ಸೈನ್ಯವಿಲ್ಲದ ರುಚಿಕರ ದಾಳಿಯಿದು - ದಾಳಿ ತೊವ್ವೆ
ಹೆಚ್ಚಾಗಿ ಈ ಅಡುಗೆಗಳ ಬರವಣಿಗೆ ಬರೆದಾಗ ಅಥವಾ ಯಾವುದೇ ಬರವಣಿಗೆಗಳ ಮಧ್ಯೆ ನಮ್ಮ ಕಡೆಯ ಅಡುಗೆಯೊಂದು ಕಾಣಿಸಿಕೊಂಡಾಗ ಹಲವರು ಹೇಳುವುದಿದೆ... ನೀವು ಹೇಳುವ ತಿಂಡಿ ನಾವು ತಿಂದೂ ಇಲ್ಲ,ಕೇಳಿಯೂ ಇಲ್ಲ.. ನೀವು ಬಿಡಿ ಭಾಗ್ಯಶಾಲಿಗಳು ಎಂದು.
ಹೌದು ಕೆಲವೊಮ್ಮೆ ಅನಿಸುವುದಿದೆ,ಆ ರೀತಿಯಲ್ಲಿ ನೋಡಿದರೆ ತಕ್ಕ ಮಟ್ಟಿಗೆ ನಾವು ಭಾಗ್ಯಶಾಲಿಗಳೇ ಎಂದು.ಅದಕ್ಕೆ ಕಾರಣವೂ ಇದೆ.ಈ ನಮ್ಮ ತುಳುನಾಡು ಪ್ರಾಂತ್ಯದ ಸಾಂಪ್ರದಾಯಿಕ ಅಡುಗೆಗಳು ಮಂಗಳೂರು, ಉಡುಪಿ ಮತ್ತು ಕಾಸರಗೋಡು ಭಾಗಗಳಲ್ಲಿ ಬಿಟ್ಟರೆ ಬೇರೆ ಎಲ್ಲೂ ಕಾಣಸಿಗುವುದಿಲ್ಲ.ಅಷ್ಟೇ ಏಕೆ ಮಂಗಳೂರಿಗೆ ಬಂದರೂ ಕೂಡ ಇಲ್ಲಿಯ ಹೋಟೆಲ್ ನಲ್ಲೂ ಕೂಡ ತುಳುನಾಡಿನ ಮನೆಯ ತಿನಿಸುಗಳು ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ಅದಕ್ಕೆ ನೀವು ಇಲ್ಲಿಯ ಮನೆಗಳಿಗೆಯೇ ಹೋಗಬೇಕು.ಅದರಲ್ಲೂ ಹಳ್ಳಿ ಕಡೆಗೆ.
ಇಲ್ಲಿಯೂ ಕೂಡ ಬದಲಾವಣೆಯ ಗಾಳಿ ಬೀಸಿದೆ.ಮನೆಯಲ್ಲಿ ಹಿರಿಯರು ಇದ್ದರೆ ಅಥವಾ ಗೊತ್ತಿದ್ದವರು ಇದ್ದರು ಗೆಂಡದಡ್ಡೆ, ಸಾರ್ನೆದಡ್ಡೆ,ಮಣ್ಣಿ,ಗಟ್ಟಿ,ಮೂಡೆಗಳು ಘಮಘಮಿಸುತ್ತದೆ.ಆದರೂ ಅಪರೂಪಕ್ಕೆ ಒಮ್ಮೆ ಆವಾಗವಾಗ ಹಳೆಯ ಕಾಲದ ಅಡುಗೆಗಳು ಎಲ್ಲಾದರೂ ಒಂದು ಕಡೆಯಲ್ಲಿ ನಮ್ಮವರ ಬಾಯಿ ತಣಿಸುತ್ತಲೇ ಇರುತ್ತದೆ.ನಮ್ಮ ಪುಣ್ಯಕ್ಕೆ ಆಟಿ ತಿಂಗಳಿನಲ್ಲಿ ಅಲ್ಲಲ್ಲಿ "ಆಟಿಡೊಂಜಿ ದಿನ", " ಕೆಸರ್ಡ್ ಒಂಜಿ ದಿನ " ಎಂಬ ಕಾರ್ಯಕ್ರಮಗಳು ಪ್ರತೀ ಮಳೆಗಾಲದಲ್ಲಿ ನಡೆದಾಗ ತುಳುನಾಡಿನ ಎಲ್ಲಾ ಹಳೆಯ ಕಾಲದ ತಿಂಡಿಗಳನ್ನು ಒಟ್ಟಿಗೆ ಕಣ್ಣು ತುಂಬಿಸಿಕೊಳ್ಳುವ ಹಾಗೂ ಅದನ್ನು ಸವಿಯುವ ಭಾಗ್ಯ ಹೆಚ್ಚಿನವರಿಗೆ ಒಂದೇ ದಿನ ಸಿಕ್ಕಿ ಬಿಡುವುದು.
