ಬೆಳ್ಳುಳ್ಳಿಯಲ್ಲಿ ಒಂದು ಚಟ್ನಿ..

 


ಹೌದು ಚಟ್ನಿಯೇ ಇದು. ಸಿಂಪಲ್ ಆದ ರೆಡ್ ಕಲರ್ ನ  ಕೆಂಪು ಚಟ್ನಿ ಇದು.ರೆಡ್ ಕಲರ್, ಕೆಂಪು ಕಲರ್ ಎರಡೂ ಒಂದೇ  ಅಂತೀರಾ..?


ಹಾಗಾದರೆ ಇದರಲ್ಲಿ ಹಾಕಿರುವ ಪ್ರಧಾನ ingredients ಒಂದನ್ನು ಈ ಚಟ್ನಿಯಿಂದ ಅಗೆದು ಬಗೆದು ಹುಡುಕಿ ತೆಗೆದು yes ಇದು ಆ ಚಟ್ನಿಯೇ ಎಂದು ಖಡಾ ಖಂಡಿತವಾಗಿ  ಹೇಳುವುದಾದರೆ,ಈ ಚಟ್ನಿಗೊಂದು ನಾಮಕರಣ ಶಾಸ್ತ್ರ ಮಾಡುವುದಾದರೆ ... ಖಂಡಿತವಾಗಿಯೂ ಇದು ಬೆಳ್ಳುಳ್ಳಿ  ಚಟ್ನಿಯೇ ಆಯ್ತಾ.


ಎಲ್ಲಾ ಪದಾರ್ಥಗಳಿಗಿಂತ ಬೆಳ್ಳುಳ್ಳಿಯೇ ಪ್ರಮುಖವಾಗಿ ಜಾಸ್ತಿ ಇರುವುದರಿಂದ ಇದು ಬೆಳ್ಳುಳ್ಳಿ ಚಟ್ನಿ.. ಒಂದು ವೇಳಿ ತೆಂಗಿನತುರಿ ಜಾಸ್ತಿ ಹಾಕಿದರೆ ಆಗ ಇದು ತೆಂಗಿನ ಚಟ್ನಿ. ಮೆಣಸು ಜಾಸ್ತಿ ಹಾಕಿದರೆ ಆಗ ಇದು ಮೆಣಸಿನ ಚಟ್ನಿ. ಇನ್ನು  ಮನೆಯಲ್ಲಿ ಬೇಕಾದಷ್ಟು ಉಪ್ಪು ಉಂಟು ಅಂತ ಒಟ್ರಾಸಿ  ಒಂದು ಗೋಣಿ ಉಪ್ಪು ಸುರಿದು,ಆಗ ಮಾಡಿದ ಚಟ್ನಿಯನ್ನು ಉಪ್ಪಿನ ಚಟ್ನಿ ಎಂದು ಕರೆಯಬಹುದೇ....  ಎಂಬಂತಹ ಮುಗ್ಧ ಪ್ರಶ್ನೆ ಕೇಳಿ ಗೊಂದಲ ಹುಟ್ಟಿಸುವ ಯಾವುದೇ ನಕಾರಾತ್ಮಕ ತಂತ್ರಗಳಿಗೆ ಇಲ್ಲಿ ಅವಕಾಶವಿಲ್ಲ.ಏಕೆಂದರೆ ಇಂತಹ ಪ್ರಶ್ನೆಗಳಿಗೆ ನಾನು ಸ ಗೊಂದಲದಲ್ಲಿ ಬೀಳುವ ಚಾನ್ಸ್ ಜಾಸ್ತಿ ಉಂಟು. 


ಆದ್ರೆ ಸ ಉಪ್ಪು ಜಾಸ್ತಿ ಆದ್ರೆ ಅದು ಉಪ್ಪಿನ ಚಟ್ನಿಯೇ ಅಲ್ವಾ.. ಮತ್ತೆಂತ ಅದೇ...ಆದ್ರೆ ತಿನ್ಲಿಕ್ಕೆ ಅಲ್ಲ, ಬಿಸಾಡ್ಲಿಕ್ಕೆ. 


ನಮ್ಮ ಸರಳ ಆಂಟಿ ಹೇಳಿಕೊಟ್ಟ ಕಾರಣಕ್ಕಾಗಿ ಇದನ್ನು ಬಹಳ ಸರಳವಾದ ಚಟ್ನಿ ಎಂದು ಹೇಳಬೇಕಾಗಿಲ್ಲ. ಯಾಕೆಂದರೆ ಈ ಚಟ್ನಿ ಮಾಡುವುದೇ ಅಷ್ಟೊಂದು ಸರಳವಿದೆ.ಆಂಗ್ಲ ಭಾಷೆಯಲ್ಲಿ ಕೂಡ  ಇದನ್ನು  " ಸಿಂಪಲ್ ಚಟ್ನಿ"  ಎಂದೇ  ಹೇಳಬಹುದಾದರೂ, ನಾನಂತು ಹಾಗೇ ಹೇಳಲಾರೆ.. ಕಾರಣ ಸ್ಪಷ್ಟವಿದೆ,ನನಗಿದನ್ನು  ಹೇಳಿಕೊಟ್ಟ ಸರಳ ಆಂಟಿ  ಈ ರೀತಿಯಾಗಿ ಹೇಳಿದ್ದಾರೆ "ಪಚ್ಚು.. ಈ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡು.. ಬಹಳ ಸಿಂಪುಳ್ ಆದ  ಚಟ್ನಿ ಇದು.."


