ಮನ ಸೇರೋ ಮದುವೆನೋ ಸುಖವೆಂದರೋ..

 


ಒಂದೊಳ್ಳೆಯ ಕನಸು ಬಿದ್ದಿತ್ತು...


ಕನಸಿನಲ್ಲಿ ನಾವಿಬ್ಬರೂ ಮದುವೆ ಆಗಿದ್ದೆವು.


ಪ್ರೀತಿಸಿಯೇ ಮದುವೆ ಆದವರು ನಾವು. 


ಮಗು ಕೂಡ ಇತ್ತು. 


ಮಗು ಎಂದರೆ ತಪ್ಪಾಗುತ್ತದೆ. 


ಮಕ್ಕಳು ಇದ್ದರು. 


ಒಂದು ಗಂಡು..ಇನ್ನೊಂದು ಹೆಣ್ಣು.


ಬಲು ಸುಂದರವಾದ ಮಕ್ಕಳು.


ನನ್ನಂತೆ ಮತ್ತು ನಿನ್ನಂತೆಯೇ.. 


ಅದೂ ಕೂಡ ಅವಳಿ ಜವಳಿ. 


ಅದಕ್ಕಾಗಿ ಗಂಡು ಮಗುವಿನ ಹೆಸರು ಧ್ರುವ. 


ಹೆಣ್ಣು ಮಗುವಿನ ಹೆಸರು ತಾರೆ.


ನಮ್ಮಿಬ್ಬರ ಬಾಳಿನ ಧ್ರುವತಾರೆ ಎಂದಿಗೂ ಅವರೇ..


ಅವರಿಬ್ಬರಿಗೂ ಅಂತಹದ್ದೊಂದು ಹೆಸರು ಇಟ್ಟವಳು ಸಹ ನಾನೇ. 


ಮದುವೆ ಆದ ನಂತರವೂ ನೀನೇನು ಬದಲಾಗಿರಲಿಲ್ಲ ಪುಷ್ಯರಾಗ.


ಅದೇ ಕಡಿಮೆ ಮಾತು.. 


ತೂಕದ ಮೌನ. 


ಅಳಿಸಲಾಗದ,ಎಂದಿಗೂ ಬದಲಾಯಿಸಲಾಗದ ನಿರ್ಲಿಪ್ತತೆ. 


ನೀನುಂಟು.. ನಿನ್ನ ಕೆಲಸ ಉಂಟು ಅಷ್ಟೇ. 


ಆದರೆ ಪ್ರೀತಿ...? 


ತೋರಿಸಿಕ್ಕೊಳ್ಳದಿದ್ದರೂ ಅದು ಮಾತ್ರ ಅಗಾಧವಾಗಿಯೇ ಇತ್ತು ನಿನ್ನಲ್ಲಿ.


ಅದು ನನಗೆ ಕಾಣುತ್ತಿತ್ತು. 


ನಿನ್ನಲ್ಲಿ ಮಾತಿಗೆ ಬರ ಇದ್ದರೂ,

ಕಾಳಜಿಯಲ್ಲಿ ನೀನು ಅದೆಂತಹ ಕುಬೇರ.


ನನಗಾಗಿ,ಮಕ್ಕಳಿಗಾಗಿ ಪ್ರಾಣ ಬೇಕಾದರೂ ಕೊಡಬಲ್ಲೆ ನೀನು.


ಮತ್ತು ನಿನ್ನದ್ದು ಯಾವಾಗಲೂ ಅಂತಹದ್ದೇ ಕೇರಿಂಗ್. 


ಸತ್ಯನಾರಾಯಣ ಪೂಜೆಯ ಸಪಾದ ಭಕ್ಷ್ಯ ಅತಿಯಾಗಿ ಇಷ್ಟ ಪಡುತ್ತಿದ್ದ ನಿನಗೆ,ಅದರಂತೆಯೇ ಇರುವ ಶೀರ(ಕೇಸರಿಬಾತ್).. ನಾನು ಅನುದಿನವೂ ಮಾಡಿಕೊಡುತ್ತಿದ್ದ ಪ್ರೀತಿಯ ನೈವೇದ್ಯವೇ ಆಗಿತ್ತು.


ಬರೀ ನಿನಗಾಗಿಯೇ ಮಾಡುತ್ತಿದ್ದೆ ಅದನ್ನು ನಾನು. 


ನೀನು ತಿನ್ನುವ ಕೇಸರಿಬಾತ್ ನಲ್ಲಿ ಆದರೂ "ಬಾತ್" ಅನ್ನುವುದು ಇದೆ,ಆದರೆ ನಿನ್ನಲ್ಲಿ ಒಂಚೂರು ಬಾತ್ ಸಹ ಇಲ್ಲ.. ಮಾತ್ ಕೂಡ ಇಲ್ಲ.. ಇದ್ದರೂ ಬಹಳ ಕಡಿಮೆ..ಮುತ್ತು ಉದುರಿದಂತೆ ಅಪರೂಪಕ್ಕೆ ಒಂದೊಂದು. 


ನಿನ್ನನ್ನು ಪುಟ್ಟ ಮಗುವಂತೆ ಬಚ್ಚಲು ಮನೆಯಲ್ಲಿ ಕುಳ್ಳಿರಿಸಿ,ನಿನ್ನ ಮೈಗೆ ಕಾಯಿಸಿದ ಎಣ್ಣೆಯನ್ನು ಕೈಯಿಂದ ಒತ್ತಿ ಒತ್ತಿ  ತಿಕ್ಕಿ,ಹಂಡೆಯಿಂದ ಬಿಸಿ ಬಿಸಿಯಾದ ನೀರನ್ನು ಒಂದೊಂದೇ ಚೊಂಬು ನೆತ್ತಿಯಿಂದ ಬೆನ್ನಿಗೆ ಹಾಗೇ ಎರಚಿ ಎರಚಿ ಮಜ್ಜನ ಮಾಡಿಸುತ್ತಿದ್ದರೆ ನನಗದುವೇ ಆನಂದ.. 


ನಿನಗೆ ಅದು ಇಷ್ಟವೋ ಇಲ್ಲವೋ  ಗೊತ್ತಿಲ್ಲ.. ಏಕೆಂದರೆ ನೀನು ದೇವಸ್ಥಾನದ ಪುಷ್ಕರಣಿಯಲ್ಲಿ ಮೀನಿನಂತೆ ಈಜುವವನು,ಅದರಲ್ಲಿಯೇ ಮಜ್ಜನಗೈಯುವವನು. 


ಆದರೆ ನಿನಗೆ ಗೊತ್ತಿಲ್ಲ ಪುಷ್ಯರಾಗ ಪ್ರತೀ ಹೆಣ್ಣಿಗೂ ಇಂತದ್ದೊಂದು ಹುಚ್ಚು ಆಸೆ ಇದ್ದೇ ಇರುತ್ತದೆ.ಕೆಲವರು ಅದಕ್ಕಾಗಿ ನರಕ ಚತುರ್ದಶಿಯವರೆಗೂ ಕಾಯುತ್ತಾರೆ.


ಆದರೆ ನಾನು ಎಣ್ಣೆ ತಿಕ್ಕಿ ತೀಡಿ ನಿನಗೆ ಸ್ನಾನ ಮಾಡಿಸಿದ ದಿನವೆಲ್ಲವೂ ನನಗೆ ನನ್ನ ಬಾಳಿನ ನರಕ ಚತುರ್ದಶಿಯೇ.. 


ನಿನ್ನ ಕಣ್ಣುಗಳಲ್ಲಿ ಬೆಳಕಿನಂತಹ  ಹೊಳಪು ಕಂಡಾಗಲೆಲ್ಲವೂ ನನಗದು  ದೀಪಾವಳಿ..


ಪ್ರತೀ ದಿನ ನಿನ್ನ ಹೆಸರಲ್ಲಿ ಹಚ್ಚಿಕೊಳ್ಳುವ ಅರಶಿನ,ಕುಂಕುಮದ ಸೌಭಾಗ್ಯದಲ್ಲಿಯೇ ನನ್ನದು ಬಣ್ಣದ ಹೋಳಿ..


ನೀ ಅಪರೂಪಕ್ಕೆ ನನ್ನ ಕಂಡು ನಕ್ಕರೆ ನನಗದು ಅದು ಅಕ್ಕರೆಯ ಯುಗಾದಿ,ಸಂಭ್ರಮದ ಸಂಕ್ರಾಂತಿ. 


