ಗಂಗೂಲಿ ಎಂಬ ಆಫ್ ಸೈಡ್ ನ ದೇವರು.
ಅದು November 6,2013 ನೇ ಇಸವಿ.ಆವತ್ತು ಬುಧವಾರ. ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ಹಾಗೂ 200 ನೇ ಟೆಸ್ಟ್ ಪಂದ್ಯವನ್ನು ತಮ್ಮ ಹೋಮ್ ಗ್ರೌಂಡ್ ಮುಂಬೈನ ವಾಂಖೆಡೇ ಸ್ಟೇಡಿಯಮ್ ನಲ್ಲಿ ಆಡುವುದಕ್ಕಿಂತ ಮೊದಲು, ಅಂದರೆ ಅವರ 199 ನೇ ಪಂದ್ಯವನ್ನು ಕೋಲ್ಕತ್ತದ ಈಡನ್ ಗಾರ್ಡನ್ ಸ್ಟೇಡಿಯಮ್ ನಲ್ಲಿ ಆಡುವವರಿದ್ದರು..
ಅದು ಭಾರತದ ಕ್ರಿಕೆಟ್ ಕಾಶಿಯಲ್ಲಿ, ಕ್ರಿಕೆಟ್ ನ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ನದ್ದು ಕೊನೆಯ ಪಂದ್ಯ. ಸುಮಾರು 24 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕು ತೆಂಡೂಲ್ಕರ್ ನದ್ದು. ಊಹಿಸಿದಂತೆ ಜಗತ್ತಿನ ಸರ್ವ ಶ್ರೇಷ್ಟ ಕ್ರಿಕೆಟ್ ಬ್ಯಾಟ್ಸ್‌ಮನ್ ನ ಆಟವನ್ನು ತಮ್ಮ ರಾಜ್ಯದ ನೆಚ್ಚಿನ ಗ್ರೌಂಡ್ ನಲ್ಲಿ ಕೊನೆಯ ಬಾರಿಗೆ ಒಮ್ಮೆ ನೋಡಿ ಕಣ್ಣು ತುಂಬಿಸಿಕೊಳ್ಳಲು ಅಂದು ಕೊಲ್ಕತ್ತಾ ದ ಜನರು ಗ್ರೌಂಡ್ ಗೆ ಮುಗಿಬಿದ್ದಿದ್ದರು.
ದೇಶದ ಅತೀ ದೊಡ್ಡ ಗ್ರೌಂಡ್ ಫುಲ್ ಆಗಿತ್ತು ಅಂದು. ಮಾತ್ರವಲ್ಲ ತುಂಬಾನೇ ಭಾವುಕ ಕೂಡ ಆಗಿತ್ತು. ಜನರಲ್ಲಿ ಬಾಯಲ್ಲಿ ಎಂದಿನಂತೆ "ಇಂಡಿಯಾ.. ಇಂಡಿಯಾ.." ಎನ್ನುವುದರ ಬದಲಾಗಿ ಅತಿಯಾಗಿ ಅಲ್ಲಿ ಮೊಳಗಿದ್ದು ಒಂದೇ ಅರ್ಥದ ಆ ಎರಡೇ ಶಬ್ಧ. ಅದುವೇ "S.. a.. c.. h.. i.. n Sachin..."
ಸಚಿನ್ ಅಂದರೆ ಹಾಗೆನೇ, ಅದು ಭಾರತದ ಮಾತ್ರವಲ್ಲ ವಿಶ್ವ ಕ್ರಿಕೆಟ್ ಗೆ ಒಂದು ಮೇರು ಪರ್ವತ ಇದ್ದ ಹಾಗೆ. ಭಾರತ ಎನ್ನುವ ದೇಶದಲ್ಲಿ ಕ್ರಿಕೆಟ್ ಎನ್ನುವುದು ಬರೀ ಕ್ರೀಡೆ ಆಗಿ ಇರದೇ ಅದೊಂದು ಧರ್ಮವೇ ಆಗಿತ್ತು. ಮತ್ತು ಆ ಧರ್ಮದ ದೇವರು ಯಾವತ್ತಿಗೂ ಸಚಿನ್ ತೆಂಡೂಲ್ಕರೇ ಆಗಿದ್ದರು. ಬಹು ಧರ್ಮದ ಈ ದೇಶದಲ್ಲಿ ಈ ಒಂದು ಧರ್ಮ, ಈ ದೇವರೇ ಹೆಚ್ಚಿನವರಿಗೆ ಇಷ್ಟ ಆಗಿದ್ದ ಕಾಲ ಅದು.
ಆವತ್ತು ಕೂಡ ಸಚಿನ್ ಗಾಗಿ ಬಂಗಾಲದ ಹೆಚ್ಚಿನ ಜನರು ಕಣ್ಣೀರು ಕೂಡ ಸುರಿಸಿದ್ದರು. ತಮ್ಮ ದೇಶದ ಶ್ರೇಷ್ಟ ಆಟಗಾರನಿಗೆ ತಮ್ಮ ಗ್ರೌಂಡ್ ನಲ್ಲಿ ವಿದಾಯ ಕೋರಿದ್ದರು.
ಎಷ್ಟೋ ಸಮಯದ ನಂತರ ಇದರ ಬಗ್ಗೆ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಒಮ್ಮೆ ಸೌರವ್ ಗಂಗೂಲಿಗೆ ಈ ರೀತಿಯಾಗಿ ಕೇಳಿದ್ದರಂತೆ -
ಹರ್ಷ ಬೋಗ್ಲೆ - ಸೌರವ್, ನಿಮಗೆ ಏನು ಅನ್ನಿಸುತ್ತದೆ, ಸಚಿನ್ ತಮ್ಮ 199 ನೇ ಪಂದ್ಯವನ್ನು ಆಡುವಾಗ ಈಡನ್ ಗಾರ್ಡನ್ ನಲ್ಲಿ ಆವತ್ತು ಅವರು, ನಿಮಗಿಂತಲೂ ಹೆಚ್ಚು ಪಾಪ್ಯುಲರ್ ಆಗಿದ್ದರು ಎಂದು ನಿಮಗೆ ಅನ್ನಿಸುತ್ತದೆಯೇ...?
