ಖುಷಿ ಎಂದರೆ..

 

ಖುಷಿ ಎನ್ನುವುದು ನಮ್ಮ ಖುಷಿಗಿಂತ ಬೇರೊಬ್ಬರ ಖುಷಿಯಲ್ಲಿ ಅದು ಅಡಕವಾಗಿದ್ದರೆ ಮತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಅದಕ್ಕೆ ನಾವು ಯಾವುದೋ ಒಂದು ಮೂಲೆಯಲ್ಲಿ ಕಾರಣವಾಗಿದ್ದರೆ, ಇಲ್ಲ ನಮಗೂ ಆ ಘಟನೆಗೆ ಸಂಬಂಧ ಇದ್ದರೆ .... ಆ ಖುಷಿ ಯಾವತ್ತೂ ಅಧಿಕವಾಗಿಯೇ ಇರುತ್ತದೆ ಮತ್ತು ಅದು ಆಹ್ಲಾದಕರವಾಗಿಯೇ ಇರುತ್ತದೆ 😊

ಚಿಕ್ಕ ಮಗ ಇಲ್ಲವೇ ಮಗಳು..  ವೇದಿಕೆ ಹತ್ತಿ ಪ್ರಶಸ್ತಿ ತೆಗೆದು ಕೊಂಡಾಗ.. ಖುಷಿ ಎನ್ನುವುದು ಮಕ್ಕಳಿಗಿಂತಲೂ ಅಧಿಕವಾಗಿರುವುದು ತಂದೆ ತಾಯಿಯ ಮುಖದಲ್ಲಿಯೇ ಮತ್ತು ಕಣ್ಣುಗಳಲ್ಲಿಯೇ..

ಪಕ್ಕದ ಮನೆಯ ವಯಸ್ಸಿಗೆ ಬಂದ ಹೆಣ್ಣು ಮಗಳು ಒಂದೊಳ್ಳೆಯ ಮನೆಗೆ ಮದುವೆ ಆಗಿ ಹೋದರೆ... ನಮಗೂ ಅದೆನೋ ಖುಷಿ...ನಮಗೆ ಅದರಿಂದ ಏನೂ ಲಾಭವಿಲ್ಲ,ಆದರೆ ಆ ಹೆಣ್ಣು ಮಗುವಿನ ತಾಯಿ ತಂದೆಯ ಖುಷಿ ಕಂಡಾಗ ನಮಗೂ ಏನೋ ಒಂದು ವಿವರಿಸಲಾರದ  ಖುಷಿ...

ಕ್ಲಾಸ್ ನಲ್ಲಿ distinction ನಲ್ಲಿ ಪಾಸಾಗೋ ಎಷ್ಟೋ ವಿದ್ಯಾರ್ಥಿಗಳಿರಲಿ  ಆದರೆ ಜಸ್ಟ್ ಪಾಸ್ ಆಗಲು ಕಷ್ಟ ಪಡೋ ಒಬ್ಬ ವಿದ್ಯಾರ್ಥಿ ಟೀಚರ್ ನ ಅಪರಿಮಿತ ಪರಿಶ್ರಮ ದಿಂದ ಕೊನೆಗೂ ಹೇಗೋ ಪಾಸ್ ಆಗಿಬಿಟ್ಟರೆ... ಆ ಖುಷಿ ಎಂತಹದ್ದು ಎಂದು ಸ್ವತಃ ಪಾಸ್ ಆದ ಹುಡುಗನಿಗಿಂತಲೂ ಆ ಟೀಚರ್ ಗೆ ಒಮ್ಮೆ ಕೇಳಿ ನೋಡಿ. ಬಹುಶಃ ಉಳಿದ ವಿದ್ಯಾರ್ಥಿಗಳು distinction ತೆಗೆಯುವುದಕ್ಕಿಂತಲೂ ಅದು ಯಾವತ್ತೂ ಅಧಿಕವಾಗಿರುತ್ತದೆ...

ದುರ್ಬಲ ತಂಡವೊಂದು ಕಟ್ಟಿಕೊಂಡು ಬಲಿಷ್ಠ ತಂಡವನ್ನು  ಕಷ್ಟ ಪಟ್ಟು ಸೋಲಿಸಿ ಬಿಟ್ಟಾಗ... ತಂಡದ ಆಟಗಾರರಿಗಿಂತಲೂ ಮನಸ್ಸು ಮೊದಲು ಹಿರಿ ಹಿರಿ ಹಿಗ್ಗುವುದು ತಂಡಕ್ಕಾಗಿ ಬೆವರು ಸುರಿಸಿ ಆಟಗಾರರಲ್ಲಿ ಹಗಲಿರುಳು ಕನಸನ್ನು ತುಂಬಿ ಅದನ್ನು ನನಸು ಮಾಡಿಸಿದ ಒಬ್ಬ ಕೋಚ್ ಗೆ, ಅವನಲ್ಲಿ ಕೇಳಿ ಖುಷಿ ಅಂದರೆ ಏನೆಂದು...

