ತಿಮರೆ ಚಟ್ನಿಯೊಂದಿಗೆ ಗಂಜಿ ಊಟ

 

ಬಹುಶಃ ತುಳುನಾಡು ಪ್ರದೇಶದಲ್ಲಿ ಉಳಿದೆಲ್ಲಾ ಚಟ್ನಿಗಳಿಗಿಂತಲೂ ಅತೀ ಹೆಚ್ಚಿನ ಪ್ರಾಶಸ್ತ್ಯ ಪಡೆದಿರುವ ಮತ್ತು ಹೆಸರುವಾಸಿ ಆಗಿರುವ  ಚಟ್ನಿ ಎಂದರೆ ಅದು ಖಂಡಿತವಾಗಿಯೂ ತಿಮರೆ ಚಟ್ನಿಯೇ.ತುಳುವಿನಲ್ಲಿ ತಿಮರೆ ಎಂದು ಹೇಳುತ್ತಾರೆ. ಒಂದೆಲಗ, ಬ್ರಾಹ್ಮೀ ಎಂದು ಇದಕ್ಕೆ ಇರುವ ಇತರ ಹೆಸರುಗಳು.

ಈ ಚಟ್ನಿ ರುಚಿಕರ ಮಾತ್ರವಲ್ಲ, ಆರೋಗ್ಯ ದೃಷ್ಟಿಯಲ್ಲೂ ತುಂಬಾನೇ ಉತ್ತಮವಾದದ್ದು. ಅದರಲ್ಲೂ ನೆನಪಿನ ಶಕ್ತಿ ವರ್ಧನೆಗಾಗಿ ಚಿಕ್ಕಮಕ್ಕಳಿಗೆ ಇದನ್ನು ಹೆಚ್ಚಾಗಿ ನಮ್ಮಲ್ಲಿ ಕೊಡುವುದು ಉಂಟು. ಆಯುರ್ವೇದದಲ್ಲಿ ಇದರ ಉಪಯೋಗ ಬಹಳನೇ ಇದೆ.

ತಿಮರೆ ಹೆಚ್ಚಾಗಿ ಗದ್ದೆ ಬದುವಿನಲ್ಲಿ..ಸದಾ  ನೀರು ಬೀಳುವ ತೋಟದಲ್ಲಿ ಆಗುತ್ತದೆ. ಗಡ್ಡೆ ಸಹಿತ ಇದನ್ನು ಒಂದು ಪಾಟ್ ನಲ್ಲಿ ಹಾಕಿಟ್ಟರೆ ಅಲ್ಲೂ ಕೂಡ ಚೆನ್ನಾಗಿ ಬೆಳೆಯಬಲ್ಲದು. ನಿಜವಾಗಿಯೂ ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಗಿಡ ಇದು.ಇದರ ಎಲೆಗಳು  ನೋಡಲು ಸುಂದರ ಕೂಡ ಹೌದು. ಹಾಗೇ ನೆಲಕ್ಕೆ ಹಸಿರು ಚಾದರ ಹೊದಿಸಿದಂತೆ,ನೆಲದ ಮೇಲೆ ಹರಡಿಕೊಂಡು ಬೆಳೆಯುತ್ತಾ ಹೋಗುತ್ತದೆ ಇದು. ಇದರ ಗಡ್ಡೆಯನ್ನು ಹಾಗೇ ಹಸಿಯಾಗಿಯೇ ತಿನ್ನುತ್ತಾರೆ.ಒಳ್ಳೆಯದಂತೆ.

ಈಗ ಇದನ್ನು ಮಾಡುವುದು ಹೇಗೆ ಎಂದು ನೋಡೋಣ.