ನಿನ್ನ ಎದೆ ಬಂಡೆಗಿಂತ ಒಂದೊಳ್ಳೆಯ ದಿಂಬು ನನಗೆ ಬೇಕಿಲ್ಲ. 


ನನ್ನ ಮೆಲುವಾದ  ಹಾಡು ಅದು ಬರೀ ನಿನಗಾಗಿ. 


ನಾನು ವೀಣೆ ಮೀಟುವುದು ಸಹ ನಿನಗಾಗಿಯೇ..


ಮಾತ್ರವಲ್ಲ ಈ ಜೀವವೀಣೆ ಇರುವುದೇ ನಿನಗಾಗಿ. 


ನಮಗಿಬ್ಬರು ಮಕ್ಕಳು ನಿಜ. 


ಆದರೆ ನನಗೆ ಯಾವತ್ತೂ ಹಾಗೇ ಅನ್ನಿಸಿಯೇ ಇಲ್ಲ.


ಏಕೆಂದರೆ ನನ್ನ ಪಾಲಿಗೆ ನನಗೆ ಯಾವತ್ತಿಗೂ ಮೂವರು ಮಕ್ಕಳು. 


ಆ ಮತ್ತೊಂದು ಮಗು ನೀನೇ.


ಧ್ರುವ ಮತ್ತು ತಾರೆಯರನ್ನಾದರೂ ಸಂಭಾಳಿಸಬಲ್ಲೆ. 


ಆದರೆ ನಿನ್ನನ್ನು.. ಕಷ್ಟ ಕಷ್ಟ. 


ಎಲ್ಲವನ್ನೂ ನಿನಗೆ ನಾನೇ ಹೇಳಿ ಕೊಡಬೇಕು ಪುಷ್ಯರಾಗ. 


ಕೆಲವೊಮ್ಮೆ ಅನಿಸುತ್ತದೆ ನೀನು ಮಕ್ಕಳ ತಂದೆಯೋ.. ಅಥವಾ ಧ್ರುವ ಮತ್ತು ತಾರೆಯರು ಸಹ ನಿನ್ನ ಹೆತ್ತ ತಂದೆ ತಾಯಿಯೋ  ಎಂದು... 


ಅವರೇ ಎಷ್ಟೋ ಸಲ " ಅಪ್ಪಾ.. ಅದು ಹಾಗೇ ಅಲ್ಲ ಅಪ್ಪ ..ಹೀಗೆ.." ಅಂತ ನಿನಗೆ  ಹೇಳಿಕೊಡುವುದನ್ನು  ಗಮನಿಸಿದ್ದೇನೆ ನಾನು. 


ಆದರೆ ಆವಾಗಲೂ ನಿನಗೆ ಒಂಚೂರು ಬೇಜಾರೇ ಇಲ್ಲ.


ಮಕ್ಕಳು ಹೇಳಿ ಕೊಟ್ಟದ್ದನ್ನು.. ಕಲಿಸಿಕೊಟ್ಟದ್ದನು ಸಹ ಶ್ರದ್ಧೆಯಿಂದ ಕಲಿಯುತ್ತಿಯಾ ನೀನು. 


ಅದೆಷ್ಟು ಮುಗ್ಧ ನೀನು ಪುಷ್ಯರಾಗ.. 


ನೀನು ದೊಡ್ಡವನಾಗಿದ್ದೀಯಾ ಎಂದು ನನಗೆ ಯಾವತ್ತೂ ಅನಿಸಿಯೇ ಇಲ್ಲ... 


ಬೆಳೆದಿದ್ದೀಯಾ ಅಷ್ಟೇ.... 


ಆದರೆ ಮಗುವಿನ ಮನಸ್ಸು.. ಆ ಮುಗ್ಧತೆ ಇನ್ನೂ ಹಾಗೇ ಇದೆ.. 


ಆದರೆ ನನಗೆ ಬೇಜಾರು ಇಲ್ಲ ಪುಷ್ಯರಾಗ.. 


ನೀನು ಹಾಗೇ ಇರು.. 


ನನ್ನ ಮಕ್ಕಳಿಗೂ ತಂದೆಯಾಗಿ.. 


ಅಷ್ಟೇ ನನಗೂ ನೀನೇ ಮಗುವಾಗಿ... 


ನನಗೆ ಅದೇ ಇಷ್ಟ..


ಅದೊಂದು ದಿನ ಮಕ್ಕಳು ಹಠ ಹಿಡಿದರು. 


ರಜೆ ಬೇರೆ ಇತ್ತು.


ಹೊರಗೆ ಎಲ್ಲಾದರೂ ಸುತ್ತಾಡಿ ಬರೋಣ ಎಂದು. 


ನೀನು ಒಲ್ಲೆ ಎಂದೆ.. 


ನಿನಗೆ ಪ್ರತಿಯೊಂದರಲ್ಲೂ ನಿರಾಸಕ್ತಿಯೇ.. 


ಪಕ್ಕದಲ್ಲಿಯೇ ಇದ್ದ ನಿನಗೆ ಕೈಯಲ್ಲಿಯೇ ಮೆಲ್ಲಗೆ ತಿವಿದು ಮಕ್ಕಳು ಅಷ್ಟು ಕೇಳುತ್ತಿದ್ದಾರೆ.. ಯಾಕೆ ಬೇಡ ಎನ್ನುತ್ತೀಯಾ  ಅಂದೆ. 


ನಾನು ಹೇಳಿದಕ್ಕೆ ನೀನು ಯಾವತ್ತಾದರೂ ಇಲ್ಲ ಎಂದು ಹೇಳಿದ್ದೇ  ನನಗೆ ನೆನಪಿಲ್ಲ ಪುಷ್ಯರಾಗ. 


ನಾನು ಯಾವತ್ತೂ ನಿನಗೆ ಆದೇಶ ನೀಡಲಾರೆ.. 


ಅದೇ ಬೇಕು.. ಹಾಗೆಯೇ  ಮಾಡಿ ಎಂದು. 


ಆದರೆ ನಾನು ಏನೇ ಸಣ್ಣಪುಟ್ಟದನ್ನು ಹೇಳಿದರೂ ನೀನು ನನಗೆ ಆಗುವುದಿಲ್ಲ ಎಂದು ಹೇಳಿದವನಲ್ಲ. 


ಕೊನೆಗೂ ರಜೆಯ ಮಜಾ ಅನುಭವಿಸಲು ಹೊರಟೇ ಬಿಟ್ಟೆವು. 


ಮಂಗಳೂರಿನಿಂದ ಉಡುಪಿಗೆ. 


ಅದೇ ಸಾಗರದ ನಡುಗಡ್ಡೆ ತೊನ್ಸೆಪಾರ್ ದ್ವೀಪಕ್ಕೆ. 


ತೊನ್ಸೆಪಾರ್ ಅಂದರೆ ಅದೇ ಮಲ್ಪೆಯ ಕೋಕನಟ್ ಐಲ್ಯಾಂಡ್.


ಚಿಕ್ಕ ದ್ವೀಪ ಆದರೂ ಸಹ ಸಮುದ್ರ ಮಧ್ಯದಲ್ಲಿ ಬೇಕಾದಷ್ಟು ತೆಂಗಿನ ಮರಗಳಿರುವುದರಿಂದ ಅದು ಕೆಲವರಿಗೆ ಕೋಕನಟ್ ಐಲ್ಯಾಂಡ್. 


ಬಹುಶಃ ತೊನ್ಸೆಪಾರ್,ಕೋಕನಟ್ ಐಲ್ಯಾಂಡ್ ಎಂದೆಲ್ಲ ಹೇಳಿದರೆ ಹೆಚ್ಚಿನವರಿಗೆ ಗೊತ್ತಾಗುವುದೇ ಇಲ್ಲ ನೋಡು..


ಆದರೆ ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್ ಎಂದರೆ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ.


ಹೌದು.. ಅದೇ ದ್ವೀಪ.


ದ್ವೀಪ ಹಿಂದಿನಿಂದಲೂ ಇತ್ತು.. 


ಆದರೆ ಒಂದು ದಿನ ವಾಸ್ಕೋಡಿಗಾಮ ಸಮುದ್ರ ಮಾರ್ಗವಾಗಿ ಅಲ್ಲಿಗೆ ಬಂದನಂತೆ..ಈ  ದ್ವೀಪ ಕಂಡನಂತೆ.. ನಂತರ ಸೈಂಟ್ ಮೇರಿಸ್ ಐಲ್ಯಾಂಡ್ ಎಂಬ ಹೆಸರಿನಿಂದ ಕರೆದನಂತೆ. ಆ ನಂತರ ಜನರ ಬಾಯಲ್ಲಿ ಅದೇ ಹೆಸರು ಶಾಶ್ವತವಾಯಿತು! 


