ಹೀರೋ!
ನಾನು ಹೋಗಿದ್ದು ಒಂದಕ್ಕೆ,ಆದರೆ ಅಲ್ಲಿ ಆಗಿದ್ದೇ ಇನ್ನೊಂದು..
ಏನೋ ಮಾಡಲು ಹೋಗಿ..ಇನ್ನೇನೋ ಮಾಡಿ ಬಿಟ್ಟಿದ್ದೆ.
ನನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಬಿಸಿ ರಕ್ತ ಹನಿ ಹನಿಯಾಗಿ ಕೆಳಗೆ ತೊಟ್ಟಿಕ್ಕುತ್ತಿತ್ತು..!
ಅಲ್ಲಿಯವರೆಗೆ ಜೀವಂತವಾಗಿದ್ದ ರಮೇಶ ತನ್ನ ಉಸಿರು ಚೆಲ್ಲಿ ನನ್ನೆದುರು ಶವವಾಗಿ ಮಲಗಿ ಬಿಟ್ಟಿದ್ದ!!
ಯಾರಾದರೂ ನನ್ನನ್ನು ನೋಡಿದರೆ ಎಂದು ಭಯದಿಂದಲೇ ಹಿಂದಿರುಗಿ ನೋಡಿದೆ..
ಆಗ ಅಲ್ಲಿ ಅವನು ನಿಂತಿದ್ದ..!
ಅವನೇ.. ನನ್ನ ಪಾಲಿನ ಶತ್ರು ಸತೀಶ!!
ಹೌದು ಅವನು ಬರೀಯ ಶತ್ರುವಲ್ಲ.. ನನ್ನ ಪಾಲಿನ ಪರಮ ಶತ್ರು ಅವನು!
ನಾವಿಬ್ಬರೂ ಹುಟ್ಟುತ್ತಲೇ ಶತ್ರುಗಳು ಮಾತ್ರವಲ್ಲ.. ಬೆಳೆಯುತ್ತಲೂ ಶತ್ರುಗಳೇ!
ಜೀವನದಲ್ಲಿ ಮತ್ತು ಊರಿನಲ್ಲಿ ನನಗಿದ್ದ ಏಕೈಕ ಶತ್ರು ಅಂದರೆ ಅದು ಅವನೇ ಸತೀಶ.
ಆದರೆ ಅದೇ ಸತೀಶನಿಗೆ ಊರು ತುಂಬಾ ಬರೀ ಶತ್ರುಗಳೇ!!
ನಮ್ಮಿಬ್ಬರ ಪರಮ ವೈರತ್ವದ ಕಥೆ ಶುರು ಆಗುವುದೇ ಶಾಲೆಯ ಮೊದಲ ದಿನಗಳಿಂದ.
ನಾವು ಶಾಲೆಯಲ್ಲಿ ಪರಸ್ಪರ ಮಾತಾಡಿಕೊಂಡದಕ್ಕಿಂತಲೂ ಹೊಡೆದಾಡಿಕೊಂಡ ದಿನಗಳೇ ಜಾಸ್ತಿ!
ಕಬಡ್ಡಿ ಆಡುವಾಗ ಆಟದಲ್ಲಿ ಜಗಳವಾಗಿ ಸತೀಶನ ಶರ್ಟ್ ಹರಿದು ಹಾಕಿದ್ದೆ ನಾನು.ಅದು ಕಬಡ್ಡಿ ಅನ್ನುವುದನ್ನು ಮರೆತು ನಾವಿಬ್ಬರೂ ಕೊರ್ಟ್ ನಲ್ಲಿ ತೊಡೆ ತಟ್ಟಿ ಹೊಡೆದಾಡಿಕೊಂಡಿದ್ದೆವು.ಇಬ್ಬರ ಶರ್ಟು ಹರಿದು ಚಿಂದಿಯಾಗಿ ಬಿದ್ದಿತ್ತು ಅಂದು!
ಕ್ರಿಕೆಟ್ ಟೀಮ್ ನಲ್ಲಿ ನಾನೊಂದು ಟೀಮ್ ಗೆ ಕ್ಯಾಪ್ಟನ್ ಆದರೆ ನನ್ನೆದುರಿನ ಟೀಮ್ ನಲ್ಲಿ ಸತೀಶನೇ ಯಾವಾಗಲೂ ಕ್ಯಾಪ್ಟನ್ ಆಗಿರುತ್ತಿದ್ದ.ಯಾವುದೇ ಪಂದ್ಯದಲ್ಲಿ ಕೈಗೆ ವಿಕೆಟ್ ಎತ್ತಿಕೊಂಡು ಪರಸ್ಪರ ಒಬ್ಬೊರನ್ನೊಬ್ಬರು ದೂಡಿಕೊಂಡು ಕಿತ್ತಾಡದೇ ನಾವು ಆಟ ಮುಗಿಸಿದ ಉದಾಹರಣೆಗಳೇ ಇಲ್ಲ.
ನೂರು ಮೀಟರ್ ಓಟದಲ್ಲಿ ನಾನು ಸತೀಶ ಜಿದ್ದಿಗೆ ಬಿದ್ದವರಂತೆ ಓಡುತ್ತಿದ್ದೆವು.ಅಲ್ಲಿ ಯಾವುದೇ ಪ್ರಥಮ ಸ್ಥಾನದ ಆಸೆ ನಮ್ಮಿಬ್ಬರಲ್ಲೂ ಇರಲಿಲ್ಲ.ಇದ್ದದ್ದು ಒಂದೇ.. ನನಗೆ ಅವನನ್ನು ಸೋಲಿಸಬೇಕು ಮತ್ತು ಅವನಿಗೆ ನನ್ನನ್ನು ಸೋಲಿಸಬೇಕು ಅಷ್ಟೇ!
