ಮೊದ ಮೊದಲ ಪ್ರೀತಿ
ನನಗೆ ಒಂದು ಲವ್ ಇತ್ತು ಆಯ್ತಾ.
ನಾನು ಈ ವಿಷಯ ಇಲ್ಲಿಯವರೆಗೆ ಯಾರ ಹತ್ರ ಸ ಹೇಳ್ಲಿಲ್ಲ.
ಯಾಕೆಂದರೆ ನನಗೆ ಮತ್ತು ಅವಳಿಗೆ ಬಿಟ್ರೆ ಬೇರೆ ಯಾರಿಗೂ ಈ ವಿಷಯ ಗೊತ್ತಿಲ್ಲ.
ನನ್ನ ಅಪ್ಪನಿಗೆ ಸ ಗೊತ್ತಿರಲಿಲ್ಲ.
ಬಹುಶಃ ಅವಳ ಅಪ್ಪನಿಗೆ ಗೊತ್ತುಂಟಾಂತ...ಆದರೆ Confirm ಆಗಿ ನನಗೆ ಸ ಅದರ ಬಗ್ಗೆ ಗೊತ್ತಿಲ್ಲ..
May be ಇರ್ಲಿಕ್ಕಿಲ್ಲ ಅಂತ ಅನ್ನಿಸುತ್ತೆ.. ಅವಳು ಅದನ್ನೆಲ್ಲ ಹೇಳಿರ್ಲಿಕ್ಕಿಲ್ಲ..
ಏಕೆಂದರೆ ಅವಳು ಆ ರೀತಿ ಎಲ್ಲಾ ಹೇಳಿ ನನ್ನ ಮಾನ ಮರ್ಯಾದೆ ಹರಾಜು ಹಾಕುವ ಹುಡುಗಿಯೇ ಅಲ್ಲ.
ಇದು ಘಟಿಸಿದ್ದು ಅಂದಕಾಲತ್ತಿಲ್ ಎಂಬ ನನ್ನ ಬಾಲ್ಯದಲ್ಲಿ.
ನಾನಾಗ ಹೈಸ್ಕೂಲ್ ನಲ್ಲಿ ಇದ್ದೆ. 10th Standard.
ಅವಳು ಕೂಡ ನನ್ನ ಕ್ಲಾಸಿನಲ್ಲಿಯೇ ಇದ್ದಳು.
ಶುರುವಲ್ಲಿ ನನಗೆ ಪ್ರೀತಿ ಪ್ರೇಮದಲ್ಲಿ ಅಂತಹ Interest ಏನೂ ಇರ್ಲಿಲ್ಲ ಆಯ್ತಾ.
ಮೂವಿಯಲ್ಲಿ ಕೂಡ ನಾನು ಕಾಮಿಡಿ ಮೂವಿಯೇ ಜಾಸ್ತಿ ನೋಡ್ತಾ ಇದ್ದದ್ದು.
ಹಾಗಾಗಿ ನಾನು ಅನಂತ್ ನಾಗ್ ಮೂವಿಗಳನ್ನು ತಪ್ಪಿಸಿಕೊಂಡವನೇ ಅಲ್ಲ. ನಾನು ಹಿಂದಿನಿಂದಲೂ ಅವರ ಫ್ಯಾನ್,AC ಎಲ್ಲವೂ. ಈಗಲೂ ಸಹ.
ಇನ್ನು ಕೆಲವೊಮ್ಮೆ ಊರಿನಲ್ಲಿ ನಾಟಕದವರು ಬಂದರೆ.. ಎಲ್ಲರಿಗಿಂತ ಮೊದಲು ನಾನೇ ಹೋಗಿ ಕುಳಿತು ಕೊಳ್ಳುತ್ತಿದ್ದೆ. ನನಗೆ ಅರವಿಂದ್ ಬೋಳಾರ್ ಕಾಮಿಡಿ ಅಂದ್ರೆ ತುಂಬಾ ಇಷ್ಟ .ಈಗಲೂ ಕೂಡ.
ಒಂದು ದಿನ ನಾನು ಅಪ್ಪಿ ತಪ್ಪಿ ಮೊದಲ ಬಾರಿಗೆ ರವಿಚಂದ್ರನ್ ಮೂವಿ ನೋಡಿದೆ.
ರವಿಚಂದ್ರನ್ ಅವರ ಮೂವಿಯಲ್ಲಿ ಬರೀ ಲವ್ವೇ ಆಯ್ತಾ..
ಆಗಲೇ ಅನಿಸಿದ್ದು ನಾನು ಸ ಯಾಕೆ ಒಂದು ಲವ್ ಮಾಡ್ಬಾರ್ದು ಅಂತ.
ಆದರೆ ಯಾರನ್ನು ಲವ್ ಮಾಡುವುದು..?
ನಾನಾಗ ಪ್ರೌಢಶಾಲೆಯ ಪೆಟ್ಟಿಸ್ಟ್(ಸಾಹಸವಂತ.. ಓ ಗುಣವಂತ) ಬಾಲಕ.
ಸಿಕ್ಕಿದವರೊಂದಿಗೆ ಚೊರೆಪಟ್(ಕಿರಿ ಕಿರಿ) ಮಾಡ್ತಾ ಇದ್ದೆ. ಹಾಗಾಗಿ ನಾನಿದ್ದಲ್ಲಿ ನಿರಂತವಾಗಿ ಒಂದು ಪೆಟ್ಟ್ ಲಡಾಯಿ( ಯುಧ್ಧ ಇಲ್ಲವೇ ಮಹಾಸಂಗ್ರಾಮ)ಸಾಂಗವಾಗಿ ನಡೆಯುತ್ತಿತ್ತು.
ಆದರೆ ಆ ಒಂದು ದಿನ ನನಗೆ ರವಿಮಾಮನಂತೆ ಲವರ್ ಬಾಯ್ ಆಗುವ ಹುಚ್ಚು ಹಿಡಿಯಿತು.. ಅದೇ 10th standard ಅಲ್ಲಿ ಇರುವಾಗ.
ಯಾರನ್ನು ಲವ್ ಮಾಡುವುದು..
ಮನೆಯಲ್ಲಿಯೇ ಕುಳಿತು ಯೋಚಿಸಿದೆ.
ನಮ್ಮ ಕ್ಲಾಸಿನ ಚಂದ ಚಂದದ ಹುಡುಗಿಯರು ಎಲ್ಲಾ ಕಣ್ಣ ಮುಂದೆ ರಪ್ಪ ಅಂತ ಪಾಸ್ ಆದರು.
ರೇಶ್ಮಾ....ಓಕೆ ಯಾ..? ಬೇಡ ಬೇಡ... ಅವಳ ಅಪ್ಫ ಮಿಲಿಟರಿ ರಿಟೈರ್ಡ್. ಗನ್ ಸ ಉಂಟು ಅವರತ್ರ. ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ.
ಸ್ಮಿತಾ..ಆಗ್ಬಹುದಾ? ಬೇಡ.. ಅವಳ ಅಣ್ಣ ದೊಡ್ಡ ಕುಡಿ(ಅಲ್ಕೋಹಾಲ್ ಅನ್ನು ಪಾನಕದಂತೆ ಸದಾ ಕುಡಿಯುವವನು), ಊರಿನ ಪ್ರಖ್ಯಾತ ರೌಡಿ ಬೇರೆ.ಅವನಿಗೆ ವಿಷಯ ಗೊತ್ತಾದರೆ ಖಂಡಿತ ನನ್ನ ಚರ್ಮ ಜಾರಿಸ್ಲಿಕ್ಕೆ ಉಂಟು ಆವ.
ಮುಬೀನಾ ಹೇಗೆ...? ಅವಳು ಸ ಬೇಡ, ಅವಳ ದೊಡ್ಡಪ್ಪನದ್ದು ಒಂದು ದೊಡ್ಡ ಮಟನ್ ಶಾಪ್ ಇದೆ. ಅವರು ಡೈಲಿ ಕುರಿ ಕಡಿಯುವ ಕತ್ತಿಯನ್ನು ಸಾಣೆ ಹಿಡಿಯುವುದನ್ನು ನೋಡುವಾಗಲೇ ಭಯ ಆಗ್ತ ಇತ್ತು ನನಗೆ..!
ಜೆನಿಫರ್..ಹೇಗೆ..? ನನಗೆ ಮ್ಯಾಚ್ ಆಗ್ಬಹುದಾ? ಇಲ್ಲ ಅವಳು ಸ ಬೇಡ.. ಅವಳ ಅಮ್ಮ ಸ್ವಲ್ಪ Rash, ಮನೆಯ ಸುತ್ತ ಮುತ್ತಲಿನ ಹಲವಾರು ಪೆಟ್ ಲಡಾಯಿ ಗಳಲ್ಲಿ ಅವರು ಸಹ ನಿರಂತರವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸಿ ಹೆಂಗಸರ ಮಾತ್ರ ಅಲ್ಲ.. ಗಂಡಸರ ಹಲ್ಲುಗಳನ್ನು ಕೂಡ ಅವರು ಸತತವಾಗಿ ಉದುರಿಸಿದ್ದಾರೆ ಎಂಬ ಗಂಭಿರ ಮಾಹಿತಿ ತಿಳಿದು ಬಂದಿತ್ತು..
ಹಾಗಾದರೆ ಯಾರನ್ನು ನಾನು ಲವ್ ಮಾಡುವುದು ಮರ್ರೆ....
ಆಗಲೇ ಕಣ್ಣ ಮುಂದೆ ಬಂದದ್ದು ಅವಳ ಚಿತ್ರ..
ಅನುರಾಧ?
ಎಸ್.. ಅವಳೇ.
ನನಗೆ ಕೊನೆಯಲ್ಲಿ ನೆನಪಿಗೆ ಬಂದರೂ...ಸದಾ ನನ್ನ ಜೊತೆಯಲ್ಲಿಯೇ ಇರುತ್ತಿದ್ದ ನಮ್ಮ ಕೆಳಗಿನ ಮನೆಯ ಅನುರಾಧ.
ಲವ್ ಸೆಟ್ ಆಗ್ಬೇಕಾದರೆ ಮೊದಲು ಪ್ರಪೋಸ್ ಮಾಡ್ಬೇಕು ಅಲಾ..
ಆದರೆ ಹೇಗೆ ಅಂತ ಗೊತ್ತಾಗ್ಲಿಲ್ಲ...
ಪ್ರೆಂಡ್ಸ್ ಹತ್ತಿರ ಕೇಳಿದೆ...
ಹೇಯ್..ಈ ಪ್ರಪೋಸ್ ಎಲ್ಲಾ ಮಾಡುವುದು ಹೇಗೆಯಾ.. ಅಂತ.
ಹೇಯ್ ಹೋಗು ಮರ್ರೆ.. ಪ್ರಪೋಸ್ ಅಂತೆ.. ಪ್ರಪೋಸ್, ಪರೀಕ್ಷೆ ಎಲ್ಲಾ ಹತ್ತಿರ ಬರ್ತಾ ಉಂಟು.. ಇವನೊಬ್ಬನಿಗೆ ಪ್ರಪೋಸ್ ಚಿಂತೆ,ಬಂದ ಕ್ಲಾಸಿನ ರವಿಮಾಮ.. ಅಂತ ಎಲ್ಲರೂ ಬಹಳ ಚೆನ್ನಾಗಿ ಮುಖಕ್ಕೆ ಉಗಿದು ಉಪ್ಪಿನಕಾಯಿ ಹಾಕಿದರು.
ನಿಜವಾಗಿಯೂ ನಿರೀಕ್ಷಿತ ಮಟ್ಟದ ಪ್ರೋತ್ಸಾಹ ಆ ಹೈಸ್ಕೂಲ್ ಕಾಲದ ಹುಡುಗರಿಂದ ಸಿಗಲಿಲ್ಲ.
ಕಾಲೇಜಿನಲ್ಲಿ ಆದರೆ ಒಂದು ಲವ್ ಸೆಟ್ ಮಾಡ್ಲಿಕ್ಕೆ ಎಷ್ಟು ಸಪೊರ್ಟ್ ಕೊಡ್ತಾರೆ ನಮ್ಮ ಹುಡುಗರು..ಅಲ್ಲಿ ಫ್ರೆಂಡ್ ನ ಲವ್ ಸೆಟ್ ಆಗ್ಲಿಕ್ಕೆ ತಮ್ಮ ಪ್ರಾಣವನ್ನು ಬೇಕಾದರೂ ಕೊಡುವವರು ಸಿಕ್ತಾರೆ.. "ಆಲ್.. confirm ನಿಕ್ಕೆಂಬೇ.." (ಅವಳು confirm ನಿನಗೇ Bro) ಎನ್ನುವಂತಹ ಹಲವು ಆಪ್ತಮಿತ್ರ, ಆಪ್ತರಕ್ಷಕ ಫ್ರೆಂಡ್ಸ್.. ಎಲ್ಲರಿಗೂ ಕಾಲೇಜ್ ಲೈಪ್ ನಲ್ಲಿ ಇದ್ದೇ ಇರ್ತಾರೆ.
ಆದರೆ ನನ್ನದು ಹೈಸ್ಕೂಲ್
ಆದರೂ ಸಹ ನಾನು ಧೃತಿಗೆಡಲಿಲ್ಲ.
ಮತ್ತೆ ರವಿಮಾಮ ನ ಫಿಲಂಗಳನ್ನು ಡೀಪ್ ಆಗಿ ನೋಡಿ ಎಲ್ಲವನ್ನೂ ಸ್ಟಡಿ ಮಾಡಿದೆ.
ಈಗ ಎಲ್ಲಕ್ಕಿಂತ ಮೊದಲು ಲವ್ ಸೆಟ್ ಆಗ್ಬೇಕಲ್ಲ.. ಅದೇ ಚಿಂತೆ ಆಯಿತು.
ಅನುರಾಧ ನನಗೆ ಬಹಳ ಗುರ್ತದವಳೇ.ಮನೆಯ ಕೆಳಗಿನ ಬೈಲು ಮನೆಯ ಕಾಂತಪ್ಪಣ್ಣನ ಮಗಳು. ಅಪ್ಪ ಮತ್ತು ಕಾಂತಪ್ಪಣ್ಣ ಕೂಡ ಒಳ್ಳೆಯ ಗೆಳೆಯರು.
ಆವಾಗ ನಮ್ಮ ದರ್ಶನ್ ದೊಡ್ಡಪ್ಪನವರ ಮನೆ,ನಮ್ಮ ಮನೆ ಪಕ್ಕ ಇರ್ಲಿಲ್ಲ.ಹಾಗಾಗಿ ರಕ್ಷಿತಾ ದೊಡ್ಡಮ್ಮ,ಮುರ್ಲಿ ಅಣ್ಣ (ಮುರುಳಿ),ತಂಗಿ ಇಂಪು(ಇಂಪನ)ಎಲ್ಲಾ ಅಲ್ಲಿಗೆ ಬಂದದ್ದು ಆಮೇಲೆ,ಹೌದು PUC ನಂತರವೇ.
ನಾನು ಮತ್ತು ಅನುರಾಧ ಶಾಲೆಗೆ ಹೋಗುವಾಗ, ಶಾಲೆಯಿಂದ ಬರುವಾಗ ಸದಾ ಜೊತೆಯಾಗಿಯೇ ಇದ್ದವರು.
ಹೌದು ಪ್ರೈಮರಿಯಿಂದಲೇ ನಾನು ಮತ್ತು ಅನುರಾಧ ಶಾಲೆಗೆ ಒಟ್ಟಿಗೆ ಕೈ ಕೈ ಹಿಡಿದು ಕೊಂಡೇ ಹೋದವರು.
ಪ್ರೈಮರಿಗೆ ನನಗೆ ನೀಲಿ ಚಡ್ಡಿ ಮತ್ತು ವೈಟ್ ಶರ್ಟ್ ಸಮವಸ್ತ್ರ ವಾದರೆ... ಅವಳಗೆ ನೀಲಿ ಪ್ರಾಕು ಮತ್ತು ವೈಟ್ ಶರ್ಟ್.
