ಮಾವು ಎಂಬ ಪ್ರೀತಿ ಪ್ರೇಮ..
" #ಮಾವು_ಎಂಬ_ಪ್ರೀತಿ " 🧡
ಮಾವಿನ ಹಣ್ಣು ಅಂದರೆ ಅದೆಂತದೋ ಪ್ರೀತಿ, ಅದೇನೋ ಸಿಕ್ಕಾಪಟ್ಟೆ ಮೋಹ, ಆಪ್ತತೆ, ಹಂಬಲ ಎನಗೆ. ಅದು ಬೇಕಿದ್ದರೆ ನೆಕ್ಕರೆ, ಗಿಳಿ ಕುಕ್ಕು,ಉಪ್ಪಿನಕಾಯಿಯ ದೊಡ್ಡ ಗಾತ್ರದ ಮುಂಡಪ್ಪೆ,ಚಿಕ್ಕ ಗಾತ್ರದ ಘಟ್ಟದ ಮೇಲಿನ ಜೀರಿಗೆ, ಅಪ್ಪೆ ಮಿಡಿ, ಕಾಡು ಗುಡ್ಡೆಯಲ್ಲಿ ಹಣ್ಣಾಗಿ ಉದುರೋ ಅದೆಷ್ಟೋ ಹೆಸರಿರದ ಸಣ್ಣ ಸಣ್ಣ ಕಾಟು ಮಾವೇ ಆಗಿರಬಹುದು ಇಲ್ಲ, ಮಲ್ಲಿಕ, ನೀಲಂ,ತೋತಾಪುರಿ, ಆಪೂಸ್, ಬಾದಾಮ್, ರಸಪುರಿ ಮುಂತಾದ ರಸವತ್ತಾದ ಮಾವಿನ ಹಣ್ಣೇ ಆಗಿರಬಹುದು.. ಅದರೆಡೆಗಿನ ತುಡಿತ, ಹುಚ್ಚು ಪ್ರೇಮ ಇಂದಿಗೂ ಒಂಚೂರು ಕಡಿಮೆ ಆಗಿಯೇ ಇಲ್ಲ. ಅದು ನನ್ನ ಮುಂದೆ ಬಂದರೆ ನಾನು ಹಣ್ಣಿನ ವಾಟೆಯನ್ನು ಕೂಡ ಶ್ರದ್ಧೆಯಿಂದ ಚೀಪುವ ಚಿಕ್ಕ ಮಗುವೇ ಆಗಿಬಿಡುತ್ತೇನೆ. ಮಾವು ನನಗೆ ಒಂಥರಾ ಪ್ರೇಯಸಿ ಇದ್ದ ಹಾಗೇ..
ಮಾವಿನ ಮರ ಹೂವು ಬಿಟ್ಟಾಗಲೇ ನನಗೆ ಅದರೆಡಗಿನ ಆಕರ್ಷಣೆ ಹೆಚ್ಚಾಗಲು ಶುರುವಾಗುವುದು. ಮಾವಿನ ಕಾಯಿ ಮಿಡಿ ಬಿಟ್ಟು ಸ್ವಲ್ಪ ದೊಡ್ಡದಾದರೆ ಉಪ್ಪಿನಕಾಯಿ ಎಂಬ ಮಹಾಕಾವ್ಯ ಮನೆಯಲ್ಲಿ ಶುರು ಆಗಿ ಬಿಡುತ್ತದೆ. ಗಂಜಿ ಯೊಡನೆ ಮಾವಿನಕಾಯಿ ಚಟ್ನಿ ಎಂಬ ಸಣ್ಣ ಕಥೆ, ಆಹಾ..ನೆನಪು ಬಂದರೂ ಸಾಕು ಬಾಯಲ್ಲಿ ನೀರೂರುವುದು.