ಅದು ಅವರು ಹಾಗೆಯೇ, ಅವರಿಗೆ ಆಂಗ್ಲ ಭಾಷೆಯ ಮರ್ಡರ್ ಮಾಡುವುದರಲ್ಲಿ ಬಹಳ ಆನಂದವಿದೆ. ಸರಳವಾದದ್ದು ಎಲ್ಲವೂ ಅವರಿಗೆ ಬಹಳ ಸಿಂಪುಳೇ.. ಅವರ ಹೆಸರು ಕೂಡ ಸರಳ.. ಹಾಗಾಗಿ ನಾನು ಕೂಡ ಸರಳ ಆಂಟಿ ಬದಲು ಅವರನ್ನು ಸಿಂಪುಳ್ ಆಂಟಿ.. ಎಂದೇ ಕರೆಯಬೇಕೆಂದು ಒಮ್ಮೊಮ್ಮೆ ಅನಿಸ್ತದೆ. ಆದರೆ ಹಾಗೇ ಕರೆಯುವುದಿಲ್ಲ ಆಯ್ತಾ.. ಏಕೆಂದರೆ ಅವರು ಸಿಕ್ಕಾಪಟ್ಟೆ rash ಆಗ್ಬಹುದು ಅನ್ನುವ ಭಯ..


ಆದರೆ ಈ ಸರಳ ಆಂಟಿ ಬಾರೀ ಒಳ್ಳೆಯ ಜನ ಆಯ್ತಾ. ನಮ್ಮ ಏರಿಯಾದ  ಭಯಂಕರವಾದ ಒಬ್ಬ "ಪಾಕ ಪ್ರವೀಣೆ" ಅಂತ ಹೇಳಿದ್ರೆ ಆ ದೇವರು ನನ್ನನ್ನು ಮೆಚ್ಚಲ್ಲಿಕ್ಕೆ ಇಲ್ಲ... ಆದ್ದರಿಂದ ಸಾಧಾರಣವಾದ ಪಾಕ ಪ್ರವೀಣೆ,ಸಿಂಪುಳ್ ಲೇಡಿ ಶೆಫ್.. ಎಂತ ಹೇಳಲು ನಾನು ಮನಸಾರೆ ಇಚ್ಛೆ ಪಡುತ್ತೇನೆ. ಆದ್ರೆ ಸ ಅವರು ಭಯಂಕರ ಒಂದು  ಜನ ಮರ್ರೆ.. ಯಾವುದು ಯಾವುದೋ ರೆಸೆಪಿಗಳನ್ನು you tube ನಲ್ಲಿ ನೋಡಿ ಟ್ರೈ ಮಾಡ್ತಾನೇ  ಇರ್ತಾರೆ. ನಂತರ ನಾನು ಸಿಕ್ಕಿದರೆ... ಹೇಯ್.. ಇದು ಮಾಡ ಪಚ್ಚು . ಅದು ಮಾಡ ಪಚ್ಚು.. ಬಾರೀ ಸಿಂಪುಳ್ ಇರ್ತದನಾ..ನಾನು ಮಾಡಿದ್ದೇನಾ... ಅಂತ ಹೇಳ್ತಾರೆ.ಅವರಿಗೆ ಹೂಂಗುಟ್ಟಲ್ಲಿಕ್ಕೆ ಒಬ್ಬರು ಜನ ಬೇಕು. ಅದಕ್ಕೆ ಎಲ್ಲವನ್ನೂ ನಂಗೆ ಹೇಳುವುದು ಅವರು. ಹೂಂಗುಟ್ಟುವುದು ಅಂದ್ರೆ ಗೊತ್ತಾಗ್ಲಿಲ್ಲ ಅಂತ ಕಾಣುತ್ತೆ ಅಲಾ... "ಹೂಂಗುಟ್ಟುವುದು" ಅಂದ್ರೆ ನಮ್ಮ ದಕ್ಷಿಣ ಕನ್ನಡದ ಕಡೆ" ಹೌದೌದು" ಅಂತ ಹೇಳುವುದು. ಮೆಚ್ಚಿ ಹೌದೌದು ಅಂತ ಹೇಳುವುದು ಅಲ್ಲಾ...ಅವರು  ಹೇಳಿದಕ್ಕೆಲ್ಲಾ ಹೌದಲ್ಲ ಆಂಟಿ.. ಹೌದಲ್ಲ.. ಅಂತ ಹೇಳ್ತಾ ಹೋಗ್ಬೇಕು ಅಷ್ಟೇ.


