ಭಗವಂತ ಇದ್ದಾನೆ
ದೇವರನ್ನು ಕಣ್ಣಾರೆ ನೋಡಿಲ್ಲ,ಖುದ್ದು ಮಾತಾಡಿಸಿಲ್ಲ, ಬೇಟಿ ಅಂತು ಆಗಿಯೇ ಇಲ್ಲ, ಆತನೂ ಎದುರು ಬಂದು ಮುಗುಳ್ನಕ್ಕು ತಲೆ ಸವರಲಿಲ್ಲ,ಏನು ಬೇಕು ಎಂದು ಬಾಯ್ಬಿಟ್ಟು ಕೇಳಲಿಲ್ಲ... ಆದರೂ ಅವನು ಇದ್ದಾನೆ...
ಬೆಳಗ್ಗಿನ ಜಾವದ ವಿನೀತ ಪ್ರಾರ್ಥನೆಯಲ್ಲಿ ಅವನು ಕೈಜೋಡಿಸಿ ಕಣ್ಣುಮುಚ್ಚಿದಾಗಲೆಲ್ಲ ಪ್ರತ್ಯಕ್ಷನಾಗುತ್ತಾನೆ..
ಅಮ್ಮ ಅಪ್ಪನ ಆಶೀರ್ವಾದದಲ್ಲಿ ಅವನು ರಕ್ಷಕವಚದಂತೆ ಇದ್ದಾನೆ..
ಬಟ್ಟಲಿನೊಳಗಿನ ಅನ್ನ ದಲ್ಲಿ ಅವನು ತೃಪ್ತಿ ಆಗುವಷ್ಟು ಇದ್ದಾನೆ..
ಪುಸ್ತಕದೊಳಗಿನ ಜ್ಞಾನ ದಲ್ಲಿ ಅವನು ಅಗಣಿತವಾಗಿ ಇದ್ದಾನೆ..
ಗುರು ಎಂಬ ಭಕ್ತಿಯಲ್ಲಿ, ಜೀವನ ಕಟ್ಟಿಕೊಳ್ಳೋ ವಿದ್ಯೆಯಲ್ಲಿ ಅವನು ಅನಂತನಾಗಿದ್ದಾನೆ..
ಹಸು ಎಂಬ ಕಾಮದೇನು ವಿನಲ್ಲಿ ಅವನು ಅಮೃತದಂತೆ ಇದ್ದಾನೆ..
ನೀರು ಎಂಬ ಗಂಗೆಯಲ್ಲಿ ಅವನು ಜೀವಜಲದಂತೆ ಇದ್ದಾನೆ..
ಉಸಿರಾಡೋ ಗಾಳಿಯಲ್ಲಿ ಅವನು ಪ್ರಾಣದಂತೆ ಇದ್ದಾನೆ..
ನೋವಾದಾಗ ಕೂಗಿ ಕೊಳ್ಳೋ ಅಮ್ಮಾ ಎಂಬ ಪದದಲ್ಲೂ ಅವನೇ ಇದ್ದಾನೆ..
ರಕ್ತ ಹರಿಸಿ ಜನ್ಮ ನೀಡಿ ಮರು ಹುಟ್ಟು ಪಡೆಯೋ ಅಮ್ಮನಲ್ಲೂ ಅವನು ಇದ್ದಾನೆ..
ಜೀವನ ಪೂರ್ತಿ ಬೆವರು ಸುರಿಸುವ ಅಪ್ಪನಲ್ಲೂ ಅವನು ಇದ್ದಾನೆ...
ಸಹಾಯ ಹಸ್ತ ಚಾಚಿದಕ್ಕಾಗಿ ಮನಸಾರೆ ಹರಸೋ ಬೊಚ್ಚು ಬಾಯಿಯ ವೃದ್ಧೆ ಭಿಕ್ಷುಕಿಯ ಹಾರೈಕೆಯಲ್ಲೂ ಅವನು ಇದ್ದಾನೆ..
ದುಡಿದ ಹಣ ಇರೋ ಕಳೆದು ಹೋದ ಪರ್ಸ್ ಅನ್ನು ಹಾಗೆಯೇ ಸುರಕ್ಷಿತವಾಗಿ ಹಿಂದಿರುಗಿಸೋ ಆಟೋ ಡ್ರೈವರ್ ನ ನಿಯತ್ತಿನಲ್ಲೂ, ಪ್ರಾಮಾಣಿಕತೆಯಲ್ಲೂ ಒಬ್ಬ ಭಗವಂತ ಇದ್ದಾನೆ..
ರಸ್ತೆ ಬದಿಯಲ್ಲಿ ಗಂಭೀರವಾಗಿ ಆಕ್ಸಿಡೆಂಟ್ ಆಗಿ ಬಿದ್ದಾಗ ಸಾಹಯಕ್ಕಾಗಿ ಆಗಮಿಸೋ ದಾರಿಹೋಕನಲ್ಲೂ ಒಬ್ಬ ಭಗವಂತ ಇದ್ದಾನೆ..
ಪರಿಚಯವೇ ಇಲ್ಲದಿದ್ದರೂ ನಡುರಾತ್ರಿಯಲ್ಲಿ ಬಂದು ರಕ್ತದಾನ ಮಾಡೋ ಒಬ್ಬ ದಾನಿಯಲ್ಲೂ ಭಗವಂತ ಇದ್ದಾನೆ..
ಹಸಿವಾದಾಗ ಒಂದು ತುತ್ತು ಅನ್ನ ಹಾಕೋ ತಾಯಿ ಹೃದಯದ ಅಪರಿಚಿತ ಮಹಿಳೆಯಲ್ಲೂ ಒಬ್ಬ ಭಗವಂತ ಇದ್ದಾನೆ...
ಕೆಲವರಿಗೆ ಅವನು ಏಕವಚನ, ಇನ್ನು ಕೆಲವರಿಗೆ ಬಹುವಚನ, ಪುಲ್ಲಿಂಗ, ಸ್ತ್ರೀ ಲಿಂಗ,ಕಲ್ಲು,ವಿಗ್ರಹ, ಪ್ರಕೃತಿ.... ಇನ್ನೂ ಕೆಲವರಿಗೆ ಆತ ನಂಬಿಕೆ.
ಆದರೆ ಆತ ಇದ್ದಾನೆ.. ಆತ ಎಲ್ಲರಲ್ಲೂ ಇದ್ದಾನೆ, ನಮ್ಮಲ್ಲೂ ಇದ್ದಾನೆ... ನಾವು ಕಾಣಬೇಕು ಅಷ್ಟೇ...ಕಣ್ಣಿಗೆ ಕಾಣದ ಆತ ಎಷ್ಟು ಸರ್ವವ್ಯಾಪಿಯೋ..ಅಷ್ಟೇ ಸರ್ವಂತರ್ಯಾಮಿ ಯೂ ಕೂಡ ಹೌದು..
ಹೌದು ಭಗವಂತ ಇದ್ದಾನೆ.. 😊🙏🏻
.....................................................................................
#ಏನೋ_ಒಂದು
AB Pacchu
Moodubidire

Comments
Post a Comment