ನಾಗರ ಪಂಚಮಿ ಮತ್ತು ಅರಶಿನದ ಎಲೆ ಕಡುಬು

 





ತುಳುನಾಡಿನಲ್ಲಿ ದೇವತಾರಾಧನೆಯಷ್ಟೇ ಪ್ರಮುಖವಾದ ಹಾಗೂ ಪ್ರಸಿದ್ಧವಾದ ಇನ್ನೂ ಎರಡೂ ಆಚರಣೆಗಳಿವೆ, ಅವು ಯಾವುದೆಂದರೆ ಭೂತರಾಧನೆ ಮತ್ತು ನಾಗಾರಾಧನೆ.


ನಾಗಾರಾಧನೆ ಎನ್ನುವುದು ಇತರ ಕಡೆಗಿಂತಲೂ ಇಲ್ಲಿ ವಿಶೇಷವಾದದ್ದು.ನಾಗಗಳನ್ನು ಅತೀ  ಪೂಜ್ಯನೀಯ ಭಾವದಿಂದ ನೋಡುವ ಜಾಗ ಇದು.

ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಗಳಂತಹ ದೇವಸ್ಥಾನಗಳು ದೇಶದಲ್ಲಿಯೇ ನಾಗನಿಗೆ ಸಂಬಂಧಿಸಿದಂತೆ ಪ್ರಮುಖ ನಾಗಾರಾಧನೆಯ ಕ್ಷೇತ್ರಗಳಾಗಿವೆ.ದೇಶದ ಮೂಲೆ ಮೂಲೆಯಿಂದಲೂ ನಾಗ ದೋಷ ನಿವಾರಣೆಗಾಗಿ ಇಲ್ಲಿಗೆ ಜನರು ಆಗಮಿಸುತ್ತಾರೆ.

ಹೇಗೆ ಮನುಷ್ಯನ ಸಾವಿನ ನಂತರದ ಅಪರಕರ್ಮ ಕ್ಕೆ ನಮ್ಮಲ್ಲಿ ವಿಶೇಷವಾದ ಮಹತ್ವ ಇದೆಯೋ ಅದೇ ರೀತಿ, ನಮ್ಮ ಕೈಯಿಂದ ಸರ್ಪದ ಹತ್ಯೆ ಆದರೆ, ಇಲ್ಲವೇ ನಮ್ಮಜಾಗದಲ್ಲಿ ಇಲ್ಲ ಎಲ್ಲಿಯೇ ಆದರೂ ಸರ್ಪವೊಂದು ಸತ್ತು ಬಿದ್ದಿರುವುದನ್ನು ನೋಡಿದರೂ ಕೂಡ ಶಾಸ್ತ್ರ ಪ್ರಕಾರವಾಗಿ ಸರ್ಪ ಸಂಸ್ಕಾರ ವನ್ನು ನಮ್ಮ ಜನರು ಭಯ ಭಕ್ತಿಯಿಂದ ಮಾಡುತ್ತಾರೆ,ಮಾತ್ರವಲ್ಲ ಅದೊಂದು ಪುಣ್ಯದ ಕೆಲಸವೆಂದೇ ನಮ್ಮ ಜನರು ತಿಳಿಯುತ್ತಾರೆ.

ನಾಗ ಸಂತಾನಭಿವೃದ್ಧಿಯ ದೇವತೆ ಎಂಬ ಪ್ರತೀತಿ ಇದೆ. ಆಶ್ಲೇಷ ಬಲಿ ಪೂಜೆ ನಾಗ ದೇವರಿಗೆ ಅತೀ ಪ್ರೀಯವಾದದ್ದು. ಅದರೊಂದಿಗೆ ಡಕ್ಕೆ ಬಲಿ, ನಾಗಮಂಡಲದಂತಹ ಸೇವೆಗಳಿಗೂ ಕೂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಪ್ರಾಧಾನ್ಯತೆ  ಪಡೆದುಕೊಂಡಿದೆ.