ದ್ವೀಪಕ್ಕೆ ಬೆಳಿಗ್ಗೆಯೇ ಹೋಗಿದ್ದೆವು. 


ಮಲ್ಪೆ ತಲುಪಿದವರೇ ಬೋಟಿನಲ್ಲಿ ಕುಳಿತುಕೊಂಡು ದ್ವೀಪಕ್ಕೂ  ತಲುಪಿ ಬಿಟ್ಟೆವು.. 


ಆಹ್ಲಾದಕರ ದ್ವೀಪ....


ಮುದ ನೀಡುವ ವಾತಾವರಣ. 


ನಡು ನಡುವೆ ತೆಂಗಿನ ಮರಗಳು.. 


ಲಂಬಾಕೃತಿಯಲ್ಲಿ ನಿಂತುಕೊಂಡು ಬೆರಗು ಹುಟ್ಟಿಸುವ ಲಾವರಸದಿಂದ ರಚಿತವಾದ ಪುರಾತನ  ಬಂಡೆಗಳು( ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಈ ಕಲ್ಲುಗಳ ರಚನೆಯನ್ನು ಭೂವೈಜ್ಞಾನಿಕ ಸ್ಮಾರಕ ಎಂದು ಘೋಷಿಸಿ ಬಿಟ್ಟಿದೆ)


ದ್ವೀಪದ ಸೌಂದರ್ಯ ಅನುಭವಿಸಲು ನಮ್ಮಂತೆ ಬಂದವರು.. 


ಅಲ್ಲಲ್ಲಿ ಕಡಲ ಮೀನುಗಳನ್ನು ಪ್ರೈ ಮಾಡಿ ಮಾರುವವರು.. 


ದ್ವೀಪದ ಸುತ್ತಲಿನ ನುಣಪಾದ ಮರಳು.. 


ಪುಡಿಪುಡಿಯಾದ ಬಣ್ಣ ಬಣ್ಣದ ನಯವಾದ ಚಿಪ್ಪುಗಳು.. 


ಜೀವವಿಲ್ಲದ ಶಂಖಗಳು.. 


ಮಾತಾಡದ ಸಮುದ್ರ... 


ಬೊಬ್ಬಿರಿಯುವ ಅಲೆ.. 


ಅಲೆಗಳ ಆ ಶಬ್ಧದ ನಡುವಿನಲ್ಲೊಂದು ಪ್ರಶಾಂತತೆ. 


ಹೀಗೆ ಒಂದೊಳ್ಳೆಯ ದಿನ ಕಳೆಯಲು ಹೇಳಿ ಮಾಡಿಸಿದ ತಾಣ ಅದು. 


ಆದರೆ ನನಗದು ಹೊಸದಲ್ಲ. 


ಎಷ್ಟೋ ಸಲ ನಿನ್ನೊಂದಿಗೆ.. 


ಮಕ್ಕಳೊಂದಿಗೆ ಅದೇ ದ್ವೀಪಕ್ಕೆ ಬಂದಿದ್ದೇನೆ.


ಎಷ್ಟೇ ಸಲ ಬಂದರೂ ನನಗದು ಬೋರ್ ಹಿಡಿಸುವುದಿಲ್ಲ. 


ಮಕ್ಕಳಿಗೂ ಅಷ್ಟೇ.. 


ಎಲ್ಲಾದರೂ ಹೊರಗೆ ಹೋಗುವ ಎಂದರೆ ಈ ಐಲ್ಯಾಂಡ್ ಮೊದಲು ನೆನಪಾಗಿ ಬಿಡುತ್ತದೆ.


ಆ ನಂತರ ಅಲ್ಲಿಗೆಯೇ ಹೊರಟು ಬಿಡುವುದು ನಾವು.


ಅಲ್ಲಿಗೆ ಬಂದ ಕೂಡಲೇ ಧ್ರುವ ಮತ್ತು ತಾರೆ ಅವರ ಕಲ್ಪನೆಯ ಮರಳಿನ ಮನೆ ಕಟ್ಟಲು ಶುರು ಮಾಡುತ್ತಾರೆ..


ಕಟ್ಟಿದ ಮನೆ ಇಷ್ಟವಾಗದಿದ್ದರೆ ...ಅದನ್ನು ಕೆಡವಿ ಅರಮನೆ ಕಟ್ಟಲು ಶುರು ಮಾಡುತ್ತಾರೆ..


ನಂತರ ಅದರ ಸುತ್ತಲೂ ಒಂದು ಬಲವಾದ ಕೋಟೆ.


ಅವರ ಪಾಲಿಗೆ ಅದು ಉಕ್ಕಿನಂತಹ ಕೋಟೆ. 


ಎಷ್ಟೇ ಸಲ ಕಟ್ಟಿದರೂ ಕಡಲರಾಜನಿಗೆ ಹೊಟ್ಟೆ ಕಿಚ್ಚು.. ನಮ್ಮ ಮಕ್ಕಳ ಅರಮನೆಯನ್ನು ಬೀಳಿಸಿ ಬಿಡಲು ಓಡೋಡಿ ಬರುತ್ತಾನೆ.


ಧ್ರುವನಿಗೆ ಅರಮನೆ ಕಟ್ಟಿ ಕಟ್ಟಿ.. ಬಿದ್ದು ಹೋಗುವುದನ್ನು ನೋಡಿ ಉದಾಸೀನ ಹಿಡಿಯುತ್ತದೆ.


ಆದರೆ ತಾರೆ ಕೇಳುವುದಿಲ್ಲ..


ಬಾ ಅಣ್ಣಾ... ಇನ್ನೊಮ್ಮೆ ಅರಮನೆ ಕಟ್ಟುವ.. ಈಗ ಏನೂ ಆಗುವುದಿಲ್ಲ.. ಎಂದು ಧ್ರುವನನ್ನು ಮತ್ತೆ  ಎಳೆದುಕೊಂಡು ಹೋಗುತ್ತಾಳೆ ಅವಳು.


ಅವಳು ಹಾಗೆಯೇ.. 


ನಂತರ ಇಬ್ಬರೂ ಅಣ್ಣ ತಂಗಿಯರು ಸಂಜೆಯವರೆಗೆ ಅರಮನೆ ಕಟ್ಟುತ್ತಲೇ ಇರುತ್ತಾರೆ....


ಒಂದು ದಿನವು ಅವರ ಅರಮನೆ ಪೂರ್ತಿ ಆದದ್ದನ್ನು ನಾನು ನೋಡಿಲ್ಲ...


ಮಕ್ಕಳು ಅರಮನೆ ಕಟ್ಟುವಾಗ ನಾವಿಬ್ಬರು ಕಡಲಿಗೆ ಮುಖ ಮಾಡಿ ಕುಳಿತು ಕೊಳ್ಳುತ್ತೇವೆ.


ನಿನ್ನ ಕೈ ಹಿಡಿದು ಭುಜಕ್ಕೆ ಒರಗಿ ಆ ಸಕ್ಕರೆ ಮರಳಲ್ಲಿ ಕುಳಿತುಕೊಂಡು ಬಿಟ್ಟರೆ ಪುಷ್ಯರಾಗ... ಈ ನನ್ನ ಇಡೀ ಜೀವನವೇ  ಹೀಗೆ ಇರಬಾರದೇ ಎಂದು ಅನ್ನಿಸಿಬಿಡುತ್ತದೆ.


ಎಷ್ಟೋ ಸಲ ಅನ್ನಿಸಿದೆ ಈ ಜಗತ್ತಿನಿಂದ ನಾವು ಮತ್ತು ನಮ್ಮ ಮಕ್ಕಳು ಬಹು ದೂರ ಉಳಿದು ಈ ದ್ವೀಪದಲ್ಲಿಯೇ ಮನೆಯನ್ನೊಂದು ಕಟ್ಟಿ ಬದುಕ ಬಾರದೇ ಎಂದು..


ನೀನು ದಿನಾಲೂ ಮೀನು ಹಿಡಿಯಲು ಹೋಗುವುದು..


ನಾನು ಜೀವ ಕೈಯಲ್ಲಿ ಹಿಡಿದು ನಿನಗಾಗಿ ದ್ವೀಪದ ನಡುವಲ್ಲಿ ಮಕ್ಕಳೊಂದಿಗೆ  ಕಾಯುತ್ತಾ ಇರುವುದು...


