ಮೂಕರಾಗ
ಯಾರಾದರೂ ಬಂದು ಇದನ್ನು ತಿನ್ನು ಎಂದು ಕೈಗೊಂದು ರುಚಿಯಾದ ಲಡ್ಡು ಕೊಟ್ಟಾಗ,ಇನ್ನೇನು ಅದನ್ನು ಬಾಯಿಗಿಡಬೇಕು ಅನ್ನುವಷ್ಟರಲ್ಲಿ,ಸ್ವತಃ ಆ ಲಡ್ಡು ಕೊಟ್ಟವರೇ ಕೈಗೆ ಹೊಡೆದು ಆ ಲಡ್ಡು ಮಣ್ಣು ಪಾಲಾಗುವಂತೆ ಮಾಡಿಬಿಟ್ಟರೆ.. ?
ICU ನ ವೆಂಟಿಲೇಟರ್ ನಲ್ಲಿ ಇದ್ದುಕೊಂಡು ಜೀವನ್ಮರಣ ಸ್ಥಿತಿಯಲ್ಲಿ ಸಾವಿನೊಂದಿಗೆ ಹೊರಾಡುತ್ತಿರೋ ರೋಗಿಯ ಆಮ್ಲಜನಕ ಪೂರೈಕೆಯನ್ನು,ಸ್ವತಃ ಆ ರೋಗಿಯನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಬಂದು ಬೇಕಂತಲೇ ನಿಲ್ಲಿಸಿಬಿಟ್ಟರೆ..?
ಶುಭ ದಿನದಂದು ಶುದ್ಧವಾಗಿ ಭಕ್ತಿಯಿಂದ, ಶ್ರದ್ಧೆಯಿಂದ ದೇವರಿಗೆ ತುಪ್ಪ ದೀಪವನ್ನು ಹಚ್ಚಿ ಪೂಜಿಸುವಾಗ, ಸ್ವತಃ ದೇವರೇ ಪೋಟೋ ದಿಂದ ಎದ್ದು ಬಂದು ಉಫ್ ಎಂದು ಊದಿ ದೀಪವನ್ನು ಆರಿಸಿಬಿಟ್ಟರೆ...?
ತಡೆದುಕೊಳ್ಳಲು ಸ್ವಲ್ಪ ಕಷ್ಟ ಅಲ್ವಾ!!
ಯಾರೂ ಕೊಡುತ್ತಾನೋ,ಅವನೇ ಅದನ್ನು ಕಸಿದುಕೊಂಡು ಬಿಟ್ಟರೆ, ಮನಸ್ಸೇ ಒಡೆದೇ ಹೋಗುತ್ತದೆ!!
ಭಗವಂತ ನಮಗೆ ಎಲ್ಲವನ್ನೂ ಕೊಡುತ್ತಾನೆ ಸುಖ ಸಂತೋಷ ನೆಮ್ಮದಿ ಸಾವು ನೋವು.. ಎಲ್ಲವನ್ನೂ
ಆದರೆ ಸುಖದಲ್ಲಿ ಇದ್ದಾಗ ಇಲ್ಲವೇ ನೆಮ್ಮದಿಯಲ್ಲಿ ಇದ್ದಾಗ ಅದು ಅವನೇ ಕೊಟ್ಟದ್ದು ಎಂದು ಹೆಚ್ಚಾಗಿ ನಾವು ಹೇಳುವುದೇ ಇಲ್ಲ!
ಆದರೆ ಸಾವು ನೋವುಗಳು ಆದಾಗ...?
ಕೊನೆಯಲ್ಲಿ ಆರೋಪಿ ಸ್ಥಾನದಲ್ಲಿ ನಾವು ನಿಲ್ಲಿಸುವುದು ಸ್ವತಃ ನಾವು ನಂಬಿದ ಭಗವಂತನನ್ನೇ !!
ಅವನೆದುರು ನಾವು ಇಡುವ ಪ್ರಶ್ನೆ ಇಷ್ಟೇ... ದೇವರೇ ನನಗೆ ಯಾಕೆ ಈ ಶಿಕ್ಷೆ ನೀಡಿದೆ, ಯಾಕೆ ಹೀಗೆ ಮಾಡಿದೆ.... ಯಾಕೆ ನನ್ನ ಕೈ ಬಿಟ್ಟೆ?!!!
ಸುಖ ಸಂತೋಷದಂತೆಯೇ.. ಸಾವು ನೋವು,ದುಃಖಗಳು ಕೂಡ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವೇ.
ಸುಖ ಮಾತ್ರ ಬೇಕು,ಯಾವತ್ತೂ ನೆಮ್ಮದಿಯೇ ಇರಬೇಕು.. ಸಾವು ಆಗಲಿ, ನೋವಾಗಲಿ ನಮಗೆ ಬೇಡ ಎಂದು ಹೇಳಲು ನಮಗೆ ಅಧಿಕಾರವಿಲ್ಲ!!
ಸಾಯಲು ಯಾರು ಇಷ್ಟ ಪಡುತ್ತಾರೆ ಹೇಳಿ?
ಬಹುಶಃ ಯಾರೂ ಇಲ್ಲ!
ಎಲ್ಲರಿಗೂ ಒಂದೇ ಆಸೆ, ಅದು ಬದುಕಬೇಕು ಎಂದು.
ಆದರೆ ಬದುಕಿನಲ್ಲಿ ಸಾವು ಬರುತ್ತದೆ,ಎಲ್ಲರಿಗೂ ಬರುತ್ತದೆ!
ಒಂದಲ್ಲ ಒಂದು ದಿನ ಅದು ಬಂದೇ ಬರುತ್ತದೆ!
ಎದುರಿನಲ್ಲಿಯೇ ಬಂದು ನಿಲ್ಲುತ್ತದೆ, ಕೆಲವೊಮ್ಮೆ ನಮ್ಮ ಸಾವು, ಇನ್ನು ಕೆಲವೊಮ್ಮೆ ನಮ್ಮ ಆಪ್ತರ ಸಾವು!
ಸಾವೊಂದೇ ಸತ್ಯ,ಅದೊಂದೇ ಈ ಬದುಕಿನ ಕಟ್ಟ ಕಡೆಯ ಅರಗಿಸಿಕೊಳ್ಳಲಾಗದ ಆದರೆ ಎಲ್ಲರೂ ಅರಗಿಸಿಕೊಳ್ಳಲೇ ಬೇಕಾದ ಜೀವನದ ಪರಮ ಸತ್ಯ!
ಅದನ್ನು ಒಪ್ಪಿಕೊಳ್ಳಲೇ ಬೇಕು.ನಾವು ಒಪ್ಪದಿದ್ದರೂ ಅದು ಅಪ್ಪಿಕೊಂಡಾಗ ಹಾಗೇ ಜೀವ ಹೋಗಲೇಬೇಕು!
ಆದರೆ ಸಾವೇ ಇರದಿದ್ದರೆ?
ಈ ಪ್ರಶ್ನೆ ಬಂದಾಗಲೆಲ್ಲ,ಇದರ ಉತ್ತರ ನಾವು ಸಾಯುವುದಿಲ್ಲ ಎಂಬ ಖುಷಿಗಿಂತಲೂ ,ನಮಗೆ ಬೇಕಾದ ಪ್ರೀತಿ ಪಾತ್ರರು ಸಾಯದೇ ಸದಾ ನಮ್ಮ ಜೊತೆ ಇರುತ್ತಾರೆ ಅಲ್ವಾ ಎಂಬ ಸಂತೋಷವೇ ಅಧಿಕವಾಗಿರುತ್ತದೆ.
ಯಾಕೆಂದರೆ ನಾವು ಸತ್ತರೆ ಅದರಿಂದ ನಮಗೇನು ದುಃಖ ಆಗುವುದಿಲ್ಲ, ಬದಲಾಗಿ ನಮಗದು ಗೊತ್ತಾಗುವುದಿಲ್ಲ. ಗೊತ್ತಾಗಲು ನಾವಿಲ್ಲ ಇರುವುದೇ ಇಲ್ಲ!
ಸಾವು ಸಂಭವಿಸಿದಾಗ ನೋವು ಅನುಭವಿಸುವುದು ಆ ಸತ್ತವರನ್ನು ಕಳೆದುಕೊಂಡವರು!
ಅಜ್ಜ, ಅಜ್ಜಿ, ಅಮ್ಮ, ಅಪ್ಪ ಎಲ್ಲಾ ಸಾಯದೇ ಕೊನೆಯವರೆಗೂ ಎಂದೆಂದಿಗೂ ನಮ್ಮ ಜೊತೆಗೆನೇ ಇದ್ದು ಬಿಟ್ಟರೆ ಅದೊಂದು ಎಷ್ಟು ಚಂದದ ಬಾಳು...
ನಮ್ಮ ಪ್ರೀತಿ ಪಾತ್ರರು ಸತ್ತಾಗಲೆಲ್ಲ ಈ ತರಹ ಅನ್ನಿಸುವುದು ಸಹಜ.
ಯಾರನ್ನಾದರೂ ಈ ರೀತಿ ಕಳೆದುಕೊಂಡಾಗ ನಾವು ಅತ್ತು ಕಣ್ಣೀರಾಗುತ್ತೆವೆ.ಆ ಭಗವಂತನಿಗೂ ಹಿಡಿ ಶಾಪ ಹಾಕುತ್ತೇವೆ
ಆದರೆ ಇದು ಬದುಕು ನೋಡಿ ನಾವು ಆಲೋಚಿಸಿದಂತೆ ಇಲ್ಲಿ ಏನೂ ಆಗುವುದೇ ಇಲ್ಲ.ಆಗುವುದಕ್ಕೆ ಸಾಧ್ಯವೂ ಇಲ್ಲ.
ಹೀಗೇ ಆಗುತ್ತದೆ ಎಂದು ಮೊದಲೇ ಗೊತ್ತಾಗುತ್ತಿದ್ದರೆ ಬಹುಶಃ ಜೀವನದಲ್ಲಿ ಯಾರು ಏನ್ನನ್ನೂ ಮಾಡುತ್ತಿರಲ್ಲಿವೋ ಏನೋ!
ಒಂದರ್ಥದಲ್ಲಿ ಹೇಳಬೇಕೆಂದರೆ ಮುಂದೇನಾಗುವುದು ಎಂದು ಇಂದೇ ಗೊತ್ತಾಗಿ ಬಿಟ್ಟರೆ ಬದುಕು ನೀರಸ! ಬದುಕಿನ ತುಂಬಾ surprise ಗಳಿಸಬೇಕು!
ಅದೇ ನೋಡಿ ಬದುಕಿನ ವೈಚಿತ್ರ್ಯ.ಬದುಕು ಎಂದಿಗೂ ನಾನು ಹೀಗೆ ಎಂದು, ಎಂದಿಗೂ ಅದರ ಗುಟ್ಟು ಬಿಟ್ಟು ಕೊಡುವುದೇ ಇಲ್ಲ.ಎಷ್ಟೇ ದೊಡ್ಡ ಭವಿಷ್ಯ ಹೇಳುವವನಿಗೂ ಕೂಡ ಈ ಬದುಕು ಎಂಬುದು ಯಾವತ್ತಿಗೂ ನಿಗೂಡ,ರಹಸ್ಯ ಮತ್ತು ಮುಗಿಯದ ಅಚ್ಚರಿ.
ಬದುಕನ್ನು ಹಾರೆ ಗುದ್ದಲಿ ಪಿಕ್ಕಾಸು ಹಿಡಿದು ವಜ್ರವನ್ನು ನೆಲದಡಿಯಿಂದ ಅಗೆದು ತೆಗೆದು, ಹಾಗೇ ಕೈಯಲ್ಲಿ ಹಿಡಿದು ನೋಡಿದಂತೆ ನೋಡಲು ಸಾಧ್ಯವಿಲ್ಲ...
ಯಥೇಚ್ಛವಾಗಿ ಇಂಧನ ಉರಿಸಿಕೊಂಡು ರಾಕೇಟ್ ನಲ್ಲಿ ಕುಳಿತುಕೊಂಡು ಕ್ಷೀರಪಥ ಕ್ಕೆ ಹೋಗಿ ಎಂದೂ ನೋಡದ ಆಕಾಶ ಕಾಯ, ಸೌರವ್ಯೂಹ ಗಳನ್ನು ಅಧ್ಯಯನ ಮಾಡಿದಂತೆ, ಬದುಕನ್ನು ಪ್ರಯೋಗಕ್ಕೆ ಒಳಪಡಿಸಿ ತಿಳಿದುಕೊಳ್ಳಲು ಕೂಡ ಸಾಧ್ಯವಿಲ್ಲ.