ಅವರ ಮನೆಗೆ ಹೋಗ್ಲಿಕ್ಕೆ ನಮ್ಮ ಮನೆಯಿಂದ ಸ್ವಲ ಕೆಳಗೆ ನಡೆಯಬೇಕು,ಯಾಕೆಂದರೆ ಅವರದ್ದು ಬೈಲು ಗದ್ದೆ ಅಲ್ವಾ ಹಾಗಾಗಿ. ಅವರ ಮನೆಯನ್ನು ಊರಲ್ಲಿ ಎಲ್ಲರೂ ಬೈಲು ಮನೆ ಅಂತಲೇ ಹೇಳುತ್ತಿದ್ದದ್ದು. ಅವರ ಕೆಳಗಿನ ಆ ಬೈಲು ಮನೆಗೆ ಹೋಗಿ,ಅಲ್ಲಿಂದ ಅವರ ಮನೆಯ ಹಿಂದಿನ ಅಡಿಕೆ ತೋಟ,ಬಾಳೆ ತೋಟ,ಗದ್ದೆ,ತೋಡು, ಹೊಳೆ ಹಾದು... ನಂತರ ಗುಡ್ಡೆ ಹತ್ತಿ ಇಳಿದರೆ ನಮ್ಮ ಪ್ರೈಮರಿ ಸ್ಕೂಲ್..ಅಲ್ಲಿಂದ ಮತ್ತಷ್ಟು ದೂರ ನಡೆದರೆ ಹೈಸ್ಕೂಲ್. ಆವಾಗ ಎಲ್ಲ ನಮ್ಮ ಬಳಿ ಸೈಕಲ್ ಇರ್ತಾ ಇರ್ಲಿಲ್ಲ. ನಡೆದೇ ಹೋಗುತ್ತಿದ್ದೆವು.
ಈಗಲೂ ಪುಲ್ಕೇಶಿ ಸ್ವಲ್ಪ ಭಾಗ ಹಳ್ಳಿಯೇ ಆದರೂ ತಕ್ಕ ಮಟ್ಟಿಗೆ ಅಭಿವೃದ್ಧಿ ಹೊಂದಿದೆ. ಪುಲಿಕೇಶಿ ವಠಾರ ಎಂದೆಲ್ಲ ಆಗಿದೆ.ಆದರೆ ಆಗ ಮಾತ್ರ ಅದೊಂದು ಕುಗ್ರಾಮ ವೇ ಆಗಿತ್ತು. ನಮಗೆ ಮಾತ್ರ ಈಗಿನಂತೆ ಅದು ಯಾವತ್ತೂ ಪುಲಿಕೇಶಿ,ಪುಲ್ಕೇಶಿ ಎಲ್ಲಾ ಆಗಿರಲಿಲ್ಲ..ಜನರ ಬಾಯಿಯಲ್ಲಿ ಅದು ಎಂದಿಗೂ ಪುಲ್ಕಿಯೇ ಆಗಿತ್ತು.ನಾವು ಕೂಡ ಪುಲ್ಕಿ ಎಂದೇ ಹೇಳುತ್ತಿದ್ದದ್ದು
ನಾನು ಮತ್ತು ಅನುರಾಧಳ ಶಾಲೆಗೆ ಹೋಗುವ ಆ ಹಳ್ಳಿ ದಾರಿ ನಿಜ ಅರ್ಥದಲ್ಲಿ ಸ್ವರ್ಗವೇ ಆಗಿತ್ತು.
ಆ ಹಸಿರು ಗದ್ದೆ,ಸದಾ ತಂಪಾಗಿರುವ ಬೈಲು ಕಂಡ,ಆಕಾಶ ಮರೆ ಮಾಚುವ ಬಾಳೆ ತೋಟ,ಗದ್ದೆ ನಡುವಲ್ಲಿ ಸಾಗುವ ಪುಟ್ಟ ಪುಣಿ(ದಾರಿ),ಹತ್ತಿ ಏರಿ ಇಳಿಯಬೇಕಾದ ಇಳಿಜಾರು ಗುಡ್ಡ.. ಕಾಲು ಒದ್ದೆ ಮಾಡುವ ತೋಡುಗಳು, ಜುಳು ಜುಳು ನೀರ ಝರಿಗಳು, ಹೊಟ್ಟೆ ತುಂಬಿಸುತ್ತಿದ್ದ ಕುಂಟಾಲ್ ಹಣ್ಣು, ಕೇಪುಳದ ಹಣ್ಣು, ನೇರಳೆ ಹಣ್ಣು,ರೆಂಜೆ ಹಣ್ಣು,ಪುನರ್ ಪುಳಿ ಹಣ್ಣು,ನೆಕ್ಕರೆ ಕುಕ್ಕು(ಮಾವು),ಪೆರಂಗಾಯಿ ಹಣ್ಣು,.. ಅನುರಾಧಳಿಗೆ ಇಷ್ಟ ಎಂದು ಕೊಯ್ದು ಕೊಡುತ್ತಿದ್ದ ಕಾಡು ಮಲ್ಲಿಗೆ ಹೂವು, ಹೆಕ್ಕಿ ಕೊಡುತ್ತಿದ್ದ ರೆಂಜೆ ಹೂವು..ಕಿತ್ತು ಕೊಡುತ್ತಿದ್ದ ಅದೆಷ್ಟೋ ಹೆಸರಿಲ್ಲದ ಕಾಡು ಹೂವುಗಳು..ಹೀಗೆ ದಿನಾಲೂ ಬೆಳಿಗ್ಗೆ ಮತ್ತು ಸಂಜೆ ಅದೊಂದು ಸುಖವಾದ ಹಿತವಾದ ಪಯಣ.
ಆ ದಾರಿ ನನ್ನಲ್ಲಿ ಈಗಲೂ ತಾಜಾವಾಗಿಯೇ ಇದೆ.
ಗುಡ್ಡದ ಮೇಲೆ ಗಾಳಿಯಲ್ಲಿ ಹಾರಿ ಹೋಗುವ ಅಜ್ಜನ ಗಡ್ಡ ಹಿಡಿಯಲು ಇಬ್ಬರೂ ಓಡುತ್ತಾ ಹೋಗುತ್ತಿದ್ದೆವು. ಮೇಲೆ ಹಾರಿ ಅದನ್ನು ಕ್ಯಾಚ್ ಹಿಡಿದರೆ ಆಕಾಶಕ್ಕೆ ಕೈ ಹಾಕಿ ನಕ್ಷತ್ರ ಬಗೆದಂತಹ ಅನುಭವ.
ಜೋರು ಮಳೆಗೆ ಕೊಡೆ ಇಲ್ಲದಾಗ ದೊಡ್ಡ ಬಾಳೆ ಎಲೆಯನ್ನು ನಮ್ಮಿಬ್ಬರ ತಲೆಯ ಮೇಲೆ ಅಡ್ಡ ಹಿಡಿದು ಹೋಗುತ್ತಿದ್ದುದರ ಹಿಂದೆ ಇದ್ದ ನಮ್ಮಿಬ್ಬರ ಸ್ಪಷ್ಟ ಉದ್ದೇಶ ಒಂದೇ.. ಅದೇ ಮತ್ತಷ್ಟು ನೆನೆಯಬೇಕು ಎಂದು.
ಕೇಪುಳ ಹೂವಿನ ದಂಟಿಗೆ ನಾಚಿಕೆ ಮುಳ್ಳಿನ ಅಂಟನ್ನು ಸವರಿ ಊದಿದರೆ.. ಇಲ್ಲವೇ ಅದೊಂದು ಜಾತಿಯ ಅಂಟಿನ ಮರದ ಸೊನೆಯನ್ನು ಸವರಿ ಊದಿದರೆ.. ಗಾಳಿ ತುಂಬಾ ಅದೆಷ್ಟು ಪಾರದರ್ಶಕ ಗಾಳಿ ಗುಳ್ಳೆಗಳು.
ದಾರಿ ಮಧ್ಯೆ ಎಷ್ಟೋ ಸಲ ನಮ್ಮ ಟಿಫಿನ್ ಡಬ್ಬಗಳು Exchange ಆಗುತ್ತಿದ್ದವು.. ನಮ್ಮ ಮನೆಯ ಸಜ್ಜಿಗೆ(ಉಪ್ಪಿಟ್ಟು) ಅವಳಿಗೆ ಕೊಡುತ್ತಿದ್ದೆ. ಅವಳ ಮನೆಯ ಗೆಂಡದ ಅಡ್ಡೆ, ಪೆಲಕಾಯಿ ಗಟ್ಟಿ, ಪತ್ರೋಡೆ ಎಲ್ಲ ನನಗೆ ಕೊಡುತ್ತಿದ್ದಳು.
ಆವಾಗ ಅದೊಂದು ಒಂದು ರೂಪಾಯಿಗೆ ನಾಲ್ಕು ಮಿಠಾಯಿ ಸಿಗ್ತಿತ್ತು. ಆರೆಂಜ್ ಬಣ್ಣದ್ದು. ಅದಕ್ಕೆ ಹೆಸರು ಎಂತದೋ, ನಾವು ಮಾತ್ರ ಅದರ ಆಕಾರ ನೋಡಿ ಅದಕ್ಕೆ ಚಿತ್ತುಪುಲಿ (ಕಿತ್ತಳೆ ಹಣ್ಣು) ಮಿಠಾಯಿ ಎಂದೇ ಹೇಳುತ್ತಿದ್ದೆವು. ಅದು ನೋಡ್ಲಿಕ್ಕೆ ಕಿತ್ತಳೆಯ ಬಿಡಿಸಿದ ಎಸಳುಗಳಂತೆಯೇ ಕಾಣುತ್ತಿತ್ತು.ಇನ್ನೊಂದು ಜೇನು ಗೂಡು ಅಂತ ಬರ್ತಾ ಇತ್ತು. ನಮಗೆ ಇಬ್ಬರಿಗೂ ಅದು ಎಂದರೆ ಪಂಚ ಪ್ರಾಣ . ಶಾಲೆಯ ಪಕ್ಕದ ಅಂಗಡಿಯಲ್ಲಿ ಕೊಂಡು ಸಂಜೆಯ ಶಾಲೆಯಿಂದ ಮರಳಿ ಬರುವಾಗ ತಿನ್ತಾ ಬರ್ತ ಇದ್ದೆವು.. ಯೆಸ್ ಅದೇ ನಮ್ಮ ಸ್ವರ್ಗದ ಹಾದಿಯಲ್ಲಿ.
ಒಮ್ಮೆ ಅಂತು ಪ್ರೈಮರಿ ಶಾಲೆಯಲ್ಲಿ ಪಾಸಾದ ಖುಷಿಗೆ ಇಬ್ಬರೂ ಒಟ್ಟಿಗೆಯೇ ಆ ಚಿತ್ತುಪುಲಿ ಮಿಠಾಯಿಯನ್ನು ಹಂಚಿದ್ದೆವು.ಅದಕ್ಕಾಗಿ ಒಂದು ಡಬ್ಬ ಮಿಠಾಯಿಯನ್ನೇ ಕೊಂಡಿದ್ದೆವು. ಆದರೆ ಬೇರೆಯವರಿಗೆ ಮಾತ್ರ ನಾವು ಹಂಚಿದ್ದು ಕಡಿಮೆಯೇ.. ಸಂಜೆ ಮನೆಗೆ ಹೋಗುವಾಗ ತಿನ್ಲಿಕ್ಕೆ ಇರ್ಲಿ ಅಂತ ಜಾಸ್ತಿಯಾಗಿ ಎಲ್ಲರಿಗೂ ಕೊಡದೇ, ಕೊಡಲು ತಂದಿದ್ದ ಡಬ್ಬದಲ್ಲಿದ್ದ ಮಿಠಾಯಿಯನ್ನು ಉಳಿಸಿದ್ದೇ ಜಾಸ್ತಿ ನಾವು. ಆ ನಂತರ ದಿನಗಳಲ್ಲಿ ದಾರಿಯಲ್ಲಿಯೇ ಆ ಡಬ್ಬದ ಹೆಚ್ಚಿನ ಮಿಠಾಯಿಗಳು ನಮ್ಮಿಬ್ಬರ ಹೊಟ್ಟೆ ಸೇರಿತ್ತು. ನನಗೆ ನೆನಪಿದೆ ಹೆಚ್ಚು ಕಡಿಮೆ ಮೂರ್ನಾಲ್ಕು ದಿನ ನಾವು ಇಷ್ಟಿಷ್ಟೇ ಆ ಮಿಠಾಯಿಗಳನ್ನು ತಿಂದು ತಿಂದು ಖಾಲಿ ಮಾಡಿದ್ದೆವು.
ನಾನು ಅವರ ಬೈಲುಮನೆ ಗೆ ಆವಾಗವಾಗ ಹೋಗಿ ಬರ್ತಾನೇ ಇದ್ದೆ.
ಅವರ ಮನೆಗೆ ಹೋಗಿ ಸಿಹಿ ಸಿಹಿ ಸೀತಾಫಲ ತಿನ್ನುವುದು..
ಹಣ್ಣಾಗಿದೆಯಾ ಎಂದು ದಿನಲೂ ಅದನ್ನು ಒತ್ತಿ ಒತ್ತಿ ನೋಡುವುದು.
ಅವರ ದನ ಕರು ಹಾಕಿದಾಗ ಅದರೊಟ್ಟಿಗೆ ಆಟ ಆಡ್ಲಿಕ್ಕೆ ಹೋಗುವುದು... ಅವರ ಕೋಳಿ ಅದರ ಗೂಡಿನಲ್ಲಿ ಬೆಚ್ಚಗೆ ಮೊಟ್ಟೆ ಇಟ್ಟಾಗ ಆ ಬಿಸಿ ಮೊಟ್ಟೆಗಳನ್ನು ಕಣ್ಣರಳಿಸಿ ನೋಡುವುದು.
ಅನುರಾಧಳಿಂದ ನೋಟ್ಸ್ ತರ್ಲಿಕ್ಕೆ ಪ್ರತೀ ರಾತ್ರಿ ಹೋಗುವುದು..
ಅವಳ ಅಪ್ಪ ಕಾಂತಪ್ಪಣ್ಣ ಅವರ ತೋಟದ ಬಾವಿಯಲ್ಲಿ ಮೀನಿನಂತೆ ಈಜುವುದನ್ನು ತನ್ಮಯತೆಯಿಂದ ನೋಡುವುದು..
ಅವರು ಕಂಬಳದ ಕೋಣಗಳ ಬೆನ್ನು ತಿಕ್ಕಿ ಫಳ ಪಳ ಹೊಳೆಯುವಂತೆ ಫಾಲಿಶ್ ಮಾಡುವಾಗ ನಾನು ಕೂಡ ಮೆಲ್ಲನೆ ಕಾಲ,ಬೊಲ್ಲ ನವರ (ಅವುಗಳ ಹೆಸರು ಕಾಲ ಎಂದರೆ ಕಪ್ಪು ಬೊಲ್ಲೆ ಎಂದರೆ ಬಿಳಿ) ಮೈಯನ್ನು ನಯವಾಗಿ ಸವರುವುದು.
ಗತ್ತಿನ ಅಂಕದ ಕೋಳಿಗಳನ್ನು ಹಿಡಿಯಲು ಹಿಂದೆಯೇ ಓಡುವುದು.. ಅದನ್ನು ಕಾಂತಪ್ಪಣ್ಣ ಹಿಡಿದು ಕೈಗೆ ಕೊಟ್ಟಾಗ ಅದರ ಜುಟ್ಟು ಎಳೆಯುವುದು.
ಗದ್ದೆ ಉಳುವಾಗ, ಬತ್ತ ಕಟಾವು ಮಾಡುವಾಗ,ಅದನ್ನು ತಂದು ಸೆಗಣೆ ಸಾರಿದ ಅವರ ಮನೆಯ ದೊಡ್ಡ ಅಂಗಳದಲ್ಲಿ ಮರದ ಮಂಚಕ್ಕೆ ಬತ್ತದ ಸೂಡಿಯನ್ನು ಬಡಿದು ಕಾಳುಗಳನ್ನು ಬಿಡಿಸಿ ಆಮೇಲೆ ಒಟ್ಟು ಮಾಡುವುದನ್ನು ಕೆಲಸ ಮಾಡಿಸುವ ಉಸ್ತುವಾರಿ ಹೊತ್ತವನಂತೆ ಗಮನಿಸುವುದು.
