ಅವರಿಗೆ ಭಯ ಅಂದರೆ ಏನೆಂದೇ ಗೊತ್ತಿಲ್ಲ!
2020-21 ರ ಭಾರತದ ಆಸ್ಟ್ರೇಲಿಯಾ ಪ್ರವಾಸದಲ್ಲಿ,ಸಿಡ್ನಿ ಪಂದ್ಯದಲ್ಲಿ ಕೊನೆಯ ಇನ್ನಿಂಗ್ಸ್ ನಲ್ಲಿ 200 ರನ್ ಕೂಡ ಭಾರತೀಯ ತಂಡ ಹೊಡೆಯುವುದಿಲ್ಲ ಎಂದು ಹೇಳಿದ್ದ ಆಸ್ಟ್ರೇಲಿಯಾ ದ ಪಟಿಂಗ (ಪಾಂಟಿಂಗ್), ಭಾರತೀಯ ತಂಡ ಕೊನೆಯ ಇನ್ನಿಂಗ್ಸ್ ನಲ್ಲಿ 334 ರನ್ ಹೊಡೆದು ವಿರೋಚಿತ ಡ್ರಾ ಮಾಡಿಕೊಂಡ ಆ ನಂತರವೂ ಸುಮ್ಮನೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿರಲಿಲ್ಲ.
ತಮ್ಮ ತಂಡದ ಕೈಯಲ್ಲಿ ಏನೂ ಕಿಸಿಯಲು ಆಗದೇ ಇದ್ದಾಗ ಅಲ್ಲಿನ ನಿವೃತ್ತ ಹಿರಿಯ ಆಟಗಾರರು, ಅವರ ಮೀಡಿಯಾ, ಅಲ್ಲಿನ ಕ್ರೌಡು, ಅವರ ಅಭಿಮಾನಿಗಳು ಇಂತಹದ್ದನ್ನೆಲ್ಲಾ ಮಾಡುತ್ತಲೇ ಇರುತ್ತಾರೆ ಮತ್ತು ಕಾಲ ಕಾಲಕ್ಕೆ ಮಾಡುತ್ತಲೇ ಬಂದಿದ್ದಾರೆ ಕೂಡ.ಅದು ಅವರಿಗೆ ರಕ್ತಗತವಾಗಿಯೇ ಬಂದಿದ್ದು. ಅವರೆಲ್ಲರೂ ಅವರ ಬಾಯಿ ಮುಚ್ಚಿಕೊಳ್ಳುವುದು ಎದುರಾಳಿ ಅವರ ತಂಡವನ್ನು ಹೀನಾಯವಾಗಿ ಸೋಲಿಸಿ ಬಗ್ಗು ಬಡಿದ ಮೇಲೆಯೇ.
ರಿಕ್ಕಿ ಪಾಂಟಿಂಗ್ ಮಾತ್ರವಲ್ಲ..ಕೊಹ್ಲಿ ಇಲ್ಲದ ಈ ತಂಡ ಹೀನಾಯವಾಗಿ ಸೋಲುತ್ತದೆ ಎಂದು ಶೇನ್ ವಾರ್ನ್ ಹಾಗೂ ಮೈಕಲ್ ಕ್ಲಾರ್ಕ್ ನಂತಹ ಅವರ ಹಿರಿಯ ಆಟಗಾರರು ವ್ಯಂಗ ನುಡಿದಿದ್ದರು. ಆದರೆ ಅವರೆಲ್ಲರೂ ಭಾರತೀಯರು ಮೆಲ್ಬರ್ನ್ ನಲ್ಲಿ ನಡೆದ ಎರಡನೆಯ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಾಗ ಬಾಯಿ ಮುಚ್ಚಿಕೊಂಡು ಕುಳಿತುಕೊಂಡರು. ಆದರೆ ರಿಕ್ಕಿ ಪಟಿಂಗನಿಗೆ ಮಾತ್ರ ಬಾಯಿ ಕೆರೆಯುತ್ತಲೇ ಇತ್ತು.
