ಗ್ರೀನ್ ಪಟಾಕಿ
ಸ್ಟೇಟ್ ಬ್ಯಾಂಕ್ ನಿಂದ ಮೂಡುಬಿದಿರೆಗೆ ಹೋಗುವ ಬಸ್ಸು ಅದು.
ಬ್ಯಾಂಕ್ ಒಳಗೆಯೇ ಬಸ್ ಸ್ಟ್ಯಾಂಡ್ ಖಂಡಿತವಾಗಿಯೂ ಇಲ್ಲ.
ಆದರೆ ಬಸ್ ಸ್ಟ್ಯಾಂಡ್ ತುಂಬೆಲ್ಲಾ ಬ್ಯಾಂಕ್ ಹೆಸರು ಒಂದು ಹಾಗೇ ಆವರಿಸಿಕೊಂಡಿದೆ. .
ಮಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಅಂದ್ರೆ ಅದೇ ನಮ್ಮ ಮಂಗಳೂರು ಬಸ್ ಸ್ಟ್ಯಾಂಡ್.
ಬ್ಯಾಂಕ್ ಕೂಡ ಅಲ್ಲೇ ಇದೆ ಆದರೂ, ಸ್ಟೇಟ್ ಬ್ಯಾಂಕ್ ಅಂದ್ರೆ ನಮ್ಮಲ್ಲಿ "ರೈಟ್ ಪೋಯಿ - ದುಂಬು ಪೋಯಿ.." ಎಂಬ ನೆಚ್ಚಿನ ಸಿಟಿ ಬಸ್ ಸ್ಟ್ಯಾಂಡ್,ಮಿಂಚಿನ ವೇಗದ ವೇಗದೂತ express ಬಸ್ಸುಗಳ ಸರ್ವಿಸ್ ಬಸ್ ಸ್ಟ್ಯಾಂಡ್, ಹಾಗೂ ಫ್ರೆಶ್ ಅಂಜಲ್,ಮಾಂಜಿ,ಎಟ್ಟಿ,ಬಂಗುಡೆ ಮೀನನ್ನು "ಬಲ ಮಗ ಬಲ..ಎಡ್ಡೆ ಮೀನ್, ನಿಕ್ಕ್ ಕಮ್ಮಿಡ್ ಕೊರ್ಪೆ.."(ಫ್ರೆಶ್ ಮೀನು.. ನಿನಗೆ ಕಮ್ಮಿಯಲ್ಲಿಯೇ ಕೊಡುವ.. ಬಾ ಇಲ್ಲಿ ..)ಎಂದು ಪ್ರೀತಿಯಿಂದ ಕರೆದು ಮೀನು ವ್ಯಾಪಾರ ಮಾಡುವ ತಾಯಂದಿರ ಫಿಶ್ ಮಾರುಕಟ್ಟೆಯೇ ಮೊದಲು ನೆನಪಾಗುತ್ತದೆಯೇ ಹೊರತು... ಬಸ್ ಸ್ಟ್ಯಾಂಡ್ ನೊಡನೆ ಬೆರೆತುಕೊಂಡಿರುವ ಆ ಬ್ಯಾಂಕ್ ಅಲ್ಲ.
ಅದು ನಿಶ್ಮಿತಾ ಬಸ್ಸು.ಇನ್ನೇನು ಸ್ಟ್ಯಾಂಡ್ ಬಿಟ್ಟು ಬಸ್ಸ್ ಹೊರಡಬೇಕು ಅನ್ನುವಷ್ಟರಲ್ಲಿ ಬಸ್ ಹಿಡಿಯಲು ಓಡೋಡಿ ಬಂದೆ..
ಓಡುವುದು ನನಗೇನು ಅಂತಹ ಕಷ್ಟದ ವಿಷಯವೇ ಅಲ್ಲ.ನಾನು ಕೂಡ ಸ್ಕೂಲ್ ನಲ್ಲಿ ಇರುವಾಗ ಒಳ್ಳೆಯ ಓಟಗಾರನೇ. ಆದರೆ ಯಾವುದೇ ಓಟದ ಸರ್ಟಿಫಿಕೇಟ್ ನನ್ನಲ್ಲಿ ಇಲ್ಲ ಅಷ್ಟೇ.ಏಕೆಂದರೆ ಯಾವುದೇ ಓಟದಲ್ಲಿ ನಾನು ಇಲ್ಲಿಯವರೆಗೂ ವಿನ್ ಆಗಿಯೇ ಇಲ್ಲ.ಯಾವುದೇ ಬಹುಮಾನದ,ಪ್ರಶಸ್ತಿ ಪತ್ರದ,ತಟ್ಟೆ- ಲೋಟೆ, ಚೊಂಬುಗಳ ಹಂಗಿಲ್ಲದೆ ಜಸ್ಟ್ ಹಾಗೇ ಓಡಿದವನು ನಾನು. ಓಟದಲ್ಲಿ ನಾನು ಎಲ್ಲಿದ್ದೇನೆ ಎಂದು ನೀವು ಓಟಗಾರರ ಮಧ್ಯೆ ನನ್ನನ್ನು ಆಗ ಹುಡುಕಿದಿದ್ದರೆ.. ಹಿಂದಿನಿಂದ ಫಸ್ಟ್ ಯಾವಾಗಲೂ ನಾನೇ ಇರ್ತಿದಿದ್ದೆ.
ಆದರೂ ಸ್ಕೂಲ್ ನಲ್ಲಿ ಪ್ರತೀ ವರ್ಷದ ಓಟಕ್ಕೆ ಸೇರ್ತ ಇದ್ದೆ ನಾನು.ಅಂತಹ ಒಂದು ಓಟದ ಪ್ರೀತಿ ನನ್ನದು. ಬರೀ ನನ್ನ ಓಟವನ್ನು ನೋಡಲೆಂದು ನನ್ನ ಕ್ಲಾಸ್ ಹುಡುಗ ಹುಡುಗಿಯರು ಬಂದು ಎದ್ದು ಬಿದ್ದು ನಕ್ಕು ನಲಿದು ನನ್ನನ್ನು ಹುರಿದುಂಬಿಸುತ್ತಿದ್ದರು ಎಂದರೆ ಒಮ್ಮೆ ನೀವೇ ಲೆಕ್ಕ ಹಾಕಿ ಎಂತಹ ಓಟಗಾರ ನಾನು ಆಗಿದ್ದೆ ಎಂದು. ಇದೆಲ್ಲ ಅಂದಕಾಲತ್ತಿಲ್ ಮಾತುಗಳು.
ಬಸ್ಸು ಹಿಡಿಯಲು ಓಡುವಾಗ ಅದಷ್ಟು ಓಟದ ವಿಷಯಗಳು ಒಮ್ಮೆಗೆ ನೆನಪಾಗಿ ಬಿಟ್ಟವು.
ಬಸ್ ನಲ್ಲಿ ಅದಾಗಲೇ ಹೆಚ್ಚಿನ ಸೀಟುಗಳ ಭರ್ತಿ ಆಗಿದ್ದವು.
ಕೆಳಗೆ ಬೇರೆ ಹತ್ತು ಹದಿನೈದು ಜನರು ಇನ್ನೂ ಬಸ್ಸು ಹತ್ತಲು ಇದ್ದರು. ಬಹುಶಃ ಯಾವುದೋ ಮದುವೆಗೆ ಹೋಗಿ ಬಂದವರು ಎಂದು ಕಾಣುತ್ತೆ.ಅವರು ಕೂಡ ಸೀಟು ಹಿಡಿಯಲು ಭಯಂಕರ ರಣ ಉತ್ಸಾಹದಲ್ಲಿ ಇರುವಂತೆ ಕಾಣಿಸಿತು.
ಓಹ್.. ಇವರ ಹಿಂದೆಯೇ ನಾನು ಹೋದರೆ ಖಂಡಿತ ನನಗೆ ಸೀಟು ಸಿಗುವುದಿಲ್ಲ ಎಂದು ಅರಿತ ನಾನು...
ಯಾವುದಾದರು ವೀಂಡೋ ಸೀಟ್ ನಲ್ಲಿ ಕರ್ಚೀಪು(ಟವಲ್) ಬಿಸಾಡಿ ಸೀಟು ರಿಸರ್ವೇಶನ್ ಮಾಡಿಕೊಳ್ಳಬೇಕೆಂದು ಮನಸ್ಸಿನಲ್ಲಿ ದೃಡ ಸಂಕಲ್ಪ ಒಂದನ್ನು ಮಾಡಿಕೊಂಡು ಬಿಟ್ಟೆ.
