ಜಾತ್ರೆ, ಉತ್ಸವ ಮತ್ತು ವಿಧ್ಯಾಭೂಷಣರು
ಊರಲ್ಲಿ ಯಾವುದೇ ಉತ್ಸವ, ಜಾತ್ರೆ ಅಥವಾ ಊರ ಭಜನಾ ಮಂದಿರದ ಕಾರ್ಯಕ್ರಮ ಗಳಲ್ಲಿ ಆಯೋಜಕರು, ಭಕ್ತರಿಗೆ ಬೇಕಾದ ಎಲ್ಲಾ ರೀತಿಯ ಅಚ್ಚುಕಟ್ಟಾದ ವ್ಯವಸ್ಥೆ,ಭೋಜನ,ಕುಡಿಯುವ ನೀರು,ಪಾನೀಯ, ಪ್ರಸಾದ ವಿತರಣೆ, ದೇವರ ದರ್ಶನ, ಸ್ವಚ್ಛತೆ, ಪಾರ್ಕಿಂಗ್ ವ್ಯವಸ್ಥೆ,ಶೌಚಾಲಯ, ಸ್ವಯಂ ಸೇವಕರು... ಹೀಗೆ ಎಲ್ಲವನ್ನೂ ವ್ಯವಸ್ಥಿತವಾಗಿ ಆಯೋಜನೆ ಗೊಳಿಸಿದ ಮೇಲೆ, ಇನ್ನೊಂದನ್ನು ಈ ಪಟ್ಟಿಗೆ ಸೇರಿಸಿ ಬಿಟ್ಟರೆ ಆಯೋಜಕರಿಗೆ ಹಾಗೂ ದೇವಳದ ಕಮಿಟಿಯ ಸದಸ್ಯರಿಗೆ, ಅದೇನೋ ಒಂದು ರೀತಿಯ ಸಮಾಧಾನ ಮತ್ತು ನಿರಾಳತೆ. ಅದುವೇ ಭಕ್ತಿಗೀತೆ ಯ ಧ್ವನಿ ಮುದ್ರಿಕೆಗಳು,ಅದರಲ್ಲೂ ಅತೀ ಹೆಚ್ಚು ವಿಧ್ಯಾಭೂಷಣರ ಭಜನೆಗಳು 😊🙏🏻
ಜಾತ್ರೆಗೆ ಸೌಂಡ್ ಸಿಸ್ಟಮ್ ಒದಗಿಸುವ ಹೊರಗಿನವರು ಕೂಡ ಇದರ ಬಗ್ಗೆ ಪ್ರತ್ಯೇಕ ಕಾಳಜಿ ವಹಿಸಿ ತಮ್ಮಲ್ಲಿ ವಿಧ್ಯಾಭೂಷಣರ ಭಜನೆಯ ಸಂಗ್ರಹ ಸದಾ ಇರುವಂತೆ ನೋಡಿಕೊಳ್ಳುತ್ತಾರೆ, ಯಾಕೆಂದರೆ ಜನರು ಕೂಡ ಕೇಳುವುದು ಅದೇ ಅಂತ 😊
ಬೇಕಿದ್ದರೆ ಗಮನಿಸಿ ನೋಡಿ, ನಿಮ್ಮ ಊರಿನ ಜಾತ್ರೆ ಯ ಸಂಧರ್ಭ ಗಳಲ್ಲಿ ಮೈಕ್, ಇಲ್ಲವೇ ಲೌಡು ಸ್ಪೀಕರ್ ಗಳಲ್ಲಿ ಕೇಳಿಬರುವ ಭಜನೆಗಳಲ್ಲಿ ಅತ್ಯಂತ ಹೆಚ್ಚು ಇರುವುದು ವಿದ್ಯಾಭೂಷಣರದ್ದೇ.