ಹೇಗೆ ನಮಲ್ಲಿ ಕುಲದೇವರು ಎಂದು ಇರುತ್ತದೆಯೋ ಹಾಗೆಯೇ ಇಲ್ಲಿ ಹೆಚ್ಚಿನ ಎಲ್ಲರಿಗೂ ತಮ್ಮ ತಮ್ಮ ಕುಟುಂಬದ ನಾಗನ ಕ್ಷೇತ್ರಗಳಿರುತ್ತದೆ. ಕೆಲವೊಮ್ಮೆ ಅದು ದೇವಸ್ಥಾನಗಳಾಗಿರುತ್ತದೆ, ಆಲಡೆಯಂತಹ ಆದಿ ಕ್ಷೇತ್ರವಾಗಿರುತ್ತದೆ,ಇಲ್ಲವೇ ಪುರಾತನ ನಾಗಬನವಾಗಿರುತ್ತದೆ.

ನಾಗಬನವೊಂದು ವಿಶಿಷ್ಟವಾದ ಭಕ್ತಿಬಾವದ ತಾಣ.ಇದರಿಂದಾಗಿಯೇ  ನಮಲ್ಲಿ ತಕ್ಕ ಮಟ್ಟಿಗೆ ನಾಗಬನ ಇರುವಲ್ಲಿ ಅಲ್ಪ ಸ್ವಲ್ಪ ಕಾಡು ಉಳಿದಿದೆ ಅಂತ ಹೇಳಿದರೂ ತಪ್ಪಾಗಲಿಕ್ಕಿಲ್ಲ. ನಾಗಬನದೊಳಗಿರುವ ಗಿಡ ಮರಗಳನ್ನು ಹೆಚ್ಚಾಗಿ ಯಾರೂ ಕಡಿಯಲು ಹೋಗುವುದೇ ಇಲ್ಲ. ಮರ ಕೊಂಬೆಗಳು ಒಣಗಿ ಕೆಳಗೆ ಬಿದ್ದರೂ ಕೂಡ ಅದನ್ನು ಹೆಕ್ಕಿ ತಗೊಂಡು ಹೋಗಲಾರರು ನಮ್ಮ ಜನಗಳು.

ಆದರೆ ಕೆಲವು ಕಡೆ  ಆಧುನಿಕತೆಯ ಕಾರಣದಿಂದಾಗಿ , ನಾಗಬನದ ಒಳಗೆ ಕಾಂಕ್ರೀಟೀಕರಣದ ಪ್ರಭಾವ ಹೆಚ್ಚಾಗಿದೆ. ಹೆಚ್ಚಾಗಿ ನಾಗಬನವೊಂದು ನೈಸರ್ಗಿಕವಾಗಿ ಇದ್ದರೆನೇ ಅದು ಚಂದ,ದೇಹಕ್ಕೂ ತಂಪು, ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ ದೇವರ ಸಾನ್ನಿಧ್ಯ ಕೂಡ ನೈಸರ್ಗಿಕ ಬನಗಳಲ್ಲಿಯೇ ಅತಿಯಾಗಿ ಇರುವುದು ಅಂತ ಅನ್ನಿಸುತ್ತದೆ. ಏನೇ ಹೇಳಿ ದೇವರಿಗೆ ಆಡಂಬರ ಬೇಕಾಗಿಲ್ಲ,ದೇವರಿಗೆ ಬೇಕಿರುವುದು ಕೇವಲ ಭಕ್ತಿ ಮಾತ್ರ.ಆಡಂಬರ ಹೆಚ್ಚಾದಂತೆ ಭಕ್ತಿ ಹಾಗೂ ದೇವರ ಸಾನ್ನಿಧ್ಯ ಕಡಿಮೆ ಆಗುವ ಅಪಾಯವೂ ಇದೆ.

ನಾಗನಿಗೆ ನಾಗರ ಪಂಚಮಿ ದಿನ ಹಾಲು ಏರೆಯುವುದು, ಸಿಹಿಯಾಳ ಅಭಿಷೇಕ, ತಂಬಿಲ ಸೇವೆ ಕೊಡುವುದು ಇದೆಲ್ಲಾ ಎಲ್ಲರಿಗೂ ಗೊತ್ತಿರುವ ವಿಷಯವೇ. ತುಳುನಾಡು ಅಂತು ಭಯ ಭಕ್ತಿಯಿಂದ ಈ ಹಬ್ಬವನ್ನು ಎದುರುಗೊಳ್ಳುತ್ತದೆ.