ಎಲ್ಲಾ ವಿಂಡೋ ಸೀಟ್ ನೋಡಿದೆ..
ಹೆಚ್ಚಿನ ಸೀಟುಗಳು ಭರ್ತಿ ಆಗಿದ್ದವು.
ಒಂದು ವಿಂಡೋ ಸೀಟಿನಲ್ಲಿ ಹುಡುಗಿ ಒಬ್ಬಳು ಕುಳಿತುಕೊಂಡಿದ್ದಳು.
Of course ಚಂದದ ಹುಡುಗಿಯೇ ಅವಳು.
ಅವಳ ಪಕ್ಕದಲ್ಲಿ ಒಂದು ಸೀಟು ಖಾಲಿ ಇತ್ತು.
ಬಸ್ಸಿನಿಂದ ಕೆಳಗೆ ನಿಂತಿದ್ದವನು ಚಾಲಕನ ಹಿಂದಿನಿಂದ ಒಂದೊಂದೇ ಸೀಟುಗಳನ್ನು ಲೆಕ್ಕ ಮಾಡಲು ತೊಡಗಿದೆ..
ಒಂದು... ಎರಡು... ಮೂರು...ನಾಲ್ಕು.. ಐದು..
ಅಬ್ಬಾ ಬಚಾವು... ಲೇಡಿಸ್ ಸೀಟ್ ಅಲ್ಲ ಆ ಹುಡುಗಿ ಕುಳಿತುಕೊಂಡ ಸೀಟ್...ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಕೆಳಗಿನಿಂದಲೇ ಅವಳ ಬಳಿಗೆ ಹೋಗಿ.. ನನ್ನ ಕರ್ಚೀಪು ಅವಳಿಗೆ ತೋರಿಸಿ
Excuse.. ಪ್ಲೀಸ್ ಈ ಕರ್ಚೀಪು ನಿಮ್ಮ ಪಕ್ಕದ ಆ ಸೀಟಿನಲ್ಲಿ ಹಾಕಿ ನನಗೊಂದು ಸೀಟ್ ರಿಸರ್ವ್ ಮಾಡ್ತಿರಾ... ಪ್ಲೀಸ್ ಅಂದೆ..
ಅವಳು ಒಪ್ಪಲು ರೆಡಿಯೇ ಇರಲಿಲ್ಲ.
ಕೊನೆಗೆ ಕೆಳಗೆ ನಿಂತಲ್ಲಿಂದಲ್ಲೇ ಅವಳ ಪಕ್ಕದ ಆ ಸೀಟಿಗೆ ನನ್ನ ಕರ್ಚಿಪು ಗುರಿ ಇಟ್ಟು ಎಸೆದೆ.
ಆದರೆ ಅದು ಅವಳ ಪಕ್ಕದ ಸೀಟಿಗೆ ಹೋಗಿ ಬೀಳುವ ಬದಲು ನೇರವಾಗಿ ಹೋಗಿ ಅವಳ ಮೇಲೆಯೇ ಬಿತ್ತು...!
ಶೇ... ಕ್ರಿಕೆಟ್ ನಲ್ಲಿ ಸಹ ನಾನು ಡೈರೆಕ್ಟ್ ಗುರಿ ಇಟ್ಟು ರನೌಟ್ ಮಾಡಿದ್ದು ಕಡಿಮೆಯೇ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ ಆ ಕ್ಷಣ.
ಆ ಹುಡುಗಿ ಸಿಟ್ಟಿನಿಂದ ಅವಳ ಪಕ್ಕದ ಆ ಖಾಲಿ ಸೀಟ್ ನತ್ತ ಆ ನನ್ನ ಕರ್ಚೀಪು ಎಸೆದು ಬಿಟ್ಟಳು!
ಬಸ್ಸ್ ಎಲ್ಲಾ ಫುಲ್ ಆಯಿತು..
ಕೆಳಗೆ ಇದ್ದ ಜನರು ಬಾಹುಬಲಿ ಮೂವಿಯ ಕಾಳಕೇಯ ಸೈನದ್ಯಂತೆ ಹೋ.. ಎನ್ನುತ್ತಾ ಬಸ್ಸು ಹತ್ತಿದರು.
ಆದರೆ ನಾನು ರಾಜನಂತೆ ಕೂಲ್ ಆಗಿ ಯಾವುದೇ ಟೆನ್ಶನ್ ಇಲ್ಲದೇ ಕೊನೆಯಲ್ಲಿ ಬಸ್ ಹತ್ತಿದೆ. ಏಕೆಂದರೆ ನನ್ನ ಸೀಟು ಅದಾಗಲೇ ರಿಸರ್ವ್ ಆಗಿತ್ತು ಅಲ್ವಾ...
ಬಸ್ ಹತ್ತಿದ ಕೂಡಲೇ ಬಸ್ ನೊಳಗೆ ಏನೋ ಜಗಳ..WWE ರೇಂಜಿಗೆ ಇತ್ತು.
ದೂರದಲ್ಲಿಯೇ ಕೇಳಿಸಿಕೊಂಡೆ.. ಬಹುಶಃ ಸೀಟಿಗಾಗಿ ನಡೆಯುತ್ತಿರುವ ಜಗಳದಂತೆ ಕಂಡಿತು.
ಇವರದ್ದೆಲ್ಲಾ ಒಂದು ಜಗಳ ಇದ್ದದ್ದೇ.. ಸಿ.ಎಂ ಸೀಟು ಗಾಗಿ ಮಾಡುವಂತಹ ಜಗಳವನ್ನು ಯಕಶ್ಚಿತ್ ಬಸ್ ಸೀಟಿಗಾಗಿ ಮಾಡ್ತಾರೆ..
ಇವರೆಲ್ಲಾ ಯಾವಾಗ ಸುದಾರ್ತಾರೆ ಮರ್ರೆ ಅಂದುಕೊಂಡು ಸಮಾಜದ ಸದ್ಯದ ಪರಿಸ್ಥಿತಿಯ ಬಗ್ಗೆ ಅವಲೋಕಿಸುತ್ತಾ.. ಅರಾಮ್ ಸೇ ನಾನು ಕರ್ಚೀಪು ಎಸೆದ ಸೀಟಿನತ್ತ ನಡೆದೆ.
ಹತ್ತಿರ ಹೋಗಿ ನೋಡಿದರೆ ಆ ಜಗಳ ಆಗುತ್ತಿದ್ದದ್ದು ನಾನು ಅದಾಗಲೇ ರಿಸರ್ವ್ ಮಾಡಿದ್ದ ಸೀಟಿಗಾಗಿಯೇ ಆಗಿತ್ತು..!
ಅದೂ ಕೂಡ ಒಬ್ಬರಲ್ಲ ಇಬ್ಬರು..!
ಇಬ್ಬರು ಅಂಕಲ್ಸ್.. ನಾನು ಮೊದಲು ಕರ್ಚೀಪು ಹಾಕಿದ್ದು.. ನಾನು ಮೊದಲು ಕರ್ಚೀಪು ಎಂದು ಭಯಂಕರ ಘನಘೋರ ಯುದ್ಧವನ್ನೇ ಮಾಡುತ್ತಿದ್ದರು...ಮಾತಿನ ಭಾಣ ಪುಂಖಾನುಪುಂಖವಾಗಿ ಅತ್ತಿಂದಿತ್ತ ಇತ್ತಿಂದತ್ತ ಸಾಗುತ್ತಿತ್ತು...
ಎರಡು ಗದೆ ಕೊಟ್ಟು ಬಿಡುತ್ತಿದ್ದರೆ ಬಹುಶಃ ಅವರಿಬ್ಬರು ಗದಾಯುದ್ಧವನ್ನೇ ಮಾಡುತ್ತಿದ್ದರೆನೋ..
ಅರೇ.. ನಾನು ಸೀಟು ಹಿಡಿಯಲು ಕಷ್ಟ ಪಟ್ಟು ಏನೇನೋ ಸರ್ಕಸ್ ಮಾಡಿ ಗುರಿ ಇಟ್ಟು ಕರ್ಚೀಪು ಎಸೆದಿದ್ದರೆ ಇವರಿಬ್ಬರು ನನಗಿಂತ ಮೊದಲೇ ಮೇಲೆ ಬಂದು ನನ್ನ ಸೀಟಿಗೆನೇ ಸ್ಕೆಚ್ ಹಾಕಿದ್ದಾರಲ್ಲಾ.....