ಬೈಲಿನಲ್ಲಿ ಮಾಡಿರುವ ತರಕಾರಿ ತೋಟದಲ್ಲಿದ್ದ ಸಿಹಿಗೆಣಸು ಎಷ್ಟು ದೊಡ್ಡದಾಗಿದೆ ಎಂದು ಮಣ್ಣಿನಿಂದ ಅಗೆದು ತೆಗೆದು ಚೆಕ್ ಮಾಡುವುದು. ಚಿಕ್ಕದಿದ್ದರೆ ಮಣ್ಣು ಹಾಕಿ ಪುನಃ ಮುಚ್ಚುವುದು.
ಅನುರಾಧಳ ತಾಯಿ ಅಂಬಕ್ಕ ಕೊಡುವ ಜೀರಿಗೆ ಮೆಣಸು ಹಾಕಿದ ದೇಸಿ ಹಸುವಿನ ಹಾಲಿನಿಂದ ಮಾಡಿದ ಖಾರ ಖಾರ ಮಜ್ಜಿಗೆ ಎರಡು ಗ್ಲಾಸ್ ಗಟಗಟ ಕುಡಿಯುವುದು..
ಹೀಗೆ ಪ್ರತಿಯೊಂದಕ್ಕೂ ನಾನು ಅಲ್ಲಿಗೆಯೇ ಹೋಗ್ತಾ ಇದ್ದೆ..
ಅವರ ಮನೆಯೇ ನನಗೆ ಆಸಕ್ತಿಯ ಕೇಂದ್ರ.. ಅವರ ಮನೆ... ತೋಟ.. ಗದ್ದೆಯಲ್ಲಿ ಎಲ್ಲವೂ ನನಗೆ ತುಂಬಾ ಇಷ್ಟ. ಪ್ರತಿಯೊಂದನ್ನು ಕುತೂಹಲದಿಂದ ನೋಡುವುದು.. ಅದು ಯಾಕೆ ಇದು ಹೀಗೆ ಎಂದು ಪ್ರಶ್ನೆ ಮಾಡುವುದು ಎಲ್ಲವೂ ನನಗಿಷ್ಟ.
ಪ್ರತೀ ಸಲ ಹೋದಾಗಲು ಅಂಬಕ್ಕ ಏನಾದರೊಂದು ತಿನ್ನಿಸಿಯೇ ಕಳುಹಿಸುತ್ತಿದ್ದರು.
ನನಗೆ ತಾಯಿ ಇರಲಿಲ್ಲ. ಹಾಗಾಗಿ ಅಂಬಕ್ಕ ನನ್ನನ್ನು ಅವರ ಮಗ ತರವೇ ನೋಡುತ್ತಿದ್ದರು.ನಾನೆಂದರೆ ಅದೇನೋ ಪ್ರೀತಿ.ಕಾಂತಪ್ಪಣ್ಣ ಕೂಡ ಅಷ್ಟೇ.
ಅವರಿಗೆ ಎರಡು ಹೆಣ್ಣು ಒಂದು ಗಂಡು ಒಟ್ಟಿಗೆ ಮೂವರು ಮಕ್ಕಳು. ಅನುರಾಧ,ರುಕ್ಕು(ರುಕ್ಮಿಣಿ) ಮತ್ತು ಪೊಲ್ಲ(ಪುರಂದರ್). ಪುರಂದರ್ ಗೆ ನಾನು ಪೊಲ್ಲ ಅಂತಲೇ ಕರೆಯುತ್ತಿದ್ದದ್ದು.ಕೊನೆಗೆ ಅದೇ ಹೆಸರು ಅವನಿಗೆ ಫಿಕ್ಸ್ ಆಯಿತು.ಎಲ್ಲರಿಗಿಂತ ಚಿಕ್ಕವ ಅಂದರೆ ಅವನೇ. ನನಗಿಂತ ಐದು ವರ್ಷ ಚಿಕ್ಕವನು. ನನ್ನನ್ನು ಅಣ್ಣ ಎಂದೇ ಕರೆಯುತ್ತಿದ್ದ. ಅನುರಾಧ ನಾನು ಒಂದೇ ವಯಸ್ಸಿನವರು.ರುಕ್ಕು ಅನುರಾಧಳಿಗಿಂತ ಎರಡು ವರ್ಷ ಚಿಕ್ಕವಳು.
ಅವರ ಮನೆಗೆ ಹೋದಾಗ ನಾವು ನಾಲ್ಕೂ ಜನ ಲೂಡೋ,ಕಳ್ಳ ಪೋಲಿಸ್, ಲಗೋರಿ ಎಲ್ಲಾ ಆಡುತ್ತಿದ್ವಿ.
ಹೊಳೆಯಲ್ಲಿ ಅಂಬಕ್ಕನ ಹಳೆಯ ಸೀರೆಯಿಂದ ಹೊಳೆಯುವ ಮೀನುಗಳನ್ನು ಹಿಡಿಯುತ್ತಿದ್ವಿ.
ಕಲ್ಲು ಬಿಸಾಡಿ ಮಾವಿನಕಾಯಿ ಉದುರಿಸಿ.. ಆ ಹುಳಿ ಮಾವನ್ನು ಜಜ್ಜಿ ಅದಕ್ಕೆ ಉಪ್ಪು ಮೆಣಸಿನ ಪುಡಿ ಹಾಕಿಕೊಂಡು ಹಾಗೇ ತಿಂದು ಸ್ವರ್ಗ ಸುಖ ಅನುಭವಿಸುತ್ತಿದ್ವಿ.
ಅನುರಾಧ ಅಪರೂಪಕ್ಕೆ ನಮ್ಮ ಮನೆಗೆ ಬರ್ತಾ ಇದ್ದಳು. ರುಕ್ಕು ಮಾತ್ರ ಅಪ್ಪನನ್ನು ಮಾತಾಡಿಸಲು ಆವಾಗವಾಗ ಬರ್ತಾನೆ ಇದ್ದಳು. ರುಕ್ಕು ಒಟ್ಟಿಗೆ ಪೊಲ್ಲ ಕೂಡ ಬರ್ತಾ ಇದ್ದ ನನ್ನೊಂದಿಗೆ ಮಾತಾಡಲು.
ಆ ಅಕ್ಕ ತಂಗಿ ಇಬ್ಬರಿಗೂ ನನ್ನ ಅಪ್ಪ ನೀಲಣ್ಣ ಅಂದ್ರೆ ನಿಜವಾಗಿಯೂ ತುಂಬಾನೇ ಇಷ್ಟ. ನನ್ನ ಅಪ್ಪನಿಗೂ ಕೂಡ ಅವರಿಬ್ಬರನ್ನು ಕಂಡರೆ ಅದೇನೋ ವಿವರಿಸಲಾಗದ ಪ್ರೀತಿ.ಅವರಿಗೂ ಹೆಣ್ಣು ಮಕ್ಕಳು ಇಲ್ಲ ಅಲ್ಲವೇ.. ಹಾಗಾಗಿ. ಏನಾದರೂ ತಿಂಡಿ ತಂದರೆ ಅದನ್ನು ಅವರೇ ಹೋಗಿ ಅವರಿಬ್ಬರಿಗೆ ಮತ್ತು ಪೊಲ್ಲನಿಗೆ ಹಂಚಿ ಬರುತ್ತಿದ್ದರು. ಕೆಲವೊಮ್ಮೆ ನಾನೇ ತಗೊಂಡು ಹೋಗ್ತಾ ಇದ್ದೆ.
ನಂತರ ಹೈಸ್ಕೂಲ್ ಬಂದಾಗ ಕೂಡ ನಾನು ಅನುರಾಧ ಒಟ್ಟಿಗೆಯೇ ನಡೆಯುವುದನ್ನು ಬಿಡಲಿಲ್ಲ.
ಆಗ ಪುನಃ ಪುಲ್ಕಿಯಿಂದ ಮತ್ತಷ್ಟು ದೂರ ನಡೆಯಬೇಕಾಗಿತ್ತು.
ಆಗಲೂ ಕೂಡ ನಮ್ಮ ಸ್ವರ್ಗದ ದಾರಿಯಲ್ಲಿಯೇ ಹೆಜ್ಜೆ ಹಾಕುವ ಭಾಗ್ಯ ನಮಗಿಬ್ಬರಿಗೆ..
ಹೀಗೆ ನಾನು ಅನುರಾಧ ದಿನಾಲೂ ಜೊತೆ ಜೊತೆಯಾಗಿಯೇ ನಡೆಯುತ್ತಿದ್ದೆವು... ಪ್ರೈಮರಿ ಮತ್ತು ಹೈಸ್ಕೂಲ್ ಸೇರಿ ಒಟ್ಟು ಹತ್ತು ವರ್ಷ ನಾವಿಬ್ಬರು ಒಟ್ಟಿಗೆ ನಡೆದಿದ್ದೆವು.
ಆದರೆ ನಾನು ಯಾವತ್ತೂ ಅವಳನ್ನು ಈ ಲವ್ Angle ನಿಂದ ನೋಡಿಯೇ ಇಲ್ಲ.
ನಾವಿಬ್ಬರು ನಮ್ಮ ಸಂಬಂಧ ಕ್ಕೆ ಹೆಸರೇ ಇಟ್ಟಿರಲಿಲ್ಲ..ಎಲ್ಲವನ್ನೂ ಮೀರಿದ ಪವಿತ್ರ ಬಂಧವದು.
ಆದರೆ ಯಾವಾಗ ನಾನು 10th Standard ಗೆ ಬಂದೆನೋ.. ಈ ನನ್ನ ಲವ್ ಹುಚ್ಚಿನಿಂದಾಗಿ ನಾನು ಅವಳನ್ನು ಮೊದಲ ಬಾರಿಗೆ ನೋಡುವ ರೀತಿಯೇ ಬದಲಾಗಿ ಹೋಯಿತು..!
ನಿಜವಾಗಿಯೂ ನಮ್ಮ ಅನುರಾಧ ಬಹಳ ಸುಂದರ ಹಾಗೂ ಅಷ್ಟೇ ಲಕ್ಷಣ ದ ಹುಡುಗಿ..ಹೌದು ಬುದ್ಧಿವಂತೆ, ಗುಣವಂತೆ, ಶೀಲವಂತೆ, ಆರೋಗ್ಯವಂತೆ.. ಓದಿನಲ್ಲಿ ಸದಾ ಮುಂದು.
ಐಶ್ವರ್ಯ ರೈ, ಶಿಲ್ಪ ಶೆಟ್ಟಿ ಕೂಡ ನನಗೆ ಅವಳಷ್ಟು ಚಂದ ಅಲ್ಲ ಆವಾಗ..
ನಮ್ಮ ಕ್ಲಾಸ್ ನಲ್ಲಿ ನನಗೆ ಲವ್ ಮಾಡಲು ಯಾರೂ ಕೂಡ ಸೂಟ್ ಆಗದಿದ್ದಾಗ ನನಗೆ ಮನಸ್ಸು ಉಂಟಾಗಿದ್ದೆ ಈ ಅನುರಾಧಳ ಮೇಲೆ..
ನನ್ನ ಆ ನಿರ್ಧಾರ ತಪ್ಪಾ..?!!
ಒಂದು ದಿನ ಗದ್ದೆಯ ಪುಣಿಯಲ್ಲಿ ನಡೆದು ಬರುವಾಗ... ಅನುರಾಧ ನನ್ನ ಬರ್ತಡೆ ಗೆ ನಿನಗೆ ಮಾತ್ರ ಟ್ರಿಟ್ ಕೊಡ್ತೇನೆ ಆಯ್ತಾ.. ಅಂತ ಹೇಳಿದೆ.
ಎಲ್ಲರೂ ಅವಳಿಗೆ ಅನು ಎಂದೇ ಕರೆಯುವುದು..
ಮನೆಯಲ್ಲಿ,ಶಾಲೆಯಲ್ಲಿ ಎಲ್ಲಾ ಕಡೆ ಹಾಗೆಯೇ..
ಆದರೆ ನಾನು ಅವಳಿಗೆ ರಾಧ ಅಂತಲೇ ಕರೆಯುವುದು.
ನಾನು ಹೇಳಿದ್ದು ಕೇಳಿ ರಾಧ ಕೇಳಿದ್ದಳು... ಎಂತ ಟ್ರೀಟ್ ಕೊಡ್ತೀಯಾ ನೀಲು..
ಪಡಿವಾಳ್ಸ್ ಹೋಟೆಲ್ ಅಲ್ಲಿ ಮಸಾಲೆ ದೋಸೆ ತೆಗೆಸಿ ಕೊಡ್ತೇನೆ ನಿನಗೆ ಆಗ್ಬಹುದಾ.. ಅಂದೆ.
ಅವಳಿಗೆ ಮಸಾಲೆದೋಸೆ ಅಂದ್ರೆ ತುಂಬಾ ಇಷ್ಟ ಅಂತ ನನಗೆ ಗೊತ್ತಿತ್ತು.
ಅವಳ ಎಲ್ಲಾ ಇಷ್ಟ ಕಷ್ಟಗಳು ಬಹುಶಃ ನನಗಿಂತ ಚೆನ್ನಾಗಿ ಯಾರಿಗೂ ಗೊತ್ತಿರಲೂ ಸಾಧ್ಯವೇ ಇಲ್ಲವೇನೋ..
ಆಯಿತು ತೆಗೆಸಿಕೊಡು..ಖುಷಿಯಿಂದಲೇ ಅಂದಳು ರಾಧ.
ಕೊನೆಗೂ ನನ್ನ ಬರ್ತಡೆ ಬಂತು.
ಆ ದಿನ ಅಪ್ಪನಿಂದ ಹಣ ಪಡೆದುಕೊಂಡು ನಾನು ಮತ್ತು ರಾಧ ಪುಲ್ಕಿಯಿಂದ ಬಸ್ ಹಿಡಿದು ಮೂಡುಬಿದಿರೆಗೆ ಹೋಗಿದ್ದೆವು.
ಅವಳು ಮುಂದಿನಿಂದ ಬಸ್ಸು ಹತ್ತಿದ್ದರೆ.
ನಾನು ಹಿಂದಿನಿಂದ ಬಸ್ ಹತ್ತಿ ಆವಾಗವಾಗ ಬಸ್ಸಿನಲ್ಲಿ ಅವಳನ್ನೇ ನೋಡುತ್ತಿದ್ದೆ..
ಪ್ರೀತಿಸಲು ಶುರು ಮಾಡಿದ ಮೇಲೆ ನಮ್ಮ ಸುತ್ತ ಮುತ್ತಲಿನ ಜಗತ್ತು ಮತ್ತು ನಾವು ನೋಡುವ ನೋಟವೂ ಕೂಡ ಬದಲಾಗುತ್ತದೆ ಎಂದು ಆವತ್ತೇ ಗೊತ್ತಾಗಿದ್ದು. ಆದರೆ ಎಲ್ಲವೂ ಅಪ್ಯಾಯಮಾನವಾಗಿ ಇತ್ತು.ಖುಷಿ ನೀಡುತ್ತಿತ್ತು.. ಆದರೆ ಎದೆ ಬಡಿತಕ್ಕೆಯ ಮಾತ್ರ ಸದಾ ಕುದುರೆಯ ವೇಗ..
ಆವಾಗ ನಮಗೆಲ್ಲ ದೊಡ್ಡ ತಿಂಡಿ ಎಂದರೆ ಮಸಾಲೆ ದೋಸೆಯೇ..
ಅದರಲ್ಲೂ ಮೂಡುಬಿದಿರೆಯಲ್ಲಿ ಪಡಿವಾಳ್ಸ್ ಹೋಟೆಲ್ ನ ಮಸಾಲೆ ದೋಸೆ ಅಂದರೆ ಆವಾಗ ಭಯಂಕರ ಫೇಮಸ್. ಮತ್ತು ಆವಾಗ ಮೂಡುಬಿದಿರೆಯಲ್ಲಿ ದೊಡ್ಡ ಹೋಟೆಲ್ ಅಂದರೆ ಪಡಿವಾಳ್ಸ್ ಮಾತ್ರ ಇದ್ದದ್ದು. ಏನಾದರೂ ದೊಡ್ಡ ಮಟ್ಟದಲ್ಲಿ ತಿನ್ನಬೇಕಿದ್ದರೆ ಜನ ಅಲ್ಲಿಗೆಯೇ ಹೋಗುತ್ತಿದ್ದದ್ದು ನನಗೆ ನೆನಪು..
ಆ ದಿನ ರಾಧಳಿಗೆ ಮಸಾಲೆ ದೋಸೆಯನ್ನು ಸರಿಯಾಗಿ ತಿನ್ನಲು ಕಲಿಸಿದ್ದೇ ನಾನು.
