ಅಮ್ಮ ಹಾಕಿಸಿದೊಂದು ಹಚ್ಚೆ
ನನ್ನ ಅಮ್ಮ ಅಂತಹ ಅದ್ಭುತ ಹಾಡುಗಾರ್ತಿ ಏನಲ್ಲ. ಆದರೂ ಹಾಡುತ್ತಿದ್ದಳು,ಬರೀ ನನಗಾಗಿ..
ಅವಳು ಹಾಡುತ್ತಿದ್ದುದ್ದು ನನ್ನ ಖುಷಿಗಾಗಿ ಕೂಡ ಅಲ್ಲ, ನನ್ನ ಹಸಿವೆಗಾಗಿ!
ಎಷ್ಟೋ ಸಲ ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಅಮ್ಮ ಹಾಡುತ್ತಿದ್ದಳು.ಅವಳ ಆ ಹಾಡಿನ ರಾಗ ನನ್ನ ಹೊಟ್ಟೆ ತುಂಬಿಸುತ್ತಿತ್ತು. ನಾನು ಹಾಗೇ ನಿದ್ದೆಗೆ ಜಾರುತ್ತಿದ್ದೆ.ನನ್ನೊಟ್ಟಿಗೆ ಅಮ್ಮನೂ ಕೂಡ ಖಾಲಿ ಹೊಟ್ಟೆಯಲ್ಲಿಯೇ ನಿದ್ದೆಗೆ ಜಾರುತ್ತಿದ್ದಳು.
ಅವಳಿಗೆ ಗೊತ್ತಿದದ್ದು ಒಂದೇ ಹಾಡು, ಹಾಡು ಅಲ್ಲ ಅದು ಭಾವಗೀತೆ. ಅದು ಕೂಡ ಕೇವಲ ನಾಲ್ಕು ಸಾಲುಗಳು ಅಷ್ಟೇ.
"ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..
ಮಿಡುಕಾಡುತಿರುವೆ ನಾನು,
ಕಡಿಯಲೋಲ್ಲೆ ನೀ ಕರುಳ ಬಳ್ಳಿ.. ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ.."
ಬಹುಶಃ ನನ್ನ ಅಮ್ಮನಿಗೆ ಅವಳ ಅಮ್ಮ ಅಂದರೆ ತುಂಬಾ ಇಷ್ಟ ಇರಬೇಕು,ಅದಕ್ಕಾಗಿ ಈ ಗೀತೆ ಹಾಡುತ್ತಿದ್ದಳೋ ಏನೋ ಗೊತ್ತಿಲ್ಲ..
ಈ ಹಾಡನ್ನು ಎಲ್ಲಿಂದ ಕಲಿತಳೋ ಅದು ಕೂಡ ಗೊತ್ತಿಲ್ಲ. ಶಾಲೆಗೂ ಹೋಗದ ನನ್ನ ಅಮ್ಮ ಬಹುಶಃ ಎಲ್ಲೋ ಇದನ್ನು ನಿರಂತರವಾಗಿ ಕೇಳಿಸಿಕೊಂಡು,ಹಾಗೇ ಹಾಡಿ ಹಾಡಿ ಕಂಠ ಪಾಠ ಆಗಿ,ಈ ಹಾಡೊಂದು ಅವಳ ಆಸ್ತಿ ಆಗಿ,ಹಾಗೇ ಅವಳಲ್ಲಿ ಉಳಿದು ಹೋಯಿತೋ ಏನೋ ಗೊತ್ತಿಲ್ಲ
ನಾವು ಕಡು ಬಡವರು. ನಾನು ಹುಟ್ಟುವಾಗ ಕಿತ್ತು ತಿನ್ನುವ ಬಡತನವೇ ಕಣ್ಣ ಮುಂದೆ ಇತ್ತು. ಮೂರ್ನಾಲ್ಕು ಮಕ್ಕಳು ಅಮ್ಮನ ಹೊಟ್ಟೆಯಲ್ಲೇ ಸತ್ತು,ಕೊನೆಯಲ್ಲಿ ಹುಟ್ಟಿದವ ನಾನಂತೆ!
ಸರಿಯಾಗಿ ತಿನ್ನಲಿಕ್ಕೂ ಇರದಿದ್ದರೆ, ಹೊಟ್ಟೆಯಲ್ಲೊಂದು ಆರೋಗ್ಯವಂತ ಕುಡಿ ಮೊಳಕೆಯೊಡೆಯುವುದಾದರೂ ಹೇಗೆ?
ಅಮ್ಮ ಬದುಕಿದ್ದೇ ಹೆಚ್ಚು!
ನಾವು ಬಾಡಿಗೆ ಮನೆಯಲ್ಲಿ ಇದ್ದೆವು. ಮನೆ ಅಲ್ಲ,ಅದು ಹರಕಲು ಜೋಪಡಿ. ಅಪ್ಪ ಎಂಬ ಜನ್ಮದಾತ ಕುಡಿಯುವುದು ಬಿಟ್ಟು ಬೇರೆ ಏನೂ ಕೆಲಸ ಮಾಡುತ್ತಿರಲಿಲ್ಲ. ಆತ ಮನೆಯಲ್ಲಿ ಇದ್ದುದನ್ನೇ ನೋಡಿರಲಿಲ್ಲ ನಾನು!
ತುಂಬಾ ಫ್ರೀ ಇದ್ದೇನೆ ಅಂತ ಅವನಿಗೆ ಅನ್ನಿಸಿದಾಗ,ಮನೆಗೆ ಬಂದು ಅಮ್ಮನಿಗೆ ಸರಿಯಾಗಿ ಹೊಡೆದು ಹೋಗುತ್ತಿದ್ದ! ಅವನಿಗೆ ಅಮ್ಮನಿಗೆ ಹೊಡೆಯಲು ಬಡಿಯಲು ಕಾರಣಗಳು ಬೇಕಿರಲಿಲ್ಲ. ಅವನಿಗೆ ಕುಡಿಯಲು ಸಾಕಾಗುವಷ್ಟು ಹಣ ಒಂದು ಸಿಕ್ಕಿಬಿಟ್ಟರೆ ಸಾಕು ಅಷ್ಟೇ..
ಅಮ್ಮ ನನಗೆಂದು ಮಾಡಿಟ್ಟ ಗಂಜಿ ಯನ್ನು ಕೂಡ ಒಬ್ಬನೇ ತಿಂದು ಪಾತ್ರೆ ಖಾಲಿ ಮಾಡಿ ಹೋಗುತ್ತಿದ್ದ. ಆದರೂ ಅಮ್ಮ ಅವನಿಗೆ ಯಾವುದೇ ಪ್ರತಿರೋಧ ತೋರುತ್ತಿರಲಿಲ್ಲ. ಅವಳು ಕನಿಷ್ಟ ಪಕ್ಷ ಅವನಿಗೆ ಬೈದುದನ್ನು ಕೂಡ ನಾನು ಎಂದಿಗೂ ನೋಡಿಲ್ಲ!