ನಾಗರ ಪಂಚಮಿಗಾಗಿ ಮಾಡಿಕೊಳ್ಳುವ ಸಿದ್ದತೆಯೇ ಅಪಾರವಾದ ಖುಷಿ ನೀಡುತ್ತದೆ.

ಎಷ್ಟೇ ಕಷ್ಟ ಆದರೂ ನಾಗರ ಪಂಚಮಿಗೆ ದನದ ಹಾಲಿನ ಅಭಿಷೇಕವನ್ನೇ ಮಾಡಲು ಜನರು ಬಯಸುತ್ತಾರೆ. ಅದಕ್ಕಾಗಿ ಹಿಂದಿನ ದಿನವೇ ದನದ ಹಾಲು ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿ ನಾಗರ ಪಂಚಮಿ ದಿನ ದನದ ಹಾಲು ಸಿಗುವಂತೆ ನೋಡಿಕೊಳ್ಳುತ್ತಾರೆ.

ಹಳ್ಳಿಯಲ್ಲಿ ಆದರೆ ಮನೆಯಲ್ಲಿ,ಇಲ್ಲವೇ ಇತರರ ಮನೆಯಲ್ಲಿ ದನದ ಹಾಲು ಸಿಕ್ಕೆ ಸಿಗುತ್ತದೆ. ಕೆಲವೊಮ್ಮೆ ಹಾಲಿನ ಡೈರಿ ಗಳು ಕೂಡ ದನದ ಹಸಿ ಹಾಲನ್ನು ಪೂರೈಸುವಲ್ಲಿ ಜನರಿಗೆ ನೆರವಾಗುತ್ತದೆ.

ನಾಗರ ಪಂಚಮಿಯ ದಿನ ಹೆಚ್ಚಾಗಿ  ಫ್ಲವರ್ ಮಾರ್ಕೆಟ್ ನಲ್ಲಿ ಎರಡು ಹೂವುಗಳೇ ಇಲ್ಲಿ  ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. ಒಂದು ಪಿಂಗಾರ(ಹಿಂಗಾರ/ಅಡಿಕೆಯ ಹೂವು), ಇನ್ನೊಂದು ಕೇದಗೆ.

ತುಳುನಾಡಿನಲ್ಲಿ ಈ ಎರಡೂ ಹೂವುಗಳಿಗೆ ವಿಶೇಷವಾದ ಸ್ಥಾನ ಮಾನವಿದೆ. ಹಿಂಗಾರ ಇಲ್ಲಿ ದೈವರಾಧನೆ ಮತ್ತು  ನಾಗರಾಧನೆ ಎರಡರಲ್ಲೂ ಕಂಡು ಬಂದರೆ,ಕೇದಗೆ ನಾಗರ ಪಂಚಮಿಯಂದೇ ಅತಿಯಾಗಿ ಬಳಕೆಯಾಗುತ್ತದೆ.ಅದೇ ರೀತಿ ಈ ದಿನದಂದೇ ಇಲ್ಲಿ  ಅತಿಯಾಗಿ ಬೊಂಡ( ಎಳನೀರು) ಕೂಡ  ಮಾರುಕಟ್ಟೆಯಲ್ಲಿ ಕಂಡುಬರುವುದು, ಅದರಲ್ಲೂ ಗೆಂದಾಳೆ(ಆರೆಂಜ್ ಬಣ್ಣದ್ದು) ಬೊಂಡವೇ ಅಧಿಕವಾಗಿ ಕಂಡು ಬರುತ್ತದೆ.

ತುಳುನಾಡಿನಲ್ಲಿ ಆಚರಿಸುವ ಎಲ್ಲಾ ಹಬ್ಬಗಳಲ್ಲಿಯೂ  ಒಂದೊಂದು ತಿನಿಸುಗಳು ಇಲ್ಲಿ ಬೆಸೆದುಕೊಂಡಿರುವುದು ಇಲ್ಲಿಯ ವಿಶೇಷತೆ. ಕೇವಲ ತಿನಿಸಿನ ಹೆಸರು ಹೇಳಿ ಬಿಟ್ಟರೆ ಸಾಕು ಅದು ಯಾವ ಹಬ್ಬ ಎಂದು ಹೇಳಿಬಿಡಬಹುದು.

