ಮನೆಯ ಅಜ್ಜ
ಅಜ್ಜ ಎಂಬುವವನು ಬರೀ ಬಿಳಿ ಗಡ್ಡದ ವೃದ್ಧ ಅಲ್ಲ.
ಅಜ್ಜ ಎಂಬುವವನು ಬರೀ ಆಶೀರ್ವಾದ ಮಾಡಲೆಂದೇ ನಾವು ನೀವುಗಳು ಮನೆಯಲ್ಲಿ ಇಟ್ಟುಕೊಂಡಿರುವ ಒಂದು ಹಿರಿಯ ಜೀವ ಅಲ್ಲ.
ಅಜ್ಜ ಎಂದರೆ ಅರುಳು ಮರುಳು ಅಲ್ಲವೇ ಇಲ್ಲ.
ಅಜ್ಜ ಎಂದರೆ ಬೇರೆಯೇ..
ಅವನು ಅರಳಿಸುವವನು.
ಬಾಲ್ಯವನ್ನು ಮರಳಿಸುವವನು...ಎಲ್ಲವನ್ನೂ ಕಾಡುವಂತೆ ನೆನಪಿಸುವವನು.
ಅವನಲ್ಲಿ ದಟ್ಟಡವಿಯಲ್ಲಿ ಬೇಟೆಯಾಡಿದ ಯುವ ಬೇಟೆಗಾರನೊಬ್ಬ ಈಗಲೂ ಕೋವಿ ಹಿಡಿದು ಅಡಗಿ ಕೂತಿದ್ದಾನೆ.
ಯಾರೂ ಕೂಡ ಹಾಕಲು ಸಾಧ್ಯವಾಗದ ಭಿನ್ನ ವಿಭಿನ್ನ ಸ್ಟೆಪ್ ಗಳನ್ನು ಹಾಕಿ ಕುಣಿಯಬಲ್ಲ ಒಬ್ಬ ಅಧ್ಭುತ ಡ್ಯಾನ್ಸರ್ ಒಬ್ಬ ಅಪರೂಪದ ಕೊರಿಯಗ್ರಾಫರ್.. ಅವನಲ್ಲಿ ಸದ್ಯಕ್ಕೆ ನೃತ್ಯಕ್ಕೆ ವಿದಾಯ ಘೋಷಿಸಿ ಬಿಟ್ಟಿದ್ದಾನೆ ಅಷ್ಟೇ.
ಮೀನಿನಷ್ಟೇ ಸುಂದರವಾಗಿ ಈಜಬಲ್ಲ ಆತನಿಗೆ ನಮ್ಮ ನಿಮ್ಮ ಸ್ವಿಮ್ಮಿಂಗ್ ಫೂಲ್ ನ ವ್ಯಾಪ್ತಿ ಎಂದಿಗೂ ಚಿಕ್ಕದೇ.
ಎಂದಾದರೂ ನಾವು ಅವನೊಳಗಿರುವ ಆ ಅಂತವನನ್ನು ಹೊರತಂದಿದ್ದೆವೆಯೇ..?
ಇಲ್ಲ ಕನಿಷ್ಟ ಪಕ್ಷ ಗುರುತಿಸಿದ್ದೆವೆಯೇ..?
ಒಂದೊಳ್ಳೆಯ ಮೆಚ್ಚುಗೆ... ಎಂದಾದರೂ ನೀಡಿದ್ದೆವೆಯಾ..?
ಬಹುಶಃ ಹೆಚ್ಚಾಗಿ ಇಲ್ಲ ಅಂತಲೇ ಅನ್ನಿಸುತ್ತೆ..!
ಅಜ್ಜ ಎಂದರೆ ನಮಗೆ ಓಬಿರಾಯನ ಕಾಲದವನು ಅಷ್ಟೇ.
ಆದರೆ ನೆನೆಪಿಸಿಕೊಳ್ಳಿ ಇದೇ ಅಜ್ಜ ನಾವು ನೀವು ಮಗು ಆಗಿದ್ದಾಗ ನಮಗೆ ಎಲ್ಲವೂ ಆಗಿದ್ದ.