ಈ ಪ್ರಶ್ನೆಗೆ ಬೇರೆ ಯಾರಾದರೂ ಹೇಗೆ ಉತ್ತರ ಕೊಡುತ್ತಿದ್ದರೋ,ಅಥವಾ diplomatic ಆಗಿ ಉತ್ತರ ಕೊಟ್ಟು ಜಾರಿಕೊಳ್ಳುತ್ತಿದ್ದರೋ ಏನೋ ಗೊತ್ತಿಲ್ಲ...
ಆದರೆ ಬಂಗಾಳದ ದಾದ ಸೌರವ್ ಗಂಗೂಲಿ ಉತ್ತರಿಸಿದ ರೀತಿ ಮಾತ್ರ ತುಂಬಾನೇ ಸೊಗಸಾಗಿಯೇ ಇತ್ತು..ಆ ಮನುಷ್ಯ ಮಾತಾಡುವುದೇ ಹಾಗೆ.
ಗಂಗೂಲಿ ಹೇಳಿದ್ದು ಇಷ್ಟೇ...
- " ಹೌದು,ಖಂಡಿತವಾಗಿಯೂ ಹೌದು.. ಆದರೆ ಆ ಟೆಸ್ಟ್ ಮ್ಯಾಚ್ ನ ಆ ಐದು ದಿನಗಳು ಮಾತ್ರ! "
ಗಂಗೂಲಿ ಅಂದರೆ ಇದು.ಕ್ರಿಕೆಟ್ ನಲ್ಲಿ ನೇರ ದಿಟ್ಟ ನಿರಂತರ ಅನ್ನುವುದಕ್ಕೆ ಪರ್ಯಾಯ ಪದವೊಂದು ಇದ್ದರೆ ಅದು ಯಾವತ್ತಿಗೂ ಗಂಗೂಲಿಯೇ.
ತನ್ನನ್ನು ಕೊಲ್ಕತ್ತಾದ ಜನರು ಹಾಗೂ ಈಡನ್ ಗಾರ್ಡನ್ ಎಷ್ಟೊಂದು ಪ್ರೀತಿಸುತ್ತದೆ ಎಂಬುವುದನ್ನು ಗಂಗೂಲಿ ಈ ಮೂಲಕ ಹೇಳಿಕೊಂಡರು. ಅದು ಕ್ರಿಕೆಟ್ ದೇವರಿಗೆ ಅಪಮಾನ ಮಾಡಿದ್ದಲ್ಲ ಗಂಗೂಲಿ.
ನಿಜವಾಗಿಯೂ ಆ ಮನುಷ್ಯ ಕೊಲ್ಕತ್ತಾ ಜನರ ಪ್ರೀತಿಯ ಉತ್ಕಟತೆಯಲ್ಲಿ,ಬಂಗಾಳಿಗರ ಹೃದಯದಲ್ಲಿ ಬಂಗಾಳದ ರಾಜನೇ ಆಗಿದ್ದ. ಬರೀ ಬಂಗಾಳಕ್ಕೆ ಮಾತ್ರವಲ್ಲ ಆತ ಇಂಡಿಯಾ ಕ್ರಿಕೆಟ್ ಟೀಮ್ ನ ನಾಯಕ ಆದ ನಂತರ ಭಾರತೀಯ ಕ್ರಿಕೆಟ್ ನ ಅನಭಿಷಿಕ್ತ ರಾಜನಾಗಿ ಮೆರೆದಿದ್ದ. ಗಂಗೂಲಿ ಕ್ಯಾಪ್ಟನ್ ಆದ ನಂತರ ಇಂಡಿಯಾ ಟೀಮ್ ನ ಖದರೇ ಬದಲಾಯಿತು.
ಆಸ್ಟ್ರೇಲಿಯಾದ ಆಟಗಾರರು ಕಾಲು ಕೆರೆದುಕೊಂಡು ಇತರ ತಂಡಗಳೆದುರು ಸ್ಲೆಡ್ಜಿಂಗ್ ಎನ್ನುವ ತಂತ್ರವನ್ನು, ಜೆಂಟಲ್ ಮನ್ ಗೇಮ್ ಎಂದೇ ಕರೆಸಿಕೊಳ್ಳುವ ಸಭ್ಯ ಕ್ರಿಕೆಟ್ ನಲ್ಲಿ ಮಾಡುತ್ತಿದ್ದಾಗ, ಮೊದಲ ಬಾರಿಗೆ ಕಾಲರ್ ಮೇಲೇರಿಸಿ ಅವರಿಗೆ ಸಮನಾಗಿ ಮಾತ್ರವಲ್ಲ ಅವರಿಗಿಂತಲೂ ತುಸು ಹೆಚ್ಚೇ ಎನ್ನುವಷ್ಟು ಸ್ಲೆಡ್ಜಿಂಗ್ ಮಾಡಿ ಆಸ್ಟ್ರೇಲಿಯನ್ನರ ಬೆವರಿಳಿಸಿದ್ದು ಇದೇ ನಮ್ಮ ಗಂಗೂಲಿ.