ನೀನು ಮೀನು ಹಿಡಿದುಕೊಂಡು ದೋಣಿಯಿಂದ ಇಳಿದು ನಡೆಯುತ್ತಾ  ಬರುವುದು.. 


ಅದನ್ನು ಕಂಡು ನನ್ನ ಕಣ್ಣು ಅರಳುವುದು ಹೀಗೆ ಏನೇನೋ ಕಲ್ಪನೆ.. ನಿನ್ನ ಭುಜಕ್ಕೆ ಒರಗಿ ಕಡಲು ನೋಡುವಾಗ ನನಲ್ಲಿ ದಿವ್ಯವಾಗಿ ಹುಟ್ಟಿಕೊಳ್ಳುವುದು ಪುಷ್ಯರಾಗ..


ಆದರೆ ನೀನು... ಆ ಬರೀ ಕಡಲನ್ನೇ ನೋಡುತ್ತಾ ನನಗೆ ಒರಗಲು,ನನಗಾಗಿ ಬಂಡೆಯಂತೆ ಇಡೀ ದಿನ ಏನು... ಇಡೀ ಜನ್ಮವೇ ಕುಳಿತುಕೊಳ್ಳಬಲ್ಲೆಯೋ ಏನೋ ಎಂದು ನನಗೆ ಅನ್ನಿಸಿಬಿಡುತ್ತದೆ. 


ನಾನು ನಿನ್ನ ಮೇಲೆ ಒರಗಿದ್ದರೆ ಒಂಚೂರು ಅಲ್ಲಾಡಲಾರೆ ನೀನು.. 


ನೀನು ಅದ್ಯಾಕೆ ಅಷ್ಟು ಒಳ್ಳೆಯವ ಪುಷ್ಯರಾಗ.. 


ನಿನ್ನ ಮನಸ್ಸಿನಲ್ಲಿ ಏನಿದೆಯೋ ಅದು ಆ ನನ್ನ ಶಿವನಿಗೆ ಮಾತ್ರ ಗೊತ್ತು.. 


ಎಂದಿನಂತೆ ಈ ಬಾರಿ ಹೋದಾಗಲೂ  ಧ್ರುವ ಮತ್ತು ತಾರೆ.. ಮನೆ, ಅರಮನೆ, ಸ್ಕೂಲ್ ಎಲ್ಲಾ ಮರಳಿನಲ್ಲಿ ಕಟ್ಟಿದರು. ತನ್ನ ಕರ್ತವ್ಯ ಎಂಬಂತೆ  ಕಡಲರಾಜ ಅವರ ಅರಮನೆಯನ್ನು ಬಂದು ಬಂದು ಬೀಳಿಸುತ್ತಲೇ ಇದ್ದ. 


ಅವರಿಗೂ ಅರಮನೆ ಕಟ್ಟುವುದು  ಬೋರ್ ಹಿಡಿಸಿತು ಇರಬೇಕು.. 


ಕಡಲಿಗೆ ಮುಖ ಮಾಡಿ ಕೂತಿದ್ದ ನಮ್ಮಲ್ಲಿಗೆ ಓಡೋಡಿ ಬಂದರು. 


ಧ್ರುವ ನಿನ್ನಲ್ಲಿ ಹೇಳಿದ...ಅಪ್ಪಾ.. ಮರಳಿನ ಅರಮನೆ ಕಟ್ಟಿ ಕಟ್ಟಿ ಸುಸ್ತಾಗಿದೆ. ನಾವು ದೋಣಿ ಮಾಡೋಣ.. ಬಾ ಅಪ್ಪಾ.. 


ಅದಕ್ಕೆ ನೀನಂದೆ - ನನಗೆ ದೋಣಿ ಮಾಡಲು ಬರುವುದಿಲ್ಲ.. 


ತಾರೆ ಹೇಳಿದಳು - ಬಾ ಅಪ್ಪ.. ನಿನಗೆ ನಾವು ಕಲಿಸಿ ಕೊಡುತ್ತೇವೆ, ಡಿಸ್ಕವರಿ ಚಾನಲ್ ನ Man Vs Wild ನಲ್ಲಿ  Bear Grylls ತೆಂಗಿನ ಗರಿ,ಬಿದಿರು, ವೇಸ್ಟ್ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸಿ Rafting ಮಾಡುವುದನ್ನು ನಾವು ನೋಡಿದ್ದೇವೆ. 


ನೀನು ಜಸ್ಟ್ ನಮಗೆ ಹೆಲ್ಪ್ ಮಾಡು.. ಪ್ಲೀಸ್ ಅಪ್ಪಾ... 


ತಾರೆ ಮತ್ತು ಧ್ರುವನ ಬೇಡಿಕೆ ನೋಡಿ ನೀನು ನನ್ನ ಮುಖ ನೋಡಿದೆ... 


ನಾನು ಹೇಳದೆ ನನ್ನಲ್ಲಿ ಕೇಳದೆ ನೀನೆಂದಾದರೂ ಏನನ್ನಾದರೂ ಮಾಡಿದ್ದೇಯಾ ಪುಷ್ಯರಾಗ.. 


ಹೂಂ.. ಹೋಗಿ ಮಕ್ಕಳು ಏನೋ ಕೇಳುತ್ತಾರೆ ಸಹಾಯ ಮಾಡಿ ಅಂದೆ. 


ಎದ್ದು ಸರಸರನೆ ನಡೆದು ಮಕ್ಕಳೊಡನೆ ಮಕ್ಕಳಾಗಿ ದೋಣಿಯೋ.. ನಾವೆಯೋ.. ಏನೋ ಒಂದು ಮಾಡಲು ಶುರು ಮಾಡಿದೆ. 


ನಾನು ಕಡಲನ್ನೇ ನೋಡುತ್ತಾ ಕಲ್ಪನೆಗಳಲ್ಲಿ ಕಳೆದು ಹೋಗಿದ್ದೆ..


ನನ್ನ ಕಲ್ಪನೆಯ ಆಸೆಗಳಲ್ಲಿ ಅಂತಹದ್ದೇನು ಸಂಪದ್ಭರಿತವಾದದ್ದು ಇಲ್ಲ ಪುಷ್ಯರಾಗ...


ನನಗೆ ಬಂಗಲೆ ಬೇಡ..


ಐಶ್ವರ್ಯ ಬೇಡ..


ಬರೀ ನೀನು ಬೇಕು ಅಷ್ಟೇ. 


ಅಂತು ಇಂತು ಸಂಜೆಯ ವೇಳೆಗೆ ಸಿಕ್ಕಿದ ಇದ್ದ ಬದ್ದ ವಸ್ತುಗಳನ್ನು ಜೋಡಿಸಿ ನಿಮ್ಮ ಅಪ್ಪ ಮಕ್ಕಳ ತೆಪ್ಪದಂತಹ ನಾವೆಯೊಂದು ಸಿದ್ಧವಾಯಿತು.


ತೆಪ್ಪವೇ ಅದು...


ಆದರೆ ನೀನು ಮಾಡಿದ್ದು ಅಲ್ಲ ಹಾಗಾಗಿ ಅದಕ್ಕೆ ಚಂದವಾಗಿ ನಾನು ನಾವೆ ಎಂದೇ ಕರೆಯುತ್ತಾನೆ ಪುಷ್ಯರಾಗ. 


ಧ್ರುವ ಹೇಳಿದ.. ಅಪ್ಪಾ.. ಇದನ್ನು ನಾವು ಯಾಕೆ ಒಮ್ಮೆ ಟ್ರೈ ಮಾಡಬಾರದು.. ನೀರಿನಲ್ಲಿ ಸ್ವಲ್ಪ ದೂರ ಹೋಗಿ ಬರಬಾರದು.. 


ನೀನು ಏನೂ ಹೇಳಲಿಲ್ಲ.. ಮತ್ತೆ ನನ್ನತ್ತ ನೋಡಿದೆ. 


ನಾನು ಹೇಳಿದೆ - ದೂರ ಎಲ್ಲಾ ಹೋಗಬೇಡಿ... ಜಸ್ಟ್ ನೀರಿಗೆ ನಾವೆಯನ್ನು ಹಾಕಿ  ತೇಲಿಸಿಬಿಡಿ.. ಬೇಕಿದ್ದರೆ ಅಲ್ಲೇ ಸ್ವಲ್ಪ ದೂರಕ್ಕೆ ಹೋಗಿ ಕೂಡಲೇ ಹಿಂದಕ್ಕೆ ಬಂದು ಬಿಡಿ ಎಂದು ಹೇಳಿದೆ. 