ಅಪ್ಪ ಆಕಾಶ ಆದರೆ.. ಅಜ್ಜ ಸಮುದ್ರವೋ,ಬ್ರಹ್ಮಾಂಡವೋ ನನಗದು ಗೊತ್ತಿಲ್ಲ.
ಆದರೆ ತನ್ನ ನಿತ್ರಾಣ ಭುಜದ ಮೇಲೆ ಮನೆಯ ಮೊಮ್ಮಗುವನ್ನು ಕುಳ್ಳಿರಿಸಿ ಆಕಾಶದ ಚಂದಿರನನ್ನು ಸೊಗಸಾಗಿ ಕೈಗೆಟುಕುವಂತಹ ಹತ್ತಿರದಲ್ಲಿ ತೋರಿಸಿದನು ಈ ಅಜ್ಜನೇ..
ಮನೆಯಲ್ಲಿ ಮಗು ಅತ್ತಾಗ ಅಮ್ಮ, ಅಪ್ಪನೂ ಸಮಾಧಾನ ಮಾಡಲೂ ಸೋತಾಗ ..ಅಜ್ಜನೇ ಮಗುವಾಗ ಪರಿ ಅದೆಷ್ಟು ಸುಂದರ.
ಅಪ್ಪ ಡ್ಯಾನ್ಸ್ ಮಾಡಲ್ಲ.. ಅವನು ಶಿಸ್ತಿನ ಮುದ್ದೆ. ಆದರೆ ಅಜ್ಜ ಹಾಗಲ್ಲ.. ಅವನೆಷ್ಟು ತೆರೆದುಕೊಳ್ಳುತ್ತಾನೆ ಎಂದರೆ ಮಗುವಿನೊಂದಿಗೆ ಡ್ಯಾನ್ಸ್ ಮಾಡಿ ಮಾಡಿಯೇ ಮಗುವನ್ನು ನಕ್ಕು ನಲಿಸಿ ಬಿಡುತ್ತಾನೆ.
ಅಪ್ಪ ಅಮ್ಮ ಗದರಿದಾಗ.. ಮಗು ಓಡಿ ಹೋಗಿ ಅಪ್ಪಿಕೊಳ್ಳುವುದು ಕೂಡ ಒಬ್ಬ ಅಜ್ಜನನ್ನೇ..
ಅಜ್ಜ ಈಗ ಅಜ್ಜ ಆಗಿದ್ದಾನೆ ಅಷ್ಟೇ ..
ಆದರೆ ಅವನು ಕೂಡ ಒಂದು ಕಾಲದಲ್ಲಿ ಅಪ್ಪನಂತೆ ಇದ್ದವನು..
ನಮ್ಮಂತೆ ಯುವಕ ಆಗಿದ್ದವನು..
ಅವನು ಜಸ್ಟ್ ಈಗ ವೃದ್ಧ ಆಗಿದ್ದಾನೆ ಅಷ್ಟೇ.
ಆದರೆ ಒಮ್ಮೆ ಹೋಗಿ ಮಾತಾಡಿಸಿ ನೋಡಿ,ಅವನ ಬತ್ತದ ಉತ್ಸಾಹಗಳು ನವ ಯುವಕರನ್ನು ಕೂಡ ನಾಚಿಸುತ್ತದೆ.
ಅವನ ನೆನಪಿನ ಬುತ್ತಿನಲ್ಲಿ ಅವನದ್ದೇ ಅದೆಷ್ಟು ಸಾಹಸ ಕಥೆಗಳು..
ಎಲ್ಲವೂ ಬೆರಗು ಮೂಡಿಸುವಂತಹದ್ದು.
ಒಂದು ಕೇಳಿದರೆ ಹತ್ತು ವಿಷಯಗಳನ್ನು ಹೇಳಬಲ್ಲ ಅಜ್ಜ ಅದೆಂತಹ ಸಮೃದ್ಧ ಜೀವನ ಬಾಳಿ ಬದುಕಿದವನು..
ಬಹುಶಃ ಅಜ್ಜನಂತೆ ಬಾಳಿ ಬದುಕಲು ನಮಗೂ ಕೂಡ ಸಾಧ್ಯವಿಲ್ಲ..