ನಮ್ಮ ಕರಾವಳಿ ಜನರಿಗಂತು ಸಿನೆಮಾ ಹಾಡುಗಾರರಿಗಿಂತಲೂ ಅತ್ಯಂತ ಹೆಚ್ಚು ಹತ್ತಿರವಾದದ್ದು ಈ ವಿಧ್ಯಾಭೂಷಣರ ಹಾಡುಗಳೇ,ಚಿಕ್ಕಂದಿನಿಂದಲೂ. ಜಾತ್ರೆ ಯ ಸಂತೆ, ಗೌಜು ಗದ್ದಲ, ಸಂಭ್ರಮ, ಸಡಗರ ಎಷ್ಟೇ ಇರಲಿ.. ಇವೆಲ್ಲದರ ನಡುವೆ ಅತೀ ದೂರದವರೆಗೂ ವಿಧ್ಯಾಭೂಷಣರ ಹಾಡೊಂದು ಮೈಕ್ ಅಲ್ಲಿ ಹಾಗೇ ಕೇಳಿಬರುತ್ತಿರಬೇಕು,ಹಾಗಿದ್ದರೆನೇ ಆ ಜಾತ್ರೆಗೂ ಒಂದು ಕಳೆ. ವಿಧ್ಯಾಭೂಷಣರ ಭಜನೆ ಬಿಟ್ಟರೆ ಅದ್ಯಕೋ ಬೇರೆ ಭಜನೆಗಳು ಜನರಿಗೆ ರುಚಿಸುವುದೇ ಇಲ್ಲ..ಭಜನೆ ಅಂದ ಕೂಡಲೇ ಜನರು ತಡಕಾಡುವುದು ವಿಧ್ಯಾಭೂಷಣರ CD ಗಳಿಗೆ.
ಅಷ್ಟು ಮಾತ್ರವಲ್ಲ ಮನೆಯಲ್ಲಿ ಕಾರಿದ್ದವರು ಕೂಡ, ಮನೆಯ ಹಿರಿಯರೊಂದಿಗೆ ಎಲ್ಲಿಗಾದರೂ ಹೊರಗೆ ಹೋಗುವಾಗ ಕೇಳ್ಲಿಕ್ಕೆ ಬೇಕಾಗ್ತದೆ ಅಂತ ತಮ್ಮ ಕಾರಿನ music player ನಲ್ಲಿ ಪ್ಲೇ ಮಾಡಲು, ಪೆನ್ ಡ್ರೈವ್ ಇಲ್ಲವೇ ತಮ್ಮ ಮೊಬೈಲ್ ಫೋನ್ ನಲ್ಲಿ bhakthi geethe ಅಂತ ಒಂದು ಸೆಪರೇಟ್ folder ಮಾಡಿ ಅದರಲ್ಲಿ ವಿಧ್ಯಾಭೂಷಣರ ಹಾಡುಗಳನ್ನೇ ಡೌನ್‌ಲೋಡ್ ಮಾಡಿ ಇಟ್ಟುಕೊಂಡಿರುತ್ತಾರೆ.
ಹೇಗೆ ಶ್ಯಾವಿಗೆ ಪಾಯಸದಲ್ಲಿ ಗೋಡಂಬಿ, ಮೊಸರನ್ನಾದಲ್ಲಿ ದಾಳಿಂಬೆ ಕಾಳುಗಳು, ಕಡೆದಿಟ್ಟ ತೆಂಗಿನಕಾಯಿಯ ಬಿಳಿ ಬಿಳಿಯಾದ ಗಟ್ಟಿ ಚಟ್ನಿ ಯ ಮೇಲೆ ಹಾಕಿರುವ ಸಾಸಿವೆ ಹಾಗೂ ಕರಿಬೇವಿನ ಒಗ್ಗರಣೆ, ಬಿಳಿ ಅನ್ನದ ಮೇಲೆ ಒಂಚೂರೇ ಬಿಸಿ ತುಪ್ಪ...ನೋಡಲು ಅಂದವಾಗಿ ಕಾಣುತ್ತೋ ಹಾಗೆ ದೇವರನಾಮ ಗಳ ಸಾಲಿನಲ್ಲಿ ವಿಧ್ಯಾಭೂಷಣರ ಭಜನೆಗಳು 😊🙏🏻
ಕೃಷ್ಣ ನ ಕುರಿತಾದ "ಪಿಳ್ಳಂಗೋವಿಯ ಚೆಲುವ ಕೃಷ್ಣ ನ ಎಲ್ಲಿ ನೋಡಿದಿರಾ......" ಹಾಗೂ "ಹೂ ಬೇಕೆ ಪರಿಮಳ ದ,ಪರಮ ಪುರುಷ ನಮ್ಮ ಕೃಷ್ಣ ನ ತೋಟದ... "
ಮತ್ತು "ಜಗದೋದ್ಧಾರನಾ.. ಆಡಿಸಿದಳೆಶೋಧೆ..."
ಗಣಪತಿಯ ಕುರಿತಾದ " ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿವನಾರಮ್ಮ..."
