ರಾಧೆಯ ಕೊಳಲು


ಕೃಷ್ಣ ಅಂದರೆ ಎಲ್ಲರಿಗೂ ಇಷ್ಟ.

ಆದರೆ ಕೃಷ್ಣನಿಗೆ?

ಅವನ ಇಷ್ಟಗಳೇ ಬೇರೆ.

ಕೃಷ್ಣನಿಗೆ ಗೋಪಿಕೆಯರು ಇಷ್ಟ.

ಕೃಷ್ಣನಿಗೆ ಬೃಂದಾವನ ಇಷ್ಟ.

ಅವನಿಗೆ ಅಲ್ಲಿಯ  ಗೋವುಗಳು ಇಷ್ಟ.

ತಣ್ಣನೆ ಹರಿಯುವ ಯಮುನೆ ಇಷ್ಟ.

ಪ್ರೀತಿಯಿಂದ ಬೆದರಿಸುವ ತಾಯಿ ಯಶೋಧೆ ಇಷ್ಟ.

ಬೃಂದಾವನದ ಮನೆ ಮನೆಯ ರುಚಿಯಾದ ಬೆಣ್ಣೆ ಇಷ್ಟ.

ಆ ಬೆಣ್ಣೆ ಕದ್ದು ತಿನ್ನುವುದರಲ್ಲಿಯೇ ಅವನಿಗೆ ಪರಮ ಸುಖ.

ಹೀಗೆ ಒಂದಾ.. ಎರಡಾ..

ಬೃಂದಾವನದ ಹೆಚ್ಚಿನ ಎಲ್ಲವೂ ಅವನಿಗೆ ಇಷ್ಟವೇ.

ಕೃಷ್ಣನಿಂದಾಗಿಯೇ ಅವುಗಳಿಗೆ ಮತ್ತಷ್ಟು ಹೆಚ್ಚಿನ ಮಹತ್ವ ಬಂದಿದ್ದು ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ..

ಆದರೆ ಎಲ್ಲಕ್ಕಿಂತ ಹೆಚ್ಚಿನ ಇಷ್ಟ ಕೃಷ್ಣನಿಗೆ ಇದ್ದದ್ದು ಎರಡರಲ್ಲಿಯೇ..

ಒಂದು ಅವನ ರಾಧೆ.

ಮತ್ತೊಂದು ಅವನ ಕೊಳಲು.

ರಾಧೆ ಇಲ್ಲದೆ ಕೃಷ್ಣನಿಲ್ಲ..

ಕೃಷ್ಣನಿಲ್ಲದೆ ರಾಧೆ ಇಲ್ಲದೆ ಎಂಬಂತೆ ಪ್ರೀತಿಸಿ ಬಿಟ್ಟವರು ಅವರು.

ಅದೇ ರೀತಿ ಅವನ ಕೊಳಲು.

ಎಲ್ಲಿಯ ಬಿದಿರು.. ಎಲ್ಲಿಯ ಮಾಧವ.

ಆದರೂ ತನ್ನೊಳಗೊಂದಿಷ್ಟು ರಂಧ್ರ ಕೊರೆದುಕೊಂಡು ಮಾಧವನ ಕೈ ಸೇರಿ,ಸದಾ ಅವನ ತುಟಿ ಸೋಕಿ ನಾದ ಹೊಮ್ಮಿಸುವ ಆ ಕೊಳಲಿನ ಭಾಗ್ಯ ಬಹುಶಃ ರಾಧೆಗೂ ಇರಲಿಲ್ಲವೆನೋ..!

ರಾಧೆಯದ್ದು ಮೌನ ಪ್ರೀತಿ.

ಇದೇ ಬೇಕು..ಅದೇ ಬೇಕು ಎಂಬ ಬೇಡಿಕೆ ಇಲ್ಲ.

ಕೃಷ್ಣನೇ ಬೇಕು ಎಂಬ ಹಠವಂತು ಮೊದಲೇ ಇಲ್ಲ.

ಕೃಷ್ಣನಂತೆ ಅವಳ ಕೂಡ ತ್ಯಾಗ ದೊಡ್ಡದೇ.

