳೆಯ ನೆಮ್ಮದಿಯ ನಿದ್ದೆ ಬರುತ್ತಿತ್ತು ನನಗೆ.. 


ಒಂದು ದಿನ ಪರಿಮಳ ಅಕ್ಕ ಅಮ್ಮ ಆಗುತ್ತಾಳೆ... ನಾನು ಮಾವ ಆಗುತ್ತೇನೆ ಎಂಬ ಕನಸು ಕಾಣುತ್ತಿದ್ದೆ ನಾನು. 


ಹಿಂದಿನಂತೆ ಊಟಕ್ಕೆಲ್ಲಾ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿದ್ದೆ ನಾನು.. 


ಪರಿಮಳ ಅಕ್ಕನ ಕೈ ರುಚಿ ನಿಜವಾಗಿಯೂ ಅದ್ಭುತವಾಗಿತ್ತು....


ಅವಳಲ್ಲಿ ನನಗೆ ಚಿಕ್ಕಂದಿನಲ್ಲಿ ಕಳೆದುಕೊಂಡ ನನ್ನ ಅಮ್ಮ ಕಂಡಳು..! 


ಪರಿಮಳ ಅಕ್ಕ ನನಗೆ ಹೇಳುತ್ತಿದ್ದಳು..ಯಾರು ಹೆತ್ತ ಮಗನೋ ನೀನೋ.. ನನಗೆ ತಮ್ಮನಂತೆ ಸಿಕ್ಕಿದೆ.. ನೀನು ಬಹುಕಾಲ ಸುಖವಾಗಿ ಬಾಳ ಬೇಕು ಕಣೋ... ಅದೇ ನನ್ನ ಆಸೆ. 


ಪರಿಮಳ ಅಕ್ಕ ಎಲ್ಲಾ ನೋವು ಮರೆತಿದ್ದಳು ಎಂದು ಕಾಣುತ್ತೆ. 


ಈಗ ಅವಳ ಮುಖದಲ್ಲೊಂದು ದಿವ್ಯ ಕಳೆ ಇತ್ತು.. 


ಆಸ್ಪತ್ರೆಗೆ ಹೋಗಿ ಚೆಕ್ ಅಪ್ ಎಲ್ಲಾ ನಿರಂತರವಾಗಿ ಮಾಡಿಕೊಳ್ಳುತ್ತಿದ್ದೆವು.... 


ವೈದ್ಯರು ಹೇಳಿದ ಡೇಟ್ ಗೆ ಸರಿಯಾಗಿ ಪರಿಮಳ ಅಕ್ಕನನ್ನು ಆಸ್ಪತ್ರೆಗೆ ಕೂಡ ಸೇರಿಸಿದ್ದೆ... 


ಆ ದಿನ ನಿಜವಾಗಿಯೂ ನಾನು ತುಂಬಾ ಸಂತೋಷವಾಗಿದ್ದೆ... 


ಯಾವ ಜನ್ಮದ ಪುಣ್ಯವೋ ನನ್ನನ್ನು ಒಬ್ಬರು ಬಾಯಿ ತುಂಬಾ "ಮಾವ..." ಎಂದು ಕರೆಯುವವರು ಭೂಮಿಗೆ ಸಧ್ಯವೇ ನಡೆದು  ಬರುವವರಿದ್ದರು...


ಸಂಜೆಗೆ ಹೆರಿಗೆ ಆಗಬಹುದು ಎಂದು ಡಾಕ್ಟರ್ ಹೇಳಿದ್ದರು. 


ಹಾಗಾಗಿ ನಾನು ಮಧ್ಯಾಹ್ನವೇ ಹೋಗಿ ಎಲ್ಲರಿಗೂ ಹಂಚಲು ಲಾಡು ಖರೀದಿಸಿ ಬಿಟ್ಟೆ.. 


ಸಿಹಿ ಹಂಚಲು ನನಗೆ ಅಂತ  ಯಾವ ಬಂಧು ಬಳಗವಿದೆ ಹೇಳಿ ... 