ಬದುಕು ಅದರಷ್ಟಕ್ಕೆ ಅದು ಘಟಿಸಬೇಕು.ಅದರ ನಂತರವೇ ಅದು ನಮ್ಮ ಅರಿವಿಗೆ ಬರುವುದು, ಅನುಭವವಾಗುವುದು
ಬದುಕಿನಲ್ಲಿ ನೇರ ರೋಡ್ ಗಳು ಇರುವುದೇ ಇಲ್ಲ.ಅಂಕು ಡೊಂಕು ಆಗಿರುವ ಆ ರೋಡ್ ಗಳಲ್ಲಿ ಅದೆಷ್ಟೋ ತಿರುವುಗಳು. ಪ್ರತೀ ತಿರುವಿನಲ್ಲೂ ಭಗವಂತ ಅದೆಂತಹದ್ದೋ ಅಚ್ಚರಿ ಇಟ್ಟೇ ಇಟ್ಟಿರುತ್ತಾನೆ.
ಆದರೆ ನನ್ನ ಬದುಕಿನಲ್ಲಿ ಮಾತ್ರ... ಆತ ಲೆಕ್ಕಕ್ಕಿಂತ ಜಾಸ್ತಿಯೇ ಇಟ್ಟಿದ್ದ!!!
ಬಸ್ ಅಂಕು ಡೊಂಕಾದ ರೋಡಿನಲ್ಲಿ,ನಿಮಿಷಕ್ಕೆ ಒಂದರಂತೆ ಬರುತ್ತಿದ್ದ ತಿರುವುಗಳಲ್ಲಿ ಸಾಗುತ್ತಿದ್ದಾಗ...ಹೀಗೆ ಮೇಲಿನಂತೆ ಏನೇನೋ ಯೋಚಿಸುತ್ತಾ,ಬದುಕಿನ ಪ್ರಶ್ನೆಗಳನ್ನು ಹಾಕುತ್ತಾ, ಅದಕ್ಕೆ ನಾನೇ ನನ್ನದೇ ಆದ ತರ್ಕದ ಉತ್ತರ ಕೊಡುತ್ತಾ... ಬಸ್ ನ ವಿಂಡೋ ಸೀಟಿನಲ್ಲಿ ಕುಳಿತುಕೊಂಡು ಹೊರಗಡೆ ನೋಡುತ್ತಾ, ಆ ಬೆಟ್ಟದ ದಾರಿಯಲ್ಲಿ ,ಕೈಗೆಟುಕುವ ಆಕಾಶವನ್ನು ಹಾಗೇ ದಿಟ್ಟಿಸುತ್ತಾ ನಾನು ಕಳೆದು ಹೋಗಿದ್ದೆ!
ಹೌದು ಅದು ಉತ್ತರಾಖಂಡ್ ರಾಜ್ಯ.ಬಸ್ ಹರಿದ್ವಾರ ದ ಕಡೆಗೆ ಹೋಗುತ್ತಿತ್ತು.
ಹೀಗೇ ಬಸ್ ನಲ್ಲಿ ಕುಳಿತುಕೊಂಡು ಏನೇನೋ ಯೋಚಿಸುತ್ತಿರುವಾಗಲೇ, ಅಜ್ಜಿಯೊಬ್ಬರು ಹಿಂದಿನ ಸೀಟಿನಿಂದ ತನ್ನ ಪುಟ್ಟ ಚೀಲದ ಸಹಿತ ನಿಧಾನಕ್ಕೆ ಬಂದು ನನ್ನ ಬಳಿ ಕುಳಿತುಕೊಂಡರು.
ನನ್ನನ್ನು ನೋಡಿ ನಕ್ಕರು, ನಾನು ನಕ್ಕೆ.
ಮನುಷ್ಯ ಮನಸ್ಸು ಬಿಚ್ಚಿ ಮಾತನಾಡಬೇಕು, ಹೃದಯದಿಂದ ನಗಬೇಕಂತೆ. ಇದು ನನಗೆ ಬದುಕು ಕಲಿಸಿದ ಪಾಠ. ಬದುಕು ಕೂಡ ಅಲ್ಲ,ನನ್ನ ಬದುಕಿನೊಳಗೆ ಬಂದು ಹಾಗೇ ವಾತ್ಸಲ್ಯವನ್ನೇ ಮೊಗೆ ಮೊಗೆದು ಕೊಟ್ಟು, ಕೊನೆಗೊಂದು ದಿನ ತನ್ನ ಬದುಕನ್ನೇ ಕಣ್ಣೀರಲ್ಲೇ ಕೊನೆಗೊಳಿಸಿದ ನನ್ನ ಪ್ರೀತಿಯ ತಂಗಿ ವತ್ಸಲ ಹೇಳಿದ್ದ ಮಾತದು!
ಆದರೂ ತಂಗಿ ಹೇಳಿದಂತೆ ನನಗೆ ನಗಲು ಬರುವುದಿಲ್ಲ. ಎಂದಿಗೂ ಅದು ನನಗೆ ಸಾಧ್ಯವಿಲ್ಲ,ಅದೇ ಹೃದಯದಿಂದ ನಗುವುದು... ಯಾಕೆಂದರೆ ನಾನು ಕಲ್ಲು ಹೃದಯದವನು!
ಅಜ್ಜಿ ನಕ್ಕಾಗ ನಾನು ಕೂಡ ಯಾಂತ್ರಿಕವಾಗಿ ನಕ್ಕು ಬಿಟ್ಟಿದ್ದೆ. ಆದರೆ ಆ ನಗುವಿನಲ್ಲಿ ಯಾವುದೇ ಜೀವಕಳೆ ಇರಲಿಲ್ಲ
ಮಗು ನೀನು ಕೂಡ ಮಂಗಳೂರಿನವನ ..? ಅಜ್ಜಿ ಕೇಳಿದರು.
ಹೂಂ ಅಜ್ಜಿ.. ನೀವು?
ಹೌದಪ್ಪ ನಾನು ಕೂಡ.
ನೀವು ಒಬ್ಬರೇ ಬಂದಿರುವುದಾ ಅಜ್ಜಿ.. ಕೇಳಿದೆ.
ಇಲ್ಲಪ್ಪ, ನಮ್ಮ ಯಜಮಾನರು ಅಲ್ಲಿ ಹಿಂದೆ ಕುಳಿತುಕೊಂಡಿದ್ದಾರೆ ನೋಡು, ಎಂದು ಅಜ್ಜಿ ಹಿಂದಕ್ಕೆ ಕೈ ತೋರಿಸಿ ಹೇಳಿದರು.
ಹಿಂದೆ ತಿರುಗಿ ನೋಡಿದೆ. ಅಲ್ಲೊಬ್ಬ ಬೊಚ್ಚು ಬಾಯಿಯ ಅಜ್ಜ ಅಪಾರ ಜೀವನ ಅನುಭವವನ್ನು ಹೊತ್ತುಕೊಂಡು ಕುಳಿತಿದ್ದರು.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ರೀತಿ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಹೋಗುವ ಮನಸ್ಸು ನೀನಗೆ ಹೇಗೆ ಆಯಿತು ಮಗು..ಅಜ್ಜಿ ಕೇಳಿದರು.
ನಮ್ಮ ಧಣಿ ಹಾಗೂ ಅವರ ಮಡದಿ ಕ್ಷೇತ್ರ ದರ್ಶನ ಮಾಡಬೇಕೆಂದು ಅಂದುಕೊಂಡರು.. ಹಾಗಾಗಿ ಅವರಿಗೆ ಜೊತೆಯಾಗಿದ್ದೆನೆ ಎಂದೆ.
ಭುಜಂಗಯ್ಯ-ಪ್ರೇಮಕ್ಕ ದಂಪತಿಗಳಿಗೆ ಪುತ್ರಿ ವತ್ಸಲ ತೀರಿಕೊಂಡ ಮೇಲೆ ಜೀವನದ ಮೇಲೆಯೇ ಅತೀವವಾದ ಜಿಗುಪ್ಸೆ ಒಂದು ಹಾಗೇ ಆವರಿಸಿಕೊಂಡಿತ್ತು.ಅದಕ್ಕಾಗಿ ಮನಸ್ಸಿಗೆ ಸ್ವಲ್ಪ ಸಮಾಧಾನ ತಂದು ಕೊಳ್ಳುವ ಉದ್ದೇಶದಿಂದ ಕಾಶಿ, ಪ್ರಯಾಗ,ಹರಿದ್ವಾರ,ಕೇದಾರನಾಥ, ಬದರಿನಾಥ ಅಂತ ಈ ತೀರ್ಥ ಕ್ಷೇತ್ರಗಳ ದರ್ಶನಕ್ಕೆ ಹೊರಟು ನಿಂತಿದ್ದರು.
ನಾನು ಬರುವುದೇ ಇಲ್ಲ ಎಂದು ಹೇಳಿದ್ದೆ. ಆದರೆ ಅವರು ಅತ್ತು ಕಣ್ಣೀರಾದರು. ಮಗಳು ಬೇರೆ ನಮ್ಮನ್ನು ಬಿಟ್ಟು ಹೋಗಿಬಿಟ್ಟಳು, ಮನೆ ಮಗ ತರಹ ಇದ್ದವನು ನಮಗೆ ನೀನೇ. ನೀನೇ ಬರದಿದ್ದರೆ ಹೇಗೆ ಪುರು, ಎಂದು ಹೇಳಿದಾಗ ನಾನು ಅನಿವಾರ್ಯವಾಗಿ ಒಪ್ಪಿ ಬರಲೇ ಬೇಕಾಯಿತು,sorry.. ಈ ಬದುಕು, ಈ ವಿಧಿಯೇ ನನ್ನನ್ನು ಬರುವಂತೆ ಮಾಡಿ ಬಿಟ್ಟಿತು.
ಪ್ರತೀ ಸಲ ಯಾವುದು ಮಾಡುವುದು ಬೇಡ ಎಂದು ಇರುತ್ತೆನೋ, ಈ ಬದುಕು ನನ್ನ ಕೊರಳಪಟ್ಟಿ ಹಿಡಿದು ದರದರ ಅಂತ ಎಳೆದುಕೊಂಡು ಹೋಗಿ ಅದೆಲ್ಲೆವನ್ನೂ ನನ್ನ ಕೈಯಲ್ಲಿಯೇ ಮಾಡಿಸಿ ಬಿಟ್ಟಿರುತ್ತದೆ, ಆಗ ನಾನು ಆವಾಗಲೆಲ್ಲ ಅಸಹಾಯಕ !!
ವಿಧಿಗೆ ನಮ್ಮ ಇಷ್ಟ ಕಷ್ಟ ಗಳ ಬಗ್ಗೆ ಗೊತ್ತಿರುವುದಿಲ್ಲ!
ಭುಜಂಗಯ್ಯ-ಪ್ರೇಮಕ್ಕ ಬಸ್ ನ ಮುಂದಿನ ಸೀಟ್ ನಲ್ಲಿ ಕುಳಿತುಕೊಂಡಿದ್ದರು.
ಬಸ್ ಉತ್ತರಾಖಂಡ್ ನ ಬೆಟ್ಟ ಗುಡ್ಡಗಳ ನೆತ್ತಿಯಲ್ಲಿರೋ ತಿರುವು ಮುರುವಾದ ರೋಡಿನಲ್ಲಿ ಹಾಗೇ ಹೋಗುತ್ತಿತ್ತು.
ನಿನ್ನ ಹೆಸರೇನು ಮಗು.. ಅಜ್ಜಿ ಕೇಳಿದರು.
#ಪುಷ್ಯರಾಗ ಅಂತ.. ಎಂದು ಹೇಳಿದೆ.
ಅರ್ಥ ಆಗಲಿಲ್ಲ,ಹೇಳಲು ಕೂಡ ನನಗದು ಕಷ್ಟ ಮಗು.
ಪರವಾಗಿಲ್ಲ ಪುರು ಎಂದು ತಿಳಿದುಕೊಳ್ಳಿ.
ಇದಾದರೂ ಪರವಾಗಿಲ್ಲ ನೋಡು.. ಎಂದು ನಕ್ಕರು.
ಅವರನ್ನೇ ನೋಡಿದೆ, ಜೀವನದಲ್ಲಿ ಸುಖದ ಸುಪ್ಪತಿಗೆಯಲ್ಲಿಯೇ ಮಲಗಿ ಎದ್ದು ಬಂದವರಂತೆ ಅವರೇನು ಕಾಣಲಿಲ್ಲ.ಆದರೂ ಚಂದಗೆ ನಗುತ್ತಿದ್ದರು ಅಜ್ಜಿ.
ಬಸ್ ಮತ್ತಷ್ಟು ಮುಂದೆ ಮುಂದೆ ಹಾಗೇ ಸಾಗುತ್ತಿತ್ತು...ಹರಿದ್ವಾರ ದ ಕಡೆಗೆ.
ಅಜ್ಜಿ ಕೂಡ ಹೊರಗೆ ನೋಡುತ್ತಾ ಎಲ್ಲೋ ಕಳೆದು ಹೋಗಿದ್ದರು
ಅಜ್ಜಿಯನ್ನು ಮಾತಾಡಿಸುವ ಎಂದು ಮನಸ್ಸಾಯಿತು.
ಅಜ್ಜಿ.... ಅಂದೆ
ಏನು ಮಗ..
ನಿಮ್ಮ ಕಥೆ ಏನು..