ನಮ್ಮ ಮನೆಯಲ್ಲಿ ಹೆಚ್ಚಾಗಿ ನಾವಿಬ್ಬರೇ ಇರುತ್ತಿದ್ದೆವು.ಇದ್ದಾಗ ಏನಾದರೂ ಮಾಡಿ ಅಮ್ಮ ಬಡಿಸಿ ಹಾಕುತ್ತಿದ್ದಳು.ಏನೂ ಇಲ್ಲದೇ ಇದ್ದಾಗ ಅಮ್ಮನ ಇಂಪಾದ ರಾಗ ಹೊಟ್ಟೆ ಮೈ ಮನಸ್ಸು ಎಲ್ಲವನ್ನೂ ತುಂಬಿಸುತ್ತಿತ್ತು.
ಅಮ್ಮ ನನ್ನನ್ನು ಒಮ್ಮೊಮ್ಮೆ "ಪುರು" ಎಂದು ಕರೆಯುತ್ತಿದ್ದಳು, ಇನ್ನೊಮ್ಮೆ "ರಾಗು" ಎಂದು ಕರೆಯುತ್ತಿದ್ದಳು.
ಆದರೆ ಅದು ಎರಡೂ ನನ್ನ ಹೆಸರಿನ ಅರ್ಧ ಹೆಸರುಗಳು. ನನ್ನ ಪೂರ್ಣ ಹೆಸರು ಅದಲ್ಲ.ನನ್ನ ಹೆಸರು ಪುಷ್ಯರಾಗ.
ನಮಗೆಲ್ಲ ನಾಮಕರಣ ಮಾಡುವವರು ಯಾರು. ಹುಟ್ಟಿದ ಎಷ್ಟೋ ದಿನ ಆದ ನಂತರ ಅಮ್ಮ ಪಕ್ಕದ ಭಟ್ಟರ ಮನೆಗೆ ಹೋದಳಂತೆ.
ಅವಳಿಗೆ ನಾನು ಹುಟ್ಟಿದ ದಿನ, ಸಮಯ ಎಲ್ಲಾ ಚೆನ್ನಾಗಿಯೇ ನೆನಪಿತ್ತು. ಅವಳ ಹೊಟ್ಟೆಯಲ್ಲಿ ಹುಟ್ಟಿದ ಜೀವಂತ ಕೂಸು ಅಂತ ಒಂದು ಇದ್ದರೆ,ಅದು ನಾನೇ ಅಲ್ಲವೇ, ಹೇಗೆ ಮರೆಯುತ್ತಾಳೆ..
ಬಡತನದ ಬಾಳಿನಲ್ಲಿ ಅವಳಿಗೊಂದು ಸಡಗರದ ಉತ್ಸವ ತಂದುಕೊಟ್ಟವ ನಾನು. ಮೆರವಣಿಗೆ ಇಲ್ಲ, ಜಾತ್ರೆ ಇಲ್ಲ, ಜನರಿಲ್ಲ,ಅಬ್ಬರವಿಲ್ಲ... ಆದರೂ ಅವಳ ಪ್ರೀತಿಯ ನಿಷ್ಕಪಟ ನಿತ್ಯ ಪೂಜೆ ಒಂದು ದಿನವೂ ನಿಂತು ಹೋಗಿರಲಿಲ್ಲ.
ಅವಳ ಪಾಲಿಗೆ ನಾನೇ ಈ ಜಗತ್ತು. ನನ್ನ ಪಾಲಿಗೆ ಜಗತ್ತು, ದೇವರು ಎಲ್ಲಾ ಅವಳೇ. ಅಮ್ಮ ಎನ್ನುವ ಜೀವದಲ್ಲಿ ಅದೆಂತಹ ದಿವ್ಯ ಚೈತನ್ಯವನ್ನು ಆ ಭಗವಂತ ತುಂಬಿಸಿಟ್ಟನೋ ಅದು ಅವನಿಗೆ ಮಾತ್ರ ಗೊತ್ತು. ಬಹುಶಃ ಎಲ್ಲಾ ಕಡೆ ಅವನ ಅಸ್ತಿತ್ವ ಸಾಧ್ಯವಿಲ್ಲ ಅಲ್ವಾ.ಅದಕ್ಕಾಗಿ ಇರಬಹುದು.
ಭಟ್ಟರ ಬಳಿಗೆ ನನ್ನ ಜನ್ಮ ದಿನಾಂಕ, ಸಮಯ ಎಲ್ಲವನ್ನು ಮತ್ತೆ ಮತ್ತೆ ಮನಸ್ಸಿನಲ್ಲಿಯೇ ನೆನಪು ಮಾಡಿಕೊಂಡು ಹೋದ ಅಮ್ಮ ಹೀಗೆ ಹೇಳಿದ್ದಳು -
"ಭಟ್ರೆ ನಾವು ಬಡವರು, ಆದರೂ ನನ್ನ ಮಗನ ಹೆಸರು ಮಾತ್ರ ಬಡವಾಗಿರುವುದು ಬೇಡ ಅಂತ ನನ್ನ ಆಸೆ. ನನಗೆ ಒಪ್ಪುವ, ಯಾರಿಗೂ ಇರದಷ್ಟು ಚಂದದ ಒಂದು ಹೆಸರು ಸೂಚಿಸಿ ನನ್ನ ಮಗನಿಗೆ .." ಅಂತ ಕೇಳಿಕೊಂಡಾಗ, ಭಟ್ಟರು ತುಂಬಾ ಯೋಚಿಸಿ ಹೇಳಿದ ಹೆಸರು "ಪುಷ್ಯರಾಗ" ಎಂದು.
ಅಮ್ಮನಿಗೆ ಅದನ್ನು ಹೇಳಲು ಕೂಡ ಬರುತ್ತಿರಲಿಲ್ಲ. ಅದಕ್ಕಾಗಿ ಒಂದು ಕಾಗದದಲ್ಲಿ ಆ ಹೆಸರು ಬರೆದುಕೊಂಡು ಬಂದು ಜೋಪಾನವಾಗಿ ಬಂಗಾರದಂತೆ ಮನೆಯಲ್ಲಿ ಒಂದು ಕಡೆ ಎತ್ತಿಟ್ಟಿದ್ದಳು.
ಅವಳಿಗೆ ಅದನ್ನು ಪೂರ್ತಿಯಾಗಿ ಕರೆಯಲು ಕಷ್ಟವಾಗುತ್ತಿತ್ತು. ಪುಷ್ಯ ಹೋಗಿ ಪುರು ಆಯಿತು... ರಾಗ ಹೋಗಿ ರಾಗು ಆಯಿತು. ಮನಸ್ಸಿಗೆ ಬಂದಂತೆ ಒಮ್ಮೊಮ್ಮೆ ಪುರು ಎಂದು ಕರೆದರೆ, ಇನ್ನು ಕೆಲವೊಮ್ಮೆ ರಾಗು ಎಂದು ಕರೆದಳು. ಎಷ್ಟಾದರೂ ಅಮ್ಮ ಅಲ್ಲವೇ,ಅವಳು ಹೇಗೆ ಕರೆದರು ಚಂದವೇ...
ಒಂದು ದಿನ ಅಮ್ಮನಿಗೆ ಕೇಳಿದೆ - ಅಮ್ಮಾ ಎಲ್ಲಾ ಹೆಸರುಗಳಿಗೆ ಅರ್ಥ ಇರುತ್ತದೆಯೇ..