ಸ್ವಲ್ಪ ಉಪ್ಪು, ಮೆಣಸಿನ ಹುಡಿ ಹಾಗೇ ಉದುರಿಸಿಕೊಂಡು ಹುಳಿ ಹುಳಿ ಮಾವು ಹಾಗೇ ಮಾವಿನ ತೋಪಿನಲ್ಲಿ ಕಿತ್ತು ಕೊಂಡು ಅಲ್ಲೇ ತೋಪಿನಲ್ಲಿ, ಇಲ್ಲ ಮರದ ಮೇಲೆ ಕುಳಿತುಕೊಂಡು ತಿನ್ನುತ್ತಿದ್ದರೆ, ನನಗಂತೂ ಅದೇ ಸ್ವರ್ಗ. ಚಿಕ್ಕ ಇರುವಾಗ ಬೇರೆಯವರ ತೋಟಕ್ಕೆ ಮಾವಿನ ಆಸೆಯಿಂದ ನುಗ್ಗಿ ಮಾವಿನಕಾಯಿ ಕಿತ್ತುಕೊಂಡು ಬರುತ್ತಿದ್ದ ನೆನಪು ಇನ್ನೂ ಹಸಿರಾಗಿಯೇ ಇದೆ. ಏನೇ ಹೇಳಿ ಕದ್ದ ಹಣ್ಣಿಗೆ ರುಚಿ ಜಾಸ್ತಿ ಅಲಾ..
ಮನೆಯಲ್ಲಿ ಇದ್ದ ದೊಡ್ಡ ಮಾವಿನ ಗಿಡವೊಂದು ಸತ್ತು ಹೋಗಿದೆ, ಈಗ ಇರುವಂತದ್ದು ತುಂಬಾ ಚಿಕ್ಕದು,ಅದರಲ್ಲಿ ಇನ್ನೂ ಮಾವು ಆಗಿಲ್ಲ. ಈಗ ಚಟ್ನಿಗೆ ಏನಾದರೂ ರಪ್ಪಕ್ಕನೇ ಮಾವು ಬೇಕು ಅಂತ ಅನಿಸಿದರೆ ನಮ್ಮ ಸಿಡಿಲಮರಿ ಸುನೀಲ ನಿಗೆ ಹೇಳಿದರೆ ಸಾಕು ಎಲ್ಲಿಂದಲೋ ನಾಲ್ಕು ಮಾವಿನಕಾಯಿ ಕಿತ್ತು ತಂದು ಕೊಡುತ್ತಾನೆ.ಅವನಿಗೂ ಬೇರೆಯವರ ತೋಟದಿಂದ ಮಾವಿನಕಾಯಿ ಎಗರಿಸೋ ಸ್ಕಿಲ್ಸ್ ಕೂಡ ನಾನೇ ಹೇಳಿಕೊಟ್ಟಿದ್ದು,ಅವನು ಜಾಣ. ಸಿಡಲಿನಂತೆ, ಮಿಂಚಿನಂತೆ ಬೇರೆಯವರ ತೋಟಕ್ಕೆ ನುಗ್ಗಿ ಮೈ ಎಲ್ಲಾ ಪರಚಿಕೊಂಡು ನನಗಾಗಿ ಮಾವು ತಂದು ಕೊಡುತ್ತಾನೆ. ಅದಕ್ಕಾಗಿಯೇ ಅವನಿಗೆ ಸಿಡಿಲ ಮರಿ ಎಂದು ಹೆಸರು.. ಅಂತಹ ವೇಗ, ಅಂತಹ ಚಾಕಚಕ್ಯತೆ ಅವನದು.
