ಶಿಸ್ತಿನ ಕೊರತೆ


 

ಅದು ಸಂಜೆಯ ಸಮಯ. 


ಬಸ್ಸಿಗಾಗಿ ನಿಂತಿದ್ದೆ.


ಮಳೆ ಬರುವ ದಟ್ಟವಾದ ಮುನ್ಸೂಚನೆ ಇತ್ತು.


ಆದರೆ ಇನ್ನೂ ಬಂದಿರಲಿಲ್ಲ. 


ಎಂದಿನಂತೆ  ಬ್ಯಾಗ್ ಹಾಕಿಕೊಂಡು...


ಹಾಗೇ ರೋಡ್ ಅನ್ನೇ ನೋಡುತ್ತಿದ್ದೆ..


ಯಾವುದಾದರೂ ಬಸ್ ಬರಬಹುದು ಎಂದು. 


ಆದರೆ ಯಾವುದೇ ಬಸ್ ನ ಸುಳಿವೇ ಇಲ್ಲ.


ಈ ಕೊರೋನ ದಿಂದಾಗಿ ಸಮಯಕ್ಕೆ ಸರಿಯಾಗಿ ಬಸ್ಸೇ ಇಲ್ಲ ಈಗ.


ಬಸ್ಸಿನವರೇ ತಮ್ಮ ತಮ್ಮ ಬಸ್ ಗಳನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಅವರಿಗೆ ಸಹ ಜನರಿಲ್ಲದೆ ಸಿಕ್ಕಾಪಟ್ಟೆ ಲಾಸ್ ಆಗ್ತಾ ಇದೆ ಅಂತೆ. 


ಬಸ್ ಗಾಗಿ ಕಾದು ಕಾದು  45 ನಿಮಿಷದ ಮೇಲೆ ಆಯಿತು.


ಇನ್ನೂ ಈ ತರಹ ನಿಂತ್ರೆ ಪ್ರಯೋಜನ ಇಲ್ಲ ಅಂತ ಗೊತ್ತಾಯಿತು. 


ರೋಡ್ ಅಲ್ಲಿ ಬರೋ ಬೈಕ್ ಗಳಿಗೆ ಲಿಪ್ಟ್ ಗಾಗಿ ಕೈ ಅಡ್ಡ ಹಾಕಲು  ಶುರು ಮಾಡಿದೆ.


ಯಾರೂ ನಿಲ್ಲಿಸುತ್ತಲೇ ಇಲ್ಲ.


ಹಿಂದೆ ಆದ್ರೆ ಎಲ್ಲರೂ ಡ್ರಾಪ್ ಕೊಡುತ್ತಿದ್ದರು.


ಈಗ ಕೊರೋನ ಭಯದಿಂದಾಗಿ ಯಾರೂ ಸ ಡ್ರಾಪ್ ಕೊಡಲ್ಲ.


ಲಿಪ್ಟ್ ಕೊಟ್ರೆ ನಮಗೂ ಕೊರೋನ ಬಂದ್ರೆ ಹೇಗೆ  ಅಂತ  ಅವರಿಗೂ  ಭಯ. ಅದು ಕೂಡ ಸಹಜವೇ ಬಿಡಿ. 


ಅದೂ ಅಲ್ಲದೆ ನಮ್ಮ ಜನಗಳಿಗೆ ಈ ಶಿಸ್ತು ಅನ್ನುವುದೇ ಇಲ್ಲ,


ಮಾಸ್ಕ್ ಕೂಡ ಧರಿಸುವುದಿಲ್ಲ ಮತ್ತು ಸರ್ಕಾರಗಳು ಹೇಳಿದ ಸರಿಯಾದ ಮುಂಜಾಗ್ರತೆ ಕ್ರಮವನ್ನು ಕೂಡ ಪಾಲಿಸುವುದಿಲ್ಲ.


ಅಲ್ಲಿ ಇಲ್ಲಿ ಎಲ್ಲಾ ಕಡೆ ಈ ಜನ ತಿರುಗಾಡ್ತಲೇ ಇರ್ತಾರೆ. ಮತ್ತೆ ಈ ಕೊರೋನ spread ಆಗದೆ ಇರ್ತಾದ. ಮನುಷ್ಯನಿಗೆ ಜೀವನದಲ್ಲಿ ಈ ಶಿಸ್ತು ಅನ್ನುವುದು ವೆರಿ ವೆರಿ  important. ಆದರೆ ನಮ್ಮ ಸಮಾಜದ ಜನಗಳಿಗೆ ಯಾವಾಗ ಬುದ್ಧಿ ಬರ್ತದಾ.. 