ಹೌದು ಪುರು.. ಅಂದಳು.
ಹಾಗಾದರೆ ನನ್ನ ಹೆಸರಿನ ಅರ್ಥ ಏನು?
ಅದು ನನಗೂ ಗೊತ್ತಿಲ್ಲ ಕಂದಾ,ನೀನು ಪುಷ್ಯ ನಕ್ಷತ್ರದಲ್ಲಿ ಹುಟ್ಟಿದವ ಎಂದು, ಬಹುಶಃ ಆ ಹೆಸರು ಸೂಚಿಸಿದರು ಭಟ್ರು. ನಾನು ನಿನಗಾಗಿ ರಾಗವಾಗಿ ಹಾಡುವುದು ಅವರಿಗೂ ಗೊತ್ತಲ್ಲವೇ.. ಹಾಗಾಗಿ ವಿಶಿಷ್ಟವಾಗಿ ಇರಲಿ ಎಂದು, ನನ್ನ ರಾಗದ ಮಗುವೇ ನೀನೆಂದು.. ಈ ಪುಷ್ಯರಾಗ ಹೆಸರು ಸೂಚಿಸಿರಬಹುದು. ಯಾಕೇ ಹೆಸರು ಇಷ್ಟ ಆಗಲಿಲ್ಲವೇ?
ನಿನಗೆ ಇಷ್ಟ ಆಯಿತಾ ಅಮ್ಮ...
ನೀನಿಲ್ಲದೆ ನನಗೆ ಬೇರೆನಿದೆ ಮಗುವೇ...ನಿನಗೆ ಸಂಬಂಧಿಸಿದ ಎಲ್ಲವೂ ಇಷ್ಟವೇ
ನಿನಗೂ ಇಷ್ಟ ಆದರೆ ನನಗೂ ಇಷ್ಟ ಅಮ್ಮ.. ಅಂದೆ.
ಅವಳು ನಕ್ಕಳು..ಹಸಿವು ನೀಗಿಸುವ ನಗು,ನೋವು ಮಾಯವಾಗಿಸುವ ನಗು ಅವಳದ್ದು.
ಅಮ್ಮ ನನ್ನ ಹೆಸರಿಗೆ ಬರೀ ನಿನ್ನ ಯೋಚನೆಯ,ನಿನ್ನ ಕಲ್ಪನೆಯ ಅರ್ಥ ಮಾತ್ರ ಇರುವುದೇ.. ಇನ್ನೊಮ್ಮೆ ಕೇಳಿದೆ.
ಇಲ್ಲ ಪುರು, ಅದು ಯಾವುದೋ ನವರತ್ನದ ಒಂಬತ್ತು ರತ್ನಗಳಲ್ಲಿ ಇದು ಕೂಡ ಒಂದು ವಿಧದ ರತ್ನವಂತೆ, ಹಳದಿ ಬಣ್ಣ ಹಾಗೂ ಇನ್ನೂ ಮೂರ್ನಾಲ್ಕು ಬಣ್ಣಗಳಲ್ಲಿ ಇದು ಸಿಗುವುದಂತೆ,ಬಂಗಾರದ ಬಣ್ಣದಲ್ಲಿ ಹೊಳೆಯುವ ಪುಷ್ಯರಾಗ ಕ್ಕೆ ಕನಕ ಪುಷ್ಯರಾಗ ಎಂದು ಹೆಸರಂತೆ..ಗುರು ಗ್ರಹ ಇದರ ಅಧಿಪತಿ ಅಂತೆ... ಹಾಗಂತ ಭಟ್ಟರು ಹೇಳಿದರು.
ಹಾಗಾದರೆ ನನಗದು ಬೇಕು, ನನಗೆ ಆ ರತ್ನ ತೆಗೆಸಿಕೊಡಮ್ಮಾ...
ಇಲ್ಲ ಪುರು, ಜೀವನದಲ್ಲಿ ಯಾವತ್ತೂ ನೀನು ಅಂತಹ ಯಾವುದೇ ಮಣಿ,ರತ್ನ ಗಳಿಗಾಗಿ ಸಂಪತ್ತಿಗಾಗಿ ಹಪಹಪಿಸಬೇಡ,ಆಸೆ ಇಟ್ಟುಕೊಳ್ಳಬೇಡ. ಬದಲಾಗಿ ನೀನೇ ಹೊಳೆಯುವ ಮಣಿಯಂತೆ ಏನಾದರೂ ಸಾದಿಸಿ ತೋರಿಸು,ಆಗ ನಿನ್ನ ಹೆಸರಿಗೂ ಅರ್ಥ ಬರುವುದು.
ಒಂದು ದಿನ ಊರಿನ ಜಾತ್ರೆ ಬಂದಿತು. ಅಮ್ಮ ನನ್ನನ್ನು ಕರೆದುಕೊಂಡು ಹೋದಳು.
ಅಲ್ಲೊಬ್ಬಳು ಅಜ್ಜಿ ಎಲ್ಲರಿಗೂ ಹಚ್ಚೆ ಹಾಕುತ್ತಿದ್ದಳು.
ಅಮ್ಮ ಅವಳ ಕೈಗೂ ಒಂದು ಹಚ್ಚೆ ಹಾಕೆಂದು ಅಜ್ಜಿಗೆ ಕೈ ನೀಡಿದಳು.
ಅಜ್ಜಿ ಕೇಳಿದಳು ಏನೆಂದು ಬರೆಯಲಿ, ಏನೆಂದು ಚಿತ್ರಿಸಲಿ..
ಅಮ್ಮ ಹೇಳಿದಳು ಚಿತ್ರ ಬೇಡ, ಹೆಸರು ಬರೆ..
ಏನು ಹೆಸರು?
ಪುಷ್ಯರಾಗ...
ಅಮ್ಮ ಅಜ್ಜಿಗೆ ಭಟ್ಟರು ಕಾಗದದಲ್ಲಿ ಬರೆದು ಕೊಟ್ಟ ನನ್ನ ಹೆಸರು ಇರುವ ಆ ಚೂರನ್ನು ನೀಡಿದಳು.
ಅಜ್ಜಿ ಅದನ್ನು ನೋಡಿ ಅಮ್ಮನ ಕೈಯಲ್ಲಿ ಹಚ್ಚೆ ಮೂಡಿಸಿ ಬಿಟ್ಟಳು.
ಅಮ್ಮ ನೋವಾಗುತ್ತಿದೆಯೇ ಎಂದು ಕೇಳಿದೆ.
ನಿನ್ನ ಹೆಸರಲ್ಲವೇ.. ನಿನಗೆ ಸಂಬಂಧಿಸಿದ ಯಾವುದೇ ವಿಷಯ ನನಗೆ ನೋವು ತರುವುದಿಲ್ಲ ಪುರು ಅಂದಳು.
ಅಮ್ಮ ನನಗೂ ಒಂದು ಹಚ್ಚೆ ಹಾಕಮ್ಮ ಅಂದೆ.
ಬೇಡ ನೀನಿನ್ನು ತುಂಬಾ ಚಿಕ್ಕವನು, ನೋವು ಆಗುತ್ತದೆ ಎಂದಳು.