ಸರಿತ್ ಅಂತ ಒಬ್ಬ ಫ್ರೆಂಡ್ ಇದ್ದಾನೆ, ಅವನ ಮನೆಯಲ್ಲಿ ಕಶಿ ಮಾವಿನ ಮರ ಇದೆ. ಯಾವ ಜಾತಿ ಮಾವು ಅಂತ ಗೊತ್ತಿಲ್ಲದಿದ್ದರೂ ಅದರ ಮಾವು ಮಾತ್ರ ಬಹಳ ಸಿಹಿ. ಮರದ ಪೂರ್ತಿ ಮಾವು ಅಂಟಿಸಿದಂತೆ ಇರುತ್ತದೆ, ಅಷ್ಟೊಂದು ಮಾವು. ನನಗಿಷ್ಟು ಮಾವು ಕೊಡು ಅಂತ ಹೇಳಿದ್ರೆ ಅದು ಇನ್ನೂ ಹಣ್ಣಾಗಿಲ್ಲ, ಈಗ ಕಾಯಿ ಇದೆ, ಹಣ್ಣು ಆದ ಮೇಲೆ ಕೊಡ್ತೇನೆ ಅಂತ ಹೇಳಿದರೂ ಈ ಸಲ ಬೇಕಾದಷ್ಟು ಕಾಯಿ ಮಾವು ಕೂಡ ಕೊಟ್ಟಿದ್ದಾನೆ, quarantine ಬೇರೆ ಇದ್ದುದರಿಂದ ಈ ಸಲ ಬೇಕಾದಷ್ಟು ಬಾರಿ ಉಪ್ಪು ಮೆಣಸಿನ ಹುಡಿ ಹಾಕಿ, ಕಾಯಿ ಮಾವು ತಿಂದಿದ್ದೆ ತಿಂದಿದ್ದು.
ಮರ ಸರಿತ್ ನವರದ್ದೇ ಆದರೂ ಅದರ ಹೆಚ್ಚಿನ ಗೆಲ್ಲುಗಳು ಶ್ರೇಯಸ್ ನ ಮನೆಯ ಅಂಗಳಕ್ಕೆ ಬಾಗಿ ಶ್ರೇಯಸ್ ಗೆ easy ಆಗಿ ಮಾವಿನಕಾಯಿ ಕೊಯ್ಯುವಂತೆ ಇದೆ. ಶ್ರೇಯಸ್ ಹೈಸ್ಕೂಲ್ ಹುಡುಗ, ನಾನು ಶ್ರೇಯಸ್ ಗೆ ತುಂಬಾ ಸಲ ಹೇಳಿದ್ದೆ,ಸರಿತ್ ಇರದೇ ಇದ್ದಾಗ ಒಂದಷ್ಟು ಮಾವಿನಕಾಯಿ ಕದ್ದು ತಂದು ನನಗೆ ಕೊಡು ಎಂದು. ಅವ ಅಂತು ".. ನಿಮಗೆ ಎಷ್ಟು ಮಾವು ಬೇಕು ಹೇಳಿ ಅಣ್ಣಾ, ದಿನಕ್ಕೆ ಒಂದಲ್ಲ ಬೇಕಾದರೆ ಐದು ಮಾವಿನಕಾಯಿ ಸರಿತ್ ಅಣ್ಣಾ ನವರ ಮರದಿಂದ ಕಿತ್ತು ತಂದು ನಿಮಗೆ ಕೊಡ್ತೇನೆ, ನೀವು ಏನು ಟೆನ್ಶನ್ ಮಾಡ್ಬೇಡಿ.." ಅಂತ ಹೇಳಿದ್ದರೂ ಇನ್ನೂ ಒಂದೇ ಒಂದು ಮಾವು ಆತ ಕದ್ದು ತಂದು ನನಗೆ ಕೊಟ್ಟಿಲ್ಲ, ಯಾಕೆಂದರೆ ಅವನಿಗೆ ಸರಿತ್ ನ ಭಯ. ಈಗ ಸರಿತ್ ನವರ ಆ ಮರದ ಮಾವುಗಳು ಹಣ್ಣಾಗಿದೆ, ದಿನಕ್ಕೆರಡು ಮಾವು ಸರಿತೇ ತಂದು ಕೊಡುತ್ತಿದ್ದಾನೆ, ನಾನಂತು ವಾಟೆಯನ್ನು ಕೂಡ ಚಪ್ಪರಿಸಿ ಚಪ್ಪರಿಸಿ ತಿನ್ನುತ್ತಿದ್ದೆನೆ. ಅವನ ಮರದಲ್ಲಿ ಮಾವು ಇದೇ ರೀತಿ ಯಾವಾಗಲೂ ಮರದ ತುಂಬೆಲ್ಲಾ ಕಾಯಿಯಾಗಿ, ಹಣ್ಣಾಗಿ ನಳನಳಿಸಲಿ, ಹಣ್ಣಾದಾಗ ಅವನಿಗೆ ನನ್ನ ಒಬ್ಬನ ನೆನಪೇ ಅತಿಯಾಗಲಿ ಎಂಬುದೊಂದೇ ನನ್ನ ಮುದ್ದಿನ ದುರಾಸೆ.