ಆವಾಗ ನಮ್ಮಂತ ಚಿಕ್ಕ ಹುಡುಗರಿಗೆ ಗಂಗೂಲಿ ಜಿದ್ದಿಗೆ ಬಿದ್ದವನಂತೆ ಸ್ಲೆಡ್ಜಿಂಗ್ ಮಾಡುವುದು, ಅದರಲ್ಲೂ ಆಸ್ಟ್ರೇಲಿಯಾ ದ ವಿರುದ್ಧ ಸ್ಲೆಡ್ಜಿಂಗ್ ಮಾಡುವುದನ್ನು ನೋಡುವುದು ಎಂದರೆ ಅದೆನೋ ಪರಮಾನಂದ.ಗದ್ದೆ ಗ್ರೌಂಡ್ ನಲ್ಲಿ ಕ್ರಿಕೆಟ್ ಆಡುವಾಗ ಸ್ವಲ್ಪ ಮೋಸ ಆದರೂ ಪೆಟ್ ಲಡಾಯಿ, ಚೊರೆಪಟ್ ಮಾಡಿಕೊಂಡು ಆಟ ಆಡುತ್ತಿದ್ದ ನನ್ನಂತಹ ಹುಡುಗರಿಗೆ ಕೂಡ, ನಮ್ಮ ದೇಶದ ಟೀಮ್ ನಲ್ಲಿ ನಮ್ಮ ತರಹದ ಮನಸ್ಥಿತಿಯ ವ್ಯಕ್ತಿ ಒಬ್ಬ ಬೇಕಾಗಿದ್ದ. ಆಸ್ಟ್ರೇಲಿಯಾ ದ ತಂಡ ಸೌಮ್ಯ ಭಾರತೀಯ ಆಟಗಾರರ ಎದುರು ಸ್ಲೆಡ್ಜಿಂಗ್ ಮಾಡುವಾಗ ನಮ್ಮ ಪಿತ್ತ ನೆತ್ತಿಗೇರುತ್ತಿತ್ತು. ಕೊನೆಗೂ ಗಂಗೂಲಿ ಎನ್ನುವವ ಬಂದ ನೋಡಿ,ನಮಗೆ ನಮ್ಮ ತರಹದ ಒಬ್ಬ ಮನುಷ್ಯ ಗಂಗೂಲಿ ರೂಪದಲ್ಲಿ ಸಿಕ್ಕಿದ್ದ.
ಗಂಗೂಲಿ ಸುಖಾ ಸಮ್ಮನೆ ಹೋಗಿ ಕಿರಿಕ್ ಕೂಡ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಅವನ ತಂಟೆಗೆ ಬಂದರೆ ಮಾತ್ರ ಬಿಟ್ಟು ಬಿಡುತ್ತಲೇ ಇರಲಿಲ್ಲ ಆ ಮನುಷ್ಯ. ಇದೇ ನನ್ನಂತಹ ಹುಡುಗರಿಗೆ ಇಷ್ಟ ಆಗಿದ್ದು. ಅದಕ್ಕಿಂತ ಮೊದಲು ಅಂತಹ ನಾಯಕನನ್ನು ನಾವು ಹುಡುಗರು ನೋಡಿಯೇ ಇರಲಿಲ್ಲ. ನೀವೇ ಹೇಳಿ ಮೊದಲ ಬಾರಿಗೆ ಇಂತಹ ಆಟಗಾರ ಗ್ರೌಂಡ್ ನಲ್ಲಿ ಕಂಡಾಗ ಹುಡುಗರಿಗೆ, ಯುವಕರಿಗೆ ಹೇಗೆ ಇಷ್ಟ ಆಗದೇ ಇರಲು ಸಾಧ್ಯ.
ಈಗ ನಮ್ಮ ವಿರಾಟ್ ಕೊಹ್ಲಿ ತೋರಿಸುವ aggression ಗಿಂತಲೂ ದುಪ್ಪಟ್ಟು ಆದ aggressive attitude ಗಂಗೂಲಿ ಎಂಬ ಕ್ರಿಕೆಟ್ ದಾದ ಎಂದಿಗೋ ತೋರಿಸಿ ಬಿಟ್ಟಿದ್ದ.
ಅದು July 13 -2002 ನೇ ಇಸವಿ. ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ನಡೆದಿತ್ತು natwest series ನ ಫೈನಲ್ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರುಗಳಲ್ಲಿ ಐದು ವಿಕೆಟ್ ಗಳನ್ನು ಕಳೆದು ಕೊಂಡು ಪೇರಿಸಿದ್ದು ಬರೋಬ್ಬರಿ 325 ರನ್. ಓಪನರ್ ಟ್ರೆಸ್ಕೋತಿಕ್ 100 ಎಸೆತಗಳಲ್ಲಿ 109 ಹಾಗೂ ನಾಸಿರ್ ಹುಸೇನ್ 128 ಎಸೆತಗಳಲ್ಲಿ 115 ರನ್ ಪೇರಿಸಿದ್ದರು. ಆ ಐದು ವಿಕೆಟ್ ಗಳಲ್ಲಿ ನಮ್ಮ ಜಹೀರ್ ಖಾನ್ ಕಬಳಿಸಿದ್ದು ಮೂರು ವಿಕೆಟ್.
ಆ ದಿನಗಳಲ್ಲಿ ಇದು ಬೆಟ್ಟದಂತಹ ಸ್ಕೋರ್. ಮಾತ್ರವಲ್ಲ ಇಂಡಿಯಾ ಆ ದಿನಗಳಲ್ಲಿ ಬೇರೆ ಎಲ್ಲಾ ಮ್ಯಾಚುಗಳನ್ನು ಗೆದ್ದರೂ ಕೂಡ ಫೈನಲ್ ನಲ್ಲಿ ಸೋಲುತ್ತದೆ ಎನ್ನುವ ಬಹುತ್ ಬಡಾ ಅಪವಾದ ಬೇರೆ ಒಂದು ಇತ್ತು. ಇದು ಕೂಡ ಹಾಗೇ ಆಗುತ್ತದೆ ಎಂದು ಎಲ್ಲರೂ ತೀರ್ಮಾನಿಸಿ ಆಗಿತ್ತು. ಆದರೂ ನನ್ನಂತಹ ಹುಡುಗನಿಗೆ, ಹಲವು ಬಿಸಿ ರಕ್ತದ ಯುವಕರಿಗೆ ಈ ಗಂಗೂಲಿ ಯ ಹುಡುಗರು ಏನೋ ಮಾಡುತ್ತಾರೆ ಎನ್ನುವ ಆಸೆ.