ಇರಲಿ.. ಇರಲಿ.. ಇವರಿಗೆ ಸರಿಯಾಗಿ ಮಾಡ್ತೇನೆ ಅಂದು ಕೊಂಡು..
" ಹಲೋ.. ನೋಡಿ ಸಾರ್.. ಎಲ್ಲರಿಗಿಂತ ಮೊದಲು ಕರ್ಚೀಪು ಹಾಕಿದ್ದು ನಾನು.. ನೋಡಿ ಅಲ್ಲಿ ಕೆಳಗೆ ಬಿದ್ದಿದೆ ಅಲಾ.. ಬ್ಲೂ ಕಲರ್ ಕರ್ಚೀಪು.. ಅದು ನನ್ನದು.. ನೋಡಿ ಈ ಹುಡುಗಿ ಇದ್ದಾರೆ ಅಲ್ವಾ..ಅವರು ನಾನು ಫ್ರೆಂಡ್.. ನಾವಿಬ್ಬರೂ ಒಟ್ಟಿಗೆ ಮೂಡುಬಿದಿರೆಗೆ ಹೋಗ್ತಾ ಇದ್ದೇವೆ.. ಅವರೇ ನನ್ನ ಕರ್ಚೀಪು ಇಲ್ಲಿ ಇಟ್ಟು ಎಲ್ಲರಿಗಿಂತ ಮೊದಲು ನನಗೆ ಸೀಟು ರಿಸರ್ವ್ ಮಾಡಿದ್ದು.. ಬೇಕಿದ್ದರೆ ನೀವು ಅವರನ್ನೇ ಕೇಳಿ.. ಅಂದೆ.
ಅವರಿಬ್ಬರು ಒಬ್ಬೊರನ್ನೊಬ್ಬರ ಮುಖ ನೋಡಿಕೊಂಡರು.
ಅದರಲ್ಲಿ ಒಬ್ಬರು ಆ ಕುಳಿತಿದ್ದ ಹುಡುಗಿಯಲ್ಲೇ ಕೇಳಿದರು..
ಹೌದೇನಮ್ಮ.. ಇವನು ಹೇಳುವುದು ನಿಜವಾ..
ನಾನು ಅವಳನ್ನು ನನ್ನ ಫ್ರೆಂಡ್ ಅಂತ ಹೇಳಿದ್ದು ಅವಳಿಗೆ ವಿಪರೀತ ಸಿಟ್ಟು ತಂದಿತ್ತು. ಅವಳು ನನ್ನನೇ ದುರುಗುಟ್ಟಿ ನೋಡುತ್ತಿದ್ದಳು.
ನಾನು ಮುಖ ಭಾವದಲ್ಲಿಯೇ ಪ್ಲೀಸ್.. ಪ್ಲೀಸ್ ಏನಾದರೊಂದು ಮಾಡಿ ನನಗೆಯೇ ಸೀಟು ಸಿಗುವಂತೆ ಮಾಡಿ ಅನ್ನುವಂತೆ ನಟಿಸಿದೆ.
ಕೊನೆಗೂ ಹುಡುಗಿ ಹೂಂ.. ಹೌದು ಇವರೇ ಮೊದಲು ಕರ್ಚೀಪು ಹಾಕಿದ್ದು... ಅಂದಳು ಕೋಪ ಹಾಗೂ ಅಷ್ಟೇ ಸ್ವೀಟಾದ ವಾಯ್ಸ್ ನಲ್ಲಿ.
ಅವರಿಬ್ಬರು ಅಂಕಲ್ಸ್ ಏನೂ ಹೇಳದೇ ತಮ್ಮ ತಮ್ಮ ಕರ್ಚೀಪು ಹೆಕ್ಕಿಕೊಂಡು ನನಗೆ ಸೀಟು ಬಿಟ್ಟುಕೊಟ್ಟರು.
ಬಹುಶಃ... ನನಗೆ ಸಿಗದಿದ್ದರೆ ಅವನಿಗೂ ಸಿಗುವುದು ಬೇಡ.. ಎಂಬ ಮನಸ್ಥಿತಿ, ಪರಸ್ಪರ ಸೀಟಿಗಾಗಿ ಜಗಳ ಮಾಡಿಕೊಂಡ ಅವರಿಬ್ಬರಲ್ಲಿ ಇತ್ತು ಎಂದು ಕಾಣುತ್ತೆ. ಹಾಗಾಗಿ ತನಗೆ ಸೀಟು ಸಿಗದೇ ಇದ್ದರೂ ಮತ್ತೊಬ್ಬನಿಗೂ ಸೀಟು ಸಿಗಲಿಲ್ಲವಲ್ಲ.. ಎಂಬ ಭಯಂಕರ ಖುಷಿಯಿಂದ ಬಸ್ಸಿನಲ್ಲಿ ಹಾಗೇ ನಿಂತುಕೊಂಡರು. ಅವರ ಮುಖದಲ್ಲಿ ಆ ಸಂತೋಷ ಎದ್ದು ಕಾಣುತ್ತಿತ್ತು.. ಆಹಾ... ಖುಷಿ ಪಡಲು ಕೂಡ ಎಂತೆಂತಹ ಕಾರಣಗಳಿವೆಯಪ್ಪಾ ಈ ಲೋಕದಲ್ಲಿ ಅಂತ ಅಂದುಕೊಂಡು..ನಾನು ನನ್ನ ಸೀಟಿನಲ್ಲಿ ಕುಳಿತುಕೊಂಡೆ.
ಬಸ್ಸು ಬಸ್ ಸ್ಟ್ಯಾಂಡ್ ಬಿಟ್ಟು ನಿಧಾನಕ್ಕೆ ಹೊರಟಿತು ಮೂಡುಬಿದಿರೆಯ ಕಡೆಗೆ.
ಕುಳಿತುಕೊಂಡವನೇ ರಪ್ಪನೇ ತಿರುಗಿ ಆ ಹುಡುಗಿಯನ್ನು ನೋಡಿದೆ.
ಅವಳು ಬೇಕಂತಲೇ ನನ್ನನ್ನು ನೋಡದೇ ಸೀಟಿನಿಂದ ಹೊರಗೆ ನೋಡುತ್ತಿದ್ದಳು.
ಅವಳಲ್ಲಿ ನನ್ನ ಮೇಲಿನ ಸಿಟ್ಟು ಇನ್ನೂ ಕಡಿಮೆ ಆಗಿರಲಿಲ್ಲ..
Excuse me...ಅಂದೆ.
ಅವಳು ನನತ್ತ ತಿರುಗಿ ಹುಬ್ಬೇರಿಸಿ ಏನು.. ಎಂದಳು.
ಥ್ಯಾಂಕ್ಸ್... ಕೊನೆಗೂ ನೀವು ನನಗೆಯೇ ಸೀಟು ಸಿಗುವಂತೆ ಮಾಡಿದಿರಿ.. ನಿಮಗೆ ನಾನು ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ... ಅಂದೆ.
ಅವಳಿಗೆ ಸಿಟ್ಟು ಎಲ್ಲಿತ್ತೋ...ರೀ ನಿಮಗೆ ಚೂರು ಆದರೂ ಮ್ಯಾನರ್ಸ್ ಅನ್ನುವುದು ಇದೆಯಾ.. 😠 ಅಂದಳು.
ಏಕೆ... ಏನಾಯಿತು ಈಗ..? ಅಂದೆ.
ಈ ರೀತಿ ಕರ್ಚೀಪು ಹಾಕಿ ಸೀಟು ಎಲ್ಲಾ ಹಿಡಿತೀರಿ ಅಲ್ವಾ.. ನಾಚಿಕೆ ಆಗಲ್ವಾ.. ಎಲ್ಲರಂತೆ ನೇರವಾಗಿ ಸೀಟು ಹಿಡಿಯೋಕೆ ಏನ್ರೀ ನಿಮ್ಗೆ ರೋಗ.. 😠
ಅದು ಹಾಗಲ್ಲ... ಸೀಟು ಸಿಗದಿದ್ದರೆ ಒಂದು ಗಂಟೆಗಳ ಕಾಲ ಹಾಗೇ ನಿಂತ್ಕೊಂಡೆ ಟ್ರಾವೆಲ್ ಮಾಡ್ಬೇಕಲ್ಲ,ಅದಕ್ಕಾಗಿ ಈ ಕರ್ಚೀಪು ರಿಸರ್ವೇಶನ್ ಐಡಿಯಾ ಮಾಡಿದೆ...ನಿಮಗೆ ಬೇಜಾರಾಗಿದ್ರೆ sorry... ಅಂದೆ.