ಅವಳು ಒಂದು ತುದಿಯಿಂದು ಚೂರು ಚೂರು ಇಲಿ ತಿಂದಂತೆ ತಿನ್ನುವಾಗ...
ರಾಧ.. ಮಸಾಲೆ ದೋಸೆ ತಿನ್ನುವುದು ಹಾಗೆ ಅಲ್ಲ.. ನೋಡು ಹೀಗೆ.. ಮೊದಲು ಸೆಂಟರ್ ಅಲ್ಲಿ ಒಟ್ಟೆ ಮಾಡ್ಬೇಕು.ಆಗ ನಮಗೆ ಬಾಜಿ ಸಿಗ್ತದೆ, ನಂತರ ಸ್ವಲ ದೋಸೆ ಮತ್ತು ಸ್ವಲ ಬಾಜಿಯೊಂದಿಗೆ ತಿನ್ಬೇಕು. Next ಸ್ವಲ ದೋಸೆ ಮತ್ತು ಸ್ವಲ್ಪ ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ಬೇಕು..ಆ ನಂತರ ಸ್ವಲ ದೋಸೆ ಮತ್ತು ಸಾಂಬಾರ್ ನೊಂದಿಗೆ ತಿನ್ಬೇಕು.ಹೀಗೆ ನಿಧಾನವಾಗಿ ತಿನ್ನುತ್ತಾ ಇದ್ದರೆ ಕಾಲು ಗಂಟೆವರೆಗೂ ಮಸಾಲೆ ದೋಸೆಯನ್ನೇ ಮಜವಾಗಿ ತಿನ್ತಾ ಇರಬಹುದು ಗೊತ್ತಾ.. ಎಂದು ಅವಳಿಗೆ ಹೇಳಿ ಕೊಟ್ಟಿದ್ದೆ ನಾನು..
ಅವಳು ನಾನು ಹೇಳಿದಂತೆಯೇ ಶಿಸ್ತಿನ ವಿದ್ಯಾರ್ಥಿಯಾಗಿ ಅತೀ ಶ್ರದ್ಧೆಯಿಂದ ತಿಂದಿದ್ದಳು.
ಆ ನಂತರ ಅವಳ ಬರ್ತಡೆ ಗೆ ಕೂಡ ನನಗೆ ಪಡಿವಾಳ್ಸ್ ನಲ್ಲಿಯೇ ಮಸಾಲೆ ದೋಸೆ ತೆಗಿಸಿಕೊಟ್ಟಿದ್ದಳು ರಾಧ..
ಅವಳೇ ನನ್ನನ್ನು ಕರೆದುಕೊಂಡು ಹೋದದ್ದು.
ಪುಲ್ಕಿಯಲ್ಲಿ ನಮ್ಮ ಹೈಸ್ಕೂಲ್ ಜರ್ನಿ.. SSLC ವಿಧ್ಯಾಭ್ಯಾಸ ಹಾಗೇ ಸಾಗಿತ್ತು..
ಎಂದಿನಂತೆ ಬೈಲು, ಕಂಡ, ಬೆಟ್ಟ, ಗುಡ್ಡ, ಚಿಕ್ಕ ಹೊಳೆ, ಪೇರಳೆ ಗಿಡ... ನವಿಲು ಉದುರಿಸಿದ ನೀಲಿ ಪುಕ್ಕ... ಅಜ್ಜನ ಗಡ್ಡ ಎಲ್ಲವೂ ಸುಂದರವಾಗಿಯೇ ಇತ್ತು.
ಅವಳ ಕಡೆಗೆ ನನ್ನದೊಂದು ತುಡಿತ ನಿಧಾನವಾಗಿ ಜಾಸ್ತಿಯಾಗುತ್ತಲೇ ಹೋಯಿತು.
ಆದರೆ ಹೇಳುವ ಧೈರ್ಯ ನನ್ನಲ್ಲಿ ಇಲ್ಲ.
ಅವಳಿಗೆ ಕೂಡ ನನ್ನ ಮೇಲೆ ಏನಾದರೂ ಫೀಲಿಂಗ್ ಇರ್ಬಹುದಾ ಅಂತ ಚೆಕ್ ಮಾಡ್ಲಿಕ್ಕೆ.. ನಾನು ಸುಮ್ಮನೆ ಸ್ಮಿತಾ ಎನ್ನುವ ಹುಡುಗಿಯೊಂದಿಗೆ ಬಹಳ ಕ್ಲೋಸ್ ಆಗಿ ಇರುವಂತೆ ನಟಿಸ್ತಾ ಇದ್ದೆ. ಅನುರಾಧಳಿಗೆ ಪೊಸೆಸಿವ್ ಏನಾದರೂ ಉಂಟಾಗಬಹುದಾ ಎಂದು ತಿಳಿಯಲು.
ಇಲ್ಲ... ಏನೂ ಇಲ್ಲ..ಅನುರಾಧ ಅದನ್ನೆಲ್ಲ ನೋಡಿಯೂ ನೋಡದಂತೆಯೇ ಇರುತ್ತಿದ್ದಳು.
ಎಂದಿನಂತೆ ನನ್ನ ಜೊತೆ ಆ ಗುಡ್ಡದ ನೆತ್ತಿಯಲ್ಲಿ.. ಆ ಹೊಳೆ ಬದಿಯಲ್ಲಿ.. ಗದ್ದೆಯ ನಡುವಲ್ಲಿ... ಬಾಳೆ ತೋಟದ ನೆರಳಲ್ಲಿ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದಳು..
ಒಂದು ದಿನ ಹೀಗೆ ಗುಡ್ಡೆಯ ನೆತ್ತಿಯಲ್ಲಿ ನಡೆದು ಹೋಗುವಾಗ ಅವಳಿಗೆ ಒಂದು ಕಡೆ ನಿಲ್ಲಲ್ಲು ಹೇಳಿದೆ.
ಅನುರಾಧ ಏನೂ ಕೇಳಲಿಲ್ಲ... ಏನೂ ಹೇಳಲಿಲ್ಲ.. ಸುಮ್ಮನೆ ನಿಂತಳು.
ಅವಳಿಗೆ ನನ್ನ ಮೇಲೆ ಏನೋ ನಂಬಿಕೆ. ಹಾಗಾಗಿ ನಾನು ಹೇಳಿದ್ದನ್ನು ಹಾಗೇ ಕೇಳಿಬಿಡ್ತಾಳೆ.
ಕಣ್ಣು ಮುಚ್ಚಲು ಹೇಳಿದೆ.
ಅವಳು ಕಣ್ಣು ಕೂಡ ಮುಚ್ಚಿದಳು.
ರಾಧ ಈಗ ಕಣ್ಣು ಬಿಡು ಅಂದೆ..
ರಾಧ ಕಣ್ಣು ತೆರೆದಳು..
ನಾನು ಅವಳ ಎದುರು ಮಂಡಿಯೂರಿ ಕುಳಿತು, ಅಲ್ಲೆ ಪೊದೆಯಲ್ಲಿದ್ದ ಒಂದು ದೊಡ್ಡ ಕೇಪುಳ ಹೂವಿನ ಗೊಂಚಲು ಕಿತ್ತುಕೊಂಡು ಅದನ್ನು ಕೈಯಲ್ಲಿ ಹಿಡಿದುಕೊಂಡು...ರಾಧ ನಿನಗೆ ಯಾರಾದರೂ ಈ ರೀತಿ ಐ ಲವ್ ಯೂ ರಾಧ... ಎಂದು ಸಡನ್ ಆಗಿ ಪ್ರಪೋಸ್ ಮಾಡಿದ್ರೆ ನೀನು ಏನು ಮಾಡ್ತಿಯಾ.. ಕೇಳಿ ಬಿಟ್ಟೆ..!!
ಅವಳು ಏನೂ ಹೇಳಲಿಲ್ಲ...ಮೆಲ್ಲಗೆ ನಕ್ಕಳು.
ಮತ್ತೆ ಕೇಳಿದೆ... ಹೇಳು ರಾಧ ಏನು ಮಾಡ್ತೀಯಾ..
ಮಂಗ... ಯಾರದರೂ ಈ ತರಹ ಪ್ರಪೋಸ್ ಮಾಡ್ತಾರನಾ.. ಅದು ಕೂಡ ಕೇಪುಳ ಹೂವು ಹಿಡಿದು...ಅಂದಳು.
ಒಂದು ವೇಳೆ ನಾನೇ ಪ್ರಪೋಸ್ ಮಾಡಿದೆ ಅಂತ ತಿಳ್ಕೋ.. ಆವಾಗ ನೀನು ಏನು ಮಾಡ್ತೀಯಾ ರಾಧ... ಮನಸ್ಸು ಗಟ್ಟಿ ಮಾಡಿಕೊಂಡು ಕೇಳಿದೆ..
ನೀಲು ಮರ್ಲ ನಿನಗೆ..? ಹೇಳಿದಳು.
ಯಾಕೆ.. ಕೇಳಿದೆ..
ನೀನು ನನಗೆಲ್ಲ ಎಂದಾದರೂ ಪ್ರಪೋಸ್ ಮಾಡ್ಲಿಕ್ಕೆ ಉಂಟನಾ ನೀಲು...
ನನಗೆ ಗೊತ್ತು ನಿನಗೆ ಆ ಸ್ಮಿತಾ ಅಂದರೆ ಬಹಳ ಇಷ್ಟ ಅಂತ..
ಕ್ಲಾಸಿನಲ್ಲಿ ಯಾವಾಗ ನೋಡಿದರೂ ಅವಳ ಹಿಂದೆಯೇ ಇರ್ತೀಯಾ..
ಈಗ ನನ್ನಲ್ಲಿ ಈ ರೀತಿಯಾಗಿ ತಮಾಷೆ ಮಾಡ್ತ ಇದ್ದೀ ಅಲ..
ನಾನು ಏನೂ ಹೇಳಲಿಲ್ಲ.... ಸುಮ್ಮನಿದ್ದೆ!
ಅವಳೇ ಹೇಳಿದಳು...
ಒಂದು ಹೇಳ್ಲಾ ನೀಲು..
ನಿನಗೆ ಲವ್ವ್ ಎಲ್ಲಾ ಸೂಟ್ ಆಗುವುದೇ ಇಲ್ಲನಾ...
ನಿನಗೆ ಆ ಸ್ಮಿತಾ ಸ ಬೇಡ... ಯಾರು ಸ ಬೇಡ...
ನೀನು ಈ ರೀತಿ ಕೇಡಿ ಟೈಪ್ ಇದ್ರೇನೆ ಚಂದ .. ಹಾಗೇ ಇರ್ಬೇಕು..ಮತ್ತು ಹಾಗೇ ಇರು.. ಅಂದಳು ರಾಧ..
ನಿಜವಾಗಿಯೂ ಆ ಕ್ಷಣ ಮನಸ್ಸಿಗೆ ತುಂಬಾನೇ ಬೇಜಾರಾಗಿತ್ತು.!
ನಾನು ಯಾಕೆ ಅಷ್ಟೊಂದು ಪೆದ್ದನಂತೆ ವರ್ತಿಸಿ ಬಿಟ್ಟೆ..?
ನೇರವಾಗಿ ಹೇಳಿ ಬಿಡಬಹುದಿತ್ತಲ್ಲ..!
ರಾಧ ನನಗೆ ನೀನು ಇಷ್ಟ...ನಿನಗೂ ನಾನು ಅಂದ್ರೆ ಇಷ್ಟನಾ...ಎಂದು
ಹಾಗೆ ಕೇಳಿದಿದ್ದರೆ... ಆ ರೀತಿ ಹೇಳಿದಿದ್ದರೆ... ಅವಳು ಬಹುಶಃ ಏನಾದರೂ ಒಂದು ಹೇಳುತ್ತಿದ್ದಳು..
ಆದರೆ ನಾನು ಏನೋ ಮಾಡಲು ಹೋಗಿ... ಏನೋ ಮಾಡಿ ಬಿಟ್ಟಿದ್ದೆ!
ಕೇಪುಳ ಹೂವನ್ನು ಪಕ್ಕಕ್ಕೆಸೆದು ಮನಸ್ಸಲ್ಲಿ ಯಾವುದೇ ಭಾವನೆಯನ್ನು ಪ್ರಕಟಿಸದೇ ಹಾಗೇ ನಗುತ್ತಾ ಹೇಳಿದ್ದೆ...
ಹೌದು ರಾಧ... ನಾನು ತಮಾಷೆಯೇ ಮಾಡಿದ್ದು ಆಯ್ತಾ...
ಈಗ ಅದೆಲ್ಲ ಬಿಟ್ಟಾಕು.. ನೀನು ನನಗೆ ಕೇಡಿ ಎಂದು ಹೇಳಿದೆ ಅಲಾ.. ಆದ್ರೆ ನಾನು ಯಾವ ಟೈಪ್ ಕೇಡಿ ಅಂತ ನೀನು ಹೇಳ್ಲೇ ಇಲ್ಲ ನೋಡು ... ವಜ್ರಮುನಿ ಯ ಅಥವಾ ಸುಧೀರಾ..?
ಅಲ್ಲ ನೀನು ಟೈಗರ್ ಪ್ರಭಾಕರ್ ಎಂದು ಹೇಳಿ ನಕ್ಕಿದ್ದಳು ನನ್ನ ರಾಧ!!
ನಾನು ಕೂಡ ಅವಳೊಂದಿಗೆ ಆ ಗುಡ್ಡದ ತುದಿಯಲ್ಲಿ ಬಾಯಿ ತುಂಬಾ ನಕ್ಕಿದ್ದೆ...
ಆದರೆ ಮನಸಾರೆ ಅಲ್ಲ!
ಇರಬಹುದು ಆಗ ನಾನು ಕ್ಲಾಸ್ ನಲ್ಲಿ ಚಿಕ್ಕ ಪುಟ್ಟ ಪೆಟ್ಟ್ ಲಡಾಯಿ ಎಲ್ಲ ಮಾಡ್ತಾ ಇದ್ದೆ ಅಲ್ಲ ಹಾಗಾಗಿ ಅವಳಿಗೆ ನನ್ನಲ್ಲಿ ಕೇಡಿತನವೇ ಜಾಸ್ತಿಯಾಗಿ ಕಂಡಿರಬೇಕು..ಮತ್ತು ಬಹುಶಃ ಅವಳಿಗೆ ನಾನು ಆ ರೀತಿ ಇರುವುದೇ ಇಷ್ಟ ಆಗಿತ್ತೋ ಏನೋ.
ಆದರೆ ನನ್ನೊಳಗೆ ಒಬ್ಬ ಸೀರಿಯಸ್ ಪ್ರೇಮಿ ಇರಬಹುದು ಎಂದು ಅವಳು ಅಂದುಕೊಂಡಿರಲೇ ಇಲ್ಲ...ಅವಳು ಇದನ್ನು ತಮಾಷೆಯಾಗಿ ತಗೊಂಡಾಗಲೇ ನನಗೆ ಅರಿವಾಗಿದ್ದು ನಾನು ಅವಳನ್ನು ನಿಜವಾಗಿಯೂ ಎಷ್ಟೊಂದು ಇಷ್ಟ ಪಟ್ಟಿದ್ದೆ ಎಂದು..!
ಸ್ಮಿತಾ ಜೊತೆ ನಾನು ಕ್ಲೋಸ್ ಆಗಿ ಇರುವಂತೆ ನಾನು ನಟಿಸಿದ್ದು ಅನುರಾಧಳಿಗಾಗಿಯೇ... ಆದರೆ ಅದು ಫಲ ಕೊಡುವ ಬದಲು... ಅವಳಿಗೆ ನನ್ನ ಮೇಲೆ ಇದ್ದ ಭಾವನೆಯೇ ಬದಲಾಗುವಂತೆ ಮಾಡಿತ್ತಾ.. ಎಂದು ಆ ನಂತರ ನನಗೆ ಹಲವಾರು ಬಾರೀ ಅನ್ನಿಸಿತ್ತು!
ಒಂದು ವೇಳೆ ನಾನು ಸ್ಮಿತಾಳೊಂದಿಗೆ ಕ್ಲೋಸ್ ಆಗಿ ಇರದಿದ್ದರೆ... ಸೀರಿಯಸ್ ಆಗಿಯೇ ಪ್ರಪೋಸ್ ಮಾಡಿದಿದ್ದರೆ ಬಹುಶಃ ಅವಳು ಒಪ್ಪುತ್ತಿದ್ದಳೋ ಏನೋ... ನನಗದು ಗೊತ್ತಿಲ್ಲ!!