ಕೆಲವರು ಇದನ್ನು  ಒಂದೊಂದು ರೀತಿಯಲ್ಲಿ ಮಾಡುತ್ತಾರೆ. ನಾನು ನಿಮಗೆ ನಾನು ಮಾಡಿದ ವಿಧಾನವನ್ನೇ ತಿಳಿಸುತ್ತೇನೆ ಆಯ್ತಾ. ನನಗೆ ಹೀಗೆ ಮಾಡಿದರೆನೇ ರುಚಿಯಾಗುವುದು.. 😋

ಈಗ ಮೊದಲು ಬಾಣಲೆಯಲ್ಲಿ ಒಂದು  ಸ್ಪೂನ್ ಕೊತ್ತಂಬರಿ, ಅರ್ದ ಸ್ಪೂನ್ ಜೀರಿಗೆ,ಒಂದೇ ಒಂದು ಒಣಮೆಣಸು(ಬ್ಯಾಡಗಿ), ಒಂದು ಸ್ಪೂನ್ ಉದ್ದಿನಬೇಳೆಯನ್ನು ತೆಂಗಿನ ಎಣ್ಣೆಯಲ್ಲಿ ಹುರಿಯಿರಿ. ನಂತರ ಅದೇ ಬಾಣಲೆಯಲ್ಲಿ ಸ್ವಲ್ಪ ತೆಂಗಿನತುರಿಯನ್ನು ಕೂಡ  ಹಾಕಿ  ಅದನ್ನು ಹುರಿದು ತೆಗೆಯಿರಿ.

ಈಗ ಹುರಿದ ಸಾಮಾನುಗಳನ್ನು ಮಿಕ್ಸರ್ ಗೆ ಹಾಕಿ(ತೆಂಗಿನತುರಿ ಒಂದನ್ನು  ಬಿಟ್ಟು). ನಂತರ ಇದಕ್ಕೆ ಉಪ್ಪು,ಸ್ವಲ್ಪ ಹುಳಿ, ಚಿಕ್ಕ ತುಂಡು ಬೆಲ್ಲ, ಚಿಟಿಕೆ ಅರಶಿನ, ಮೂರು ಹಸಿ ಮೆಣಸಿನಕಾಯಿ,ಚೆನ್ನಾಗಿ ತೊಳೆದು ಕತ್ತರಿಸಿದ ತಿಮರೆ ಎಲೆಗಳನ್ನು ಸಹ ಹಾಕಿ ಚೆನ್ನಾಗಿ ಮಿಕ್ಸರ್ ನಲ್ಲಿ ಕಡೆಯಿರಿ.ನಂತರ  ಅದಕ್ಕೆ ಸ್ವಲ್ಪ ನೀರು ಹಾಕಿ ಹುರಿದ ತೆಂಗಿನತುರಿಯನ್ನು ಕೂಡ ಹಾಕಿ ಚಟ್ನಿಯ ಹದಕ್ಕೆ ಮಿಕ್ಸರ್ ನಲ್ಲಿ ಕಡೆದು ತೆಗೆಯಿರಿ.ಇಷ್ಟು ಮಾಡಿದರೆ ತಿಮರೆ ಚಟ್ನಿ ಸವಿಯಲು ಸಿದ್ದ.

ನಂತರ ಬೇಕಾದರೆ ಉದ್ದಿನಬೇಳೆ,ಸಾಸಿವೆ, ಕರಿಬೇವಿನ ಒಗ್ಗರಣೆಯನ್ನು ಕೂಡ ಕೊಡಬಹುದು.

ಹೆಚ್ಚಿನವರಿಗೆ ಗೊತ್ತಿರುತ್ತದೆ. ಗೊತ್ತಿಲ್ಲದಿದ್ದವರು ಒಮ್ಮೆ ಮಾಡಿ ಬಹಳನೇ ರುಚಿಯಾಗಿರುತ್ತದೆ.. ಅದರಲ್ಲೂ ಗಂಜಿ ಊಟಕ್ಕೆ ಹೇಳಿ ಮಾಡಿಸಿದ್ದು ಇದು... 😋😋

#ಈ_ಜನುಮವೇ_ಆಹಾ_ದೊರಕಿದೆ_ರುಚಿ_ಸವಿಯಲು
ಪಚ್ಚುಪಟಗಳು
ab


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