ಅಲ್ಲಾರೀ.. ನನ್ನನ್ನು ನಿಮ್ಮ ಫ್ರೆಂಡ್ ಅಂತ ಹೇಳ್ಲಿಕೆ ಎಷ್ಟು ಧೈರ್ಯ ರೀ ನಿಮ್ಗೆ... ಯಾರ್ರೀ ನೀವು.. 😠
ನಾನ...? ನಾನು Mr ನೀಲಮೇಘ ಅಂತ. ಎಲ್ಲರೂ ಪ್ರೀತಿಯಿಂದ ನೀಲು.. ನೀಲು ಅಂತಾರೆ. ನೀವು ಹಾಗೇ ಕರೀಬಹುದು ನನಗೇನೂ ಅಭ್ಯಂತರವಿಲ್ಲ.. ಅಂದೆ ಬಹಳ ಕೂಲಾಗಿ.
ನಿಮ್ಮ ಹೆಸರು ಯಾರ್ರೀ ಕೇಳಿದ್ದು.. ನಿಮ್ಮ ಹೆಸರು ಕಟ್ಕೊಂಡು ನನಗೇನು ಆಗ್ಬೇಕು....ಅಂದವಳೇ ಮತ್ತೆ ಮುಖ ಸಿಂಡರಿಸಿಕೊಂಡು ವೀಂಡೋ ಸೀಟ್ ನಿಂದ ಹೊರಗೆ ನೋಡುತ್ತಾ... ಐಡಿಯಟ್..😠 ಅಂತ ಅಂದಳು ನನಗಷ್ಟೇ ಕೇಳುವಂತೆ.
ಬಸ್ಸು ಮುಂದೆ ಹೋಗ್ತಾ ಇತ್ತು... ಹಂಪನ್ಕಟ್ಟೆ... ಜ್ಯೋತಿ ಸರ್ಕಲ್.. ನಂತೂರ್... ಕುಲಶೇಖರ.. ಹೀಗೆ ಮೂಡುಬಿದಿರೆಗೆ ಮುಖ ಮಾಡಿ ಬಸ್ ವೇಗವಾಗಿ ಹೋಗುತ್ತಿತ್ತು.
ನನಗೆ ಅವಳನ್ನು ಮತ್ತಷ್ಟು ಕೆರಳಿಸಬೇಕು ಎಂದು ಅನಿಸಿತು.
ಏಕೆಂದರೆ ಅವಳೀಗ already ಕೆರಳಿದ ಸಿಂಹಿಣಿ ತರಹ ಪಕ್ಕವೇ ಕುಳಿತಿದ್ದಳು.
ನಾನೇ ಪುನಃ ಮಾತು ಶುರು ಮಾಡಿದೆ....
ನೋಡಿ..Miss ಇವರೇ.. ನನಗೆ ವಿಂಡೋ ಸೀಟ್ ಅಂದ್ರೆ ಬಾರೀ ಇಷ್ಟ... ನೀವು ಈ ಸೈಡ್ ಗೆ ಬಂದು ಬಿಡಿ.. ನಾನು ಆ ವಿಂಡೋ ಪಕ್ಕ ಕೂತ್ಕೋತಿನಿ... ಅಂದೆ.
ಹಲೋ Mister .. ನಾನು ಯಾಕೆ ನಿಮ್ಗೆ ಸೀಟ್ ಬಿಟ್ ಕೊಡ್ಲಿ...ನನಗೂ ವಿಂಡೋ ಸೀಟ್ ಇಷ್ಟ. ಅದಕ್ಕಾಗಿಯೇ ಇಲ್ಲಿ ಕೂತದ್ದು.ನಿಮಗೆ ಇಲ್ಲಿ ನನ್ನ ಪಕ್ಕ ಸೀಟ್ ಇಟ್ಟಿದ್ದೇ ನಾನು ಜೀವನದಲ್ಲಿ ಮಾಡಿದ ಬಹು ದೊಡ್ಡ ತಪ್ಪು.. 😠😠.. ಅಂದಳು.
ನೋಡಿ... ಆಮೇಲೆ ನಂಗೆ ವಾಂತಿ ಬರುತ್ತೆ.. ಆಮೇಲೆ ನಿಜವಾಗಿಯೂ ನಾನು ನಿಮ್ಮ ಮೇಲೆಯೇ ವಾಂತಿ ಮಾಡಿದ್ರೆ ಆಗ ನಿಮಗೆ ಏನೂ ಮಾಡ್ಲಿಕ್ಕೆ ಆಗಲ್ಲ...... ನಾನು ನಿಮ್ಮ ಸೇಫ್ಟಿಗೆನೇ ಹೇಳ್ತಾ ಇರೋದು..
ಅವಳು ನನ್ನನ್ನೇ ನೋಡಿದಳು... ಈ ಶನಿಯನ್ನು ಯಾಕಾಗಿ ಆದರೂ ನನ್ನ ಪಕ್ಕವೇ ಕೂತ್ಕೊಳಿಸಿದೆ ಅಂತ confirm ಅವಳು ಮನಸ್ಸಿನಲ್ಲಿ ಅಂದುಕೊಂಡಿರ್ತಾಳೆ ಎಂದು ನನಗನಿಸಿತು.
ಹಾಗಾದರೆ ಎದ್ದು ಬೇರೆ ಕಡೆ ಹೋಗಿ ಕುಳಿತುಕೊಳ್ಳಿ...😠😠 ಅಂದಳು ಸಿಟ್ಟಿನಿಂದ.
ಬೇರೆ ಕಡೆ ಸೀಟಿಲ್ಲ...ನಾನು ರಿಸರ್ವ್ ಮಾಡಿದ ಸೀಟು ಇದು.. ಇದರ ಮೇಲೆಯೇ ನನ್ನ ಎಲ್ಲಾ ಹಕ್ಕು ಇರುವುದು..ಅಂದೆ.
ಇದು ಏನು ನಿಮ್ಮ ಪಿತ್ರಾರ್ಜಿತ ಆಸ್ತಿಯಾ..😠😠?
ಅದೆಲ್ಲ ನಂಗೆ ಗೊತ್ತಿಲ್ಲ... ವಾಂತಿ ಬಂದ್ರೆ ನಿಮ್ಮ ಮೇಲೆಯೇ ಮಾಡಿ ಬಿಡ್ತೇನೆ ಅಷ್ಟೇ....ಅಂದೆ.
ಬನ್ನಿ.. ಕುಳಿತುಕೊಂಡು ಸಾಯ್ರಿ.. 😠😠 ಎಂದು ಕೊನೆಗೂ ನನಗೆ ಅವಳ ವಿಂಡೋ ಸೀಟು ಬಿಟ್ಟು ಕೊಟ್ಟಳು..
ನಾನು ಖುಷಿಯಿಂದ ಹೋಗಿ ವಿಂಡೋ ಸೀಟ್ ಪಕ್ಕವೇ ಕುಳಿತುಕೊಂಡೆ.....
ತಣ್ಣನೆಯ ಗಾಳಿ ಹಿತವಾಗಿ ಬೀಸುತ್ತಿತ್ತು....
ಅವಳತ್ತವೇ ತಿರುಗಿ ಕೂಲಾಗಿ ಅಂದೆ... ಈ ವಿಂಡೋ ಸೀಟ್ ಜರ್ನಿಯ ಮಜಾ ನೇ ಬೇರೆ ಅಲ್ವಾ...
ಹೌದು... ಹಾಗೆಯೇ ಆ ವಿಂಡೋದಿಂದ ಹೊರಗೆ ಹಾರಿ ಬಿಡಿ... ಶಾಶ್ವತವಾದ ಮಜಾ ಸಿಗಲಿ ನಿಮಗೆ..ಕನಿಷ್ಟ ಪಕ್ಷ ನನಗೆ ಆದರೂ ಇನ್ನು ಒಂದು ಗಂಟೆ ಪ್ರಯಾಣದ ನೆಮ್ಮದಿ ಸಿಗುವುದು.. 😏😏.. ಅಂದಳು.
ಯಾಕ್ರೀ ನೀವು ಇಷ್ಟು ಕ್ರೂರಿ ಇದ್ದೀರಾ... ಸಾಯ್ಲಿಕ್ಕೆ ಯಾವತ್ತೂ ಯಾರಿಗೂ ಪ್ರೋತ್ಸಾಹ, ಉತ್ತೇಜನ ಕೊಡ್ಬಾರ್ದು ಅಂತ ಗೊತ್ತಿಲ್ವಾ ನಿಮಗೆ..ಅಂದೆ.