ಚಿಕ್ಕಂದಿನಲ್ಲಿಯೇ ಭೀಮ - ದುರ್ಯೋಧನರಂತೆ ಪರಸ್ಪರ ಹಗೆ ಸಾಧಿಸಿದ್ದವರು ನಾವು. ನನ್ನ ಪಾಲಿನ ದುಷ್ಟ ಧುರ್ಯೋಧನ ಎಂದಿಗೂ ಅದು ಸತೀಶನೇ ಎಂದು ತಿಳಿದುಕೊಂಡಿದ್ದವನು ನಾನು ಮತ್ತು ನನ್ನ ಪಕ್ರಾರ ನನಗೆ ನಾನು ಯಾವತ್ತಿಗೂ ಭೀಮನೇ ಆಗಿದ್ದೆ.
ಗಾಳಿಯನ್ನು ಉಸಿರಾಡಿಕೊಂಡದಕ್ಕಿಂತಲೂ ಹೆಚ್ಚಾಗಿ ಕ್ಷಣ ಕ್ಷಣವೂ ದ್ವೇಷವನ್ನೇ ಉಸಿರಾಡಿ ಕೊಸರಾಡಿ ಬದುಕಿದವರು ನಾವಿಬ್ಬರು.
ಅದು ಏಕೋ ಗೊತ್ತಿಲ್ಲ ಅವನನ್ನು ಕಂಡರೆ ಸಾಕು ಮೈಯಲ್ಲೆಲ್ಲಾ ಹಗೆಯ ಉರಿ ಹಾಗೆ ನನ್ನನ್ನು ಅವರಿಸಿಕೊಂಡು ಬಿಡುತ್ತದೆ. ಅವನಿಗೂ ಹಾಗೆಯೇ. ಶಾಲೆಯಲ್ಲಿ ಜಗಳ ಮಾಡಿಕೊಂಡು ನಾನು ಹರಿದ ಅವನ ಶರ್ಟುಗಳಿಗೆ ಲೆಕ್ಕವೇ ಇರಲಿಲ್ಲ.ನಾನು ಲೆಕ್ಕವಿಟ್ಟಿರಲಿಲ್ಲ ಅಷ್ಟೇ, ಆದರೆ ಅವನು ಅದರ ಸರಿಯಾದ ಲೆಕ್ಕ ಇಟ್ಟುಕೊಂಡು ನನ್ನ ಅಷ್ಟೇ ಶರ್ಟುಗಳನ್ನು ವಾಪಸ್ ಜಗಳವಾಡಿಯೇ ಹರಿದು ಹಾಕಿ ಲೆಕ್ಕ ಚುಕ್ತಾ ಮಾಡಿ ಬಿಟ್ಟಿದ್ದ!
ಪ್ರತಿಯೊಬ್ಬರಿಗೂ ಬಾಲ್ಯ ಎಂದರೆ ಶಾಲೆಯ ಮಧುರ ನೆನಪುಗಳು, ಶಾಲಾ ಪ್ರವಾಸ,ಸ್ಕೂಲ್ ಡೇ, ನಾಗರ ಬೆತ್ತದಲ್ಲಿ ಹೊಡೆಯುತ್ತಿದ ಶಾಲೆಯ ಜೋರಿನ ಟೀಚರ್,ನೀಲಿ ಬಿಳಿ ಸಮವಸ್ತ್ರ ಹಾಕಿಕೊಂಡು ಬರುತ್ತಿದ್ದ ಅಂದಿನ ಶಾಲಾ ಗೆಳೆಯರು ನೆನಪಾಗುತ್ತಿದ್ದರೆ.. ನನಗಂತು ನನ್ನ ಬಾಲ್ಯ ಎಂದರೆ ಬರೀ ಸತೀಶ.. ಅವನೊಂದಿಗಿನ ಶತ್ರುತ್ವ, ಹಾಗೂ ಅವನು ಹರಿದು ಹಾಕಿದ್ದ ನನ್ನ ಅಷ್ಟೂ ಬಿಳಿಯ ಶರ್ಟುಗಳು ಅಷ್ಟೇ ನೆನಪಾಗುತ್ತಿತ್ತು. ಬಹುಶಃ ಅವನಿಗೂ ನಾನು ಹರಿದು ಹಾಕಿದ್ದ ಅವನ ಶರ್ಟುಗಳ ನೆನಪೇ ಅಧಿಕವಿರಬಹುದು.