ಭಾರತದಲ್ಲಿ ಆವಾಗ ರಾತ್ರಿಯ ಸಮಯ. ಕೆಲವರು ಟಿವಿ ಯ ಮುಂದೆ ಕೂತಿದ್ದರೆ ಇನ್ನು ಕೆಲವರು ರೇಡಿಯೋ ಗೆ ಜೋತು ಬಿದ್ದಿದ್ದರು. ಆವತ್ತು ಕರೆಂಟ್ ಬೇರೆ ಇರಲಿಲ್ಲ ನಾನು ಕೂಡ ರೇಡಿಯೋ ದ ಮುಂದೆಯೇ ಚಕ್ಕಳ ಮಕ್ಕಳ ಹಾಕಿಕೊಂಡು ಕೂತಿದ್ದೆ.
ಅಂತು ಭಾರತದ ಬ್ಯಾಟಿಂಗ್ ಶುರು ಆಯಿತು ನೋಡಿ. ಸೆಹ್ವಾಗ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದು ಗಂಗೂಲಿಯೇ. ಸೆಹ್ವಾಗ್ 45 ರನ್ ಸಿಡಿಸಿದರೆ, ಗಂಗೂಲಿ ದಾದನದ್ದು 45 ಎಸೆತಗಳ ಮುಂದೆ 60 ರನ್ ಗಳ ಕೊಡುಗೆ. ಅದರಲ್ಲಿ ಇದ್ದದ್ದು 10 ಬೌಂಡರಿ ಮತ್ತು ಒಂದು ಸಿಕ್ಸರ್.
ಔಟ್ ಆಗಿ ಹೋದ ಗಂಗೂಲಿ ಸೀದಾ ಹೋಗಿ ಕುಳಿತುಕೊಂಡದ್ದು ಅದೇ ಫೇಮಸ್ ಲಾರ್ಡ್ಸ್ ಅಂಗಣದ ವೆರಿ ಫೇಮಸ್ ಬಾಲ್ಕನಿಯಲ್ಲಿ. ಅಲ್ಲಿಯೇ ನಮ್ಮ ಕಪಿಲ್ ದೇವ್ june-25-1983 ರಂದು ವಿಶ್ವಕಪ್ ಎತ್ತಿ ಹಿಡಿದು ಜಯದ ನಗೆ ಬೀರಿದ್ದು.
ಮ್ಯಾಚ್ ಮುಗಿಯುವವರೆಗೂ ಅಲ್ಲಿಯೇ ಕೂತಿದ್ದ ಗಂಗೂಲಿ ಮಾಡಿದ್ದು ಒಂದೇ ಕೆಲಸ, ತದೇಕಚಿತ್ತದಿಂದ ಮ್ಯಾಚ್ ನೋಡುತ್ತಾ ನೋಡುತ್ತಾ ತಮ್ಮ ಎಂದಿನ ಶೈಲಿಯಲ್ಲಿ ಉಗುರು ಕಚ್ಚುತ್ತಿದ್ದದ್ದು.ಮಾತ್ರವಲ್ಲ ಆ ಮನುಷ್ಯ ಏನೋ ಒಂದು ಮಾಡುವುದಕ್ಕಾಗಿ ಬಹು ದಿನಗಳಿಂದ ದೀರ್ಘ ತಪಸ್ಸಿನಂತೆ ಕಾದಿದ್ದ ಆವತ್ತು.! ಮತ್ತು ಆ ತಪಸ್ಸು ಆ ದಿನ ಸಿದ್ದಿಸಲಿತ್ತು. ಆದರೆ ಅದು ಗಂಗೂಲಿ ಗೂ ಕೂಡ ಗೊತ್ತಿರಲಿಲ್ಲ!
ಗಂಗೂಲಿ, ಸೆಹ್ವಾಗ್ ಔಟ್ ಆದ ನಂತರ ದಿನೇಶ್ ಮೊಂಗಿಯ, ತೆಂಡೂಲ್ಕರ್, ರಾಹುಲ್ ದ್ರಾವಿಡ್ ಕೂಡ ಬೇಗನೆ ಪೆವಿಲಿಯನ್ ಸೇರಿಕೊಂಡು ಬಿಟ್ಟರು. ಕ್ರಿಸಿನಲ್ಲಿ ಇದ್ದದ್ದು ಮಹಮದ್ ಕೈಫ್ ಮತ್ತು ಯುವರಾಜ್ ಸಿಂಗ್. ಇಬ್ಬರೂ ಆ ಕಾಲಕ್ಕೆ ಎಳೆಯ ಯುವಕರು ಹಾಗೂ ಆ ಸಮಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನ ಅನನುಭವಿಗಳು.