ಗಾಯಗೊಂಡರೂ ಅತ್ಯಧ್ಭುತ ಆಟವಾಡಿದ ಅಶ್ವಿನ್ ಹಾಗೂ ವಿಹಾರಿ ಸಾಹಸದಿಂದ ಮೂರನೆಯ ಸಿಡ್ನಿ ಟೆಸ್ಟ್ ಪಂದ್ಯವನ್ನು ಭಾರತೀಯ ತಂಡ ಡ್ರಾ ಮಾಡಿಕೊಂಡಾಗ... ನಮ್ಮವರು ಕೊನೆಯ ಇನ್ನಿಂಗ್ಸ್ ನಲ್ಲಿ 200 ರನ್ ಕೂಡ ಹೊಡೆಯಲ್ಲ ಎಂದು ಮೊದಲೇ ಡಂಗುರ ಸಾರಿದ್ದ ಇದೇ ಪಾಂಟಿಂಗ್ ಪಂದ್ಯ ಮುಗಿದ ಕೂಡಲೇ ಹೇಳಿದ್ದು ಏನೆಂದರೆ.. ಮೂರನೆಯ ಟೆಸ್ಟ್ ಪಂದ್ಯವನ್ನು ಮಾನಸಿಕವಾಗಿ ಗೆದ್ದದ್ದು ಆಸ್ಟ್ರೇಲಿಯಾವೇ,ಒಂದು ರೀತಿಯಲ್ಲಿ ನೋಡಿದರೆ ಆಸ್ಟ್ರೇಲಿಯಾವೇ ಮೇಲುಗೈ ಸಾಧಿಸಿದ್ದು,ಏಕೆಂದರೆ ಭಾರತಕ್ಕೆ ಗೆಲ್ಲುವ ಎಲ್ಲಾ ಅವಕಾಶಗಳು ಇದ್ದರೂ ಚೇತೆಶ್ವರ್ ಪೂಜಾರ ಬಹಳ ನಿಧಾನವಾಗಿ ಆಡಿ ತಂಡ ಗೆಲ್ಲದಂತೆ ಮಾಡಿ ಬಿಟ್ಟರು.. ಎಂದು ಬೊಗಳೆ ಬಿಟ್ಟಿದ್ದ.
ಗೆಲ್ಲುವ ಅವಕಾಶ ಇತ್ತು ಅನ್ನುವುದನ್ನು ಒಪ್ಪಿಕೊಳ್ಳಬಹುದಾದರೂ,ಆಸ್ಟ್ರೇಲಿಯನ್ನರ ಮೇಲುಗೈ ಎನ್ನುವ ಪಟಿಂಗನ ವಾದ ಹೇಗಿತ್ತು ಎಂದರೆ,ಆಸ್ಟ್ರೇಲಿಯನ್ನರ As usual ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಟಿಪಿಕಲ್ ಮನಸ್ಥಿತಿಯೇ ಆಗಿತ್ತೇ ಹೊರತು ಬೇರೆನೂ ಅಲ್ಲ. ಏಕೆಂದರೆ ಗಾಯಗೊಂಡ ಭಾರತೀಯ ಆಟಗಾರರ ಸಿಡ್ನಿ ಟೆಸ್ಟ್ ಹೋರಾಟ.. ಆ ಡ್ರಾ.. ಹೆಚ್ಚು ಕಡಿಮೆ ಗೆಲುವಿಗೆ ಸಮನಾಗಿತ್ತು.ಇಡೀ ಜಗತ್ತೇ ಅದನ್ನು ಒಪ್ಪಿಕೊಂಡರೂ ಪಾಂಟಿಂಗ್ ನಂತಹ ಆಸ್ಟ್ರೇಲಿಯನ್ನರಿಗೆ ಅದನ್ನೆಲ್ಲ ಹೇಳಿಕೊಳ್ಳಲು ನಾಲಗೆ ಹೊರಳುವುದಿಲ್ಲ,ಒಪ್ಪಿಕೊಳ್ಳಲು ಅಂತು ಮನಸ್ಸು ಮೊದಲೇ ಕೇಳುವುದಿಲ್ಲ.ಅಷ್ಟು ಮಾತ್ರವಲ್ಲ ಈ ಆಸ್ಟ್ರೇಲಿಯಾದವರಿಗೆ ಚೇತೆಶ್ವರ್ ಪೂಜಾರ್ ಆಟವೆಂದರೆ ಮೈ ಎಲ್ಲಾ ಉರಿದು ಹೋಗುತ್ತದೆ.ಏಕೆಂದರೆ ಎದುರಾಳಿ ತಂಡ ಮೈ ಪರಚಿಕೊಳ್ಳುವಂತೆ ಆಟ ಆಡುವುದೇ ಪೂಜಾರ ನ ಆಟದ ವೈಖರಿ.He was a tough as always.ಹಾಗಾಗಿ ಆವತ್ತಿನ ಡ್ರಾ ಮ್ಯಾಚ್ ಅನ್ನು ಕೂಡ ಭಾರತದ ವಿಫಲ ಪ್ರಯತ್ನ ಎಂಬಂತೆ ಅದನ್ನು ನೇರವಾಗಿ ಪೂಜಾರ ಮೇಲೆ ಗೂಬೆ ಕೂರಿಸುವ ಮೂಲಕ ಬೇರೆಯೇ ರೀತಿಯಲ್ಲಿ ವಿಶ್ಲೇಷಿಸಿದ್ದ ಈ ಪಟಿಂಗ.