ಇನ್ನು ತಡ ಮಾಡಿದ್ರೆ ಲೇಟ್ ಆಗ್ತದೆ ಅಂದು ಕೊಂಡು ಯಾರಾದರೂ ಒಬ್ಬ ಬೈಕ್ ನವನನ್ನು ಹಾಗೇ ಅಡ್ಡ ಹಾಕಿಯೇ ಹಾಕುತ್ತೇನೆ ಎಂದು ಗಟ್ಟಿ ನಿರ್ಧಾರ ಮಾಡಿ, ದೃಢ  ಸಂಕಲ್ಪ ಮಾಡಿಯೇ ಬಿಟ್ಟೆ. 


ದೂರದಿಂದಲೇ ನೋಡಿದೆ. ಒಬ್ಬ  ಮುಖಕ್ಕೆ ಕರ್ಚೀಪು ಸುತ್ತಿಕೊಂಡು ಬಾರೀ ಕೂಲಾಗಿ ಆರಾಮ್ ಸೆ ಬೈಕ್ ಬಿಡ್ತಾ ಬರ್ತಾ ಇದ್ದ.


ಏನೇ ಆಗ್ಲಿ ಇವನನ್ನು ಮಾತ್ರ ಬಿಡಬಾರದು,ಅಂದು ಕೊಂಡು ಸೀದಾ ಹೋಗಿ ರೋಡ್ ನಡುವೆ ಎರಡೂ ಕೈಗಳನ್ನು ಪಕ್ಕಕ್ಕೆ ಆಚೆ ಈಚೆ  ಚಾಚಿ, ಅಣ್ಣಾ .. ಒಂದು ಲಿಪ್ಟ್ ಕೊಡಿ .. Please ಅಂತ ನಿಂತುಕೊಂಡೆ. 


ಬಂದವನೇ ರಪ್ಪ ಅಂತ ಬ್ರೇಕ್ ಹೊಡೆದು ಗಾಡಿ ನಿಲ್ಲಿಸಿದ.


ಹಾಗೇ ದುರುಗುಟ್ಟಿ ನೋಡಿದ..


ಅಣ್ಣಾ .. ಜಸ್ಟ್ ಒಂದು ಲಿಪ್ಟ್ ಕೊಡಿ .. Please ಇಲ್ಲ ಅಂತ ಹೇಳ್ಬೇಡಿ. ಬಸ್ ಕೂಡ ಇಲ್ಲ. Urgent ಆಗಿ ಮನೆಗೆ ಹೋಗ್ಬೇಕು..ಅಂದೆ.


ತುಂಬಾ ಹೊತ್ತು ನನ್ನನ್ನೇ ಮೇಲೆ ಕೆಳಗೆ ನೋಡಿದ.


ಅವನಿಗೆ ಏನು ಅನಿಸಿತೋ.. 


ಹೂಂ.. ಸರಿ,ಕುತ್ಕೊಳ್ಳಿ ಹಿಂದೆ ಅಂದ.


ನೋಡುವಾಗ ವಿವಾಹಿತ ತರ ಕಾಣ್ತಾ ಇದ್ದ. ಹೆಚ್ಚು ಕಡಿಮೆ 40 ರ ಅಸುಪಾಸಿನ ವಯಸ್ಸು.


ಹಿಂದೆ ಕೂತ್ಕೊಂಡೆ.. ಬೈಕ್ ಹೊರಡಿತು.


ಇನ್ನೂ ತುಂಬಾ ದೂರ ಇದೆ destination ... ಆದ್ದರಿಂದ ಇವನನ್ನು ಸ್ವಲ್ಪ ಮಾತಾಡಿಸುವ ಅಂತ ಅನಿಸಿತು.