ನಿನಗೆ ಚೆನ್ನಾಗಿಯೇ ಈಜು ಬರುತ್ತದೆ ಅಲ್ಲವೇ ಹಾಗಾಗಿ ನನಗೆ ಅಂತಹ ಯಾವುದೇ ಭಯವಿರಲಿಲ್ಲ...


ನಾನು ದ್ವೀಪದ ತೀರದಲ್ಲಿಯೇ ನಿಂತು ಎಲ್ಲವನ್ನೂ ನೋಡುತ್ತಿದ್ದೆ... 


ತಾರೆ,ಧ್ರುವ ಹಾಗೂ ನೀನು ನಾವೆಯನ್ನು ಕಡಲಿನ ನೀರಿಗೆ ಎಳೆಯಲು ಶುರು ಮಾಡಿ ಬಿಟ್ಟಿರಿ.


ಧ್ರುವ ಹೇಳುತ್ತಲೇ ಇದ್ದ... ಈ ಬದಿಗೆ ಎಳೆಯಪ್ಪಾ...ಆ ಸೈಡಿಗೆ ಎಳೆಯಪ್ಪಾ... ಜೋರಾಗಿ ಎಳೆಯಪ್ಪಾ.. ಏನಪ್ಪಾ ನೀನು..ನಿನಗೆ ನಾನೇ ಎಲ್ಲಾ ಹೇಳಿ ಕೊಡಬೇಕಾ.. 


ತಾರೆ ಕೂಡ ಹೇಳುತ್ತಿದ್ದಳು - ಅಯ್ಯೋ ಅಪ್ಪಾ...ಹಾಗಲ್ಲ ಹೀಗೆ... ಫಾಸ್ಟ್.. ಫಾಸ್ಟ್  ಮಾಡು.. ಹೊತ್ತಾಗುತ್ತಿದೆ.. ಕಾಮನ್ ಅಪ್ಪ. 


ಅಂತು ಇಂತು ನಿಮ್ಮ ನಾವೆ ಮರಳಿನಿಂದ ನೀರು ತಲುಪಿತು.. 


ನೀರಿನಲ್ಲಿ ತೇಲಿಯೂ ಬಿಟ್ಟಿತ್ತು. 


ಅದನ್ನು ಕಂಡು ಧ್ರುವ ಮತ್ತು ತಾರೆಗೆ ಆದ ಖುಷಿ ಅಷ್ಟಿಷ್ಟಲ್ಲ...ಹುರ್ರೇ..ಹೋ... ಎಂದು ನೀರಿನಲ್ಲಿ ಕುಣಿದಾಡಿ ಬಿಟ್ಟರು... 


ಧ್ರುವ ಹೇಳಿದ.. ಅಪ್ಪಾ ನಾವು ಇನ್ನು ದೋಣಿಯಲ್ಲಿ ಕೂತು ಮುಂದಕ್ಕೆ ಹೋಗುವ ಎಂದು.. 


ನೀನು ಮತ್ತೆ ನನ್ನನ್ನು ನೋಡಿದೆ.. 


ನನ್ನ ಕಣ್ಣ ಸನ್ನೆಯಲ್ಲಿ ಹೂಂ.. ಹೋಗಿ ಎಂದು ಒಪ್ಪಿಗೆ ನೀಡಿದ್ದೆ. 


ಧ್ರುವ, ತಾರೆ ಹಾಗೂ ನೀನು ಮೂವರು ಕುಳಿತುಕೊಂಡಿರಿ... 


ನಿಮ್ಮ ನಾವೆ ನಿಧಾನವಾಗಿ ಕಡಲ ತೀರ ಬಿಟ್ಟು .. ಮುಂದಕ್ಕೆ ಹೋಗಿ ಬಿಟ್ಟಿತ್ತು ! 


ಒಮ್ಮೆಲೇ ಜೀವದ ಭಾಗವೇ ಕಳಚಿದಂತೆ ಆಯಿತು.. 


ಓಡೋಡಿ ನಾನು ಸಹ ನೀರಿನ  ಬಳಿಗೆ ಬಂದೆ.


ಎಷ್ಟೇ ಧೈರ್ಯ ಇದ್ದರೂ ಏನಾದರೂ ಆದರೆ ಎಂಬ ಭಯ.


ಎಷ್ಟಾದರೂ ಅದು ಕಡಲು ಅಲ್ಲವೇ..


ಮತ್ತು ಅದನ್ನು ನಾನು  ನಂಬುವುದಿಲ್ಲ.. 


ಆದರೆ ನೀವು ಮೂವರು ನಾವೆಯಲ್ಲಿ ಸುರಕ್ಷಿತವಾಗಿಯೇ  ಇದ್ದೀರಿ.. ಶಿವನ ದಯೆಯಿಂದ ಆ ತರಹ ನಾನು ಎಣಿಸಿದಂತೆ ಏನೂ ಆಗಿರಲಿಲ್ಲ. 


ಧ್ರುವ ಮತ್ತು ತಾರೆ Bear Grylls ನಂತೆ ಫೀಲ್ ಮಾಡಿಕೊಂಡು ನಿನ್ನ ನಾವೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. 


ನೀನು ಮಾತ್ರ ಶಿಸ್ತಿನ ಅಂಬಿಗನಂತೆ ಯಾವುದೋ ಕೋಲು ಹಿಡಿದುಕೊಂಡು ಹುಟ್ಟು ಹಾಕುತ್ತಿದ್ದೆ.


ಸಪ್ತಸಾಗರ ದಾಟಿ ಹೋಗುವವನಂತೆ ಕಂಡು ಬಂದೆ ನೀನು ನನಗೆ.


ನಿಮ್ಮನ್ನೇ ನೋಡುತ್ತಾ ಉಳಿದು ಬಿಟ್ಟೆ. 


ನೀವು ಸಹ ಜಾಸ್ತಿ ದೂರ ಏನು ಹೋಗಿರಲಿಲ್ಲ.. 


ಇನ್ನೇನು ಹಿಂದಕ್ಕೆ ತಿರುಗಿ ಬರಬೇಕು ಎಂದು ನೀನು ನಾವೆಯನ್ನು ತಿರುಗಿಸಲು ಶುರು ಮಾಡಿದೆ... 


ಅಷ್ಟೇ....!!


ಅದ್ಯಾವುದೋ ಹೆಮ್ಮಾರಿ ಅಲೆ ಬಂದು ನೀವು ಇದ್ದ ನಾವೆಯನ್ನು ಮುಳುಗಿಸಿಯೇ ಬಿಟ್ಟಿತು..!! 


ನನ್ನ ಜೀವವೇ ಹೋದಂತೆ ಆಯಿತು ಪುಷ್ಯರಾಗ. 


ಶಿವಾ... ಶಿವಾ.. ಎಂದು ಕೂಗಿಕೊಂಡೆ.. 


ಕೂಗಿ ಕೂಗಿ ಜನರನ್ನು ಕರೆದೇ... 


ನೀರಿನಲ್ಲಿ ಮುಳುಗಿದ್ದ ತೆಪ್ಪದಂತಹ ನೀನು ಮಾಡಿದ್ದ ಆ ನಾವೆ ಕೆಲವೇ ಕ್ಷಣಗಳಲ್ಲಿ ಮೇಲೆ ತೇಲಿ ಬಂತು.. 


ಅದರೊಟ್ಟಿಗೆ ನೀರಿನಲ್ಲಿ ಈಜುತ್ತಿದ್ದ ನಿನ್ನನ್ನು ಕೂಡ ನಾನು ದೂರದಿಂದಲೇ ನೋಡಿದೆ. . 


ಹೋದ ಉಸಿರು ಬಂದಂತಾಯಿತು..


ಕೂಡಲೇ ಧ್ರುವ ಮತ್ತು ತಾರೆಯನ್ನು ಹಿಡಿದು ಆ ನಾವೆಯಲ್ಲಿ ಕುಳ್ಳಿರಿಸಿದೆ...ಮತ್ತೆ ತಿರುಗಿ ಅಲ್ಲಿಂದಲೇ ನನ್ನತ್ತ ಒಮ್ಮೆ ನೋಡಿದೆ ನೀನು..