ಅದೇ ರೀತಿ ಗಣಪತಿಯ ಮತ್ತೊಂದು ಫೇಮಸ್ ತುಳು ಭಜನೆ " ಎಂಚಿತ್ತಿ ಮಗನ್ ಪಡೆಯಳ್ ಪಾರ್ವತಿ...ಅಂಚಿತ್ತಿ ಬಾಲೆಗ್ ದುಂಬುದ ಆರತಿ". ಇದಂತು ತುಂಬಾನೇ ಸುಂದರವಾದ ಹಾಡು,ಒಂದೊಂದು ಲೈನುಗಳು ಬಹಳನೇ ಸೊಗಸಾಗಿದೆ. ನನಗಿದು ತುಂಬಾ ಇಷ್ಟ.
ಸುಬ್ರಹ್ಮಣ್ಯಸ್ವಾಮಿಯ ಕುರಿತಾದ ತುಳು ಭಜನೆ "ಎಲ್ಯೊಂಜಿ ಪ್ರಾಯ ಡ್ ಮಲ್ಲೋಂಜಿ ಬಿರೋನು ಮೆರೆಪಾಯಿ ಬಾಲೆನ್ ಸುಗಿಪುಗ, ಕುಕ್ಕೆದ ಬಾಲೆನ್ ಸುಗಿಪುಗ..."
ಲಕ್ಷೀಯ ಕುರಿತಾದ "ಮರುಳು ಮಾಡಿಕೊಂಡೆಯಲ್ಲೇ ಮಾಯ ದೇವಿಯೇ, ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪಂತೆ ..... "
ಕಟೀಲಿನ ಉಳ್ಳಾಲ್ದಿ ದುರ್ಗಾಪರಮೇಶ್ವರಿ ಯ ಕುರಿತಾದ ತುಳು ಭಜನೆ "ಕಾರಡಿನ್ ನಡೊಂದು ಬತ್ತ.. ಕಟೀಲಪ್ಪೆ ಕಾಣಿಕೆದ ಪೂ ಪರ್ಂದ್ ದೀತಾ..."
ಹಾಗೂ ಇನ್ನೂ ಹಲವಾರು ದೇವರನಾಮಗಳಿವೆ , ಎಲ್ಲವೂ ಒಂದಕ್ಕಿಂತ ಒಂದು ಚೆನ್ನ. ವಿಧ್ಯಾಭೂಷಣರು ಹಾಡುತ್ತಿದ್ದರೆ ದೇವರುಗಳೇ ಕೆಳಗಿಳಿದು ಬಂದಂತಹ ಏನೋ ಒಂದು ಧನ್ಯತಾಭಾವ ನಮಗೆ 😊
ನಮ್ಮ ಕರಾವಳಿ ಸೈಡಿನಲ್ಲಿ ಹೇಗೆ ಧಾರ್ಮಿಕ ಕಾರ್ಯಕ್ರಮ, ಪ್ರಶಸ್ತಿ ವಿತರಣೆ ಇಲ್ಲವೇ ಸನ್ಮಾನ ಮಾಡುವ ಕ್ಷಣಗಳಲ್ಲಿ ಕದ್ರಿ ಗೋಪಾಲ್ ನಾಥ್ ಅವರ ಸ್ಯಾಕ್ಸೋಫೋನ್ ಜನರಿಗೆ ಅತೀವ ಇಷ್ಟ ಆಗುತ್ತದೋ, ಅದೇ ರೀತಿ ಭಜನೆ ಅಂತ ಬಂದಾಗ ಜಾಸ್ತಿ ಇಷ್ಟು ಆಗುವುದೇ ವಿಧ್ಯಾಭೂಷಣರದ್ದು. ಅವರದ್ದೊಂದು ಭಜನೆಯ CD, pendrive ಇಲ್ಲವೇ ಮೊಬೈಲ್ ನಲ್ಲಿ ಹತ್ತಿಪ್ಪತ್ತು ದೇವರನಾಮಗಳು ಇದ್ದು ಬಿಟ್ಟರೆ ಸಾಕು ಒಂದು ಉತ್ಸವ ವನ್ನು ಸಂಭ್ರಮದಿಂದ ಹಾಗೆ ಮುಗಿಸಿಬಿಡಬಹುದು.