ಇಲ್ಲಿ ಭಾರತದಲ್ಲಿ ಮ್ಯಾಚ್ ನೋಡುತ್ತಿದ್ದ, ಕೇಳುತ್ತಿದ್ದ ಹೆಚ್ಚಿನ ಭಾರತೀಯರು ಎಲ್ಲರೂ ಆಸೆಯೇ ಬಿಟ್ಟಾಗಿತ್ತು. ಸಚಿನ್ ಔಟ್ ಆದರೆ ಟಿವಿ ಆಫ್ ಮಾಡಿ ದೇಶವೇ ಮಲಗುತ್ತಿದ್ದ ಕಾಲ ಅದು. ಆದರೂ ನಿದ್ರೆ ಬರದ ಕೆಲವು ಹುಡುಗರು,ನನ್ನಂತವರು ಸುಮ್ಮನೆ ಟಿವಿ ಮುಂದೆ, ರೇಡಿಯೋ ಮುಂದೆ ಕುಳಿತುಕೊಂಡಿದ್ದೆವು.ಆದರೂ ಭರವಸೆ ಇರಲಿಲ್ಲ.
ಹೋದ ಕರೆಂಟ್ ಬಂತು ನೋಡಿ. ಹಾಗಾಗಿ ನಾನು ಕೂಡ ಟಿವಿಯ ಮುಂದೆ ಗರುಡಗಂಬ ಊರಿ ಕೂತಿದ್ದೆ. ಭಾರತ ವಿಜಯದ ಧ್ವಜ ಹಾರಿಸಬಹುದೋ ಎಂಬ ಆಸೆಯಿಂದ. ಆದರೆ ಅಂದು ಬೇರೆ ಏನೋ ಒಂದು ಹಾರಿತ್ತು! ಅದನ್ನು ಯಾರೂ expect ಮಾಡಿಯೇ ಇರಲಿಲ್ಲ!
ಆವತ್ತು ಎಂದಿನಂತೆ ಫೈನಲ್ ನಲ್ಲಿ ಭಾರತ ಸೋಲದೆ, ಆ ದಿನ ಒಂದು ಪವಾಡವೇ ನಡೆದು ಹೋಯಿತು. ಯುವರಾಜ್ ಸಿಂಗ್ 63 ಎಸೆತಗಳ ಮುಂದೆ 69 ಹೊಡೆದರೆ, ಮಹಮದ್ ಕೈಫ್ ಔಟಾಗದೇ 75 ಎಸೆತಗಳ ಮುಂದೆ 87 ರನ್ ಗಳನ್ನು ಹೊಡೆದು ಇನ್ನೂ ಮೂರು ಎಸೆತ ಬಾಕಿ ಇರುವಾಗಲೇ ಜಯದ ಕೇಕೆ ಹಾಕಿ ಇಂಗ್ಲೆಂಡ್ ತಂಡವನ್ನು ಭಾರತ, ಅವರ ನೆಲದಲ್ಲಿಯೇ ಮಕಾಡೆ ಮಲಗಿಸಿ ಬಿಟ್ಟಿತ್ತು.
ಇಂದಿಗೂ ನೆನಪಿದೆ ಆವತ್ತು ಗ್ರೌಂಡ್ ನಲ್ಲಿ ಆದ ಸೆಲೆಬ್ರೇಶನ್ ಅನ್ನು ತೋರಿಸುವುದಕ್ಕಿಂತಲೂ ಮೊದಲೇ ಅಲ್ಲಿದ್ದ ಅಂದಿನ ಹೆಚ್ಚಿನ ಕ್ಯಾಮೆರಾ ಗಳು ತಿರುಗಿದ್ದು ಲಾರ್ಡ್ಸ್ ನ ಇತಿಹಾಸದ ಪ್ರಸಿದ್ಧ ಬಾಲ್ಕನಿಯ ಕಡೆಗೆನೇ. ಮತ್ತು ಅಲ್ಲಿ ನಡೆದಿತ್ತು ನೋಡಿ ಆ ಒಂದು ಘಟನೆ, ನಮ್ಮ ದಾದ ತನ್ನ ಶರ್ಟ್ ಬಿಚ್ಚಿ ಗಾಳಿಯಲ್ಲಿ ರಪ ರಪ ಅಂತ ತಿರುಗಿಸುತ್ತಿದ್ದರೆ ಗ್ರೌಂಡ್ ನಲ್ಲಿದ್ದ ಪ್ಲಿಂಟಾಫ್ ಎಂಬ ತರಲೆಗೆ ಕಪಾಳಕ್ಕೆರಡು ಬಾರಿಸಿದಂತಿತ್ತು ಅದು!!
ಇದಕ್ಕೂ ಮೊದಲು ಅದೇ ವರ್ಷ ಅಂದರೆ February-3-2002 ರಂದು, ಇಂಡಿಯಾ 3-2 ರಿಂದ ಮುನ್ನಡೆಯಲ್ಲಿದ್ದ ಸಿರೀಸ್ ಅನ್ನು, ವಾಖೆಂಡೆ ಯಲ್ಲಿ ನಡೆದ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್, ಸೀರಿಸ್ 3-3 ರಿಂದ ಸಮಬಲ ಆಗುವಂತೆ ಮಾಡಿ ಕೇಕೆ ಹಾಕಿತ್ತು. ಭಾರತೀಯರು ಇಂಗ್ಲೆಂಡ್ ನೀಡಿದ 255 ರನ್ ಅನ್ನು ಕೊನೆಯ ಕ್ಷಣದಲ್ಲಿ ಬೆನ್ನು ಹತ್ತಲಾಗದೇ ಕೇವಲ ಐದು ರನ್ ಗೆ ಸೋತು ಶರಣಾಗಿದ್ದರು.
ಅಂದು ಕೂಡ ಗಂಗೂಲಿ 99 ಎಸೆತಗಳ ಮುಂದೆ 80 ರನ್ ಗಳಿಸಿದ್ದರು. ಬಾರಿಸಿದ್ದು ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್. ಆದರೆ ಗಂಗೂಲಿ ಔಟ್ ಆದ ನಂತರ ಆವತ್ತು ಕೊನೆಯ ಡೆತ್ ಓವರುಗಳಲ್ಲಿ ಮಾರಕ ಬೌಲಿಂಗ್ ಮಾಡಿ ಭಾರತೀಯರನ್ನು ಕಟ್ಟಿ ಹಾಕಿದ್ದು ಇದೇ ಪ್ಲಿಂಟಾಫ್.ಕೇವಲ 38 ರನ್ ನೀಡಿ 3 ವಿಕೆಟ್ ಕಿತ್ತಿದ್ದ.