ನಮ್ಮಲ್ಲಿ ಅಜ್ಜಿಯ ಕಥೆಗಳಿಗೆ ಸಿಗುವಷ್ಟು ಪ್ರಾಧ್ಯಾನ್ಯತೆ ಅಜ್ಜನ ಅನುಭವದ ಕಥೆಗಳಿಗೆ ಸಿಗಲಿಲ್ಲ..
ಅಜ್ಜನ ಕಥೆ ಎಂದು ನಾವು ಹೇಳುವುದೇ ಇಲ್ಲ..ಏಕೆಂದರೆ ಕಥೆ ಎಂದರೆ ಅದು ಎಂದಿಗೂ "ಅಜ್ಜಿ ಕಥೆ" ಒಂದೇ ನಮ್ಮಲ್ಲಿ ಫೇಮಸ್.
ಮನೆ ಕೂಡ ಅಷ್ಟೇ... ಅಜ್ಜನೇ ಕಟ್ಟಿದರೂ ಅದು ಎಂದಿಗೂ ಅಜ್ಜನ ಮನೆಗಿಂತಲೂ ನಮ್ಮ ಬಾಯಿಯಲ್ಲಿ "ಅಜ್ಜಿ ಮನೆ " ಎಂದೇ ಫೇಮಸ್.
ನಿಜವಾಗಿಯೂ ಮನೆಯಲ್ಲಿ ಒಬ್ಬ ಅಜ್ಜ ಎನ್ನುವ ಅನರ್ಘ್ಯ ರತ್ನ ಇದ್ದರೆ ಅದು ನಮ್ಮ ಭಾಗ್ಯ ಎಂದೇ ನಾವು ತಿಳಿದುಕೊಳ್ಳಬೇಕು.
ನಾವು ಅವನನ್ನು ಕೆಲವೊಂದಕ್ಕಷ್ಟೇ ಮಾತ್ರ ಎಂದಿಗೂ ಸೀಮಿತ ಗೊಳಿಸಬಾರದು..
ಅಲಕ್ಷ್ಯವಂತು ಮಾಡಲೇ ಬಾರದು.
ನಾವು ಅವನಿಗೆ ಮಾಡಬಹುದಾದ ಒಂದು ಅತೀ ದೊಡ್ಡ ಉಪಕಾರ ಏನು ಗೊತ್ತೇ..
ಅವನಲ್ಲಿರುವ ಆ ಮಗುವನ್ನು ಹೊರಗೆ ತಂದು ಆ ಬೊಚ್ಚು ಬಾಯಿಯ ತುಂಬಾ ನಗುವರಳಿಸಬೇಕು..
ಅವನಲ್ಲಿರುವ ಯುವಕನನ್ನು ಹೊರಗೆಳೆದು ಡ್ಯಾನ್ಸ್ ಮಾಡಿಸಬೇಕು..
ಯಾಕೆ ಮಾಡುವುದಿಲ್ಲ ಅವನು...
ಅವಶ್ಯವಾಗಿ ನಗುತ್ತಾನೆ.. ನಲಿಯುತ್ತಾನೆ.. ಎಲ್ಲಾ ಮಾಡುತ್ತಾನೆ ಅವನು..
ಅವನು ಜಸ್ಟ್ ಮರೆತುಬಿಟ್ಟಿದ್ದಾನೆ ಅಷ್ಟೇ...
ಕೈ ಹಿಡಿದು ಅವನನ್ನು ಹೊರಗೆ ತನ್ನಿ..
ಅವನೊಂದಿಗೆ ಕುಣಿಯಿರಿ..
ನಕ್ಕು ನಲಿಯಿರಿ..
ಹರಟೆ ಹೊಡೆಯಿರಿ..
ವೃದ್ಧರನ್ನು ಹುಡುಕಿಕೊಂಡು ವೃದ್ಧಾಶ್ರಮಕ್ಕೆ ಹೋಗಿ ಬಟ್ಟೆ ಕೊಟ್ಟು ..ಸೆಲ್ಫೀ ಹೊಡೆಸಿಕೊಳ್ಳುವುದಕ್ಕಿಂತಲೂ... ನಮ್ಮ ಮನೆಯ ಒಳ ಕೊಣೆಯಲ್ಲಿ ಮಲಗಿಕೊಂಡು ತಮ್ಮ ಕೊನೆಯ ದಿನಗಳನ್ನು ನಕ್ಷತ್ರ ಎಣಿಸಿದಂತೆ ಎಣಿಸಿಸುತ್ತಿರುವ ನಮ್ಮ ಅಜ್ಜ, ಅಜ್ಜಿಯನ್ನು... ಸುಖವಾಗಿ ಇಡುವುದರಲ್ಲಿಯೇ ಹೆಚ್ಚಿನ ಸುಖವಿದೆ.