ಎಲ್ಲರಿಗೂ ಇರುವ ಹಾಗೆ ನನಗೂ ಕಥೆ ಅಂತ ಒಂದು ಇದೆ ಮಗು..ಕಥೆ ಏನೋ ಚಿಕ್ಕದೇ,ಆದರೆ ನೋವು ಮಾತ್ರ ದೊಡ್ಡದು!
ಮನಸ್ಸಿಗೆ ಸಮಾಧಾನ ಆಗುವುದಾದರೆ ಹೇಳಿ ಅಜ್ಜಿ.. ಯಾವತ್ತೂ ಮನಸ್ಸು ಬಿಚ್ಚಿ ಮಾತಾಡಬೇಕು, ಹೃದಯದಿಂದ ನಗಬೇಕು ಅಂದೆ.
ನನ್ನ ಹೆಸರು ಸೀತಾ ಅಂತ, ನಮ್ಮ ಯಜಮಾನರ ಹೆಸರು ರಾಮಯ್ಯ ಅಂತ. ಹಳ್ಳಿಯ ಜನ ನಾವು.
ಮದುವೆ ಆದ ನಂತರ ನಮಗೆ ಗಂಡು ಮಗುವೇ ಆಗಬೇಕೆಂದು ನನಗೂ ನಮ್ಮವರಿಗೂ ತುಂಬಾ ಆಸೆ. ನಮ್ಮ ಕುಟುಂಬದಲ್ಲಿ ಹೆಚ್ಚಿನವರಿಗೆ ಹೆಣ್ಣು ಮಕ್ಕಳೇ ಜಾಸ್ತಿ. ಒಬ್ಬರಿಗೂ ಗಂಡು ಹುಟ್ಟಿದ್ದೇ ಇಲ್ಲ. ನಮ್ಮ ಕೊನೆಗಾಲಕ್ಕೆ ಆದರೂ ಬದುಕಿಗೆ ಆಸರೆ ಒದಗಿಸಲು,ಜೀವನಕ್ಕೆ ಊರುಗೋಲು ಆಗಲು.. ಗಂಡು ಮಗು ಒಬ್ಬ ಇದ್ದರೆ ಎಷ್ಟು ಚಂದ ಅಂತ ಆಸೆ ಪಟ್ಟೆವು. ಇದ್ದ ದೇವರಿಗೆಲ್ಲ ಹರಕೆ ಹೊತ್ತೆವು.
ನಮ್ಮ ಇಚ್ಛೆಯಂತೆ ದೇವರ ಸಂಕಲ್ಪದಂತೆ ಗಂಡು ಮಗುವೇ ಆಯಿತು.ಒಂದಲ್ಲ ಎರಡು ಆಯಿತು. ಅವಳಿ ಜವಳಿ.
ಅವತ್ತು ಆದ ಖುಷಿಗೆ ಲೆಕ್ಕವೇ ಇಲ್ಲ. ಬಹುಶಃ ನಾವು ಜೀವನದಲ್ಲಿ ಅತಿಯಾಗಿ ಖುಷಿ ಪಟ್ಟಿದ್ದು ಅದೇ ಒಂದು ದಿನ!!
ಸುತ್ತಮುತ್ತಲಿನ ಮನೆಯವರಿಗೆಲ್ಲ ಸಿಹಿ ಹಂಚಿ ಸಂಭ್ರಮಿಸಿದ್ದೆವು. ಆ ದಿನ ನಮ್ಮ ಪಾಲಿಗೆ ಯುಗಾದಿ, ದೀಪಾವಳಿ ಎರಡೂ ಒಟ್ಟಿಗೆ ಸೇರಿ ನಮ್ಮ ಮನೆ ಬಾಗಿಲಿಗೆ ಬಂದಂತಿತ್ತು.
ನಮ್ಮ ಇಬ್ಬರೂ ಗಂಡು ಮಕ್ಕಳನ್ನು,ತುಂಬಾ ಶ್ರದ್ಧೆಯಿಂದ ಪ್ರೀತಿಯಿಂದ ಬೆಳೆಸಿದೆವು.
ಬಡತನ ಏನೋ ತುಂಬಾ ಇತ್ತು. ಹೊಟ್ಟೆಗೆ ಬಟ್ಟೆಗೆ ಕಟ್ಟಿಕೊಂಡು. ಮಕ್ಕಳು ಕೇಳಿದ್ದನ್ನು ಕೊಡಿಸಿದೆವು, ಓದಿಸಿದೆವು.ಮದುವೆ ಕೂಡ ಮಾಡಿ ಮುಗಿಸಿದೆವು.
ಬಂದ ಸೊಸೆಯಂದಿರಿಗೆ ಹಳೆಯ ಅತ್ತೆ ಮಾಮ,ಆ ಹಳ್ಳಿ ಇಷ್ಟ ಆಗಲಿಲ್ಲ. ಬೇರೆ ಬೇರೆ ಆಗುತ್ತೆವೆ,ಪಾಲು ಬೇಕು ಎಂದು ಕೇಳಿದರು. ಪಾಲು ಮಾಡಲು ಮನಸ್ಸು ಒಪ್ಪಲಿಲ್ಲ. ಆದರೆ ನನ್ನ ಇಬ್ಬರು ಗಂಡು ಮಕ್ಕಳೂ ಕೂಡ ಹಠಕ್ಕೆ ಬಿದ್ದರು, ಜಾಗ ಪಾಲು ಆಗಲೇ ಬೇಕು ಎಂದರು.
ಕೊನೆಗೂ ಜಾಗ ಪಾಲು ಆಯಿತು. ಇಬ್ಬರೂ ಅವರವರ ಪಾಲು ತೆಗೆದುಕೊಂಡು, ಅವರಿಗೆ ಸಿಕ್ಕ ಜಾಗವನ್ನು ಮಾರಿ ಸಿಟಿಗೆ ಹೋಗಿ ಅಲ್ಲಿಯೇ ಶಾಶ್ವತವಾಗಿ ನೆಲೆ ನಿಂತರು. ಅಲ್ಲಿಯವರೆಗೆ ನಮಗೆ ಹೇಳಿಕೊಳ್ಳಲು ಮಕ್ಕಳು ಅಂತ ಇದ್ದರು, ಆದರೆ ಮಕ್ಕಳೇ ಬಿಟ್ಟು ಹೋದ ನಂತರ ನಾವು ಒಂದು ಅರ್ಥದಲ್ಲಿ ಅನಾಥರೇ ಆಗಿ ಹೋಗಿದ್ದೆವು !!
ಅದರ ನಂತರ ನಾವು ದೀಪಾವಳಿ, ಯುಗಾದಿ ಹಬ್ಬವನ್ನು ಆಚರಿಸಿಯೇ ಇಲ್ಲ ಮಗು!!!
ನಮ್ಮ ಯಜಮಾನರಿಗೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಸತ್ತಿದ್ದೆವೋ ಬದುಕಿದ್ದೆವೋ ಎಂದು ನೋಡಲು ಕೂಡ ನಾನು ಹೆತ್ತ ಮಕ್ಕಳು ಯಾವತ್ತೂ ಬರಲೇ ಇಲ್ಲ. ನಂತರ ನಮಗೂ ವಯಸ್ಸಾಗುತ್ತಾ ಬಂತು. ಮೊಮ್ಮಗಳಿಗೆ ಮದುವೆ ಆದ ಸುದ್ದಿ ಕೂಡ ಕಿವಿಗೆ ಬಿತ್ತು. ಆದರೆ ಇಬ್ಬರೂ ಗಂಡು ಮಕ್ಕಳಿಗೆ ಈ ಮುದಿ ಅಪ್ಪ ಅಮ್ಮನ ನೆನಪಾಗಲಿಲ್ಲ ನೋಡು.ನಮ್ಮ ಮೊಮ್ಮಗಳ ಮದುವೆ ಬಿಡು, ನಾವು ನಮ್ಮ ಯಾವುದೇ ಮೊಮ್ಮಕ್ಕಳನ್ನೇ ಈ ಕಣ್ಣುಗಳಿಂದ ಯಾವತ್ತೂ ನೋಡಿಯೇ ಇಲ್ಲ, ಎತ್ತಿ ಆಡಿಸಿದ್ದೂ ಇಲ್ಲ!!
ಕೊನೆಗೆ ಇದ್ದ ಜಾಗವನ್ನೆಲ್ಲ ಮಾರಿದೆವು. ಬಂದ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟೆವು. ವೃದ್ಧಾಪ್ಯ ನೋಡು ಎಲ್ಲೋ ಹೋಗಿ ಸಾಯುವುದಕ್ಕಿಂತ ಸಾಯುವವರೆಗೆ ಬದುಕುವ ಎಂದು ತೀರ್ಮಾನಿಸಿದೆವು. ನಾವೇ ಹೋಗಿ ಅನಾಥಾಶ್ರಮಕ್ಕೆ ಸೇರಿಕೊಂಡೆವು.
ಅನಾಥಾಶ್ರಮದಲ್ಲಿ ಸೇರುವ ದಿನವೇ ಅನಾಥಾಶ್ರಮದವರು ಕೇಳಿದರು, ನಿಮಗೆಷ್ಟು ಮಕ್ಕಳು ಅಜ್ಜಿ ಎಂದು. ನಮಗೆ ಮಕ್ಕಳಿಲ್ಲ ಅನಾಥರು ನಾವು ಎಂದು ಹೇಳಿದೆ. ಹೆತ್ತ ಕರುಳು ನೋಡು ಮಗು. ಹೇಗೆ ತಡೆದು ಕೊಳ್ಳುತ್ತೆ. ಹಾಗೆ ಹೇಳುವಾಗ ಕಣ್ಣು ತುಂಬಿ ಬಂದಿತ್ತು ನನ್ನದು!
ನನಗೆ ಆಗ ಅನ್ನಿಸಿದ್ದು ಇಷ್ಟೇ.. ನಾನೊಂದು ಹೆಣ್ಣು ಮಗು ಹೆತ್ತಿದ್ದರೆ ನಾವು ಇಷ್ಟೊಂದು ಅನಾಥರು ಆಗುತ್ತಿರಲಿಲ್ಲ !!
ಎಂದು ಹೇಳಿ ಮುಗಿಸಿದ ಸೀತಜ್ಜಿಯ ಕಣ್ಣುಗಳಿಂದ ಕಣ್ಣೀರು ಧಾರಕಾರವಾಗಿ ಸುರಿದಿತ್ತು.
ವೃದ್ಧ ಜೀವ ಪಾಪ ಹೇಗೆ ತಡೆದುಕೊಳ್ಳುತ್ತೆ ಹೇಳಿ.
ಸಾಮಾಧಾನ ಪಡಿಸಿದೆ, ಅಜ್ಜಿ..ಸಮಾಧಾನ ಮಾಡಿಕೊಳ್ಳಿ ಅಂದೆ.
ಇದೆಲ್ಲ ಮಾಡಿ ನನಗೆ ಗೊತ್ತಿಲ್ಲ.ಆದರೂ ಆ ಹಿರಿಯ ಜೀವವನ್ನು ನೋಡಿ ಯಾಕೋ ತಡೆದು ಕೊಳ್ಳಲು ಆಗಲೇ ಇಲ್ಲ.
ಅಜ್ಜಿ ಹೇಗೋ ಕಷ್ಟಪಟ್ಟು ಸಮಾಧಾನ ಮಾಡಿಕೊಂಡು ಹೇಳಿದರು.
ನೋಡು ಮಗು ಈ ಬದುಕು ಅದೆಷ್ಟು ವಿಚಿತ್ರ. ನಾವು ಏನು ಅಂದು ಕೊಳ್ಳುತ್ತೆವೆಯೋ ಅದು ಆಗುವುದೇ ಇಲ್ಲ. ಏನು ಆಗಬಾರದು ಎಂದು ಅಂದುಕೊಂಡಿರುತ್ತೆವೆಯೋ ಕೆಲವೊಮ್ಮೆ ಅದೇ ಆಗಿರುತ್ತದೆ, ನಾವು ಅಂತಹದ್ದನ್ನು ಊಹಿಸಿ ಕೂಡ ಇರುವುದಿಲ್ಲ, ಗಂಡು ಮಕ್ಕಳು ಹುಟ್ಟಿದಾಗ ವೃದ್ಧಾಪ್ಯದಲ್ಲಿ ನಮಗೆ ಊರುಗೋಲು ಆಗಿ ಇರುತ್ತಾರೆ ಎಂದು ಅಂದುಕೊಂಡಿದ್ದೆವು,ಖುಷಿ ಪಟ್ಟಿದ್ದೆವು,ಆದರೆ ವಿಧಿಯ ಆಟ ಬೇರೆಯೇ ಇತ್ತು ನೋಡು,ಮಕ್ಕಳು ಇದ್ದೇ ಅನಾಥರು ಆದವರು ನಾವು!!
ಸ್ವಲ್ಪ ಹೊತ್ತು ನಾನು ಮೌನವಾಗಿಯೇ ಇದ್ದ, ಏನು ಹೇಳುವುದು ಎಂದು ಗೊತ್ತಾಗಲಿಲ್ಲ. ಕೊನೆಗೆ ನಾನೇ ಮಾತು ಮುಂದುವರಿಸಿದೆ...