ದೇವಾರಾಧನೆ,ದೈವಾರಾಧನೆ, ನಾಗರಾಧನೆ,ಯಕ್ಷಗಾನ,ಕಂಬಳ ಗಳಿಗೆ ಮಾತ್ರ ಅವಿಭಜಿತ ದಕ್ಷಿಣ ಕನ್ನಡ ಸೀಮೀತವಾಗದೇ ಇಲ್ಲಿಯ ಸಾಂಪ್ರದಾಯಿಕ ಆಹಾರಕ್ಕೂ ಕೂಡ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ.ಇಲ್ಲಿಯ ಆಹಾರಕ್ಕಾಗಿ ಹುಡುಕಿಕೊಂಡು ಇಲ್ಲಿಗೇ ಬಂದು ಮನದಣಿಯೆ ಸವಿದು ಹೋಗುವವರು ಇದ್ದಾರೆ.ಹಾಗಾಗಿ ಹೋಟೆಲ್ ಉದ್ಯಮ ನಮ್ಮವರ ಕೈ ಹಿಡಿದಿದೆ.ಆದರೆ ಇಲ್ಲಿಯ ಹೋಟೆಲ್ ನಲ್ಲಿ ಬಂದು ತಿಂದು ಹೋಗುವಂತಹದ್ದು ಅಷ್ಟೇ ತುಳುನಾಡಿನ ಅಡಿಗೆಗಳಲ್ಲ.. ಇನ್ನೂ ಹಲವಾರು ಇದೆ.ಅದೆಲ್ಲವೂ ಇಲ್ಲಿಯ ಮನೆಗಳಲ್ಲಿ ಮಾತ್ರ ರೂಪ ಪಡೆದು ಬಾಯಿ ತಣಿಸುವಂತಹದ್ದು.
ನಮ್ಮಲ್ಲಿ ಮೂರು ರೀತಿಯ ಅಡುಗೆಗಳು ಎಂದಿಗೂ ಬಹಳ ಫೇಮಸ್.ಕೋಳಿಯ ಅಡುಗೆಗಳು,ಮತ್ಸ್ಯಾಹಾರ,ಹಾಗೂ ಸಸ್ಯಾಹಾರದ ಅಡುಗೆಗಳು.
ಚಿಕನ್ ಸುಕ್ಕ, ಪುಳಿಮುಂಚಿ, ಕೋರಿರೊಟ್ಟಿ,ಚಿಕನ್ ಘೀ ರೋಸ್ಟ್.. ಎಲ್ಲವೂ ಬಂದಿದ್ದು ಇಲ್ಲಿಂದಲೇ.ಅದರಲ್ಲೂ ಕಟ್ಟದ ಕೋಳಿಯ(ಅಂಕದ ಕೋಳಿ) ರುಚಿ ಸವಿದನೇ ಬಲ್ಲ.ಖಾರ ಮಾಡಿದಷ್ಟೂ ತಿನ್ನಲು ಇನ್ನೂ ರುಚಿ ಹೆಚ್ಚು.