ನನ್ನ ಕಣ್ಣಲ್ಲಿ ಅದೆಷ್ಟು ಆನಂದ ಭಾಷ್ಪ.. ಮಕ್ಕಳು ಮತ್ತು ನಿನ್ನನ್ನು ಮರಳಿ ಪಡೆದ ಖುಷಿ ನನ್ನಲ್ಲಿ ಅಪಾರವಾಗಿತ್ತು.ಇದ್ದಲ್ಲಿಂದಲೇ ಮನಸ್ಸಿನಲ್ಲಿಯೇ ಮಂಜುನಾಥನಿಗೆ ನಮಿಸಿದೆ. 


ದೇವರನ್ನೇ ನಂಬದ ನೀನು ದೇವರಂತೆಯೇ ಮಕ್ಕಳನ್ನು ಉಳಿಸಿದ್ದೆ ಪುಷ್ಯರಾಗ. 


ನಾನು ಕೂಗಿದ್ದು ಕೇಳಿ ಯಾರು ಯಾರೋ ಒಡಿ ಬಂದರು.. 


ನೀರಿಗೆ ಹಾರಿದರು... 


ನಾವೆಯನ್ನು ಎಳೆದು ತೀರಕ್ಕೆ ಹಾಕಿದ್ದರು.. 


ಧ್ರುವ ಮತ್ತು ತಾರೆ ಸುರಕ್ಷಿತವಾಗಿ ನಾವೆ ಮೇಲೆ ಕುಳಿತುಕೊಂಡು ದಡ ಸೇರಿದರು..


ಆದರೆ ಪುಷ್ಯರಾಗ ನೀನು..! 


ದಡ ಸೇರಿದ ಆ ನಾವೆಯಲ್ಲಿ ನೀನು ಇರಲೇ ಇಲ್ಲ!.


ಕಣ್ಣರಳಿಸಿ ನಿನಗಾಗಿ ನೋಡಿದೆ..!


ಇಲ್ಲ..


ನಿನ್ನ ಸುಳಿವೆಯೇ ಇಲ್ಲ..!


ಧ್ರುವ ಇದ್ದ..


ತಾರೆ ಇದ್ದಳು..


ನಾವೆ ಇತ್ತು..


ಆದರೆ ನೀನು..?


ನೀನು ಇರಲಿಲ್ಲ ಪುಷ್ಯರಾಗ..!! 


ಎಲ್ಲಿಗೆ ಹೋದೆ ...?!


ಹೇಳು ನನಗೆ... ಏಕೆ ನೀನು ಸಹ  ಧ್ರುವ ಮತ್ತು ತಾರೆಯೊಂದಿಗೆ ನಾವೆ ಏರಿ ಹಿಂದಿರುಗಿ ಬರಲಿಲ್ಲ ಪುಷ್ಯರಾಗ...!! 


ವಿಷಯ ಅರಿವಾಗಲು ನನಗೆ ಬಹಳನೇ ಸಮಯ ಹಿಡಿಯಿತು !


ಘಟಿಸಿದ ಸತ್ಯ ಒಪ್ಪಲು ಮನಸ್ಸು ಕೇಳಲಿಲ್ಲ! 


ನಾನು ನಿನ್ನನ್ನು ಕಳೆದು ಕೊಂಡೆನೋ.. 


ಅಥವಾ ನೀನು ನನ್ನನ್ನು ಕಳೆದುಕೊಂಡೆನೋ ನನಗದು ಗೊತ್ತಿಲ್ಲ.. 


ಆದರೆ ನಿನಗಾಗಿ ಆ ಕಡಲ ತೀರದಲ್ಲಿ ಕಣ್ಣೀರಾಗಿದ್ದು ಮಾತ್ರ ನಾನು ಪುಷ್ಯರಾಗ... 


ಅತ್ತೆ..


ಬಿಕ್ಕಿ ಬಿಕ್ಕಿ ಅತ್ತೆ ನಾನು.. 


ನನ್ನ ಕಣ್ಣೀರಿನಿಂದ ಕಡಲರಾಜನಿಗೆ ಅಭಿಷೇಕ ಮಾಡಿ ಎಷ್ಟೇ ಅವನ ಕಾಲು ತೊಳೆದರೂ ಅವನ ಮನಸ್ಸು ಕರಗಲೇ ಇಲ್ಲ. 


ನಿನ್ನನ್ನು ನನಗೆ ಅವನು ಹಿಂದಿರುಗಿ ನೀಡಲಿಲ್ಲ.. 


ಹೇಳು ಪುಷ್ಯರಾಗ.. 


ಏಕೆ ನೀನು ನನಗೆ ಹೀಗೆ ಮಾಡಿದೆ? 


ಅನಾಥ ಎಂದು ಹೇಳುತ್ತಿದ್ದೆ ನೀನು.. 


ಈ ದಿನ ಈ ನಿನ್ನ ಪುನರ್ವಸುನ್ನು ಅದು ಏಕೆ ಇಷ್ಟೊಂದು ಅನಾಥ ಮಾಡಿ ಬಿಟ್ಟೆ...!! ಎಂದು ಬಿಕ್ಕಿ ಬಿಕ್ಕಿ ಅತ್ತೆ ನಾನು...


ಆದರೆ ನನ್ನ ಕಣ್ಣೀರನ್ನು ನಿನ್ನಷ್ಟು ಚೆನ್ನಾಗಿ ಒರೆಸುವವರು ಯಾರಲ್ಲಿ..


ಕಣ್ಣೀರು ಒರೆಸುವವ ನಾವೆ ಏರಿ ಎಲ್ಲಿಗೋ ಹೋಗಿ ಬಹಳನೇ ಹೊತ್ತಾಗಿತ್ತು..! 


ನಾವೆ ಏನೋ ಸುರಕ್ಷಿತವಾಗಿ ಹಿಂದೆ ತಿರುಗಿ ಬಂದಿತ್ತು..


ಆದರೆ ಅವ ಮಾತ್ರ ಬರಲೇ ಇಲ್ಲ!!.


ನನ್ನ ಕಣ್ಣೀರೆಲ್ಲವೂ ಮುಗಿದಾಗ...


ರಾತ್ರಿ ಮುಗಿದು ಬೆಳಿಗ್ಗೆ ಆಗಿತ್ತು. 


ಮತ್ತು ನನ್ನ ಕನಸು ಸಹ ಅಲ್ಲಿಗೆ ಮುಗಿದಿತ್ತು! 


ಎದ್ದವಳೇ ಮೈ ಚಿವುಟಿಕೊಂಡೆ.. 


ಅಬ್ಬಾ...ನನಸಲ್ಲ ಕನಸ್ಸು ಎಂದು ಸಮಾಧಾನವಾಯಿತು. 


ಎದ್ದವಳೇ ರಪ್ಪನೇ ದೇವಸ್ಥಾನದ ಕಡೆ  ಓಡಿದೆ..


ಅಮ್ಮ ಕೂಗಿ  ಹೇಳುತ್ತಿದ್ದಳು... ನಿಲ್ಲೇ ವಸು.. ಎಲ್ಲಿಗೆ ಓಡುತ್ತಿದ್ದೀಯಾ.. ಏನಾದರೂ ಹೊಟ್ಟೆಗೆ ಹಾಕಿಕೊಂಡು ಹೊರಗೆ ಹೋಗಬಾರದೇ.. 


ಅದರ ನಿನ್ನನ್ನು ನೋಡದೇ ನನಗೆಲ್ಲಿಯಾ ಹಸಿವು.


ದೇವಸ್ಥಾನಕ್ಕೆ ಬಂದವಳೇ ನೀನೆಲ್ಲಿ ಎಂದು ಹುಡುಕಾಡಿದೆ. 


ನೀನು ಎಲ್ಲಿಯೂ ಇಲ್ಲ.. 


ಪುಷ್ಕರಣಿಯ ಬದಿಯಲ್ಲೂ ನೋಡಿದೆ. 


ನೀನು ದಿನಂಪ್ರತಿ ಮಲಗಿ ಏಳುತ್ತಿದ್ದ ದೇವಸ್ಥಾನದ ಹೊರ ಜಗುಲಿಯಲ್ಲೂ ಸಹ ನೋಡಿದೆ. 


ದೇವಸ್ಥಾನದ ಮೇಲಿನ ಗುಡ್ಡದ್ದಲ್ಲೂ ಹುಡುಕಾಡಿದೆ.. ತಡಕಾಡಿದೆ.. 


ಇಲ್ಲ.. 


ನೀನು ಎಲ್ಲೂ ಇಲ್ಲ.. 


ಭಯವಾಯಿತು.. ನಿಜವಾಗಿಯೂ ನಿನಗೆ ಏನೋ ಆಯಿತು ಎಂದು.