ಆದರೆ ಆವತ್ತು ಆತ ಬರೀ ಅಷ್ಟೇ ಮಾಡಲಿಲ್ಲ.ವಿನ್ ಆದ ಕೂಡಲೇ ತನ್ನ ಶರ್ಟ್ ಬಿಚ್ಚಿ ಗ್ರೌಂಡ್ ತುಂಬಾ ಓಡಾಡಿದ್ದ!! ಅದು ಅಂದಿನ ಭಾರತೀಯರೆಲ್ಲರಿಗೂ ಅತೀವವಾಗಿ ಕಾಡಿತ್ತು.ನಮ್ಮಂತಹ ಹುಡುಗರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ನಮ್ಮ ಗದ್ದೆ ಗ್ರೌಂಡ್ ನಲ್ಲಿ ಸೋತಾಗ ಯಾರಾದರೂ ಆ ರೀತಿ ಮಾಡಿದ್ದಿದ್ದರೆ, ನಾವು ಖಂಡಿತವಾಗಿಯೂ ಹಿಡಿದು ಸರಿಯಾಗಿ ಮುಖ ಮೂತಿ ನೋಡದೇ ಚಚ್ಚುತ್ತಿದ್ದೆವು.
ಆದರೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇದನ್ನು ನಾವು expect ಮಾಡಲು ಸಾಧ್ಯವಿಲ್ಲ ಅಲ್ವಾ.. ಹಾಗೇ ಆ ನೋವು ಒಂದು ಹಾಗೇ ನಮ್ಮಲ್ಲಿ ಉಳಿದು ಹೋಗಿತ್ತು.
ಅದನ್ನು ಬಹುಶಃ ಆವತ್ತು ಸೋತಿದ್ದ ಭಾರತೀಯ ತಂಡದ ಉಳಿದ ಆಟಗಾರರು ಮರೆತಿದ್ದರೋ ಏನೋ, ಆದರೆ ಗಂಗೂಲಿ ಎನ್ನುವ ಮನುಷ್ಯ ಅದನ್ನು ಅಷ್ಟು ಸುಲಭವಾಗಿ ಮರೆತಿರಲಿಲ್ಲ. ಅದನ್ನು ನೆನಪಿನಲ್ಲಿ ಇಟ್ಟುಕೊಂಡೇ ಆ ತರಲೆ ಪ್ಲಿಂಟಾಫ್ ಗೆ ಒಂದು ಸರಿಯಾದ ಮದ್ದನ್ನು ಅವರ ಗ್ರೌಂಡ್ ನಲ್ಲಿಯೇ ಅದರಲ್ಲೂ ಕ್ರಿಕೆಟ್ ಕಾಶಿಯ ಬಾಲ್ಕನಿಯಲ್ಲೇ ನಮ್ಮ ಗಂಗೂಲಿ ಅರೆದಿದ್ದ.
ಅದನ್ನು ಆ ನಂತರ ಗಂಗೂಲಿ ದಿಟ್ಟವಾಗಿ ಹೇಳಿದ್ದ ಕೂಡ. ಜೆಪ್ರಿ ಬಾಯ್ಕಾಟ್ "ಹೇಯ್ Naughty boy, ನೀನು ಈ ರೀತಿ ಅಸಭ್ಯವಾಗಿ ವರ್ತಿಸಿದ್ದಕ್ಕೆ explanation ಕೊಡು.." ಎಂದಿದಕ್ಕೆ. ಗಂಗೂಲಿ ಹೇಳಿದ್ದರು " ನಿಮ್ಮ ಒಬ್ಬ ಹುಡುಗ ಕೂಡ ನಮ್ಮ ಮುಂಬೈ ನಲ್ಲಿ ಇದೇ ರೀತಿ ಇದಕ್ಕಿಂತ ಹಿಂದೆ ಮಾಡಿದ್ದ.." ಎಂದು.
ಅದಕ್ಕೆ ಜೆಪ್ರಿ ಬಾಯ್ಕಾಟ್ "ಆದರೆ ನಮ್ಮ ಲಾರ್ಡ್ಸ್ ಅಂಗಣ ಕ್ರಿಕೆಟ್ ನ ಮೆಕ್ಕಾ ಇದ್ದಂತೆ.. " ಎಂದು ಹೇಳಿದ್ದರೆ, ಅದಕ್ಕೆ ಗಂಗೂಲಿ ಏನು ಹೇಳಿದ್ದರು ಗೊತ್ತೇ...
" ಹೇಗೆ ನಿಮಗೆ ನಿಮ್ಮ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್, ಕ್ರಿಕೆಟ್ ನ ಮೆಕ್ಕಾವೋ... ಅದೇ ರೀತಿ ನಮಗೆ ನಮ್ಮ ವಾಂಖೆಡೆ ಸ್ಟೇಡಿಯಮ್ ಪವಿತ್ರವಾದದ್ದು...!! " ಎಂದು ಹೇಳಿ ಮುಗಿಸಿದ್ದರು.