ಕೊನೆಯ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುವ Brisbane ನ Gabba ಆಸ್ಟ್ರೇಲಿಯನ್ನರ ಪಾಲಿಗೆ ಸ್ವರ್ಗ ಹಾಗೂ ಪ್ರವಾಸಿ ತಂಡಗಳ ಪಾಲಿನ Hell ಎಂದೇ ಹೇಳಲಾಗುತ್ತದೆ,ಅಲ್ಲಿ ಆಸ್ಟ್ರೇಲಿಯಾ ಸೋತದ್ದೇ ಕಡಿಮೆ.Gabba ದಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಸೋತದ್ದು 1988 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ. ಅಂದರೆ ಸರಿ ಸುಮಾರು 32 ವರ್ಷಗಳ ಹಿಂದೆ. ಆ ನಂತರ ಆ ಗ್ರೌಂಡಿನಲ್ಲಿ 31 ಮ್ಯಾಚ್ ಆಡಿದ ಆಸ್ಟ್ರೇಲಿಯಾ 21 ಗೆದ್ದುಕೊಂಡು, 7 ಮ್ಯಾಚ್ ಗಳನ್ನು ಡ್ರಾ ಮಾಡಿಕೊಂಡಿತ್ತು.ಮೂರು ದಶಕಗಳಿಂದ ಅಲ್ಲಿ ಆಸ್ಟ್ರೇಲಿಯನ್ನರಿಗೆ ಸೋಲಿನ ರುಚಿ ತೋರಿಸಿದ್ದ ತಂಡವೇ ಇಲ್ಲ, ಅವರು ಅಲ್ಲಿ ಇತ್ತೀಚೆಗೆ ಸೋತಿದ್ದೆ ಇಲ್ಲ ಹಾಗಾಗಿ ಅಲ್ಲಿ ಭಾರತೀಯರ ಆಟವೇನೂ ನಡೆಯುವುದಿಲ್ಲ ಎಂದು ಭಾರತೀಯ ತಂಡ ಮೂರನೆ ಟೆಸ್ಟ್ ಡ್ರಾ ಮಾಡಿಕೊಂಡ ಕೂಡಲೇ,ನಾಲ್ಕನೇ ಪಂದ್ಯ ಆರಂಭಕ್ಕೂ ಮೊದಲೇ ಭವಿಷ್ಯ ನುಡಿದಿದ್ದ ಈ ಪಟಿಂಗ.
ಆದರೂ ಭಾರತೀಯ ತಂಡ ತನ್ನದ್ದೊಂದು ಜಿದ್ದು ಬಿಟ್ಟುಕೊಡಲಿಲ್ಲ. ಹೋರಾಟವನ್ನು ಟೆಸ್ಟ್ ಪಂದ್ಯದ ಕೊನೆಯ ದಿನದವರೆಗೂ ನಮ್ಮವರು ದಿಟ್ಟವಾಗಿಯೇ ಮುಂದುವಿರಿಸಿದ್ದರು.
ಆಗಲೂ ಈ ರಿಕ್ಕಿ ಪಟಿಂಗನಿಗೆ ಸಮಾಧಾನ ಆಗಲಿಲ್ಲ. ಎಷ್ಟೇ ಆಡಿದರೂ,ಹೇಗೆ ಆಡಿದರೂ ಕೊನೆಯ ದಿನ ಭಾರತೀಯರು ಇಲ್ಲಿಯವರೆಗೆ ತೋರಿದ್ದ ತಮ್ಮ Resistance ತೋರಲಾರರು.. ಎಂದು ನಾಲ್ಕನೇ ದಿನ ಮುಗಿದ ಕೂಡಲೇ ತನ್ನ ಷರಾ ಬರೆದೇ ಬಿಟ್ಟಿದ್ದ.
ಆದರೆ 19/1/2021 ರಂದು ಆಗಿದ್ದು ಆಗಿದ್ದು ಇತಿಹಾಸ..!