ನನಗೆ ಅವನೊಂದಿಗೆ ಯಾವುದರಲ್ಲೂ ಸೋಲಲು ಇಷ್ಟವಿರಲಿಲ್ಲ.ಏಕೆಂದರೆ ಅವ ಏನೇ ಮಾಡಿದರೂ ನನಗದು ಇಷ್ಟವಾಗುತ್ತಿರಲಿಲ್ಲ.ಅವನು ಗೆಲ್ಲುವುದರಲ್ಲಿಯೇ ನನಗೂ ಗೆಲ್ಲಲ್ಲು ಆಸೆ.ಅಂತಹ ಸತೀಶನಿಗೆ ನಮ್ಮ ಕ್ಲಾಸಿನ ಸುಂದರಿ ಹುಡುಗಿ ಸುನಂದ ಇಷ್ಟ ಆಗಿ ಬಿಟ್ಟಳು.ನನಗದನ್ನು ಸಹಿಸಿಕೊಳ್ಳಲು ಆಗಲಿಲ್ಲ.ಸುನಂದಳಿಗೂ ಸತೀಶ ಅಂದರೆ ಬರೀ ಇಷ್ಟವೋ ಅಥವಾ ಅವರದ್ದು ಪ್ರೀತಿಯೋ ಎಂದು ನನಗೆ ನಿಜವಾಗಿಯೂ ಗೊತ್ತಿಲ್ಲ,ಆದರೆ ನನಗೆ ಮಾತ್ರ ಅವರಿಬ್ಬರ ಜೋಡಿ ಮಾತ್ರ ಇಷ್ಟ ಆಗಲಿಲ್ಲ.
ಆದರೆ ಅವರಿಬ್ಬರು ಎಂದಿಗೂ ಒಟ್ಟಿಗೆಯೇ ಇರುತ್ತಿದ್ದರು..ಮಧ್ಯಾಹ್ನ ಪರಸ್ಪರ ತಮ್ಮ ಬುತ್ತಿ ಹಂಚಿಕೊಳ್ಳುತ್ತಿದ್ದರು,ಅಷ್ಟೇ ಏಕೆ ಸ್ಕೂಲ್ ನ ಸೂರು ಕಿತ್ತು ಹೋಗುವಂತೆ ಮನ ಬಿಚ್ಚಿ ನಗುತ್ತಿದ್ದರು,ನಾನು ಗೋಡೆಯ ಹಿಂದೆ ನಿಂತುಕೊಂಡು ಅದೆಲ್ಲವನ್ನೂ ನೋಡಿ ತಡೆದುಕೊಳ್ಳಲು ಆಗದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದೆ!
ಆ ದಿನಗಳಲ್ಲಿ ನಾನು ಸತೀಶನೊಂದಿಗೆ ಗುದ್ದಾಡಿ,ಹೋರಾಡಿ ಅವನಿಂದ ಎಲ್ಲವನ್ನೂ ಕಿತ್ತುಕೊಳ್ಳಬಲ್ಲವನಾಗಿದ್ದೆ,ಅವನೊಂದಿಗಿನ ಪ್ರತೀ ಸವಾಲು ಗೆಲ್ಲಬಲ್ಲವನಾಗಿದ್ದೆ.ಆದರೆ ಈ ಸುನಂದನ ವಿಷಯದಲ್ಲಿ ಮಾತ್ರ ನಾನು ನಿಜವಾಗಿಯೂ ಸೋತು ಹೋಗಿದ್ದೆ.ಅವರಿಬ್ಬರು ಮತ್ತಷ್ಟು ಹತ್ತಿರವಾದರು!
ಆದರೆ ಲೈಫಿನ ಕಥೆ ಬೇರೆಯೇ ಇತ್ತು.ಅವರಿಬ್ಬರ ಈ ಕಥೆ ಕೇವಲ ಪ್ರೈಮರಿಯಿಂದ ಹೈಸ್ಕೂಲ್ ವರೆಗೆ ಮಾತ್ರ ಸಾಗಿತ್ತು!
ಸತೀಶ ಕಾರಣಾಂತರಗಳಿಂದ ಕಾಲೇಜ್ ಬಿಟ್ಟ.ಅವನ ತಂದೆ ತಾಯಿ ಎಲ್ಲರೂ ತೀರಿಕೊಂಡು ಅವನು ಅನಾಥನಾಗಿ ಬೀದಿಗೆ ಬಿದ್ದ.
ಬೀದಿಗೆ ಬಿದ್ದವನು ದುಡಿದು ತಿನ್ನಬಹುದಿತ್ತು.ಆದರೆ ಅವನು ಹೊಡೆದು ತಿನ್ನುವವರ ಗ್ಯಾಂಗ್ ಸೇರಿ ಬಿಟ್ಟ ! ಚಿಕ್ಕ ವಯಸ್ಸಿನಲ್ಲಿಯೇ ಕಳ್ಳ,ಪುಡಿ ರೌಡಿ ಎಂಬ ಹೆಸರು ಸಂಪಾದಿಸಿದ.
ಆ ನಂತರ ಅವನು ಅದರಲ್ಲಿಯೇ ಹುಲುಸಾಗಿ ಬೆಳೆದ.ಎಲ್ಲಿಯವರಗೆ ಅಂದರೆ ಪೋಲಿಸ್ ಸ್ಟೇಷನ್ ನಲ್ಲಿ ತಾನೊಬ್ಬ ರೌಡಿ ಶೀಟರ್ ಎಂದು ಗುರುತಿಸಿಕೊಳ್ಳುವವರೆಗೂ!
ಆದರೆ ನನ್ನ ಕಥೆ ಅವನಂತೆ ಇರದೆ ಎಲ್ಲರಂತೆ ಸರಳರೇಖೆ ಯಲ್ಲಿಯೇ ಸಾಗಿತ್ತು.ನಾನು ಹೈಸ್ಕೂಲ್ ನಂತರವೂ ಕಾಲೇಜ್ ಮುಂದುವರಿಸಿದ್ದೆ.