ಅಣ್ಣಾ .. ತುಂಬಾ ಥ್ಯಾಂಕ್ಸ್, ಯಾರೊಬ್ಬರೂ  ಗಾಡಿ ನಿಲ್ಲಿಸ್ಲಿಲ್ಲ.. ಆದರೆ ನೀವು ಒಬ್ಬರೇ ಅಣ್ಣಾ ಧೈರ್ಯ ಮಾಡಿ ಗಾಡಿ ನಿಲ್ಲಿಸಿದ್ದು.. ಥ್ಯಾಂಕ್ಸ್ ಅಣ್ಣಾ..


ಇರ್ಲಿ ಇರ್ಲಿ ಪರವಾಗಿಲ್ಲ ಬಿಡಿ.. ಅಂದ ಆ ಮನುಷ್ಯ.


ಅಣ್ಣಾ ನನ್ನ ಹೆಸರು ನೀಲಮೇಘ ಅಂತ.. ಎಲ್ಲರೂ ಪ್ರೀತಿಯಿಂದ ನೀಲು ಅಂತಾರೆ .. ನಿಮ್ಮ ಹೆಸರು ಏನಣ್ಣಾ..


ಸತೀಸ..


ಅಣ್ಣಾ ಅದು ಸತೀಶ ನ? .. ಅಥವಾ ಸತೀಸ ನ? 


ಆ ಮನುಷ್ಯ ಪುನಃ ಹೇಳಿದ. 


ಸತೀಸ..


ಒಳ್ಳೆ ಆಸಾಮಿಯೇ ನಂಗೆ ಸಿಕ್ಕಿದ್ದಾನೆ, ಹಾಗಾದರೆ ಈ ರೈಡ್ ಭಯಂಕರ ಜಾಲಿ ಉಂಟು ಮುಂದೆ ಅಂತ  ಅನ್ಕೊಂಡೆ.


ಸತೀಶಣ್ಣ,sorry.. ಸತೀಸಣ್ಣ ಮತ್ತೆ ಹೇಗಿದೆ ಲೈಫ್ ಎಲ್ಲಾ.. 


ಪರವಾಗಿಲ್ಲ ಹೋಗ್ತಾ ಇದೆ.


ನೀವು ಏನು ಮಾಡ್ಕೊಂಡಿದ್ದೀರಿ


ನಂಗೆ ಕೋಳಿ ಫಾರ್ಮ್ ಇದೆ.


ಹೌದಾ.. ಒಳ್ಳೆಯ ಬ್ಯುಸಿನೆಸ್, ಸಕ್ಕತ್ ಕಾಸ್ ಮಾಡಿದ್ದೀರಿ ಹಾಗದರೆ ಅನ್ನಿ ..


ಹಾನ್ ಸುಳ್ಳು ಹೇಳ್ಬಾರ್ದು.. ತಕ್ಕ ಮಟ್ಟಿಗೆ.


ನಿಮ್ಮ ಮನೆಯಲ್ಲಿಯೇ  ಕೋಳಿ ಫಾರಂ ಹೇಗೋ ಇದೆ,ಆದ್ದರಿಂದ ನಿಮಗೆ  ಬೇಕಾದಷ್ಟು ಕೋಳಿ ಡೈಲಿ ತಿನ್ತಾನೆ  ಇರ್ಬಹುದು ಅಲಾ ಅಣ್ಣಾ ..ಚಿಕನ್ ಸುಕ್ಕ, ಚಿಕನ್ ಪುಳಿಮುಂಚಿ, ಕೋರಿ ರೊಟ್ಟಿ,ಚಿಕನ್ 65,75,85,95..ಕಬಾಬು, ಲಾಲಿಪಾಪು ಎಲ್ಲಾ ಡೈಲಿ ಮಾಡ್ತಾನೆ ಇರ್ಬಹುದು ಅಲಾ..ಅಂದೆ.


ಹಾನ್..ನಾನೇ ಫಾರಂ ಮಾಡಿ ನಾನೇ ಕೋಳಿ ತಿನ್ತಾ ಇದ್ರೆ ಕೋಳಿ ಏನೋ ಖಾಲಿ ಆಗ್ಬಹುದು... ಆದ್ರೆ ಬ್ಯುಸಿನೆಸ್ ಮಾತ್ರ ನೀನು ಹೇಳಿದ ಹಾಗೆ ಮಾಡಿದ್ರೆ ಅಲಕ್ಕಾ ಲಗಾಡಿ ಹೋಗುವುದು ಗ್ಯಾರಂಟಿ.