ಏನೋ ಒಂದು  ಅವರ ಈ you tube ರೆಸೆಪಿಗಳಿಂದ ನನಗಂತು  ಬರ್ಕತ್ (ಸುಖ) ಇಲ್ಲ. ಆದರೂ ನಾನು ಅವರಿಗೆ ನಿರಂತರವಾದ  ಪ್ರೋತ್ಸಾಹ ಕೊಡತ್ತೇನೆ ಯಾಕೆ ಗೊತ್ತಾ.. ಅವರ ಮಾತುಗಳನ್ನು ಸುಮ್ಮನೆ ಕೇಳಿಸಿಕೊಂಡು ಅವರನ್ನು ಹೊಗಳಿ ಅಟ್ಟಕ್ಕೆ ಏರಿಸಿದರೆ  ಸಾಕು... ಮರು ದಿನವೇ  ಅವರ ರೆಸೆಪಿಗಳನ್ನು ಸವಿಯುವ ಭಾಗ್ಯ ನನಗೆ ಸಿಗುವುದು. ಆದರೂ ಈ ಸರಳ ಆಂಟಿ ಮಾತುಗಳನ್ನು ಕೇಳಿಸಿಕೊಳ್ಳುವುದೇ ಬಹಳನೇ  ಕಷ್ಟವಪ್ಪ..ಸಿಕ್ಕಿದಾಗಲೆಲ್ಲ ತುಂಬಾನೇ ಗರಗಸ ಕೊಯ್ಯುವರು ಅವರು.ತಾಳ್ಮೆ ಇದ್ದವನು.. ಗಟ್ಟಿ ಗುಂಡಿಗೆ ಇದ್ದವನು ಬದುಕಿಯಾನು ಅಷ್ಟೇ..ಹಾಗಾದರೆ ನಿಮ್ಮದು ಭಯಂಕರ ಗುಂಡಿಗೆಯಾ ಅಂತ ಎಲ್ಲಾ ಕೇಳ್ಲಿಕ್ಕೆ ಬರ್ಬೇಡಿ ಆಯ್ತಾ ಇನ್ನು.. 


ಸರಳ ಆಂಟಿ ಹೇಳಿದ್ರು.." ಪಚ್ಚು ಈ ಚಟ್ನಿ  ಒಮ್ಮೆ ಮಾಡಿ ನೋಡು, ಗಂಜಿ ಊಟಕ್ಕೆ ಇಲ್ಲವೇ ತೊಗರಿ ಬೇಳೆ ಹಾಕದೇ ಮಾಡುವ ಟೊಮೆಟೊ ಸಾರ್ ಉಂಟಲ್ಲಾ ಅದಕ್ಕೆ ಬಾರೀ ಒಳ್ಳೆ ಆಗ್ತದೆ..." ಪುನಃ ಕೊನೆಯಲ್ಲಿ ಇನ್ನೊಂದು ಸಾಲು ಮರೆಯದೇ ಹೇಳಿದರು ಅವರು "ಕುಚಲಕ್ಕಿ ಗಂಜಿ ಊಟಕ್ಕೆ ಅಂತು ಇದು ಹೇಳಿ ಮಾಡಿಸಿದ್ದು ಆಯ್ತಾ.." 


ನನಗೆ ಚಟ್ನಿಗಿಂತಲೂ ಅವರು ಕೊನೆಯಲ್ಲಿ ಹೇಳಿದ ಸಾಲು ಕೇಳಿಯೇ ಒಮ್ಮೆ ಈ ಚಟ್ನಿಯನ್ನು ಮಾಡಿ ತಿನ್ಬೇಕು ಅನ್ನಿಸುವಂತೆ ಮಾಡಿ ಬಿಟ್ಟಿತು.. 


ಈ "ಹೇಳಿ ಮಾಡಿಸಿದ್ದು" ಉಂಟಲ್ಲಾ..ಆ ಸಾಲೇ ಬಹಳೇ ಸ್ವಾರಸ್ಯಕರವಾದದ್ದು. ನಮ್ಮ ತುಡಿತವನ್ನು ಕೇಳಿಸಿಕೊಂಡ ಯಾವುದೇ ವಿಷಯದ ಕಡೆಗೆ  ಡಬಲ್ ಮಾಡುವಂತಹದ್ದು.. ನಂತರ ನಮ್ಮ ಮನಸ್ಸು ಅದರೆಡೆಗೆ ಊರ್ಧ್ವಮುಖವಾಗಿ ಓತಪ್ರೋತವಾಗಿ ಓಡಲು ಶುರು ಮಾಡಿ ಬಿಡುತ್ತದೆ. ಉದಾಹರಣೆಗೆ..ಆ ಜಾಬ್ ಉಂಟಲ್ಲಾ ನಿನಗೆ ಹೇಳಿ ಮಾಡಿಸಿದ್ದು..ಈ ಶರ್ಟ್ ನೋಡು ನಿನಗೆ ಹೇಳಿ ಮಾಡಿಸಿದ್ದು... ಆ ಹುಡುಗಿ ಅಂತು ನಿನಗೆ ಹೇಳಿ ಮಾಡಿಸಿದ್ದು ಮರ್ರೆ,confirm ಸೆಟ್ ಆಗ್ತಾಳೆ ನಿಂಗೆ, ನೀನೇ ರೋಮಿಯೋ ಅವಳೇ ಜ್ಯೂಲಿಯೆಟ್.. 


ಈ ಮೇಲಿನ ಉದಾಹರಣೆಗಳಲ್ಲಿ ಬೇರೆ ಎಲ್ಲವೂ ಓಕೆ.. ಆದರೆ ಕೊನೆಯದ್ದು ಸ್ವಲ್ಪ ಜಾಗ್ರತೆ ಆಯ್ತಾ.ಎಷ್ಟೇ ಹೇಳಿ ಮಾಡಿಸಿದ್ದು ಆದರೂ ಒಮ್ಮೆ ನೀವೇ cross check ಮಾಡಿಕೊಂಡು ಬಲಗಾಲಿಟ್ಟೇ  ಮುಂದುವರಿಯಿರಿ... ಇಲ್ಲದಿದ್ದರೆ ರೋಮಿಯೋ ಜ್ಯೂಲಿಯೆಟ್ ಗೆ ಆದ ಹಾಗೆ.. ಕೊನೆಗೂ ನಿಮಗೂ ಅಷ್ಟೇಯಾ...