ಕೆಲವೊಮ್ಮೆ ಕನಸುಗಳು ಸಹ ನಿಜವಾಗುತ್ತದೆಯಂತೆ!!! 


ನೀನು ಮಲಗುವ ಮಾಮಾಲಿ ಜಾಗಕ್ಕೆ ಬಂದು ಅಲ್ಲಿ ಯಾವಾಗಲೂ ಇರುತ್ತಿದ್ದ ಒಬ್ಬಳು ವೃದ್ಧಯಲ್ಲಿಯೇ ಕೇಳಿದೆ.. 


ಇಲ್ಲೊಬ್ಬರು ಉದ್ದದವರು ಕಡಿಮೆ ಮಾತಾಡುವವರು ಇರುತ್ತಾರೆ ಅಲ್ಲಾ.. ಅವರೆಲ್ಲಿ ಎಂದು. 


ಅದಕ್ಕವಳು ಅಂದಳು.. ಓಹ್ ಪುರು ನಾ... ಅವನಿಗೆ ಯಾರೋ ಒಬ್ಬ ಹುಡುಗ ಸಿಕ್ಕಿದ್ದ.. ಯಾರೂ ಅಂತ ಗೊತ್ತಿಲ್ಲ..ಬಹುಶಃ ಅವನಂತೆ ಅನಾಥನೇ ಇರಬೇಕು.ಅವನನ್ನು ಕರೆದುಕೊಂಡು ಎಲ್ಲಿಗೋ ಹೋಗಿದ್ದಾನಮ್ಮಾ.. ಎಂದಷ್ಟೇ ಹೇಳಿ ಮುಗಿಸಿದ್ದಳು ಆ ಬೊಚ್ಚು ಬಾಯಿಯ ವೃದ್ಧೆ. 


ಮತ್ತೊಮ್ಮೆ ಮನಸ್ಸು ಹೇಳಿತು ಕನಸಿನಲ್ಲಿ ಆದಂತೆ ನಿನಗೆ ಏನಾದರೂ ನಿಜವಾಗಿಯೂ ಕೆಟ್ಟದ್ದು ಆದರೆ...? 


ಶಿವಾ...ಶಿವಾ..ಹಾಗೆಲ್ಲ ಆಗಲ್ಲಿಕ್ಕಿಲ್ಲ,ಬಿಡ್ತು ಅನ್ನು ವಸು.. ಎಂದು ನನಗೆ ನಾನೇ ಸಮಾಧಾನ ಮಾಡಿದೆ. 


ಆದರೆ ಆ ದಿನ ಮಾತ್ರವಲ್ಲ.. ಆ ನಂತರದ ದಿನಗಳಲ್ಲಿಯೂ ನೀನು ದೇವಸ್ಥಾನದಲ್ಲಿ ನನ್ನ ಕಣ್ಣಿಗೆ ಬೀಳಲೇ ಇಲ್ಲ ಪುಷ್ಯರಾಗ..!!


ಹೇಳು.. ನೀನು ಎಲ್ಲಿಗೆ ಹೋದೆ? 


ಯಾವ ಊರಿಗೆ ಹೋದೆ..? 


ದೇವಸ್ಥಾನದ ಹೊರ ಜಗುಲಿಯನ್ನೇ ನಿದ್ದೆ ಮಾಡಲು ನಿನ್ನ ಖಾಯಂ ಸ್ಥಾನ ಮಾಡಿಕೊಂಡಿರುವ ನೀನು,ಹಿಂದೆಯೂ ಸಹ ಕೆಲವೊಮ್ಮೆ ಕೆಲವು ದಿನಗಳು ದೇವಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ... 


ಎಲ್ಲಿಗೋ ಹೋಗುತ್ತಿದ್ದೆ.. 


ಆ ನಂತರ ಪುನಃ ಮತ್ತೆ ಎಂದಿನಂತೆ ಕಾಣಿಸಿಕೊಳ್ಳುತ್ತಿದ್ದೆ. 


ಆವಾಗ ಅದೆಲ್ಲ ಮಾಮೂಲಿ ಅನಿಸುತ್ತಿತ್ತು.


ಆದರೆ ಈಗ ನಾನು ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದೇನೆ ಪುಷ್ಯರಾಗ. 


ಅದೂ ಅಲ್ಲದೇ ಹಿಂದಿನ ರಾತ್ರಿಯ ಆ ಭಯಾನಕ ಸ್ವಪ್ನದ ಕಾರಣದಿಂದಾಗಿ.. ದೇವಸ್ಥಾನದಲ್ಲೂ ನಿನ್ನನ್ನು ಈ ಎರಡೂ ದಿನಗಳಲ್ಲಿ ಕಾಣದೇ ಇರುವುದನ್ನು ನೋಡಿ.. ನನ್ನ ನೆಮ್ಮದಿಯೊಂದು ಹಾಗೇ ಹಾರಿ ಹೋಗಿದೆ!! 


ನೀನು ಎಲ್ಲೇ ಇದ್ದರೂ.. 


ಮತ್ತೆ ಈ ಮಂಜುನಾಥನ ಸನ್ನಿಧಾನಕ್ಕೆನೇ ಬಂದು ಬಿಡು ಪುಷ್ಯರಾಗ. 


ನಿನ್ನನ್ನು ದೇವಸ್ಥಾನದಲ್ಲಿ ಅನುದಿನವೂ  ಕಾಣದಿದ್ದರೆ ನನ್ನ ಮನಸ್ಸಿಗೆ ನೆಮ್ಮದಿಯಿಲ್ಲ.. 


ನೀನು ಪುಷ್ಕರಣಿಯಲ್ಲಿ ಈಜದಿದ್ದರೆ ಪುಷ್ಕರಣಿಯ ನೀರು ನನಗೆ ತಂಪೆನಿಸುವುದಿಲ್ಲ. 


ಸತ್ಯನಾರಾಯಣ ಪೂಜೆಯ ಸಪಾದಭಕ್ಷ್ಯ ಹಂಚಲು ಯಾವಾಗಲೂ ನಾನೇ ನಿಲ್ಲುತ್ತೇನೆ. 


ಆದರೆ ಭಕ್ತಿಯ ಲವಲೇಶವೂ ಇಲ್ಲದೇ ಕೇವಲ ಕ್ಷಣ ಮಾತ್ರದ ಹಸಿವಿಗಾಗಿ ತಲೆ ತಗ್ಗಿಸಿ ಸಪಾದ ಭಕ್ಷ್ಯಕ್ಕಾಗಿ ಕೈ ಒಡ್ಡುವ ಪುಷ್ಯರಾಗನ ಒರಟು  ಕೈಗಳು ಅಲ್ಲಿ ಕಂಡು ಬರದಿದ್ದರೆ... ನಾನು ಅದೆಷ್ಟು ವಿಲಿವಿಲಿ ಗೊತ್ತಾ... 


ಆ ದಿನದ ಸಪಾದ ಭಕ್ಷ್ಯವೂ ಸಹ ಸ್ವಾದ ಎನಿಸುವುದಿಲ್ಲ ನನಗೆ. 


ನನಗೆ ಗೊತ್ತು.. ನಿನಗೆ ನಾನು ಯಾರೆಂದೇ ಗೊತ್ತಿಲ್ಲ!


ಅದೇ ರೀತಿ ನಿನ್ನ ಬಗ್ಗೆ ಗೊತ್ತಿರುವ ನನಗೆ ಕೂಡ... ನಿನ್ನ ಮುಂದೆ ಬಂದು ನಿಲ್ಲುವ,ಎಲ್ಲವನ್ನೂ ಹೇಳುವ ಧೈರ್ಯ ನನ್ನಲ್ಲೂ ಇಲ್ಲ ಎನ್ನುವುದು ಸಹ ಗೊತ್ತಾದೆ!


ದೇವಸ್ಥಾನದ ಅಕ್ಕ ಪಕ್ಕವೇ ಕಾಣಲು ಸಿಗುವ ನಾನು ಮತ್ತು ನೀನು..ಸಮಾನಂತರವಾಗಿ ಸಾಗುವ ಎರಡು ಸರಳ ರೇಖೆಗಳು. 


ಎಂದಿಗೂ ಸಂಧಿಸಿಯೇ ಇಲ್ಲ! 


ಗೊತ್ತು ನನಗೆ.. ಅದು ಸಂಧಿಸಲು ಸಹ  ಸಾಧ್ಯವಿಲ್ಲ ಎಂದು!