ವಯಸ್ಸು ಎಲ್ಲರಿಗೂ ಆಗುತ್ತದೆ..
ಕೇವಲ ಅಜ್ಜನಿಗೆ ಮಾತ್ರ ವಯಸ್ಸಾಗುವುದು ಅಲ್ಲ..
ಒಂದು ದಿನ ನಮ್ಮ ನಿಮ್ಮ ಅಪ್ಪ ಕೂಡ ಅಜ್ಜ ಆಗ್ತಾನೆ..
ಇನ್ನೊಂದು ದಿನ ನಾವು.. ನೀವು..ಹೀಗೆ ಎಲ್ಲರೂ..ಅಜ್ಜ ಅಜ್ಜಿಯೋ ಆಗುವವರೇ..
ವಯಸ್ಸು ಆಗುವುದು ದೇಹಕ್ಕೆ ಮಾತ್ರ.. ಮನಸ್ಸಿಗಲ್ಲ.
ದೇಹಕ್ಕೆ ಎಂಬತ್ತು ಆದರೂ ಮನಸ್ಸು ಆವಾಗವಾಗ ಹದಿನೆಂಟರ ಬಾಲ್ಯಕ್ಕೆ ಬೇಕೆಂದಾಗ ಬೇಟಿ ಕೊಡಬಲ್ಲದು.
ಆದರೆ ಅದಕ್ಕೆ ಪೂರಕ ವಾತಾವರಣ ಇರುವುದಿಲ್ಲ ಅಷ್ಟೇ..
ಒಂದು ಜಮಾನದಲ್ಲಿ ಇಡೀ ಸಂಸಾರದ ಹೊರೆ ಹೊತ್ತ ಅಜ್ಜ... ತನ್ನ ಕೊನೆಗಾಲದಲ್ಲಿ ತನ್ನ ಸಂಸಾರಕ್ಕೆನೇ ಹೊರೆ ಆಗಿ ಬಿಡುತ್ತಾನೆ!
ಎಲ್ಲರೂ ದೂರ ಇಡುತ್ತಾರೆ ಅವನನ್ನು.
ಅಜ್ಜನೊಳಗಿರುವ ಒಬ್ಬ ಅಧ್ಭುತ ಡ್ಯಾನ್ಸರ್, ಬೇಟೆಗಾರ, ಈಜುಗಾರ.. ನಿಧಾನಕ್ಕೆ ತೆರೆ ಮರೆಗೆ ಸರಿಯುವುದು ಆವಾಗಲೇ...
ಆದರೆ ಅದು ಹಾಗೆ ಆಗಬಾರದು..
ಅಜ್ಜ ಮತ್ತೆ ಅರಳಬೇಕು ಎಂದಾದರೆ ನಾವುಗಳೇ ಮನಸ್ಸು ಮಾಡಬೇಕು. ..
ಅದಕ್ಕಾಗಿ ಅವನಿಗೂ ನಾವು ಸಮಯ ಕೊಡಬೇಕು.
ಅಪ್ಪ ಎನ್ನುವವನು ಅಜ್ಜನನ್ನು ಮಾತಾಡಿಸದೇ ಇರಬಹುದು.. ಏಕೆಂದರೆ ಅವನಿಗೂ ಅಜ್ಜ ಎನ್ನುವವನು ಅಪ್ಪನೇ ಅಲ್ಲವೇ.. ಅದೊಂದು ವಿಚಿತ್ರ ಇದ್ದದ್ದೇ.. ಅವರಿಬ್ಬರು ಒಬ್ಬರಿಗೊಬ್ಬರಿಗೆ ಸುಲಭಕ್ಕೆ ತೆರೆದುಕೊಳ್ಳುವುದೇ ಇಲ್ಲ!