ಜಗತ್ತಿಗೆ ಕೃಷ್ಣನನ್ನೇ ತ್ಯಾಗ ಮಾಡಿದವಳು ಅವಳು.

ಅವಳ ಮುಗ್ಧ ಪ್ರೀತಿಯಲ್ಲಿ ಸ್ವಾರ್ಥ ಇರಲಿಲ್ಲ.

ಅಷ್ಟು ಮಾತ್ರವಲ್ಲ ಅವರಿಬ್ಬರ ಪರಿಶುದ್ಧ ಪ್ರೀತಿಯಲ್ಲಿ ಕಾಮದ ವಾಂಛೆಯಂತು ಮೊದಲೇ ಇರಲಿಲ್ಲ.

ದೈಹಿಕ ಆಕರ್ಷಣೆ ಇರದ ಮಧುರವಾದ ಪ್ರೀತಿ ಅದು.

ಮತ್ತಷ್ಟು ಬೇಕೆನಿಸುವಂತಹದ್ದು,ಆದರೂ ಮತ್ತೇರಿಸಲಾರದಂತಹದ್ದು.

ಆ ದಿನ ಕೃಷ್ಣ ಕಣ್ಮುಚ್ಚಿ ಕೊಳಲು ನುಡಿಸುತ್ತಿದ್ದ,ರಾಧೆ  ತನ್ಮಯಳಾಗಿ ಆಲಿಸುತ್ತಿದ್ದಳು.

ಹುಣ್ಣಿಮೆ ಚಂದ್ರ ಬರೀ ಅವರಿಬ್ಬರಿಗಾಗಿಯೇ ದೀಪ ಹಿಡಿದುಕೊಂಡು ನಿಂತವನಂತೆ ಆಕಾಶದ ಮೇಲೇರಿ ನಿಂತಿದ್ದ,ಅಂದು ಬೀಸುವ ಗಾಳಿಗೆ ಸೊಕ್ಕಿರಲಿಲ್ಲ, ಅದು ತಂಪಾಗಿತ್ತು ಮತ್ತು ಹಿತವಾಗಿತ್ತು.

ತನ್ನ ತೊಡೆಯ ಮೇಲೆ ಮಗುವಿನಂತೆ  ಮಲಗಿ, ಮಲಗಿದ್ದಲ್ಲಿಂದಲೇ ಈ ಜಗದ ಪರಿವೆಯೇ ಇಲ್ಲದಂತೆ ಕೊಳಲು ನುಡಿಸುತ್ತಿದ್ದ ಜಗದೊಡೆಯನ ತಲೆಗೂದಲಿನಲ್ಲಿ ರಾಧೆಯ ಬೆರಳುಗಳು  ಆಟವಾಡುತ್ತಿದ್ದವು, ಆದರೆ ಮನಸ್ಸು ಮಾತ್ರ ಭಾರವಾಗಿತ್ತು, ಮತ್ತು ಎಲ್ಲೋ ಕಳೆದು ಹೋಗಿತ್ತು!

ಅವಳಿಂದು ಎಂದಿನಂತೆ ಸುಖಿ ಅಲ್ಲ.. ಅವಳಲ್ಲಿ ಶೂನ್ಯ ಭಾವವೊಂದು ಮನೆ ಮಾಡಿದೆ.ಅದಕ್ಕೆ ಕಾರಣವೂ ಅವಳಿಗೆ ಗೊತ್ತಿದೆ!!

ರಾಧೆ ಮೆಲ್ಲಗೆ ಕೇಳಿದಳು "ಹೇಯ್ ವಾಸುದೇವ, ಈ ಕೊಳಲ ಸ್ವರಕ್ಕೆ ಹೃದಯ ಮಾತ್ರವಲ್ಲ, ಆತ್ಮವನ್ನೇ ಅಲ್ಲಾಡಿಸುವ ಶಕ್ತಿ ಇದೆಯಲ್ಲೋ ..."

ವಾಸುದೇವ ಏನೂ ಮಾತಾಡಲಿಲ್ಲ, ತುಸು ನಕ್ಕ,ಮತ್ತೆ ಮಂತ್ರಮುಗ್ಧನಾಗಿ ಕೊಳಲು ಬಾರಿಸುವುದನ್ನು ಮುಂದುವರಿಸಿದ..