ಆಗ ಮುಖ ಮುಚ್ಚಿಕೊಳ್ಳುವ ಸರದಿ ರಿಕ್ಕಿ ಪಟಿಂಗನಂತಹ.. ಆಸ್ಟ್ರೇಲಿಯಾದ ಹಿರಿಯ ಆಟಗಾರರದ್ದು ಆಗಿತ್ತು.ಆ ನಂತರ ಅವರು ಕೇವಲ ಭಾರತೀಯ ಆಟಗಾರರನ್ನು ಮೆಚ್ಚಿ ಹೊಗಳುವ ಕೆಲಸ ಅಷ್ಟೇ ಮಾಡಬಹುದಿತ್ತೇ ಹೊರತು ಮತ್ತೆ ಏನೂ ಕೆರೆದುಕೊಳ್ಳಲು ಅವರಿಗೆ ನಮ್ಮ ತಂಡ ಉಳಿಸಿರಲಿಲ್ಲ.
ಇಂಗ್ಲೆಂಡ್ ನ ಕೆವಿನ್ ಪೀಟರ್ಸನ್ ಬಹಳ ಸುಂದರವಾಗಿ ಇದನ್ನು ವಿವರಿಸುತ್ತಾನೆ.. ಆಸ್ಟ್ರೇಲಿಯಾ ಮಾಧ್ಯಮ ಹಾಗೂ ಅಲ್ಲಿಯ ಹಿರಿಯ ಆಟಗಾರರು ಅವರ ತಂಡವನ್ನು ಎಂದಿಗೂ ಬಿಟ್ಟು ಕೊಡುವುದೇ ಇಲ್ಲ. ಆದರೆ ಯಾವಾಗ ಅವರ ತಂಡ ಸೋತು ಸುಣ್ಣವಾಗಿ ಹೋಗಿಬಿಡುತ್ತದೋ.. ಆಗ ಯಾರನ್ನೂ ಆಡಿಕೊಳ್ಳಲು ಆಗದೆ ಅವರ ಮಾಧ್ಯಮ ಹಾಗೂ ಹಿರಿಯ ಆಟಗಾರರೇ ಅವರ ರಾಷ್ಟ್ರೀಯ ತಂಡದ ಆಟಗಾರರನ್ನು ಹಿಗ್ಗಾಮುಗ್ಗ ಬೈಯುವುದನ್ನು ನೋಡಲು ಬಹಳ ಮಜವಾಗಿರುತ್ತದೆ.. ಎಂದು ಹೇಳಿದ್ದ ಪೀಟರ್ಸನ್. ಆ ನಂತರ ಆಗಿದ್ದೇ ಅದೇ ಬಿಡಿ.
ಆಸ್ಟ್ರೇಲಿಯಾ ಪ್ರವಾಸದ ಹೊರಡುವ ಮೊದಲು ನಮ್ಮಲ್ಲಿ ಇಂಜುರಿಯಾದವರ ಪಟ್ಟಿಯೇ ದೊಡ್ಡದಿದ್ದರೆ.... ಅಲ್ಲಿಗೆ ಹೋಗಿ ಆಮೇಲೆ ಇಂಜುರಿಯಾದವರ ಪಟ್ಟಿ ಅದಕ್ಕಿಂತಲೂ ದೊಡ್ಡದಿತ್ತು. ಪಟ್ಟಿ ಮಾಡಿದರೇ ಅದೇ ಹನ್ನೊಂದು ಜನರ ಒಂದು ವಿಶ್ವದ ಸರ್ವ ಶ್ರೇಷ್ಟ ತಂಡವಾಗಿ ಬಿಡಬಲ್ಲದು. ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರಗುಳಿದಿದ್ದ ಕೊಹ್ಲಿ ಸೇರಿದ್ದಂತೆ ಘಟಾನುಘಟಿ ಬೌಲರ್, ಆಲ್ ರೌಂಡರ್ ಗಳೇ ಆ ಪಟ್ಟಿಯಲ್ಲಿ ಇದ್ದರು.