ಅಂದು ಗಂಗೂಲಿ ಮಾಡಿದ್ದು ತಪ್ಪು ಎಂದು ಬೇರೆ ದೇಶಗಳ ಕ್ರಿಕೆಟ್ ದಿಗ್ಗಜರು ಮಾತ್ರವಲ್ಲ ಭಾರತೀಯ ಕ್ರಿಕೆಟ್ ನ ಜಂಟಲ್ ಮನ್ ಕ್ರಿಕೆಟಿಗರು ಅಂತ ಅನ್ನಿಸಿಕೊಂಡವರು ಕೂಡ ಗಂಗೂಲಿ ನಡೆಯನ್ನು ಖಂಡಿಸಿದರು. ಕ್ರಿಡೆಗೆ ಅದು ಶೋಭೆ ತರುವಂತಹದ್ದು ಅಲ್ಲ ಎಂದು ಹೇಳಿ ಪೋಸ್ಟ್ ಮಾರ್ಟಂ ರಿಪೋರ್ಟ್ ಮುಗಿಸಿದ್ದರು. ಅವರು ಹೇಳಿದ್ದು ನಿಜವಾಗಿಯೂ ಸರಿಯಾದದ್ದೇ. ಆದರೆ ಅಂದು ನನ್ನಂತಹ ಹುಡುಗನಿಗೆ ಕ್ರೀಡಾ ಮನೋಭಾವ, ಸಭ್ಯತೆ, ಅದು, ಇದು, ಎಂಬ ಎಲ್ಲದಕ್ಕಿಂತಲೂ ಹೆಚ್ಚಾಗಿ ಕಂಡಿದ್ದು ಕೇವಲ ಕಿಚ್ಚು, ಹೋರಾಟ, ದೇಶಪ್ರೇಮ ಅಷ್ಟೇ..
ನಮ್ಮ ದೇಶದ ತಂಡದ ಎದುರು ಅದು ನಮ್ಮ ನೆಲದಲ್ಲಿಯೇ ಮರ್ಲ್ ಕಟ್ಟಿದವರ ವಿರುಧ್ಧ ಅವರ ವಿರುದ್ಧ ಅವರ ದೇಶಕ್ಕೆ ಹೋಗಿ ಅಲ್ಲಿಯೇ ಚಳಿ ಬಿಡಿಸಿದರೆ ನನ್ನಂತ ಹುಡುಗನಿಗೆ,ಬಿಸಿ ರಕ್ತದ ಆಗಿನ ಹುಡುಗರಿಗೆ ಎಷ್ಟು ಖುಷಿ ಆಗಬೇಡ ಹೇಳಿ. ಅಂದು ಗಂಗೂಲಿ ಸರಿಯಾಗಿಯೇ ಮಾಡಿದ್ದಾನೆ ಎನ್ನುವುದ ಹೊರತು ಬೇರೆ ಯಾವುದೇ ಲಾಜಿಕ್ ನನ್ನಂತ ಹಲವರಿಗೆ ಹೊಳೆದಿರಲಿಲ್ಲ.ಅದರಲ್ಲಿ ಒಂದು ಹುಚ್ಚು ಪ್ರೀತಿ ಇತ್ತು. ಹೆಮ್ಮೆ ಇತ್ತು.
ಇಂದಿಗೂ ಆ Natwest ನ ಆ ಚೇಸಿಂಗ್, ಭಾರತದ ಕ್ರಿಕೆಟ್ ನ ಕ್ಲಾಸಿಕ್ ಮ್ಯಾಚ್ ಗಳಲ್ಲಿ ಒಂದು. ಬೇಕಾದರೆ ಜನರು ಅಂದು ಶಕ್ತಿ ಮೀರಿ ತಂಡದ ಗೆಲುವಿಗಾಗಿ ಪ್ರಯತ್ನಿಸಿದ ಯುವರಾಜ್ ಹಾಗೂ ಮಹಮ್ಮದ್ ಕೈಪ್ ರನ್ನು ಮಾತ್ರವಲ್ಲ ಅವರು ಅಂದು ಕ್ರಮವಾಗಿ ಬಾರಿಸಿದ 69,87 ರನ್ ಗಳನ್ನು ಬೇಕಾದರೂ ಸುಲಭವಾಗಿ ಮರೆತು ಬಿಡಬಹುದು. ಆದರೆ ಎಂದಿಗೂ ಲಾರ್ಡ್ಸ್ ನ ಬಾಲ್ಕನಿಯಲ್ಲಿ ನಿಂತು ಹಲ್ಲುಕಚ್ಚಿಕೊಂಡು ಶರ್ಟ್ ಬಿಚ್ಚಿ, ಗಾಳಿಯಲ್ಲಿ ಗಿರ ಗಿರ ಎಂದು ತಿರುಗಿಸಿದ ಗಂಗೂಲಿ ಯನ್ನು ಮರೆಯಲು ಸಾಧ್ಯವೇ ಇಲ್ಲ..ಎಂದೆಂದಿಗೂ ಸಾಧ್ಯವಿಲ್ಲ.
ಪಿಳಿ ಪಿಳಿ ಕಣ್ಣು ಬಿಡುತ್ತಾ ಕ್ರೀಸ್ ಗೆ ಆಗಮಿಸುವ ಗಂಗೂಲಿ, ಬೌಲರ್ ಗಳ ಬಾಲಿಗೆ ಹಾಗೇ ಮುಂದಕ್ಕೆ ಬಂದು ಪೆವಿಲಿಯನ್ ನಲ್ಲಿರುವ ಸ್ಟ್ಯಾಂಡ್ ಗಳಿಗೆ ಸಿಕ್ಸರ್ ಬಾರಿಸುವುದನ್ನು ನೋಡುವುದೇ ಒಂದು ಮನಮೋಹಕ ದೃಶ್ಯ. ಅದನ್ನು ಇಂಗ್ಲಿಷ್ ನಲ್ಲಿ Treat for Eyes ಅನ್ನುವಷ್ಟು ಸುಂದರ . ಗಂಗೂಲಿ ನೋಡಲು ಕೂಡ ಬಲು ಸುಂದರವಾದ ವ್ಯಕ್ತಿ.