ರಾಧೆ ಮತ್ತೆ ಕೇಳಿದಳು " ಕೃಷ್ಣಾ, ಯಾರನ್ನೂ ನೆನಪಿಸಿಕೊಂಡು ಇಷ್ಟೊಂದು ಮಧುರವಾಗಿ ಕೊಳಲು ನುಡಿಸುತ್ತಿದ್ದಿಯೋ ದೊರೆ .. "

ಮುರಾರಿ ಮತ್ತೆ ನಕ್ಕ.. ಈಗಲೂ ತುಟಿಬಿಚ್ಚಲಿಲ್ಲ , ಆದರೆ  ಕಣ್ಣು ಮಿಟುಕಿಸಿ, ರಾಧೆ ಗೆ ಅರ್ಥವಾಗುವಂತೆ ಕಣ್ಣಲ್ಲೇ ಹೇಳಿದ " ನಿನಗಲ್ಲದೇ ಮತ್ತೆ ಯಾರಿಗಾಗಿ ನಾ ಕೊಳಲು ನುಡಿಸಲಿ ರಾಧೆ... ".

ಮುರಳಿಯ ಗಾನ ಮುಂದುವರಿದಿತ್ತು.. ರಾಧೆಯ ಮೈ ಮನಸ್ಸು ಕ್ಷಣ ಕಾಲ ನೆಲ ಬಿಟ್ಟ ಚಿಟ್ಟೆಯಾಗಿತ್ತು,ಗರಿ ಬಿಚ್ಚಿದ ನವಿಲಾಗಿತ್ತು.

ಅವಳೇ ಪುನಃ ಮೌನ ಮುರಿದಳು,

" ಮಾಧವ, ಗುರುಕುಲ ಸೇರಲು, ಬೃಂದಾವನ ಬಿಟ್ಟು ನಾಳೆಯೇ ಹೋಗುತ್ತಿರುವೆಯಂತೆ...!! "

ಮಾಧವ ಏನೂ ಮಾತಾಡಲಿಲ್ಲ. ಕೊಳಲು ನುಡಿಸುವುದನ್ನು ಮುಂದುವರಿಸಿದ.

"ನನ್ನನ್ನು ಬಿಟ್ಟು ನೀನು ಹೋಗಬಲ್ಲೆಯ ಕೃಷ್ಣಾ ..." ಆರ್ದ್ರವಾಗಿ ಕೇಳಿದ ರಾಧೆ ಯ ಕಂಗಳಿಂದ ತನ್ನಿಂತಾನೆ ಎರಡು ಹನಿ ಮಲಗಿದ್ದ ಕೃಷ್ಣ ನ ಹಣೆಯ ಮೇಲೆ ಹಾಗೇ ಉದುರಿತು.

ಕೃಷ್ಣ ನ ಕೊಳಲು ಒಮ್ಮೆಗೆ ಮಾತನಾಡುವುದನ್ನು ನಿಲ್ಲಿಸಿತು. ಮಲಗಿದ್ದ ಕೃಷ್ಣ ಎದ್ದು ಕುಳಿತ.

" ಹೋಗಲೇ ಬೇಕು ರಾಧೆ, ವಿಧ್ಯಾಭ್ಯಾಸ ಮತ್ತು ಮುಂದೆ ಮಾಡಬೇಕಾದ ಕಾರ್ಯ ತುಂಬಾ ದೊಡ್ಡದಿದೆ..  ಹುಟ್ಟಿನ ಉದ್ದೇಶ, ಕಾರಣಗಳು ಬೇರೆಯೇ ಆಗಿವೆ .. ಹೋಗಲೇಬೇಕು,ನಾನು ನನ್ನ ಕರ್ತವ್ಯ ಗಳಿಂದ ವಿಮುಖನಾಗುವಂತಿಲ್ಲ.. ಮತ್ತೆ ಹಿಂದಿರುಗಿ ನಿನ್ನಲ್ಲಿ ಬರುತ್ತೆನೋ ಇಲ್ಲವೋ ಗೊತ್ತಿಲ್ಲ! "

"ನಿನೇನೋ ಹೋಗಿ ಬಿಡಬಲ್ಲೆ.. ಆದರೆ ನಾನು..ನೀನು ಹೋದ ಮೇಲೆ ನಾನು ತೀರ ಒಂಟಿಯಾಗಿ ಇದ್ದುಬಿಡುತ್ತೆನೆ ಕೃಷ್ಣಾ..ನೀನೇ ಇಲ್ಲದೆ ಈ ಬೃಂದಾವನ ನಲ್ಲಿ ಬೇರೆ ಏನು ಖುಷಿ ಇದೆ ನನಗೆ.  "

ಕೃಷ್ಣ ಮಾತಾಡಲಿಲ್ಲ..