ಆಟಿ ಅಮಾವಾಸ್ಯೆಗೆ ಇಲ್ಲಿ ಕಷಾಯದ ಜೊತೆ ಮೆಂತೆ ಗಂಜಿ/ಪಾಯಸ ವಿಶೇಷ. ಅಷ್ಟಮಿ- ಚೌತಿಗೆ  ಮೂಡೆ ಕೊಟ್ಟಿಗೆ ಗಳು ವಿಶೇಷವಾಗಿರುತ್ತದೆ, ದೀಪಾವಳಿಗೆ ಉದ್ದಿನ ದೋಸೆ,ಗೋ ಪೂಜೆಗೆ ಸಪ್ಪೆ ಕಡಬು, ಕೆಡ್ಡೆಸ(ತುಳುವರ ಭೂಮಿ ಪೂಜೆ) ಕ್ಕೆ ಕುಡುವರಿ(ಹುರಿದ ಹುರುಳಿ ಅಕ್ಕಿ),ಆಷಾಡ ಮಾಸದಲ್ಲಿ ಪತ್ರೋಡೆ, ಪುದ್ದರ್ (ಹೊಸ ಅಕ್ಕಿ ಊಟ) ಗೆ ತೇವು ಪದ್ಪೆ(ಕೆಸು ಹಾಗೂ ಹರಿವೆ)ಪದಾರ್ಥ .. ಹೀಗೆ ಒಂದೊಂದು ಹಬ್ಬಕ್ಕೆ,ಒಂದೊಂದು ಮಾಸಕ್ಕೆ ಇಲ್ಲಿ ಒಂದೊಂದು ವಿಶಿಷ್ಟವಾದ ತಿನಿಸುಗಳಿವೆ.ಆ ಹಬ್ಬ ಬಂತೆಂದರೆ ಅದಕ್ಕೆ ಸಂಬಂಧ ಪಟ್ಟ  ತಿನಿಸುಗಳನ್ನು ಮಾಡಿ ಸವಿದರೆನೇ ಇಲ್ಲಿಯವರಿಗೆ ಸಮಾಧಾನ.

ತುಳುನಾಡಿನಲ್ಲಿ ನೈಸರ್ಗಿಕವಾಗಿ ಸಿಗುವ ಹಲವಾರು ಗಿಡಮರಗಳ ಎಲೆಯನ್ನೇ ಬಳಸಿ ಕಡುಬು ಮಾಡುವುದು ವಿಶೇಷತೆ. ಹೆಚ್ಚಾಗಿ ಬಾಳೆ ಎಲೆ, ಉಪ್ಪಳಿಗೆ, ಗೋಳಿ,ಹಲಸು, ಹೆಬ್ಬಲಸು, ಪೊನ್ನೆ, ತೆಕ್ಕಿ, ಗೋ ಸಂಪಿಗೆ,ಪೊಂಗರ್.. ಹೀಗೆ ಇಲ್ಲಿಯೇ ಸಿಗುವ ಹಲವು ವಿಧದ ಎಲೆಗಳಿಂದ ಹಬೆಯಲ್ಲಿ ಬೇಯಿಸಿದ  ಎಲೆ ಕಡುಬು ಮಾಡುತ್ತಾರೆ. ಎಲೆಗಳ ಸಾರ, ಆ ಪರಿಮಳವು ಕೂಡ ಆ ಕಡುಬುಗಳಲ್ಲಿ ಸೇರಿಕೊಂಡು ಅದೊಂದು ಆರೋಗ್ಯಕರವಾದ ಕಡುಬು ಆಗಿರುತ್ತದೆ. ಅದೇ ರೀತಿ ಹೆಚ್ಚಿನವರಿಗೆ ರುಚಿಯಾದ ಹಲಸಿನ ಕಡುಬು ಗೊತ್ತೇ ಇದೆ.ಇದನ್ನು ಹಾಗೇ ತಿನ್ನಬಹುದು  ಇಲ್ಲವೇ ಜೇನಿನಲ್ಲಿ ಅದ್ದಿ ಕೂಡ ತಿನ್ನಬಹುದು.