ನಾನು ಹಟ ಹಿಡಿದೆ, ಅತ್ತು ಬಿಟ್ಟೆ.. ಕೊನೆಗೆ ಅವಳು ಸೋತಳು.
ಅಜ್ಜಿ ಕೇಳಿದಳು ಏನು ಹೆಸರು ಬರೆಯಲಿ ಪುಟ್ಟಾ..
"ಅಮ್ಮಾ..." ಎಂದು ಬರೆಯಿರಿ ಎಂದೆ.
ಬೇಡ ರಾಗು.. ಅಮ್ಮಾ ಎನ್ನುವಂತಹದ್ದು ನಿನ್ನಲ್ಲಿ ಎಂದೆಂದಿಗೂ ಶಾಶ್ವತ, ನಾನು ಹೇಗೆ ನಿನ್ನ ಹೆಸರನ್ನು ಬರೆಸಿದೆನೋ ಹಾಗೇ ನೀನು ಕೂಡ ನಿನ್ನ ಹೆಸರನ್ನೇ ಬರೆಸಿಕೋ.. ಇಬ್ಬರ ಕೈಯಲ್ಲೂ ಒಂದೇ ಹೆಸರಿರಲಿ, ಅದೇ ಎಲ್ಲಕ್ಕಿಂತ ಸುಂದರ.. ಅಂದಳು.
ನನಗೂ ಕೂಡ ಅದೇ ಸರಿ ಕಂಡಿತು. ಅಮ್ಮನ ಕೈಯಲ್ಲಿ ಇರುವುದೇ ನನ್ನ ಕೈಯಲ್ಲಿ ಇರಲಿ ಎಂದು.
ನನ್ನ ಕೈಗೂ ಅಜ್ಜಿ ಹಚ್ಚೆ ಒಂದು ಹಾಕಿ ಬಿಟ್ಟಳು. ಅಮ್ಮ ಹೇಳಿದಂತೆಯೇ ಪುಷ್ಯರಾಗ ದ ಬದವಾಗಿ #ಪುಷ್ಯರಾಗ್ ಎಂದು ಬರೆಸಿಕೊಂಡೆ.
ನೆನಪಿರುವಂತೆ ನಾನಾಗ ಆರನೇ ತರಗತಿಯಲ್ಲಿ ಓದುತ್ತಿದ್ದೆ. ಅಮ್ಮ ಅವರಿವರ ಮನೆ ಕೆಲಸ ಮಾಡಿ, ಮುಸುರೆ ತಿಕ್ಕಿ, ಒಂದಷ್ಟು ದುಡ್ಡು ಉಳಿಸಿ ಹೇಗೋ ನನ್ನನ್ನು ಓದಿಸುತ್ತಿದ್ದಳು.
ಒಂದು ದಿನ ಅಮ್ಮನಿಗೆ ಜೋರು ಹೊಟ್ಟೆ ನೋವು. ಮಲಗಿದ್ದಳು.
ಆ ರಾತ್ರಿ ಅಪ್ಪ ಕಂಠ ಪೂರ್ತಿ ಕುಡಿದು ಬಂದು ಬಾಗಿಲು ಬಡಿದ. ನಾನು ಹೋಗಿ ಬಾಗಿಲು ತೆಗೆದೆ.
ಅಪ್ಪ ಬಾಗಿಲಲ್ಲೇ ನಿಂತುಕೊಂಡು ಕುಡಿಯಲು ಮತ್ತಷ್ಟು ಹಣ ಕೇಳುತ್ತಿದ್ದ.
ಅಮ್ಮನಿಗೆ ಜೋರು ಹೊಟ್ಟೆ ನೋವು, ಹೋಗಪ್ಪ ತೊಂದರೆ ಕೊಡಬೇಡ, ಒಳಗೆ ಬಂದು ಅಮ್ಮನಿಗೆ ಹೊಡೆಯಬೇಡ ಎಂದು ಪರಿಪರಿಯಾಗಿ ಕೇಳಿಕೊಂಡೆ.
ಆದರೆ ಅಪ್ಪ ಕೇಳಲು ತಯಾರಿರಲಿಲ್ಲ. ಬಾಗಿಲು ದೂಡಿ ಕುಡಿದ ಅಮಲಿನಲ್ಲಿ ಆಚೆ ಈಚೆ ತೂರಾಡುತ್ತಾ ಒಳಗೆ ಬರುವ ಪ್ರಯತ್ನ ಮಾಡಿದ.
ನನ್ನೆಲ್ಲಾ ಶಕ್ತಿ ಒಟ್ಟು ಮಾಡಿ ಬಾಗಿಲು ಮುಚ್ಚಲು, ಕೈ ಕಾಲು ದೇಹ ಎಲ್ಲವನ್ನೂ ಉಪಯೋಗಿಸಿ ನಾನೂ ಒಳಗಿನಿಂದ ಬಾಗಿಲು ದೂಡಿದೆ. ಹೇಗೋ ಬಾಗಿಲು ಮುಚ್ಚಿ ಬಿಟ್ಟಿತು.ಅಪ್ಪ ಹಾಗೇ ಹೊರಗೆ ಅಂಗಳಕ್ಕೆ ಬಿದ್ದು ಬಿಟ್ಟ. ಅವನಲ್ಲಿ ನಿಲ್ಲುವಷ್ಟು ಕೂಡ ಶಕ್ತಿ ಇರಲಿಲ್ಲ!
ಬೆಳಿಗ್ಗೆ ಎದ್ದಾಗ ಅಪ್ಪ ಹೊರಗಡೆಯೇ ಇನ್ನೂ ಬಿದ್ದಲ್ಲಿಯೇ ಇದ್ದ. ಆದರೆ ಅವನ ಪ್ರಾಣ ಪಕ್ಷಿ ಹಾರಿ ಹೋಗಿತ್ತು! ಕಾಲು ಜಾರಿ ಬಿದ್ದವ ಕೆಳಗೆ ಇದ್ದ ಕಲ್ಲಿಗೆ ತಲೆ ಬಡಿದು ಸತ್ತೇ ಹೋಗಿದ್ದ!!
ಆದರೆ ಅದು ನನಗೆ ಗೊತ್ತಾಗಲಿಲ್ಲ.
ಅಮ್ಮ ಅಪ್ಪನಿಗೆ ಏನಾಗಿದೆ? ಎಂದು ಕೇಳಿದೆ.
ಅಪ್ಪ ಇನ್ನು ಇಲ್ಲ ರಾಗು..!! ಅಂದಳು.
ಅಂದರೆ?
ನಮ್ಮನ್ನು ಬಿಟ್ಟು ಹೋದ.. ಅಂದಳು.
ಅರ್ಥ ಆಗಲಿಲ್ಲ.. ಅಂದೆ.
ನಿನ್ನ ಅಪ್ಪ ಸತ್ತು ಹೋದ ರಾಗು ..! ಅಂದಳು ಅಮ್ಮ.
ಇನ್ನು ಏನು ಮಾಡುವುದು.. ಅಂದೆ.
ಈಗ ಶವ ಸಂಸ್ಕಾರ ಮಾಡಬೇಕು.. ಅಂದಳು.