ಅಜ್ಜಿ ಅನಾಥಾಶ್ರಮದಲ್ಲಿ ಇದ್ದು ಮತ್ತೆ ಹೇಗೆ ಈ ಕ್ಷೇತ್ರದರ್ಶನಕ್ಕೆ ಬಂದಿರಿ, ಬರುವ ಮನಸ್ಸು ಮಾಡಿ ಬಿಟ್ಟಿರಿ... ಎಂದು ಕೇಳಿದೆ.
ನಮ್ಮ ಅನಾಥಾಶ್ರಮದ ಮ್ಯಾನೇಜರ್ ದೈವ ಭಕ್ತರು. ಈ ರೀತಿ ಹೊರಗಡೆ ಒಂದು ತೀರ್ಥ ಕ್ಷೇತ್ರಗಳಿಗೆ ಪ್ರವಾಸ ಹೋಗುವ ತಂಡ ಒಂದು ಇದೆ.ಎಲ್ಲರೂ ನಿಮ್ಮ ವಯಸ್ಸಿನವರೇ, ಹೋಗುವವರು ಹೋಗಬಹುದು ಅಂದರು.
ಇದೊಂದು ಆಸೆ ಹಾಗೇ ತುಂಬಾ ಹಿಂದಿನಿಂದಲೇ ಇತ್ತು. ಕ್ಷೇತ್ರ ದರ್ಶನ ಮಾಡಬೇಕು ಎಂದು. ಬ್ಯಾಂಕ್ ನಲ್ಲಿ ಸ್ವಲ್ಪ ಹಣ ಬೇರೆ ಇತ್ತು, ಅದನ್ನು ಇನ್ನೂ ಉಳಿಸಿ ಮಾಡುವುದಾದಾರೂ ಏನು. ಹಾಗಾಗಿ ಇಬ್ಬರೂ ಬಂದು ಬಿಟ್ಟೆವು.
ಕೊನೆಯ ಕ್ಷಣದಲ್ಲಿ ಆದರೂ ಆ ಹರಿದ್ವಾರದ ಗಂಗೆಯಲ್ಲಿ ಮುಳುಗು ಹಾಕಿ ಮೈ ಮನಸ್ಸು ಸ್ವಲ್ಪ ಹಗುರ ಮಾಡುವ ಅಂತ,ಕೇದಾರನಾಥ ದಲ್ಲಿ ಮಹಾದೇವನನ್ನು, ಬದರಿನಾಥದಲ್ಲಿ ಶ್ರೀಹರಿಯನ್ನು ಕಣ್ತುಂಬಾ ನೋಡಿ ಪುಣ್ಯ ಕಟ್ಟಿಕೊಳ್ಳುವ ಅಂತ.ಎಲ್ಲವೂ ಹರಿಯ ಇಚ್ಛೆ ಇದ್ದಂತೆ ಆಗುವುದಲ್ಲವೇ ಮಗುವೇ... ಬದರಿನಾಥನ ದರ್ಶನದ ನಂತರ ಹಾಗೇ ಈ ಪ್ರಾಣ ಹಾರಿ ಹೋಗಬೇಕು ಎಂಬುವುದೇ ನಮ್ಮ ಕೊನೆಯ ಆಸೆ.
ಕೊನೆಯ ಕ್ಷಣದಲ್ಲೂ ದೇವರ ಮೇಲಿನ ಅಪಾರವಾದ ಭಕ್ತಿ ಪ್ರೀತಿಯನ್ನು ನೋಡಿ ಆಶ್ಚರ್ಯವಾಯಿತು. ಬಹುಶಃ ಈ ಜೀವನ ಪ್ರೀತಿ,ಧೈವ ಭಕ್ತಿಯೇ ಅವರನ್ನು ಇಲ್ಲಿಯವರೆಗೂ ಬದುಕಿಸಿದ್ದು, ಕಾಪಾಡಿದ್ದು ಅಂತ ಅಂದುಕೊಂಡೆ.
ಹಾಗೇ ಸುಮ್ಮನೇ ಇದ್ದ ನನ್ನನ್ನು ನೋಡಿ ಸೀತಜ್ಜಿಯೇ ಕೇಳಿದಳು.
ಮಗು ಪುರು.. ನಿನ್ನದು ಏನು ಕಥೆ, ಹೇಳು..
ನನ್ನ ಕಥೆಯೂ ಹೆಚ್ಚು ಕಡಿಮೆ ನಿಮ್ಮ ಕಥೆಯ ಹಾಗೆಯೇ ಇದೆ ಅಜ್ಜಿ.
ಆದರೆ ನನ್ನ ಕಥೆಯಲ್ಲಿ ನಾನೇ ಅನಾಥ.ಅಪ್ಪ ಅಮ್ಮ ಚಿಕ್ಕಂದಿನಿಂದಲ್ಲಿಯೇ ತೀರಿ ಹೋದರು, ಮೊದಲು ಬೇಜವಾಬ್ದಾರಿ ಅಪ್ಪ ತೀರಿ ಹೋದ, ಅಷ್ಟೇನು ಬೇಜಾರು ಆಗಲಿಲ್ಲ. ನಂತರ ದೇವರಂತಹ ಅಮ್ಮ ತೀರಿ ಹೋದಳು,ಬಾಳು ನರಕವೇ ಆಗಿ ಹೋಯಿತು, ದಿಕ್ಕು ತೋಚದಂತಾಯಿತು. ಅವತ್ತು ಮೊದಲ ಬಾರಿಗೆ ಅನಾಥ ಆದೆ ನಾನು.
ನಾನು ಅನಾಥ ಅಂದು ಕೊಂಡಾಗ ಸಿಕ್ಕಿದ್ದು ನಮ್ಮ ಈ ಧಣಿ ಭುಜಂಗಯ್ಯ-ಪ್ರೇಮಕ್ಕ ದಂಪತಿ.ಕೆಲಸ ಕೊಟ್ಟರು, ಹೊತ್ತು ಹೊತ್ತಿಗೆ ಊಟ ಕೊಟ್ಟರು. ನಾನು ಅವರ ಹೊಟ್ಟೆಯಲ್ಲಿ ಹುಟ್ಟಲಿಲ್ಲ ಆದರೆ ಅವರು ಸಿಕ್ಕ ಮೇಲೆ ನಾನೆಂದೂ ಅನಾಥ ಎಂಬ ಭಾವನೆ ಕಾಡಲೇ ಇಲ್ಲ. ಅವರು ಕೂಡ ಅವರ ಮನೆಯ ಮಗನ ಹಾಗೆ ನೋಡಿಕೊಂಡರು.
ಭುಜಂಗಯ್ಯ ನನ್ನ ತಂದೆ ಸಮಾನರು. ಪ್ರೇಮಕ್ಕನಲ್ಲಿ ನಾನು ನನ್ನ ಎರಡನೇ ತಾಯಿಯನ್ನು ಕಂಡೆ.
ಪ್ರೇಮಕ್ಕ ಯಾವತ್ತೂ ಹೇಳುತ್ತಿದ್ದರು.. ಪುರು ನೀನು ಯಾವ ತಾಯಿ ಹೆತ್ತ ಮಗನೋ ಎಂದು ಗೊತ್ತಿಲ್ಲಪ್ಪ, ಆದರೆ ನೀನು ಮಾತ್ರ ನಮಗೆಂದಿಗೂ ಈ ಮನೆಯ ಮನೆಮಗನೇ ಎಂದು ಹೇಳುತ್ತಿದ್ದರು.
ಅವರ ಏಕಮಾತ್ರ ಮಗಳು ವತ್ಸಲ, ನನಗೆ ದೇವರು ಕೊಟ್ಟ ತಂಗಿಯಾದಳು.ಆದರೆ ಅದೇ ಭಗವಂತನಿಗೆ ಆತ ನೀಡಿದ್ದು ಆತನಿಗೆನೇ ಇಷ್ಟವಾಗಲಿಲ್ಲವೋ ಏನೋ.. ಅವಳನ್ನು ಕೂಡ ನನ್ನಿಂದ ಕಿತ್ತುಕೊಂಡು ಬಿಟ್ಟ.ಅವಳು ಚಿಕ್ಕ ವಯಸ್ಸಿಗೆನೇ ಅನ್ಯಾಯವಾಗಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು!
ಆ ಭಗವಂತ ಅದೆಷ್ಟು ಕ್ರೂರಿ, ನನಗೆ ತುಂಬಾನೇ ಮೋಸ ಮಾಡಿಬಿಟ್ಟ.ನಾನು ಆವತ್ತು ಎರಡನೇ ಬಾರಿ ಅನಾಥ ಆಗಿದ್ದೆ!
ಇಷ್ಟು ಹೇಳಿ ಮುಗಿಸುವಾಗ ನನ್ನ ಗಂಟಲು ಗದ್ಗದಿತವಾಗಿತ್ತು...!
ಸೀತಜ್ಜಿಗೆ ಏನೋ ಅನಿಸಿತೋ, ನನ್ನ ತಲೆಯನ್ನು ನೇವರಿಸಿ ಮಗು.. ಎಂದಿಗೂ ಹಾಗೆ ಹೇಳಬೇಡ. ಭಗವಂತ ಯಾರಿಗೂ ಮೋಸ ಮಾಡಲಾರ, ಮೋಸ ಯಾವತ್ತಿಗೂ ಮನುಷ್ಯರೇ ಮಾಡುವುದು
ಒಂದು ಅರ್ಥದಲ್ಲಿ ಹೇಳಬೇಕೆಂದರೆ ಇಲ್ಲಿ ಯಾರು ಕೂಡ ಅನಾಥರು ಅಲ್ಲ,ಅನಾಥರು ಯಾರು ಎಂದರೆ ಯಾರು ತಮ್ಮ ಹೃದಯದಲ್ಲಿ ಭಗವಂತನನ್ನು ಇರಿಸಿಕೊಳ್ಳುವುದಿಲ್ಲವೋ ಅವರು ಮಾತ್ರ ನಿಜವಾದ ಅರ್ಥದಲ್ಲಿ ಅನಾಥರು ಪುರು. ಭಗವಂತ ಇದ್ದಾಗ ನಾವು ಯಾವತ್ತೂ ಒಂಟಿ ಅಲ್ಲ. ಅವ ಸದಾ ನಮ್ಮೊಳಗೆಯೇ ಇದ್ದಾನೆ ಎಂದೇ ನಾವು ತಿಳಿದುಕೊಳ್ಳಬೇಕು. ಅವಾಗ ಎಂದಿಗೂ ನಾವು ಅನಾಥರು, ಒಬ್ಬಂಟಿಗರು ಎಂಬ ಭಾವ ಆವರಿಸುವುದಿಲ್ಲ .
ಭಗವಂತ ಯಾವತ್ತಿಗೂ ನಮ್ಮ ಕೈ ಬಿಡುವುದಿಲ್ಲ, ಹಾಗೇ ನಾವು ಅಂದುಕೊಳ್ಳುತ್ತೇವೆ ಅಷ್ಟೇ ಮಗು,ಯಾವಾಗ ನಮ್ಮ ಬದುಕಿನ ಲೆಕ್ಕ ಇಲ್ಲಿ ಮುಗಿಯುವುದೋ, ಆ ದಿನ ಆ ಕ್ಷಣ ಮಾತ್ರ ಅವನು ನಮ್ಮ ಕೈ ಬಿಟ್ಟು ಬಿಡುತ್ತಾನೆ..ನಾವು ಎಷ್ಟೇ ಗಟ್ಟಿ ಅವನ ಕೈ ಹಿಡಿದರೂ ಕೂಡ..
ಅದು ಕೈಬಿಡುವುದು ಸಹ ಅಲ್ಲ, ನಮ್ಮ ಕೈ ಹಿಡಿದು ಅವನಲ್ಲಿಗೆ ನಮ್ಮನ್ನು ಅವನೇ ಕರೆಸಿಕೊಳ್ಳುವುದು.
ಮಕ್ಕಳು ಬಿಟ್ಟು ಹೋದಾಗ ನಮಗೂ ಹೀಗೆ ಆಯಿತು, ಆದರೂ ಹೇಗೋ ಹರಿ ಸೇವೆ ಮಾಡುತ್ತಾ, ಹರಿ ನಾಮ ಭಜಿಸುತ್ತಾ, ಅವನನ್ನು ಅನುದಿನವೂ ಸ್ಮರಿಸುತ್ತಾ ಹಾಗೇ ಬದುಕಿ ಬಿಟ್ಟೆವು. ಈಗ ಶ್ರೀ ಹರಿ ಬಿಟ್ಟರೆ ಬೇರೆ ಏನೂ ನಮಗೆ ಬೇಕಾಗಿಯೂ ಇಲ್ಲ,ಬೇರೆ ಯಾರ ಅವಶ್ಯಕತೆಯೂ ಕೂಡ ನಮಗಿಲ್ಲ.. .