 

ಓಕೆ.. ಓಕೆ..ವಿಷಯ ಚಟ್ನಿ ಬಿಟ್ಟು ಬೇರೆ ಯಾವುದೋ ದಿಕ್ಕಿನತ್ತ ಓಡುವ ಭಯಂಕರ ಹುಮ್ಮಸ್ಸಿನಲ್ಲಿದೆ. ಗಾಡಿಯನ್ನು ಪುನಃ you turn ತಿರುಗಿಸಿ ಚಟ್ನಿಯ ದಿಕ್ಕಿನತ್ತ ತಿರುಗಿಸುವ.. ಹೇಯ್ ಅದು U turn.. You turn ಅಲ್ಲಾ ಅಂತೀರಾ... ಓಕೆ ಓಕೆ.. ಅದೇ ಏನೋ ಒಂದು turn.. ಬಟ್ ಚಟ್ನಿ ಕಡೆಗೆ ತಿರುಗಿ.. ಕೊನೆಗೊಂದು ನಮಗೆ ಚಟ್ನಿ ಆದರೆ ಸಾಕು. 


ಸರಳ ಆಂಟಿ ಹೇಳಿದಂತೆ ತುಂಬಾ ಸಮಯದ ವರೆಗೂ ಶೇಖರಿಸಿ ಕೂಡ ಇಡಬಹುದು ಇದನ್ನು. ಹಾಗಾಗಿ ಯಥಾ ಪ್ರಕಾರವಾಗಿ ಅವರು ಹೇಳಿದ್ದನ್ನೇ ಮನನ ಮಾಡಿಕೊಂಡು.. ಬೆಳ್ಳುಳ್ಳಿಯನ್ನು ಅಗ್ನಿಯಲ್ಲಿ ಸುಟ್ಟುಕೊಂಡು ಮಾಡಿದ ಸರಳ ಆಂಟಿ ಹೇಳಿದ ಸರಳವಾದ  ಚಟ್ನಿ ಇದು, Sorry.. ಸಿಂಪುಳ್ ಬೆಳ್ಳುಳ್ಳಿ ಚಟ್ನಿ ಇದು. ಬೇಕಾದರೆ ಅಗ್ನಿಯ ಬದಲು ಬೆಂಕಿಯನ್ನು ಕೂಡ ಬಳಸಬಹುದು. ಹೇಯ್.. ಅಗ್ನಿ ಮತ್ತು ಬೆಂಕಿ ಎರಡೂ ಕೂಡ್ ಸೇಮ್ ಅಲ್ಲವಾ.. ಎಂದು ರಾಗ ತೆಗೆಯುವವರು fire ಅನ್ನು ಬಳಸಬಹುದು.. ಇನ್ನು ಅಗ್ನಿಗಾಗಿ ಅಗ್ನಿ ಐ.ಪಿ.ಎಸ್ ಸಾಯಿಕುಮಾರ್, fire ಗಾಗಿ fire brigade ಎಲ್ಲಾ ತರಬೇಕಾಗಿಲ್ಲ ನೀವು.. ಸಿಂಪುಳ್ ಆಗಿ ಮನೆಯ ಗ್ಯಾಸ್ ಒಲೆಯೇ ಬಳಸಿದರೆ ಸಾಕು. 


ಈಗ ಮೊದಲು ಒಂದು ಗೆಡ್ಡೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಬೆಂಕಿಯಲ್ಲಿ/ಅಗ್ನಿಯಲ್ಲಿ/fire ನಲ್ಲಿ ಹಾಕಿ ಸುಟ್ಟು ಕೊಳ್ಳಬೇಕು. ಅದೇ ಮನೆಯ ಮಾಮಾಲಿ ಗ್ಯಾಸ್ ಸ್ಟೌವ್ ನಲ್ಲಿಯೇ ಸುಟ್ಟು ಬಿಡಿ.ಇನ್ನು ಅದಕ್ಕೆ high flame ಬೆಂಕಿ ಎಲ್ಲಾ ಒಟ್ರಾಸಿ ಹಾಕಿ  ಕರಂಟಿಸಿ(ಸೀದು ಹೋಗುವುದು ) ಬ್ಲ್ಯಾಕ್ ಬೆಳ್ಳುಳ್ಳಿ ಎಲ್ಲಾ ಮಾಡ್ಲಿಕ್ಕೆ ಹೋಗ್ಬೇಡಿ. ಮತ್ತು ಕೆಂಪು ಬಣ್ಣದ ಬೆಳ್ಳುಳ್ಳಿ ಚಟ್ನಿ ಹೋಗಿ.. ಕಪ್ಪು ಬೆಳ್ಳುಳ್ಳಿ ಚಿಟ್ಟೆ ಆಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿರುತ್ತದೆ. 