ಅವಳೇ ಅಲ್ಲೇ ಇದ್ದ ಯಾರದ್ದೋ ಒಂದು ತಳ್ಳು ಗಾಡಿ ತಂದಳು. ಇಬ್ಬರೂ ಸೇರಿ ಅದರಲ್ಲಿ ಅಪ್ಪನನ್ನು ಮಲಗಿಸಿ ಸ್ಮಶಾನ ಕ್ಕೆ ಅಪ್ಪನನ್ನು ಕೊಂಡು ಹೋದೆವು.
ಯಾರದ್ದೋ ಒಂದು ಚಿತೆ ಅರ್ಧ ಉರಿದಿತ್ತು. ಅದರ ಮೇಲೆಯೇ ಅಪ್ಪನನ್ನು ಮಲಗಿಸಿದೆವು. ಕಟ್ಟಿಗೆಗಳು ಇನ್ನಷ್ಟು ಬೇಕಿತ್ತು.
ಇಬ್ಬರೂ ಪಕ್ಕದ ಗುಡ್ಡಕ್ಕೆ ಓಡಿದೆವು, ಅಮ್ಮ ಮರ ಹತ್ತಿ ಒಣ ರೆಂಬೆಗಳನ್ನು ಮುರಿದಳು. ನಾನು ಸಾಧ್ಯ ಆದಷ್ಟು ಅವುಗಳನ್ನು ಹೆಕ್ಕಿದೆ. ಅಮ್ಮ ಕೂಡ ಒಂದಷ್ಟು ಕಟ್ಟಿಗೆ ಒಟ್ಟು ಮಾಡಿದಳು. ಇಬ್ಬರೂ ಪುನಃ ಸ್ಮಶಾನ ದ ಕಡೆಗೆ ಓಡಿದೆವು.
ಕೊನೆಗೂ ಅಪ್ಪ ಸ್ಮಶಾನದ ನಡುವಲ್ಲಿ ಧಗಧಗ ಎಂದು ಉರಿದು ಬಿಟ್ಟ.
ಆ ಸುಡುವ ಕೆನ್ನಾಲಿಗೆಯ ಮುಂದೆಯೇ ಕೇಳಿದೆ..
ಅಮ್ಮಾ....
ಏನು ಪುರು...
ಅಮ್ಮಾ ಅಪ್ಪನನ್ನು ನಾನೇ ಕೊಂದದ್ದು ಅಲ್ಲವೇ?
ಇಲ್ಲಪ್ಪಾ.. ನೀನು ಕಾರಣ ಅಲ್ಲ, ನೀನು ನಿಮಿತ್ತ ಮಾತ್ರ,ಎಲ್ಲರದ್ದೂ ಲೆಕ್ಕ ಮುಗಿದಾಗ ಇಲ್ಲಿಂದ ಹೊರಡಲೇ ಬೇಕು.ಒಂದು ದಿನ ನಾನು, ಮತ್ತೊಂದು ದಿನ ನೀನು ಕೂಡ...
ಅಮ್ಮಾ ನೀನು ಕೂಡ ನನ್ನನ್ನು ಬಿಟ್ಟು ಹೋಗುತ್ತಿಯೇ?
ಹೋಗಲೇ ಬೇಕಲ್ಲವೇ..ಅದು ವಿಧಿಯ ನಿಯಮ
ಅಮ್ಮಾ.. ಯಾರು ಕೂಡ ಬಿಟ್ಟು ಹೋಗಲಿ, ಆದರೆ ನೀನು ಬಿಟ್ಟು ಹೋದರೆ ಈ ಬದುಕು ಕಷ್ಟ ಆಗುವುದು ಅಮ್ಮಾ..ನೀನು ಮಾತ್ರ ಹೋಗಬೇಡ ಅಮ್ಮಾ..
ಅಮ್ಮನಿಗೆ ಏನು ಅನಿಸಿತೋ ಹಾಗೇ ನಕ್ಕಳು.. ಅವಳು ನಕ್ಕಾಗ ಅದೆಂತಹ ದೇವತೆ.
ಅಮ್ಮಾ... ಅಪ್ಪ ಇನ್ನಿಲ್ಲ.. ನೀನು ಅಳುವುದಿಲ್ಲವೇ..ಎಂದು ಕೇಳಿದೆ.
ಅತ್ತರೆ ನೆನಪುಗಳು ಕಣ್ಣೇರಾಗಿ ಹರಿದು ಬಿಡುತ್ತವೆ ಪುರು..ನೆನಪುಗಳು ಬೇಕು ಎಂದು ಇದ್ದಾಗ ಕಣ್ಣೀರು ಹರಿಯುವುದಿಲ್ಲ.
ಅಮ್ಮ ಇಂತಹ ಅಪ್ಪನ ನೆನಪು ನಿನಗೆ ಬೇಕೆ? ...ನಿನಗೆ ನಾನಿಲ್ಲವೇ ಅಮ್ಮಾ.. ಒಮ್ಮೆ ಅತ್ತು ಬಿಡು,ಹಳೆಯ ಕಹಿ ನೆನಪುಗಳೆಲ್ಲವೂ ಮರೆತು ಹೋಗಲಿ.
ಹೊಸ ನೆನಪುಗಳೊಂದಿಗೆ, ಮುಂದಿನ ಕನಸುಗಳೊಂದಿಗೆ ಹಾಗೇ ಇವತ್ತಿನಿಂದ ಬದುಕಿ ಬಿಡುವ.
ಅಮ್ಮ ಅತ್ತಳು.. ಅಪ್ಪನ ಚಿತೆಯ ಜ್ವಾಲೆಯ ಎದುರು ಅವಳು ರಭಸದ ನದಿಯಂತೆ ಭೋರ್ಗರೆದಳು. ಅತ್ತು ಅತ್ತು ಅವಳೇ ಸಮಾಧಾನ ಪಟ್ಟುಕೊಂಡಳು.
ಮನೆಗೆ ಬಂದು ಮಲಗಿದಾಗ ಅಮ್ಮ ಎಂದಿನಂತೆ " ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..
ಮಿಡುಕಾಡುತಿರುವೆ ನಾನು,
ಕಡಿಯಲೋಲ್ಲೆ ನೀ ಕರುಳ ಬಳ್ಳಿ.. ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ.. " ಎಂದು ಹಾಡು ಹೇಳಿಯೇ ನನ್ನನ್ನು ಮಲಗಿಸಿದ್ದಳು. ನನ್ನಲ್ಲಿ ಅವತ್ತು ದಿವ್ಯವಾದ ನೆಮ್ಮದಿ ಒಂದು ನೆಲೆ ನಿಂತಿತ್ತು.
ಇದಾಗಿ ಒಂದು ವರ್ಷ ಕಳೆದಿತ್ತು.
ಒಂದು ದಿನ ಅಮ್ಮ ಕೆಲಸ ಮಾಡುವ ಧಣಿಯ ಮನೆಯಿಂದ ಪೂರಿಯೊಂದನ್ನು ಕಟ್ಟಿಕೊಂಡು ಬಂದಿದ್ದಳು.