ಒಹ್ ಹೌದಲ್ಲ.. ಹೀಗೆ ಮಾಡಿದ್ರೆ ಗ್ಯಾರಂಟಿ ಲಾಸ್ ಆಗುವುದು ಖಂಡಿತ.  ಬ್ಯುಸಿನೆಸ್ ಮಾಡುವಾಗ  ಇದೆಲ್ಲ ಗೊತ್ತಿರ್ಬೇಕು. ಅದಕ್ಕೆ ನಾನು ಇನ್ನೂ ಬ್ಯುಸಿನೆಸ್ ಮ್ಯಾನ್ ಆಗ್ಲಿಲ್ಲ ಅಂತ ಮನಸ್ಸಲೇ ಅಂದ್ಕೊಂಡೆ. 


ಸತೀಸಣ್ಣ ಈ ಕೋಳಿ ತಿಂದ್ರೆ ಕೋರೋನ ಬರ್ತದೆ ಅಂತೆ ಹೌದಾ..


ಇಲ್ಲ ಮಾರಾಯ ಯಾರು ಹೇಳಿದ್ದು.. ಅದೆಲ್ಲ ನಮ್ಮ ಬ್ಯುಸಿನೆಸ್ ಗೆ ಕಲ್ಲು ಹಾಕ್ಲಿಕ್ಕೆ ಯಾರೋ ಸೃಷ್ಟಿಸಿದ ಗಾಳಿ ಸುದ್ದಿ ಅಷ್ಟೇ. 


ಆದರೂ ಸತೀಸಣ್ಣ ಈ ಟೈಂ ಅಲ್ಲಿ ಜನರು  ಕೋಳಿ ಎಲ್ಲ  ತಿನ್ಬಾರ್ದು ನೋಡಿ. ವೆಜ್ ತಿನ್ಬೇಕು.. ರೋಗ ನಿರೋಧಕ ಶಕ್ತಿ, resistive power ವೆಜ್ ಅಲ್ಲಿ  ಜಾಸ್ತಿ ಅಂತ ವಿಜ್ಞಾನಿಗಳು, ವೈದ್ಯರು ಗಳು ಕೂಡ ಹೇಳ್ತಾರೆ ಸತೀಸಣ್ಣ...ನನ್ನ ಪ್ರಕಾರ ಸರಕಾರವೇ ಈ ಕೋಳಿ ಅಂಗಡಿಗಳನ್ನು ಬಂದ್ ಮಾಡ್ಬೇಕು.. ಅಂದೆ.


ಅವರಿಗೆ ಸಿಟ್ಟು ಬಂತೋ ಏನೋ.. ಹಾಗಾದರೆ ನೀನು ಹೇಳುವ ಒಟ್ಟಾರೆ ಉದ್ದೇಶ ಎಂತ..  ಕೋರೋನ ಮುಗಿಯುವವರೆಗೆ ನಾನು ಕೂಡ  ಫರ್ಮನೆಂಟ್ ಆಗಿ ನನ್ನ ಕೋಳಿ ಫಾರಂ ಗೆ ಬೀಗ ಹಾಕಬೇಕು ಅಂತನಾ.. 


ಇಲ್ಲ ಇಲ್ಲ... ಹಾಗಲ್ಲ.. ನಾನು ಕೋಳಿ ಅಂಗಡಿ ಬಗ್ಗೆ ಹೇಳಿದ್ದು. ನೀವು ನಿಮ್ಮ ಫಾರಂ ಗೆ ಯಾಕೆ ಬೀಗ ಹಾಕ್ತೀರಾ.. ಕೋಳಿಗಳು ಅದರಷ್ಟಕ್ಕೆ ಬೆಳೆಯಲಿ ಬಿಡಿ. ತಿನ್ನದಿದ್ದರೆ ಆಯ್ತು ಅಷ್ಟೇ.. ಅದೂ ಅಲ್ಲದೇ ನಾನು ಹೀಗೆ ಜಸ್ಟ್ ಫಾರ್  ಜನರಲ್ ನಾಲೆಡ್ಜ್ ಗೆ ಇರ್ಲಿ ಅಂತ ಇಷ್ಟು ಹೇಳಿದ್ದು ಅಷ್ಟೇ .. ಅಂದೆ. 