ತನ್ನ ಮಗಳು ತಾಯಿ ಆದಾಗ, ಮಗಳ ಮಗುವನ್ನು ಎಣ್ಣೆ ಹಾಕಿ ಚೆನ್ನಾಗಿ ಮೈಯೆಲ್ಲಾ ತಿಕ್ಕಿ ಬಿಸಿನೀರಲ್ಲಿ ಸ್ನಾನ ಮಾಡಿಸುವಾಗ ಆ ತಾಯಿಯೇ ತಾನು ತಾಯಿ ಆದಷ್ಟು ಸಂತೋಷ ಪಡುತ್ತಾಳೆ...ಖುಷಿ ಅಂದರೆ ಅದು, ತಾಯಿಗೆ ಗೊತ್ತು ತಾಯ್ತನದ ಖುಷಿ ಅಂದರೆ ಏನು ಎಂದು...ಮಗಳ ತಾಯ್ತನದಲ್ಲಿ ಅತಿಯಾಗಿ ಖುಷಿ ಪಡುವುದು ಕೂಡ ಅವಳೇ..

ಧಣಿ ಯ ತೋಟದಲ್ಲಿ ದಿನಾಲೂ ತೋಟದ  ಕೆಲಸ ಮಾಡೋ ರಾಮಣ್ಣ, ತೋಟದಲ್ಲಿ ನೆಟ್ಟ ತೆಂಗಿನ ಗಿಡಗಳು ಮುಂದೆ ಎಷ್ಟೋ ವರ್ಷಗಳ ನಂತರ ದೊಡ್ಡದಾಗಿ ಮರವಾಗಿ ಅದು  ಫಸಲು ನೀಡಲು ಶುರುವಾದಾಗ, ಧಣಿ ಗಿಂತಲೂ ಹೆಚ್ಚು ಖುಷಿ ಸ್ವತಃ ರಾಮಣ್ಣನೇ ಪಡುತ್ತಾನೆ,ಮರಗಳ ಮೈ ಸವರಿ ಕಣ್ಣರಳಿಸಿ ಕೆಳಗಿಂದ ಮೇಲೆ ಮರವನ್ನು ನೋಡಿ ಖುಷಿ ಪಡುತ್ತಾನೆ.. ಯಾಕೆಂದರೆ ಅದು ಆತನೇ ಕೈಯಾರ ನೆಟ್ಟ ಗಿಡಗಳು...ಗಿಡ ಅವನದ್ದು ಅಲ್ಲದಿರಬಹುದು, ಆದರೆ ಅವನಿಗೆ ಏನೋ ಒಂದು ತೃಪ್ತಿ..

ಕ್ಲಾಸ್ ಮೇಟ್ ಒಬ್ಬ ಯೂನಿವರ್ಸಿಟಿ ಗೆ ಗೋಲ್ಡ್ ಮೆಡಲ್ ಪಡೆದುಕೊಂಡು ಬಿಟ್ಟರೆ, ನಾವೇ ಪಡೆದುಕೊಂಡಷ್ಟು ಖುಷಿ, ಕಾರಣ ಆತ ನನ್ನೊಡನೆ ಓದಿದವ ಎಂಬ ಖುಷಿ..

ನಮ್ಮೊಡನೆ ಕಬ್ಬಡಿ ಆಡಿದ ಹುಡುಗನೊಬ್ಬ ಮುಂದೊಂದು ದಿನ ಟಿವಿಯಲ್ಲಿ ಇಡೀ ದೇಶವೇ ನೋಡುವಂತೆ ಕಬ್ಬಡಿ ಆಡುತ್ತಾನೆ ಎಂದರೆ, ಅವನ ತಂದೆ ತಾಯಿಯಷ್ಟೇ ಖುಷಿ ನಮಗಾಗುವುದು... ಖುಷಿ ಅಂದರೆ ಅದು, ನಾವು ಆಡದಿದ್ದರು ಅಲ್ಲಿ ಆಡುವವ ನಮ್ಮೊಡನೆ ಒಂದು ಕಾಲದಲ್ಲಿ ಆಡಿದವ ಎನ್ನುವ ಖುಷಿ ...