ಸಹ ಪ್ರಯಾಣಿಕರಿಗೆ ಸಹ ಕಿರಿ ಕಿರಿ ಮಾಡಬಾರದು ಎಂದು ನಿಮಗೆ ಗೊತ್ತಿಲ್ವಾ.. 😠😠 ಅಂದಳು.
ಅವಳು ಸಿಟ್ಟು ಕಂಡು ಸುಮ್ಮನಾದೆ.
ಸ್ವಲ ಹೊತ್ತು ಮಾತುಕತೆ ಏನೂ ಇಲ್ಲ.
ಮಾತುಕತೆಗಳಿರದಿದ್ದರೆ... ಸಂಭಾಷಣೆಗಳಿರದಿದ್ದರೆ ಅದೊಂದು ಎಂತಹ ಪ್ರಯಾಣ.
ಅದಕ್ಕಾಗಿ ನಾನೇ ಅವಳನ್ನು ಮತ್ತೊಮ್ಮೆ ಮಾತಿಗೆಳೆಯುವ ಪ್ರಯತ್ನ ಮಾಡಿದೆ.
ನೋಡಿ.. Miss ಇವರೇ..
ಅವಳು ನನ್ನತ್ತ ತಿರುಗಿ.. Miss ಇವರೇ ಅಲ್ಲ.. ನನಗೆ ಹೆಸರಿದೆ😏.
ಅದೇ ಏನದು ನಿಮ್ಮ ಸ್ವೀಟ್ ಹೆಸರು..
ನಿಮಗೆ ಯಾಕೇ..
ನೋಡಿ ನಾವಿಬ್ಬರು ಒಂದೇ ಬಸ್ ನ ಪ್ರಯಾಣಿಕರು,ನೀವೇ ಹೇಳಿದ್ದೀರಿ ಸಹ ಪ್ರಯಾಣಿಕರು ಎಂದು. ಆದ್ದರಿಂದ ಹೀಗೆ ಸುಮ್ಮನೆ ಗುಮ್ಮನಂತೆ ಇಬ್ಬರೂ ಕುಳಿತುಕೊಳ್ಳುವ ಬದಲು ನಾವು ಯಾಕೆ ಒಂದಷ್ಟು ಮಾತಾಡಿ ಈ ಜರ್ನಿಯನ್ನು ಸದಾ ನೆನಪಿನಲ್ಲಿ ಇಡುವಂತೆ ಮಾಡಬಾರದು..
ಯಾಕೇ ಮಾತಾಡಬೇಕು..?
ನೋಡಿ Miss ಇವರೇ..ನಿಮಗೆ ಏನು ಅನಿಸುತ್ತದೆ.. ನಾನು ನಿಮಗೆ ಇಲ್ಲಿ ಲೈನ್ ಹೊಡಿತಾ ಇದ್ದೇನೆ ಅಂತ ಫೀಲ್ ಆಗ್ತಾ ಇದೆಯಾ... ಹೆಲೋ.. ಆ ರೇಂಜಿಗೆ ಎಲ್ಲಾ imagination ಮಾಡ್ಕೋ ಬೇಡಿ ನೀವು ಆಯ್ತಾ...
ಹಲೋ.. ಮಿಸ್ಟರ್ ಯಾವುದೋ ಒಂದು ಮೇಘ ಅವರೇ.. ನಿಮಗೆ ನೀವು ಏನು ಅಂತ ಅನ್ಕೊಂಡಿದ್ದೀರಾ...😠😠 ಅಂದಳು.
ನಮ್ಮೂರಲ್ಲಿ ನಾನೇ ರಾಜ.. ಅಂದೆ.
ನಿಮ್ಮೂರಲ್ಲಿ ನೀವೇ ರಾಜ ಇರ್ಬಹುದು..ಆದ್ರೆ ಈ ಬಸ್ಸಿಗಲ್ಲ.
ಅಬ್ಬಬಬ್ಬಾ.. ಬಾರೀ ಚೂಟಿ ಇದ್ದಾಳೆ ಇವಳು..ಇರಲಿ ಇರಲಿ ಇವಳಿಗೆ ಸರಿಯಾಗಿ ಕಲಿಸ್ತೇನೆ ನಾನು ಅಂತ ಮನಸ್ಸಿನಲ್ಲಿ ಅನ್ಕೊಂಡೆ.
ನೋಡಿ.. Miss ಇವರೇ... ನನ್ನ ಹೆಸರು ಸಹ ಯಾವುದೋ ಒಂದು ಮೇಘ ಅಲ್ಲ, ನೀಲಮೇಘ ಅಂತ.
ಅದಕ್ಕೆ ಅವಳು.. ನನ್ನ ಹೆಸರು ಕೂಡ Miss ಇವರೇ.. ಅಂತ ಅಲ್ಲ, ನನ್ನ ಹೆಸರು ಸಿರಿ.
ಅಂದ್ರೆ ನೀವು ಸಿರಿಧಾನ್ಯ ಎಲ್ಲಾ ಜಾಸ್ತಿ ತಿನ್ನುವವರಾ.. ಅಂದೆ.
ಅದನ್ನು ಕೇಳಿ ಅವಳು ಜೋರಾಗಿ ನಕ್ಕಳು.
ಹಾಗಾದರೆ ನೀವು ಯಾಕೆ ಮೈ ಮೇಲೆ ಎಲ್ಲಾ ನೀಲಿ ಬಣ್ಣ ಮೆತ್ತಿಕೊಂಡು ಓಡಾಡುತ್ತಿಲ್ಲ...ಅಂದಳು.
ಅದನ್ನು ಕೇಳಿ ನನಗೂ ನಗು ಬಂತು.
ನಾನು ನಕ್ಕೆ.
ಅವಳೂ ಮತ್ತಷ್ಟು ನಕ್ಕಳು..
ಅವಳತ್ತ ಹ್ಯಾಂಡ್ ಶೇಕ್ ಮಾಡಲು ಕೈ ಚಾಚಿ .... ಫ್ರೆಂಡ್ಸ್ .. ಎಂದೆ.
ಅವಳಿಗೆ ಏನು ಅನಿಸಿತೋ ಏನೋ.. ಕೊನೆಗೂ ನಗುತ್ತಾ ನನ್ನತ್ತ ಕೈಚಾಚಿ ಹ್ಯಾಂಡ್ ಶೇಕ್ ಮಾಡಿ.... ಯಾ.. ಫ್ರೆಂಡ್ಸ್.. ಎಂದಳು.
ಬಸ್ಸು ಕುಡುಪು,ವಾಮಂಜೂರಿನ ನಂತರ ಗುರುಪುರದ ಹೊಸ ಸೇತುವೆಯನ್ನು ಹಾದು ಕೈಕಂಬ ದಾಟಿತು..
ನೀವು ಕೂಡ ಮೂಡುಬಿದಿರೆಯವರಾ.. ಕೇಳಿದೆ.
ಅಲ್ಲ.. ನಾನು ಕಾರ್ಕಳ.. ಅಂದಳು.
ಹ್ಯಾಪಿ ದೀಪಾವಳಿ.. ಅಂದೆ.
ನಿಮಗೂ ಸಹ... ಅಂದಳು ನಗುತ್ತಾ..
ರಪ್ಪನೇ ಸ್ವೀಟ್ಸ್ ನೆನಪಾಯಿತು..
ಬ್ಯಾಗ್ ಅಲ್ಲಿದ್ದ ಸ್ವೀಟ್ಸ್ ಬಾಕ್ಸ್ ತೆಗೆದು ಅವಳ ಮುಂದಿಟ್ಟೆ.
ಓಹ್.. ಮನೆಗೆ ಸ್ಟೀಟ್ ತೆಗೆದುಕೊಂಡು ಹೋಗುತ್ತಿದ್ದೀರಾ... ಅಂದವಳೇ ಸ್ವೀಟ್ ಬಾಕ್ಸಿನಲ್ಲಿ ಇದ್ದ ಒಂದು ಲಾಡು ತೆಗೆದು ತಿನ್ನುತ್ತಾ.. ಥ್ಯಾಂಕ್ಸ್... ಅಂದಳು.