ಇನ್ನು ಮೀನಿನ ಅಡುಗೆಯ ಬಗ್ಗೆ ನಾನು ವಿಸ್ತೃತವಾಗಿ ಹೇಳಬೇಕಾಯೇ ಇಲ್ಲ. ಮಂಗಳೂರು - ಉಡುಪಿ ಹೇಳಿ ಕೇಳಿ ಕಡಲಿನ ತಡಿಯ ಊರುಗಳು. ಫಿಶ್ ಗೆ ಫೇಮಸ್. ಇಲ್ಲಿಯ ಮುರುವಾಯಿ ಪುಂಡಿ,ಕಡ್ಲೆ ಬಲ್ಯಾರ್, ಎಟ್ಟಿ ಚಟ್ನಿ, ಏಡಿ ಕರಿ, ಅಂಜಲ್,ಮಾಂಜಿ, ಬಂಗುಡೆ ಫಿಶ್ ಖಾದ್ಯಗಳು ಎಂದಿಗೂ ಹೆಚ್ಚಿನವರ ಬಾಯಿ ನೀರೂರಿಸುತ್ತದೆ.
ಆದರೆ ಇವತ್ತು ಮೇಲಿನ ಎರಡರ ಬಗ್ಗೆ ಜಾಸ್ತಿ ಚರ್ಚೆ ಇಲ್ಲ. ಏನಿದ್ದರೂ ಶುದ್ಧ ಸಸ್ಯಾಹಾರದ ಬಗ್ಗೆಯೇ ಹೇಳುತ್ತೇನೆ.
ನಮ್ಮ ಕಡೆಯ ಸಸ್ಯಾಹಾರವೂ ಕೂಡ ಸಾಕಷ್ಟು ಫೇಮಸ್.ಉಡುಪಿಯ ಹೋಟೆಲ್ ಗಳು ವಿಶ್ವ ಪ್ರಸಿದ್ಧಿ ಪಡೆದಿದೆ. ಸಸ್ಯಾಹಾರದ ಅಡುಗೆಗೆ ಹೆಚ್ಚಿನ ವಿಶೇಷವಾದ ಒಲವು ನಮ್ಮಲ್ಲಿ ಎಲ್ಲಾ ಕಾಲದಲ್ಲೂ ಉಂಟು.ಇಲ್ಲಿಯ ಪ್ರಸಿದ್ದವಾದ ದೇವಳಗಳ ಊಟ ಆಹಾ.. ಅದು ದೇವರ ಪ್ರಸಾದದ ಜೊತೆಗೆ,ಮತ್ತಷ್ಟು ಬೇಕೆನಿಸುವ ಅಚ್ಚುಕಟ್ಟಾದ ಹಾಗೂ ಅಷ್ಟೇ ಶುಚಿ ರುಚಿಯಾದ ಭೋಜನವೂ ಹೌದು. ಹೇಗೆ ಮಾಡಿದರೂ ನಮ್ಮ ದೇವಸ್ಥಾನದಲ್ಲಿ ಮಾಡುವಂತೆ ಅಡುಗೆ ಮಾಡಲು ಮನೆಯಲ್ಲಿ ಕೂಡ ಬರುವುದಿಲ್ಲ.ಇಲ್ಲಿಯ ತರಕಾರಿಗಳಲ್ಲಿ ಕೊದ್ದೆಲ್(ಸಾಂಬಾರ್) ನಲ್ಲಿ ಬಳಕೆಯಾಗುವ ಉಡುಪಿಯ ಮಟ್ಟುಗುಳ್ಳದ್ದು ಒಂದು ಬೇರೆಯೇ ಗತ್ತು ಮತ್ತು ಕಥೆ. ಅದು ಪೇಟೆಂಟ್ ಅನ್ನು ಕೂಡ ಪಡೆದುಕೊಂಡು ಇಲ್ಲಿ ಅದಾಗಲೇ ಸಾಕಷ್ಟು ಹೆಸರುವಾಸಿ. ಬದನೆ ರೀತಿ ಇರುತ್ತದೆ. ಆದರೆ ಬದನೆ ಅಲ್ಲ.
ಕರಾವಳಿಯ ಸಸ್ಯಾಹಾರದಲ್ಲಿ ಹೆಚ್ಚಾಗಿ ಮತ್ತು ಪ್ರಮುಖವಾಗಿ ನಾವು ಮೂರು ರೀತಿಯ ಅಡುಗೆಗಳನ್ನು ಗಮನಿಸಬಹುದು.