ಸತೀಶ ಕಾಲೇಜ್ ಬಿಟ್ಟ ನಂತರ ಸುನಂದಳಿಗೆ ತುಂಬಾ ಹತ್ತಿರ ಆದವನು ನಾನೇ.ಬೇಕೆಂದೇ ನಾನು ಅವಳಿಗೆ ಹತ್ತಿರ ಆಗಿದ್ದೆ.
ಸತೀಶ ಇನ್ನು ಎಂದಿಗೂ ಅವಳ ಹತ್ತಿರ ಸುಳಿಯಬಾರದೆಂದು ನಾನು ಸುನಂದಳನ್ನೇ ಪ್ರೀತಿಸಿದೆ.
ಮೊದಲು ಅವಳು ನನ್ನನ್ನು ಒಪ್ಪಲಿಲ್ಲ.ಆದರೆ ಯಾವಾಗ ಸತೀಶ ಹಿಂದಿರುಗಿ ಬರುವ ಸುಳಿವು ಇರಲಿಲ್ಲವೋ,ಮತ್ತು ಅವನ ಕೃತ್ಯಗಳ ಬಗ್ಗೆ ಪೇಪರ್ ನಲ್ಲಿ ಬಂದಿರುವುದನ್ನು ನಾನವಳಿಗೆ ತೋರಿಸಿ ಸವಿವರವಾಗಿ ವಿವರಿಸಿದ್ದೆನೋ.. ಆ ನಂತರ ಅವಳೂ ಸತೀಶನನ್ನು ನಿಧಾನವಾಗಿ ಮರೆತು ಬಿಟ್ಟಳು ಮತ್ತು ನನ್ನನ್ನು ಒಪ್ಪಿಕೊಂಡು ಬಿಟ್ಟಳು.
ಆ ನಂತರ ನಾವು ಇಬ್ಬರು ಒಟ್ಟಿಗೆ ಡಿಗ್ರಿ ಮುಗಿಸಿದೆವು.ನನಗೆ ಸರಕಾರಿ ಕೆಲಸವೂ ಸಹ ಸಿಕ್ಕಿತು.ಕೊನೆಗೊಮ್ಮೆ ಮನೆಯಲ್ಲಿ ಎಲ್ಲರ ಒಪ್ಪಿಗೆ ಪಡೆದು ನಾನು ಸುನಂದ ಮದುವೆ ಕೂಡ ಆದೆವು.
ಮದುವೆಗೆ ನಾನು ಎಲ್ಲರನ್ನು ಕರೆದಿದ್ದೆ, ಆದರೆ ಸತೀಶನನ್ನು ಒಬ್ಬನನ್ನು ಬೇಕೆಂದೇ ಕರೆಯಲಿಲ್ಲ.ಸ್ನೇಹಿತರನ್ನು ಆದರೆ ಮದುವೆಗೆ ಕರೀತಾರೆ,ರೌಡಿಯನ್ನೆಲ್ಲ ಯಾರು ಮದುವೆಗೆ ಕರೀತಾರೆ..!
ಒಂದು ವೇಳೆ ಆತ ರೌಡಿಯೇ ಆಗಿರದಿದ್ದರೂ ಕೂಡ... ನಾನವನನ್ನು ಮದುವೆಗೆ ಖಂಡಿತಾ ಕರೀತಾ ಇರಲಿಲ್ಲ!
ಮದುವೆ ಆಗಿ ನನಗೊಬ್ಬ ಮಗ ಕೂಡ ಹುಟ್ಟಿದ.ಹೆಸರು ಅಮೋಘ ಅಂತ.
ಕಾಲೇಜ್ ಬಿಟ್ಟ ನಂತರವೂ ಊರಿನಲ್ಲಿ ಸತೀಶ ಆವಾಗವಾಗ ನನ್ನೆದುರು ಸಿಗುತ್ತಿದ್ದ.ಕೇವಲ ನಮ್ಮಿಬ್ಬರ ಕಣ್ಣುಗಳು ಪರಸ್ಪರ ಮಾತಾಡುತ್ತಿದ್ದವು.ಇಬ್ಬರೂ ಒಬ್ಬರನೊಬ್ಬರು ದುರುಗುಟ್ಟಿ ನೋಡುತ್ತಿದ್ದೆವು ಅಷ್ಟೇ.ನಾವಿಬ್ಬರು ಎಂದಿಗೂ ಮಾತಾಡಿಕೊಂಡ ನೆನಪುಗಳೇ ನಮ್ಮಲ್ಲಿಲ್ಲ.ಆ ನಂತರ ಅವನು ಊರಿನಲ್ಲಿ ಎಷ್ಟೇ ದೊಡ್ಡ ರೌಡಿ ಆಗಿ ಬೆಳೆದರೂ ಸಹ ನನಗೇನು ಅವನನ್ನು ಕಂಡರೆ ಅಂತಹ ಭಯವಾಗಲಿ, ಹೆದರಿಕೆ ಆಗಲಿ ಇರಲಿಲ್ಲ.ಅವನೂ ಕೂಡ ಅಷ್ಟೇ ಮದುವೆ ಆದ ನಂತರ ಎಂದೂ ನನ್ನ ತಂಟೆಗೆ ಬಂದವನಲ್ಲ.