ಇಲ್ಲಪ್ಪ...ಅಷ್ಟು ಒಳ್ಳೆಯ ಹುಡುಗ ನಾನಲ್ಲ... ಇವತ್ತು ಅಂಗಡಿ ಪೂಜೆ ಇತ್ತು ಅಲಾ.. ಎಲ್ಲಾ ಅಂಗಡಿಯವರು ಕರೆದು ಕರೆದು ಸ್ವೀಟ್ಸ್ ಕೊಟ್ಟರು.. ಬೇಡ ಅಂತ ಹೇಳಿದ್ರೆ ಅವರಿಗೆ ಬೇಜಾರ್ ಆಗ್ತದೆ.ಅವರಿಗೆ ಯಾಕೆ ಬೇಜಾರ್ ಮಾಡುವುದು ಅಂತ ಒಂದೂ ಬಿಡದೇ ಎಲ್ಲಾ ಅಂಗಡಿಯ ಸ್ವೀಟ್ ಬಾಕ್ಸ್ ಕಲೆಕ್ಟ್ ಮಾಡಿ ಬಂದೆ..
ಅವಳು ನಕ್ಕಳು..
ಏಕೆ.. ಕೇಳಿದೆ.
ನಿಮ್ಮದು ವಿಶಾಲ ಹೃದಯ... ಬೇಜಾರ್ ಆಗ್ಬರ್ದು ಅಂತ ಎಲ್ಲರ ಅಂಗಡಿಯ ಸ್ವೀಟ್ಸ್ ಎಲ್ಲಾ ನೀವೇ ತಗೋತೀರಾ..
ಹೌದು... ಮತ್ತೆ ಎಂತ, ವಿಶಾಲ ಹೃದಯವೇ ಸರಿ... ಮನೆಯಲ್ಲಿ ತಗೊಂಡು ಹೋದ್ರೆ ನಾಯಿ ಸ ತಿನ್ನಲ್ಲ ಇವುಗಳನ್ನು...
ನಾನು ತಿಂದೆ... ಹಾಗಾದರೆ ನಾನು ನಾಯಿಯಾ..
ಅಲ್ಲ.. ಅಲ್ಲ.. ಹಾಗಲ್ಲ.. ತುಂಬಾ ಇದ್ರೆ ಬೇಜಾರ್ ಅಲ್ವಾ.. ನಾಯಿಗೆ ಕೂಡ ಇಷ್ಟ ಆಗಲ್ಲ.. ಎನ್ನುವ ಅರ್ಥದಲ್ಲಿ ಹೇಳಿದ್ದು.
ಅವಳು ಮತ್ತೊಮ್ಮೆ ನಕ್ಕಳು..
ಸಿರಿ ಅವರೇ.. ನಾನು ವಾಂತಿ ಬರುತ್ತೆ ಅಂತ ಎಲ್ಲಾ ಹೇಳಿದ್ದು ಸುಮ್ಮನೆ ಆಯ್ತಾ... ಬನ್ನಿ ನೀವು ಈ ಸೈಡ್.. ನೀವೇ ವಿಂಡೋ ಸೀಟ್ ನಲ್ಲಿ ಕುಳಿತುಕೊಳ್ಳಿ ಎಂದೆ.
ಬೇಡ... ಬೇಡ... ನೀವೇ ಕುಳಿತುಕೊಳ್ಳಿ...ನಿಮಗೆ ಹೇಗೋ ವಿಂಡೋ ಸೀಟ್ ಅಂದ್ರೆ ಇಷ್ಟ ಅಲ್ವಾ..ಅಂದಳು.
ನಿಮಗೆ ಸಹ ವಿಂಡೋ ಸೀಟ್ ಅಂದ್ರೆ ಇಷ್ಟ ಅಲ್ವಾ..ಅಂದೆ.
ಪರವಾಗಿಲ್ಲ... ನೀವು ಮೂಡುಬಿದಿರೆಯಲ್ಲಿ ಹೇಗೋ ಇಳಿತೀರಾ.. ನೀವು ಇಳಿದ ನಂತರ ನಾನು ಕಾರ್ಕಳದವರೆಗೆ ವಿಂಡೋ ಸೀಟ್ ನಲ್ಲಿಯೇ ಕುಳಿತುಕೊಂಡು ಹೋಗುತ್ತೇನೆ.. ಇಬ್ಬರಿಗೂ ವಿಂಡೋ ಸಿಕ್ಕಂತೆ ಆಗುತ್ತದೆ.. ಅಂದಳು.
ಆಹಾ...ಎಂತಹ ವಿಶಾಲ ಹೃದಯ ನಿಮ್ಮದ್ದು... ನಾನು ನೀವು ಏನೋ ಅಂತ ತಿಳ್ಕೊಂಡಿದ್ದೆ ಮೊದಲು.... ಅಂದೆ.
ಏನು ಅಂತ ತಿಳ್ಕೊಂಡಿದ್ರಿ... ಅಂದಳು.
ಅದೇ.. ದೊಡ್ಡ ಪೆಟ್ಟಿಸ್ಟ್ ಅಂತ ತಿಳಿದುಕೊಂಡಿದ್ದೆ.. ಅಂದೆ.
ಅದಕ್ಕವಳು ನಕ್ಕು ಹೇಳಿದಳು... ನಾನು ಕೂಡ ಏನೋ ಒಂದು ತಿಳಿದುಕೊಂಡಿದ್ದೆ ನಿಮ್ಮ ಬಗ್ಗೆ..
ಏನು..? ಕೇಳಿದೆ..
ಅದೇ ನೀವೊಬ್ಬ ಪೆಟ್ಟ್ ಕಮ್ಮಿ ಎಂದು... ಅಂದಳು.
ಅದನ್ನು ಕೇಳಿ ಜೋರು ನಗು ಬಂತು..
ನಾನು ಕೂಡ ನಕ್ಕು ಬಿಟ್ಟೆ.
ಅವಳು ಸಹ ನಕ್ಕಳು..
ನಂತರ ನನ್ನನ್ನೇ ನೋಡಿ ಕೇಳಿದಳು...
ನೀಲು ಅವರೇ ನೀವು ಏನು ಮಾಡ್ತೀರಾ..
ನಾನಾ... ಈಗ ದೀಪಾವಳಿ ಅಲ್ವಾ... ಹಾಗಾಗಿ ಪಟಾಕಿ ಬಿಡ್ತೇನೆ.
ಅಲ್ಲಾ ರೀ... ಜೀವನಕ್ಕಾಗಿ... ಉದ್ಯೋಗ ಏನಾದರೂ?
ಕೆಲಸ ಹುಡುಕುವುದೇ ನನ್ನ ಜೀವನದ ಅತೀ ದೊಡ್ಡ ಕೆಲಸ...
ಅಂದ್ರೆ...
ಅಂದ್ರೆ ಕೆಲವೊಮ್ಮೆ ನನಗೆ ಕಂಪನಿ ಇಷ್ಟ ಆಗಲ್ಲ... ಇನ್ನು ಕೆಲವೊಮ್ಮೆ ಕಂಪನೆಯವರಿಗೆ ನಾನು ಇಷ್ಟ ಆಗಲ್ಲ. ಆದ್ರೆ ಯಾವಾಗಾದರೂ ಒಮ್ಮೆ ನನಗೆ ಅವರು ಇಷ್ಟ ಆಗಿ.. ಅವರಿಗೆ ಸ ನಾನು ಇಷ್ಟ ಆಗಿ.. ಹೀಗೆ ಒಬ್ಬರಿಗೊಬ್ಬರು ಪರಸ್ಪರ ಇಷ್ಟ ಆಗಿ ಖಂಡಿತ ಕೆಲಸ ಸಿಕ್ಕೇ ಸಿಗುತ್ತೆ ಎನ್ನುವ ಅಪಾರವಾದ ಭರವಸೆ ನನಗೆ ಈಗಲೂ ಇದೆ. ಹಾಗಾಗಿ ವಿಕ್ರಮಾದಿತ್ಯನಂತೆ ನನ್ನದು ಬಿಡದ ಪ್ರಯತ್ನ. ಹೆಚ್ಚು ಕಡಿಮೆ ಅರ್ಧಶತಕದಷ್ಟು interview ಗಳನ್ನು ನೀಡಿದ್ದೇನೆ. ನಾನು ಏನೇ ಮಾಡಿದರೂ ಈ ಜನ್ಮದಲ್ಲಿ ನನಗೆ ಕೆಲಸ ಸಿಗುವುದು ಡೌಟೇ ಅಂತ ಅಪ್ಪನದ್ದು ಸಹ ಒಂದು ಬಲವಾದ ನಂಬಿಕೆ ಇದೆ ಮಾತ್ರ.... ಅಂದೆ.
ಅದನ್ನು ಕೇಳಿ ಜೋರಾಗಿ ನಕ್ಕಳು..ಇರಲಿ ಇರಲಿ... ಕೆಲಸ ಸಿಗುತ್ತೆ ಬಿಡಿ.. all the best ಅಂದಳು.