ಅದೇ ಅಂಗಡಿ ಶೆಟ್ಟರು.. ದೇವಸ್ಥಾನದ ಜಗುಲಿಯಲ್ಲಿ ನನ್ನಂತೆ ಮಲಗುವ ಅನಾಥರು.. ಅಷ್ಟೇ ನನ್ನ ಲೋಕ..

ಹೌದು ಅವರಿಗಾಗಿಯೇ ನನ್ನ ಸಂತೋಷವನ್ನು ಹಂಚಲು ಲಾಡು ತಂದಿದ್ದೆ. 


ಅವರಲ್ಲೆರಲ್ಲೂ ನಾನು ಮೊದಲೇ ಹೇಳಿ ಬಂದಿದ್ದೆ... ಈ ದಿನ ನಾನು ಮಾವ ಆಗುತ್ತೇನೆ..ಆಮೇಲೆ ನಾನು ನಿಮಗೆಲ್ಲಾ ಸಿಹಿ ಹಂಚುತ್ತೇನೆ ನೋಡಿ.. ಎಂದು. 


ಎಲ್ಲರೂ ಮನಸಾರೆ ಹರಸಿದ್ದರು... 


ಆದರೆ ದೇವರು ಹರಸಲಿಲ್ಲ.!!


ಆಪರೇಷನ್ ಥಿಯೇಟರ್ ಹೊರಗಡೆಯೇ ಕುಳಿತಿದ್ದೆ... ಖಂಡಿತವಾಗಿಯೂ ಕನಸೇ ಕಾಣುತ್ತಿದ್ದೆ. 


ಆಪರೇಷನ್ ಥಿಯೇಟರ್ ನಿಂದ ಹೊರಗೆ ಬಂದ ವೈದ್ಯರು   "ಮಗುವಿನ ತಾಯಿ ಕಡೆಯವರು ಯಾರು ಇದ್ದೀರಾ...." ಎಂದು ಹೇಳಿದರು. 


ಎದ್ದು ಬಿದ್ದು ವೈದ್ಯರ ಬಳಿಗೆ ಓಡಿದೆ... 


ಯಾರು ನೀವು.. ವೈದ್ಯರು ಕೇಳಿದರು.. 


ನಾನು.. ನಾನು ಅವರ ತಮ್ಮ.. 'ಪುಷ್ಯರಾಗ' ಅಂದೆ. 


ವೈದ್ಯರು ಏನೂ ಹೇಳಲಿಲ್ಲ... 


ಏನಾಯಿತು ಡಾಕ್ಟರ್.. ಕೇಳಿದೆ.. 


ಗಂಡು ಮಗು ಆಯಿತು...ಅಂದರು  ಡಾಕ್ಟರ್. 


ನನ್ನ ಖುಷಿಗೆ ಪಾರವೇ ಇರಲಿಲ್ಲ.


ಕೊನೆಗೂ ನಾನು ಮಾವ ಆಗಿದ್ದೆ.


ಗಾಳಿಯಲ್ಲಿ ತೇಲಿ ಹೋಗಿದ್ದೆ ನಾನು.. 


ಆದರೆ ಡಾಕ್ಟರ್ ಮಾತು ಇನ್ನೂ ಮುಗಿದಿರಲಿಲ್ಲ... ಡಾಕ್ಟರ್ ಮುಂದುವರಿಸಿ ಹೇಳಿದರು.. " ಆದರೆ ತಾಯಿ ಯನ್ನು ಉಳಿಸಿ ಕೊಳ್ಳಲು ಆಗಲಿಲ್ಲ.... ಅದೇ ರೀತಿ ಹುಟ್ಟಿದ ಮಗವನ್ನು ಕೂಡ... I am sorry.. ಎಂದು ಭುಜದ ಮೇಲೆ ಕೈ ಇಟ್ಟು ಸಮಾಧಾನ ಪಡಿಸಿದ ಡಾಕ್ಟರ್... ಅಲ್ಲಿಂದ ನಡೆದೇ ಬಿಟ್ಟಿದ್ದರು..!!