ಒಂದು ಬ್ರಾಹ್ಮಣರ ಅಡುಗೆ, ಜೈನರ ತಿನಿಸುಗಳು ಹಾಗೂ GSB(ಗೌಡ ಸಾರಸ್ವತ ಬ್ರಾಹ್ಮಣರ)ಯವರ ಭೋಜನ.ಮೂವರ ಅಡುಗೆಗಳು ಒಂದಕ್ಕೊಂದು ವಿಭಿನ್ನ,ಹಾಗೂ ಎಲ್ಲವೂ ಅಷ್ಟೇ ಪ್ರಸಿದ್ಧಿಯೂ ಹೌದು. ಭೋಜನ ಪ್ರೀಯರಿಗೆ ಮೂವರ ಅಡುಗೆಗಳೂ ಕೂಡ ಅಷ್ಟೇ ಇಷ್ಟ ಆಗುವುದರಲ್ಲಿ ಸಂದೇಹವಿಲ್ಲ.
ಯಾವುದೇ ದೊಡ್ಡ ಸಮಾರಂಭವೇ ಆದರೂ ಬ್ರಾಹ್ಮಣರ ಅಡುಗೆಗೆ ನಮ್ಮಲ್ಲಿ ಹಚ್ಚಿನ ಪ್ರಾಶಸ್ತ್ಯ.ಸೊಗಸಾದ ರುಚಿಯಾದ ಅನ್ನಸಂತರ್ಪಣೆಗಳು ಅವರ ಅಡುಗೆಗಳಿಂದಲೇ ನೆರವೇರುವುದು.ಸಸ್ಯಹಾರದ ಕ್ಯಾಟರಿಂಗ್ ಸರ್ವಿಸ್ ನಲ್ಲೂ ಅವರದ್ದು ಎತ್ತಿದ ಕೈ.
ಜೈನರ ಅಡುಗೆಗಳು ಕೂಡ ನಮ್ಮಲ್ಲಿ ಸಾಕಷ್ಟು ಫೇಮಸ್. ಅವರ ಕಟ್ಮಂಡಿಗೆ, ಮುಂಚಿದ ಗಟ್ಟಿ,ಮೆಣಸ್ಕಾಯಿ ಹಾಗೂ ಇನ್ನು ಹಲವು ಖಾದ್ಯಗಳಿಗೆ ಅವರೇ ಸಾಟಿ.ನಮ್ಮಲ್ಲಿ ಸಭೆ ಸಮಾರಂಭಗಳಿಗೆ ಜೈನರ ಅಡುಗೆಗಳನ್ನು ಕೂಡ ಮಾಡಿಸುವುದು ಉಂಟು.ಅವರದ್ದು ಅದೆನೋ ಬೇರೆಯೇ ಹಿತವೆನಿಸುವ ರುಚಿ.
ಇನ್ನು ಮೂರನೆಯದಾಗಿ GSB ಯವರ ಅಡುಗೆ.GSB ಯವರ ಅಡುಗೆಯಲ್ಲಿ ನನಗೆ ವಿಶಿಷ್ಟ ಅನಿಸುವುದು,ಅವರದ್ದೇ ಹಳೆಯ ಅಡುಗೆಗಳ ಜೊತೆ ಜೊತೆಗೆ ಇನ್ನಿತರ ಅಡುಗೆಗಳಲ್ಲಿಯೂ ಅವರದ್ದೊಂದು ನಿರಂತರವಾದ ಪ್ರಯೋಗ.ಅವರು ಪ್ರತಿಯೊಂದರಲ್ಲೂ ಹೊಸತೊಂದು ಬಗೆಯನ್ನು ಸೃಷ್ಟಿಸುತ್ತಾ ಹಾಗೇ ರುಚಿ ಹೆಚ್ಚಿಸುತ್ತಾ ಹೋಗುತ್ತಾರೆ.