ಆಡಲು ಹೋಗಿದ್ದ ತಂಡದಲ್ಲಿ ಕೇವಲ ನಾಯಕ ಅಂಜಿಕ್ಯ ರಹಾನೆ ಮತ್ತು ಚೇತೆಶ್ವರ ಪೂಜಾರ ಮಾತ್ರ ಸರಣಿಯ ನಾಲ್ಕೂ ಟೆಸ್ಟ್ ಮ್ಯಾಚ್ ಆಡಿದ್ದರು. ಹಾಗಿದ್ದರೆ ಇಂಜುರಿಯ ಪ್ರಮಾಣ ಎಷ್ಟಿದೆ ಎಂದು ಅಂದಾಜಿಸಿ. ಆದರೆ ಆಸ್ಟ್ರೇಲಿಯಾದ ತಂಡದಲ್ಲಿ ಮೊದಲಿನಿಂದಲೂ ಆಡಿದ ಹನ್ನೊಂದು ಆಟಗಾರರಲ್ಲಿ, ತಂಡದ ಎಂಟು ಮಂದಿಯೂ ಕೊನೆಯವರೆಗೂ ನಾಲ್ಕು ಟೆಸ್ಟ್ ಮ್ಯಾಚ್ ಆಡಿದ್ದರು.ಆದರೆ ಭಾರತ ಪ್ರತೀ ಪಂದ್ಯವನ್ನು ಹೊಸ ಹೊಸ ಬದಲಾವಣೆಗಳೊಂದಿಗೆಯೇ ಆಡಿತ್ತು ಮತ್ತು ಉತ್ತಮವಾಗಿ ಆಡಿದವರೆಲ್ಲ ಇಂಜುರಿಯಾಗಿ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿ ಹೊರಗುಳಿಯುತ್ತಿದ್ದರು. ಹೊಸದಾಗಿ ತಂಡಕ್ಕೆ ಸೇರಿಕೊಳ್ಳುತ್ತಿದ್ದ ಹೆಚ್ಚಿನ ಆಟಗಾರರಿಗೆ ಅವರಾಡುವ ಇಲ್ಲಿಯ ಪಂದ್ಯಗಳು ಅವರ ಪಾದಾರ್ಪಣೆಯ ಪಂದ್ಯವೇ ಆಗಿತ್ತು.
ಒಂದು ತಂಡದ ಬ್ಯಾಟಿಂಗ್ ಎಷ್ಟೇ ಬಲಿಷ್ಟವಾಗಿರಲಿ ಆದರೆ ಟೆಸ್ಟ್ ಮ್ಯಾಚ್ ಒಂದನ್ನು ಜಯಿಸಲು ಎದುರಾಳಿಯ ಇಪ್ಪತ್ತು ವಿಕೆಟ್ ಗಳನ್ನು ತೆಗೆಯುವ ಸಾಮರ್ಥ್ಯ ವಿರುವ ಬೌಲಿಂಗ್ ಪಡೆ ಹೊಂದಿರುವುದು ತುಂಬಾ ಅನಿವಾರ್ಯವಾಗುತ್ತದೆ.ಇಲ್ಲದಿದ್ದರೆ ಪಂದ್ಯ ಒಂದೋ ಡ್ರಾ ಆಗಬಹುದು.. ಇಲ್ಲದಿದ್ದರೆ ತಂಡ ಸೋತೇ ಹೋಗಬಹುದು ಹೊರತು ಏಕದಿನ ಹಾಗೂ ಟ್ವೆಂಟಿ ಟ್ವೆಂಟಿ ಪಂದ್ಯದಲ್ಲಿ ದಕ್ಕುವಂತೆ ಸುಲಭವಾಗಿ ಜಯ ಟೆಸ್ಟ್ ನಲ್ಲಿ ದಕ್ಕುವುದೇ ಇಲ್ಲ.
ಕೊನೆಯ ಟೆಸ್ಟ್ ಪಂದ್ಯದಲ್ಲಿ ಬೌಲ್ ಮಾಡಲು ಬಾಲ್ ಕೈಗೆತ್ತಿಕೊಂಡ ಭಾರತೀಯ ತಂಡದ ಬೌಲರ್ ಗಳನ್ನು ಕಂಡರೆ ಯಾರಿಗೆ ಆಗಲಿ ಹೀನಾಯ ಸೋಲು ಭಾರತೀಯ ತಂಡಕ್ಕೆ ಕಟ್ಟಿಟ್ಟ ಬುತ್ತಿ ಎಂದು ಅನ್ನಿಸದೇ ಇರದು. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಮಾಡಿ, ಇಲ್ಲಿಯವರೆಗೆ ಕೇವಲ ಏಕೈಕ ಟೆಸ್ಟ್ ಮ್ಯಾಚ್ ಆಡಿ, ಆಡಿದ ಆ ಮೊದಲ ಪಂದ್ಯದಲ್ಲಿ ಕೂಡ ಕೇವಲ ಹತ್ತು ಎಸೆತ ಎಸೆದು ಅಲ್ಲೂ ಇಂಜುರಿಯಾಗಿಯೇ ಹೊರೆ ನಡೆದಿದ್ದ ಶಾರ್ದೂಲ್ ಠಾಕೂರ್ ಅನುಭವದ ದೃಷ್ಟಿಯಿಂದ ಈ ತಂಡದ ಹಿರಿಯ ಬೌಲರ್ ಆಗಿದ್ದ.ಬಾಕಿ ಬೌಲರ್ ಗಳೆಲ್ಲಾ ಇದೇ ಸೀರಿಸ್ ನಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದವರಾಗಿದ್ದರು.