ಮೊದಲು ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ಗಂಗೂಲಿ ನಂತರ ಎಡಗೈ ಬ್ಯಾಟ್ಸ್‌ಮನ್ ಆಗಿ ಬದಲಾದರು. God of offside ಎಂದೇ ಕ್ರಿಕೆಟ್ ಜಗತ್ತು ಗಂಗೂಲಿಯನ್ನು ಗುರುತಿಸಿದೆ. ಗಂಗೂಲಿ off side ನಲ್ಲಿ ಬಾರಿಸುವ ಡ್ರೈವ್ ಗಳು, ಕಟ್ ಗಳು ಅತೀ ಸುಂದರವಾದದ್ದು.
ಗಂಗೂಲಿ ತಾನು ಮಾತ್ರ ಬೆಳೆಯಲಿಲ್ಲ. ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಜಹೀರ್ ಖಾನ್ ಅನ್ನು ಬೆಳೆಸಿದರು. ತಾವೊಬ್ಬ ಆಗಲೇ ಸರ್ವ ಶ್ರೇಷ್ಟ ಓಪನರ್ ಆಗಿದ್ದರೂ ಕೂಡ ವಿರೇಂದ್ರ ಸೆಹ್ವಾಗ್ ಎಂಬ ಆಟಗಾರ ವಿಶ್ವದ ಮತ್ತೊಬ್ಬ ಪ್ರಚಂಡ ಬ್ಯಾಟ್ಸ್‌ಮನ್ ಆಗಲು ತಾವೇ ತಮ್ಮ ಓಪನಿಂಗ್ ಸ್ಲಾಟ್ ಅನ್ನು ಬಿಟ್ಟುಕೊಟ್ಟರು.
ಸೌರವ್ ಚಂಡಿದಾಸ್ ಗಂಗೂಲಿ 1972 ಜುಲೈ 8 ರಂದು ಕೋಲ್ಕತ್ತ ದ ಬೆಹಲ ದಲ್ಲಿ ಜನಿಸಿದರು. ಗಂಗೂಲಿ ಒಬ್ಬ ಸರ್ವ ಶ್ರೇಷ್ಟ ಎಡಗೈ ಬ್ಯಾಟ್ಸ್‌ಮನ್. ಅವರ ಹೆಸರಲ್ಲೂ ಕೂಡ ತುಂಬಾ ದಾಖಲೆಗಳು ಇದ್ದವು. ಆದರೂ ನನಗೆ ಗಂಗೂಲಿ ಕೇವಲ ಬ್ಯಾಟ್ಸ್‌ಮನ್ ಆಗಿ ಮಾತ್ರವಲ್ಲ, ಆತ ಒಬ್ಬ ನಾಯಕನಾಗಿಯೂ ಮಾತ್ರವಲ್ಲ... ಆತ ಒಬ್ಬ ದಿಟ್ಟ ಹೋರಾಟಗಾರನಾಗಿಯೂ ಇಷ್ಟ.
ಗಂಗೂಲಿ ಮನಸ್ಸಿಗೆ ಬಂದದ್ದನೇ ಹೇಳಿದ್ದರು. ಇಷ್ಟ ಬಂದದನ್ನೇ ಮಾಡಿದರು. ಇದಕ್ಕಾಗಿ ಕೆಲವರ ವಿರೋಧವನ್ನು ಕೂಡ ಕಟ್ಟಿಕೊಂಡರು.ಆದರೆ ಆ ಮನುಷ್ಯ ಕಳೆದುಕೊಂಡದಕ್ಕಿಂತಲೂ ಜಾಸ್ತಿಯಾಗಿ ಈ ದೇಶದ ಜನರ ಅಪಾರವಾದ ಅಭಿಮಾನವನ್ನು ಗಳಿಸಿಕೊಂಡು ಬಿಟ್ಟಿದ್ದರು. ಅದರಲ್ಲೂ ಆತ ಬಂಗಾಳಕ್ಕೆ ರಾಜನಾಗಿದ್ದರೆ, ಈಡನ್ ಗಾರ್ಡನ್ ಎಂಬುವುದು ಆ ರಾಜನ ಹಸ್ತಿನಾಪುರವೇ ಆಗಿತ್ತು.
ಒಮ್ಮೆ ವೀಕ್ಷಕ ವಿವರಣೆ ನೀಡುವಾಗ ರವಿಶಾಸ್ತ್ರಿ ಗಂಗೂಲಿಗೆ ಹೀಗೆ ಕೇಳಿದ್ದರಂತೆ... ಈಡನ್ ಗಾರ್ಡನ್ ನಲ್ಲಿ ಯಾಕೆ ಒಂದು ಸೌರವ್ ಗಂಗೂಲಿ ಎಂಬ ಪ್ರತ್ಯೇಕ ಸ್ಟ್ಯಾಂಡ್ ಇರಬಾರದು ಎಂದು.
ಅದಕ್ಕೆ ಗಂಗೂಲಿ ಏನು ಹೇಳಿದ್ದರು ಗೊತ್ತೆನೋ..
" This entire stadium belongs to me ravi.."
ಗಂಗೂಲಿ ಅಂದರೆ ಇದು.. ❤️
ಆ ಮನುಷ್ಯ ಹಲವು ನೆನಪುಗಳನ್ನು ಬಿಟ್ಟು ಹೋಗಿದ್ದಾನೆ.
ಅಂದ ಹಾಗೆ ಸದಾ ನೆನಪಿನಲ್ಲಿ ಉಳಿಯುವ ಭಾರತೀಯ ಕ್ರಿಕೆಟ್ ದಾದ ಹುಟ್ಟಿದ್ದು July 8 1972 ರಂದು.
.....................................................................................
#Cricket_Review
Ab Pacchu
Moodubidire

Comments
Post a Comment