ಆಸ್ಪತ್ರೆಯ ಎಲ್ಲಾ ಪ್ರಕ್ರಿಯೆ ಮುಗಿದು ಎರಡೂ ಮೃತ ಶರೀರ  ಸ್ಮಶಾನಕ್ಕೆ ತಲುಪಿತು...! 


ಮತ್ತು ನಾನು..... ನಾನು ಈಗ ಪರಿಮಳ ಅಕ್ಕ ಮತ್ತು ಅವಳ ಎಂದೂ ಉಸಿರಾಡದ ಮಗುವಿನ ಶವದ ಮುಂದೆಯೇ  ನಿಂತಿದ್ದೇನೆ..ಸ್ಮಶಾನದಲ್ಲಿ!!! 


ಶವದ ಮುಂದೆ ಎಷ್ಟೋ ಸಮಯ ಹಾಗೇ ಕದಲದೇ ನಿಂತಿದ್ದ ನನ್ನ ಮನಸ್ಸಲ್ಲಿ ಇಷ್ಟೆಲ್ಲಾ ವಿಷಯಗಳು ಒಮ್ಮೆಗೆ ಹಾಗೆಯೇ  ಹಾದು ಹೋಗಿದ್ದವು!!!


ಹೇಗೆ ಸಾವು ನನಗೆ ಹೊಸತ್ತಲ್ಲವೋ.. ಅದೇ ರೀತಿ ಸ್ಮಶಾನ ಕೂಡ ನನಗೆ ಹೊಸತಲ್ಲ...! 


ಚಿಕ್ಕಂದಿನಲ್ಲಿ ಯಾವುದಕ್ಕೂ ಪ್ರಯೋಜನಕ್ಕೆ ಬಾರದ,ಕುಡಿದು ಅಮ್ಮನನ್ನು ಅತಿಯಾಗಿ ಹಿಂಸಿಸುತ್ತಿದ್ದ ಅಪ್ಪ ಕುಡಿದು ಕುಡಿದೇ  ಸತ್ತು ಹೋದಾಗ.. ನಾನು ಮತ್ತು ಅಮ್ಮ ಅವನನ್ನು ಕಷ್ಟ ಪಟ್ಟು ಸ್ಮಶಾನದವರೆಗೆ ಎಳೆದುಕೊಂಡು ಬಂದು ಸುಟ್ಟಿದ್ದೆವು..! 


ನಂತರ ಕೆಲವೇ ವರ್ಷಗಳಲ್ಲಿ ಅಮ್ಮ ಕೂಡ ಸತ್ತು ಹೋದಳು...! 


ಅವಳನ್ನು ಕೂಡ ನಾನೇ ಸ್ಮಶಾನದವರೆಗೆ ತಂದು ಸುಟ್ಟಿದ್ದೆ! 


ನಂತರ ಸಿಕ್ಕವರೆಲ್ಲರೂ ಹೀಗೆಯೇ ಸತ್ತು ಹೋದರು.. ದೂರದಲ್ಲಿ ನಿಂತುಕೊಂಡು ಅವರೆಲ್ಲರು ಉರಿದು ಬೂದಿಯಾಗುವುದನ್ನು ಹಾಗೇ ಎವೆಯಿಕ್ಕದೆ ನೋಡಿದ್ದೆ.. 


ಈಗ ಪರಿಮಳ ಅಕ್ಕ ಮತ್ತು ಅವಳ ಮಗು..! 


ಇವರನ್ನು ಸಹ ಸ್ಮಶಾನ ಮಧ್ಯದಲ್ಲಿ ನಾನೇ ನನ್ನ ಕೈಯಾರೆ ಉರಿಸಿ ಬಿಟ್ಟೆ! 