" ನಿನ್ನ ಕೊಳಲ ಧ್ವನಿ ಕೇಳದೆ, ನನ್ನಲ್ಲಿ ಮುಂಜಾವು ಗಳು ಅರಳುವುದಿಲ್ಲ, ಕಣ್ಣಿಗೆ ನಿದ್ದೆ ಹತ್ತುವುದಿಲ್ಲ, ನೀನು ಕದಿಯದ ನಮ್ಮ ಮನೆಯ ಬೆಣ್ಣೆ ಗೆ ರುಚಿಯಿಲ್ಲ, ನೀನಿರದ ಬೃಂದಾವನ ಉಸಿರಾಡುವುದಿಲ್ಲ ..ನೀನಿಲ್ಲದೇ ನಾನೇ ಇಲ್ಲ "

ಅವಳ ಮನದ ಆಂತರ್ಯ ದ ಮಾತಿಗೆ ಕೃಷ್ಣನಲ್ಲಿ ಉತ್ತರವಿಲ್ಲ.

" ನಿನ್ನ ಹುಟ್ಟಿನ ಉದ್ದೇಶ, ಕಾರಣ, ನಿನ್ನ ಕರ್ತವ್ಯ ಗಳು ನನಗೆ ಗೊತ್ತಿಲ್ಲ, ಹೋಗು ಎಲ್ಲವನ್ನೂ ಈಡೇರಿಸು, ನಾನು ಯಾವುದಕ್ಕೂ ಅಡ್ಡಿಪಡಿಸಲಾರೆ ,ಆದರೆ ಕೊನೆಗೆ ಮಾತ್ರ ಇಲ್ಲಿಗೇ ಬಾ... ಅಲ್ಲಿಯವರೆಗೂ ನಿನಗಾಗಿಯೇ  ಕಾದಿರುತ್ತೆನೆ ಕೃಷ್ಣಾ.. "

" ಬೇಡ.. ಆ ಕೆಲಸ ಮಾಡಬೇಡ..ನಿನ್ನದೇ ಒಂದು ಬದುಕು ಕಟ್ಟಿಕೋ ರಾಧೆ, ಅದೇ ಸಮ್ಮತವೂ ಕೂಡ "

" ಯಾಕೆ,ಅರಮನೆಯ ದೊರೆ ಆಗಬೇಕಾದವನಿಗೆ , ಈ ಗೋಪಿಕೆಯನ್ನು ಕಟ್ಟಿಕೊಳ್ಳಬೇಕೆಂದು ಒಂಚೂರು ಅನ್ನಿಸುತ್ತಿಲ್ಲವೇ... "

" ರಾಧೆ, ನಾವು ಒಂದಾಗುತ್ತೆವೆಯೋ ಇಲ್ಲವೋ ನನಗೇ ಗೊತ್ತಿಲ್ಲ.. ಆದರೆ ಎಂದೆಂದಿಗೂ ನನಗಾಗಿಯೇ ಕಾದಿರುತ್ತೆನೆ ಎಂದು ಮಾತ್ರ  ಯಾವತ್ತೂ ಹೇಳಬೇಡ.. "

" ನಿನಗೇ ಗೊತ್ತಿಲ್ಲವೇ... ಎಲ್ಲವನ್ನೂ ಬಲ್ಲ ನಿನಗೆ ಗೊತ್ತಿಲ್ಲ ಎಂದರೆ, ನಾನು ನಿನ್ನಲ್ಲಿ ಇನ್ನೇನನ್ನು ಪ್ರಶ್ನಿಸಲಿ ಕೃಷ್ಣಾ.. "

ರಾಧೆ ಯ ಮುಗ್ಧ ಹಾಗೂ ಅಷ್ಟೇ ಕಠಿಣವಾದ ಪ್ರಶ್ನೆ ಗಳಿಗೆ ಕೃಷ್ಣ ನಲ್ಲಿ ಉತ್ತರವಿಲ್ಲ.