ಥ್ಯಾಂಕ್ಸ್... ಮತ್ತೆ ದೀಪಾವಳಿ ಗಮ್ಮತಾ..ಕೇಳಿದೆ.
ಏನು ಗಮ್ಮತ್... ಅದೇ ಮಾಮೂಲಿ ಹಬ್ಬ..
ಪಟಾಕಿ ಬಿಡ್ಲಿಲ್ವಾ..
ಪಟಾಕಿ ಬಿಡ್ಲಿಕ್ಕೆ ಇಲ್ಲ ಅಲಾ ಈ ಸಲ.....
ಯಾರು ಹೇಳಿದ್ದು...ಗ್ರೀನ್ ಪಟಾಕಿ ಬಿಡ್ಬಹುದು.. ನೋಡಿ ನನ್ನ ಈ ಬ್ಯಾಗ್ ಅಲ್ಲಿ ಫುಲ್ ಗ್ರೀನ್ ಪಟಾಕಿ ಇದೆ.
ಹೌದಾ...
ಅವಳ ಕುತೂಹಲಕ್ಕೆ ಬ್ಯಾಗ್ ಬಿಚ್ಚಿ ತೋರಿಸಿದೆ..
ಏನು ಇದು ದೊಡ್ಡ ದೊಡ್ಡ ಬಾಂಬ್ ತರಹ ಇದೆ.. ಗರ್ನಲ್ ಇದು..
ಹೌದು... ಆದ್ರೆ ಗ್ರೀನ್ ಕಲರ್ ಇದೆ ಅಲಾ..
ಹಾಗಾದರೆ ಗ್ರೀನ್ ಕಲರ್ ಇದ್ರೆ ಎಲ್ಲಾ ಗ್ರಿನ್ ಪಟಾಕಿಯಾ..? ಕೇಳಿದಳು.
ಹೌದು ಮತ್ತೆ... ಗ್ರೀನ್ ಪಟಾಕಿ.. ಹಸಿರು ಪಟಾಕಿ ಎಲ್ಲಾ ಒಂದೇ...ಒಟ್ಟಿನಲ್ಲಿ ಗ್ರೀನ್ ಇರ್ಬೇಕು ಅಷ್ಟೇ.. ಅಂದೆ.
ಅದು ಹಾಗೇ ಅಲ್ಲರೀ.. ಹಸಿರು ಪಟಾಕಿ ಅಂದರೆ ಬೇರೆನೇ ಅರ್ಥ ಇದೆ ಎಂದು ಜೋರಾಗೀ ನಕ್ಕಳು ಅವಳು.
ತಗೊಳ್ಳಿ ಈ ಒಂದು ಅಟಂ ಬಾಂಬ್ ಪಟಾಕಿ.. ನನ್ನ ಲೆಕ್ಕದಲ್ಲಿ ದೀಪಾವಳಿಗೆ ಬಿಡಿ ನೀವು ಸಹ.. ಅಂದೆ.
ಅವಳು ಬೇಡ ಎನ್ನಲಿಲ್ಲ. ಅದನ್ನು ತಗೊಂಡು ತನ್ನ ಬ್ಯಾಗ್ ನಲ್ಲಿ ಹಾಕಿಕೊಂಡಳು.
ಒಂದು ವಿಷಯ ಕೇಳ್ಲಾ...
ಕೇಳಿ...
ನೀವು ಇಷ್ಟು ಚೆನ್ನಾಗಿ ಇದ್ದೀರಿ ಅಂದ್ರೆ ನಿಮ್ಗೆ confirm ಭಾಯ್ ಫ್ರೆಂಡ್ ಇರ್ಲೇಬೇಕು ಅಲ್ವಾ....
ಅವಳು ನಕ್ಕಳು..
ಹೌದು..ಇದ್ದಾರೆ...ಅಂದಳು.
ನೋಡಿ ನಾನು ಹೇಗೆ ಗೆಸ್ ಮಾಡಿದೆ..
ಮತ್ತೆ ನಿಮಗೆ ಇಲ್ವಾ..
ನನಗೆ ಗರ್ಲ್ ಫ್ರೆಂಡಾ.?... ಇಲ್ಲಪ್ಪ... ನನಗೆ ಅಪ್ಪ ಹೇಳಿದ್ದಾರೆ ಕೆಲಸ ಸಿಗದಿದ್ದರೆ ನಿನಗೆ ಮದುವೆ ಕೂಡ ಮಾಡಲ್ಲ ಅಂತ.
ಅವಳು ನಗುತ್ತಾ... ಇಲ್ಲ ಬಿಡಿ ನಿಮಗೂ ಕೂಡ ಯಾರಾದರೂ ಒಬ್ಬರು ಜಗತ್ತಿನ ಒಂದು ಮೂಲೆಯಲ್ಲಿ ಇದ್ದೇ ಇರ್ತಾರೆ.
ಮೂಲೆಯಲ್ಲಿಯಾ..? ಯಾಕೆ ಮೂಲೆಯಲ್ಲಿಯೇ ಇರ್ಬೇಕು. ಸೆಂಟರ್ ಅಲ್ಲಿ ಇರ್ಬಾರ್ದಾ..
ಅವಳು ನಕ್ಕು ಹೇಳಿದಳು... ಅದು ಹಾಗಲ್ಲ.. ಬಾಯಿ ಮಾತಿಗೆ ಹಾಗೆ ಅಂದೆ ಅಷ್ಟೇ .
ನೀವು ಕವಿಯಾ..ಕೇಳಿದೆ.
ಅಲ್ಲ... ಯಾಕೆ..
ಚೆನ್ನಾಗಿ ಮಾತಾಡ್ತೀರಾ..ಅಂದೆ.
ಇಲ್ಲಪ್ಪ ಹಾಗೇನಿಲ್ಲ... ನೀವೂ ಕೂಡ ಏನು ಕಮ್ಮಿ ಇಲ್ಲ.. ಅಂದಳು.
ಹೌದೌದು.. ನನ್ನಲ್ಲಿ ಕಮ್ಮಿ ಯಾವುದೂ ಇಲ್ಲ... ಎಲ್ಲವೂ ಜಾಸ್ತಿಯೇ ಆಗಿಯೇ ಪ್ರಾಬ್ಲಂ ಜಾಸ್ತಿ ಆಗಿದ್ದು..
ಅವಳು ನಕ್ಕಳು..
ಬಸ್ಸು ಮುಂದೆ ಸಾಗಿತ್ತು... ಗಂಜಿ ಮಠ,ಎಡಪದವು,ಮಿಜಾರ್, ತೋಡಾರ್,ವಿಧ್ಯಾಗಿರಿ(ಆಳ್ವಾಸ್),ಸ್ವರಾಜ್ಯ ಮೈದಾನ್ ಹೀಗೆ..
ಆಯಿತು ಹಾಗಾದರೆ.. ಮೂಡುಬಿದಿರೆ ಬಸ್ ಸ್ಟ್ಯಾಂಡ್ ಬಂತು ಇನ್ನು,ನೆಕ್ಸ್ಟ್ ಸ್ಟಾಪ್ ಬಸ್ ಸ್ಟ್ಯಾಂಡ್. ನೀವು ಕಾರ್ಕಳ ಅಲ್ವಾ...ನಾನು ಮೂಡುಬಿದಿರೆ ಬಸ್ ಸ್ಟ್ಯಾಂಡ್ ನಲ್ಲಿಯೇ ಇಳೀತೇನೆ. ನೀವು ಪ್ರಯಾಣ ಮುಂದುವರಿಸಿ. ಇನ್ನೊಮ್ಮೆ ಮಂಗಳೂರು- ಮೂಡುಬಿದಿರೆ ಬಸ್ ಅಲ್ಲಿ ಬರ್ಲಿಕ್ಕೆ ಇದ್ರೆ... ಸೀಟ್ ಸಿಗದಿದ್ರೆ... ನೀವು ನನ್ನನ್ನು ನೋಡಿದ್ರೆ ನನಗೆ ಹೀಗೆ ಕರ್ಚೀಪು ಹಾಕಿ ಸೀಟ್ ರಿಸರ್ವ್ ಮಾಡಿ... ಅದೇ ರೀತಿ ನಾನು ನಿಮ್ಮನ್ನು ನೋಡಿದ್ರೆ ನಿಮಗೆ ಸಹ ಸೀಟ್ ಸಿಗದೇ ಇದ್ರೆ.. ಆವಾಗ ನಿಮಗಾಗಿ ನಾನು ಸಹ ಸೀಟು ರಿಸರ್ವ್ ಮಾಡ್ತೇನೆ ಆಯ್ತಾ.. ನೀವು ಏನು ಟೆನ್ಶನ್ ಮಾಡ್ಬೇಡಿ ನಾನಿದ್ದೇನೆ.... ಅಂದೆ.