ಅವಳಿಗೆ ಏನೇ ತಿನ್ನಲು ಸಿಕ್ಕಿದರೂ, ಅವಳು ಏನನ್ನೂ ತಿನ್ನುವುದಿಲ್ಲ. ನನಗಾಗಿ ಸೀರೆಯ ಸೆರಗಿನ ತುದಿಯಲ್ಲಿ ಕಟ್ಟಿಕೊಂಡು ಹಾಗೇ ಓಡಿ ಬರುತ್ತಾಳೆ ನನ್ನಲ್ಲಿಗೆ.
ನಾನು ಜೀವನದಲ್ಲಿ ಬಿರಿಯಾನಿ ತಿಂದವನೇ ಅಲ್ಲ. ಆದರೆ ಅಮ್ಮನ ಸೀರೆಯ ಸೆರಗಿನ ಗಂಟಿನ ತುದಿಯಲ್ಲಿರೋ ಪ್ರತೀ ತಿಂಡಿಯೂ ನನಗೆ ಯಾವುದೇ ಮೃಷ್ಟಾನ್ನ ಭೋಜನ ಕ್ಕಿಂತ ಕಮ್ಮಿ ಎಂದು ಅನ್ನಿಸಿಯೇ ಇಲ್ಲ. ಅವಳು ಮಾಡುವ ಗಂಜಿಗೂ ಕೂಡ ಅಮೃತದಂತಹ ರುಚಿ ಇದೆ. ಅಮ್ಮಾ ಅದೆಂತಹ ಅನ್ನಪೂರ್ಣೆ..
ಅಮ್ಮ ತಂದ ಪೂರಿ ತಿನ್ನುತ್ತಾ ಹೇಳಿದೆ - ಅಮ್ಮಾ...
ಏನು..?
ಇದನ್ನೊಮ್ಮೆ ಮಾಡುವೆಯಾ...?
ಏನು ಪೂರಿ ಯನ್ನೇ?
ಹೌದು ಅಮ್ಮ ಒಮ್ಮೆ ಮಾಡು,ತಿನ್ನಲು ಚೆನ್ನಾಗಿರುತ್ತದೆ.
ನೋಡು ಪುರು.. ಇದನ್ನು ಮಾಡಲು ಹಿಟ್ಟು ಬೇಕು, ಎಣ್ಣೆ ಬೇಕು. ಅದಕ್ಕೆಲ್ಲ ಹಣ ಬೇಕು. ನಿನಗೆ ನಾನು ಓದಲು ಬರೆಯಲು ಪುಸ್ತಕ ಕೊಡಿಸುವುದು ಬೇಡವೇ? ಓದಿ ನೀನು ಎಲ್ಲರಂತೆ ಸಮಾಜದಲ್ಲಿ ದೊಡ್ಡವನಾಗುವುದು ಬೇಡವೇ..
ನನಗೆ ಅಮ್ಮ ಹೇಳಿದ್ದು ಅರ್ಥ ಆಗಲಿಲ್ಲ. ಹಟ ಹಿಡಿದೆ, ಅತ್ತೆ..
ಅಮ್ಮ ಸಮಾಧಾನ ಮಾಡಿದಳು. ಆ ವಾರಾಂತ್ಯದಲ್ಲಿ ಮಾಡಿ ಕೊಡುತ್ತೇನೆ ಎಂದು ವಚನ ನೀಡಿದಳು. ನಾನು ನಕ್ಕೆ. ಅವಳೂ ನಕ್ಕಳು. ಅವಳು ನಕ್ಕು ನಕ್ಕೇ ಹೊಟ್ಟೆ ತುಂಬಿಸಿಕೊಂಡವಳು. ನಿಜ ಹೇಳಬೇಕೆಂದರೆ ನಾನು ಅವಳು ಹೊಟ್ಟೆ ತುಂಬಾ ತಿಂದಿದ್ದನ್ನು, ಉಂಡದ್ದನ್ನು ಯಾವತ್ತೂ ನೋಡಿಯೇ ಇಲ್ಲ..!
ಆವತ್ತು ಆದಿತ್ಯವಾರ ಬೆಳಿಗ್ಗೆ. ಅಮ್ಮ ಎಣ್ಣೆ ತಂದಳು, ಹಿಟ್ಟು ತಂದಳು. ಅವತ್ತು ನಮ್ಮ ಮನೆಯಲ್ಲಿ ಮೊದಲ ಬಾರಿಗೆ ಪೂರಿಯೊಂದು ಅರಳುವುದಿತ್ತು.
ಅಮ್ಮ ಪೂರಿಗಳನ್ನು ಲಟ್ಟಿಸಿ ಪಕ್ಕಕ್ಕೆ ಇಟ್ಟು ಬಾಣಲೆಯನ್ನು ತೊಳೆದು ತರಲು ಹೊರಗೆ ಹೋದಳು.
ನಾನು ಅಲ್ಲೇ ಒಳಗೆ ಕುಳಿತುಕೊಂಡು ಪೂರಿಯನ್ನು ವಿವಿಧ ಆಕಾರದಲ್ಲಿ ಲಟ್ಟಿಸುತ್ತಾ ಖುಷಿ ಪಡುತ್ತಿದ್ದೆ.
ನನಗೆ ಗೊತ್ತಿಲ್ಲದೇ ಪಕ್ಕದ ಡಬ್ಬದಲ್ಲಿದ್ದ ಎಣ್ಣೆ ನೆಲದ ಮೇಲೆ ಚೆಲ್ಲಿತು.ನಾನು ಅದನ್ನು ಗಮನಿಸಲಿಲ್ಲ.ಬಾಣಲೆಯೊಂದಿಗೆ ಬಂದ ಅಮ್ಮ ನೆಲದ ಮೇಲೆ ಚೆಲ್ಲಿದ್ದ ಎಣ್ಣೆಯ ಮೇಲೆ ಕಾಲಿಟ್ಟು ಜಾರಿ ಹಾಗೇ ಬಿದ್ದು ಬಿಟ್ಟಳು. ಕೆಳಗೆ ಬಿದ್ದ ಅಮ್ಮನ ತಲೆ ಒಡೆಯಿತು.ರಕ್ತ ಹೊಳೆಯಂತೆ ಹರಿಯಿತು..
ನನಗೆ ಏನು ಮಾಡುವುದು ಎಂದು ತೋಚಲಿಲ್ಲ. ಅಕ್ಕ ಪಕ್ಕದಲ್ಲಿ ಯಾರೂ ಇಲ್ಲ. ನೋಡು ನೋಡುತ್ತಲೇ ಅಮ್ಮನ ಪ್ರಾಣ ಪಕ್ಷಿ ಹಾರಿ ಹೋಗಿತ್ತು!!
ಆದರೆ ನನಗೆ ಗೊತ್ತಿಲ್ಲ ನೋಡಿ..
ಅಮ್ಮಾ..ಏಳಮ್ಮ ಪೂರಿ ಮಾಡಮ್ಮ ಅಂದೆ.
ಅಮ್ಮ ಮಾತಾಡಲಿಲ್ಲ!
ಅತ್ತೆ... ಕರೆದೆ..
ಉಹುಂ..ನನ್ನ ಅಮ್ಮ ಮಾತಾಡಲಿಲ್ಲ.