ಅದೇ ನನ್ನ ಫಸ್ಟ್ ಲವ್..ನಾನು ಸರಿಯಾಗಿ ಪ್ರಪೋಸ್ ಸಹ ಮಾಡ್ಲಿಲ್ಲ.. ಅವಳಿಗೂ ಕೂಡ ನಾನು ನಿನ್ನನ್ನೇ ಲವ್ ಮಾಡ್ತಾ ಇದ್ದೇನೆ ರಾಧ ಎಂದು ಬಿಡಿಸಿ ಹೇಳಲೂ ಕೂಡ ಇಲ್ಲ...
ಅವಳಿಗೆ ನಿಜವಾಗಿಯೂ ನನ್ನ ಮೇಲೆ ಲವ್ ಇತ್ತಾ ಇಲ್ಲವೋ.. ಅದೂ ಕೂಡ ನನಗೆ ಗೊತ್ತಿಲ್ಲ..
ಹೌದು ಅದುವೇ ಫಸ್ಟ್, ಅದುವೇ ಲಾಸ್ಟ್... ಆಮೇಲೆ ಎಂದಿಗೂ ನನಗೆ ಯಾವುದೇ ಹುಡುಗಿಯರಲ್ಲಿ ಪ್ರೇಮದ ಭಾವ ಮೂಡಲೇ ಇಲ್ಲ.. ಇಂದಿನವರೆಗೂ..
ಆ ರೀತಿ ಅರ್ದಂಬರ್ದ ಪ್ರಪೋಸ್ ಮಾಡಿದ ನಂತರದ ದಿನಗಳಲ್ಲಿ ಯಾಕೋ ನಾನೇ ಅವಳಲ್ಲಿ ಮಾತು ಕಡಿಮೆ ಮಾಡಿದೆ..
ಆ ನಂತರ ಶಾಲೆಯ ದಾರಿಯಲ್ಲಿ, ಗದ್ದೆ ಗುಡ್ಡದ ಹಾದಿಯಲ್ಲಿ ನಮ್ಮಿಬ್ಬರ ನಡುವೆ ಮೌನವೇ ತುಂಬಿತ್ತು.
ಅವಳೇ ಮಾತಾಡಿಸಾದರೂ ನನಗೆ ಎಂದಿನಂತೆ ಜಾಸ್ತಿ ಮಾತಾಡ್ಲಿಕ್ಕೆನೇ ಆಗ್ತಾನೇ ಇರ್ಲಿಲ್ಲ...
ಅವಳು ಮಾತ್ರ ಎಂದಿನಂತೆ ನಾರ್ಮಲ್ ಇದ್ದಳು.
ಬೇಗನೇ ಹೈಸ್ಕೂಲ್ ಕೂಡ ಮುಗಿಯಿತು...
ಪ್ರೈಮರಿ, ಹೈಸ್ಕೂಲ್ ಎಲ್ಲಾ ನಮ್ಮ ಪುಲ್ಕಿಯಲ್ಲಿಯೇ ಇತ್ತು.ಹಾಗಾಗಿ ದೂರ ಇದ್ದರೂ ನಡೆದು ಹೋಗುತ್ತಿದ್ದೆವು.
ಪಿಯುಸಿಗೆ ಮೂಡುಬಿದಿರೆಗೆ ಬಸ್ ಅಲ್ಲಿ ಹೋದರೂ ಅವಳು ಬೇರೆ ಕಾಲೇಜ್ ನಾನು ಬೇರೆ ಕಾಲೇಜ್..
ಪೇಟೆಯಲ್ಲಿ ಸಿಕ್ಕಿದಾಗಲೆಲ್ಲ ಕರೆಯುತ್ತಿದ್ದಳು... ನೀಲು ಬಾ ಮಸಾಲೆದೋಸೆ ತಿನ್ನೋಣ ಎಂದು.
ನಾನೇ ಹೋಗ್ತಾ ಇರ್ಲಿಲ್ಲ.
ಡಿಗ್ರಿಗೆ ಅವಳು ಮಂಗಳೂರಿಗೆ ಹೋದಳು.
Bsc ಆದ ಮೇಲೆ Msc ಏನೋ ಮಾಡಿದ್ದಳು..
ಬಹುಶಃ ಸಂಬಂಧಿಕರ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದಳು ಎಂದು ಕಾಣುತ್ತೆ.
ಹಾಗಾಗಿಯೋ ಏನೋ ಆಮೇಲೆ ಅವಳು ನನಗೆ ಜಾಸ್ತಿ ಸಿಗಲೇ ಇಲ್ಲ..
ಪುಲ್ಕಿಯಲ್ಲಿ ಕೂಡ ನಾನು ಅವಳನ್ನು ನೋಡಿದ್ದು ಬಹಳ ಕಡಿಮೆಯೇ.
ಹಿಂದೆ ಚಿಕ್ಕವನಿದ್ದಾಗ ಅವರ ಬೈಲು ಮನೆಯಲ್ಲಿ, ತೋಟದಲ್ಲಿಯೇ ನಾನು ಕಾಲ ಕಳೆಯುತ್ತಿದ್ದೆ.
ಆ ಮೇಲೆ ನಾನು ಅತ್ತ ಹೋಗಲೇ ಇಲ್ಲ...
ಅಪರೂಪಕ್ಕೆ ಪುಲ್ಕಿಯಲ್ಲಿ ರುಕ್ಕು ಮತ್ತು ಪೊಲ್ಲ ಸಿಗ್ತಾ ಇದ್ದರು.
ಹೀಗೆ ನಿಧಾನವಾಗಿ ಅನುರಾಧ ನನಗೆ ಮರೆತೇ ಹೋಗಿ ಬಿಟ್ಟಳು.
ನನ್ನಲ್ಲೂ ಸಾಕಷ್ಟು ಬದಲಾವಣೆಗಳು ಆದವು.
ಪ್ರೀತಿ ಪ್ರೇಮದ ವಿಷಯ ಬಂದಾಗ ಅಂತು ನಾನು ದೂರವೇ ಇರ್ತಾ ಇದ್ದೆ.
ಆ ಮೇಲೆ ನಾನು ರವಿಮಾಮನ ಮೂವಿಯೇ ನೋಡಲಿಲ್ಲ.. ಎಂದಿನಂತೆ ಅನಂತ್ ನಾಗ್ ಅವರ ಮೂವಿಗಳಲ್ಲೇ ಕಳೆದು ಹೋದೆ.ಕಾಮೆಡಿ ಬೇಕೆನಿಸಿದಾಗ ಅರವಿಂದ್ ಬೋಳಾರ್ ಮೂವಿಗಳನ್ನು ನೋಡುತ್ತಾ ಉಳಿದು ಬಿಡುತ್ತಿದ್ದೆ.
ಮೂರು ವರ್ಷದ ಹಿಂದೆ ರಾಧಳ ಮದುವೆ ಕೂಡ ಆಯಿತು.
ಕಾಲೇಜು ಮುಗಿದ ಕೂಡಲೇ ಅವಳಿಗೆ ಮದುವೆ ಆಗಿತ್ತು.ಕೇರಳ ಸೈಡಿಗೆ ಅವಳನ್ನು ಕೊಟ್ಟದ್ದು ಎಂದು ಕಾಣುತ್ತೆ..
ನಾನು ಅವಳ ಮದುವೆಗೆ ಕೂಡ ಹೋಗ್ಲಿಲ್ಲ..ಅಪ್ಪ ಹೋಗಿದ್ದರು. ನನಗೆಲ್ಲಿಯ ಪುರುಸೊತ್ತು. ನಾನು ಡಿಗ್ರಿ ಮುಗಿದರೂ ಕೆಲಸ ಹುಡುಕುವುದರಲ್ಲಿಯೇ Busy ಇದ್ದೆ. ಈಗ ಕೂಡ ಕೆಲಸ ಹುಡುಕುವ ಕೆಲಸವನ್ನೇ ಬಾರೀ ಶ್ರದ್ಧೆಯಿಂದ ಮಾಡ್ತಾ ಇದ್ದೇನೆ..
ಆದರೆ ನನ್ನ ಹಣೆಬರಹಕ್ಕೆ ನನಗೆ ಹೊಂದುವ ಕೆಲಸ ಸಿಗುವುದಿಲ್ಲ ಅಷ್ಟೇ..
ಮೊನ್ನೆ ಶುಕ್ರವಾರ ಮೂಡುಬಿದ್ರೆ ತರಕಾರಿ ಮಾರ್ಕೆಟ್ ಅಲ್ಲಿ ನಾನು ಬಚ್ಚಂಗಾಯಿ(ಕಲ್ಲಂಗಡಿ) ತಿನ್ತಾ ಇದ್ದೆ.. ಹೌದು ಅದೇ ನಮ್ಮ ಪರಿಚಯದ ಚೊರೆಪಟ್(ಕಿರಿ ಕಿರಿ) ಪ್ರೂಟ್ಸ್ ಪುರ್ಸಣ್ಣನ(ಪುರುಷೋತ್ತಮ ರ) ಅಂಗಡಿಯಲ್ಲಿ.
ಮನೆಗೆ ಬಚ್ಚಂಗಾಯಿ ತರ್ಲಿಕ್ಕೆ ಅಂತ ಹೋಗಿದ್ದು. ಆದರೆ ನಾನು ಹಾಗೇ ಬಚ್ಚಂಗಾಯಿ ಮನೆಗೆ ತರುವುದಿಲ್ಲ.ಕಟ್ ಮಾಡಿ ತಿಂದು..ಸ್ವೀಟ್ ಇದ್ರೆ, ಒಳಗೆ ಕೆಂಪು ಇದ್ರೆ ಮಾತ್ರ ತರುವುದು. ಅದರ ನಡುವಲ್ಲಿ ಒಂದು ಹತ್ತು ಇಪ್ಪತ್ತು ದ್ರಾಕ್ಷಿ ಸ್ವೀಟ್ ಉಂಟಾ... ಹುಳಿ ಉಂಟಾ ಅಂತ ಬಾಯಿಗೆ ಹಾಕಿಕೊಂಡು ಟೇಸ್ಟ್ ನೋಡಿ ನೋಡಿಯೇ ಖಾಲಿ ಆಗಿರ್ತದೆ ಆಯ್ತಾ. ಹೀಗೆ ಹತ್ತು ಇಪ್ಪತ್ತು ದ್ರಾಕ್ಷಿ ತಿಂದಾದ ಮೇಲೆ ಕೊನೆಯಲ್ಲಿ ಯಾವತ್ತೂ ನನಗೆ ಪುರ್ಸಣ್ಣನ ದ್ರಾಕ್ಷಿಗಳು ಸಿಕ್ಕಾಪಟ್ಟೆ ಹುಳಿ ಅಂತಲೇ ಅನಿಸುವುದು.. ಹಾಗಾಗಿ ನಾನು ಯಾವತ್ತೂ ಮನೆಗೆ ದ್ರಾಕ್ಷಿ ತರುವುದಿಲ್ಲ..
ನಾನು ಹೀಗೆಲ್ಲಾ ಮಾಡುವುದು ಪುರ್ಸಣ್ಣನಿಗೆ ಒಂಚೂರು ಇಷ್ಟವೇ ಆಗುವುದಿಲ್ಲ... ನಾನು ಹೀಗೆಲ್ಲಾ ತಿಂದು ಸಪಾಯಿ(ಖಾಲಿ) ಮಾಡುವುದಕ್ಕೆನೇ ಚೊರೆಪಟ್ ಮಾಡ್ತಾರೆ ಅವರು.ಹೇಳಿ ಕೇಳಿ ದೊಡ್ಡ ಕಂಜೂಸ್ (ಜಿಪುಣ ಗ್ರೇಸರ) ಆಯ್ತಾ ಅವರು. ಅದಕ್ಕಾಗಿ ನಾನು ಹಾಗೇ ಮಾಡುವುದು.
ಹೀಗೆ ನಾನು ಮೊನ್ನೆ ಅವರ ಅಂಗಡಿಯಲ್ಲಿ ಬಚ್ಚಂಗಾಯಿ ತೆಗೆದುಕೊಳ್ಳುವ ಮೊದಲು ಒಂದು ದೊಡ್ದ ಪೀಸ್ ಬಚ್ಚಂಗಾಯಿಯನ್ನು ಕಟ್ ಮಾಡಿ Sample Piece ಆಗಿ ತಿನ್ತಾ ಇರುವಾಗ.. ಯಾರೋ ನನ್ನನ್ನು.. ನೀಲು.. ನೀಲು.. ಎಂದು ಕರೆದಂತಾಯಿತು....
ಹಿಂದೆ ತಿರುಗಿ ನೋಡಿದೆ..
ಆಗ ಅಲ್ಲಿ ನಿಂತಿದ್ದಳು.... ಅನುರಾಧ.. !
ಹೌದು ಪ್ರೈಮರಿಯ ನನ್ನ ಪಾಲಿನ ಅದೇ ರಾಧ.
ಕೈಯಲ್ಲಿ ಒಂದು ಮಗು.. ಮತ್ತೊಂದು ಕೈಯಲ್ಲಿ ತರಕಾರಿ ಇದ್ದ ಪ್ಲಾಸ್ಟಿಕ್ ತೊಟ್ಟೆ(ಕವರ್) ಹಿಡಿದುಕೊಂಡು ನಿಂತಿದ್ದಳು.
ಈಗಲೂ ಅವಳು ಸುಂದರಿಯೇ..
ಹಾಯ್...ರಾಧ..ಅಂದೆ ಬಚ್ಚಂಗಾಯಿ ತಿನ್ನುತ್ತಲೇ ಬಹಳ Casual ಆಗಿ..
ಎಷ್ಟು ಉದ್ದ ಆಗಿದ್ದೀಯಾ ನೀಲು.. ಅಂದಳು.
ಈಗ ಸಹ ನಿನಗೆ ನಾನು ಕೇಡಿ ತರವೇ ಕಾಣ್ತಾ ಇದ್ದೀನಾ ಕೇಳಿದೆ... ಬಚ್ಚಂಗಾಯಿ ತಿನ್ನುವುದನ್ಧು ಮುಂದುವರಿಸುತ್ತಲೇ..
ಅವಳು... ಇಲ್ಲ... ಎಂದು ಹೇಳಿ ಹಾಗೇ ನಕ್ಕಳು....
ಮತ್ತೆ ರಾಧ ವಿಶೇಷ ಎಲ್ಲಾ .. ಮದುವೆ ಆಯಿತು.. ಮಗು ಕೂಡ ಆಗಿದೆ... ಅಂದೆ ಅವಳನ್ನೇ ನೋಡುತ್ತಾ..
ಮದುವೆ ಆದ್ರೆ ನಿನಗೆ ಸಹ ಮಗು ಆಗ್ತದೆ.. ಅಂದಳು..
ಅವಳನ್ನೇ ಮೇಲೆ ಕೆಳಗೆ ನೋಡಿದೆ, ಅವಳು ನನಗೆ ಕಿಂಡಲೋ,ಪೊಂಗಲೋ ಮಾಡಿದಂತೆ ಫೀಲ್ ಆಯಿತು..
ಅದು ನನಗೆ ಗೊತ್ತಿಲ್ವಾ..ಮದುವೆ ಆದ್ರೆ ಮಕ್ಕಳು, ಸಂಸಾರ ಎಲ್ಲಾ ಆಗ್ತದೆ ಎಂದು...
ಇರಲಿ.. ಇರಲಿ ಇವಳಿಗೆ ಸರಿಯಾಗಿಯೇ ಮಾಡ್ತೇನೆ.. ಅಂತ ಮನಸ್ಸಿನಲ್ಲಿಯೇ ಅಂದುಕೊಂಡೆ.
ಮತ್ತೆ ನಿನ್ನ ಯಜಮಾನರು ಹೇಗಿದ್ದಾರೆ... ಅಂದೆ
ಹೇಗಿದ್ದಾರೆ ಅಂದ್ರೆ... ಚೆನ್ನಾಗಿಯೇ ಇದ್ದಾರೆ.. ಅಂದಳು.