ಇವತ್ತು ನಾನು ಸಸ್ಯಾಹಾರದಲ್ಲಿ ಕೇವಲ GSB ಯವರ ಅಡುಗೆಯ ಬಗ್ಗೆ ಮಾತ್ರ ಮಾತಾಡುತ್ತೇನೆ.ಅದರಲ್ಲೂ ಅವರ ಅತೀ ಇಷ್ಟದ ಒಂದು ಆಹಾರದ ಬಗ್ಗೆಯೇ ಮಾತಾಡುತ್ತೇನೆ.ಯೆಸ್.. ಅದುವೇ ದಾಳಿ ತೋಯ್.
ದಾಳಿ ತೋಯ್ ಅಂದರೆ ಅದೇ ತೊವ್ವೆ. ಕೆಲವರು ತೊವ್ವೆ ಅಂತಾರೆ, ಇನ್ನು ಕೆಲವರು ದಾಲ್ ಅಂತಾರೆ, ಇನ್ನು ಕೆಲವರು ಎರಡನ್ನು ಸೇರಿಸಿ ದಾಲ್ ತೊವ್ವೆ ಅಂತಾರೆ.. ಆದರೆ GSB ಯವರು ಮಾತ್ರ ಬಹು ಪ್ರೀತಿಯಿಂದ ದಾಲ್ ತೋಯ್ ಎಂದೇ ಹೇಳುತ್ತಾರೆ.
ಅವರಿಗೆ ಅದು ಅಂದರೆ ಅದೇನು ಇಷ್ಟವೋ ನನಗೆ ಗೊತ್ತಿಲ್ಲ. ಎಷ್ಟರ ಮಟ್ಟಿಗೆ ಅಂದರೆ ದಾಲ್ ತೊವ್ವೆ ಎಂದರೆ GSB ಯವರು, GSB ಯವರು ಅಂದರೆನೇ ದಾಲ್ ತೊವ್ವೆ ಎನ್ನುವಷ್ಟರ ಮಟ್ಟಿಗೆ ದಾಲ್ ತೊವ್ವೆ ಅವರನ್ನು.. ಅವರು ದಾಲ್ ತೊವ್ವೆ ಹಾಗೇ ಆಕ್ರಮಿಸಿಕೊಂಡು ಬಿಟ್ಟಿದೆ. Particular ಆದ ಒಂದು ಆಹಾರಕ್ಕೆ ಇಷ್ಟೊಂದು ಪ್ರಾಮುಖ್ಯತೆ ಕೊಟ್ಟು ಅದನ್ನು ಪ್ರಸಿದ್ಧಿ ಮಾಡಿದ್ದು ಬಹುಶಃ ಅವರೇ ಇರಬೇಕು. ಹೌದು ಅವರಿಗೆ ಅದೊಂತರಹದ ಬಿಡದ ತೊವ್ವೆಯ ಮಾಯೆ,ಮತ್ತಷ್ಟು ಬೇಕೆನಿಸುವ ದಾಲಿನ ಮೊಹಬತ್ತು..
ಮನೆಯಲ್ಲಿ ಅಮ್ಮ ಕೂಡ ಸಾರು ಮಾಡುತ್ತಿದ್ದಳು.ಆದರೆ ನನಗದು ಕೇವಲ ತೊಗರಿ ಬೇಳೆ ಸಾರು ಮಾತ್ರ ಆಗಿತ್ತು.ನನಗೆ ಚಿಕ್ಕಂದಿನಿಂದಲೂ GSB ಗೆಳೆಯರು ಅನೇಕರು ಇದ್ದರು. ಪ್ರೈಮರಿಯಲ್ಲಿ ನಾಗಭೂಷಣ ಅಂತ ಒಬ್ಬ ಇದ್ದ. ಅವನ ಮನೆಯಲ್ಲಿಯೇ ನಾನು ಮೊದಲು ಈ ತೊವ್ವೆಯನ್ನು ಸವಿದದ್ದು.
ಆ ನಂತರ ಹೋಟೆಲ್ ಗೆ ಹೋದಾಗಲೆಲ್ಲ ಇಡ್ಲಿ ಜತೆಗೆ ಸಾಂಬಾರ್ ಚಟ್ನಿ ತಿಂದು ತಿಂದು ಬೇಜಾರ್ ಹಿಡಿಸಿದಾಗ... ನನಗೆ ತೊವ್ವೆಯೂ ಕೂಡ ಇಡ್ಲಿಯ ರುಚಿ ಹೆಚ್ಚಿಸಿತು.