" ಕೃಷ್ಣಾ, ನನಗೆ ಈಗೀಗ ಬಲವಾಗಿ ಅನಿಸುತ್ತಿದೆ, ನೀನು ಖಂಡಿತವಾಗಿಯೂ ನನಗೆ ಸಿಗುವುದಿಲ್ಲ.ನೀನು ನನ್ನಿಂದ ತುಂಬಾ ದೂರ ಹೋಗುತ್ತೀಯಾ,ಹೋದವನು ಮರಳಿ ನನ್ನ ಬಳಿ ಬರಲಾರೆ ಎಂದು ಅನಿಸುತ್ತಿದೆ. ನೀನು ನನಗೆ ಸಿಗಬೇಕು ಎಂದು ನಾನು ಆಸೆ ಪಡುತ್ತೇನೆ ನಿಜ, ಆದರೆ ನೀನು ಬರೀ ನನಗಷ್ಟೇ ಸಿಗಬೇಕು ಎಂಬ ದುರಾಸೆಯೂ ಕೂಡ ನನ್ನಲ್ಲಿ ಇಲ್ಲ ಕೃಷ್ಣಾ..ಇಡೀ ಜಗತ್ತಿಗೆ ಸೇರಬೇಕಾದವನನ್ನು ನಾನು ಹೇಗೆ ಸದಾ ನನ್ನ ಜೊತೆಯೇ ಇರುವಂತೆ ಕಟ್ಟಿ ಹಾಕಿ ಕೊಳ್ಳಲಿ.. "

ಕೃಷ್ಣನಿಗೆ ಮಾತು ಹೊರಡುವುದಿಲ್ಲ..

" ಹೇಯ್ ಕೃಷ್ಣಾ.. ಮುಂದೊಂದು ದಿನ ನೀನು ದೊಡ್ಡ ರಾಜನಾಗುತ್ತೀಯಾ, ಚಂದದ ರಾಜಕುಮಾರಿಯನ್ನೇ ಮದುವೆ ಆಗುತ್ತೀಯಾ.. ಆಗ ನಿನ್ನ ರಾಜಕುಮಾರಿ  ನಿನ್ನಲ್ಲಿ ಕೊಳಲು ನುಡಿಸಲು ಹೇಳುತ್ತಾಳೆ, ಆವಾಗ ನೀನು ಅವಳಿಗಾಗಿ ಮಧುರವಾಗಿ ಕೊಳಲು ನುಡಿಸುತ್ತೀಯಾ,ಆಗ ನೀನು ನುಡಿಸುವ ಕೊಳಲಿನಲ್ಲೂ... ಈ ರಾಧೆಯೇ ಇರುತ್ತಾಳಾ ಕೃಷ್ಣಾ....? "

ಯಾಕೋ ವಾಸುದೇವನಿಗೂ ಬಾಯಿ ಕಟ್ಟಿದಂತಾಯಿತು. ಅದೆಂತಹ ಪ್ರಶ್ನೆ ಕೇಳಿಬಿಟ್ಟಳು ರಾಧೆ.

" ರಾಧೆ.. ನಾವು ಸತಿ ಪತಿಗಳಾಗಬಹುದು, ಇಲ್ಲದೆಯೂ ಹೋಗಬಹುದು. ಆದರೆ ಈ ಕೃಷ್ಣ ನುಡಿಸುವ  ಕೊಳಲಿನ ಪ್ರತೀ ಉಸಿರಿನಲ್ಲಿ, ರಾಧೆಯ ಹೆಸರು ಬಿಟ್ಟರೆ ಬೇರೆ ಯಾರ ಹೆಸರು ಬರಲು ಸಾಧ್ಯವೇ ಇಲ್ಲ.. "

ರಾಧೆ ಕಣ್ಣೀರಾದಳು. ಹಾಗೇ ಕುಳಿತಲ್ಲಿಂದಲೇ ಕೃಷ್ಣ ನ ಭುಜಕ್ಕೊರಗಿದಳು. ಕೃಷ್ಣನ ಭುಜ ನೆನೆಯಿತು.