ಎಲ್ಲೋ ಸಿಕ್ಕಿದ್ದಳು ಪರಿಮಳ ಅಕ್ಕ... ಕೊನೆಗೊಮ್ಮೆ ಸ್ಮಶಾನದ ಬೂದಿ ಆಗಿ ಬಿಟ್ಟಳು..!


ಇದ್ದಷ್ಟು ದಿನ ತಮ್ಮ ಎಂದಳು..


ನಾನು ಅಕ್ಕ ಎಂದೆ...


ಮುಂದೆ ಅವಳ ಮಗು.. " ಪುರು ಮಾವ.." ಎಂದು ನನ್ನನ್ನು ಬಾಯಿ ತುಂಬಾ ಕರೆಯ ಬೇಕಾಗಿತ್ತು...


ಆದರೆ ಅವಳಿಗೂ ಅವಸರ..


ಅವಳ ಮಗುವಿಗೂ ಅವಸರ..


ಹೋಗಿ ಬಿಟ್ಟಳು!! 


ಆದರೆ ನಾನು ಅಳಲಿಲ್ಲ... 


ನನ್ನ ಅಮ್ಮ ಸದಾ  ಹೇಳುತ್ತಿದ್ದಳು.. " ಪುರು...ಯಾರಾದರೂ ಪ್ರೀತಿ ಪಾತ್ರರು ಸತ್ತಾಗ ಅಳಬೇಡ... ಅತ್ತರೆ ಅವರ ನೆನಪುಗಳೆಲ್ಲವೂ ಕಣ್ಣೀರಾಗಿ ಹೋಗಿ ಬಿಡುತ್ತದೆ... ಒಂದು ದಿನ ನಾನು ಕೂಡ ಸಾಯುತ್ತೇನೆ... ಆಗಲೂ ನೀನು ಅಳಬೇಡ  ಪುರು.." 


ಹಾಗೆ ಹೇಳಿದ ಅಮ್ಮ ಕೂಡ  ಒಂದು ದಿನ  ಸತ್ತು ಹೋದಳು.... 


ಇಲ್ಲ...


ಅವಳಿಗಾಗಿ ನಾನು ಅಳಲಿಲ್ಲ! 


ಅವತ್ತು ಮಾತ್ರವಲ್ಲ.. 


ಆ ನಂತರ ನಾನು ಯಾವತ್ತೂ ಜೀವನದಲ್ಲಿ ಅಳಲೇ ಇಲ್ಲ! 


ಮಾತ್ರವಲ್ಲ.... ಸರಿಯಾಗಿ ನಗಲೂ ಇಲ್ಲ!! 


ಕೇವಲ ನಿರ್ಲಿಪ್ತತೆಯೇ ನನ್ನ ಆಸ್ತಿಯಾಗಿ ಬಿಟ್ಟಿತ್ತು...! . 


ಸ್ಮಶಾನದಿಂದ ಹಿಂದಿರುಗಿದವನೇ ತಂದಿಟ್ಟ ಲಾಡು ನನ್ನನ್ನು ನೋಡಿ ಅಣಕವಾಡಿತು..! 


ಅದನ್ನು ಬಿಸಾಡುವ  ಮನಸ್ಸಾಗಲಿಲ್ಲ... 


ದೇವಸ್ಥಾನದ ಬಳಿ ಇದ್ದ ನನ್ನಂತ ಅನಾಥರಿಗೆ ಹಂಚಿ ಬಿಟ್ಟೆ.. 


ಪರಿಚಯದ ಒಬ್ಬಳು ವೃದ್ಧೆ ಕೇಳಿದಳು.. 


"ಪುರು... ಯಾವ ಖುಷಿಗೆ ಲಾಡು ಹಂಚುತ್ತಿದ್ದಿಯಪ್ಪಾ..." ಎಂದು....


ಉತ್ತರಗಳಿಗೆ ತಡಕಾಡಿ ಬಿಟ್ಟೆ ನಾನು..!! 


.....................................................................................


#ಪುಷ್ಯರಾಗ 🧡


ab pacchu 

moodubidire

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!