ಮುಂದೆ ಪದವಿ ಓದಿದ್ದು ಕೂಡ GSB ಯವರ ಕಾಲೇಜಿನಲ್ಲಿಯೇ(ಕೆನರಾ),ಹಾಗಾಗಿ ಮತ್ತೆ ದಾಲ್ ತೊವ್ವೆ ಸವಿಯುವ ಭಾಗ್ಯ.ಅದರಲ್ಲೂ ಅಲ್ಲಿ ನನಗೆ ಶೆಣೈ ಮಾಮ್ ಅಂತ ಒಬ್ಬ ಒಳ್ಳೆಯ ಫ್ರೆಂಡ್ ಸಿಕ್ಕಿದ್ದ.ಅವನ ಹೆಸರು ಸೂರಜ್ ಶೆಣೈ ಅಂತ. ಆದರೆ GSB ಯವರಲ್ಲಿ ಮಾಮ್ ಅಂತ ಸೇರಿಸಿ ಕರೆದರೆನೇ ಅವರು ನಮಗೆ, ನಾವು ಅವರಿಗೆ ಹತ್ತಿರ ಆಗುವುದು.ಅವನು ಬುತ್ತಿ ತರುತ್ತಿದ್ದ.ಅವನಿಗೆ ಮಧ್ಯಾಹ್ನದ ಊಟಕ್ಕೆ ಏನೇ ಇತರ ಪದಾರ್ಥಗಳು ಇದ್ದರೂ ಚಿಕ್ಕದೊಂದು ಡಬ್ಬದಲ್ಲಿ ದಾಳಿ ತೊವ್ವೆ ಮಾತ್ರ ಹೆಚ್ಚಾಗಿ ಯಾವತ್ತೂ ಮಿಸ್ ಆಗುತ್ತಿರಲಿಲ್ಲ.ನನಗೂ ಅದರಲ್ಲಿ ಅರ್ಧ ಪಾಲು ಸಿಗುತ್ತಿತ್ತು. ಅವನ ಅಮ್ಮ ಬಿಂಬುಳಿ,ಬೆಳ್ಳುಳ್ಳಿ ಹಾಗೂ ಹಸಿಮೆಣಸಿನಕಾಯಿಯ ಖಾರವಾದ ಉಪ್ಪಿನಕಾಯಿಗಳನ್ನು ಮಾಡುತ್ತಿದ್ದರು.. ಆಹಾ.. ನೆನೆಯುವಾಗ ಈಗಲೂ ಬಾಯಿ ನೀರೂರುತ್ತದೆ.
ಅವನ ಜೊತೆಯೇ ಕಾರ್ ಸ್ಟ್ರೀಟ್ ನಲ್ಲಿ ಎಷ್ಟೋ ಸಲ ಅಡ್ಡಾಡಿದ್ದೆ. ಅಲ್ಲಿಯ ಹೋಟೆಲ್ ಗೆ ನುಗ್ಗಿದರೆ ತೊವ್ವೆಯ ಪರಿಮಳ ಮೂಗಿಗೆ ಗಮ್ಮನೆ ಬಡಿಯುತ್ತದೆ. ಅಲ್ಲಿಯೇ ಒಂದು GSB ಯವರ ಚಿಕ್ಕ ಕರಿದ ತಿಂಡಿಗಳ ಅಂಗಡಿ ಇತ್ತು. ಆಹಾ.. ಅಲ್ಲೊಂದು ಎಷ್ಟೊಂದು ಬಗೆಯ ಪೋಡಿಗಳು(ಬಜ್ಜಿ).ಬಹುಶಃ GSB ಯವರು ಮಾಡುವ ಬಗೆ ಬಗೆಯ ಪೋಡಿಗಳನ್ನು ನಮ್ಮಲ್ಲಿ ಯಾರೂ ಕೂಡ ಮಾಡಿರಲಿಕ್ಕಿಲ್ಲ.ಅವರು ಎಲ್ಲದರಿಂದಲೂ ಪೋಡಿ ಮಾಡ ಬಲ್ಲ ಜಾಣರು.ಅಲ್ಲಿ ಅವರು ಮಾಡುತ್ತಿದ್ದ ಕಾಡ್ ಪೀರೆ(ಕಾಡುಹಾಗಲ,ಮಡಹಾಗಲ) ಹಾಗೂ ಪತ್ರೋಡೆಯ ಪೋಡಿ ಬಲು ರುಚಿ..