ಇಡೀ ದಿನ ಅತ್ತು ಕರೆದೆ.. ಅಮ್ಮಾ.. ಏಳಮ್ಮಾ.. ಅಂದೆ. ಅಮ್ಮಾ ಇದ್ದ ಜಾಗ ಬಿಟ್ಟು ಎಲ್ಲಿಗೂ ಹೋಗಲಿಲ್ಲ.. ಆದರೂ ಅಮ್ಮ ಎದ್ದು ಕುಳಿತು ನನ್ನ ಬಳಿ ಮಾತಾಡಲಿಲ್ಲ, ನಗಲಿಲ್ಲ, ನನಗಾಗಿ ಹಾಡು ಹಾಡಲಿಲ್ಲ..!!
ಅಮ್ಮಾ.. ಅಮ್ಮಾ.. ಎಂದು ಕೂಗಿ ನನ್ನ ಸ್ವರ ಬಿದ್ದು ಹೋಯಿತು!
ಮರು ದಿವಸಕ್ಕೆ ಅಮ್ಮನ ದೇಹದಿಂದ ವಾಸನೆ ಬರಲು ಶುರುವಾಯಿತು!
ಅಮ್ಮ ಇನ್ನು ಬರುವುದಿಲ್ಲ ಎಂದು ಖಾತ್ರಿ ಆಯಿತು! ಅಮ್ಮ ಕೂಡ ಅಪ್ಪನಲ್ಲಿಗೆ ಹೋಗಿ ಬಿಟ್ಟಿದ್ದಾಳೆ ಎನ್ನುವುದನ್ನು ಅರ್ಥ ಮಾಡಿಕೊಂಡೆ!
ಹಾಗೇ ಹೊರಗೆ ನಡೆದೆ,ಅಲ್ಲೊಂದು ಯಾರದ್ದೋ ಎಳನೀರಿನ ತಳ್ಳುಗಾಡಿ ಇತ್ತು. ಅದರ ಎಳನೀರು ಎಲ್ಲಾ ಕೆಳಗೆ ಹಾಕಿದೆ.ಅದನ್ನು ಮನೆಯ ಮುಂದೆ ತಂದೆ. ಅಮ್ಮ ಅಪ್ಪ ತೀರಿಕೊಂಡಾಗ ಮಾಡಿದೆಲ್ಲವೂ ನೆನಪಿತ್ತು.
ಹೇಗೋ ಕಷ್ಟಪಟ್ಟು ಅಮ್ಮನ ದೇಹವನ್ನು ಹೊರಳಾಡಿಸಿಕೊಂಡು ಮನೆಯ ಹೊರಗಿನ ಜಗುಲಿಗೆ ತಂದೆ.
ಜಗುಲಿಯಿಂದ, ಜಗುಲಿಗೆ ತಾಗಿಯೇ ನಿಂತಿದ್ದ ತಳ್ಳುಗಾಡಿಗೆ ಅಮ್ಮನ ದೇಹವನ್ನು ಹೊರಳಿಸಿಬಿಟ್ಟೆ.
ಅಮ್ಮ ಈಗ ತಳ್ಳುಗಾಡಿಯಲ್ಲಿ ಆಕಾಶ ನೋಡುತ್ತಾ ಮಲಗಿದ್ದಳು. ಎಷ್ಟೊಂದು ಚುರುಕಿನ ಮಹಿಳೆ ನನ್ನ ಅಮ್ಮ. ಈಗ ಜಗತ್ತಿನ ಪರಿವೆಯೇ ಇಲ್ಲದೆ ಹೇಗೆ ಮಲಗಿಕೊಂಡಿದ್ದಾಳೆ ಅಂತ ಅನ್ನಿಸಿತು.
ನನ್ನದೊಂದು ಹರಿದ ಬೆಡ್ ಶೀಟ್ ಇತ್ತು. ಅದನ್ನು ಅವಳ ಮೇಲೆ ಮುಚ್ಚಿದೆ, ಯಾರಿಗೂ ಅವಳ ದೇಹ ಕಾಣದಿರಲಿ ಎಂದು.
ಮೆನೆಯ ಹಿಂದಿನ ಗುಡ್ಡದ ಪಕ್ಕವೇ ಇತ್ತು ಸ್ಮಶಾನ. ತಳ್ಳುಗಾಡಿಯನ್ನು ಕಷ್ಟ ಪಟ್ಟು ತಳ್ಳುತ್ತಾ ಸ್ಮಶಾನದವರೆಗೂ ಹೋದೆ.
ನನಗೆ ಒಣ ಕಟ್ಟಿಗೆಗಳು ಬೇಕಿದ್ದವು. ಓಡಿದೆ.. ಸ್ಮಶಾನದ ಪಕ್ಕವೇ ಇದ್ದ ಗುಡ್ಡಕ್ಕೆ ಓಡಿದೆ. ಕಟ್ಟಿಗೆಗಾಗಿ ಮರ ಹತ್ತಿದೆ, ಕೊಂಬೆ ಮುರಿದೆ. ಒಂದು ಕೊಂಬೆಯಲ್ಲಿ ಮೊಟ್ಟೆಗಳಿಗೆ ಬೆಚ್ಚಗೆ ಕಾವು ಕೊಡುತ್ತಾ ತಾಯಿ ಹಕ್ಕಿ ಒಂದು ಕೂತಿತ್ತು. ದೇವರೇ ಈ ಮೊಟ್ಟೆಗಳ ಭಾಗ್ಯವೂ ನನಗಿಲ್ಲವೇ ಅಂದುಕೊಂಡೆ.
ಕಟ್ಟಿಗೆ ಹೇಗೋ ಒಟ್ಟು ಮಾಡಿ, ಅಮ್ಮನನ್ನು ತಳ್ಳುಗಾಡಿಯಿಂದ ಆ ಕಟ್ಟಿಗೆಯ ಚಿತೆಗೆ ಜಾರಿಸಿ ಅಗ್ನಿ ಸ್ಪರ್ಶ ಮಾಡಿದೆ...
ಅಮ್ಮ ಉರಿದಳು!!.
ಅವಳ ಒಂದೊಂದೇ ಭಾಗ ಉರಿಯುತ್ತಾ ಹೋಯಿತು.
ಬೆಂಕಿಯ ಪ್ರಖರತೆ ಹೆಚ್ಚಾಯಿತು.
ಅದನ್ನೇ ನೋಡುತ್ತಾ ನಿಂತೆ.
ಯಾಕೋ ಗೊತ್ತಿಲ್ಲ ಏನೋ ಒಂದು ಹೇಳಬೇಕು, ಕೇಳಬೇಕು ಎಂದು ಅನಿಸಿತು...
ಅಮ್ಮಾ....ಎಂದೆ ಜೋರಾಗಿ,
ಚಿತೆಯಲ್ಲಿ ಮಲಗಿದ್ದ ಅಮ್ಮ ಅಲ್ಲಿಂದಲೇ ಮಲಗಿಕೊಂಡೇ, ಉರಿಯುತ್ತಲೇ ಹೇಳಿದಂತೆ ಭಾಸವಾಯಿತು!
ಏನು ಪುರು...