ಅವಳು ನಕ್ಕಳು..
ಬಸ್ಸು ಸಮಾಜ ಮಂದಿರ ಹಾದು ಮೇಲಿನ ಮೂಡುಬಿದಿರೆ ಬಸ್ಸ್ ಸ್ಟ್ಯಾಂಡ್ ತಲುಪಿತು.
ಸ್ಟ್ಯಾಂಡ್ ಅಲ್ಲಿ ಬಸ್ಸ್ ನಿಂತೊಡನೆ ಕಾರ್ಕಳ ಕಡೆಗೆ ಹೋಗುವ ಜನರು.. ಹೋ... ಎನ್ನುತ್ತಾ ಬಸ್ಸನ್ನು ಮುತ್ತಿಕೊಂಡರು..
ನಾನು ಸಿರಿ ಗೆ ಟಾಟಾ.. ಬಾ.. ಬಾಯ್ ಹೇಳಿ ಕುಳಿತಲ್ಲಿಂದ ಮೇಲೆದ್ದೆ....
ಸಿರಿ ನಾನು ವಿಂಡೋ ಸೀಟಿನಿಂದ ಮೇಲೆದ್ದ ನಂತರ... ತಾನು ಹೋಗಿ ವಿಂಡೋ ಸೀಟಿನಲ್ಲಿ ಕುಳಿತುಕೊಂಡಳು.
ಆಗ ಹೊರಗಿನಿಂದ ಒಬ್ಬ ಸಿರಿ ಕುಳಿತಿದ್ದ ವೀಂಡೋ ಸೀಟಿನಿಂದ ಒಂದು ಕರ್ಚೀಪು ಎಸೆದು,ಸಿರಿಯ ಪಕ್ಕದ ಸೀಟನ್ನು ತನ್ನ ಕಾರ್ಕಳ ಪ್ರಯಾಣಕ್ಕಾಗಿ ರಿಸರ್ವ್ ಮಾಡಿಕೊಂಡ..
ಅದನ್ನು ನೋಡಿ ಇನ್ನೂ ಅಲ್ಲೇ ಇದ್ದ ನಾನು ಸಿರಿಗೆ ಅಂದೆ... ಈ ಜನಗಳಿಗೆ ಶಿಸ್ತು ಎನ್ನುವುದು ಇಲ್ಲವೇ ಇಲ್ಲ ಅಲ್ಲಾ.. ಯಾಕಾಗಿ ಹೀಗೆ ಮಾಡುತ್ತಾರೋ.. ಎಲ್ಲರಂತೆ ಬಸ್ಸಿನೊಳಗೆ ಬಂದು ಸೀಟು ಹಿಡೀಲಿಕ್ಕೆ ಇವರಿಗೆ ಏನು ಸಂಕಟ... ನೋಡಿ ಇವರಿಗೆ ನಾನು ಮಾಡ್ತೇನೆ ಈಗ ಎಂದು ...
ಎಂದು ಹೇಳಿದ ನಾನು.. ಸಿರಿಯ ಪಕ್ಕದ ಸೀಟಿನಲ್ಲಿ ಇದ್ದ ಕರ್ಚೀಪು ತೆಗೆದು ಅದಾಗಲೇ ಕರ್ಚೀಪು ಹಾಕಿ ರಿಸರ್ವ್ ಆಗಿದ್ದ ಬೇರೆ ಯಾವುದೋ ಒಂದು ಸೀಟಿನಲ್ಲಿ ಹಾಕಿ ಬಿಟ್ಟೆ...
ನಂತರ ಸಿರಿಗೆ ಹೇಳಿದೆ..ನೋಡಿ ಕೆಲವೇ ಕ್ಷಣಗಳಲ್ಲಿ ಇಲ್ಲಿ ಜನರುಗಳು ಸೇರಿ, ಪ್ರಜಾಪ್ರಭುತ್ವದ ಹಕ್ಕುಗಳು,ಸಮಾನತೆಯ ಹಕ್ಕು,reservation ಹಕ್ಕು.. ಮೊದಲು ಬಂದವರಿಗೆ ಮೊದಲ ಆದ್ಯತೆ, ಹೋರಾಟವೇ ಬದುಕು.. ಬಸ್ಸು ನಿನ್ನ ಅಪ್ಪನದ್ದಾ...ಹಾಗಾದರೆ ನಿನ್ನ ಅಪ್ಪನದ್ದಾ... ಎಂಬ ಭಯಂಕರ ವಾಗ್ಯುದ್ಧ ಮಾಡಿ ನಿಮ್ಮನ್ನು ರಂಜಿಸಲಿದ್ದಾರೆ... ನೀವು ಎಲ್ಲವನ್ನೂ ನೋಡಿ journey ಎಂಜಾಯ್ ಮಾಡಿ..have a comedy journey ಎಂದು ಹೇಳಿ ಬಸ್ಸ್ ಕೆಳಗಿಳಿಯಲು ಶುರು ಮಾಡಿದೆ..
ಅದನ್ನು ಕೇಳಿ ಸಿರಿ ತನ್ನ ತಲೆಗೆ ಕೈ ಹೊಡೆದುಕೊಂಡು ಬಿದ್ದು ಬಿದ್ದು ನಕ್ಕಳು..
ನಂತರ ನಾನು ಬಸ್ಸು ಇಳಿದೆ..
ನಾನು ಇಳಿದ ಕೂಡಲೇ ಆ ಬಸ್ ಪೂರ್ತಿ ಪುಲ್ ಆಯಿತು.
ಕರ್ಚೀಪು ಹಾಕಿ ಸೀಟು ರಿಸರ್ವ್ ಮಾಡಿದವರೆಲ್ಲರೂ ನಿಧಾನವಾಗಿ ರಾಜರಂತೆ ಕೊನೆಯಲ್ಲಿ ಬಸ್ಸ್ ಹತ್ತಿದರು.
ಸಿರಿಯ ಪಕ್ಕದ ಸೀಟಿನಲ್ಲಿ ಕರ್ಚೀಪು ಹಾಕಿದವನು ಮಾತ್ರ ಮಹಾರಾಜನಂತೆ ಅತೀ ನಿಧಾನವಾಗಿ ಕೊನೆಯಲ್ಲಿ ಬಸ್ಸು ಹತ್ತುವುದನ್ನು ನೋಡಿದೆ...
ಬಸ್ಸಿನೊಳಗೆ ಕೆಲವೇ ಕ್ಷಣಗಳಲ್ಲಿ ಸೀಟಿಗಾಗಿ WWE ರೇಂಜಿಗೆ ಸಕತ್ ಪೈಟ್ ಇರ್ಬಹುದು, ಅಂದುಕೊಳ್ಳುತ್ತಾ ಬಸ್ಸು ಕಾರ್ಕಳದತ್ತ ತಿರುಗಿ ಹೋಗುವುದನ್ನೇ ನೋಡುತ್ತಾ ಅಲ್ಲೇ ನಿಂತೆ..
ಬಸ್ ತಿರುಗಿ ಹೋದಾಗ ವಿಂಡೋ ಪಕ್ಕದಲ್ಲಿ ಇದ್ದ ಸಿರಿ ಕೈ ಸನ್ನೆ ಮಾಡುತ್ತಾ ನಗುತ್ತಲೇ ಹೇಳಿದಳು.. ನೀವು ಹಚ್ಚಿ ಹೋದ ಪಟಾಕಿ ಇಲ್ಲಿ ಚೆನ್ನಾಗಿಯೇ ಉರಿತಾ ಇದೆ.. ಪೆಟ್ಟ್ ಲಡಾಯಿ ಅದಾಗಲೇ ಶುರು ಆಗಿದೆ ಎಂದು..
ಅದನ್ನು ಕೇಳಿ ಮನಸ್ಸಿಗೆ ಹಾಲು ಕುಡಿದಷ್ಟೇ ಖಷಿ ಆಯಿತು..
ನಂತರ ನಾನು ಗ್ರೀನ್ ಪಟಾಕಿ ಹಚ್ಚಲು ಮನೆಯತ್ತ ನಡೆದೆ.
.....................................................................................
#ನೀಲಮೇಘ 💙
ab pacchu
moodubidire

Comments
Post a Comment