ಆಹಾ.. ಜೀವನದ ಎಂತಹ ಒಂದು ಅತ್ಯುತ್ತಮವಾದ ಮಾತುಗಳನ್ನು ಸೀತಜ್ಜಿ ಈ ಉತ್ತರಾಖಂಡದ ಪರ್ವತಗಳ ತಿರುವು ರೋಡಿನಲ್ಲಿ,ಈ ಬಸ್ಸಿನಲ್ಲಿ ನನ್ನ ಪಕ್ಕ ಕುಳಿತುಕೊಂಡು ನನಗೆ ಹಾಗೇ ತಮ್ಮ ಅಪಾರವಾದ ಜೀವನಾನುಭವದಿಂದ ಹೇಳಿಬಿಟ್ಟಳು.
ಅಜ್ಜಿಯನ್ನೇ ನೋಡಿದೆ ,ಹೆಚ್ಚು ಕಡಿಮೆ ಅವಳಿಗೆ 75 ರಿಂದ 80 ರ ಒಳಗಿನ ಪ್ರಾಯ ಆಗಿರಬಹುದು ಅಂತ ಅನ್ನಿಸಿತು. ಅಜ್ಜಿಗೆ ನನ್ನ ಪ್ರಾಯದ ಇಲ್ಲವೇ ನನಗಿಂತಲೂ ದೊಡ್ಡ ವಯಸ್ಸಿನ ಮೊಮ್ಮಕ್ಕಳು ಇರಬಹುದು ಈಗ.
ಆದರೆ ಅಜ್ಜಿಗೆ ಎಲ್ಲರು ಇದ್ದರೂ ಈಗ ಆಕೆಯ ಬಳಿ ಗಂಡ ಬಿಟ್ಟು ಬೇರೆ ಯಾರೂ ಇಲ್ಲ!
ಆದರೂ ದೇವರೊಬ್ಬ ಅವಳೊಂದಿಗೆ ಸದಾ ಇದ್ದಾನೆ ಎಂದು ನಂಬಿದ್ದಾಳೆ. ಹಾಗೇ ಬದುಕಿ ಬಿಟ್ಟಳು ಕೂಡ. ಬದುಕಿನ ಕಡೆಗೆ ಅವಳ ಮನಸ್ಥಿತಿ ಆದರೂ ಎಂತಹದ್ದು. ಅವಳು ಯಾರಿಗೆ ಆಗಲಿ ಸ್ಫೂರ್ತಿ ಆಗಬಲ್ಲಳು.. ಅದರಲ್ಲೂ ಸಾಯುವವರಿಗೆ.. ಆತ್ಮಹತ್ಯೆ ಮಾಡಿಕೊಳ್ಳುವವರಿಗೆ! .
ಹೌದು ಅವಳು ಬದುಕಿದ್ದ ರೀತಿ ಆಗಿತ್ತು. ಆದರೂ ಅವಳಿಗೂ ಬುದುಕಿನ ಬಗ್ಗೆ ಯಾವುದೇ ಕಂಪ್ಲೈಂಟ್ ಗಳಿರಲಿಲ್ಲ.
ಒಮ್ಮೆ ಬಸ್ ಪೂರ್ತಿ ನೋಡಿದೆ. ಹೆಚ್ಚು ಕಡಿಮೆ ಎಲ್ಲಾ ವೃದ್ಧ ಜೀವಗಳೇ ತುಂಬಿದ್ದವು 60,70 ಕ್ಕಿಂತಲೂ ಮೇಲ್ಪಟ್ಟ ವಯಸ್ಸಿನವರೇ ಎಲ್ಲಾ. ಸುಮಾರು 40 ಜನರು ಇದ್ದಿರೋ ಬಸ್ ಅದು. ಅವರೆಲ್ಲ ಯಾರೋ.. ನನಗೆ ಗೊತ್ತಿಲ್ಲ. ಆದರೆ ಒಂದಂತು ಖಂಡಿತವಾಗಿಯೂ ಗೊತ್ತಿತ್ತು, ಅವರೆಲ್ಲರೂ ಅಪಾರವಾಗಿ ದೇವರನ್ನು ನಂಬಿರೋ ಭಗವದ್ಭಕ್ತರಾಗಿದ್ದರು, ಜೀವನದ ಕೊನೆಯ ಘಳಿಗೆಯಲ್ಲಿ ಜೀವನವನ್ನೊಮ್ಮೆ ಪಾವನಗೊಳಿಸಲು ತೀರ್ಥ ಕ್ಷೇತ್ರ ಸಂದರ್ಶಿಸಲು ಹೊರಟು ಬಂದಿದ್ದರು.
ಡ್ರೈವರ್ ಹಾಗೂ ಬಸ್ ನ ಮ್ಯಾನೇಜರ್ ಕೂಡ ಹೆಚ್ಚು ಕಡಿಮೆ 50 ದಾಟಿದವರೇ. ಇದ್ದುದರಲ್ಲಿ ನಾನೇ ತುಂಬು ಯುವಕ. 26 ರ ಹರೆಯ.
ನೋಡು ನಿನಗೆ ನಾನು ಏನೋ ಒಂದು ಕೊಡಬೇಕು ಪುರು ಎಂದು ಅಜ್ಜಿ ತನ್ನ ಚೀಲದಿಂದ ಒಂದು ಮೈಸೂರು ಪಾಕ್ ಅನ್ನು ತೆಗೆದು ನನ್ನ ಕೈಯಲ್ಲಿ ಇಟ್ಟಳು.
ತಗೋ.. ಇದು ನಿನಗೆ.. ತಿನ್ನು ಅಂದಳು.
ಆಹಾ.. ಈ ಹೆಣ್ಣು ಜೀವ ಎಂಬುದು ಇದೆಯಲ್ಲ ಅದು ಎಂದಿಗೂ ವಾತ್ಸಲ್ಯದ, ಪ್ರೇಮದ ಗಣಿಯೇ ಆಗಿರುವುದು.ಹಂಚಿ ಕೊಂಡು ತಿನ್ನುವುದನ್ನು,ತಾವು ತಿನ್ನದೇ ಹಸಿದವರ ಹೊಟ್ಟೆ ತಣಿಸುವುದನ್ನು ಹೆಣ್ಣು ಜೀವದಿಂದಲೇ ಕಲಿಯಬೇಕು.
ಅದೇಗೆ ಅಜ್ಜಿಗೆ ಗೊತ್ತಾಯಿತೋ... ನಿಜವಾಗಿಯೂ ಏನಾದರೂ ಒಂದು ತಿನ್ನಲು ಬೇಕಿತ್ತು ಅಂತ ಅನ್ನಿಸಿದ್ದ ಸಮಯಕ್ಕೆನೇ ಅಜ್ಜಿ ನನ್ನ ಕೈಯಲ್ಲಿ ಮೈಸೂರು ಪಾಕ್ ಇಟ್ಟಿದ್ದಳು.
ಮೈಸೂರು ಪಾಕ್ ಅನ್ನು ಕೈಯಲ್ಲಿಯೇ ಎರಡು ತುಂಡು ಮಾಡಿದೆ, ಇನ್ನೇನು ಒಂದು ತುಂಡು ಬಾಯಿಗೆ ಇಡಬೇಕು ಎಂದು ಬಾಯಿ ಬಳಿ ಮೈಸೂರು ಪಾಕ್ ತಂದಿದ್ದೆ ನೋಡಿ,ಆವಾಗ ಆ ಒಂದು ಘಟನೆ ನಡೆಯಿತು !!
ಆ ತಿರುವಿನಲ್ಲಿ ನಾನಿದ್ದ ಬಸ್ ಗೆ ಅಪಘಾತ ಒಂದು ಆಗಿ, ನನ್ನ ಕೈಯಲ್ಲಿ ಇದ್ದ ಎರಡೂ ತುಂಡು ಮೈಸೂರು ಪಾಕ್.. ಕೈಯಿಂದ ಜಾರಿ.. ಪ್ರಪಾತಕ್ಕೆ ಬಿದ್ದು ಹಾಗೇ ನನ್ನಿಂದ ಕಣ್ಮರೆಯಾಗಿ ಹೋಗಿತ್ತು!!
ನಮ್ಮ ಬಸ್ ಅನ್ನು ಚಲಾಯಿಸುತ್ತಿದ್ದ ಡ್ರೈವರ್,ಎದುರಿನಲ್ಲಿ ಒಮ್ಮೆಲೇ ವೇಗವಾಗಿ ಬಂದ ಬಸ್ ಗೆ ಸೈಡ್ ಕೊಡಲು ಹೋಗಿ ನಾವಿದ್ದ ಬಸ್,ಪ್ರಪಾತದ ಬದಿಯಲ್ಲಿ ವಾಹನಗಳು ಕೆಳಗೆ ಬೀಳದಂತೆ ಕಟ್ಟಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದು, ಅದೇ ತಡೆಗೋಡೆಯ ದಂಡೆಯಲ್ಲಿ ಕೆಳಗಿನ ಪ್ರಪಾತಕ್ಕೆ ಮುಖ ಮಾಡಿ ಹಾಗೇ ಲಂಬವಾಗಿ ನೇತಾಡುತ್ತಾ ನಿಂತು ಬಿಟ್ಟಿತ್ತು !!!
ಮನೆಯ ಮೂಲೆಯಲ್ಲಿ ಗೂಡುದೀಪ ನೇತು ಹಾಕಿದಂತೆ!!!
ಬಸ್ ನಲ್ಲಿದ್ದ ಎಲ್ಲರೂ ಬಸ್ ನ ಒಂದೇ ಕಡೆಗೆ ಜಾರಿ ಹೋಗಿ ಪ್ರಪಾತದ ದಿಕ್ಕಿಗೆ ಮುಖ ಮಾಡಿದ್ದ ಬಸ್ ನ ಆ ತುದಿಯಲ್ಲಿ, ಬಸ್ ನಲ್ಲಿಯೇ ನೇತಾಡುತ್ತಾ ಉಳಿದು ಬಿಟ್ಟರು!
ನಿಜವಾಗಿಯೂ ಅದೊಂದು ಭೀಕರವಾದ ದೃಶ್ಯ!!
ನೋಡಿದವರ ಎದೆ ಜಲ್ ಎನ್ನಬೇಕು!
ಬಸ್ ತಡೆಗೋಡೆಯ ದಂಡೆಗೆ ಡಿಕ್ಕಿ ಹೊಡೆದಾಗ, ಆ ರಭಸಕ್ಕೆ ಒಬ್ಬರು ಬಸ್ ನಿಂದಲೇ ಹೊರಗೆ ಹಾರಿ ಹೋಗಿದ್ದರು!!
ಬೇರೆ ಯಾರೂ ಆಗಿರದೇ ಅದು ನಮ್ಮ ಧಣಿ ಭುಜಂಗಯ್ಯನವರ ಮಡದಿ ಪ್ರೇಮಕ್ಕ ಆಗಿದ್ದರು !! ನನ್ನ ಎರಡನೇ ತಾಯಿ!
ಬಸ್ ನಿಂದ ಡಿಕ್ಕಿ ಆದ ರಭಸಕ್ಕೆ ಹೊರ ಹಾರಿದ್ದ ಅವರು, ದೇವರ ದಯೆಯಿಂದ ಸೀದಾ ಹೋಗಿ ಆಳದ ಪ್ರಪಾತಕ್ಕೆ ಹೋಗಿ ಬಿದ್ದಿರಲಿಲ್ಲ. ಅಲ್ಲೇ ಆ ಪ್ರಪಾತದ ಕಣಿವೆಯ ಇಳಿಜಾರಿನಲ್ಲಿ ಇದ್ದ ಮರದ ಕೊಂಬೆಯನ್ನು ಹೇಗೋ ಹಾಗೇ ಗಟ್ಟಿಯಾಗಿ ಹಿಡಿದು ಅಲ್ಲೇ ನೇತಾಡುತ್ತಿದ್ದರು.! ಹೌದು ಪುಣ್ಯಕ್ಕೆ ಬದುಕಿದ್ದರು.
ಅದನ್ನು ನೋಡಿದ ಭುಜಂಗಯ್ಯ ಅವರು ತನ್ನ ಮಡದಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಅವರು ಕೂಡ ಅದೇ ಕ್ಷಣ ಬಸ್ ನಿಂದ ಕೆಳಗೆ ಯಾರಿಗೂ ಹೇಳದೇ ಕೇಳದೇ ಹಾಗೇ ಧುಮುಕಿ ಪ್ರೇಮಕ್ಕ ನೇತಾಡುತ್ತಿದ್ದ ಮರದ ಕೊಂಬೆಯನ್ನೇ ಹಿಡಿದುಕೊಂಡು ಬಿಟ್ಟರು!
ಈಗ ಅವರು ಇಬ್ಬರೂ ಒಂದೇ ಮರದ ಆ ಕೊಂಬೆಯಲ್ಲಿ ನೇತಾಡುತ್ತಿದ್ದರು!!