ಹದವಾಗಿ low flame ನಲ್ಲಿ ಬಾಡಿ ಹೋಗಲಿ. "ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ..."  ಅದು ಎಲ್ಲಾ  ಗೊತ್ತಿಲ್ಲ... ಆದರೆ ಈ ರೀತಿ ಸುಟ್ಟು ಬಾಡಿ ಹೋದ ಬೆಳ್ಳುಳ್ಳಿ, ಬದನೆಗಳಿಂದ ಚಟ್ನಿ ಅಂತು ಅವಶ್ಯವಾಗಿ ಆಗುವುದು.. ಆದರೆ ಬೋರ್ ಆಗುವುದಾದರೆ ಈ ಸಾಂಗ್ ಅನ್ನು ಗುನುಗುನಿಸುತ್ತಾ ಬೆಳ್ಳುಳ್ಳಿಯನ್ನು ಹಾಗೇ ಸುಡಬಹುದು ನೀವು.ಬಹಳ ಚಂದದ  ಹಾಡು ಅಲಾ ಅದು... "ತಂತಿ ಹರಿದ ವೀಣೆಯಿಂದ ನಾದ ಹೊಮ್ಮ ಬಲ್ಲುದೇ.. ಉಲ್ಲಾಸ ಇನ್ನೆಲ್ಲಿದೆ,ಬಾಡಿ ಹೋದ.. " 


ಓಕೆ ಬೆಳ್ಳುಳ್ಳಿ ಸುಟ್ಟು ಆಯಿತು... ಫುಲ್ ಬ್ಲ್ಯಾಕ್ ಕೂಡ  ಆಗಿಲ್ಲ...ಮೊದಲಿನಂತೆ ಪುಲ್ ವೈಟ್ ಕೂಡ ಇಲ್ಲ ಅಂತ ಹೇಳ್ತಾ ಇದ್ದೀರಾ... ಯೆಸ್ ಹಾಗಾದರೆ ನೀವು ಬೆಳ್ಳುಳ್ಳಿಯನ್ನು ಕರೆಕ್ಟಾಗಿಯೇ ಸುಟ್ಟಿದ್ದೀರಿ ಎಂದೇ ಅರ್ಥ. ಇದಕ್ಕೆ ನಿಮಗೆ ನೂರಕ್ಕೆ ನೂರು ಅಂಕ  ಕೊಡಬಹುದು. 


ಸುಡುವ ಕೆಲಸ ಇಲ್ಲಿಗೆ  ಮುಗಿಲಿಲ್ಲ..ಇನ್ನೂ ಒಂದನ್ನು ಸುಡ್ಲಿಕ್ಕೆ ಇದೆ. ಅದುವೇ ಗೋಂಟು ತಾರಾಯಿ. ಇದೂ ಸ ಅರ್ಥ ಆಗ್ಲಿಲ್ಲ ಅಲ್ಲ..ಮಂಗಳೂರಿನಲ್ಲಿ ಗೋಂಟು ತಾರಾಯಿ ಅಂದ್ರೆ ಒಣ ಕೊಬ್ಬರಿ ಎಂದು ಅರ್ಥ. ಅಂದರೆ ಅದೇ ನೀರಿಲ್ಲದ ಕೊಬ್ಬರಿ. ಈ ಗೋಂಟು ತಾರಾಯಿಯನ್ನು ಜಾಸ್ತಿಯಾಗಿ ಸಾಂಬಾರ್ ಗೆ ಬಳಸುವುದಕ್ಕಿಂತಲ್ಲೂ ತೆಂಗಿನೆಣ್ಣೆ ತೆಗಿಲಿಕ್ಕೆ ಗಾಣಕ್ಕೆ ಕೊಡುವುದು ಜಾಸ್ತಿ ನಮ್ಮಲ್ಲಿ. ಈಗ ಎಲ್ಲಿಯ ಗಾಣ.. ಹಾಗಾಗಿ ಸಿಂಪುಳ್ ಆಗಿ ಆಯಿಲ್ ಮಿಲ್ಲಿಗೆ ಅಂತ ಹೇಳ್ಬಹುದು.


ನಮ್ಮಲ್ಲಿ ನೀರಿಲ್ಲದ್ದ ಕೊಬ್ಬರಿಗೆ ಮಾತ್ರ ಗೋಂಟು ಅಂತ ಹೇಳುವುದಿಲ್ಲ ... ಕೆಲವರಿಗೆ "ಅವನೊಬ್ಬ ಭಯಂಕರ ಗೋಂಟು ಮಂಡೆ ಮರ್ರೆ.." ಅಂತ ಕೂಡ  ಹೇಳುವುದು ಉಂಟು. ಇನ್ನು ಇದರ ಅರ್ಥ ಹೇಳ್ಬೇಕಾಗಿಲ್ಲ ಅಲಾ..ಮಂಡೆ ಅಂದರೆ ತಲೆ... ಗೋಂಟು ಅಂದರೆ ಅದೇ ನೀರಿಲ್ಲದ್ದು.. ಇನ್ನು ಸ್ಪಷ್ಟವಾಗಿ  ಅರ್ಥ ಮಾಡಿಕೊಳ್ಳಬೇಕಾದರೆ ಗೋಂಟು ಬದಲಿಗೆ ಬೊಂಡು(ತಿರುಳು)ಇಲ್ಲದು,ಮೆದುಳು ಇಲ್ಲದು.. ಎಂಬುವುದನ್ನು ನೀವು ಗೋಂಟು ಮಂಡೆ ಎಂಬ ತಲೆಗೆ ಸಂಬಂಧಿಸಿದ ವಿಷಯಕ್ಕೆ ಕಲ್ಪಿಸಿಕೊಳ್ಳಬಹುದು. 


ಒಯ್.. ಈಗ ನಾವು ಎಲ್ಲಿಗೆ ಬಂದಿದ್ದೇವೆ.. 🙄🤔


ಒಣ ಕೊಬ್ಬರಿಯನ್ನು ಕೂಡ ಸ್ಟೌವ್ ನಲ್ಲಿ ಸುಡ್ಲಿಕ್ಕೆ ಇಟ್ಟಿದ್ದೆವೆ ಅಲ್ವಾ...