ಹಣ್ಣಾದ ನಂತರವೂ ಮಾವಿನ ಹಣ್ಣಲ್ಲಿ ಅದೆಷ್ಟು ಖಾದ್ಯ ಗಳು. ಮಾವಿನ ಹಣ್ಣಿನ ಸೀಕರಣೆ,ಮಿಲ್ಕ್ ಶೇಕ್, ರಸಾಯನಗಳು, ಮಾವಿನ ಹಣ್ಣಿನ ಮಾಂಬಳ, ಹಲ್ವ, etc. etc. ಮುಂದೆ ಐಸ್ ಕ್ರೀಂ ಮೆನುವಿನಲ್ಲಿ ನಲ್ಲಿ ಕೂಡ ಮಾವು ಬಂದಾಗ ಅತಿಯಾಗಿ ಇಷ್ಟ ಆಗೋದೇ ಮ್ಯಾಂಗೋ. ಮಾವಿನ ಹಣ್ಣಿನ ಚಂಡುರ್ಲಿ, ಕುಕ್ಕು ಸಾಸಿಮಿ, ಕಾಟುಹಣ್ಣಿನ ಸಾರು,ಉಪ್ಪು ನೀರಲ್ಲಿ ಹಾಕಿಟ್ಟ ಮಾವಿನ ಕಾಯಿಯ ಚಟ್ನಿ, ಮಾವಿನ ಕಾಯಿಯ ಪಚ್ಚೊಡಿ, ಮಾವಿನ ಕಾಯಿ ಹಾಕಿ ಮಾಡುವ ಚರುಂಬುರಿ, ಮಾವಿನಕಾಯಿ ಚಿತ್ರಾನ್ನ.. ಒಂದೇ, ಎರಡೇ.. ಆಹಾ ತರಹೇವಾರಿ ಮಾವಿನ ವೆರೈಟಿಗಳು ಭೋಜನ ಪ್ರೀಯರ ಬಾಯಿ ತಣಿಸಿಬಿಡುತ್ತದೆ..
ಏನೇ ಹೇಳಿ ಮಾವಿನಹಣ್ಣು ಹಣ್ಣುಗಳ ರಾಜನೇ, ಅದರ ಹಳದಿ ಬಣ್ಣ, ಆ ರುಚಿ, ಆ ಸಿಹಿ, ಅದರ ಪರಿಮಳ ಎಲ್ಲಕ್ಕೂ ಅದರದ್ದೇ ಆದ ಒಂದು ಸಪರೇಟ್ ಪ್ಯಾನ್ ಬೇಸ್ ಇದೆ. ನಾನೆಷ್ಟು ಮಾವಿನಹಣ್ಣನ್ನು ಪ್ರೀತಿಸುತ್ತೇನೋ ಅಷ್ಟೇ ನಾನು ಅದರ ಅಭಿಮಾನಿಯೂ ಹೌದು.