ಹಾಗೆ ಅಲ್ಲ... ಹೀರೋ ತರ ಇದ್ದರಾ ಅಥವಾ.. ನನ್ನ ತರಹ ಕೇಡಿಯ ಹಾಗೆ ಇದ್ದಾರಾ..?
ಅವಳು ನನ್ನನ್ನು ಹಾಗೇ ದಿಟ್ಟಿಸಿ ನೋಡಿದಳು..
ರಪ್ಪ ಮಾತು ಚೇಂಜ್ ಮಾಡುವುದೇ ಬೆಟರ್ ಅಂತ ಅನಿಸಿತು....
ನೀವು ಹುಡುಗಿಯರು ಯಾಕೆ ಮರ್ರೆ ಇಷ್ಟಿಷ್ಟು ಬೇಗ ಮದುವೆ ಆಗುವುದು.. ಅದೂ ಕಾಲೇಜ್ ಮುಗಿದ ಕೂಡಲೇ. .ಅಂದೆ
ಮನೆಯಲ್ಲಿ ಮಾಡಿದ್ರು.. ನಾನು ಅದೇ ಅಂದಳು.
ನೀನಿರುವುದು ಈಗ ಕೇರಳದಲ್ಲಿ ಅಲ್ವಾ... ಕೇಳಿದೆ
ಹೌದು...
ನಿನಗೆ ಮದುವೆ ಆದ ಮೇಲೆ ನಾನು ನಿನ್ನನ್ನು ನೋಡ್ಲೇ ಇಲ್ಲ ಅಲ.. ಅಂದೆ.
ನಾನು ಕೂಡ ಈ ಸೈಡ್ ಬರ್ಲೇ ಇಲ್ಲ ನೀಲು.. ಅಂದಳು.
ಮತ್ತೆ ಹೇಗೆ ಈ ಸೈಡ್ ಅಚನಾಕ್ಕಾಗಿ.. ತವರು ಮನೆ ಅಷ್ಟೊಂದು ನೆನಪಾಯಿತಾ...
ಅದೊಂದು ದೊಡ್ಡ ಕಥೆ ನೀಲಮೇಘ.. ಅದೆಲ್ಲಾ ಇರ್ಲಿ ಬಿಡು.. ಕಾಫಿ ಕುಡೀತಿಯಾ..
ನೀನು ತೆಗೆಸಿ ಕೊಟ್ರೆ ಕುಡೀತಿನಿ..
ಆಯಿತಾ... ನನ್ನ ಲೆಕ್ಕದಲ್ಲಿಯೇ,ನಿನ್ನಿಂದ ಎಲ್ಲಾ ಇದನ್ನು ನಾನು expect ಮಾಡ್ಬಹುದಾ ಹೇಳು..ಅಂದಳು.
ನಾನು ಆವಾಗ ಹೈಸ್ಕೂಲ್ ನಲ್ಲಿ ನನ್ನ ಬರ್ತಡೆ ದಿನ ಪಡಿವಾಳ್ಸ್ ಹೋಟೆಲ್ ಅಲ್ಲಿ ನಿನಗೆ ಮಸಾಲೆದೋಸೆ ತೆಗೆಸಿಕೊಟ್ಟಿದ್ದೆ ನೆನಪಿಲ್ಲವಾ... ಕೇಳಿದೆ.
ನಾನು ಕೂಡ ಅದೇ ಪಡಿವಾಳ್ಸ್ ಹೋಟೆಲ್ ನಲ್ಲಿ ಮಸಾಲೆ ದೋಸೆಯನ್ನೇ ತೆಗೆಸಿಕೊಟ್ಟಿದ್ದೆ ಅದು ನಿನಗೆ ನೆನಪಿಲ್ಲವಾ... ಆಮೇಲೆ ಕೂಡ ಹಲವು ಬಾರಿ ಸಿಕ್ಕಿದಾಗಲೆಲ್ಲ ನಿನ್ನನ್ನು ಕರೆದಿದ್ದೆ ನಾನು... ನೀನು ದೊಡ್ಡ ಜನ.. ಎಲ್ಲಿ ಬರ್ತಿಯಾ ಹೇಳು..ನಮ್ಮನ್ನೆಲ್ಲ ಮರೆತೇ ಬಿಟ್ಟಿದ್ದೆ.. ಅಂದಳು.
ನಾನು ನಕ್ಕೆ..
ಅವಳೂ ನಕ್ಕಳು..
Sample ಬಚ್ಚಂಗಾಯಿ ಇನ್ನೂ ಪೂರ್ತಿ ಖಾಲಿ ಆಗಿರಲಿಲ್ಲ... ಸ್ವಲ್ಪ ಇತ್ತು..
ಎಂದಿನಂತೆ ಪುರ್ಸಣ್ಣನಿಗೆ ಹೇಳಿದೆ...ಏನು ಪುರ್ಸಣ್ಣ ಬಚ್ಚಂಗಾಯಿ ಏನೂ ಟೇಸ್ಟೇ ಇಲ್ಲ..ಈ ತೈವಾನ್ ತಳಿಯಲ್ಲಿ ಇತ್ತೀಚೆಗೆ Sweetness ಬಹಳ ಡೌನ್ ಆಗ್ತಾ ಇದೆ,..ಹಾಗಾಗಿ ಸದ್ಯಕ್ಕೆ ಬೇಡ ಇದು.. Next ಟೈಂ ತಗೋತಿನಿ..
ನೀನು ಇರುವುದೇ ನನ್ನನ್ನು ಗುಡಿಸಿ ಗುಂಡಾಂತರ ಮಾಡ್ಲಿಕ್ಕೆ ಅಲ.. ಪೆತ್ತ(ದನ) ತಿಂದ ಹಾಗೆ ತಿಂದಿದ್ದೀಯಾ ಅಂದರು ಬೆಚ್ಚದಲ್ಲಿ(ಸಿಟ್ಟಿನಲ್ಲಿ) ಪುರ್ಸಣ್ಣ.ಅವರದ್ದೊಂದು ಞಕ್ಕ್ ಞೈ (ಹೇಳಿದ್ದನ್ನೇ ಹೇಳುವುದು)ಇದ್ದದ್ದೇ.
ಉಳಿದ ಅರ್ಧ ಬಚ್ಚಂಗಾಯಿ ಹಾಗೇ ಕಚ್ಚಿ ತಿನ್ನುತ್ತಲೇ ಹೋಟೆಲ್ ಕಡೆ ನಾನು ಮತ್ತು ಅನುರಾಧ ನಡೆದೆವು.
ನನ್ನ ಒಂದು ಕೈಯಲ್ಲಿ ಬಚ್ಚಂಗಾಯಿ ಇದ್ದರೆ, ಇನ್ನೊಂದು ಕೈಯಲ್ಲಿ ಅನುರಾಧ ಳ ತರಕಾರಿಯ ತೊಟ್ಟೆ ಇತ್ತು... ನಾನೇ ಹಿಡಿದುಕೊಂಡಿದ್ದೆ
ಹೋಟೆಲ್ ಗೆ ಹೋಗಿ ಕುಳಿತೂ ಆಯಿತು..
ಹಿಂದೆ ಇಬ್ಬರೂ ಒಟ್ಟಾಗಿ ಹೋಗಿ ಮಸಾಲೆ ದೋಸೆ ತಿಂದಿದ್ದ ಮೂಡುಬಿದ್ರೆಯ ಅದೇ ಪಡಿವಾಳ್ಸ್ ಹೋಟೇಲ್ ಗೆನೇ ನಾವು ಮತ್ತೆ ಹೋಗಿದ್ದು.
ಹಿಂದೆ ಸ್ಕೂಲ್ ಗೆ ಹೋಗುವಾಗಲೂ ಅದು ಇತ್ತು.
ಈಗಲೂ ಇದೆ...
ಸ್ವಲ್ಪ ಆಧುನಿಕತೆಯ ಟಚ್ ಎಲ್ಲಾ ಬಂದಿದೆ.
ಆದರೂ ಆ ಹಳೆಯ ನೆನಪುಗಳು ಗೋಡೆಯಲ್ಲಿ ಅಲ್ಲಲ್ಲಿ ಮಿಸುಕಾಡುತ್ತಿದೆ.
ನೀಲಮೇಘ ಆರ್ಡರ್ ನೀನೇ ಮಾಡ... ಅಂದಳು ಅನುರಾಧ..
ಬೇಡ ನಿನ್ನ ಟ್ರೀಟ್ ಅಲಾ.. ನೀನೇ ಮಾಡು ಅಂದೆ.
ಅಣ್ಣಾ.. ರಡ್ಡ್ ಮಸಾಲ್ ದೋಸೆ, ರಡ್ಡ್ ಚಾ ಕೊರ್ಲೆ(ಎರಡು ಮಸಾಲೆ ದೋಸೆ, ಎರಡು ಚಹಾ ಕೊಡಿ).. ಅಂದಳು ಸಪ್ಲೈಯರ್ ಬಳಿ.
ಆಗಲೂ ನಿನ್ನದು ಮಸಾಲೆ ದೋಸೆಯೇ ಫೇವರೆಟಾ. ಈಗಲೂ ಕೂಡ ಅದೆಯಾ.. ಕೇಳಿದೆ.
ಹೌದು ನೀಲಮೇಘ ಜಾಸ್ತಿ ಏನೂ ಬದಲಾಗಿಲ್ಲ.. ಹೆಚ್ಚಿನ ಎಲ್ಲವೂ ಹಾಗೆಯೇ ಇದೆ..
ಹೋಟೆಲ್ ಗೆ ಹೋದರೆ ತಿಂಡಿಯಲ್ಲಿ ಎಂದಿನಂತೆ ಅದೇ ಮಸಾಲೆ ದೋಸೆಯ ಹೆಸರೇ ಬಾಯಿಯಲ್ಲಿ ಮೊದಲು ಬಂದು ಬಿಡುತ್ತದೆ..
ಹೋಟೆಲ್ ಗೆ ಊಟಕ್ಕೆಂದು ಹೋದಾಗ ಜಾಸ್ತಿ ದೊಡ್ಡದು ಎಂದರೆ ಬಿರಿಯಾನಿ.
ಫಿಶ್ ಮಾರ್ಕೆಟ್ ಗೆ ಹೋದ್ರೆ.. ಬಂಗುಡೆ, ಬೂತಾಯಿ ಅಷ್ಟೇ....ಅಂದಳು ಅನುರಾಧ.
ಯಾಕೋ ನನಗೆ ಅವಳು ಸುಖವಾಗಿದ್ದಾಳೆ ಅಂತ ಅನ್ನಿಸಲಿಲ್ಲ..!
ರಾಧ ಲೈಫ್ ಎಲ್ಲಾ ಓಕೆ ಅಲ್ಲಾ.. ಕೇಳಿದೆ.
ಹಾಳಾದ್ರೆ ನೀನೆಂತ ರಿಪೇರಿ ಮಾಡ್ತಿಯಾನ ನೀಲು .. ಅವಳದ್ದೊಂದು ಏನೋ ಮಾಮೂಲಿ ಉಡಾಫೆ ಇದ್ದದ್ದೇ,ನನ್ನ ಅಪ್ಪನಂತೆಯೇ..
ಅವಳು ಯಾವತ್ತೂ ಕೂಡ ನನ್ನನ್ನು ಸೀರಿಯಸ್ ಆಗಿ ತಗೊಂಡವಳೇ ಅಲ್ಲ..
ಆವತ್ತು ಆ ಗುಡ್ಡದಲ್ಲಿ ಕೂಡ..!
Actually ಆವತ್ತು ನಾನೇ ಸೀರಿಯಸ್ ಆಗಿ ಇರ್ಲಿಲ್ಲ!!
ನಾನೇ ಮಾತು ಮುಂದುವರಿಸಿದೆ..
ನಮ್ಮ ಮನೆಯಲ್ಲಿ ಏನೇ ಹಾಳಾದ್ರೂ ನಾನೇ ರಿಪೇರಿ ಮಾಡುವುದು.. ಗೊತ್ತುಂಟಲ್ಲಾ ನಿನಗೆ...
ಗೊತ್ತುಂಟು ನಿನ್ನ ಅಪ್ಪ ಚಿಕ್ಕಂದಿನಲ್ಲಿ ಹತ್ತು ಮನೆಗೆ ಕೇಳುವಂತೆ ಹೇಳುತ್ತಿದ್ದ ಈ ಮಾತು... ನೀನು ಈ ಮನೆ ಹಾಳು ಮಾಡ್ಲಿಕ್ಕೆಯೇ ಹುಟ್ಟಿರುವುದು ಮಾರಾಯ ಅಂತ.... ಎಷ್ಟೊಂದು ಪ್ಲಾಸ್ಟಿಕ್ ಬಾಲ್ದಿ, ಜಗ್ಗ್ ಎಲ್ಲಾ ಒಡೆದು ಹಾಕ್ತಾ ಇದ್ದೆಯಲ್ಲಾ ನೀನು ನೀಲು... ಎಂದು ಹೇಳಿ ನಕ್ಕಳು.
ಶೇ.. ಈ ಅಪ್ಪ ಎಷ್ಟು ವರ್ಷಗಳಿಂದ ನಿರಂತರವಾಗಿ ನನ್ನ ಮರ್ಯಾದೆ ತೆಗೀತಾ ಇದ್ದಾರೆ ಮರ್ರೆ..
ನನ್ನ ಒಟ್ಟಿಗೆ ಪ್ರೈಮರಿಯಲ್ಲಿ ಓದಿದ ಹುಡುಗಿ ಈಗಲೂ ಕೂಡ ನಾನೆಂದರೆ ಬರೀ ಇಂತಹ ವಿಷಯಗಳನ್ನೇ ನೆನಪಿಕೊಳ್ತಾಳೆ ಎಂದ್ರೆ ಯಾವ ರೇಂಜಿಗೆ ನನ್ನ ಮಾನ ಹರಾಜು ಹಾಕಿರಬಹುದು ನನ್ನ ಅಪ್ಪ ನೀಲಣ್ಣ..
ಬಿಸಿ ಬಿಸಿ.. ಗರಿ ಗರಿ ಮಸಾಲ ದೋಸೆ ಬಂತು....
ಏನೋ ಯೋಚಿಸುತ್ತಾ ದೋಸೆ ಮುರಿದು ತಿನ್ನಲು ಶುರು ಮಾಡಿದೆ..
ತಟ್ಟಂತ ಕೈಗೆ ಬಡಿದಳು ಅನುರಾಧ..
ಯಾಕೆ ಏನಾಯಿತು ಕೇಳಿದೆ..
ನೀಲಮೇಘ ಮಸಾಲೆ ದೋಸೆ ತಿನ್ನುವುದು ಹೀಗೆಯಾ..
ನೀನೇ ಅಲ್ಲವಾ ನನಗೆ ಕಲಿಸಿಕೊಟ್ಟದ್ದು..
ಮೊದಲು ಸೆಂಟರ್ ಅಲ್ಲಿ ಒಟ್ಟೆ ಮಾಡ್ಬೇಕು. ಆಗ ನಮಗೆ ಬಾಜಿ ಸಿಗ್ತದೆ. ನಂತರ ಒಂದು ಚೂರು ದೋಸೆ ಮತ್ತು ಬಾಜಿ... ನೆಕ್ಸ್ಟ್ ಒಂದು ಚೂರು ದೋಸೆ ಜೊತೆಗೆ ತೆಂಗಿನಕಾಯಿ ಚಟ್ನಿ... ಆ ನಂತರ ಒಂದು ಚೂರು ದೋಸೆ ಜೊತೆಗೆ ಸಾಂಬಾರ್...ಈ ರೀತಿ ನಿಧಾನವಾಗಿ ತಿಂದ್ರೆ ಕಾಲು ಗಂಟೆ ಮಸಾಲೆ ದೋಸೆಯನ್ನು ಹಾಗೇ ಮಜವಾಗಿ ತಿನ್ಬಹುದು ಗೊತ್ತಾ... ಅಂದಳು ನಗುತ್ತಾ ರಾಧ.
ನಿನಗೆ ಇದೆಲ್ಲಾ ಇನ್ನೂ ನೆನಪಿದೆಯಾ ರಾಧ.. ಕೇಳಿದೆ.
ನೀಲಮೇಘ... ನಿನ್ನನು ಎಂದಾದರೂ ಮರೆಯಲ್ಲಿಕ್ಕೆ ಸಾಧ್ಯವ ನಾನು ಹೇಳು..