ಇಲ್ವಾ..?


ಹಾಗಾದರೆ ಇಡಿ.. ಒಟ್ಟಿನಲ್ಲಿ ಟೈಂ ವೇಸ್ಟ್ ಮಾಡ್ಬಾರ್ದು ನಾವು. ಇಡೀ ಒಣ ಕೊಬ್ಬರಿ ಬೇಕಾಗಿಲ್ಲ ಅರ್ಧ ಗಡಿ ಸಾಕು. ಚಿಕ್ಕದಾದರೆ ಎರಡೂ ಗಡಿಗಳನ್ನು ಬಳಸಿ. ಗಡಿ ಅಂದರೆ ನಮ್ಮ ಇಂಡಿಯಾ- ಪಾಕಿಸ್ತಾನ ಗಡಿ, ಮಂಗಳೂರು-ಕೇರಳ ಗಡಿ ಅಲ್ಲಾ ಆಯ್ತಾ.. ಗಡಿ ಅಂದರೆ ಹೋಳು ಇಲ್ಲವೇ ಭಾಗ ಅಂತ ಅರ್ಥ ಅಷ್ಟೇ. ಇದನ್ನು ಕೂಡ ನಾವು ನಮ್ಮ ಗ್ಯಾಸ್ ಸ್ಟೌವ್ ನ ಅಗ್ನಿ/ಬೆಂಕಿ/fire ನಲ್ಲಿ ಕ್ಷಣ ಕಾಲ ಹಾಕಿ  ಸುಟ್ಟು ಬಿಟ್ಟರೆ ಸಾಕು. ಬೆಂಕಿಯಲ್ಲಿ ಹಾಕಿ ಆಚೆ ಈಚೆ ತಿರುಗಿಸುತ್ತಾ ಇರುವುದು ಕೂಡ ಅಷ್ಟೇ ಮುಖ್ಯ.ಇಲ್ಲದಿದ್ದರೆ ಕರಟಿ ಹೋಗುವುದು. ಈಗ ಬೇಕಾದರೆ " ಆಡಿಸಿ ನೋಡು... ಬಾಡಿಸಿ ನೋಡು... ಉರುಳಿ ಹೋಗಬಾರದು.." ಅಂತ ನೀವು ನಿಮ್ಮಷ್ಟಕ್ಕೇ ಹಾಡಿ ಕೊಳ್ಳಬಹುದು. ಹೌದು ಉರುಳಿ ಹೋಗಬಾರದು.. ಸರಿಯಾಗಿ ಸುಡುವವರೆಗೂ ಬೆಂಕಿ ಮೇಲೆಯೇ ಒಣಕೊಬ್ಬರಿ ಆಡುತ್ತಾ..ತಿರುಗುತ್ತಾ.. ಆಟವಾಡುತ್ತಾ ಇರಬೇಕಾದದ್ದು ಅವಶ್ಯವಾದದ್ದು. 


ಕೊಬ್ಬರಿಯನ್ನು ನೋಡಿಕೊಂಡೇ ಸುಟ್ಟು ಬಿಡಿ. ಬೇಗ ಬೆಂಕಿ ಹಿಡಿಯುತ್ತದೆ. ಎಣ್ಣೆ ಪಸೆ ಕೂಡ ಇರುತ್ತದೆ ಅಲ್ವಾ ಹಾಗಾಗಿ. ಹದವಾಗಿ ಬಾಡಿಸಿ ಬಿಟ್ಟರೆ ಸಾಕು.ಜಾಸ್ತಿ ಸುಟ್ಟು ಕಪ್ಪಾದರೆ ನಂತರ ಕಪ್ಪಾದ ಭಾಗವನ್ನು next ನೀವು ಕಟ್ ಮಾಡಿ ಇಲ್ಲವೇ ಕೆತ್ತಿ ತೆಗೆಯಬೇಕಾಗುತ್ತದೆ. ಇಲ್ಲಿಗೆ ಬೆಂಕಿಯಲ್ಲಿ ನೇರವಾಗಿ ದಹಿಸುವ ಪ್ರಕ್ರೀಯೆ ಮುಗಿಯಿತು.. 


ನಂತರ ಒಂದು ಆರು ಒಣ ಮೆಣಸು ತೆಗೆದುಕೊಂಡು ಅದನ್ನು ಎಣ್ಣೆ ಹಾಕದೇ ಬಾಣಲೆಯಲ್ಲಿ ಹುರಿಯಿರಿ. ಒಣ ಮೆಣಸು ಅಂದರೆ ಅದೇ ಒಣ ಕೆಂಪು ಮೆಣಸು(dry red chilli) . ಕೆಲವರು ಕೇಳುವುದು ಉಂಟು ಒಣ ಮೆಣಸು ಅಂದ್ರೆ ಕರಿ ಮೆಣಸಾ ಅಂತಾ..?! ಅದು ಬೇರೆ, ಕರಿ ಮೆಣಸು ಅಂದ್ರೆ black pepper ಆಯ್ತಾ.. ಇನ್ನು green pepper,yellow pepper, red pepper, bell pepper, white pepper ಗಳ ಬಗ್ಗೆ ಡಿಷ್ಕಷನ್ ಇನ್ನೊಂದು ದಿನ ಮಾಡುವ ಆಯ್ತಾ.. 