ಆದರೆ ಈ ಒಂದು ಎಲೆ  ಕಡುಬು ಇದೆಯಲ್ಲಾ ಅದನ್ನು ಮಾತ್ರ ಕಡುಬುಗಳ ರಾಜ ಎಂದೇ ಹೇಳಬಹುದು. ಅದುವೇ ಅರಶಿನದ ಎಲೆಯ ಸಿಹಿ ಕಡುಬು ☺️😋

ನಾಗರ ಪಂಚಮಿ ಹಬ್ಬ ಬಂತೆಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನವರು ಯಥೇಚ್ಛವಾಗಿ ಮಾಡುವ ತಿಂಡಿ ಎಂದರೆ ಅದು "ಮಂಜಲ್ ದ ಇರೆತ ಗಟ್ಟಿ" ಯೇ  ಅಂದರೆ ಅದೇ  "ಅರಿಶಿನದ ಎಲೆಯ ಸಿಹಿ ಕಡುಬು".

ಹೇಗೆ ಪಿಂಗಾರ, ಕೇದಗೆಗಳು ನಾಗರ ಪಂಚಮಿಯ ದಿನ  ಮಾರ್ಕೆಟ್ ನಲ್ಲಿ ಯಥೇಚ್ಛವಾಗಿ ಕಾಣಲು ಸಿಗುತ್ತದೆಯೋ ಅದೇ ರೀತಿ ಅರಶಿನದ ಎಲೆಯ ಕಟ್ಟುಗಳೂ ಕೂಡ ನಮಗೆ ಹಿಂದಿನ ದಿನವೇ ಮಾರುಕಟ್ಟೆಯಲ್ಲಿ ಕಣ್ಣಿಗೆ ಬೀಳುತ್ತದೆ. ಇಪ್ಪತ್ತೈದು ಎಲೆಗಳ ಕಟ್ಟಿಗೆ 50 ರಿಂದ 60 ರೂಪಾಯಿವರೆಗೂ ಇರುತ್ತದೆ.
ಆದರೆ ಹಳ್ಳಿಗಳಲ್ಲಿ ಆದರೆ ಹೆಚ್ಚಾಗಿ ಎಲ್ಲರ ಮನೆಯಲ್ಲೂ  ಹಿತ್ತಲಲ್ಲಿ  ಕನಿಷ್ಟ ಪಕ್ಷ ಹತ್ತು ಹದಿನೈದು ಅರಶಿನದ ಗಿಡಗಳು ಇದ್ದೇ ಇರುತ್ತದೆ.

ಅರಶಿನದ ಎಲೆಯ ಸುವಾಸನೆಯೇ ಅದ್ಭುತವಾದದ್ದು. ಮನೆಯ ಹಿತ್ತಿಲಿನಲ್ಲಿ ಇಲ್ಲವೇ ತೋಟದಲ್ಲಿ ಇರುವ ಅರಶಿನದ ಎಲೆಯನ್ನು  ಮನೆಗೆ ತರುವಾಗ ಅದರ ಎಲೆಯನ್ನು ಒಂದು ಚೂರೇ ಹರಿದು ಹಾಗೇ ಮೂಗಿನ ಬಳಿಗೆ ತಂದು ಅದರ ಪರಿಮಳವನ್ನು  ಆಘ್ರಾಣಿಸುವ ಸುಖವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ಆ ವಿಶಿಷ್ಟ ಅನುಭವವನ್ನು ಅನುಭವಿಸಿಯೇ ತೀರಬೇಕು. ಅಂತಹ ಸುಗಂಧ ಅರಶಿನದ  ಎಲೆಯದ್ದು.