" ರಾಧೆ, ನಿನಗೆ ನಾನು ಸಿಗುವುದೇ ಇಲ್ಲ ಎಂಬ ಭಾವನೆ ಅತೀವವಾಗಿ ಕಾಡುವುದಾದರೆ, ಒಂದು ವೇಳೆ ಹಾಗೇಯೇ ಆಗುವುದಾದರೆ.. ನಾನು ಇನ್ನೆಂದೂ  ಕೊಳಲು ನುಡಿಸಲಾರೆ..ನಿನಗಾಗಿಯೇ ಅನುಕ್ಷಣವೂ ನುಡಿಸಿದ ಈ ಕೊಳಲು ನಿನಗೆ ಕೊಟ್ಟು ಬಿಡುತ್ತೇನೆ. ನೀನೇ ಇಟ್ಟುಕೋ..ನನ್ನ ನೆನಪಿಗಾಗಿ  "

"ಬೇಡ ಕೃಷ್ಣಾ.. ನಿನ್ನ ನೆನಪು ಈ ಜೀವದ ಉಸಿರು ನಿಲ್ಲುವವರೆಗೂ ಮರೆತು ಹೋಗುವಂತಹದ್ದಲ್ಲ,ಅದು ಮೈಯ ಮಚ್ಚೆಯಂತಹದ್ದು. ಈ ರಾಧೆಗೆ ಯಾವತ್ತಿದ್ದರೂ ಒಬ್ಬನೇ ಕೃಷ್ಣ. ನೀನು ನನ್ನ ಆತ್ಮದ ಸಖ. ಆದರೆ ಕೃಷ್ಣಾ, ನೀನು ನನ್ನಿಂದ ಬಲು ದೂರ ಹೋಗುತ್ತಿರುವವನು, ನನ್ನಂತವರು ಎಷ್ಟೋ  ಮಂದಿ ನಿನಗೆ ಸಿಗಬಹುದು.ನೀನೆಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳು. ಆವಾಗಲೆಲ್ಲ ಈ ಪುಟ್ಟ ರಾಧೆ ನಿನ್ನ ನೆನಪಿನಿಂದ ಮರೆತು ಹೋಗಿಬಿಡಬಹುದು. ಆದರೆ ಕೊಳಲು, ಅದನ್ನು ನೀನು ಮರೆಯುವವನಲ್ಲ. ಅದನ್ನು ನುಡಿಸುವಾಗಲಾದರೂ ನಿನಗೆ ಈ ರಾಧೆಯ ನೆನಪು ಅನುಗಾಲವೂ ಕಾಡಲಿ ಕೃಷ್ಣ...  ಅದಕ್ಕಾದರೂ ಈ ಕೊಳಲನ್ನು ನೀನೇ ಇಟ್ಟುಕೋ.. "

ಕೃಷ್ಣ ಮಾತು ಮರೆಯುತ್ತಾನೆ..

" ಮನೆಗೆ ಹೋಗಲು ಹೊತ್ತಾಗುತ್ತಿದೆ ಕೃಷ್ಣ, ಇನ್ನು ನಾವು ಹೀಗೆ ಬೇಟಿಯಾಗಲಾರೆವು, ಬಹುಶಃ  ಇದೇ ಕೊನೆಯ ಭೇಟಿ ಎಂದು ಅನಿಸುತ್ತಿದೆ.ಅದನ್ನೇ ಮನಸ್ಸು ಕೂಡ ಹೇಳುತ್ತಿದೆ. ಯಾಕೋ ಒಮ್ಮೆ ನಿನ್ನ ಕೊಳಲ ನಾದ ಕೇಳಬೇಕು ಎಂದು ಅನಿಸುತ್ತಿದೆ. ಹಾಗೇ ಒಮ್ಮೆ ಕಣ್ಣು ಮುಚ್ಚಿಕೊಂಡು ಈ ರಾಧೆ ಗಾಗಿ ಕೊಳಲು  ನುಡಿಸು ಕೃಷ್ಣ.. ಕೊನೆಯ ಬಾರಿ ಕೇಳಿ ನಿನ್ನಿಂದ ಹಾಗೇ ದೂರವಾಗಿ ಬಿಡುತ್ತೇನೆ, ಬದುಕಿನ ಕೊನೆಯ ದಿನದವರೆಗೂ ನಾ ಎಲ್ಲೇ ಇರಲಿ, ಆ ನಿನ್ನ ಮುರಳಿ ನಾದವೇ ನನ್ನ ಕಿವಿಯಲ್ಲಿ ಅನುರಣಿಸುತ್ತಿರಲಿ.. "