ಈಗ ಸುಟ್ಟ ಬೆಳ್ಳುಳ್ಳಿಯನ್ನು ಅದರ ಸಿಪ್ಪೆಯಿಂದ ಬಿಡಿಸಿ ತೆಗೆಯಬೇಕು. ನಿಮಗೆ ಹೆಚ್ಚು ಕಡಿಮೆ ಹದಿನೈದು ಇಪ್ಪತ್ತು ಬೆಳ್ಳುಳ್ಳಿ ಎಸಳುಗಳು ಆದರೂ  ಸಿಗಬಹುದು. ಅದಕ್ಕೆ ಅಲ್ವಾ ಇಷ್ಟೊಂದು ಬೆಳ್ಳುಳ್ಳಿ ಇರುವುದರಿಂದ ಬೆಳ್ಳುಳ್ಳಿ ಚಟ್ನಿ ಅಂತ ಹೆಸರು ಬಂದದ್ದು.. ಸುಮ್ಮನೆ ಅಲ್ಲಾ...


ಕೆಲವರು ಬೆಳ್ಳುಳ್ಳಿ ಕಾಳು ಅಂತಾರೆ,ಆಂಗ್ಲ ಭಾಷೆಯಲ್ಲಿ garlic clove ಅಂತಾರೆ.. ಆದರೆ ಏನೇ ಹೇಳಿ ಅತೀ ಸುಂದರವಾದ ಪದ ಅಂದರೆ " ಬೆಳ್ಳುಳ್ಳಿಯ ಎಸಳುಗಳು " ಅನ್ನುವುದೇ. ಅದು ಒಂಥರಾ ಹೂವಿನ ಎಸಳುಗಳು ಅಂತ ಹೇಳಿದಷ್ಟೇ ಅತೀ ಮದುರವಾದದ್ದು..ಸುಕೋಮಲವಾದದ್ದು..


ನಂತರ ಸುಟ್ಟ ಒಣ ಕೊಬ್ಬರಿಯನ್ನು ಚೆನ್ನಾಗಿ ನೈಫ್ ಸಹಾಯದಿಂದ ಸಣ್ಣದಾಗಿ ಹಚ್ಚಿಕೊಳ್ಳಿ, ಮಿಕ್ಸರ್ ನಲ್ಲಿ ಗ್ರೈಂಡ್ ಮಾಡ್ಲಿಕ್ಕೆ easy ಆಗ್ತದೆ. 


ಬೆಳ್ಳುಳ್ಳಿ, ಕೊಬ್ಬರಿ ಸುಡುವುದು... ಒಣ ಮೆಣಸನ್ನು ಬಾಡಿಸುವುದು ಮೊದಲ ಹಂತವಾದರೆ... 


ಸುಟ್ಟ ಬೆಳ್ಳುಳ್ಳಿಯನ್ನು ಬಿಡಿಸುವುದು ಮತ್ತು ಸುಟ್ಟ ಕೊಬ್ಬರಿಯನ್ನು ಕಟ್ ಮಾಡು ಎರಡನೆಯ ಹಂತ... 


ಇನ್ನು ಬಾಕಿ ಇರುವುದು ಮೂರನೆಯ ಹಾಗೂ ಕೊನೆಯ ಹಂತ...Final touch ಬೇಕಾದರೂ ಅನ್ನಿ Final Destination ಅಂತ ಬೇಕಾದರೂ ಹೇಳಿ... ಇದು ಆಗದಿದ್ದರೆ ಚಟ್ನಿಯೇ ಆಗಲಾರದು. 


ಅದೇ ಮಿಕ್ಸರ್ ನಲ್ಲಿ ಕಡೆಯುವುದು.. 


ಇದಕ್ಕಾಗಿ ಈಗ ನೀವು ಮೊದಲಿಗೆ ಮಿಕ್ಸರ್ ಜಾರ್ ತೆಗೆದುಕೊಳ್ಳಬೇಕು...


ಹೌದು ಮತ್ತೆ... ಮಿಕ್ಸರ್ ನಲ್ಲಿ ಕಡೆಯಬೇಕಾದರೆ ಮಿಕ್ಸರ್ ಜಾರ್ ತೆಗೆದುಕೊಳ್ಳಲೇ ಬೇಕು ಅಂತೀರಾ...ಓಕೆ.. ಡನ್.. ತೆಗೆದು ಕೊಳ್ಳಿ... ತೆಗೆದು ಕೊಳ್ಳಿ.. 


ಸಾಂಬಾರ್, ಪಲ್ಯ ಗಳನ್ನು ಅರೆಯುವ ಮೀಡಿಯಮ್ ಸೈಜ್ ನ ಜಾರ್ ತೆಗೆದುಕೊಂಡಿದ್ದರೆ ಅದನ್ನು ಈಗ ಪಕ್ಕಕ್ಕೆ ಇಟ್ಟುಬಿಡಿ...! 


ಮಿಲ್ಕ್ ಶೇಕ್..ಇಲ್ಲ  ನೀರ್ ದೋಸೆಗೆ ಕಡೆಯಲು ಬಳಸುವ ದೊಡ್ಡ ಜ್ಯೂಸ್ ಜಾರ್  ತೆಗೆದುಕೊಂಡಿದ್ದರೆ ಅದನ್ನು ಕೂಡ ತೆಗೆದು  ಪಕ್ಕಕ್ಕೆ ಇಟ್ಟುಬಿಡಿ...! 