ಆದರೆ ಅವನ ಗ್ಯಾಂಗ್ ನಲ್ಲಿ ಒಬ್ಬ ನನ್ನ ತಂಟೆಗೆ ನಿಜವಾಗಿಯೂ ಬಂದಿದ್ದ..!
ನಿಜವಾಗಿ ಹೇಳಬೇಕೆಂದರೆ ನನ್ನ ತಂಟೆಗೆ ಅಲ್ಲ.. ನನ್ನ ಹೆಂಡತಿ ಸುನಂದಳ ತಂಟೆಗೆ ಬಂದಿದ್ದ..!
ಅವನ ಹೆಸರೇ ರಮೇಶ..!!
ಹಲವಾರು ದಿನಗಳಿಂದ ಸುನಂದಳ ಹಿಂದೆ ಬಿದ್ದು ಛೇಡಿಸುತ್ತಿದ್ದ ರಮೇಶ.ಊರ ಜಾತ್ರೆಯಲ್ಲಿ ಒಂದು ದಿನ ಸುನಂದಳ ಸೀರೆಯನ್ನು ಎಳೆಯುವ ದುಸ್ಸಾಹಸಕ್ಕೂ ಕೂಡ ಆತ ಕೈ ಹಾಕಿದ್ದ.
ಇದನ್ನು ನನಗೆ ಮೊದಲು ಸುನಂದ ಹೇಳಿರಲಿಲ್ಲ.
ಆದರೆ ಮಗ ಅಮೋಘ ಒಂದು ದಿನ ಈ ವಿಷಯ ಬಾಯಿ ಬಿಟ್ಟ.
ನೇರವಾಗಿ ಸುನಂದಳ ಬಳಿಯೇ ಕೇಳಿದೆ.. ವಿಷಯ ಹೌದಾ ಎಂದು.
ಅವಳು ಹೌದು ಅಂದಾಗ ನನ್ನ ಪಿತ್ತ ನೆತ್ತಿಗೆ ಏರಿತ್ತು.ಮೊದಲೇ ಪರಮ ಕೋಪಿಷ್ಟ ನಾನು.ರಮೇಶ ಹೆಚ್ಚಾಗಿ ಎಲ್ಲಿರುತ್ತಾನೆ ಎಂದು ಗೊತ್ತಿತ್ತು. ಬೈಕ್ ಸ್ಟಾರ್ಟ್ ಮಾಡಿದವನೇ ನೇರಾ ಊರ ಗಡಂಗ್(ಶರಾಬು ಅಂಗಡಿ) ಬಳಿ ರಮೇಶನಿಗೆ ಹಿಡಿದ ದೆವ್ವ ಬಿಡಿಸಲು ನಡೆದಿದ್ದೆ.
ಗಡಂಗ್ ನಿಂದಲೇ ಕುಡಿದು ಟೈಟಾಗಿ ಬರುತ್ತಿದ್ದ ರಮೇಶ. ಅವನನ್ನು ನೋಡಿದ ಕೂಡಲೇ ಹೋಗಿ ಕಪಾಳಕ್ಕೆರಡು ಹಾಗೇ ಜೋರಾಗಿ ಬಾರಿಸಿ ಬಿಟ್ಟೆ.ಅಷ್ಟು ದೂರ ಹೋಗಿ ಬಿದ್ದ ರಮೇಶ.
ರೌಡಿಯೇ ಆದರೂ ಅಂತಹ ದೊಡ್ಡ ಶಕ್ತಿಶಾಲಿ ಏನಲ್ಲ ಅವನು.ಅದರಲ್ಲೂ ನನ್ನೆದುರು ಅವನು ಏನೇನೂ ಅಲ್ಲ. ಬಿದ್ದಲ್ಲಿಂದ ಎದ್ದು ಪಕ್ಕದ ಗುಡ್ಡದ ಕಡೆಗೆ ತೂರಾಡುತ್ತಲೇ ಓಡಲು ಶುರು ಮಾಡಿದ.
ಅವನ ಬೆನ್ನ ಹಿಂದೆಯೇ ಓಡಿದ ನಾನು ಕೈಗೆ ಸಿಕ್ಕಿದ ಒಂದು ಕಬ್ಬಿಣದ ರಾಡ್ ನಿಂದ ಬಲವಾಗಿ ರಮೇಶನ ತಲೆಗೆ ಹೊಡೆದೇ ಬಿಟ್ಟಿದ್ದೆ.. ನನ್ನ ಕೋಪವನ್ನು ನಿಯಂತ್ರಣ ಮಾಡಿಕೊಳ್ಳಲು ಆಗದೇ ಬಾರಿ ಬಾರಿ ಅವನ ತಲೆಗೆ ಬಲವಾಗಿ ಬಾರಿಸಿದೆ.
ಅಷ್ಟೇ...
ರಮೇಶನ ತಲೆ ಒಡೆದು ಹೋಗಿತ್ತು ... ರಕ್ತ ನದಿಯಂತೆ ಹರಿದಿತ್ತು!
ಕೆಲವೇ ಕ್ಷಣಗಳಲ್ಲಿ ರಮೇಶ ಸತ್ತು ಮಲಗಿದ್ದ.. ನನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ರಕ್ತ ಹನಿ ಹನಿಯಾಗಿ ಕೆಳಗೆ ತೊಟ್ಟಿಕ್ಕುತ್ತಿತ್ತು!