ಕೃಷ್ಣ ರಾಧೆಯನ್ನೇ ನೋಡುತ್ತಾನೆ,ಕಣ್ಣ್ ತುಂಬಿಸಿಕೊಳ್ಳುತ್ತಾನೆ.!!
ಮತ್ತೆ ನಿಧಾನವಾಗಿ ಕೊಳಲನ್ನು ಕೈಗೆ ತೆಗೆದುಕೊಂಡು ,ಹಾಗೇ ಕಣ್ಣು ಮುಚ್ಚಿ  ನುಡಿಸಲು ಶುರುಮಾಡುತ್ತೆನೆ.

ರಾಧೆಯ ಕಣ್ಣುಗಳಲ್ಲಿ ಹರಿಯುವ ಯಮುನೆಗೆ ತೀವ್ರವಾದ ರಭಸ, ಹರಿಯುವ ಕಣ್ಣೀರನ್ನು ತಡೆದುಕೊಳ್ಳುವ ಶಕ್ತಿ ಅವಳಲಿಲ್ಲ. ಕೊನೆಯ ಬಾರಿಯೋ ಎಂಬಂತೆ ಕೊಳಲು ಊದುತ್ತಿರುವ ತನ್ನ ಸಖ ಕೃಷ್ಣನನ್ನು ಕಣ್ತುಂಬ ನೋಡುತ್ತಾಳೆ ಮತ್ತೆ ಕಣ್ಣೀರಾಗುತ್ತಾಳೆ, ಹಾಗೇ ತಿರುಗಿದವಳೇ ಭಾರವಾದ ಹೃದಯದಿಂದ ತನ್ನ ಮನೆಯ ದಾರಿಯ ಕಡೆ ಓಡುತ್ತಾಳೆ!!

ಕೃಷ್ಣ ನ ಹೊರತು ಅಲ್ಲಿ ಈಗ ಯಾರೂ ಇಲ್ಲ.ರಾಧೆ ಹೋಗಿದ್ದೂ ಕೂಡ ಅವನಿಗೆ ಗೊತ್ತಿಲ್ಲ . ವಾಸುದೇವ ಕಣ್ಮುಚ್ಚಿ ಕೊಳಲು ನುಡಿಸುತ್ತಲೇ ಇದ್ದಾನೆ. ಅವನ ಕೊಳಲಿನ ಪ್ರತೀ ಸ್ವರದಲ್ಲೂ ರಾಧೆ ಇದ್ದಳು... ಹೌದು, ರಾಧೆ ಮಾತ್ರ ಇದ್ದಳು.!

ತುಂಬಾ ಹೊತ್ತಾದ ನಂತರ ಮಾಧವನಿಗೂ ಏನೋ ಕಳಕೊಂಡ ಶೂನ್ಯ ಭಾವ ಕಾಡಿತು. ಕೊಳಲು ನುಡಿಸುವುದನ್ನು ನಿಲ್ಲಿಸಿ, ಕಣ್ಣು ಬಿಡುತ್ತಾನೆ. ಅಲ್ಲಿ ಅವನ ರಾಧೆ ಇಲ್ಲ!

ಕೃಷ್ಣ ಮೊದಲ ಬಾರಿ ಕಣ್ಣೀರಾದ...ತುಂಬಾ ಹೊತ್ತಿನ ವರೆಗೂ ಕಣ್ಣೀರ ಧಾರೆ ಹರಿಯುತ್ತಲೇ ಇತ್ತು. ಕೆಲವೊಮ್ಮೆ ದೇವರೂ ಅಳುತ್ತಾನೆ,ಆದರೆ ತಾನು ಇಷ್ಟ ಪಟ್ಟವರಿಗಾಗಿ ಮಾತ್ರ.