ಆದರೆ ಮೊಮ್ಮಕ್ಕಳು ಅನ್ನಿಸಿಕೊಂಡ ನಮಗೇನು ತೊಂದರೆ?
ಈಗಲೂ ಅಜ್ಜನ ಬಳಿಗೆ ಹೋದರೆ ಅವನಿಗೆ ತನ್ನ ಮಗನಿಗಿಂತಲೂ... ಮೊಮ್ಮಗನ ಮೇಲೆ ಮೊಮ್ಮಗಳ ಮೇಲೆಯೇ ಅಧಿಕ ಪ್ರೀತಿ...
ತಲೆ ನೇವರಸಿ ಬೊಚ್ಚು ಬಾಯಿಯಲ್ಲಿ ನಗುವ ಅಜ್ಜ ನೆಮ್ಮದಿ ಇಲ್ಲದೇ ತುಂಬಾ ಬಡವಾಗಿದ್ದಾನೆ ಎಂದು ಕಂಡು ಬಂದರೆ ಅದಕ್ಕೆ ಕಾರಣ ನಾವುಗಳೇ.
ಏಕೆಂದರೆ ತನ್ನ ಮೊಮ್ಮಕ್ಕಳಿಗಾಗಿ ಅತಿಯಾಗಿ ಹಂಬಲಿಸುವ ಜೀವ ಅದು..
ಮನೆಗೆ ನೀವು ತಗೊಂಡು ಹೋಗುವ ಪ್ರೂಟ್ಸ್, ಹಾಲು, ಬನ್ನುಗಳಲ್ಲಿ ಅವನಿಗೆ ಆಸಕ್ತಿ ಇಲ್ಲ..
ಅವನ ಕೈ ಹಿಡಿದು ಒಮ್ಮೆ.. ಅಜ್ಜ ಬಾ.. ಎಂದು ಒಮ್ಮೆ ಅಂಗಳಕ್ಕೆ ಎಳೆದು ತನ್ನಿ..
ಅಜ್ಜ ಅದೆಷ್ಟು ಉತ್ಸಾಹದ ಚಿಲುವೆ..
ಬಹುಶಃ ನಿಮಗಾಗಿ ಅವನು ಮತ್ತೊಮ್ಮೆ ನೆಲದ ಮೇಲೆ ನಾಲ್ಕು ಕಾಲ ಆನೆ ಆಗಬಲ್ಲ..
ಮೇಲಿನ ಚಂದಿರನ ತೋರಿಸಲು ಮತ್ತೊಮ್ಮೆ ತನ್ನ ನಿತ್ರಾಣದ ಭುಜಗಳನ್ನು ನಿಮಗಾಗಿ ತೆರೆದಿಡಬಲ್ಲ..
ಏಕೆಂದರೆ ಅವನು ಅಜ್ಜ..
ನಾವು ನೀವುಗಳು ಅವನನ್ನು ಮರೆತಿರಬಹುದು..
ಆದರೆ ಅಜ್ಜ ಎನ್ನುವವನು ನಮ್ಮದೇ ನೆನಪುಗಳನ್ನು ಮೆಲುಕು ಹಾಕುತ್ತಾ,ನೆನೆಪಿಸಿಕೊಳ್ಳುತ್ತಾ...ಒಳಗಿನ ಕೋಣೆಯ ಮಂಚದಲ್ಲಿ ಮುದುಡಿಕೊಂಡು ಮಲಗಿದ್ದಾನೆ.
ಅವನು ಅರಳು ಮರುಳು ಆಗದೆ..
ಮತ್ತೊಮ್ಮೆ ಅವನು ಅರಳಬೇಕಾದರೆ..
ಅವನಿಗಾಗಿ ನಾವೇ ಮಗು ಆಗಬೇಕಾಗಿದೆ.
(ಮನೆಯ ಹಿರಿಯ ವೃದ್ಧರ ಮೇಲೆ ಪ್ರೀತಿ ಇರಲಿ🙏🏻)
.....................................................................................
#ಏನೋ_ಒಂದು...
ab pacchu
moodubidire
(photo - internet)

Comments
Post a Comment