ನನಗೆ ಏನು ಮಾಡುವುದು ಎಂದು ತೋಚಲಿಲ್ಲ. ಬಸ್ ನಲ್ಲಿ ಇದ್ದ ವೃದ್ಧರು ಅಳುತ್ತಾ ಬೊಬ್ಬೆ ಹಾಕುತ್ತಿದ್ದರು. ಎಲ್ಲರಿಗೂ ಸಮಾಧಾನ ಹೇಳಿದೆ. ಏನೂ ಆಗಲ್ಲ ಭಗವಂತ ಇದ್ದಾನೆ, ಭಗವಂತ ಇರುವಾಗ ನಮಗೇನೂ ಆಗಲ್ಲ, ಅವನು ನಮಗೆ ಮೋಸ ಮಾಡಲಾರ.. ಅವನ ದರ್ಶನಕ್ಕೆ ಎಂದೇ ಬಂದಿರುವ ನಮ್ಮನ್ನು ಅನಾಥರಂತೆ ಇಲ್ಲಿ ನಡು ನೀರಲ್ಲಿ ಆತ ಕೈ ಬಿಡಲಾರ...ಎಂದೆ
ನಾನು ಅಷ್ಟನ್ನು ಹೇಗೆ ಹೇಳಿದೆನೋ, ಯಾವತ್ತೂ ದೇವರ ಬಗ್ಗೆ ಈ ರೀತಿ ಮಾತಾಡಿದವನೇ ಅಲ್ಲ ನಾನು.ಆದರೂ ನನ್ನಲ್ಲಿ ಆ ಮಾತುಗಳು ನನಗರಿವಿಲ್ಲದೇ ಹೊರಟ್ಟಿದ್ದವು. ಬಹುಶಃ ಸೀತಜ್ಜಿಯ ಪ್ರಭಾವ.
ಬಸ್ ನ ಒಳಗೆ ಒಂದು ಮೂಲೆಯಲ್ಲಿ ಬಿದ್ದಿದ್ದ ಸೀತಜ್ಜಿ ನಾನು ಹೇಳಿದ್ದನು ಕೇಳಿ ಹಾಗೇ ನಕ್ಕರು. ಅವರಲ್ಲಿ ಭಯವಾಗಲಿ, ಗೊಂದಲವಾಗಲಿ ಯಾವುದೂ ಕಾಣಿಸಲಿಲ್ಲ.
ಈಗ ನನ್ನ ಧಣಿ ಭುಜಂಗಯ್ಯ-ಪ್ರೇಮಕ್ಕನವರನ್ನು ಉಳಿಸಲು ನಾನೇ ಏನೋ ಒಂದು ಮಾಡಬೇಕಾಗಿತ್ತು. ಅಲ್ಲಿ ಯುವಕ ಅಂತ ಇದ್ದದ್ದೇ ನಾನು.
ಜೋರಾಗಿ ಸೀತಜ್ಜಿಗೆ ಕೇಳುವಂತೆ ಹೇಳಿದೆ. ಸೀತಜ್ಜಿ ನೀನು ಹೆದರಬೇಡ.. ಭಗವಂತ ಇದ್ದಾನೆ, ನೀನು ಗಂಗೆಯಲ್ಲಿ ಮುಳುಗು ಕೂಡ ಹಾಕುತ್ತೀಯಾ.. ಬದರಿನಾಥನ ದರ್ಶನ ಕೂಡ ಮಾಡುತ್ತಿಯಾ ಅಲ್ಲಿಯವರೆಗೆ ನಿನಗೆ ಏನೂ ಆಗಲ್ಲ. ಧೈರ್ಯದಿಂದ ಇರು. ಹಾಗೇ ಉಳಿದವರಿಗೂ ನಿನ್ನ ಮಾತುಗಳಿಂದ ಸ್ವಲ್ಪ ಧೈರ್ಯ ತುಂಬು ಸೀತಜ್ಜಿ ಅಂದೆ.
ಸೀತಜ್ಜಿ ಎರಡೂ ಕೈ ಎತ್ತಿ ಮನಸಾರೆ ಹರಸಿ, ಬೊಚ್ಚು ಬಾಯಿಯಲ್ಲಿ ನಗುತ್ತಾ ಆಯಿತಪ್ಪಾ ಅಂದರು.. ಈಗ ಬರುತ್ತೇನೆ ಸೀತಜ್ಜಿ ಎಂದು ಹೇಳಿದವನೇ, ನೇತಾಡುತ್ತಿದ್ದ ಆ ಬಸ್ ನಿಂದ ಸ್ವಲ್ಪ ಪಕ್ಕದಲ್ಲಿ ಇದ್ದ ಇನ್ನೊಂದು ಮರಕ್ಕೆ ತುಂಬಾನೇ ಕಷ್ಟ ಪಟ್ಟು ಜಿಗಿದು ಹಾರಿ ಅದರ ಕೊಂಬೆಯನ್ನು ಹಿಡಿದುಕೊಂಡೆ.
ನಾನು ಹಿಡಿದಿದ್ದ ಮರದಿಂದ ಕೆಳಗಿನ ಮರದಲ್ಲಿ ಧಣಿ ಭುಜಂಗಯ್ಯ-ಪ್ರೇಮಕ್ಕ ಇಬ್ಬರೂ ನೇತಾಡುತ್ತಿದ್ದರು.
ನಾನು ಮೇಲಿನ ಮರದಲ್ಲಿ ನೇತಾಡುತ್ತಲೇ ಅವರಿಗೆ ಹೇಳಿದೆ ಏನಾಗಲ್ಲ ಧಣಿ ಹೆದರಬೇಡಿ, ದೇವರು ಇದ್ದಾನೆ..ಸಹಾಯ ಮಾಡಲು ನಾನಿದ್ದೇನೆ.. ನೀವು ಮರವನ್ನು ಮಾತ್ರ ಯಾವ ಕಾರಣಕ್ಕೂ ಕೈ ಬಿಡಬೇಡಿ.
ಕೈ ನೋಯುತ್ತಿದೆ ಏನಾದರೂ ಒಂದು ಮಾಡು ಪುರು.. ಅಂದರು ಪ್ರೇಮಕ್ಕ ಅಳುತ್ತಲೇ..
ಅಷ್ಟೇ.. ನಾನು ಮೇಲಿನ ಮರದ ಕೊಂಬೆಯಲ್ಲಿ ನೇತಾಡುತ್ತಿದ್ದೆ, ಭುಜಂಗಯ್ಯ-ಪ್ರೇಮಕ್ಕ ನನಗಿಂತ ಕೆಳಗಿನ ಮರದ ಕೊಂಬೆಯಲ್ಲಿ ನೇತಾಡುತ್ತಿದ್ದರು.. ನಾವು ಮೂವರು ನೇತಾಡಿಕೊಂಡು ನೋಡುತ್ತಿದ್ದ ಹಾಗೆಯೇ..
ಮೇಲೆ ನೇತಾಡುತ್ತಿದ್ದ ಬಸ್ ಅಲುಗಾಡ ತೊಡಗಿತು!
ಆ ಅಲುಗಾಟಕ್ಕೆ ಬಸ್ ನಲ್ಲಿ ನೇತಾಡುತ್ತಿದ್ದ
ಜನ ಒಬ್ಬೊಬ್ಬರಾಗಿ ತರಗೆಲೆ ಯಂತೆ ಉದುರ ತೊಡಗಿದರು....!
ಹೌದು ಐದು ಜನ!
ಹೌದು ಐದೂ ಜನ ವೃದ್ಧರು ಪ್ರಪಾತದ ಆಳಕ್ಕೆ ನನ್ನ ಕಣ್ಣ ಮುಂದೆಯೇ ಬಿದ್ದು ಹೋಗಿ ಆಗಿತ್ತು!
ಖಂಡಿತವಾಗಿಯೂ ಅಲ್ಲಿ ಬಿದ್ದರೆ ಬದುಕುವ ಅವಕಾಶವೇ ಇಲ್ಲ. ಅಷ್ಟು ಎತ್ತರದಿಂದ ಯುವಕರು ಬಿದ್ದರೆ ಬದುಕವುದೇ ಕಷ್ಟ.. ಇನ್ನು ಈ ವೃದ್ಧರು ಬಿದ್ದರೆ ಖಂಡಿತವಾಗಿಯೂ ಬದುಕುವ ಯಾವುದೇ ಚ್ಯಾನ್ಸ್ ಇಲ್ಲ! ಆ ಕಲ್ಲು ಬಂಡೆಗಳಿಗೆ ತಲೆ ಹೊಡೆದು ಹೋಗಿ ಬಿದ್ದ ಕೂಡಲೇ ಸತ್ತೆ ಹೋಗುತ್ತಾರೆ! ಅಲ್ಲಿ ಬಿದ್ದರೆ ಒಂದು ರೀತಿಯಲ್ಲಿ ಬದುಕಿಗೆ ಎಳ್ಳು ನೀರು ಬಿಟ್ಟ ಹಾಗೆಯೇ!
ನಾನು ಸ್ತಬ್ಧನಾಗಿದ್ದೆ! ಸಾವು ನನಗೇನು ಹೊಸದಲ್ಲ. ಚಿಕ್ಕವನಿರುವಾಗ ಅಪ್ಪ ಅಮ್ಮ ನನ್ನ ತಪ್ಪಿನಿಂದಾಗಿಯೇ ನನ್ನೆದುರೇ ಸತ್ತಿದ್ದರು, ನಂತರ ತಂಗಿ ವತ್ಸಲ ಕೂಡ ದೇವರ ಪಾದ ಸೇರಿದ್ದಳು. ಸಾವು ಯಾವತ್ತಿಗೂ ನನ್ನ ಸುತ್ತಲೇ ಕುಣಿದಾಡಿತ್ತು, ನಲಿದಾಡಿತ್ತು!
ನನ್ನದು ಇಕ್ಕಟ್ಟಿನ ಪರಿಸ್ಥಿತಿ ಆಗಿತ್ತು ಈಗ. ಮೇಲಿರುವ ಬಸ್ ಗೆ ಕೂಡ ಹೋಗುವ ಹಾಗೆಯೂ ಇರಲಿಲ್ಲ. ಕೆಳಗೆ ನೇತಾಡುತ್ತಿದ್ದ ಇಬ್ಬರನ್ನೂ ಒಮ್ಮೆಗೆ ಬಚಾವ್ ಮಾಡುವುದು ಕೂಡ ಸುಲಭದ ಮಾತಾಗಿರಲಿಲ್ಲ.. ಏನು ಮಾಡುವುದು ಎಂದು ತೋಚಲಿಲ್ಲ!
ಪುನಃ ಹತ್ತು ಮಂದಿ ಬಸ್ ನಿಂದ ಉದುರಿ.. ಪ್ರಾಪತದ ಆಳಕ್ಕೆ ಬಿದ್ದು ಶಿವನ ಪಾದ ಸೇರಿದ್ದರು!!
ನಾನು ನೇತಾಡುತ್ತಿದ್ದ ಭುಜಂಗಯ್ಯ ದಂಪತಿಗೆ ಧೈರ್ಯ ನೀಡುತ್ತಿದ್ದೆ.
ನಾವು ಮೂವರು ನೋಡುತ್ತಿದ್ದ ಹಾಗೆಯೇ.. ಜನರು ಮೇಲೆ ನೇತಾಡುತ್ತಿದ್ದ ಬಸ್ ನಿಂದ ಒಬ್ಬೊಬ್ಬರಾಗಿ ಬೀಳುತ್ತಲೇ ಇದ್ದರು!!
ಒಬ್ಬರಾದ ನಂತರು ಒಬ್ಬರು!
ಆ ದೃಶ್ಯ ಹೇಮಂತ ಋತುವಿನಲ್ಲಿ ಮರಗಳಿಂದ ನಿಧಾನವಾಗಿ ಹಣ್ಣಾದ ಎಲೆಗಳು ಒಂದೊಂದಾಗಿ ಉದುರಿದಂತೆ ಇತ್ತು... ನಾವು ನೇತಾಡುತ್ತಾ ನೋಡುತ್ತಿದ್ದ ಎದುರಿನ ಪ್ರಕೃತಿ ಎಂಬ ವಿಶಾಲ ಪರದೆಯಲ್ಲಿ ಆ ದೃಶ್ಯ ನಿರಂತರವಾಗಿ ಪ್ಲೇ ಆಗುತ್ತಲೇ ಇತ್ತು!!. ಜನಗಳು ಅವರಷ್ಟಕ್ಕೇ ಅವರೇ ಉದುರಿ ಹೋಗುತ್ತಿದ್ದರು. ನಾವು ಮೂವರು ನಮ್ಮಷ್ಟಕ್ಕೇ ನೇತಾಡುತ್ತಾ ಮೂಖರಾಗಿ ಅದನ್ನೇ ನೋಡುತ್ತಾ ಅಸಹಾಯಕರಾಗಿದ್ದೆವು!
ಭುಜಂಗಯ್ಯ-ಪ್ರೇಮಕ್ಕ ನೇತಾಡುತ್ತಿದ್ದ ಮರದ ಕೊಂಬೆ ಅವರಿಬ್ಬರ ಭಾರ ತಾಳಲಾರದಾಯಿತು. ಅದು ಬಾಗಲು ಶುರುವಾಯಿತು!