ಅವನ ಕಣ್ಣೀರ ಪ್ರತೀ ಹನಿಯಲ್ಲೂ ಇದ್ದವಳು ಅವಳೊಬ್ಬಳೇ.. ಅವಳೇ ರಾಧೆ....!

ಬೃಂದಾವನ ಮೌನವಾಯಿತು. ಕೃಷ್ಣ ಮತ್ತೇ ಕೊಳಲು ಕೈಗೆತ್ತಿಕೊಂಡ, ರಾಧೆ ಗಾಗಿ ಮತ್ತೊಮ್ಮೆ ತುಂಬಾನೇ ಆರ್ದ್ರವಾಗಿ ಕೊಳಲು ನುಡಿಸಿದ... ಕೊಳಲ ನಾಧ ಮುಗಿಲು ಮುಟ್ಟಿತು, ಹುಣ್ಣಿಮೆ ಚಂದ್ರ ಮಂಕಾದ. ತಂಗಾಳಿ ಬಿಸಿಯಾಯಿತು. ಕೊಳಲ ನಾಧ ಮತ್ತಷ್ಟು ಬಿರುಸಾಯಿತು. ಆದರೆ ಕೊಳಲ ನಾಧ ಕೇಳಬೇಕಾದ ರಾಧೆ ಅಲ್ಲಿರಲಿಲ್ಲ, ಅಂದಿನಿಂದ ಎಂದಿಗೂ ಅವನೆದರು ಬರಲೇ ಇಲ್ಲ!

ಕೃಷ್ಣ ನೂ ಅಂದಿನಿಂದ ಎಂದಿಗೂ, ನುಡಿಸಿದ ಕೊಳಲಿನ ನಾಧದಲ್ಲಿ, ರಾಧೆ ಯ ಹೊರತು ಇನ್ನಾರೂ ಇರಲೇ ಇಲ್ಲ..!

                      .................. ಶುಭಂ.............

ಕೃಷ್ಣನಿಗೆ ಸಂಬಂಧ ಪಟ್ಟಂತೆ, ಇಂದಿಗೂ  ನಮಗೆ ರುಕ್ಮಿಣಿಯ ನಿರ್ಲಿಪ್ತತೆ, ಭಾಮೆಯ ಕೋಪ, ಮೀರಾ ಳ ಭಕ್ತಿ ಗಿಂತ ಜಾಸ್ತಿಯಾಗಿ ನೆನಪಾಗುವುದು ಹಾಗೂ ಕಾಡುವುದು ರಾಧ ಳ ಮೌನ ಪ್ರೀತಿ. ಅವರಿಬ್ಬರದ್ದೂ ದೈಹಿಕ ಪ್ರೀತಿಯಾಗಿರಲಿಲ್ಲ, ಅದು ನಿಷ್ಕಾಮವಾದ ಪ್ರೀತಿ. ಅವರಿಬ್ಬರು ಸತಿ ಪತಿಗಳಾಗಲಿಲ್ಲ ನಿಜ. ಆದರೆ ಭರತ ಖಂಡದಲ್ಲಿ ಅವರಿಬ್ಬರಷ್ಟು ಮತ್ತಾರು ಪ್ರಸಿಧ್ಧಿಯನ್ನು  ಹೊಂದಲಿಲ್ಲ ಅನ್ನುವುದು ಕೂಡ ಅಷ್ಟೇ ನಿಜ.  ಈಗಲೂ ಕೊಳಲು ಊದುವ ಕೃಷ್ಣ ಪ್ರತಿಮೆ ಕಂಡರೆ, ಅಥವಾ ಯಾರೇ ಕೊಳಲು ಊದುತ್ತಿದ್ದರೆ.. ಮೊದಲು ನೆನಪಾಗುವವಳೇ ರಾಧೆ... ಆಮೇಲೆ ರಾಧಾಕೃಷ್ಣ 😊

                        #ಕೃಷ್ಣಂ_ವಂದೇ_ಜಗದ್ಗುರುಂ 😊🙏🏻
.....................................................................................

#ಕಾಲ್ಪನಿಕ_ಬರಹ
By-Ab pacchu


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