ಸತೀಸಣ್ಣ ಬೈಕ್ ಬೆಟ್ಟ ಗುಡ್ಡೆಯಲ್ಲಿ ರೊಂಯ್ ಅಂತ ಹೋಗ್ತಾ ಇತ್ತು ನಿಧಾನಕ್ಕೆ. 


ಮತ್ತೆ ನೀನು ಏನು ಮಾಡ್ಕೊಂಡಿದ್ದಿಯಾ..ಸತೀಸಣ್ಣ ಮೆಲ್ಲಗೆ  ಕೇಳಿದರು.


ಯಾರು ನಾನ?.. ನಾನು ಡೈಲಿ ಒಂದಲ್ಲಾ ಒಂದು interview ಅಟೆಂಡ್ ಮಾಡ್ತಾನೇ  ಇರ್ತಿನಿ..ಅಂದೆ. 


ಅಂದ್ರೆ..


ಅಂದ್ರೆ jobless, ಕೆಲಸ ಹುಡುಕ್ತಾ ಇದ್ದೀನಿ ಅಷ್ಟೇ ..


ಹೌದಾ.. ಮತ್ತೆ ಜೀವನಕ್ಕೆ .. ಹೊಟ್ಟೆ.. ಬಟ್ಟೆಗೆ ಎಲ್ಲಾ  ಏನು ಮಾಡ್ತೀಯಾ..


ಬದುಕ್ಲಿಕ್ಕೆ ಫ್ರೀ ಆಗಿ ಸಿಗೋ ಫ್ರೆಶ್ ಏರ್ ಅನ್ನೇ ಉಸಿರಾಡ್ತೀನಿ, 

ಹೊಟ್ಟೆಗೆ ಕೆಲವೊಮ್ಮೆ...ಮ್ಯಾಗಿ ತಿನ್ತೇನೆ..ಬಟ್ಟೆ ಅದು ಇದು ಅಂತ ಏನು ಇಲ್ಲ, interview ಗೆ ಫಾರ್ಮಲ್ಸ್ ಹಾಕ್ತೀನಿ.. ಹೊರಗಡೆ casual ಹಾಕ್ತೀನಿ.. ಮನೆಯಲ್ಲಿ ಇದ್ರೆ ಟೀ ಶರ್ಟ್ ಹಾಕ್ತೀನಿ.. 


ಸತೀಸಣ್ಣ ಸ್ವಲ ಹೊತ್ತು ಸೈಲೆಂಟ್ ಆಗಿಯೇ ಇದ್ರು. ಅವರಿಗೆ ಈಗ ಸಕ್ಕತ್ ಬೆಚ್ಚ ಆಗಿರಬಹುದು ಅಂತ ಅನ್ಕೊಂಡೆ.


ನಾನೇ ಮುಂದುವರಿಸಿದೆ.


ಸತೀಸಣ್ಣ ಏನ್ ಮಾಡ್ಲಿ ಡಿಗ್ರಿ ಆಗಿದೆ, ಆದರೆ ಎಷ್ಟು ಪ್ರಯತ್ನ ಪಟ್ಟರೂ ಕೆಲಸ ಸಿಗ್ತಾ ಇಲ್ಲ.. ನಾನು ಕೂಡ ನಿಮ್ಮ ಹಾಗೆ ಏನಾದರೊಂದು ಬ್ಯುಸಿನೆಸ್ ಮಾಡ್ಬೇಕು ಅಂತ ಅನ್ಕೊಂತಿನಿ ಆದ್ರೆ ಇನ್ನೂ ಏನೂ ಮಾಡಿಯೇ ಇಲ್ಲ. ಅದು ಬೇರೆ ಈ ವರ್ಷ ನನ್ನ ಜಾತಕದಲ್ಲಿ ಗ್ರಹಗತಿಗಳು ಕೂಡ ವಕ್ರ ವಕ್ರ ಆಗಿವೆ ಅಂತೆ. ಮುಂದಿನ ವರ್ಷ ಸಕ್ಕತ್ ಒಳ್ಳೆಯದು ಉಂಟಂತೆ, ಹಾಗಂತ ಜ್ಯೋತಿಷ್ಯರು ಹೇಳಿದ್ದಾರೆ, ಹಾಗಾಗಿ.. ಮುಂದಿನ ವರ್ಷ ಏನಾದರೊಂದು ಮಾಡ್ಬೇಕು ಅಂತ ಇದ್ದೀನಿ ಸತೀಸಣ್ಣ ಅಂದೆ.