ನಾನು ಮತ್ತಷ್ಟು ಅವರ ಮರದ ಕೊಂಬೆಯ ಬಳಿ ನನ್ನ ಕೈಚಾಚಿ ಹೇಳಿದೆ ಧಣಿ ಕೈ ಕೊಡಿ.. ಕೈ ಕೊಡಿ.. ಎಂದು. ಆದರೆ ಅವರಿಂದ ಅದು ಸಾಧ್ಯವಾಗಲಿಲ್ಲ !
ತನ್ನ ಮಡದಿ ತಾನು ಇಬ್ಬರೂ ಒಟ್ಟಿಗೆ ಕೊಂಬೆ ಮುರಿದು ಕೆಳಗಿನ ಪ್ರಪಾತಕ್ಕೆ ಬಿದ್ದು ಇಬ್ಬರೂ ಸಾಯುವುದು ಬೇಡ ಎಂದು ಅವರು ನಿರ್ಧರಿಸಿಬಿಟ್ಟಿದ್ದರು ಎಂದು ಕಾಣುತ್ತೆ....
ಅದಕ್ಕಾಗಿ ಅವರು ಕೊಂಬೆಯಿಂದ ಕೈ ಬಿಟ್ಟು ಬಿಟ್ಟರು!!
ನಾನು ಧಣಿ ಬೇಡ.. ಬೇಡ.. ಎಂದು ಕೂಗು ಹಾಕಿದೆ.!
ಆದರೆ ಭುಜಂಗಯ್ಯ ಸಿದಾ ಹೋಗಿ ಕೆಳಗೆ ಪ್ರಪಾತಕ್ಕೆ ಬೀಳುವ ಮೂಲಕ ಈ ಲೋಕದ ನಂಟನ್ನು ಶಾಶ್ವತವಾಗಿ ಕಡಿದು ಕೊಂಡಿದ್ದರು!!
ದೇವರಂತಹ ಮನುಷ್ಯ ಭುಜಂಗಯ್ಯ. ಕೆಲಸದವನಾದರೂ ನನಗೆ ಎಂದಿಗೂ ಒಂದು ಮಾತು ಬೈದವರಲ್ಲ ಅವರು. ಕೆಲಸ ಕೊಟ್ಟರು, ಆಸರೆ ಕೊಟ್ಟರು, ಊಟ ಕೊಟ್ಟರು, ಬದುಕು ಕಟ್ಟಿಕೊಟ್ಟರು... ಆದರೆ ಇಲ್ಲಿ ಬಂದು ನನ್ನೆದುರೇ ತಮ್ಮ ಬದುಕನ್ನು ಕೊನೆ ಮಾಡಿಕೊಂಡು ಬಿಟ್ಟರು!!
ಈ ವಿಧಿ ಅದೆಂತಹ ಕ್ರೂರಿ...
ನೋಡುತ್ತಿದ್ದ ಹಾಗೆ ಬಸ್ ಮತ್ತಷ್ಟು ಅಲುಗಾಡಿ ಪ್ರಪಾತ ಕಡೆಗೆ ಸರಿಯಿತು..!! ಅದರೆ ದೇವರ ದಯೆಯಿಂದ ಇನ್ನೂ ಆ ತಡೆ ಗೋಡೆಯ ದಂಡೆಯಲ್ಲಿಯೇ ನೇತಾಡುತ್ತಿತ್ತು.
ಬಸ್ ನಿಂದ ಇನ್ನಷ್ಟು ಜನ ಕೆಳಗೆ ಉದುರಿ ಇಹಲೋಕ ತ್ಯಜಿಸುತ್ತಲೇ ಇದ್ದರು. ಅದೊಂದು ಪ್ರಕೀಯೆ ನಿರಂತರವಾಗಿ ಸಾಗುತ್ತಲೇ ಇತ್ತು. ಅದನ್ನು ನಿಲ್ಲಿಸುವವರು ಅಲ್ಲಿ ಯಾರೂ ಇರಲಿಲ್ಲ. ಭಗವಂತನ ಹೊರತು. ಆದರೆ ಭಗವಂತ ಯಾಕೋ ಮನಸ್ಸೇ ಮಾಡಲಿಲ್ಲ,ಸುಮ್ಮನೆ ಎಲ್ಲವನ್ನೂ ನೋಡುತ್ತಿದ್ದ..!
ಹಾಗಾಗಿ ಒಬ್ಬರಾದ ಮೇಲೆ ಮತ್ತೊಬ್ಬರು, ಹೀಗೆ ಮತ್ತಷ್ಟು ಜನ ಉದುರುತ್ತಲೇ ಇದ್ದರು...
ಬಸ್ ಮತ್ತಷ್ಟು ಜೋರಾಗಿ ಅಲುಗಾಡಿತು!
ಕೊನೆಗೂ ಅದರಲ್ಲಿದ್ದ ಆ ಎಲ್ಲರೂ ಪ್ರಪಾತಕ್ಕೆ ಉದುರಿ ಪರಲೋಕ ಸೇರಿಕೊಂಡಾಯಿತು!!
ಆದರೆ ಒಬ್ಬರು ಮಾತ್ರ ಇನ್ನೂ ನೇತಾಡುತ್ತಿದ್ದ ಬಸ್ಸಿನೊಳಗೆಯೇ ಇದ್ದರು,ಅದು ಸೀತಜ್ಜಿ!
ಅವರ ಜೀವನ ಸಂಗಾತಿ ಗಂಡ ರಾಮಯ್ಯ ಕೂಡ ಅದಾಗಲೇ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡು ಆಗಿತ್ತು!!
ಈಗ ಕೆಳಗಿನ ಕೊಂಬೆಯಲ್ಲಿ ಪ್ರೇಮಕ್ಕ ಒಬ್ಬರೇ ಇನ್ನೂ ನೇತಾಡುತ್ತಲೇ ಇದ್ದರು ಆದರೆ ಅವರು ದಿಗ್ಭ್ರಾಂತರಾಗಿ ಹೋಗಿದ್ದರು. ತನ್ನ ಗಂಡ ತನ್ನೆದುರೇ ಸತ್ತು ಹೋದ ಯಾವುದೇ ಮಹಿಳೆಯ ಸ್ಥಿತಿ ಹೇಗಿರಬೇಡ!.
ಪುರು... ಅಂದರು ಅಳುತ್ತಲೇ ನೇತಾಡುತ್ತಲೇ...
ಏನಮ್ಮಾ ಎಂದೆ...
ನಾನಿನ್ನು ಹೋಗಿ ಬರಲೇ ಪುರು.. ಅಂದರು
ಎಲ್ಲಿಗೆ ತಾಯಿ ಕೇಳಿದೆ.
ಇನ್ನೆಲ್ಲಿಗಪ್ಪ..ಎಲ್ಲರೂ ಹೋದಲ್ಲಿಗೆ ..ನನ್ನ ಯಜಮಾನರು ಹೋದಲ್ಲಿಗೆ!
ಬೇಡ ತಾಯಿ ಬೇಡ..ಹಾಗೆ ಮಾಡಿಕೊಳ್ಳಬೇಡಿ... ನಾನು ಏನಾದರೊಂದು ಮಾಡುತ್ತೇನೆ. ಕೊಂಬೆಯಿಂದ ಕೈ ಮಾತ್ರ ಬಿಡಬೇಡಿ ತಾಯಿ ಎಂದು ಪರಿಪರಿಯಾಗಿ ಬೇಡಿಕೊಂಡೆ..
ನನಗೆ ಅಂತ ಸಂಬಂಧಿಸಿದ ಅದೊಂದು ಸಂಬಂಧವೇ ಸದ್ಯಕ್ಕೆ ಉಳಿದದ್ದು.
ಆದರೆ ಆ ಸಂಬಂಧ ಮರದಲ್ಲಿ ನನ್ನ ಕಣ್ಣೆದುರೇ ನೇತಾಡುತ್ತಿತ್ತು!
ಆ ಸಂಬಂಧವೇ ಕೈ ಹಿಡಿದು ಮೇಲೆ ಬಂದರೆ ಆ ಸಂಬಂಧ ಉಳಿಯುತ್ತಿತ್ತು, ಆದರೆ ಆ ಸಂಬಂಧಕ್ಕೆನೇ ಈ ಜೀವನ ಬೇಡವೆಂದು ಅನ್ನಿಸಿ ಹಿಡಿದಿದ್ದ ಕೈ ಬಿಟ್ಟು ಬಿಟ್ಟರೆ... ಕೊನೆಯಲ್ಲಿ ನಾನು ಮಾತ್ರ ಉಳಿಯುತ್ತೆನೆಯೇ ಹೊರತು ನನಗೆ ಹೇಳಿ ಕೊಳ್ಳಲು ಅಂತ ಜಗತ್ತಿನಲ್ಲಿ ಯಾವುದೇ ಸಂಬಂಧ ಉಳಿಯುತ್ತಿರಲಿಲ್ಲ!
ತಾಯಿ ಧೈರ್ಯ ತಂದುಕೊಳ್ಳಿ ಏನೂ ಆಗುವುದಿಲ್ಲ ಅಂದೆ.
ಯಾರಿಗಾಗಿ ಇನ್ನು ನಾನು ಬದುಕಲಿ, ಮುದ್ದಿನ ಮಗಳು ಹೋದಳು, ಕಟ್ಟಿ ಕೊಂಡ ಗಂಡ ಕಣ್ಣೆದುರೇ ನಾನು ಉಳಿಯಲಿ ಎಂದು ನನ್ನನ್ನು ಬಿಟ್ಟು ಹೋಗಿ ಬಿಟ್ಟರು.ಪುರು ಇನ್ನು ಈ ಬಾಳು ಸಾಕಪ್ಪ.. ನೀನು ನನ್ನ ಮಗನಿಗಿಂತ ಹೆಚ್ಚು ಕಣಪ್ಪಾ.. ನಮಗಾಗಿ ತುಂಬ ಕಷ್ಟ ಪಟ್ಟೆ.. ನಮ್ಮನ್ನು ಹೆತ್ತ ಮಗನಂತೆ ನೋಡಿದೆ,ಆರೈಕೆ ಮಾಡಿದೆ... ದೇವರು ನಿನ್ನನ್ನು ಯಾವತ್ತೂ ಸುಖವಾಗಿ ಇಟ್ಟಿರಲಿ...
ಎಂದು ಹೇಳಿದವರೇ ಕೊಂಬೆಯಿಂದ ಕೈ ಬಿಟ್ಟೇ ಬಿಟ್ಟರು!!
ಕೆಲವೇ ಕ್ಷಣಗಳಲ್ಲಿ ಪ್ರಪಾತದ ಕೂಪದಲ್ಲಿ ಬಿದ್ದು ಪ್ರೇಮಕ್ಕ ಎಂಬ ನನ್ನ ಎರಡನೆಯ ತಾಯಿ ಕೂಡ ನನ್ನಿಂದ ಬಹು ದೂರ ಸಾಗಿದ್ದರು !!
ಅಲ್ಲಿಗೆ ನನ್ನಿಂದ ನನಗೆ ಸಂಬಂಧಿಸಿದ ನನ್ನ ಎಲ್ಲಾ ಸಂಬಂಧಗಳು ಶಾಶ್ವತವಾಗಿ ನನ್ನಿಂದ ದೂರ ಆಗಿ ಬಿಟ್ಟಿದ್ದವು.. !!
ನಾನು ಮರದಲ್ಲಿ ನೇತಾಡುತ್ತಲೇ ಇದ್ದೆ!
ಯಾರಾದರೂ ಸತ್ತಾಗ ಅತ್ತರೆ,ನೆನಪುಗಳೆಲ್ಲವೂ ಕಣ್ಣೀರಾಗಿ ಹೋಗಿ ಬಿಡುತ್ತವೆ ಎಂದು ಹುಟ್ಟಿಸಿದ ಅಮ್ಮ ಹೇಳಿದ್ದಳು. ಹಾಗಾಗಿ ನಾನು ಅಳಲಿಲ್ಲ!!
ನನ್ನೆದುರೇ ಎಷ್ಟು ಮಂದಿ ಸತ್ತು ಹೋದರು,ಆ ಬಸ್ಸಿನಲ್ಲಿದ್ದ ಅಷ್ಟೂ ಮಂದಿ ವೃದ್ಧರು ,ಧಣಿ ಭುಜಂಗಯ್ಯ, ತಾಯಿಯಂತಹ ಪ್ರೇಮಕ್ಕ.. ಈಗ ಯಾರೂ ಇಲ್ಲ.. ಎಲ್ಲರೂ ನನ್ನ ಕಾಲ ಕೆಳಗಿನ ಪ್ರಪಾತದಲ್ಲಿ ಸತ್ತು ಈ ಜಗತ್ತಿನ ಪರಿವೆಯೇ ಇಲ್ಲದಂತೆ ಮಲಗಿಕೊಂಡು ಬಿಟ್ಟಿದ್ದಾರೆ!