ಊರಲ್ಲಿ ಒಬ್ಬ ಅರ್ಮಿ ಗೆ ಭರ್ತಿ ಹೊಂದುತ್ತಾನೆ ಎಂದರೆ... ಆ ಊರಿನ ಜನರಲ್ಲಿ ಒಮ್ಮೆ ಕೇಳಿ ನೋಡಿ ಖುಷಿ ಅಂದರೆ ಏನೆಂದು..ನಾವು ಎದುರಾಳಿಗಳ ಎದೆ ಸೀಳಬೇಕಾಗಿಲ್ಲ, ಅವ ಸೀಳಿಬಿಟ್ಟರೆ ಸಾಕು.. ಅದು ನಾವೇ ಸೀಳಿದಷ್ಟು ಖುಷಿ...

ಖುಷಿ ಎನ್ನುವುದು ಬಂಗಾರದ ಗಟ್ಟಿಗಳಲ್ಲಿ, ಕಂತೆ ನೋಟುಗಳಲ್ಲಿ ಇಲ್ಲವೇ ಇಲ್ಲ.

ಅದನ್ನು ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ,ಮತ್ತೊಬ್ಬನಿಗೆ ಅರ್ಥ ಆಗುವಂತೆ ವಿವರಿಸಲು ಕೂಡ ಸಾಧ್ಯವಿಲ್ಲ...ಅದನ್ನು ಕೇವಲ ಅನುಭವಿಸಬಹುದು ಅಷ್ಟೇ.

ನಿಸ್ವಾರ್ಥವಾಗಿ ಬೇರೆಯವರ ಖುಷಿಯಲ್ಲಿ ನಮ್ಮ ಖುಷಿ ಕಾಣುವುದು ನಿಜಕ್ಕೂ ಅತೀ ಹೆಚ್ಚಿನ ಆನಂದ ನೀಡುತ್ತದೆ.ಅದರಿಂದ ನಮಗೆ ಲಾಭವಿಲ್ಲದೇ ಇರಬಹುದು, ಆದರೆ ಅದರಿಂದ ಆಗೋ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.

ಕೆಲವರಂತು ಬೇರೆಯವರ ಖುಷಿ ಗಾಗಿಯೇ ತಮ್ಮ ಇಡೀ  ಬಾಳನ್ನು ಮುಡಿಪಾಗಿ ಇಡುತ್ತಾರೆ.
ಯಾರಿಗಾಗಿ ಮುಡಿಪಾಗಿ ಇಡುತ್ತಾರೋ ಅವರು ಖುಷಿ ಆದರೆ ಆ  ಮತ್ತೊಂದು ಜೀವವೂ ಅಷ್ಟೇ ಖುಷಿ ಪಡುತ್ತದೆ..

ಇಲ್ಲಿ ಯಾವುದೇ ಒಡಂಬಡಿಕೆಗಳಿಲ್ಲ, ಅಗ್ರಿಮೆಂಟ್ ಗಳಿಲ್ಲ... ಆದರೆ ಖುಷಿ ಯ ಆನಂದಕ್ಕೆ ಬೌಂಡರಿಗಳಿಲ್ಲ..

ಬಾಳಿನ ಸಮಸ್ಯೆಗಳು ಎಷ್ಟೇ ದೊಡ್ಡದಿರಲಿ, ಜೀವನದ ಚಿಕ್ಕ ಚಿಕ್ಕ ಖುಷಿ ಗಳನ್ನು ಅನುಭವಿಸಲು ಮರೆಯಬೇಡಿ,ಅದು ನಮ್ಮದಿರಲಿ ನಮ್ಮದಲ್ಲದೇ ಇರಲಿ..

ನಾವು ಹೇಗೆ ಬೇರೆಯವರ ಖುಷಿ ಯಲ್ಲಿ ಪಾಲುದಾರರಾಗುತ್ತೆವೆಯೋ ಅದೇ ರೀತಿ ನಮ್ಮ ಖುಷಿಯನ್ನು ಬೇರೊಬ್ಬರು ತಮ್ಮ ಖುಷಿ ಎಂದು ಖುಷಿಪಟ್ಟರೆ  ಅದು ನಮ್ಮ ಭಾಗ್ಯ, ಅಂತವರ ಸಂಖ್ಯೆ ಹೆಚ್ಚಾಗಲಿ.. ಅದೇ ರೀತಿ ನಾವು ಕೂಡ ಅವರಂತಾಗುವ  ಮನಸ್ಥಿತಿ ಇನ್ನಷ್ಟು ಹೆಚ್ಚಾಗಲಿ... 😊

.....................................................................................

#ಏನೋ_ಒಂದು

Ab Pacchu
Moodubidire



Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!