ಕೊನೆಯ ಪಂದ್ಯ ಆಡುವುದಕ್ಕೂ ಮೊದಲು ಈ ತಂಡದಲ್ಲಿದ್ದ ಎಲ್ಲಾ ಆಟಗಾರರು ಇಡೀ ಟೆಸ್ಟ್ ಕ್ರಿಕೆಟ್ ಕೆರಿಯರ್ ನಲ್ಲಿ ಸೇರಿ ಕಬಳಿಸಿದ ಒಟ್ಟು ವಿಕೆಟ್‌ಗಳ ಸಂಖ್ಯೆಯೇ ಕೇವಲ 11. ಆದರಲ್ಲಿ 2 ವಿಕೆಟ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ನದ್ದು ಆಗಿದ್ದರೆ ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ,ಸಿರಾಜ್, ಶಾರ್ದೂಲ್ ಠಾಕೂರ್, ನಟರಾಜನ್ ಸೇರಿ ಭಾರತೀಯ ಐದೂ ಬೌಲರ್ ಗಳು ಸೇರಿ ತೆಗೆದದ್ದೇ ಕೇವಲ ಒಂಬತ್ತು ವಿಕೆಟ್.ಯಾರಿಗೆ ಆಗಲಿ ಇವರು ಎದುರಾಳಿಯ ಇಪ್ಪತ್ತು ವಿಕೆಟ್ ಉರುಳಿಸಬಲ್ಲರು ಎಂದು ಅನ್ನಿಸಿರಲಿಲ್ಲ. ಆದರೆ ಆಸ್ಟ್ರೇಲಿಯಾದ ಇಪ್ಪತ್ತು ವಿಕೆಟ್ ಉರುಳಿಸಿ ತೋರಿಸಿದ್ದು ಮಾತ್ರವಲ್ಲ ಈ ಅನನುಭವಿ ಯುವ ಭಾರತೀಯ ಬೌಲರ್ ಗಳು ಬ್ಯಾಟ್ ಮೂಲಕವೂ ಅಮೂಲ್ಯ ರನ್ ಪೇರಿಸಿ ಈ ಪಂದ್ಯ ಭಾರತ ಜಯಿಸುವಂತೆ ಮಾಡಲು ತಾವು ಕೊಟ್ಟ ಕೊಡುಗೆ ಇದೆಯಲ್ಲ ಅದೂ ಕೂಡ ಕಡಿಮೆಯೇನಲ್ಲ.
ಆದರೆ ಆಸ್ಟ್ರೇಲಿಯನ್ನರ ಬೌಲಿಂಗ್ ಪಡೆಯಾದರೂ ಎಂತಹದ್ದು, Starc,Hazelwood, Cummins,Nathan lyon ನಂತಹ ವಿಶ್ವ ಶ್ರೇಷ್ಟ ಅನುಭವಿ ಬೌಲರ್‌ಗಳಿಂದಲೇ ತುಂಬಿಕೊಂಡು ಅದರಲ್ಲೂ ವೇಗಿಗಳು ತಮ್ಮ ಘಾತಕ ಬೌನ್ಸರ್ ಗಳಿಂದಾಗಿಯೇ ನಮ್ಮ ತಂಡದ ಹೆಚ್ಚಿನ ಆಟಗಾರರನ್ನು ಸಿರೀಸ್ ನಡುವಲ್ಲಿಯೇ ಸೀರಿಯಸ್ ಆಗಿ ಇಂಜುರಿ ಆಗುವಂತೆ ಮಾಡಿ ಬಿಟ್ಟಿದ್ದರು. ಸ್ಲೆಡ್ಜಿಂಗ್ ಬಿಡಿ ಎಂದಿನಂತೆಯೇ ಮುಂದುವರಿದಿತ್ತು.