ಒಂದು ಮಾವಿನ ಎತ್ತರದ ಮರವಾಗಿ ಬೆಳೆದು ನಿಂತ ಮೇಲೆ ಅದರಲ್ಲಿ ಬಲ್ಬುಗಳಲ್ಲಿ ಡೆಕೋರೆಟ್ ಮಾಡಿದಂತೆ ಮರ ಪೂರ್ತಿ ಮಾವಿನ ಹಣ್ಣು ಆಗದಿದ್ದರೆ ಅದೆಷ್ಟು ಬೋರ್ ಆಗಿ ಕಾಣುತ್ತೆ ಗೊತ್ತಾ. ಮಾವಿನ ಮರ ಅಂದರೆ ಕಾಯಿಗಳಿಂದ, ಮಾವಿನ ಹಣ್ಣು ಗಳಿಂದ ಅಲಂಕೃತವಾಗಿದ್ದರೆನೇ ಚಂದ, ಇಲ್ಲದಿದ್ದರೆ ದೊಡ್ಡ ಮರವಾಗಿ ಕೇವಲ ಉದ್ದಕ್ಕೆ ಅಡ್ಡಕ್ಕೆ ಬೆಳೆದು,ಹಣ್ಣು ಗಳನ್ನು ಕೊಡದಿದ್ದರೆ ಅದು ತುಂಬಾನೇ ಬೇಜಾರಿನ ಸಂಗತಿ.
ಕೇವಲ ಹಣ್ಣು, ಕಾಯಿ ಮಾತ್ರವಲ್ಲ ಸ್ವತಃ ಮಾವಿನ ಮರವೇ ಬಹುಪಯೋಗಿ ಆದದ್ದು. ಹಿಂದೆ ಆದರ ಎಲೆಯನ್ನು ಹಲ್ಲುಜ್ಜಲು ಬಳಸುತ್ತಿದ್ದರು. ಮಾವಿನ ಮರಮಟ್ಟುಗಳಿಗೆ ಹೆಚ್ಚಿನ ಬೆಲೆ, ಮಾನ್ಯತೆ ಇದೆ. ದೇವತಾ ಕಾರ್ಯ ದಲ್ಲೂ ಮಾವಿಗೆ ವಿಶೇಷವಾದ ಪ್ರಾಧಾನ್ಯತೆ ಉಂಟು. ದೇವರ ನೀರು ಇಲ್ಲ ತೀರ್ಥ ಸಿಂಪಡಿಸಲು ಮಾವಿನ ಎಲೆಗಳ ಗೊಂಚಲೇ ಬೇಕು. ಯಾವುದೇ ಶುಭ ಸಮಾರಂಭ ನಡೆಯಲಿ ಅಲ್ಲಿ ಶುಭ ಕೋರುವ ತೋರಣ ಒಂದು ಮಾವಿನ ಎಲೆಗಳಿಂದಲೇ ರಚಿತವಾಗಿರಬೇಕು. ಕೇವಲ ಶುಭ ಮಾತ್ರವಲ್ಲ ಯಾರಾದರೂ ನಿಧನರಾದರೆ ಅವರನ್ನು ಸುಡುವಾಗ ಮರೆಯದೇ, ತಪ್ಪದೇ ಮಾವಿನ ಮರದ ತುಂಡೊಂದನ್ನು ಸೇರ್ಪಡಿಸುವ ಕ್ರಮವೂ ಕೂಡ ನಮ್ಮಲ್ಲಿ ಇದೆ. ಒಟ್ಟಾರೆಯಾಗಿ ಹುಟ್ಟಿನಿಂದ ನಾವು ಸಾಯುವವರೆಗೂ ಮಾವು ನಮ್ಮ ಜೊತೆಗೆನೇ ಇರುತ್ತದೆ..
ನನ್ನ ಪ್ರಕಾರ ಹೇಗೆ ನಮ್ಮ ನಮ್ಮ ಮನೆಗಳಲ್ಲಿ ಒಂದು ಬಸಳೆ ಚಪ್ಪರ, ಒಂದು ಪಪ್ಪಾಯಿ ಗಿಡ ಹೆಚ್ಚಾಗಿ ಇರುತ್ತೋ ಹಾಗೇ ಮನೆಗೊಂದು ಹಲಸಿನ ಮರ ಮತ್ತು ಮಾವಿನ ಮರ ಇರಲೇ ಬೇಕು. ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲಿ ಹೇರಳವಾಗಿ ಮಾವಿನ ಗಿಡ ನೆಟ್ಟಾಗ ತುಂಬಾನೇ ಖುಷಿ ಆಗುತ್ತದೆ.