ಆ ಹೈಸ್ಕೂಲ್.. ಆ ಶಾಲೆಯ ದಾರಿ.. ಆ ಗುಡ್ಡ..ನೀನು ನನಗೆಂದು ಕಿತ್ತು ತರುತ್ತಿದ್ದ ಹೆಸರಿಲ್ಲದ ಹೂವುಗಳು,,ನಾವಿಬ್ಬರು ಬಾಯಿ ಚಪ್ಪರಿಸಿಕೊಂಡು ತಿಂದ ಕಾಡು ಹಣ್ಣುಗಳು.. ಆ ಚಿತ್ತುಪುಲಿ ಮಿಠಾಯಿ,ಆ ನಿನ್ನ ಫೇಕ್ ಪ್ರಪೋಸ್.. ನೀನು ಅಂದು ಹಿಡಿದಿದ್ದ ಗೊಂಚಲು ಕೇಪುಳ ಹೂವು .. ಎಲ್ಲವೂ ನೆನಪಿದೆ ನೀಲಮೇಘ .
ಬೇಡ ಎಂದರೂ ಅವಳ ಬಾಯಿಯಲ್ಲಿ ಕೇಪುಳದ ಹೂವಿನ ವಿಷಯ ಬಂದಾಗ ಮತ್ತೆ ಹಳೆಯ ನೆನಪಿಗೆ ಜಾರಿದೆ ನಾನು..!
ಈಗಲೂ ಮನಸ್ಸು ಅಂದು ಗುಡ್ಡೆಯ ತುದಿಯಲ್ಲಿ ನನಗೆ ನಾನೇ ಕೇಳಿ ಕೊಂಡಿದ್ದ ಅದೇ ಪ್ರಶ್ನೆ ಕೇಳಿತು.. ಒಂದು ವೇಳೆ ಆ ದಿನ ನಾನು ನಿಜವಾಗಿಯೂ ಪ್ರಪೋಸ್ ಮಾಡಿದ್ದರೆ ಈ ರಾಧ ನನ್ನನ್ನು ಒಪ್ಪುತ್ತಿದ್ದಳಾ...?
ಮನಸ್ಸು ಈಗಲೂ ಅದೇ ಉತ್ತರ ಹೇಳಿತು...ಯಾರಿಗೆ ಗೊತ್ತು...!?
ಅವಳ ಮನಸ್ಸಿನಲ್ಲಿ ಏನಿತ್ತೋ..
ಅಥವಾ ಅವಳು ಕೂಡ ನನ್ನಂತೆಯೇ ನನ್ನ ಮೇಲಿನ ಪ್ರೀತಿಯನ್ನು ಮರೆಮಾಚಿ ಬದುಕಿ ಬಿಟ್ಟಳಾ..?!
ಈಗಲೂ ನನಗದು ಗೊತ್ತಿಲ್ಲ..
ಮತ್ತು ಗೊತ್ತಾಗುವ ಸಂಧರ್ಭವೂ ಕೂಡ ಬಂದಿರಲಿಲ್ಲ..
ಆದರೆ ಅವಳು ಯಾವುದನ್ನೂ ಕೂಡ ಮರೆತಿಲ್ಲ..
ನನಗೆ ಸಂಬಂಧಿಸಿದ ಎಲ್ಲವೂ ಅವಳಿಗೆ ನೆನಪಿದೆ.
ಮತ್ತು ಆ ಎಲ್ಲಾ ನೆನಪುಗಳು ಅವಳಲ್ಲಿ ಇನ್ನೂ ತಾಜವಾಗಿಯೇ ಇದೆ..
ನಾನು ಪಡಿವಾಳ್ಸ್ ಹೋಟೆಲ್ ಅಲ್ಲಿ ಮಸಾಲೆ ದೋಸೆಯ ಎದುರಿಗೆ ಇದ್ದರೂ.. ಯಾಕೋ ನಾನು ಮತ್ತೆ ಬಾಲ್ಯದ ಆ ಗುಡ್ಡದ ನೆತ್ತಿಯಲ್ಲಿ ಕೇಪುಳ ಹೂವು ಹಿಡಿದು ಮತ್ತೊಮ್ಮೆ ಮಂಡಿಯೂರಿ ರಾಧಳ ಎದುರು ಕುಳಿತಿರುವಂತೆ ಭಾಸವಾಯಿತು..!
ನೀಲು.. ನಿನ್ನ ಅಪ್ಪ ನೀಲಣ್ಣ ಹೇಗಿದ್ದಾರೆ ಮತ್ತೆ.. ಅವಳೇ ಕೇಳಿದಳು..
ಆಗಲೇ ವಾಸ್ತವಕ್ಕೆ ಬಂದದ್ದು ನಾನು..!
ಅವರಿಗೇನು ಚೆನ್ನಾಗಿಯೇ ಇದ್ದಾರೆ.. ಸಂಜೆ ಆದ್ರೆ ಡೈಲಿ ಸೀರಿಯಲ್ ನೋಡ್ತಾರೆ.. ಪ್ರೀ ಆದ್ದಾಗಲೆಲ್ಲ ನನಗೆ ತಪ್ಪದೇ ಬೈಯ್ತಾರೆ.. ಇಲ್ಲದಿದ್ದರೆ ಅವರಿಗೆ ತಿಂದದ್ದು ಜೀರ್ಣ ಆಗಲ್ಲ... ಅಂದೆ
ಅವಳು ನಕ್ಕಳು...
ನಿಮ್ಮ ಅಪ್ಪ ಮಗನದ್ದು ಒಂದು ಇದ್ದದ್ದೇ ಅಲ್ವಾ ಯಾವಾಗಲೂ ... ಅಂದಳು.
ಮತ್ತೆ ರಾಧ.. ನೀನು ಸ ಸೀರಿಯಲ್ ಎಲ್ಲಾ ನೋಡ್ತಿಯಾ ಕೇಳಿದೆ..
ಹೌದು.. ಸಂಜೆ ಆದಂತೆ ಬೋರ್ ಆಗ್ತದೆ ಅಲ ನೀಲು .. ಹಾಗೇ ನೋಡ್ತೇನೆ.. ಹೇಳಿದಳು.
ಯಾವುದು ರಾಧಾಕೃಷ್ಣವ ಅಥವಾ ಸೀತೆಯ ರಾಮ ವ?
ಅಲ್ಲ.. ಮುದ್ದು ಲಕ್ಷ್ಮಿ.. ಮಸಾಲೆ ದೋಸೆ ತಿನ್ನುತ್ತಲೇ ಹೇಳಿದಳು ರಾಧ.
ಶೇ.. ಈ ಮುದ್ದು ಲಕ್ಷ್ಮಿ ಗೆ ಎಷ್ಟು ಜನ ಫ್ಯಾನ್ ಮರ್ರೆ.. ಆದ್ರೆ ನನಗೆ ಅವಳ ಕಷ್ಟ ನೋಡ್ಲಿಕ್ಕೆನೇ ಬೇಜಾರ್ ಆಗ್ತದೆ..
ನಾನು ಮಸಾಲೆ ದೋಸೆ ತಿನ್ನುತ್ತಲೇ ಕೇಳಿದೆ... ಅಲಾ ರಾಧ.. ಪಾಪ ಆ ಮುದ್ದು ಲಕ್ಷ್ಮಿಗೆ ಯಾವಾಗಲೂ ಕಷ್ಟವೇ ಅಲ್ವಾ ಆ ಸೀರಿಯಲ್ ನಲ್ಲಿ..
ಹೌದು ನನ್ನ ಹಾಗೆಯೇ..! ಅಂದಳು ರಾಧ.
ಒಮ್ಮೆಲೇ ಅರ್ಥ ಆಗಲಿಲ್ಲ ನನಗೆ..
ಹೇಗೆ..? ಕೇಳಿದೆ..
ಅವಳಿಗಾದರೂ ಗಂಡ ಇದ್ದಾನೆ... ಆದರೆ ನನಗೆ ಗಂಡನೇ ಇಲ್ಲ ಅಲ್ಲ ನೀಲು !!
ತಿನ್ನುತ್ತಿದ್ದ ದೋಸೆ ಬಿಟ್ಟು ಅವಳನ್ನೇ ನೋಡಿದೆ..!!
ಅವಳ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು..!
ಕಷ್ಟ ಪಟ್ಟು ಅವಳೇ ಮುಂದುವರಿಸಿ ಹೇಳಿದಳು..
- ನಮ್ಮವರು ತುಂಬಾ ಕುಡೀತಾ ಇದ್ರು ನೀಲು..
ಮನೆಯಲ್ಲಿ ಯಾವಾಗಲೂ ಜಗಳವೇ..
ನೆಮ್ಮದಿ ಎನ್ನುವುದು ಮರೀಚಿಕೆ ಆಗಿತ್ತು.
ಹಾಗಿ ಒಂದು ದಿನ ವಿಪರೀತ ಕುಡಿದು ಕಾರು ಓಡಿಸಿದವರು...Accident ಆಗಿ ಅಲ್ಲೇ Spot ಅಲ್ಲೇ ಸತ್ತು ಹೋಗಿ ಬಿಟ್ಟರು..!
ನಾನೇನು ಅವತ್ತು ಅವರಿಗಾಗಿ ತುಂಬಾ ಅಳಲಿಲ್ಲ ನೀಲು..
ಆದರೆ ಒಂದು ಹೆಣ್ಣು ಮಗು ಇತ್ತು ನೋಡು...
ಅದಕ್ಕಾಗಿ ಮರುದಿನ ಸಿಕ್ಕಾಪಟ್ಟೆ ಅತ್ತು ಬಿಟ್ಟೆ..
ಮುಂದೇನು ದಾರಿ ಎಂದು ಗೊತ್ತಾಗಲಿಲ್ಲ..
ನಾವು ಇದ್ದದ್ದೇ ಬಾಡಿಗೆ ಮನೆಯಲ್ಲಿ
ಅತ್ತೆ ಮಾಮ ಕೂಡ ಯಾರು ಇರಲಿಲ್ಲ.
ಬಾಳು ತುಂಬಾ ಒಂಟಿ ಅನ್ನಿಸತೊಡಗಿತು..
ನೆಮ್ಮದಿಯ ಒಂದು ಸಾಂತ್ವನ ಹೇಳುವವರು ಕೂಡ ನನಗೆ ಅಲ್ಲಿ ಯಾರೂ ಇರಲಿಲ್ಲ..
ನನಗೆ ಅಲ್ಲಿನ ಬಾಷೆ ಕೂಡ ಸರಿಯಾಗಿ ಬರ್ತಾ ಇರಲಿಲ್ಲ..
ಮಗು ಬೇರೆ ಚಿಕ್ಕದು.. ಎರಡು ವರ್ಷ ಆಗಿದೆ.
ಏನು ಮಾಡುವುದು ಎಂದು ಗೊತ್ತಾಗಲಿಲ್ಲ..
ಹಾಗಾಗಿ ಮಗು ಎತ್ತಿಕೊಂಡು ನೇರ ಇಲ್ಲಿಗೆ ಬಂದು ಬಿಟ್ಟೆ ನೀಲು.
ತವರು ಮನೆಯಲ್ಲಿ ಕೂಡ ಯಾರಿಗೂ ಭಾರವಾಗಿ ಇರ್ಲಿಕ್ಕೆ ನನಗೆ ಇಷ್ಟ ಆಗ್ಲಿಲ್ಲ..
ನಿನಗೇ ಗೊತ್ತು ಮದುವೆ ಆಗದ ತಂಗಿ ಬೇರೆ ಇದ್ದಾಳೆ ನನಗೆ ..
ಅದಕ್ಕಾಗಿ ಊರಿಗೆ ಬಂದರೂ ಮನೆಗೆ ಹೋಗದೇ ಸಫರೇಟ್ ಆಗಿ ಬಾಡಿಗೆ ಮನೆ ಮಾಡಿಯೇ ಇದ್ದೇನೆ..
ಅಪ್ಪ, ಅಮ್ಮ, ತಂಗಿ, ತಮ್ಮ ಎಲ್ಲಾ ಮನೆಗೆ ಬಾ ಎಂದು ಕರೆದರು. ಆದರೆ ನಾನೇ ಹೋಗಲಿಲ್ಲ..
ಇಲ್ಲಿಯೇ ಖಾಸಗಿ ಸ್ಕೂಲ್ ಒಂದರಲ್ಲಿ ಟೀಚರ್ ಆಗಿ ಕೆಲಸ ಮಾಡ್ತೇನೆ...
ಮುದ್ದು ಲಕ್ಷ್ಮಿಗೆ ಆದರೂ ಒಂದು ದಿನ ಅವಳ ಗಂಡ ಅವಳಿಗೆ ವಾಪಾಸು ಸಿಗಬಹುದು ನೀಲು.
ಆದರೆ.. ಆದರೆ ನನಗೆ ಅಂತಹ ಯಾವುದೇ ದಿವ್ಯ ಆಗಮನದ ನೀರೀಕ್ಷೆಗಳೇ ಇಲ್ಲ.....!!
ನನ್ನಲ್ಲಿ ಬದುಕು ತುಂಬಾ ಸುಂದರ ಎಂದು ಅನ್ನಿಸಿಕೊಂಡ ದಿನಗಳು ಬಹಳಾನೇ ಕಡಿಮೆ..
ಇದ್ದರೆ ಅದು ಆ ದಿನ ನಾವು ಪುಲ್ಕಿ ಯಲ್ಲಿ ಶಾಲೆಗೆ ಹೋಗುವಾಗ.. ಕೈ ಕೈ ಹಿಡಿದು ಆ ಗುಡ್ಡದ ನೆತ್ತಿಯಲ್ಲಿ ನಡೆದು ಹೋದ ಆ ಹತ್ತು ವರ್ಷಗಳ ನೆನಪುಗಳು ಅಷ್ಟೇ ನೀಲು..
ನಿನ್ನಂತಹ ಅಧ್ಭುತ ಗೆಳೆಯ ನನಗೆ ಬೇಕಿತ್ತು.. ಅಂತ ನನಗೆ ಪದೇ ಪದೇ ಅನಿಸುತ್ತಿತ್ತು..
ನಿನಾದರೆ ನನಗೆ ಎಷ್ಟೊಂದು ಸಮಾಧಾನ ಮಾಡುತ್ತಿದ್ದೆ ಅಲ್ವಾ ನೀಲು..
ಹೌದು ನಿನ್ನನ್ನು ನಾನು ಟೈಗರ್ ಫ್ರಭಾಕರ್ ಅಂತ ಹೇಳಿದ್ದೆ..
ಕೇಡಿ ಎಂದು ಕೂಡ ಹೇಳಿದ್ದೆ....
ಆದ್ರೆ ನೀನು "ಕಲಿಯುಗ ಭೀಮ" ಮೂವಿಯ ಒಳ್ಳೆಯ ಟೈಗರ್ ಪ್ರಭಾಕರ್.
ಖಳನಾಯಕ ಪ್ರಭಾಕರ್ ಅಲ್ಲ..
ನಿನಗೆ ಗೊತ್ತಾ ನೀಲು.. ನಿನ್ನಂತಹ ಗೆಳೆಯ ನನಗೆ ಮುಂದೆ ಎಲ್ಲಿಯೂ ಸಿಗಲೇ ಇಲ್ಲ...
ನಾನು ನಿನ್ನ ಬದಲಿಗೆ ನಿನ್ನಂತಹ ಬೇರೆ ಗೆಳೆಯನನ್ನು ಹುಡುಕಲು ಕೂಡ ಹೋಗಲಿಲ್ಲ..
ಮೂಡುಬಿದಿರೆಗೆ ಯಾವಾಗ ಬಂದರೂ ಪಡಿವಾಳ್ಸ್ ಹೋಟೆಲ್ ಗೆ ಒಬ್ಬಳೇ ಬಂದು ಮಸಾಲೆದೋಸೆ ನಿನ್ನದೇ ಶೈಲಿಯಲ್ಲಿ ತಿನ್ನುವಾಗ ಶೇ... ಎದುರಲ್ಲಿ ಕುಳಿತುಕೊಂಡು... ರಾಧ... ಮಸಾಲೆ ದೋಸೆ ತಿನ್ನುವುದು ಹಾಗಲ್ಲ... ಹೀಗೆ ಎಂದು ಹೇಳಿಕೊಡಲು ನಿನ್ನಂತ ಸ್ನೇಹಿತ ನನ್ನ ಜೊತೆ ಇಲ್ಲ ಅಲ್ವಾ ಅಂತ ಅನ್ನಿಸುತ್ತಿತ್ತು...