ಹಾಗಂತ ಬೇರೆ ಉತ್ತಮ ದೇವರ ನಾಮಗಳನ್ನು ಹಾಡುವ ಗಾಯಕರು ಇಲ್ಲ ಎಂದು ಅರ್ಥ ಅಲ್ಲ. ವೆರಿ ಫೇಮಸ್ ಯೇಸುದಾಸ್, ಎಸ್ ಜಾನಕಿ, SP ಬಾಲಸುಬ್ರಹ್ಮಣ್ಯಂ, ಪುತ್ತೂರು ನರಸಿಂಹ ನಾಯಕ್ ಹೀಗೆ ಇನ್ನೂ ಹಲವಾರು ಅತ್ಯುತ್ತಮ ಗಾಯಕರು ಇದ್ದಾರೆ. ಆದರೆ ಅದ್ಯಕೋ ಗೊತ್ತಿಲ್ಲ ಇಲ್ಲಿಯ ಜನರ ನಾಲಿಗೆಯಲ್ಲಿ ಹರಿದಾಡುವುದು ಹೆಚ್ಚಾಗಿ ವಿಧ್ಯಾಭೂಷಣರ ಭಜನೆಗಳೇ.
ಮಕ್ಕಳಿಂದ ಅಬಾಲವೃದ್ಧರಿಗೂ ವಿಧ್ಯಾಭೂಷಣರ ಹಾಡುಗಳು ಇಷ್ಟ. ಕೆಲವೊಮ್ಮೆ ಅವರ ಗಾಯನದಿಂದಲೇ ಆ ಸಾಹಿತ್ಯ ಕ್ಕೊಂದು ಜೀವ ಅಂತ ಅನ್ನಿಸಿಬಿಡುತ್ತವೆ. ಊರಲ್ಲಿ ಒಂದು ಬಾರಿ ಆದರೂ ವಿಧ್ಯಾಭೂಷಣರ ಹಾಡುಗಳು ಕಿವಿಗೆ ಬೀಳದ ದಿನಗಳಿಲ್ಲ. Early morning ಮಂಗಳೂರು ಸಿಟಿ ಬಸ್ ಹತ್ತಿದರೆ, ಬಸ್ ತುಂಬಾ ವಿಧ್ಯಾಭೂಷಣರು ಒಬ್ಬರೇ ಇರುತ್ತಾರೆ.
ಬಸ್ ಪ್ರಯಾಣ ಮುಗಿಯುವವರೆಗೂ ಅವರೂ ಕೂಡ ಬಸ್ ಅಲ್ಲೇ ಇರುವಂತೆ ಫೀಲ್ ಆಗುತ್ತೆ. ಹೆಚ್ಚಿನ ಬಸ್ ಅಲ್ಲಿ ಯಾವತ್ತೂ ವಿಧ್ಯಾಭೂಷಣರದ್ದೊಂದೇ ಭಜನೆ.
ಅವರ ಹಾಡುಗಳಿಗೆ ಬಾಲ್ಯ ದ ನೆನಪುಗಳಿವೆ. ಆಗಲೂ ಅವರ ಹಾಡುಗಳಿತ್ತು, ಈಗಲೂ ಅವರ ಹಾಡುಗಳಿವೆ, ಇದರೆ ನಡುವೆ ನಾವು ಬೆಳೆದು ಬಿಟ್ಟೆವು. ಮುಂದೂ ಅವರ ಹಾಡುಗಳು ಇರುತ್ತವೆ. ಹಾಡುಗಳಿಗೆ ಸಾವಿಲ್ಲ. ಏಕೆಂದರೆ ಹಾಡುಗಾರರು ಸರಸ್ವತಿ ಪುತ್ರರು, ಆ ಕಲೆ ಅಷ್ಟು ಸುಲಭವಾಗಿ ಯಾರಿಗೂ ದಕ್ಕುವಂತಹದ್ದಲ್ಲ, ನಮ್ಮ ಫುಣ್ಯ ಅವರ ಹಾಡುಗಳನ್ನು ಸದಾ ಆಲಿಸುವ ಯೋಗ ನಮಗೆ ಸಿಕ್ಕಿದೆ, ಈ ರೀತಿಯಾಗಿ ಭಗವಂತನನ್ನು ಅನುದಿನವೂ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನೆನಯುವ, ಸ್ಮರಿಸುವ,ಅವನ ನಾಮವನ್ನು ಪಠಿಸುವ ಭಾಗ್ಯ ನಮ್ಮದಾಗಿದೆ 😊🙏🏻
AB Pacchu

Comments
Post a Comment