ಆಯಿತು ಆಯಿತು ಮಾಡು.. ಆದ್ರೆ ನೀನು ಮಾಡಿ ನೀನೇ ಅದನ್ನು ಲಗಾಡಿ ಮಾತ್ರ ತೆಗಿಬೇಡ ಅಷ್ಟೇ.. ಅಂದರು.


ಗಾಡಿ ಗಾಳಿ ಸೀಳಿಕೊಂಡು ಹೋಗ್ತಾನೆ ಇತ್ತು.


ಪುನಃ ಕೇಳಿದೆ.. 


ಸತೀಸಣ್ಣ ಈ ಕೊರೋನ ಹೇಗೆ..


ಹೇಗೆ ಅಂದ್ರೆ.. ಅದೆಂತಹ ಮನುಷ್ಯವ?


ಅಲಾ ಕೊನೆಗೆ ನಾವೆಲ್ಲ ಜನರು ಈ ಭೂಮಿಯಲ್ಲಿ ಉಳಿಬಹುದಲ್ವಾ..


ಮುಂಜಾಗ್ರತೆ ಕ್ರಮ ಅಂತ ಸರಕಾರಗಳು ಏನು ಹೇಳಿದ್ದಾರೋ  ಅದನ್ನು ತಗೊಂಡ್ರೆ.. ಇದನ್ನು ಹತ್ತಿಕ್ಕಬಹುದು.. ಅಂದರು ಸತೀಸಣ್ಣ.


ಅವರನ್ನೇ ನೋಡಿದೆ. ಅವರು ಮುಖಕ್ಕೆ ಮಾಸ್ಕ್ ಹಾಕುವ ಬದಲು ಕರ್ಚೀಪು ಒಂದನ್ನು ಕಟ್ಟಿಕೊಂಡಿದ್ದರು.


ಸತೀಸಣ್ಣ ಈ ಕರ್ಚೀಪು ಕಟ್ಕೊಂಡ್ರೆ ಕೊರೋನ ಬರಲ್ವಾ..


ಅವರು ಏನೂ ಮಾತಾಡ್ಲಿಲ್ಲ..


ನಾನು ಏನು  ಹೇಳಿದ್ದು ಅಂದ್ರೆ ಈಗ ನೀವು ಮುಖಕ್ಕೆ ಕರ್ಚೀಪು ಕಟ್ಟಿದ್ದೀರಿ ಅಲಾ.. ಅದು ನಿಜವಾಗಿಯೂ allowed ಉಂಟಾ..ಹೀಗೆಲ್ಲಾ ಮಾಡಿದ್ರೆ ಆಗ್ತದಾ.. ಸರ್ಕಾರ compulsory ಮಾಸ್ಕ್ ಅನ್ನೇ ಹಾಕಿ ಅಂತ ಹೇಳ್ತದೆ ಅಲ್ವಾ .. ಒಂದು ವೇಳೆ ಮುಂದೆ ಟ್ರಾಫಿಕ್ ಪೋಲಿಸ್ ನಿಲ್ಲಿಸಿ ಫೈನ್ ಏನಾದರೂ ಹಾಕಿದ್ರೆ ಆವಾಗ  ಏನು ಮಾಡ್ತೀರಾ ನೀವು.. ಅದು ಅಲ್ಲದೇ ನಿಮ್ಮತ್ರ ಹೆಲ್ಮೆಟ್ ಕೂಡ ಇಲ್ಲ.. ಅಂದೆ. 


ಅವರು ಬೈಕ್ ಬಿಡುತ್ತಲೇ ಭುಜದತ್ತ ತಲೆತಿರುಗಿಸಿ ಹಾಗೇ ವಾರೆ ಕಣ್ಣಿನಲ್ಲಿ ನನ್ನನ್ನೇ ನೋಡಿದರು.