ಹೈಸ್ಕೂಲ್ ಮುಗಿದ ಮೇಲೂ ನಾವಿಬ್ಬರೂ ಒಟ್ಟಿಗೆ ಹೆಜ್ಜೆ ಹಾಕಿದ.. ಪುಲ್ಕಿಯ ಆ ಶಾಲೆಯ ದಾರಿಯಲ್ಲಿ ನಾನು ಸುಮ್ಮನೆ ಒಬ್ಬಳೇ ನಡೆದು ಹೋಗುತ್ತಿದ್ದೆ ನೀಲು..
ಅಲ್ಲಿ ಆ ರೆಂಜೆ ಹೂವು, ಕೇಪುಳದ ಹೂವು, ಪುನರ್ಪುಳಿ ಹಣ್ಣು, ಕುಂಟಾಳ್ ಹಣ್ಣು ಕಂಡಾಗೆಲ್ಲ ನನಗೆ ನಿನ್ನದೇ ನೆನಪಾಗುತ್ತಿತ್ತು...
ನಾನು ನನ್ನ ಸ್ನೇಹಿತನನ್ನು ಕಳೆದು ಕೊಂಡದ್ದೋ.. ಅಥವಾ.. ಅವನು ನನ್ನ ಸ್ನೇಹವನ್ನು ಕಳೆದುಕೊಂಡದ್ದೋ ಎಂದು ನನಗೆ ಗೊತ್ತೇ ಆಗಲಿಲ್ಲ....!
ನೀನು ನನ್ನ ಬಳಿ ಕೊನೆಗೆ ಮಾತೇ ಬಿಟ್ಟೆ....
ನಾನು ಎಷ್ಟಾದರೂ ಹುಡುಗಿ ನೋಡು..ನಿನ್ನ ಸ್ನೇಹಕ್ಕಾಗಿ ಮತ್ತೆ ಕೈ ಚಾಚುವ ಮನಸ್ಸು ನಾನು ಕೂಡ ಮಾಡಲಿಲ್ಲ....
ಕೊನೆಗೆ ನನ್ನ ಮದುವೆಯೇ ಆಗಿ ಹೋಯಿತು ನೀಲು..!
ನೀನು ನನ್ನ ಮದುವೆಗೆ ಬರಲೇ ಇಲ್ಲ...
ನಾನು ಕೂಡ ಕರೆಯಲೇ ಇಲ್ಲ..
ನನ್ನ ಬಾಳಿನ ಎಂತಹ ಗೆಳೆಯ ನೀನು..
ನನ್ನ ಜೀವನದ ಬಹು ದೊಡ್ಡ ಸಂಗತಿಯೊಂದು ಸಂಭ್ರಮದಲ್ಲಿ ಜರಗುವಾಗ ನನ್ನ ಅತೀ ದೊಡ್ಡ ಗೆಳೆಯ ನನ್ನ ಬಳಿ ಇರಲೇ ಇಲ್ಲ ...
ಸಪ್ತಪದಿ ಸುತ್ತುವಾಗ....ಶಾಲೆಯ ದಾರಿಯಲ್ಲಿ ಹತ್ತು ವರ್ಷ ಕೈ ಹಿಡಿದು ನಾಜೂಕಾಗಿ ನಡೆಸಿದ ಗೆಳೆಯ.. ಕಣ್ಣ ಎದುರು ಬರಲಿಲ್ಲ...
ಆವತ್ತು ಗುಡ್ಡದ ಮೇಲೆ ನಾನು ಸೀರಿಯಸ್ ಆಗಿ ಪ್ರಫೋಸ್ ಮಾಡಿದಿದ್ದರೆ... ನೀನು ಒಪ್ಪಿಕೊಳ್ಳುತ್ತಿದ್ದೀಯಾ ರಾಧ.. ಎಂಬ ಪ್ರಶ್ನೆಯನ್ನು ಮಾತ್ರ ಎಂದಿಗೂ ನನ್ನಲ್ಲಿ ಕೇಳಬೇಡ ನೀಲು...!!.
ನನಗೆ ಉತ್ತರ ಹೇಳಲು ಕಷ್ಟವಾಗುತ್ತದೆ!!
ಈ ಸಂಧರ್ಭದಲ್ಲಿ ಅಂತಹ ಕಠಿಣ ಪ್ರಶ್ನೆಗೆ ಉತ್ತರಿಸಿ ನಿನ್ನ ಬಾಳನ್ನು ಜಟಿಲ ಮಾಡುವ ಆಸೆ ನನಗಿಲ್ಲ!!
ಆದರೆ ನನ್ನ ಗೆಳೆಯ ನೀಲು....
ನೀನು ಮಾತ್ರ ನನಗೆ ಅಂದು ಜೀವದ ಗೆಳೆಯನೇ ಆಗಿದ್ದೆ...!
ನೀನು ಮಾತ್ರ ಎಂದಿಗೂ ಸುಖವಾಗಿರಬೇಕು ನೀಲು....
ಒಂದೇ ಉಸಿರಲ್ಲಿ ಎಲ್ಲವನ್ನೂ ಹೇಳಿ ಮುಗಿಸಿದ್ದಳು ನನ್ನ ರಾಧ ..!
ಅಷ್ಟನ್ನು ಕೇಳಿ ಯಾಕೋ ಬಾಯಿಯಲ್ಲಿ ಇದ್ದ ಮಸಾಲೆ ದೋಸೆ ರುಚಿಯೇ ಅನ್ನಿಸಲಿಲ್ಲ ನನಗೆ!
ಕಣ್ಣಂಚು ನನಗರಿಯದೇ ಒದ್ದೆ ಆಗಿ ಬಿಟ್ಟಿತು..
ರಾಧಳ ಒಳಗೆ ನನ್ನ ಬಗ್ಗೆ ಇಷ್ಟೊಂದು ಮಾತುಗಳು ಇತ್ತೇ...?!
ನಾನು ಯಾವತ್ತೂ ಈ ರೀತಿ ಕಣ್ಣು ತುಂಬಿಕೊಂಡವನೇ ಅಲ್ಲ..!
ತಲೆಹರಟೆ ಹುಡುಗ ನಾನು...
ಯಾಕೋ ಅಂದು ನನ್ನ ಕಣ್ಣುಗಳು ಲೆಕ್ಕಕ್ಕಿಂತ ಜಾಸ್ತಿಯೇ ಭರ್ತಿ ಆಗಿ ಬಿಟ್ಟವು.
ಹೋಟೆಲ್ ಬಿಲ್ ಅವಳೇ ಕೊಟ್ಟಳು..
ಅವಳ ತರಕಾರಿ ತೊಟ್ಟೆ ಹಿಡಿದು ಬಸ್ ಸ್ಟ್ಯಾಂಡ್ ಕಡೆಗೆ ಅವಳೊಂದಿಗೆ ನಡೆದೆ...
ನಾನು ಮಾತಾಡಲಿಲ್ಲ...
ಅವಳೂ ಮಾತಾಡಲಿಲ್ಲ..
ಗಾಢ ಮೌನ ಕೂಡ ನಮ್ಮಿಬ್ಬರ ಮಧ್ಯೆ ಹೆಜ್ಜೆ ಹಾಕಿತ್ತು.
ಅವಳು ಎಲ್ಲಿ ರೂಮ್ ಮಾಡಿದ್ದಾಳೆ ಎಂದು ನನಗೆ ಗೊತ್ತಿಲ್ಲ..
ಯಾವುದೋ ಬಸ್ ಹಿಡಿದು... ಮಗುವನ್ನು ಕೈಯಲ್ಲಿ ಎತ್ತಿಕೊಂಡು, ನನ್ನಿಂದ ಅವಳ ತರಕಾರಿ ತೊಟ್ಟೆ ಪಡೆದುಕೊಂಡು... ಭಾಯ್ ನೀಲು ಎಂದು ಹೇಳಿ ಅಲ್ಲಿಂದ ಹೊರಟೇ ಹೋದಳು ನನ್ನ ರಾಧ..!!
ತುಂಬಾ ಹೊತ್ತು ಬಸ್ ಸ್ಟ್ಯಾಂಡ್ ನಲ್ಲಿ ನಿಂತೇ ಇದ್ದೆ ನಾನು!
ನಾನು ಜೀವನದಲ್ಲಿ ಬಹು ದೊಡ್ಡದು ಒಂದನ್ನು ಕಳೆದು ಕೊಂಡಿದ್ದೇನೆ ಎಂದು ನನಗೆ ಗೊತ್ತಾಗಿದ್ದೇ ಆವತ್ತು..!!
ಪುಲ್ಕಿಗೆ ಹೋಗುವ ಬಸ್ ಹಿಡಿದು ನಾನು ಕೂಡ ಮನೆ ತಲುಪಿದೆ.
ಯಾಕೋ ಮನಸ್ಸು ಸರಿಯೇ ಇರ್ಲಿಲ್ಲ.
ಅಪ್ಪ ಎಂದಿನಂತೆ ಟಿವಿಯಲ್ಲಿ ಧಾರವಾಹಿ ನೋಡ್ತಾ ಕೂತಿದ್ದರು..
ಮುದ್ದು ಲಕ್ಷ್ಮಿ ಮುಗಿದು ರಾಧಾಕೃಷ್ಣ ಬರುತ್ತಿತ್ತು.
ಕೃಷ್ಣನ ರಾಧೆಯನ್ನು ನೋಡುವಾಗ ಯಾಕೋ ನನಗೆ ಬೈಲು ಮನೆಯ ನಮ್ಮ ಅನುರಾಧಳೇ ನೆನಪಾದಳು.
ಸೀದಾ ಹೋಗಿ ರೂಮಿನಲ್ಲಿ ಬೆಡ್ ಶಿಟ್ ಹೊದ್ದು ಮಲಗಿಕೊಂಡೆ.
ಮನಸ್ಸಿನಲ್ಲಿಯೇ ಏನೇನೋ ಯೋಚನೆಗಳು..
ರಾಧ ಇಷ್ಟು ವರ್ಷ ಆದರೂ ಯಾವುದನ್ನೂ ಮರೆತೇ ಇಲ್ಲ..
ನಾವಿಬ್ಬರೂ ಒಟ್ಟಿಗೆ ನಡೆದ ಹಾದಿಯಲ್ಲಿ ಅವಳು ಮತ್ತೆ ಮತ್ತೆ ನಡೆದಿದ್ದಳಂತೆ..
ಆದರೆ ನಾನು ಆ ಕಡೆ ಮುಖ ಮಾಡಿ ನೋಡಲೇ ಇಲ್ಲ...
ನಾಳೆಯೇ ಒಮ್ಮೆ ಕೆಳಗಿನ ಬೈಲು ಬದಿಗೆ ಹೋಗಿ ಅಲ್ಲಿಂದ ಮೇಲೆ ಒಮ್ಮೆ ಗುಡ್ಡ ಸುತ್ತಿ ಬರಬೇಕು ಎಂದು ನಿರ್ಧರಿಸಿ ಬಿಟ್ಟೆ..
ರಾಧ ಕೊನೆಯಲ್ಲಿ ಹೇಳಿದ್ದು ಕಿವಿಯಲ್ಲಿ ಈಗಲೂ ಅನುರಣಿಸುತ್ತಿತ್ತು...
" ನನಗೆ ಉತ್ತರ ಹೇಳಲು ಕಷ್ಟವಾಗುತ್ತದೆ ನೀಲು !!
ಈ ಸಂಧರ್ಭದಲ್ಲಿ ಅಂತಹ ಕಠಿಣ ಪ್ರಶ್ನೆಗೆ ಉತ್ತರಿಸಿ ನಿನ್ನ ಬಾಳನ್ನು ಜಟಿಲ ಮಾಡುವ ಆಸೆ ನನಗಿಲ್ಲ!! "
ಹಾಗಾದರೆ ಅವಳಿಗೆ ನಿಜವಾಗಿಯೂ ನನ್ನ ಮೇಲೆ ಆವತ್ತು ಪ್ರೀತಿ ಇತ್ತೇ?!!
ನಾನು ಅವಳಿಗಾಗಿ ಏನೆಲ್ಲಾ ಮಾಡಿದ್ದೆನೋ ಅದೇ ರೀತಿ ಅವಳು ಕೂಡ ಬಾಲ್ಯದಲ್ಲಿ ನನಗಾಗಿ.....ಕೇವಲ ನನಗಾಗಿ ಮಾಡಿದ ಎಲ್ಲವನ್ನೂ ನೆನಪಿಸಿಕೊಂಡೆ....
ಉತ್ತರ ಮನಸ್ಸಿಗೆ ಸ್ಪಷ್ಟವಾಗಿ ಕಾಣುತ್ತಿತ್ತು!!
ಆದರೆ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುತ್ತಾ...ನನಗೆ ಬೇಕಾದ ಉತ್ತರ ಅದಕ್ಕೆ ಸಿಕ್ಕರೂ ಕೂಡ.. ಈಗ ನಾನೇನು ಮಾಡಲಿ..!
ನಾನು ಅದೆಷ್ಟು ಅಸಹಾಯಕ... ನಾನು ಅದೆಂತಹ ಪಾಪಿ ಅಂತ ಅನಿಸಿತು..!
ಯಾಕೋ ಇದರ ನಡುವೆಯೂ ಅಪ್ಪ ಒಂದು ತಿಂಗಳಿಂದ ಞಕ್ಕ್ ಞೈ ಮಾಡುತ್ತಿದ್ದ(ಪದೇ ಪದೇ ಹೇಳುತ್ತಿದ್ದ)ಈ ಮಾತುಗಳು ಆ ಕ್ಷಣದಲ್ಲಿ ನೆನಪಾಗಿ ಬಿಟ್ಟಿತ್ತು..
" ನೀಲು... ಟೆರೇಸ್ ಮೇಲಿನ ಆ ರೂಮ್ ಗಳು ಎಲ್ಲಾ ಹಾಗೇ ಖಾಲಿ ಬಿದ್ದಿದೆ. ದಿನಾಲೂ ಪೇಟೆ ಎಲ್ಲಾ ಸುತ್ತಾಡ್ತಿಯಾ... ಯಾರಿಗಾದರೂ ಬಾಡಿಗೆಗೆ ರೂಮ್ ಬೇಕಿದ್ರೆ ಕರ್ಕೊಂಡು ಬರ್ಲಿಕ್ಕೆ ನಿನಗೆ ಏನು ದಾಡಿ..ಅದು ಆದ್ರೂ ಮಾಡ್ಲಿಕ್ಕೆ ಆಗಲ್ವಾ.."
ಮೇಲಿನ ರೂಮ್ ಗಳನ್ನು ಬಾಡಿಗೆಗೆ ಕೊಡಬೇಕು ಎಂದು ಅಪ್ಪ ಹೇಳುತ್ತಿದ್ದುದು ನೆನಪಾಗಿ....
ತಟಕ್ಕನೆ ಏನೋ ಒಂದು ಮನಸ್ಸಿಗೆ ಹೊಳೆದಂತಾಯಿತು.
ಸುಮ್ಮನೆ ಹಾಗೇ ನಕ್ಕು.. ಕಣ್ಣು ಮುಚ್ಚಿ ಮಲಗಿಬಿಟ್ಟೆ..
ಕಣ್ಣು ಮುಚ್ಚಿ ಮಲಗಿದರೂ ಕೂಡ ಕಣ್ಣೆದುರು ಮಾತ್ರ ಮತ್ತೊಮ್ಮೆ ಕುಂಟಾಳೆ ಹಣ್ಣು, ಕೇಪುಳದ ಹೂವು, ಅಜ್ಜನ ಗಡ್ಡ,ಚಿತ್ತುಪುಲಿ ಮಿಠಾಯಿ... ಹೀಗೆ ಅಂದಿನ ಎಲ್ಲವೂ ಸಾಲು ಸಾಲಾಗಿ ಮೆರವಣಿಗೆ ಹೊರಟ್ಟಿದ್ದವು,ಅವುಗಳನ್ನು ತಡೆಯುವ ಸಾಹಸವನ್ನೇ ನಾನು ಮಾಡಲಿಲ್ಲ...
.....................................................................................
#ನೀಲಮೇಘ 💙
ab pacchu
moodubidire

Comments
Post a Comment