ಯಾರಾದರೂ ನೋಡಿದರೆ ಎಂದು ಹಿಂದೆ ತಿರುಗಿ ನೋಡಿದಾಗ ಅಲ್ಲಿಯೇ ಹಿಂದೆ ನಿಂತಿದ್ದ... ನನ್ನ ಬಾಳಿನ ಪರಮ ಶತ್ರು ಸತೀಶ!!
ಸತೀಶ ತುಂಬಾ ಹೊತ್ತು ನನ್ನನ್ನೇ ನೋಡಿದ.
ನಂತರ ನೇರಾ ನನ್ನ ಬಳಿ ಬಂದ.
ನನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ತನ್ನ ಕೈಗೆ ತೆಗೆದುಕೊಂಡ ಸತೀಶ ಬರೀ ಇಷ್ಟೇ ಹೇಳಿದ್ದ .. " ದಿನೇಶ... ಇಲ್ಲಿಂದ ಹೊರಟು ಹೋಗು..! "
ನನಗೆ ಆಶ್ಚರ್ಯವಾಗಿತ್ತು..!!
ಸಾಯುವ ಮೊದಲು ರಮೇಶ ಹಾಕಿದ್ದ ಬೊಬ್ಬೆ ಕೇಳಿದ್ದ ಜನರೆಲ್ಲ ಕೊನೆಗೂ ಅಲ್ಲಿಗೆ ಓಡೋಡಿ ಬಂದಿದ್ದರು.. ಅವರೆದುರು ಸತೀಶ ರಕ್ತದಿಂದ ತೊಯ್ದ ಕಬ್ಬಿಣದ ರಾಡ್ ಹಿಡಿದು ನಿಂತಿದ್ದ! ನಾನು ಹೆದರಿ ಪೊದೆಯ ಮರೆಯಲ್ಲಿಅಡಗಿ ನಿಂತಿದ್ದೆ!!
ಕೆಲವೇ ಕ್ಷಣಗಳಲ್ಲಿ ಪೋಲಿಸ್ ಜೀಪ್ ಬಂತು.ರೌಡಿ ಶೀಟರ್ ಸತೀಶನನ್ನು ದರದರ ಎಂದು ಎಳೆದುಕೊಂಡು ಹೋದರು!
ಮನೆಗೆ ತಲುಪಿದ ನನಗೆ ನಾನೊಂದು ಕೊಲೆ ಮಾಡಿದೆನಲ್ಲ ಎಂಬ ಪಾಪ ಪ್ರಜ್ಞೆ ಕಾಡುವುದರ ಜೊತೆ ಜೊತೆಗೆಯೇ ನನ್ನ ಬಾಲ್ಯದ ಶತ್ರು ಸತೀಶ ಏತಕ್ಕಾಗಿ ಈ ಕೊಲೆಯ ಆರೋಪ ಹೊತ್ತುಕೊಂಡು ಜೈಲಿಗೆ ಹೋದ ಎನ್ನುವುದು ನನ್ನಲ್ಲಿ ಯಕ್ಷಪ್ರಶ್ನೆಯಾಗಿಯೇ ಉಳಿಯಿತು.
ಮರುದಿನವೇ ಜೈಲಿಗೆ ಓಡಿದೆ. ನನಗೆ ಸತೀಶನನ್ನು ಭೇಟಿ ಆಗುವ ಅವಕಾಶ ಸಿಗಲಿಲ್ಲ.
ಒಂದೆರಡು ದಿನಗಳ ನಂತರ ಸಿಕ್ಕಿತು.
ಜೀವನದಲ್ಲಿ ಜಗಳ ಬಿಟ್ಟು ಎಂದಿಗೂ ಪರಸ್ಪರ ಮುಖ ಕೊಟ್ಟು ಮಾತಾಡದ ನಾವಿಬ್ಬರು ಜೈಲಿನಲ್ಲಿ ಈ ರೀತಿಯಾಗಿ ಮುಖಾಮುಖಿ ಆಗಿದ್ದೆವು.ಅವನು ಒಳಗಿದ್ದ.ನಾನು ಹೊರಗಿದ್ದೆ!
ಕಂಬಿಯೊಳಗಿದ್ದ ಸತೀಶನಲ್ಲಿಯೇ ನೇರವಾಗಿ ಕೇಳಿದ್ದೆ ನಾನು.. ಸತೀಶ ಏತಕ್ಕಾಗಿ ಹೀಗೆ ಮಾಡಿದೆ ನೀನು?
ಸತೀಶ ತಣ್ಣನೆಯ ಧ್ವನಿಯಲ್ಲಿ ಹೇಳಿದ್ದ - ದಿನೇಶ...ನನಗೆ ಚಿಕ್ಕಂದಿನಿಂದಲೂ ಸುನಂದ ಅಂದರೆ ಬಹಳ ಇಷ್ಟ.ಅವಳಿಗೂ ನಾನಂದರೆ ತುಂಬಾನೇ ಇಷ್ಟ ಇತ್ತು. ಆದರೆ ಕಾರಣಾಂತರಗಳಿಂದ,ನನ್ನ ತಪ್ಪು ಕೃತ್ಯಗಳ ಕಾರಣದಿಂದ ನಾನೇ ಅವಳಿಂದ ದೂರ ಆಗಿ ಬಿಟ್ಟೆ. ಅವಳು ಯಾವಾಗಲೂ ಚೆನ್ನಾಗಿರಲಿ ಎಂದಷ್ಟೇ ನಾನು ಬಯಸಿದ್ದೆ.ರೌಡಿ ಶೀಟರ್ ಆದ ನಂತರ ನಾನೆಂದೂ ಅವಳಿಗೆ ಮುಖ ತೋರಿಸಲು ಕೂಡ ಬರಲೇ ಇಲ್ಲ.