ಎಕೆಂದರೆ ನಾನು ಉತ್ತರ ಧ್ರುವವಾದರೆ.. 


ನೀನೊಂದು ದಕ್ಷಿಣ ಧ್ರುವ!


ಆದರೆ ಪುಷ್ಯರಾಗ ನನ್ನಲ್ಲಿ ನಿನ್ನ ಬಗ್ಗೆ ಕನಸು ಹುಟ್ಟಿಯಾಗಿದೆ.. 


ಆ ಕನಸ್ಸಲ್ಲಿ ನಮಗಿಬ್ಬರಿಗೂ ಮದುವೆಯೂ ಕೂಡ ಆಗಿದೆ. 


ಅದೆಷ್ಟು ಚಂದದ ಮಕ್ಕಳು.. ಧ್ರುವ ಮತ್ತು ತಾರೆ.


ಗಗನದ ಧ್ರುವತಾರೆಯಂತೆ. 


ನೀನು ಅದೆಷ್ಟು ಒಳ್ಳೆಯ ಗಂಡ.. 


ಎಷ್ಟೋ ಸಲ ಅನಿಸಿದೆ ಅದೇ ಕನಸ್ಸು ನನಸಾಗಬಾರದೇ ದೇವರೇ ಎಂದು... 


ಮದುವೆ ಎಲ್ಲರೂ ಆಗುತ್ತಾರೆ.. 


ಮಂಟಪದಲ್ಲಿಯೇ ಆಗುತ್ತಾರೆ.. 


ಮಾಂಗಲ್ಯದಿಂದಲೇ ಗಂಟು ಬೆಸೆದು,ಗಂಟು ನಂಟಾಗಿ.. ವಿವಾಹ ಸಂಪನ್ನವಾದರೂ.. 


ಮನಸ್ಸುಗಳು ಪರಸ್ಪರ ಸೇರೋ ಮದುವೆಯಲ್ಲಿಯೇ ಅತೀ ಹೆಚ್ಚಿನ ಸುಖ ಪುಷ್ಯರಾಗ.. 


ನಾನಂತು ಮನಸ್ಸಿನಲ್ಲಿಯೇ.. ಕನಸ್ಸಿನಲ್ಲಿಯೇ ನಿನ್ನನ್ನು ವರಿಸಿದ್ದೆನೆ.. 


ಮುಂದೆ ಗೊತ್ತಿಲ್ಲ... 


ನನಗೆ ನಿನ್ನ ಮುಂದೆ ಬಂದು ನಿಲ್ಲುವ ಧೈರ್ಯವಿಲ್ಲ.. 


ನಿನಗಂತು ಬಾಯಿ ಇದ್ದರೂ ಮಾತೂ ಸಹ ಬರುವುದಿಲ್ಲ...ಮಾತ್ರವಲ್ಲ ನಾನೊಬ್ಬಳು ಇಂತಹ ಕನಸ್ಸುಗಳನ್ನು ಕಾಣುತ್ತಿದ್ದೇನೆ ಎಂಬ ಕಲ್ಪನೆ ಕೂಡ ನಿನಗೆ ಬರಲಿಕ್ಕಿಲ್ಲ.


ನಿನ್ನಲ್ಲಿ ಎಲ್ಲವನ್ನೂ ಹೇಳಲು ಆಗುವುದಿಲ್ಲ ನೋಡು.. ಅದಕ್ಕಾಗಿ ಈ ರೀತಿ ಎಲ್ಲಾ  ಬರೆದುಕೊಂಡು ನನಗೆ ನಾನೇ ನಿರಾಳ ಆಗುತ್ತಿದ್ದೇನೆ. 


ಆದಷ್ಟು ಬೇಗ ಮಂಗಳೂರಿಗೆ ಹಿಂದಿರುಗು ಪುಷ್ಯರಾಗ... 


ಸಪಾದಭಕ್ಷ್ಯದ ದ ಪಾತ್ರೆಯೊಂದಿಗೆ ಪ್ರಸಾದ ಹಂಚಲು ನಾನೇ ಇರುತ್ತೇನೆ.


ಎಂದಿನಂತೆ ನಿನಗೆ ಮಾತ್ರ ಒಂದು ತುತ್ತು ಹೆಚ್ಚೇ ಪ್ರಸಾದ.. 


ಹೌದು ನಿನಗೆ ಮಾತ್ರ.. ಬೇರೆ ಯಾರಿಗೂ ಇಲ್ಲ. 


ಸಾಧ್ಯ ಆದರೆ ಮುಂದೊಂದು ದಿನ ನನ್ನ ಕನಸ್ಸನ್ನು ಈಶ್ವರ  ಕೇಳಿಸಿಕೊಂಡು ನನಸು ಮಾಡಲಿ..


ಮದುವೆ ಆದ ನಂತರ... 


ನಾವೊಂದು ಆ ದ್ವೀಪದಲ್ಲಿಯೇ ಮನೆ ಮಾಡುವ ಪುಷ್ಯರಾಗ. 


ಅಲ್ಲಿ ನಾವು ನಾಲ್ಕೇ ಮಂದಿ... 


ನಾನು, ನೀನು,ಧ್ರುವ ಮತ್ತು ತಾರೆ.. 


ಮಕ್ಕಳು ಮರಳಿನಲ್ಲಿ ಅರಮನೆ ಕಟ್ಟಲ್ಲಿ.. 


ನಾನು ನಮ್ಮ ಆ ಮನೆಯಲ್ಲಿ ನಿನಗಾಗಿ ಬಿಸಿ ನೀರು ಕಾಯಿಸುತ್ತಾ ನಿನಗಾಗಿ ಕಾದಿರುತ್ತೇನೆ.. 


ಮತ್ತೆ ನೀನು... 


ನಾವೆ ಏರಿ ಹೋದವ ಒಂದೆರಡು ದೊಡ್ಡ ಮೀನುಗಳೊಂದಿಗೆ  ಬರದಿದ್ದರೂ ಪರವಾಗಿಲ್ಲ... 


ನಾವು ಆ ದಿನ ಬೇಕಾದರೆ ಉಪವಾಸವೇ ಮಲಗಿ ಬಿಡೋಣ... 


ಆದರೆ ನೀನು.... ನೀನು ಮಾತ್ರ ಸುರಕ್ಷಿತವಾಗಿ ಹಿಂದಿರುಗಿ ಬಾ ಪುಷ್ಯರಾಗ..


ಏಕೆಂದರೆ ನಿನಗೆ ಈ ಜಗತ್ತಿನಲ್ಲಿ ಯಾರೂ ಇಲ್ಲದೇ ಇರಬಹುದು.


ಆದರೆ ನನಗೆ ನನ್ನ ಜಗತ್ತೇ ನೀನು.. 


ನನ್ನಲ್ಲಿ ನಿನ್ನ ಬಗ್ಗೆ ಎಂದೆಂದಿಗೂ..


ಅದೇ ನಿರೀಕ್ಷೆ.. ಅದೇ ಪ್ರತೀಕ್ಷೆ.


ಮಳೆ ನಕ್ಷತ್ರ ಹೆಸರಿನ ನಾನು..... 


ನಿನ್ನ ಪಾಲಿನ ಮಿನುಗುವ ನಕ್ಷತ್ರವೂ ಹೌದು..


ನಿನ್ನ ಪಾಲಿನ ಸೊಂಪಾದ ಮಳೆಯೂ ಹೌದು..


ಕಡಲಿನಲ್ಲಿ ನಾವಿಕ ದಿಕ್ಕು ತಪ್ಪಿದಾಗಲೆಲ್ಲ...


ಧ್ರುವತಾರೆಯನ್ನು ನೋಡಿಕೊಂಡು ಸರಿ ದಾರಿ ಹಿಡಿಯುತ್ತಾನಂತೆ.


ಅದೇ ರೀತಿ ನೀನೊಮ್ಮೆ,ನಿನ್ನ ನಾವೆಯನ್ನು, 


ಒಂದು ಬಾರಿ ಆದರೂ ನನ್ನತ್ತ ತಿರುಗಿಸಬಾರದೇ ಪುಷ್ಯರಾಗ....


ನಿನಗಾಗಿಯೇ ಕಾಯುತ್ತಿದ್ದೇನೆ... 


                                             

                                             ಎಂದೆಂದಿಗೂ ನಿನದ್ದೇ ನಕ್ಷತ್ರ,

                                                                     ಪುನರ್ವಸು 


.....................................................................................


ಪುಷ್ಯರಾಗ 


ab pacchu 

moodubidire 

(photo - internet)

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