ನಮ್ಮಲ್ಲಿ ಹೆಚ್ಚಿನವರಿಗೆ ಮಾವು ಅಂದರೆ ಅದು ಕೇವಲ ಮಾವಿನ ಹಣ್ಣು ಅಲ್ಲ, ಅದೊಂದು ಬಾಲ್ಯದ ನೆನಪು. ಕಾಟು ಮಾವುಗಳನ್ನು ಹೆಕ್ಕುತ್ತಿದ್ದುದು ಒಂದು ದಿವ್ಯವಾದ ಅನುಭವ. ಎಷ್ಟೋ ಒಳ್ಳೊಳ್ಳೆಯ ಜಾತಿಯ ಮಾವುಗಳು ಇಂದು ಅಳಿಸಿ ಹೋಗಿದ್ದರೂ, ಇನ್ನೂ ಕೂಡ ಕೆಲವು ಒಳ್ಳೆಯ ತಳಿಗಳು ನಮ್ಮಲ್ಲಿ ಜೀವಂತವಾಗಿ ಇದೆ. ಬೇರೆ ಏನೇನೋ ತಿನ್ನುವುದಕ್ಕಿಂತ ಮಾವಿನ ಹಣ್ಣಿನ ಸೀಸನ್ ನಲ್ಲಿ ಹೆಚ್ಚಾಗಿ ಚೆನ್ನಾಗಿ ಮಾವಿನ ಹಣ್ಣೇ ತಿನ್ನಿ, ರುಚಿಯೂ ಹೌದು ಆರೋಗ್ಯ ಕ್ಕೂ ಒಳ್ಳೆಯದು..
"ಎತ್ತಣ ಮಾಮರ.. ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯ.." ಎಂಬ ಮಾತೇ ಇದೆ. ಕೋಗಿಲೆ ಗೂ ಮಾವಿನ ಮರವೇ ಇಷ್ಟವಂತೆ, ಅದು ಅಲ್ಲಿದ್ದರೆನೇ ಚಂದ...
ಬಾವಲಿ,ಗಿಳಿ,ಅಳಿಲುಗಳಿಗೂ ಕೂಡ ಮಾವಿನ ಹಣ್ಣಿನ ಸೇವನೆ ಅಂದರೆ ಬಹಳನೇ ಇಷ್ಟ.. ಅವುಗಳು ಕೂಡ ಒಂದು ರೀತಿಯಲ್ಲಿ ಮಾವು ಕಳ್ಳರೇ..
ಮಾವಿನ ಹಣ್ಣಿಗಾಗಿ ಬೇಕಾದರೆ ನಾನು ಕಳ್ಳನೂ ಆಗಬಲ್ಲೆ, ಸುಳ್ಳನೂ ಆಗಬಲ್ಲೆ, ಮಳ್ಳನೂ ಆಗಬಲ್ಲೆ... 🧡
ನನ್ನದಂತು ಭಗವಂತನಲ್ಲಿ ಒಂದೇ ಪ್ರಾರ್ಥನೆ.. ನನ್ನ ನೆಚ್ಚಿನ ಗೆಳತಿ, ಮುದ್ದು ಪ್ರೇಯಸಿ ಎಲ್ಲವೂ ಆಗಿರುವ ಮಾವು ಎಂದಿಗೂ ನನ್ನ ಕೈಬಿಡದಿರಲಿ..ಈ ಪ್ರೀತಿ, ಅದರ ರೀತಿ ಎಂದಿಗೂ ಮಾವಿನಷ್ಟೇ ಸಿಹಿಯಾಗಿರಲಿ.. 🧡🧡
ಎಂದೆಂದಿಗೂ ಅಪ್ಪಟ #ಮಾವು_ಪ್ರೇಮಿ 🧡
.....................................................................................
AB Pacchu
Moodubidire




Comments
Post a Comment