ಅರ್ಥ ಆಯಿತು. ಅವರಿಗೆ ನಾನು ಹೇಳಿದ್ದು ಇಷ್ಟ ಆಗ್ಲಿಲ್ಲ ಅಂತ ಕೊನೆಗೂ  ಅರ್ಥ ಆಯಿತು. 


ನಾನೇ ಮುಂದುವರಿದು ಹೇಳಿದೆ.


ಏನೇ ಹೇಳಿ ಸತೀಸಣ್ಣ ಈ ಸರ್ಕಾರಗಳು ಏನೇ ಕ್ರಮ ಕೈಗೊಂಡರು.. ಅದನ್ನು ಜನರು ಸರಿಯಾಗಿ ಪಾಲಿಸದಿದ್ದರೆ.. ಏನೇ ಕ್ರಮ ಕೈಗೊಂಡರೂ ಅದೆಲ್ಲವೂ  ವ್ಯರ್ಥ  ಅಲಾ ಅಂದೆ.


ಹೂಂ. ಹೌದು ಜನರಿಗೆ ಬಾಷೆ ಇಲ್ಲ. ಎಲ್ಲಾ ಕಡೆ ಬಲಿ ಬರ್ತಾನೆ (ತಿರುಗಾಡ್ತಾನೆ) ಇರ್ತಾರೆ. ಮನೆಯಲ್ಲಿ ಕುತ್ಕೊಳ್ಳಿ ಅಂತ ಹೇಳಿದ್ರೂ ಕೇಳಲ್ಲ.ಮತ್ತೆ ಹೇಗೆ ಕಂಟ್ರೋಲ್ ಆಗೋದು. ಅಂದರು.


ಹೌದು ನಾನು ಅದನ್ನೇ ಹೇಳ್ಬೇಕು ಅಂತ ಇದ್ದೆ ಸತೀಸಣ್ಣ. ಈ ನಮ್ಮ ಸಮಾಜದ ಜನಗಳಿಗೆ ಶಿಸ್ತು ಅನ್ನುವುದೇ ಇಲ್ಲ. ಇವತ್ತು ನೋಡಿ ನಾನು ಮೊದಲು  ಸಿಟಿ ಮಾರ್ಕೆಟ್ ಗೆ ಹೋದೆ. ಅಬ್ಬಾ ಅಲ್ಲಿ ಎಷ್ಟು ಜನ ಮರ್ರೆ... ನೆಕ್ಸ್ಟ್ ನಾನು ತರಕಾರಿ ಮಾರ್ಕೆಟ್, ಮೀನ್ ಮಾರ್ಕೆಟ್, ಪ್ರೂಟ್ಸ್ ಮಾರ್ಕೆಟ್, ಫ್ಲವರ್ ಮಾರ್ಕೆಟ್   ಅಲ್ಲಿ ಕೂಡ ಹೋಗಿ ಹಾಗೇ ತಿರುಗಾಡಿ ಕೊಂಡು ಬಂದೆ.. ಅಬ್ಬಾ ಶಿವನೇ.. ಎಷ್ಟೊಂದು ಜನ. ಎಲ್ಲಾ ಕಡೆ ಹೋದ್ರೂ  ಸತೀಸಣ್ಣ ..ಜನವೇ ಜನ.. ಅದು ಕೂಡ ಲೆಕ್ಕಕ್ಕಿಂತ ಜಾಸ್ತಿಯೇ.. ಒಂಥರಾ ಜಾತ್ರೆ ತರ. ನಮ್ಮ ಜನಗಳಿಗೆ ಶಿಸ್ತು ಅನ್ನುವುದು ಇಲ್ಲವೇ ಇಲ್ಲ ಸತೀಸಣ್ಣ.. ಮಾಸ್ಕ್ ಅನ್ನುವುದು ಇಲ್ಲ ಬಿಡಿ.. ಕರ್ಚೀಪು ಕಟ್ಟಿದ್ರೆ ಅದುವೇ  ಜಾಸ್ತಿ.. ಅದು ಕೂಡ  ಕುತ್ತಿಗೆಗೆ ಕಟ್ಟಿರ್ತಾರೆ.. ಏನು ಹೇಳ್ತೀರಾ ನೀವು.. ಈ ಅಶಿಸ್ತಿನ ಜನರನ್ನು ಹಿಡಿದುಕೊಂಡು ಸರಕಾರ ಆದರೂ ಏನು ಮಾಡುವುದು,ಹೇಗೆ ಅಂತ ಎಲ್ಲವನ್ನೂ ಸರ್ಕಾರ ಒಂದೇ  ಕಂಟ್ರೋಲ್ ಮಾಡುವುದು..ನೀವೇ ಹೇಳಿ ಅಂದೆ.