GSB ಯವರ ಆಹಾರ ಪ್ರೀತಿ ಎಲ್ಲಿಯವರೆಗೆ ಅಂದರೆ ಕಾಡುಪೀರೆ,ಕಣಿಲೆ,ಮರಕೆಸು,ಕಲ್ಲಲಾಂಬು(ಕಲ್ಲಣಬೆ) ಇವಕ್ಕೆಲ್ಲ ಎಷ್ಟೇ ಬೆಲೆ ಇದ್ದರೂ ಅವರು ಮಾತ್ರ ಅದರ ಖರೀದಿಗೆ ಹಿಂದೆ ಮುಂದೆ ನೋಡುವುದೇ ಇಲ್ಲ. ಮಾರುಕಟ್ಟೆಯಲ್ಲಿ ಅವರಿಗಾಗಿಯೇ ಮಾರುವವರು ವಿಶೇಷವಾಗಿ ಎತ್ತಿಡುವುದನ್ನು ಕೂಡ ನೋಡಿದ್ದೇನೆ.
ತೊಗರಿ ಬೇಳೆ ಹಾಕಿ ಮಾಡುವ ದಾಲ್ ಇಂದು ಉತ್ತರ ಭಾರತ, ದಕ್ಷಿಣ ಭಾರತದಿಂದ ಹಿಡಿದು ಭಾರತದ ಎಲ್ಲೆಡೆ ಸಿಗುತ್ತದೆ. ಆದರೆ ಅದರ ಮೂಲ ಎಲ್ಲಿಯದ್ದು ಎಂದು ಕೇಳಿದರೆ ನನಗೆ ಗೊತ್ತಿಲ್ಲ.ಆದರೆ ದಾಲ್ ತೋಯ್ ಅಂದ ಕೂಡಲೇ ಅದರಲ್ಲಿ ಸಂದೇಹವೇ ಇಲ್ಲ,ಅದು ನಮ್ಮ GSB ಬಂಧುಗಳದ್ದೇ ಅನ್ನಲು ನಾನು ತಡವರಿಸುವುದಿಲ್ಲ.
ಚೆನ್ನಾಗಿ ತೊಳೆದ ತೊಗರಿ ಬೇಳೆಯನ್ನು ಅರಶಿನ ಉಪ್ಪು ಹಾಕಿ ಕುಕ್ಕರ್ ನಲ್ಲಿ ಚೆನ್ನಾಗಿ ಸ್ಮ್ಯಾಶ್ ಆಗುವಂತೆ ಬೇಯಿಸಿ,ಆ ನಂತರ ಅದಕ್ಕೆ ಪುನಃ ಬೇಕಾದಷ್ಟು ನೀರು ಸೇರಿಸಿ ಬೇಯಿಸಿ..ಕೊನೆಗೆ ಅದಕ್ಕೊಂದು ಹಿಂಗು, ಸಾಸಿವೆ,ಕರಿಬೇವು,ತುಂಡು ಮಾಡಿದ ಒಣಮೆಣಸಿನ ಒಂದೊಳ್ಳೆಯ ಒಗ್ಗರಣೆಯ ಅಲಂಕಾರ ಕೊಟ್ಟರೆ ದಾಳಿ ತೋಯ್ ಸುಲಭಕ್ಕೆ ಸಿಧ್ಧವಾಗುವ ಸರಳ ಸುಂದರ ಅರಿಶಿನ ಬಣ್ಣದ ಸಾರು.ಆದರೆ ಅದರ ಮೇಲಿನ ಅವರದ್ದೊಂದು ಪ್ರೀತಿ,ಆ ವ್ಯಾಮೋಹ ನಿಜಕ್ಕೂ ಬೆರಗು ಮೂಡಿಸುವಂತಹದ್ದು.