ಇಂತಹ ತಂಡ ಕೊನೆಯ ದಿನ ಆಡಿ ವಿನ್ ಆಗುತ್ತದೆ ಎಂದು ಟೆಸ್ಟ್ ಕ್ರಿಕೆಟ್ ನ ಡೈನಮಿಕ್ಸ್ ಗಳ ಬಗ್ಗೆ ಗೊತ್ತಿದ್ದ ಭಾರತೀಯ ಯಾವ ಹಿರಿಯ ಆಟಗಾರರಿಗೂ,ಕ್ರಿಕೆಟ್ ಪಂಡಿತರಿಗೂ,ಕ್ರಿಕೆಟ್ ಕಾಮೆಂಟೆಟರರಿಗೂ ಸಹಜವಾಗಿಯೇ ಅಂತಹ ಯಾವುದೇ ಧೈರ್ಯವಿರಲಿಲ್ಲ. ಇದ್ದುದರಲ್ಲಿ ಜಹೀರ್ ಖಾನ್ ಒಬ್ಬರೇ ಕಾಮೆಂಟರಿ ಬಾಕ್ಸ್ ನಲ್ಲಿ ಕುಳಿತುಕೊಂಡು ಭಾರತದ ವಿಜಯದ ಸಾಧ್ಯತೆಗಳ ಬಗ್ಗೆ ಮೊದಲಿನಿಂದಲೂ ಮುಕ್ತವಾಗಿ ಹೇಳುತ್ತಿದ್ದಾಗ ನಿಜವಾಗಿಯೂ ಖುಷಿ ಆಗುತ್ತಿತ್ತು.
ಈ ಪಂದ್ಯ ಡ್ರಾ ಆದರೂ ಕೂಡ ಹಿಂದಿನ ಬಾರಿಯ ವಿಜೇತ ತಂಡದವಾದ ಭಾರತ ತಂಡದವೇ ತನ್ನೊಂದಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳುವುದರಿಂದ ಈ ಸಿರೀಸ್ ಜಯಕ್ಕಾಗಿ ತಮ್ಮ ಜೀವ ಕೊಟ್ಟೇ ಆಡಿತ್ತು ಆಸ್ಟ್ರೇಲಿಯಾ.
ಆದರೆ ಕೊನೆಗೂ ಆ ಜನವರಿ 19 ರಂದು ಘಟಿಸಿದ್ದು ಮಾತ್ರ ಅದ್ಭುತವೇ.
ಕೊನೆಯ ದಿನ 300+ ರನ್ ಹೊಡೆಯುವುದು.. ಅದೂ ಆಸ್ಟ್ರೇಲಿಯಾದಲ್ಲಿ.. ಅವರ ಶ್ರೇಷ್ಟ ಬೌಲಿಂಗ್ ಅನ್ನು ಎದುರಿಸಿ ಹೊಡೆಯುವುದು ನಿಜವಾಗಿಯೂ ರಿಕ್ಕಿ ಪಾಂಟಿಂಗ್ ಹೇಳಿದಂತೆ ಕಷ್ಟ ಸಾಧ್ಯವೇ ಆಗಿತ್ತು. ಆದರೆ ಅಸಾಧ್ಯ ಗಳು ಇರುವುದೇ ಸಾಧಿಸಲು. ಅದನ್ನು ಸಾಧಿಸಿ ತೋರಿಸಿದಾಗ ಆಗುವ ಆನಂದ ಅಷ್ಟಿಷ್ಟಲ್ಲ.