ಹರಿದ್ವಾರಕ್ಕೆಂದು ಬಂದ ಎಲ್ಲರೂ ಕೊನೆಗೂ ಶಾಶ್ವತವಾಗಿ ನಿಜ ಅರ್ಥದಲ್ಲಿ ಹರಿಪಾದವನ್ನೇ ಸೇರಿದ್ದರು!!!
ಈಗ ನನಗೆಂದು, ನನ್ನವರೆಂದು ಯಾರೂ ಇಲ್ಲ, ಮತ್ತೊಮ್ಮೆ ಅನಾಥ ಪ್ರಜ್ಞೆ ಹಾಗೇ ಕಾಡಿ ಬಿಟ್ಟಿತು !
ನಾನು ನೇತಾಡುತ್ತಲೇ ಮೇಲೆ ನೋಡಿದೆ.. ಪಾಪ ಸೀತಜ್ಜಿ ನೇತಾಡುತ್ತಿದ್ದ ಬಸ್ ನೊಳಗೆ ಇನ್ನೂ ಇದ್ದರು, ಒಬ್ಬರೇ ಇದ್ದರು.
ಇನ್ನು ಮೇಲೆ ಹೋಗಿ ಕೊನೆಯ ಪಕ್ಷ ಆ ಮುದಿ ಜೀವವನ್ನಾದರೂ ಬದುಕಿಸುವ ಪ್ರಯತ್ನ ಶಕ್ತಿ ಮೀರಿ ಮಾಡಬೇಕು ಎಂದು ನಿರ್ಧರಿಸಿದೆ.
ಮೇಲೆ ನೋಡುತ್ತಿದ್ದ ಹಾಗೆಯೇ ಅಲ್ಲಿಯವರೆಗೆ ಬಸ್ ಅನ್ನು ಹಿಡಿದುಕೊಂಡಿದ್ದ ತಡೆಗೊಡೆಯ ಆ ದಂಡೆ, ತನ್ನ ಕೈ ಬಿಟ್ಟು ಬಿಟ್ಟಿತ್ತು!! ಪಾಪಿ ತಡಗೋಡೆಯ ದಂಡೆ !!!
ನನ್ನ ಎದುರಲ್ಲೇ ಬಸ್ ಕೆಳಮುಖವಾಗಿ ವೇಗವಾಗಿ ಗಾಳಿಯಲ್ಲಿ ಮೇಲಿಂದ ಕೆಳಗೆ ಸಾಗಿತ್ತು!!
ಹೃದಯ ಇದ್ದವನ ಹೃದಯ ಒಡೆದು ಹೋಗುವ.. ಚೂರು ಚೂರು ಆಗುವ ಸಮಯವದು!
ಸೀತಜ್ಜೀ.....ಸಿತಜ್ಜೀ... ಎಂದು ನೋವಿನಿಂದ ಜೋರಾಗಿ ಕೂಗಿದೆ
ನೇರವಾಗಿ ಬಸ್ ನನ್ನ ಕಣ್ಣ ಮುಂದೆ ಕೆಳಗೆ ಸಾಗುವಾಗ ನಾನು ಕೊಂಬೆಯಲ್ಲಿ ನೇತಾಡುತ್ತಲೇ ಆ ಬೊಚ್ಚು ಬಾಯಿಯ ಸೀತಜ್ಜಿಯನ್ನು ಬಸ್ ನೊಳಗೆ ಕೊನೆಯ ಬಾರಿ ನೋಡಿದೆ..!
ಆ ಒಂದು ಕ್ಷಣ ಬಸ್ ನಿಧಾನವಾಗಿ ಸ್ಲೋ ಮೋಷನ್ ನಲ್ಲಿ ನನ್ನೆದುರು ಒಂದು ಸೆಕೆಂಡ್ ಅಲ್ಲೇ ನಿಂತು ನಂತರ ಪಾಸ್ ಆದಂತೆ ಆಯಿತು. ನೇತಾಡುತ್ತಿದ್ದ ನನ್ನನ್ನು ನೋಡಿದ ಸೀತಜ್ಜಿ ಎರಡೂ ಕೈ ಮೇಲೆತ್ತಿ ಹಾಗೇ ಮನಸಾರೆ ಹರಸಿ ನಕ್ಕು ಬಿಟ್ಟರು.. ಸುಖವಾಗಿರು ಮಗು ಎಂದು ಹೇಳಿದಂತೆ ಆಯಿತು!
ಅಷ್ಟೇ...
ಬಸ್ ನೇರವಾಗಿ ಕೆಳಗಿನ ಆಳವಾದ ಪ್ರಪಾತಕ್ಕೆ ಬಿದ್ದು, ಧಗ ಧಗ ಎಂದು ಹೊತ್ತಿ ಉರಿದಿತ್ತು!!
ಅದರೊಂದಿಗೆ ಸೀತಜ್ಜಿ ಎಂಬ ವೃದ್ಧ ತಾಯಿಯೂ ಉರಿದು, ಬದರಿನಾಥನ ಪಾದವನ್ನು ಕೊನೆಗೂ ಸೇರಿಬಿಟ್ಟಳು!!
ಹೀಗೆ ಬದುಕಿನ ತಿರುವಿನಲ್ಲಿ ಆಕಸ್ಮಿಕವಾಗಿ ಸಿಕ್ಕ ಸೀತಜ್ಜಿಯೂ ಕೂಡ.. ಕೊನೆಯಲ್ಲಿ ನನ್ನ ಕೈ ಬಿಟ್ಟೇ ಹೊರಟು ಹೋದಳು!!
ಸೀತಜ್ಜಿಯೂ ಕೂಡ ನನಗೆ ಮೋಸವೇ ಮಾಡಿದಳು!
ಇಲ್ಲ ಭಗವಂತ ಮಾಡಿಸಿದ..!
ಅಲ್ಲಿ ನಾನು ಒಬ್ಬನೇ ನೇತಾಡುತ್ತಿದ್ದೆ. ನನ್ನ ಕೆಳಗೆ ಪ್ರಪಾತದಲ್ಲಿ 40 ಜನ ಸತ್ತು ಚಿರನಿದ್ರೆಗೆ ಜಾರಿದ್ದರು!
ನಾನು ಮೂರನೇ ಬಾರಿಗೆ ಅನಾಥೆ ಆದೆ!
ಮೊದಲು ಅಮ್ಮ ಸತ್ತಾಗ... ನಂತರ ತಂಗಿ ವತ್ಸಲ ಸತ್ತಾಗ.. ಈಗ ಇಲ್ಲಿ ದೇವರಂತಹ ಧಣಿ ಮತ್ತು ತಾಯಿಯಂತಹ ಪ್ರೇಮಕ್ಕ ಕಣ್ಣ ಮುಂದೆಯೇ ಸತ್ತು ಹೋದಾಗ... ನಾನು ಮತ್ತೊಮ್ಮೆ ಮೂರನೆಯ ಬಾರಿಗೆ ಅನಾಥೆ ಆಗಿದ್ದೆ!
ಸೀತಜ್ಜಿ ಬಸ್ಸಿನಲ್ಲಿದ್ದಾಗ ಹೇಳಿದ್ದರು...ಒಂದು ಅರ್ಥದಲ್ಲಿ ಹೇಳಬೇಕೆಂದರೆ ಇಲ್ಲಿ ಯಾರು ಕೂಡ ಅನಾಥರು ಅಲ್ಲ,ಅನಾಥರು ಯಾರು ಎಂದರೆ ಯಾರು ತಮ್ಮ ಹೃದಯದಲ್ಲಿ ಭಗವಂತನನ್ನು ಇರಿಸಿಕೊಳ್ಳುವುದಿಲ್ಲವೋ ಅವರು ಮಾತ್ರ ನಿಜವಾದ ಅರ್ಥದಲ್ಲಿ ಅನಾಥರು ಪುರು. ಭಗವಂತ ಇದ್ದಾಗ ನಾವು ಯಾವತ್ತೂ ಒಂಟಿಯೂ ಅಲ್ಲ,ಅನಾಥರೂ ಅಲ್ಲ!
ಮರ ಗಟ್ಟಿಯಿತು.. ಕೊಂಬೆಯಿಂದ ಕೈ ಬಿಡಬೇಕೇ.. ಬಿಡಬಾರದೇ ಎಂದು ಏನನ್ನೂ ನಿರ್ಧರಿಸಲಾಗದೇ ನಾನು ಹಾಗೇ ಅಲ್ಲಿ ಸ್ತಬ್ಧನಾಗಿ ನೇತಾಡುತ್ತಲೇ ಇದ್ದೆ!!!
ನನಗೆ ಗೊತ್ತಿತ್ತು ಒಂದು ವೇಳೆ ನಾನು ಕೈ ಬಿಟ್ಟರೂ ನಾನು ಕೆಳಗೆ ಬಿದ್ದು ಸಾಯಲಾರೆ ಎಂದು... ಯಾಕೆಂದರೆ ನನ್ನ ಮನಸ್ಸು, ಹೃದಯ ಎರಡೂ ಅದೆಷ್ಟು ಕಲ್ಲಾಗಿತ್ತು ಎಂದರೆ..ಬಹುಶಃ ನಾನು ಬಿದ್ದು ಕೆಳಗಿನ ಕಲ್ಲು ಬಂಡೆಗಳೇ ಒಡೆದು ಹೋಗಬಹುದೆನೋ... ಆದರೆ ನಾನು ಒಡೆದು ಹೋಗಲಾರೆ ,ಸತ್ತು ಹೋಗಲಾರೆ !!
ಭಾವನೆಗಳು ಸತ್ತು ಹೋಗಿರುವವ ಅಷ್ಟು ಸುಲಭದಲ್ಲಿ ಸಾಯಲಾರ, ಪಾಪಿ ನಾನು!
ಬಸ್ ಸಂಪೂರ್ಣ ಉರಿದು ಅದರ ದಟ್ಟ ಕಪ್ಪು ಹೊಗೆ ಒಂದು ಹಾಗೇ ಪ್ರಪಾತದ ಕೆಳಗಿನಿಂದ ಮೇಲೆ ಎದ್ದು ಬಂದಿತ್ತು,ಹಾಗೇ ಹೊಗೆಯನ್ನೇ ದಿಟ್ಟಿಸಿ ನೋಡಿದೆ..ಆ ದಟ್ಟ ಕಪ್ಪು ಹೊಗೆಯ ನಡುವಿನಲ್ಲಿ ನಗುತ್ತಿರುವ ಸೀತಜ್ಜಿಯ ಮುಖ ಒಂದು ಕ್ಷಣ ಕಣ್ಣ ಮುಂದೆ ಬಂದಂತೆ ಭಾಸವಾಯಿತು , ಮತ್ತು ಆ ಸೀತಜ್ಜಿ ಅಲ್ಲಿಂದಲೇ ಹೇಳಿದರು...
" ಭಗವಂತ ಯಾವತ್ತಿಗೂ ನಮ್ಮ ಕೈ ಬಿಡುವುದಿಲ್ಲ, ಹಾಗೇ ನಾವು ಅಂದುಕೊಳ್ಳುತ್ತೇವೆ ಅಷ್ಟೇ ಮಗು,ಯಾವಾಗ ನಮ್ಮ ಬದುಕಿನ ಲೆಕ್ಕ ಇಲ್ಲಿ ಮುಗಿಯುವುದೋ, ಆ ದಿನ ಆ ಕ್ಷಣ ಮಾತ್ರ ಅವನು ನಮ್ಮ ಕೈ ಬಿಟ್ಟು ಬಿಡುತ್ತಾನೆ..ನಾವು ಎಷ್ಟೇ ಗಟ್ಟಿ ಅವನ ಕೈ ಹಿಡಿದರೂ ಕೂಡ.. "
ಮರದಿಂದ ಕೈ ಬಿಡಲಿಲ್ಲ!
ಹಾಗೇ ನೇತಾಡುತ್ತಲೇ ಇದ್ದೆ!
ಹೊತ್ತು ಸಂಜೆ ಆಗಿತ್ತು.....
ಸಂಜೆಯ ರಾಗಕೆ.. ಪುಷ್ಯರಾಗ ಎಂಬ ನನ್ನ ಹೃದಯ ಮೂಕರಾಗ ಒಂದನ್ನು ಹಾಡಿತ್ತು ಅಲ್ಲಿ !
ಗಿರಿ ಅಡವಿಗಳ ನಡುವೆ ಆ ನನ್ನ ಮೂಕ ರಾಗ..
ಎಂದಿನಂತೆ ನನ್ನ ಮುಗಿಯದ ಮೂಖರೋಧನೆಯೇ ಆಗಿತ್ತು!
ಕಲ್ಲು ಹೃದಯದವನು ನಾನು!
ಕೊನೆಗೂ ಕಣ್ಣೀರು ಮಾತ್ರ ಹರಿಯಲೇ ಇಲ್ಲ..!!!
.....................................................................................
#ಪುಷ್ಯರಾಗ 🧡
Ab Pacchu
Moodubidire

Comments
Post a Comment