ಅವರಿಗೆ ಪ್ರತಿಯೊಂದಕ್ಕೂ ತೊವ್ವೆ ಬೇಕು. ನೀರು ದೋಸೆ ಇರಲಿ, ಇಡ್ಲಿ,ಮೂಡೆ ಯಿಂದ ಹಿಡಿದು ಬರೀ ಅನ್ನಕ್ಕೂ ಅವರಿಗೆ ತೊವ್ವೆ Mandatory ಆಗೀ ಬೇಕೆ ಬೇಕು. ಕೆಲವೊಮ್ಮೆ ಲೋಟದಲ್ಲಿ ಹಾಕಿ ಹಾಗೇ ಕುಡಿಯುವುದು ಕೂಡ ಅವರಿಗೆ ಪರಮಾನಂದ. ಹೇಗೆ ಉಪ್ಪಿನಕಾಯಿ ಇಲ್ಲದ ಊಟ ಇಲ್ಲವೋ ಹಾಗೇ ತೊವ್ವೆ ಇಲ್ಲದ GSB ಯವರ ಅಡುಗೆ ಇಲ್ಲ..
ದಕ್ಷಿಣ ಕನ್ನಡ, ಉತ್ತರ ಕನ್ನಡ, ಗೋವಾ ಹೀಗೆ ಎಲ್ಲಿಯೇ ಇರಲಿ...ದಾಳಿ ತೊವ್ವೆಯನ್ನು ಪ್ರಸಿದ್ಧಿ ಮಾಡಿದ್ದು ಅವರೇ. ಅವರಲ್ಲಿ ಯಾರಿಗಾದರೂ ತೊವ್ವೆ ಬಗ್ಗೆ ಗೊತ್ತಿಲ್ಲದ್ದಿದ್ದರೆ ಬಹುಶಃ ಅವರು GSB ಯವರು ಅಲ್ಲವೆನೋ ಎಂದೇ ಅನ್ನಿಸಿಬಿಡುತ್ತದೆ.
ಎಂತಹ ಸಾಂಬಾರ್, ಪಲ್ಯ, ಗಸಿ ಇದ್ದರೂ,ಅವರು ಇನ್ನೊಂಚೂರು ದಾಳಿ ತೋಯ್ ಹಾಕಿಸಿಕೊಳ್ಳಲು ಎಂದಿಗೂ ಮರೆಯುವುದಿಲ್ಲ.ಅವರು ಹಾಗೇ ಮಾಡದಿದ್ದರೆ ಬಹುಶಃ ದಾಳಿ ತೋಯ್ ಗೂ ಕೂಡ ಸಿಕ್ಕಾಪಟ್ಟೆ ಬೇಜಾರು.ಏಕೆಂದರೆ ದಾಳಿ ತೋಯ್ ಗೂ ಅವರೆಂದರೆನೇ ಅತೀ ಇಷ್ಟ.
ದಾಳಿ ಎಂದು ಹೆಸರಲ್ಲಿ ಇದ್ದರೂ ಸೈನ್ಯ ಕಟ್ಟಿಕೊಂಡು ಯಾರ ಮೇಲೆಯೂ ದಾಳಿ ಮಾಡದೆ... ಪಕ್ಕದಲ್ಲಿದ್ದುಕೊಂಡು ಊಟದ,ತಿಂಡಿಯ ರುಚಿಯನ್ನಷ್ಟೇ ಹೆಚ್ಚಿಸಿದ ದಾಳಿ ತೋಯ್, ಅದನ್ನು ಇಷ್ಟ ಪಡುವವರಿಗಂತು ಯಾವಾಗಲೂ ಅದೊಂದು ರುಚಿ ರುಚಿಯಾದ ಕಥೆಯೇ ಆಗಿದೆ..
.....................................................................................
#ಏನೋ_ಒಂದು..
ab pacchu
moodubidire
Comments
Post a Comment