ನೀನು ಅವಳನ್ನು ಮದುವೆ ಆದ ವಿಷಯ ಕೂಡ ತಿಳಿಯಿತು.ಆದರೆ ನನಗೆ ಬೇಜಾರ್ ಏನೂ ಆಗಿರಲಿಲ್ಲ ದಿನೇಶ. ಕನಿಷ್ಠ ಪಕ್ಷ ನನ್ನ ಸುನಂದ ಸುಖವಾಗಿ ಇರುತ್ತಾಳೆ ಅಲ್ವಾ ಅಂತ ಖುಷಿ ಆಯಿತು. ಅದಕ್ಕಾಗಿ ನಿಮ್ಮ ಮದುವೆ ಆದ ನಂತರ ನಿನ್ನ ತಂಟೆಗೂ ಕೂಡ ನಾನು ಬರಲಿಲ್ಲ.
ಆದರೆ ನಿನ್ನ ಕೈಯಲ್ಲಿ ರಮೇಶನ ಕೊಲೆ ಆಯಿತು ನೋಡು, ಸುನಂದಳ ದಿವ್ಯ ನೆಮ್ಮದಿ ಇನ್ನು ಜಾಸ್ತಿ ದಿನ ಇರುವುದಿಲ್ಲ ಎಂದು ನನಗೆ ಗೊತ್ತಾಗಿ ಹೋಯಿತು.ಆದರೆ ಅದನ್ನು ನಾನು ಎಂದಿಗೂ ಬಯಸಿದವನಲ್ಲ.ಅದಕ್ಕಾಗಿ ಆ ತಪ್ಪನ್ನು ನಾನೇ ಮಾಡಿದ್ದು ಎಂದು ಒಪ್ಪಿಕೊಳ್ಳಲು ನಿರ್ಧರಿಸಿದೆ.
ದಿನೇಶ.. ನಾನು ಒಬ್ಬ ರೌಡಿಶೀಟರ್. ನನಗೆ ಹಿಂದೆ ಮುಂದೆ ಯಾರೂ ಇಲ್ಲ. ನನಗೆ ಈ ಜೈಲು, ಕೋರ್ಟ್ ಎಲ್ಲವೂ ಅಭ್ಯಾಸ ಆಗಿ ಹೋಗಿದೆ.ಚಿಕ್ಕಂದಿನಿಂದಲೂ ನೀನು ನನಗೆ ಶತ್ರುವೇ ಆಗಿದ್ದೆ. ಆದರೆ ಆ ಕಾರಣಕ್ಕಾಗಿ ನೀನು ಕೂಡ ನನ್ನಂತೆ ಜೈಲು ಪಾಲು ಆಗಬೇಕೆಂದು ನಾನು ಬಯಸಲಾರೆ,ನೀನು ಬಾಳಿ ಬದುಕಬೇಕಾದವನು.ನೀನಿಗ ಸರ್ಕಾರಿ ನೌಕರ ಬೇರೆ. ಜೀವನದಲ್ಲಿ ಪ್ರತಿಯೊಂದಕ್ಕೂ ಕೊನೆ ಇದೆ ದಿನೇಶ.ಅದೇ ರೀತಿ ನಮ್ಮ ಶತ್ರುತ್ವಕ್ಕೂ ಒಂದು ಅಂತ್ಯವಿರಲಿ.
ನಾನು ನನ್ನ ಲೈಫ್ ನಲ್ಲಿ ಯಾರಿಗೂ ಎಂದಿಗೂ ಒಳ್ಳೆಯದನ್ನು ಮಾಡಿದವನೇ ಅಲ್ಲ.ಏಕೆಂದರೆ ಒಳ್ಳೆಯದು ಮಾಡಲು ನನಗೆ ಅಂತಹ ಯಾವುದೇ ಅವಕಾಶವೇ ಬಾಳಿನಲ್ಲಿ ಸಿಗಲಿಲ್ಲ.ಆದರೆ ಅದು ಈಗ ಬಂದಿದೆ.ನೀನು ಮತ್ತು ಸುನಂದ ಚೆನ್ನಾಗಿರಬೇಕು ದಿನೇಶ....ಎಂದು ಹೇಳಿ ಮುಗಿಸಿದ್ದ ಸತೀಶ.
ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ.
ಏಕೆಂದರೆ ನನ್ನ ಪಾಲಿನ ಪರಮ ಶತ್ರು ಎಂದೇ ತಿಳಿದವನೊಬ್ಬ ಈ ರೀತಿಯಾಗಿ ತನ್ನ ಮುಗ್ಧ ಪ್ರೀತಿಗಾಗಿ,ತನ್ನ ಜೀವನವನ್ನೇ ಜೈಲು ಪಾಲಾಗಿಸಲು ಸಿದ್ದನಾಗಿದ್ದ. ಮಾತ್ರವಲ್ಲ ಅವನಿಗೀಗ ನನ್ನ ಬಗ್ಗೆ ವೈರತ್ವದ ಅಂತಹ ಯಾವುದೇ ಭಾವನೆಗಳೇ ಇಲ್ಲ..!