ಬೇರೆ ಎಲ್ಲಾ ಕಡುಬುಗಳನ್ನು ನಾವು ವರ್ಷದ ಹೆಚ್ಚಿನ ಎಲ್ಲಾ ದಿನಗಳಲ್ಲೂ ಮಾಡಿ ಕೊಳ್ಳಬಹುದು ಆದರೆ ಅರಶಿನದ ಕಡಬು ಮಾಡಲು ನೀವು ಮಳೆಗಾಲಕ್ಕೆನೇ ಕಾಯಬೇಕು,ಹೇಗೆ ನಾವು ಮರಕೆಸುವಿನ ಪತ್ರೋಡೆಗಾಗಿ ಕಾಯಬೇಕೋ ಹಾಗೆ.
ಮಳೆ ಬಿದ್ದೊಡನೆ ಅಷ್ಟರವರೆಗೆ ಹಿತ್ತಲಲ್ಲಿ, ತೋಟದಲ್ಲಿ ಮಣ್ಣಿನ ಅಡಿಯಲ್ಲಿ ಬೆಚ್ಚಗೆ ಮಲಗಿರುವ ಅರಶಿನದ ಗಡ್ಡೆಗಳಿಂದ ಅರಶಿನದ ಗಿಡವೂ ನಿಧಾನವಾಗಿ ಚಿಗುರಲು ಆರಂಭಿಸುತ್ತದೆ. ಉದ್ದಕ್ಕೆ ಬೆಳೆಯುವ ಈ ಎಲೆ ಸಾಕಷ್ಟು ದೊಡ್ಡದು ಆದಾಗ ಅರಶಿನದ ಎಲೆಯ ಸಿಹಿ ಕಡುಬಿನ ಆಸೆ ನಮ್ಮಲ್ಲಿ ನಿಧಾನವಾಗಿ ಗರಿಗೆದರುತ್ತದೆ.ಮತ್ತು ಅದನ್ನು ತಿನ್ನಲು ಒದಗುವ ಸಕಾಲ ಎಂದರೆ ಅದು ನಮ್ಮ ಈ ನಾಗರ ಪಂಚಮಿ ಹಬ್ಬವೇ.

ಹೆಚ್ಚಾಗಿ ನಮ್ಮಲ್ಲಿ ಬೇರೆ ಎಲೆಗಳ ಕಡುಬುಗಳಲ್ಲಿ ಸಪ್ಪೆ ಗಟ್ಟಿ (ಕಡುಬು) ಮಾಡಿದರೆ ಅರಶಿನದ ಎಲೆಯಲ್ಲಿ ಸಿಹಿ ಕಡುಬು ಅನ್ನೇ ಮಾಡುತ್ತಾರೆ. ಅರಶಿಣದ ಎಲೆಯ ಮೇಲೆ ಗಟ್ಟಿಯಾಗಿ  ರುಬ್ಬಿದ ಅಕ್ಕಿ ಹಿಟ್ಟನ್ನು ತೆಳುವಾಗಿ ಸವರಿ, ಅದರ ಮೇಲೆ ಬೆಲ್ಲ, ತೆಂಗಿನತುರಿ ಗಳ ಸಿಹಿ ಹೂರಣವನ್ನು ಇಟ್ಟು, ಎಲೆಯನ್ನು ಮಧ್ಯದಿಂದ ಮಡಚಿ, ಇಡ್ಲಿ ಪಾತ್ರೆಯಲ್ಲಿಟ್ಟು ಹಾಗೇ  ಹಬೆಯಲ್ಲಿ ಬೇಯಿಸಿದರೆ ರುಚಿ ರುಚಿಯಾದ ಅರಶಿನದ ಎಲೆಯ ಕಡುಬು ಸವಿಯಲು ಸಿದ್ದವಾಗಿರುತ್ತದೆ😋

ಅದು ಬೆಂದ ನಂತರ ಹಾಗೇ ಇಡ್ಲಿ ಪಾತ್ರೆಯ ಬಾಯಿಯನ್ನೊಮ್ಮೆ  ತೆಗೆದಾಗ, ಅರಶಿನದ ಎಲೆಯ ಅದೊಂದು ಪರಿಮಳ ಮನೆಯ ತುಂಬೆಲ್ಲಾ ಹಾಗೇ ಅವರಿಸಿಕೊಳ್ಳುತ್ತದೆಯಲ್ಲಾ.. ಅದರಲ್ಲಿಯೇ ಅರ್ಧ ಹೊಟ್ಟೆ ತುಂಬಿಕೊಂಡು ಬಿಡುತ್ತದೆ, ಜಿಹ್ವಾ ಚಾಪಲ್ಯವನ್ನು  ಮತ್ತಷ್ಟು ಹೆಚ್ಚಾಗುವಂತೆ ಮಾಡಿ ಬಿಡುತ್ತದೆ ಅದು. ಇಂತಹ ಅನುಭೂತಿ ಬೇರೆ ಯಾವುದೇ ಎಲೆ ಕಡುಬು ನೀಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಹೇಳಿದ್ದು ಅರಶಿನದ ಎಲೆ ಕಡುಬು, ಎಲ್ಲಾ ಎಲೆ ಕಡುಬುಗಳ ರಾಜ ಎಂದು.