ಈಗ ಮೂಲೆಯಲ್ಲಿ ಒಂದು ಅಪರೂಪಕ್ಕೆ ತೆಗೆಯುವ,ಎಂದಿಗೂ ಅಡುಗೆ ಮನೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಸಣ್ಣ ಚಟ್ನಿ ಜಾರ್ ಕಾಣ್ತಾ ಇದೆಯಾ ನೋಡಿ... ಎಸ್.. ಅದನ್ನೇ ನಾವು ಈಗ ತೆಗೆದು ಕೊಳ್ಳ ಬೇಕಾಗಿರುವುದು.... ಯಾಕೆಂದರೆ ಚಟ್ನಿ ಜಾರ್  ಇರುವುದೇ ಚಟ್ನಿ ಮಾಡಲು ಅಲ್ಲವೇ..ನಮಗೆ ಅಂತು ಒಂದೇ ಜಾರ್ ನಲ್ಲಿ ಎಲ್ಲವನ್ನೂ ಮಾಡುವ ಕಲೆ ಸಿದ್ದಿಸಿದೆ. ಆದ್ದರಿಂದ ಚಟ್ನಿ ಜಾರ್ ಗೆ ಬೆಲೆನೇ ಇಲ್ಲ ಪಾಪ ಅಡುಗೆ ಮನೆಯಲ್ಲಿ. 


ನಾವು ತುಂಬಾ ದಿನಗಳ ಕಾಲ ಶೇಖರಿಸಿಡಲು ಮಾಡುವ ಡ್ರೈ ಚಟ್ನಿ  ಆದ  ಕಾರಣ ಇಲ್ಲಿ ಯಾವುದೇ ರೀತಿಯ ನೀರು ಹಾಕ್ತಾ ಇಲ್ಲ.. ಅದೇ ರೀತಿಯಲ್ಲಿ ಚಟ್ನಿ ಜಾರ್ ನಲ್ಲಿ ಕೂಡ ಒಂಚೂರು ನೀರಿನ ಪಸೆ ಇರದ ಹಾಗೇ ನೋಡಿಕೊಳ್ಳಬೇಕಾಗುತ್ತದೆ.. ಒಂದು ವೇಳೆ ಏನಾದರೂ ಪಸೆ ಇದ್ದರೆ ಅದನ್ನು ಒಣ  ಬಟ್ಟೆಯಲ್ಲಿ ಒರೆಸಿ ತೆಗೆಯಿರಿ... 


ಈಗ ಜಾರ್ ಗೆ ಹುರಿದ ಒಣಮೆಣಸು..ರುಚಿಗೆ ತಕ್ಕಷ್ಟು ಉಪ್ಪು... ಸ್ವಲ್ಪ ಹುಣಸೆ ಹುಳಿ.. ಕಟ್ ಮಾಡಿದ ಕೊಬ್ಬರಿ ಹಾಕಿ.. ಮಿಕ್ಸರ್ ಆನ್ ಮಾಡಿ ಚೆನ್ನಾಗಿ ಪುಡಿ ಮಾಡಿ..ಉಪ್ಪು ಸರಿ ಇದೆಯೇ ಎಂದು ಒಮ್ಮೆ ಪರೀಕ್ಷಿಸಿ. ನಂತರ ಈಗ ಬಿಡಿಸಿಟ್ಟ ಬೆಳ್ಳುಳ್ಳಿಯ ಎಸಳುಗಳನ್ನು ಹಾಕಿ.. ಒಂದೆರಡು ಸುತ್ತು ತಿರುಗಿಸಿ ಬಿಟ್ಟರೆ ಘಮ ಘಮ ಪರಿಮಳದ ಸಿಂಪುಳ್ ಆದ  ಬೆಳ್ಳುಳ್ಳಿ ಕೆಂಪು ಚಟ್ನಿ ರೆಡಿ. 


ನಮ್ಮ ಸಿಂಪುಳ್ ಆಂಟಿ,sorry.. ಸರಳ ಆಂಟಿ ಹೇಳಿದಂತೆ.. ಗಂಜಿ ಊಟಕ್ಕೆ ಹೇಳಿ ಮಾಡಿಸಿದ್ದು ಇದು....


ಗೊತ್ತಾಯಿತು ಅಲಾ.... ಅದೇ... ಗಂಜಿ ಊಟಕ್ಕೆ ಹೇಳಿ ಮಾಡಿಸಿದ್ದು ಇದು.


ಇನ್ನು ನಾನು  ನಮ್ಮ ಸರಳ ಆಂಟಿಗೆ ಎಂದಾದರೂ ಸಿಕ್ಕಿರೆ,sorry... ಅವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ, ಅವರು ಕಂಡಾಪಟ್ಟೆ(ಸಿಕ್ಕಾಪಟ್ಟೆ) ನನ್ನ ತಲೆ ತಿಂದು.. ಕೊನೆಗೆ ಏನಾದರೂ ಇಂತಹದ್ದೇ ಸಿಂಪುಳ್ ಆದ ರೆಸೆಪಿ ಮತ್ತೊಮ್ಮೆ ಹೇಳಿ ಕೊಟ್ರೆ... ಆಗ ನಾನು ನಿಮಗೆಲ್ಲ ಮತ್ತೆ ಬಹಳ ಸಿಂಪುಳ್ ಆಗಿ ಇಂತಹದ್ದನ್ನೆಲ್ಲಾ ಹೇಳಿ ಕೊಡ್ಲಿಕ್ಕೆ ಇನ್ನೊಮ್ಮೆ ಬರ್ತೆನೆ ಆಯ್ತಾ.... 


.....................................................................................



ab pacchu 

moodbidri

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