ಇಂಗ್ಲೆಂಡ್ ನ Ben Stokes ಏಕಾಂಗಿಯಾಗಿ ಆಸ್ಟ್ರೇಲಿಯಾರನ್ನು ಬಗ್ಗು ಬಡಿದದ್ದು ಹೇಗೆ ಸರ್ವ ಶ್ರೇಷ್ಟ ಟೆಸ್ಟ್ ಮ್ಯಾಚ್ ವಿಜಯವೋ.. ಅದೇ ರೀತಿ ಇಡೀ ತಂಡವಾಗಿ ಭಾರತೀಯರು ಪಟ್ಟು ಬಿಡದೇ.. ಜಿದ್ದಿನಿಂದ ಎದ್ದು ಬಿದ್ದು ಗಾಯಗೊಂಡು ಆಡಿ, ತಮ್ಮ ತಂಡದಲ್ಲಿ ಘಟಾನುಘಟಿ ಆಟಗಾರರು ಇಲ್ಲದಿದ್ದರೂ ಸಾಮಾನ್ಯ ತಂಡವಾಗಿ ಕಣಕ್ಕಿಳಿದು ಕೊನೆಯ ದಿನ 300+ ರನ್ ಚೇಸ್ ಮಾಡಿ ಆಸ್ಟ್ರೇಲಿಯರನ್ನು ಆಸ್ಟ್ರೇಲಿಯಾದಲ್ಲಿಯೇ ಇಂದು ಮಣ್ಣು ಮುಕ್ಕಿಸಿತು ಅಲ್ಲ... ಇದೂ ಕೂಡ ಟೆಸ್ಟ್ ಕ್ರಿಕೆಟ್ ನ ಸರ್ವ ಶ್ರೇಷ್ಟ ಜಯವೇ. ಅದಕ್ಕಾಗಿ ಈ ಸಿರೀಸ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಪಾಕಿಸ್ತಾನದ ಶೋಯಿಬ್ ಅಖ್ತರ್ ಅಂತು ಹೇಳಿದ್ದ.. ಭಾರತೀಯ ಕೊನೆಯ ಪಂದ್ಯ ಏನಾದರೂ ಗೆದ್ದುಕೊಂಡು ಸಿರೀಸ್ ಏನಾದರೂ ಗೆದ್ದರೆ ಅದು ಭಾರತೀಯ ತಂಡದ ಸಾರ್ವಕಾಲಿಕ ವಿಜಯ ಆಗಲಿದೆ ಎಂದು.
ನಮ್ಮ ತಂಡ ಆಸ್ಟ್ರೇಲಿಯಾವನ್ನು ಬಗ್ಗು ಬಡಿದಿದೆ.. ಮಾತ್ರವಲ್ಲ ಯಾವ ತಂಡವನ್ನೇ ಆಗಲಿ, ಅವರದ್ದೇ ನೆಲದಲ್ಲಿ ಯಾವ ಆಟಗಾರನ ಮೇಲೂ ಅವಲಂಬಿತವಾಗದೇ ಗೆದ್ದು ತೋರಿಸಬಲ್ಲೆವು ಎಂಬುದನ್ನು ಜಗತ್ತಿಕ್ಕೆ ತೋರಿಸಿ ಕೊಟ್ಟಿದೆ.
ಭಾರತೀಯ ಕ್ರಿಕೆಟ್ ತಂಡದ ಅಪ್ಪಟ ಅಭಿಮಾನಿಯಾಗಿದ್ದರೆ... ಖುಷಿ ಪಡಲು ಇದಕ್ಕಿಂತ ದೊಡ್ಡ ಸಂಗತಿ ನಮಗೆ ಬೇರೆ ಬೇಕೇ.. 😍🤘
ಈ ಸರಣಿಯಲ್ಲಿ ಆಡಿದ ಭಾರತದ Next Generation ನ ಯುವ ಆಟಗಾರರೆಂದೇ ಗುರುತಿಸಿಕೊಳ್ಳುವ ಶುಭ್ಮನ್ ಗಿಲ್,ವಾಷಿಂಗ್ಟನ್ ಸುಂದರ್,ಶಾರ್ದೂಲ್ ಠಾಕೂರ್,ರಿಷಭ್ ಪಂತ್ ಮುಂತಾದವರನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ಆಸ್ಟ್ರೇಲಿಯಾದ ಮತ್ತೊಬ್ಬ ಕ್ರಿಕೆಟ್ ದಿಗ್ಗಜ ಗ್ಲೆನ್ ಮೆಗ್ರಾಥ್ ಅವರ ಪ್ರತಿಭೆಯನ್ನು ಹೊಗಳುವುದರ ಜೊತೆ ಜೊತೆಗೆಯೇ ಅತೀ ಅಚ್ಚರಿಯಿಂದ ಹೇಳಿದ್ದು ಇಷ್ಟೇ ..
- " ಭಾರತದ ಈ ಯುವ ಆಟಗಾರರಿಗೆ ಭಯ ಅಂದರೆ ಏನೆಂದೇ ಗೊತ್ತಿಲ್ಲ..!! "
#Congratulations_Team_India 🇮🇳💙
India Vs Australia 2021
4th TEST - Decider
India script history 🤘❤️
#Cricket_Review
ab pacchu

Comments
Post a Comment