ಕೇವಲ ಎಲೆ ಮಾತ್ರವಲ್ಲ, ಅರಶಿನವನ್ನು ಬಿಟ್ಟು ನಾಗರ ಪಂಚಮಿ, ನಾಗಾರಾಧನೆಯೂ ಕೂಡ ಇಲ್ಲ ಎನ್ನುವಷ್ಟರ ಸಂಬಂಧ ಇವೆರಡರದ್ದು. ಎಲ್ಲರಿಗೂ ಗೊತ್ತಿರುವಂತೆ ಅರಶಿನದ ಹುಡಿಯೇ ನಾಗಾರಾಧನೆಗೆ ಅತೀ ಪ್ರಮುಖವಾಗಿ,ಅತೀ ಹೆಚ್ಚಾಗಿ ಬಳಕೆಯಾಗಲ್ಪಡುವುದು 💛.

ಸಧ್ಯಕ್ಕೆ ಕೊರೋನ ದಿಂದಾಗಿ ನಾಗರ ಪಂಚಮಿ ಹಬ್ಬದ  ಆಚರಣೆಗೆ ಅಡಚಣೆ ಆಗಿದೆ.ನಾಗರ ಪಂಚಮಿ ದಿನ ನಮ್ಮ ನಮ್ಮ ಕುಟುಂಬದ  ನಾಗ ದೇವರಿಗೆ ತನು, ತಂಬಿಲ ಸೇವೆ ನೀಡುವುದಕ್ಕಾಗಿ ಕೈಯಲ್ಲೊಂದು  ಗೆಂದಾಳಿ ಬೊಂಡ,ದನದ ಹಸಿ ಹಾಲು, ಅರಶಿನ ಹುಡಿ,ತುಪ್ಪ, ಜೇನು ತುಪ್ಪ, ಅರಳು,ಒಂದಚ್ಚು ಬೆಲ್ಲ, ಪರಿಮಳದ ಕೇದಗೆ - ಪಿಂಗಾರ ಹೂವುಗಳೊಂದಿಗೆ ಭಯ ಭಕ್ತಿಯಿಂದ ನಾಗ ಬನಕ್ಕೆ ಹೋಗುತ್ತಿದ್ದುದ್ದು ಇಂದು ಯಾಕೋ ಅತೀವ ನೆನಪಾಗುತ್ತಿದೆ.

ವರ್ಷಕ್ಕೊಮ್ಮೆ ಬರುವ ನಾಗರ ಪಂಚಮಿಗಾಗಿ ಮಾಡಿಕೊಳ್ಳುವ ಸಿದ್ದತೆಗಳನ್ನು ನಾವೆಲ್ಲರೂ ಮಿಸ್ ಮಾಡಿ ಕೊಳ್ಳುತ್ತಿದ್ದೆವೆ. ಆದರೂ ಪರವಾಗಿಲ್ಲ ಭಕ್ತಿ ಎಂದಿನಂತೆ ಮನದಲ್ಲಿ ಸದಾ ಇರಲಿ,ಭಗವದ್ಭಕ್ತರಲ್ಲಿ ಇರುತ್ತದೆ ಕೂಡ.ಎಲ್ಲರಿಗೂ ನಾಗದೇವರು ಒಳ್ಳೆಯದು ಮಾಡಲಿ, ನಾಗಬನಕ್ಕೆ ಹೋಗಿ ನಾಗರ ಪಂಚಮಿ ಆಚರಿಸಲು ಕಷ್ಟವಾಗಿರಬಹುದು.. ಆದರೂ ಎಂದಿನಂತೆ ಅರಶಿನದ ಎಲೆ ಸಿಗುವಂತಿದ್ದರೆ.. ಅರಶಿನದ ಎಲೆ ಕಡುಬು ಮಾಡಿ ಅದರ ಸ್ವಾದದಲ್ಲಿ,ಆ ಪರಿಮಳದಲ್ಲಿ.. ಹಬ್ಬದ ನೆನಪನ್ನು ತಕ್ಕ ಮಟ್ಟಿಗೆ ಸಿಹಿಯಾಗಿಸೋಣ 💛💛☺️🙏

.....................................................................................

Ab Pacchu
Moodubidire


Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!