ರಪ್ಪ ಸತೀಸಣ್ಣ ಗಾಡಿ ನಿಲ್ಲಿಸಿದರು.


ಮೊದಲು ಬೈಕ್ ನಿಂದ ಇಳಿ ಅಂದರು ಸಿಟ್ಟಿನಿಂದ..


ಯಾಕೆ ಏನಾಯಿತು ಸತೀಸಣ್ಣ.. ಅಂದೆ...


ಮೊದಲು ಇಳಿ ಅಂದರು..


ನಾನು ಬೈಕ್ ನಿಂದ ಇಳಿದೆ.


ಏನಾಯಿತು ಸತೀಸಣ್ಣ ಯಾಕೆ ಇಷ್ಟೊಂದು rash ಆಗ್ತಾ ಇದ್ದೀರಾ.. ಏನು ಪ್ರಾಬ್ಲಂ ಕೇಳಿದೆ. 


ಜನ ಸರಿ ಇಲ್ಲ, ಸಮಾಜ ಸರಿ ಇಲ್ಲ..ಅಂತ  ಭಾಷಣ ಮಾಡ್ತಿಯಾ ... ಈಗ ನೋಡಿದ್ರೆ ನೀನೇ ಊರೀಡಿ ಬೋರಿ ಬಸವನ(ಗೂಳಿ) ಹಾಗೇ ಅಲ್ಲಿ ಇಲ್ಲಿ  ತಿರುಗಾಡಿ ಬಂದಿದ್ದಿಯಾ.. ಒಂದು ರೀತಿಯಲ್ಲಿ ನೋಡಿದ್ರೆ ನಿನಗೆಯೇ ಎಲ್ಲರಿಗಿಂತ ಕಡಿಮೆ ಶಿಸ್ತು ಇದೆ... ನಿನ್ನನ್ನು ನನ್ನ ಬೈಕ್ ಗೆ ಹತ್ತಿಸಿಕೊಂಡಿದ್ದೆ ನನ್ನ ತಪ್ಪು... ಎಂದು ಹೇಳಿ ಬೈಕ್ start ಮಾಡಿ ನಡು ದಾರಿಯಲ್ಲಿ ನನ್ನನ್ನು ಇಳಿಸಿ ಬಿಟ್ಟು ಸೀದಾ ಹೋಗಿಯೇ  ಬಿಟ್ಟರು ಭಯಂಕರ ಶಿಸ್ತಿನ ಮನುಷ್ಯ ಸತೀಸಣ್ಣ.


ಆವಾಗಲೇ ಮಳೆ ಬೇರೆ ಶುರು ಆಗಿತ್ತು. 


ನಾನು ಪುನಃ ರೋಡ್ ಪಕ್ಕ ನಿಂತುಕೊಂಡು ಆ ಮಳೆಯಲ್ಲಿ  ಹೋಗೋ ಬರೋ ಎಲ್ಲಾ ಗಾಡಿಗಳಿಗೆ ಲಿಪ್ಟ್ ಗಾಗಿ ಕೈ ಅಡ್ಡ ಹಾಕಲು ಶುರು ಮಾಡಿದೆ.


ಮನಸ್ಸು ಹೇಳುತ್ತಿತ್ತು.... 


ಎಲ್ಲಾ ಓಕೆ.. ಆದ್ರೆ ನಾನು ಸತೀಸಣ್ಣನ ಬಳಿ,ಈ ಶಿಸ್ತಿನ ಬಗ್ಗೆ ಜಾಸ್ತಿ ಡಿಸ್ಕಷನ್ ಮಾಡದಿದ್ದರೇನೇ ಒಳ್ಳೆಯದಿತ್ತು.. ಎಂದು.


.....................................................................................


#ನೀಲಮೇಘ 💙


Ab Pacchu

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