ಕೆಂಪು ಮುಂಚಿ ಜೊತೆಗೊಂದು ಕಪ್ಪು ಮಜ್ಜಿ..
ಕೆಲವೊಂದು ಕ್ರಮಗಳು ಹಾಗೇನೇ.. ಅದರಲ್ಲೊಂದು ಶ್ರದ್ಧೆಯಿದೆ,ಎಷ್ಟೋ ಕಾಲದ ಸ್ಥಿರವಾದ ನಂಬಿಕೆ ಇದೆ.ಜನರೇಶನ್ ಬದಲಾದರೂ ನಂಬಿಕೆಗಳು ಸುಲಭವಾಗಿ ಬದಲಾಗುವುದಿಲ್ಲ.
ನಂಬಿಕೆಗಳಲ್ಲಿ ಬೆಸುಗೆ ಇದೆ.. ಅಕ್ಕರೆಯೂ ಇದೆ.
ಏನಾದರೂ ಫಂಕ್ಷನ್ ಗಳು ಇದ್ದಾಗ ಅಲ್ಲಿಗೆ ಹೋಗದೆ ಇದ್ದರೆ ಅಲ್ಲಿಂದ ಒಂದು ಕಟ್ಟು ಏನಾದರೂ ಈ ರೀತಿ ಮನೆಗೆ ಬರುವ ವಾಡಿಕೆ ನಮ್ಮಲ್ಲಿ ಎಲ್ಲರ ಮನೆಯಲ್ಲೂ ಇದೆ.ಅದೇ ರೀತಿ ನಮ್ಮ ನಮ್ಮ ಮನೆಯಲ್ಲಿ ಫಂಕ್ಷನ್ ಗಳು ಇದ್ದಾಗ ಕೂಡ...ಫಂಕ್ಷನ್ ಗೆ ಬಂದವರು ಪುನಃ ಅವರ ಮನೆಗೆ ಹೋಗಿ ಅಡುಗೆ ಮಾಡಲು ಅವರಿಗೆ ಕಷ್ಟವಾಗಬಹುದು ಎಂದು.. ಅಥವಾ ಮಾಡಿದ್ದ ಆಹಾರ ಪದಾರ್ಥಗಳು ತುಂಬಾನೇ ಉಳಿದಿದೆ ಎಂದು.. ಇಲ್ಲವೇ ಫಂಕ್ಷನ್ ಗೆ ಬರದೇ ಇದ್ದವರಿಗೆ ಯಾವುದಾದರೂ ಒಂದು ಪದಾರ್ಥ ತುಂಬಾನೇ ಇಷ್ಟವಿದೆ ಎಂದು ಮೊದಲೇ ಗೊತ್ತಿದ್ದರೆ.. ಆಗಲೂ ಕೂಡ ಈ ರೀತಿ ಮನೆಗೆ ಬಂದವರಿಗೆ ಅತಿ ಪ್ರೀತಿಯಿಂದ ಕಟ್ಟಿ ಕೊಡುವ ಕ್ರಮವೊಂದು ನಮ್ಮಲ್ಲಿ ಹಿಂದಿನಿಂದಲೂ ಇದೆ.
ಆದರೆ ನನಗೆ ಯಾವಾಗಲೂ ಇದರಲ್ಲಿ ಕುತೂಹಲ ಮೂಡಿಸುವುದು ಯಾವುದು ಎಂದರೆ ಅದನ್ನು ಕಟ್ಟಿ ಕೊಡುವ ಒಂದು ವಿಶಿಷ್ಟವಾದ ಕ್ರಮ.ಕೆಲವೊಮ್ಮೆ ಬುತ್ತಿ ಇಲ್ಲದಿದ್ದರೆ ಕೆಲವೊಮ್ಮೆ ಬಾಳೆಎಲೆಯಲ್ಲಿ ಎಲ್ಲವನ್ನೂ ಗಟ್ಟಿಯಾಗಿ ಕಟ್ಟಿ ಇಟ್ಟ ನಂತರ ಆ ತೊಟ್ಟೆಯಲ್ಲಿ ಒಂದು ತುಂಡು ಮಜ್ಜಿ(ಇದ್ದಿಲು) ಅಥವಾ ಮುಂಚಿ(ಒಣ ಮೆಣಸು)ಇಡದಿದ್ದರೆ ನಮ್ಮವರಿಗೆ ಸಮಾಧಾನ ಆಗುವುದೇ ಇಲ್ಲ.ಅದರಲ್ಲೂ ಕಟ್ಟಿನಲ್ಲಿ ನಾನ್ ವೆಜ್ ಇದ್ದರೆ ಈ ಎರಡು ವಸ್ತುಗಳು Mandatory ಆಗಿ ಇರಲೇಬೇಕು.
ಏಕೆ ಈ ಒಣಮೆಣಸು ಅಥವಾ ಇದ್ದಿಲು..?