ಅಮ್ಮಾ... ನಿನ್ನನ್ನು ನಾನೇ ಕೊಂದೆ ಅಲ್ಲವೇ ಅಮ್ಮಾ.. !?
ಇಲ್ಲಪ್ಪಾ... ಅವರವರ ಸಮಯ ಬಂದಾಗ ಎಲ್ಲರೂ ಇಲ್ಲಿಂದ ಹೋಗಲೇ ಬೇಕು. ಯಾರು ಶಾಶ್ವತವಲ್ಲ, ಯಾವುದೂ ಶಾಶ್ವತವಲ್ಲ...!
ಆದರೂ ನೀನು ಹೋಗಬಾರದಿತ್ತು...!
ದೇವರ ಇಚ್ಛೆಯನ್ನು ಯಾರಿಂದಾದರೂ ಮೀರಲು ಸಾಧ್ಯವೇ ..
ಅಮ್ಮಾ.. ನೀನೇ ನನ್ನ ಪಾಲಿನ ದೇವರು ಮತ್ತು ಎಲ್ಲವೂ ಆಗಿದ್ದೆ,ನೀನೇ ಹೋದ ಮೇಲೆ ಇನ್ನು ನನಗೆ ದೇವರು ಅಂತ ಇಲ್ಲಿ ಯಾರು ಇದ್ದಾರೆ ಅಮ್ಮಾ !
ಹಾಗೇ ಹೇಳಬಾರದು.. ದೇವರು ಅಂತ ಒಬ್ಬನು ಮೇಲೆ ಇದ್ದಾನೆ. ಅವನೇ ನಿನ್ನನ್ನು ನೋಡಿಕೊಳ್ಳುತ್ತಾನೆ.
ಅಮ್ಮಾ.... ಅವನು ನಿನ್ನ ಹಾಗೆ ಮಾತಾಡುವುದಿಲ್ಲ ಅಮ್ಮ.. ನಿನ್ನ ಹಾಗೆ ಹಾಡುವುದಿಲ್ಲ ಅಮ್ಮ ಅವನು...!!
ನಿನ್ನ ನೆನಪಲ್ಲಿ ನಾನು ಎಂದಿಗೂ ನಿನ್ನ ಜತೆ ಸದಾ ಇರುತ್ತೇನೆ. ನನ್ನ ಆಶೀರ್ವಾದ ನಿನ್ನ ಮೇಲೆ ಯಾವತ್ತೂ ಇರುತ್ತದೆ ಪುರು.
ಅಮ್ಮ.. ದೇವರು ಅದೆಷ್ಟು ಕಟುಕ ಅಲ್ಲವೇ.. ನನ್ನಿಂದ ಎಲ್ಲವನ್ನೂ ಕಿತ್ತುಕೊಂಡು ಬಿಟ್ಟ ಅಮ್ಮಾ...!
ಕಲ್ಪನೆಯ ಅಮ್ಮ ಮಾತಾಡಲಿಲ್ಲ.. ಚಿತೆಯಲ್ಲಿ ಮತ್ತಷ್ಟು ಉರಿದಳು!
ಇನ್ನಷ್ಟು ಉರಿದಳು. ನನ್ನ ಕಣ್ಣಲ್ಲಿ ಒಂದು ತೊಟ್ಟು ನೀರು ಬರಲೇ ಇಲ್ಲ!
ಅಮ್ಮ ಹೇಳಿದ್ದು ನೆನಪಿತ್ತು. ಗಳ ಗಳ ಅತ್ತರೆ ನೆನಪುಗಳು ಕಣ್ಣೀರಾಗಿ ಹರಿಯುತ್ತವೆ ಎಂದು. ಅಮ್ಮನ ನೆನಪೊಂದು ಈ ಉಸಿರಿನ ಕೊನೆಯವರೆಗೂ ನನಗೆ ಬೇಕಿತ್ತು, ಅದಕ್ಕಾಗಿ ನಾನು ಅವತ್ತು ಅಳಲಿಲ್ಲ..!!
ಆದರೆ ಅಮ್ಮನಿಗಾಗಿ, ಅಮ್ಮನ ಆ ನಾಲ್ಕು ಸಾಲು ಸ್ಮಶಾನ ದ ಮಧ್ಯದಲ್ಲಿ ಜೋರಾಗಿ ಹಾಡಿದೆ...ಮೊದಲ ಬಾರಿ ಹಾಡಿದೆ! ಕೇಳುವವರು ಯಾರೂ ಇರಲಿಲ್ಲ..!!
" ಅಮ್ಮಾ... ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..
ಮಿಡುಕಾಡುತಿರುವೆ ನಾನು,
ಕಡಿಯಲೋಲ್ಲೆ ನೀ ಕರುಳ ಬಳ್ಳಿ.. ಒಲವೂಡುತಿರುವ ತಾಯೆ..
ಬಿಡದ ಭುವಿಯ ಮಾಯೆ.."
ಚಿತೆಯಲ್ಲಿ ಎಲ್ಲಾ ಉರಿದು,ಕೊನೆಯದಾಗಿ "ಪುಷ್ಯರಾಗ" ಎಂದು ಹಚ್ಚೆ ಹಾಕಿಸಿಕೊಂಡಿದ್ದ ಅಮ್ಮನ ಕೈ ಕೂಡ ಬೆಂಕಿಯಲ್ಲಿ ಉರಿಯುವುದನ್ನು ಸ್ಪಷ್ಟವಾಗಿ ಕಣ್ಣಾರೆ ನೋಡಿದೆ...!
ಆಗಲೂ ಕಣ್ಣಲ್ಲೇನು ನೀರಿರಲಿಲ್ಲ.. ಆದರೆ ಹೃದಯಕ್ಕೆ ಮಾತ್ರ ತಡೆದು ಕೊಳ್ಳಲು ಆಗಲೇ ಇಲ್ಲ!!
ಅದು ಒಳಗೆಯೇ ರೋಧಿಸಿತು! ಆದರೆ ಅದರ ಕೂಗು ಕೂಡ ನನ್ನ ಹೊರತು ಬೇರಾರಿಗೂ ಕೇಳಲೇ ಇಲ್ಲ!
ಒಂದು "ಪುಷ್ಯರಾಗ" ಬೆಂಕಿಯಲ್ಲಿ ಉರಿದು ಕನಕ ಪುಷ್ಯರಾಗವಾಯಿತು..!
ಕೈ ಮೇಲಿದ್ದ ಇನ್ನೊಂದು "ಪುಷ್ಯರಾಗ್", ಅದನ್ನೇ ನೋಡುತ್ತಾ ಎಂದಿನಂತೆಯೇ ಮೂಕವಾಗಿತ್ತು..!!
ನಾನು ಮಾತ್ರ ಅಲ್ಲಿ ಎಂದೆಂದಿಗೂ, ಮನಸ್ಸಿನಿಂದ, ಹೃದಯದಿಂದ.. ಕಲ್ಲುಬಂಡೆಯಾಗಿ ಹೋಗಿದ್ದೆ !!!
.....................................................................................
#ಪುಷ್ಯರಾಗ 🧡
AB Pacchu
Moodubidire

Comments
Post a Comment