ಕಣ್ಣುಗಳಿಂದ ಎರಡು ಹನಿ ನನಗರಿವಿಲ್ಲದೇ ಕೆನ್ನೆ ಮೇಲೆ ಜಾರಿತ್ತು!
ಸತೀಶನಿಗಾಗಿ ವಕೀಲರನ್ನು ನಾನೇ ನೇಮಿಸಿದೆ.
ಸಮಯ ಸಿಕ್ಕಿದಾಗಲೆಲ್ಲ ಜೈಲಿಗೆ ಹೋಗಿ ಅವನನ್ನು ಭೇಟಿ ಆಗಿ ಬರುತ್ತಿದ್ದೆ.
ಕೋರ್ಟ್ ನಲ್ಲಿ ಕೇಸ್ ನಡೆದು.. ಸತೀಶ ತಾನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡ.
ನ್ಯಾಯಾಲಯ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
ನನಗೆ ಅಪರಾಧಿ ಭಾವನೆ ಕಾಡುತ್ತಲೇ ಇತ್ತು.ಅದಕ್ಕಾಗಿ ನಾನು ನಿರಂತರವಾಗಿ ಸತೀಶನನ್ನು ಕಾರಾಗೃಹಕ್ಕೆ ಹೋಗಿ ಭೇಟಿ ಮಾಡುತ್ತಲೇ ಇದ್ದೆ.
ನಮ್ಮಿಬ್ಬರ ನಡುವಿನ ಶತ್ರುತ್ವ ಒಂದು ಹಾಗೇ ಕರಗಿ ಹೋಗಿತ್ತು.
ನಾವಿಬ್ಬರು ಈಗ ಬರೀ ಒಳ್ಳೆಯ ಸ್ನೇಹಿತರಾಗಿದ್ದೆವು.
ಕೆಲವೊಮ್ಮೆ ಹಿಂದಿನದ್ದನ್ನು ನೆನಪಿಸಿಕೊಂಡು ಆ ಜೈಲಿನಲ್ಲೂ ಜೋರಾಗಿ ನಗುತ್ತಿದ್ದೆವು. ಕಬಡ್ಡಿ ಆಟ, ಕ್ರಿಕೆಟ್ ಆಟ, ನೂರು ಮೀಟರ್ ಓಟ ..ಹರಿದ ಶರ್ಟ್.. ಎಲ್ಲವೂ ನೆನಪಾಗುತ್ತಿತ್ತು.
ಒಂದು ದಿನ ಸತೀಶನಲ್ಲಿ ನಾನು ಹೀಗೆ ಕೇಳಿದ್ದೆ...ಸತೀಶ ನೀನು ಈ ಕೊಲೆಯನ್ನು ನೀನೇ ಮಾಡಿದ್ದು ಎಂದು ಇಷ್ಟು ಸುಲಭವಾಗಿ ಒಪ್ಪಿಕೊಂಡೆಯಲ್ಲಾ,ನಿಜವಾಗಿಯೂ ನಿನಗೆ ಈ ಕೊಲೆ ಎಲ್ಲಾ ಮಾಡಿ ಅಷ್ಟೊಂದು ಅಭ್ಯಾಸ ಇದೆಯಾ..?
ಅದಕ್ಕೆ ಸತೀಶ ತಣ್ಣಗೆ ಹೇಳಿ ಮುಗಿಸಿದ್ದ - ದಿನೇಶ.. ಲೈಪಿನಲ್ಲಿ ಮರ್ಡರ್ ಅಲ್ಲ,ಒಂದು ಹಾಫ್ ಮರ್ಡರ್ ಕೂಡ ನಾನು ಎಂದಿಗೂ ಮಾಡಿದವನಲ್ಲ..!!
ನಾನು ಅವನನ್ನೇ ಹಾಗೇ ದಿಟ್ಟಿಸಿ ನೋಡಿದೆ..!
ನನ್ನ ಹಾಗೂ ಸುನಂದಳ ಪಾಲಿಗೆ ಸತೀಶ ಹೀರೋ ಆಗಿದ್ದ... ಆದರೆ ಸತೀಶನ ಕಥೆಯಲ್ಲಿ ನನಗಿಂತ ದೊಡ್ಡ ವಿಲನ್ ಬೇರೆ ಯಾರೂ ಇರಲಿಲ್ಲ !
ಆ ದೇವರು ನನ್ನನ್ನು ಎಂದಿಗೂ ಕ್ಷಮಿಸಲಾರ!!
ಸತೀಶನಿಗೆ ಆದರೂ ಮುಂದೆ ಜೀವಾವಧಿ ಶಿಕ್ಷೆಯಿಂದ ಬಿಡುಗಡೆ ಸಿಗಬಹುದೋ ಏನೋ,ನನಗದು ಗೊತ್ತಿಲ್ಲ ..
ಅದರೆ ನನಗೆ ನಾನು ಜೀವಂತ ಇರುವವರೆಗೂ,ಈ ಪಾಪಪ್ರಜ್ಞೆಯಿಂದ ಜೀವನಪೂರ್ತಿ ಬಿಡುಗಡೆಯೇ ಇಲ್ಲ!!
.....................................................................................
#ಇಷ್ಟೇ...
ab pacchu
moodubidire

Comments
Post a Comment