ಕಾರಣ ಕೇಳಿದರೆ ಅಮ್ಮ ಹೀಗೆ ಹೇಳುತ್ತಾಳೆ... ಈ ರೀತಿ ಕಟ್ಟು ತೆಗೆದುಕೊಂಡು ಬರುವಾಗ ಅದರಲ್ಲೂ ಗುಡ್ಡದ ಹಾದಿ ಎಲ್ಲ ಇದ್ದರೆ ದೆವ್ವಗಳ ಉಪದ್ರ ಇರುತ್ತದೆಯಂತೆ. ಅವುಗಳು ಪರಿಮಳಕ್ಕೆ ಆಸೆ ಪಟ್ಟು ಹತ್ತಿರ ಬಂದು ಕಟ್ಟನ್ನು ಎಳೆಯುತ್ತದೆ ಮತ್ತು ಆ ಕಾರಣ ಕಟ್ಟಿನೊಳಗಿನ ಪದಾರ್ಥ ಅವುಗಳಿಂದಾಗಿ ಕೆಲವೊಮ್ಮೆ ನೀರಾಗುವುದು,ರುಚಿ ಕಳೆದುಕೊಳ್ಳುವುದು, ಒಟ್ಟಿನಲ್ಲಿ ಹಾಳಾಗುವುದು ಎಲ್ಲಾ ಆಗುವುದಂತೆ.
ಅಮ್ಮ ಹೇಳುವಾಗ ಎಲ್ಲವನ್ನು ಮುಗ್ಧವಾಗಿ ಅಷ್ಟೇ ಶ್ರದ್ಧೆಯಿಂದ ಹೇಳುತ್ತಾಳೆ. ಏಕೆಂದರೆ ಅದನ್ನು ಅವಳು ನಂಬುತ್ತಾಳೆ.
ನಮ್ಮಲ್ಲಿ ನಂಬಿಕೆಯೇ ದೇವರು,ದೆವ್ವವನ್ನು ಕಣ್ಣಾರೆ ನಾನಂತು ಕಂಡಿಲ್ಲ.. ಆದರೆ ಮನೆಗೆ ಬರುವ ಕಟ್ಟಿನಲ್ಲಿ ಹೀಗೊಂದು ಮೆಣಸು ಮತ್ತು ಇದ್ದಿಲು ನನ್ನ ಕಣ್ಣಿನಿಂದ ಮಿಸ್ ಆದದ್ದು ಕೂಡ ನಾನು ಯಾವತ್ತೂ ಕಂಡಿಲ್ಲ.
ಈಗಿನ ಕಾಲದ ಹೆಂಗಸರು ಕೂಡ ಇದನ್ನು ಮಾಡುತ್ತಾರೆ,ಒಂದು ವೇಳೆ ಅವರಿಗೆ ನೆನಪಾಗದೇ ಇದ್ದರೂ ಮನೆಯ ಹಿರಿಯರು ಅವರಿಗೆ ಅದನ್ನು ನೆನಪು ಹುಟ್ಟಿಸಿ ಇವೆರಡನ್ನು ತಪ್ಪದೇ ಸೇರಿಸಲು ಹೇಳುತ್ತಾರೆ.
ಸದ್ಯಕ್ಕೆ ದೊಡ್ಡಮ್ಮ ಮನೆಯಿಂದ ಒಂದು ಕಟ್ಟು ನನಗಾಗಿ ಕಳುಹಿಸಿ ಕೊಟ್ಟಿದ್ದಾರೆ.. ಓಪನ್ ಮಾಡುವಾಗಲೇ ಮೇಲೆಯೇ ಇತ್ತು ಒಂದು ಕೆಂಪು ಮುಂಚಿ ಮತ್ತೊಂದು ಕಪ್ಪು ಮಜ್ಜಿ.ಹಳೆಯ ನೆನಪುಗಳು ಮತ್ತಷ್ಟು ಜೀವಂತ.ದೊಡ್ಡಮ್ಮ ಕಟ್ಟಿಕೊಟ್ಟ ಕಟ್ಟನ್ನು ಬಿಡಿಸುವಾಗ ಅದೇನೋ ಉಲ್ಲಾಸ,ಜೊತೆಗೆರಡು ಅದರ ಪರಿಮಳಕ್ಕಾಗಿ ಅರಳಿಕೊಳ್ಳುವ ಮೂಗಿನ ಹೊಳ್ಳೆಗಳು. ಪ್ರೀತಿಯಿಂದ ಕಳುಹಿಸಿ ಕೊಡುವ ಎಲ್ಲವೂ ರುಚಿಯೇ..ಚಕ್ಕಳ ಮಕ್ಕಳ ಹಾಕಿಕೊಂಡು ಮಕ್ಕಳಂತೆ ತಿನ್ನಲು ಕೂತವನಿಗೆ ಕಣ್ಣು ಮುಚ್ಚಿ ಬೆರಳು ಚೀಪಿ.. ಆಹಾ.. ಎಂದು ಉದ್ಘರಿಸಿ ತಿಂದರಷ್ಟೇ ತಿಂದದ್ದು ದೇಹಕ್ಕೆ ಸೇರುವುದು.
ದೊಡ್ಡಮ್ಮ ಯಾವಾಗ ಏನೇ ಕಳುಹಿಸಿ ಕೊಟ್ಟರೂ ಕೆಂಪು ಮುಂಚಿ ಆಗಲಿ ಕಪ್ಪು ಮಜ್ಜಿ ಆಗಲಿ ಮಿಸ್ ಆಗಿದ್ದೇ ಇಲ್ಲ. ಇಂತಹ ನಂಬಿಕೆಗಳಲ್ಲಿ ಮಮತೆ ಇದೆ,ಮುಗಿಯದ ಅಕ್ಕರೆ ಇದೆ.
ಹಾಗಾಗಿ ಇಂತಹ ನಂಬಿಕೆಗಳು ನನಗಂತು ಯಾವಾಗಲೂ ಇಷ್ಟ...
.....................................................................................
#ಏನೋ_ಒಂದು
ab pacchu
moodubidire
Comments
Post a Comment